Updated News From Kaup

ಬಂಟಕಲ್ಲು : ಗುರುವಂದನಾ ಕಾರ್ಯಕ್ರಮ

Posted On: 09-10-2021 04:59PM

ಕಾಪು‌ : ವಿಕಾಸ ಸೇವಾ ಸಮಿತಿ ಮತ್ತು ಮಹಿಳಾ ಬಳಗ 92ನೇ ಹೇರೂರು ಇದರ ವತಿಯಿಂದ ಚಂಡೆ ತರಬೇತುಗೊಂಡ ಸದಸ್ಯರ ಗುರುವಂದನಾ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಮಾಧವ ಆಚಾರ್ಯರು ತಮ್ಮನ್ನು ಹೀಯಾಳಿಸುವವರನ್ನು ಬದಿಗಿಟ್ಟು ನಮ್ಮತನವನ್ನು ನಾವು ಬೆಳೆಸಿಕೊಂಡಲ್ಲಿ ಆತ್ಮಶಕ್ತಿ ಜಾಗ್ರತವಾಗುವುದರೊಂದಿಗೆ ನಾವು ನಿಶ್ಚಿತ ಗುರಿಯನ್ನು ಸಾಧಿಸಬಹುದು ಎಂದು ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದ ಸಭಾಂಗಣದಲ್ಲಿ ನಡೆದ ಗುರುಗಳಾದ ಪಂಜಿಮಾರು ಶ್ರೀ ರಾಘವೇಂದ್ರ ಭಟ್ ರವರ ಗುರುವಂದನಾ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಪು ವಿಶ್ವಬ್ರಾಹ್ಮಣ ಯುವ ಸಂಘಟನೆಯ ಅಧ್ಯಕ್ಷರಾದ ಬಿಳಿಯಾರು ಸುಧಾಕರ ಆಚಾರ್ಯರು ದೀಪ ಪ್ರಜ್ವಲನಗೊಳಿಸುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಂಟಕಲ್ಲು ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಮುರಳೀಧರ ಆಚಾರ್ಯರು ಸಾಂಘಿಕ ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಿಸಬಹುದು ಮೊದಲಾಗಿ ನಾವು ಒಗ್ಗಟ್ಟನ್ನು ಪ್ರತಿಪಾದಿಸಬೇಕು ಎಂದು ಶುಭಹಾರೈಸಿದರು.

ಗುರುವಂದನೆ ಸ್ವೀಕರಿಸಿದ ರಾಘವೇಂದ್ರ ಭಟ್ ರವರು ಆಶೀರ್ವದಿಸಿದರು. ಮಹಿಳಾ ಬಳಗದ ಗೌರವ ಅಧ್ಯಕ್ಷೆ ಪ್ರತಿಭಾ ಆಚಾರ್ಯ, ಅಧ್ಯಕ್ಷೆ ವಿಜಯ ವಿಘ್ನೇಶ್ವರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿ, ಪೂರ್ಣಿಮಾ ರಮೇಶ್ ಆಚಾರ್ಯ ಪರಿಚಯಿಸಿ, ವಿಶಾಲ ಗಣಪತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಮಂಜುಳಾ ಗಣೇಶ್ ಆಚಾರ್ಯ ವಂದಿಸಿದರು.

ಇನ್ನಂಜೆ ಯುವಕ ಮಂಡಲದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಸ್ವಂತ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Posted On: 09-10-2021 04:51PM

ಕಾಪು : ಇನ್ನಂಜೆ ಯುವಕ ಮಂಡಲ (ರಿ.) ಇನ್ನಂಜೆ ಇದರ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಇನ್ನಂಜೆ ಶಾಲಾ ದಾಸಭವನದ ಸಮೀಪ ಇನ್ನಂಜೆ ಯುವಕ ಮಂಡಲದ ಸ್ವಂತ ಕಟ್ಟಡದ ಶಿಲಾನ್ಯಾಸವು ಬಾಲವನದ ವಠಾರದಲ್ಲಿ ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ದಿವ್ಯಹಸ್ತದಲ್ಲಿ ನೆರವೇರಿತು.

ಶ್ರೀಗಳು ಶಿಲಾಫಲಕವನ್ನು ಅನಾವರಣಗೊಳಿಸಿ 50 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಇನ್ನಂಜೆ ಯುವಕ ಮಂಡಲದ ಯುವಕರ ಉಂಡಾರು ದೇವಳದ ಜೀರ್ಣೋದ್ಧಾರ ಸಂದರ್ಭದಲ್ಲಿನ ಕರ ಸೇವೆಯನ್ನು ಸ್ಮರಿಸಿದರು. ಇವರ ಕಟ್ಟಡದ ಕನಸು ಒಂದು ವರ್ಷದ ಒಳಗಾಗಿ ನೆರವೇರಲಿ ಎಂದು ಆರ್ಶಿವಚನ ನೀಡಿದರು.

ವೇದಿಕೆಯಲ್ಲಿ ಮುಖ್ಶ ಅಥಿತಿಯಾಗಿ ಎಸ್.ವಿ.ಎಸ್ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್, ಯುವಕ ಮಂಡಲದ ಗೌರವ ಸಲಹೆಗಾರರಾದ ನವೀನ್ ಅಮೀನ್, ಸಲಹಾ ಸಮಿತಿಯ ಸದಸ್ಯರುಗಳಾದ ರವಿವರ್ಮ ಶೆಟ್ಟಿ ˌ ನಂದನ್ ಕುಮಾರ್ ಮತ್ತು ಸುರೇಶ್ ಎನ್ ಪೂಜಾರಿಯವರು ಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ಉಮೇಶ್ ಆಚಾರ್ಯ ವಹಿಸಿದ್ದರು. ಶಿಲಾನ್ಯಾಸ ಧಾರ್ಮಿಕ ವಿಧಿವಿಧಾನ ವನ್ನು ಉಂಡಾರು ದೇವಳದ ಅರ್ಚಕರಾದ ವಿಷ್ಣುಮೂರ್ತಿ ಮಂಜಿತ್ತಾಯರವರು ನೆರವೇರಿಸಿದರು. ಎಸ್.ವಿ.ಎಚ್ ಕಾಲೇಜು ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚರವರು ಹಾಗೂ ಎಸ್ .ವಿ. ಎಸ್ ಹೈಸ್ಕೂಲು ಮುಖ್ಯೋಪಾಧ್ಯಾಯರಾದ ನಟರಾಜ ಉಪಾಧ್ಯಾಯ ಮತ್ತು ಎಸ್.ವಿ.ಎಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯೋಪಾಧ್ಯಾಯರಾದ ಕೀರ್ತಿ ಪೈ ರವರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ಮದುಸೂಧನ್ ಆಚಾರ್ಯ ಪ್ರಾಸ್ತಾವಿಕ ಮಾತನಾಡಿ, ನಿವೃತ್ತ ಅಧ್ಯಾಪಕರಾದ ನಂದನ್ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಹರಿಶ್ ಪೂಜಾರಿಯವರು ವಂದಿಸಿದರು. ಸ್ಥಳೀಯ ಸಂಘ ಸಂಸ್ಧೆಯ ಅಧ್ಶಕ್ಷರುಗಳುˌ ಯುವಕ ಮಂಡಲದ ಮಾಜಿ ಅಧ್ಶಕ್ಷರುಗಳು, ಸದಸ್ಯರುಗಳು, ಸ್ಥಳೀಯರು ಉಪಸ್ಥಿತರಿದ್ದರು.

ಕಲ್ಯಾಣಪುರ ರೋಟರಿ ಕ್ಲಬ್ ಪ್ರಾಯೋಜಿತ ರೊಟರಾಕ್ಟ್ ಮತ್ತು ಇಂಟರಾಕ್ಟ್ ಕ್ಲಬ್ ಗಳ ಪದಗ್ರಹಣ ಸಮಾರಂಭ

Posted On: 09-10-2021 03:44PM

ಉಡುಪಿ : ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಸರ್ಕಾರಿ ಹೈಸ್ಕೂಲು ಕೆಮ್ಮಣ್ಣು ಇಲ್ಲಿ ನ ರೊಟರಾಕ್ಟ್ ಹಾಗೂ ಇಂಟರಾಕ್ಟ್ ಕ್ಲಬ್ ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ನಡೆಯಿತು. ಈ ಎರಡು ಸಂಸ್ಥೆಗಳ ನೂತನ ಅಧ್ಯಕ್ಷರುಗಳಾದ ಆಕಾಶ್ ಕೋಟ್ಯಾನ್, ತಸ್ರೀನ್ ಹಾಗೂ ಕಾರ್ಯದರ್ಶಿಗಳಾದ ಶಾಂತ, ಪ್ರಜ್ಞಾ ರವರುಗಳಿಗೆ ರೋಟರಿ ಕ್ಲಬ್ಬಿನ ಅಧ್ಯಕರಾದ ಶಂಭು ಶಂಕರ್ ರವರು ಪದಪ್ರದಾನ ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿಯವರಾದ ಅಲೆನ್ ಲೂವಿಸ್ ರವರು ರೋಟರಿ ಸಂಸ್ಥೆಯ ಸೇವೆ ಮತ್ತು ಯೋಜನೆಗಳ ಕುರಿತು ಮಾತನಾಡಿ, ರೊಟರಾಕ್ಟ್ ಮತ್ತು ಇಂಟರಾಕ್ಟ್ ಸಂಸ್ಥೆಯ ಧ್ಯೇಯ ಹಾಗೂ ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ಸದಸ್ಯರ ಸಕ್ರೀಯ ಪಾಲ್ಗೊಳ್ಳುವಿಕೆಯ ಅವಕಾಶ ಮತ್ತು ಪ್ರಯೋಜನಗಳ ಬಗ್ಗೆ ತಿಳಿ ಹೇಳಿ ನೂತನ ಪದಾಧಿಕಾರಿಗಳನ್ನು ಹಾಗು ಅವರ ತಂಡವನ್ನು ಅಭಿನಂದಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಜೇವಿಯರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ರೋಟರಿ ಸಂಸ್ಥೆಯ ಸಹಕಾರವನ್ನು ಸ್ಮರಿಸಿದರು. ಮತ್ತು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಪ್ರಾಮುಖ್ಯತೆ ಕುರಿತು ತಿಳಿಸಿದರು.

ಕಾರ್ಯದರ್ಶಿಗಳಾದ ಪ್ರಕಾಶ್, ರೊಟರಾಕ್ಟ್ ಸಭಾಪತಿ ವಿಜಯ್ ಮಯ್ಯಾಡಿ, ರಾಮ ಪೂಜಾರಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕರು ರೊಟರಾಕ್ಟ್ ಸಂಯೋಜಕರೂ ಆದ ವಿನಯ ದೇವಾಡಿಗ ಅವರು ಸಭಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ರೋಟರಿ ಕ್ಲಬ್ ಸೈಬ್ರಕಟ್ಟೆ ವತಿಯಿಂದ ಕಾವಡಿ ಸರಕಾರಿ ಪ್ರೌಢಶಾಲೆಗೆ ಶಾಲಾ ಪರಿಕರಗಳ ಕೊಡುಗೆ

Posted On: 09-10-2021 03:34PM

ಉಡುಪಿ : ರೋಟರಿ ಕ್ಲಬ್ ಸೈಬ್ರಕಟ್ಟೆ ಇವರಿಂದ ಸರಕಾರಿ ಪ್ರೌಢಶಾಲೆ ಕಾವಡಿ ಇಲ್ಲಿ ಸೀಲಿಂಗ್ ಫ್ಯಾನ್ ಗಳ ಹಸ್ತಾಂತರ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದ್ಮನಾಭ ಕಾಂಚನ್ ಆಗಮಿಸಿದ್ದರು. ಪ್ರಸಾದ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ನೋಟ್ ಬುಕ್, ಪೆನ್ನು ಹಾಗೂ ಮಾಸ್ಕ್ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮನಾಭ ಕಾಂಚನ್ ಅವರು ಶೈಕ್ಷಣಿಕವಾಗಿ ಶಾಲೆಯ ಕೊಡುಗೆಗಳನ್ನು ಶ್ಲಾಘಿಸಿದರು. ಶಾಲೆಯ ಅಭಿವೃದ್ಧಿಗೆ ಸದಾ ಸಿದ್ದ ಎಂದರು. ನೀಲಕಂಠ ರಾವ್ ಇವರು ಶಾಲೆಗೆ ಕೊಡಮಾಡಿದ ನಾಲ್ಕು ಫ್ಯಾನ್ ಗಳನ್ನು ಶಾಲೆಗೆ ರೋಟರಿ ಕ್ಲಬ್ ವಲಯ 3 ರ ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್ ಮೂಲಕ ಶಾಲಾ ಮುಖ್ಯಗುರುಗಳಾದ ಜಯಶ್ರೀಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ನೀಲಕಂಠ ರಾವ್ ರವರು ತಮ್ಮ ಊರಶಾಲೆಯ ಬಗೆಗಿನ ತಮ್ಮ ಅಭಿಮಾನವನ್ನು ತಮ್ಮ ಮಾತುಗಳ ಮೂಲಕ ತೋರಿಸಿಕೊಟ್ಟರು. ರೋಟರಿ ಕ್ಲಬ್ ಸೈಬ್ರಕಟ್ಟೆ ಇದರ ಅಧ್ಯಕ್ಷರಾದ ಪ್ರಸಾದ್ ಭಟ್ ಇವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ರೊಟರಿ ಕ್ಲಬ್ ನ ಶೈಕ್ಷಣಿಕ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದರು. ಅಣ್ಣಯ್ಯ ದಾಸ್, ನೀಲಕಂಠ ರಾವ್, ವಿಜಯಕುಮಾರ್ ಶೆಟ್ಟಿ, ಶಾಲಾ ಮುಖ್ಯಶಿಕ್ಷಕಿ ಜಯಶ್ರೀ , ಶಾಲಾ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಕುಮಾರ್ ಶೋಧನ್, ಶಾಲಾ ವಿದ್ಯಾರ್ಥಿ ನಾಯಕ ಕುಮಾರ್ ಪ್ರಸನ್ನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಾಲಾ ಮುಖ್ಯಶಿಕ್ಷಕಿ ಜಯಶ್ರೀ ಅತಿಥಿಗಳನ್ನು ಸ್ವಾಗತಿಸಿ, ಕುಮಾರಿ ಕೀರ್ತಿ ಹಾಗೂ ಕುಮಾರಿ ಸಾಕ್ಷಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಾಲಾ ಶಿಕ್ಷಕಿ ನಾಗವೇಣಿ ವಂದಿಸಿದರು.

ಪ್ರಧಾನಿ ನರೇಂದ್ರ ಮೋದಿಗೆ ಹುಟ್ಟುಹಬ್ಬದ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ಯುವಮೋರ್ಚಾ ಕಾಪು ಮಂಡಲ ವತಿಯಿಂದ ಪೋಸ್ಟ್ ಕಾರ್ಡ್ ಅಭಿಯಾನ

Posted On: 08-10-2021 06:20PM

ಕಾಪು : ಬಿಜೆಪಿ ಯುವ ಮೋರ್ಚಾ ಕಾಪು ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಹುಟ್ಟುಹಬ್ಬದ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಪೋಸ್ಟ್ ಕಾರ್ಡ್ ಅಭಿಯಾನ ಕಟಪಾಡಿ ಎಸ್ ವಿ ಎಸ್ ಕಾಲೇಜಿನ ಬಳಿ ನಡೆಯಿತು. ಈ ಸಂದರ್ಭ ನೂರಾರು‌ ವಿದ್ಯಾರ್ಥಿಗಳು ಸಂತೋಷದಿಂದ ಪತ್ರ ಬರೆದರು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಕಾಪು ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ಸುವರ್ಣ ಪಿತ್ರೋಡಿ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಸಂತೋಷ ಕುಮಾರ್ ಮೂಡುಬೆಳ್ಳೆ, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕೃಷ್ಣ ರಾವ್, ಮಂಡಲ ಉಪಾಧ್ಯಕ್ಷರಾದ ಪವಿತ್ರ ಶೆಟ್ಟಿ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್, ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ಉದ್ಯಾವರ, ಅಭಿರಾಜ್ ಸುವರ್ಣ, ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಡ್ವೆ, ಉಪಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಶಕ್ತಿಕೇಂದ್ರ ಪ್ರಮುಖ್ ಸಂತೋಷ್ ಕುಮಾರ್, ಅರುಣ್ ಆಚಾರ್ಯ ಉಪಸ್ಥಿತರಿದ್ದರು.

ಬಿಜೆಪಿ ಯುವಮೋರ್ಚಾ ಕಾಪು ಮಂಡಲ ವತಿಯಿಂದ ಕಾಪು ಸಂತೆಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಜಾಗೃತಿ ಮತ್ತು ಬಟ್ಟೆ ಚೀಲಗಳ ವಿತರಣೆ

Posted On: 08-10-2021 05:15PM

ಕಾಪು‌: ಬಿಜೆಪಿ ಯುವಮೋರ್ಚಾ ಕಾಪು ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿಜಿ ಯವರ 71ನೇ ಜನ್ಮದಿನದ ಪ್ರಯುಕ್ತ "ಸೇವೆ ಮತ್ತು ಸಮರ್ಪಣೆ" ಅಭಿಯಾನದ ಅಂಗವಾಗಿ ಕಾಪು ಸಂತೆಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಜಾಗೃತಿ ಮತ್ತು ಬಟ್ಟೆ ಚೀಲ ಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಕಾಂತ್ ನಾಯಕ್, ಕಾಪು ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ಸುವರ್ಣ ಪಿತ್ರೋಡಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಸಂತೋಷ ಕುಮಾರ್ ಮೂಡುಬೆಳ್ಳೆ, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕೃಷ್ಣರಾವ್, ನಿಕಟ ಪೂರ್ವ ಪುರಸಭಾ ಅಧ್ಯಕ್ಷರಾದ ಅನಿಲ್ ಕುಮಾರ್, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್, ಕಾರ್ಯದರ್ಶಿ ಸತೀಶ್ ಪೂಜಾರಿ ಉದ್ಯಾವರ, ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಡ್ವೆ, ಉಪಾಧ್ಯಕ್ಷರಾದ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.

ಉಪ್ಪುಂದ : ಕನಸಿನ ಮನೆಯ ನಿರ್ಮಾಣವನ್ನು ನನಸು ಮಾಡಿದ ಡಾ. ಗೋವಿಂದ ಬಾಬು ಪೂಜಾರಿ

Posted On: 08-10-2021 04:50PM

ಉಡುಪಿ : ಉಪ್ಪುಂದ ಕಾಳವರದ ನರಿ ಕೋಡ್ಲು ಮನೆ ಸತೀಶ್ ಪೂಜಾರಿಯವರು ನೂತನ ಮನೆ ನಿರ್ಮಾಣ ಮಾಡುವ ಕನಸು ಕಂಡಿದ್ದರು, ಆದರೆ ವಿಧಿ ಆಟವೇ ಬೇರೆಯಾಗಿತ್ತು, ಮನೆ ಪೂರ್ಣವಾಗುವ ಮೊದಲೇ ಅಕಾಲಿಕ ಮರಣಕ್ಕೆ ತುತ್ತಾದರೂ, ಇದರಿಂದ ಮನೆಯವರು ಮನೆ ನಿರ್ಮಾಣ ಮಾಡಲು ಸಾಧ್ಯವಾಗದೆ ತೀವ್ರ ಕಷ್ಟದಲ್ಲಿ ಇರುವುದು ಡಾ. ಗೋವಿಂದ ಬಾಬು ಇವರ ಗಮನಕ್ಕೆ ಬಂದು ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ.) ಮೂಲಕ ಮನೆಯನ್ನು ಪೂರ್ಣಗೊಳಿಸಿ ಕೊಡುವ ಭರವಸೆಯನ್ನು ನೀಡಿದ್ದರು.

ಇದೀಗ ಸುಸಜ್ಜಿತ ಮನೆ ನಿರ್ಮಾಣಗೊಂಡಿದ್ದು ಈ ಮನೆ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿ ಕೊಡುತ್ತಿರುವ 5ನೇ ಮನೆ ಇದಾಗಿದೆ.

"ವರಲಕ್ಷ್ಮಿ ನಿಲಯ" ಇದರ ಗ್ರಹಪ್ರವೇಶ ಮತ್ತು ಫಲಾನುಭವಿಗಳಿಗೆ ಮನೆಯ ಕೀ ಹಸ್ತಾಂತರ ಕಾರ್ಯಕ್ರಮಕ್ಕೆ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು ಭಾಗವಹಿಸಿ ಡಾ.ಗೋವಿಂದ ಬಾಬು ಪೂಜಾರಿಯವರಿಗೆ ದೇವರು ಇನ್ನಷ್ಟು ಸಮಾಜಮುಖಿ ಕೆಲಸ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಕಾಳವರ ಗ್ರಾ. ಪಂ. ಅಧ್ಯಕ್ಷೆ ಆಶಾಲತಾ ಶೆಟ್ಟಿ, ಅಶೋಕ್ ಪೂಜಾರಿ, ಕುಂದಾಪುರ ಬಿಲ್ಲವ ಸಂಘ ಅಧ್ಯಕ್ಷರು ಹಾಗೂ ಬಿಲ್ಲವ ಹಿರಿಯ ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.

ಅಕ್ಟೋಬರ್ 12 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ದೇವಿಗೆ ಹರಕೆಯಾಗಿ ಬಂದ ಸೀರೆಗಳ ಬಹಿರಂಗ ಹರಾಜು ಪ್ರಕ್ರಿಯೆ

Posted On: 07-10-2021 10:43PM

ಕಾಪು : ನವರಾತ್ರಿ ಮಹೋತ್ಸವದ ಪರ್ವ ಕಾಲದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ದೇವಿಗೆ ಹರಕೆಯಾಗಿ ಬಂದಿರುವ ಸೀರೆಗಳನ್ನು ಬಹಿರಂಗವಾಗಿ ಹರಾಜು ಹಾಕುವ ಪ್ರಕ್ರಿಯೆಯು ವರ್ಷಂಪ್ರತೀ ನಡೆಯುತ್ತದೆ.

12/10/2021ನೇ ಮಂಗಳವಾರ ಚಂಡಿಕಾಯಾಗ ನಡೆಯಲಿದ್ದು, ವರ್ಷಂಪ್ರತಿಯಂತೆ ಹರಾಜು ಪ್ರಕ್ರಿಯೆ ಈ ಬಾರಿಯೂ ಜರುಗಲಿದೆ. ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಗೌರವಯುತವಾಗಿ ಕೆಲಸ ಮಾಡುವುದು ಮಹಿಳೆಯ ಮೂಲಭೂತ ಹಕ್ಕು : ನ್ಯಾ.ಶರ್ಮಿಳಾ

Posted On: 07-10-2021 09:16PM

ಉಡುಪಿ : ಮಹಿಳೆಯರು ತಾವು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಪುರುಷರ ಯಾವುದೇ ಕಿರುಕುಳಕ್ಕೆ ಒಳಗಾಗದೇ ಗೌರವಯುತವಾಗಿ ಕೆಲಸ ಮಾಡುವುದು ಮಹಿಳೆಯ ಮೂಲಭೂತ ಹಕ್ಕು ಎಂದು ವಿಶಾಖಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಹೇಳಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಶ್ರಾಯದಲ್ಲಿ ಸ್ವಾತಂತ್ರ್ಯೋತ್ಸವದ 75 ನೇ ವಾರ್ಷಿಕೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಡೆದ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳದ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ವಲಯಗಳಲ್ಲಿ ಪುರುಷರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ, ಮಹಿಳೆಯರು ತಮ್ಮ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದಿಂದ, ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿ ತೀವ್ರ ಒಳಗಾಗುತ್ತಾರೆ. ಇಂತಹ ದೌರ್ಜನ್ಯಗಳ ವಿರುದ್ಧ ಮಹಿಳೆಯರ ರಕ್ಷಣೆಗಾಗಿ ಸರ್ಕಾರವು ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ,ನಿವಾರಣೆ) ಅಧಿನಿಯಮ 2013 ನ್ನು ಜಾರಿಗೆ ತಂದಿದ್ದು, ಈ ಕುರಿತು ಎಲ್ಲಾ ಮಹಿಳೆಯರು ಸೂಕ್ತ ಅರಿವು ಹೊಂದಿರುವಂತೆ ಮತ್ತು ದೌರ್ಜನ್ಯಕ್ಕೆ ಒಳಗಾದಲ್ಲಿ ಸೂಕ್ತ ಕಾನೂನು ನೆರವು ಪಡೆಯುವಂತೆ ನ್ಯಾ.ಶರ್ಮಿಳಾ ಹೇಳಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನ್ಯಾಯವಾದಿ ವಿಜಯ್ ವಾಸು ಪೂಜಾರಿ ಮಾತನಾಡಿ, ಮಹಿಳೆ ಕೆಲಸ ನಿರ್ವಹಿಸುವ ಸ್ಥಳ ಎಂದರೆ ಸರ್ಕಾರಿ ಕಚೇರಿ ಮಾತ್ರವಲ್ಲದೇ ಎಲ್ಲಾ ಖಾಸಗಿ ಸಂಸ್ಥೆಗಳ ಮತ್ತು ಖಾಯಂ, ಗುತ್ತಿಗೆ, ಅರೆಕಾಲಿಕ, ಹೊರಗುತ್ತಿಗೆ , ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಸಹ ಈ ವ್ಯಾಪಿಗೆ ಬರಲಿದ್ದು, ಇವರ ಮೇಲೆ ಕೆಲಸ ಮಾಡುವ ಸ್ಥಳದಲ್ಲಿ ಒಂದಲ್ಲ ಒಂದು ಕಾರಣದಿಂದ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದೆ.

ಬಲಿಷ್ಠವಾದ ಕಾನೂನಿನ ಬೆಂಬಲ ಹೊಂದಿದ್ದರೂ ಪ್ರಸುತ್ತ ಕಾಲದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿವೆ ಎಂದ ಅವರು, ಮಹಿಳೆಯರು ಕೆಲಸ ನಿರ್ವಹಿಸುವ ಎಲ್ಲಾ ವಲಯಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಕಡ್ಡಾಯವಾಗಿದ್ದು, ಸಮಿತಿಯನ್ನು ರಚಿಸದೇ ಇರುವ ಸಂಸ್ಥೆಗಳಿಗೆ 50,000 ದಿಂದ 1 ಲಕ್ಷದ ವರೆಗೆ ದಂಡ ವಿಧಿಸುವುದು ಸೇರಿದಂತೆ, ಪರವಾನಗಿಯನ್ನು ರದ್ದುಪಡಿಸುವ ಅವಕಾಶ ಕೂಡಾ ಕಾನೂನಿನಲ್ಲಿ ಇದ್ದು, ದೌರ್ಜನ್ಯಕ್ಕೆ ಒಳಗಾದ ಮಹಿಳೆ 90 ದಿನಗಳ ಒಳಗೆ ಸಮಿತಿಗೆ ದೂರು ನೀಡಬಹುದು ಎಂದರು. ದೌರ್ಜನ್ಯಕ್ಕೆ ಒಳಗಾದ ಮಹಿಳೆ ದೂರು ನೀಡುವ ಸ್ಥಿತಿಯಲ್ಲಿರದೇ ಆಘಾತದಲ್ಲಿದ್ದಲ್ಲಿ ಅವಳ ಕಾನೂನುಬದ್ದ ವಾರೀಸುದಾರರು ಮಹಿಳೆಯ ಪರವಾಗಿ ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಹ ಅವಕಾಶವಿದೆ, ನೊಂದ ಮಹಿಳೆಗೆ ಮಧ್ಯಂತರ ಪರಿಹಾರ ಸೇರಿದಂತೆ ಸೂಕ್ತ ನ್ಯಾಯ ದೊರೆಯಲಿದೆ. ಜಿಲ್ಲಾವ್ಯಾಪ್ತಿಯಲ್ಲಿ ರಚನೆಯಾಗುವ ಆಂತರಿಕ ದೂರು ಸಮಿತಿಗೆ ಜಿಲ್ಲಾಧಿಕಾರಿಗಳು ಆಧ್ಯಕ್ಷರಾಗಿದ್ದು, ಪ್ರತೀ 6 ತಿಂಗಳಿಗೊಮ್ಮೆ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ಕುರಿತು ಮಾಹಿತಿಯನ್ನು ರಾಜ್ಯಕ್ಕೆ ಸಲ್ಲಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ಶೇಷಪ್ಪ ಉಪಸ್ಥಿತರಿದ್ದರು. ಮಹಿಳಾ ಅಭಿವೃದ್ದಿ ನಿಗಮದ ನಿರೀಕ್ಷಕಿ ಚಂದ್ರಿಕಾ ಎಸ್ ನಾಯಕ್ ಸ್ವಾಗತಿಸಿ, ಶಾರದಾ ವಂದಿಸಿದರು.

ಉಡುಪಿ : ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮ

Posted On: 07-10-2021 09:08PM

ಉಡುಪಿ : ರಕ್ತ ನೀಡಿ ಜಗತ್ತನ್ನು ಗೆಲ್ಲಿಸಿ ಎಂಬ ಧ್ಯೇಯವಾಕ್ಯದೊಂದಿಗೆ ಈ ವರ್ಷ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ನಡೆಯುತ್ತಿದ್ದು, ವರ್ಷದಲ್ಲಿ 1 ರಿಂದ 3 ಬಾರಿ ರಕ್ತದಾನವನ್ನು ಮಾಡುವುದರ ಮೂಲಕ ಪರೋಕ್ಷವಾಗಿ ಹಲವಾರು ಜೀವ ರಕ್ಷಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ ಹೇಳಿದರು. ಅವರು ಇಂದು ಮಣಿಪಾಲದ ಅನಂತನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಏಡ್ಸ್ ನಿಯಂತ್ರಣಘಟಕ, ರಕ್ತನಿಧಿ ಕೇಂದ್ರ, ಜಿಲ್ಲಾಸ್ಪತ್ರೆ, 6ಕರ್ನಾಟಕ ನೌಕಾದಳ ಎನ್ಸಿಸಿ, ಕರ್ನಾಟಕ ರಾಜ್ಯ ನೌಕರರ ಸಂಘ, ಲಯನ್ಸ್ಕ್ಲಬ್, ಮಿಡ್ಟೌನ್ ಮತ್ತು ಯುವ ರೆಡ್ಕ್ರಾಸ್ ಘಟಕ ಹಾಗೂ ಎನ್ ಎಸ್ ಎಸ್ ಘಟಕ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಉಡುಪಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಪ್ರತಿ 100 ಜನರಲ್ಲಿ 5 ಜನರಿಗೆ ರಕ್ತದ ಕೊರತೆ ಕಂಡುಬರುತ್ತಿದ್ದು, ಹೆರಿಗೆ ಸಮಯದಲ್ಲಿ, ಅಪಘಾತ ಸಂಭವಿಸಿದಾಗ ಹಾಗೂ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹೆಚ್ಚಾಗಿ ರಕ್ತದ ಅವಶ್ಯಕತೆಯಿದ್ದು,ಈ ಸಮಸ್ಯೆಗಳನ್ನು ನಿವಾರಿಸಲು ಯುವಜನತೆ ರಕ್ತದಾನ ಮಾಡುವುದರ ಮೂಲಕ ಇತರರನ್ನು ರಕ್ತದಾನ ಮಾಡುವಂತೆ ಪ್ರೇರೆಪಿಸಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಬೇಕು ಎಂದರು. ನಿಯಮಿತವಾಗಿ ರಕ್ತದಾನ ಮಾಡವುದರಿಂದ ದೈಹಿಕ ಆರೋಗ್ಯವು ಕ್ರೀಯಾಶೀಲವಾಗಿರುವುದಲ್ಲದೆ, ದೇಹದ ಸಮತೋಲನವನ್ನು ಕಾಪಾಡಬಹುದು. ಇದರಿಂದ ಯಾವುದೇ ತೊಂದರೆಗಳು ಸಂಭವಿಸುವುದಿಲ್ಲ. ಆದ್ದರಿಂದ ಯುವಕರು ಸ್ವಯಂಪ್ರೇರಿತವಾಗಿ ಮುಂದೆ ಬಂದು ರಕ್ತದಾನ ಶಿಬಿರದಲ್ಲಿ ಭಾಗವಹಿಸುವುದರ ಜೊತೆಗೆ ಸದೃಢ ಸಮಾಜದ ಏಳಿಗೆಗೆ ಪಾತ್ರರಾಗಬೇಕು ಎಂದ ಅವರು ರಕ್ತದಾನದಿಂದ ಸಕಾಲದಲ್ಲಿ ಅಶಕ್ತರಿಗೆ ಆಗುವ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಸ್ವಯಂಪ್ರೇರಿತವಾಗಿ ತಾವೇ ರಕ್ತದಾನ ಮಾಡುವ ಮೂಲಕ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಯುವಜನತೆಗೆ ಮಾದರಿಯಾದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ್ ಉಡುಪ ಮಾತನಾಡಿ, ಜಿಲ್ಲೆಯಲ್ಲಿ 2002 ರಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಹಲವಾರು ಸಂಘ ಸಂಸ್ಥೆಗಳು ಈ ಕಾರ್ಯದಲ್ಲಿ ಕೈಜೋಡಿಸಿರುವುದು ಜಿಲ್ಲೆಯಲ್ಲಿನ ಸಾಮಾಜಿಕ ಪ್ರಜ್ಞೆ ಮತ್ತು ಮಾನವೀಯ ಮೌಲ್ಯ ವನ್ನುಸೂಚಿಸುತ್ತದೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಯುವಜನತೆಗೆ ಪ್ರೇರೆಪಿಸಿದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಮಹತ್ವ ಸಿಗುತ್ತದೆ ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ್ ಸಂಜು ಎಸ್. ವಿ ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲೆಯಲ್ಲಿಅತಿ ಹೆಚ್ಚುಬಾರಿರಕ್ತದಾನ ಮಾಡಿದ ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಣಿಪಾಲ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಸಹನಾ, ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್, 6ಕರ್ನಾಟಕ ನೌಕಾದಳ ಎನ್ ಸಿಸಿ ಯ ಲೆ. ಕಮಾಂಡರ್ ರಿಕಿ ಪರೇರಾ, ಲಯನ್ಸ್ ಕ್ಲಬ್ನ ಅಧ್ಯಕ್ಷ ಆನಂದ್ ಗಾಣಿಗಾ, ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ ಹಾಗೂ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಾಲಿಟೆಕ್ನಿಕ್ ಕಾಲೇಜಿನ ಶಿಕ್ಷಕಿ ವಂದನಾ ಆರ್.ಪಿ. ಸ್ವಾಗತಿಸಿ, ಆಲಂದೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.