Updated News From Kaup

ಶಿರ್ವ ಪೋಲಿಸ್ ಸ್ಟೇಷನ್ ಆಯುಧ ಪೂಜೆ - ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಭಾಗಿ

Posted On: 15-10-2021 08:52PM

ಕಾಪು : ಕಾಪು ಕ್ಷೇತ್ರದ ಮಾಜಿ ಶಾಸಕರು, ಸಚಿವರೂ ಆದ ಸನ್ಮಾನ್ಯ ವಿನಯ ಕುಮಾರ್ ಸೊರಕೆಯವರು ಶಿರ್ವ ಪೋಲಿಸ್ ಸ್ಟೇಷನ್ ನಲ್ಲಿ ನಡೆದ ಆಯುಧ ಪೂಜೆಯಲ್ಲಿ ಭಾಗವಹಿಸಿದರು.

ಶಿರ್ವ ಠಾಣಾಧಿಕಾರಿ ಶಾಲು ಹೊದಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದರು ನಂತರ ಆಯುಧ ಪೂಜೆಯ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಠಾಣಾ ಸಿಬ್ಬಂದಿಗಳು ಹಾಗೂ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮರಾಯ ಪಾಟ್ಕರ್, ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ರತನ್ ಶೆಟ್ಟಿ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮೆಲ್ವಿನ್ ಡಿಸೋಜ, ಅಬ್ದುಲ್ ಲತೀಫ್ ಉದಯ್ ಪದವು, ಸುಧೀರ್ ಶೆಟ್ಟಿ, ವೀರೇಂದ್ರ ಶೆಟ್ಟಿ ಹಾಜರಿದ್ದರು.

ರೋಟರಿಯಲ್ಲಿ ಆರೋಗ್ಯ, ಶಿಕ್ಷಣ, ಮಾನವೀಯನೆಲೆಯ ಸಮಾಜಮುಖಿ ಸೇವಾಕಾರ್ಯಗಳು ನಿರಂತರ : ರೋಟರಿ ಗವನ೯ರ್ ಎಂ.ಜಿ.ರಾಮಚಂದ್ರಮೂರ್ತಿ

Posted On: 15-10-2021 08:42PM

ಶಿರ್ವ : ರೋಟರಿ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಸಮಾನ ಮನಸ್ಕರ, ಸಮಾನಚಿಂತಕರ ಸೇವಾದರ್ಶ ತತ್ವಗಳನ್ನು ಮೈಗೂಡಿಸಿಕೊಂಡ ಆಸಕ್ತರ ಒಕ್ಕೂಟ. ರೋಟರಿಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ಪರಿಸರ ಮಾನವೀಯ ನೆಲೆಯ ಸಮಾಜಮುಖಿ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ಸರಕಾರ ಮಾಡುವ ಹಲವಾರು ಕಾರ್ಯಗಳನ್ನು ರೋಟರಿ ಸಂಸ್ಥೆಗಳು ನಿರಂತರವಾಗಿ ಮಾಡುತ್ತಿವೆ ಎಂದು ರೋಟರಿ ಅಂತರಾಷ್ಟ್ರೀಯ ಜಿಲ್ಲೆ ೩೧೮೨ ಇದರ ಜಿಲ್ಲಾ ಗವರ್ನರ್ ಎಂ.ಜಿ.ರಾಮಚಂದ್ರ ಮೂರ್ತಿ ಶಿವಮೊಗ್ಗ ನುಡಿದರು. ಅವರು ಶುಕ್ರವಾರ ೫೧ ವರ್ಷಗಳ ಸೇವಾ ಇತಿಹಾಸ ಹೊಂದಿರುವ ಪ್ರತಿಷ್ಠಿತ ಶಿರ್ವ ರೋಟರಿ ಸಂಸ್ಥೆಗೆ ಅಧಿಕೃತ ಸಂದರ್ಶನ ನೀಡಿ ದಿನಪೂರ್ತಿ ಹಲವಾರು ಸೇವಾಯೋಜನೆಗಳನ್ನು ಲೋಕಾರ್ಪಣೆಗೊಳಿಸಿ ಸಂಜೆ ಬಂಟಕಲ್ಲು ರೋಟರಿ ಸಭಾಭವನದಲ್ಲಿ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು,ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ವಲಯ ಸಹಾಯಕ ಗವರ್ನರ್ ಡಾ.ಅರುಣ್ ಹೆಗ್ಡೆ ಕ್ಲಬ್ ಪತ್ರಿಕೆ "ಮಲ್ಲಿಕಾ"ಬಿಡುಗಡೆಗೊಳಿಸಿದರು. ಸಂಪಾದಕ ರಘುಪತಿ ಐತಾಳ್ ಸಹಕರಿಸಿದರು. ವಲಯಸೇನಾನಿ ಅನಿಲ್ ಡೇಸಾ ಶುಭ ಹಾರೈಸಿದರು. ನಿವೃತ್ತ ಶಿಕ್ಷಕಿಯರಾದ ಹಿಲ್ಡಾ ಸಲ್ಡಾನ್ನಾ ಪಾಂಬೂರು, ಹಿಂದು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶಕಿಲಾ, ನಿಟ್ಟೆ ತಾಂತ್ರಿಕ ಕಾಲೇಜು ಉಪನ್ಯಾಸಕ, ಪಿಎಚ್‌ಡಿ ಸಾಧಕ ಡಾ.ಶ್ರೀರಾಮ್ ಪಿ. ಮರಾಠೆರವರನ್ನು ಸನ್ಮಾನಿಸಲಾಯಿತು. ಶಿರ್ವ ಸಂತಮೇರಿ ಕಾಲೇಜಿನ ಸಾಧಕ ಪ್ರೊ.ವಿಠಲ್ ನಾಯಕ್‌ರನ್ನು ಅಭಿನಂದಿಸಲಾಯಿತು.

ಕೊರೋನಾ ವಾರಿಯಸ್೯ಗಳಾಗಿ ಸೇವೆ ನೀಡುತ್ತಿರುವ ಗಿರಿಧರ್ ಪ್ರಭು ಶಿರ್ವ, ರಮೇಶ್ ಪೂಜಾರಿರವರನ್ನು ಗೌರವಿಸಲಾಯಿತು. ದಿನೇಶ್ ಕುಲಾಲ್, ಪ್ರಶೋಭ್ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ರಫಾಯಲ್ ಮತಾಯಸ್, ರೊನಾಲ್ಡ್ ಸಿಕ್ವೇರಾ, ಹೊನ್ನಯ್ಯ ಶೆಟ್ಟಿಗಾರ್, ಫಿಲಿಪ್ ಕಸ್ತಲಿನೊ, ಮೈಕಲ್ ಮತಾಯಸ್, ಅಮಿತ್ ಅರಾನ್ನ, ಜಗದೀಶ್ ಹೆಗ್ಡೆ, ವಿಷ್ಣುಮೂರ್ತಿ ಸರಳಾಯ, ಪರಿಚಯಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಜಯಕೃಷ್ಣ ಆಳ್ವ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಜಿನೇಶ್ ಬಲ್ಲಾಳ್ ವರದಿ ವಾಚನ ಮಾಡಿ ಕೊನೆಯಲ್ಲಿ ಧನ್ಯವಾದವಿತ್ತರು. ಸುಧಾಕರ್ ಶೆಣೈ ನಿರೂಪಿಸಿದರು. ಕೋಡು ಸದಾನಂದ ಶೆಟ್ಟಿ, ರಾಘವೇಂದ್ರ ನಾಯಕ್ ಸಹಕರಿಸಿದರು.

ಪೂರ್ವಾಹ್ನ ಶಿರ್ವ ಹಿಂದೂ ಪ.ಪೂ.ಕಾಲೇಜು ಪ್ರೌಢಶಾಲೆಯಲ್ಲಿ ನೂತನ ಇಂರ‍್ಯಾಕ್ಟ್ ಕ್ಲಬ್ ಉದ್ಘಾಟನೆ, ಶಿರ್ವ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸಮೀಪ ರಸ್ತೆ ಸೂಚನಾಫಲಕ ಅನಾವರಣ, ಶಿರ್ವ ಪೇಟೆ ಕಟಪಾಡಿ-ಕಾಪು ರಸ್ತೆ ಕೂಡುವಲ್ಲಿ ನೂತನ ಸರ್ಕಲ್ ಲೋಕರ್ಪಣೆ, ರೋಟರಿಯಿಂದ ನಿರ್ಮಾಣಗೊಂಡ ಎಲ್.ಮೆಂಡೋನ್ಸಾ ಸ್ಮಾರಕ ಬಸ್ ತಂಗುದಾಣ ಗ್ರಾಮಪಂಚಾಯತ್‌ಗೆ ಹಸ್ತಾಂತರ, ಶಿರ್ವ ಸಂತಮೇರಿ ಪ್ರೌಢ ಶಾಲಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ "ವಿದ್ಯಾಸೇತು" ಪುಸ್ತಕ ವಿತರಣೆ, ಪಾದೂರು ರೋಟರಿ ಸಮುದಾಯದಳದ ವತಿಯಿಂದ ರೈತರಿಗೆ ಸಾವಯವ ಗೊಬ್ಬರ ವಿತರಣೆ ಕೃಷಿ ಮಾಹಿತಿ, ಪಾದೂರು ಅಬ್ಬೆಟ್ಟುಗುತ್ತು ಡಾ.ಎನ್.ಎಸ್.ಶೆಟ್ಟಿ ನಿವಾಸದಲ್ಲಿ ಕ್ಲಬ್ ಎಸ್ಸೆಂಬ್ಲಿ, ಶಿರ್ವ ಗ್ಯಾಬ್ರಿಯಲ್ ನಜ್ರೆತ್ ನಿರ್ಮಿಸಿದ ಸಿದ್ಧಿವಿನಾಯಕ ದೇವಳ ಹಾಗೂ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳಕ್ಕೆ ಜಿಲ್ಲಾ ಗವರ್ನರ್ ಭೇಟಿ ಕಾರ್ಯಕ್ರಮಗಳು ಸಂಪನ್ನಗೊಂಡವು.

ಆಧ್ಯಾತ್ಮಿಕ‌ ನೆಲೆಯಲ್ಲಿ ನಾನು ಯಾರು ಎನ್ನುವ ಅರಿವಿನ ಪೂರ್ಣತೆಯಿಂದಷ್ಟೇ ಜಗತ್ತಿನ ಅರಿವು ಹೊಂದಲು‌ ಸಾಧ್ಯ‌ : ಸಿಎಂ ಬೊಮ್ಮಾಯಿ

Posted On: 13-10-2021 11:36PM

ಅದಮಾರು : ಧ್ಯಾನ, ಜ್ಞಾನದಿಂದ ಅರಿವಿನ ಪೂರ್ಣಪ್ರಜ್ಞರಾಗಿ ವಿದ್ಯಾರ್ಥಿಗಳು ಜಗತ್ತು ಗೆಲ್ಲುವ‌ ಸಾಧಕರಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಪಡುಬಿದ್ರಿ ಸಮೀಪದ ಅದಮಾರಿನಲ್ಲಿ ಪೂರ್ಣಪ್ರಜ್ಞ ಪದವಿ ಕಾಲೇಜು ಕಟ್ಟಡ ನಿರ್ಮಾಣದ‌7.40ಕೋಟಿ ರೂ.ವೆಚ್ಚದ ಯೋಜನೆಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ವಾಸುದೇವ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು. ಪ್ರಜ್ಞಾಶೀಲರಾಗಿರುವುದೇ ಬದುಕಿನ ಬಹುದೊಡ್ಡ ಸಾಧನೆ,ಯಾವುದೇ ಕೆಲಸ ಕಾರ್ಯಗಳಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿಸಿಕೊಳ್ಳಬೇಕು. ಆಧ್ಯಾತ್ಮಿಕ‌ ನೆಲೆಯಲ್ಲಿ ನಾನು ಯಾರು ಎನ್ನುವ ಅರಿವಿನ ಪೂರ್ಣತೆಯಿಂದಷ್ಟೇ ಜಗತ್ತಿನ ಅರಿವು ಹೊಂದಲು‌ ಸಾಧ್ಯ‌ ಎಂದರು. ಈ ಜಗತ್ತಿನಲ್ಲಿ ನಾನು ಯಾರು, ಭೂಮಿಗೆ ಬಂದಿದ್ದೇಕೆ, ಕರ್ತವ್ಯ ಏನು? ಮಾನವನಾಗಿ ಹುಟ್ಟಿದ್ದೇಕೆ ಎನ್ನುವ ಪ್ರಶ್ನಗಳಿಗೆ ಅರಿವು, ಪೂರ್ಣಪ್ರಜ್ಞೆ ಹೊಂದಿದರೆ ಉತ್ತರ ಗಳಿಕೆ‌ ಸಾಧ್ಯ ಎಂದರು.‌

ಶಿಕ್ಷಣ‌ಸಂಸ್ಥೆಯಿಂದ ಹೊರಬಿದ್ದಾಗ ಗೌರವಿಂದ ಕಾಣುವಂತಾಗಬೇಕು. ಬಯಸದ್ದು ಬಂದಾಗ, ಅದೃಷ್ಟ ಒಲಿದಾಗ ಕರ್ತವ್ಯ ಮರೆಯಬಾರದು. ಪರಿಪೂರ್ಣ ಜ್ಞಾನ ಗಳಿಕೆಯನ್ನು ಭಕ್ತಿ, ಶ್ರದ್ಧೆಯಿಂದ ಮಾಡಬೇಕು.‌ ಗ್ರಾಮೀಣ ಮಕ್ಕಳ ವಿದ್ಯಾರ್ಜನೆಗೆ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಶ್ರೀವಿಬುಧೇಶತೀರ್ಥರಿಗೆ ಕೋಟಿ ಕೋಟಿ ನಮನಗಳು. ಪೂರ್ಣಪ್ರಜ್ಞ ಬ್ರ್ಯಾಂಡ್ ನೇಮ್ ವಿದ್ಯಾರ್ಥಿ ಶಕ್ತಿ, ನೈತಿಕ ಶಕ್ತಿಯಿಂದ ರೂಪುಗೊಂಡಿದೆ. ಸಮಾಜಕ್ಕೆ ಗುರು ಶ್ರೀಮಠದಿಂದ ಬಹುದೊಡ್ಡ ಕೊಡುಗೆ ಸಂದಿದೆ. ಶಿಕ್ಷಣ‌ ಸಂಸ್ಥೆಯಲ್ಲಿ‌ ಪಾಠ, ಓದು, ಪರೀಕ್ಷೆಯಿದ್ದರೆ ಬದುಕಿನಲ್ಲಿ ಪರೀಕ್ಷೆ ಎದುರಿಸಿ‌ ಪಾಠ ಕಲಿಯಬೇಕಿದೆ. ವಿದ್ಯಾರ್ಥಿಯಾದವನ ಬದುಕಿನುದ್ದಕ್ಕೂ ಕಲಿಕೆ ನಿರಂತರವಾಗಿರಬೇಕು‌ ಎಂದು ಬೊಮ್ಮಾಯಿ ನುಡಿದರು. ಯಾವುದೇ ವಿಷಯವನ್ನು ಪ್ರಶ್ನಿಸುವ ಲಾಜಿಕಲ್ ಚಿಂತನೆಯಿಂದ ತಾರ್ಕಿಕ ಉತ್ತರ ಕಂಡುಕೊಳ್ಳಬೇಕು.‌ ಜಯ ಅಪಜಯ ನಮ್ಮೊಳಗಿದ್ದು ಆತ್ಮವಿಶ್ವಾದಿಂದ ಮುನ್ನುಗ್ಗಿ ಪೂರ್ಣಪ್ರಜ್ಞೆಯ ಅರಿವೇ ಗುರು ಎಂದು ಹೇಳಿದರು.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ , ಕೆ.ರಘುಪತಿ ಭಟ್, .ಗ್ರಾ.ಪಂ.ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಡಾ.ಜಿ.ಎಸ್.ಚಂದ್ರಶೇಖರ್, ಎಂ. ರಾಮಕೃಷ್ಣ ಪೈ, ಡಾ.ಒಲ್ವಿಟಾ ಡಿಸೋಜ ಉಪಸ್ಥಿತರಿದ್ದರು.

ಅನನ್ಯಾ, ಭಾರತಿ, ಶ್ರೀವಾಣಿ, ಹರ್ಷ ಪ್ರಾರ್ಥಿಸಿದರು. ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸ್ವಾಗತಿಸಿದರು.‌ ಡಾ.ಜಯಶಂಕರ ಕಂಗಣ್ಣಾರು ನಿರೂಪಿಸಿ, ಅದಮಾರು ಪೂರ್ಣಪ್ರಜ್ಞ ಸಂಸ್ಥೆಗಳ ಕಾರ್ಯದರ್ಶಿ ಪ್ರವೀಣ್ ಕುಮಾರ್ ವಂದಿಸಿದರು.

ಮುಖ್ಯಮಂತ್ರಿಯಿಂದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 4.6 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ

Posted On: 13-10-2021 11:26PM

ಕಾಪು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉಡುಪಿ ಜಿಲ್ಲೆಯ ಕುಂತಲ ನಗರದಲ್ಲಿ ಮಾಧವ ನಗರದಿಂದ ಬಂಟಕಲ್ಲು ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಒಟ್ಟು 6.36 ಕಿ.‌ಮೀ ಉದ್ದದ ರಸ್ತೆಯನ್ನು 4.6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆ ಇದಾಗಿದೆ.

ಈ ಕಾರ್ಯಕ್ರಮದಲ್ಲಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ವಿ ಸುನೀಲ್ ಕುಮಾರ್, ಶಾಸಕರಾದ ರಘುಪತಿ ಭಟ್ , ಲಾಲಾಜಿ ಮೆಂಡನ್ ಉಪಸ್ಥಿತರಿದ್ದರು.

ಮಕ್ಕಳಿಗೆ ಕೋವಿಡ್ ಲಸಿಕೆಗೆ ಕೇಂದ್ರ ಸರಕಾರದ ಸಕ್ಷಮ ಪ್ರಾಧಿಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ : ಮುಖ್ಯಮಂತ್ರಿ ಬೊಮ್ಮಾಯಿ

Posted On: 13-10-2021 07:47PM

ಉಡುಪಿ‌: ರಾಜ್ಯದಲ್ಲಿ 2ರಿಂದ 18ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರಕಾರದ ಸಕ್ಷಮ ಪ್ರಾಧಿಕಾರ ಕೊನೆಯ ಸರ್ಟಿಫಿಕೇಶನ್ ನ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಅವರು‌ ಇಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಾವೀಗ ಮಕ್ಕಳ ರಕ್ಷಣೆ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಲಭಿಸಿದ ತಕ್ಷಣ ಲಸಿಕೆ ನೀಡುತ್ತೇವೆ ಎಂದರು.

ಈಗಾಗಲೇ ನಾವು ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ಶೇ. 82ರಷ್ಟು ಸಾಧನೆ ಮಾಡಿದ್ದೇವೆ. ಅಲ್ಲದೇ ಎರಡನೇ ಡೋಸ್ ಲಸಿಕೆ ಶೇ. 36-37ರಷ್ಟು ಕೊಟ್ಟಿದ್ದೇವೆ. ಡಿಸೆಂಬರ್ ಅಂತ್ಯದ ವೇಳೆಗೆ ಶೇ. 90ರಷ್ಟು ಮೊದಲ ಡೋಸ್ ಮತ್ತು ಶೇ. 70ರಷ್ಟು ಎರಡನೇ ಡೋಸ್ ನೀಡುತ್ತೇವೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಆಗಿದೆ. ಮತಾಂತರ ನಿಷೇಧ ಕಾಯ್ದೆ ತರುವ ಬಗ್ಗೆಯೂ ನಾವು ಸಾಕಷ್ಟು ಚಿಂತನೆ ಮಾಡಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿರುವ ಕಾನೂನನ್ನು ಅಭ್ಯಾಸ ಮಾಡುತ್ತೇವೆ. ಶೀಘ್ರವೇ ಮತಾಂತರ ನಿಷೇಧ ಕಾನೂನು ಜಾರಿಗೆ ತರಲು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರೋಟರಿ ಕ್ಲಬ್ ಸೈಬ್ರಕಟ್ಟೆಯಿಂದ ಸ್ಪಂದನ ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ಧನಸಹಾಯ

Posted On: 13-10-2021 06:35PM

ಉಡುಪಿ : ರೋಟರಿ ಕ್ಲಬ್ ಸೈಬ್ರಕಟ್ಟೆಯಿಂದ ಅಣ್ಣಯ್ಯ ದಾಸ್ ಅವರು ಕೊಡುಗೆ ನೀಡಿದ ಸುಮಾರು 5000 ರೂ. ಮೌಲ್ಯದ ಆಹಾರ ಸಾಮಗ್ರಿ ಗಳನ್ನು ಸ್ಪಂದನ ವಿಶೇಷ ಚೇತನ ಅನಾಥ ಮಕ್ಕಳ ಆಶ್ರಮಕ್ಕೆ ನೀಡಲಾಯಿತು.

ಈ ಸಂದರ್ಭ ವಲಯ ಸೇನಾನಿ ವಿಜಯ ಕುಮಾರ್ ಶೆಟ್ಟಿ , ರೋಟರಿ ಅಧ್ಯಕ್ಷ ಉ ಯು ಪ್ರಸಾದ್ ಭಟ್, ನೀಲಕಂಠ ರಾವ್, ಸ್ಪಂದನ ಟ್ರಸ್ಟ್ ಸದಸ್ಯ ವಿವೇಕ್ ಕಾಮತ್, ಎಸ್ ಲೀಲಾವತಿ, ಅಣ್ಣಯ್ಯ ದಾಸ್ ಉಪಸ್ಥಿತರಿದ್ದರು.

ನವ ನವ ದುರ್ಗಾ ಕೃತಿ ಬಿಡುಗಡೆ 

Posted On: 13-10-2021 09:48AM

ಕಟೀಲು : ಜಾನಪದ ವಿದ್ವಾಂಸ, ಸಂಶೋಧಕ ಕೆ. ಎಲ್. ಕುಂಡಂತಾಯ ಬರೆದ ಕುಂಜೂರು ಸರಸ್ವತೀ ಪ್ರಕಾಶನದಿಂದ ಪ್ರಕಟಿತ ಶಕ್ತಿ ಉಪಾಸನೆ, ದುರ್ಗೆಯರ ಕುರಿತಾದ ನವ ನವ ದುರ್ಗಾ ಕೃತಿಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. 

ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ ಧಾರ್ಮಿಕ ಸಾಂಸ್ಕೃತಿಕ ಜಾನಪದ ವಿಚಾರಗಳಲ್ಲಿ ಸಂಶೋಧನಾತ್ಮಕ ಬರಹಗಳನ್ನು ಬರೆಯುತ್ತಿರುವ ಸಾಹಿತಿ ಕುಂಡಂತಾಯರ ಹೊಸ ಕೃತಿ ಶಕ್ತಿ ಆರಾಧನೆಯ ಕುರಿತಾದುದು. ಆಧ್ಯಾತ್ಮ ಆಸಕ್ತರಿಗೆ ಅನುಕೂಲವಾಗಲಿ ಎಂದರು. 

ಕಟೀಲು ದೇಗುಲದ ಆಡಳಿತ ಸಮಿತಿಯ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸದಾನಂದ ಆಸ್ರಣ್ಣ, ನಿವೃತ್ತ ಪ್ರಾಚಾರ್ಯ ಸುದರ್ಶನ್ ಉಪಸ್ಥಿತರಿದ್ದರು. 

ನಾಳೆ : ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

Posted On: 12-10-2021 09:09PM

ಉಡುಪಿ, ಅ.12 : ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಬೆಳಗ್ಗೆ 11 ಗಂಟೆಗೆ ಅದಮಾರು ನಲ್ಲಿ ಪೂರ್ಣಪ್ರಜ್ಞ ಪದವಿ ಕಾಲೇಜು ಕಟ್ಟಡದ ಶಂಕುಸ್ಥಾಪನೆ, ಮಧ್ಯಾಹ್ನ 12.30 ಕ್ಕೆ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ, 1 ಗಂಟೆಗೆ ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ನ್ಯೂ ಸೈನ್ಸ್ ಬ್ಲಾಕ್ ಕಟ್ಟಡದ ಶಂಕುಸ್ಥಾಪನೆ ಮತ್ತ ಕಂಪ್ಯೂಟರ್ ಸೈನ್ಸ್ ಲ್ಯಾಬೋರೇಟರಿ ಉದ್ಘಾಟನೆ. 2.30 ಕ್ಕೆ ಕುಂತಲ ನಗರದಲ್ಲಿ ಸಮುದಾಯ ಭವನ ಮತ್ತು ಕೌಶಲ್ಯಾಭಿವೃದ್ದಿ ಕೇಂದ್ರ ಉದ್ಘಾಟನೆ ಹಾಗೂ ಲೋಕೋಪಯೋಗಿ ಇಲಾಖೆವತಿಯಿಂದ ನಡೆಯುವ ರಸ್ತೆ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಂಗಳೂರು ಮೂಲಕ ಬೆಂಗಳೂರಿಗೆ ತೆರಳುವರು.

ಅಕ್ಟೋಬರ್13 : ಮುಖ್ಯಮಂತ್ರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಭೇಟಿ ;ಸಂಜೆ 3ರಿಂದ 7ಗಂಟೆಯವರೆಗೆ ಕ್ಷೇತ್ರಕ್ಕೆ ಭಕ್ತಾದಿಗಳ ಪ್ರವೇಶ ನಿರ್ಬಂಧ

Posted On: 12-10-2021 08:35PM

ಮಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ನಾಳೆ (ಅಕ್ಟೋಬರ್13) ಸಂಜೆ 5ಗಂಟೆಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಸಂಜೆ 3ರಿಂದ 7ಗಂಟೆಯವರೆಗೆ ಕ್ಷೇತ್ರಕ್ಕೆ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

7 ಗಂಟೆಯ ನಂತರ ಎಂದಿನಂತೆ ಭಕ್ತಾದಿಗಳಿಗೆ ದರುಶನಕ್ಕೆ ಅವಕಾಶ ನೀಡಲಾಗುವುದು.

ಮುಖ್ಯಮಂತ್ರಿ ಆಗಮಿಸುವ ಹಿನ್ನಲೆಯಲ್ಲಿ ಭದ್ರತಾ ದೃಷ್ಟಿಯಿಂದ ಹಾಗೂ ಹಿರಿಯ ಅಧಿಕಾರಿಗಳ ಸೂಚನೆ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಕ್ತಾದಿಗಳು ಸಹಕರಿಸಬೇಕೆಂದು ದೇವಳದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.13 : ಕಾಪು ಮಾರಿಗುಡಿಗೆ ಸಿಎಂ ಭೇಟಿ ಹಿನ್ನಲೆಯಲ್ಲಿ ಭಕ್ತರ ಭೇಟಿಯ ಸಮಯ ಮಾರ್ಪಾಡು

Posted On: 11-10-2021 09:28PM

ಕಾಪು : ಸಮಗ್ರ ಜೀರ್ಣೋದ್ಧಾರದ ಸಡಗರದಲ್ಲಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಅ.13ರಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಲಿದ್ದು, ಆ ಹಿನ್ನೆಲೆಯಲ್ಲಿ‌ ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ1 ಗಂಟೆಯವರೆಗೆ ಭಕ್ತಾಧಿಗಳ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ. ಭಕ್ತಾಧಿಗಳು ಸಹಕರಿಸುವಂತೆ ದೇಗುಲದ ಆಡಳಿತ ಮಂಡಳಿ ಮತ್ತು ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.