Updated News From Kaup

ಸೀತಾರಾಮ ಶೆಟ್ಟಿಗಾರರ ಕೈ ಮಗ್ಗ ಕೇಂದ್ರಕ್ಕೆ ರಾಜ್ಯದ ಕೈಮಗ್ಗ ಮತ್ತು ಜವಳಿ ಖಾತೆ ಸಚಿವರ ಭೇಟಿ

Thumbnail
Posted On: 31 Dec 2021, 06:45 PM

ಉಡುಪಿ‌: ರಾಜ್ಯದ ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬ ಪಾಟೀಲ ಮುನೇನಕೊಪ್ಪ ಅವರು ಇಂದು ದೊಡ್ಡಣಗುಡ್ಡೆಯ ನೇಕಾರರ ಕಾಲೋನಿಯ, ಸೀತಾರಾಮ ಶೆಟ್ಟಿಗಾರ ಅವರ ಕೈ ಮಗ್ಗಕ್ಕೆ ಭೇಟಿ ನೀಡಿ, ಕೈ ಮಗ್ಗದ ಕಾರ್ಯ ವಿಧಾನವನ್ನು ವೀಕ್ಷಿಸಿದರು.

ಜಿಲ್ಲೆಯಲ್ಲಿ ಕೈಮಗ್ಗಗಳ ಆಧುನೀಕರಣ ಕುರಿತು ಪರಿಶೀಲನೆಗೆ ತಜ್ಞರ ತಂಡ : ಸಚಿವ ಶಂಕರ ಬ ಪಾಟೀಲ

Thumbnail
Posted On: 31 Dec 2021, 06:31 PM

ಉಡುಪಿ : ಜಿಲ್ಲೆಯ ಕೈಮಗ್ಗಗಳನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಜವಳಿ ಇಂಜಿನಿಯರ್ಗಳು ಮತ್ತು ಜವಳಿ ಪರಿಣಿತರ ತಂಡವನ್ನು ಜಿಲ್ಲೆಗೆ ಕಳುಹಿಸಿ, ಅವರಿಂದ ಪರಿಶೀಲನಾ ವರದಿ ಪಡೆದು, ಕೈಮಗ್ಗಗಳನ್ನು ತಾಂತ್ರಿಕವಾಗಿ ಸುಧಾರಿಸಿ, ನೇಕಾರರಿಗೆ ಆರ್ಥಿಕ ಅನುಕೂಲವಾಗುವಂತೆ ಮಾಡಲಾಗುವುದು ಎಂದು ರಾಜ್ಯದ ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. ಅವರು ಇಂದು ಉಡುಪಿ ನೇಕಾರರ ಪ್ರಾಥಮಿಕ ಸಹಕಾರ ಸಂಘದಲ್ಲಿ ನಡೆದ ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳ ಸಭೆ ಹಾಗೂ ಉಡುಪಿ ಜಿಲ್ಲಾ ನೇಕಾರರ ಕುಂದು ಕೊರತೆ ಆಲಿಸಿ ಮಾತನಾಡಿದರು. ನೇಕಾರಿಕೆಯಲ್ಲಿ ನಷ್ಟ ಎಂಬ ಕಾರಣದಿಂದ ಯುವಜನತೆ ಈ ಉದ್ಯೋಗದಿಂದ ದೂರ ಉಳಿದಿದ್ದಾರೆ. ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಅದನ್ನು ಲಾಭದಾಯಕವನ್ನಾಗಿ ಮಾಡಲು ಜವಳಿ ಇಂಜಿನಿಯರ್ಗಳು ಮತ್ತು ಜವಳಿ ಪರಿಣಿತರ ತಂಡವನ್ನು ಜಿಲ್ಲೆಗೆ ಕಳುಹಿಸಿ, ಅವರ ಮೂಲಕ ವರದಿ ಪಡೆದು ಅದನ್ನು ಆಭಿವೃದ್ಧಿಪಡಿಸಲಾಗುವುದು. ಜಿಲ್ಲೆಯ ಕಾರ್ಕಳದಲ್ಲಿ ಆರಂಭವಾಗಲಿರುವ ಜವಳಿ ಪಾರ್ಕ್ನಲ್ಲಿ ವೃತ್ತಿಪರ ನೇಕಾರರಿಗೆ ಕೌಶಲ್ಯ ತರಬೇತಿ ನೀಡಲು, ಕೌಶಲ್ಯ ತರಬೇತಿ ಕೇಂದ್ರವನ್ನು ತೆರೆಯಲಾಗುವುದು ಎಂದ ಸಚಿವರು, ವಿದ್ಯಾರ್ಥಿಗಳಿಗೂ ಸಹ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು. ಉಡುಪಿ ಕೈಮಗ್ಗದ ಸೀರೆಗಳಿಗೆ ರಾಜ್ಯ ಮತ್ತು ರಾಷ್ಟçದಲ್ಲಿ ಬೇಡಿಕೆ ಇದೆ ಎಂದರು. ರಾಜ್ಯದಲ್ಲಿ ನೇಕಾರರನ್ನು ಕೃಷಿಕರೆಂದು ಪರಿಗಣಿಸಿ ಅವರ ಅಭಿವೃದ್ಧಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಸಚಿವರು, ನೇಕಾರ ಸಮ್ಮಾನ ಯೋಜನೆಯಡಿ ಈಗಾಗಲೇ ಮೊತ್ತವನ್ನು ಪಾವತಿಸಲಾಗಿದ್ದು, 122 ಕೋಟಿ ರೂ. ಗಳ ಸಬ್ಸಿಡಿ ನೀಡಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ನೇಕಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಬಡ್ಡಿ ಸಹಾಯಧನ ಯೋಜನೆಯ ಮೊತ್ತವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ರಘುಪತಿ ಭಟ್ ಮಾತನಾಡಿ, ಕೈಮಗ್ಗಗಳನ್ನು ಪುನಃಶ್ಚೇತನಗೊಳಿಸಬೇಕು. ಆಧುನಿಕ ತಂತ್ರಜ್ಞಾನ ಅಳವಡಿಸುವುದರ ಮೂಲಕ ಯುವಜನತೆ ಇದರೆಡೆಗೆ ಆಕರ್ಷಿತವಾಗುವಂತೆ ಹಾಗೂ ಲಾಭದಾಯಕವಾಗುವಂತೆ ಮಾಡಬೇಕು. ಕೈಮಗ್ಗದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು ಎಂದರು. ಕೈಮಗ್ಗ ಉತ್ಪನ್ನಗಳಿಗೆ ವಿಧಿಸಲಾಗಿರುವ ಜಿ.ಎಸ್.ಟಿ ದರವನ್ನು 12% ರಿಂದ 5% ಗೆ ಇಳಿಕೆ ಮಾಡಬೇಕು. ನೇಕಾರರಿಗೆ ನೀಡುವ ಮಜೂರಿ ಮೇಲೆ 10% ಇನ್ಸೆಂಟಿವ್ ಹಾಗೂ ಪ್ರೋತ್ಸಾಹಧನ ನೀಡಬೇಕು ಎಂದು ನೇಕಾರರು ಸಚಿವರಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕೈಮಗ್ಗ ಮತ್ತು ಜವಳಿ ಇಲಾಖೆ ಅಪರ ನಿರ್ದೇಶಕ ಪ್ರಕಾಶ್, ಜಂಟಿ ನಿರ್ದೇಶಕ ಶ್ರೀಧರ ನಾಯ್ಕ್, ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕ ಅಶೋಕ್, ದ.ಕನ್ನಡ ಜಿಲ್ಲೆಯ ಸಹಾಯಕ ನಿರ್ದೇಶಕ ಶಿವಶಂಕರ್, ನೇಕಾರರ ಸಂಘದ ಅಧ್ಯಕ್ಷ ಅಬ್ನೆಸರ್ ಸತ್ಯಾರ್ಥಿ, ಶಿವಳ್ಳಿ ನೇಕಾರರ ಸಂಘದ ಶಶಿಕಾಂತ್ ಮತ್ತಿತರರು ಉಪಸ್ಥಿತರಿದ್ದರು. ಉಡುಪಿ ನೇಕಾರರ ಸಂಘದ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಕಾಂಚನ್ ಸ್ವಾಗತಿಸಿ, ವಂದಿಸಿದರು.

ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್ ನಲ್ಲಿ ವಿಶೇಷ ಭಜನಾ ಕಾರ್ಯಕ್ರಮ

Thumbnail
Posted On: 31 Dec 2021, 06:25 PM

ಶಿರ್ವ : ಕುತ್ಯಾರು ಸೂರ್ಯಚೈತನ್ಯ ಹೈಸ್ಕೂಲ್ ಆವರಣದಲ್ಲಿರುವ ಭವ್ಯ ಏಕಶಿಲಾ ಪರಶುರಾಮ ವಿಗ್ರಹವನ್ನೊಳಗೊಂಡ ಪರಶುರಾಮೇಶ್ವರ ದೇವಸ್ಥಾನದಲ್ಲಿ ನಾಗೇಶ್ವರ ಭಜನಾ ಮಂಡಳಿ, ಪಡುಬಿದ್ರಿ - ಮೂಲ್ಕಿ ವಲಯ ಇವರಿಂದ ಡಿಸೆಂಬರ್ 31 ರಂದು ವಿಶೇಷ ಭಜನಾ ಕಾರ್ಯಕ್ರಮವು ಜರುಗಿತು. ಭಜನಾ ಮಂಡಳಿಯ ನೇತೃತ್ವವನ್ನು ಶ್ರೀ ಚಂದ್ರಹಾಸ್ ವಹಿಸಿದ್ದರು. ಎಳೆಯ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿ ಸಂಸ್ಕಾರವಂತರನ್ನಾಗಿ ಮಾಡುವ ಕೆಲಸ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ನಡೆಯಬೇಕೆಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ತರುವಾಯ ಮಾತನಾಡಿದ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಅಧ್ಯಕ್ಷ ವಿದ್ವಾನ್ ಶಂಭುದಾಸ ಗುರೂಜಿ ಮಾತನಾಡಿ, ಅಕ್ಷರ ಕಲಿಸುವ ವಿದ್ಯಾಲಯ ಹಾಗೂ ದೇವರ ಸಾನಿಧ್ಯವಿರುವ ದೇವಾಲಯ - ಇವೆರಡೂ ಒಟ್ಟಿಗೆ ಇರುವ ವಿಶೇಷ ಕ್ಷೇತ್ರ ಈ ಪರಶುರಾಮೇಶ್ವರ ಕ್ಷೇತ್ರ ಎಂದು ಬಣ್ಣಿಸಿದರು. ಭಜನೆಗಳು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ಸೌಹಾರ್ದತೆ, ಸಹಬಾಳ್ವೆ ಮತ್ತು ಉದಾರತೆಯ ಸದ್ಗುಣಗಳನ್ನು ಬೆಳೆಸುತ್ತವೆ ಎಂದರು. ಪ್ರಿನ್ಸಿಪಾಲ್ ಗುರುದತ್ತ ಸೋಮಯಾಜಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅಮ್ಚೆ ಸಂಸಾರ್ ಕೊಂಕಣಿ ಸಿನೆಮಾ : ಕೊಲ್ಕತ್ತಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ಗೆ ಆಯ್ಕೆ

Thumbnail
Posted On: 30 Dec 2021, 10:08 PM

ಉಡುಪಿ : ರಾಜಾಪುರ ಸಾರಸ್ವತ ಕೊಂಕಣಿ ಭಾಷೆಯ ಅಮ್ಚೆ ಸಂಸಾರ್ ಕೊಂಕಣಿ ಸಿನೆಮಾ 2021-22 ನೇ ಸಾಲಿನ ಕೊಲ್ಕತ್ತಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಗೆ ಅಧಿಕೃತವಾಗಿ ಆಯ್ಕೆಗೊಂಡಿದೆ. ಈ ಸಿನಿಮಾವನ್ನು ಮಾಡಲು ಕಳೆದ ಎರಡು ವರ್ಷಗಳಿಂದ ನಾವು ಪಟ್ಟ ಪರಿಶ್ರಮಕ್ಕೆ ಇಂದು ಬೆಲೆ ಸಿಕ್ಕಂತಾಗಿದೆ. ಅದೆಷ್ಟೋ ಸಿನೆಮಾ ನಿರ್ದೇಶಕರು, ಸಿನೆಮಾ ತಂಡದವರು ತಾವು ಮಾಡಿದ ಸಿನೆಮಾ ಒಮ್ಮೆಯಾದರೂ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಆಯ್ಕೆ ಆಗಬೇಕು ಎಂಬ ಕನಸನ್ನು ಇಟ್ಟುಕೊಂಡಿರುತ್ತಾರೆ. ನಮ್ಮ ತಂಡದ ಈ ಕನಸು ಇಂದು ನನಸಾಗಿದೆ. ಅಂತರಾಷ್ಟ್ರೀಯ ಸಿನೆಮಾ ಸ್ಪರ್ಧೆಯಲ್ಲಿ ಆಯ್ಕೆಗೊಂಡಿದ್ದು, ಪ್ರಶಸ್ತಿ ಗೆದ್ದಷ್ಟೇ ಖುಷಿ ನಮ್ಮದಾಗಿದೆ ಎಂದು ಅಮ್ಚೆ ಸಂಸಾರ್ ಕೊಂಕಣಿ ಸಿನೆಮಾದ ಛಾಯಾಗ್ರಾಹಕರಾದ ಭುವನೇಶ್ ಪ್ರಭು ಹಿರೇಬೆಟ್ಟು ತಿಳಿಸಿದರು.

ಎರಡು ರಾಷ್ಟ್ರೀಯ ಪಕ್ಷಗಳ ಹಣ ಬಲದಿಂದ ಕೆಲವು ಕ್ಷೇತ್ರಗಳಲ್ಲಿ ಅಲ್ಪ ಮತಗಳಿಂದ ಸೋಲು ; ಮತದಾರ ಬಾಂಧವರಿಗೆ ಧನ್ಯವಾದಗಳು : ಯೋಗೀಶ್ ವಿ. ಶೆಟ್ಟಿ

Thumbnail
Posted On: 30 Dec 2021, 07:14 PM

ಕಾಪು : ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಜನತಾದಳ(ಜಾತ್ಯತೀತ) 7 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು, ನಾಲ್ಕುಕಡೆ ನಾವು ಗೆಲುವಿನ ನಿರೀಕ್ಷೆಯಲ್ಲಿದ್ದೆವು, ಆದರೆ ಎರಡು ರಾಷ್ಟ್ರೀಯ ಪಕ್ಷಗಳ ಹಣ ಬಲದಿಂದ ಕೆಲವು ಕ್ಷೇತ್ರಗಳಲ್ಲಿ ಅಲ್ಪ ಮತಗಳಿಂದ ಸೋತಿದ್ದೇವೆ. ನಮಗೆ ಆರ್ಥಿಕವಾಗಿ ಸ್ವಲ್ಪ ಕಷ್ಟವಾಯಿತು, ಕೊಂಬಗುಡ್ಡೆ ವಾರ್ಡ್ ನಲ್ಲಿ ನಾವು ಗೆಲುವು ಸಾಧಿಸಿದ್ದೇವೆ ಇದು ಪ್ರಾರಂಭ, ಯಾರು ಎಷ್ಟು ಲಘುವಾಗಿ ಮಾತನಾಡಲಿ, ನಾವು ನಮ್ಮದೇ ಆದ ರೀತಿಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸರಿಸಮಾನಾಗಿ ನಿಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ, ಕಾಪು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂಬ ವಿಶ್ವಾಸ ನಮಗೆ ಬಂದಿರುತ್ತದೆ. ಪುರಸಭಾ ಚುನಾವಣೆಯಲ್ಲಿ ಸಹಕರಿಸಿದ ಮತದಾರ ಬಾಂಧವರಿಗೆ ಧನ್ಯವಾದಗಳು ಎಂದು ಜನತಾದಳ(ಜಾತ್ಯತೀತ) ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾಳೆ : Itsoksupport ಫೇಸ್ಬುಕ್ ಪೇಜ್ನಲ್ಲಿಆರ್ ಜೆ ಎರಾಲ್ ರಿಂದ ಸುಮತಾ ನಾಯಕ್ ಅಮ್ಮುಂಜೆ ಸಂದರ್ಶನ

Thumbnail
Posted On: 30 Dec 2021, 06:58 PM

ಉಡುಪಿ : ಮಾನಸಿಕ ಆರೋಗ್ಯ, ಸಂಬಂಧಗಳಲ್ಲಿ ಜೀವಂತಿಕೆ, ಉತ್ತಮ ಆರೋಗ್ಯ ಹಾಗೂ ಮಕ್ಕಳ ಆರೋಗ್ಯಕರ ಬೆಳವಣಿಗೆ ಈ ವಿಚಾರದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡುತ್ತಿದ್ದಾರೆ ಸುಮತಾ ನಾಯಕ್ ಅಮ್ಮುಂಜೆ. ಇವರ ವಿಶೇಷ ಸಂದರ್ಶನವು Itsoksupport ಹೆಸರಿನ ಫೇಸ್ಬುಕ್ ಪೇಜ್ ನಲ್ಲಿ ಆರ್ ಜೆ ಎರಾಲ್ ಅವರೊಂದಿಗೆ ಡಿಸೆಂಬರ್ 31, ಸಂಜೆ 4 ಗಂಟೆಗೆ ಜರಗಲಿದೆ. ಈ ಸಂದರ್ಭ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು‌ ಪ್ರಕಟನೆಯಲ್ಲಿ‌ ತಿಳಿಸಿದ್ದಾರೆ.

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿಉಡುಪಿ : ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ, 'ದೇಯಿ ಬೈದೆದಿ' ಪುಸ್ತಕ, ಭಾವಚಿತ್ರ ಬಿಡುಗಡೆ, ಗರೋಡಿ ಪೂ ಪೂಜಾನೆಕಾರರ ಸಮ್ಮೇಳನ, ಸಮ್ಮಾನ‌

Thumbnail
Posted On: 30 Dec 2021, 06:46 PM

ಉಡುಪಿ : ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) ಆದಿಉಡುಪಿ ಇವರು ಕೊಡಮಾಡುವ ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭವು ಬೈದಶ್ರೀಯಲ್ಲಿ ಜರಗಿತು. ಹಿರಿಯ ಬೈದರ ದರುಶನ ಪಾತ್ರಿ ಕಲ್ಮoಜೆ ರಾಘು ಪೂಜಾರಿ ಹಾಗೂ ಹಿರಿಯ ಗರೋಡಿ ಸೇವಕರಾದ ಅಪ್ಪು ಮಡಿವಾಳ ಇವರಿಗೆ ನಗದು ಸಹಿತ ಪ್ರಶಸ್ತಿ ನೀಡಲಾಯಿತು. ದಾಮೋದರ ಕಲ್ಮಾಡಿ ಹಾಗೂ ಚೆಲುವ ರಾಜ್ ಪೆರಂಪಳ್ಳಿ ಇವರು ಬರೆದ 'ದೇಯಿ ಬೈದೆದಿ' ಕನ್ನಡ ಆವೃತ್ತಿ ಪುಸ್ತಕ ಬಿಡುಗಡೆ ಹಾಗೆಯೇ ವೀನಸ್ ಇಂಟರ್ನ್ಯಾಷನಲ್ ಸಂಸ್ಥೆ ವತಿಯಿಂದ ಹರೀಶ್ ಎಮ್ ಕಲ್ಮಾಡಿ ಯವರು ಕೊಡ ಮಾಡಿದ ' ದೇಯಿ ಬೈದೆದಿ ಭಾವಚಿತ್ರವನ್ನು ಮುಖ್ಯ ಅತಿಥಿ ಅಚ್ಚುತ ಕಲ್ಮಾಡಿಯವರು ಅನಾವರಣಗೊಳಿಸಿದರು. ಸಭೆಯ ಅಧ್ಯಕ್ಷತೆಯನ್ನು ದಾಮೋದರ ಕಲ್ಮಾಡಿ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಲ್ಮಾಡಿ ಗರೋಡಿ ಗೌರವ ಅಧ್ಯಕ್ಷರಾದ ಅಚ್ಚುತ ಕಲ್ಮಾಡಿಯವರು ಮಾತನಾಡುತ್ತ ಇದೊಂದು ಬೈದರ ಸಂಶೋಧನ ಕೇಂದ್ರ ಅಪರೂಪವಾಗಿದ್ದು ಇದನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದರು. ಗರೋಡಿ ಪೂ ಪೂಜಾನೆಕಾರರ ಸಮ್ಮೇಳನ : ಸಂಪನ್ಮೂಲ ವ್ಯಕ್ತಿಗಳಾಗಿ ಕಲ್ಮoಜೆ ರಾಘು ಪೂಜಾರಿ, ಪಾಂಗಳ ಗುಡ್ಡೆ ಗರೋಡಿ ಮನೆ ಸುಧಾಕರ್ ಡಿ ಅಮೀನ್, ಕಿನ್ನಿಮುಲ್ಕಿ ಗರೋಡಿಯ ಭಾಸ್ಕರ್ ಸುವರ್ಣ ಕನ್ನರ್ಪಡಿ ಭಾಗವಹಿಸಿದ್ದರು. ಸಮ್ಮಾನ : ಕರ್ನಾಟಕ ತುಳು ರತ್ನ ಪ್ರಶಸ್ತಿ ಪಡೆದ ಗಂಗಾಧರ್ ಕಿದಿಯೂರ್, ಕರ್ನಾಟಕ ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿ ರಾಜ್ಯ ಸಂಚಾಲಕರಾಗಿ ಆಯ್ಕೆಯಾದ ಎಮ್ ಮಹೇಶ್ ಕುಮಾರ್ ಮಲ್ಪೆ ಹಾಗೂ ಕರ್ನಾಟಕ ಸರಕಾರದಿಂದ ಸ್ಕೌಟ್ ಸೇವೆಗಾಗಿ ವಿಶೇಷ ಪ್ರಶಸ್ತಿಯನ್ನು ರಾಜ್ಯಪಾಲ ರಿಂದ ಪಡೆದ ಶೇಖರ್ ಮಾಸ್ಟರ್ ಕಲ್ಮಾಡಿ ಇವರುಗಳನ್ನು ಸಮ್ಮಾನಿಸಲಾಯಿತು. ಬೈದಶ್ರೀಯ ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್ ಸ್ವಾಗತಿಸಿದರು. ಕೋಶಾಧಿಕಾರಿ ಮಹೇಶ್ ನಯಂಪಲ್ಲಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿಶ್ವಸ್ತರಾದ ಗಂಗಾಧರ್ ಕಿದಿಯೂರು ವಂದನಾರ್ಪಣೆ ಸಲ್ಲಿಸಿದರು.

ಶಂಕರಪುರ : ಸೌಹಾರ್ದತೆ ಮೆರೆದ ಅಯ್ಯಪ್ಪ ಭಕ್ತರು

Thumbnail
Posted On: 30 Dec 2021, 06:20 PM

ಶಿರ್ವ : ಶಂಕರಪುರ ಸೈಂಟ್ ಜಾನ್ಸ್ ಚರ್ಚಿನ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಮುಂಬೈನ ಚಂದ್ರಹಾಸ ಗುರುಸ್ವಾಮಿ ಶಿಷ್ಯರು ಚರ್ಚಿಗೆ ಹೋಗಿ ಕ್ಯಾಂಡಲ್ ಹೊತ್ತಿಸಿ ಪ್ರಾರ್ಥಿಸಿದರು. ಮತಾಂಧರ ಕಿಚ್ಚಿನ ನಡುವೆ ಅಯ್ಯಪ್ಪ ಭಕ್ತರು ಸೌಹಾರ್ದತೆ ಮೆರೆದಿದ್ದಾರೆ. ಶಂಕರಪುರ ಸಾರ್ವಜನಿಕ ಅಯ್ಯಪ್ಪ ಭಕ್ತವೃಂದದ ಅಯ್ಯಪ್ಪ ಭಕ್ತರ ಮತ್ತು ಮುಂಬೈ ಚಂದ್ರಹಾಸ ಗುರುಸ್ವಾಮಿ ಶಿಷ್ಯರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕಾಪು ಪುರಸಭಾ ಚುನಾವಣಾ ಫಲಿತಾಂಶ : ಬಿಜೆಪಿಗೆ ಒಲಿದ ಗದ್ದುಗೆ

Thumbnail
Posted On: 30 Dec 2021, 10:52 AM

ಕಾಪು : ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಜಿದ್ದಾಜಿದ್ದಿನ ಕಣವಾಗಿದ್ದ ಕಾಪು ಪುರಸಭೆಯ ಫಲಿತಾಂಶ ಪ್ರಕಟವಾಗಿದೆ. ಪುರಸಭೆಯ 23 ವಾರ್ಡ್ ಗಳ ಪೈಕಿ ಬಿಜೆಪಿಯು 12 ವಾರ್ಡು, ಕಾಂಗ್ರೆಸ್ 7 ವಾರ್ಡು, ಎಸ್ ಡಿಪಿಐ 3 ಮತ್ತು ಜೆಡಿಎಸ್ ಒಂದು ವಾರ್ಡ್ ನಲ್ಲಿ ಜಯ ಸಾಧಿಸಿದೆ. ಫಲಿತಾಂಶದ ವಿವರ : ಕೋತಲಕಟ್ಟೆ: ಫರ್ಜಾನ (ಕಾಂಗ್ರೆಸ್) ಕೈಪುಂಜಾಲು: ಶೋಭಾ ಎಸ್. ಬಂಗೇರ (ಕಾಂಗ್ರೆಸ್) ಕೊಪ್ಪಲಂಗಡಿ: ನಾಗೇಶ್ (ಬಿಜೆಪಿ) ತೊಟ್ಟಂ: ಸತೀಶ್ಚಂದ್ರ (ಕಾಂಗ್ರೆಸ್) ಕರಾವಳಿ: ಕಿರಣ್ ಆಳ್ವ (ಬಿಜೆಪಿ) ಪೊಲಿಪು ಗುಡ್ಡೆ: ರತ್ನಾಕರ ಶೆಟ್ಟಿ (ಬಿಜೆಪಿ) ದುಗ್ಗನ್ ತೋಟ: ಮಹಮ್ಮದ್ ಆಸಿಫ್ (ಕಾಂಗ್ರೆಸ್) ಮಂಗಳ ಪೇಟೆ: ವಹಿದಾ ಬಾನು (ಎಸ್ ಡಿಪಿಐ) ದಂಡತೀರ್ಥ: ಸುರೇಶ್ ದೇವಾಡಿಗ (ಬಿಜೆಪಿ) ಕಲ್ಯಾ: ಲತಾ ವಿ. ದೇವಾಡಿಗ (ಬಿಜೆಪಿ) ಜನಾರ್ದನ ದೇವಸ್ಥಾನ: ಹರಿಣಿ ದೇವಾಡಿಗ (ಬಿಜೆಪಿ) ಬಡಗರಗುತ್ತು: ವಿದ್ಯಾಲತಾ (ಕಾಂಗ್ರೆಸ್) ಭಾರತ್ ನಗರ: ಅರುಣ್ ಶೆಟ್ಟಿ (ಬಿಜೆಪಿ) ಬೀಡು ಬದಿ: ಅನಿಲ್ ಕುಮಾರ್ (ಬಿಜೆಪಿ) ಕೊಂಬಗುಡ್ಡೆ: ಉಮೇಶ್ ಕರ್ಕೇರ (ಜೆಡಿಎಸ್) ಜನರಲ್ ಶಾಲೆ: ಮೋಹಿನಿ ಶೆಟ್ಟಿ (ಬಿಜೆಪಿ) ಪೊಲಿಪು: ರಾಧಿಕಾ ಸುವರ್ಣ (ಕಾಂಗ್ರೆಸ್) ಗುಜ್ಜಿ: ಸರಿತಾ ಶಂಕರ್ (ಎಸ್ ಡಿಪಿಐ) ಗರಡಿ: ಶೈಲೇಶ್ ಅಮೀನ್ (ಬಿಜೆಪಿ) ಕಾಪು ಪೇಟೆ: ಸರಿತಾ (ಬಿಜೆಪಿ) ಲೈಟ್ ಹೌಸ್: ನಿತಿನ್ (ಬಿಜೆಪಿ) ಕುಡ್ತಿಮಾರ್: ರಫೂಸ್ ಶಾಬು ಸಾಹೇಬ್ (ಕಾಂಗ್ರೆಸ್) ಅಹಮದಿ ಮೊಹಲ್ಲಾ: ನೂರುದ್ದೀನ್ (ಎಸ್ ಡಿಪಿಐ)

ಕರ್ನಾಟಕ ಬಂದ್ ಗೆ ಸಹಕರಿಸಲು ರಿಕ್ಷಾ ಚಾಲಕರ ಸಂಘ, ರಿಕ್ಷಾ ಚಾಲಕರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಮನವಿ

Thumbnail
Posted On: 29 Dec 2021, 08:42 PM

ಉಡುಪಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಹಾಗೂ ಬೆಳಗಾವಿಯಲ್ಲಿ ಎಮ್ ಇಎಸ್ ಸಂಘಟನೆ ಕನ್ನಡ ಬಾವುಟವನ್ನು ಸುಟ್ಟು ಮತ್ತು ಬೆಂಗಳೂರಿನ ಶಿವಾಜಿನಗರದಲ್ಲಿ ಶಿವಾಜಿ ಪ್ರತಿಮೆಯನ್ನು ಭಗ್ನಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಡಿಸೆಂಬರ್ 31ರಂದು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕವು ಕರ್ನಾಟಕ ಬಂದ್ ಗೆ ಕರೆನೀಡಿದ್ದು ಈ ಪ್ರತಿಭಟನೆಗೆ ಸಂಪೂರ್ಣ ಸಹಕಾರ ನೀಡಬೇಕೆಂದು ರಿಕ್ಷಾ ಚಾಲಕರ ಸಂಘಕ್ಕೆ ಮನವಿ ಮಾಡಿದ್ದಾರೆ. ನಮ್ಮ ನೆಲ, ಜಲ ಸಂಸ್ಕೃತಿಯನ್ನು ವಿರೋಧಿಸುವವರ ವಿರುದ್ಧವಾಗಿ ಪ್ರತಿಭಟನೆಯನ್ನು ನಡೆಸುವ ನಿಟ್ಟಿನಲ್ಲಿ ರಿಕ್ಷಾ ಚಾಲಕರ ಸಂಘದಿಂದ ಪ್ರತಿ ಒಬ್ಬರು ಚಾಲಕರು ನಮ್ಮ ಜೊತೆ ಕರ್ನಾಟಕ ಬಂದ್ ಗೆ ಸಂಪೂರ್ಣ ಕೈ ಜೋಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸಂತೋಷ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.