Updated News From Kaup

ಇನ್ನಂಜೆ : ಮೂರು ದಿನಗಳಿಂದ ಬಾವಿಯಲ್ಲಿದ್ದ ನಾಯಿಯನ್ನು ರಕ್ಷಿಸಿದ ಯುವಕರು

Posted On: 17-10-2021 06:56PM

ಕಾಪು : ಸುಮಾರು ಮೂರು ದಿನಗಳಿಂದ ಶಾಂತ ಆಚಾರ್ಯರವರ ಬಾವಿಯಲ್ಲಿ ಬೀದಿನಾಯಿಯೊಂದು ಆಕಸ್ಮಿಕವಾಗಿ ಬಿದ್ದಿತ್ತು. ಶಾಂತ ಆಚಾರ್ಯರವರು ಗಮನಿಸಿ ಇನ್ನಂಜೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಸುನೀತಾ ಸಂಜೀವ ಮೂಲ್ಯ ಇವರನ್ನು ಸಂಪರ್ಕಿಸಿ ನಾಯಿಯನ್ನು ರಕ್ಷಿಸುವಂತೆ ಕೇಳಿಕೊಂಡರು.

ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಸುನೀತಾ ರವರು ಪ್ರಾಣಿಯ ಕಾಳಜಿ ಹೊಂದಿರುವ ಅಕ್ಷತಾ ಕುಲಾಲ್ ಮತ್ತು ಅಕ್ಷಯ್ ಕುಲಾಲ್ ಮತ್ತು ಅಕ್ಷಿತ್ ಇವರನ್ನು ಸಂಪರ್ಕಿಸಿ ಸ್ಥಳದಲ್ಲಿ ನಿಂತು ಕಾರ್ಯಾಚರಣೆಗೆ ಮುಂದಾದರು. ಅಲ್ಲಿಗೆ ಆಗಮಿಸಿದ ಅಕ್ಷಯ್ ಹಗ್ಗದ ಮುಖಾಂತರ ನಾಯಿಯನ್ನು ಬಾವಿಯಿಂದ ರಕ್ಷಿಸಿದರು. ಈ ಸಂದರ್ಭದಲ್ಲಿ ಸಂಜೀವ ಮೂಲ್ಯ, ಸ್ವಾತಿ ಸ್ಥಳದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

ಪ್ರಾಣಿಗಳ ಮೇಲೆ ಕಾಳಜಿ ವಹಿಸಿರುವುದು ಶ್ಲಾಘನೀಯ ಎಂದು ಸ್ಥಳೀಯರು ಅಭಿನಂದಿಸಿದರು.

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ : ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Posted On: 17-10-2021 02:45PM

ಉಡುಪಿ : ಪ್ರತೀ ತಿಂಗಳ 3 ನೇ ಶನಿವಾರ ನಡೆಯುತ್ತಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ, ಕೋವಿಡ್19 ನಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಸರ್ಕಾರದ ಸೂಚನೆಯಂತೆ ಅಕ್ಟೋಬರ್ 16 ರಿಂದ ಪ್ರಾರಂಭಗೊಂಡಿದ್ದು, ಬೈಂದೂರು ತಾಲೂಕಿನ ಜಡ್ಕಲ್ ನಲ್ಲಿ , ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂದಿಸಿದ 57 ಕ್ಕೂ ಅರ್ಜಿಗಳಿಗೆ ಸಂಬಂದಿಸಿದಂತೆ ಸೂಕ್ತ ಪರಿಹಾರ ಕೈಗೊಳ್ಳಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಜಡ್ಕಲ್ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು,ಅಲ್ಲಿನ ಗ್ರಂಥಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಿದರು,ನಂತರ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಳದ ಪ್ರೌಢಶಾಲೆಗೆ ಬೇಟಿ ನೀಡಿ,ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಕೇಂದ್ರದಿಂದ ಬಹಳಷ್ಟು ದೂರದಲ್ಲಿರುವ ಈ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿವರೆಗೆ ಸಾರ್ವಜನಿಕರು ಆಗಮಿಸಲು ಕಷ್ಟವಾಗಲಿದ್ದು, ಇಲ್ಲಿನ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ರಾಜು ಪೂಜಾರಿ ಮಾತನಾಡಿ, ದೃಷ್ಠಿದೋಷ ಕುರಿತಂತೆ ಪ್ರಮಾಣಪತ್ರ ಪಡೆಯಲು ಸಮಸ್ಯೆಯಿದೆ, ವಿಕಲಚೇತನರಿಗೆ ಖಾಸಗಿ ಬಸ್ ನಲ್ಲೂ ಉಚಿತ ಪಾಸ್ ವ್ಯವಸ್ಥೆ, ಈಗಾಗಲೇ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿರುವ ಉಚಿತ ಪ್ರಯಾಣದ 100 ಕಿಮೀ ಮಿತಿಯನ್ನು ರಾಜ್ಯಾದ್ಯಂತ ಸಂಚರಿಸಲು ವಿಸ್ತರಿಸಬೇಕು, ಎಲ್ಲಾ ಇಲಾಖೆಗಳಲ್ಲಿನ 5% ಅನುದಾನದ ಸಮರ್ಪಕ ಬಳಕೆಯಾಗಬೇಕು, ಎಲ್ಲಾ ಕಾರ್ಯಾಲಯಗಳನ್ನು ವಿಶೇಷ ಸ್ನೇಹಿ ಕಾರ್ಯಾಲಯಗಳನ್ನಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿದರು. ವಿಕಲಚೇತನರಿಗೆ ಖಾಸಗಿ ಬಸ್ ನಲ್ಲಿ ಉಚಿತ ಪಾಸ್ ನೀಡುವ ಕುರಿತಂತೆ ಆರ್.ಟಿ.ಎ. ಸಭೆಯಲ್ಲಿ ಚರ್ಚಿಸಿ ಪ್ರಯತ್ನಿಸಲಾಗುವುದು, ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ವಿಶೇಷ ಚೇತನ ಸ್ನೇಹಿಯಾಗುವಂತೆ ನಿರ್ಮಿಸಬೇಕು ಈ ಬಗ್ಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗುವುದು , ವಿಕಲಚೇತನರಿಗೆ ಮೀಸಲಿರುವ 5% ಅನುದಾನವನ್ನು ಸದ್ಬಳಕೆ ಮಾಡುವ ಕುರಿತಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗುವುದು ಎಂದ ಜಿಲ್ಲಾಧಿಕಾರಿಗಳು,ಇತರೇ ಸಮಸ್ಯೆಗಳ ಕುರಿತಂತೆ ರಾಜ್ಯಮಟ್ಟದಲ್ಲಿ ನಿರ್ಧಾರವಾಗಬೇಕಿದ್ದು, ಈ ಮನವಿಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ಜಡ್ಕಲ್ ಮತ್ತು ಮುದೂರುನಲ್ಲಿ ಸಾರ್ವಜನಿಕ ಹಿಂದೂ ರುದ್ರ ಭೂಮಿ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಸಲ್ಲಿಸಿದ ಮನವಿ ಕುರಿತು ಪರಿಶೀಲಿಸಿದ ಜಿಲ್ಲಾಧಿಕಾರಿಗಳು,ಸ್ಥಳೀಯ ಕಂದಾಯ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದು, ಈಗಾಗಲೇ ಈ ಎರಡೂ ಗ್ರಾಮದಲ್ಲಿ ತಲಾ ಒಂದು ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದ್ದು, ಗಡಿ ಗುರುತು ಮಾಡುವುದು ಬಾಕಿ ಇದೆ, 2 ವಾರಗಳಲ್ಲಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬೈಂದೂರು ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದರು. ಮುದೂರು ನಲ್ಲಿ ಆರೋಗ್ಯ ಕೇಂದ್ರಕ್ಕೆ ಸ್ಟಾಫ್ ನರ್ಸ್ ಕೊರತೆಯಿರುವ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ನೇಮಕಕ್ಕೆ ಅನುಮೋದನೆ ದೊರೆತಿದ್ದು ಸ್ಥಳೀಯ ಅಥವಾ ಯಾವುದೇ ಅಭ್ಯರ್ಥಿಗಳು ಕರ್ತವ್ಯ ನಿರ್ವಹಿಸಲು ಇಚ್ಚಿಸಿದಲ್ಲಿ ಕೂಡಲೇ ಆದೇಶ ಪತ್ರ ನೀಡಲಾಗುವುದು ಎಂದರು. ಈ ಭಾಗದಲ್ಲಿ ಲೋ ವೋಲ್ಟೇಜ್ ಸಮಸ್ಯೆ ಕುರಿತಂತೆ ಗ್ರಾಮಸ್ಥರ ದೂರು ಕುರಿತಂತೆ ಮೆಸ್ಕಾಂ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದರು, ಮುದೂರು ನಲ್ಲಿ ಸಬ್ ಸ್ಟೇಶನ್ ನಿರ್ಮಾಣ ಕಾಮಗಾರಿ ಮುಕ್ತಾಯಗೊಳಿಸಲು ಅರಣ್ಯ ಇಲಾಖೆಯ ಎಕೋ ಸೆನ್ಸಿಟಿವ್ ಝೋನ್ ಸಮಸ್ಯೆಯಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಡ್ಕಲ್ ಗ್ರಾಮ ವ್ಯಾಪ್ತಿಯ ಸಳಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ , ಪ್ರಸ್ತುತ ಖಾಸಗಿ ಶಾಲೆಯನ್ನು ತೊರೆದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಿದ್ದು, ಶಾಲಾ ಕಟ್ಟಡವು ಸುಮಾರು 60 ವರ್ಷಗಳಷ್ಟು ಹಳೆಯದಾಗಿದ್ದು, ಕಟ್ಟಡ ಮತ್ತು ಶೌಚಾಲಯವನ್ನು ಆಧುನಿಕ ರೀತಿಯಲ್ಲಿ ಮೇಲ್ದರ್ಜೆಗೇರಿಸುವಂತೆ ಪೋಷಕರು ಕೋರುತ್ತಿದ್ದಾರೆ ಅಲ್ಲದೇ ಶಾಲೆಯಲ್ಲಿ 3 ಜನ ಖಾಯಂ ಶಿಕ್ಷಕರು ಮಾತ್ರವಿದ್ದು, ಒಂದನೇ ತರಗತಿಯಿಂದ ಶಾಲೆಗಳು ಆರಂಭವಾಗುವ ನಿರೀಕ್ಷೆಯಿರುವುದರಿಂದ ಅತಿಥಿ ಶಿಕ್ಷಕರನ್ನು ನೇಮಿಸುವಂತೆ ಶಾಲೆಯ ಶಿಕ್ಷಕರು ಕೋರಿದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಡ್ಕಲ್ ವ್ಯಾಪ್ತಿಯ ಮೆಕ್ಕೆ ಯಲ್ಲಿ ನೂತನ ಅಂಗನವಾಡಿ ಆರಂಭಿಸುವ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ,ಸಾಧ್ಯವಿದ್ದಲ್ಲಿ ಮಿನಿ ಅಂಗನವಾಡಿಯನ್ನು ಶೀಘ್ರದಲ್ಲಿ ಆರಂಭಿಸುವAತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ 95% ಜನ ಪ್ರಥಮ ಡೋಸ್ ಕೋವಿಡ್ ಲಸಿಕೆ ಪಡೆದಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಗ್ರಾಮದಲ್ಲಿ 100% ಪ್ರಥಮ ಡೋಸ್ ಲಸಿಕೆ ಗುರಿ ಸಾಧಿಸುವಂತೆ ಹಾಗೂ ಎರಡನೇ ಡೋಸ್ ಗೆ ಅವಧಿ ಬಂದಿರುವ ಎಲ್ಲಾ ಸಾರ್ವಜನಿಕರು ತಪ್ಪದೇ ಲಸಿಕೆ ಪಡೆಯುವಂತೆ ಹಾಗೂ ಪಡಿತರ ಚೀಟಿಗಳಿಗೆ ಇ ಕೆವೈಸಿ ಮಾಡಿಸುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಡ್ಕಲ್ ಗ್ರಾ.ಪಂ.ಅಧ್ಯಕ್ಷೆ ವನಜಾಕ್ಷಿ, ಉಪಾಧ್ಯಕ್ಷ ಲಕ್ಷö್ಮಣ ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭಾರತಿ ಮತ್ತಿತರರು ಉಪಸ್ಥಿತರಿದ್ದರು. ಬೈಂದೂರು ತಹಸೀಲ್ದಾರ್ ಶೋಭಾ ಲಕ್ಷ್ಮೀ ಸ್ವಾಗತಿಸಿದರು.

DUBAI EXPO 2020 - ಜನ ಮೆಚ್ಚುಗೆ ಪಡೆದ ಪಿಲಿ ನಲಿಕೆ

Posted On: 17-10-2021 12:51PM

ಮಂಗಳೂರು : ದುಬಾಯಿಯಲ್ಲಿ‌ ನಡೆಯುತ್ತಿರುವ "DUBAI EXPO 2020", ಇದರಲ್ಲಿ ಭಾರತದ ಪೆವಿಲಿಯನ್ ನ ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ತುಳುನಾಡಿನ ಪ್ರಸಿದ್ಧ ಕಲೆ "ಪಿಲಿ ನಲಿಕೆ" ಜನ ಮೆಚ್ಚುಗೆ ಪಡೆಯಿತು.

ಗಿರೀಶ್ ನಾರಾಯಣ್ ಹಾಗೂ ಗೌತಮ್ ಬಂಗೇರಾ ಸಾರಥ್ಯದಲ್ಲಿ ಪಿಲಿನಲಿಕೆ ತಂಡ ಪ್ರದರ್ಶನ ನೀಡಿತು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’

Posted On: 17-10-2021 11:53AM

ಬೆಂಗಳೂರು : ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿರುವುದರಿಂದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅ.17ರಂದು ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಆರೆಂಜ್ ಅಲರ್ಟ್‌’ ಘೋಷಿಸಲಾಗಿದೆ.

ರಾಮನಗರ, ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್‌’ ನೀಡಿರುವುದಾಗಿ ಇಲಾಖೆ ತಿಳಿಸಿದೆ.

ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿಗಳ ಪರಿಣಾಮವಾಗಿ ಮಳೆಯಾಗಲಿದೆ. ಅ.18ರಿಂದ ಮಳೆ ದಿಢೀರ್‌ ತಗ್ಗಲಿದ್ದು, 21ರವರೆಗೆ ಹೆಚ್ಚು ಮಳೆಯಾಗುವ ಯಾವುದೇ ಸೂಚನೆಗಳಿಲ್ಲ. ಕೆಲವೆಡೆ ಮಾತ್ರ ಚದುರಿದಂತೆ ಮಳೆಯಾಗಬಹುದು ಎಂದು ಮಾಹಿತಿ ನೀಡಿದೆ.

ಆಲ್ ಇಂಡಿಯಾ ಫೆಡರೇಷನ್ ಆಫ್ ಮಾಸ್ಟರ್ ಪ್ರಿಂಟರ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ, ಬೆಂಗಳೂರು ಕ್ಲಸ್ಟರ್ ನ ಅಧ್ಯಕ್ಷ ಸಿ ಆರ್ ಜನಾರ್ಧನ್ ಉಡುಪಿ ಭೇಟಿ

Posted On: 17-10-2021 11:15AM

ಉಡುಪಿ : ಆಲ್ ಇಂಡಿಯಾ ಫೆಡರೇಷನ್ ಆಫ್ ಮಾಸ್ಟರ್ ಪ್ರಿಂಟರ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರು ಹಾಗೂ ಬೆಂಗಳೂರು ಕ್ಲಸ್ಟರ್ ನ ಅಧ್ಯಕ್ಷರು ಸಿ ಆರ್ ಜನಾರ್ಧನ್ ರವರು ಉಡುಪಿಗೆ ಆಗಮಿಸಿದಾಗ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ದ ವತಿಯಿಂದ ಸ್ವಾಗತಿಸಿ, ಗೌರವಿಸಲಾಯಿತು.

ಈ ಸಂದರ್ಭ ಪ್ರಿಂಟಿಂಗ್ ಉದ್ಯಮದ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ಮುದ್ರಣ ಕಾರ್ಯಾಗಾರವನ್ನು ಉಡುಪಿಯಲ್ಲಿ ಮಾಡುವ ಅವಕಾಶವನ್ನು ಕಲ್ಪಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು ಹಾಗೂ ರಾಜ್ಯ ಮಟ್ಟದಲ್ಲಿ ಸಂಘಟನೆಯನ್ನು ಬಲ ಪಡಿಸುವ ಬಗ್ಗೆ ಸಮನ್ವಯ ಸಮಿತಿ ಗೆ ಸಂಪೂರ್ಣ ಸಹಕಾರ ವನ್ನು ನೀಡುತ್ತೇನೆ ಎಂದು ಸಿ ಆರ್ ಜನಾರ್ಧನ್ ರವರು ತಿಳಿಸಿದರು.

ಈ ಸಂದರ್ಭ ಜಿಲ್ಲಾಧ್ಯಕ್ಷರಾದ ಎಮ್ ಮಹೇಶ್ ಕುಮಾರ್, ಕಾರ್ಯದರ್ಶಿ ಮನೋಜ್ ಕಡಬ ಉಪಸ್ಥಿತರಿದ್ದರು.

ಕುತ್ಯಾರು : ಅಕ್ಟೋಬರ್ 19, ಉಚಿತ ರೇಬಿಸ್ ಲಸಿಕಾ ಶಿಬಿರ

Posted On: 17-10-2021 11:06AM

ಕಾಪು, ಅ.17 : ಜಿಲ್ಲಾ ಪಂಚಾಯತ್ ಉಡುಪಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಡುಪಿ ಜಿಲ್ಲೆ, ಕುತ್ಯಾರು ಗ್ರಾಮ ಪಂಚಾಯತ್, ಪಶು ಚಿಕಿತ್ಸಾಲಯ ಶಿರ್ವ ಇವರ ಸಂಯುಕ್ತ ಆಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಅಕ್ಟೋಬರ್ 19, ಮಂಗಳವಾರ ಬೆಳಗ್ಗೆ 9.30 ರಿಂದ 11 ಗಂಟೆಯವರೆಗೆ ಕುತ್ಯಾರು ಗ್ರಾಮ ಪಂಚಾಯತ್ ಮತ್ತು ಯುವಕ ಮಂಡಲ ಕುತ್ಯಾರು ಇಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೋಟರಿ ಸೈಬ್ರಕಟ್ಟೆಯ ಸಹಭಾಗಿತ್ವದಲ್ಲಿ ಹೈ ಸ್ಟೆಪ್ಪರ್ಸ್ ಡಾನ್ಸ್ ತರಬೇತಿ ತರಗತಿ ಉದ್ಘಾಟನೆ

Posted On: 16-10-2021 07:52PM

ಉಡುಪಿ : ಸೈಬ್ರಕಟ್ಟೆಯ ರೋಟರಿ ಭವನದಲ್ಲಿ ರೋಟರಿ ಸೈಬ್ರಕಟ್ಟೆಯ ಸಹಭಾಗಿತ್ವದಲ್ಲಿ ಹೈ ಸ್ಟೆಪ್ಪರ್ಸ್ ಡಾನ್ಸ್ ತರಬೇತಿ ತರಗತಿಯ ಉದ್ಘಾಟನೆಯನ್ನು ರೋಟರಿ ಭವನದ ಮಾಲಕರಾದ ಕಾರ್ಯದರ್ಶಿ ಅಣ್ಣಯ್ಯದಾಸ್ ಅವರು ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರೋಟರಿ ಅಧ್ಯಕ್ಷ ಯು ಪ್ರಸಾದ್ ಭಟ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಿರಣ್ ರೋ ರಾಮ್ ಪ್ರಕಾಶ್, ಚೇತನ್ ನೈಲಾಡಿ,. ಎಕೆ ಶೆಟ್ಟಿ ನೆಡೂರು, ತಾಲೂಕ್ ಪಂಚಾಯತ್ ಸದಸ್ಯೆ ಜ್ಯೋತಿ ಶೆಟ್ಟಿ, ಪ್ರಖ್ಯಾತ ಬಾಲ ನಟಿ ಶ್ಲಾಘ ಸಾಲಿಗ್ರಾಮ, ಡಿಕೆಡಿ ನೃತ್ಯ ಸಹ ಕೊರಿಯೋಗ್ರಫರ್ ರೋಷನ್ ಹಾಗೂ ನೃತ್ಯ ತರಬೇತಿ ಮಾಲಕರಾದ ರವಿ ಮತ್ತು ವಿಖ್ಯಾತ್ ಉಪಸ್ಥಿತರಿದ್ದರು.

ಬೈಂದೂರು : ವಿಜಯದಶಮಿ ದಿನದಂದೇ ನಾಡ ಕೊರಗ ಕಾಲೋನಿಯಲ್ಲಿ ಅಗ್ನಿ ದುರಂತ, ಸಂಪೂರ್ಣ ಮನೆ ಭಸ್ಮ

Posted On: 16-10-2021 07:44PM

ಉಡುಪಿ : ವಿಜಯದಶಮಿಯ ದಿನ ಊರೆಲ್ಲಾ ಸಂಭ್ರಮದಿಂದ ಹಬ್ಬ ಮಾಡುತ್ತಿರುವಾಗ ನಿನ್ನೆ ನಾಡ, ಪಡುಕೋಣೆ ಹೈಸ್ಕೂಲ್ ಎದುರುಗಡೆ ಇರುವ ಕೊರಗ ಕಾಲೋನಿಯ ನಿವಾಸಿ ಶ್ರೀಮತಿ ಸುನೀತಾ ರ ವರ ಮನೆ ಬೆಂಕಿಗೆ ಆಹುತಿಯಾಗಿ ತನ್ನ ಸೂರು ಕಳೆದುಕೊಂಡು ದಿಕ್ಕು ತೋಚದೆ ಮುಂದೇನು ಗತಿ ಎಂದು ಈ ಬಡ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.

ಈ ಘಟನೆಯ ಬಗ್ಗೆ ಸುನೀತಾರವರನ್ನು ಕೇಳಿದಾಗ ದಿನನಿತ್ಯ ಕೆಲಸ ಕಾರ್ಯಗಳನ್ನು ಮುಗಿಸಿ ದೇವರಿಗೆ ದೀಪ ಹಚ್ಚಿ ಮಧ್ಯಾಹ್ನ ಹತ್ತಿರದಲ್ಲಿರುವ ಸಂಬಂಧಿ ಮನೆಗೆ ಹೋಗಿದೆ. ಸರಿಸುಮಾರು ಮಧ್ಯಾಹ್ನ 12 ಘಂಟೆ ಹೊತ್ತಿಗೆ ಪಕ್ಕದ ಮನೆಯವರು ಬಂದು ನಿಮ್ಮ ಮನೆಯಲ್ಲಿ ಬೆಂಕಿ ಹತ್ತಿಕೊಂಡು ಹೊಗೆ ಬರುತ್ತಿದೆ ಎಂದು ಹೇಳಿದರು. ಕೂಡಲೇ ಅಕ್ಕಪಕ್ಕದವರೆಲ್ಲ ಸೇರಿ ಬೆಂಕಿ ಆರಿಸಲು ಹರಸಾಹಸ ಪಟ್ಟರು, ಅಲ್ಲದೇ ಮನೆ ಒಳಗಡೆ ಇರುವ ಗ್ಯಾಸ್ ಸಿಲಿಂಡರ್ ಸ್ಪೋಟಿಸುವ ಭಯದಿಂದ ಒಳಗಡೆ ಹೋಗುವುದಕ್ಕೆ ಯಾರು ಧೈರ್ಯ ಮಾಡಿಲ್ಲದ ಕಾರಣ ಪೀಠೋಪಕರಣ, ಆಹಾರ ಸಾಮಾಗ್ರಿ, ಪಾತ್ರೆ, ಕಬ್ಬಿಣದ ಕಪಾಟು, ಬಟ್ಟೆಬರೆ, ಚಿನ್ನಾಭರಣ ಹಾಗೂ TVS ಬೈಕ್ ಬೆಂಕಿಗೆ ಆಹುತಿಯಾಗಿದ್ದು, ಸರಿಸುಮಾರು 4ಲಕ್ಷ ರೂ. ಮೌಲ್ಯದ ವಸ್ತು ನಷ್ಟವಾಗಿದೆ. ಸುನೀತಾರವರು ಮತ್ತು ಸ್ಥಳೀಯರು ಹೇಳುವಂತೆ ದೇವರಿಗೆ ಹಚ್ಚಿದ ದೀಪ ಅಲ್ಲೇ ಹತ್ತಿರದಲ್ಲಿ ಇರುವ ಬಟ್ಟೆಯ ಪರದೆಗೆ ಆಕಸ್ಮಿಕವಾಗಿ ತಗಲಿರುವುದರಿಂದ ಈ ಬೆಂಕಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ.

ಈ ಘಟನೆಯ ಬಗ್ಗೆ ನಿನ್ನೆ ಗಂಗೊಳ್ಳಿ ಪೋಲಿಸ್ ಠಾಣೆಗೆ ಸುನೀತಾರವರು ದೂರು ನೀಡಿದ್ದಾರೆ, ಅಲ್ಲದೇ ಗ್ರಾಮ ಲೆಕ್ಕಿಗರು, PDO ಹಾಗೂ ಸ್ಥಳೀಯ ಪಂಚಾಯತ್ ಸದಸ್ಯರ ಗಮಕ್ಕೆ ತಂದಿದ್ದಾರೆ. ಈ ಘಟನೆ ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತು ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ್ ವಿ ಅವರ ಗಮನಕ್ಕೆ ಬಂದ ಕೂಡಲೇ ಇಂದು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಗ್ರಾಮಲೆಕ್ಕಿಗರು, PDO, ಪೋಲಿಸ್ ಸಿಬ್ಬಂದಿಗಳೊಂದಿಗೆ ಸ್ಥಳದ ಪರಿಶೀಲನೆ ಮಜರು ಮಾಡಿಸಿದ್ದಾರೆ. ಈ ಪರಿವಾರಕ್ಕೆ ತುರ್ತಾಗಿ ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ಬೈಂದೂರು ತಹಸೀಲ್ದಾರ್ ಶೋಭಾರವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ PDO ಹರೀಶ್ ಮೊಗವೀರ, ಪೊಲೀಸ್ ಸಿಬ್ಬಂದಿ ನಾಗರಾಜ್, ಸಾಮಾಜಿಕ ಕಾರ್ಯಕರ್ತ ಕೋಡಿ ಅಶೋಕ್ ಪೂಜಾರಿ, ರವೀಂದ್ರ ಎಸ್ಟಿ ಮೋರ್ಚಾ ಸದಸ್ಯ, ಶ್ರೀ ಧರ್ಮಸ್ಥಳ ಸಂಘ ಪಡುಕೋಣೆ ಒಕ್ಕೂಟದ ಸೇವಾ ಪತ್ರಿನಿಧಿ ಸವಿತಾ ಜೆ. ಬಿಲ್ಲವ, ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಶ್ರೀ ದೇವಿ ಭಜನಾ ಮಂಡಳಿ ಮಂಡೇಡಿ : ದುರ್ಗಾ ನಮಸ್ಕಾರ, ಭಜನೆಯೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನ

Posted On: 16-10-2021 04:57PM

ಇನ್ನಂಜೆ : ಶ್ರೀ ದೇವಿ ಭಜನಾ ಮಂಡಳಿ (ರಿ.) ಮಂಡೇಡಿ ಇಲ್ಲಿನ ಭಜನಾ ಮಂದಿರದಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಭಜನೆ ನಡೆದಿದ್ದು, ವಿಜಯ ದಶಮಿಯಂದು ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ, ಭಜನಾ ಕಾರ್ಯಕ್ರಮ ಹಾಗೂ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಸರ್ವಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ರೋಟರಿ ಸೈಬ್ರಕಟ್ಟೆಯ ಅಣ್ಣಯ್ಯದಾಸ್ ದಂಪತಿಯಿಂದ ಸ.ಹಿ.ಪ್ರಾ.ಶಾಲೆ ಸೈಬ್ರಕಟ್ಟೆಗೆ ಅಗತ್ಯ ವಸ್ತು ಹಸ್ತಾಂತರ

Posted On: 15-10-2021 09:01PM

ಉಡುಪಿ : ರೋಟರಿ ಸೈಬ್ರಕಟ್ಟೆಯ ಕಾರ್ಯದರ್ಶಿ ಅಣ್ಣಯ್ಯದಾಸ್ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಅವರ ಕೊಡುಗೆಯಾದ ನಲಿ ಕಲಿ ಪರಿಕರ ಗಳ ಜೋಡಣೆಗೆ ಅಗತ್ಯತೆ ಇರುವ ಕಪಾಟು ಸ.ಹಿ.ಪ್ರಾ.ಶಾಲೆ ಸೈಬ್ರಕಟ್ಟೆಗೆ ಹಸ್ತಾಂತರ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಸೈಬ್ರಕಟ್ಟೆಯಿಂದ ಮಾಡಲಾಯಿತು.

ವಿಶೇಷ ಅತಿಥಿ ಮಾಜಿ ಸಹಾಯಕ ಗವರ್ನರ್ ಮಹೇಶ್ ಕುಮಾರ್ ಅವರು ಮುಖ್ಯ ಶಿಕ್ಷಕ ಸತೀಶ್ಚಂದ್ರ ಅವರಿಗೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಅಣ್ಣಯ್ಯದಾಸ್ ಅವರು ರೋಟರಿ ಕ್ಲಬ್ ಸೈಬ್ರಕಟ್ಟೆಗೆ ದೊಡ್ಡ ಆಸ್ತಿ, ಅಲ್ಲದೆ ರೋಟರಿ ಮುಖಾಂತರ ಹಲವಾರು ಕೊಡುಗೆ ಗಳನ್ನು ಈ ಸಮಾಜಕ್ಕೆ ನೀಡಿದ್ದಾರೆ. ಹಾಗೆಯೇ ಈ ವರ್ಷ ರೋಟರಿ ಸೈಬ್ರಕಟ್ಟೆ ಶ್ರೇಷ್ಠ ಸೇವೆ ಹಾಗೂ ಹೆಚ್ಚೆಚ್ಚು ಪ್ರಾಜೆಕ್ಟ್ ಗಳ ಮೂಲಕ ವಲಯ ಹಾಗೂ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ ಅಂತ ಹೇಳಿದರು.

ಇದೆ ಸಂದರ್ಭದಲ್ಲಿ ಶಾಲೆಯಿಂದ ರೋಟರಿ ಅಧ್ಯಕ್ಷ ಯು ಪ್ರಸಾದ್ ಭಟ್ ಮತ್ತು ಇಂದಿನ ಕೊಡುಗೆ ನೀಡಿದ ಅಣ್ಣಯ್ಯ ದಾಸ್ ಅವರನ್ನು ಸನ್ಮಾನ ಮಾಡಲಾಯಿತು.ಪ್ರಸಾದ್ ಭಟ್ ಅವರು ಮಾತನಾಡಿ ಸೈಬ್ರಕಟ್ಟೆ ಪ್ರಾಥಮಿಕ ಶಾಲೆಯು ಈ ಭಾಗದಲ್ಲಿಯೇ ಕನ್ನಡ ಮಾದ್ಯಮದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು ಹಳೆ ವಿದ್ಯಾರ್ಥಿಗಳ ಅತ್ಯುನ್ನತ ಕೊಡುಗೆ ಗಳಿಂದ ಉತ್ತಮ ಅಭಿವೃದ್ದಿ ಹೊಂದುತ್ತಿದ್ದು ರೋಟರಿ ಕೂಡ ಕೈ ಜೋಡಿಸುತ್ತೆ ಅಂತ ಹೇಳಿದರು.

ವಲಯ ಸೇನಾನಿ ವಿಜಯಕುಮಾರ್ ಶೆಟ್ಟಿ, SDMC ಅಧ್ಯಕ್ಷ ಪುರುಷೋತ್ತಮ ದೇವಾಡಿಗ, ರವೀಂದ್ರನಾಥ್ ಕಿಣಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಪ್ರಭು, ನೀಲಕಂಠ ರಾವ್, ಗಣೇಶ್ ನಾಯಕ್, ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.