Updated News From Kaup
ಶಿರ್ವ: ಡಂಪಿಂಗ್ ಯಾರ್ಡ್ ಆಗುತ್ತಿದೆ ಶಾಂತಿಗುಡ್ಡೆ

Posted On: 21-10-2021 03:04PM
ಶಿರ್ವ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಪು-ಶಿರ್ವ ರಸ್ತೆಯ ಶಾಂತಿಗುಡ್ಡೆ ಎಂಬಲ್ಲಿ ಸಾರ್ವಜನಿಕರು ಘನ ಮತ್ತು ದ್ರವ ತ್ಯಾಜ್ಯಗಳು ಹಾಗು ಪ್ಲಾಸ್ಟಿಕ್ ವಸ್ತುಗಳನ್ನು ಮನ ಬಂದಂತೆ ರಸ್ತೆ ಬದಿಗೆ ಎಸೆಯುವುದರಿಂದ ಪರಿಸರದ ದನಕರುಗಳಿಗೆ ಮತ್ತು ಜನರಿಗೆ ತೊಂದರೆ ಉಂಟಾಗುವುದರೊಂದಿಗೆ ಸಾಂಕ್ರಾಮಿಕ ಕಾಯಿಲೆಗಳ ಹಾವಳಿ ಜೋರಾಗಿದೆ.
ಸುತ್ತ-ಮುತ್ತ ದಿನನಿತ್ಯ ಒಡಾಡುವ ನಾಗರಿಕರಿಗೆ ಕೆಟ್ಟ ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡೇ ಹೋಗ ಬೇಕಾದ ಪರಿಸ್ಥಿತಿ ಬಂದೊದಗಿದೆ. ಸುತ್ತಲ ಫಲವತ್ತತೆ ಯ ಭೂಮಿ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ನಿಂದ ತುಂಬಿದೆ. ಇನ್ನು ಮುಂದಾದರು ನಾಗರಿಕ ಪ್ರಪಂಚ ಇತ್ತ ಗಮನ ಹರಿಸಬೇಕಾಗಿದೆ. ಇದಕ್ಕೆ ಸಂಬಂದಪಟ್ಟವರು ಸೂಕ್ತ ಕ್ರಮ ಕೈಗೊಂಡು ಪರಿಸರ ಮಾಲಿನ್ಯ ತಡೆಗಟುವಲ್ಲಿ ಶ್ರಮಿಸಬೇಕಾಗಿದೆ ಎಂದು ಸಂತ ಮೇರಿ ಕಾಲೇಜು, ಶಿರ್ವದ ಊಪನ್ಯಾಸಕರಾದ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಆಗ್ರಹಿಸಿದ್ದಾರೆ.
ಶ್ರೀ ಉಮಾ ಮಹೇಶ್ವರಿ ಭಜನ ಮಂಡಳಿ ಜರಿಮರಿ ಯ ಸದಸ್ಯರಿಂದ ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಭಜನೆ ಕಾರ್ಯಕ್ರಮ.

Posted On: 21-10-2021 01:29PM
ಕಾಪು : ಮುಂಬಯಿಯ ಪ್ರಸಿದ್ಧ ಭಜನ ಮಂಡಳಿಗಳಲ್ಲಿ ಒಂದಾದ ಶ್ರೀ ಉಮಾ ಮಹೇಶ್ವರಿ ಭಜನ ಮಂಡಳಿಯ ಸದಸ್ಯರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಅಕ್ಟೋಬರ್ 17 ರಿಂದ ಅಕ್ಟೋಬರ್ 21 ರ ತನಕ ಭಜನ ಸಂಕೀರ್ತನ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರ್, ಕಾರ್ಕಳ, ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು, ಶ್ರೀ ಅಬ್ಬಗ ಧಾರಗ ಶ್ರೀ ಬ್ರಹ್ಮಲಿಂಗೇಶ್ವರ ಕ್ಷೇತ್ರ ಕವಾತರು, ಶ್ರೀ ಆದಿ ಮಾರಿಯಮ್ಮ ದೇವಸ್ಥಾನ ಕೋಟೆಮನೆ ಕಾಪು, ಶ್ರೀ ಹೊಸ ಮಾರಿಗುಡಿ ಕಾಪು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಪ್ಪನಾಡು, ಶ್ರೀ ಭಗವತಿ ಕ್ಷೇತ್ರ ಸಸಿಹಿತ್ಲು, ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಡುಬಿದ್ರಿ, ಶ್ರೀ ಕೃಷ್ಣ ಮಠ ಉಡುಪಿ, ಶ್ರೀ ಆದಿ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲ್ಪಾಡಿ ಉಡುಪಿ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಲಿಮಾರು ಮುಂತಾದ ಪುಣ್ಯಕ್ಷೇತ್ರ ಗಳಲ್ಲಿ ಭಜನ ಕಾರ್ಯಕ್ರಮವನ್ನು ಭುವಾಜಿ ರವೀಂದ್ರ ಶಾಂತಿ ಯವರ ನೇತೃತ್ವದಲ್ಲಿ ನಡೆಸಿಕೊಟ್ಟರು.

ಕಲಿಯುಗದಲ್ಲಿ ದೇವರನ್ನು ಒಲಿಸುವ ಸುಲಭ ಸಾಧನ ವೆಂಬ ಜ್ಞಾನಿಗಳ ವಾಣಿಯಂತೆ ಸತತ 8 ವರ್ಷ ಶ್ರೀ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹರಿನಾಮ ಸಂಕೀರ್ತನೆ ಯನ್ನು ನಡೆಸಿರುವ ಭುವಾಜಿ ರವೀಂದ್ರ ಶಾಂತಿ ಯವರ ನೇತೃತ್ವದ ಶ್ರೀ ಉಮಾ ಮಹೇಶ್ವರಿ ಭಜನ ಮಂಡಳಿ ಜರಿಮರಿಯ ಸದಸ್ಯರು ಮುಂಬಯಿ ಮಹಾನಗರ ಮಾತ್ರವಲ್ಲದೆ ದೇಶದ ಹಲವಾರು ಪುಣ್ಯಕ್ಷೇತ್ರಗಳಲ್ಲಿ ಭಜನ ಕಾರ್ಯಕ್ರಮ ನಡೆಸಿ ಕೊಟ್ಟಿರುವರು. ಇದೀಗ ಭಜನೆಯಲ್ಲಿ ಯುವ ಪೀಳಿಗೆ ಆಸಕ್ತಿ ತೋರಲೆಂದು ಉಚಿತವಾಗಿ ಮನೆ ಮನೆ ಭಜನೆ ಸೇವೆಯನ್ನು ಕೂಡ ಮಾಡುತ್ತಿದ್ದು, ಇದೀಗ ತುಳುನಾಡಿನ ಉಭಯ ಜಿಲ್ಲೆಗಳ ಹಲವಾರು ಕ್ಷೇತ್ರಗಳಲ್ಲಿ ಭಜನ ಕಾರ್ಯಕ್ರಮವನ್ನು ಭಕ್ತಿ ಭಾವದಿಂದ ನಡೆಸಿಕೊಟ್ಟಿರುವರು.
ವಿಹಿಂಪ, ಭಜರಂಗದಳ : ಪ್ರತಿಭಟನೆ

Posted On: 21-10-2021 01:22PM
ಉಡುಪಿ: ಯಾವೆಲ್ಲಾ ದೇಶದಲ್ಲಿ ಇಸ್ಲಾಂ ಇದೆಯೋ ಅಲ್ಲೆಲ್ಲಾ ಅಶಾಂತಿ ನೆಲೆಸಿದೆ. ಇಸ್ಲಾಂ ಇರುವಲ್ಲಿ ಭಯೋತ್ಪಾದಕತೆ ಇದೆ ಎಂದು ಭಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್ ಹೇಳಿದರು.
ಬುಧವಾರ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದು ದೇವಾಲಯಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಭಾರತದಲ್ಲಿಯೂ ಹಿಂದುಗಳು ಅಲ್ಪಸಂಖ್ಯಾತ ಇರುವಲ್ಲಿ ಇಸ್ಲಾಂ ಜಿಹಾದಿಗಳು ದೌರ್ಜನ್ಯ ನಡೆಸುತ್ತಿದ್ದಾರೆ.
ಭಾರತದ ಹಿಂದುಗಳು ಸಂಘಟಿತರಾಗಬೇಕು, ಇವತ್ತು ಬಾಂಗ್ಲದೇಶಕ್ಕೆ ಬಂದ ಸ್ಥಿತಿ ನಾಳೆ ನಮಗೂ ಬರಬಹುದೆಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ವಿಹಿಂಪ ಮುಖಂಡ ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.
ಸ್ವಚ್ಛ ಶಿರ್ವ ನಮ್ಮ ಶಿರ್ವ : ಸ್ವಚ್ಛತೆ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ನೊಂದಿಗೆ ಸಹಕರಿಸಲು ಮನವಿ

Posted On: 20-10-2021 09:04PM
ಕಾಪು : ಸ್ವಚ್ಛ ಶಿರ್ವ ನಮ್ಮ ಶಿರ್ವ ಕಾರ್ಯಕ್ರಮದಡಿ ಶಿರ್ವ ಪಂಚಾಯತ್ ವ್ಯಾಪ್ತಿಯಲ್ಲಿನ ಸ್ವಚ್ಛತೆಗಾಗಿ ಪಂಚಾಯತ್ ಸಿಬ್ಬಂದಿಯವರೊಂದಿಗೆ ದಿನಾ ಬೆಳಿಗ್ಗೆ 7.30 ರಿಂದ 9 ಗಂಟೆವರೆಗೆ ಶ್ರಮಿಸಲಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ , ತ್ಯಾಜ್ಯ ಬಿಸಾಡುವವರನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ.

ಸಾರ್ವಜನಿಕವಾಗಿ ಉಗುಳುವುದು ಕಂಡುಬಂದಲ್ಲಿ ಅವರ ವಿರುದ್ದ ಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣ ಕಾಯಿದೆ ಅಡಿ ದಂಡ ವಿಧಿಸಲಾಗುತ್ತಿದೆ. ಕಸ ಬಿಸಾಡುವವರನ್ನೂ ಹಿಡಿದು ದಂಡವಿಧಿಸಲಾಗುತ್ತಿದೆ. ಕಸದ ರಾಶಿ ಕಂಡು ಬಂದಲ್ಲಿ ಅದರ ವಿಲೇವಾರಿ ಮಾಡಲಾಗುತ್ತಿದೆ.
ಪಂಚಾಯತ್ ಸದಸ್ಯರು, ಸಾರ್ವಜನಿಕರು, ಗ್ರಾಮಸ್ಥರು, ಸಂಘ ಸಂಸ್ಥೆಗಳು ಸ್ವಚ್ಛತೆ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ನೊಂದಿಗೆ ಸಹಕರಿಸಲು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಆರ್ ಪಾಟ್ಕರ್ ಮನವಿ ಮಾಡಿಕೊಂಡಿದ್ದಾರೆ.
ಮಹರ್ಷಿ ವಾಲ್ಮೀಕಿ ಅವರ ಸಾಧನೆ ಎಲ್ಲರಿಗೂ ಪ್ರೇರಣೆ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Posted On: 20-10-2021 07:58PM
ಉಡುಪಿ : ಬೇಡನಾಗಿದ್ದ ವ್ಯಕ್ತಿ ತನ್ನ ಸತತ ಪರಿಶ್ರಮ ,ಅಚಲ ಸಾಧನೆಯಿಂದ ಮಹರ್ಷಿ ವಾಲ್ಮೀಕಿಯಾಗಿ ರೂಪುಗೊಂಡಿದ್ದು, ವಾಲ್ಮೀಕಿ ಅವರ ಈ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಇಂದು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ನಗರಸಭೆ ಉಡುಪಿ,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಸಹಯೋಗದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ರಚನೆಯ ರಾಮಾಯಣವು ಎಲ್ಲರಿಗೂ ಅರ್ಥವಾಗುವ ಸರಳ ಭಾಷೆಯಿಂದ ಕೂಡಿದ್ದು, ವಿವಿಧ ಭಾಷೆಗಳಿಗೆ ಭಾಷಾಂತರವಾಗಿ, ಧಾರಾವಾಹಿ,ಚಲನಚಿತ್ರಗಳ ಮೂಲಕ ಪ್ರತಿಯೊಬ್ಬರ ಮನೆ ಮನಗಳನ್ನು ಮುಟ್ಟಿದೆ. ರಾಮಾಯಣದಲ್ಲಿನ ಮೌಲ್ಯಗಳು,ತತ್ವಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಸತತ ಪರಿಶ್ರಮದಿಂದ ಯಾವುದೇ ವ್ಯಕ್ತಿ ಮಹಾನ್ ಸಾಧನೆ ಮಾಡಬಹುದು ಎನ್ನುವುದಕ್ಕೆ ವಾಲ್ಮೀಕಿ ಸಾಕ್ಷಿಯಾಗಿದ್ದಾರೆ. ಉಡುಪಿ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮ ಆರಂಭವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಪರಿಶಿಷ್ಟ ಪಂಗಡದ ಅಭಿವೃಧ್ದಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಪ್ರಯೋಜನವನ್ನು ಪ.ಪಂಗಡದ ಜನತೆ ಪಡೆಯಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ, ಅತ್ಯಂತ ಹಿಂದುಳಿದ ವರ್ಗದ ವ್ಯಕ್ತಿ ಜ್ಞಾನ ಪಡೆಯುವ ಮೂಲಕ ಆದಿಕವಿ ವಾಲ್ಮೀಕಿಯಾಗಿದ್ದಾರೆ, ಹಿಂದುಳಿದ ವರ್ಗದ ಜನತೆ ತಮ್ಮಲ್ಲಿನ ಕೀಳಿರಿಮೆ ತೊರೆದು,ವಿದ್ಯಾಭ್ಯಾಸ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಈ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು. ಮಹರ್ಷಿ ವಾಲ್ಮೀಕಿಯವರ ವ್ಯಕ್ತಿತ್ವ ಮತ್ತು ಜೀವನದ ಬಗ್ಗೆ ಉಪನ್ಯಾಸ ನೀಡಿದ ಮಂಗಳೂರು ವಿವಿಯ ಸಂಶೋಧನಾ ವಿದ್ಯಾರ್ಥಿ ದಿನಕರ ಕೆಂಜೂರು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಚಿಂತಕ ,ತತ್ವಜ್ಞಾನಿ,ಶಿಕ್ಷಣ ಪ್ರೇಮಿಯಾಗಿದ್ದರು,ರಾಮಾಯಣವನ್ನು ಜನಸಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ರಚಿಸಿದ್ದಾರೆ. ಅದರಲ್ಲಿನ ಪ್ರಕೃತಿ ಸೌಂದರ್ಯ, ಆದರ್ಶ ವ್ಯಕ್ತಿಯ ಚಿತ್ರಣ, ಕೌಟುಂಬಿಕ ಮೌಲ್ಯಗಳು, ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳು ಎಲ್ಲಾ ಕಾಲದಲ್ಲೂ ಪ್ರಸ್ತುತವಾಗಿವೆ,ವ್ಯಕ್ತಿ ತನ್ನಲ್ಲಿನ ನಕಾರಾತ್ಮಕ ಭಾವನೆಗಳನ್ನು ತೊಡೆದು,ಆತ್ಮ ವಿಶ್ವಾಸದಿಂದ ಮುನ್ನಡೆದರೆ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ ಎಂಬುದಕ್ಕೆ ವಾಲ್ಮೀಕಿ ಅವರ ಜೀವನ ಚರಿತ್ರೆ ಸಾಕ್ಷಿಯಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು. ಸಮಗ್ರ ಗಿರಿಜನ ಅಭಿವೃದ್ದಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ದೂದ್ಪೀರ್ ಸ್ವಾಗತಿಸಿದರು, ವಿಶ್ವನಾಥ್ ವಂದಿಸಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ಪ್ರತಿಭಾ ನಾಯ್ಕ್, ಕಾವ್ಯಶ್ರೀ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶೀನ ನಾಯ್ಕ, ದೋಗು ಕೊರಗ,ಗುಲಾಬಿ ಗೌಡ್ತಿ ಅವರನ್ನು ಸನ್ಮಾನಿಸಲಾಯಿತು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ವಾಟ್ಸಾಪ್ ಬ್ರಾಡ್ ಕಾಸ್ಟ್ ಮೆಸೇಜ್ ಗೆ ಚಾಲನೆ

Posted On: 20-10-2021 06:24PM
ಕಾಪು : ಇಲ್ಕಲ್ ಕೆಂಪು ಶಿಲೆಯಿಂದ ನವೀಕೃತ ವಾಗಿ ನಿರ್ಮಾಣಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಯು ಭರದಿಂದ ಸಾಗುತ್ತಿದೆ. ಈ ನಿಟ್ಟಿನಲ್ಲಿ ದೇವಳದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಭಕ್ತಾದಿಗಳಿಗೆ ತ್ವರಿತವಾಗಿ ತಿಳಿಯುವಂತೆ ಮಾಡಲು ಈವರೆಗೆ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಉಪ ಸಮಿತಿಗಳಾದ ಪ್ರಚಾರ ಸಮಿತಿ ಮತ್ತು ಆರ್ಥಿಕ ಸಮಿತಿಯ ಮುಖಾಂತರ ಸಂಗ್ರಹಿಸಲಾದ 36,000 ಕ್ಕೂ ಅಧಿಕ ವಾಟ್ಸಾಪ್ ನಂಬರ್ ಗಳಿಗೆ ಏಕಕಾಲದಲ್ಲಿ ಬ್ರಾಡ್ ಕಾಸ್ಟ್ ಮೆಸೇಜ್ ಹಾಕಲಾಯಿತು.
ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್. ವಿ. ಶೆಟ್ಟಿ ಬಾಲಾಜಿ, ಗೌರವ ಸಲಹೆಗಾರರಾದ ನಿರ್ಮಲ್ ಕುಮಾರ್ ಹೆಗ್ಡೆ, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ಸುನೀಲ್. ಎಸ್. ಪೂಜಾರಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರವೀಂದ್ರ.ಎಮ್, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಮುಖ್ಯ ಸಂಚಾಲಕರಾದ ವಿದ್ಯಾಧರ ಪುರಾಣಿಕ್, ಕಾಲರಾತ್ರಿ ತಂಡದ ಸಂಚಾಲಕರಾದ ಶ್ರೀನಿವಾಸ ಆಚಾರ್ಯ, ಸಿಬ್ಬಂದಿ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸುಂದರವಾಯಿತು ತ್ಯಾಜ್ಯ ಎಸೆಯುವ ಜಾಗ (Black Spot) : ಹೆಚ್ಚಿದ ಜನಸ್ಪಂದನ

Posted On: 19-10-2021 06:45PM
ಉಡುಪಿ : ಉಡುಪಿ ಜಿಲ್ಲಾ ಪಂಚಾಯತ್ ನ ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಯಡಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಮುಖ್ಯವಾಗಿ ರಸ್ತೆ, ಬಸ್ ಸ್ಟ್ಯಾಂಡ್, ನದಿಯ ಪಕ್ಕದಲ್ಲಿ ತ್ಯಾಜ್ಯ ಎಸೆಯುವ ಜಾಗ ಗುರುತಿಸುವ (Garbage Black Spot Identification) ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದ್ದು, ಜಿಲ್ಲೆಯಲ್ಲಿ ಇದುವರೆಗೆ 150 ಕ್ಕೂ ಹೆಚ್ಚು ಕಡೆಗಳಲ್ಲಿ Black Spot ನಿರ್ಮೂಲನಾ ಮಾಡಲಾಗಿದೆ. ಈವರೆಗೆ ಒಟ್ಟು 55 ಕಡೆಗಳಲ್ಲಿ Black Spot ಇರುವ ಬಗ್ಗೆ WhatsApp number 9483330564 ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಇದರಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಭಾಗಕ್ಕೆ ಸೇರಿದ 42 'Black Spot ಗಳಿದ್ದು - ಅವುಗಳಲ್ಲಿ 40 ಅನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ. ಉಳಿದಂತೆ ನಗರ ವ್ಯಾಪ್ತಿಗೆ ಸೇರಿದ Garbage Black Spot ಗಳನ್ನು ಸ್ವಚ್ಛಗೊಳಿಸುವ ಬಗ್ಗೆ ನಗರಸಭೆಗೆ ಮಾಹಿತಿ ನೀಡಲಾಗಿದೆ.

ಇದರೊಂದಿಗೆ ಸುಮಾರು 100 ಕ್ಕೂ ಹೆಚ್ಚು ಕಡೆಗಳಲ್ಲಿ ತ್ಯಾಜ್ಯ ಎಸೆಯುವ Black Spot ಗಳನ್ನು ಗ್ರಾಮ ಪಂಚಾಯತ್ ಗಳು ಸ್ವತಃ ಗುರುತಿಸಿದ್ದು, ಅದನ್ನು ಸ್ವಚ್ಛಗೊಳಿಸಿಲಾಗಿದ್ದು , ಬಹುತೇಕ ಕಡೆಗಳಲ್ಲಿ ಗಿಡ ನೆಡುವುದು, cctv ಅಳವಡಿಕೆ, ಬ್ಯಾನರ್, ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಕೋಟೇಶ್ವರ, ಕೋಡಿಬೆಟ್ಟು, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ಎಸೆಯುವ Black Spot ಗಳನ್ನು ನಿರ್ಮೂಲನಗೊಳಿಸುವ ಜೊತೆಗೆ ಕೆಲವಡೆ ಅದನ್ನು ಹೂದೋಟವಾಗಿ ಪರಿವರ್ತಿಸಿ ಅದಕ್ಕೆ ಕಲಾತ್ಮಕತೆಯ ಸ್ಪರ್ಶ ನೀಡಲಾಗಿದೆ.
ತ್ಯಾಜ್ಯ ಎಸೆಯುವ ಜಾಗವನ್ನು ಗುರುತಿಸಿ ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಅತ್ಯುತ್ತಮ ಸ್ಪಂದನೆ ದೊರೆತಿದ್ದು, ಕೆಲವು ಕಡೆಗಳಲ್ಲಿ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸುವುದರೊಂದಿಗೆ ಅವರಿಂದಲೇ ಸ್ವಚ್ಛತಾಕಾರ್ಯ ನಡೆಸುವ ಕಾರ್ಯವೂ ಭರದಿಂದ ನಡೆಯುತ್ತಿದೆ. ಸಿದ್ಧಾಪುರ ಗ್ರಾಮ ಪಂಚಾಯತ್ ನಲ್ಲಿ ಸ್ಮಶಾನದ ಬಳಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿ 1000 ರೂ ದಂಡ ವಿಧಿಸಲಾಗಿದೆ. ಸಾಣೂರು ಗ್ರಾಮ ಪಂಚಾಯತ್ ನಲ್ಲಿ ರೂ. 2000 , ಬಡಾ ಗ್ರಾಮ ಪಂಚಾಯತ್ ನಲ್ಲಿ ರೂ 2000 ದಂಡ ವಿಧಿಸಲಾಗಿದೆ. ಕೋಡಿಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸದವರನ್ನು ಪತ್ತೆ ಹಚ್ಚಿ ಅವರಿಂದಲೇ ಕಸ ಹೆಕ್ಕಿಸುವ ಕಾರ್ಯವೂ ನಡೆದಿದೆ. ಅಲೆವೂರು ಗ್ರಾಮ ಪಂಚಾಯತ್ ನಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆ ಮಾಡಿ ಅವರಿಂದಲೇ ಕಸ ಹೆಕ್ಕಿಸಿ ರೂ 2000 ದಂಡ ಕೂಡ ವಿಧಿಸಲಾಗಿದೆ.
ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ಪೋಟೋ/ ಕಸ ತಂದು ಸುರಿಯುವ ವಾಹನಗಳ ಪೋಟೋ/ ಕಸ ಬಿದ್ದಿರುವ ಜಾಗದ ಪೋಟೋಗಳನ್ನು ಮತ್ತು ಸ್ಥಳದ ಮಾಹಿತಿಯನ್ನು WhatsApp ನಂಬರ್ 9483330564 ಗೆ ಮಾಹಿತಿ ನೀಡಿದ್ದಲ್ಲಿ ಮಾಹಿತಿ ನೀಡಿದವರಿಗೆ ಗ್ರಾಮ ಪಂಚಾಯತ್ ನಿಂದ ಸೂಕ್ತ ಬಹುಮಾನ ನೀಡಲಾಗುವುದು. ಹಾಗೂ ಈ ಮಾಹಿತಿ ನೀಡಿದವರ ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ಜಿಲ್ಲೆಯಲ್ಲಿ Garbage Black Spot ನಿರ್ಮೂಲನಾ ಕಾರ್ಯ ನಿರಂತರ ಪ್ರಕ್ರಿಯೆಯಾಗಿದ್ದು, ಸಾರ್ವಜನಿಕರು ಬ್ಲಾಕ್ ಸ್ಪಾಟ್ಗಳ ಬಗ್ಗೆ ವಾಟ್ಸಾಪ್ ಮೂಲಕ ಮಾಹಿತಿ ನೀಡಿ “ನಮ್ಮ ಊರು ಸ್ವಚ್ಛ ಊರು“ ಅಭಿಯಾನವನ್ನು ಮತ್ತಷ್ಟು ಯಶಸ್ವಿಗೊಳಿಸಿ, ಇಡೀ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಮಾಡಲು ಸಹಕರಿಸಬೇಕು ಎಂದು ಡಾ.ನವೀನ್ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಉಡುಪಿ ವಿನಂತಿಸಿದ್ದಾರೆ.
ಇನ್ನಾದಲ್ಲಿ ಇರುವ ಬ್ರೈಟ್ ಕಂಪನಿಯ ಘನ ತ್ಯಾಜ್ಯ ಎಸೆದ ವ್ಯಕ್ತಿಗೆ ಎಲ್ಲೂರು ಪಂಚಾಯತಿಯಿಂದ ದಂಡ

Posted On: 19-10-2021 06:34PM
ಕಾಪು : ನಂದಿಕೂರು ಸಮೀಪದ ಇನ್ನಾದಲ್ಲಿ ಇರುವ ಬ್ರೈಟ್ ಕಂಪನಿಯ ಘನ ತ್ಯಾಜ್ಯವನ್ನು ಬೆಳಪುವಿನ ರಝಕ್ ಎಂಬ ವ್ಯಕ್ತಿ ಎಲ್ಲೂರು ವ್ಯಾಪ್ತಿಯಲ್ಲಿ ವಾಹನದ ಮೂಲಕ ತಂದು ಎಸೆದಿರುವುದನ್ನು ಸಾಕ್ಷಿ ಸಮೇತ ಎಲ್ಲೂರು ಪಂಚಾಯತ್ ಅಧ್ಯಕ್ಷರು ಪತ್ತೆ ಹಚ್ಚಿದ್ದಾರೆ.

ಈ ಸಂದರ್ಭ ಪಂಚಾಯತ್ ಅಧ್ಯಕ್ಷರು ಕಸ ಕೊಟ್ಟ ಕಂಪನಿಯವರನ್ನು ಮತ್ತು ಕಸ ಹಾಕಿದ ರಝಕ್ ರನ್ನು ಸ್ಥಳಕ್ಕೆ ಕರೆಯಿಸಿ ತ್ಯಾಜ್ಯ ಹಾಕಿದ ರಝಕ್ ಇವರಿಗೆ 5000 ರೂ. ದಂಡ ವಿಧಿಸಿದ್ದಾರೆ.
ಭತ್ತ ಕಟಾವು ಯಂತ್ರ: ಗಂಟೆಗೆ 1800 ರೂ ದರ ನಿಗದಿ

Posted On: 18-10-2021 11:03PM
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಭತ್ತದ ಕಟಾವು ಸನ್ನಿಹಿತವಾಗಿದ್ದು, ಹೊರಜಿಲ್ಲೆ ಹಾಗೂ ರಾಜ್ಯಗಳಿಂದ ಕಂಬೈನ್ಡ್ ಹಾರ್ವೆಸ್ಟರ್ಗಳು ಜಿಲ್ಲೆಗೆ ಆಗಮಿಸುತ್ತಿವೆ. ಜಿಲ್ಲೆಯಲ್ಲಿ ಕೂಲಿಯಾಳುಗಳ ಸಮಸ್ಯೆಯಿದ್ದು, ಕಟಾವಿನ ಅವಧಿಯಲ್ಲಿ ಮಳೆ ಸಹ ಬರುವುದರಿಂದ ರೈತರು ಭತ್ತದ ಬೆಳೆ ಕಟಾವಿಗೆ ಅನಿವಾರ್ಯವಾಗಿ ಕಂಬೈನ್ಡ್ ಹಾರ್ವೆಸ್ಟರ್ಗಳನ್ನು ಅವಲಂಬಿಸಿರುತ್ತಾರೆ. ಸದ್ರಿ ಸನ್ನಿವೇಶದ ಪ್ರಯೋಜನ ಪಡೆದು ಕೆಲವೊಂದು ಖಾಸಗಿ ಕಂಬೈನ್ಡ್ ಹಾರ್ವೆಸ್ಟರ್ ಮಾಲಕರು ಸ್ಥಳೀಯ ಮಧ್ಯವರ್ತಿಗಳೊಂದಿಗೆ ಸೇರಿ ರೈತರಿಂದ ಭತ್ತ ಕಟಾವಿಗೆ ಹೆಚ್ಚಿನ ಬಾಡಿಗೆ ದರವನ್ನು ಪಡೆಯುತ್ತಿರುವ ಬಗ್ಗೆ ರೈತ ಸಂಘಟನೆಗಳು ಹಾಗೂ ರೈತರಿಂದ ನಿರಂತರವಾಗಿ ಜಿಲ್ಲಾಡಳಿತಕ್ಕೆ ದೂರುಗಳು ಸ್ವೀಕೃತವಾಗುತ್ತಿವೆ.
ಜಿಲ್ಲೆಯಲ್ಲಿ ಸರ್ಕಾರದ ನೆರವಿನೊಂದಿಗೆ ಸ್ಥಾಪಿಸಲ್ಪಟ್ಟ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯವಿರುವ ಕರ್ತಾರ್ ಮಾದರಿ ಕಂಬೈನ್ಡ್ ಹಾರ್ವೆಸ್ಟರ್ನ ಕಟಾವಿಗೆ ಜಿಲ್ಲಾ ಸಮಿತಿಯಿಂದ ಪ್ರತಿ ಗಂಟೆಗೆ ರೂ. 1800 ಬಾಡಿಗೆ ದರವನ್ನು ನಿಗದಿಪಡಿಸಲಾಗಿದೆ.
ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಕೇವಲ 8 ಸಂಖ್ಯೆಯ ಕಟಾವು ಯಂತ್ರಗಳು ಮಾತ್ರ ಲಭ್ಯವಿದ್ದು, ಜಿಲ್ಲೆಯ ರೈತರ ಬೇಡಿಕೆಯನ್ನು ಪೂರೈಸಲು ಖಾಸಗಿಯಾಗಿ ಬರುವ ಕಟಾವು ಯಂತ್ರಗಳ ಅವಶ್ಯಕತೆಯಿರುತ್ತದೆ. ಖಾಸಗಿ ಕಟಾವುಯಂತ್ರ ಮಾಲಕರು ರೈತರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ, ಕಾರ್ಯ ನಿರ್ವಹಿಸಬೇಕಾಗಿದ್ದು, ಕೃಷಿ ಯಂತ್ರಧಾರೆ ಕೇಂದ್ರದ ಬಾಡಿಗೆ ದರವನ್ನು ಮಾನದಂಡವಾಗಿಟ್ಟುಕೊಂಡು ರೈತರೊಂದಿಗೆ ಕಟಾವು ದರದ ಬಗ್ಗೆ ಸ್ಥಳೀಯವಾಗಿ ಚರ್ಚಿಸಿ, ನ್ಯಾಯೋಚಿತದರದಲ್ಲಿ ರೈತರಿಗೆ ಹೆಚ್ಚಿನ ಹೊರೆಯಾಗದ ಧಾರಣೆಯನ್ನು ನಿಗದಿಪಡಿಸಿಕೊಂಡು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಭತ್ತದ ಕಟಾವು ಕಾರ್ಯವನ್ನು ಜಿಲ್ಲೆಯಲ್ಲಿ ಕೈಗೊಳ್ಳುವಂತೆ ಖಾಸಗಿ ಯಂತ್ರ ಮಾಲಕರು ಹಾಗೂ ರೈತರಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.
ಯುಪಿಎಸ್ಸಿ, ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶೀಘ್ರದಲ್ಲಿ ತರಬೇತಿ ; ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 21 ಕೊನೆಯ ದಿನ

Posted On: 18-10-2021 10:53PM
ಉಡುಪಿ : ಉಡುಪಿ ಜಿಲ್ಲಾಡಳಿತದ ವತಿಯಿಂದ, ಭಾರತೀಯ ನಾಗರೀಕ ಸೇವಾ ಪರೀಕ್ಷೆ ( ಯುಪಿಎಸ್ಸಿ) ಮತ್ತು ಕರ್ನಾಟಕ ನಾಗರೀಕ ಸೇವಾ ಪರೀಕ್ಷೆ (ಕೆಪಿಎಸ್ಸಿ) ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಇಚ್ಛಿಸುವ ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ, ಶೀಘ್ರದಲ್ಲಿ ತರಬೇತಿಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.
ಕೊನೆಯ ವರ್ಷದ ಪದವಿಯನ್ನು (ಯಾವುದೇ ಪದವಿ) ವ್ಯಾಸಂಗ ಮಾಡುತ್ತಿರುವ ಅಥವಾ ಪದವೀಧರರಾಗಿದ್ದು, ಉದ್ಯೋಗದಲ್ಲಿರುವ / ನಿರುದ್ಯೋಗಿ ವಿದ್ಯಾರ್ಥಿಗಳು ತರಬೇತಿಗೆ ಅರ್ಹರಾಗಿರುತ್ತಾರೆ.
ಉಡುಪಿ ನಗರದ ಸಾರ್ವಜನಿಕ ಗ್ರಂಥಾಲಯನ್ನು ತರಬೇತಿ ಕೇಂದ್ರವಾಗಿಸಿಕೊಂಡು, ನಿಗಧಿಯಾಗಿರುವ ಪಠ್ಯಾನುಸಾರ ತರಗತಿಗಳು, ಗ್ರಂಥಾಲಯ, ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪತ್ರಿಕೆಗಳು, ನಿಯತಕಾಲಿಕೆಗಳು, ಅಂರ್ತಜಾಲದ ವ್ಯಾಪಕ ಬಳಕೆ, ಗುಂಪು ಚರ್ಚೆಗಳು, ಇತ್ಯಾದಿ ಮೂಲಸೌಕರ್ಯ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡಲಾಗುವುದು. ಈ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಯುಪಿಎಸ್ಸಿ/ ಕೆಪಿಎಸ್ಸಿ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ವಿಷಯಗಳಲ್ಲಿ ಪರಿಣಿತಿ ಪಡೆಯಬಹುದಾಗಿದೆ.
ಆಸಕ್ತ ವಿದ್ಯಾರ್ಥಿಗಳಿಗೆ ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲು udupi.nic.in ವೆಬ್ಸೈಟ್ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅಕ್ಟೋಬರ್ 21 ರ ಒಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.