Updated News From Kaup

ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್ ನಲ್ಲಿ ವಿಶೇಷ ಭಜನಾ ಕಾರ್ಯಕ್ರಮ

Thumbnail
Posted On: 31 Dec 2021, 06:25 PM

ಶಿರ್ವ : ಕುತ್ಯಾರು ಸೂರ್ಯಚೈತನ್ಯ ಹೈಸ್ಕೂಲ್ ಆವರಣದಲ್ಲಿರುವ ಭವ್ಯ ಏಕಶಿಲಾ ಪರಶುರಾಮ ವಿಗ್ರಹವನ್ನೊಳಗೊಂಡ ಪರಶುರಾಮೇಶ್ವರ ದೇವಸ್ಥಾನದಲ್ಲಿ ನಾಗೇಶ್ವರ ಭಜನಾ ಮಂಡಳಿ, ಪಡುಬಿದ್ರಿ - ಮೂಲ್ಕಿ ವಲಯ ಇವರಿಂದ ಡಿಸೆಂಬರ್ 31 ರಂದು ವಿಶೇಷ ಭಜನಾ ಕಾರ್ಯಕ್ರಮವು ಜರುಗಿತು. ಭಜನಾ ಮಂಡಳಿಯ ನೇತೃತ್ವವನ್ನು ಶ್ರೀ ಚಂದ್ರಹಾಸ್ ವಹಿಸಿದ್ದರು. ಎಳೆಯ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿ ಸಂಸ್ಕಾರವಂತರನ್ನಾಗಿ ಮಾಡುವ ಕೆಲಸ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ನಡೆಯಬೇಕೆಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ತರುವಾಯ ಮಾತನಾಡಿದ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಅಧ್ಯಕ್ಷ ವಿದ್ವಾನ್ ಶಂಭುದಾಸ ಗುರೂಜಿ ಮಾತನಾಡಿ, ಅಕ್ಷರ ಕಲಿಸುವ ವಿದ್ಯಾಲಯ ಹಾಗೂ ದೇವರ ಸಾನಿಧ್ಯವಿರುವ ದೇವಾಲಯ - ಇವೆರಡೂ ಒಟ್ಟಿಗೆ ಇರುವ ವಿಶೇಷ ಕ್ಷೇತ್ರ ಈ ಪರಶುರಾಮೇಶ್ವರ ಕ್ಷೇತ್ರ ಎಂದು ಬಣ್ಣಿಸಿದರು. ಭಜನೆಗಳು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ಸೌಹಾರ್ದತೆ, ಸಹಬಾಳ್ವೆ ಮತ್ತು ಉದಾರತೆಯ ಸದ್ಗುಣಗಳನ್ನು ಬೆಳೆಸುತ್ತವೆ ಎಂದರು. ಪ್ರಿನ್ಸಿಪಾಲ್ ಗುರುದತ್ತ ಸೋಮಯಾಜಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅಮ್ಚೆ ಸಂಸಾರ್ ಕೊಂಕಣಿ ಸಿನೆಮಾ : ಕೊಲ್ಕತ್ತಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ಗೆ ಆಯ್ಕೆ

Thumbnail
Posted On: 30 Dec 2021, 10:08 PM

ಉಡುಪಿ : ರಾಜಾಪುರ ಸಾರಸ್ವತ ಕೊಂಕಣಿ ಭಾಷೆಯ ಅಮ್ಚೆ ಸಂಸಾರ್ ಕೊಂಕಣಿ ಸಿನೆಮಾ 2021-22 ನೇ ಸಾಲಿನ ಕೊಲ್ಕತ್ತಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಗೆ ಅಧಿಕೃತವಾಗಿ ಆಯ್ಕೆಗೊಂಡಿದೆ. ಈ ಸಿನಿಮಾವನ್ನು ಮಾಡಲು ಕಳೆದ ಎರಡು ವರ್ಷಗಳಿಂದ ನಾವು ಪಟ್ಟ ಪರಿಶ್ರಮಕ್ಕೆ ಇಂದು ಬೆಲೆ ಸಿಕ್ಕಂತಾಗಿದೆ. ಅದೆಷ್ಟೋ ಸಿನೆಮಾ ನಿರ್ದೇಶಕರು, ಸಿನೆಮಾ ತಂಡದವರು ತಾವು ಮಾಡಿದ ಸಿನೆಮಾ ಒಮ್ಮೆಯಾದರೂ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಆಯ್ಕೆ ಆಗಬೇಕು ಎಂಬ ಕನಸನ್ನು ಇಟ್ಟುಕೊಂಡಿರುತ್ತಾರೆ. ನಮ್ಮ ತಂಡದ ಈ ಕನಸು ಇಂದು ನನಸಾಗಿದೆ. ಅಂತರಾಷ್ಟ್ರೀಯ ಸಿನೆಮಾ ಸ್ಪರ್ಧೆಯಲ್ಲಿ ಆಯ್ಕೆಗೊಂಡಿದ್ದು, ಪ್ರಶಸ್ತಿ ಗೆದ್ದಷ್ಟೇ ಖುಷಿ ನಮ್ಮದಾಗಿದೆ ಎಂದು ಅಮ್ಚೆ ಸಂಸಾರ್ ಕೊಂಕಣಿ ಸಿನೆಮಾದ ಛಾಯಾಗ್ರಾಹಕರಾದ ಭುವನೇಶ್ ಪ್ರಭು ಹಿರೇಬೆಟ್ಟು ತಿಳಿಸಿದರು.

ಎರಡು ರಾಷ್ಟ್ರೀಯ ಪಕ್ಷಗಳ ಹಣ ಬಲದಿಂದ ಕೆಲವು ಕ್ಷೇತ್ರಗಳಲ್ಲಿ ಅಲ್ಪ ಮತಗಳಿಂದ ಸೋಲು ; ಮತದಾರ ಬಾಂಧವರಿಗೆ ಧನ್ಯವಾದಗಳು : ಯೋಗೀಶ್ ವಿ. ಶೆಟ್ಟಿ

Thumbnail
Posted On: 30 Dec 2021, 07:14 PM

ಕಾಪು : ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಜನತಾದಳ(ಜಾತ್ಯತೀತ) 7 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು, ನಾಲ್ಕುಕಡೆ ನಾವು ಗೆಲುವಿನ ನಿರೀಕ್ಷೆಯಲ್ಲಿದ್ದೆವು, ಆದರೆ ಎರಡು ರಾಷ್ಟ್ರೀಯ ಪಕ್ಷಗಳ ಹಣ ಬಲದಿಂದ ಕೆಲವು ಕ್ಷೇತ್ರಗಳಲ್ಲಿ ಅಲ್ಪ ಮತಗಳಿಂದ ಸೋತಿದ್ದೇವೆ. ನಮಗೆ ಆರ್ಥಿಕವಾಗಿ ಸ್ವಲ್ಪ ಕಷ್ಟವಾಯಿತು, ಕೊಂಬಗುಡ್ಡೆ ವಾರ್ಡ್ ನಲ್ಲಿ ನಾವು ಗೆಲುವು ಸಾಧಿಸಿದ್ದೇವೆ ಇದು ಪ್ರಾರಂಭ, ಯಾರು ಎಷ್ಟು ಲಘುವಾಗಿ ಮಾತನಾಡಲಿ, ನಾವು ನಮ್ಮದೇ ಆದ ರೀತಿಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸರಿಸಮಾನಾಗಿ ನಿಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ, ಕಾಪು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂಬ ವಿಶ್ವಾಸ ನಮಗೆ ಬಂದಿರುತ್ತದೆ. ಪುರಸಭಾ ಚುನಾವಣೆಯಲ್ಲಿ ಸಹಕರಿಸಿದ ಮತದಾರ ಬಾಂಧವರಿಗೆ ಧನ್ಯವಾದಗಳು ಎಂದು ಜನತಾದಳ(ಜಾತ್ಯತೀತ) ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾಳೆ : Itsoksupport ಫೇಸ್ಬುಕ್ ಪೇಜ್ನಲ್ಲಿಆರ್ ಜೆ ಎರಾಲ್ ರಿಂದ ಸುಮತಾ ನಾಯಕ್ ಅಮ್ಮುಂಜೆ ಸಂದರ್ಶನ

Thumbnail
Posted On: 30 Dec 2021, 06:58 PM

ಉಡುಪಿ : ಮಾನಸಿಕ ಆರೋಗ್ಯ, ಸಂಬಂಧಗಳಲ್ಲಿ ಜೀವಂತಿಕೆ, ಉತ್ತಮ ಆರೋಗ್ಯ ಹಾಗೂ ಮಕ್ಕಳ ಆರೋಗ್ಯಕರ ಬೆಳವಣಿಗೆ ಈ ವಿಚಾರದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡುತ್ತಿದ್ದಾರೆ ಸುಮತಾ ನಾಯಕ್ ಅಮ್ಮುಂಜೆ. ಇವರ ವಿಶೇಷ ಸಂದರ್ಶನವು Itsoksupport ಹೆಸರಿನ ಫೇಸ್ಬುಕ್ ಪೇಜ್ ನಲ್ಲಿ ಆರ್ ಜೆ ಎರಾಲ್ ಅವರೊಂದಿಗೆ ಡಿಸೆಂಬರ್ 31, ಸಂಜೆ 4 ಗಂಟೆಗೆ ಜರಗಲಿದೆ. ಈ ಸಂದರ್ಭ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು‌ ಪ್ರಕಟನೆಯಲ್ಲಿ‌ ತಿಳಿಸಿದ್ದಾರೆ.

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿಉಡುಪಿ : ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ, 'ದೇಯಿ ಬೈದೆದಿ' ಪುಸ್ತಕ, ಭಾವಚಿತ್ರ ಬಿಡುಗಡೆ, ಗರೋಡಿ ಪೂ ಪೂಜಾನೆಕಾರರ ಸಮ್ಮೇಳನ, ಸಮ್ಮಾನ‌

Thumbnail
Posted On: 30 Dec 2021, 06:46 PM

ಉಡುಪಿ : ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) ಆದಿಉಡುಪಿ ಇವರು ಕೊಡಮಾಡುವ ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭವು ಬೈದಶ್ರೀಯಲ್ಲಿ ಜರಗಿತು. ಹಿರಿಯ ಬೈದರ ದರುಶನ ಪಾತ್ರಿ ಕಲ್ಮoಜೆ ರಾಘು ಪೂಜಾರಿ ಹಾಗೂ ಹಿರಿಯ ಗರೋಡಿ ಸೇವಕರಾದ ಅಪ್ಪು ಮಡಿವಾಳ ಇವರಿಗೆ ನಗದು ಸಹಿತ ಪ್ರಶಸ್ತಿ ನೀಡಲಾಯಿತು. ದಾಮೋದರ ಕಲ್ಮಾಡಿ ಹಾಗೂ ಚೆಲುವ ರಾಜ್ ಪೆರಂಪಳ್ಳಿ ಇವರು ಬರೆದ 'ದೇಯಿ ಬೈದೆದಿ' ಕನ್ನಡ ಆವೃತ್ತಿ ಪುಸ್ತಕ ಬಿಡುಗಡೆ ಹಾಗೆಯೇ ವೀನಸ್ ಇಂಟರ್ನ್ಯಾಷನಲ್ ಸಂಸ್ಥೆ ವತಿಯಿಂದ ಹರೀಶ್ ಎಮ್ ಕಲ್ಮಾಡಿ ಯವರು ಕೊಡ ಮಾಡಿದ ' ದೇಯಿ ಬೈದೆದಿ ಭಾವಚಿತ್ರವನ್ನು ಮುಖ್ಯ ಅತಿಥಿ ಅಚ್ಚುತ ಕಲ್ಮಾಡಿಯವರು ಅನಾವರಣಗೊಳಿಸಿದರು. ಸಭೆಯ ಅಧ್ಯಕ್ಷತೆಯನ್ನು ದಾಮೋದರ ಕಲ್ಮಾಡಿ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಲ್ಮಾಡಿ ಗರೋಡಿ ಗೌರವ ಅಧ್ಯಕ್ಷರಾದ ಅಚ್ಚುತ ಕಲ್ಮಾಡಿಯವರು ಮಾತನಾಡುತ್ತ ಇದೊಂದು ಬೈದರ ಸಂಶೋಧನ ಕೇಂದ್ರ ಅಪರೂಪವಾಗಿದ್ದು ಇದನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದರು. ಗರೋಡಿ ಪೂ ಪೂಜಾನೆಕಾರರ ಸಮ್ಮೇಳನ : ಸಂಪನ್ಮೂಲ ವ್ಯಕ್ತಿಗಳಾಗಿ ಕಲ್ಮoಜೆ ರಾಘು ಪೂಜಾರಿ, ಪಾಂಗಳ ಗುಡ್ಡೆ ಗರೋಡಿ ಮನೆ ಸುಧಾಕರ್ ಡಿ ಅಮೀನ್, ಕಿನ್ನಿಮುಲ್ಕಿ ಗರೋಡಿಯ ಭಾಸ್ಕರ್ ಸುವರ್ಣ ಕನ್ನರ್ಪಡಿ ಭಾಗವಹಿಸಿದ್ದರು. ಸಮ್ಮಾನ : ಕರ್ನಾಟಕ ತುಳು ರತ್ನ ಪ್ರಶಸ್ತಿ ಪಡೆದ ಗಂಗಾಧರ್ ಕಿದಿಯೂರ್, ಕರ್ನಾಟಕ ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿ ರಾಜ್ಯ ಸಂಚಾಲಕರಾಗಿ ಆಯ್ಕೆಯಾದ ಎಮ್ ಮಹೇಶ್ ಕುಮಾರ್ ಮಲ್ಪೆ ಹಾಗೂ ಕರ್ನಾಟಕ ಸರಕಾರದಿಂದ ಸ್ಕೌಟ್ ಸೇವೆಗಾಗಿ ವಿಶೇಷ ಪ್ರಶಸ್ತಿಯನ್ನು ರಾಜ್ಯಪಾಲ ರಿಂದ ಪಡೆದ ಶೇಖರ್ ಮಾಸ್ಟರ್ ಕಲ್ಮಾಡಿ ಇವರುಗಳನ್ನು ಸಮ್ಮಾನಿಸಲಾಯಿತು. ಬೈದಶ್ರೀಯ ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್ ಸ್ವಾಗತಿಸಿದರು. ಕೋಶಾಧಿಕಾರಿ ಮಹೇಶ್ ನಯಂಪಲ್ಲಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿಶ್ವಸ್ತರಾದ ಗಂಗಾಧರ್ ಕಿದಿಯೂರು ವಂದನಾರ್ಪಣೆ ಸಲ್ಲಿಸಿದರು.

ಶಂಕರಪುರ : ಸೌಹಾರ್ದತೆ ಮೆರೆದ ಅಯ್ಯಪ್ಪ ಭಕ್ತರು

Thumbnail
Posted On: 30 Dec 2021, 06:20 PM

ಶಿರ್ವ : ಶಂಕರಪುರ ಸೈಂಟ್ ಜಾನ್ಸ್ ಚರ್ಚಿನ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಮುಂಬೈನ ಚಂದ್ರಹಾಸ ಗುರುಸ್ವಾಮಿ ಶಿಷ್ಯರು ಚರ್ಚಿಗೆ ಹೋಗಿ ಕ್ಯಾಂಡಲ್ ಹೊತ್ತಿಸಿ ಪ್ರಾರ್ಥಿಸಿದರು. ಮತಾಂಧರ ಕಿಚ್ಚಿನ ನಡುವೆ ಅಯ್ಯಪ್ಪ ಭಕ್ತರು ಸೌಹಾರ್ದತೆ ಮೆರೆದಿದ್ದಾರೆ. ಶಂಕರಪುರ ಸಾರ್ವಜನಿಕ ಅಯ್ಯಪ್ಪ ಭಕ್ತವೃಂದದ ಅಯ್ಯಪ್ಪ ಭಕ್ತರ ಮತ್ತು ಮುಂಬೈ ಚಂದ್ರಹಾಸ ಗುರುಸ್ವಾಮಿ ಶಿಷ್ಯರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕಾಪು ಪುರಸಭಾ ಚುನಾವಣಾ ಫಲಿತಾಂಶ : ಬಿಜೆಪಿಗೆ ಒಲಿದ ಗದ್ದುಗೆ

Thumbnail
Posted On: 30 Dec 2021, 10:52 AM

ಕಾಪು : ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಜಿದ್ದಾಜಿದ್ದಿನ ಕಣವಾಗಿದ್ದ ಕಾಪು ಪುರಸಭೆಯ ಫಲಿತಾಂಶ ಪ್ರಕಟವಾಗಿದೆ. ಪುರಸಭೆಯ 23 ವಾರ್ಡ್ ಗಳ ಪೈಕಿ ಬಿಜೆಪಿಯು 12 ವಾರ್ಡು, ಕಾಂಗ್ರೆಸ್ 7 ವಾರ್ಡು, ಎಸ್ ಡಿಪಿಐ 3 ಮತ್ತು ಜೆಡಿಎಸ್ ಒಂದು ವಾರ್ಡ್ ನಲ್ಲಿ ಜಯ ಸಾಧಿಸಿದೆ. ಫಲಿತಾಂಶದ ವಿವರ : ಕೋತಲಕಟ್ಟೆ: ಫರ್ಜಾನ (ಕಾಂಗ್ರೆಸ್) ಕೈಪುಂಜಾಲು: ಶೋಭಾ ಎಸ್. ಬಂಗೇರ (ಕಾಂಗ್ರೆಸ್) ಕೊಪ್ಪಲಂಗಡಿ: ನಾಗೇಶ್ (ಬಿಜೆಪಿ) ತೊಟ್ಟಂ: ಸತೀಶ್ಚಂದ್ರ (ಕಾಂಗ್ರೆಸ್) ಕರಾವಳಿ: ಕಿರಣ್ ಆಳ್ವ (ಬಿಜೆಪಿ) ಪೊಲಿಪು ಗುಡ್ಡೆ: ರತ್ನಾಕರ ಶೆಟ್ಟಿ (ಬಿಜೆಪಿ) ದುಗ್ಗನ್ ತೋಟ: ಮಹಮ್ಮದ್ ಆಸಿಫ್ (ಕಾಂಗ್ರೆಸ್) ಮಂಗಳ ಪೇಟೆ: ವಹಿದಾ ಬಾನು (ಎಸ್ ಡಿಪಿಐ) ದಂಡತೀರ್ಥ: ಸುರೇಶ್ ದೇವಾಡಿಗ (ಬಿಜೆಪಿ) ಕಲ್ಯಾ: ಲತಾ ವಿ. ದೇವಾಡಿಗ (ಬಿಜೆಪಿ) ಜನಾರ್ದನ ದೇವಸ್ಥಾನ: ಹರಿಣಿ ದೇವಾಡಿಗ (ಬಿಜೆಪಿ) ಬಡಗರಗುತ್ತು: ವಿದ್ಯಾಲತಾ (ಕಾಂಗ್ರೆಸ್) ಭಾರತ್ ನಗರ: ಅರುಣ್ ಶೆಟ್ಟಿ (ಬಿಜೆಪಿ) ಬೀಡು ಬದಿ: ಅನಿಲ್ ಕುಮಾರ್ (ಬಿಜೆಪಿ) ಕೊಂಬಗುಡ್ಡೆ: ಉಮೇಶ್ ಕರ್ಕೇರ (ಜೆಡಿಎಸ್) ಜನರಲ್ ಶಾಲೆ: ಮೋಹಿನಿ ಶೆಟ್ಟಿ (ಬಿಜೆಪಿ) ಪೊಲಿಪು: ರಾಧಿಕಾ ಸುವರ್ಣ (ಕಾಂಗ್ರೆಸ್) ಗುಜ್ಜಿ: ಸರಿತಾ ಶಂಕರ್ (ಎಸ್ ಡಿಪಿಐ) ಗರಡಿ: ಶೈಲೇಶ್ ಅಮೀನ್ (ಬಿಜೆಪಿ) ಕಾಪು ಪೇಟೆ: ಸರಿತಾ (ಬಿಜೆಪಿ) ಲೈಟ್ ಹೌಸ್: ನಿತಿನ್ (ಬಿಜೆಪಿ) ಕುಡ್ತಿಮಾರ್: ರಫೂಸ್ ಶಾಬು ಸಾಹೇಬ್ (ಕಾಂಗ್ರೆಸ್) ಅಹಮದಿ ಮೊಹಲ್ಲಾ: ನೂರುದ್ದೀನ್ (ಎಸ್ ಡಿಪಿಐ)

ಕರ್ನಾಟಕ ಬಂದ್ ಗೆ ಸಹಕರಿಸಲು ರಿಕ್ಷಾ ಚಾಲಕರ ಸಂಘ, ರಿಕ್ಷಾ ಚಾಲಕರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಮನವಿ

Thumbnail
Posted On: 29 Dec 2021, 08:42 PM

ಉಡುಪಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಹಾಗೂ ಬೆಳಗಾವಿಯಲ್ಲಿ ಎಮ್ ಇಎಸ್ ಸಂಘಟನೆ ಕನ್ನಡ ಬಾವುಟವನ್ನು ಸುಟ್ಟು ಮತ್ತು ಬೆಂಗಳೂರಿನ ಶಿವಾಜಿನಗರದಲ್ಲಿ ಶಿವಾಜಿ ಪ್ರತಿಮೆಯನ್ನು ಭಗ್ನಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಡಿಸೆಂಬರ್ 31ರಂದು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕವು ಕರ್ನಾಟಕ ಬಂದ್ ಗೆ ಕರೆನೀಡಿದ್ದು ಈ ಪ್ರತಿಭಟನೆಗೆ ಸಂಪೂರ್ಣ ಸಹಕಾರ ನೀಡಬೇಕೆಂದು ರಿಕ್ಷಾ ಚಾಲಕರ ಸಂಘಕ್ಕೆ ಮನವಿ ಮಾಡಿದ್ದಾರೆ. ನಮ್ಮ ನೆಲ, ಜಲ ಸಂಸ್ಕೃತಿಯನ್ನು ವಿರೋಧಿಸುವವರ ವಿರುದ್ಧವಾಗಿ ಪ್ರತಿಭಟನೆಯನ್ನು ನಡೆಸುವ ನಿಟ್ಟಿನಲ್ಲಿ ರಿಕ್ಷಾ ಚಾಲಕರ ಸಂಘದಿಂದ ಪ್ರತಿ ಒಬ್ಬರು ಚಾಲಕರು ನಮ್ಮ ಜೊತೆ ಕರ್ನಾಟಕ ಬಂದ್ ಗೆ ಸಂಪೂರ್ಣ ಕೈ ಜೋಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸಂತೋಷ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ, ಪುನರ್ವಸತಿ ಅಧಿನಿಯಮದ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಭೆ

Thumbnail
Posted On: 29 Dec 2021, 07:02 PM

ಉಡುಪಿ : ಮಾನ್ಯುಯಲ್ ಸ್ಕ್ಯಾವೆಂಜರ್ ಪದ್ಧತಿಯು ಅತ್ಯಂತ ಹೇಯ ಪದ್ಧತಿಯಾಗಿದ್ದು, ಈ ಬಗ್ಗೆ ಜಿಲ್ಲೆಯ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ, ಮಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮದ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳಲ್ಲಿನ ಜನರನ್ನು ಮಾನ್ಯುಯಲ್ ಸ್ಕ್ಯಾವೆಂಜರ್ ಕೆಲಸಕ್ಕೆ ಬಳಸಿಕೊಳ್ಳುವ ಸಂಭವವಿದ್ದು, ಈ ಕಾರ್ಯವನ್ನು ಮಾಡದ ಬಗ್ಗೆ ಅಲ್ಲಿನ ಸಾರ್ವಜನಿಕರಿಗೆ ಬೀದಿ ನಾಟಕ ಸೇರಿದಂತೆ ವಿವಿಧ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಿರುವ ಸಮುದಾಯ ಭವನಗಳು ಮತ್ತು ಕಟ್ಟಡಗಳ ಬಳಿ ಜಾಗೃತಿ ಮೂಡಿಸುವ ಜಾಹೀರಾತು ಫಲಕಗಳನ್ನು ಅಳವಡಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಶೌಚಾಲಯಗಳ ನಿರ್ವಹಣೆಗೆ ಸಕ್ಕಿಂಗ್ ಯಂತ್ರಗಳನ್ನು ಬಳಸುವಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಮಾನ್ಯುಯಲ್ ಸ್ಕ್ಯಾವೆಂಜರ್ಗಳ ಸಮೀಕ್ಷೆಯನ್ನು ನಡೆಸಲಾಗಿದ್ದು, ಯಾರೂ ಪತ್ತೆಯಾಗಿರುವುದಿಲ್ಲ. ಈಗಾಗಲೇ ಯಾರಾದರೂ ಮಾನ್ಯುಯಲ್ ಸ್ಕ್ಯಾವೆಂಜರ್ ಕಾರ್ಯವನ್ನು ನಿರ್ವಹಿಸಿದ್ದಲ್ಲಿ ಅವರ ವಿವರಗಳನ್ನು ಸಂಗ್ರಹಿಸಿ, ಅವರಿಗೆ ಸೂಕ್ತ ಪುನರ್ವಸತಿ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ಅತಂಹ ವ್ಯಕ್ತಿಗಳಿಗೆ ಸಕ್ಕಿಂಗ್ ವಾಹನಗಳನ್ನು ಖರೀದಿಸಲು ಧನಸಹಾಯ ಮತ್ತಿತರ ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಿದರು. ಕೊಂಕಣ ರೈಲ್ವೆಯಲ್ಲಿ ಯಾವುದೇ ಮಾನ್ಯುಯಲ್ ಸ್ಕಾö್ಯವೆಂಜರ್ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸಫಾಯಿ ಕರ್ಮಚಾರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಸಮವಸ್ತ್ರ, 2 ಡೋಸ್ ಕೋವಿಡ್ ಲಸಿಕೆ, ಎಲ್ಲಾ ರೀತಿಯ ಅಗತ್ಯ ಸುರಕ್ಷಾ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದರು. ಮಾನ್ಯುಯಲ್ ಸ್ಕ್ಯಾವೆಂಜರ್ಗಳನ್ನು ಬಳಸುವುದೂ ಸಹ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಅರಿವು ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಎಎಸ್ಪಿ ಕುಮಾರ ಚಂದ್ರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಕುವೆಂಪು ಅವರ ವಿಶ್ವಮಾನವ ಸಂದೇಶ ನಿತ್ಯ ಸತ್ಯ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Thumbnail
Posted On: 29 Dec 2021, 06:48 PM

ಉಡುಪಿ : ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು, ನಿತ್ಯ ಸತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ, ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ, ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವ ಮಾನವವಾಗಿರುತ್ತದೆ. ಬೆಳೆಯುತ್ತಾ ಹೋದಂತೆ ಜಾತಿ, ಅಂತಸ್ತು ಮುಂತಾದ ಭೇಧ-ಭಾವಗಳ ಮೂಲಕ ಅವನನ್ನು ನಾವು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಅದರೆ ಅವನನ್ನು ವಿಶ್ವ ಮಾನವನನ್ನಾಗಿಯೇ ಇರಲು ಬಿಡಬೇಕು ಎಂಬುದು ಕುವೆಂಪು ಅವರ ವಿಶ್ವ ಮಾನವ ಸಂದೇಶ. ಯಾವುದೇ ಭೇಧ-ಭಾವ ತೋರದೇ ಪ್ರತಿಯೊಬ್ಬರಿಗೂ ಶಿಕ್ಷಣವನ್ನು ನೀಡುವ ಮೂಲಕ ವಿದ್ಯೆಯಿಂದ ಅಲ್ಪ ಮಾನವನನ್ನು ವಿಶ್ವ ಮಾನವರನ್ನಾಗಿ ಮಾಡಲು ಸಾಧ್ಯವಿದ್ದು, ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಪ್ರತಿ ನಿತ್ಯ ಕುವೆಂವು ಅವರ ಸಂದೇಶಗಳು ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಕೋವಿಡ್-19 ರ ಈ ಅವಧಿಯಲ್ಲಿ ಕುವೆಂಪು ಅವರ ವಿಶ್ವ ಮಾನವ ಸಂದೇಶ ಅತ್ಯಂತ ಪ್ರಸ್ತುತವಾಗಿದ್ದು, ವಿಶ್ವದ ಯಾವುದೋ ಮೂಲೆಯಲ್ಲಿ ಕೋವಿಡ್-19 ಉಲ್ಬಣಗೊಂಡಿದೆ ಎಂದು ನಾವು ಇಲ್ಲಿ ಕೋವಿಡ್ ನಿಯಮಗಳ ಪಾಲನೆ ಮಾಡದೇ ಇರಬಾರದು. ಪ್ರತಿಯೊಬ್ಬರೂ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸುವುದರ ಮೂಲಕ ಇಡೀ ವಿಶ್ವದಿಂದ ಕೋವಿಡ್-19 ನಿರ್ಮೂಲನೆಗೊಳಿಸಲು ಹೋರಾಡಿದಲ್ಲಿ ವಿಜಯ ಸಾಧ್ಯವಾಗಲಿದೆ. ಕುವೆಂಪು ಅವರ ಜೀವನ ಮತ್ತು ಸಂದೇಶ ಎಲ್ಲರಿಗೂ ಸದಾ ದಾರಿ ದೀಪವಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಕುವೆಂಪು ಕುರಿತು ವಿಶೇಷ ಉಪನ್ಯಾಸ ನೀಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕುವೆಂಪು ಅವರು 20 ನೇ ಶತಮಾನದ ದೈತ್ಯ ಪ್ರತಿಭೆ. ಅವರ ವಿಶ್ವ ಮಾನವ ಪ್ರಜ್ಞೆ ಎಲ್ಲೆಡೆ ಮೂಡಬೇಕು. ಜಿಲ್ಲಾ ಕ.ಸಾ.ಪ ವತಿಯಿಂದ ಕುವೆಂಪು ಕುರಿತು ಕಿರು ಪುಸ್ತಕಗಳನ್ನು ಮುದ್ರಿಸಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ವಿತರಿಸುವ ಯೋಜನೆಯಿದ್ದು, ಜಿಲ್ಲೆಯಲ್ಲಿ ಹೆಸರಿಡದ ಅನೇಕ ರಸ್ತೆಗಳಿದ್ದು, ಅವುಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಪ್ರಸಿದ್ಧ ಕವಿಗಳ ಹೆಸರುಗಳನ್ನು ಇಡಬೇಕು. ಪ್ರತೀ ಮನೆಯಲ್ಲೂ ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಬೇಕು. ಕುವೆಂಪು ಶತಮಾನೋತ್ಸವ ಶಾಲೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ಕುವೆಂಪು ಅವರ ದಿನಚರಿ ನೆನಪಿನ ದೋಣಿಯಲ್ಲಿ ಕೃತಿಯನ್ನು ಪ್ರತಿಯೊಬ್ಬರೂ ಓದುವುದರ ಮೂಲಕ ಅವರ ಜೀವನವನ್ನು ಅರಿಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕಲಾವತಿ ದಯಾನಂದ್ ಅವರಿಂದ ಕುವೆಂಪು ಅವರ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ವಂದಿಸಿದರು.