Updated News From Kaup

ಕೌಶಲ್ಯ ತರಬೇತಿಯಿಂದ ಕೈದಿಗಳಿಗೆ ಸ್ವಾವಲಂಬಿ ಜೀವನ ಸಾಧ್ಯ : ನ್ಯಾ.ಶರ್ಮಿಳಾ

Thumbnail
Posted On: 01 Dec 2021, 11:23 PM

ಉಡುಪಿ : ಜೈಲು ಎಂದರೆ ಕೈದಿಗಳಿಗೆ ಶಿಕ್ಷೆ ನೀಡುವುದು ಮಾತ್ರವಲ್ಲ ಅವರ ಮನ: ಪರಿವರ್ತನೆ ಮಾಡುವ ಕೇಂದ್ರಗಳೂ ಆಗಿದ್ದು, ಜೈಲಿನಲ್ಲಿದ್ದ ಅವಧಿಯಲ್ಲಿ ಕೈದಿಗಳು ಕೌಶಲಯುಕ್ತ ತರಬೇತಿ ಪಡೆಯುವುದರಿಂದ, ಬಿಡುಗಡೆಯ ನಂತರ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಹೇಳಿದರು. ಅವರು ಇಂದು ಕಾಜಾರಗುತ್ತುನಲ್ಲಿನ ಜಿಲ್ಲಾ ಕಾರಾಗೃಹದಲ್ಲಿ, ಕಾರಾಗೃಹ ಮತ್ತು ಸುಧಾರಣಾ ಸೇವೆ, ಜಿಲ್ಲಾ ಕಾರಾಗೃಹ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ, ಜಿಲ್ಲಾ ಕೌಶಲ್ಯ ಆಭಿವೃದ್ಧಿ ಇಲಾಖೆ, ಆರ್ಟ್ ಆಫ್ ಲಿವಿಂಗ್ ಉಡುಪಿ ಸಹಯೋಗದಲ್ಲಿ, ಕಾರಾಗೃಹ ಬಂಧಿಗಳು ಮತ್ತು ಸಿಬ್ಬಂದಿಗಳ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ಆಯೋಜಿಸಿದ್ದ ಯೋಗ ತರಬೇತಿ ಸಮಾರಂಭ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರಾಗೃಹದಲ್ಲಿನ ಕೈದಿಗಳಿಗೆ ಕೌಶಲ್ಯ ತರಬೇತಿ ನೀಡುವುದರಿಂದ ಅವರ ಬಿಡುಗಡೆಯ ನಂತರ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಲು ಸಹಾಯವಾಗುತ್ತದೆ. ಅಲ್ಲದೇ ಶಿಕ್ಷೆಯ ಅವಧಿಯಲ್ಲಿ ಯಾವುದಾದರೊಂದು ಕಾರ್ಯದಲ್ಲಿ ತೊಡಗಿಕೊಳ್ಳುವುದರಿಂದ ಅವರ ಮಾನಸಿಕ ಅರೋಗ್ಯ ಮತ್ತು ಆತ್ಮ ವಿಶ್ವಾಸ ವೃದ್ಧಿಯಾಗುತ್ತದೆ. ಕೆಟ್ಟ ಆಲೋಚನೆಗಳು ಅವರಲ್ಲಿ ಮೂಡುವುದಿಲ್ಲ ಹಾಗೂ ಅವರಲ್ಲಿನ ಕೌಶಲ್ಯ ಪ್ರತಿಭೆ ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಈ ಕಾರ್ಯ ಪ್ರಶಂಸನೀಯವಾದುದು ಎಂದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಮಾತನಾಡಿ, ಬದಲಾವಣೆ ಬೆಳವಣಿಗೆಯ ಸಂಕೇತ. ಕೌಶಲ್ಯ ತರಬೇತಿಯ ಮೂಲಕ ಕೈದಿಗಳು ಹೊಸ ಬದುಕಿಗೆ ಕಾಲಿಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ತಪ್ಪಿನಿಂದ ಮತ್ತೊಬ್ಬರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು. ಎಲ್ಲರನ್ನೂ ಕ್ಷಮಿಸುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ ಎಂದರು. ಆರ್ಟ್ ಆಫ್ ಲಿವಿಂಗ್ ಉಡುಪಿಯ ಯೋಗ ಶಿಕ್ಷಕಿ ವಿಮಲಾಕ್ಷಿ ದಿವಾಕರ್ ಯೋಗದ ಮಹತ್ವದ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಜಗದೀಶ್, ಯೋಗ ಶಿಕ್ಷಕ ರವಿ ಬಂಗೇರಾ, ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾರಾಗೃಹದ ಅಧೀಕ್ಷಕ ಶ್ರೀನಿವಾಸ್ ,ಸ್ವಾಗತಿಸಿ ವಂದಿಸಿದರು.

ಉಡುಪಿ : ವಿಶ್ವ ಏಡ್ಸ್ ದಿನ ಕಾರ್ಯಕ್ರಮ

Thumbnail
Posted On: 01 Dec 2021, 11:15 PM

ಉಡುಪಿ : ಏಡ್ಸ್ ರೋಗದ ಬಗ್ಗೆ ಪ್ರತಿಯೊಬ್ಬರೂ ಅರಿವನ್ನು ಹೊಂದಿ ಜಾಗೃತರಾದಾಗ ಮಾತ್ರ ರೋಗದಿಂದ ದೂರ ಉಳಿಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು. ಅವರು ಇಂದು ನಗರದ ಅಂಬಲಪಾಡಿ ರಾಷ್ಟ್ರೀಯ ಸ್ವಸಹಾಯ ಸಂಘ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿದ್ಯಾರತ್ನ ಸ್ಕೂಲ್ & ಕಾಲೇಜ್ ಆಫ್ ನರ್ಸಿಂಗ್, ಲಯನ್ಸ್ ಕ್ಲಬ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಷ್ಟ್ರೀಯ ಸ್ವಸಹಾಯ ಸಂಘ ತರಬೇತಿ ಸಂಸ್ಥೆ ಉಡುಪಿ ಹಾಗೂ ಶ್ರೀ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ರೆಡ್ಕ್ರಾಸ್ ಮತ್ತು ಎನ್.ಎಸ್.ಎಸ್ ಘಟಕ ಉದ್ಯಾವರ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಳೆದ ಎರಡು ವರ್ಷದಿಂದ ವಿಶ್ವವನ್ನೇ ಕೋವಿಡ್ ಸೋಂಕು ಕಾಡುತ್ತಿದೆ. ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಹೆಚ್ಚು ಮಹತ್ವ ಕೊಡುವುದರ ಜೊತೆಗೆ ಜಾಗೃತಿ ವಹಿಸಬೇಕು. ಏಡ್ಸ್ ಸೋಂಕಿತರಿಗೆ ಕೋವಿಡ್ ಸೋಂಕು ತಗುಲಿದಾಗ ಅದರ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಹಿನ್ನೆಲೆ ಅವು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದರು. ಜಿಲ್ಲೆಯ ಪ್ರತಿಯೊಬ್ಬ ನಾಗರಿಕರೂ ಕೋವಿಡ್ ನಿರೋಧಕ ಚುಚ್ಚುಮದ್ದಿನ ಎರಡು ಡೋಸ್ಗಳನ್ನು ತಪ್ಪದೇ ಪಡೆಯಬೇಕು ಎಂದ ಅವರು, ಸಂಘ- ಸಂಸ್ಥೆಗಳು, ಸಮುದಾಯದ ಮುಖಂಡರುಗಳು, ಎಲ್ಲರೂ ಕೋವಿಡ್ ಲಸಿಕೆ ಪಡೆಯದೇ ಇರುವುದರಿಂದ ಆಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿ, ಲಸಿಕೆ ಪಡೆಯುವಂತೆ ಜಾಗೃತಿ ವಹಿಸಬೇಕು ಎಂದರು. ಹೆಚ್.ಐ.ವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆ ಮಾಡದೇ ರಕ್ತ ಪಡೆಯುವುದು, ಸೋಂಕಿತ ತಾಯಿಯಿಂದ ಹುಟ್ಟುವ ಮಗುವಿಗೆ ಗರ್ಭಾವಸ್ಥೆಯಲ್ಲಿ ಹಾಗೂ ಸೋಂಕಿತರ ಸೂಜಿ, ಸಿರಿಂಜ್ಗಳನ್ನು ಸಂಸ್ಕರಿಸದೇ ಬಳಸುವುದರಿಂದ ಹರಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು. ಜಿಲ್ಲೆಯಲ್ಲಿ 3,826 ಸೋಂಕಿತರನ್ನು ಗುರುತಿಸಿ, ಅವರುಗಳಿಗೆ ಎ.ಆರ್.ಟಿ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದ ಅವರು, ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ ಜನನ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹೆಚ್.ಐ.ವಿ ಸೋಂಕು ತಗಲದೇ ಇರುವಂತೆ ಆರೋಗ್ಯ ಇಲಾಖೆಯವರು ಎಚ್ಚರ ವಹಿಸಿರುತ್ತಾರೆ ಎಂದರು. ಅಸಮಾನತೆಯನ್ನು ಹೋಗಲಾಡಿಸಿದರೆ ಕೋವಿಡ್ ಸೋಂಕು ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳನ್ನು ಹೋಗಲಾಡಿಸುವುದು ಸುಲಭ ಎಂದ ಅವರು, ಈ ಬಾರಿಯ ಏಡ್ಸ್ ದಿನಾಚರಣೆಯನ್ನು “ಅಸಮಾನತೆಯನ್ನು ಕೊನೆಗೊಳಿಸಿ, ಏಡ್ಸನ್ನು ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಇದಕ್ಕೆ ನಾವೆಲ್ಲರೂ ಬದ್ಧರಾಗೋಣ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ಹೆಚ್.ಐ.ವಿ ವೈರಾಣು ಮನುಷ್ಯನ ರೋಗ ನಿರೋಧಕ ವ್ಯವಸ್ಥೆಯನ್ನು ಹಾಳು ಗೆಡವುತ್ತದೆ. ಇದರಿಂದಾಗಿ ಇತರೆ ಸಾಮಾನ್ಯ ಕಾಯಿಲೆಗಳು ಬಂದಾಗ ಅವುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕುಂದಿಸುತ್ತದೆ ಎಂದರು. ಸಮಾಜದಲ್ಲಿ ಸೋಂಕಿತರಿಗೆ ಮಾನಸಿಕ ಸ್ಥೆöÊರ್ಯ ತುಂಬುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದ ಅವರು, ಸೋಂಕಿತರು ಸಾವೇ ಗತಿಯೆಂಬ ಮನೋಭಾವ ಹೊಂದಿ ಪೂರ್ಣಗ್ರಹ ಪೀಡಿತರಾಗದೇ ಅದರ ವಿರುದ್ಧ ಹೋರಾಡುವ ಮನೋಭಾವವನ್ನು ಬೆಳೆಸಿಕೊಂಡು ವೈದ್ಯರ ಸಲಹೆಯನ್ನು ಪಡೆಯುವುದರೊಂದಿಗೆ ಚಿಕಿತ್ಸೆ ಪಡೆಯಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಮಾತನಾಡಿ, ಏಡ್ಸ್ ರೋಗ ಹೊಂದಿದವರನ್ನು ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿಸಲು ಸಾಧ್ಯ ಇಲ್ಲದೇ ಇದ್ದರೂ, ಬಾಧಿತರು ಪೌಷ್ಠಿಕ ಆಹಾರಗಳನ್ನು ಸೇವಿಸಿ, ಚಿಕಿತ್ಸೆ ಪಡೆಯುವುದರಿಂದ ಇತರರಂತೆ ಸಾಮಾನ್ಯವಾಗಿ ಜೀವನ ಸಾಗಿಸಿ, ದೀರ್ಘಕಾಲ ಬದುಕುವ ಅವಕಾಶ ಇದೆ ಎಂದರು. ರೋಗದ ಪರೀಕ್ಷೆಗಳನ್ನು ಹೆಚ್ಚು ಮಾಡಿದಾಗ ಸೋಂಕಿತರನ್ನು ಶೀಘ್ರದಲ್ಲಿಯೇ ಗುರುತಿಸಿ, ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಉತ್ತಮ ಸೇವೆಯನ್ನು ಗುರುತಿಸಿ, ನೋಡೆಲ್ ಅಧಿಕಾರಿ ಡಾ. ಚಂದ್ರಶೇಖರ್ ಅಡಿಗ, ಹೆಚ್.ಐ.ವಿ ಸೋಂಕಿತ ತಾಯಿಗೆ ಹುಟ್ಟಿದ ಮಕ್ಕಳ ನೇರ ನಿಗಾವಣೆ ಮಾಡಿದ ಮಣಿಪಾಲ ಕೆ.ಎಮ್.ಸಿ ಯ ಮಕ್ಕಳ ತಜ್ಞ ಡಾ.ಲೆಸ್ಲೀ ಎಡ್ವರ್ಡ್ ಎಸ್. ಲೂಯಿಸ್, ಲಾಕ್ಡೌನ್ ಸಮಯದಲ್ಲಿ ಹೆಚ್ಚು ಹೆಚ್.ಐ.ವಿ ಸೋಂಕಿತರಿಗೆ ಎ.ಆರ್.ಟಿ ಔಷಧ ವಿತರಣೆ ಮಾಡಿದ ಬಿಂದಿಯಾ ಶೆಟ್ಟಿ, ಜಿಲ್ಲಾ ಆಸ್ಪತ್ರೆಯ ಐ.ಸಿ.ಟಿ.ಸಿ ಪ್ರಯೋಗಶಾಲಾ ತಂತ್ರಜ್ಞರಾದ ರವೀಂದ್ರ ಖಾರ್ವಿ, ಎ.ಆರ್.ಟಿ ಕೇಂದ್ರದ ಕೇರ್ ಕೋ-ಆರ್ಡಿನೇಟರ್ ಸುಪ್ರೀತಾ, ಹೆಚ್.ಐ.ವಿ ಸೋಂಕಿತ ನೊಂದ ಸಮುದಾಯಕ್ಕೆ ವಿಶೇಷ ಕಾಳಜಿ ಮತ್ತು ಕೊಡುಗೆ ನೀಡಿದ ಭಾರ್ಗವಿ ಆರ್ ಐತಾಳ್ ಹಾಗೂ ಭಾರತೀಯ ರೆಡ್ಕ್ರಾಸ್ ಸೊಸೈಟಿ ಕುಂದಾಪುರದ ಅಧ್ಯಕ್ಷ ಜಯಕರ ಶೆಟ್ಟಿ, ಹೆಚ್.ಐ.ವಿ ಸೋಂಕಿತ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ ಜಯಶ್ರೀ ಭಟ್ ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್, ಎನ್.ಎಸ್.ಎಸ್ ವಿಭಾಗಗಳ ಮೂಲಕ ನಿರಂತರವಾಗಿ ರಕ್ತದಾನ ಶಿಬಿರ, ಹೆಚ್.ಐ.ವಿ ಏಡ್ಸ್ ಮಾಹಿತಿ ಕಾರ್ಯಾಗಾರಗಳನ್ನು ಕಾಲೇಜಿನಲ್ಲಿ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ನೀಡುವಲ್ಲಿ ಶ್ರಮಿಸಿದ ನಗರದ ಸರ್ಕಾರಿ ಪಾಲಿಟೆಕ್ನಿಕ್ನ ಎನ್.ಎಸ್.ಎಸ್ ಅಧಿಕಾರಿ ಶಿವಪ್ರಸಾದ್ ಶೆಟ್ಟಿ, ಕಾರ್ಕಳ ಮಂಜುನಾಥ ಪೈ ಮೆಮೋರಿಯಲ್ ಕಾಲೇಜಿನ ಲೈಬ್ರೇರಿಯನ್ ವೆಂಕಟೇಶ್ ಹಾಗೂ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಬಾಲರಾಜ್ ಇವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ನ ರವಿರಾಜ್ ನಾಯಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕ ಗಣೇಶ್ ವಿ, ಆಸರೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಸಂಜೀವ್ ವಂಡ್ಸೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್, ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಎಸ್.ವಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ನಿರೂಪಿಸಿದರು.

ವಾಹನಗಳ ಬ್ಯಾಟರಿ ಕಳ್ಳತನ - 2 ಲಕ್ಷ 70 ಸಾವಿರ ಮೌಲ್ಯದ ಸೊತ್ತುಗಳ ವಶ

Thumbnail
Posted On: 01 Dec 2021, 08:34 PM

ಮಂಗಳೂರು : ಕೊಣಾಜೆ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ಸುಟ್ಟಾಡಿ ಕ್ರಾಸ್ ಎಂಬಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ವಾಹನಗಳ ತಪಾಸಣೆ ಮಾಡುವ ಸಂದರ್ಭ ಮೂಳೂರು ಕಡೆಯಿಂದ ಬಂದ ಟಾಟಾ ಎಸಿ ವಾಹನವನ್ನು ನಿಲ್ಲಿಸಿದಾಗ 10 ಬ್ಯಾಟರಿಗಳು ಕಂಡು ಬಂದಿದ್ದು, ಈ ಬಗ್ಗೆ ವಾಹನದಲ್ಲಿದ್ದವರನ್ನು ವಿಚಾರಿಸಲಾಗಿ ಕಳವು ಮಾಡಿ ಇಟ್ಟುಕೊಂಡಿರುವುದನ್ನು ಮಾರಾಟ ಮಾಡಲು ತೆಗೆದುಕೊಂಡು ಬಂದಿರುತ್ತೇವೆ ಎಂದು ಒಪ್ಪಿಕೊಂಡಿರುತ್ತಾರೆ. ಕಡಬ ತಾಲೂಕಿನ ಎರ್ಮಾಳ್ ಮನೆ ಕುಂತ್ತೂರು ಪೆರಬೆ ಆಲಂಕಾರುವಿನ ರಾಜೀಕ್ ಕೆ (27) ಮತ್ತು ಬಂಟ್ವಾಳ ತಾಲೂಕಿನ ವಾಸಪತ್ರಿಕೋಡಿ ಮನೆ ಕೆದಿಲ ಗ್ರಾಮದ ಸಿನಾನ್ (24) ಬಂಧಿತರಾಗಿದ್ದಾರೆ. ಬಂಧಿತರಿಂದ 2 ಲಕ್ಷ ರೂ. ಮೌಲ್ಯದ ಟಾಟಾ ಎಸ್, 70 ಸಾವಿರ ಮೌಲ್ಯದ ಬ್ಯಾಟರಿಗಳು, ಒಟ್ಟು ಮೌಲ್ಯ 2 ಲಕ್ಷದ 70 ಸಾವಿರ ಎಂದು ಅಂದಾಜಿಸಲಾಗಿದೆ. ಮಹಮ್ಮದ್ ಶರೀಶ್ ಎಂಬವರ ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿರುವ ಸೈಟ್ ನಲ್ಲಿ ನಿಲ್ಲಿಸಿದ ಲಾರಿ, ಹಿಟಾಚಿ, ಜೆಸಿಬಿಗಳ 7 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿರುವ ಬಗ್ಗೆ ದೂರನ್ನು ದಾಖಲಿಸಿದ್ದರು. ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶಶಿಕುಮಾರ್‌ ರವರ ನಿರ್ದೇಶನದಂತೆ, ಹರಿರಾಂ ಶಂಕರ್, ಡಿ.ಸಿ.ಪಿ. (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ದಿನೇಶ್ ಕುಮಾರ್ ಬಿ. ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ)ರವರ ಸಲಹೆಯಂತೆ, ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಂಜಿತ್ ಕುಮಾರ್ ಬಂಡಾರುರವರ ಮಾರ್ಗದರ್ಶನದಲ್ಲಿ ಕೊಣಾಜೆ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರರವರ ನೇತೃತ್ವದಲ್ಲಿ ಎಎಸ್‌ಐ ಮೋಹನ್, ಪಿಸಿ ಅಶೋಕ್, ಪಿಸಿ ಪುರುಷೋತ್ತಮ್, ಪಿಸಿ ಶಿವಕುಮಾರ್‌ ರವರು ಭಾಗವಹಿಸಿರುತ್ತಾರೆ.

ಕ್ರೀಡಾಕೂಟಗಳಿಂದ ಹೊಸ ಪ್ರತಿಭೆ ಉದಯ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Thumbnail
Posted On: 01 Dec 2021, 08:08 PM

ಉಡುಪಿ : ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಹೊಸಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯವಿದ್ದು, ಕ್ರೀಡಾಪಟುಗಳು ಕ್ರೀಡಾ ಮನೋಭಾವ ಮತ್ತು ಕ್ರೀಡಾಸ್ಪೂರ್ತಿಯಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೆಳಿದರು. ಅವರು ಇಂದು ನಗರದ ಚಂದು ಮೈದಾನದಲ್ಲಿ ,ಉಡುಪಿ ಗೃಹರಕ್ಷಕದಳದ ವತಿಯಿಂದ ನಡೆದ ಪಶ್ಚಿಮವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟ 2021 ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೆಚ್ಚಿನ ದೈಹಿಕ ಚಟುವಟಿಕೆಗಳು ಆಗಲಿದ್ದು, ಇದು ಆರೊಗ್ಯದ ದೃಷ್ಠಿಯಿಂದ ಅತ್ಯಂತ ಉತ್ತಮವಾದುದು , ಕೋವಿಡ್ ನಿಂದ ರಕ್ಷಿಸಿಕೊಳ್ಳಲು ಉತ್ತಮ ಆರೋಗ್ಯ ಹೊಂದುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಕೂರ್ಮಾರಾವ್ ಎಂ ಹೇಳಿದರು. ಕಾರ್ಯಕ್ರಮದಲ್ಲಿ ಎಎಸ್ಪಿ ಕುಮಾರಚಂದ್ರ, ಕೆಎಂಸಿ ಡೀನ್ ಡಾ. ಶರತ್ ಕೆ ರಾವ್, ಅಸೋಸಿಯೇಷನ್ ಆಫ್ ಕನ್ಸ್ಲ್ಟಿಂಗ್ ಸಿವಿಲ್ ಇಂಜಿನಿರ್ಸ್ ಮತ್ತು ಆರ್ಕಿಟೆಕ್ಟ್ಸ್ ಉಡುಪಿಯ ಅಧ್ಯಕ್ಷ ಎಂ.ಗೋಪಾಲಭಟ್ ಮತ್ತಿತರರು ಉಪಸ್ಥಿತರಿದ್ದರು. ಗೃಹರಕ್ಷಕ ಸಿಬ್ಬಂದಿಯಿಂದ ಆಕರ್ಷಕ ಪೆರೇಡ್ ನಡೆಯಿತು. ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಸಮಾದೇಷ್ಟ ರಮೇಶ್ ಪ್ರಮಾಣವಚನ ಭೋಧಿಸಿದರು. ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಸ್ವಾಗತಿಸಿದರು, ಸಾಯಿನಾಥ್ ಉದ್ಯಾವರ ಮತ್ತು ಲಕ್ಷ್ಮೀ ನಾರಾಯಣ ರಾವ್ ನಿರೂಪಿಸಿದರು, ಶ್ಯಾಮಲಾ ವಂದಿಸಿದರು. ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗೃಹರಕ್ಷಕ ಸಿಬ್ಬಂದಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ, ಉಡುಪಿ : ವಾರ್ಷಿಕ ಸಾಮಾನ್ಯ ಸಭೆ

Thumbnail
Posted On: 01 Dec 2021, 05:40 PM

ಉಡುಪಿ : ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ, ಉಡುಪಿ, ಇದರ 2020 - 2021ನೇ ಸಾಲಿನ 19ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ನವೆಂಬರ್ 28, ಭಾನುವಾರ ಬಿಲ್ಲವರ ಸೇವಾ ಸಂಘ (ರಿ), ಬನ್ನಂಜೆ ಉಡುಪಿ ಇದರ ಶಿವಗಿರಿ ಸಭಾಂಗಣದಲ್ಲಿ ಜರುಗಿತು. ಆರ್ಯ ಈಡಿಗ ಮಹಾಸಂಸ್ಥಾನ, ನಾರಾಯಣಗುರು ಮಠ, ರೇಣುಕಾ ಪೀಠ, ಸೋಲುರೂ, ಬೆಂಗಳೂರು ಇದರ ಪೀಠಾಧಿಪತಿ ಶ್ರೀಶ್ರೀಶ್ರೀ ವಿಖ್ಯಾತಾನಂದ ಸ್ವಾಮಿಜೀಯವರು ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನವನ್ನು ನೀಡಿದರು. ಬ್ಯಾಂಕಿನ ಅಧ್ಯಕ್ಷರು ಸಭೆಯನ್ನು ಉದ್ದೇಶಿಸಿ, ಕೋವಿಡ್-19ರ ಕೇಂದ್ರ ಸರಕಾರದ ಆದೇಶ ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮದಂತೆ ಸವಲತ್ತುಗಳನ್ನು ಗ್ರಾಹಕರಿಗೆ ನೀಡಲಾಗಿದ್ದು, ಗ್ರಾಹಕರ ಮತ್ತು ಸದಸ್ಯರ ಸಂಪೂರ್ಣ ಸಹಕಾರದಿಂದ ಬ್ಯಾಂಕ್ ಪ್ರಗತಿ ಸಾಧಿಸಿದೆ. ಸ್ವ-ಸಹಾಯ ಗುಂಪುಗಳಿಗೆ ಅತೀ ಕಡ್ಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತಿದ್ದು, ಚಿನ್ನಾಭರಣ ಈಡಿನ ಸಾಲ, ವಾಹನ ಸಾಲ, ಅಡಮಾನ ಸಾಲ, ಭದ್ರತಾ ಸಾಲ, ಗೃಹ ನಿರ್ಮಾಣ ಸಾಲ, ವೈಯುಕ್ತಿಕ ಸಾಲ, ವೇತನ ಆಧಾರಿತ ಸಾಲ ಹಾಗೂ ವ್ಯಾಪಾರ ಅಭಿವೃದ್ಧಿ ಸಾಲಗಳನ್ನು ನೀಡುತ್ತಿದ್ದು, ವಾಣಿಜ್ಯ ಬ್ಯಾಂಕಿನ ಬಡ್ಡಿ ದರಕ್ಕೆ ಸ್ಪರ್ಧಾತ್ಮಕವಾಗಿ ಸಾಲ ನೀಡಲಾಗುತ್ತಿದೆ ಎಂದರು. ಉಪಾಧ್ಯಕ್ಷರಾದ ವಿಜಯಾ ಜಿ ಬಂಗೇರ, ನಿರ್ದೇಶಕರಾದ ಕೆ. ಜಯಕುಮಾರ್‌, ಜಯಕುಮಾರ್‌ ಪರ್ಕಳ, ಬಿ.ಬಿ. ಪೂಜಾರಿ, ನವೀನ್ ಅಮೀನ್, ನಂದಕುಮಾರ್, ಆನಂದ ಜತ್ತನ್ನ, ಕೆ. ರಾಘವ, ಶಕುಂತಲಾ ಶ್ರೀನಿವಾಸ್, ಶಿವಾಜಿ ಸುವರ್ಣ, ಡಿ.ಆರ್ ರಾಜು, ಮತ್ತು ವೃತ್ತಿಪರ ನಿರ್ದೇಶಕರಾದ ಅಶೋಕ್ ಕುಮಾರ್, ಸಭೆಯಲ್ಲಿ ಉಪಸ್ಥಿತರಿದ್ದರು. ಸಲಹಾ ಸಮಿತಿ ಸದಸ್ಯರಾದ ರಾಮಚಂದ್ರ ಕಿದಿಯೂರು, ಸೂರ್ಯ ಪ್ರಕಾಶ್ ಹಾಗೂ ಸದಸ್ಯರಾದ ಶೇಖರ್ ಬಿ ಪೂಜಾರಿ ಮತ್ತು ಎ. ರವಿ ಇವರು ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಸಲಹೆಯನ್ನು ನೀಡಿದರು. ಬ್ಯಾಂಕಿನ ಅಧ್ಯಕ್ಷರಾದ ಹರಿಶ್ಚಂದ್ರ ಅಮೀನ್ ಸ್ವಾಗತಿಸಿ, ನಿರ್ದೇಶಕರಾದ ಶಕುಂತಲ ಶ್ರೀನಿವಾಸ್ ಪ್ರಾರ್ಥಿಸಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಶನ್ ಫೌಸ್ಟಿನ್ ಆಲ್ವರವರು ಬ್ಯಾಂಕಿನ 18ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ನಡಾವಳಿಕೆಗಳನ್ನು ವಾಚಿಸಿದರು. ಉಪಾಧ್ಯಕ್ಷರಾದ ವಿಜಯಾ ಜಿ ಬಂಗೇರರವರು ವಂದಿಸಿದರು.

700ಕ್ಕೂ ಅಧಿಕ ಮಕ್ಕಳ ಪಾಲಿಗೆ ಅನ್ನದಾತ, ನಿತ್ಯ ಅನ್ನದಾನ ಸೇವೆಯಲ್ಲಿ ತೊಡಗಿರುವ ಕೆ. ಪಿ. ಶ್ರೀನಿವಾಸ ತಂತ್ರಿ

Thumbnail
Posted On: 01 Dec 2021, 04:25 PM

ಸಂಪಾದಿಸಿದ ಹಣವನ್ನು ಖರ್ಚು ಮಾಡದೇ ಬ್ಯಾಂಕ್ ನಲ್ಲಿ ಕೋಟ್ಯಂತರ ಹಣವನ್ನು ಭದ್ರವಾಗಿ ಇಟ್ಟವರ ನಡುವೆ ದೇವರಿಂದ ಪಡೆದದ್ದು ದೇವರಂತಹ ಮಕ್ಕಳಿಗೆ ಕೊಡೋಣ ಎನ್ನುವ ಇಚ್ಛೆಯುಳ್ಳ ವ್ಯಕ್ತಿ ಕೆ.ಪಿ. ಶ್ರೀನಿವಾಸ ತಂತ್ರಿ. ಮೂಲತಃ ಉಡುಪಿಯ ಕೊರಂಗ್ರಪಾಡಿಯವರಾದ ಶ್ರೀನಿವಾಸ ತಂತ್ರಿಯವರು ವೃತ್ತಿಯಲ್ಲಿ ಜ್ಯೋತಿಷಿಗಳು ಹಾಗೂ ಪುರೋಹಿತರು, ಕಳೆದ 15 ವರ್ಷಗಳಿಂದ ಕಾಪು ತಾಲೂಕಿನ ಇನ್ನಂಜೆಯ ಮಡುಂಬುವಿನಲ್ಲಿ ವಾಸವಾಗಿದ್ದಾರೆ. ತನ್ನಲ್ಲಿಗೆ ಬಂದವರನ್ನು ಬಹುಷಃ ಬರೀಗೈಯಲ್ಲಿ ಕಳುಹಿಸಿದ ಉದಾಹರಣೆಯೇ ಇರಲಿಕ್ಕಿಲ್ಲ, ಕೋವಿಡ್ ಸಂದರ್ಭದಲ್ಲಿ ಒಂದನೇ ಅಲೆ ಮತ್ತು ಎರಡನೇ ಅಲೆ ಬಂದಾಗ ಸಮರ್ಪಕವಾಗಿ 38,000ಕ್ಕೂ ಹೆಚ್ಚಿನ ಜನರಿಗೆ ನಿತ್ಯ ಅನ್ನದಾನ ಮಾಡಿದ ಮಹಾದಾನಿ, ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ಕಿಟ್ ವಿತರಿಸುವ ಮೂಲಕ ತನ್ನ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ. ಇದೀಗ ಇನ್ನಂಜೆ ಗ್ರಾಮದಲ್ಲಿರುವ ಎಸ್. ವಿ. ಎಸ್. ಆಂಗ್ಲ ಮಾಧ್ಯಮ ಶಾಲೆಯ 700ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತನ್ನಿಂದ ಆಗುವಷ್ಟು ಸಮಯ ನಿತ್ಯ ಅನ್ನದಾನ ಸೇವೆಯನ್ನು ನೀಡುತ್ತೇನೆ ಎಂದು ಮಕ್ಕಳ ಹಸಿವನ್ನು ನೀಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ, ಜೊತೆಗೆ 282 ಸ್ಟೀಲಿನ ಪ್ಲೇಟ್ ಅನ್ನು ಕೂಡಾ ದಾನವಾಗಿ ನೀಡಿದ್ದಾರೆ. ಹೀಗೆ ಒಂದಲ್ಲ ಒಂದು ಮಹತ್ತರ ಕಾರ್ಯಗಳಿಂದ ಜನರ ಪ್ರೀತಿಗೆ, ಹೆಗ್ಗಳಿಕೆಗೆ ಕಾರಣರಾಗಿದ್ದಾರೆ.

ಕಾಪು : ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥ -ಅಪ್ಪು ಟ್ರೋಫಿ 2021

Thumbnail
Posted On: 30 Nov 2021, 08:43 PM

ಕಾಪು : ಅಪ್ಪು ಟ್ರೋಫಿ 2021 ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥವಾಗಿ ಕಾಪು ಪುರಸಭೆ ವ್ಯಾಪ್ತಿ, ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿ, ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಟಗಾರರಿಗಾಗಿ ಕಾಪು ಪ್ರೀಮಿಯರ್ ಲೀಗ್ 2021 ಕ್ರಿಕೆಟ್ ಪಂದ್ಯಾಟವು ಡಿಸೆಂಬರ್ 5 ರಂದು ಕಾಪುವಿನ ದಂಡತೀರ್ಥ ಶಾಲೆಯ ಮೈದಾನದಲ್ಲಿ ನಡೆಯಲಿದೆ. ವಿಜೇತ ತಂಡಕ್ಕೆ ₹12,001 ಮತ್ತು ಟ್ರೋಫಿ, ರನ್ನರ್ ಅಪ್ ತಂಡಕ್ಕೆ ₹ 8,001 ಮತ್ತು ಟ್ರೋಫಿ ಸಿಗಲಿದೆ. ಪಂದ್ಯಾಟದ ನಿಯಮಗಳು : ಪ್ರತಿ ಪಂದ್ಯಾಟವು 6 ಓವರ್‌ಗಳಾಗಿದ್ದು (ಸಮಯದ ಅಭಾವ ಇದ್ದಲ್ಲಿ ಓವರ್ ಕಡಿತಗೊಳಿಸಲಾಗುವುದು), ತೀರ್ಪುಗಾರರ ತೀರ್ಮಾನ ಅಂತಿಮ, ಲೀಗ್ ಮಾದರಿಯ ಪಂದ್ಯಾಕೂಟ, ಯಾವುದೇ ಬದಲಾವಣೆ ಇದ್ದಲ್ಲಿ ತಂಡಗಳಿಗೆ ಮುಂಚಿತವಾಗಿ ತಿಳಿಸಲಾಗುವುದು, ಯಾವುದೇ ಬದಲಾವಣೆಯ ಹಕ್ಕನ್ನು ವ್ಯವಸ್ಥಾಪಕರು ಹೊಂದಿರುತ್ತಾರೆ, ರಾಡಿ ಎಸೆತಕ್ಕೆ ಅವಕಾಶವಿಲ್ಲ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9741539169 (Google Pay) 9886502219

ಬಿಜೆಪಿ ಪಕ್ಷದಿಂದ ಕಾಪು ವಿಧಾನಸಭಾ ಕ್ಷೇತ್ರಾದ್ಯಂತ ವಿಧಾನ ಪರಿಷತ್ ಚುನಾವಣಾ ಸರಣಿ ಸಭೆಗಳು

Thumbnail
Posted On: 29 Nov 2021, 10:10 PM

ಕಾಪು : ಬಿಜೆಪಿ ಪಕ್ಷದಿಂದ ಕಾಪುವಿಧಾಸಭಾ ಕ್ಷೇತ್ರಾದ್ಯಂತ ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿಯಾಗಿ ಸರಣಿ ಸಭೆಗಳು ನಡೆದವು. ಮಹಾಶಕ್ತಿ ಕೇಂದ್ರವಾರು ಹಾಗು ನಾಲ್ಕೈದು ಪಂಚಾಯತ್ ಒಟ್ಟು ಸೇರಿಸಿ ಅಲೆವೂರು, ಮುದರಂಗಡಿ, ಹಿರಿಯಡ್ಕ, ಕಟಪಾಡಿ, ಉಚ್ಚಿಲ ಹಾಗೂ ಪಡುಬಿದ್ರಿಯಲ್ಲಿ ಒಟ್ಟು ಆರು ಕಡೆ ಪಂಚಾಯತ್ ಸದಸ್ಯರಿಗೆ ಚುನಾವಣೆಯ ಮಹತ್ವ, ಮತದಾನ ಮಾಡುವ ರೀತಿ ಇತ್ಯಾದಿಗಳ ಮಾಹಿತಿ ನೀಡಲಾಯಿತು. ವಿಧಾನ ಪರಿಷತ್ ಅಭ್ಯರ್ಥಿಯೂ, ಕರ್ನಾಟಕ ಸರಕಾರದ ಸಚಿವರೂ ಆದ ಕೋಟ ಶ್ರೀನಿವಾಸ ಪೂಜಾರಿ ಎಲ್ಲಾ ಸಭೆಗಳಲ್ಲಿ ಭಾಗವಹಿಸಿ ತನಗೆ ಮತ ನೀಡುವಂತೆ ವಿನಂತಿಸಿದರು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ರಾಜ್ಯ ಕಾರ್ಯಕಾರಿಣಿ ಸದಸ್ಯರೂ, ಕಾಪು ಕ್ಷೇತ್ರ ಚುನಾವಣಾ ಸಂಚಾಲಕರೂ ಆದ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಮಂಗಳೂರು, ರಾಜ್ಯ ಎಸ್ ಸಿ ಮೋರ್ಚ ಪ್ರಧಾನ ಕಾರ್ಯದರ್ಶಿ ದಿನಕರ್ ಬಾಬು, ಕಾಪು ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷರಾದ ವೀಣಾ ಶೆಟ್ಟಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಜಿಯಾನಂದ ಹೆಗ್ಡೆ, ವಿಶ್ವನಾಥ ಕುರ್ಕಾಲು, ಸಂದೀಪ್ ರಾವ್, ಚಂದ್ರಶೇಖರ ಕೋಟ್ಯಾನ್, ಶಿವಪ್ರಸಾದ್ ಶೆಟ್ಟಿ, ಉದ್ಯಾವರ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್, ರವಿ ಶೆಟ್ಟಿ ಪಾದೆಬೆಟ್ಟು, ಶಶಿಕಾಂತ್ ಪಡುಬಿದ್ರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಕ್ಷದ ಪ್ರಮುಖರಾದ ಸುರೇಂದ್ರ ಪಣಿಯೂರು, ಗಂಗಾಧರ ಸುವರ್ಣ, ನವೀನ್ ಎಸ್ ಕೆ, ಸಂಧ್ಯಾ ಕಾಮತ್, ಪವಿತ್ರ ಶೆಟ್ಟಿ, ಸುಭಾಸ್ ನಾಯ್ಕ್, ಕೇಶವ ಮೊಯ್ಲಿ, ಮುರಳಿಧರ್ ಪೈ, ಶಶಿಪ್ರಭಾ ಶೆಟ್ಟಿ, ಸಚಿನ್ ಸುವರ್ಣ, ಸುಮಾ ಶೆಟ್ಟಿ, ಎಲ್ಲಾ ಪಂಚಾಯತ್ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸದಸ್ಯರುಗಳು, ಶಕ್ತಿ ಕೇಂದ್ರ ಪ್ರಮುಖರು, ಜಿಲ್ಲಾ ಮತ್ತು ಮಂಡಲ ಪ್ರಮುಖರು ಉಪಸ್ಥಿತರಿದ್ದರು.

ಆಳ್ವಾಸ್ ನಿಂದ ಕೆಸರ್ಡ್ ಒಂಜಿ ದಿನ : ಕೃಷಿ ಸಾಧಕರಾದ ರಾಜು ಗೌಡ, ವಾರಿಜ ಮಿಜಾರು ಅವರಿಗೆ ಸನ್ಮಾನ

Thumbnail
Posted On: 29 Nov 2021, 09:54 PM

ಮೂಡುಬಿದಿರೆ : ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಮಿಜಾರು ಇದರ ಮಾಹಿತಿ ತಂತ್ರಜ್ಞಾನ ವಿಭಾಗದ ವತಿಯಿಂದ ಕೆಸರ್‌ಡ್ ಒಂಜಿ ದಿನ -2021 ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ಮಿಜಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ನಡೆಯಿತು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರಗತಿಪರ ಕೃಷಿಕರಾದ ರಾಜು ಗೌಡ ಅರೆಮಜಲು ಪಲ್ಕೆ ಮತ್ತು ಕೃಷಿ ಕಾರ್ಮಿಕೆ ವಾರಿಜ ಮಿಜಾರು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಯೀಶ್ ಚೌಟ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಭಾರತ ಕೃಷಿ ಪ್ರದಾನ ದೇಶ. ಕನ್ನಡ ನಾಡಿನ ಜನತೆ ಜತೆ ತುಳುನಾಡಿನ ಸಂಸ್ಕೃತಿಯೂ ಬೆರೆತು ಹೋಗಿದೆ. ಗ್ರಾಮೀಣ ಬದುಕಿನ ಸೊಬಗು ಮತ್ತು ಸೊಗಡನ್ನು ಹೊಂದಿರುವ ಈ ದೇಶ ಇಂದು ತಂತ್ರಜ್ಞಾನದ ಪ್ರಭಾವದಿಂದಾಗಿ ಅವನತಿಯತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಆಳ್ವಾಸ್ ತಾಂತ್ರಿಕ ಕಾಲೇಜು ಪ್ರಾಂಶುಪಾಲ ಪೀಟರ್‌ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಅರ್ಚಕ ರಾಘವೇಂದ್ರ ಪೆಜತ್ತಾಯ , ಪ್ರಗತಿಪರ ಕೃಷಿಕ ಪ್ರಕಾಶ್‌ ಆಳ್ವ, ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ , ಉಪಾಧ್ಯಕ್ಷೆ ಶಮಿತಾ ಶೆಟ್ಟಿ , ಸದಸ್ಯ ನೇಮಿರಾಜ್ ಶೆಟ್ಟಿ, ಪಂಚಾಯಿತಿ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ , ಪ್ರಗತಿಪರ ಕೃಷಿಕ ಗಣೇಶ್ ಪೂಜಾರಿ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಮಂಜುನಾಥ್ ಎಚ್.ಆರ್ . , ವಿದ್ಯಾರ್ಥಿ ಸಂಯೋಜಕಿ ಅಶ್ಮಿತಾ ಮೆಂಡನ್ , ಆಟೋಟ ಸ್ಪರ್ಧೆಗಳಿಗಾಗಿ ಗದ್ದೆಯನ್ನು ಸಮತಟ್ಟುಗೊಳಿಸಲು ಶ್ರಮಿಸಿದ ಸುಧಾಕರ ಪೂಂಜಾ ಇದ್ದರು . ವಿಭಾಗ ಮುಖ್ಯಸ್ಥ ಪ್ರೊ.ಸುಧೀರ್‌ ಶೆಟ್ಟಿ ಸ್ವಾಗತಿಸಿದರು. ಸಿರಿಶಾ ಶೆಟ್ಟಿ ನಿರೂಪಿಸಿದರು. ವಿದ್ಯಾರ್ಥಿ ಸಂಯೋಜಕಿ ಭುವನಾ ವಂದಿಸಿದರು. ವಿದ್ಯಾರ್ಥಿಗಳಿಗಾಗಿ ವಾಲಿಬಾಲ್ , ಹಗ್ಗಜಗ್ಗಾಟ , ಕಬಡ್ಡಿ , ಮೊಸರು ಕುಡಿಕೆ ಒಡೆಯುವುದು , ಓಟ , ಅಡಕೆ ಹಾಳೆಯಲ್ಲಿ ಎಳೆಯುವುದು , ಉಪ್ಪು ಮೂಟೆ ಹಾಗೂ ಮೂರು ಕಾಲಿನ ಓಟ ಮುಂತಾದ ಸ್ಪರ್ಧೆಗಳು ಕೆಸರುಗದ್ದೆಯಲ್ಲಿ ನಡೆದವು.

ಪೆರ್ಡೂರು ಅಲಂಗಾರು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಕಾಯಿದ ಪೂಜೆ

Thumbnail
Posted On: 29 Nov 2021, 09:48 PM

ಪೆರ್ಡೂರು : ಪೆರ್ಡೂರು ಅಲಂಗಾರು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ವರ್ಷಂಪ್ರತಿ ಜರಗುವ ಕಾಯಿದ ಪೂಜೆಯು ಡಿಸೆಂಬರ್‌ 2 ರಂದು ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.