Updated News From Kaup
ಶಿರ್ವ ಪಂಜಿಮಾರು ಮಾಣಾಯಿ ದೊಡ್ಡಮನೆ ವತ್ಸಲಾ ಎಸ್.ಶೆಟ್ಟಿ ನಿಧನ

Posted On: 22-09-2021 09:54PM
ಕಾಪು : ಕಾಪು ಪೂವಣಿಗುತ್ತು, ಸುರೇಶ್ ಜಿ.ಶೆಟ್ಟಿಯವರ ಧರ್ಮಪತ್ನಿ, ಶಿರ್ವ ಪಂಜಿಮಾರು ಮಾಣಾಯಿ ದೊಡ್ಡಮನೆ ವತ್ಸಲಾ ಎಸ್.ಶೆಟ್ಟಿ ಇವರು ಇಂದು (22-9-21)ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇವರ ಅಂತ್ಯಕ್ರಿಯೆಯು ನಾಳೆ (23/09/21) ಮಲ್ಲಾರು, ಪಕೀರ್ಣಕಟ್ಟೆಯ ಶಾರದ ನಿವಾಸದಲ್ಲಿ ನಡೆಯಲಿದೆ ಎಂದು ನಮ್ಮ ಕಾಪು ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
ಕೊರಗ ಸಮುದಾಯದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಶ್ರೀರಾಮುಲು ಅವರೊಂದಿಗೆ ಶಾಸಕ ರಘುಪತಿ ಭಟ್ ಸಭೆ

Posted On: 22-09-2021 09:01PM
ಉಡುಪಿ, ಸೆ.22 : ರಾಜ್ಯದಲ್ಲಿರುವ ಕೊರಗ ಸಮುದಾಯದವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮುದಾಯದ ಮುಖಂಡರೊಂದಿಗೆ ಶಾಸಕ ಕೆ. ರಘುಪತಿ ಭಟ್ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಶ್ರೀರಾಮುಲು ಅವರೊಂದಿಗೆ ಬೆಂಗಳೂರಿನ ಸಚಿವರ ನಿವಾಸದಲ್ಲಿ ಸಭೆ ನಡೆಸಿ ಚರ್ಚಿಸಿದರು.

ಕೊರಗ ಸಮುದಾಯದವರು ವಾಸ್ತವ್ಯದ ಮನೆ ನಿರ್ಮಿಸುವಲ್ಲಿ ಇರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ, ಸಮುದಾಯದವರ ಸಮಗ್ರ ಆರೋಗ್ಯ ತಪಾಸಣೆ ನಡೆಸುವುದು ಹಾಗೂ ವೈದ್ಯಕೀಯ ನೆರವು ಒದಗಿಸುವುದು, ಶೈಕ್ಷಣಿಕ ವ್ಯವಸ್ಥೆ, ಉನ್ನತ ಶಿಕ್ಷಣಕ್ಕೆ ಮೀಸಲಾತಿಯಲ್ಲಿ ವಿಶೇಷ ಒತ್ತು, ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಆದ್ಯತೆ ನೀಡುವುದು ಸೇರಿದಂತೆ ಸಮುದಾಯದ ಸಮಗ್ರ ಅಭಿವೃದ್ಧಿಗೆ ಇಲಾಖೆ ಹಾಕಿಕೊಂಡ ಕಾರ್ಯಕ್ರಮಗಳ ಉಪಯೋಗ ಸುಲಭವಾಗಿ ಜನರಿಗೆ ತಲುಪಿಸುವಂತಹ ವ್ಯವಸ್ಥೆ ಅಳವಡಿಸುವ ಬಗ್ಗೆ ಚರ್ಚಿಸಲಾಯಿತು.

ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಅವರ ಸಮಸ್ಯೆಗಳನ್ನು ಆಲಿಸಲು ಕೊರಗರ ಜನವಸತಿ ಕಾಲನಿಯಲ್ಲಿ ವಾಸ್ತವ್ಯ ಹೂಡುವುದಾಗಿ ಸಚಿವ ಶ್ರೀರಾಮುಲು ಈ ಸಂದರ್ಭ ಆಶಯ ವ್ಯಕ್ತಪಡಿಸಿದರು.
ಪರಿಶಿಷ್ಟ ಪಂಗಡಗಳ ಇಲಾಖೆಯ ನಿರ್ದೇಶಕರಾದ ಶ್ರೀ ಕಾಂತರಾಜು, ಬೊಗ್ರ ಕೊಕ್ಕರ್ಣೆ, ಪುತ್ರನ್ ಹೆಬ್ರಿ, ಕುಮಾರ ಕೆಂಜೂರು, ಶೇಖರ ಕೆಂಜೂರು, ದಿವಾಕರ ಕಳತ್ತೂರು, ದೀಪ ಜಪ್ತಿ, ಸುಶೀಲಾ ಕೆಂಜೂರು, ಸುರೇಂದ್ರ ಕಳತ್ತೂರು, ಯುಹಂದ್ರ ಕಳತ್ತೂರು ಉಪಸ್ಥಿತರಿದ್ದರು.
ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ಶಕ್ತಿಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಸಭೆ

Posted On: 22-09-2021 08:51PM
ಕಾಪು, ಸೆ.22 : ಕಾಪು ಬಿಜೆಪಿ ಕಚೇರಿಯಲ್ಲಿ ಶಕ್ತಿಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರ ಪ್ರಮುಖರ ಸಭೆ ನಡೆಯಿತು. ಮೋದಿ ಜನ್ಮದಿನದಿಂದ ಅ.07 ರ ವರೆಗಿನ ಸೇವೆ ಮತ್ತು ಸಮರ್ಪಣೆ ಕಾರ್ಯಕ್ರಮದ ಕುರಿತಂತೆ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ವಿಸ್ತ್ರತವಾಗಿ ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ಎಲ್ಲ ಶಕ್ತಿಕೇಂದ್ರ ಪ್ರಮುಖರು ಮಹಾಶಕ್ತಿ ಕೇಂದ್ರ ಪ್ರಮುಖರೊಡನೆ ನಿರಂತರ ಸಂಪರ್ಕದಲ್ಲಿದ್ದು ಪ್ರತಿಯೊಂದು ಕಾರ್ಯಕ್ರಮವನ್ನೂ ಬೂತ್ ಮಟ್ಟದಲ್ಲಿಯೂ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.
ಗಾಂಧಿ ಜಯಂತಿಯ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಉಪಾಧ್ಯಕ್ಷರೂ ಕಾರ್ಯಕ್ರಮದ ಜಿಲ್ಲಾ ಸಂಚಾಲಕರೂ ಆದ ಸುಪ್ರಸಾದ್ ಶೆಟ್ಟಿ ವಿವರಿಸಿದರು. ಪರಿಸರ ಸಂಬಂಧಿತ ವಿಷಯದ ಜಿಲ್ಲಾ ಸಂಚಾಲಕರೂ, ಜಿಲ್ಲಾ ರೈತ ಮೋರ್ಚ ಅಧ್ಯಕ್ಷರಾದ ಪ್ರವಿಣ್ ಗುರ್ಮೆ ಇವರೂ ಮಾಹಿತಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿದರು.
ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷರಾದ ನಯನ ಗಣೇಶ್, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ, ಚಂದ್ರಶೇಖರ ಕೋಟ್ಯನ್ ಉಪಸ್ಥಿತರಿದ್ದರು. ಶಕ್ತಿಕೇಂದ್ರ ಪ್ರಮುಖರು, ಮಹಾಶಕ್ತಿಕೇಂದ್ರ ಪ್ರಮುಖರು, ಮಂಡಲ ಪದಾಧಿಕಾರಿಗಳು ವಿವಿಧ ವಿಷಯಗಳ ಸಂಚಾಲಕರು ಉಪಸ್ಥಿತರಿದ್ದರು.
ಕಟಪಾಡಿ ಪಡುಕುತ್ಯಾರಿನ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಪುನರುತ್ಥಾನ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗೆ ಮನವಿ

Posted On: 22-09-2021 08:42PM
ಬೆಂಗಳೂರು : ಕಟಪಾಡಿ ಪಡುಕುತ್ಯಾರಿನ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಡೇರ ಹೋಬಳಿ ಶ್ರೀಧರ ಆಚಾರ್ಯರ ನೇತೃತ್ವದಲ್ಲಿ ಮಹಾಸಂಸ್ಥಾನದ ಪುನರುತ್ಥಾನದ ಯೋಜನೆಗಳ ಮನವಿಯನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಬೆಂಗಳೂರಿನಲ್ಲಿ ಸಮರ್ಪಿಸಲಾಯಿತು.
ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಉಪಾಧ್ಯಕ್ಷರಾದ ಚಂದ್ರಯ್ಯ ಆಚಾರ್ಯ ಕಳಿ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಿಲ್ಪಿ ಸತೀಶ್ ಆಚಾರ್ಯ ಕಾರ್ಕಳ, ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ (ಅಸೆಟ್ ) ಅಧ್ಯಕ್ಷ ಟಿ. ಸುಧಾಕರ ಆಚಾರ್ಯ ತ್ರಾಸಿ, ಪ್ರತಿಷ್ಠಾನದ ವಿಶ್ವಸ್ಥರಾದ ಹರೀಶ್ ಆಚಾರ್ಯ ಕಾರ್ಕಳ, ರವಿ ಆಚಾರ್ಯ ಕಾರ್ಕಳ, ಆನೆಗುಂದಿಯ ಸರಸ್ವತೀ ಪೀಠ ಪಂಚ ಸಿಂಹಾಸನ ವಿಕಾಸ ಸಮಿತಿ ಮತ್ತು ಬೆಂಗಳೂರು ಶಾಖಾ ಮಠ ಸಮಿತಿ ಅಧ್ಯಕ್ಷ ಹರಿಶ್ವಂದ್ರ ಎನ್. ಆಚಾರ್ಯ ಬೆಂಗಳೂರು, ಬೆಂಗಳೂರು ನಗರ ಪಾಲಿಕೆ ಸದಸ್ಯೆ ಹೇಮಲತಾ ಸತೀಶ್ ಶೇಟ್ ಹಾಜರಿದ್ದರು.
ಪ್ರಸ್ತುತ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿ,ಲಾಲಾಜಿ ಮೆಂಡನ್,ರಘುಪತಿ ಭಟ್, ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ ಅವರನ್ನು ಭೇಟಿ ಮಾಡಿ ಅವರ ಶಿಫಾರಸು ಮತ್ತು ಅವರ ಜತೆಗೂಡಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
92 ಹೆರೂರು : ಕಾಪು ತಾಲೂಕಿನಲ್ಲಿ ಶೇಕಡ ನೂರು ಕೋವಿಡ್ ಲಸಿಕೆ ಪೂರೈಸಿದ ಮೊದಲ ಗ್ರಾಮ

Posted On: 22-09-2021 05:21PM
ಕಾಪು : ಮನೆ ಮನೆಗೆ ಹೋಗಿ ಕೋವಿಡ್ ಲಸಿಕೆ ನೀಡುವ ಮೂಲಕ ಉಡುಪಿ ಜಿಲ್ಲೆಯ ಕಾಪು ತಾಲೂಕಿನ 92 ಹೆರೂರು ಗ್ರಾಮ ಕಾಪು ತಾಲೂಕಿನಲ್ಲಿಯೇ ಮೊದಲ ನೂರು ಶೇಕಡ (First Dose) ಲಸಿಕೆ ಪೂರೈಸಿದ ಗ್ರಾಮ ಎಂದು ದಾಖಲಾತಿ ಪಡೆದಿದೆ.
ಈ ದಾಖಲಾತಿಗೆ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿವರ್ಗ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮದ ಜನರ ಸಹಕಾರದ ಫಲಶ್ರುತಿಯಾಗಿದೆ. ಈ ಬಗ್ಗೆ ವಿಜಯ್ ಧೀರಜ್ ಅವರು ನಮ್ಮ ಕಾಪು ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ
ಈ ಸಂದರ್ಭ ವಿಜಯ್ ಧೀರಜ್, ಮಂಜುಳ ಆಚಾರ್ಯ, ಡಾ. ಪ್ರೀತಿಕಾ ಉಪಸ್ಥಿತರಿದ್ದರು.
ಆಪತ್ಬಾಂಧವ ರಿಕ್ಷಾ ಚಾಲಕ - ಯತೀಶ್ ಆಚಾರ್ಯ

Posted On: 20-09-2021 10:23PM
ಮಂಗಳೂರು : ರಾತ್ರಿ ಸುಮಾರು 12 ಘಂಟೆ ವೇಳೆ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿದಾಗ ಮನೆಯವರು ಕುಪ್ಪೆಪದವಿನಲ್ಲಿ ರಿಕ್ಷಾ ಚಾಲಕರಾಗಿರುವ ಯತೀಶ್ ಆಚಾರ್ಯ ಅವರಿಗೆ ಕರೆ ಮಾಡಿದಾಗ ಕೂಡಲೇ ಧಾವಿಸಿ ಗರ್ಭಿಣಿ ಮಹಿಳೆಯನ್ನು ಬಹಳ ಜಾಗ್ರತೆಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲು ನೆರವಾಗಿ ಮಾನವೀಯತೆ ಮೆರೆದರು. ಆಸ್ಪತ್ರೆಗೆ ದಾಖಲಾದ ಕೆಲವು ಘಂಟೆಗಳ ನಂತರ ಹೆರಿಗೆಯಾಯಿತು. ತಾಯಿ ಮಗು ಆರೋಗ್ಯವಾಗಿದ್ದಾರೆ. ಇವರ ನಿಸ್ವಾರ್ಥ ಸೇವೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ತಹಸೀಲ್ದಾರ್ ಅಂದ್ರೆ ಹೀಗೂ ಇರ್ತಾರಾ ?...

Posted On: 20-09-2021 03:46PM
ಬೈಂದೂರು : ಬೈಂದೂರು ಭಾಗದ ಜನರ ಯಾವ ಕಾಲದ, ಯಾರ ಪುಣ್ಯದ ಫಲವೋ ಏನೋ ಈ ಬಾರಿ ಸರಳ ಸಜ್ಜನಿಕೆಯ, ಮುತುವರ್ಜಿಯ, ಅಪಾರ ಜನಪರ ಕಾಳಜಿಯ, ಸರಕಾರಿ ಕೆಲಸ, ಜನಗಳ ಕೆಲಸ,ಸ್ವಂತ ಕೆಲಸದಷ್ಟೇ ಶ್ರದ್ದೆಯಿಂದ ಮಾಡುವ ಪ್ರಾಮಾಣಿಕ ಅಧಿಕಾರಿಗಳು ಸಿಗುವುದು ವಿರಳ.

ಬೈಂದೂರು ಭಾಗದ ಈಗಿನ ತಹಸೀಲ್ದಾರ್ ಕಾರ್ಯ ವೈಖರಿಯನ್ನು ಮೆಚ್ಚಲೇಬೇಕು. ಪ್ರಾಮಾಣಿಕ ಕೆಲಸಗಾರರನ್ನು ಗುರುತಿಸಿ ಅವರನ್ನು ಉಳಿಸಿಕೊಳ್ಳೋದು ಅನಿವಾರ್ಯ.
ಮಧ್ಯಮ ವರ್ಗದ ಅಲ್ಪ ಜನಸಂಖ್ಯೆಯ ವ್ಯಕ್ತಿಯೋರ್ವ ಆಕಸ್ಮಿಕ ಅವಘಡಕ್ಕೊಳಗಾದಾಗ ನಮ್ಮ ವ್ಯವಸ್ಥೆ ಹೇಗೆ ಸ್ಪಂದಿಸುತ್ತೆ ಅನ್ನೋ ಕೆಟ್ಟ ಅನುಭವ ಜನರಿಗಾಗಿದೆ. ಇಲಾಖೆಗಳ ನಡುವಿನ ಹೊಂದಾಣಿಕೆ ಕೊರತೆ , ರಾಜಕೀಯ ತಾತ್ಸರತೆಗೆ ಬಡಪಾಯಿಗಳ ಜೀವಕ್ಕೆ ಬೆಲೆ ಇಲ್ಲ ಅನ್ನೋದಕ್ಕೆ ಸಾಕ್ಷಿಭೂತರಾಗಿ ತಲೆತಗ್ಗಿಸುವಂತಾದ ಅಸಹಾಯಕ ಸ್ಥಿತಿ ಶನಿವಾರ ಬೆಳಿಗ್ಗೆ ನಡೆಯಿತು. ಬಡಪಾಯಿಯ ಶವವೊಂದು ಸಮುದ್ರದಲ್ಲಿ ತೇಲುತ್ತಿದೆ ಎನ್ನುವ ಮಾಹಿತಿ. ತೀರದಲ್ಲಿ ಕುಟುಂಬದ ಹಾಗೂ ಆ ಜನಾಂಗದ ಆಕ್ರಂದನ ಯಾರ ಕಿವಿಗೂ ಬೀಳದಿರೋದು ಈಗಿನ ಕಾಲದ ವಿಪರ್ಯಾಸವೇ ಸರಿ. ಆಗೊಮ್ಮೆ ಈಗೊಮ್ಮೆ ನೋಡಿದ ಮಾಹಿತಿ ಸಿಕ್ಕಿತೆ ಹೊರತು ನೀರಿನಿಂದ ಹೊರತರುವ ಕೆಲಸ ಮರೀಚಿಕೆಯಾಗುಳಿಯಿತು. ಶನಿವಾರ ಸಂಜೆಯ ಬೆಳವಣಿಯಲ್ಲಿ ತಹಶೀಲ್ದಾರಗೆ ಮಾಹಿತಿ ಹೋಗಿ ಆದಿತ್ಯವಾರ ಬೆಳಿಗ್ಗೆ 7 ಗಂಟೆಯ ಮೊದಲೇ ಬಂದು ಮರವಂತೆಯಲ್ಲಿ ಟಿಕಾಣಿ ಹೂಡಿ, ಸಂಬಂಧಿಸಿದ ಎಲ್ಲ ಇಲಾಖೆಗಳ ಕಳ್ಳಾಟವನ್ನು ಸಾವಧಾನವಾಗಿ ಶಾಂತ ಚಿತ್ತರಾಗಿ 12 ಗಂಟೆಯ ವರೆಗೂ ಇದ್ದು ಹುಡುಕಾಟದ ಖಚಿತತೆಯನ್ನು ಕಂಡ ಮೇಲೆಯೇ ಅಲ್ಲಿಂದ ತೆರಳಿದ ಮೇಲೆ ಎಲ್ಲರ ಬಾಯಲ್ಲೂ ಒಂದೇ ಉದ್ಘಾರ ತಹಸೀಲ್ದಾರ್ ಅಂದ್ರೆ ಹೀಗೂ ಇರ್ತಾರ??? ಅಂತ ಎಲ್ಲರ ಮೆಚ್ಚುಗೆ ಪಾತ್ರರಾದರು. ಇದೇ ಕೆಲಸ ಶನಿವಾರವೇ ಸಂಬಂದಿಸಿದ ಇಲಾಖೆಗಳು ಮಾಡಿದ್ದರೆ ಈಗಾಗಲೇ ವ್ಯಕ್ತಿಯ ಕ್ರಿಯಾಕರ್ಮಗಳು ಮುಗಿಯುತ್ತಿತ್ತು. ಆದಿತ್ಯವಾರ ಯಾವುದೇ ಫಲ ಇಲ್ಲ. ಕುಟುಂಬ ವರ್ಗ ಮುಖದ ಕೊನೆಯ ದರುಶನದ ನಿರೀಕ್ಷೆಯಲ್ಲಿ ಸೋಮವಾರ ಮುಂದಡಿ ಇಟ್ಟಿದೆ.
ಕರೋನ ಕಾಲದಲ್ಲೂ ಒಂದಷ್ಟು ಒಳ್ಳೆಯ ಕೆಲಸ ಹಲವರು ಬಾಯಲ್ಲಿ ಓಡಾಡುತ್ತಿದೆ. ರಾತ್ರಿ ಹತ್ತು ಗಂಟೆಯ ಮೇಲು ಸಹಸ್ರ ಸಂಖ್ಯೆಯ ಮೆಹಂದಿ ಕಾರ್ಯಕ್ರಮದ ಮಾಹಿತಿ ಸಿಕ್ಕಾಗ ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿದ್ದು ಹಲವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ 6 ಗಂಟೆಗೆ lockdown ಕಾರ್ಯಾಚರಣೆ ಕಂಡು ಹೌ ಹಾರಿದವರಿದ್ದಾರೆ. ವರ್ಷಗಟ್ಟಲೆ ದೂಳು ಹಿಡಿದ ಫೈಲ್ ಗೆ ಮುಕ್ತಿ ನೀಡಿದ್ದಕ್ಕೆ ಹರಸಿದವರಿದ್ದಾರೆ. ಸಮಸ್ಯೆಗಳ ಸೌಹಾರ್ದ ಪರಿಹಾರಕ್ಕೆ ಸಹನೆಯ ಪ್ರತಿಕ್ರಿಯೆಯ ಕಂಡು ಬೆರಗಾದವರಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಒತ್ತಡಗಳ ನಡುವೆಯೂ ಕ್ರಿಯಾಶೀಲತೆಗೆ ಸಾರ್ವಜನಿಕರು ಶ್ಲಾಘಿಸಿದ್ದಾರೆ. ವರದಿ :ದಾಮೋದರ ಮೊಗವೀರ ನಾಯಕವಾಡಿ .
ಸೈಬ್ರಕಟ್ಟೆ : ರೋಟರಿ ಸಮುದಾಯ ದಳಗಳ ಪದಪ್ರದಾನ ಕಾರ್ಯಕ್ರಮ

Posted On: 19-09-2021 08:11PM
ಉಡುಪಿ : ಸೈಬ್ರಕಟ್ಟೆ ರೋಟರಿಯ ಅಂಗಸಂಸ್ಥೆ ರೋಟರಿ ಸಮುದಾಯ ದಳಗಳ ಪದಪ್ರದಾನ ಕಾರ್ಯಕ್ರಮ ರೋಟರಿ ಭವನದಲ್ಲಿ ನಡೆಯಿತು. ಸೈಬ್ರಕಟ್ಟೆ ಯಡ್ತಾಡಿ ಭಾಗದ ರೋಟರಿ ಸಮುದಾಯ ದಳದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಅವರಿಗೆ ಕೊರಳ ಲಾಂಛನ ತೊಡಿಸಿ ರೋಟರಿ 3182 ಜಿಲ್ಲಾ ಉಪಸಭಾಪತಿ ಜಗನ್ನಾಥ್ ಕೋಟೆ ಪದಪ್ರದಾನ ಗೈದರು. ಕಾರ್ಯದರ್ಶಿಯಾಗಿ ರಾಘವೇಂದ್ರ ಶೆಟ್ಟಿ ಕಲ್ಬೆಟ್ಟು ಆಯ್ಕೆಯಾದರು.
ಈ ಸಂದರ್ಭ ಮಾತನಾಡಿದ ರೋಟರಿ 3182 ಜಿಲ್ಲಾ ಉಪಸಭಾಪತಿ ಜಗನ್ನಾಥ್ ಕೋಟೆ ಯವರು ರೋಟರಿ ಸಮುದಾಯ ದಳ ಅನ್ನೋದು 18 ವರ್ಷ ಮೇಲ್ಪಟ್ಟ ವರು ಸದಸ್ಯರಾಗಬಹುದು, ಸಮುದಾಯದಲ್ಲಿ ರೋಟರಿ ಜೊತೆ ಗೂಡಿ ಹಲವು ಸೇವಾ ಕಾರ್ಯಕ್ರಮ ಹಮ್ಮಿಕೊಂಡು ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿ ಅಂತ ಸಂದೇಶ ನೀಡಿದರು.
ಹಾಗೆಯೇ ಸೈಬ್ರಕಟ್ಟೆ ಶಿರಿಯಾರ ಭಾಗದ ರೋಟರಿ ಸಮುದಾಯ ದಳವನ್ನು ವಲಯ ಸಂಯೋಜಕರಾದ ಶಂಕರ್ ಸುವರ್ಣ ಅವರು ಅಧ್ಯಕ್ಷ ಶರತ್ ಕೆ ಅವರಿಗೆ ಕೊರಳ ಲಾಂಛನ ತೊಡಿಸಿ ಪದಪ್ರದಾನ ನೆರವೇರಿಸಿದರು ಕಾರ್ಯದರ್ಶಿಯಾಗಿ ಶರತ್ ಡಿ ಆಯ್ಕೆ ಗೊಂಡರು, ಅಲ್ಲದೆ ಸಮುದಾಯ ದಳಗಳ ಕಾರ್ಯ ಹೇಗೆ ಮಾಡಬೇಕು ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸೈಬ್ರಕಟ್ಟೆ ರೋಟರಿ ಕ್ಲಬ್ ನ ಇಂಜಿನಿಯರ್ ಸದಸ್ಯರು ಗಳಾದ ಸಂದೀಪ್ ಶೆಟ್ಟಿ ಥೋಮಸ್ ವಾಝ್ ,ರತ್ನಾಕರ್ ಹೆಗ್ಡೆ ವಿಜಯ್ ಕುಮಾರ್ ಶೆಟ್ಟಿ ಕೆ.ಯು ಪ್ರಸಾದ್ ಭಟ್ ಇವರನ್ನು ಇಂಜಿನಿಯರ್ ಡೇ ಆಚರಣೆಯನ್ನು RCC ಮತ್ತು ರೋಟರಿ ಜಂಟಿಯಾಗಿ ಆಯೋಜಿಸಿ ಮುಖ್ಯ ಅತಿಥಿ ರೋಟರಿ ವಲಯ 3 ರ ಸಹಾಯಕ ಗವರ್ನರ್ ಕೆ ಪದ್ಮನಾಭ್ ಕಾಂಚನ್ ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿ ಎಂಜಿನಿಯರ್ಗಳು ಉತ್ತಮ ಟೆಕ್ನಾಲಜಿ ಮೂಲಕ ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಿದ್ದಾರೆ. ಸರ್ ಎಂ ವಿಶ್ವೇಶ್ವರಯ್ಯ ನವರ ಮಹಾನ್ ಸಾಧನೆಯ ನೆನಪಿಗಾಗಿ ಅವರು ಹುಟ್ಟಿದ ದಿನವನ್ನು ಇಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ. ಕಾರ್ಯಕ್ರಮದಲ್ಲಿರೋಟರಿ ಅಧ್ಯಕ್ಷ ಯು ಪ್ರಸಾದ್ ಭಟ್ ವಲಯ ಸೇನಾನಿ ವಿಜಯ ಕುಮಾರ್ ಶೆಟ್ಟಿ ಯಡ್ತಾಡಿ ಪಂಚಾಯತ್ ಸದಸ್ಯ ಅಮೃತ ಪೂಜಾರಿ ,ರೋಟರಿ ಕಾರ್ಯದರ್ಶಿ ಅಣ್ಣಯ್ಯದಾಸ್, ವರದರಾಜ್ ಶೆಟ್ಟಿ, ರೋಟರಿ ಸದಸ್ಯರು ಭಾಗಿಯಾಗಿದ್ದರು.
ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರ ಹಾಕಿ ಅಸಂಬದ್ಧ ಪದ ಪ್ರಯೋಗಿಸಿದ ಪ್ರಕರಣ ಮುಚ್ಚಳಿಕೆ, ತಪ್ಪೊಪ್ಪಿಗೆಯೊಂದಿಗೆ ಅಂತ್ಯ

Posted On: 19-09-2021 07:09PM
ಉಡುಪಿ : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರ ಹಾಕಿ ಅಸಂಬದ್ಧ ಪದ ಪ್ರಯೋಗಿಸಿದ ಬಗ್ಗೆ ಕುಂದಾಪುರ ಠಾಣೆಯಲ್ಲಿ ಕಿರಣ್ ಪೂಜಾರಿ ನೀಡಿದ ದೂರಿನನ್ವಯ ಅವಹೇಳನಗೈದ ಕುಂಭಾಶಿಯ ಸಂಪಾದಕರೋರ್ವರನ್ನು ಕುಂದಾಪುರ ಠಾಣೆಗೆ ಕರೆಯಿಸಿ ಇನ್ನು ಮುಂದೆ ಇಂತಹ ಯಾವುದೇ ಕೃತ್ಯ ಮಾಡುವುದಿಲ್ಲವೆಂದು ಮುಚ್ಚಳಿಕೆ ಬರೆಸಿ ಕೊಳ್ಳಲಾಗಿದೆ.
ದೂರುದಾರರ ದೂರಿನಲ್ಲಿ ಉಲ್ಲೇಖಿಸಿದಂತೆ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆಯ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ.
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ ತಂಡದಿಂದ ಬ್ರಹ್ಮಾವರ ಮಟಪಾಡಿಯ ವಿಜಯ ಬಾಲನಿಕೇತನ ಬಾಲಕರ ವಸತಿ ನಿಲಯ ಭೇಟಿ

Posted On: 19-09-2021 04:56PM
ಉಡುಪಿ : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಇಂದು ಬ್ರಹ್ಮಾವರ ಮಟಪಾಡಿಯ ವಿಜಯ ಬಾಲನಿಕೇತನ ಆರ್ಥಿಕ ಅಶಕ್ತ ಬಾಲಕರ ಉಚಿತ ವಸತಿ ನಿಲಯಕ್ಕೆ ಭೇಟಿ ನೀಡಿ ಉಚಿತ ಆರೋಗ್ಯ ತಪಾಸಣೆ ನಡೆಸಿ ಅಲ್ಲಿನ ಮಕ್ಕಳಿಗೆ ಉಚಿತ ಬರವಣಿಗೆ ಸಾಮಗ್ರಿಗಳನ್ನು ನೀಡಲಾಯಿತು.

ಈ ಕಾರ್ಯಕ್ರಮವನ್ನು ಆಸರೆ ಸಂಸ್ಥೆಯ ಸ್ಥಾಪಕಧ್ಯಕ್ಷರಾದ ಡಾ. ಕೀರ್ತಿ ಪಾಲನ್ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಆಸರೆ ತಂಡದ ಕೋಷಧಿಕಾರಿ ಜಗದೀಶ್ ಬಂಟಕಲ್, ವಿಜಯ ಬಾಲನಿಕೇತನ ದ ಉಸ್ತುವಾರಿ ಜಯರಾಮ್ ನೈರಿ ಹಾಗೂ ಸೌಂದರ್ಯ ಟೀಚರ್ ಉಪಸ್ಥಿತರಿದ್ದರು.