Updated News From Kaup
ಎಸ್ಸೆಸ್ಸೆಲ್ಸಿ ಪರೀಕ್ಷೆ : ಪ್ರಶಾಂತ್ ಕುಲಾಲ್ ಗೆ 96.48% ಅಂಕ

Posted On: 26-08-2021 10:23AM
ಕಾಪು : 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸೈಂಟ್ ಜಾನ್ ಶಾಲೆ ಶಂಕರಪುರ ಇಲ್ಲಿಯ ವಿದ್ಯಾರ್ಥಿ ಪ್ರಶಾಂತ್ ಕುಲಾಲ್ ಅವರು (603) 96.48% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.
ಇವರು ಶಂಕರಪುರದ ದುರ್ಗಾನಗರದ ಬಿಳಿಯಾರು ಭಾಸ್ಕರ್ ಕುಲಾಲ್ ಹಾಗೂ ಶಕುಂತಲಾ ದಂಪತಿಯ ಸುಪುತ್ರ.
ಬಂಧಗಳಿಲ್ಲದ ಕರ್ಮ ನಿರತ ಶ್ರೀಕೃಷ್ಣ

Posted On: 26-08-2021 10:06AM
"ಕರ್ಮ"ವೇ ಪ್ರಧಾನವಾಗಿ ಅದೇ ಧರ್ಮವಾಗಿ ನಿರ್ವಹಿಸಲ್ಪಟ್ಟ ಅವತಾರ ಕೃಷ್ಣಾವತಾರ . ಸಾಮಾನ್ಯವಾಗಿ ಕರ್ಮವು 'ಬಂಧ'ವಾಗಿ ವ್ಯಕ್ತವಾಗುವುದಿದೆ . ಯಾವುದೋ ಬಂಧಕ್ಕೆ ಬದ್ಧವಾಗಿ ಕರ್ಮ ಕರ್ತವ್ಯವಾಗುವುದನ್ನೇ ಕಾಣುತ್ತಿರುವಂತೆಯೇ ಬಂಧ ರಹಿತವಾದ ಕರ್ಮವೇ ಲಕ್ಷ್ಯವಾಗಿರುವ ಒಂದು ವ್ಯಕ್ತಿತ್ವ ದ್ವಾಪರಯುಗದಲ್ಲಿ ಗಮನ ಸೆಳೆಯುತ್ತದೆ ಅದೇ 'ಕೃಷ್ಣ' . ಸಮಗ್ರ ಕೃಷ್ಣಾವತಾರದಲ್ಲಿ ತಾನು ಸ್ವೀಕರಿಸಿದ , ತನಗೆ ಕರ್ತವ್ಯವಾಗಿರುವ ಕರ್ಮದ ಅನುಷ್ಠಾನವೇ ನಿಚ್ಚಳವಾಗುತ್ತದೆ . ಕೃಷ್ಣ ಈ ಮನಃಸ್ಥಿತಿಯನ್ನು ಬಾಲ್ಯದಿಂದಲೇ ರೂಢಿಸಿಕೊಂಡು ಬಂದ . ದ್ವಾಪರಾಯುಗದಲ್ಲಿ ಸನ್ನಿಹಿತವಾದ ಕುರುಕ್ಷೇತ್ರ ಸಂಗ್ರಾಮದಲ್ಲಿ ಪ್ರತಿಪಾದಿಸಿದ . 'ಬಂಧ' ಎಂಬ ಕಟ್ಟನ್ನು ಕಿತ್ತೊಗೆಯಬಹುದು , 'ಕರ್ಮದ' ಮುಂದೆ 'ನಿಯಮವನ್ನು' ತಿರಸ್ಕರಿಸಿದರೆ ಪ್ರಮಾದವಲ್ಲವೇ ಅಲ್ಲ ಎಂಬುದು ಕೃಷ್ಣನ ನಿಲುವು ಆಗಿದ್ದಿರಬೇಕು. ಬಂಧ ರಹಿತವಾದ ಕರ್ಮವೇ ಧರ್ಮ .ಇದು ಕೃಷ್ಣ ಸಾಧಿಸಿದ ಪರಮ ಧರ್ಮ ,ಇದು ವಿಚಲಿತವಾಗದ ಮಾನವಧರ್ಮ . ಬಾಲ್ಯಕ್ಕೆ ಪ್ರೀತಿಯ , ಬಾಂಧವ್ಯದ ಮಾಧುರ್ಯವನ್ನು ಒದಗಿಸಿದ ನಂದಗೋಕುಲ , ಗೋಪಾಲಕರು , ಗೋಪಿಯರು , ಗೋವುಗಳನ್ನು ಬಿಟ್ಟು ಮಧುರೆಗೆ ಹೊರಟ ಕೃಷ್ಣ ಮತ್ತೆ ಗೋಕುಲಕ್ಕೆ ಬರಲೇ ಇಲ್ಲ .ಕೊಳಲನ್ನು ನುಡಿಸಲೇ ಇಲ್ಲ . ಆದರೆ ಕಿರೀಟದಲ್ಲಿ ಒಂದು ನವಿಲುಗರಿ ಮಾತ್ರ ಉಳಿಯುತ್ತದೆ . ಗೋಕುಲದಲ್ಲಿ ಏರ್ಪಟ್ಟ ಬಾಂಧವ್ಯದ ಬಂಧ ತಾತ್ಕಾಲಿಕವಾಗಿ ಮಾತ್ರ ಇರುತ್ತದೆ . ಲಕ್ಷ್ಯ ಪ್ರಧಾನವಾದಾಗ ಬಂಧದಿಂದ ಕಳಚಿಕೊಳ್ಳುವ ಕೃಷ್ಣನನ್ನು ಬಂಧವಿಮೋಚಕನೆಂದು ಹೊಗಳಲಾಯಿತೇ ಹೊರತು ನಿಷ್ಕರುಣಿ ಎಂದು ಗೋಪರು - ಗೋಪಾಲಕರು ಆಕ್ಷೇಪಿಸಲೇ ಇಲ್ಲ . ಬಂಧ ಮತ್ತ ಕರ್ಮಗಳ ನಡುವೆ ಅಂತರವೇ ಇಲ್ಲ ಎನ್ನುತ್ತಾ ಕೊನೆಗೆ ಈ ಅಂತರ ಸುದೀರ್ಘವಾಗಿದೆ ಎನ್ನುವುದನ್ನೂ ಪ್ರತಿಪಾದಿಸುತ್ತಾನೆ ಕೃಷ್ಣ . ಕರ್ತವ್ಯದ ಮುಂದೆ "ಬಂಧ" ಗೌಣ ಎಂದು ಮುಂದೆ ಬದುಕಿನ ದೀರ್ಘ ಅವಧಿಯಲ್ಲಿ ಸಾಧಿಸುವುದನ್ನು ಗಮನಿಸ ಬಹುದು . ಮಾವ ಕಂಸನ ವಧೆ ಬಂಧ ರಹಿತವಾದ ಕರ್ಮವಲ್ಲದೆ ಮತ್ತೇನು . ಮಾವ ಎಂಬ ಬಾಂಧವ್ಯದ ಬಂಧಕ್ಕೆ ಒಳಗಾಗದೆ ಎಸಗಿದ ಕರ್ತವ್ಯ . ಕುಬ್ಜೆಯ ವಕ್ರತೆಯನ್ನು ತಿದ್ದಿದ್ದು ಕೇವಲ 'ಕರ್ಮ' ಮಾತ್ರ ,ಇಲ್ಲಿ ಯಾವುದೇ ಬಂಧುತ್ವದ ಬಂಧವಿಲ್ಲ . ಕೃಷ್ಣನ ಮದುವೆಗಳೆಲ್ಲ ಸಂದರ್ಭದ ಅನಿವಾರ್ಯತೆಯೇ ಆಗಿದ್ದುವು . ನರಕಾಸುರನ ಬಂಧನದಲ್ಲಿದ್ದ ಸ್ತ್ರೀಯರನ್ನು ಬಿಡಿಸಿದ ಕೃಷ್ಣ ಅವರಿಗೆ ಬದುಕು ಕೊಡುತ್ತಾನೆ ,ಎಂದರೆ ಕೃಷ್ಣ ರಕ್ಷೆ ಕೊಡುತ್ತಾನೆ , ಜೀವನಕ್ಕೆ ಭದ್ರತೆಯನ್ನು ಕೊಡುತ್ತಾನೆ .ಇದು ಆತನ ಕರ್ತವ್ಯವಾಗಿತ್ತು . ದ್ವಾರಕೆಯ ನಿರ್ಮಾಣ ಕಾರ್ಯವು ಯದುಗಳಿಗೆ ರಾಜತ್ವ ಇಲ್ಲ ಎಂಬ ಶಾಪ ವಾಕ್ಯದ ಮುಂದುವರಿಕೆಗೆ ಒಡ್ಡಿದ ತಡೆ .ಐವತ್ತೇಳನೇಯ ರಾಜ್ಯವಾಗಿ ಮೂಡಿದ ರಾಜ್ಯದಲ್ಲಿ ಅಣ್ಣ ಬಲರಾಮನಿಗೆ ಪಟ್ಟಕಟ್ಟುತ್ತಾನೆ ,ತಾನು ಹೆಸರಿಗೆ ಯುವರಾಜನಾಗಿ ಜವಾಬ್ದಾರಿಯೇ ಇಲ್ಲದವನಂತೆ ವರ್ತಿಸುತ್ತಾ ನಿರ್ಲಿಪ್ತತೆ ಮೆರೆಯುತ್ತಾನೆ. ಅಸಾಧ್ಯವನ್ನು ಸಾಧ್ಯವೆಂದು ಮಾಡಿ ತೋರಿಸುವ ಕೃಷ್ಣ ಅಘಟಿತ ಘಟನಾ ಪಟುವಾಗಿ ತೋರುತ್ತಾನೆ . ಈ ಸಂದರ್ಭದಲ್ಲಿ ಬಂಧವನ್ನು ಉಳಿಸಿಕೊಳ್ಳುವುದೇ ಇಲ್ಲ .ತನ್ನ ಪಾಲಿನ ಕರ್ಮ ಎಂದು ನಿರ್ವಹಿಸುತ್ತಾನೆ . ಹಾಗೆಯೇ ಬದುಕುತ್ತಾನೆ .ತನ್ನನ್ನು ಬಂಧುವೆಂದು ಭಾವಿಸಿದವರಿಗೂ ದಂಡನೆಯನ್ನು ಕೊಟ್ಟೇಕೊಟ್ಟ .ದ್ರೌಪದಿಗೆ ಅಕ್ಷಯಾಂಬರ ಕೊಡುವುದು ಕೃಷ್ಣನಿಗೆ ಧರ್ಮವಾಗುತ್ತದೆ, ಆದರೆ ಎಂತಹ ಪರೀಕ್ಷೆಯನ್ನು ಒಡ್ಡಿದ (ಬಾಲ್ಯದಲ್ಲಿ ಗೋಪಿಕೆಯರ ಸೀರೆ ಕದ್ದ ದೋಷಕ್ಕೆ ಅಕ್ಷಯಾಂಬರ ಪ್ರಧಾನ ಪ್ರಾಯಶ್ಚಿತ್ತ ಎಂಬ ವಿಶ್ಲೇಷಣೆಯೂ ಇದೆ). ಪಾಂಡವ ಪಕ್ಷಪಾತಿಯೇ ಹೊರತು ಪಾಂಡವರೊಂದಿಗೆ ಬಾಂಧವ್ಯದ ನಂಟು ಬೆಳೆಸಿಕೊಳ್ಳುವುದಿಲ್ಲ .ಲೌಕಿಕ ಬಾಂಧವ್ಯದ ಹೊರತಾದ ಸ್ನೇಹ ಮಾತ್ರ ಸ್ಪಷ್ಟ . ಧರ್ಮಾತ್ಮರಾದ ಪಾಂಡವರಿಗೂ ಬೇಕಾದುದು ಧರ್ಮಸಮ್ಮತವಾದ ರಾಜ್ಯ ಮಾತ್ರ .ಹಾಗಾಗಿ ಕೃಷ್ಣ , ಧರ್ಮದ ಪಕ್ಷವಹಿಸಿದ . ಯಾಕೆಂದರೆ ಕೃಷ್ಣನದ್ದು ಧರ್ಮ ಸಂಸ್ಥಾಪನೆಗಾಗಿ ಎತ್ತಿದ ಅವತಾರ ತಾನೆ.
ಪಾಂಡವರ ಪ್ರತಿನಿಧಿಯಾಗಿ ಆ ಕಾಲದ ಚಕ್ರವರ್ತಿ ಪೀಠದ ಮುಂದೆ ಅದೇ ಮನೆತನದ ದಾಯಾದ್ಯ ಕಲಹದ ನಿವೃತ್ತಿಗೆ ಸಂಧಾನಕಾರನಾಗಿ ಕೃಷ್ಣ ಬರುತ್ತಾನೆ . ಸಾಮಾನ್ಯ ಗೋಪಾಲಕನೊಬ್ಬ ಎಂತಹ ಪಾತ್ರನಿರ್ವಹಿಸುತ್ತಾನೆ ನೋಡಿ . ಇದಕ್ಕೆ ಕೃಷ್ಣನ ಬಂಧ ರಹಿತವಾದ 'ಕರ್ಮ' ಪ್ರಧಾನವಾದ ಜೀವನ ಶೈಲಿ ಕಾರಣ . ಒಂದು ಕಡೆ ಯುದ್ಧ ಅನಿವಾರ್ಯ ,ಏಕೆಂದರೆ ಪ್ರತಿಜ್ಞೆಗಳು ನೆರವೇರಬೇಕು . ಆದರೂ ಕೃಷ್ಣ ಸಂಧಿಗಾಗಿಯೇ ಪ್ರಯತ್ನಿಸುತ್ತಾನೆ . ಅರ್ಧ ರಾಜ್ಯಕ್ಕೆ ಬದಲಾಗಿ ಐದು ಗ್ರಾಮಗಳಾದರೂ ಸಾಕು ಎಂಬಲ್ಲಿಯವರೆಗೆ ವಿನೀತನಾಗಿ ಸಾರಿ ಹೇಳುವಂತೆ ಸಂಧಿಗಾಗಿ ಯತ್ನಿಸುತ್ತಾನೆ . ಫಲಿಸದೇ ಹೋದಾಗ ಧುರವೀಳ್ಯಪಡೆಯುತ್ತಾನೆ . ಪಾಂಡವ ಪ್ರತಿನಿಧಿಯಾದರೂ ಕೌರವನಿಗೆ ಬುದ್ಧಿಹೇಳುತ್ತಾನೆ . ಪಾಂಡವರೆಂಬ ಬಾಂಧವ್ಯದ ಭಾವನೆಗಳಿದ್ದರೆ ಈ ಕ್ರಮದಲ್ಲಿ ವರ್ತಿಸಲಾರ . ಇಂತಹ ನಿರ್ಣಾಯಕ ವೇಳೆಯಲ್ಲೂ ಕೃಷ್ಣ ಕರ್ಮ - ಕರ್ತವ್ಯವನ್ನು ಮಾತ್ರ ಮಾಡುತ್ತಾನೆ .ಬಂಧಗಳಿಲ್ಲದಂತೆ ಕಾರ್ಯವೆಸಗುತ್ತಾನೆ . ಕುರುಕ್ಷೇತ್ರದಲ್ಲಿ ಗೀತಾಚಾರ್ಯನಾದಾಗ ಧರ್ಮ ಯಾವುದು ,ಕರ್ಮ ಯಾವುದು ಎಂಬ ವಿವರದ ಆಧಾರದಲ್ಲಿ ಜೀವನ ಧರ್ಮವನ್ನು ಬೋಧಿಸುತ್ತಾನೆ . ಇದು ಯುದ್ಧಕ್ಕೆ ಅರ್ಜುನನ್ನು ಸಜ್ಜುಗೊಳಿಸುವುದು , ಸ್ವಧರ್ಮ ಮರೆತವನನ್ನು ಎಚ್ಚರಿಸುವುದು , ನಿಯಾಮಕ ಪ್ರತ್ಯೇಕ ಇದ್ದಾನೆ ನೀನು ನಿಮಿತ್ತಮಾತ್ರ ಎಂದು ಅರ್ಜುನನಿಗೆ ತಿಳಿಹೇಳುತ್ತಾ "ವಿರಾಡ್ - ದರ್ಶನ" ತೋರಿಸುತ್ತಾನೆ . ತಾನು ಪ್ರತಿಜ್ಞಾಬದ್ಧನಿದ್ದರೂ ಚಕ್ರ ಧರಿಸುತ್ತಾನೆ . ಭೀಷ್ಮನ ಪ್ರತಿಜ್ಞೆ ನೆರವೇರುವಂತೆ ಮಾಡುತ್ತಾನೆ . ಇದು ಕರ್ಮಾಧ್ಯಕ್ಷನ ಕೆಲಸವಾಗಿ ಕಾಣುವುದಿಲ್ಲವೇ . ಅಭಿಮನ್ಯು ಸಹಿತ ಆತ್ಮೀಯ ಬಂಧುಗಳು ಅಸುನೀಗಿದಾಗ ನಿರ್ಲಿಪ್ತನಂತೆ ವರ್ತಿಸುತ್ತಾನೆ . ಇದೆಲ್ಲ ಕರ್ಮವೇ ಪ್ರಧಾನವಾಗಿ ಸ್ವೀಕರಿಸಲ್ಪಟ್ಟ , ಬಂಧಗಳಿಲ್ಲದ ವ್ಯಕ್ತಿತ್ವಕ್ಕೆ ಮಾತ್ರ ಸಾಧ್ಯವಾದುದು . ಇಂತಹ ನೂರಾರು ಘಟನೆಗಳು ಕೃಷ್ಣನ ಬದುಕಿನಲ್ಲಿದೆ . ಪ್ರತಿ ವಿಷಯದಲ್ಲೂ ಕೃಷ್ಣ ಕರ್ಮಬಂಧಿಯಾಗುವುದಿಲ್ಲ ನಿಷ್ಕಾಮ 'ಕರ್ಮ' ನಿರತನಾಗಿ ಅನಾವರಣಗೊಳ್ಳುತ್ತಾನೆ . ಭೀಷ್ಮರಿಗೆ ಅದನ್ನೆ ತಿಳಿಹೇಳುತ್ತಾನೆ " ನಿಮ್ಮ ಕರ್ಮ , ಬಂಧ ಲಕ್ಷ್ಯವಾಗಿರುವಂತಹದ್ದು . " ನನ್ನದು "ಕರ್ಮಮಾತ್ರ" ಬಂಧ ರಹಿತವಾಗಿರುವಂತಹದ್ದು ಎಂದು .ಹೀಗೆ ಕೃಷ್ಣ ಎಂಬ ವ್ಯಕ್ತಿತ್ವವನ್ನು ಪ್ರವೇಶಿಸಿದಷ್ಟು ದರ್ಶನ ಕೊಡುತ್ತಲೇ ಇರುತ್ತದೆ .ಅರ್ಜುನ ಕಂಡ "ವಿರಾಡ್ - ದರ್ಶನ" ದ ಹರವು ಎಷ್ಟು ವಿಸ್ತಾರವಾಗಿಲ್ಲ ! ಗೀತೆಯ ಅನನ್ಯತೆ ಎಷ್ಟು ಗಾಢವಾಗಿಲ್ಲ..?
| ಅಟ್ಟೆಮಿ - ಪೇರರ್ಘ್ಯೆ| ಅಷ್ಟಮಿ ಪರ್ವದಿನದಂದು ಹಗಲು ಉಪವಾಸವಿದ್ದು ರಾತ್ರಿ 'ತಿಂಗೊಲು ಮೂಡ್ನಗ' ( ಚಂದ್ರೋದಯವಾಗುವ ವೇಳೆ) ಸ್ನಾನಮಾಡಿ ಮನೆಯ ತುಳಸಿಕಟ್ಟೆಯ ಎದುರು ತೆಂಗಿನಕಾಯಿ ಒಡೆದಿಟ್ಟು ಬಿಲ್ವಪತ್ರೆ ಅರ್ಪಿಸಿ ಹಾಲು ಎರೆಯುವ ( ಪೇರರ್ಘ್ಯೆ ಬುಡ್ಪುನಿ ) ಸರಳ - ಮುಗ್ಧ ಆಚರಣೆ ನಮ್ಮಲ್ಲಿ ಇದೆ . ಚಂದ್ರೋದಯದ ವರೆಗೆ ಸಮಯ ಕಳೆಯಲು " ಎಕ್ಕಡಿ " ಆಡುವುದು ವಾಡಿಕೆಯಾಗಿತ್ತು . ಪೇರರ್ಘ್ಯೆಗೆ " ಅಡಿಗೆ ಬುಡ್ಪುನಿ " ಎಂದೂ ಹೇಳುವುದಿದೆ . 'ಅಷ್ಟಮಿ ಉಡಾರಿಗೆ' ಎಂಬುದು ವಿಶೇಷ ತಿಂಡಿ . ಇದನ್ನು ಅಷ್ಟಮಿ ಸಂದರ್ಭದಲ್ಲಿ ಮಾಡುವುದು . ಅಕ್ಕಿಯ ಹಿಟ್ಟನ್ನು ಬುಟ್ಟಿಯಲ್ಲಿ ಸುರಿದು ಪಾತ್ರೆಯಲ್ಲಿರಿಸಿ (ತೊಂದುರು) ಬೇಯಿಸುವುದು . ಇದು 'ಉಡಾರಿಗೆ' . | ಅರ್ಘ್ಯ ಪ್ರದಾನ | ಶ್ರೀ ಕೃಷ್ಣ ಜನ್ಮಾಷ್ಟಮಿ / ಶ್ರೀ ಕೃಷ್ಣ ಜಯಂತಿಯಂದು ದಿನಪೂರ್ತಿ ಉಪವಾಸವಿದ್ದು ರಾತ್ರಿ ಚಂದ್ರೋದಯದ ವೇಳೆ ವಿವಿಧ ಭಕ್ಷ್ಯ , ಉಂಡೆ - ಚಕ್ಕುಲಿಗಳನ್ನು ಸಮರ್ಪಿಸಿ ಕೃಷ್ಣನಿಗೆ ಪೂಜೆ ಸಲ್ಲಿಸುವುದು ವಾಡಿಕೆ .ಇದರೊಂದಿಗೆ ' ಅರ್ಘ್ಯ ಪ್ರದಾನ ' ಅಷ್ಟಮಿ ಪರ್ವದ ವಿಶೇಷ . ಮನೆ ದೇವರ ಮುಂಭಾಗದಲ್ಲಿ ಭಕ್ಷ್ಯಗಳನ್ನಿಟ್ಟು ಸಮರ್ಪಣೆ ಮಾಡಿ ಆರತಿ ಎತ್ತುವುದು . ಬಳಿಕ ದೇವರ ಸಂಪುಷ್ಟವನ್ನಿರಿಸಿ ಕೃಷ್ಣ , ಬಲರಾಮ , ವಸುದೇವ , ದೇವಕಿ , ನಂದಗೋಪ , ಯಶೋದಾ , ಸುಭದ್ರೆಯರನ್ನು ಸ್ಮರಿಸಿಕೊಂಡು ಬಿಲ್ವಪತ್ರೆಯನ್ನು ಅರ್ಪಿಸಿ ಶಂಖದಲ್ಲಿ ನೀರು ತುಂಬಿ ಅರ್ಘ್ಯ ಪ್ರದಾನ ಮಾಡುವುದು . ಪನಃ ತುಳಸಿಕಟ್ಟೆಯ ಮುಂಭಾಗದಲ್ಲಿ ಪೂಜೆಮಾಡಿ ಒಡೆದ ತೆಂಗಿನಕಾಯಿಯನ್ನು ಇರಿಸಿ ( ತೆಂಗಿನಕಾಯಿ ಒಡೆದಾಗ ಕಣ್ಣುಳ್ಳ ಭಾಗವನ್ನು 'ಹೆಣ್ಣು' ಎಂದು , ಉಳಿದ ಭಾಗವನ್ನು 'ಗಂಡು' ಎಂದು ಗುರುತಿಸುವುದು ವಾಡಿಕೆ . ಇದರಲ್ಲಿ ಗಂಡು ಭಾಗವನ್ನು ಮಾತ್ರ ಅರ್ಘ್ಯ ಪ್ರದಾನಕ್ಕೆ ಬಳಸುವ ಸಂಪ್ರದಾಯವೂ ಇದೆ . ಕೃಷ್ಣ ಗಂಡು ಮಗುವಲ್ಲವೆ , ಸಾಂಕೇತಿಕವಾಗಿ ಗಂಡು ಭಾಗವನ್ನು ಅರ್ಘ್ಯ ಪ್ರದಾನಕ್ಕೆ ಉಪಯೋಗಿಸಿಕೊಳ್ಳುವುದು .) ಬಿಲ್ವಪತ್ರೆಯನ್ನು ಅರ್ಪಿಸಿ , ಶಂಖದಲ್ಲಿ ಹಾಲು ತುಂಬಿ ಮಂತ್ರಹೇಳುತ್ತಾ ಚಂದ್ರನಿಗೆ ಅರ್ಘ್ಯ ಅರ್ಪಿಸುವುದು ವೈದಿಕ ಕ್ರಮ . ಕೆಲವೆಡೆ ನೀರಿನಲ್ಲೆ ಅರ್ಘ್ಯ ಪ್ರದಾನ ಮಾಡುವ ಸಂಪ್ರದಾಯವಿದೆ .
||ವಿಟ್ಲಪಿಂಡಿ|| ವಿಠಲನ ಪಿಂಡಿ "ವಿಟ್ಲಪಿಂಡಿ" . ಪಿಂಡಿ ಎಂದರೆ ಗಂಟು . ವಿಠಲನಲ್ಲಿ ಇದ್ದದ್ದು ,ವಿಠಲನಲ್ಲಿಗೆ ತಂದದ್ದು ಉಂಡೆ - ಚಕ್ಕುಲಿಗಳಂತಹ ತಿಂಡಿಗಳುಳ್ಳ ಗಂಟು.ಈ ಗಂಟನ್ನು ಇಟ್ಟು ಕೊಂಡು ,ಅದನ್ನು ಪಡೆಯಲು ಬೇಕಾಗಿ ಆಡಿದ್ದ ಆಟವೇ ಪಿಂಡಿಯೇ ಮುಖ್ಯವಾದ ಆಟವಾಯಿತು,ಅದು 'ವಿಟ್ಲ ಪಿಂಡಿ'ಯಾಯಿತು. ವಿಠಲನಾದ ಕೃಷ್ಣನು ಗೋಪಾಲರೊಂದಿಗೆ - ಗೋಪಿಯರೊಂದಿಗೆ ಆಡಿದ ಆಟಗಳೇ ಕೃಷ್ಷ ಲೀಲೆ . ಇದನ್ನು ಉತ್ಸವ ಎಂಬ ನೆನಪಾಗಿ ಆಚರಿಸುವುದರಿಂದ ಅದುವೇ ಲೀಲೋತ್ಸವ . ಗೋಪಿಯರ ಕಣ್ಣು ತಪ್ಪಿಸಿ ಗೋಪರ ಮನೆಗೆ ಹೊಕ್ಕು ಹಾಲು ಮೊಸರುಗಳನ್ನು ಕದ್ದು ತಿಂದದ್ದು ಮತ್ತು ತಿನ್ನುವಾಗ ಕೈತಪ್ಪಿ ಬಿದ್ದ ಮಡಕೆಗಳು ಪುಡಿಯಾದಾಗ "ಮೊಸರು ಕುಡಿಕೆ" ಯಾಗುತ್ತದೆ . ಎತ್ತರದಲ್ಲಿ ತೂಗಿಸಿಡುವ ಹಾಲು - ಮೊಸರು ತುಂಬಿದ ಮಡಕೆ - ಕುಡಿಕೆಗಳಿಗೆ ಕಲ್ಲು ಎಸೆದು ಅಥವಾ ಕೋಲಿನಿಂದ ರಂಧ್ರಮಾಡಿ ಕೆಳಗೆ ನಿಂತು ಹಾಲಿನ ಧಾರೆಗೆ ಬಾಯಿಕೊಟ್ಟು ಕುಡಿಯುವ ಚೇಷ್ಠೆ ಕೃಷ್ಣನಾಡಿದ "ಮೊಸರು ಕುಡಿಕೆ"ಯ ಅಣಕನ್ನು ಅಥವಾ ಪ್ರತಿಕೃತಿಯನ್ನು ನಾವಿಂದು ಕಾಣುತ್ತೇವೆ . (ಆಧಾರ : ಓದಿದ್ದು ,ಕೇಳಿದ್ದು ,ಬರೆದದ್ದು) ಬರಹ : ಕೆ . ಎಲ್ . ಕುಂಡಂತಾಯ
ಕಲ್ಯಾಣಪುರ ರೋಟರಿ ವತಿಯಿಂದ ಪುಸ್ತಕ ವಿತರಣೆ

Posted On: 25-08-2021 09:52AM
ಉಡುಪಿ : ರೋಟರಿ ಜಿಲ್ಲಾ ಯೋಜನೆ ವಿದ್ಯಾಸೇತು ಕಾರ್ಯಕ್ರಮದಡಿ ಕಲ್ಯಾಣಪುರ ರೋಟರಿ ವತಿಯಿಂದ ಟಿ.ಎಂ.ಎ. ಪೈ ಪ್ರೌಢ ಶಾಲೆ ಕಲ್ಯಾಣಪುರದ 41 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಈ ದಿನ ಟಿ.ಎಂ.ಎ. ಪೈ ಪ್ರೌಢ ಶಾಲೆ ಕಲ್ಯಾಣಪುರದಲ್ಲಿ ಶಾಲಾ ಇಂಟರಾಕ್ಟ್ ಕ್ಲಬ್ ನ ಸಹಯೋಗದಲ್ಲಿ ನಡೆಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ಶೇಖರ್ ರವರು ಈ ಕಾರ್ಯವನ್ನು ಶ್ಲಾಘಿಸಿ ಶಿಕ್ಷಣದ ಬಗ್ಗೆ ರೋಟರಿ ಸಂಸ್ಥೆಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಿದರು.
ವಲಯ ಸೇನಾನಿ ಬ್ರಾಯನ್ ಡಿಸೋಜ, ಅಧ್ಯಕ್ಷ ಶಂಭು ಶಂಕರ್, ಕಾರ್ಯದರ್ಶಿ ಪ್ರಕಾಶ್ ಕುಮಾರ್ ಮತ್ತು ಚಯರ್ ಮ್ಯಾನ್ ಲಿಯೋ ವಿಲಿಯಂ ಅಂದ್ರಾದೆರವರು ಸಮಯೋಚಿತವಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು. ನಿಕಟಪೂರ್ವ ಅಧ್ಯಕ್ಷ ಡೆಸ್ಮಂಡ್ ವಾಸ್, ಸದಸ್ಯರುಗಳಾದ ವಿದ್ಯಾಧರ್ ಕಿಣಿ, ರಾಮ ಪೂಜಾರಿ, ರಾಮಕೃಷ್ಣ ಆಚಾರ್ಯ ರವರು ಉಪಸ್ಥಿತರಿದ್ದರು.
ನಂತರ ಮಿಲಾಗ್ರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಕಲ್ಯಾಣಪುರ, ಸರ್ಕಾರಿ ಪ್ರೌಢಶಾಲೆ ಕೆಮ್ಮಣ್ಣು ಹಾಗು ಕಾರ್ಮೆಲ್ ಪ್ರೌಢಶಾಲೆ ಕೆಮ್ಮಣ್ಣು ಶಾಲೆಗಳಿಗೆ ಭೇಟಿ ನೀಡಿ ಸಾಂಕೇತಿಕ ಕಾರ್ಯಕ್ರಮವನ್ನು ಜರುಗಿಸಿ ತಲಾ 65, 20, 20 ರಂತೆ ಒಟ್ಟು ರೂ.14,600 ವೆಚ್ಚದಲ್ಲಿ 146 ಪುಸ್ತಕಗಳನ್ನು ವಿತರಿಸಲಾಯಿತು.
ಬಂಟಕಲ್ ನ ಶ್ರಾವ್ಯ ಕುಲಾಲ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಚತುರ್ಥ ಸ್ಥಾನ

Posted On: 24-08-2021 09:40PM
ಕಾಪು : ಶಿರ್ವದ ಹಿಂದು ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಶ್ರಾವ್ಯ ಕುಲಾಲ್ ಇತ್ತೀಚೆಗೆ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 621 (99.36%) ಅಂಕ ಪಡೆದು ರಾಜ್ಯದಲ್ಲಿ ಚತುರ್ಥ ಸ್ಥಾನಿಯಾಗಿದ್ದು, ಕಲಿತ ಶಾಲೆಯಲ್ಲಿ ಪ್ರಥಮ ಸ್ಥಾನಿಯಾಗಿ ಕೀರ್ತಿಯನ್ನು ತಂದಿದ್ದಾರೆ.
ಇವರು ಬಂಟಕಲ್ ನ ಸದಾನಂದ ಮತ್ತು ಸುನಂದರವರ ಪುತ್ರಿಯಾಗಿದ್ದಾರೆ.
ಪಡುಬಿದ್ರಿ : ಕಾರು ಢಿಕ್ಕಿಯಾಗಿ ಮೃತಪಟ್ಟ ಅಪರಿಚಿತ ವ್ಯಕ್ತಿ

Posted On: 24-08-2021 08:10PM
ಪಡುಬಿದ್ರಿ : ಅಪರಿಚಿತ ಭಿಕ್ಷುಕರೋರ್ವರಿಗೆ ಕಾರು ಢಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಬೀಡು ಬಳಿ ಸೋಮವಾರ ರಾತ್ರಿ ಘಟಿಸಿದೆ.
ಸುಮಾರು ೩೫-೪೦ರ ಹರೆಯದ ವ್ಯಕ್ತಿ ಈ ಪರಿಸರದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಕಾರು ಉಡುಪಿಯಿಂದ ಮಂಗಳೂರಿನತ್ತ ಹೋಗುತ್ತಿದ್ದು ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ.
ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಪಡುಬಿದ್ರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ಪೆರ್ಡೂರು : ವಿಜ್ಞಾನ ವಿಭಾಗದಲ್ಲಿ 600 ರಲ್ಲಿ 599 ಅಂಕ ಪಡೆದು ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಥಮ ಸ್ಥಾನಿಯಾದ ಶ್ರೀನಿಧಿ ಕೆ.ಕುಲಾಲ್

Posted On: 23-08-2021 10:21PM
ಉಡುಪಿ : ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಉಡುಪಿಯ ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀನಿಧಿ ಕೆ. ವಿಜ್ಞಾನ ವಿಭಾಗದಲ್ಲಿ 600 ರಲ್ಲಿ 599 ಅಂಕ ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಈಕೆ ಪೆರ್ಡೂರು ಗ್ರಾಮದ ಪುತ್ತಿಗೆ ದರ್ಕಾಸು ನಿವಾಸಿ ದಯಾನಂದ ಕೆ. ಶಂಕರ್ ಪುತ್ರಿಯಾಗಿದ್ದಾರೆ.
(ಮಾಹಿತಿ :ಉದಯ ಕುಲಾಲ್ ಪುತ್ತಿಗೆ) (ವರದಿ :ಉದಯ ಕುಲಾಲ್ ಕಳತ್ತೂರು)
ಸಾಮಾಜಿಕ ಜಾಲತಾಣಗಳ ಸ್ಪರ್ಧೆಗಳಿಂದ ಸಾಹಿತ್ಯದ ಗುಣಮಟ್ಟ ಕುಸಿದಿದೆ : ಹಾ. ಮ. ಸತೀಶ

Posted On: 23-08-2021 04:52PM
ಕಾಪು : ಪ್ರತೀ ದಿನ, ಪ್ರತಿ ವಾರ ನಿರಂತರವಾಗಿ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುವ ಉದ್ಧೇಶದಿಂದಲೇ ವಾಟ್ಸಾಪ್ ಸಾಹಿತ್ಯ ಬಳಗಗಳನ್ನು ರೂಪಿಸುವುದು ಎಷ್ಟು ಮಾತ್ರಕ್ಕೂ ಸಲ್ಲದು. ಇದರಿಂದಾಗಿ ಉದಯೋನ್ಮುಖ ಬರಹಗಾರರಲ್ಲಿ ಪ್ರಶಸ್ತಿ, ಬಹುಮಾನಗಳ ಹಂಬಲ ಹೆಚ್ಚಿ ಅವರು ಕೃತಿಚೌರ್ಯ ಮಾಡಲು ಮುಂದಾಗುತ್ತಾರೆ. ಇಂಥ ಬೆಳವಣಿಗೆ ಸಾಹಿತ್ಯಕ್ಕೆ ಮಾರಕ ಎಂದು ಖ್ಯಾತ ಕವಿ, ಬರಹಗಾರ, ಶಿಕ್ಷಕ ಬೆಂಗಳೂರಿನ ಹಾ. ಮ. ಸತೀಶ ಅವರು ಹೇಳಿದರು. ಅಖಿಲ ಕರ್ನಾಟಕ ಬರಹಗಾರರ ವೇದಿಕೆಯು ಗೂಗಲ್ ಮೀಟ್ ಮೂಲಕ ನಡೆಸಿದ "ವಾಟ್ಸಾಪ್ ಸಾಹಿತ್ಯ ಬಳಗಗಳು ಮತ್ತು ಉದಯೋನ್ಮುಖ ಬರಹಗಾರರು" ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.
ಉದಯೋನ್ಮುಖರು ಸ್ವಂತಿಕೆಯನ್ನು ಅಳವಡಿಸಿಕೊಂಡು ಸಾಹಿತ್ಯದಲ್ಲಿ ಮೇಲೆ ಬರಬೇಕು. ಕಾವ್ಯದಲ್ಲಿ ಪೀಠಿಕೆ, ವಿಷಯ ಮತ್ತು ಮುಕ್ತಾಯ ಬೇಕು. ಆದರೆ ಉದಯೋನ್ಮುಖರ ಕಾವ್ಯದಲ್ಲಿ ಇದರ ಕೊರತೆ ಕಾಣುತ್ತಿದೆ. ಯಾರೇ ಆಗಲಿ ಯಾವುದೇ ಬಳಗಕ್ಕೆ ಸೇರುವ ಮೊದಲು ಆ ಬಳಗದ ಉದ್ಧೇಶಗಳನ್ನು ತಿಳಿದುಕೊಂಡು ಸೇರಬೇಕು ಎಂದು ಹಾ. ಮ. ಸತೀಶ ಅವರು ಕಿವಿಮಾತು ಹೇಳಿದರು. ಅವರು ತಮ್ಮ ಉಪನ್ಯಾಸದಲ್ಲಿ ವಾಟ್ಸಾಪ್ ಬಳಗಗಳು ಬರುವ ಮೊದಲು ಸಾಹಿತ್ಯ ಬಳಗಗಳು ಮತ್ತು ಅವುಗಳನ್ನು ನಂಬಿದ್ದ ಬರಹಗಾರರು ಹೇಗಿದ್ದರು ಎಂಬುವುದರ ಬಗ್ಗೆ ವಿವರವಾಗಿ ತಿಳಿಸಿದರು. ಅಂದು ಬರಹಗಾರರಲ್ಲಿ ಕಲಿಯುವ ಹಂಬಲವಿತ್ತು. ಆದರೆ ಇಂದು ಕಲಿಯುವ ಹಂಬಲ ಕ್ಷಣಿಕವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದರಿಂದಾಗಿ ಸಾಹಿತ್ಯದ ಗುಣಮಟ್ಟ ಕುಸಿದಿದೆ ಎಂದರು. ನಿರಂತರ ಓದು, ಕಲಿಯುವಿಕೆ, ಕಲಿತದ್ದನ್ನು ಮನನ ಮಾಡಿಕೊಂಡು ತನ್ನದೇ ಆದ ಸ್ವಂತಿಕೆ ಮತ್ತು ಶೈಲಿಯಲ್ಲಿ ಬರೆದಾಗಲೇ ಒಬ್ಬ ಒಳ್ಳೆಯ ಬರಹಗಾರನಾಗಲು ಸಾಧ್ಯವೆಂದು ಹಾ. ಮ. ಸತೀಶ ಅವರು ತಿಳಿಸಿದರು.
ವಾಟ್ಸಾಪ್ ಸಾಹಿತ್ಯ ಬಳಗಗಳು, ಸ್ಪರ್ಧೆಗಳು, ಅಡ್ಮಿನ್ ಗಳು, ತೀರ್ಪುಗಾರರು, ಬಹುಮಾನ - ಪ್ರಶಸ್ತಿಗಳು ಇತ್ಯಾದಿ ವಿಷಯಗಳ ಬಗ್ಗೆ ಸಂವಾದ ನಡೆಯಿತು. ಸಾಹಿತ್ಯ ಬಳಗದಲ್ಲಿ ರಾಜಕೀಯ ಪೋಸ್ಟ್ ಗಳನ್ನು ಹಾಕಿದಾಗ ಮತ್ತು ಕೃತಿಚೌರ್ಯಗಳು ಪತ್ತೆಯಾದಾಗ ಸಂಬಂಧಿಸಿದ ಬಳಗಗಳ ಎಲ್ಲಾ ಸದಸ್ಯರೂ ಇವುಗಳನ್ನು ವಿರೋಧಿಸಬೇಕು. ಸ್ಪರ್ಧೆಗಳ ತೀರ್ಪುಗಾರರು ಬಳಗಗಳಲ್ಲಿ ಇಲ್ಲದದವರಾಗಿದ್ದರೆ ಮಾತ್ರವೇ ಫಲಿತಾಂಶ ನಿಷ್ಪಕ್ಷಪಾತವಾಗಿ ಬರಲು ಸಾಧ್ಯ ಎಂದು ಶ್ರೀರಾಮ ದಿವಾಣ ತಿಳಿಸಿದರು. ಕೃತಿಚೌರ್ಯವನ್ನು ಪತ್ತೆಹಚ್ಚಿದವರನ್ನೇ ಬಳಗದಲ್ಲಿ ಟಾರ್ಗೆಟ್ ಮಾಡಿ ನಿಂದಿಸುವುದು, ಅಡ್ಮಿನ್ ಗಳೇ (ಎಲ್ಲರೂ ಅಲ್ಲ) ವಯುಕ್ತಿಕವಾಗಿ ಮೆಸೇಜ್ ಮಾಡಿ ಟೀಕಿಸುವುದು, ಮಾನಹಾನಿ, ತೇಜೋವಧೆ ಮಾಡುವಂಥ ಬರಹಗಳನ್ನು ಬಳಗಗಳಲ್ಲಿ ಬರೆದು ಅವಮಾನ ಮಾಡುವುದು, ಕೆಲವರು ಗುಂಪುಗಾರಿಕೆ ಮಾಡುವುದು ಇತ್ಯಾದಿ ನಡೆಯುತ್ತಿದೆ. ಇಂಥದ್ದೆಲ್ಲ ನಡೆಯುವುದು ಸಕಾರಾತ್ಮಕ ಬೆಳವಣಿಗೆಯಲ್ಲ ಎಂದು ರತ್ನಾ ಟಿ. ಕೆ. ಭಟ್ ತಿಳಿಸಿದರು. ತೀರ್ಪುಗಾರರೇ ಸ್ಪರ್ಧೆಯಲ್ಲಿನ ಸ್ಥಾನಗಳ ಆಯ್ಕೆಯಲ್ಲಾಗುತ್ತಿರುವ ಲೋಪಗಳಿಗೆ ಕಾರಣವೆಂದು ಈಶ್ವರ ಸಂಪಗಾವಿ ಹೇಳಿದರು. ಬಳಗಗಳಿಗೆ ಲಿಂಕ್ ಮೂಲಕ ಆಗಮಿಸುವ ಸದಸ್ಯರು ಬಳಗದವನ್ನು ದುರ್ಬಳಕೆ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ, ಹೀಗಾಗಬಾರದು ಎಂದು ಸುಭಾಷಿಣಿಚಂದ್ರ ಅವರು ತಿಳಿಸಿದರೆ, ಬಳಗಗಳು ಹೆಚ್ಚುತ್ತಿರುವುದು ಮತ್ತು ಹೆಚ್ಚುತ್ತಿರುವ ಬಳಗಗಳಿಂದ ಗುಣಮಟ್ಟ ರಹಿತ ಸ್ಪರ್ಧೆಗಳು ಹೆಚ್ಚುತ್ತಿರುವುದು ಕಳವಳಕಾರಿ ವಿಷಯವೆಂದರು ಕಾ. ವೀ. ಕೃಷ್ಣದಾಸ್ ಅವರು.
ಸುಭಾಷಿಣಿಚಂದ್ರ ಉಪ್ಪಳ ಪ್ರಾರ್ಥನಾಗೀತೆ ಹಾಡಿ, ಅಖಿಲ ಕರ್ನಾಟಕ ಬರಹಗಾರರ ವೇದಿಕೆಯ ಉಪಾಧ್ಯಕ್ಷರಾದ ಜನಾರ್ದನ ದುರ್ಗ ಸ್ವಾಗತಿಸಿ, ಸಹ ಕಾರ್ಯದರ್ಶಿ ಕೆ. ಪಿ. ಅಶ್ವಿನ್ ರಾವ್ ವಂದಿಸಿ, ಕಾರ್ಯದರ್ಶಿ ಶ್ರೀರಾಮ ದಿವಾಣ ಕಾರ್ಯಕ್ರಮ ನಿರ್ವಹಿಸಿದರು.
ಖ್ಯಾತ ಖಗೋಳಶಾಸ್ತ್ರಜ್ಞ ಡಾ.ಎ.ಪಿ ಭಟ್ - ಅದಮಾರು ಪಿಪಿಸಿ ಕಾಲೇಜಿನ ಗೌರವ ಭೌತಶಾಸ್ತ್ರ ಉಪನ್ಯಾಸಕರಾಗಿ ನೇಮಕ

Posted On: 23-08-2021 11:24AM
ಕಾಪು : ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿಗೆ ಭೌತಶಾಸ್ತ್ರ ವಿಶೇಷ ಗೌರವ ಉಪನ್ಯಾಸಕರಾಗಿ ಪೂರ್ಣಪ್ರಜ್ಞ ಪದವಿ ಕಾಲೇಜು ಉಡುಪಿಯ ನಿವೃತ್ತ ಪ್ರಾಂಶುಪಾಲರೂ, ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕರೂ ಹಾಗೂ ಖ್ಯಾತ ಖಗೋಳಶಾಸ್ತ್ರಜ್ಞರಾದ ಡಾ.ಎ.ಪಿ.ಭಟ್ ರವರನ್ನು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಹಾಗೂ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನೇಮಕ ಮಾಡಿದ್ದಾರೆ.
ಸಾವಿರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಖಗೋಳ ವೀಕ್ಷಣೆಯ ಬಗ್ಗೆ ಅರಿವು ಮೂಡಿಸಿರುವ ಇವರು ಅನೇಕ ರಾಷ್ಟ್ರ ಮಟ್ಟದ ವಿಚಾರಸಂಕಿರಣಗಳಲ್ಲಿ ವಿಶೇಷ ಪ್ರಬಂಧ ಮಂಡನೆ, ವಿಶೇಷ ಉಪನ್ಯಾಸವನ್ನು ನೀಡಿರುತ್ತಾರೆ. ಅಲ್ಲದೆ ಯಾವುದೇ ವಿಶಿಷ್ಟ ವಿದ್ಯಮಾನಗಳಿರಲಿ ಅವುಗಳನ್ನು ಗುರುತಿಸಿ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಖಗೋಳ ಮಾಹಿತಿ ನೀಡುವಲ್ಲಿ ಡಾ. ಎ.ಪಿ.ಭಟ್ ರವರ ಪಾತ್ರ ಮಹತ್ವದ್ದು. ರಾಜ್ಯದ ಪ್ರಮುಖ ಖಗೋಳ ಶಾಸ್ತ್ರಜ್ಞರಲ್ಲಿ ಡಾ. ಎ.ಪಿ ಭಟ್ ರವರು ಸುಪ್ರಸಿದ್ಧರು.
ಖಗೋಳ ವಿಜ್ಞಾನದ ಕುರಿತಾದ ಇವರ ಹಲವಾರು ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಭೌತಶಾಸ್ತ್ರವನ್ನು ಸರಳ ರೀತಿಯಲ್ಲಿ ಬೋಧಿಸುವ ಇವರ ಉಪನ್ಯಾಸ ವಿದ್ಯಾರ್ಥಿಗಳನ್ನು ಅಯಸ್ಕಾಂತೀಯ ಶಕ್ತಿಯಂತೆ ಆಕರ್ಷಿಸುತ್ತದೆ. ವಿವಿಧ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ. ಡಾ.ಎ.ಪಿ ಭಟ್ ರವರನ್ನು ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿಗೆ ಭೌತಶಾಸ್ತ್ರ ವಿಶೇಷ ಗೌರವ ಉಪನ್ಯಾಸಕರಾಗಿ ನೇಮಕ ಮಾಡಿರುವುದಕ್ಕೆ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಅತ್ಯಂತ ಹರ್ಷ ವ್ಯಕ್ತಪಡಿಸಿದರು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಸಾಧನೆ ಮಾಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಂಡಾರಿಬೆಟ್ಟು : ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನೆ

Posted On: 23-08-2021 09:53AM
ಮಂಗಳೂರು : ಬಂಟ್ವಾಳ ತಾಲೂಕಿನ ಯುವಜನ ವ್ಯಾಯಾಮಶಾಲೆ ಭಂಡಾರಿಬೆಟ್ಟುವಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ.) ಮತ್ತು ತುಲುನಾಡ ಯುವಸೇನೆ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನಾ ಸಮಾರಂಭ ನಡೆಯಿತು. ಜೈ ತುಲುನಾಡ್ (ರಿ.) ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ತುಲು ಲಿಪಿ ಕಲಿಯುವ ಕಾರ್ಯಗಾರವನ್ನು ಚೇತನ್ ಮುಂಡಾಜೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತುಲು ಲಿಪಿ ಶಿಕ್ಷಕರಾದ ಜಗದೀಶ ಗೌಡ ಕಲ್ಕಳ ರವರು ತುಲು ಲಿಪಿ ಬರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.

ಉದ್ಘಾಟಿಸಿ ಮಾತನಾಡಿದ ಚೇತನ್ ಮುಂಡಾಜೆರವರು ತುಲು ಭಾಷೆಗೆ ಲಿಪಿ ಇದ್ದರೂ ಅದೆಷ್ಟೋ ಜನರಿಗೆ ತಿಳಿಯದೆ ಹೋಗಿದೆ, ತುಲು ಭಾಷೆಗೆ ಸುಮಾರು 2500 ವರ್ಷದ ಇತಿಹಾಸ ಇದೆ, ಇಂತಹ ಭಾಷೆಯನ್ನು ನಾವು ಕಲಿಯದೆ ಹಿಂದುಳಿಯುವಂತೆ ಮಾಡಿದ್ದೇವೆ. ಇನ್ನಾದರೂ ಈ ಭಾಷೆಯನ್ನು, ಲಿಪಿಯನ್ನು ಕಲಿತು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯ ಮಾಡುವ ಎಂದರು.

ಜೈ ತುಲುನಾಡ್ (ರಿ) ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್ ಮಾತನಾಡಿ, ಸಂಘಟನೆ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುವ ಕಾಲದಿಂದ ಇಂದಿನ ತನಕವೂ ತುಲುವಿಗೆ ಸ್ಥಾನಮಾನಕ್ಕಾಗಿ ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಅಕಾಡೆಮಿಯೊಟ್ಟಿಗೆ ಸಂಘಟನೆಯು ಸಹಕಾರ ನೀಡುತ್ತಾ ಬರುತ್ತಿದೆ. ತುಲುನಾಡಿನ ಎಲ್ಲಾ ಅಂಗಡಿ, ಶಾಲೆ, ಕಚೇರಿಯಲ್ಲಿ ತುಲು ಲಿಪಿಯ ನಾಮಫಲಕ ಹಾಕಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸೀತಾರಾಮ ಸಜಿಪ, ಜೈ ತುಲುನಾಡ್ (ರಿ.) ಉಪಾಧ್ಯಕ್ಷರಾದ ಉದಯ್ ಪೂಂಜ, ಉಪ ಸಂಘಟನಾ ಕಾರ್ಯದರ್ಶಿ ಅಶ್ರಫ್ ಭಸ್ಥಿಕೋಡಿ, ತುಲು ಲಿಪಿ ಶಿಕ್ಷಕರಾದ ಪೂರ್ಣಿಮಾ ಬಂಟ್ವಾಳ ಹಾಗೂ ಪೃಥ್ವಿ ತುಲುವೆ ಉಪಸ್ಥಿತರಿದ್ದರು. ಧೀರಜ್ ಸ್ವಾಗತಿಸಿ, ಮಹೇಶ್ ವಂದಿಸಿ, ಲಿಖಿತ್‌ರಾಜ್ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು.
92 ಹೇರೂರು : ಶ್ರೀ ಗುರು ರಾಘವೇಂದ್ರ ಚೆಂಡೆ ಬಳಗ ಉದ್ಘಾಟನೆ, ಗುರುವಂದನ ಕಾರ್ಯಕ್ರಮ

Posted On: 22-08-2021 10:30PM
ಕಾಪು : 92 ಹೇರೂರಿನ ಶ್ರೀ ಗುರು ರಾಘವೇಂದ್ರ ಚೆಂಡೆ ಬಳಗವನ್ನು ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿಯ ಸ್ಥಾಪಕ ಕಾರ್ಯದರ್ಶಿ ಶ್ರೀನಿವಾಸ ಪ್ರಭು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹೇರೂರು ಗ್ರಾಮದಲ್ಲಿ ಉಚಿತವಾಗಿ ಚೆಂಡೆ ತರಬೇತಿಯನ್ನು ಪ್ರಾರಂಭಿಸಿ ಇಂದು ಗುರುವಂದನ ಕಾರ್ಯಕ್ರಮವನ್ನು ಮಾಡುತ್ತಿರುವುದಕ್ಕೆ ಶುಭ ಹಾರೈಸಿದರು.

ಮಜೂರು ಗ್ರಾಮಪಂಚಾಯತ್ನ ಉಪಾಧ್ಯಕ್ಷರಾದ ಮಧುಸೂದನ ಸಾಲಿಯಾನ್ ರವರು ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಿ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಚೆಂಡೆ ಬಳಗದ ಸದಸ್ಯರನ್ನು ಅಭಿನಂದಿಸಿದರು. ಚೆಂಡೆ ಬಳಗದ ಅಧ್ಯಕ್ಷರಾದ ದಿನೇಶ್ ದೇವಾಡಿಗ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಉಚಿತ ಚೆಂಡೆ ತರಬೇತಿಯನ್ನು ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲು ಸಹಕರಿಸಿದ ಹೊರದೇಶದಲ್ಲಿರುವ ಶ್ರೀಪತಿ ಪ್ರಭು ಹೇರೂರು ಇವರಿಗೆ ಕೃತಜ್ಞತೆಯನ್ನು ಸಲ್ಲಿಸಿ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸದಲ್ಲಿ ಇನ್ನು ಇದಕ್ಕಿಂತ ಉತ್ತಮ ಅಂಕಗಳನ್ನು ಗಳಿಸಿ ಒಳ್ಳೆಯ ಜೀವನ ನಡೆಸಲಿ ಎಂದು ಶುಭ ಹಾರೈಸಿದರು.
ಚೆಂಡೆ ತರಬೇತಿ ನೀಡಿದ ಮುಲ್ಕಾಡಿ ರಾಘವೇಂದ್ರ ಭಟ್ ಇವರಿಗೆ ಚೆಂಡೆ ಬಳಗದ ವಿದ್ಯಾರ್ಥಿಗಳು ಫಲಪುಷ್ಪ ಗುರು ಕಾಣಿಕೆಯನ್ನು ನೀಡಿ ಸನ್ಮಾನಿಸಿದರು. ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ ದೇವಾಡಿಗ, ಮಹಿಳಾ ಬಳಗದ ಅಧ್ಯಕ್ಷರಾದ ಶಶಿಕಲಾ ದೇವಾಡಿಗ, ದೇವಾಡಿಗರ ಸಂಘದ ಶಂಕರ್ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೇರೂರು ಸೇವಾ ಪ್ರತಿನಿಧಿ ಶ್ರೀಮತಿ ವಸಂತಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಚೆಂಡೆ ಬಳಗದ ವಿದ್ಯಾ ಆಚಾರ್ಯರವರು ಸನ್ಮಾನ ಪತ್ರ ವಾಚಿಸಿದರು. ಕುಮಾರಿ ಪ್ರೀತಿ ಆಚಾರ್ಯರವರು ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಅಖಿಲ ದೇವಾಡಿಗರವರು ಕಾರ್ಯಕ್ರಮ ನಿರೂಪಿಸಿ ಚೆಂಡೆ ಬಳಗದ ಕಾರ್ಯದರ್ಶಿ ಉದಯ ದೇವಾಡಿಗರವರು ಧನ್ಯವಾದ ನೀಡಿದರು.