Updated News From Kaup

ಶಿರ್ವ : ಕಸ ಬಿಸಾಡುವವರ ವಿವರ ನೀಡಿದವರಿಗೆ ಗ್ರಾ.ಪಂ ನಿಂದ ಬಹುಮಾನ

Posted On: 02-08-2021 10:12PM

ಕಾಪು : ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ ಕಸ ಸಂಗ್ರಹಣೆಗೆ ಸೂಕ್ತ ವ್ಯವಸ್ಥೆ ಇದ್ದರೂ ಅದನ್ನು ಜನರು ಬಳಸದಿರುವುದು ಒಂದು ದೊಡ್ಡ ಸಮಸ್ಯೆಯಾಗುತ್ತಿದೆ. ಕೆಲವರು ತಮಗೆ ಬೇಕಾದಲ್ಲಿ ಕಸ ಬಿಸಾಡುವ ಮೂಲಕ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ. ಇಂತವರಿಗೆ ಸೂಕ್ತ ದಂಡ ಹಾಗೆಯೇ ಕಸ ಬಿಸಾಡುವವರ ಮಾಹಿತಿ ನೀಡಿದವರಿಗೆ ಬಹುಮಾನವನ್ನು ನೀಡುವುದಾಗಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮ ಪಂಚಾಯತ್ ಘೋಷಿಸಿದೆ.

ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾತನಾಡಿ ಶಿರ್ವ ಗ್ರಾಮ ಪಂಚಾಯತ್ ನ ಕಸ ಸಂಗ್ರಹ ವಾಹನವು ದಿನಾ ಅಥವಾ ಕೆಲವು ಕಡೆ ವಾರದಲ್ಲಿ ಒಂದೆರಡು ಬಾರಿ ಪ್ರತಿ ವಾರ್ಡುಗಳಲ್ಲಿ ಪ್ರತೀ ಮಾರ್ಗದಲ್ಲಿ ಸಂಚರಿಸಿ ಪ್ರತೀ ಮನೆ, ಅಂಗಡಿ, ಹೋಟೇಲುಗಳಿಂದ ಕಸ ಸಂಗ್ರಹಿಸುತ್ತಿದೆ. ಗ್ರಾಮಸ್ಥರು ಈ ವಾಹನಕ್ಕೆ ತಮ್ಮ ಮನೆಯ ಒಣ ಕಸವನ್ನು ನೀಡಬೇಕು. ಹಸಿ ಕಸವನ್ನು ತಮ್ಮ ಮನೆಯ ಹಂತದಲ್ಲೆ ವಿಲೇವಾರಿ ಮಾಡಬೇಕು. ಯಾವ ಮಾರ್ಗದಲ್ಲಿ ಅಥವಾ ಯಾವ ಏರಿಯಾದಲ್ಲಿ ಈ ವಾಹನ ಬರುವುದಿಲ್ಲವೊ ಅವರು ಈ ಸಂಖ್ಯೆಗಳಿಗೆ ಕರೆ ಮಾಡಿ. ಕಿಶೋರ್ 9980141966 , ರಕ್ಷಿತ್ 9702513333. ಕಸವನ್ನು ರಸ್ತೆಗೆ ಬಿಸಾಡಿದರೆ 5000 ದಂಡ ಕೆಲವರು ತಮ್ಮ ಮನೆಯ ಕಸ ,ಉಳಿದ ಆಹಾರ ಪದಾರ್ಥ, ತ್ಯಾಜ್ಯವನ್ನು ರಸ್ತೆ ಬದಿಗಳಲ್ಲಿ , ಹತ್ತಿರದ ಕಾಡು ಪ್ರದೇಶ, ಒಳದಾರಿಗಳಲ್ಲಿ ಬಿಸಾಡಿ ನಾವು ಅತೀ ಬುದ್ದಿವಂತರೆನಿಕೊಳ್ಳುತ್ತಿದ್ದಾರೆ. ಇಂತಹವರನ್ನು ಹಿಡಿಯಲು ಬೇರೆ ಬೇರೆ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು ಸಿಕ್ಕಿಬಿದ್ದರೆ ಅವರಿಗೆ ಗರಿಷ್ಠ ರೂ 5000 ದಂಡ ಹಾಕುವ ಅವಕಾಶವಿದ್ದು, ದಂಡದೊಂದಿಗೆ ಅವರ ವಿವರವನ್ನು ಸಮಾಜಿಕ ಜಾಲ ತಾಣಗಳಲ್ಲಿ ಹಾಕಲಾಗುವುದು ಎಂದರು.

ಕಸ ಬಿಸಾಡುವವರನ್ನು ಗುರುತಿಸಿದರೆ ಪಂಚಾಯತ್ ನಿಂದ ಬಹುಮಾನ : ಮನೆಯ ಕಸ, ತ್ಯಾಜ್ಯ, ಮಧ್ಯ ಬಾಟಲಿಗಳನ್ನು ರಸ್ತೆ, ಅಥವಾ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡುವವರನ್ನು ಗುರುತಿಸಿ ಪಂಚಾಯತ್ ಗೆ ತಿಳಿಸಿದರೆ ಅವರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು. ( ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು) ಈ ರೀತಿಯಲ್ಲಿ ಬಿಸಾಡುವವರನ್ನು ಯಾವುದೇ ರೀತಿಯಲ್ಲಾದರೂ ಹಿಡಿದೇ ಹಿಡಿಯುತ್ತೇವೆ. ಗ್ರಾಮಸ್ಥರೇ ನಾವು ಬುದ್ದಿವಂತರು, ಶಿಕ್ಷಣವಂತರು ದಯವಿಟ್ಟು ನಮ್ಮ ಗ್ರಾಮವನ್ನು ಸ್ವಚ್ಚವಾಗಿಡಲು ನಮ್ಮೊಂದಿಗೆ ಸಹಕರಿಸಿ ಎಂದು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಆರ್. ಪಾಟ್ಕರ್ ಮತ್ತು ಶಿರ್ವ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ವಿನಂತಿಸಿಕೊಂಡಿದ್ದಾರೆ.

ಹಾಡುಹಗಲೇ ಮಹಿಳೆ ಹಾಗೂ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಅನ್ಯಕೋಮಿನ ಯುವಕ

Posted On: 02-08-2021 03:59PM

ಕುಂದಾಪುರ : ದಿನಾಂಕ ಜುಲೈ 30ರಂದು ಸರಿಸುಮಾರು ಮಧ್ಯಾಹ್ನ 4 ಘಂಟೆ ಹೊತ್ತಿಗೆ ದತ್ತಾತ್ರೇಯ ಫ್ಲಾಟ್ ನ ಸಮೀಪ ಆಕ್ಟಿವ್ ಹೋಂಡಾ ಬೈಕ್ ನಲ್ಲಿ ಬಂದು ಓರ್ವ ಮಹಿಳೆಯೊಂದಿಗೆ ಅಸಭ್ಯ ರೀತಿಯಿಂದ ವರ್ತಿಸಿ ಅಲ್ಲಿಂದ ಪರಾರಿಯಾಗಿ ಮುಂದೆ ನಾರಾಯಣ ಗುರು ಕಲ್ಯಾಣ ಮಂಟಪದ ಸಮೀಪದಲ್ಲಿ ತಾಯಿ ಮಗಳು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಮಗಳ ಜೊತೆಗೆ ಅಸಭ್ಯ ರೀತಿಯಲ್ಲಿ ವರ್ತಿಸಿ ಬೈಕ್ ನಲ್ಲಿ ಪರಾರಿಯಾಗಿದ್ದಾನೆ.

ಅಷ್ಟು ಹೊತ್ತಿಗಾಗಲೇ ಸಾರ್ವಜನಿಕರು ಸೇರಿದಂತೆ ಹುಡುಗಿಯ ತಂದೆಯಾದ ಕುಂದಾಪುರ ನೋಟರಿ ವಕೀಲರು ಪೊಲೀಸ್ ರಿಗೆ ಮಾಹಿತಿ ನೀಡಿರುತ್ತಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕ್ರೈಂ PSI ರಮೇಶ್ ಪವರ್, ASI ಆನಂದ್, ನವೀನ್ ರವರು ತನಿಖೆಯನ್ನು ಚುರುಕುಗೊಳಿಸಿ ದತ್ತಾತ್ರೇಯ ಫ್ಲಾಟ್ ಮತ್ತು ನಾರಾಯಣ ಗುರು ಕಲ್ಯಾಣ ಮಂಟಪದ ಹತ್ತಿರ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಆಳವಡಿಸಿದ ಸಿ. ಸಿ ಕ್ಯಾಮೆರಾವನ್ನು ಪರಿಶೀಲಿಸಿ ಈ ಕೃತ್ಯದ ವಿಡಿಯೋದಲ್ಲಿರುವ ಯುವಕನ ಚಹರೆ ಪಟ್ಟಿಯನ್ನು ಗುರುತಿಸಿ ಕೂಡಲೇ ಕಾರ್ಯ ಪ್ರವೃತ್ತರಾಗಿ ಸರಿಸುಮಾರು ರಾತ್ರಿ 7.30ಕ್ಕೆ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಯುವಕ ಕೋಡಿ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ.

ಆತನಿಗೆ ಇನ್ನು ಮುಂದೆ ಇಂತಹ ಅಸಭ್ಯ ಕೃತ್ಯವನ್ನು ಮಾಡಬಾರದು ಎಂದು ತಾಕೀತು ಮಾಡಿ ಸಮಾಜಾಯಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ. ಚುರುಕಿನ ಕಾರ್ಯಚರಣೆ ಮಾಡಿ ಆರೋಪಿತನನ್ನು ವಶಕ್ಕೆ ಪಡೆದ ಕುಂದಾಪುರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ ಮತ್ತು ಮಹಿಳಾ ಬಳಗದಿಂದ ಆಷಾಢ ಸಂಭ್ರಮ

Posted On: 02-08-2021 02:41PM

ಕಾಪು : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ (ರಿ.) ಮತ್ತು ಮಹಿಳಾ ಬಳಗದ ವತಿಯಿಂದ ಶಿರ್ವದಲ್ಲಿ ಆಷಾಢ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮವನ್ನು ಶಿರ್ವ ರಾಘವೇಂದ್ರ ಆಚಾರ್ಯ ದಂಪತಿಗಳು ಉದ್ಘಾಟಿಸಿದರು.

ನಿವೃತ್ತ ಶಿಕ್ಷಕ ವಾಸು ಆಚಾರ್ಯ ಪರ್ಕಳ ಹಿಂದಿನ ಕಾಲದಲ್ಲಿ ಆಷಾಢ ಮಾಸ ಸಂದರ್ಭದಲ್ಲಿ ಮನೆಯ ಪರಿಸರದಲ್ಲಿ ಬೆಳೆದ ಹಸಿರು ತರಕಾರಿಗಳು ವಿವಿಧ ತರದ ಗೆಡ್ಡೆಗಳು, ಮಳೆಗಾಲಕ್ಕಾಗಿ ಕಾಯ್ದಿರಿಸಿದ ವಿವಿಧ ತಿಂಡಿಗಳನ್ನು ಮಾಡುವ ಕಾಲ ಇತ್ತು. ಇದನ್ನು ಪರಿಚಯಿಸಿದ ಈ ಕಾರ್ಯಕ್ರಮ ಇಂದಿನ ಯುವಕರಿಗೆ ಮಾದರಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ಶಿರ್ವ ಸೊರ್ಪು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಿಳಾ ಬಳಗದ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಹರೀಶ್ ಆಚಾರ್ಯ ಶುಭ ಹಾರೈಸಿದರು. ಅದೃಷ್ಟಶಾಲಿಗಳನ್ನು ಆಯ್ಕೆಮಾಡಿ ಬಹುಮಾನ ವಿತರಿಸಲಾಯಿತು. ಆಷಾಢ ಮಾಸದ ಸುಮಾರು 28ಬಗೆಯ ವಿವಿಧ ಖಾದ್ಯಗಳನ್ನು ಮಹಿಳಾ ಬಳಗದ ಸದಸ್ಯರು ತಯಾರಿಸಿ ಉಣಬಡಿಸಿದರು.

ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಮಾಧವ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾದರು. ಯುವ ಸಂಗಮದ ಗೌರವಾಧ್ಯಕ್ಷ ಸುರೇಶ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಆಚಾರ್ಯ, ಕಾರ್ಯದರ್ಶಿ ಪ್ರೀತಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ಮಾಧವ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರೀತಮ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರಶಾಂತ್ ಆಚಾರ್ಯ ವಂದಿಸಿದರು.

ಕೊರೋನಾ ವಾರಿಯರ್ಸ್ ನೆಲೆಯಲ್ಲಿ ಕಾಪು ಅಂಚೆ ಕಚೇರಿಯ ಅಂಚೆ ಪಾಲಕರು ಹಾಗೂ ಸಿಬ್ಬಂದಿಗಳಿಗೆ ಸಮ್ಮಾನ

Posted On: 02-08-2021 02:30PM

ಕಾಪು : ಜನಸಂಪರ್ಕ ಜನ ಸೇವಾ ವೇದಿಕೆ ಕಳತ್ತೂರು-ಕಾಪು ಇವರ ಆಶ್ರಯದಲ್ಲಿ ಕೊರೋನಾ ವಾರಿಯರ್ಸ್ಗಳ ನೆಲೆಯಲ್ಲಿ ಕಾಪು ಅಂಚೆ ಕಚೇರಿಯ ಅಂಚೆ ಪಾಲಕರು ಹಾಗೂ ಎಲ್ಲಾ ಸಿಬ್ಬಂದಿಗಳನ್ನು ಶನಿವಾರ ಕಾಪು ಪ್ರಧಾನ ಅಂಚೆ ಕಛೇರಿಯಲ್ಲಿ ಸಮ್ಮಾನಿಸಿ, ಅಭಿನಂದಿಸಲಾಯಿತು.

ಅದ್ಯಕ್ಷತೆ ವಹಿಸಿದ್ದ ಉಡುಪಿ ಅಂಚೆ ವಿಭಾಗದ ಅಂಚೆ ಅಧಿಕ್ಷಕ ನವೀನ್‌ಚಂದ್ರ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ದಣಿವರಿಯದ ಸೇವೆ ಸಲ್ಲಿಸಿದ ಅಂಚೆ ಇಲಾಖೆಯ ಸಿಬಂದಿಗಳನ್ನು ಸಮ್ಮಾನಿಸಿರುವುದು ಇದೇ ಪ್ರಥಮವಾಗಿದೆ. ಕೊರೊನಾ ವಾರಿಯರ್‌ಗಳಾದ ಅಂಚೆ ಸಿಬಂದಿಗಳನ್ನು ಸಮ್ಮಾನಿಸುವ ಮೂಲಕ ಅಂಚೆ ಇಲಾಖೆಯ ಸೇವೆಯನ್ನು ಹತ್ತಿರದಿಂದ ಗುರುತಿಸಿದಂತಾಗಿದೆ ಎಂದರು.

ಕಾಪು - ಕಳತ್ತೂರು ಸಮಾಜ ಸೇವಾ ವೇದಿಕೆಯ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ, ಕಳತ್ತೂರು ಕುಶಲಶೇಖರ ಶೆಟ್ಟಿ ಇಂಟರ್‌ನ್ಯಾಷನಲ್ ಹಾಲ್‌ನ ಆಡಳಿತ ನಿರ್ದೇಶಕ ಶೇಖರ ಬಿ. ಶೆಟ್ಟಿ ಕಳತ್ತೂರು, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು, ಕಾಪು - ಕಳತ್ತೂರು ಜನಸಂಪರ್ಕ ಜನ ಸೇವಾ ವೇದಿಕೆಯ ಅಧ್ಯಕ್ಷ ದಿವಾಕರ ಬಿ. ಶೆಟ್ಟಿ, ಉಪಾಧ್ಯಕ್ಷ ರಾಜೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು. ಸಮ್ಮಾನ, ಗೌರವ : ಕಾಪು ಅಂಚೆ ಕಛೇರಿಯ ಅಂಚೆ ಪಾಲಕ ಕೃಷ್ಣಪ್ಪ, ಅಂಚೆ ಸಹಾಯಕರಾದ ರಮೇಶ್, ಸುಧಾಕರ್, ಕೃಷ್ಣಾನಂದ್, ಅಂಚೆ ಪೇದೆಗಳಾದ ನವೀನ್ ಕುಮಾರ್, ರಮೇಶ್ ನಾಯ್ಕ್, ಅಂಚೆ ಸೇವಕರಾದ ಕುಮಾರ್, ರೋಶನ್, ಪ್ರಮೋದ್, ಸೃಷ್ಠಿ ಮೊದಲಾದವರನ್ನು ಸಮ್ಮಾನಿಸಿ, ಗೌರವಿಸಲಾಯಿತು.

ಕಾಪು - ಕಳತ್ತೂರು ಜನಸಂಪರ್ಕ ಜನ ಸೇವಾ ವೇದಿಕೆಯ ಸಂಚಾಲಕ ದಿವಾಕರ್ ಡಿ. ಶೆಟ್ಟಿ ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ದಯಾನಂದ ಶೆಟ್ಟಿ ದೆಂದೂರುಕಟ್ಟೆ ಸ್ವಾಗತಿಸಿದರು. ಅಂಚೆ ಮೇಲ್ವಿಚಾರಕ ವಾಸುದೇವ ತೊಟ್ಟಂ ವಂದಿಸಿದರು.

ಕಲ್ಯಾಣಪುರ ರೋಟರಿ ಕ್ಲಬ್ ಸದಸ್ಯರ ಕುಟುಂಬ ಸಮ್ಮಿಲನ ಆಟಿದ ಗಮ್ಜಾಲ್ ವಿಶೇಷ ಕಾರ್ಯಕ್ರಮ

Posted On: 02-08-2021 02:23PM

ಉಡುಪಿ : ಕಲ್ಯಾಣಪುರ ರೋಟರಿ ಕ್ಲಬ್ ಸದಸ್ಯರ ಕುಟುಂಬ ಸಮ್ಮಿಲನ ಆಟಿದ ಗಮ್ಜಾಲ್ ವಿಶೇಷ ಕಾರ್ಯಕ್ರಮ ಉಡುಪಿಯ ಮೂಡುಬೆಟ್ಟು ಗ್ರೀನ್ ಡೇಲ್ ನಿವೇಶನದಲ್ಲಿ ನಡೆಯಿತು. ಅಧ್ಯಕ್ಷ ಶಂಭು ಶಂಕರ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲೆ 3182 ಇದರ ಮಾಜಿ ಗವರ್ನರ್ ರಾಜಾರಾಂ ಭಟ್, ವಲಯ 11ರ ನಿಕಟಪೂರ್ವ ಸಹಾಯಕ ಗವರ್ನರ್ ಡಾ. ನಂದಕಿಶೋರ್, ವಲಯ 3ರ ನಿಕಟಪೂರ್ವ ಸಹಾಯಕ ಗವರ್ನರ್ ದೇವದಾಸ್ ಶೆಟ್ಟಿಗಾರ್, ಕಾರ್ಯದರ್ಶಿ ಪ್ರಕಾಶ್, ಸ್ಥಳಾವಕಾಶ, ಆಯೋಜನೆಯಲ್ಲಿ ಸಹಕಾರ ನೀಡಿದ ಬ್ಯಾಪ್ಟಿಸ್ಟ್ ಡಯಾಸ್, ಅನಿತಾ ಬ್ಯಾಪ್ಟಿಸ್ಟ್ ಡಯಾಸ್ ಉಪಸ್ಥಿತರಿದ್ದರು. ಆನಂದ ಶೆಟ್ಟಿ ಹಾಗೂ ರೀನಾ ಆನಂದ ಶೆಟ್ಟಿ ಆಟಿಯ ಆಹಾರ, ಆಚರಣೆ, ಸಂಪ್ರದಾಯಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ವಿಜಯ ಪಾಣಾರ ತಂಡದಿಂದ ಆಟಿಕಳಂಜ, ಪಾರ್ದನಗಳ ಪ್ರಾತ್ಯಕ್ಷಿಕೆ ನಡೆಯಿತು. ರೋ. ಗಿರೀಶ್ ಹಾಗೂ ರೋ. ರಾಮಕೃಷ್ಣ ಆಚಾರ್ ಕಾರ್ಯಕ್ರಮ ‌ನಿರೂಪಿಸಿದರು.

ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಸಹಾಯಕ ಗವರ್ನರ್ ಸೇವಾವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ರೋ. ದೇವದಾಸ್ ಶೆಟ್ಟಿಗಾರ್, ಕರಾವಳಿಯ ಪ್ರಸಿದ್ಧ ದೈವಾರಾಧಕ, ನಾಡಿನಾದ್ಯಂತ ಪಾಡ್ದನಗಳ ಮಹತ್ವವನ್ನು ಪ್ರಸಾರ ಮಾಡುತ್ತಿರುವ ವಿಜಯ ಪಾಣಾರ ತೋನ್ಸೆ ಇವರನ್ನು ಸನ್ಮಾನಿಸಲಾಯಿತು.

ಇಂದಿಗೂ ಹಸಿರು ಕಾಯಕದಲ್ಲಿ ತೊಡಗಿ, ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ರಾಜಾರಾಂ ಭಟ್, ಅಲೆನ್ ಲೂಯಿಸ್, ಬ್ಯಾಪ್ಟಿಸ್ಟ್ ಡಯಾಸ್, ವಿಜಯ ಮಾಯಾಡಿ, ಸದಾನಂದ ನಾಯಕ್ ಇವರನ್ನು ಗೌರವಿಸಲಾಯಿತು. 40ಕ್ಕೂ ವಿವಿಧ ಬಗೆಯ ಆಟಿ ಖಾದ್ಯಗಳ ಪ್ರದರ್ಶನ ನಡೆಯಿತು. ಕೆಸರು ಗದ್ದೆಯ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಗೋವಿಗಾಗಿ ಮೇವು 2021-22 ಅಭಿಯಾನಕ್ಕೆ ಚಾಲನೆ

Posted On: 01-08-2021 05:47PM

ಉಡುಪಿ : ಪೇಜಾವರ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಕಳೆದ ವರ್ಷ ಆರಂಭಗೊಂಡ ಗೋವಿಗಾಗಿ ಮೇವು ಅಭಿಯಾನಕ್ಕೆ ಮಾರ್ಚ್‌ ತನಕ 300 ಕ್ಕೂ ಹೆಚ್ಚು ಸಂಘಟನೆ ಗಳು ಭಾಗಿಯಾಗಿ ಅಭಿಯಾನ ಚಿಕ್ಕಮಂಗಳೂರು ಜಿಲ್ಲೆಗೂ ಹಬ್ಬಿ ಯಶಸ್ವಿಯಾಯಿತು. ಈ ವರ್ಷದ ಗೋವಿಗಾಗಿ ಮೇವು ಕಾರ್ಯಕ್ರಮಕ್ಕೆ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಗೋವಿಗೆ ಮೇವನ್ನು ನೀಡುವುದರ ಮೂಲಕ ಅಧಿಕೃತ ಚಾಲನೆ ನೀಡಿದರು.

ಈ ಸಂದಭ೯ದಲ್ಲಿ ಮಾತನಾಡಿದ ಅವರು ಗೋವಿಗಾಗಿ ಮೇವು ಅಭಿಯಾನದ ತಂಡ ಜಿಲ್ಲೆಯಲ್ಲೇ ಪಾದರಸದಂತೆ ಕೆಲಸ ಮಾಡಿ ಅನೇಕ ಸಂಘಸಂಸ್ಥೆಗಳಿಗೆ ಪ್ರೇರೇಪಿಸುತ್ತಿರುವುದು ನೈಜ ಹಿಂದುತ್ವದ ಸಂಕೇತ ಅಭಿಯಾನ ರಾಜ್ಯ ವ್ಯಾಪಿ ಹರಡಲಿ ಎಂದರು.

ಪ್ರಾಸ್ತಾವಿಕ ಮಾತನಾಡಿದ ಗೋವಿಗಾಗಿ ಮೇವು ಅಭಿಯಾನದ ಸ್ಥಾಪಕ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಜಿಲ್ಲೆಯ ಎಲ್ಲಾ ಸಂಘಸಂಸ್ಥೆಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತೇವೆ. ಅಭಿಯಾನದಲ್ಲಿ ಕೈ ಜೋಡಿಸುವಂತೆ ಕರೆ ನೀಡಿದರು. ಬಂಟರ ಸಂಘ ಬೆಂಗಳೂರು ಕೋಶಾಧಿಕಾರಿ ದೀಪಕ್ ಶೆಟ್ಟಿ ಬಾರಕೂರು ಮಾತನಾಡಿ ಸಂಘಟಿತ ಯುವಕರ ಗೋಪ್ರೇಮ ,ಗೋಸೇವೆ ಇತರ ಸಂಘಟನೆ ಗೆ ಮಾದರಿಯಾಗಲಿ ಎಂದರು.

ಆರೂರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ರಾಜೀವ ಕುಲಾಲ್, ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು, ಕರ್ವಾಲು, ಕೆಂಜೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಜಯಶ್ರೀ ಶೆಟ್ಟಿ, ವಿಕಾಸ್ ಶೆಟ್ಟಿ ಉಡುಪಿ, ಗೋವಿಗಾಗಿ ಮೇವು ಕೋಟ ವಲಯಾಧ್ಯಕ್ಷ ಪ್ರದೀಪ್ ಪೂಜಾರಿ, ಮಹಿಳಾ ಅಧ್ಯಕ್ಷೆ ವಿದ್ಯಾ ಸಾಲ್ಯಾನ್, ಜಿಲ್ಲಾ ಸಮಿತಿಯ ನಾಗೇಂದ್ರ ಪುತ್ರನ್, ಪ್ರದೀಪ್ ಪಡುಕೆರೆ, ಶಿವರಾಮ್ ಬಂಗೇರ, ಕೋಟ, ಸ್ಪಂದನ ಯುವಕ ಮಂಡಲ ಆರೂರು,ಮಹಾಲಿಂಗೇಶ್ವರ ಭಜನಾ ಮಂಡಳಿ ಕೂರಾಡಿ, ಪಾಂಚಜನ್ಯ ಯುವಕ ಮಂಡಲ ಕೋಟ, ನೀತಾ ಪ್ರಭು ಗೆಳೆಯರ ಬಳಗ ಹಿರಿಯಡ್ಕ, ಗೋವಿಗಾಗಿ ಮೇವು ಕೋಟ - ಸಾಲಿಗ್ರಾಮ ವಲಯ ತಂಡ, ಸಂಘಟನೆಗಳು ಭಾಗವಹಿಸಿದ್ದವು. ಶಿಕ್ಷಕ ಸಂತೋಷ್ ಶೆಟ್ಟಿ ಎಳ್ಳಂಪಳ್ಳಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಸಹಾಯದ ನಿರೀಕ್ಷೆಯಲ್ಲಿ ಸರಸ್ವತಿ

Posted On: 01-08-2021 10:02AM

ಕಾಪು : ಕುರ್ಕಾಲು ಗ್ರಾಮದ ಕುಂಜಾರುಗಿರಿ ನಿವಾಸಿ ಶಂಕರ್ ಅವರ ಧರ್ಮಪತ್ನಿ ಶ್ರೀಮತಿ ಸರಸ್ವತಿ ಅವರು ಮನೆ ಕೆಲಸ ಮಾಡುತ್ತಿದ್ದು ಅವರಿಗೆ ಸುಮಾರು 25 ವರ್ಷವಾಗಿರುತ್ತದೆ. ಒಂದು ಹೆಣ್ಣು ಮಗುವಿದ್ದು ಸರಸ್ವತಿ ಅವರಿಗೆ 2 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಇವರಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗಿದೆ.

ಸದ್ಯ ಈಗಿರುವ ಪರಿಸ್ಥಿತಿಯಲ್ಲಿ ಡಯಾಲಿಸಿಸ್ ಮಾಡಲು ಕಷ್ಟವಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದ್ದು ಜೀವ ಉಳಿಸಿಕೊಳ್ಳಲು ಪತಿಯ ಕಿಡ್ನಿಯನ್ನು ಪತ್ನಿಗೆ ಬದಲಾಯಿಸಲು ನುರಿತ ವೈದ್ಯಾಧಿಕಾರಿಗಳು ಸುಮಾರು 7.50 ಲಕ್ಷ ಖರ್ಚು ವೆಚ್ಚದ ಬಿಲ್ ನೀಡಿದ್ದಾರೆ.

ಶಂಕರ್ ಅವರು ನಿತ್ಯ ಕಲ್ಲು ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಆದ್ದರಿಂದ ಅಷ್ಟು ಖರ್ಚು ನಿಭಾಯಿಸಲು ಸಾಧ್ಯವಿಲ್ಲದ ಕಾರಣ ತಾವೆಲ್ಲರೂ ಚಿಕಿತ್ಸೆಗಾಗಿ ಧನಸಹಾಯ ಮಾಡಬೇಕೆಂದು ಈ ಮೂಲಕ ವಿನಂತಿಸಿದ್ದಾರೆ.

ಧನ ಸಹಾಯ ಮಾಡುವವರು : ಸ್ಥಳ:ಕು‌ಂಜಾರುಗಿರಿ ಬ್ಯಾಂಕ್ ಖಾತೆ ವಿವರ: NAME:SARASWATHI BANK NAME: CANARA BANK A/C NO:-110002152050 IFSC CODE:-CNRB0010195

ಶಿರ್ವ : ನಿವೃತ್ತರಿಗೆ ಶುಭವಿದಾಯ

Posted On: 31-07-2021 05:18PM

ಕಾಪು : ಒಂದು ಸಂಸ್ಥೆಯ ಸವ೯ತೋಮುಖ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಸೇವೆಯು ಅತ್ಯಂತ ಅಮೂಲ್ಯ ಹಾಗೂ ಉಪಯುಕ್ತವಾದುದು ವಗ೯ವಾರು ಕತ೯ವ್ಯ ಅನ್ನುವುದು ಜವಾಬ್ದಾರಿಯ ಹಿನ್ನೆಲೆಯಲ್ಲಿ ಇದ್ದರೂ ಕೂಡ ಪ್ರತಿಯೊಬ್ಬರ ಸೇವೆಯೂ ಪರಿಗಣಿತ ಹಾಗೂ ಶ್ರೇಷ್ಠ ವಾದುದು ಎಂದು ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೆನಿಸ್ ಡೇಸಾ ಸಂತ ಮೇರಿ ಮಹಾವಿದ್ಯಾಲಯದ ಆಡಳಿತ ಸಿಬ್ಬಂದಿಯಾದ ಅಲ್ವಿರಾ ಕ್ಲೇರೆನ್ಸ್ ಫೆನಾ೯ಂಡಿಸ್ ರವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಮೋನಿಸ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಆಡಳಿತ ಮಂಡಳಿಯ ಪರವಾಗಿ ಡೊರಿನ್ ಹಾಗೂ ಅಧ್ಯಾಪಕ ವೃಂದದ ಪರವಾಗಿ ರೀಮಾ ಲೋಬೊ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಲೊರೆನ್ಸ್ ಸನ್ಮಾನ ಪತ್ರ ವಾಚಿಸಿದರು. ಕಾಲೇಜು ಮತ್ತು ಆಡಳಿತ ಮಂಡಳಿಯ ವತಿಯಿಂದ ನಿವೃತ್ತರಾದ ಅಲ್ವಿರಾ ರವರನ್ನು ಶಾಲು ಹೊದಿಸಿ ಹಾರ ಹಾಕಿ ಫಲಫುಷ್ಪ ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ನಿದೇ೯ಶಕಿ ಯಶೋದಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದಾಕ್ಷಾಯಿಣಿ ಉಪಸ್ಥಿತರಿದ್ದರು. ಈ ಸಂದರ್ಭ ನಿವೃತ್ತ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು, ಆಡಳಿತ ಮಂಡಳಿಯವರು, ಬೋಧಕ, ಬೋಧಕೇತರ ಬಂಧುಗಳು ಉಪಸ್ಥಿತರಿದ್ದರು.

ತನೂಜ, ದಿವ್ಯಾಶ್ರೀ, ಪದ್ಮಾಸಿನಿ ಪ್ರಾಥಿ೯ಸಿ, ಶಮಿ೯ಳ ಕಾರ್ಯಕ್ರಮ ನಿರೂಪಿಸಿ, ಪ್ಲೋರಿನ್ ವಂದಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು,ಆಡಳಿತ ಮಂಡಳಿಯವರು,ಬೋಧಕ ಬೋಧಕೇತರ ಬಂಧುಗಳು ಉಪಸ್ಥಿತರಿದ್ದರು.

ಪಡುಬಿದ್ರಿ : ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ ಜಂಟಿ ಸಹಯೋಗದಲ್ಲಿ ಆಟಿದ ಪಂಥ

Posted On: 31-07-2021 04:59PM

ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಹಾಗೂ ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ ಜಂಟಿ ಸಹಯೋಗದಲ್ಲಿ ನಾಳೆ (1-8-21) ಬೆಳಿಗ್ಗೆ 10.30 ಕ್ಕೆ ಪಡುಬಿದ್ರಿ ಅಬ್ಬೇಡಿ ರಸ್ತೆಯ ಆರ್ ಆರ್ ಕಾಲೋನಿಯಲ್ಲಿ ಆಟಿದ ಪಂಥ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಡಾ| ವೈ. ಎನ್. ಶೆಟ್ಟಿ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷರಾದ ಮಹಮ್ಮದ್ ನಿಯಾಜ್ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಶೋದ ,ಕೆಪಿಸಿಸಿ ಕೋ-ಆರ್ಡಿನೇಟರ್ ನವೀನ್ ಚಂದ್ರ ಜೆ. ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಎನ್. ಶೆಟ್ಟಿ, ವಲಯ 5ರ ವಲಯ ಸಂಯೋಜಕರಾದ ರಮೀಝ್ ಹುಸೈನ್, ಪಡುಬಿದ್ರಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಅನಿತಾ ಬಿ.ವಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕುತ್ಯಾರು : ಗಿಂಡೆದ ನೀರ್ ಕಿರುಚಿತ್ರ ಬಿಡುಗಡೆ

Posted On: 31-07-2021 04:35PM

ಕಾಪು : ಲವ್ಲಿ ಫ್ರೆಂಡ್ಸ್ ಕುತ್ಯಾರು ಯುಟ್ಯೂಬ್ ಚಾನೆಲ್ ನ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡ ಅತಿಥ್ ಸುವರ್ಣ ಪಾಲಮೆ ರಚನೆ, ನಿರ್ದೇಶನ, ನಟನೆ ಮಾಡಿರುವ ತುಳುನಾಡಿನ ದೈವಾರಾಧನೆಯ ಕಲೆ-ಕಾರ್ಣಿಕವನ್ನು ಬಿಂಬಿಸುವ ಕಿರುಚಿತ್ರ ಗಿಂಡೆದ ನೀರ್ ಬಿಡುಗಡೆ ಸಮಾರಂಭ ಜುಲೈ 30ರಂದು ಕುತ್ಯಾರು ಅರಮನೆಯಲ್ಲಿ ಜರಗಿತು.

ಕುತ್ಯಾರು ಅರಮನೆಯ ಪ್ರತಿನಿಧಿ, ಶಿರ್ವ ರೋಟರಿ ಕ್ಲಬ್ ಕಾರ್ಯದರ್ಶಿ ದಿನೇಶ್ ಬಳ್ಳಾಲ್ ಕಿರು ಚಿತ್ರವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಸ್ಥಳೀಯ ಯುವಕ, ಯುವತಿಯರೇ ಸೇರಿ ತುಳುನಾಡಿನ ದೈವ ದೇವರ ಬಗೆಗಿನ ಇತಿಹಾಸ ಬಿಂಬಿಸುವ ಇಂತಹ ಕಿರುಚಿತ್ರ ನಿರ್ಮಿಸುವ ಮುಖೇನ ಯುವಜನತೆ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಮುಂದಿನ ಸಮಾಜಕ್ಕೆ ಅಭಿರುಚಿ ಬೆಳೆಸುವಂತಾಗಲಿ ಎಂದು ಶುಭ ಹಾರೈಸಿದರು.

ಕುತ್ಯಾರು ಪರಶುರಾಮೇಶ್ವರ ಕ್ಷೇತ್ರದ ಧರ್ಮದರ್ಶಿ ಶ್ರೀ ಶಂಭುದಾಸ ಗುರೂಜಿ, ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಧೀರಜ್ ಶೆಟ್ಟಿ ಶುಭಾಶಯ ಕೋರಿದರು. ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯ ಸಂಪತ್ ಕುಮಾರ್, ಬಿಲ್ಲವ ಸೇವಾ ಸಂಘ (ರಿ.) ಶಿರ್ವ ಇದರ ಕಾರ್ಯದರ್ಶಿ ಸುಜನ್ ಎಲ್. ಸುವರ್ಣ, ಯುವಕ ಮಂಡಲ ಕುತ್ಯಾರು ಅಧ್ಯಕ್ಷ ಪ್ರವೀಣ್ ಆಚಾರ್ಯ, ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಧೀರಜ್ ಕುಲಾಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಅತಿಥ್ ಸುವರ್ಣ ಕಿರು ಚಿತ್ರದ ಬಗ್ಗೆ ತಿಳಿಸಿದರು. ಶ್ರೇಯ ಸ್ವಾಗತಿಸಿ, ಶ್ರೇಯಸ್ ಕಾರ್ಯಕ್ರಮ ನಿರೂಪಿಸಿ, ಅಭಿಷೇಕ ಆಚಾರ್ಯ ವಂದಿಸಿದರು.