Updated News From Kaup
ಅದಮಾರು : ಸರ್ವೋದಯ ಸಮುದಾಯ ಭವನದಲ್ಲಿ ಕೋವಿಡ್ 19 ಲಸಿಕೆ - 472 ಫಲಾನುಭವಿಗಳು

Posted On: 22-08-2021 11:48AM
ಕಾಪು : ಪ್ರಾಥಮಿಕ ಆರೋಗ್ಯ ಕೇಂದ್ರ ಮುದರಂಗಡಿ , ಇವರ ವತಿಯಿಂದ ಎಲ್ಲೂರು ಪಂಚಾಯತ್ ಆಯೋಜಿಸಿರುವ 'ಕೊವಿಡ್ 19' ಲಸಿಕೆ ಹಾಕುವ ಅಭಿಯಾನವು ಅದಮಾರು ಆದರ್ಶ ಯುವಕ ಸಂಘದ ಸರ್ವೋದಯ ಸಮುದಾಯ ಭವನದಲ್ಲಿ ನಡೆಯಿತು. ಎಲ್ಲೂರು ಗ್ರಾಮದಲ್ಲೆ ದಾಖಲೆಯ ಪ್ತಮಾಣದಲ್ಲಿ 472 ಮಂದಿ ವ್ಯಾಕ್ಸಿನ್ ಪಡೆದರು.
450ಮಂದಿಯ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಅದಮಾರು ಪರಿಸರದ ತೊಂಬತ್ತ ನಾಲ್ಕು ವರ್ಷ ಹರೆಯದ ಹಿರಿಯ, ನಿವೃತ್ತ ಶಿಕ್ಷಕ, ಕಾಶಿ ಸಂತಾನ ಚ್ಯಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ವೈ .ಎಂ. ಶ್ರೀಧರ ರಾವ್ ಅವರಿಗೆ ಲಸಿಕೆ ನೀಡುವುದರೊಂದಿಗೆ ಲಸಿಕೆ ಹಾಕುವ ಕಾರ್ಯ ಆರಂಭವಾಯಿತು.
ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಪ್ರಭು, ಎಲ್ಲೂರು ಪಂ. ಅಧ್ಯಕ್ಷ ಜಯಂತ ರಾವ್ ಮತ್ತು ಸದಸ್ಯರು, ಸರ್ವೋದಯ ಸಮುದಾಯ ಭವನದ ಅಧ್ಯಕ್ಷ ಕೆ.ಎಲ್ .ಕುಂಡಂತಾಯ, ಆದರ್ಶ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುದರ್ಶನ ವೈ.ಎಸ್, ಆದರ್ಶ ಯುವಕ ಸಂಘದ ಅಧ್ಯಕ್ಷ ಬರ್ಪಣಿ ಜೆ.ಸಂತೋಷ ಶೆಟ್ಟಿ , ಆದರ್ಶ ಮಹಿಳಾ ಸಂಘದ ಪ್ರೇಮ ಆರ್.ಸಾಲಿಯಾನ್ ಮತ್ತು ಸದಸ್ಯರು , ವೈದ್ಯಕೀಯ ಸಿಬಂದಿ ಉಪಸ್ಥಿತರಿದ್ದರು .
ಮುದರಂಗಡಿ : ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮದಿನಾಚರಣೆ

Posted On: 22-08-2021 11:04AM
ಕಾಪು : ಬಿಲ್ಲವ ಸಮಾಜ ಸೇವಾ ಸಂಘ (ರಿ.) ಮುದರಂಗಡಿ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮದಿನಾಚರಣೆಯ ಪ್ರಯುಕ್ತ ನಾಳೆ (ಸೋಮವಾರ) ಕ್ಷೇತ್ರದ ಅರ್ಚಕರಾದ ದಿನೇಶ್ ಶಾಂತಿ ಮತ್ತು ಶಂಕರ ಶಾಂತಿ ಅವರ ಧಾರ್ಮಿಕ ವಿಧಿ ವಿಧಾನದೊಂದಿಗೆ ನೆರವೇರಲಿದೆ.
ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ, ಕಲಶಾಭಿಷೇಕ, ಭಜನೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ. 12:30 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭ್ರಾತೃ - ಭಗಿನಿ ಭಾಂದವ್ಯ ಬೆಸೆಯುವ

Posted On: 21-08-2021 06:55PM
‘ರಕ್ಷಾಬಂಧನ’ ಹಾಗೂ ‘ಉಪಾಕರ್ಮ’ ಈ ಎರಡು ವಿಧದ ಆಚರಣೆಗಳಲ್ಲಿ ಒಂದು ‘ಭಾವ’ ಸಂಬಂಧಿಯಾದರೆ ಮತ್ತೊಂದು ‘ಜ್ಞಾನ’ ಶುದ್ಧಿಯನ್ನು ಎಚ್ಚರಿಸುವ ಆಚರಣೆಗಳು. ರಾಖೀ ಕಟ್ಟುವುದು, ಯಜ್ಞೋಪವೀತ ಧರಿಸುವುದು ಇವೆರಡೂ ದಾರ ಅಥವಾ ನೂಲಿನ ನಂಟನ್ನು ಹೊಂದಿರುವಂತಹದ್ದು. ನೂಲು ಅಥವಾ ದಾರ ಕಟ್ಟುವುದು ಎಂಬ ಕ್ರಿಯೆ ಜೋಡಿಸುವ ಸಾಧನವಾಗಿ, ಬಂಧನದ ಬದ್ಧತೆಯ ಸಂಕೇತವಾಗಿ ಇವೆ ,ಎಂದರೆ ತಪ್ಪಾಗಲಾರದು. ರಕ್ಷಾಬಂಧನ : ನಮ್ಮ ದೇಶದ ಸಂಸ್ಕೃತಿ ನಿರ್ದೇಶಿಸಿದ ಸಹಜೀವನ ವಿಧಾನದ ಹಲವು ಅಂಶಗಳಲ್ಲಿ ಪರಸ್ಪರ ಬಾಂಧವ್ಯವೂ ಒಂದು. ಇದರಿಂದಲೇ ಸೌಹಾರ್ದ, ಸುಖೀ ಸಮಾಜದ ಪರಿಕಲ್ಪನೆಯ ಸಾಕಾರ ಸಾಧ್ಯ. ಅದಕ್ಕೆ ಪೂರಕವಾಗಿ ನಮ್ಮಆಚರಣೆಗಳು, ಮತಾಚಾರಗಳು ರೂಪುಗೊಂಡವು. ಇದರಲ್ಲಿ ಸಮಷ್ಟಿ ಚಿಂತನೆಯ,ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವ ಉದ್ದೀಪಿಸುವ ಭ್ರಾತೃ - ಭಗಿನಿ ಸಂಬಂಧ ಬೆಸೆಯುವ ರಕ್ಷಾಬಂಧನ, ಭಾವನೆ, ಶುದ್ಧ ಮನಸ್ಥಿತಿಯ ಪ್ರತೀಕವಾಗಿ ರೂಢಿಯಲ್ಲಿದೆ. ವ್ರತ, ಪೂಜೆ, ಮಹೋತ್ಸವ, ಮಹಾಯಾಗ, ಮದುವೆ, ಉಪನಯನ ಮುಂತಾದ ಉತ್ಸವಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸಿ ಕಂಕಣಬಂಧದಿಂದ ದೀಕ್ಷೆ ಸ್ವೀಕರಿಸುವ ವಿಧಿಯೊಂದು ನಮ್ಮ ದೇಶದಲ್ಲಿ ರೂಢಿಯಲ್ಲಿದೆ. ದುಷ್ಟ ಶಕ್ತಿಗಳು ಸತ್ಕರ್ಮಗಳಿಗೆ ಆತಂಕ ಒಡ್ಡದಿರಲಿ ಎಂಬುದು ಇಲ್ಲಿಯ ಆಶಯ.ಇದೇ ಪರಿಕಲ್ಪನೆಯು ಸ್ರ್ತೀ-ಪುರುಷರ ನಡುವೆ ಸಾಹೋದರ್ಯದ ಪವಿತ್ರ ಸಂಬಂಧವನ್ನು ಗಾಢವಾಗಿಸುವ ಸಂದರ್ಭವಾಗಿ ರಕ್ಷಾಬಂಧನ ಅಥವಾ ರಾಖೀ ಹಬ್ಬವೆಂದು ವಿಸ್ತೃತ ಅರ್ಥವ್ಯಾಪ್ತಿಯನ್ನು ಪಡೆಯುತ್ತಾ ಹಬ್ಬವಾಗಿ ಸ್ವೀಕರಿಸಲ್ಪಟ್ಟಿರಬಹುದು.
ಸಮಾಜದ ಸ್ರ್ತೀಯರೆಲ್ಲ ತನ್ನ ಅಕ್ಕ-ತಂಗಿಯರು, ಅನಿವಾರ್ಯ ಅಥವಾ ಅಪತ್ಕಾಲದಲ್ಲಿ ಅವರ ಮಾನ-ಪ್ರಾಣಗಳನ್ನು ರಕ್ಷಿಸುವುದು ತನ್ನ ಪರಮ ಕರ್ತವ್ಯ. ಈ ವೇಳೆ ಪ್ರಾಣಾರ್ಪಣೆಯ ಪರಿಸ್ಥಿತಿ ಬಂದರೂ ಅದಕ್ಕೆ ಸಿದ್ಧ ಎಂಬ ಪ್ರತಿಜ್ಞಾ ಸ್ವೀಕಾರದ ಸಂಕೇತವಾಗಿ "ಪವಿತ್ರ ರಕ್ಷಾಬಂಧನ". ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಪರಸ್ಪರ ರಕ್ಷೆ ಕಟ್ಟಿಕೊಳ್ಳುತ್ತಾ ಭಾರತ ಮಾತೆಯ ರಕ್ಷಣೆಗೆ ದೀಕ್ಷಾಬದ್ಧರಾಗುವುದನ್ನು ಕಾಣಬಹುದು. ಪ್ರತೀ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ರಾಖೀ ಕಟ್ಟುವ ಮೂಲಕ ಸ್ರ್ತೀಯರು ತಮ್ಮ ಸೋದರರಿಗೆ ‘ನಮ್ಮ ಮಾನ-ಪ್ರಾಣ ಉಳಿಸುವ ಹೊಣೆ ನಿಮ್ಮದು’ ಎಂದು ನೆನಪಿಸುತ್ತಾರೆ, ಉಡುಗೊರೆ ಪಡೆಯುತ್ತಾರೆ.ರಾಖೀ ಕಟ್ಟುವ, ಸಿಹಿ, ತಿನ್ನಿಸಿ, ತಿನ್ನುವ, ಉಡುಗೊರೆ ಪಡೆಯುವ ಈ ಭಾವನಾತ್ಮಕ ಹಬ್ಬವು ದೇಶದಾದ್ಯಂತ ಸಂಭ್ರಮೋಲ್ಲಾಸದಿಂದ ನಡೆಯುತ್ತದೆ. ಪ್ರತೀ ವರ್ಷ ವೈವಿಧ್ಯಮಯ ರಾಖೀಗಳನ್ನು ಮಾರುಕಟ್ಟೆಗೆ ಬರುತ್ತಿವೆ; ಅಷ್ಟೇ ಅರ್ಥಪೂರ್ಣ - ಪುಲಕೋತ್ಸವಾಗಿ ಆಚರಣೆ ಸಂಪನ್ನಗೊಳ್ಳುತ್ತಿದೆ. ಭಾವಪೂರಕ ಭಾತೃ-ಭಗಿನಿಯರ ನಡುವಿನ ಪವಿತ್ರ ಬಾಂಧವ್ಯವನ್ನು ವರ್ಷಕೊಮ್ಮೆ ನೆನಪಿಸುವ, ಆ ಮೂಲಕ ಮಾನ-ಪ್ರಾಣಗಳ ರಕ್ಷಣೆಯ ಹೊಣೆಗಾರಿಕೆಯನ್ನು ಸೋದರನಿಗೆ ರಾಖೀ ಕಟ್ಟಿ ಸಿಹಿ ತಿನ್ನಿಸಿ ಸಂಭ್ರಮಿಸುತ್ತಾ ಸೂಚ್ಯವಾಗಿ ಹೇಳುವ ಸೋದರಿಯರ ಹಬ್ಬ ‘ರಾಖೀ ಬಂಧನ’. ಒಡ ಹುಟ್ಟಿದವರೊಂದಿಗೆ ಸಮಾಜದ ಸ್ರ್ತೀಯರೆಲ್ಲ ತನ್ನ ಸೋದರಿಯರು ಎಂಬ ಉದಾತ್ತ ಭಾವದೊಂದಿಗೆ ಚಿತ್ತ ಶುದ್ಧಿಯ ಜೀವನಕ್ಕೆ ‘ರಾಖೀ ಬಂಧನ’ ಇಂಬು ಕೊಡುತ್ತದೆ. ಅನಿವಾರ್ಯ ಆಪತ್ಕಾಲದಲ್ಲಿ ಯಾವಳೇ ಸ್ರ್ತೀಯ ಮಾನ - ಪ್ರಾಣಗಳ ರಕ್ಷಣೆ ಪುರುಷನ ಕರ್ತವ್ಯವಾದರೂ ಅದನ್ನು ರೂಢಿಸಿಕೊಳ್ಳುವ ಮನಃಸ್ಥಿತಿ ಏರ್ಪಡಲು ‘ರಾಖೀ ಬಂಧನ’ ಪ್ರತೀ ವರ್ಷ ಆಚರಿಸಲ್ಪಡುತ್ತದೆ. ರಾಖೀ ಎಷ್ಟು ವೈವಿಧ್ಯದ್ದಾದರೂ ರಂಗುರಂಗಿನದಿದ್ದರೂ ಇದರ ಬಂಧನದ ಪ್ರಕ್ರಿಯೆ ದಾರದ ಮೂಲಕ ತಾನೆ? ಈ ದಾರ ಒಂದು ಕರ್ತವ್ಯಕ್ಕೆ,ಜವಾಬ್ದಾರಿಗೆ ನಿಯೋಜಿಸಲ್ಪಟ್ಟ ಭಾವವನ್ನು ಮೂಡಿಸಿದರೆ ಆಚರಣೆಯ ಆಶಯ ನೆರವೇರಿದಂತೆ. ಏಕೆಂದರೆ ವ್ರತ, ಪೂಜೆ, ಮಹೋತ್ಸವ, ಮಹಾಯಾಗ, ಮದುವೆ, ಉಪನಯನ ಮುಂತಾದ ಉತ್ಸವಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸಿ ‘ಕಂಕಣಬಂಧ’ದೊಂದಿಗೆ ದೀಕ್ಷೆ ಸ್ವೀಕರಿಸುವ ವಿಧಿಯೊಂದು ನಮ್ಮ ಸಂಸ್ಕೃತಿಯಲ್ಲಿ ನಿಚ್ಚಳವಾಗಿ ಕಂಡುಬರುತ್ತದೆ. ಇದೇ ಪರಿಕಲ್ಪನೆ ಅಣ್ಣ-ತಂಗಿಯರ ಸಂಬಂಧವನ್ನು ಗಾಢಾವಾಗಿ ಬೆಸೆಯುವ ವಿಧಾನದಲ್ಲಿ ಪಡಿಮೂಡಿರಬಹುದು. ರಾಖೀ ಬಂಧನಕ್ಕೆ ಐತಿಹಾಸಿಕ ಮಹತ್ವವಿದೆ. ಅರಸರುಗಳ ನಡುವಿನ ವೈರವನ್ನು ಮರೆಮಾಚಿದ ಘಟನೆಗಳಿವೆ. ಬಣ್ಣ, ವೈವಿಧ್ಯಗಳಂತೆ ರಾಖೀ ‘ಬಂಧನ’ನದಲ್ಲಿ ಬಾಂಧವ್ಯ ಬೆಸೆಯುವ ಅನನ್ಯ ಸಂತಸವಿದೆ. ಅದು ವರ್ಣಮಯವಾಗಿದೆ. ಧಾರ್ಮಿಕ ವಿಧಿಯು ,ದೀಕ್ಷಾ ಬಂಧನವಾಗಿ, ಭ್ರಾತೃ-ಭಗಿನಿಯರ ಬಾಂಧವ್ಯ ಮಧುರವಾಗಿ ರಕ್ಷಾಬಂಧನದಿಂದ ಕ್ಷೋಬೆಗಳಿಲ್ಲದ ಕಲಹ ರಹಿತ, ಶಾಂತಿ ಸಮೃದ್ಧಿಯ ಸಮಾಜವನ್ನು ನಿರೀಕ್ಷಿಸಬಹುದು.
ಉಪಾಕರ್ಮ : ಶ್ರಾವಣ ಮಾಸದ ಹುಣ್ಣಿಮೆಯಂದು ಹಾಗೂ ಶ್ರಾವಣ ಮಾಸದಲ್ಲಿ ಸನ್ನಿಹಿತವಾಗುವ ಶ್ರವಣ ನಕ್ಷತ್ರದಂದು ಉಪಾಕರ್ಮ ನಡೆಯುತ್ತದೆ. ಋಗ್ವೇದ, ಯಜುರ್ವೇದ, ಸಾಮವೇದ ಶಾಖೆಗಳವರಿಗೆ ಪ್ರತ್ಯೇಕ ದಿನಗಳಂದು ಸ್ವೀಕಾರ ಇದೆಯಾದರೂ ಉಪಾಕರ್ಮ ವಿಧಿಯ ಉದ್ಧೇಶ ಹಾಗೂ ನಿರ್ವಹಣೆಯ ಬಹುತೇಕ ಸಮಾನವಾಗಿಯೇ ಇದೆ. ಉಪನಯನ ಸಂಸ್ಕಾರದೊಂದಿಗೆ ವೇದಾಧ್ಯಯನದ ಅಧಿಕಾರವನ್ನು ಪಡೆಯುವ ವಿಧಿ. ಗುರುಕುಲಗಳಲ್ಲಿ ವಿದ್ಯಾರ್ಥಿಗಳು ಮಾಘ ಮಾಸದಿಂದ ಆರು ತಿಂಗಳು ವ್ಯಾಕರಣ, ಜ್ಯೋತಿಷ ಮುಂತಾದವುಗಳ ಅಧ್ಯಯನ ನಿರತನಾಗಿರುತ್ತಾರೆ. ಶ್ರಾವಣದಿಂದ ಮುಂದಿನ ಆರು ತಿಂಗಳು ವೇದಾಧ್ಯಯನಕ್ಕೆ ಮೀಸಲಿಡುತ್ತಾನೆ (ಪೂರ್ವದಲ್ಲಿ ಋಷಿಗಳು ಆಚರಿಸಿದ್ದು). ಆರು ತಿಂಗಳು ವೇದಾಧ್ಯಯನ ಮಾಡದಿರುವ ಕಾರಣಕ್ಕೆ ಪುನಃ ವೇದಾಧ್ಯಯನದ ಅಧಿಕಾರ ಸಿದ್ಧಿಗಾಗಿ ಉಪಾಕರ್ಮ ವಿಧಿ ರೂಢಿಗೆ ಬಂತೆಂದು ಒಂದು ಪಾಠ. ಕೃಷಿ ಸಂಬಂಧಿ ಚಟುವಟಿಕೆಗಾಗಿ ವೇದಗಳ ಅಧ್ಯಯನ-ಅಧ್ಯಾಪನವನ್ನು ಸ್ಥಗಿತಗೊಳಿಸಿ ಮತ್ತೆ ಕೃಷಿ ಕಾರ್ಯ ಮುಗಿದ ಬಳಿಕ ವೇದಾಧ್ಯಯನ ಆರಂಭಕ್ಕೆ ಅಧಿಕಾರ ಸಿದ್ಧಿಗಾಗಿ ಉಪಾಕರ್ಮ ಎಂಬುದು ಇನ್ನೊಂದು ಪಾಠಾಂತರ. ಪುಣ್ಯಾಹ, ಸಪ್ತ ಋಷಿಗಳ ಪೂಜೆ, ಬಳಿಕ ಉಪಾಕರ್ಮ ಹೋಮವನ್ನು ದಧಿ ಹಾಗೂ ಸತ್ತು (ಅರಳಿನ ಹುಡಿ)ಗಳ ಮಿಶ್ರಣದ ದ್ರವ್ಯದಿಂದ ಹಾಗೂ ಉತ್ಸರ್ಜನ ಹೋಮವನ್ನು ಚರು ದ್ರವ್ಯದಿಂದಲೂ ನಡೆಸಲಾಗುತ್ತದೆ. ಪ್ರಧಾನ ಹೋಮದ ಬಳಿಕ ಹೋಮ ದ್ರವ್ಯದ ಶೇಷ ಭಾಗವಾದ ದಧಿ-ಸತ್ತು ಸ್ವೀಕರಿಸಿ ನೂತನ ಯಜ್ಞೋಪವೀತ ಧಾರಣೆ ,ಬಳಿಕ ಬ್ರಹ್ಮಯಜ್ಞ, ದೇವ, ಋಷಿ,ಆಚಾರ್ಯ, ಪಿತೃತರ್ಪಣ(ಅಧಿಕಾರವಿದ್ದವರು ಮಾತ್ರ) ಕೊಡುವುದು. ಹೀಗೆ ಉತ್ಸರ್ಜನೆಯಿಂದ ಮರಳಿ ಹೊಸದಾಗಿ ಆರಂಭಿಸುವುದಕ್ಕೆ ಸಿದ್ಧತೆಯಾಗಿಯೂ ಈ ಕ್ರಿಯೆ ನಡೆಯುತ್ತದೆ (ಋಗ್ವೇದದ ಕ್ರಮ). ವೇದ ಶಾಖೆಯನ್ನು ಆಧರಿಸಿ ಪ್ರಧಾನ ಹೋಮಕ್ಕೆ ಮಂತ್ರವನ್ನು ಬಳಸಲಾಗುವುದು. ಇಲ್ಲಿ ಋಷಿ ಪೂಜೆ ಪ್ರಧಾನ. ಏಕೆಂದರೆ ವೇದ ಮಂತ್ರಗಳೆಲ್ಲವೂ ಋಷಿ ದ್ರಷ್ಟವಾದುದು. ಋಷಿ ದ್ರಷ್ಟವಾದ ಮಂತ್ರಗಳ ಅಧ್ಯಯನ-ಅಧ್ಯಾಪನಕ್ಕೆ ಋಷಿಗಳ ಅನುಗ್ರಹ ಯಾಚನೆಯಾಗಿ ಋಷಿ ಪೂಜೆ.
ಯಜ್ಞೋಪವೀತದ ಬದಲಾವಣೆ ಎಂಬುದು ಸಾಂಕೇತಿಕ. ಆದರೆ ಜ್ಞಾನದ ತಿಳಿವಳಿಕೆಗೆ ನಿರಂತರ ಜಾಗೃತಿ ಮೂಡಿಸುವ ಧಾರ್ಮಿಕ ವಿಧಿಯಾಗಿ ಉಪಾಕರ್ಮ ವಿಧಿಯನ್ನು ಗಮನಿಸಿದರೆ ಯಜ್ಞೋಪವೀತದ ಉದ್ದ, ಎಳೆಗಳು, ಇವುಗಳಿರುವ ಶಾಸ್ರ್ತಾಧಾರ ಮತ್ತು ಮಂತ್ರಗಳು, ಧಾರ್ಮಿಕ ವಿಧಿಗಳು ಅದ್ಭತ ಪರಿಕಲ್ಪನೆಯವು. ಉಪಾಕರ್ಮ ಜ್ಞಾನದ ಉತ್ಕರ್ಷಕ್ಕಾಗಿ ಉಪಶ್ರುತವಾದ ವಿಧಿ. ಉಪಗ್ರಹಣದಿಂದ ಉತ್ಪನ್ನವಾಗುವ ಜ್ಞಾನವು ಸಮಾಜಕ್ಕೆ, ವಿಶ್ವಕ್ಕೆ ಕೊಡುಗೆಯಾದರೆ ‘ಉಪಾಕರ್ಮ’ ಸಂಕುಚಿತವಾಗದೆ ವಿಶಾಲ ಅರ್ಥವನ್ನು ಪಡೆಯಬಲ್ಲುದು. ಸಿದ್ಧತೆ, ಯಜ್ಞೋಪವೀತ ಬದಲಾಯಿಸಿ ಹಾಕಿಕೊಳ್ಳುವ ವಿಧಿ ಮುಂತಾದ ಅರ್ಥ ನಿಷ್ಪತ್ತಿ ಇರುವ ಉಪಾಕರ್ಮವು ಒಂದು ಧಾರ್ಮಿಕ ವಿಧಿಯೂ, ಕಟ್ಟುಪಾಡಾಗಿ ಯಜ್ಞೋಪವೀತ ಧರಿಸುವ ಸಂಪ್ರದಾಯವುಳ್ಳ ವರ್ಗಕ್ಕೆ ವಿಶಿಷ್ಟ ಆಚರಣೆ. ಲೇಖನ : ಕೆ.ಎಲ್.ಕುಂಡಂತಾಯ
ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ಮತ್ತು ವಿದ್ಯಾರ್ಥಿವೇತನ ವಿತರಣೆ

Posted On: 21-08-2021 06:36PM
ಕಾಪು : ಮಂಡೇಡಿ ಶ್ರೀ ದೇವಿ ಭಜನಾ ಮಂಡಳಿಯಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ಮತ್ತು ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಸುಮಾರು 25 ಮಕ್ಕಳಿಗೆ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಮಂಡೇಡಿ ಕಂಗಿತ್ಲು ಮನೆಯ ದಿ|ವಿಠಲ ಶೆಟ್ಟಿ ಸ್ಮರಣಾರ್ಥ ಅವರ ಮಗ ದಯಾನಂದ ವಿಠಲ ಶೆಟ್ಟಿಯವರು ಸುಮಾರು 1 ಲಕ್ಷಕ್ಕೂ ಅಧಿಕ ಧನಸಹಾಯ ನೀಡಿದ್ದರು ಹಾಗೂ ಕುಂಜಿರ ಬೆಟ್ಟು (ದ್ವಾರಕ) ಮನೆ ಶಶಿಧರ ಶೆಟ್ಟಿ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ಶಾಲು ನೀಡಿ ಗೌರವಿಸಿದರು.

ಈ ಸಂದರ್ಭ ಆ ದಿನದ ಭಜನಾ ಸೇವಾಕರ್ತರಾದ ಶ್ರೀಮತಿ ಅಕ್ಕಣಿ ವಿಠಲಶೆಟ್ಟಿ ಅವರಿಂದ ಅನ್ನ ಪ್ರಸಾದ ಸೇವೆ ನಡೆಯಿತು.

ಕಾರ್ಯಕ್ರಮದಲ್ಲಿ ಸೇವಾಕರ್ತರು, ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ತೆಂಗು ಮತ್ತು ಅಡಿಕೆ ಮರ ಹತ್ತುವವರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರ್ಪಡೆಗೊಳಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ

Posted On: 20-08-2021 03:03PM
ಕಾಪು : ತೆಂಗು ಮತ್ತು ಅಡಿಕೆ ಮರ ಹತ್ತುವವರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಕೇಂದ್ರ ಕೃಷಿ ಮತ್ತು ರೈತ ಸಬಲೀಕರಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆಗೆ ಉಡುಪಿ ಜಿಲ್ಲೆಯ ತೆಂಗು ಮತ್ತು ಅಡಿಕೆ ಬೆಳೆಗಾರರ ಪ್ರಕೋಷ್ಟದ ಪರವಾಗಿ ಸಂಚಾಲಕರಾದ ಪ್ರಾಣೇಶ್ ಹೆಜಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭ ನಮ್ಮ ಜಿಲ್ಲೆ, ರಾಜ್ಯದಲ್ಲಿ ತೆಂಗು ಮತ್ತು ಮರ ಹತ್ತುವವರು ಬಹಳ ಸಂಖ್ಯೆಯಲ್ಲಿದ್ದು ಅವರ ಜೀವನ ಸ್ಥಿತಿ ಗತಿಗಳ ಬಗ್ಗೆ, ಅಸಂಘಟಿತ ಕಾರ್ಮಿಕ ವರ್ಗದಲ್ಲಿ 42 ಅಂಶಗಳನ್ನು ಒಳಗೊಂಡ ಕೆಲಸ ಮಾಡುವವರು ಇದ್ದು, ಅದರಲ್ಲಿ ತೆಂಗು ಮತ್ತು ಮರ ಹತ್ತುವವರು ಬರುವುದಿಲ್ಲ. ಅದೇಷ್ಟೋಮಂದಿ ತೆಂಗು ಮತ್ತು ಅಡಿಕೆ ಮರ ಹತ್ತುವವರು ಅಕಸ್ಮಾತಾಗಿ ಬಿದ್ದು ದುರ್ಮರಣಕ್ಕೀಡಾಗಿ ಸಾವನಪ್ಪಿರುತ್ತಾರೆ. ಕೆಲವರಂತು ಜೀವನ ಪರ್ಯಂತ ಹಾಸಿಗೆಯಲ್ಲಿಯೇ ಕಾಲ ಕಳೆದವರೂ ಇದ್ದಾರೆ. ಇವರಿಗೆ ಸರಕಾರದ ಸವಲತ್ತು ಸಿಗದೇ ಇರುವುದು ದುರದೃಷ್ಟಕರವಾಗಿದೆ. ಇತ್ತೀಚೆಗೆ ಕಾರ್ಮಿಕ ಸಚಿವರು ರಿಕ್ಷಾ ಹಾಗೂ ಬಸ್ಸು ಚಾಲಕರಿಗೆ ಅಕಸ್ಮತ್ ಸಾವನಪ್ಪಿದ್ದರೆ 5 ಲಕ್ಷ ನೀಡುವ ಬಗ್ಗೆ ಘೋಷಣೆ ಮಾಡಿರುತ್ತಾರೆ . ಅಂತೆಯೇ ತೆಂಗು ಮತ್ತು ಅಡಿಕೆ ಮರ ಹತ್ತುವವರು ಅಸಂಘಟಿತ ಕಾರ್ಮಿಕ ವರ್ಗದ (43) ಇತರ ವರ್ಗ (ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008ರ ಕಾಲಂ 2(ಎಮ್) ಹಾಗೂ ಕಾಲಂ 2(1) ವ್ಯಾಖ್ಯಾನಕ್ಕೆ ) ಒಳಪಡಿಸಬೇಕೆಂದು ವಿನಂತಿಸಿದರು.
ವರಮಹಾಲಕ್ಷ್ಮಿ ವ್ರತ -ಸಂಪತ್ತಿನ ರಾಣಿಯ ಆರಾಧನೆ

Posted On: 20-08-2021 09:11AM
"ಲಕ್ಷಯತಿ ಪಶ್ಯತಿ ಭಕ್ತಜನಾನ್ ಇತಿ ಲಕ್ಷ್ಮೀ" ಇದು ಲಕ್ಷ್ಮೀ ಶಬ್ದದ ವ್ಯುತ್ಪತ್ತಿ. ಉಪಾಸಕರನ್ನು ಕೃಪಾಕಟಾಕ್ಷದಿಂದ ವೀಕ್ಷಿಸುವವಳೇ ಲಕ್ಷ್ಮೀ. 'ಶ್ರೀ' ಎಂಬುದು ಲಕ್ಷ್ಮೀಯ ನಾಮಾಂತರ. ಪ್ರಭೆ, ಶೋಭೆ, ಕೀರ್ತಿ, ಕಾಂತಿ, ವಿಭೂತಿ, ಮತಿ, ವರ್ಚಸ್, ತೇಜಸ್, ಸೌಂದರ್ಯ, ವೃದ್ಧಿ, ಸಿದ್ಧಿ, ಸೌಭಾಗ್ಯ, ಕಮಲ, ಬಿಲ್ವವೃಕ್ಷ ಮುಂತಾದುವು ಶ್ರೀ ಶಬ್ದಕ್ಕಿರುವ ಹಲವು ಅರ್ಥಗಳು. ಸಂಪತ್ತು ಎಂಬುದು ಸಾಮಾನ್ಯ ಅರ್ಥವಾದರೂ ಐಶ್ವರ್ಯವೆಂಬುದು ಪ್ರಧಾನವಾದ ಅರ್ಥ ಅಥವಾ ಸಾಮಾನ್ಯ ಒಪ್ಪಿಗೆ - ತಿಳಿವಳಿಕೆ. 'ಈಶ್ಚರಸ್ಯ ಭಾವಃ ಐಶ್ವರ್ಯಂ''. ಪರಮಾತ್ಮನ ಅನುಗ್ರಹಕಾರಕವಾದ ಗುಣ ವಿಶೇಷವೇ ಶ್ರೀ. ಲಕ್ಷ್ಮೀ ಸಮುದ್ರ ಮಥನದಲ್ಲಿ ಹುಟ್ಟಿದಳು. ನಾರಾಯಣನನ್ನು ವರಿಸಿ ತಾನು ಮಹಾಲಕ್ಷ್ಮೀ ಯಾದಳು. ನಾರಾಯಣನು ಲಕ್ಷ್ಮೀನಾರಾಯಣನಾದ, ಶ್ರೀಮನ್ನಾರಾಯಣನಾದ. ಸ್ಥಿತಿಕರ್ತನಾದ-ಪಾಲನಾಧಿಕಾರಿಯಾಗಿದ್ದ ನಾರಾಯಣನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಗೆ ವಲ್ಲಭನಾಗಿ ಸೌಭಾಗ್ಯವಂತನಾದ, ಭಕ್ತರ ಇಷ್ಟಾರ್ಥ ಅನುಗ್ರಹಿಸಲು ಸರ್ವಶಕ್ತನಾದ. ಶ್ರೀಮನ್ನಾರಾಯಣನಿಂದ ಲಕ್ಷ್ಮೀ ಬಹುಮಾನ್ಯಳಾದಳು. ಶ್ರೀಮನ್ನಾರಾಯಣ ಆಕೆಯನ್ನು ಹೃದಯದಲ್ಲೆ ಧರಿಸಿಕೊಂಡ. ಹೀಗೆ ಭಾಗ್ಯವತಿಯಾದ ಲಕ್ಷ್ಮೀಯಿಂದ ಸಮೃದ್ಧವಾದ ಸ್ಥಿರಸಂಪತ್ತನ್ನು ಪಡೆಯಲು, ಸರ್ವ ಭೋಗಭಾಗ್ಯದ ಸುಖವನ್ನು ಪಡೆಯಲು ಆಕೆಯನ್ನು ಆರಾಧಿಸುವ ಪರ್ವದಿನವು ಶ್ರಾವಣಮಾಸದ ಶುದ್ಧ ಪಕ್ಷದ ಎರಡನೇ ಶುಕ್ರವಾರ ಒದಗಿಬರುತ್ತದೆ .ಆ ದಿನದಂದು ಲಕ್ಷ್ಮೀಯನ್ನು ವರಗಳನ್ನು ಅನುಗ್ರಹಿಸುವವಳು ಎಂಬ ಅನುಸಂಧಾನದೊಂದಿಗೆ "ವರಮಹಾಲಕ್ಷ್ಮೀ"; ಎಂದು ಪರಿಕಲ್ಪಸಿಕೊಂಡು ಆರಾಧಿಸುವುದು.
ಕಟ್ಟು, ಕಟ್ಟಳೆ, ನಿಯಮ, ವಿಧಿಗಳಿಗೆ ಬದ್ಧರಾಗಿ ನೋಂಪಿಯಂತೆ, ಧಾರ್ಮಿಕ ಪ್ರತಿಜ್ಞೆಯೊಂದಿಗೆ ಶ್ರದ್ಧೆಯಿಂದ ಪೂಜಿಸುವುದು ಆಗ ನಿರ್ದಿಷ್ಟ ವಿಧಿವಿಧಾನದಂತೆ ನೆರವೇರಿಸುವ ಪೂಜೆ ವ್ರತವಾಗುತ್ತದೆ. ಅದೇ , "ವರಮಹಾಲಕ್ಷ್ಮೀವ್ರತ". ನಾರಾಯಣ - ವಿಷ್ಣು ಸೂರ್ಯನಾದಾಗ ಲಕ್ಷ್ಮೀ ತಾವರೆಯಿಂದ ಜನಿಸಿದಳು. ಪರಶುರಾಮನಾದಾಗ ಈಕೆ ಭೂದೇವಿ. ರಾಮಾವತಾರದಲ್ಲಿ ಸೀತಾದೇವಿ. ಕೃಷ್ಣಾವತಾರದಲ್ಲಿ ರುಕ್ಮಿಣಿ. ಹೀಗೆ ಲಕ್ಷ್ಮೀ ಶ್ರೀಮನ್ನಾರಾಯಣನನ್ನು ಅನುಸರಿಸಿಯೇ ಬರುತ್ತಾಳೆ. ಆದರೆ ಒಮ್ಮೆ ಲಕ್ಷ್ಮೀಯೇ ಕೋಪಿಸಿಕೊಂಡು ವೈಕುಂಠವನ್ನೆ ಬಿಟ್ಟು ಧರೆಗಿಳಿಯುತ್ತಾಳೆ. ಈ ಲಕ್ಷ್ಮೀ ಯನ್ನು ಮರಳಿ ಸ್ವೀಕರಿಸಲು ನಾರಾಯಣ ಗೋವಿಂದನಾಗಿ - ಶ್ರೀನಿವಾಸನಾಗಿ ಆಕೆಯನ್ನು ಹಿಂಬಾಲಿಸುತ್ತಾ ಪದ್ಮಾವತಿಯಾಗಿದ್ದ ಲಕ್ಷ್ಮೀಯನ್ನು ಪಡೆದು ಮತ್ತೆ ಶ್ರೀಪತಿಯಾಗುತ್ತಾನೆ ಅದೇ ಸಪ್ತಗಿರಿ ತಿರುಪತಿ- ಶ್ರೀಪತಿ, ಭೂವೈಕುಂಠ.
ಹಿರಣ್ಯ ಸ್ವರೂಪಳಾದ ಶ್ರೀ ಮಹಾಲಕ್ಷ್ಮೀಯು ಹಿರಣ್ಯವನ್ನು ಸದಾಕೊಡಲಿ ಎಂಬುದು ಲಕ್ಷ್ಮೀ ಸ್ತುತಿ ಎಂದೇ ಪ್ರಸಿದ್ಧವಾದ :ಶ್ರೀಸೂಕ್ತ'ದ ಆಶಯ. ಶ್ರೀಸೂಕ್ತವು ನಾರಾಯಣನಿಂದ ಸದಾಕಾಲ ಅನಪಗಾಮಿನಿಯಾದ, ಜೊತೆಯಲ್ಲೇ ಇರುವ ಶ್ರೀ ಮಹಾಲಕ್ಷ್ಮೀಯ ಬೇರೆ ಬೇರೆ ಅವತಾರಗಳನ್ನು, ರೂಪಗಳನ್ನು ವರ್ಣಿಸುತ್ತದೆ. ಲಕ್ಷ್ಮೀಯು ಚತುರ್ಭಾಹುವುಳ್ಳವಳ್ಳವಳು ಮೇಲಿನ ಎರಡು ಕೈಗಳಲ್ಲಿ ಕಮಲದ ಹೂಗಳನ್ನು ಧರಿಸಿದವಳು. ಕೆಳಗಿನ ಕೈಗಳಿಂದ ವರದ ಮತ್ತು ಅಭಯ ಮುದ್ರೆಗಳನ್ನು ತೋರಿಸುತ್ತಿರುವವಳು. ಕಮಲ ಸದೃಶ ಮುಖವುಳ್ಳ ಈಕೆ ಕಮಲದಲ್ಲಿ ಕುಳಿತವಳು. ಅಷ್ಟಲಕ್ಷ್ಮೀಯಾಗಿ ಅಷ್ಟೈಶ್ವರ್ಯಗಳನ್ನು ದಯಪಾಲಿಸುವವಳು. ಆದುದರಿಂದ ಜನಪ್ರಿಯಳು, ಅದೇ ತಾನೇ ಬಹುಮಾನ್ಯತೆ.
|ಭಾರತೀಯರಿಗೆ ದೇವರುಗಳೆಷ್ಟು| ಭಾರತೀಯರಿಗೆ ದೇವರುಗಳು ಎಷ್ಟು? ನಂಬಿಕೆ, ಉಪಾಸನೆ ಗೊಂದಲವಿಲ್ಲವೇ? ಹೀಗೆಂದು ವಿದೇಶಿಯೊಬ್ಬ ಕೇಳುತ್ತಾನೆ. ಹೌದಲ್ಲ....ನಮ್ಮ ದೇವತೆಗಳು, ದೇವರುಗಳನ್ನು ಲೆಕ್ಕ ಹಾಕಿದಾಗ ಅದು ಮೂವತ್ತಮೂರು ಕೋಟಿಗೂ ಹೆಚ್ಚು. ಆದರೆ ನಮಗೆ ಆರಾಧನೆಯಲ್ಲಿ ಗೊಂದಲವೇ ಇಲ್ಲ. ಒಂದೊಂದು ಉದ್ದೇಶಕ್ಕೆ, ಇಷ್ಟಾರ್ಥ ಸಿದ್ಧಿಗೆ ಒಂದೊಂದು ದೇವರು. ಮೊನ್ನೆ ನಾಗನನ್ನು ಪೂಜಿಸಿದೆವು, ಈಗ ಲಕ್ಷ್ಮೀಯನ್ನು ಆರಾಧಿಸುತ್ತೇವೆ, ಮುಂದೆ ಕೃಷ್ಣನನ್ನು ಬಳಿಕ ಗಣಪತಿಯನ್ನು, ನವದುರ್ಗೆಯರನ್ನು, ಬಲೀಂದ್ರನನ್ನು, ಶಿವನನ್ನು ಪೂಜಿಸುತ್ತೇವೆ. ವರ್ಷಪೂರ್ತಿ ಪೂಜೆ, ವ್ರತಗಳು ನಮ್ಮ ಶ್ರಮದ ಬದುಕಿನ ಅವಿಭಾಜ್ಯ ಅಂಗವಾಗಿ ಶತಮಾನಗಳಿಂದ ಸಾಗಿಬಂದಿವೆ. ತುಳುವರಿಗೆ ಮೇಲಿನ ದೇವತೆ - ದೇವರುಗಳೊಂದಿಗೆ ಸಾವಿರಮಾನಿ ದೈವಗಳು, ನೂರೆಂಟು ಗಂಡಗಣಗಳನ್ನು ವಿಧಿಯಂತೆ ಪೂಜಿಸುವ ಸಹಜ ನಂಬಿಕೆ. ಇವುಗಳಲ್ಲದೆ ಕೃಷಿ ಸಂಸ್ಕೃತಿಯೊಂದಿಗೆ ಆಚರಿಸಲ್ಪಡುವ ಆಚರಣೆಗಳು. ಇತ್ತೀಚೆಗೆ ನಮ್ಮದಲ್ಲದ ಹತ್ತಾರು ಆರಾಧನೆಗಳು ಸೇರಿಕೊಂಡಿವೆ .ಆದರೆ ಗೊಂದಲವಿಲ್ಲ, ಮನಃಪೂರ್ವಕವಾದ ಒಪ್ಪಿಗೆಗಳಿವೆ. ಇದು ಈ ದೇಶದ, ತುಳುನಾಡಿನ, ಮಣ್ಣಿನ ಆಸ್ತಿಕತೆ. ಇದು ನಮ್ಮ ಪರಂಪರೆಯಾಗಿ ವಂಶವಾಹಿನಿಯಲ್ಲಿದೆ. ಬಹುತೇಕ ಆರಾಧನೆ, ನಂಬಿಕೆಗಳೆಲ್ಲ ಏನನ್ನೊ ಪ್ರಾಪ್ತಿಸಿಕೊಳ್ಳಲೇ ಆಗಿದೆ. ಸಮೃದ್ಧಿಯನ್ನು ಬಯಸಿಯೇ ಇರುತ್ತದೆ. ಲಕ್ಷ್ಮೀ ಶಬ್ದದ ಅರ್ಥಗಳನ್ನು ಮತ್ತೊಮ್ಮೆ ಮೆಲುಕು ಹಾಕಿಕೊಂಡಾಗ ನಾವು ಬದುಕಿನಲ್ಲಿ ಬಯಸುವುದು ಪ್ರಭೆ, ಶೋಭೆ, ಕೀರ್ತಿ, ಕಾಂತಿ, ವಿಭೂತಿ, ಮತಿ, ವರ್ಚಸ್, ತೇಜಸ್, ಸೌಂದರ್ಯ, ವೃದ್ಧಿ, ಸಿದ್ಧಿ, ಸೌಭಾಗ್ಯಗಳನ್ನೇ ತಾನೆ? ಇದೇ ಲಕ್ಷ್ಮೀಯ ಆರಾಧನೆಯ ಫಲ. ಲೇಖನ : ಕೆ.ಎಲ್. ಕುಂಡಂತಾಯ
ಬಿಸಿಎ ಮತ್ತು ಉದ್ಯೋಗ ಅವಕಾಶಗಳು - ವೆಬಿನಾರ್

Posted On: 19-08-2021 10:41PM
ಕಾಪು : ವಿವೇಕಾನಂದ ಕಾಲೇಜಿನ ಗಣಕವಿಜ್ಞಾನ ಮತ್ತು ಐಟಿ ಕ್ಲಬ್‌ನ ಜಂಟಿ ಸಹಯೋಗದಲ್ಲಿ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ, ಬಿಸಿಎ ವಿದ್ಯಾರ್ಥಿಗಳಿಗೆ ದೊರಕಬಹುದಾದ ಉದ್ಯೋಗಗಳು ಮತ್ತು ಅವಕಾಶಗಳ ಬಗ್ಗೆ ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಲೆಫ್ಟಿನೆಂಟ್ ಕೆ. ಪ್ರವೀಣ್‌ಕುಮಾರ್, ವಿಭಾಗ ಮುಖ್ಯಸ್ಥರು, ಸೈಂಟ್ ಮೇರೀಸ್ ಕಾಲೇಜು ಶಿರ್ವ ಇವರು ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಉದ್ಯೋಗವನ್ನು ಪಡೆಯಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಆಂತರಿಕ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ವಿದ್ಯಾರ್ಥಿಗಳು ಪೂರ್ವ ತಯಾರಿಯನ್ನು ಮಾಡುವುದು ಅನಿವಾರ್ಯ ಎಂದು ಹೇಳಿದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರಕಾಶ್‌ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೯೦ ವಿದ್ಯಾರ್ಥಿಗಳು ಭಾಗವಹಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ವಿಕ್ರಾಂತ್ ಕೆ. ಇವರು ಕಾರ‍್ಯಕ್ರಮವನ್ನು ನಿರೂಪಿಸಿದರು.
ತುಲು ಭಾಷೆಗೆ ಅಧಿಕೃತ ಸ್ಥಾನಮಾನಕ್ಕಾಗಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಗೆ ಜೈ ತುಲುನಾಡ್ ಸಂಘಟನೆಯಿಂದ ಮನವಿ

Posted On: 19-08-2021 08:10PM
ಉಡುಪಿ : ಅಂಬಲಪಾಡಿ ಕಾರ್ತಿಕ್ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೈ ತುಲುನಾಡ್ (ರಿ.) ಸಂಘಟನೆಯ ಪರವಾಗಿ ಸದಸ್ಯರಾದ ಅಕ್ಷತಾ ಕುಲಾಲ್ ಇವರಿಂದ ಕೇಂದ್ರ ಕೃಷಿ ಸಚಿವೆಯಾದ ಶೋಭಾ ಕರಂದ್ಲಾಜೆ ಇವರಿಗೆ ತುಲು ಭಾಷೆಗೆ ಕರ್ನಾಟಕ ರಾಜ್ಯದಲ್ಲಿ ಅಧಿಕೃತ ಸ್ಥಾನಮಾನ ನೀಡುವಂತೆ ಹಾಗೂ ಈ ವಿಷಯವನ್ನು ಆರ್ಟಿಕಲ್ 347 ಪ್ರಕಾರ ಸನ್ಮಾನ್ಯ ರಾಷ್ಟ್ರಪತಿಗಳ ಗಮನಕ್ಕೆ ತರುವಂತೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಸಂಘಟನೆಯವರೊಂದಿಗೆ ಶೋಭಾ ಕರಂದ್ಲಾಜೆಯವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು. ಈ ನಡುವೆ ರಘುಪತಿ ಭಟ್ ತುಲು ಭಾಷೆಯು ರಾಜ್ಯದ ಅಧಿಕೃತ ಭಾಷೆಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಎ ಸುವರ್ಣ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ತಾರಾ ಉಮೇಶ್ ಆಚಾರ್ಯ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಇದರ ಸದಸ್ಯರಾದ ಕೇಸರಿ ಯುವರಾಜ್, ಜೈ ತುಲುನಾಡ್ (ರಿ) ಸಂಘಟನೆಯ ತುಲು ಲಿಪಿ ಮೇಲ್ವಿಚಾರಕರಾದ ಶರತ್ ಕೊಡವೂರು ಮತ್ತು ನಗರ ಬಿ.ಜೆ.ಪಿ ಉಪಾಧ್ಯಕ್ಷೆ ಸರೋಜ ಶೆಣೈ, ಜಿಲ್ಲಾ ಬಿ.ಜೆ.ಪಿ. ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಿ ಎಸ್ ಶೆಟ್ಟಿ, ಜೈ ತುಲುನಾಡ್ (ರಿ) ಸಂಘಟನೆಯ ಸದಸ್ಯರಾದ ಸಂತೋಷ್ ಎಸ್ ಎನ್ , ತುಲು ಲಿಪಿ ಶಿಕ್ಷಕಿಯರಾದ ಸ್ವಾತಿ ಸುವರ್ಣ, ಶಿಲ್ಪಾ ಕೇಶವ್, ಸುಶೀಲಾ ಜಯಕರ್‌ರವರು ಉಪಸ್ಥಿತರಿದ್ದರು.
ಶುಚಿ-ರುಚಿಯ ಮಸಾಲ ಪದಾರ್ಥಗಳು, ಉಪಹಾರ, ಭೋಜನ, ಸಿಹಿತಿಂಡಿಗಳಿಗಾಗಿ ಜನಾರ್ಧನ ಹೋಮ್ ಪ್ರೊಡಕ್ಟ್ಸ್

Posted On: 19-08-2021 08:04PM
ರಾಸಾಯನಿಕಗಳನ್ನು ಬಳಸಿ ತಯಾರಿಸುವ ಆಹಾರಗಳನ್ನು ಸೇವಿಸಿ ಆರೋಗ್ಯ ಹಾಳಾಗುತ್ತಿರುವ ಸಂದರ್ಭದಲ್ಲಿ ಶುದ್ಧ ತೆಂಗಿನ ಎಣ್ಣೆಯಿಂದ ಮನೆಯಲ್ಲಿಯೇ ತಯಾರಿಸುವುದಲ್ಲದೆ, ಪ್ರಸಿದ್ಧ ಪಾಕ ತಜ್ಞರಿಂದ ಸಾಂಪ್ರದಾಯಿಕ ಉಡುಪಿ ಶೈಲಿಯ ಮಸಾಲಾ ಪದಾರ್ಥಗಳನ್ನು ತಯಾರು ಮಾಡುತ್ತಿದ್ದಾರೆ ಕಾಪು ಉಳಿಯಾರಗೋಳಿಯ ಲಕ್ಷ್ಮೀ ಜನಾರ್ಧನ ಹೋಮ್ ಪ್ರೊಡಕ್ಟ್ಸ್ ಸಂಸ್ಥೆ.

ಈ ಸಂಸ್ಥೆ ಇದೀಗ 2 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿದೆ. ಗ್ರಾಹಕರಿಗೆ ರಸಂ ಪೌಡರ್, ಬಿಸಿಬೇಳೆ ಬಾತ್ ಪೌಡರ್, ವೆಜ್ ಪಲಾವ್, ಚಟ್ನಿ ಪೌಡರ್, ಸಾಂಬಾರು ಪೌಡರ್,ಹುರುಳಿ ಕಾಳು ಚಟ್ನಿ ಪುಡಿ, ಪುಟಾಣಿ ಕಡ್ಲೆ ಚಟ್ನಿಪುಡಿ, ವಾಂಗಿಬಾತ್ ಪೌಡರ್, ಪುಳಿಯೋಗರೆ ಗೊಜ್ಜು, ಕರಿಬೇವು ಚಟ್ನಿ ಪುಡಿ, ಶೇಂಗ ಚಟ್ನಿಪುಡಿ, ಮೆಂತೆಕಾಳು ಚಟ್ನಿಪುಡಿ, ಬಾದಾಮಿ ಕಷಾಯ ಪುಡಿ, ಆರೋಗ್ಯ ಸಿರಿ ಕಷಾಯ ಪುಡಿ ಮುಂತಾದ ಮಸಾಲಾ ಪದಾರ್ಥಗಳನ್ನು ಕಡಿಮೆ ದರದಲ್ಲಿ ನೀಡಲಾಗುತ್ತಿದೆ.
ಇದಲ್ಲದೆ ಮನೆಯ ಸಮಾರಂಭಗಳಿಗೆ ಶುಚಿ-ರುಚಿಯಾದ ಸ್ವಾದಿಷ್ಟಮಯ ಸಸ್ಯಹಾರಿ ಉಪಹಾರ ಮತ್ತು ಭೋಜನದ ವ್ಯವಸ್ಥೆ, ಸಿಹಿತಿಂಡಿಗಳ ಆರ್ಡರ್ ತೆಗೆದುಕೊಂಡು ಪೂರೈಸಲಾಗುವುದು. ಭಾರತದಾದ್ಯಂತ ಪಾರ್ಸೆಲ್ ಸೌಲಭ್ಯ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : RAGHUPATHI RAO 9243361555
ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

Posted On: 18-08-2021 11:19PM
ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ವತಿಯಿಂದ ಕ್ಲಬ್ ನ ಸದಸ್ಯರಾದ ರೂಪ ವಸುಂದರ ಇವರ ಮನೆಯ ಅಂಗಳದಲ್ಲಿ ಗಿಡ ನೆಡುವುದರ ಮೂಲಕ ವನಮಹೋತ್ಸವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಕೋಟ್ಯಾನ್ ಮಾತನಾಡಿ ಪರಿಸರದಲ್ಲಿರುವ ಗಿಡ-ಮರಗಳ ಕೊರತೆಯಿಂದ ನಾವೆಲ್ಲ ಇಂದು ಉಸಿರಾಡಲು ತೊಂದರೆಯನ್ನು ಪಡುತ್ತಿದ್ದೇವೆ. ಪರಿಸರದ ಉಳಿವಿಗಾಗಿ ನಾವು ಮನೆಯ ಸುತ್ತ ಗಿಡ ಮರಗಳನ್ನು ನೆಡಬೇಕು ಎಂದು ಕರೆಯಿತ್ತರು.
ಇನ್ನರ್ವೀಲ್ ಅಧ್ಯಕ್ಷರಾದ ಅನಿತಾ ಬಿ.ವಿ ಯವರು ಮಾತನಾಡಿ ಮನೆಗೊಂದು ಮರ ಊರಿಗೊಂದು ವನ ಇದ್ದರೆ ನಮ್ಮ ಪ್ರಕೃತಿ ಸುಂದರ ಎಂದರು.
ಸಭೆಯ ಅಧ್ಯಕ್ಷತೆಯನ್ನು ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷರಾದ ಮೊಹಮ್ಮದ್ ನಿಯಾಜ್ ವಹಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಬಿ. ಎಸ್. ಆಚಾರ್ಯ ವಂದಿಸಿದರು. ಸುಧಾಕರ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಇನ್ನರ್ವೀಲ್ ಮತ್ತು ರೋಟೇರಿಯನ್ ಸದಸ್ಯರು ಉಪಸ್ಥಿತರಿದ್ದರು.