Updated News From Kaup
ರೋಟರಿ ಸೈಬ್ರಕಟ್ಟೆಯ ಸಹಭಾಗಿತ್ವದಲ್ಲಿ ಹೈ ಸ್ಟೆಪ್ಪರ್ಸ್ ಡಾನ್ಸ್ ತರಬೇತಿ ತರಗತಿ ಉದ್ಘಾಟನೆ
Posted On: 16 Oct 2021, 07:52 PM
ಉಡುಪಿ : ಸೈಬ್ರಕಟ್ಟೆಯ ರೋಟರಿ ಭವನದಲ್ಲಿ ರೋಟರಿ ಸೈಬ್ರಕಟ್ಟೆಯ ಸಹಭಾಗಿತ್ವದಲ್ಲಿ ಹೈ ಸ್ಟೆಪ್ಪರ್ಸ್ ಡಾನ್ಸ್ ತರಬೇತಿ ತರಗತಿಯ ಉದ್ಘಾಟನೆಯನ್ನು ರೋಟರಿ ಭವನದ ಮಾಲಕರಾದ ಕಾರ್ಯದರ್ಶಿ ಅಣ್ಣಯ್ಯದಾಸ್ ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರೋಟರಿ ಅಧ್ಯಕ್ಷ ಯು ಪ್ರಸಾದ್ ಭಟ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಿರಣ್ ರೋ ರಾಮ್ ಪ್ರಕಾಶ್, ಚೇತನ್ ನೈಲಾಡಿ,. ಎಕೆ ಶೆಟ್ಟಿ ನೆಡೂರು, ತಾಲೂಕ್ ಪಂಚಾಯತ್ ಸದಸ್ಯೆ ಜ್ಯೋತಿ ಶೆಟ್ಟಿ, ಪ್ರಖ್ಯಾತ ಬಾಲ ನಟಿ ಶ್ಲಾಘ ಸಾಲಿಗ್ರಾಮ, ಡಿಕೆಡಿ ನೃತ್ಯ ಸಹ ಕೊರಿಯೋಗ್ರಫರ್ ರೋಷನ್ ಹಾಗೂ ನೃತ್ಯ ತರಬೇತಿ ಮಾಲಕರಾದ ರವಿ ಮತ್ತು ವಿಖ್ಯಾತ್ ಉಪಸ್ಥಿತರಿದ್ದರು.
ಬೈಂದೂರು : ವಿಜಯದಶಮಿ ದಿನದಂದೇ ನಾಡ ಕೊರಗ ಕಾಲೋನಿಯಲ್ಲಿ ಅಗ್ನಿ ದುರಂತ, ಸಂಪೂರ್ಣ ಮನೆ ಭಸ್ಮ
Posted On: 16 Oct 2021, 07:44 PM
ಉಡುಪಿ : ವಿಜಯದಶಮಿಯ ದಿನ ಊರೆಲ್ಲಾ ಸಂಭ್ರಮದಿಂದ ಹಬ್ಬ ಮಾಡುತ್ತಿರುವಾಗ ನಿನ್ನೆ ನಾಡ, ಪಡುಕೋಣೆ ಹೈಸ್ಕೂಲ್ ಎದುರುಗಡೆ ಇರುವ ಕೊರಗ ಕಾಲೋನಿಯ ನಿವಾಸಿ ಶ್ರೀಮತಿ ಸುನೀತಾ ರ ವರ ಮನೆ ಬೆಂಕಿಗೆ ಆಹುತಿಯಾಗಿ ತನ್ನ ಸೂರು ಕಳೆದುಕೊಂಡು ದಿಕ್ಕು ತೋಚದೆ ಮುಂದೇನು ಗತಿ ಎಂದು ಈ ಬಡ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಈ ಘಟನೆಯ ಬಗ್ಗೆ ಸುನೀತಾರವರನ್ನು ಕೇಳಿದಾಗ ದಿನನಿತ್ಯ ಕೆಲಸ ಕಾರ್ಯಗಳನ್ನು ಮುಗಿಸಿ ದೇವರಿಗೆ ದೀಪ ಹಚ್ಚಿ ಮಧ್ಯಾಹ್ನ ಹತ್ತಿರದಲ್ಲಿರುವ ಸಂಬಂಧಿ ಮನೆಗೆ ಹೋಗಿದೆ. ಸರಿಸುಮಾರು ಮಧ್ಯಾಹ್ನ 12 ಘಂಟೆ ಹೊತ್ತಿಗೆ ಪಕ್ಕದ ಮನೆಯವರು ಬಂದು ನಿಮ್ಮ ಮನೆಯಲ್ಲಿ ಬೆಂಕಿ ಹತ್ತಿಕೊಂಡು ಹೊಗೆ ಬರುತ್ತಿದೆ ಎಂದು ಹೇಳಿದರು. ಕೂಡಲೇ ಅಕ್ಕಪಕ್ಕದವರೆಲ್ಲ ಸೇರಿ ಬೆಂಕಿ ಆರಿಸಲು ಹರಸಾಹಸ ಪಟ್ಟರು, ಅಲ್ಲದೇ ಮನೆ ಒಳಗಡೆ ಇರುವ ಗ್ಯಾಸ್ ಸಿಲಿಂಡರ್ ಸ್ಪೋಟಿಸುವ ಭಯದಿಂದ ಒಳಗಡೆ ಹೋಗುವುದಕ್ಕೆ ಯಾರು ಧೈರ್ಯ ಮಾಡಿಲ್ಲದ ಕಾರಣ ಪೀಠೋಪಕರಣ, ಆಹಾರ ಸಾಮಾಗ್ರಿ, ಪಾತ್ರೆ, ಕಬ್ಬಿಣದ ಕಪಾಟು, ಬಟ್ಟೆಬರೆ, ಚಿನ್ನಾಭರಣ ಹಾಗೂ TVS ಬೈಕ್ ಬೆಂಕಿಗೆ ಆಹುತಿಯಾಗಿದ್ದು, ಸರಿಸುಮಾರು 4ಲಕ್ಷ ರೂ. ಮೌಲ್ಯದ ವಸ್ತು ನಷ್ಟವಾಗಿದೆ. ಸುನೀತಾರವರು ಮತ್ತು ಸ್ಥಳೀಯರು ಹೇಳುವಂತೆ ದೇವರಿಗೆ ಹಚ್ಚಿದ ದೀಪ ಅಲ್ಲೇ ಹತ್ತಿರದಲ್ಲಿ ಇರುವ ಬಟ್ಟೆಯ ಪರದೆಗೆ ಆಕಸ್ಮಿಕವಾಗಿ ತಗಲಿರುವುದರಿಂದ ಈ ಬೆಂಕಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆಯ ಬಗ್ಗೆ ನಿನ್ನೆ ಗಂಗೊಳ್ಳಿ ಪೋಲಿಸ್ ಠಾಣೆಗೆ ಸುನೀತಾರವರು ದೂರು ನೀಡಿದ್ದಾರೆ, ಅಲ್ಲದೇ ಗ್ರಾಮ ಲೆಕ್ಕಿಗರು, PDO ಹಾಗೂ ಸ್ಥಳೀಯ ಪಂಚಾಯತ್ ಸದಸ್ಯರ ಗಮಕ್ಕೆ ತಂದಿದ್ದಾರೆ. ಈ ಘಟನೆ ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತು ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ್ ವಿ ಅವರ ಗಮನಕ್ಕೆ ಬಂದ ಕೂಡಲೇ ಇಂದು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಗ್ರಾಮಲೆಕ್ಕಿಗರು, PDO, ಪೋಲಿಸ್ ಸಿಬ್ಬಂದಿಗಳೊಂದಿಗೆ ಸ್ಥಳದ ಪರಿಶೀಲನೆ ಮಜರು ಮಾಡಿಸಿದ್ದಾರೆ. ಈ ಪರಿವಾರಕ್ಕೆ ತುರ್ತಾಗಿ ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ಬೈಂದೂರು ತಹಸೀಲ್ದಾರ್ ಶೋಭಾರವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ PDO ಹರೀಶ್ ಮೊಗವೀರ, ಪೊಲೀಸ್ ಸಿಬ್ಬಂದಿ ನಾಗರಾಜ್, ಸಾಮಾಜಿಕ ಕಾರ್ಯಕರ್ತ ಕೋಡಿ ಅಶೋಕ್ ಪೂಜಾರಿ, ರವೀಂದ್ರ ಎಸ್ಟಿ ಮೋರ್ಚಾ ಸದಸ್ಯ, ಶ್ರೀ ಧರ್ಮಸ್ಥಳ ಸಂಘ ಪಡುಕೋಣೆ ಒಕ್ಕೂಟದ ಸೇವಾ ಪತ್ರಿನಿಧಿ ಸವಿತಾ ಜೆ. ಬಿಲ್ಲವ, ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಶ್ರೀ ದೇವಿ ಭಜನಾ ಮಂಡಳಿ ಮಂಡೇಡಿ : ದುರ್ಗಾ ನಮಸ್ಕಾರ, ಭಜನೆಯೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನ
Posted On: 16 Oct 2021, 04:57 PM
ಇನ್ನಂಜೆ : ಶ್ರೀ ದೇವಿ ಭಜನಾ ಮಂಡಳಿ (ರಿ.) ಮಂಡೇಡಿ ಇಲ್ಲಿನ ಭಜನಾ ಮಂದಿರದಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಭಜನೆ ನಡೆದಿದ್ದು, ವಿಜಯ ದಶಮಿಯಂದು ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ, ಭಜನಾ ಕಾರ್ಯಕ್ರಮ ಹಾಗೂ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಸರ್ವಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ರೋಟರಿ ಸೈಬ್ರಕಟ್ಟೆಯ ಅಣ್ಣಯ್ಯದಾಸ್ ದಂಪತಿಯಿಂದ ಸ.ಹಿ.ಪ್ರಾ.ಶಾಲೆ ಸೈಬ್ರಕಟ್ಟೆಗೆ ಅಗತ್ಯ ವಸ್ತು ಹಸ್ತಾಂತರ
Posted On: 15 Oct 2021, 09:01 PM
ಉಡುಪಿ : ರೋಟರಿ ಸೈಬ್ರಕಟ್ಟೆಯ ಕಾರ್ಯದರ್ಶಿ ಅಣ್ಣಯ್ಯದಾಸ್ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಅವರ ಕೊಡುಗೆಯಾದ ನಲಿ ಕಲಿ ಪರಿಕರ ಗಳ ಜೋಡಣೆಗೆ ಅಗತ್ಯತೆ ಇರುವ ಕಪಾಟು ಸ.ಹಿ.ಪ್ರಾ.ಶಾಲೆ ಸೈಬ್ರಕಟ್ಟೆಗೆ ಹಸ್ತಾಂತರ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಸೈಬ್ರಕಟ್ಟೆಯಿಂದ ಮಾಡಲಾಯಿತು. ವಿಶೇಷ ಅತಿಥಿ ಮಾಜಿ ಸಹಾಯಕ ಗವರ್ನರ್ ಮಹೇಶ್ ಕುಮಾರ್ ಅವರು ಮುಖ್ಯ ಶಿಕ್ಷಕ ಸತೀಶ್ಚಂದ್ರ ಅವರಿಗೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಅಣ್ಣಯ್ಯದಾಸ್ ಅವರು ರೋಟರಿ ಕ್ಲಬ್ ಸೈಬ್ರಕಟ್ಟೆಗೆ ದೊಡ್ಡ ಆಸ್ತಿ, ಅಲ್ಲದೆ ರೋಟರಿ ಮುಖಾಂತರ ಹಲವಾರು ಕೊಡುಗೆ ಗಳನ್ನು ಈ ಸಮಾಜಕ್ಕೆ ನೀಡಿದ್ದಾರೆ. ಹಾಗೆಯೇ ಈ ವರ್ಷ ರೋಟರಿ ಸೈಬ್ರಕಟ್ಟೆ ಶ್ರೇಷ್ಠ ಸೇವೆ ಹಾಗೂ ಹೆಚ್ಚೆಚ್ಚು ಪ್ರಾಜೆಕ್ಟ್ ಗಳ ಮೂಲಕ ವಲಯ ಹಾಗೂ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ ಅಂತ ಹೇಳಿದರು. ಇದೆ ಸಂದರ್ಭದಲ್ಲಿ ಶಾಲೆಯಿಂದ ರೋಟರಿ ಅಧ್ಯಕ್ಷ ಯು ಪ್ರಸಾದ್ ಭಟ್ ಮತ್ತು ಇಂದಿನ ಕೊಡುಗೆ ನೀಡಿದ ಅಣ್ಣಯ್ಯ ದಾಸ್ ಅವರನ್ನು ಸನ್ಮಾನ ಮಾಡಲಾಯಿತು.ಪ್ರಸಾದ್ ಭಟ್ ಅವರು ಮಾತನಾಡಿ ಸೈಬ್ರಕಟ್ಟೆ ಪ್ರಾಥಮಿಕ ಶಾಲೆಯು ಈ ಭಾಗದಲ್ಲಿಯೇ ಕನ್ನಡ ಮಾದ್ಯಮದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು ಹಳೆ ವಿದ್ಯಾರ್ಥಿಗಳ ಅತ್ಯುನ್ನತ ಕೊಡುಗೆ ಗಳಿಂದ ಉತ್ತಮ ಅಭಿವೃದ್ದಿ ಹೊಂದುತ್ತಿದ್ದು ರೋಟರಿ ಕೂಡ ಕೈ ಜೋಡಿಸುತ್ತೆ ಅಂತ ಹೇಳಿದರು. ವಲಯ ಸೇನಾನಿ ವಿಜಯಕುಮಾರ್ ಶೆಟ್ಟಿ, SDMC ಅಧ್ಯಕ್ಷ ಪುರುಷೋತ್ತಮ ದೇವಾಡಿಗ, ರವೀಂದ್ರನಾಥ್ ಕಿಣಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಪ್ರಭು, ನೀಲಕಂಠ ರಾವ್, ಗಣೇಶ್ ನಾಯಕ್, ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.
ಶಿರ್ವ ಪೋಲಿಸ್ ಸ್ಟೇಷನ್ ಆಯುಧ ಪೂಜೆ - ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಭಾಗಿ
Posted On: 15 Oct 2021, 08:52 PM
ಕಾಪು : ಕಾಪು ಕ್ಷೇತ್ರದ ಮಾಜಿ ಶಾಸಕರು, ಸಚಿವರೂ ಆದ ಸನ್ಮಾನ್ಯ ವಿನಯ ಕುಮಾರ್ ಸೊರಕೆಯವರು ಶಿರ್ವ ಪೋಲಿಸ್ ಸ್ಟೇಷನ್ ನಲ್ಲಿ ನಡೆದ ಆಯುಧ ಪೂಜೆಯಲ್ಲಿ ಭಾಗವಹಿಸಿದರು. ಶಿರ್ವ ಠಾಣಾಧಿಕಾರಿ ಶಾಲು ಹೊದಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದರು ನಂತರ ಆಯುಧ ಪೂಜೆಯ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಠಾಣಾ ಸಿಬ್ಬಂದಿಗಳು ಹಾಗೂ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮರಾಯ ಪಾಟ್ಕರ್, ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ರತನ್ ಶೆಟ್ಟಿ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮೆಲ್ವಿನ್ ಡಿಸೋಜ, ಅಬ್ದುಲ್ ಲತೀಫ್ ಉದಯ್ ಪದವು, ಸುಧೀರ್ ಶೆಟ್ಟಿ, ವೀರೇಂದ್ರ ಶೆಟ್ಟಿ ಹಾಜರಿದ್ದರು.
ರೋಟರಿಯಲ್ಲಿ ಆರೋಗ್ಯ, ಶಿಕ್ಷಣ, ಮಾನವೀಯನೆಲೆಯ ಸಮಾಜಮುಖಿ ಸೇವಾಕಾರ್ಯಗಳು ನಿರಂತರ : ರೋಟರಿ ಗವನ೯ರ್ ಎಂ.ಜಿ.ರಾಮಚಂದ್ರಮೂರ್ತಿ
Posted On: 15 Oct 2021, 08:42 PM
ಶಿರ್ವ : ರೋಟರಿ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಸಮಾನ ಮನಸ್ಕರ, ಸಮಾನಚಿಂತಕರ ಸೇವಾದರ್ಶ ತತ್ವಗಳನ್ನು ಮೈಗೂಡಿಸಿಕೊಂಡ ಆಸಕ್ತರ ಒಕ್ಕೂಟ. ರೋಟರಿಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ಪರಿಸರ ಮಾನವೀಯ ನೆಲೆಯ ಸಮಾಜಮುಖಿ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ಸರಕಾರ ಮಾಡುವ ಹಲವಾರು ಕಾರ್ಯಗಳನ್ನು ರೋಟರಿ ಸಂಸ್ಥೆಗಳು ನಿರಂತರವಾಗಿ ಮಾಡುತ್ತಿವೆ ಎಂದು ರೋಟರಿ ಅಂತರಾಷ್ಟ್ರೀಯ ಜಿಲ್ಲೆ ೩೧೮೨ ಇದರ ಜಿಲ್ಲಾ ಗವರ್ನರ್ ಎಂ.ಜಿ.ರಾಮಚಂದ್ರ ಮೂರ್ತಿ ಶಿವಮೊಗ್ಗ ನುಡಿದರು. ಅವರು ಶುಕ್ರವಾರ ೫೧ ವರ್ಷಗಳ ಸೇವಾ ಇತಿಹಾಸ ಹೊಂದಿರುವ ಪ್ರತಿಷ್ಠಿತ ಶಿರ್ವ ರೋಟರಿ ಸಂಸ್ಥೆಗೆ ಅಧಿಕೃತ ಸಂದರ್ಶನ ನೀಡಿ ದಿನಪೂರ್ತಿ ಹಲವಾರು ಸೇವಾಯೋಜನೆಗಳನ್ನು ಲೋಕಾರ್ಪಣೆಗೊಳಿಸಿ ಸಂಜೆ ಬಂಟಕಲ್ಲು ರೋಟರಿ ಸಭಾಭವನದಲ್ಲಿ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು,ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ವಲಯ ಸಹಾಯಕ ಗವರ್ನರ್ ಡಾ.ಅರುಣ್ ಹೆಗ್ಡೆ ಕ್ಲಬ್ ಪತ್ರಿಕೆ "ಮಲ್ಲಿಕಾ"ಬಿಡುಗಡೆಗೊಳಿಸಿದರು. ಸಂಪಾದಕ ರಘುಪತಿ ಐತಾಳ್ ಸಹಕರಿಸಿದರು. ವಲಯಸೇನಾನಿ ಅನಿಲ್ ಡೇಸಾ ಶುಭ ಹಾರೈಸಿದರು. ನಿವೃತ್ತ ಶಿಕ್ಷಕಿಯರಾದ ಹಿಲ್ಡಾ ಸಲ್ಡಾನ್ನಾ ಪಾಂಬೂರು, ಹಿಂದು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶಕಿಲಾ, ನಿಟ್ಟೆ ತಾಂತ್ರಿಕ ಕಾಲೇಜು ಉಪನ್ಯಾಸಕ, ಪಿಎಚ್‌ಡಿ ಸಾಧಕ ಡಾ.ಶ್ರೀರಾಮ್ ಪಿ. ಮರಾಠೆರವರನ್ನು ಸನ್ಮಾನಿಸಲಾಯಿತು. ಶಿರ್ವ ಸಂತಮೇರಿ ಕಾಲೇಜಿನ ಸಾಧಕ ಪ್ರೊ.ವಿಠಲ್ ನಾಯಕ್‌ರನ್ನು ಅಭಿನಂದಿಸಲಾಯಿತು. ಕೊರೋನಾ ವಾರಿಯಸ್೯ಗಳಾಗಿ ಸೇವೆ ನೀಡುತ್ತಿರುವ ಗಿರಿಧರ್ ಪ್ರಭು ಶಿರ್ವ, ರಮೇಶ್ ಪೂಜಾರಿರವರನ್ನು ಗೌರವಿಸಲಾಯಿತು. ದಿನೇಶ್ ಕುಲಾಲ್, ಪ್ರಶೋಭ್ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ರಫಾಯಲ್ ಮತಾಯಸ್, ರೊನಾಲ್ಡ್ ಸಿಕ್ವೇರಾ, ಹೊನ್ನಯ್ಯ ಶೆಟ್ಟಿಗಾರ್, ಫಿಲಿಪ್ ಕಸ್ತಲಿನೊ, ಮೈಕಲ್ ಮತಾಯಸ್, ಅಮಿತ್ ಅರಾನ್ನ, ಜಗದೀಶ್ ಹೆಗ್ಡೆ, ವಿಷ್ಣುಮೂರ್ತಿ ಸರಳಾಯ, ಪರಿಚಯಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಜಯಕೃಷ್ಣ ಆಳ್ವ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಜಿನೇಶ್ ಬಲ್ಲಾಳ್ ವರದಿ ವಾಚನ ಮಾಡಿ ಕೊನೆಯಲ್ಲಿ ಧನ್ಯವಾದವಿತ್ತರು. ಸುಧಾಕರ್ ಶೆಣೈ ನಿರೂಪಿಸಿದರು. ಕೋಡು ಸದಾನಂದ ಶೆಟ್ಟಿ, ರಾಘವೇಂದ್ರ ನಾಯಕ್ ಸಹಕರಿಸಿದರು. ಪೂರ್ವಾಹ್ನ ಶಿರ್ವ ಹಿಂದೂ ಪ.ಪೂ.ಕಾಲೇಜು ಪ್ರೌಢಶಾಲೆಯಲ್ಲಿ ನೂತನ ಇಂರ‍್ಯಾಕ್ಟ್ ಕ್ಲಬ್ ಉದ್ಘಾಟನೆ, ಶಿರ್ವ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸಮೀಪ ರಸ್ತೆ ಸೂಚನಾಫಲಕ ಅನಾವರಣ, ಶಿರ್ವ ಪೇಟೆ ಕಟಪಾಡಿ-ಕಾಪು ರಸ್ತೆ ಕೂಡುವಲ್ಲಿ ನೂತನ ಸರ್ಕಲ್ ಲೋಕರ್ಪಣೆ, ರೋಟರಿಯಿಂದ ನಿರ್ಮಾಣಗೊಂಡ ಎಲ್.ಮೆಂಡೋನ್ಸಾ ಸ್ಮಾರಕ ಬಸ್ ತಂಗುದಾಣ ಗ್ರಾಮಪಂಚಾಯತ್‌ಗೆ ಹಸ್ತಾಂತರ, ಶಿರ್ವ ಸಂತಮೇರಿ ಪ್ರೌಢ ಶಾಲಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ "ವಿದ್ಯಾಸೇತು" ಪುಸ್ತಕ ವಿತರಣೆ, ಪಾದೂರು ರೋಟರಿ ಸಮುದಾಯದಳದ ವತಿಯಿಂದ ರೈತರಿಗೆ ಸಾವಯವ ಗೊಬ್ಬರ ವಿತರಣೆ ಕೃಷಿ ಮಾಹಿತಿ, ಪಾದೂರು ಅಬ್ಬೆಟ್ಟುಗುತ್ತು ಡಾ.ಎನ್.ಎಸ್.ಶೆಟ್ಟಿ ನಿವಾಸದಲ್ಲಿ ಕ್ಲಬ್ ಎಸ್ಸೆಂಬ್ಲಿ, ಶಿರ್ವ ಗ್ಯಾಬ್ರಿಯಲ್ ನಜ್ರೆತ್ ನಿರ್ಮಿಸಿದ ಸಿದ್ಧಿವಿನಾಯಕ ದೇವಳ ಹಾಗೂ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳಕ್ಕೆ ಜಿಲ್ಲಾ ಗವರ್ನರ್ ಭೇಟಿ ಕಾರ್ಯಕ್ರಮಗಳು ಸಂಪನ್ನಗೊಂಡವು.
ಆಧ್ಯಾತ್ಮಿಕ ನೆಲೆಯಲ್ಲಿ ನಾನು ಯಾರು ಎನ್ನುವ ಅರಿವಿನ ಪೂರ್ಣತೆಯಿಂದಷ್ಟೇ ಜಗತ್ತಿನ ಅರಿವು ಹೊಂದಲು ಸಾಧ್ಯ : ಸಿಎಂ ಬೊಮ್ಮಾಯಿ
Posted On: 13 Oct 2021, 11:36 PM
ಅದಮಾರು : ಧ್ಯಾನ, ಜ್ಞಾನದಿಂದ ಅರಿವಿನ ಪೂರ್ಣಪ್ರಜ್ಞರಾಗಿ ವಿದ್ಯಾರ್ಥಿಗಳು ಜಗತ್ತು ಗೆಲ್ಲುವ ಸಾಧಕರಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಪಡುಬಿದ್ರಿ ಸಮೀಪದ ಅದಮಾರಿನಲ್ಲಿ ಪೂರ್ಣಪ್ರಜ್ಞ ಪದವಿ ಕಾಲೇಜು ಕಟ್ಟಡ ನಿರ್ಮಾಣದ7.40ಕೋಟಿ ರೂ.ವೆಚ್ಚದ ಯೋಜನೆಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ವಾಸುದೇವ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು. ಪ್ರಜ್ಞಾಶೀಲರಾಗಿರುವುದೇ ಬದುಕಿನ ಬಹುದೊಡ್ಡ ಸಾಧನೆ,ಯಾವುದೇ ಕೆಲಸ ಕಾರ್ಯಗಳಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿಸಿಕೊಳ್ಳಬೇಕು. ಆಧ್ಯಾತ್ಮಿಕ ನೆಲೆಯಲ್ಲಿ ನಾನು ಯಾರು ಎನ್ನುವ ಅರಿವಿನ ಪೂರ್ಣತೆಯಿಂದಷ್ಟೇ ಜಗತ್ತಿನ ಅರಿವು ಹೊಂದಲು ಸಾಧ್ಯ ಎಂದರು. ಈ ಜಗತ್ತಿನಲ್ಲಿ ನಾನು ಯಾರು, ಭೂಮಿಗೆ ಬಂದಿದ್ದೇಕೆ, ಕರ್ತವ್ಯ ಏನು? ಮಾನವನಾಗಿ ಹುಟ್ಟಿದ್ದೇಕೆ ಎನ್ನುವ ಪ್ರಶ್ನಗಳಿಗೆ ಅರಿವು, ಪೂರ್ಣಪ್ರಜ್ಞೆ ಹೊಂದಿದರೆ ಉತ್ತರ ಗಳಿಕೆ ಸಾಧ್ಯ ಎಂದರು. ಶಿಕ್ಷಣಸಂಸ್ಥೆಯಿಂದ ಹೊರಬಿದ್ದಾಗ ಗೌರವಿಂದ ಕಾಣುವಂತಾಗಬೇಕು. ಬಯಸದ್ದು ಬಂದಾಗ, ಅದೃಷ್ಟ ಒಲಿದಾಗ ಕರ್ತವ್ಯ ಮರೆಯಬಾರದು. ಪರಿಪೂರ್ಣ ಜ್ಞಾನ ಗಳಿಕೆಯನ್ನು ಭಕ್ತಿ, ಶ್ರದ್ಧೆಯಿಂದ ಮಾಡಬೇಕು. ಗ್ರಾಮೀಣ ಮಕ್ಕಳ ವಿದ್ಯಾರ್ಜನೆಗೆ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಶ್ರೀವಿಬುಧೇಶತೀರ್ಥರಿಗೆ ಕೋಟಿ ಕೋಟಿ ನಮನಗಳು. ಪೂರ್ಣಪ್ರಜ್ಞ ಬ್ರ್ಯಾಂಡ್ ನೇಮ್ ವಿದ್ಯಾರ್ಥಿ ಶಕ್ತಿ, ನೈತಿಕ ಶಕ್ತಿಯಿಂದ ರೂಪುಗೊಂಡಿದೆ. ಸಮಾಜಕ್ಕೆ ಗುರು ಶ್ರೀಮಠದಿಂದ ಬಹುದೊಡ್ಡ ಕೊಡುಗೆ ಸಂದಿದೆ. ಶಿಕ್ಷಣ ಸಂಸ್ಥೆಯಲ್ಲಿ ಪಾಠ, ಓದು, ಪರೀಕ್ಷೆಯಿದ್ದರೆ ಬದುಕಿನಲ್ಲಿ ಪರೀಕ್ಷೆ ಎದುರಿಸಿ ಪಾಠ ಕಲಿಯಬೇಕಿದೆ. ವಿದ್ಯಾರ್ಥಿಯಾದವನ ಬದುಕಿನುದ್ದಕ್ಕೂ ಕಲಿಕೆ ನಿರಂತರವಾಗಿರಬೇಕು ಎಂದು ಬೊಮ್ಮಾಯಿ ನುಡಿದರು. ಯಾವುದೇ ವಿಷಯವನ್ನು ಪ್ರಶ್ನಿಸುವ ಲಾಜಿಕಲ್ ಚಿಂತನೆಯಿಂದ ತಾರ್ಕಿಕ ಉತ್ತರ ಕಂಡುಕೊಳ್ಳಬೇಕು. ಜಯ ಅಪಜಯ ನಮ್ಮೊಳಗಿದ್ದು ಆತ್ಮವಿಶ್ವಾದಿಂದ ಮುನ್ನುಗ್ಗಿ ಪೂರ್ಣಪ್ರಜ್ಞೆಯ ಅರಿವೇ ಗುರು ಎಂದು ಹೇಳಿದರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ , ಕೆ.ರಘುಪತಿ ಭಟ್, .ಗ್ರಾ.ಪಂ.ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಡಾ.ಜಿ.ಎಸ್.ಚಂದ್ರಶೇಖರ್, ಎಂ. ರಾಮಕೃಷ್ಣ ಪೈ, ಡಾ.ಒಲ್ವಿಟಾ ಡಿಸೋಜ ಉಪಸ್ಥಿತರಿದ್ದರು. ಅನನ್ಯಾ, ಭಾರತಿ, ಶ್ರೀವಾಣಿ, ಹರ್ಷ ಪ್ರಾರ್ಥಿಸಿದರು. ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸ್ವಾಗತಿಸಿದರು. ಡಾ.ಜಯಶಂಕರ ಕಂಗಣ್ಣಾರು ನಿರೂಪಿಸಿ, ಅದಮಾರು ಪೂರ್ಣಪ್ರಜ್ಞ ಸಂಸ್ಥೆಗಳ ಕಾರ್ಯದರ್ಶಿ ಪ್ರವೀಣ್ ಕುಮಾರ್ ವಂದಿಸಿದರು.
ಮುಖ್ಯಮಂತ್ರಿಯಿಂದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 4.6 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ
Posted On: 13 Oct 2021, 11:26 PM
ಕಾಪು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉಡುಪಿ ಜಿಲ್ಲೆಯ ಕುಂತಲ ನಗರದಲ್ಲಿ ಮಾಧವ ನಗರದಿಂದ ಬಂಟಕಲ್ಲು ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಒಟ್ಟು 6.36 ಕಿ.ಮೀ ಉದ್ದದ ರಸ್ತೆಯನ್ನು 4.6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ವಿ ಸುನೀಲ್ ಕುಮಾರ್, ಶಾಸಕರಾದ ರಘುಪತಿ ಭಟ್ , ಲಾಲಾಜಿ ಮೆಂಡನ್ ಉಪಸ್ಥಿತರಿದ್ದರು.
ಮಕ್ಕಳಿಗೆ ಕೋವಿಡ್ ಲಸಿಕೆಗೆ ಕೇಂದ್ರ ಸರಕಾರದ ಸಕ್ಷಮ ಪ್ರಾಧಿಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ : ಮುಖ್ಯಮಂತ್ರಿ ಬೊಮ್ಮಾಯಿ
Posted On: 13 Oct 2021, 07:47 PM
ಉಡುಪಿ: ರಾಜ್ಯದಲ್ಲಿ 2ರಿಂದ 18ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರಕಾರದ ಸಕ್ಷಮ ಪ್ರಾಧಿಕಾರ ಕೊನೆಯ ಸರ್ಟಿಫಿಕೇಶನ್ ನ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಇಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಾವೀಗ ಮಕ್ಕಳ ರಕ್ಷಣೆ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಲಭಿಸಿದ ತಕ್ಷಣ ಲಸಿಕೆ ನೀಡುತ್ತೇವೆ ಎಂದರು. ಈಗಾಗಲೇ ನಾವು ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ಶೇ. 82ರಷ್ಟು ಸಾಧನೆ ಮಾಡಿದ್ದೇವೆ. ಅಲ್ಲದೇ ಎರಡನೇ ಡೋಸ್ ಲಸಿಕೆ ಶೇ. 36-37ರಷ್ಟು ಕೊಟ್ಟಿದ್ದೇವೆ. ಡಿಸೆಂಬರ್ ಅಂತ್ಯದ ವೇಳೆಗೆ ಶೇ. 90ರಷ್ಟು ಮೊದಲ ಡೋಸ್ ಮತ್ತು ಶೇ. 70ರಷ್ಟು ಎರಡನೇ ಡೋಸ್ ನೀಡುತ್ತೇವೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಆಗಿದೆ. ಮತಾಂತರ ನಿಷೇಧ ಕಾಯ್ದೆ ತರುವ ಬಗ್ಗೆಯೂ ನಾವು ಸಾಕಷ್ಟು ಚಿಂತನೆ ಮಾಡಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿರುವ ಕಾನೂನನ್ನು ಅಭ್ಯಾಸ ಮಾಡುತ್ತೇವೆ. ಶೀಘ್ರವೇ ಮತಾಂತರ ನಿಷೇಧ ಕಾನೂನು ಜಾರಿಗೆ ತರಲು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರೋಟರಿ ಕ್ಲಬ್ ಸೈಬ್ರಕಟ್ಟೆಯಿಂದ ಸ್ಪಂದನ ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ಧನಸಹಾಯ
Posted On: 13 Oct 2021, 06:35 PM
ಉಡುಪಿ : ರೋಟರಿ ಕ್ಲಬ್ ಸೈಬ್ರಕಟ್ಟೆಯಿಂದ ಅಣ್ಣಯ್ಯ ದಾಸ್ ಅವರು ಕೊಡುಗೆ ನೀಡಿದ ಸುಮಾರು 5000 ರೂ. ಮೌಲ್ಯದ ಆಹಾರ ಸಾಮಗ್ರಿ ಗಳನ್ನು ಸ್ಪಂದನ ವಿಶೇಷ ಚೇತನ ಅನಾಥ ಮಕ್ಕಳ ಆಶ್ರಮಕ್ಕೆ ನೀಡಲಾಯಿತು. ಈ ಸಂದರ್ಭ ವಲಯ ಸೇನಾನಿ ವಿಜಯ ಕುಮಾರ್ ಶೆಟ್ಟಿ , ರೋಟರಿ ಅಧ್ಯಕ್ಷ ಉ ಯು ಪ್ರಸಾದ್ ಭಟ್, ನೀಲಕಂಠ ರಾವ್, ಸ್ಪಂದನ ಟ್ರಸ್ಟ್ ಸದಸ್ಯ ವಿವೇಕ್ ಕಾಮತ್, ಎಸ್ ಲೀಲಾವತಿ, ಅಣ್ಣಯ್ಯ ದಾಸ್ ಉಪಸ್ಥಿತರಿದ್ದರು.
