Updated News From Kaup

ಕಾಪು : ತುಳುನಾಡು ಹಿಂದೂ ಸೇನೆಯ ವತಿಯಿಂದ 110 ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆ

Posted On: 30-05-2021 02:48PM

ಕಾಪು : ತುಳುನಾಡ ಹಿಂದೂ ಸೇನೆ ಕಾಪು ಇವರ ವತಿಯಿಂದ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ 110ಕ್ಕೂ ಹೆಚ್ಚಿನ ಬಡ ಕುಟುಂಬಗಳಿಗೆ ಪಡಿತರ ಕಿಟ್ ಗಳನ್ನು ರವಿವಾರ ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್ ಅವರು ಮಾತನಾಡಿ, ಪುರಸಭಾ ವ್ಯಾಪ್ತಿಯ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಪಡಿತರ ಕಿಟ್ ಗಳನ್ನು ನೀಡುವ ತುಳುನಾಡು ಹಿಂದೂ ಸೇನೆಯ ಯುವಕರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ತಮ್ಮ ದುಡಿಮೆಯ ಒಂದಂಶದಲ್ಲಿ ಸಮಾಜದ ಇತರ ವರ್ಗದವರನ್ನು ಸದೃಢಗೊಳಿಸಲು ಪ್ರಯತ್ನಿಸುವ ಮೂಲಕ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ ಎಂದರು. ಕಾಪು ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿ. ಅವರು ಮಾತನಾಡಿ, ತುಳುನಾಡು ಹಿಂದೂ ಸೇನೆಯ ಸಾಮಾಜಿಕ ಸೇವಾ ಕಾರ್ಯಗಳು ಪ್ರಶಂಸನೀಯವಾಗಿದೆ. ಕಳೆದ ವರ್ಷ ನೆರೆಯ ಸಂದರ್ಭದಲ್ಲಿ ಈ ಸಂಸ್ಥೆಯ ಪದಾಧಿಕಾರಿಗಳು ಉತ್ತಮ ಸೇವೆ ನೀಡಿರುವುದು ಸ್ಮರಣೀಯವಾಗಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಜನರ ಬೇಡಿಕೆ ಮತ್ತು ಅವಶ್ಯಕತೆಗಳಿಗೆ ಸ್ಪಂದಿಸಿ ಅವರಿಗೆ ಪಡಿತರ ಕಿಟ್ ವಿತರಿಸುವುದು ಇತರರಿಗೂ ಪ್ರೇರಣೆಯನ್ನು ನೀಡಿದೆ‌. ಕೊರೋನಾವನ್ನು ದೂರಗೊಳಿಸುವಲ್ಲಿ ಸರ್ವರ ಸಹಕಾರದ ಅಗತ್ಯವಿದ್ದು ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ನಿಗದಿ ಪಡಿಸಿರುವ ನಿಯಮಾವಳಿಗಳಿಗೆ ಜನರಿಂದಲೂ ಉತ್ತಮ ಬೆಂಬಲ ದೊರಕುವುದು ಅತ್ಯಗತ್ಯವಾಗಿದೆ ಎಂದರು.

ತುಳುನಾಡು ಹಿಂದೂ ಸೇನೆಯ ಸದಸ್ಯ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು ಮಾತನಾಡಿ, ತುಳುನಾಡು ಸೇನೆಯ ಯೋಜನೆಗಳು ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಈ ಯೋಜನೆಗಳನ್ನು ಸಾಕಾರ ಗೊಳಿಸುವಲ್ಲಿ ಸಹಕರಿಸಿದ ಎಲ್ಲರಿಗೂ ಸಂಸ್ಥೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ತುಳುನಾಡು ಹಿಂದೂ ಸೇನೆಯ ಉಪಾಧ್ಯಕ್ಷ ರವಿ ಬಿಂದಾಸ್, ಪ್ರಧಾನ ಕಾರ್ಯದರ್ಶಿ ಯಾದವ ಪೂಜಾರಿ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಪತ್ರಕರ್ತ ಪುರುಷೋತ್ತಮ್ ಸಾಲ್ಯಾನ್ ಮುಳೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ದೈವ ನರ್ತನ, ದೈವ ಚಾಕರಿ ಮಾಡುವ ಕುಟುಂಬಗಳಿಗೆ‌ ಆಹಾರ ಕಿಟ್ ವಿತರಿಸಿದ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ (ರಿ.)

Posted On: 30-05-2021 02:38PM

ಉಡುಪಿ: ಕೊರೋನಾ ಮಹಾಮಾರಿ ಶ್ರೀಮಂತ - ಬಡವರೆನ್ನದೆ ಎಲ್ಲರಿಗೂ ಕಾಡಿದೆ. ದುಡಿದು ತಿನ್ನುವ ಕೈಗಳಿಗೆ, ಬಡ ಜನರಿಗೆ ಕೊರೋನಾ ಭಾರೀ ಕಷ್ಟ ನೀಡಿದೆ. ಇದು ತುಳುನಾಡಿನ ಪ್ರಮುಖ ಸಂಪ್ರದಾಯವಾದ ಭೂತರಾಧನೆಯವರನ್ನೂ ಬಿಟ್ಟಿಲ್ಲ.ತುಳುನಾಡಿನಲ್ಲಿ ಸದ್ಯ ಕೊರೊನಾ ಹಿನ್ನಲೆಯಲ್ಲಿ ಎಲ್ಲಿಯೂ ದೈವಾರಾಧನೆ ನಡೆಯುತ್ತಿಲ್ಲ.

ಈ ಹಿನ್ನಲೆಯಲ್ಲಿ ದೈವ ನರ್ತನ ಕಾರ್ಯವನ್ನು ಮಾಡುವ ಹಾಗೂ ದೈವದ ಚಾಕರಿಯನ್ನು ಮಾಡುವ ಹಿರಿಯಡ್ಕ ಪರಿಸರದ ಸುಮಾರು 20 ಕುಟುಂಬಗಳಿಗೆ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ತಲಾ 10 KG ಅಕ್ಕಿ ಹಾಗೂ ಒಂದು ಸಾವಿರ ರೂಪಾಯಿ ಮೌಲ್ಯದ ಅಗತ್ಯ ದಿನಸಿ ಸಾಮಗ್ರಿಗಳನ್ನು ನೀಡಲಾಯಿತು.

ಕೊರೋನಾ ಮಹಾಮಾರಿಯಿಂದ ನೇಮೋತ್ಸವ ನಡೆಯುವ ಈ ಸಮಯದಲ್ಲಿ ನೇಮೋತ್ಸವವಿಲ್ಲದೆ ಅದನ್ನೇ ನಂಬುತ್ತಿರುವ ಕುಟುಂಬಗಳು ಬಹಳ ಕಷ್ಟದಲ್ಲಿದೆ. ಹಾಗಾಗಿ ಅವರ ಕಷ್ಟದ ಸಮಯದಲ್ಲಿ ಅವರು ನೇಮ ಕಟ್ಟುವ ಮನೆಯವರು ಅವರೊಂದಿಗಿದ್ದು ಅವರ ಕಷ್ಟದಲ್ಲಿ ಭಾಗಿಗಳಾಗಬೇಕೆಂದು ಆಶಿಸಿ ಟ್ರಸ್ಟ್ ನ ಅಧ್ಯಕ್ಷರಾದ ಅನಂತ ಇನ್ನಂಜೆ ಇವರು ಆಹಾರ ಕಿಟ್ ಗಳನ್ನು ವಿತರಿಸಿದರು‌.

ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿಗಳಾದ ಅನಿಲ್ ಆಚಾರ್ಯ ಓಂತಿಬೆಟ್ಟು, ಪುನೀತ್ ಕುಲಾಲ್ ಮಜೂರು, ವಿಕಾಸ್ ದೇವಾಡಿಗ ಮಜೂರು, ಶಿವು ಮಜೂರು ಮತ್ತಿತರರು ಉಪಸ್ಥಿತರಿದ್ದರು.

ನಂದಳಿಕೆ ಗ್ರಾಮ ಪಂಚಾಯತ್ ಮನವಿಗೆ ಸ್ಪಂದಿಸಿದ ರೋಟರಿ ಕ್ಲಬ್ ಬೆಳ್ಮಣ್ : ಆಹಾರ ಕಿಟ್ ಕೊಡುಗೆ

Posted On: 30-05-2021 02:31PM

ಕಾಪು : ನಂದಳಿಕೆ ಗ್ರಾಮ ಪಂಚಾಯತ್ ಮನವಿಯ ಮೇರೆಗೆ ರೋಟರಿ ಕ್ಲಬ್ ಬೆಳ್ಮಣ್ ವತಿಯಿಂದ ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ವಿತರಿಸಲು ಆಹಾರ ಕಿಟ್ ಒದಗಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರು ರೊ| ಸುಭಾಷ್‌ಕುಮಾರ್, ಸ್ಥಾಪಕಾಧ್ಯಕ್ಷರು ರೊ|ಸೂರ್ಯಕಾಂತ್ ಶೆಟ್ಟಿ, ಕಾರ್ಯದರ್ಶಿ ರೊ|ರವಿರಾಜ್ ಶೆಟ್ಟಿ, ಸ್ಥಾಪಕ ಸದಸ್ಯರು ರೊ| ಎನ್.ಕೆ. ಶ್ರೀಧರ್, ಸದಸ್ಯರಾದ ರೊ|ರಾಜೇಶ್ ಸಾಲ್ಯಾನ್, ಶ್ರೀ ಪ್ರಕಾಶ್ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಜಾತ, ಕಾರ್ಯದರ್ಶಿ ಶ್ರೀ ಸಂಜೀವ ಮತ್ತು ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

ಕಾಪು ಪಟ್ಟಣಕ್ಕೆ ಬೊಬ್ಬರ್ಯನ ಆಗಮನ

Posted On: 29-05-2021 07:59PM

ಪೊಡ್ಡಿಕಲ್ಲ ಗರಡಿ ಕೋಟೆ ಕೊಪ್ಪಳ ಬ್ರಹ್ಮಬೈದರ್ಕಳ ಗರಡಿಯು ಕಾಪುವಿನ ಸಮುದ್ರ ಬದಿಯಲ್ಲಿ ಇದೆ. ಹಿಂದೊಮ್ಮೆ ರೋಡಿನ ಬದಿಯಲ್ಲಿ ಸಮುದ್ರಕಿನಾರೆಯಲ್ಲಿ ಒಂದು ಮರದ ಕುದುರೆಯು ಮೇಲೆ ಬಿದ್ದಿತ್ತು. ಆ ಸಮಯದಲ್ಲಿ ಅಲ್ಲಿ ಹತ್ತು ಸಮಸ್ತರು ಸೇರಿ ಮರದ ಕುದುರೆಯನ್ನು ಮೇಲೆತ್ತಲು ಎಷ್ಟು ಪ್ರಯತ್ನಪಟ್ಟರೂ ಮರದ ಕುದುರೆ ಅಲುಗಾಡಲಿಲ್ಲ.

ಅಲ್ಲಿ ಸೇರಿದವರು ಮಾರನೇ ದಿನ ನೋಡುವ ಎಂದು ಮನೆಗೆ ಹೋದರು. ಮಾರನೇ ದಿನ ಊರಿನವರು ಬಂದು ನೋಡುವಾಗ ಮರದ ಕುದುರೆ ಪೋಡಿಕಲ್ಲ ಗರಡಿಯ ಎದುರಿನಲ್ಲಿ ಬಂದು ಸ್ಥಿರವಾಗಿ ನಿಂತಿತ್ತು. ಆ ದಿನದಿಂದ ಇಂದಿನವರೆಗೂ ಮರದ ಕುದುರೆ ಬೆಳೆಯುತ್ತಿದೆ. ಅದಕ್ಕೆ ಕಟ್ಟಿದ ಮಾಡು ಎರಡು ಬಾರಿ ವಿಸ್ತರಿಸಲಾಯಿತು. ಈಗ ಬೆಳೆದು ಮಾಡಿಗೆ ತಾಗಿರುವುದರಿಂದ ಇನ್ನು ಕೂಡ ಮೇಲಿನ ಮಾಡನ್ನು ವಿಸ್ತರಿಸುವ ಅಗತ್ಯವಿದೆ. ಈ ಮರದ ಕುದುರೆ ಇನ್ನು ಬೆಳೆಯದಂತೆ ಇಲ್ಲಿಯ ಭಕ್ತಾದಿಗಳು ಒಟ್ಟಾಗಿ ಪ್ರಾರ್ಥನೆಯನ್ನು ಮಾಡಿದ್ದಾರೆ . ಒಟ್ಟಾರೆ ಹೇಳುವುದೇನೆಂದರೆ ಇದೊಂದು ಕ್ಷೇತ್ರದ ಕಲೆ ಕಾರ್ಣಿಕ ಎಂದೆ ಹೇಳಬಹುದು. ಇಲ್ಲಿಯ ಉತ್ಸವಾದಿಗಳು ಕೋಡಿ ತಿಂಗಳ ಹುಣ್ಣಿಮೆಯಂದು ನಡೆಯುತ್ತದೆ. ಕೋಟೆ ಕೊಪ್ಪಳ ಆದಿಸ್ಥಳ, ಬೊಬ್ಬರ್ಯನ ಮೂಲ ಸ್ಥಳ. ಶೆಟ್ರು, ಬಿಲ್ಲವರು, ಮೊಗವೀರರು ಒಟ್ಟು ಮೂರು ಜಾತಿಯವರು ನಂಬಿರುವ ಬೊಬ್ಬರ್ಯ. ಬೊಬ್ಬರ್ಯನನ್ನು ನಂಬಿರುವ ಸುಮಾರು ಜಾತಿಯವರಿಗೆ ಅವರವರಲ್ಲಿ ಮನಸ್ತಾಪ ಬಂದು ಮೊಗವೀರರು ಅಲ್ಲಿಂದ ಇಳಿದುಕೊಂಡು ಬಂದರು. ಆಮೇಲೆ ಪಾಟ್ನಾ ದವರು ಸಭೆ ಸೇರಿ ಬೊಬ್ಬರ್ಯನನ್ನು ತಂದು ಬೇರೆ ಪ್ರತಿಷ್ಠೆ ಮಾಡುವ ಬಗ್ಗೆ ಅಲ್ಲಿ ಸಭೆ ಸೇರಿ ಚರ್ಚಿಸಿ ಸ್ಥಳದ ಬಗ್ಗೆ ಚಿಂತನೆ ನಡೆಯುತ್ತಿರುವಾಗ ಆ ಸಭೆಯಲ್ಲಿದ್ದ ಮುಲ್ಕಿಯ ತಬುರ ಮರಕಾಲ ( ಬೊಬ್ಬರ್ಯ ಪೂಜಾರಿ) ನಿಗೆ ಬೊಬ್ಬರ್ಯನು ಮೈಮೇಲೆ ಬಂದು ಅಲ್ಲಿ ಸಭೆ ಸೇರಿದವರಿಗೆ ಸ್ಥಳದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ನಾನು ಈ ರಾತ್ರಿಯ ಮುಂಬೈಯಲ್ಲಿರುವ ಚೋಳ ಗುರಿಕಾರರಿಗೆ ಸ್ವಪ್ನದ ಮೂಲಕ ಕಾಣಿಸಿಕೊಂಡು ಚೋಳ ಗುರಿಕಾರರ ಕುಟುಂಬಿಕರ ಸ್ಥಳದಲ್ಲಿ ಬೊಬ್ಬರ್ಯ ದೈವಸ್ಥಾನ ಕಟ್ಟಲು ಬೇಕಾಗುವ ಸ್ಥಳವನ್ನು ಕೊಡಿಸುವಂತೆ ತಿಳಿಸುವೆನು. ಎಂದು ಮೈಯಾರೆ ಬಂದ ಬೊಬ್ಬರ್ಯನು ತಿಳಿಸಿದನು.

ಅದೇ ಪ್ರಕಾರ ಆ ದಿನ ರಾತ್ರಿಯೇ ಚೋಳ ಗುರಿಕಾರರಿಗೆ ಕನಸಿನಲ್ಲಿ ಕಾಣಿಸಿ ನಾನು ಬೊಬ್ಬರ್ಯ ನಿಮ್ಮ ಕುಟುಂಬಿಕರ ಪಟ್ಟ ಸ್ಥಳದಲ್ಲಿ ನನಗೆ ಗುಡಿ ಮಾಡಿ ಕಟ್ಟಲು ಬೇಕಾಗುವ ಸ್ಥಳವನ್ನು ಒದಗಿಸಿ ಕೊಡಬೇಕಾಗಿ ತಿಳಿಸಿದನು. ಮಾರನೇ ದಿನ ತನ್ನ ಅಳಿಯ ಮುತ್ತಯ್ಯ ಪುತ್ರನನ್ನು ಕರೆದು ಕಾಪು ಮೊಗವೀರ ಗ್ರಾಮ ಸಭೆಗೆ ತಮ್ಮ ಕುಟುಂಬದ ಪಟ್ಟ ಸ್ಥಳವನ್ನು ಕೊಡುವುದಾಗಿ ಪತ್ರ ಬರೆದು ಮುತ್ತಯ್ಯ ಪುತ್ರನ ಕೈಯಲ್ಲಿ ಕೊಟ್ಟು ಕಳಿಸಿದರು. ಹಾಗೂ ಊರಿಗೆ ಬಂದು ಈಗ ಇರುವ ಬೊಬ್ಬರ್ಯ ಸಾನದ ಜಾಗವನ್ನು ಅಂದರೆ ಚೋಳ ಗುರಿಕಾರರ ಕುಟುಂಬಿಕರ ಪಟ್ಟ ಸ್ಥಳದಲ್ಲಿ 12 ಸೆಂಟ್ಸ್ ಸ್ಥಳವನ್ನು 1933 ರಲ್ಲಿ ಕಾಪು ಮೊಗವೀರ ಗ್ರಾಮ ಸಭೆ ಯವರಿಗೆ ರಿಜಿಸ್ಟರ್ ಮಾಡಿಸಿ ವರ್ಗಾಯಿಸಿದರು ಎಂದು ತಿಳಿದುಬರುತ್ತದೆ. ಧರ್ಮಾರ್ಥವಾಗಿ ಸ್ಥಳವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ತಿಳಿದುಬರುತ್ತದೆ. ಜಾಗದ ಮರ್ಯಾದೆಗಾಗಿ ನೇಮೋತ್ಸವದ ದಿನ ಬದಿಕರ ತೆಂಗಿನಕಾಯನ್ನು ಚೋಳ ಗುರಿಕಾರರ ಕುಟುಂಬದವರಿಗೆ ಕೊಡಬೇಕು ಎಂದು ಜಾಗದ ಕರಾರಿನಲ್ಲಿ ತಿಳಿದುಬರುತ್ತದೆ. ಬೊಬ್ಬರ್ಯನನ್ನು ಅಂದಿನಿಂದ ಇಂದಿನವರೆಗೆ ಕಾಪು ಗ್ರಾಮ ಸಭೆಯವರು, ರಾಂಪನಿಯವರು ಮತ್ತು ಸಮುದ್ರದಲ್ಲಿ ದುಡಿಯುವವರು, ಕಸುಬಿನವರು ತಮ್ಮ ಸಂಪಾದನೆಯ ಒಂದಂಶವನ್ನು ಕೊಟ್ಟು ಇಲ್ಲಿಯ ನೇಮೋತ್ಸವ ಮತ್ತು ಇಲ್ಲಿ ನಡೆಯುವ ಪೂಜಾದಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಚೋಳ ಗುರಿಕಾರ ಮತ್ತು ಕುಟುಂಬಿಕರು ಪೂಜೆಗೆ ಮುಕ್ಕಾಲ್ದಿ ಆಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ನಡೆಯುವ ಪೂಜಾದಿಗಳು ಪ್ರತಿ ಸಂಕ್ರಮಣ ಗುರಿಕಾರರು ನಾಲ್ಕು ಜನ ಮತ್ತು ಮುಕ್ಕಾಲ್ದಿ ಬೊಬ್ಬರ್ಯ ಸಾನ ಬಾಗಿಲು ತೆರೆದು ಸ್ಥಾನದ ಒಳಗೆ ಸ್ವಚ್ಛ ಮಾಡಿ ದೀಪ ಆರತಿ ತೋರಿಸುವುದು. ಚೌತಿ ದಿನ ಪೂಜೆ ಮಾಡುವುದು ಸಮುದ್ರದಲ್ಲಿ ದುಡಿಯುವವರಿಂದ ತುಡರ್ ಬಲಿ, ವರ್ಷಕ್ಕೆ ಒಂದು ತಂಬಿಲ ಮತ್ತು ನೇಮೋತ್ಸವ ದಿನ ಚೋಳ ಗುರಿಕಾರರ ಮೂಲ ಮನೆಯಿಂದ ಸಾಯಂಕಾಲ ಹೊತ್ತಿಗೆ ಬಾಲು ಬಂಡಾರ ವಿಜ್ರಂಭಣೆಯಿಂದ ಬರುವುದು. ಅನಂತರ ನೇಮೋತ್ಸವ ವಿಜೃಂಭಣೆಯಿಂದ ನಡೆಯುವುದು. ವಿದ್ಯಾರ್ಥಿ ಹರಕೆ ಪಂಚಗಜ್ಜಾಯ ಪೂಜೆಯು ಇಲ್ಲಿ ಜರಗುವುದು. ಹಾಗೂ ಅಂದಿನಿಂದ ಇಂದಿನವರೆಗೆ ನಾಲ್ಕು ಜನ ಗುರಿಕಾರರು ಮತ್ತು ಮುಕ್ಕಾಲ್ದಿ ಸರ್ವ ಸದಸ್ಯರು ಸೇರಿ ಅತಿ ಉತ್ತಮ ರೀತಿ ಸೇವೆಯನ್ನು ಕೊಡುತ್ತಾ ಪೂಜಿಸಿಕೊಂಡು ಬರುತ್ತಿದ್ದಾರೆ... ಹಲವಾರು ಪವಾಡಗಳು ಹಲವಾರು ಜನರ ಭಕ್ತಾದಿಗಳ ಕಷ್ಟ ಸಮಸ್ಯೆಗಳನ್ನು ಇಲ್ಲಿಯ ದೈವ ಬೊಬ್ಬರ್ಯ ಭಕ್ತಾದಿಗಳ ಸಮಸ್ಯೆಯನ್ನು ಕೊನೆಗೋಳಿಸಿದ್ದಾನೆ.. ಇಲ್ಲಿ ಹರಕೆಯ ನೇಮೋತ್ಸವ ಹರಕೆಯ ಪೂಜೆ ಹಲವಾರು ದೈವಗಳ ಪರಿಕಗಳನ್ನು ಭಕ್ತಾದಿಗಳು ಸೇವೆ ರೂಪದಲ್ಲಿ ದೈವ ಸ್ಥಾನಕ್ಕೆ ಕೊಟ್ಟಿದ್ದಾರೆ.

ಮೊಗವೀರರ ಆರಾಧ್ಯ ದೈವವಾಗಿ ತುಳುನಾಡಿನಲ್ಲಿ ಪ್ರಸಿದ್ಧಗೊಂಡಿದೆ.. ಈ ಮಾಹಿತಿಯನ್ನು ಕಾಪು ಗ್ರಾಮದ ಹಿರಿಯರಿಂದ ತಿಳಿದು ಬರೆದಿದ್ದೇನೆ... ಲೇಖನ : ವಿನೋದ್ ಶೆಟ್ಟಿ

ಶಾಸಕ ರಘುಪತಿ ಭಟ್ ಮನವಿಗೆ ಸ್ಪಂದಿಸಿದ ರೋಬೋಸಾಫ್ಟ್ ಸಂಸ್ಥೆ : 20 ಲಕ್ಷ ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಫಲ್ಸ್ ಆಕ್ಸಿಮೀಟರ್ ಕೊಡುಗೆ

Posted On: 28-05-2021 09:28PM

ಉಡುಪಿ : ಶಾಸಕ ರಘುಪತಿ ಭಟ್ ಮನವಿ ಮೇರೆಗೆ ಕೊರೋನಾ ಸೋಂಕಿತರ ಚಿಕಿತ್ಸೆಗೆ ರೋಬೋಸಾಫ್ಟ್ ಸಂಸ್ಥೆ ವತಿಯಿಂದ 7 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ 1000 ಫಲ್ಸ್ ಆಕ್ಸಿ ಮೀಟರ್ ಕೊಡುಗೆ ನೀಡಲಾಗಿದೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಕ್ಸಿಜನ್ ಕೊರತೆಯಾಗದಂತೆ ಹಾಗೂ ಇನ್ನಿತರ ಸಹಕಾರಕ್ಕಾಗಿ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ದಾನಿಗಳಲ್ಲಿ ಹಾಗೂ ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ ಉಡುಪಿಯ ರೋಬೋಸಾಫ್ಟ್ ಸಂಸ್ಥೆ ರೂ. 20.00 ಲಕ್ಷ ವೆಚ್ಚದಲ್ಲಿ 10 ಲೀಟರ್ ಸಾಮರ್ಥ್ಯದ 7 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ 1000 ಫಲ್ಸ್ ಆಕ್ಸಿ ಮೀಟರ್ ಕೊಡುಗೆಯಾಗಿ ನೀಡಿರುತ್ತಾರೆ. ಸಂಸ್ಥೆಯ ಪ್ರಮುಖರು, ಶಾಸಕ ಶ್ರೀ ಕೆ. ರಘುಪತಿ ಭಟ್ ಅವರ ಸಮ್ಮುಖದಲ್ಲಿ 7 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ 1000 ಫಲ್ಸ್ ಆಕ್ಸಿ ಮೀಟರ್ ರನ್ನು ಜಿಲ್ಲಾಧಿಕಾರಿಯವರ ಮುಖಾಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ರೂ. 20.00 ಲಕ್ಷ ವೆಚ್ಚದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಫಲ್ಸ್ ಆಕ್ಸಿ ಮೀಟರ್ ಕೊಡುಗೆಯಾಗಿ ನೀಡಿದ ರೋಬೋಸಾಫ್ಟ್ ಸಂಸ್ಥೆಗೆ ಹಾಗೂ ಅವರ ಸಾಮಾಜಿಕ ಕಳಕಳಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ರೋಬೋಸಾಫ್ಟ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ರೋಹಿತ್ ಭಟ್, ಆರ್ಥಿಕ ನಿರ್ದೇಶಕರಾದ ಸುಧೀರ್ ಭಟ್, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಸುಧೀರ್ ಚಂದ್ರ ಸೂಡ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಮಧುಸೂದನ್ ನಾಯಕ್, ಕೋವಿಡ್ ನೋಡಲ್ ಅಧಿಕಾರಿಗಳಾದ ಪ್ರಶಾಂತ್ ಭಟ್ ಹಾಗೂ ಇತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಶಿರ್ವ : ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ

Posted On: 28-05-2021 03:56PM

ಕಾಪು : ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಶಿರ್ವ ಸೈಂಟ್ ಮೇರೀಸ್ ಪಿಯು ಕಾಲೇಜಿನಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಶಿರ್ವ ಲಸಿಕಾ ಕೇಂದ್ರದಲ್ಲಿ ಇಂದು 200 ಜನರಿಗೆ ಲಸಿಕೆಗೆ ಅವಕಾಶವಿದ್ದು ಉಳಿದವರಿಗೆ ಮುಂದಿನ ದಿನಗಳಲ್ಲಿ ಲಸಿಕೆ ಬಂದ ಕೂಡಲೇ ತಿಳಿಸಲಾಗುವುದು ಎಂದರು.

ಈ ಸಂದರ್ಭ ಶಿರ್ವ ಪಂಚಾಯತ್ ಅಧ್ಯಕ್ಷರಾದ ಕೆ. ಆರ್. ಪಾಟ್ಕರ್, ಕೋವಿಡ್ ಲಸಿಕಾ ಕೇಂದ್ರದ ಸಿಬ್ಬಂದಿಗಳು, ಅಧಿಕಾರಿ ವರ್ಗ ಉಪಸ್ಥಿತರಿದ್ದರು.

ಉಡುಪಿಯ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ಇದೀಗ ಮಂಗಳೂರಿನಲ್ಲಿ ಆರಂಭ

Posted On: 28-05-2021 03:32PM

ಹೆಲ್ತ್ ಕೇರ್ ಮತ್ತು ಸರ್ಜಿಕಲ್ ಪರಿಕರಗಳಿಗೆ ಹೆಸರು ವಾಸಿಯಾಗಿರುವ ಉಡುಪಿಯ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ಇದೀಗ ಮಂಗಳೂರಿನಲ್ಲಿ ಈ ನೂತನ ಶಾಖೆಯಲ್ಲಿ ರೀಟೇಲ್ ಹಾಗೂ ಹೊಲ್ ಸೇಲ್ ದರದಲ್ಲಿ ವೀಲ್ ಚೇರ್ , ವಾಕಿಂಗ್ ಸ್ಟಿಕ್ , ಆರ್ಥೋ ಚಪ್ಪಲ್ಸ್ , ಬಿ ಪಿ ಶುಗರ್ ಟೆಸ್ಟಿಂಗ್ ಮಿಷನ್ , ನೆಬ್ಯೂಲೈಸರ್ಸ್ , ಕೋವಿಡ್ ಪ್ರೊಟೆಕ್ಷನ್ ಉಪಕರಣಗಳಾದ ಸ್ಯಾನಿಟೈಸರ್ , ಫೇಸ್ ಮಾಸ್ಕ್ , ಥರ್ಮಾ ಮೀಟರ್ ಇತರ ಹೆಲ್ತ್ ಕೇರ್ & ಸರ್ಜಿಕಲ್ ಉಪಕರಣಗಳ ವಿಫುಲ ಸಂಗ್ರಹಗಳಿವೆ .

ಹೆಚ್ಚಿನ ಮಾಹಿತಿಗಾಗಿ ಈಗಲೇ ಕರೆ ಮಾಡಿ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ನೆಲ ಅಂತಸ್ತು ಸಿ ಟಿ ಪ್ಲಾಜಾ ಪಿ ವಿ ಎಸ್ ಲಲಿತಾ ಜುವೆಲ್ಲರಿಯ ಹತ್ತಿರ ದುರ್ಗಾಂಬಾ ಟ್ರಾನ್ಸ್ಪೋರ್ಟ್ ಆಫೀಸ್ ಮುಂಬಾಗ ಶೇಡಿಗುಡ್ಡ ಮಂಗಳೂರು ಫೋ ನಂ : 9901424485 , 6360118942 , 9972044485

ಗ್ರೌಂಡ್ ಫ್ಲೋರ್, ವಾದಿರಾಜ ಕಾಂಪ್ಲೆಕ್ಸ್, ಮಿತ್ರ ಹಾಸ್ಪಿಟಲ್ ಹತ್ತಿರ,ಹಳೆ ಪೋಸ್ಟ್ ಆಫೀಸ್ ರೋಡ್, ಉಡುಪಿ 9845544442 / 7204734039

ಬಿರುವೆರ್ ಕಾಪು ಸೇವಾ ಟ್ರಸ್ಟ್‌ ವತಿಯಿಂದ ಪಡಿತರ ಕಿಟ್ ವಿತರಣೆ

Posted On: 28-05-2021 12:13PM

ಕಾಪು : ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಲೈಟ್ ಹೌಸ್ ಬಳಿಯ ಕಾಪು ಪಡು ಗರಡಿ, ಬೈರುಗುತ್ತು, ಕೋಟೆ ಕೊಪ್ಪಲ ಮತ್ತು ಸುಬ್ಬಯ್ಯ ತೋಟದಲ್ಲಿರುವ 42 ಕುಟುಂಬಗಳಿಗೆ ಗುರುವಾರ ಬಿರುವೆರ್ ಕಾಪು ಸೇವಾ ಟ್ರಸ್ಟ್‌ ಇವರ ವತಿಯಿಂದ ಪಡಿತರ ಕಿಟ್ ಗಳನ್ನು ವಿತರಿಸಲಾಯಿತು.

ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಸ್ಥಾಪಕ ಬಾಲಕೃಷ್ಣ ಕೋಟ್ಯಾನ್, ಕಾಪು ಬಿಲ್ಲವರ ಸಹಾಯಕ ಸಂಘದ ಮಾಜಿ ಅಧ್ಯಕ್ಷ ಮಾಧವ ಆರ್. ಪಾಲನ್, ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು, ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಟ್ರಸ್ಟಿಗಳಾದ ಕಾರ್ತಿಕ್ ಅಮೀನ್, ಸುಧಾಕರ ಸಾಲ್ಯಾನ್, ಸದಸ್ಯರಾದ ಪ್ರಶಾಂತ್ ಪೂಜಾರಿ, ಸುಜನ್ ಎಲ್. ಸುವರ್ಣ, ನಾಗೇಶ್ ಸುವರ್ಣ, ಅನಿಲ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

ಕಾಪು : ಸಾರ್ವಜನಿಕರಿಗೆ ಲಸಿಕಾ ಕಾರ್ಯಕ್ರಮ

Posted On: 28-05-2021 11:47AM

ಕಾಪು : ಕಾಪು ಪುರಸಭೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಜಂಟಿ ಆಯೋಜನೆಯಲ್ಲಿ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಕಾಪುವಿನ ಶ್ರೀ ಹಳೇ ಮಾರಿಯಮ್ಮ ಸಭಾಗೃಹದಲ್ಲಿ ಸಾರ್ವಜನಿಕರಿಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ವನ್ನು ಉದ್ಘಾಟಿಸಿ ಕಾಪು ಪುರಸಭಾ ಅಧ್ಯಕ್ಷರಾದ ಅನಿಲ್ ಕುಮಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈಯವರು ಸಾರ್ವಜನಿಕರ ಹಿತಕ್ಕಾಗಿ ಸಭಾಗೃಹವನ್ನು ನೀಡಲು ಸಂತಸವಾಗುತ್ತಿದೆ ಎಂದು ತಿಳಿಸಿದರು.

ಇಲ್ಲಿಯವರೆಗೆ ಕಾಪುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆಯನ್ನು ನೀಡುತ್ತಿದ್ದು, ಜನಸಂದಣಿ ಜಾಸ್ತಿಯಾಗುತ್ತಿರುವ ಕಾರಣ ಲಸಿಕಾ ಕೇಂದ್ರವನ್ನು ಶ್ರೀ ಹಳೇ ಮಾರಿಯಮ್ಮ ಸಭಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

ಮೊದಲ ದಿನ 200ರಷ್ಟು ಡೋಸ್ ಗಳು ಲಭ್ಯವಿದ್ದು ಮಾಹಿತಿ ಪಡೆದ ಸಾರ್ವಜನಿಕರು ಮುಂಜಾನೆಯಿಂದಲೇ ಧಾವಿಸಿ ಸುಮಾರು 500ರಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಬಂದವರಲ್ಲಿ ಮೊದಲ 200 ಜನರ ನೋಂದಣಿ ಮಾಡಿ ಉಳಿದ ಸಾರ್ವಜನಿಕರನ್ನು ಲಸಿಕೆ ಬಂದ ಮೇಲೆ ಕರೆಸುತ್ತೇವೆ ಎಂದು ತೆರಳಲು ಸೂಚಿಸಲಾಯಿತು. ಕಾಪುವಿನ ಪುರಸಭಾ ಸದಸ್ಯರು, ಆರಕ್ಷಕ ನಿರೀಕ್ಷಕರು ಹಾಗೂ ಸಿಬ್ಬಂದಿ ವರ್ಗ ಮತ್ತು ಆರೋಗ್ಯ ಇಲಾಖೆಯವರು ಉಪಸ್ಥಿತರಿದ್ದರು.

ಕೊರಗ ಕಾಲನಿ ನಿವಾಸಿಗಳಿಗೆ ಶ್ರೀ ಕೃಷ್ಣ ಮಠದಿಂದ ಊಟದ ವ್ಯವಸ್ಥೆ

Posted On: 27-05-2021 09:10PM

ಉಡುಪಿ : ಕರೋನಾ ಲಾಕ್ ಡೌನ್ ನಿಂದ ಬಹಳಷ್ಟು ತೊಂದರೆಗೆ ಒಳಗಾದ ಮಣಿಪಾಲ ಸರಳೇಬೆಟ್ಟು ವಿಜಯನಗರ ಕೊರಗರ ಕಾಲನಿಯ 60 ಕುಟುಂಬಗಳಿಗೆ ಶ್ರೀ ಕೃಷ್ಣ ಮಠ ಪಯಾ೯ಯ ಶ್ರೀ ಗಳು ಕೊಡಮಾಡಿದ ಊಟದ ವ್ಯವಸ್ಥೆಯನ್ನು ಹೋo ಡಾಕ್ಟರ್ ಫ್oಡೇಶನ್ ವತಿಯಿಂದ ನೀಡಲಾಯಿತು.

15 ಕುಟುಂಬದ ಸುಮಾರು 80 ಜನರಿಗೆ ಊಟ ಒದಗಿಸಲಾಗಿದ್ದು , ಲಾಕ್ ಡೌನ್ ಮುಗಿಯುವರೆಗೆ ಇದು ಮುಂದುವರೆಯಲಿದೆ.

ಮೇ.27 ರಂದು ನಡೆದ ಈ ಕಾಯ೯ಕ್ರಮದಲ್ಲಿ ಶ್ರೀ ಕೃಷ್ಣ ಮಠದ ವ್ಯವಸ್ಥಾಪಕ ಗೋವಿಂದ ರಾಜ್, ಪ್ರದೀಪ್, ವೈ.ಎನ್ ರಾಮಚಂದ್ರ ರಾವ್,ಹೋo ಡಾಕ್ಟರ್ ಫೌಂಡೇಷನ್ ಸದಸ್ಯರಾದ ಡಾII ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ನಗರಸಭಾ ಸದಸ್ಯೆ ವಿಜಯಲಕ್ಷ್ಮಿ, ಸ್ಪಂದನ ವಿಶೇಷ ಶಾಲೆಯ ಪ್ರಾಂಶುಪಾಲ ಜನಾಧ೯ನ್, ಸವಿತಾ ಶೆಟ್ಟಿ, ಗಣೇಶ್, ರಾಘವೇಂದ್ರ ಪ್ರಭು,ಕವಾ೯ಲು ಮುಂತಾದವರಿದ್ದರು.