Updated News From Kaup

ಕೈಪುಂಜಾಲ್ : ಪುರಸಭಾಧ್ಯಕ್ಷರಿಂದ ಸೇತುವೆ ಕಾಮಗಾರಿ ಪರಿಶೀಲನೆ

Posted On: 18-05-2021 05:56PM

ಕಾಪು : ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ನಂಬರ್ ಒಂದರ ಕೈಪುಂಜಾಲ್ ಭಟ್ರ ತೋಟದಲ್ಲಿ 1 ಕೋಟಿ 60 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯನ್ನು ಪುರಸಭಾ ಅಧ್ಯಕ್ಷರಾದ ಅನಿಲ್ ಕುಮಾರ್ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ವಾರ್ಡ್ ಸದಸ್ಯರಾದ ಶ್ರೀಮತಿ ರಮಾ ವೈ. ಶೆಟ್ಟಿ, ಪುರಸಭಾ ಮುಖ್ಯ ಅಧಿಕಾರಿ ವೆಂಕಟೇಶ್ ನಾವಡ ಮತ್ತು ರೋಹಿತ್ ಉಪಸ್ಥಿತರಿದ್ದರು.

ಅರ್ಚಕ ವೃತ್ತಿಯ ಆದಾಯದಿಂದ ದಿನಸಿ ಸಾಮಗ್ರಿ, ಊಟ ವಿತರಿಸುವ ಕೆ.ಪಿ ಶ್ರೀನಿವಾಸ ತಂತ್ರಿ ಮಡುಂಬು

Posted On: 17-05-2021 05:29PM

ಕಾಪು : ಕೊರೊನಾ ಲಾಕ್ಡೌನ್ ಪ್ರಾರಂಭವಾದ ದಿನದಿಂದಲೂ ಯಾರು ಹಸಿವೆಯಿಂದ ಇರಬಾರದೆಂದು ಸದ್ದಿಲ್ಲದೆ ತನ್ನಿಂದಾದಷ್ಟು ಮತ್ತು ದಾನಿಗಳ ನೆರವಿನಿಂದ ಅಗತ್ಯವುಳ್ಳವರಿಗೆ ದಿನಸಿ ಸಾಮಾಗ್ರಿ, ಊಟದ ವ್ಯವಸ್ಥೆಯನ್ನು ಮಾಡುತ್ತಿರುವ ವ್ಯಕ್ತಿಯೇ ಕಾಪು ತಾಲೂಕಿನ ಕೆ.ಪಿ ಶ್ರೀನಿವಾಸ ತಂತ್ರಿ ಮಡುಂಬು.

ಈಗಾಗಲೇ ಹಲವಾರು ಮಂದಿಗೆ ಎಂಟು ಬಗೆಯ ವಸ್ತುಗಳನ್ನೊಳಗೊಂಡ ದಿನಸಿ ಸಾಮಾಗ್ರಿಗಳನ್ನು ನೀಡಿದ್ದಾರೆ. ಇಂದು 200 ಜನರಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಿದ್ದಾರೆ. ತಾನು ಅರ್ಚಕ ವೃತ್ತಿ ಮಾಡಿಕೊಂಡಿದ್ದು ಅದರಿಂದ ಬಂದ ಆದಾಯ ಮತ್ತು ನನ್ನಿಂದ ಪೂಜಾ ಸೇವೆ ಮಾಡಿಸಿಕೊಂಡ ಸೇವಾರ್ಥಿಗಳಿಂದ ದಾನವಾಗಿ ನೀಡಿದ ಅಕ್ಕಿ ಇತ್ಯಾದಿ ವಸ್ತುಗಳನ್ನು ಅಗತ್ಯವುಳ್ಳವರಿಗೆ ನೀಡುತ್ತಿದ್ದಾರೆ.

ಕಳೆದ ಬಾರಿಯ ಲಾಕ್ಡೌನ್ ಸಂದರ್ಭ ಸುಮಾರು 29750 ಜನರಿಗೆ ಅನ್ನದಾನ ಮಾಡಿದ್ದರು.

ಕಾಪು : ಪುರಸಭಾ ವ್ಯಾಪ್ತಿಯ ವಿವಿಧ ವಾರ್ಡುಗಳ ಕೋರೊನ ಟಾಸ್ಕ್ ಫೋರ್ಸ್ ಸಭೆ

Posted On: 17-05-2021 04:53PM

ಕಾಪು : ಕೊರೊನಾ ವಿಚಾರವಾಗಿ ಕಾಪು ಪುರಸಭಾ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಅನಿಲ್ ಕುಮಾರವರ ಅಧ್ಯಕ್ಷತೆಯಲ್ಲಿ ಕೋರೊನ ಟಾಸ್ಕ್ ಫೋರ್ಸ್ ಸಭೆಯು ನಡೆಯಿತು.

ಸಭೆಯಲ್ಲಿ ಕೊರೊನಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್, ವಿವಿಧ ವಾರ್ಡುಗಳ ಸದಸ್ಯರು, ಆರೋಗ್ಯ ಸಿಬ್ಬಂದಿ, ಆಶಾಕಾರ್ಯಕರ್ತರು, ಪೋಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಉದ್ಯಾವರದ ಆಡ್ಲೈನ್ ​​ಕ್ಯಾಸ್ಟೆಲಿನೊ ಮಿಸ್ ಯೂನಿವರ್ಸ್ನಲ್ಲಿ 3 ನೇ ರನ್ನರ್ ಅಪ್

Posted On: 17-05-2021 02:48PM

ಕಾಪು : ಕಾಪು ತಾಲೂಕಿನ ಉದ್ಯಾವರದ 22 ವರ್ಷದ ಆಡ್ಲೈನ್ ​​ಕ್ಯಾಸ್ಟೆಲಿನೊ 2020 ರ ಮಿಸ್ ದಿವಾ ಗೆದ್ದಿದ್ದಾರೆ. ಮಿಸ್ ಯೂನಿವರ್ಸ್ನಲ್ಲಿ 3 ನೇ ರನ್ನರ್ ಅಪ್ ಆಗಿದ್ದಾರೆ.

ಈ ವರ್ಷ ಮಿಸ್ ಯೂನಿವರ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆಡ್ಲೈನ್ ​​ಅವರ ಯಶಸ್ವಿ ಪ್ರಯಾಣವನ್ನು ಮಿಸ್ ದಿವಾ ಅವರ ಅಧಿಕೃತ ಟ್ವಿಟರ್ ಖಾತೆ ಅಭಿನಂದಿಸಿದೆ.

ಕಾಪು : ಬಂಡೆಗೆ ಢಿಕ್ಕಿ ಹೊಡೆದು ಅಪಾಯದ ಸ್ಥಿತಿಯಲ್ಲಿದ್ದ ಟಗ್ ನ 9 ಜನರ ರಕ್ಷಣೆ

Posted On: 17-05-2021 11:39AM

ಕಾಪು : ಎನ್ಎಂಪಿಟಿ ಹೊರವಲಯದಲ್ಲಿ ನಿಲ್ಲಿಸಿದ್ದ ಕೋರಮಂಡಲ ವೆಸೆಲ್ ಟಗ್ ಆ್ಯಂಕರ್ ತುಂಡಾಗಿ ಗಾಳಿ ಮತ್ತು ಮಳೆಯ ರಭಸಕ್ಕೆ ಶನಿವಾರ ಕಾಪು ಲೈಟ್ ಹೌಸ್ ನಿಂದ ಸುಮಾರು 15 ಕಿಲೋ ಮೀಟರ್ ದೂರದ ಪಾರ್ ಎಂಬಲ್ಲಿ ಬಂಡೆಗೆ ಢಿಕ್ಕಿಯಾಗಿತ್ತು.

ಸಾಮಾಜಿಕ ಜಾಲತಾಣದ ಮೂಲಕ ಹಲವು ಬಾರಿ ತಮ್ಮ ಪ್ರಾಣ ರಕ್ಷಣೆಗೆ ಮೊರೆ ಇಟ್ಟ ಟಗ್ ನ 9 ಮಂದಿ ಸಿಬಂದಿಯನ್ನು ಹವಾಮಾನ ವೈಪರೀತ್ಯದಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇವರನ್ನು ಪಾರು ಮಾಡಲು ಕೋಸ್ಟ್ ಗಾಡ್೯ನ ವರಾಹ ನೌಕೆಯ ಮೂಲಕ ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ. ಹವಾಮಾನ ವೈಪರೀತ್ಯದಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿತ್ತು.

ಇಂದು ಬೆಳಿಗ್ಗೆ ಕೊಚ್ಚಿಯಿಂದ ಆಗಮಿಸಿದ ನೌಕಾ ಪಡೆಯ ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಿ ಕೋಸ್ಟ್ ಗಾಡ್೯ನ ವರಾಹ ನೌಕೆಯ ಮೂಲಕ ಎನ್ಎಂಪಿಟಿ ಬಂದರಿಗೆ ಕರೆತರಲಾಯಿತು.

ಲೈಫ್ ಜಾಕೆಟ್ ಇದ್ದರೂ ಸುಮಾರು 44 ಗಂಟೆಗಳ ಕಾಲ ಅಪಾಯದ ಸ್ಥಿತಿಯಲ್ಲಿ 9 ಜನ ಸಿಬಂದಿ ಸಮುದ್ರದ ಮಧ್ಯೆ ಕಾಲ ಕಳೆದಿದ್ದಾರೆ.

ಕಾಪು : ಕಡಲ್ಕೊರೆತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಯೋಗೀಶ್ ವಿ ಶೆಟ್ಟಿ ಬಾಲಾಜಿ ಭೇಟಿ

Posted On: 16-05-2021 10:18PM

ಕಾಪು : ತೌಕ್ತೆ ಚಂಡಮಾರುತದ ತೀವ್ರತೆಯ ಪರಿಣಾಮವಾಗಿ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರವ್ಯಾಪ್ತಿಯ, ಉದ್ಯಾವರ, ಪಡುಕೆರೆ, ಮಟ್ಟು, ಕೈಪುಂಜಾಲ್ ಮತ್ತು ಕಾಪು ಬೀಚ್ ಸುತ್ತಮುತ್ತಲಿನ ಕಡಲ್ಕೊರೆತ ಉಂಟಾದ ಮತ್ತು ಹಾನಿಗಿಡಾದ ಪ್ರದೇಶಗಳಿಗೆ ಉದ್ಯಮಿ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು.

ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.

ಲಾಕ್ಡೌನ್ ಸಮಯ ನಮ್ಮನೆ ಕೈತೋಟ ವಾಟ್ಸಾಪ್ ಗ್ರೂಪ್ ಮೂಲಕ ತರಕಾರಿ, ಹೂ, ಹಣ್ಣು, ಆಯುರ್ವೇದೀಯ ಗಿಡಗಳ ಮಾಹಿತಿ ವಿನಿಮಯ

Posted On: 16-05-2021 12:39PM

ಕಾಪು : ಮೊದಲ ಲಾಕ್ಡೌನ್ ಅವಧಿಯಲ್ಲಿ ಸುಮಾರು 700 ಕ್ಕೂ ಅಧಿಕ ಮಕ್ಕಳಿಗೆ ವಾಟ್ಸಾಪ್ ಮೂಲಕ ಕರಕುಶಲ ಕಲೆ, ಮ್ಯಾಜಿಕ್, ಹಾಡು, ನೃತ್ಯ, ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿದ ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ ಕಟಪಾಡಿ ತಂಡವು ಇದೀಗ ಹೊಸ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಲಾಕ್ಡೌನ್ ಎರಡನೇ ಅವಧಿಯಲ್ಲಿ ನಮ್ಮನೆ ಕೈತೋಟ ಎಂಬ ವಾಟ್ಸಾಪ್ ಗ್ರೂಪ್‌ನ ಮೂಲಕ ಮನೆಯಲ್ಲಿಯೇ ತರಕಾರಿ, ಹೂ, ಹಣ್ಣು, ಆಯುರ್ವೇದೀಯ ಗಿಡಗಳ ಬಗೆಗೆ ಮಾಹಿತಿ ವಿನಿಮಯದ ಗುಂಪೊಂದನ್ನು ರಚಿಸಿ ಆ ಮೂಲಕ ಒಂದಷ್ಟು ಪರಿಸರದ ಬಗೆಗೆ ಜನರಲ್ಲಿ ಚಿಂತನೆಯನ್ನು ಮೂಡಿಸುತ್ತಿದೆ. ಈ ಗುಂಪಿನಲ್ಲಿ ರಾಜ್ಯದ ಸುಮಾರು 250 ಕೃಷಿ ಆಸಕ್ತರು ಭಾಗವಹಿಸಿದ್ದಾರೆ. ಇಲ್ಲಿ ಪ್ರತಿದಿನ ಒಂದೊಂದು ಗಿಡಗಳ, ಬೀಜಗಳ ಬಗೆಗೆ ಮಾಹಿತಿ ಜೊತೆಗೆ ಬೇಕಾದವರಿಗೆ ವಿನಿಮಯ ಮಾಡಲಾಗುತ್ತದೆ.

ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ ಕಟಪಾಡಿಯ ಮುಖ್ಯಸ್ಥರಾದ ನಾಗೇಶ್ ಕಾಮತ್, ರೋಟರಿ ಆನ್ಸ್ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ಶ್ರೀಮತಿ ರಮಿತಾ ಶೈಲೇಂದ್ರ ಮತ್ತು ಶಿಕ್ಷಕರಾದ ದೀಪಕ್ ಬೀರ ಪಡುಬಿದ್ರಿ ಇವರ ಸಹಯೋಗದೊಂದಿಗೆ, ಪೇತ್ರಿ ಅನ್ನಪೂರ್ಣ ನರ್ಸರಿಯ ಪ್ರಸನ್ನ ಭಟ್ ಇವರು ಎಲ್ಲಾ ಗಿಡಗಳ ಮಾಹಿತಿಯನ್ನು ನೀಡಿ ಪ್ರೋತ್ಸಾಹ ನೀಡುವ ಮೂಲಕ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಮುಂದಿನ ದಿನಗಳಲ್ಲಿ ಪರಿಸರದ ಬಗ್ಗೆ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಅನಿವಾರ್ಯ ಇದೆ. ಲಾಕ್ಡೌನ್ ಅವಧಿಯಲ್ಲಿ ಸಮಯ ಇರುವುದರಿಂದ ಇಂತಹ ಚಟುವಟಿಕೆಗಳನ್ನು ಮಾಡುವ ಮೂಲಕ ನಮ್ಮ ಮನೆಯಲ್ಲೇ ತರಕಾರಿ, ಔಷಧೀಯ ಗಿಡಗಳನ್ನು ಬೆಳೆಸಬಹುದು. ಮುಂದೆ ಜನರಿಗೆ ಇಷ್ಟವಾಗುವ ಮತ್ತಷ್ಟು ಕಾರ್ಯಯೋಜನೆ ನಮ್ಮ ಮುಂದಿದೆ ಎಂದು ನಾಗೇಶ್ ಕಾಮತ್ ಕಟಪಾಡಿ ತಿಳಿಸಿದರು.

ಎರ್ಮಾಳು ಕಡಲ ಕಿನಾರೆಯಲ್ಲಿ ಮೃತ ದೇಹ ಪತ್ತೆ

Posted On: 16-05-2021 12:30PM

ಕಾಪು : ಮಂಗಳೂರು ಎನ್ಎಂಪಿಟಿ ಕಡಲ ತೀರದಲ್ಲಿ ಲಂಗರು ಹಾಕುವ ಹಡಗುಗಳ ಸೇವೆಗಾಗಿ ಬಳಸುವ ಟಗ್ ಪಡುಬಿದ್ರಿ ಕಾಡಿಪಟ್ಣ ಸಮೀಪ ಪತ್ತೆಯಾಗಿತ್ತು. ಮಾಹಿತಿಗಳ ಪ್ರಕಾರ 9 ಜನರು ಇದರಲ್ಲಿದ್ದರು.

ಇತ್ತ ಎರ್ಮಾಳು ಕಡಲ ಕಿನಾರೆಯಲ್ಲಿ ಟಗ್ ನಲ್ಲಿದ್ದ ಓರ್ವ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಸೂರಿ ಶೆಟ್ಟಿ ಕಾಪು ಇವರ ಸಹಕಾರದಿಂದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೋಲೀಸರು ಆಗಮಿಸಿದ್ದರು.

ಗಾಳಿ, ಮಳೆಯ ರಭಸಕ್ಕೆ ಸಿಲುಕಿದ ಟಗ್ ನಲ್ಲಿದ್ದ ಇಬ್ಬರು ಕಟಪಾಡಿಯಲ್ಲಿ ಮತ್ತು ಓರ್ವ ಮಲ್ಪೆಯಲ್ಲಿ ದಡ ಸೇರಿದ್ದಾರೆ. ಸ್ಥಳೀಯರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿರುತ್ತಾರೆ.

ಕಾಪು : ಕರಾವಳಿ ಮತ್ತು ಕೈಪುಂಜಾಲು ಆಶಾಕಾರ್ಯಕರ್ತರಿಗೆ ಕೋವಿಡ್ ಕಿಟ್ ವಿತರಣೆ

Posted On: 16-05-2021 12:18PM

ಕಾಪು : ಕಾಪು ಪುರಸಭಾ ವ್ಯಾಪ್ತಿಯ ಕರಾವಳಿ ಮತ್ತು ಕೈಪುಂಜಾಲು ವಾರ್ಡಿನ ಆಶಾ ಕಾರ್ಯಕರ್ತರಿಗೆ ದಾನಿಗಳ ನೆರವಿನಿಂದ ಕೊರೊನ ನಿಯಂತ್ರಣಕ್ಕಾಗಿ ನೀಡಲ್ಪಟ್ಟ ಆಕ್ಸಿಮೀಟರ್, ಥರ್ಮೊ ಮೀಟರ್, ಸ್ಯಾನಿಟೈಸರ್ ಮತ್ತು ಮಾಸ್ಕ್ ನ್ನು ಕರಾವಳಿ ವಾರ್ಡಿನ ಪುರಸಭಾ ಸದಸ್ಯರಾದ ಕಿರಣ್ ಆಳ್ವ ವಿತರಿಸಿದರು.

ಈ ಸಂದರ್ಭದಲ್ಲಿ ಕರಾವಳಿ ವಾರ್ಡಿನ ಯುವಕರು ಉಪಸ್ಥಿತರಿದ್ದರು.

ಕಾಪು : ತೌಕ್ತೆ ಚಂಡಮಾರುತದಿಂದ ಕಡಲ ತಡಿಯ ಜನರಲ್ಲಿ ಹೆಚ್ಚಿದ ಆತಂಕ

Posted On: 15-05-2021 07:24PM

ಕಾಪು : ಅರಬ್ಬಿ ಸಮುದ್ರದಲ್ಲಿ ತೌಕ್ತೆ ಚಂಡ ಮಾರುತದ ಪರಿಣಾಮ ಸಮುದ್ರದ ಅಲೆಗಳು ರೌದ್ರಾವತಾರ ತಾಳಿದ್ದು. ಕಾಪು ಲೈಟ್ ಸಮೀಪದಲ್ಲಿ ಸಮುದ್ರ ತೀರ ವಿಸ್ತಾರಗೊಂಡು ಸಮುದ್ರ ತೀರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಸಮುದ್ರ ವಿಸ್ತಾರಗೊಂಡು ಸಮುದ್ರ ಕೊರೆತದ ಭೀತಿ ಎದುರಾಗಿದ್ದು, ಲೈಟ್ ಹೌಸ್ ನ ಸುತ್ತಲೂ ಸಮುದ್ರದ ನೀರು ಆವರಿಸಿಕೊಂಡಿದೆ. ಕಾಪು ಬೀಚ್ ಸುತ್ತಮುತ್ತಲಿನ ಲೈಟ್ ಹೌಸ್ ವಾರ್ಡ್, ಕೋಟೆ ಕೊಪ್ಪಲ, ಸುಬ್ಬಯ್ಯ ತೋಟ, ಬೈರುಗುತ್ತು ತೋಟ, ಗರಡಿ ವಾರ್ಡ್, ಲಕ್ಷ್ಮೀ ನಗರ ವ್ಯಾಪ್ತಿಯ 30 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.

ಘಟನಾ ಪ್ರದೇಶಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್, ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ತಹಶೀಲ್ದಾರ್ ಪ್ರತಿಭಾ ಆರ್., ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಯೋಗೀಶ್ ವಿ ಶೆಟ್ಟಿ ಬಾಲಾಜಿ, ಕಾಪು ಗ್ರಾ.ಪಂ. ಮಾಜಿ ಅಧ್ಯಕ್ಷ ವಿಕ್ರಂ ಕಾಪು, ಪುರಸಭೆ ಇಂಜಿನಿಯರ್ ಪ್ರತಿಮಾ, ಗಂಗಾಧರ್ ಸುವರ್ಣ, ನವೀನ್ ಅಮೀನ್, ಗ್ರಾಮ ಕಾರಣಿಕ ವಿಜಯ್ ಮೊದಲಾದವರು ಭೇಟಿ ನೀಡಿದರು.

ಶಾಸಕ ಲಾಲಾಜಿ‌ ಆರ್. ಮೆಂಡನ್ ಮಾತನಾಡಿ, ಕಾಪು ಬೀಚ್ ಮತ್ತು ಲೈಟ್ ಹೌಸ್ ವಾರ್ಡ್ ನಲ್ಲಿ ಕಳೆದ ಮಳೆಗಾಲದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಮತ್ತೆ ಸಮುದ್ರದಿಂದ ಉಕ್ಕಿದ ನೀರು ಎಲ್ಲೆಡೆ ಹರಿಯುತ್ತಿದೆ. ಚಂಡ ಮಾರುತದ ಪರಿಣಾಮದಿಂದಾಗಿ ಈ ರೀತಿಯಾಗಿದ್ದು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇಲ್ಲಿನ‌ ಸಮಸ್ಯೆ ಪರಿಹರಿಸಲು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಜನರ ಪ್ರಾಣ ರಕ್ಷಣೆಯೇ ನಮ್ಮ ಮುಖ್ಯ ಗುರಿಯಾಗಿದೆ ಎಂದರು.‌

ಕಾಪು ತಹಸೀಲ್ದಾರ್ ಪ್ರತಿಭಾ ಆರ್‌. ಮಾತನಾಡಿ, ಜನರ ಪ್ರಾಣ ರಕ್ಷಣೆಗೆ ಪೂರಕವಾಗಿ ತೊಂದರೆಗೊಳಗಾದ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗುವುದು‌. ಕಾಪು ಸುನಾಮಿ ಸೆಂಟರ್ ನಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಲಾಗಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಗಂಜಿ ಕೇಂದ್ರಗಳ ಪ್ರಾರಂಭಕ್ಕೆ ಸೂಚನೆ ನೀಡಲಾಗಿದೆ. ಜನ - ಜಾನುವಾರುಗಳ‌ ರಕ್ಷಣೆಗೆ ವಿಶೇಷ ಒತ್ತು‌ ನೀಡಲಾಗುವುದು ಎಂದರು.