Updated News From Kaup

ಕಾಪು : ಅಂಗನವಾಡಿ ಕಾರ್ಯಕರ್ತೆ ಶಾರದಾ ಇವರಿಗೆ ಸನ್ಮಾನ, ಆರೋಗ್ಯ ಮಾಹಿತಿ ಶಿಬಿರ

Thumbnail
Posted On: 18 Sep 2021, 11:09 AM

ಕಾಪು : ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ಕೆ ಎಮ್ ಸಿ ಮಣಿಪಾಲ ಇದರಲ್ಲಿ ಅಂಗನವಾಡಿ ಕಾರ್ಯಕರ್ತೆ ಶಾರದಾ ಇವರಿಗೆ ಸನ್ಮಾನ ಹಾಗೂ ಆರೋಗ್ಯ ಮಾಹಿತಿ ಶಿಬಿರದಲ್ಲಿ ಕೆ ಎಮ್ ಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಾರ್ವಜನಿಕರಿಗೆ ಉಚಿತವಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು ಇವರ ಸೇವಾ ಕಾರ್ಯ ಶ್ಲಾಘನೀಯ. ಆರೋಗ್ಯ ಕ್ಷೇತ್ರದಲ್ಲಿ ಇವರು ನೀಡುತ್ತಿರುವ ಕೊಡುಗೆ ಅಪಾರ. ಇಂದು ಸರಕಾದ ಎಲ್ಲ ಸವಲತ್ತುಗಳನ್ನು, ಯೋಜನೆಗಳನ್ನು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒದಗಿಸುವಲ್ಲಿ ಮತ್ತು ಮಕ್ಕಳಿಗೆ ಪ್ರಾರಂಭದಲ್ಲಿ ಉತ್ತಮ ಸಂಸ್ಕಾರವನ್ನು ನೀಡುತ್ತಿರುವ ಅಂಗನವಾಡಿ ಕಾರ್ಯಕರ್ತೆಗೆ ಸಮ್ಮಾನಿಸಿ ಗೌರವ ಸಲ್ಲಿಸಿರುವುದು ಬಹಳ ಉತ್ತಮವಾದುದು ಎಂದು ಕಾಪು ಬಿಜೆಪಿ ಕಾರ್ಯ ಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಹೇಳಿದರು. ಕಾರ್ಯಕ್ರಮದಲ್ಲಿ ಡಾ.ಅಖಿಲಾ, ಪುರಸಭಾ ಮಾಜಿ ಸದಸ್ಯರಾದ ಗುಲಾಬಿ ಪಾಲನ್, ಡಾ.ವರ್ಷ, ಉದ್ಯಮಿ ಸಮಾಜಸೇವಕರಾದ ಪ್ರಸಾದ್ ಶೆಣೈ ಕಾಪು, ರೊಟೇರಿಯನ್ ಜೇಮ್ಸ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ನೀಲಾವತಿ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಆರೋಗ್ಯ ಮಾಹಿತಿ ನೀಡಲಾಯಿತು.

ಪ್ರಧಾನಿ ಜನ್ಮದಿನದಂದು ತನ್ನ ರಿಕ್ಷಾದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರಯಾಣ ಒದಗಿಸಿದ ಚಂದ್ರ ಮಲ್ಲಾರ್ : ಗಣ್ಯರಿಂದ ಶುಭಾಶಯ

Thumbnail
Posted On: 18 Sep 2021, 10:34 AM

ಕಾಪು : ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿ, ಪುರಸಭಾ ನಾಮನಿರ್ದೇಶಿತ ಸದಸ್ಯರಾದ ಚಂದ್ರ ಮಲ್ಲಾರ್ ಇವರು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಪ್ರತೀ ವರ್ಷ 5 ಕಿಮೀ ವ್ಯಾಪ್ತಿಯಲ್ಲಿ ತನ್ನ ರಿಕ್ಷಾದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರಯಾಣ ಒದಗಿಸುತ್ತಿದ್ದು ನಿನ್ನೆಯ ದಿನ ಬೆಳಿಗ್ಗೆ ಅದರ ಚಾಲನಾ ಕಾರ್ಯಕ್ರಮ‌ ನಡೆಸಲಾಯಿತು. ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮೋದಿಯವರ ಆದರ್ಶ ವ್ಯಕ್ತಿತ್ವ ಕೊಂಡಾಡಿ ಚಂದ್ರ ಮಲ್ಲಾರ್ ನೀಡುತ್ತಿರುವ ಉಚಿತ ಸೇವೆ ನಮ್ಮೆಲ್ಲರಿಗೂ ಆದರ್ಶವಾಗಿದ್ದು ನಾವೆಲ್ಲರೂ ಯಾವುದಾದರೊಂದು ಸೇವಾ ಚಟುವಟಿಕೆಯಲ್ಲಿ ಭಾಗವಹಿಸಿ ಮೋದಿಗೆ ಶುಭ ಕೋರಬೇಕು ಎಂದರು. ಈ ಸಂದರ್ಭದಲ್ಲಿ ಕಾಪು ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ರಾಜ್ಯ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಮಂಡಲ ಉಪಾಧ್ಯಕ್ಷರಾದ ನವೀನ್ ಎಸ್. ಕೆ, ಪಕ್ಷದ ಪ್ರಮುಖರಾದ ಗಂಗಾಧರ ಸುವರ್ಣ, ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ನೋಂಪು - ಅನಂತವ್ರತ

Thumbnail
Posted On: 18 Sep 2021, 10:21 AM

| ಅನಂತಾನಂತ ದೇವೇಶ ......| ' ಕ್ಷೀರಸಾಗರದಲ್ಲಿ ಮಹಾಶೇಷನ ಮೇಲೆ ಮಲಗಿರುವ ಶ್ರೀಮನ್ನಾರಾಯಣ' ಈ ನೋಟ ಅಥವಾ ದೃಶ್ಯದ ಯಥಾವತ್ತಾದ ಪರಿಕಲ್ಪನೆ - ಅನುಸಂಧಾನದೊಂದಿಗೆ ನೆರವೇರುವ ಉಪಾಸನೆಯೇ 'ಶ್ರೀಮದನಂತವ್ರತ' , 'ಅನಂತವ್ರತ, ಅಥವಾ 'ನೋಂಪು'. ಭಾದ್ರಪದ ಶುದ್ಧ ಚತುರ್ದಶಿ ತಿಥಿಯಲ್ಲಿ 'ಅನಂತ ಚತುರ್ದಶಿ' ಆಚರಣೆ .ಇದು ವ್ರತವಾಗಿ ನೆರವೇರುತ್ತದೆ . ಕ್ಷೀರ ಸಾಗರವನ್ನು ಸಾಂಕೇತಿಸುವ ಜಲ ಪೂರಿತ ಕಲಶ . ಅದರ ಮೇಲೆ ದರ್ಭೆಯಿಂದ ನಿರ್ಮಿಸಿರುವ ಏಳು ಹೆಡೆಯುಳ್ಳ ಶೇಷಾಕೃತಿ . ಈ ಶೇಷಾಕೃತಿಯ ಮೇಲೆ ಶಾಲಗ್ರಾಮ .ಈ ಕಲ್ಪನೆಯಲ್ಲಿ ಅನಂತನಾಮಕನಾದ ಶೇಷನ ಮೇಲೆ ಶಯನ ಮಾಡಿದ ಅನಂತಪದ್ಮನಾಭನ ಚಿಂತನೆಯೊಂದಿಗೆ ಆರಾಧನೆ ನೆರವೇರುವುದು .ವೈಕುಂಠವನ್ನೆ ಸಾಕಾರ ಗೊಳಿಸುವ , ವಾಸ್ತವದ ಸ್ಥಾಪನೆಯಾಗಿ ವ್ರತ ನಡೆಯುವುದು . ಲೌಕಿಕದಲ್ಲಿ ಅಲೌಕಿಕವನ್ನು ನಿರ್ಮಿಸುವ ವೈದಿಕದ ಉಪಾಸನಾ ವಿಧಾನ ಅದ್ಭುತ. ಹದಿನಾಲ್ಕು ಗಂಟುಗಳುಳ್ಳ ಕೆಂಪು ಬಣ್ಣದ "ದಾರ ಅಥವಾ ದೋರ"ವನ್ನು ಪ್ರತಿಷ್ಠಾಪಿತ ಕಲಶದಲ್ಲಿ ಪ್ರಧಾನ ಪೂಜಾಕಾಲದಲ್ಲಿ ಇರಿಸಿ ಪೂಜಾನಂತರದಲ್ಲಿ ಧರಿಸಿಕೊಳ್ಳುವುದು ಅನಂತವ್ರತದ ಮುಖ್ಯ ಅಂಗ .ಪುರುಷರಾದರೆ ಬಲಕೈಯ ತೋಳಿನಲ್ಲಿ , ಸ್ತ್ರೀಯರಾದರೆ ಎಡಕೈಯ ತೋಳಿನಲ್ಲಿ ಕಟ್ಟಿಕೊಳ್ಳುವುದು ಸಂಪ್ರದಾಯ . ಪೂಜೆ - ದೋರ ಬಂಧನ‌ ಶ್ರೀಮದನಂತವ್ರತ ಕಲ್ಪೋಕ್ತ ಪೂಜಾವಿಧಿಯು ಹಂತಹಂತವಾಗಿ ಸಂಪನ್ನಗೊಳ್ಳುತ್ತದೆ. ‌‌ ಯಮುನಾ ಪೂಜೆ , ಅಂಗಪೂಜೆ , ಪತ್ರಪೂಜೆ , ಪುಷ್ಪಪೂಜೆ ,ನಾಮಪೂಜೆ , ಧೂಪದೀಪಾದಿ ಸಮರ್ಪಣೆ .ಕಲಶಸ್ಥಾಪನೆ , ಶೇಷ ಪೂಜೆ , ಧ್ಯಾನಾವಾಹನಾದಿ , ಅಭಿಷೇಕ ,ವಸ್ತ್ರಯುಗ್ಮ ಸಮರ್ಪಣೆ , ಅಂಗಪೂಜೆ , ಅನಂತಪೂಜೆ ,ಧ್ಯಾನಮ್ ,ಮಂಟಪ ಧ್ಯಾನಮ್ , ಪೀಠಪೂಜೆ , ನವಶಕ್ತಿಪೂಜೆ , ಆವಾಹನಮ್ , ನವದೋರ ಸ್ಥಾಪನೆ ,ಷೋಡಶೋಪಚಾರ ಪೂಜೆ , ಅಂಗಪೂಜೆ ,ಷೋಡಶಾವರಣ ಪೂಜೆ ,ಶಕ್ತಿಪೂಜೆ , ದೋರಪೂಜೆ ,ಪತ್ರಪೂಜೆ, ಪುಷ್ಪಪೂಜೆ , ಅಷ್ಟೋತ್ತರನಪೂಜೆ ,ಧೂಪದೀಪ ನೈವೇದ್ಯ, ಫಲನಿವೇದನೆ , ನೀರಾಜನ ,ಪ್ರಸನ್ನಾರ್ಘ್ಯ, ಪ್ರದಕ್ಷಿಣ ನಮಸ್ಕಾರ, ಪ್ರಾರ್ಥನೆ, ದೋರಪ್ರಾರ್ಥನೆ , ದೋರನಮಸ್ಕಾರ - ಬಂಧನ ,ಜೀರ್ಣದೋರ ವಿಸರ್ಜನೆ ,ಉಪಾಯನದಾನಮ್ ,........... ಉದ್ವಾಸನ ,ಕ್ಷಮಾಪಣ ,ಸಮಾಪನ .ಹೀಗೆ ವಿವಿಧ ಹಂತಗಳಲ್ಲಿ ಪೂಜೆ ನೆರವೇರಿ ಒಂದು ಭಕ್ತಿ ಭಾವದ ವ್ರತಾಚಾರಣೆಯ ಸಾರ್ಥಕತೆ ಸನ್ನಿಹಿತವಾಗುತ್ತದೆ . ಜಲಸಂಗ್ರಹ - ಯಮುನಾಪೂಜೆಯಿಂದ‌ ಕಲಶ ಪ್ರತಿಷ್ಠೆ , ಶೇಷ ಕಲ್ಪನೆ , ಮತ್ತೆ ಶಾಲಗ್ರಾಮ ಸ್ಥಾಪನೆಯ ಚಿಂತನೆ ಬಳಿಕ ದೋರದ ಮಹತ್ವ - ಧಾರಣೆ . ಇವು ಅನಂತವ್ರತದಲ್ಲಿ ವ್ಯಕ್ತವಾಗುವ ಮುಖ್ಯ ಅಂಶಗಳು . ಸಂಕ್ಷಿಪ್ತ ಅನಂತವ್ರತ ಕಥಾ ಅನಂತವ್ರತಕಥೆಯು ಯಾರಿಂದ ಯಾರಿಗೆ ಹೇಳಲ್ಪಟ್ಟಿತು ,ಕಲ್ಪೋಕ್ತ ಪೂಜಾವಿಧಾನದೊಂದಿಗೆ ದೋರ (ದಾರ) ಬಂಧನದ ಮಹತ್ವ.....ಇತ್ಯಾದಿ. ಕಪಟ ದ್ಯೂತದ ಪರಿಣಾಮವಾಗಿ ವನವಾಸಕ್ಕೆ ದ್ರೌಪದಿ ಸಹಿತ ಪಂಡವರು ಹೊರಡುತ್ತಾರೆ . ವಿಷಯ ತಿಳಿದ ಕೃಷ್ಣ ಕಾಡಿಗೆ ಬರುತ್ತಾನೆ .ಒದಗಿದ ಕಷ್ಟ ಪರಂಪರೆಗೆ ನಿವೃತ್ತಿ ಹೇಗೆ ಎಂದು ಧರ್ಮರಾಯನು ಕೇಳಲು , ಶ್ರೀಕೃಷ್ಣನು 'ಅನಂತವ್ರತ'ವನ್ನು ಮಾಡುವಂತೆ ಸೂಚಿಸುತ್ತಾನೆ . "ಅನಂತನೆಂದರೆ" ನಾನೆ ಆಗಿದ್ದೇನೆ ,ಆ ಅನಂತ ಸ್ವರೂಪವು ನನ್ನದೇ ಆಗಿದೆ ಎಂದು ತಿಳಿ" ಎಂದು ಅವತಾರದ ಸೂಕ್ಷ್ಮವನ್ನು ತಿಳಿಸುತ್ತಾನೆ .ಇಂತಹ ಅನಂತಸ್ವರೂಪವೇ ತಾನು ಎಂದು ಹೇಳುತ್ತಾನೆ ಕೃಷ್ಣ : ಕೃತಯುಗದಲ್ಲಿದ್ದ ಸುಮಂತನೆಂಬ ಬ್ರಾಹ್ಮಣನ ಕತೆಯನ್ನು ಹೇಳುವ ಮೂಲಕ ಅನಂತ ವ್ರತದ ಫಲಪ್ರಾಪ್ತಿಯ ವಿವರಣೆಯನ್ನು ನೀಡುತ್ತಾನೆ ಶ್ರೀಕೃಷ್ಣ. ಸುಮಂತನು ತನ್ನ ಮಗಳನ್ನು ಕೌಂಡಿನ್ಯನೆಂಬ ಮಹರ್ಷಿಗೆ ಗೃಹ್ಯಸೂತ್ರದ ಕ್ರಮದಲ್ಲಿ ಮದುವೆಮಾಡಿ ಕೊಡುತ್ತಾನೆ . ನವವಧೂವರರಿಗೆ ಬಳುವಳಿಯಾಗಿ ಉತ್ತಮ ವಸ್ತುವನ್ನು ಕೊಡಬೇಕೆಂದು ಬಯಸಿ ಪತ್ನಿಯಲ್ಲಿ ಹೇಳಲು ,ಆಕೆ ಕೋಪಗೊಂಡು ಮನೆಯಲ್ಲಿದ್ದ ಸುವಸ್ತುಗಳನ್ನೆಲ್ಲ ಪೆಟ್ಟಿಗೆಯಲ್ಲಿ ಹಾಕಿ ಬಚ್ಚಿಡುತ್ತಾಳೆ . ಕೌಂಡಿನ್ಯನು‌ ತನ್ನ ಶಿಷ್ಯರ ಸಹಿತ ನವ ವಧುವಿನೊಂದಿಗೆ ಹೊರಡುತ್ತಾನೆ. ಬರಬರುತ್ತಾ ಯಮುನಾ ನದಿಯ ದಡದಲ್ಲಿ ಮಧ್ಯಾಹ್ನದ ಆಹ್ನಿಕಕ್ಕಾಗಿ‌ ಪ್ರಯಾಣವನ್ನು ನಿಲ್ಲಿಸಿ ಅನುಷ್ಠಾನ ಪೂರೈಸಲು ನದಿ ಬದಿಗೆ ಹೋಗುತ್ತಾನೆ . ನವ ವಧು ಶೀಲೆಯು ಹೊಳೆ ಬದಿ ಹೋಗುತ್ತಾ ಕೆಂಪುಬಟ್ಟೆಯನ್ನು ಧರಿಸಿದ ಹೆಂಗಸರ ಗುಂಪು ಅನಂತ ವ್ರತದಲ್ಲಿ ತೊಡಗಿರುವುದನ್ನು ಕಾಣುತ್ತಾಳೆ . ವ್ರತದ ವಿವರವನ್ನು ತಿಳಿದುಕೊಂಡ ಶೀಲೆ ತಾನು ವ್ರತ ಮಾಡಲು ಸಿದ್ಧಳಾಗುತ್ತಾಳೆ . ಆಗ ಹೆಂಗಸರು ವ್ರತವಿಧಿಯನ್ನು ಹೇಳುತ್ತಾರೆ. ಈ ವ್ರತ ವಿಧಿಯಲ್ಲಿ ಅನಂತನು ಪೂಜಿಸಲ್ಪಡುತ್ತಾನೆ . ‌‌ ಒಂದು ಸೇರು ಅಕ್ಕಿಯಿಂದ ಪುರುಷನಾಮಕನಾದ ಪರಮಾತ್ಮನ ನಿಮಿತ್ತದಿಂದ ಪಾಕಮಾಡಿ ಅನಂತನಿಗರ್ಪಿಸಿ‌ ಅರ್ಧವನ್ನು ಬ್ರಾಹ್ಮಣನಿಗೆ ದಾನಮಾಡಿ ಉಳಿದರ್ಧವನ್ನು‌ ತಾನು ಭೋಜನಮಾಡಬೇಕು .ದ್ರವ್ಯದಲ್ಲಿ‌ ವಂಚನೆಮಾಡದೆ ತನ್ನ ಶಕ್ತಿಯಿದ್ದಷ್ಟು ದಕ್ಷಿಣೆ ಕೊಡಬೇಕು .ನದಿಯ ದಡದಲ್ಲಿ‌‌ ಅನಂತನನ್ನು‌ ಪೂಜಿಸಬೇಕು . ದರ್ಭೆಯಿಂದ ಶೇಷನ ಪ್ರತಿಮೆಯನ್ನುಮಾಡಿ ಬಿದಿರಿನ ಪಾತ್ರದಲ್ಲಿಟ್ಟು ಸ್ನಾನಮಾಡಿ‌ ಮಂಡಲದ ಮೇಲೆ ಗಂಧ ,ಪುಷ್ಪ‌, ,ಧೂಪ‌,ದೀಪ‌ಗಳಿಂದ ಅನೇಕ‌ವಿಧ ಪಕ್ವಾನ್ನಗಳಿಂದೊಡಗೂಡಿದ ನೈವೇದ್ಯಗಳಿಂದ ದೇವರ ಮುಂಭಾಗದಲ್ಲಿ‌ ಕುಂಕುಮದಿಂದ ಕೆಂಪಾದ ದೃಢವಾದ ಹದಿನಾಲ್ಕು ಗಂಟುಗಳುಳ್ಳ‌ ದೋರವನ್ನಿಟ್ಟು‌ ಪೂಜಿಸಬೇಕು . ಅನಂತರ ದೋರವನ್ನು ಮೇಲೆ ಹೇಳಿದಂತೆ ಕಟ್ಟಿಕೊಳ್ಳಬೇಕು . " ಸಂಸಾರವೆಂಬ ಮಹಾಸಮುದ್ರದಲ್ಲಿ‌ ಮುಳುಗಿದ್ದ ನನ್ನನ್ನು ,ಎಲೈ ,ಅನಂತನೆ‌, ವಾಸುದೇವನೆ ಉದ್ಧರಿಸು ,ನಾಶವಿಲ್ಲದ ನಿನ್ನ ರೂಪದಲ್ಲಿ ನನ್ನನ್ನು ವಿನಿಯೋಗಿಸು , ಸಾರೂಪ್ಯವೆಂಬ ಮೋಕ್ಷವನ್ನು ಕೊಡು . ಅನಂತರೂಪಿಯಾದ ನೀನು‌ ಈ ಸೂತ್ರದಲ್ಲಿ ಸನ್ನಿಹಿತನಾಗಿರುವೆ ,ನಿನಗೆ ನಮಸ್ಕಾರ " ಎಂಬ ಮಂತ್ರದಿಂದ ದೋರವನ್ನು ಕಟ್ಟಿಕೊಳ್ಳಬೇಕು . ಹೀಗೆ ದೋರವನ್ನು ಕಟ್ಟಿಕೊಂಡ ಶೀಲೆಯು ಮನೆಗೆ ಬರಲಾಗಿ ಮನೆಯು ಧನ ದಾನ್ಯಗಳಿಂದ ತುಂಬಿತ್ತು, . ಒಂದು ದಿನ ಕೌಂಡಿನ್ಯನು ಶೀಲೆಯ ತೋಳಿನಲ್ಲಿದ್ದ ದೋರವನ್ನು‌ ಕಂಡು ಕುಪಿತನಾಗಿ "ನನ್ನನ್ನು ವಶೀಕರಿಸಿಕೊಳ್ಳಲು‌ ಇದನ್ನು ಕಟ್ಟಿಕೊಂಡಿರುವೆಯಾ" ಎಂದು ಮೂದಲಿಸುತ್ತಾ ದೋರವನ್ನು ಕಿತ್ತು ಬೆಂಕಿಗೆ ಹಾಕುತ್ತಾನೆ .‌ ಆ ಕ್ಷಣ ಶೀಲೆಯು ದೋರವನ್ನು ಬೆಂಕಿಯಿಂದ ತೆಗೆದು ಹಾಲಿಗೆ ಹಾಕುತ್ತಾಳೆ . [ಪ್ರಸ್ತುತ ವ್ರತಾಚರಣೆಯಲ್ಲಿ ತೊಡಗುವವರು , ಕಳೆದ ವರ್ಷ ಆರಾಧಿಸಿ ಕಟ್ಟಿಕೊಂಡ ದೋರವನ್ನು ಮತ್ತೆ ಕಟ್ಟಿಕೊಂಡು ,ಕಲ್ಪೋಕ್ತಪೂಜೆಯನ್ನು ನೆರವೇರಿಸಿ ಬಳಿಕ‌ ನೂತನವಾಗಿ ಪೂಜಿಸಲ್ಪಟ್ಟ ದೋರವನ್ನು‌ ಕಟ್ಟಿಕೊಂಡು ಹಳೆದೋರವನ್ನು‌ ಬಿಚ್ಚಿ ಹಾಲಿಗೆ ಹಾಕುವ ವಿಧಿ ಪೂಜಾಕ್ರಮದ ಅವಿಭಾಜ್ಯ ಅಂಗವಾಗಿದೆ.] ಇಂತಹ ಘಟನೆಯಿಂದ ಸಕಲ‌ಸಂಪತ್ತನ್ನು ಕೌಂಡಿನ್ಯನು‌ ಕಳೆದುಕೊಂಡು ನಿರ್ಗತಿಕನಾದನು . ಎಂದು ಶ್ರೀಕೃಷ್ಣನು ಧರ್ಮರಾಯನಿಗೆ ವಿಸ್ತಾರವಾದ ಕಥೆಯನ್ನು ಹೇಳುತ್ತಾ ಕೌಂಡಿನ್ಯನು ಅನಂತನನ್ನು ಹುಡುಕಿ ಹೊರಟು ಕೊನೆಗೆ ಹೇಗೆ ಮರಳಿ ವ್ರತವನ್ನು ಮಾಡಿ ಅನಂತನ ಅನುಗ್ರಹದಿಂದ ಕಳಕೊಂಡ ಸಂಪತ್ತನ್ನು ಪಡೆದು ಬಾಳಿ ಬದುಕಿ ವೈಕುಂಠವನ್ನು ಸಿದ್ಧಿಸಿಕೊಂಡ ಎಂಬ ವಿವರವನ್ನು ಹೇಳುತ್ತಾನೆ . ಯಾರು ಸಂಸಾರಿಯಾಗಿ ಸುಖಿಗಳಾಗಿ ಋಜುಮಾರ್ಗಿಗಳಾಗಿ ಬದುಕಲು ಬಯಸುವರೋ ಅವರು ಮೂರುಲೋಕಕ್ಕೂ ಸ್ವಾಮಿಯಾದ ಅನಂತದೇವನ್ನು ಭಕ್ತಿಯಿಂದ ಪೂಜಿಸಿ ಉತ್ತಮ ದೋರವನ್ನು ಬಲತೋಳಿನಲ್ಲಿ ಕಟ್ಟಿಕೊಳ್ಳುತ್ತಾರೆ. ಬಹಳಷ್ಟು ಮನೆಗಳಲ್ಲಿ ನೋಂಪು ವ್ರತಾಚರಣೆ ಶತಮಾನಗಳಿಂದ ನಡೆದುಬಂದಿದೆ , ಶ್ದಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಪರ್ವ ವ್ರತವಾಗಿ ನೆರವೇರುತ್ತದೆ .ಪ್ರಸಿದ್ಧ ವಿಷ್ಣು ದೇವಾಲಯಗಳಲ್ಲಿ ,ಅನಂತ ಪದ್ಮನಾಭ ದೇವಳಗಳಲ್ಲಿ ಅನಂತವ್ರತ ಸಂಭ್ರಮದಿಂದ ನಡೆಯುತ್ತದೆ. |ಹದಿನಾಲ್ಕು | ಚತುರ್ದಶಿ ತಿಥಿಯಂದು ಅನಂತವ್ರತ‌ ಆಚರಣೆ . ಶುದ್ಧ ಪಕ್ಷದ ಹದಿನಾಲ್ಕನೇ ದಿನ . ಮರುದಿನ ಹುಣ್ಣಿಮೆ .ಅಂದರೆ ವೃದ್ಧಿ ಪಕ್ಷದ ಪರಿಪೂರ್ಣ ವೃದ್ಧಿಯ ಹಿಂದಿನ ದಿನ .‌ಚತುರ್ದಶಿಗೆ ದ್ವಿತೀಯ‌ ಹುಣ್ಣಿಮೆ . ಇದು ಬಹಳ ಪ್ರಸ್ತುತ. ಇದಕ್ಕೆ ಪೂರಕವಾಗಿ ದೋರದಲ್ಲಿ ಹದಿನಾಲ್ಕು ಗಂಟುಗಳು .ವ್ರತದ ಅನುಷ್ಠಾನ ಕ್ರಮದಂತೆ ನಿರಂತರ ಹದಿನಾಲ್ಕು ವರ್ಷ ನೆರವೇರಿಸಬೇಕು . ಇದು ಶ್ರೀಕೃಷ್ಣನು ಧರ್ಮರಾಯನಿಗೆ ಉಪದೇಶಿಸಿದ ಅನಂತವ್ರತದ ಸೂಕ್ಷ್ಮ ವಿವರಗಳು. ಹದಿನಾಲ್ಕು ಲೋಕಗಳೆಂದು ಒಂದು ತಿಳಿವಳಿಕೆ , ಅದರಂತೆ ಏಳು + ಏಳು ಲೋಕಗಳು.ಲೋಕಗಳ ಎಣಿಕೆ.ಭುವನ ,ಅತಳ ,ವಿತಳ ..ಇತ್ಯಾದಿ. ಚತುರ್ದಶ ವಿದ್ಯೆ : ನಾಲ್ಕು ವೇದ , ಆರು ವೇದಾಂಗ ,ಧರ್ಮ ಶಾಸ್ತ್ರ ,ಪುರಾಣ ನ್ಯಾಯ, ಮೀಮಾಂಸೆ. ಚತುರ್ದಶ ರತ್ನ : ಲಕ್ಷ್ಮೀ ,ಕೌಸ್ತುಭ, ಪಾರಿಜಾತ, ಸುರಾ,ಧನ್ವಂತರಿ,ಚಂದ್ರಮ ,ಐರಾವತ, ಉಚ್ಚೈಃಶ್ರವ,ಶಂಖ ,ಹರಿಧನುಸ್ಸು,ಅಪ್ಸರೆ, ವಿಷ,ಅಮೃತ,ಕಾಮಧೇನು. ಹೀಗೆ ಹದಿನಾಲ್ಕರ ನಿರೂಪಣೆಗಳಿವೆ. (ಸಂಗ್ರಹ) ಲೇಖನ : ಕೆ .ಎಲ್ .ಕುಂಡಂತಾಯ

ರೋಟರಿ ಕಲ್ಯಾಣಪುರ ವತಿಯಿಂದ ಭಾರತ ರತ್ನ ಸರ್.ಎಮ್ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ

Thumbnail
Posted On: 18 Sep 2021, 09:46 AM

ಉಡುಪಿ : ರೋಟರಿ ಕ್ಲಬ್ ಕಲ್ಯಾಣಪುರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಭಾರತ ರತ್ನ ಸರ್.ಎಮ್ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು ಆಚರಿಸಿ ಗೌರವ ಸಲ್ಲಿಸಲಾಯಿತು. ಕ್ಲಬ್ಬಿನ ಸಭಾ ಭವನದಲ್ಲಿ ಜರುಗಿದ ಈ ಸಮಾರಂಭದಲ್ಲಿ ಎಬಿಬಿ, ಅರೆವ, ಅಲ್ ಸ್ಪಾಮ್, ಜಿಇ ಕಂಪೆನಿ ಗಳಲ್ಲಿ ಯೋಜನಾ ಅಭಿಯಂತರರು ಆಗಿ ವಿಶೇಷ ಸೇವೆ ಸಲ್ಲಿಸಿರುವ ನಿವೃತ್ತ ಎಲೆಕ್ಟ್ರಿಕಲ್ ಇಂಜಿನಿಯರ್ ಮೂಡುತೋನ್ಸೆ ಯ ಸೊಲೊಮನ್ ವಿಜಯ್ ಲೂವಿಸ್ ಮತ್ತು ಉಡುಪಿ ಜಿಲ್ಲಾ ಇಂಜಿನಿಯರ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿಗಳೂ, ಹೆಸರಾಂತ ಅರ್ಚನಾ ಪ್ರೊಜೆಕ್ಟ್ಸ್ ನ ಮುಖ್ಯಸ್ಥರುಗಳಾದ ಅಮಿತ್ ಅರವಿಂದ್ ಇವರುಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ರೊಟರಿಯ ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜರಾಂ ಭಟ್ ಮತ್ತು ವಲಯ ಸೇನಾನಿ ಅಮಿತ್ ಅರವಿಂದ್ ಅವರುಗಳು ದೇಶದ ಮೂಲ ಸೌಕರ್ಯಗಳ ವಿನ್ಯಾಸ, ನಿರ್ಮಾಣ ಕಾರ್ಯಗಳಲ್ಲಿ ಇಂಜಿನಿಯರ್ ರವರುಗಳು ಪಾತ್ರ ಅಪಾರವಾದದ್ದು ಎಂಬುದಾಗಿ ಸಂದರ್ಭೋಚಿತವಾಗಿ ಮಾತನಾಡಿದರು. ಇಂಜಿನಿಯರಿಂಗ್ ವೃತ್ತಿ ಯಲ್ಲಿ ತೊಡಗಿಸಿಕೊಂಡಿರುವ ರೋಟರಿ ಸದಸ್ಯರುಗಳಾದ ಗಿರಿಧರ್ ಬಾಳಿಗ, ಬ್ರಾನ್ ಡಿಸೋಜ , ದಿವಾಕರ್ ಮತ್ತಿತರ ತಾಂತ್ರಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರುಗಳನ್ನು ರೊಟರಿ ಅಧ್ಯಕ್ಷರಾದ ಶಂಭು ಶಂಕರ್ ರವರು ಆಭಿನಂದಿಸಿದರು. ರೊಟೇರಿಯನ್ ಗಿರಿಧರ್ ಬಾಳಿಗ ರವರು ಭಾರತ ರತ್ನ ಸರ್.ಎಮ್ ವಿಶ್ವೇಶ್ವರಯ್ಯನವರು ದೇಶಕ್ಕೆ ನೀಡಿರುವ ಶ್ರಮ ಹಾಗೂ ಅಪಾರ ಕೊಡುಗೆಗಳನ್ನು ಸ್ಮರಿಸಿ ಅವರಿಗೆ ಗೌರವ ಅರ್ಪಿಸಿದರು. ವಿಭಿನ್ನ ಮಾದರಿಯ ತಂತ್ರಜ್ಞಾನ ಮತ್ತು ಅಭಿವೃದ್ಧಿ ಕಾರ್ಯಗಳ ಜೊತೆಗೆ ಪರಿಸರ ಸ್ನೇಹಿ ಹಾಗೂ ಪ್ರಕ್ರತಿಯನ್ನು ಉಳಿಸಿ , ಬೆಳೆಸುವ ನಿಟ್ಟಿನಲ್ಲಿ ತಂತ್ರಜ್ಞಾನ ಅಳವಡಿಕೆ ಈಗಿನ ಅಗತ್ಯತೆಯಾಗಿದೆ ಎಂದು ತಿಳಿಸಿ, ಕಾಳಜಿ ವ್ಯಕ್ತಪಡಿಸಿದರು. ಕ್ಲಬ್ಬಿನ ಅಧ್ಯಕರಾದ ಶಂಭು ಶಂಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯನ್ನು ಪೂರ್ವಾಧ್ಯಕ್ಷ ಅಲೆನ್ ಲೂವಿಸ್, ಕೋಶಾಧಿಕಾರಿ ದಿವಾಕರ್, ವೃತ್ತಿ ಸೇವಾ ನಿರ್ದೇಶಕ ಶಂಕರ್ ಸುವರ್ಣ ರವರುಗಳು ಅತಿಥಿ ಪರಿಚಯ ನಿರ್ವಹಿಸಿದರು, ರಾಮ ಕೃಷ್ಣ ಆಚಾರ್ಯರವರು ಸಭಾ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಗಿರೀಶ್ ಚಂದ್ರರವರು ವಂದಿಸಿದರು.

ಭಾರತ ವಿಶ್ವಕ್ಕೆ ಸಿರಿ ಧಾನ್ಯ ರಫ್ತು ಮಾಡುವ ಹಬ್ ಆಗಲಿದೆ -ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Thumbnail
Posted On: 18 Sep 2021, 09:37 AM

ಉಡುಪಿ : ಮುಂದಿನ 2 ವರ್ಷದ ಅವಧಿಯಲ್ಲಿ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಉತ್ಪಾದನೆ ಮಾಡುವುದರ ಜೊತೆಗೆ, ಉತ್ತಮ ಗುಣಮಟ್ಟದ, ನೈಸರ್ಗಿಕ ಅಂಶಗಳನ್ನು ಒಳಗೊಂಡ ಸಿರಿಧಾನ್ಯಗಳನ್ನು ವಿದೇಶಕ್ಕೆ ರಫ್ತು ಮಾಡುವುದರ ಮೂಲಕ, ಭಾರತವು ಇಡೀ ವಿಶ್ವಕ್ಕೆ ಸಿರಿಧಾನ್ಯಗಳನ್ನು ರಫ್ತು ಮಾಡುವ ಹಬ್ ಆಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಇಂದು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ, ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ 2023 ಪೌಷ್ಠಿಕತೋಟ ಮತ್ತು ವೃಕ್ಷಾರೋಪಣ ಪ್ರಚಾರಾಂದೋಲನ ಕಾರ್ಯಕ್ರಮವನ್ನು, ಮಹಿಳೆಯರ ಮಡಿಲಿಗೆ ಸಿರಿಧಾನ್ಯಗಳನ್ನು ತುಂಬಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಭಾರತ ಮಳೆಯಾಧಾರಿತ ಕೃಷಿಯನ್ನು ಅವಲಂಬಿಸಿರುವ ರಾಷ್ಟ್ರವಾಗಿದ್ದು, ಇಲ್ಲಿನ ವಾತಾವರಣವು ಸಿರಿಧಾನ್ಯ ಕೃಷಿಗೆ ಸೂಕ್ತವಾಗಿದೆ. ಸಿರಿಧಾನ್ಯಗಳಲ್ಲಿ ರಾಸಾಯನಿಕ ಅಂಶಗಳು ಕಡಿಮೆಯಿದ್ದು, ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ಪ್ರೋಟಿನ್, ವಿಟಮಿನ್ ಅಂಶಗಳಿದ್ದು, ಮಧುಮೇಹ ನಿಯಂತ್ರಣ ಸೇರಿದಂತೆ ಹಲವು ಸಮಸ್ಯೆಗಳಿಗೆ ವೈದ್ಯರು ಶಿಫಾರಸ್ಸು ಮಾಡುತ್ತಿದ್ದಾರೆ. ಅಲ್ಲದೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೆಳವಣಿಗೆಗೆ ಪೂರಕವಾಗಿದೆ. ಭಾರತದ ಬೇಡಿಕೆಯಂತೆ ವಿಶ್ವಸಂಸ್ಥೆಯು 2023 ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಘೋಷಿಸಿದ್ದು, ಈ ಅವಧಿಯಲ್ಲಿ ದೇಶದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಬೆಳೆದು, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತು ಮಾಡುವ ಮೂಲಕ ರೈತರು ಹೆಚ್ಚಿನ ಆದಾಯಗಳಿಸುವುದರ ಜೊತೆಗೆ, ದೇಶವು ಸಿರಿಧಾನ್ಯಗಳನ್ನು ರಫ್ತು ಮಾಡುವ ಹಬ್ ಆಗುವಂತಾಗಬೇಕು ಎಂದು ಸಚಿವರು ಹೇಳಿದರು. ಒಂದು ಕಾಲದಲ್ಲಿ ಭಾರತ ಸಿರಿಧಾನ್ಯಗಳನ್ನು ಬೆಳೆಯುವ ಮತ್ತು ಉಪಯೋಗಿಸುವ ವಿಶ್ವದ ಪ್ರಮುಖ ದೇಶವಾಗಿದ್ದು, ಹರಪ್ಪ, ಮೆಹೆಂಜೋದಾರೋ ನಾಗರಿಕತೆಯ ಜನರು ಸಿರಿಧಾನ್ಯಗಳನ್ನು ಸೇವನೆ ಮಾಡುತ್ತಿದ್ದರು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಕರ್ನಾಟಕದಲ್ಲಿ ಹಿಂದೆ 8 ಲಕ್ಷ ಹೆಕ್ಟರ್ನಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದು, ಈಗ ಆ ಪ್ರಮಾಣ 3.5 ಲಕ್ಷ ಹೆಕ್ಟರ್ಗೆ ಇಳಿದಿದೆ. ದೇಶದಾದ್ಯಂತ ಮುಂದಿನ ಎರಡು ವರ್ಷಗಳಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಿಸಲಾಗುವುದು, ರಾಯಭಾರಿ ಕಚೇರಿಗಳ ಮೂಲಕವೂ ಸಿರಿಧಾನ್ಯಗಳ ಬಳಕೆಯ ಮಹತ್ವ ಕುರಿತು ತಿಳಿಸುವ ಪ್ರಯತ್ನ ನಡೆಯಲಿದೆ ಎಂದರು. ಜಿಲ್ಲೆಯಲ್ಲಿ ಕೃಷಿ ಕಾಲೇಜು ಆರಂಭಿಸುವ ಕುರಿತಂತೆ, ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ, ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುವುದಾಗಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಇದೇ ಸಂದರ್ಭದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ಉತ್ಪನ್ನಗಳು ಮತ್ತು ಸಿರಿಧಾನ್ಯಗಳ ಕುರಿತ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ಸಚಿವರು, ಪೌಷ್ಠಿಕತೋಟ ಮತ್ತು ವೃಕ್ಷಾರೋಪಣ ಪ್ರಚಾರಾಂದೋಲನ ಅಂಗವಾಗಿ ಗಿಡಗಳನ್ನು ವಿತರಿಸಿದರು. ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯ ಕುಲಪತಿ ಡಾ.ಮಂಜುನಾಥ ಕೆ. ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಾದ್ಯಂತ 800 ಕೇಂದ್ರಗಳಲ್ಲಿ ಈ ಕಾರ್ಯಕ್ರಮ ಇಂದು ಆರಂಭಿಸಲಾಗಿದ್ದು, ಆರೋಗ್ಯದ ದೃಷ್ಠಿಯಿಂದ ಸಿರಿಧಾನ್ಯಗಳ ಸೇವನೆ ಅತ್ಯಂತ ಪ್ರಯೋಜನವಾಗಿದ್ದು, ಎಲ್ಲಾ ರೀತಿಯ ಪೌಷ್ಠಿಕಾಂಶಗಳು ಇದರಲ್ಲಿ ಇವೆ ಎಂದರು. ಕಾರ್ಯಕ್ರಮದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಚಾಂತಾರು-ಹೇರೂರು ಗ್ರಾ.ಪಂ ನ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ರಾಜ್ಯ ಮಟ್ಟದ ಸಾವಯುವ ಕೃಷಿ ಉನ್ನತ ಮಟ್ಟದ ಸಮಿತಿ ಸದಸ್ಯ ರಾಘವೇಂದ್ರ ಉಪ್ಪೂರು, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯ ವಿಸ್ತರಣಾ ನಿರ್ದೇಶಕ ಡಾ. ಕೆ.ಸಿ. ಶಶಿಧರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಮತ್ತಿತರರು ಉಪಸ್ಥಿತರಿದ್ದರು. ವಲಯ ಕೃಷಿ ಮತ್ತುತೋಟಗಾರಿಕೆ ಸಹ ಸಂಶೋಧನಾ ನಿರ್ದೇಶಕ ಡಾ. ಲಕ್ಷ್ಮಣ ಸ್ವಾಗತಿಸಿದರು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ ವಂದಿಸಿದರು.

ಪಡುಬಿದ್ರಿ ಠಾಣಾ ಎಸೈ ಆಗಿ ಅಶೋಕ್ ಕುಮಾರ್ ಅಧಿಕಾರ ಸ್ವೀಕಾರ

Thumbnail
Posted On: 18 Sep 2021, 09:20 AM

ಪಡುಬಿದ್ರಿ : ಇಲ್ಲಿನ ಪೊಲೀಸ್ ಠಾಣಾ ಎಸೈ ಆಗಿ ಉಡುಪಿ ನಗರದಲ್ಲಿ ಕರ್ತವ್ಯದಲ್ಲಿದ್ದ ಅಶೋಕ್ ಕುಮಾರ್ ನೇಮಕಗೊಂಡಿದ್ದಾರೆ. ಕಳೆದ ಹದಿನಾಲ್ಕು ತಿಂಗಳಿಂದ ಕರ್ತವ್ಯದಲ್ಲಿದ್ದ ದಿಲೀಪ್ ಅಧಿಕಾರ ಹಸ್ತಾಂತರ ಮಾಡಿದ್ದಾರೆ.

ಪೊಲಿಪು ಶಾಲೆಯ ಶಾಲಾಭಿವೃದ್ಧಿ ಸಮಿತಿಗೆ ತಡೆ: ಕಾಪುವಿನಲ್ಲಿ ಪತ್ರಿಕಾಗೋಷ್ಠಿ

Thumbnail
Posted On: 17 Sep 2021, 10:10 PM

ಕಾಪು : ಪೊಲಿಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯು ಶಿಕ್ಷಣ ಇಲಾಖೆ ನಿಯಮಾನುಸಾರ ರಚನೆಯಾಗಿದ್ದು, ಯಾವುದೇ ಸ್ಪಷ್ಟ ಕಾರಣ ನೀಡದೆ ತಡೆಹಿಡಿಯಲಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ಜಿ. ಮೆಂಡನ್ ಬುಧವಾರ ಕಾಪು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಪಾಲಕರಲ್ಲದವರು ಸಮಿತಿಯಲ್ಲಿದ್ದುಕೊಂಡು ಉಸ್ತುವಾರಿ ನಡೆಸುತ್ತಿದ್ದು, ೨೦೦೮ರ ಬಳಿಕ ಶಾಲೆಯಲ್ಲಿ ಯಾವುದೇ ಎಸ್‌ಡಿಎಂಸಿ ರಚನೆಯಾಗಲಿಲ್ಲ. ಪೋಷಕರ ಒತ್ತಾಯದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದಂತೆ ೨೦೨೧ ಮಾರ್ಚ್ ೧೦ರಂದು ಶಿಕ್ಷಣ ಇಲಾಖೆ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನೂತನ ಎಸ್‌ಡಿಎಂಸಿ ರಚಿಸಲಾಗಿದೆ. ಈ ಮಧ್ಯೆ ಪಾಲಕರಲ್ಲದ ವ್ಯಕ್ತಿಯೊಬ್ಬರು ನೂತನ ಎಸ್‌ಡಿಎಂಸಿ ರಚನೆ ಬಗ್ಗೆ ಆಕ್ಷೇಪಿಸಿ ಶಿಕ್ಷಣ ಇಲಾಖೆಗೆ ದೂರು ನೀಡಿದ್ದು, ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸಮಗ್ರ ತನಿಖೆಯನ್ನೂ ನಡೆಸಿದ್ದರು. ಆದರೆ ತನಿಖೆಯ ಬಳಿಕ ಯಾವುದೇ ನಿರ್ಧಾರವನ್ನು ಕೈಗೊಂಡಿರಲಿಲ್ಲ. ಈ ಕುರಿತಂತೆ ಉಪನಿರ್ದೇಶಕರಲ್ಲಿ ಹಲವು ಬಾರಿ ವಿಚಾರಿಸಿದರೂ ಸ್ಪಷ್ಟ ಉತ್ತರ ದೊರೆತಿಲ್ಲ. ಆದರೆ ಕಾನೂನು ಬದ್ದವಾಗಿ ರಚನೆಯಾಗಿರುವ ಎಸ್‌ಡಿಎಂಸಿಗೆ ಈವರೆಗೆ ಯಾವುದೇ ಅವಕಾಶ ನೀಡದಿರುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಸಕರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲಾಭಿವೃದ್ಧಿ ದೃಷ್ಟಿಯಿಂದ ಈಗ ರಚನೆಯಾಗಿರುವ ಎಸ್‌ಡಿಎಂಸಿಯನ್ನು ಮಾನ್ಯ ಮಾಡಬೇಕು. ನಾವು ಎಲ್ಲರೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡುವ ಮೂಲಕ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಬದ್ದರಿರುವುದಾಗಿ ರಾಜೇಶ್ ಜಿ ಮೆಂಡನ್ ತಿಳಿಸಿದ್ದಾರೆ. ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರೇಮಾ ರಮೇಶ್, ಪಾಲಕರಾದ ಜಲಜಾಕ್ಷಿ, ಸೌಮ್ಯಾ ಆರ್ ಮೆಂಡನ್, ಹರೀಶ್ ಉಪಸ್ಥಿತರಿದ್ದರು.

ಪ್ರಧಾನ ಮಂತ್ರಿಗಳ ಜನ್ಮದಿನದ ಅಂಗವಾಗಿ ಗಿಡಗಳನ್ನು ನೆಟ್ಟು, ಗೋಪೂಜೆ ನೆರವೇರಿಸಿದ ಸುರೇಶ್ ಶೆಟ್ಟಿ ಗುರ್ಮೆ

Thumbnail
Posted On: 17 Sep 2021, 09:51 PM

ಕಾಪು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೇವಾ ಕಾರ್ಯ ನಡೆಸುವಂತೆ ಪಕ್ಷದ ವರಿಷ್ಟರು ನೀಡಿದ ಸೂಚನೆಯಂತೆ ಕರ್ನಾಟಕ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆ ಫಲ ನೀಡುವ ಗಿಡಗಳನ್ನು ನೆಟ್ಟು, ಗೋಪೂಜೆಯನ್ನು ನೆರವೇರಿಸಿದರು.

ಪ್ರಧಾನಮಂತ್ರಿಯವರ 71ನೇ ಹುಟ್ಟು ಹಬ್ಬದ ಪ್ರಯುಕ್ತ ಅಂಧರಿಗೆ ನೆರವು, ಉಚಿತ ಕಣ್ಣಿನ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ

Thumbnail
Posted On: 17 Sep 2021, 09:06 PM

ಉಡುಪಿ : ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ 71ನೇ ಹುಟ್ಟು ಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಹಿಳಾ ಮೋರ್ಚಾ, ಕುಂದಾಪುರ ಮಹಿಳಾ ಮೋರ್ಚಾ, ಪ್ರಶಾಂತ್ ನೇತ್ರಾಲಯ ಇವರ ಸಹಯೋಗದಲ್ಲಿ ಅಂಧರಿಗೆ ನೆರವು, ಉಚಿತ ಕಣ್ಣಿನ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಜಿಲ್ಲಾ ಪಕ್ಷದ ಹಿರಿಯ ನಾಯಕರೊಂದಿಗೆ ಕರ್ನಾಟಕ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಕಟನೆ : ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾಪು ಮಂಡಲ ವಿಶೇಷ ಕಾರ್ಯಕಾರಿಣಿ ಸಭೆ

Thumbnail
Posted On: 17 Sep 2021, 08:56 PM

ಕಾಪು : ಹಿಂದುಳಿದ ವರ್ಗಗಳ ಮೋರ್ಚಾ ಕಾಪು ಮಂಡಲ ಇದರ ವಿಶೇಷ ಕಾರ್ಯಕಾರಿಣಿ ಸಭೆಯು ನಾಳೆ (ಸೆಪ್ಟೆಂಬರ್ 18) ಬೆಳಿಗ್ಗೆ 9 ಗಂಟೆಗೆ ಕಟಪಾಡಿ ಪಳ್ಳಿ ಗುಡ್ಡೆಯ ಜೇಸಿ ಭವನದಲ್ಲಿ ನಡೆಯಲಿದೆ ಎಂದು ಹಿಂದುಳಿದ ವರ್ಗಗಳ ಮೋರ್ಚಾ ಕಾಪು ಮಂಡಲದ ಪ್ರಧಾನ ಕಾರ್ಯದರ್ಶಿ ರವಿ ಕೋಟ್ಯಾನ್ ಉದ್ಯಾವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.