Updated News From Kaup

ಪಡುಬಿದ್ರಿ : ಟಗ್ ಮೇಲಕ್ಕೆತ್ತಲು 2 ಸಂಸ್ಥೆಗಳ ಜಂಟಿ ಕಾರ್ಯಾಚರಣೆಗೆ ಒಪ್ಪಿದ ಎಂ.ಆರ್.ಪಿ.ಎಲ್

Posted On: 23-05-2021 01:02PM

ಪಡುಬಿದ್ರಿ : ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿದ್ದ ಎಂ. ಆರ್. ಪಿ. ಎಲ್ ಗುತ್ತಿಗೆಯ ಗುಜರಾತ್ ನ ಅಲಯನ್ಸ್ ಟಗ್ ಪಡುಬಿದ್ರಿ ಸಮುದ್ರ ತೀರದಲ್ಲಿ ಮಗುಚಿ ಬಿದ್ದಿತ್ತು. ಇದನ್ನು ಮೇಲಕ್ಕೆತ್ತುವ ಜವಾಬ್ದಾರಿಯನ್ನು ಬಿಲಾಲ್ ನೇತೃತ್ವದ ಬದ್ರಿಯ ಸಂಸ್ಥೆಗೆ ನೀಡಲಾಗಿತ್ತು. ಕೆಲವು ದಿನಗಳ ಕಾರ್ಯಾಚರಣೆಯು ವಿಫಲವಾದ ಹಿನ್ನೆಲೆಯಲ್ಲಿ ಪಡುಬಿದ್ರಿಯ ಕಾಡಿಪಟ್ಣ ವಿಷ್ಣು ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ಎಂ. ಆರ್. ಪಿ. ಎಲ್. ನ ಎಂ.ಡಿ ವೆಂಕಟೇಶ್ ಈ ಕಾರ್ಯಾಚರಣೆಯನ್ನು ಬದ್ರಿಯ ಮತ್ತು ಯೋಜಕ ಸಂಸ್ಥೆಗಳಿಗೆ ನೀಡಲು ತೀರ್ಮಾನಿಸಿದ್ದಾರೆ.

ಟಗ್ ನಲ್ಲಿದ್ದ ಮೂವರು ಇನ್ನು ಪತ್ತೆಯಾಗಿಲ್ಲ. ಅವರ ಕುಟುಂಬ ವರ್ಗ ಕಾರ್ಯಚರಣೆಯ ಸ್ಥಳದಲ್ಲಿ ಉಪಸ್ಥಿತರಿದ್ದರು. ಮಗುಚಿ ಬಿದ್ದ ಟಗ್ ನ ಸುತ್ತ ದುರ್ವಾಸನೆಯ ಜೊತೆಗೆ ಟಗ್ ನಲ್ಲಿರುವ ಆಯಿಲ್ ಸೋರಿಕೆಯ ಭೀತಿಯ ಹಿನ್ನೆಲೆಯಲ್ಲಿ ಚುರುಕಿನ ಕಾರ್ಯಾಚರಣೆ ನಡೆಸಬೇಕಾದ ಅನಿವಾರ್ಯತೆಯಿದೆ.

ಸಭೆಯಲ್ಲಿ ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್, ತಾಲೂಕ್ ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಉಪಾಧ್ಯಕ್ಷರಾದ ಯಶೋದ, ಗ್ರಾಮ ಪಂಚಾಯತ್ ಸದಸ್ಯರು, ಪೋಲೀಸ್ ಸಿಬ್ಬಂದಿ, ಎಂ. ಆರ್. ಪಿ. ಎಲ್. ಸಿಬ್ಬಂದಿ, ಸ್ಥಳೀಯರು ಉಪಸ್ಥಿತರಿದ್ದರು.

ಪಡುಬಿದ್ರಿ : ಟಗ್ ಮೇಲಕ್ಕೆತ್ತಲು 2 ಸಂಸ್ಥೆಗಳ ಜಂಟಿ ಕಾರ್ಯಾಚರಣೆಗೆ ಒಪ್ಪಿದ ಎಂ.ಆರ್.ಪಿ.ಎಲ್

Posted On: 23-05-2021 01:02PM

< controls src="https://nammakaup.in/application/upload/1936" alt="" --->

< controls src="https://nammakaup.in/application/upload/1936" alt="" --->

< controls src="https://nammakaup.in/application/upload/1936" alt="" --->

ಪತ್ತನಾಜೆ : ಒಂದು ಚಿಂತನೆ

Posted On: 23-05-2021 10:02AM

ಪತ್ತನಾಜೆ ಪೂರ್ವೋತ್ತರ : ಪೃಥ್ವೀ ಗಂಧವತೀ 'ಪತ್ತನಾಜೆ' ಎಂದರೆ ಆಟ. ಕೋಲ‌, ಬಲಿ‌, ಅಂಕ, ಆಯನಗಳಿಗೆ ಅಲ್ಪವಿರಾಮ ಎಂಬ ನಂಬಿಕೆ ಸರಿಯಾದುದೇ . ಆದರೆ ಸಾಕು ಸಂಭ್ರಮ - ಗೌಜಿ ಗದ್ದಲ , ಉತ್ಸವಗಳ ಗುಂಗಿನಿಂದ ಹೊರಗೆ ಬಾ.....ತೊಡಗು... ಕೃಷಿಗೆ ಎಂಬ ಎಚ್ಚರಿಕೆಯೂ 'ಪತ್ತನಾಜೆ'ಯ ನೆನಪಿನಲ್ಲಿದೆ . ಆಚರಣೆಗಳು ಇಲ್ಲದಿದ್ದರೂ ಜೀವನಾಧಾರವಾದ ಬೇಸಾಯಕ್ಕೆ ಪ್ರವೃತ್ತನಾಗು ಎಂಬ ನಿರ್ದೇಶನ ಪತ್ತನಾಜೆ ಒದಗಿ ಬರುವ ಸಂದರ್ಭದಲ್ಲಿ ನಿಚ್ಚಳ . ತುಳುವರ ಬೇಶ ತಿಂಗಳ ಹತ್ತನೇ ದಿನವೇ ಪತ್ತನಾಜೆ .ಸೌರ ಪದ್ಧತಿಯ ಎರಡನೇ ತಿಂಗಳು ವೃಷಭ .‌ವೃಷಭ ಎಂದರೆ ಬೇಶ .ಹತ್ತನೇ ದಿನವನ್ನು ತಿಂಗಳು ಸಾಗುವ ಹತ್ತನೇ ಹೆಜ್ಜೆ (ಅಜೆ)ಎಂದು ಗ್ರಹಿಸಿ 'ಪತ್ತನಾಜೆ"ಎಂದಿರ ಬಹುದು.

'ಬೇಶ' ತಿಂಗಳು ತನ್ನ ವಿಶೇಷಗಳಿಂದ , ಪುರಾತನ ಒಪ್ಪಿಗೆಗಳೊಂದಿಗೆ ಬಹಳ ಮುಖ್ಯ ತಿಂಗಳು .‌ 'ಬೇಶದ ತನು - ಬೇಶದ ತಂಬಿಲ‌' ತುಳುವರಿಗೆ ಆಚರಣೆಗಳ ಪರ್ವಕಾಲ .'ಬೆನ್ನಿ' ಅಥವಾ 'ಬೇಸಾಯ'ಕ್ಕೆ ತೊಡಗುವ ಮುನ್ನ ತಮ್ಮ ಮೂಲಸ್ಥಾನಗಳಿಗೆ ಹೋಗಿ ಭೂಮಿ ಪುತ್ರನಾದ ಈ ನೆಲದ ಸರ್ವಾಧಿಕಾರಿ 'ನಾಗನಿಗೆ' ; "ತನು ಮಯಿಪಾದ್ ತಂಬಿಲಕಟ್ಟಾದ್" , ದೈವಗಳಿಗೆ ಭೋಗ ಕೊಟ್ಟು ಬಂದು ಬೇಸಾಯಕ್ಕೆ ಆರಂಭಿಸುವ ಸಂಪ್ರದಾಯ ತುಳುವರದ್ದಾಗಿತ್ತು. ಈಗ ಕಾಲ ಬದಲಾಗಿದೆ , ಮನಸ್ಸು ಬಂದಾಗ 'ಮೂಲತಾನ'ಗಳಿಗೆ ಹೋಗಿ 'ನಾಗ - ದೈವ'ಗಳಿಗೆ ಸೇವೆ ಸಲ್ಲಿಸುವ ಆರ್ಥಿಕ ಸಬಲತೆ ಇದೆ - ಸ್ವಂತ ವಾಹನ ಸೌಲಭ್ಯಗಳಿವೆ . ಬದಲಾಗುತ್ತಿರುವ ಕಾಲ - ಸಂದರ್ಭ - ಮನೋಧರ್ಮಗಳಿಂದಾಗಿ ತಮ್ಮ ಮೂಲಸ್ಥಾನ ತೊರೆದು ಬದುಕುಕಟ್ಟುವ ಉದ್ದೇಶದಿಂದ ಬೇಸಾಯದ ಅವಕಾಶ ಬಯಸಿ ದೂರದ ಪ್ರದೇಶಗಳಿಗೆ ಹೋಗಿ ಬೇಸಾಯದ ಜೀವನ ಆರಂಭಿಸಿದ್ದ ಮಾನವನ ಚರ್ಯೆಗೆ ಅಥವಾ ಮನೋಧರ್ಮಕ್ಕೆ ಶತಮಾನಗಳೇ ಸಂದು ಹೋದುವು. ಈ ಪರಿಸ್ಥಿತಿಯಲ್ಲೂ ಬೇಸಾಯಕ್ಕೆ ಆರಂಭಿಸುವ ಮುನ್ನ ಮೂಲಕ್ಕೆ ಹೋಗುವುದು ಶಿಷ್ಟಾಚಾರವಾಯಿತು . ವರ್ಷಕ್ಕೆ ಒಂದೆರಡು ಬಾರಿಯಾದರೂ ಮೂಲಕ್ಕೆ ಸಂದರ್ಶನ ನೀಡುವ ಆಸ್ತಿಕರು ಬೇಶದಲ್ಲಿ ಖಂಡಿತ ಹೋಗುತ್ತಾರೆ . ಆ ದಿನ ಪತ್ತನಾಜೆಯ ಆಸುಪಾಸಿನಲ್ಲಿರುತ್ತದೆ.

ಮಕರ - ಪುಯಿಂತೆಲ್ ತಿಂಗಳ ಕೊನೆಯ ಮೂರು ದಿನಗಳ "ಕೆಡ್ಡಸ" ಆಚರಣೆಯಲ್ಲಿ ಭೂಮಿದೇವಿ ಪುಷ್ಪವತಿಯಾದಳು ಎಂಬ ನಂಬಿಕೆ ನಮ್ಮದು .ಅಂದರೆ ನಿಸರ್ಗದಲ್ಲಿ ಅದ್ಭುತ ಬದಲಾವಣೆಯಾಗುವ ಕಾಲವದು .‌ಹೆಣ್ಣು ಮಗಳು 'ಪುಷ್ಪವತಿ' ಯಾದಳೆಂದರೆ 'ಫಲವತಿ'ಯಾಗಲು ಸಿದ್ಧಳಾದಳು ಎಂದಲ್ಲವೇ ಅರ್ಥ . ಪುಯಿಂತೆಲ್ - ಮಕರ ತಿಂಗಳಲ್ಲೆ ಪ್ರಕೃತಿ ಬದಲಾಗಲು ತೊಡಗುತ್ತದೆ , ಕೃಷಿಯ ಸಣ್ಣ ಪುಟ್ಟ ತಯಾರಿ ನಡೆಯಲಾರಂಭವಾಗುತ್ತದೆ . 'ಮಾಯಿ - ಕುಂಭ' ತಿಂಗಳು ಮುಗಿಯುತ್ತಿರುವಂತೆ 'ಸುಗ್ಗಿ - ಮೀನ' ತಿಂಗಳು . ಬೆಳೆದ ಗೆಣಸು ಮುಂತಾದುಗಳನ್ನು‌ ಅಗೆದು ತೆಗೆಯದಿದ್ದರೆ ಅವು 'ಮಾಯಿ ತಿಂಗಳಲ್ಲಿ ಮಾಯವಾಗುತ್ತವಂತೆ" . ಹೀಗೊಂದು ಒಡಂಬಡಿಕೆ . ಮುಂದೆ ಹಂತಹಂತವಾಗಿ ಬೇಸಾಯಕ್ಕೆ ಅಣಿಯಾಗುವ ರೈತ ಸುಗ್ಗಿ ತಿಂಗಳು ಮುಗಿದು ಪಗ್ಗು ತಿಂಗಳ 'ಮೊದಲ ದಿನ - ತಿಂಗೊಡೆ' ಮೊದಲ ಹಬ್ಬ ಯುಗಾದಿ ಅಥವಾ ಇಗಾದಿ - ವಿಷು ಆಚರಿಸುತ್ತಾನೆ .ಇಗಾದಿ ಆಚರಣೆ ಸರಳವಾದುದು ,ಚೌತಿ , ದೀಪಾವಳಿಗಳಂತೆ ಸಂಭ್ರಮಗಳಿಲ್ಲ .ಆದರೆ ಕೃಷಿಕನಿಗೆ "ಪುಂಡಿಬಿತ್ತ್ ಪಾಡುನು - ನಾಲೆರು ಮಾದಾವುನ" ಕೃಷಿ ಚಕ್ರವನ್ನು ಮತ್ತೆ ಆರಂಭಿಸುವ ಕ್ರಮವಿದೆ . ಮುಂದೆ 'ಪಗ್ಗು ತಿಂಗಳ‌ ಹದಿನೆಂಟು ಹೋಗುವ ದಿನ' ತನ್ನ ಕೃಷಿ ಭೂಮಿಗೆ ಬೇಕಾಗುವಷ್ಟು 'ನೇಜಿ' ಹಾಕುವ ಸಾಂಪ್ರದಾಯಿಕ ಕ್ರಮ. ಈ ನಡುವೆ 'ಕಜೆಬಿದೆ ಆವ - ಮಡಿಬಿದೆ ಆವ' ಎಂಬ ನಿಷ್ಕರ್ಷೆಗೆ ಅನುಗುಣವಾಗಿ ನೇಜಿ ಹಾಕುವ ಪದ್ಧತಿಯೂ ಒಂದಿದೆ. ಕೃತ್ತಿಕಾ ಮಳೆಯ ಕಾಲ ಆರಂಭವಾಗುತ್ತದೆ. ಈ ಮಳೆ ಬರಬಾರದು "ಕಿರ್ತಿಕೆ ಕಾಯೊಡು"- ಕೃತ್ತಿಕೆಯ ಬಿಸಿಲಿಗೆ ಭೂಮಿ ಸುಡಬೇಕು - ಬಿಸಿಗೆ ಭೂಮಿ 'ಬಿರಿಯ' ಬೇಕು. ಭಾಗೀರಥೀ ಜನ್ಮದಿನ‌' ಒದಗಿಬರುತ್ತದೆ. ಮಳೆಬಂದಾಗ ಭೂಮಿ ತನ್ನೊಳಗೆ ಮಳೆ ನೀರು ಇಳಿಸಿಕೊಂಡು - ಹಾಕುವ ಗೊಬ್ಬರ ಮತ್ತು ಸಿದ್ಧಗೊಳಿಸಿದ ಸುಡುಮಣ್ಣುಗಳಿಂದಾಗಿ ( ತೂಟಾನ್ - ತೂಂಟಾನ್) ಫಲವತ್ತಾದ ಕ್ಷೇತ್ರವಾಗುತ್ತದೆ , ಮುಂದೆ ಬೀಜಾಂಕುರವಾದಾಗ ಭೂಮಿದೇವಿ ತನ್ನ ಫಲವಂತಿಕೆಯನ್ನು ವ್ಯಕ್ತಗೊಳಿಸುತ್ತಾಳೆ.

ಬಿಸಿಲ ಬೇಗೆಗೆ ಸುಟ್ಟ ಗದ್ದೆಗೆ ಮೊದಲ ಮಳೆ ನೀರು ಬಿದ್ದಾಗ ಒಂದು‌ ಅಪೂರ್ವ ಪರಿಮಳ ಭೂಗರ್ಭದಿಂದ ಹೊರಬರುತ್ತದೆ. ಅದಕ್ಕಲ್ಲವೇ "ಪೃಥ್ವೀ ಗಂಧವತೀ" ಎಂದರು ನಮ್ಮ ಪೂರ್ವಸೂರಿಗಳು .ಇದು ಮಣ್ಣಿನ ಪರಿಮಳ ,ಇದೇ ಕಾರಣವಾಗಿ ಬೆನ್ನಿ - ಬೇಸಾಯ ಸಮೃದ್ಧವಾಗಿತ್ತು ಒಂದು ಕಾಲದಲ್ಲಿ . ಈಗ ಮಣ್ಣಿಗೆ ಅಥವಾ ಪೃಥ್ವಿಗೆ ಗಂಧವಿದೆಯಾ ...ಅದು ಅಷ್ಟು ಸುವಾಸನೆಯುಳ್ಳದ್ದಾ ...ಎಂದು ಕೇಳುವವರಿದ್ದಾರೆ . ಆದರೆ ಬೇಸಾಯವೇ ಜೀವನಾಧಾರವಾಗಿದ್ದ ಕಾಲದಲ್ಲಿ ಮಣ್ಣಿನ ಪರಿಮಳ ಗ್ರಹಿಸುತ್ತಿದ್ದ ಮಾನವ .‌ಆಗ ಅದೇ ಸುಗಂಧವಾಗಿತ್ತು , ಏಕೆಂದರೆ ಭೂಮಿ ತಾಯಿಯಾಗಿದ್ದಳು .ಜಡವಾದ ಭೂಮಿಯೊಂದಿಗೆ ಎಂತಹ ಭಾವನಾತ್ಮಕ ಸಂಬಂಧ.‌ ಹಾಗೆ ಬಂದಿರಬೇಕು "ಮಣ್ಣ್ ಡ್ ಪೊಂರ್ಬಿನಾಯೆ ನುಪ್ಪು ತಿನುವೆ , ನರಮಾನಿಡ ಪೊಂರ್ಬಿನಾಯೆ ಮಣ್ಣ್ ತಿನುವೆ" ಎಂಬ ಗಾದೆ . ಪತ್ತನಾಜೆ ಮುಗಿಸಿ ಬೇಸಾಯಕ್ಕೆ ಹೊರಡುವ ಸಂದರ್ಭ ಭೂಮಿ ,ಬೇಸಾಯ , ನಮ್ಮ - ಮಣ್ಣಿನ ಸಂಬಂಧ ಮಣ್ಣಿನ ಸತ್ಯದ ದರ್ಶನವಾಗಲು ಅಥವಾ 'ಸತ್ಯ ನೆಗತ್ತ್ ದ್' ತೋಜೊಡ್ಡ ' ಪತ್ತನಾಜೆ ಪರ್ವಕಾಲ ,ಸುಸಂದರ್ಭ . ಇನ್ನು ನಮಗೆ "ಬೆನ್ನಿದ ಮಗೆ" - ಬೇಸಾಯಗಾರ ಸಿಗುವುದು ಆಟಿ ತಿಂಗಳಲ್ಲಿ . ಬಳಿಕ ಅಷ್ಟಮಿ ,ಚೌತಿ ಆಚರಣೆಗಳಲ್ಲಿ .ಅನಂತರ ತೆನೆಕಟ್ಟುವ ಸಂಭ್ರಮದಲ್ಲಿ , ನವರಾತ್ರಿಯ ವೇಳೆ .ಆದರೆ ನಗುಮೊಗದಿಂದ ಬೇಸಾಯಗಾರ‌ನ ಮುಖಾಮುಖಿಯಾಗುವುದು. ದೀಪಾವಳಿಯ ಗೌಜಿ ಗದ್ದಲದಲ್ಲಿ ಬೆಳಗುವ ಸೊಡರಿನಲ್ಲಿ ,ಆಗ ಧಾನ್ಯಲಕ್ಷ್ಮೀ ಮನೆ ತುಂಬಿರುತ್ತಾಳೆ .ಆತ ಸಂತೃಪ್ತನಾಗಿರುತ್ತಾನೆ "ಕೃಷಿಯಿದ್ದಲ್ಲಿ ದುರ್ಭಿಕ್ಷೆ ಇಲ್ಲವಂತೆ" ಪತ್ತನಾಜೆ ಎಂದು ಆರಂಭಿಸಿ ದೀಪಾವಳಿ ವರಗೆ ಹೋಗ ಬೇಕಾಯಿತು . "ಭೂಮಿ -ಕೃಷಿ' ಈ ಸಂಬಂಧ ಮತ್ತೆ ಗಾಢವಾಗಬೇಕೆಂಬುದೇ ಆಶಯ .ಹಾಗೆ ಎಲ್ಲಿಂದಲೋ ಹೊರಟು ಬೇಸಾಯಗಾರನಲ್ಲಿ ಮಾತನಾಡಿ ,ನಿಸರ್ಗದ ವಿಸ್ಮಯಗಳನ್ನು ಅವಲೋಕಿಸುತ್ತಾ , ಮಳೆಯ ಅನಿವಾರ್ಯತೆಯನ್ನು ಹೇಳುತ್ತಾ 'ಕೃಷಿ ಸಂಸ್ಕೃತಿ"ಯನ್ನು ಪರಿಚಯಿಸುವ ಪ್ರಯತ್ನಮಾಡಿದೆ . ಲೇಖನ : ಕೆ.ಎಲ್ .ಕುಂಡಂತಾಯ ವರ್ಣ ಚಿತ್ರ : ನಾಗರಾಜ ಆಚಾರ್ಯ

ವೆನ್ಲೋಕ್ ಆಸ್ಪತ್ರೆಯ ಕೋವಿಡ್ 19 ರ ಮುಖ್ಯ ನೋಡಲ್ ಆಫೀಸರ್ ಆಗಿ ಹಿರಿಯ ವೈದ್ಯ ಡಾ ಎಂ ಅಣ್ಣಯ್ಯ ಕುಲಾಲ್ ನೇಮಕ

Posted On: 22-05-2021 09:26PM

ಮಂಗಳೂರು :ಡಾ. ಎಂ. ಅಣ್ಣಯ್ಯ ಕುಲಾಲ್ ಅವರು ಕೊರೊನ ಆರಂಭವಾದ ದಿನಗಳಿಂದ ಮಂಗಳೂರು ಭಾರತೀಯ ವೈದ್ಯಕೀಯ ಸಂಘ, ಕುಟುಂಬ ವೈದ್ಯರ ಸಂಘಟನೆ, ಶ್ರೀನಿವಾಸ್ ವಿಶ್ವವಿದ್ಯಾಲಯ ಗಳ ಜೊತೆ ಸೇರಿ ಶುಶ್ರೂಷೆ, ಆರೈಕೆ ಮತ್ತು ಜನಜಾಗೃತಿ ಯಲ್ಲಿ ತೊಡಗಿಸಿ ಕೊಂಡಿದ್ದರು.

ಕಳೆದ ಬಾರಿ ಮಂಗಳೂರಿನ ಪ್ರತಿಷ್ಠಿತ ಭಾರತೀಯ ವೈದ್ಯಕೀಯ ಸಂಘಟನೆಯ ಹಿರಿಯ ತಜ್ಞ ವೈದ್ಯರ ಸಹಾಯದಲ್ಲಿ ರಾಜ್ಯದಲ್ಲೇ ಪ್ರಥಮ ಉಚಿತ ಟೆಲಿ consultation ಆರಂಭಿಸಿ ಮಾದರಿ ಆಗಿದ್ದರು. ಕೆಎಂಸಿ ಮತ್ತು ವೆನ್ಲೋಕ್ ಆಸ್ಪತ್ರೆ ಯಲ್ಲಿಯೇ MBBS ಓದಿ, ಅರೋಗ್ಯ ಹಾಗೂಆಸ್ಪತ್ರೆ ನಿರ್ವಣೆಯಲ್ಲಿ ಉನ್ನತ ವ್ಯಾಸಂಗ, ರಾಷ್ಟ್ರೀಯ ವಿಪತ್ತು ನಿರ್ವಣೆಯಲ್ಲಿ ರೆಡ್ ಕ್ರಾಸ್ ನಿಂದ ತರೆಬೇತಿ ಪಡೆದ ಹಿರಿಯ ತರಬೇತುದಾರರು.

ಸದ್ದಿಲ್ಲದೇ ಸಂಘಟನಾತ್ಮಕ ವಾಗಿ ಸಮಾಜ ಮುಖೀ ಸೇವೆ ಮಾಡುವ ಇವರು ವೆನ್ಲೋಕ್ ಅರೋಗ್ಯ ರಕ್ಷಾ ಸಮಿತಿ, KPME ನೋಂದಾವಣ ಸದಸ್ಯ, ಕೋವಿಡ್ ಟಾಸ್ಕ್ ಫೋರ್ಸ್, ಕೋವಿಡ್ ಡೆತ್ ಆಡಿಟ್, ventilator, ಆಕ್ಸಿಜನ್, remedicivir ಸಮಿತಿ ಯಲ್ಲಿ ಜಿಲ್ಲಾಡಳಿತದ ಜೊತೆ ದುಡಿದವರು.

Ima, ಕುಟುಂಬ ವೈದ್ಯ ಸಂಫಟನೆಯ ಮಾಜಿ ಅಧ್ಯಕ್ಷರು ಆಗಿರುವ ಇವರು, ಶ್ರೀನಿವಾಸ್ ವಿ. ವಿ ಯ ಮುಖ್ಯ ವೈದ್ಯಧಿಕಾರಿ ಹಾಗೂ ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕುಟುಂಬ ವೈದ್ಯರಾಗಿ ಮಂಗಳಾದೇವಿ ವೀರನಗರ, ಪಡೀಲ್ ಕಣ್ಣೂರು, ಅರ್ಕುಳ, ವಳಚ್ಚಿಲ್, ಬೋಳಾರಾ,ಪಾಂಡೇಶ್ವರ, ಸುರತ್ಕಲ್, ಮುಕ್ಕ, ಸಸಿಹಿತ್ಲು, ಬೈಕಂಪಡಿ,ಮುಲಿಹಿತ್ಲು ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ಮಾಡಿರುವರು.

ಕಾಪು : ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶದ ಜನರಿಗೆ ದಿನಸಿ ಕಿಟ್ ವಿತರಿಸಿದ ದಾನಿ

Posted On: 22-05-2021 04:06PM

(ನಮ್ಮ ಕಾಪು ವರದಿ) : ಸದಾ ಒಂದಿಲ್ಲೊಂದು ಸಾಮಾಜಿಕ ಸೇವೆಯಲ್ಲಿ ಭಾಗಿಯಾಗುತ್ತಾ, ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಹಾಗೂ ಪ್ರಸ್ತುತ ಲಾಕ್ಡೌನ್ ನಲ್ಲಿಯೂ ಎಡೆಬಿಡದೆ ನಿತ್ಯ ನಿರಂತರವಾಗಿ ಅನ್ನದಾನ, ದಿನಸಿ ಕಿಟ್ ವಿತರಣೆ ಮಾಡುವ ಇನ್ನಂಜೆ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಮಡುಂಬು ಕೆ. ಪಿ ಶ್ರೀನಿವಾಸ ತಂತ್ರಿ ಇವರು ಇಂದು ಪಡು ಕಾಪು ಭಾಗದಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ಇವರ ಅಪೇಕ್ಷೆಯ ಮೇರೆಗೆ ಸುಬಯ್ಯ ತೋಟ ಕಾಪು ಪಡು ಇಲ್ಲಿನ 23 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ಯುವಸೇನೆ ಮಡುಂಬು ತಂಡದ ಅಧ್ಯಕ್ಷರಾದ ವರುಣ್ ಶೆಟ್ಟಿ ಮಡುಂಬು ಹಾಗೂ ಉಮೇಶ್ ಅಂಚನ್, ಪ್ರಕಾಶ್ ಕೋಟ್ಯಾನ್, ಕಾರ್ತಿಕ್ ಶೆಟ್ಟಿ ಮಂಡೇಡಿ, ರವಿ ಕಲ್ಯಾಲು, ಪೃಥ್ವಿ ಶೆಟ್ಟಿ ಮಡುಂಬು ಮತ್ತಿತರರು ಉಪಸ್ಥಿತರಿದ್ದರು.

ಕೋವಿಡ್ ಪ್ಯಾಕೇಜ್ ಘೋಷಿಸಲು ಉಡುಪಿ ಜಿಲ್ಲೆಯ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದಿಂದ ಮುಖ್ಯಮಂತ್ರಿಗೆ ಮನವಿ

Posted On: 22-05-2021 12:18PM

ಉಡುಪಿ : ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಲಾಕ್ ಡೌನ್ ಆಗಿರುವ ಕಾರಣ ತುಳುನಾಡ ದೈವ ಚಾಕ್ರಿ ವರ್ಗದವರ ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದಾರೆ ಯಾವುದೇ ಆದಾಯವಿಲ್ಲ.

ಸಾವಿರಾರು ವರ್ಷಗಳ ಇತಿಹಾಸವಿರುವ ಕರಾವಳಿಯ ದೈವಾರಾಧನೆ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲಾ ವರ್ಗದವರು ತುಂಬಾ ಸಂಕಷ್ಟದಲ್ಲಿದ್ದಾರೆ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನ ದೈವಾರಾಧನೆಯನ್ನು ತಮ್ಮ ಕುಲ ಕಸುಬಾಗಿ ಅವಲಂಬಿಸಿದ್ದಾರೆ. ಅವರ ಕುಟುಂಬದ ಖರ್ಚುವೆಚ್ಚಗಳು ಇದರಲ್ಲಿ ಬರುವ ಸಂಭಾವನೆಯಲ್ಲಿ ಕುಟುಂಬವನ್ನು ನಡೆಸಬೇಕಾಗಿದೆ.

ಕಳೆದ ಬಾರಿಯೂ ಕೋವಿಡ್ ಮೊದಲ ಅಲೆಯಲ್ಲಿ ಪ್ಯಾಕೇಜ್ ವಂಚಿತರಾಗಿದ್ದಾರೆ. ಈ ಬಾರಿಯೂ ಕೂಡ ಎರಡನೇ ಕೋವಿಡ್ ಪ್ಯಾಕೇಜ್ ಪರಿಹಾರದಲ್ಲಿ ವಂಚಿತರಾಗಿದ್ದಾರೆ. ನಾವು ಯಾವಾಗಲೂ ಸರ್ಕಾರಕ್ಕೆ ಮನವಿ ಮಾಡಿ ಮಾಡಿ ಸೋತು ಹೋಗಿದ್ದೇವೆ ದಯಮಾಡಿ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪ್ಯಾಕೇಜನ್ನು ಬಿಡುಗಡೆ ಮಾಡಬೇಕೆಂದು ವಿನಂತಿಸಿದ್ದಾರೆ.

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ತಂಡದಿಂದ ಕಾರುಣ್ಯ ವೃದ್ಧಾಶ್ರಮದಲ್ಲಿ ಉಚಿತ ಮಧುಮೇಹ ತಪಾಸಣೆ

Posted On: 22-05-2021 11:59AM

ಉಡುಪಿ : ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ನಿರತವಾಗಿರುವ ಉಡುಪಿಯ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ತಂಡವು ಕಟಪಾಡಿಯ ಕಾರುಣ್ಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಆಶ್ರಮವಾಸಿಗಳಿಗೆ ಉಚಿತ ಮಧುಮೇಹ ತಪಾಸಣೆ ನಡೆಸಿತು.

ಈ ಕಾರ್ಯವನ್ನು ತಂಡದ ಸ್ಥಾಪಕಾಧ್ಯಕ್ಷರಾದ ಡಾ. ಕೀರ್ತಿ ಪಾಲನ್ ನೆರವೇರಿಸಿದರು.

ಈ ಸಂದರ್ಭ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ತಂಡದ ಕೋಶಾಧಿಕಾರಿ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು.

ಪಡುಬಿದ್ರಿ ಠಾಣಾ 10 ಸಿಬ್ಬಂದಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಠಾಣೆ ಸೀಲ್‌ಡೌನ್

Posted On: 22-05-2021 11:18AM

ಪಡುಬಿದ್ರಿ : ಪಡುಬಿದ್ರಿ ಠಾಣೆಯ ಠಾಣಾಧಿಕಾರಿ ಸಹಿತ ೧೦ ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು, ಠಾಣೆಯನ್ನು ಪಕ್ಕದ ಬೋರ್ಡ್ ಶಾಲೆಗೆ ಸ್ಥಳಾಂತರಿಸಲಾಗಿದೆ.

ಪಡುಬಿದ್ರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣಾಧಿಕಾರಿ ದಿಲೀಪ್ ಸಹಿತ 10 ಪೊಲೀಸರಿಗೆ ಕೊರೊನಾ ಅಂಟಿಕೊಂಡಿದ್ದು, ಸದ್ಯ ಅವರೆಲ್ಲರೂ ಕ್ವಾರಂಟೈನ್‌ನಲ್ಲಿದ್ದಾರೆ. ಈ ಹಿನ್ನೆಲೆ ಪಡುಬಿದ್ರಿ ಪೊಲೀಸ್ ಠಾಣೆಯನ್ನು 24 ಗಂಟೆಗಳ ಕಾಲ ಸೀಲ್ಡೌನ್ ಮಾಡಿ ಠಾಣೆಯನ್ನು ಪಡುಬಿದ್ರಿ ಬೋರ್ಡ್ ಶಾಲೆಗೆ ಸ್ಥಳಾಂತರಿಸಲಾಗಿದೆ.

ಸಿಬ್ಬಂದಿಯೊಬ್ಬರಿಗೆ ಜ್ವರ ಬಂದ ಹಿನ್ನೆಲೆಯಲ್ಲಿ  ಕೊವಿಡ್ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಬಂದಿತ್ತು. ಬಳಿಕ ಠಾಣೆಯ ಎಲ್ಲರಿಗೂ ಕೊವಿಡ್ ಪರೀಕ್ಷೆ ನಡೆಸಲಾಗಿದ್ದು, ಈ ಸಂದರ್ಭ ಎಸ್ಸೈ ಸಹಿತ 10 ಪೊಲೀಸರಿಗೆ ಕೊರೊನಾ ದೃಡಪಟ್ಟಿರುವುದಾಗಿ ತಿಳಿದು ಬಂದಿದೆ.

ಸರ್ಕಾರದ ವಿಶೇಷ ಸಹಕಾರ ಪ್ಯಾಕೇಜ್ ಗರೋಡಿ ಅರ್ಚಕರು ಹಾಗೂ ದರ್ಶನ ಪೂಜಾರಿಯವರಿಗೂ ನೀಡಬೇಕು : ಪ್ರವೀಣ್ ಎಂ ಪೂಜಾರಿ

Posted On: 21-05-2021 09:32PM

ಕರ್ನಾಟಕ ಸರಕಾರ ದೇವಾಲಯದ ಅರ್ಚಕರಿಗೆ ಹಾಗೂ ಇತರ ಕೆಲವು ವಿಶೇಷ ಪ್ಯಾಕೇಜ್ ಘೋಷಿಸಿದೆ.ಇದು ಅಭಿನಂದನಾರ್ಹ ನಿರ್ಧಾರ. ಅವಿಭಜಿತ ದಕ್ಷಿಣ ಕನ್ನಡ ಉಡುಪಿಯಾದ್ಯಂತ ಕೋಟಿ ಚೆನ್ನಯರ ಹಾಗೂ ಪರಿವಾರ ಶಕ್ತಿ ಆರಾಧನೆಯ ಪುಣ್ಯಸ್ಥಳವೆನಿಸಿದ ಗರೋಡಿ ಅರ್ಚಕರಿಗೆ ,ಬೈದೇರುಗಳ ದರ್ಶನ ಪೂಜಾರಿಯವರಿಗೆ ಯಾವುದೇ ಸಹಕಾರವನ್ನು ಪ್ರಕಟಿಸದಿರುವುದನ್ನು ಉಡುಪಿ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಖಂಡಿಸಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಯ ಮಂತ್ರಿಯಾದ ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಗರೋಡಿಯ ಬಗೆಗೆ ಸ್ಪಷ್ಟ ತಿಳುವಳಿಕೆ ಇದೆ. ಕಳೆದ ಬಾರಿಯೂ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಈ ಕುರಿತಂತೆ ಮನವಿ ಮಾಡಿದ್ದರೂ ಸರ್ಕಾರ ಯಾವುದೇ ಸವಲತ್ತನ್ನು ನೀಡಲಿಲ್ಲ. ಇಂತಹ ತಾರತಮ್ಯ ನೀತಿ ಸಲ್ಲದು. ಸಮಾರು 230 ಕ್ಕಿಂತಲೂ ಹೆಚ್ಚು ಗರೋಡಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಅರ್ಚಕರಾಗಲಿ,ಬೈದೇರುಗಳ ದರ್ಶನ ಪೂಜಾರಿಯವರಾಗಲಿ ಸಾಂಪ್ರದಾಯಿಕವಾದ ಕೆಲವೊಂದು ಕಟ್ಟುಪಾಡುಗಳಿಗೆ ಒಳಪಟ್ಟು ಕೃಷಿ, ಇನ್ನಿತರ ಕೆಲವೊಂದು ಸೀಮಿತ ವೃತ್ತಿಯನ್ನು ಮಾತ್ರ ಮಾಡಬಹುದಾಗಿದೆ.ಇವರಲ್ಲಿ ಬಹುತೇಕ ಮಂದಿ ಮೂಲತಃ ಬಡತನ ಹಾಗೂ ವಯೋಸಹಜ ಆರೋಗ್ಯ ಇನ್ನಿತರ ಸಮಸ್ಯೆಗಳಲ್ಲಿದ್ದಾರೆ.

ಕೊರೋನಾ ಸಮಸ್ಯೆಯಿಂದ ಕಳೆದ ವರ್ಷದಿಂದ ಕ್ಷೇತ್ರದಲ್ಲಿ ಸಂಕ್ರಮಣ ಪೂಜೆ, ನೇಮೋತ್ಸವ, ಇನ್ನಿತರ ಸೇವಾ ಕಾರ್ಯವೆಲ್ಲವೂ ಸಾಂಕೇತಿಕವಾಗಿ ನಡೆಯುತ್ತಿದೆ ವಿನಹ ಸಮಸ್ತ ಗರೋಡಿಗಳು ಯಾವುದೇ ಆರ್ಥಿಕ ಮೂಲಗಳಿಲ್ಲದ ಸ್ಥಿತಿಯಲ್ಲಿದೆ. ಆದರೂ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ನೀತಿಯನ್ನು ಅನುಸರಿಸುತ್ತಿರುವುದು ಖೇಧಕರ. ಪರಮಪೂಜ್ಯ ಕೋಟಿಚೆನ್ನಯರ ಗರೋಡಿಯ ಅಗಾಧ ಮಹಿಮೆ ಮತ್ತು ಹಿನ್ನೆಲೆಯ ಬಗೆಗೆ ತಿಳುವಳಿಕೆಯುಳ್ಳ ಗೌರವಾನ್ವಿತ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕರಾವಳಿಯ ಶಾಸಕರು ತೀವ್ರ ಸಮಸ್ಯೆ ಅನುಭವಿಸುತ್ತಿರುವ ಗರೋಡಿ ಪೂಪೂಜನೆಯವರಿಗೆ ಮತ್ತು ಬೈದೇರುಗಳ ದರ್ಶನ ಪೂಜಾರಿಯವರಿಗೆ ಈ ಕೋವಿಡ್ ಸಂದರ್ಭದಲ್ಲಿ ಅರ್ಥಿಕ ಸಹಕಾರ ನೀಡುವಲ್ಲಿ ಪ್ರಯತ್ನಿಸುವಂತೆ ವಿನಂತಿಸುತ್ತೇವೆ.

ಪದೇ ಪದೇ ನಿರ್ಲಕ್ಷ್ಯ ಧೋರಣೆಯಿಂದ ಜನಪ್ರತಿನಿಧಿಗಳಿಗೆ ಮುಂದಿನ ದಿನಗಳಲ್ಲಿ ಹಿನ್ನಡೆ ಆಗುವ ಬದಲು ಇಂದಿನ ತುರ್ತು ಅಗತ್ಯದ ಸಂದರ್ಭದಲ್ಲಿ ಸಹಕರಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ಪ್ರವೀಣ್ ಎಂ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುರ್ತು ಚಿಕಿತ್ಸೆಗೆ ಸಾಗಿಸಲು ಅಂಬುಲೆನ್ಸ್ ಸೌಲಭ್ಯ ಇಲ್ಲದ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ

Posted On: 21-05-2021 12:39PM

ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಸರಕಾರಿ ಗುಡ್ಡೆಯಲ್ಲಿ ಇರುವ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಆರೋಗ್ಯ ಸೇವೆಗಾಗಿ ಸರಕಾರಿ ಅಂಬುಲೆನ್ಸ್ ಸೌಲಭ್ಯ ಇಲ್ಲ.

ತನ್ನ ಕಾರ್ಯ ವ್ಯಾಪ್ತಿಯ ಕಟಪಾಡಿ ಏಣಗುಡ್ಡೆ, ಮೂಡಬೆಟ್ಟು, ಮಟ್ಟು, ಕುರ್ಕಾಲು, ಕೋಟೆ, ಪಿತ್ರೋಡಿ, ಬೊಳ್ಜೆ, ಗುಡ್ಡೆಯಂಗಡಿ ಸಹಿತ 8 ಉಪ ಆರೋಗ್ಯ ಕೇಂದ್ರಗಳನ್ನು ಹೊಂದಿರುವ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರವು ಸುಮಾರು 34 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುತ್ತದೆ. ಬಹುತೇಕ ಗ್ರಾಮೀಣ ಪ್ರದೇಶದಲ್ಲಿಯೇ ಆರೋಗ್ಯ ಸೇವೆಯನ್ನು ನೀಡುತ್ತಿರುವ ಈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಗರ್ಭಿಣಿಯರು, ಕೋವಿಡ್ ಸೋಂಕು ದೃಢಪಟ್ಟವರ ಸುರಕ್ಷತೆಯ ದೃಷ್ಟಿಯಿಂದ ರೋಗ ಲಕ್ಷಣ ಇರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಲು ಹಾಗೂ ಆಕ್ಸಿಜನ್ ಸ್ಯಾಚುರೇಶನ್ ಲೆವೆಲ್ 94 ಕ್ಕಿಂತ ಕಡಿಮೆ ಬಂದವರನ್ನು ತಕ್ಷಣದಲ್ಲಿ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳುವ ಸಹಿತ ತುರ್ತು ರಕ್ಷಣೆಗಾಗಿ ಅಂಬುಲೆನ್ಸ್‍ಗೆ ಮೊರೆ ಹೋಗಬೇಕಾದ್ದು, ಅನಿವಾರ್ಯವಾಗುತ್ತದೆ. ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲೂ ಅಂಬುಲೆನ್ಸ್ ಉಪಯೋಗಿ ಹಾಗೂ ಸುರಕ್ಷಿತ.

ಇಲ್ಲಿ ಮಾತ್ರ ರಿಕ್ಷಾ ಅಥವಾ ಖಾಸಗಿ ವಾಹನಗಳನ್ನು ಬಳಸಿಕೊಂಡು ಆರೋಗ್ಯ ಸೇವೆಯನ್ನು ನೀಡಬೇಕಾದಂತಹ ಅನಿವಾರ್ಯತೆ ಕಂಡು ಬರುತ್ತಿದೆ. ಜೊತೆಗೆ ಕೋವಿಡ್ ಲಸಿಕೆ ಸಹಿತ ಇತರೇ ಲಸಿಕೆ, ಇಂಜೆಕ್ಷನ್ ಸಂದರ್ಭ 8 ಆರೋಗ್ಯ ಉಪಕೇಂದ್ರದ ಆರೋಗ್ಯ ಸಹಾಯಕಿಯರು ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ತೆಗೆದುಕೊಂಡು ಹೋಗಿ ಆಯಾ ಗ್ರಾಮ ಮಟ್ಟದಲ್ಲಿ ಸೇವೆಯನ್ನು ನೀಡಬೇಕಾದಂತಹ ಪರಿಸ್ಥಿತಿ ಇದೆ. ಒಂದು ವೇಳೆ ಅಂಬುಲೆನ್ಸ್ ಇದ್ದಲ್ಲಿ ಆಯಾ ಉಪಕೆಂದ್ರಗಳಿಗೆ ಔಷಧಿ, ಸಿಬಂದಿಗಳನ್ನು ತುರ್ತಾಗಿ ತಲುಪಿಸುವಲ್ಲಿಯೂ ಸಹಕಾರಿಯಾಗಬಲ್ಲುದು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಜನಜಾಗೃತಿ ಮೂಡಿಸುವಲ್ಲಿಯೂ ಪ್ರಯೋಜನಕಾರಿಯಾಗಲಿದೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೈನೀ ಕ್ರಿಸ್ತಬೆಲ್ ತುರ್ತಾಗಿ ಅವಶ್ಯಕತೆ ಇದ್ದಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಅಂಬುಲೆನ್ಸ್ ಬಳಕೆಗೆ ಅವಕಾಶ ಇದೆ. ಕೇಂದ್ರಕ್ಕೆ ಸುಸಜ್ಜಿತ ಸರಕಾರಿ ಅಂಬುಲೆನ್ಸ್ ವ್ಯವಸ್ಥೆಯಾದಲ್ಲಿ ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿ ಆರೋಗ್ಯ ಸೇವೆಯನ್ನು ಮತ್ತಷ್ಟು ನೀಡಲು ಸಹಕಾರಿಯಾಗಲಿದೆ ಎಂದರು.