Updated News From Kaup

ಜಿಲ್ಲೆಯ ಕರಕುಶಲ, ವೈಶಿಷ್ಠ ಪೂರ್ಣ ವಸ್ತುಗಳ ರಫ್ತು ಕುರಿತು ನೀಲ ನಕಾಶೆ : ಜಿಲ್ಲಾಧಿಕಾರಿ ಕೂರ್ಮಾರಾವ್

Thumbnail
Posted On: 27 Sep 2021, 11:24 PM

ಉಡುಪಿ : ಜಿಲ್ಲೆಯಲ್ಲಿ ದೊರೆಯುವ ಮತ್ತು ಉತ್ಪಾದಿಸುವ ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಸೇರಿದಂತೆ ವಿವಿಧ ವೈಶಿಷ್ಠ ಪೂರ್ಣ ವಸ್ತುಗಳನ್ನು ಬ್ರಾಂಡಿಂಗ್ ಮಾಡಿ, ರಫ್ತು ಮಾಡಲು ನೀಲ ನಕಾಶೆ ಸಿದ್ದಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ, ವಾಣಿಜ್ಯ ಸಪ್ತಾಹದ ಅಂಗವಾಗಿ ಮಣಿಪಾಲದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ರಫ್ತುದಾರರ ಸಮಾವೇಶ ಕಾರ್ಯಕ್ರಮವು ಉದ್ಘಾಟಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಕ್ಯಾಶ್ಯೂವನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ ಆದರೆ ಜಿಲ್ಲೆಯಲ್ಲಿ ಕ್ಯಾಶ್ಯೂ ಹೊರತು ಪಡಿಸಿ ವಿವಿಧ ಕರಕುಶಲ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು ಇದರೊಂದಿಗೆ ಮರೈನ್ ಉತ್ಪನ್ನಗಳನ್ನೂ ಸಹ ರಫ್ತು ಮಾಡಲು ಉದ್ದಿಮೆದಾರರು ಪ್ರಯತ್ನಿಸಬೇಕು, ಜಿಲ್ಲೆಯ ವೈಶಿಷ್ಠ ಪೂರ್ಣ ಉತ್ಪನ್ನಗಳನ್ನು ಬ್ರಾಂಡಿಂಗ್ ಮಾಡಲು ಮತ್ತು ಅವುಗಳನ್ನು ರಫ್ತು ಮಾಡಲು ನೀಲಿ ನಕಾಶೆ ಸಿದ್ದಪಡಿಸಲಾಗುವುದು ಎಂದರು. ಈ ಕಾರ್ಯಗಾರದ ಮೂಲಕ ರಫ್ತು ಮಾಡುವ ಕಾರ್ಯದಲ್ಲಿ ಅಗತ್ಯವಾಗಿ ಬೇಕಿರುವ ಅನುಮತಿ ಮತ್ತಿತರ ಅವಶ್ಯಕತೆಗಳ ಕುರಿತ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವು ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಸಂಬಂದಿಸಿದ ಸಮಸ್ಯೆಗಳನ್ನು ಸಿಂಗಲ್ ವಿಂಡೋ ವ್ಯವಸ್ಥೆ ಮೂಲಕ ಬಗೆಹರಿಸಲಾಗುತ್ತಿದೆ ಎಂದರು. ಕೆನರಾ ಬ್ಯಾಂಕ್ ಮುಖ್ಯ ಪ್ರಬಂದಕ ರಾಮಾ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಕ್ಯಾಶ್ಯೂ ಮತ್ತು ಮೀನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿದ್ದು, ರಫ್ತು ಮಾಡಲು ಇತರ ಸಂಪನ್ಮೂಲಗಳೂ ಸಹ ಜಿಲ್ಲೆಯಲ್ಲಿದ್ದು ಉತ್ತಮ ರಸ್ತೆ, ಜಲ ಮತ್ತು ವಾಯು ಸಾರಿಗೆ ವ್ಯವಸ್ಥೆ ಕೂಡ ಇದ್ದು, ಉದ್ದಿಮೆದಾರರು ಇದರ ಪ್ರಯೋಜನ ಪಡೆಯಬೇಕು, ಕೆನರಾ ಬ್ಯಾಂಕ್ ವತಿಯಿಂದ ರಫ್ತು ಉದ್ದಿಮೆಗಳಿಗೆ ಎಲ್ಲಾ ರೀತಿಯ ನೆರವನ್ನೂ ನೀಡಲಾಗುವುದು ಎಂದರು. ಕರ್ನಾಟಕ ತಾಂತ್ರಿಕ ಸಲಹಾ ಸೇವೆಗಳ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಉಡುಪಿ ನೋಡೆಲ್ ಅಧಿಕಾರಿ ರಮಾನಂದ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಕ್ಯಾಶ್ಯೂ ಉತ್ಪಾದಕ ಸಂಘದ ಅಧ್ಯಕ್ಷ ಸಂತೋಷ್ ಡಿಸಿಲ್ವಾ, ಉಡುಪಿ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕೃಷ್ಣರಾವ್ ಕೊಡಂಚ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಬಾಳಿಗ ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಸ್ವಾಗತಿಸಿದರು.

ಉಡುಪಿ ಪ್ರವಾಸಿಗರ ಆಕರ್ಷಣೀಯ ಜಿಲ್ಲೆಯಾಗಬೇಕು: ರಘುಪತಿ ಭಟ್

Thumbnail
Posted On: 27 Sep 2021, 11:18 PM

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲವಾದ ಅವಕಾಶಗಳಿದ್ದು, ಇವುಗಳನ್ನು ಬಳಿಸಿಕೊಂಡು, ವಿವಿಧ ಪ್ರವಾಸಿ ಯೋಜನೆಗಳನ್ನು ಅಭಿವೃದಿಗೊಳಿಸಿ ಜಿಲ್ಲೆಯನ್ನು ಪ್ರವಾಸೀಗರ ಆಕರ್ಷಣೀಯ ತಾಣವನ್ನಾಗಿ ಮಾಡಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು. ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ದಿ ಸಮಿತಿ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಇವರ ಸಹಯೋಗದೊಂದಿಗೆ ‘ಸುಸ್ಥಿರ ಹಾಗೂ ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ’ ಎಂಬ ಸಂದೇಶದೊಂದಿಗೆ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋವಿಡ್‌ನಿಂದಾಗಿ ಪ್ರವಾಸೋದ್ಯಮ ಕ್ಷೇತ್ರವೂ ಸಹ ನಷ್ಠ ಅನುಭವಿಸಿದೆ ಆದರೆ ಪ್ರಸ್ತುತ ಪ್ರವಾಸಿಗರು ಪ್ರವಾಸಿ ಕ್ಷೇತ್ರಗಳಿಗೆ ಆಗಮಿಸುತ್ತಿದ್ದು, ಉಡುಪಿಯಲ್ಲಿ ಬೀಚ್ ಟೂರಿಸಂ, ಟೆಂಪಲ್ ಟೂರಿಸಂ ಮತ್ತು ಹೆಲ್ತ್ ಟೂರಿಸಂಗೆ ವಿಫುಲವಾದ ಅವಕಾಶಗಳಿವೆ, ಜಿಲ್ಲೆಯಲ್ಲಿನ ಹೊಸ ಪ್ರವಾಸಿ ತಾಣಗಳನ್ನು ಅಭಿವೃದ್ದಿಪಡಿಸಲು ಇದು ಸಕಾಲ. ಇಂತಹ ತಾಣಗಳನ್ನು ಮುನ್ನೆಲೆಗೆ ತರಬೇಕಿದೆ ಎಂದರು. ಜಿಲ್ಲೆಯಲ್ಲಿ ಪ್ರವಾಸೋಧ್ಯಮವನ್ನು ಅಭಿವೃದ್ದಿಪಡಿಸಲು ಟೂರಿಸಂ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಈ ಕಾರ್ಯಪಡೆಯ ಸಭೆಗಳನ್ನು ನಡೆಸಿ, ಸಭೆಯ ನಿರ್ಣಯಗಳ ಕುರಿತು ಸರಕಾರಕ್ಕೆ ವರದಿಯನ್ನು ಕಳುಹಿಸಬೇಕು ಎಂದು ಶಾಸಕರು ಹೇಳಿದರು. ಕಾಪು ಬೀಚ್‌ನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪ್ರವಾಸಿ ಮಿತ್ರ ಲಕ್ಷ್ಮೀ ನಾರಾಯಣ ರಾವ್ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದು, ವೈವಿಧ್ಯತೆಯಿಂದ ಕೂಡಿರುವ ಹಲವು ತಾಣಗಳಿವೆ, ಇವುಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ದಿಗೊಳಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸ್ಥಳೀಯ ಉತ್ಪನ್ನಗಳ ಬಗ್ಗೆ ಪ್ರದರ್ಶನ ಏರ್ಪಡಿಸಬೇಕು, ಹೋಂಸ್ಟೇ ಮೂಲಕ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಿದ್ದು, ಹೋಂ ಸ್ಟೇ ಮಾಡಲು ಎನ್.ಓ.ಸಿ ಅಗತ್ಯವಿದ್ದು ಇದರಲ್ಲಿನ ಷರತ್ತುಗಳನ್ನು ಸರಳೀಕರಣಗೊಳಿಸಲಾಗುವುದು. ಆತಿಥ್ಯ ವ್ಯವಸ್ಥೆಗೆ ಸಂಬಂದಿಸಿದಂತೆ ಉಡುಪಿ ಪ್ರಸಿದ್ದಿ ಹೊಂದಿದ್ದು, ಈ ಕ್ಷೇತ್ರದದಲ್ಲಿನ ಪರಿಣಿತರ ಕಾರ್ಯಾಗಾರ ಏರ್ಪಡಿಸಲಾಗುವುದು ಉಡುಪಿ ಜಿಲ್ಲೆಗೆ ಆಗಮಿಸಿದ ಪ್ರವಾಸಿಗರು ಇಲ್ಲಿಂದ ತಮ್ಮ ಜೀವನದ ಅತ್ಯುತ್ತಮ ನೆನಪುಗಳೊಂದಿಗೆ ಮರಳುವಂತೆ ಪ್ರವಾಸಿ ಸೌಲಭ್ಯಗಳನ್ನು ಒದಗಿಸಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಕೇರಳ ಮತ್ತು ಗೋವಾ ಮಧ್ಯೆ ಇರುವ ಕರ್ನಾಟಕದ ಕರಾವಳಿಯಲ್ಲಿ 100 ಕ್ಕೂ ಹೆಚ್ಚು ಪ್ರವಾಸಿ ತಾಣಗಳಿವೆ. ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಜೊತೆಗೆ ಇಲ್ಲಿನ ಪಾರಂಪರಿಕತೆಯನ್ನೂ ಪರಿಚಯಿಸುವ ಅಗತ್ಯವಿದೆ. ಇಲ್ಲಿನ ಕರಕುಶಲ ವಸ್ತುಗಳು ಮತ್ತು ಸಂಸ್ಕೃತಿ ಕುರಿತು ಹೋಟೆಲ್ ರೆಸಾರ್ಟ್ಗಳಲ್ಲಿ ಪ್ರದರ್ಶನ ಮಾಹಿತಿ ಇರಬೇಕು. ಪ್ರಮುಖವಾಗಿ ಎಲ್ಲಡೆ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ, ಜಿಲ್ಲಾ ಪಂಚಾಯತ್ ವತಿಯಿಂದ ಈಗಾಗಲೇ ಕಸ ಹಾಕುವ ಜಾಗವನ್ನು ಗುರುತಿಸಿ ಅಲ್ಲಿ ಸ್ವಚ್ಛತೆ ಮೂಡಿಸಲಾಗುತ್ತಿದೆ, ಜಿಲ್ಲೆಯನ್ನು ಬ್ಲಾಕ್ ಸ್ಪಾಟ್ ಮುಕ್ತ ಮಾಡಲಾಗುತ್ತಿದೆ ಇದಕ್ಕೆ ಸಾರ್ವಜನಿಕರ ಸಹಕಾರ ಮತ್ತು ಕೊಡುಗೆ ಅತ್ಯಗತ್ಯ ಎಂದರು. ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿ, ಅಲ್ಲಿನ ಪ್ರವಾಸಿ ತಾಣಗಳು ಮತ್ತು ಅವುಗಳ ಅಭಿವೃದ್ದಿ ಕುರಿತು ಪ್ರವಾಸ ಕಥನ ಉಪನ್ಯಾಸ ನೀಡಿದ ಕೆ.ಎಂ.ಸಿ. ಮಣಿಪಾಲದ ಮೂಳೆ ವಿಭಾಗದ ಮುಖ್ಯಸ್ಥ ಮತ್ತು ಉಪನ್ಯಾಸಕ ಡಾ.ಕಿರಣ್ ಕೆವಿ ಆಚಾರ್ಯ ಮಾತನಾಡಿ, ಸ್ಥಳೀಯ ಪ್ರವಾಸಿ ತಾಣಗಳನ್ನು, ವಿದೇಶಗಳ ರೀತಿಯಲ್ಲಿ, ವಿವಿಧ ಬಗೆಯ ಪ್ರವಾಸಿ ಸ್ಥಳಗಳನ್ನಾಗಿ ಅಭಿವೃದ್ದಿಗೊಳಿಸಬಹುದಾದ ಕುರಿತು ಮಾಹಿತಿ ನೀಡಿದರು. ನಗರಸಭೆ ಆಯುಕ್ತೆ ಸುಮಿತ್ರಾ ನಾಯಕ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಪೌರಾಯುಕ್ತ ಉದಯ್ ಶೆಟ್ಟಿ, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ ತಂಡದಿಂದ ಕಟಪಾಡಿಯ ಕಾರುಣ್ಯ ವೃದ್ಧಾಶ್ರಮ ಭೇಟಿ - ಉಚಿತ ಆರೋಗ್ಯ ತಪಾಸಣೆ, ಔಷಧಿ ವಿತರಣೆ

Thumbnail
Posted On: 26 Sep 2021, 10:50 PM

ಕಾಪು : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಇಂದು ಕಟಪಾಡಿಯ ಕಾರುಣ್ಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಉಚಿತ ಆರೋಗ್ಯ ತಪಾಸಣೆ ನಡೆಸಿ ಔಷಧಿಯನ್ನು ನೀಡಲಾಯಿತು. ಈ ಕಾರ್ಯಕ್ರಮದ ಜೊತೆಗೆ ಮಲ್ಪೆಯ ಸುಕೇತ್ ಕುಲಾಲ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಆಸರೆ ತಂಡದ ಡಾ. ಕೀರ್ತಿ ಪಾಲನ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಆಸರೆ ತಂಡದ ಕೋಶಾಧಿಕಾರಿ ಜಗದೀಶ್ ಬಂಟಕಲ್, ಸದಸ್ಯರಾದ ಬೇಬಿ ಶೆಟ್ಟಿ, ಮೋಕ್ಷ ಪಾಲನ್, ಶ್ಲೋಕ ಪಾಲನ್ ಉಪಸ್ಥಿತರಿದ್ದರು. ಕಾರುಣ್ಯ ವೃದ್ಧಾಶ್ರಮದ ವ್ಯವಸ್ಥಾಪಕರಾದ ಕುಮಾರ್ ಅವರು ಸುಕೇತ್ ಕುಲಾಲ್ ಅವರಿಗೆ ಶುಭ ಹಾರೈಸಿದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ ಹಾಗೂ ಬಹುಮಾನ ವಿತರಣೆ

Thumbnail
Posted On: 26 Sep 2021, 10:35 PM

ಶಿರ್ವ: ಇದು ಸ್ಪರ್ಧಾತ್ಮಕ ಜಗತ್ತು ಎಂದು ನಮಗೆಲ್ಲರಿಗೂ ತಿಳಿದಿದೆ ಇಂದಿನ ಯುವಪೀಳಿಗೆ ಗಳು ಬದಲಾಗುತ್ತಿರುವ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಾ ಗತಕಾಲದ ವೈಭವಗಳ ಮೌಲ್ಯಗಳನ್ನು, ಜೀವನದ ಪಾಠಗಳನ್ನು ತಿಳಿದು ಮುಂದಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ವಿದ್ಯೆ ಕಲಿಸಿದ ಗುರುಗಳಿಗೆ ಮತ್ತು ಸಂಸ್ಥೆಗಳಿಗೆ ತಮ್ಮ ಅಮೂಲ್ಯವಾದ ಕೊಡುಗೆಗಳನ್ನು ನೀಡಬೇಕೆಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಬಹುಮಾನ ವಿತರಣೆ ಹಾಗೂ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸಂತ ಮೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹಾಗೂ ಸಂತ ಮೇರಿ ಪದವಿ ಕಾಲೇಜಿನ ಪ್ರಥಮ ಬ್ಯಾಚಿನ ಹಳೆ ವಿದ್ಯಾರ್ಥಿನಿ ಐರಿನ್ ಮೆಂಡೋನ್ಸಾ ಕಳೆದ ವರ್ಷ ಮಂಗಳೂರು ವಿಶ್ವವಿದ್ಯಾನಿಲಯದ ರ‍್ಯಾಂಕ್ ಪಡೆದ ಸತ್ಯ ಸುಬ್ರಹ್ಮಣ್ಯ ವಿ.ಎಸ್ (ಬಿ.ಸಿ.ಎ) 4ನೇ ರ‍್ಯಾಂಕ್, ಸ್ನಾತಕೋತ್ತರ ವಾಣಿಜ್ಯದಲ್ಲಿ 9ನೇ ರ‍್ಯಾಂಕ್ ಪಡೆದ ಲವಿಟಾ ಮೊರಾಸ್ ಹಾಗೂ ಸಾಧನೆ ಮಾಡಿದ ಅಧ್ಯಾಪಕ ವೃಂದದ ಅವರನ್ನು ಕಾಲೇಜಿನ ವತಿಯಿಂದ ಸಮ್ಮಾನಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಶ್ವನಾಥ್ ರವರು ಕಾಲೇಜಿನ ಸರ್ವತೋಮುಖ ಬೆಳವಣಿಗಾಗಿ ಸಂಘದ ವತಿಯಿಂದ ತಮ್ಮ ಅಮೂಲ್ಯವಾದ ಕೊಡುಗೆಗಳನ್ನು ನಗದು ಮೂಲಕ ಕಾಲೇಜಿನ ಸಂಚಾಲಕರು ಹಾಗೂ ಪ್ರಾಂಶುಪಾಲರಿಗೆ ಹಸ್ತಾಂತರಿಸಿ ವಿದ್ಯೆ ಕಳಿಸಿದ ಸಂಸ್ಥೆಗಳಿಗೆ ತಾವು ಸದಾ ಋಣಿ, ಕಾಲೇಜಿನ ಕೀರ್ತಿ ಬೆಳೆಸಿದ ರ‍್ಯಾಂಕ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಇನ್ನು ತಮ್ಮಿಂದ ಆಗುವಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸಲು ಕಾಲೇಜಿನ ವತಿಯಿಂದ ಅನುವುಮಾಡಿಕೊಡಬೇಕು ಎಂದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೇನ್ನಿಸ್ ಅಲೆಕ್ಸಾಂಡರ್ ಡೇಸರವರು ನವೀಕೃತಗೊಂಡ ಸುಸಜ್ಜಿತ ಕಂಪ್ಯೂಟರುಗಳನ್ನು ಉದ್ಘಾಟಿಸಿ ಆಶೀರ್ವದಿಸಿದ್ದರು. ಕಾಲೇಜಿನ ದೊಡ್ಡ ಆಸ್ತಿ ಎಂದರೆ ಅದು ವಿದ್ಯಾರ್ಥಿಗಳೇ. ಎಲ್ಲಾ ವಿದ್ಯಾರ್ಥಿಗಳು ಅವರವರ ವಿವಿಧ ಚಟುವಟಿಕೆಗಳಲ್ಲಿ ಪ್ರತಿಭಾವಂತರಾಗಿರುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಬೆಳವಣಿಗೆಗಳಲ್ಲಿ ಶಿಕ್ಷಕರು, ಹೆತ್ತವರು ಹಾಗೂ ಪೋಷಕರ ಪಾತ್ರ ಮಹತ್ವದಾಗಿದೆ. ಹಳೆವಿದ್ಯಾರ್ಥಿ ಸಂಘ ವತಿಯಿಂದ ಕಲ್ಪಿಸುವ ಪ್ರತಿಯೊಂದು ಕೊಡುಗೆಯು ಶಿಕ್ಷಣ ಸಂಸ್ಥೆಯ ಬೆಳವಣಿಗೆ ಹಾಗೂ ಅವರ ಪ್ರೀತಿಪಾತ್ರ ದೊಡ್ಡದಾಗಿದೆ, ಎಲ್ಲರಿಗೂ ಒಳಿತಾಗಲಿ ಈ ಕೋವಿಡ್ ಅಂತ ಸಂಕಷ್ಟಗಳು ದೂರವಾಗಿ ಎಲ್ಲರೂ ನೆಮ್ಮದಿಯಿಂದ ಸುಖ ಜೀವನ ನಡೆಸಲಿ ಎಂದು ಹಾರೈಸಿದರು. ಕಾಲೇಜಿನ ವಾರ್ಷಿಕ ಚಟುವಟಿಕೆಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ವಾಚಿಸಿದರು. ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಬಗ್ಗೆ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಜಗದೀಶ್ ಆಚಾರ್ಯ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸನ್ಮಾನ ಪಡೆದ ವಿದ್ಯಾರ್ಥಿಗಳು ಮಾತನಾಡಿದರು. ಶೈಕ್ಷಣಿಕ ಬಹುಮಾನಗಳ ಪಟ್ಟಿಯನ್ನು ಶ್ರೀ ವಿಠಲ್ ನಾಯಕ್ ರವರು ವಾಚಿಸಿದರು. ದತ್ತಿ ಬಹುಮಾನಗಳ ಪಟ್ಟಿಯನ್ನು ದಿವ್ಯಶ್ರೀ ರವರು ವಾಚಿಸಿದರು.ಕ್ರೀಡೆ ಮತ್ತು ಆಟಗಳ ಬಹುಮಾನಗಳ ಪಟ್ಟಿಯನ್ನು ಜೆಫ್ ಡಿಸೋಜಾ ವಾಚಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಮುಖ್ಯ ಅತಿಥಿಗಳು ಹಾಗೂ ಅಧ್ಯಕ್ಷರು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕಚೇರಿ ಅಧೀಕ್ಷಕಿ ಡೊರಿನ್ ಡಿ'ಸಿಲ್ವ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಜೆಸಿಂತಾ ಡಿಸೋಜ, ಆಡಳಿತ ಮಂಡಳಿಯ ಸದಸ್ಯ ಲೀನಾ ಮಚಾದೊ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶೈಲ ವಿಯೋಲ ಕ್ಯಾಸ್ಟಲಿನೋ ಹೆತ್ತವರು ಹಾಗೂ ಪೋಷಕರು, ಶಿಕ್ಷಕ ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಕು.ಯಶೋದಾ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ವಿದ್ಯಾರ್ಥಿ ನಾಯಕಿ ದಾಕ್ಷಾಯಿಣಿ ವಂದಿಸಿದರು. ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.

ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ, ಮಹಿಳಾ ವೇದಿಕೆ ಅಶೋಕನಗರ

Thumbnail
Posted On: 26 Sep 2021, 10:25 PM

ಮಂಗಳೂರು : ರಾತ್ರಿ 10 ಗಂಟೆಗೆಯಿಂದ ಮಧ್ಯರಾತ್ರಿ 3.15 ರವರೆಗೂ ಉಬ್ಬು ( Humps ) ಗಳಿಗೆ ಪೈಂಟ್ ಕೊಡುವ ಕೆಲಸ ನಿನ್ನೆ ಬಿರುವೆರ್ ಕುಡ್ಲ ಮಹಿಳಾ ವೇದಿಕೆ ಅಶೋಕನಗರ ವತಿಯಿಂದ ಲೇಡಿಹಿಲ್ ನಿಂದ ಉರ್ವಸ್ಟೋರ್ ವರೆಗೆ ನಡೆಯಿತು. ಬಿರುವೆರ್ ಕುಡ್ಲ ಮಹಿಳಾ ವೇದಿಕೆ ಅಶೋಕ ನಗರ ವಲಯದ ಎಲ್ಲ ಮಹಿಳೆಯರು ಯಾವುದೇ ಕೆಲಸಕ್ಕೆ ಹಿಂಜರಿಯದೆ ಪ್ರತಿಯೊಂದು ಕೆಲಸಕ್ಕೂ ತುಂಬ ಉತ್ಸಾಹದಿಂದ ಭಾಗವಹಿಸಿದ್ದರು. M S Enterprises ಮಾಲೀಕರಾದ ಸಚಿನ್ ಹಾಗೂ ಉರ್ವ ಆರಕ್ಷಕ ಠಾಣೆ ಸಿಬ್ಬಂದಿ ವರ್ಗದವರು ‌ಸಹಕರಿಸಿದ್ದರು. ಈ ಕೆಲಸದಲ್ಲಿ ಸುಮಾರು 15 ಮಹಿಳಾ ಸದಸ್ಯರು ಹಾಜರಿದ್ದು, ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ, ಬಿರುವೆರ್ ಕುಡ್ಲ ಕೇಂದ್ರೀಯ ಸಮಿತಿ ಸದಸ್ಯರಾದ ಸುನಿಲ್ ಮತ್ತು ಶರಣ್ ಕೂಡ ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರ ; ಪುರಸಭಾ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ರಚನೆಗೆ ಚಾಲನೆ

Thumbnail
Posted On: 26 Sep 2021, 09:22 PM

ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಪೂರ್ವ ತಯಾರಿಗಾಗಿ ಪುರಸಭಾ ವ್ಯಾಪ್ತಿಯ ೨೩ ವಾರ್ಡುಗಳ ವಾರ್ಡ್ ಸಮಿತಿ ರಚನೆಗೆ ಸೆ. ೨೬ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಅಮ್ಮನ ಪ್ರೇರಣೆಯಂತೆ ಪ್ರತಿಯೊಬ್ಬ ಭಕ್ತರು ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ಪ್ರತೀ ಮನೆಗೆ ಜೀರ್ಣೋದ್ದಾರದ ಸುದ್ದಿ ತಲುಪಿಸಲು ಕಾಪು ಪುರಸಭಾ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ಮತ್ತು ಕಾಪು ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮಗಳಲ್ಲಿಯೂ ಗ್ರಾಮ ಸಮಿತಿಯನ್ನು ರಚನೆ ಮಾಡಲಾಗುವುದು. ಈ ಸಮಿತಿಯಲ್ಲಿ ಪ್ರತಿಯೊಬ್ಬ ಭಕ್ತರು ತಮ್ಮನ್ನು ತಾವು ತೊಡಗಿಸಿಕೊಂಡು ದೇಗುಲದ ಜೀರ್ಣೋದ್ಧಾರಕ್ಕೆ ತನು ಮನ ಧನದ ಸಹಕಾರ ನೀಡುವಂತೆ ಮನವಿ ಮಾಡಿದರು. ಕಾಪು ಪುರಸಭಾ ವ್ಯಾಪ್ತಿಯ ಗ್ರಾಮ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯಾ ಅವರ ಉಪಸ್ಥಿತಿಯಲ್ಲಿ ಮಲ್ಲಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಭಾರತ್ ನಗರ, ದಂಡತಿರ್ಥ, ಕಲ್ಯಾ ಮತ್ತು ಕೋತಲಕಟ್ಟೆ ವಾರ್ಡ್‌ಗಳಲ್ಲಿ ಸಮಿತಿ ರಚನೆ ನಡೆಸಲಾಯಿತು. ಕಾಪು ಶ್ರೀ ಹೊಸಮಾರಿಗುಡಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ, ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುರ್ಮೆ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಗೌರವ ಸಲಹೆಗಾರ ರತ್ನಾಕರ ಶೆಟ್ಟಿ ನಡಿಕೆರೆ, ಉಪಾಧ್ಯಕ್ಷರಾದ ಗಂಗಾಧರ ಸುವರ್ಣ, ಮಾಧವ ಪಾಲನ್, ಪ್ರಮುಖರಾದ ನಿರ್ಮಲ್ ಕುಮಾರ್ ಹೆಗ್ಡೆ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಹಾಗೂ ಅಭಿವೃದ್ಧಿ ಸಮಿತಿ ಮತ್ತು ವ್ಯವಸ್ಥಾಪನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಮೂಡುಬೆಳ್ಳೆ : ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃ ಶಕ್ತಿ ಹಾಗೂ ದುರ್ಗವಾಹಿನಿ ಘಟಕದ ವತಿಯಿಂದ ವನಮಹೋತ್ಸವ, ಭಗವಧ್ವಜ ಸ್ಥಾಪನೆ

Thumbnail
Posted On: 26 Sep 2021, 09:14 PM

ಕಾಪು : ವಿಶ್ವ ಹಿಂದೂ ಪರಿಷದ್, ಬಜರಂಗದಳ ಮತ್ತು ಮಾತೃ ಶಕ್ತಿ ಹಾಗೂ ದುರ್ಗವಾಹಿನಿ ಮೂಡುಬೆಳ್ಳೆ ಘಟಕ ವತಿಯಿಂದ ಕುಂತಳ ನಗರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಹಾಗೂ ಭಗವಧ್ವಜ ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ಕಟ್ಟಿಂಗೇರಿ ದೇವಸ್ಥಾನದ ಧರ್ಮದರ್ಶಿಗಳಾದ ದೇವದಾಸ್ ಹೆಬ್ಬಾರ್ ಹಾಗೂ ಕಾಪು ತಾಲೂಕು ಕಾರ್ಯವಾಹ ಸಚಿನ್ ಶೆಟ್ಟಿ ವಿ.ಹಿಂ.ಪ ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು, ಕಾಪು ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ಕುಮಾರ್ ಮೂಡುಬೆಳ್ಳೆ, ಶಿರ್ವ ವಿ.ಹಿಂ.ಪ ವಲಯ ಅಧ್ಯಕ್ಷರಾದ ವಿಖ್ಯಾತ್ ಭಟ್ ಮೂಡುಬೆಳ್ಳೆ ಹಾಗೂ ಬೆಳ್ಳೆ ಘಟಕದ ಅಧ್ಯಕ್ಷರಾದ ವಿಜೇತ್ ಭಟ್, ಸ್ಥಳೀಯ ಉದ್ಯಮಿ ಅಶೋಕ್ ಶೆಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಕಲಚೇತನ ಕಲಾವಿದ ಗಣೇಶ್ ಕುಲಾಲ್ ಪಂಜಿಮಾರ್ ಕೈ ಚಲಕದಿ ಮೂಡಿದ ಶಾಸಕ ಲಾಲಾಜಿ ಆರ್. ಮೆಂಡನ್ ಹಾಗೂ ಸಚಿವ ವಿ. ಸುನಿಲ್ ಕುಮಾರ್ ಚಿತ್ರ - ಹಸ್ತಾಂತರ

Thumbnail
Posted On: 26 Sep 2021, 12:28 PM

ಕಾಪು : ಕಲೆಗೆ ಬೆಲೆ ಕಟ್ಟಲಾಗದು, ಚಿತ್ರಕಲೆಯಲ್ಲಿ ಸಾಧನೆಗೈದ ಮುಂದಿನ ಯುವ ಮನಸ್ಸುಗಳಿಗೆ ಮಾದರಿಯಾದ ವಿಕಲಚೇತನ ಕಲಾವಿದ ಗಣೇಶ್ ಕುಲಾಲ್ ಪಂಜಿಮಾರ್ ಇವರ ಕೈ ಚಲಕದಲ್ಲಿ ಮೂಡಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹಾಗೂ ಕಾರ್ಕಳದ ಶಾಸಕರು ಹಾಗೂ ಸಚಿವರಾದ ವಿ ಸುನಿಲ್ ಕುಮಾರ್ ಅವರ ಚಿತ್ರವನ್ನ ಗಣೇಶ್ ಪಂಜಿಮಾರ್ ಅವರು ಅತಿಥಿ ಗಣ್ಯರ ಜೊತೆ ಅವರಿಗೆ ನೀಡಿದರು. ಈ ಸುಂದರ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕಾಪು ವಲಯದ ಕುಲಾಲ ಸಂಘದ ಅಧ್ಯಕ್ಷರು ಸಂದೀಪ್ ಬಂಗೇರ ಶಂಕರಪುರ, ಕಾಪು ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಲಾಲ್, ಸರ್ವಜ್ಞ ಆಸರೆ ಕಿರಣ ಬಳಗ ಇದರ ಸಂಚಾಲಕರು ಪ್ರಭಾಕರ್ ಕುಲಾಲ್ ಇನ್ನ, ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಸುಹಾಸ್ ಶೆಟ್ಟಿ, ಅವಿನಾಶ್ ಶೆಟ್ಟಿ, ಸುರೇಂದ್ರ ವರಂಗ, ಸಂದೇಶ್ ಕುಲಾಲ್, ಸಂದೀಪ್ ಕುಲಾಲ್ ಮಂಜರಪಲ್ಕೆ ಬೋಳ, ಪ್ರಭಾಕರ್ ಕುಲಾಲ್ ಬೇಲಾಡಿ ಉಪಸ್ಥಿತರಿದ್ದರು.

ತಂತ್ರಜ್ಞಾನದೊಂದಿಗೆ ಸಂಶೋಧನಾ ಮನಸ್ಥಿತಿ ಬೆಳೆಸಿ ಉತ್ತಮ ಉದ್ಯೋಗ ಪಡೆಯಿರಿ : ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್

Thumbnail
Posted On: 26 Sep 2021, 12:01 PM

ಮೂಡಬಿದ್ರಿ : ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಸರಿಯಾದ ಮಾಹಿತಿ ಮತ್ತು ವೃತ್ತಿ ಮಾರ್ಗದರ್ಶನವನ್ನುಪಡೆದು, ನಿರ್ದಿಷ್ಟ ಗುರಿ ಮತ್ತು ಧ್ಯೇಯವನ್ನು ತಲುಪಲು ಕಂಪ್ಯೂಟರ್ಗಳನ್ನು ಹೆಚ್ಚಾಗಿ ಬಳಸಿಕೊಂಡು ಸಮಾಜಕ್ಕೆ ಬೇಕಾಗುವ ತಂತ್ರಜ್ಞಾನವನ್ನು ರೂಪಿಸಿ, ಸಂಶೋಧನಾ ಮನಸ್ಥಿತಿ ಬೆಳೆಸಿಕೊಂಡು ಉತ್ತಮ ಉದ್ಯೋಗ ಪಡೆಯಬೇಕು. ಇದಕ್ಕೆ ವಿದ್ಯಾರ್ಥಿಗಳು ಪೂರ್ವ ತಯಾರಿಯನ್ನು ಮಾಡುವುದರ ಜೊತೆಗೆ, ಮೂಲಭೂತ ಸೌಕರ್ಯಗಳನ್ನು ಸದ್ಬಳಕೆ ಮಾಡಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿದೆಸೆಯಿಂದಲೇ ರೂಡಿಸಿಕೊಳ್ಳಬೇಕೆಂದು ಮೂಡಬಿದ್ರೆ ಧವಳಾ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗ ಏರ್ಪಡಿಸಿದ ವೃತ್ತಿ ಮಾರ್ಗದರ್ಶನ ವೆಬಿನರ್ ನಲ್ಲಿ ಬಿಕಾಂ ಕಂಪ್ಯೂಟರ್ ಅಪ್ಲಿಕೇಶನ್ ವಿದ್ಯಾರ್ಥಿಗಳಿಗೆ ದೊರಕಬಹುದಾದ ಉದ್ಯೋಗ-ಅವಕಾಶಗಳ ಕೌಶಲ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಸುದರ್ಶನ್ ಕುಮಾರ್ ರವರು ಎಲ್ಲರನ್ನೂ ಸ್ವಾಗತಿಸಿ ಸರಿಯಾದ ಶಿಕ್ಷಣ ಜೊತೆಗೆ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವ ಮೂಲಕ ವಿಪುಲ ಅವಕಾಶಗಳನ್ನು ಪಡೆಯಬಹುದು ಎಂದು ಪ್ರಾಸ್ತಾವಿಕವಾಗಿ ನುಡಿದರು. ಈ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಶಿಕ್ಷಕರು-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 30 ವಿದ್ಯಾರ್ಥಿಗಳು ಭಾಗವಹಿದ್ದರು. ವಿಭಾಗದ ಸಂಯೋಜಕರಾದ ಪ್ರವೀಣ್ ಕುಲಕರ್ಣಿಯವರು ಅತಿಥಿಗಳನ್ನು ಪರಿಚಯಿಸಿ, ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

ರಾಜ್ಯದ ಐ.ಟಿ.ಐ. ಕಾಲೇಜುಗಳು 5000 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮೇಲ್ದರ್ಜೆಗೆ : ಸಚಿವ ಡಾ.ಅಶ್ವಥ್ ನಾರಾಯಣ್

Thumbnail
Posted On: 26 Sep 2021, 11:50 AM

ಉಡುಪಿ : ರಾಜ್ಯದಲ್ಲಿನ 150 ಐ.ಟಿ.ಐ ಕಾಲೇಜುಗಳನ್ನು 5000 ಕೋಟಿ ರೂ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮೆಲ್ದರ್ಜೆಗೆ ಏರಿಸಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ ಐಟಿ&ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವಥ್ ನಾರಾಯಣ್ ಹೇಳಿದರು. ಅವರು ಉಪ್ಪೂರುನಲ್ಲಿ ಸರಕಾರಿ ಉಪಕರಣಾಗಾರ ಮತ್ತು ನೂತನ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ 1200 ಸರಕಾರಿ ಮತ್ತು ಖಾಸಗಿ ಐ.ಟಿ.ಐ ಕಾಲೇಜುಗಳಿದ್ದು, ಸರಕಾರಿ ಐಟಿಐ ಕಾಲೇಜುಗಳಲ್ಲಿ ಕೌಶಲ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ 150 ಐಟಿಐ ಕಾಲೇಜುಗಳನ್ನು 5000 ಕೋಟಿ ರೂ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮೇಲ್ದರ್ಜೆಗೆ ರಾಜ್ಯ ಸರ್ಕಾರವು ನಿರ್ಧರಿಸಿದ್ದು, 1000 ಕೋಟಿ ಸರ್ಕಾರವು ಉಳಿದ 4000 ಕೋಟಿಗಳನ್ನು ಟಾಟಾ ಟೆಕ್ನಾಲಜಿ ಕಾನ್ ಸಲ್ಟೋಯಿಂ ಮೂಲಕ ರಾಜ್ಯದ ಪ್ರತಿ ತಾಲೂಕಿನಲ್ಲಿ ಒಂದೊಂದು ಐ.ಟಿ.ಐ ಕಾಲೇಜುಗಳಲ್ಲಿ , ವಿಶ್ವ ದರ್ಜೆಯು ಅಡ್ವಾನ್ಸ್ ಕೈಗಾರಿಕಾ 4.0 ತಂತ್ರಜ್ಞಾನ ತರಬೇತಿ ನೀಡಲು ಅಗತ್ಯವಿರುವ ವರ್ಕ್ಶಾಪ್, ಡಿಸೈನ್ ಲ್ಯಾಬ್ ಗಳ ನಿರ್ಮಾಣಕ್ಕೆ ಬಳಸಲಾಗುವುದು ಇದಕ್ಕಾಗಿ ಪ್ರತಿ ಕೇಂದ್ರಕ್ಕೆ 30 ಕೋಟಿ ರೂ ವೆಚ್ಚವಾಗಲಿದೆ. ಈ ಯೋಜನೆ ಅಕ್ಟೋಬರ್ 2 ರಂದು ಉದ್ಘಾಟನೆಗೊಳ್ಳಲಿದೆ ಎಂದರು. ಸರ್ಕಾರಿ ಉಪಕರಣಾಗಾರದಲ್ಲಿ ವಿದ್ಯಾರ್ಥಿಗಳಿಗೆ 21 ಶತಮಾನಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ಎಮರ್ಜಿಂಗ್ ತಂತ್ರಜ್ಞಾನವನ್ನು ಕಲಿಸಲಾಗುತ್ತಿದೆ ಇದರಿಂದ 100% ಖಚಿತ ಉದ್ಯೋಗವಕಾಶಗಳಿದ್ದು, ಇಡೀ ವಿಶ್ವಕ್ಕೆ ಏರೊಸ್ಪೇಸ್ ಉಪಕರಣ ಉತ್ಪಾದನೆಯಲ್ಲಿ ಕರ್ನಾಟಕ ನಂ 1 ಸ್ಥಾನ ಪಡೆದಿದ್ದು , ಭಾರತ ಸರ್ಕಾರದಿಂದಲೇ 3 ಲಕ್ಷ ಕೋಟಿ ಮೊತ್ತದ ಆರ್ಡರ್ ದೊರೆತಿದೆ, ಇದಲ್ಲದೇ ಇತರೆ ಕಂಪೆನಿಗಳಿಂದ ಆರ್ಡರ್ ದೊರೆತಿದೆ.ರ ಈ ಕಾರ್ಯಗಳನ್ನು ನಿರ್ವಹಿಸಲು ಕೌಶಲ್ಯಯುತ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಜಿಟಿಟಿಸಿ ಕಾಲೇಜುಗಳಲ್ಲಿನ ತಂತ್ರಜ್ಞಾನ ಆಧರಿತ ಕೋರ್ಸ್ಗಳಿಗೆ ಸೇರ್ಪಡೆಯಾಗಬೇಕು ಎಂದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣರಾಜ ಕೋಟ್ಯಾನ್, ಜಿಟಿಟಿಸಿ ಮೈಸೂರು ನ ವ್ಯವಸ್ಥಾಪಕ ಲಿಂಗರಾಜ ಸಣ್ಣಮನಿ, ಜಿಟಿಟಿಸಿ ಉಪ್ಪೂರುನ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ಟೊಯೋಟಾ ಸಂಸ್ಥೆಯ ರೋಶನ್, ಪ್ರಾಂಶುಪಾಲ ಮಂಜುನಾಥ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.