Updated News From Kaup
ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ಮತ್ತು ವಿದ್ಯಾರ್ಥಿವೇತನ ವಿತರಣೆ
Posted On: 21 Aug 2021, 06:36 PM
ಕಾಪು : ಮಂಡೇಡಿ ಶ್ರೀ ದೇವಿ ಭಜನಾ ಮಂಡಳಿಯಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ಮತ್ತು ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಸುಮಾರು 25 ಮಕ್ಕಳಿಗೆ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಮಂಡೇಡಿ ಕಂಗಿತ್ಲು ಮನೆಯ ದಿ|ವಿಠಲ ಶೆಟ್ಟಿ ಸ್ಮರಣಾರ್ಥ ಅವರ ಮಗ ದಯಾನಂದ ವಿಠಲ ಶೆಟ್ಟಿಯವರು ಸುಮಾರು 1 ಲಕ್ಷಕ್ಕೂ ಅಧಿಕ ಧನಸಹಾಯ ನೀಡಿದ್ದರು ಹಾಗೂ ಕುಂಜಿರ ಬೆಟ್ಟು (ದ್ವಾರಕ) ಮನೆ ಶಶಿಧರ ಶೆಟ್ಟಿ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ಶಾಲು ನೀಡಿ ಗೌರವಿಸಿದರು. ಈ ಸಂದರ್ಭ ಆ ದಿನದ ಭಜನಾ ಸೇವಾಕರ್ತರಾದ ಶ್ರೀಮತಿ ಅಕ್ಕಣಿ ವಿಠಲಶೆಟ್ಟಿ ಅವರಿಂದ ಅನ್ನ ಪ್ರಸಾದ ಸೇವೆ ನಡೆಯಿತು. ಕಾರ್ಯಕ್ರಮದಲ್ಲಿ ಸೇವಾಕರ್ತರು, ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ತೆಂಗು ಮತ್ತು ಅಡಿಕೆ ಮರ ಹತ್ತುವವರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರ್ಪಡೆಗೊಳಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ
Posted On: 20 Aug 2021, 03:03 PM
ಕಾಪು : ತೆಂಗು ಮತ್ತು ಅಡಿಕೆ ಮರ ಹತ್ತುವವರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಕೇಂದ್ರ ಕೃಷಿ ಮತ್ತು ರೈತ ಸಬಲೀಕರಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆಗೆ ಉಡುಪಿ ಜಿಲ್ಲೆಯ ತೆಂಗು ಮತ್ತು ಅಡಿಕೆ ಬೆಳೆಗಾರರ ಪ್ರಕೋಷ್ಟದ ಪರವಾಗಿ ಸಂಚಾಲಕರಾದ ಪ್ರಾಣೇಶ್ ಹೆಜಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭ ನಮ್ಮ ಜಿಲ್ಲೆ, ರಾಜ್ಯದಲ್ಲಿ ತೆಂಗು ಮತ್ತು ಮರ ಹತ್ತುವವರು ಬಹಳ ಸಂಖ್ಯೆಯಲ್ಲಿದ್ದು ಅವರ ಜೀವನ ಸ್ಥಿತಿ ಗತಿಗಳ ಬಗ್ಗೆ, ಅಸಂಘಟಿತ ಕಾರ್ಮಿಕ ವರ್ಗದಲ್ಲಿ 42 ಅಂಶಗಳನ್ನು ಒಳಗೊಂಡ ಕೆಲಸ ಮಾಡುವವರು ಇದ್ದು, ಅದರಲ್ಲಿ ತೆಂಗು ಮತ್ತು ಮರ ಹತ್ತುವವರು ಬರುವುದಿಲ್ಲ. ಅದೇಷ್ಟೋಮಂದಿ ತೆಂಗು ಮತ್ತು ಅಡಿಕೆ ಮರ ಹತ್ತುವವರು ಅಕಸ್ಮಾತಾಗಿ ಬಿದ್ದು ದುರ್ಮರಣಕ್ಕೀಡಾಗಿ ಸಾವನಪ್ಪಿರುತ್ತಾರೆ. ಕೆಲವರಂತು ಜೀವನ ಪರ್ಯಂತ ಹಾಸಿಗೆಯಲ್ಲಿಯೇ ಕಾಲ ಕಳೆದವರೂ ಇದ್ದಾರೆ. ಇವರಿಗೆ ಸರಕಾರದ ಸವಲತ್ತು ಸಿಗದೇ ಇರುವುದು ದುರದೃಷ್ಟಕರವಾಗಿದೆ. ಇತ್ತೀಚೆಗೆ ಕಾರ್ಮಿಕ ಸಚಿವರು ರಿಕ್ಷಾ ಹಾಗೂ ಬಸ್ಸು ಚಾಲಕರಿಗೆ ಅಕಸ್ಮತ್ ಸಾವನಪ್ಪಿದ್ದರೆ 5 ಲಕ್ಷ ನೀಡುವ ಬಗ್ಗೆ ಘೋಷಣೆ ಮಾಡಿರುತ್ತಾರೆ . ಅಂತೆಯೇ ತೆಂಗು ಮತ್ತು ಅಡಿಕೆ ಮರ ಹತ್ತುವವರು ಅಸಂಘಟಿತ ಕಾರ್ಮಿಕ ವರ್ಗದ (43) ಇತರ ವರ್ಗ (ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008ರ ಕಾಲಂ 2(ಎಮ್) ಹಾಗೂ ಕಾಲಂ 2(1) ವ್ಯಾಖ್ಯಾನಕ್ಕೆ ) ಒಳಪಡಿಸಬೇಕೆಂದು ವಿನಂತಿಸಿದರು.
ವರಮಹಾಲಕ್ಷ್ಮಿ ವ್ರತ -ಸಂಪತ್ತಿನ ರಾಣಿಯ ಆರಾಧನೆ
Posted On: 20 Aug 2021, 09:11 AM
"ಲಕ್ಷಯತಿ ಪಶ್ಯತಿ ಭಕ್ತಜನಾನ್ ಇತಿ ಲಕ್ಷ್ಮೀ" ಇದು ಲಕ್ಷ್ಮೀ ಶಬ್ದದ ವ್ಯುತ್ಪತ್ತಿ. ಉಪಾಸಕರನ್ನು ಕೃಪಾಕಟಾಕ್ಷದಿಂದ ವೀಕ್ಷಿಸುವವಳೇ ಲಕ್ಷ್ಮೀ. 'ಶ್ರೀ' ಎಂಬುದು ಲಕ್ಷ್ಮೀಯ ನಾಮಾಂತರ. ಪ್ರಭೆ, ಶೋಭೆ, ಕೀರ್ತಿ, ಕಾಂತಿ, ವಿಭೂತಿ, ಮತಿ, ವರ್ಚಸ್, ತೇಜಸ್, ಸೌಂದರ್ಯ, ವೃದ್ಧಿ, ಸಿದ್ಧಿ, ಸೌಭಾಗ್ಯ, ಕಮಲ, ಬಿಲ್ವವೃಕ್ಷ ಮುಂತಾದುವು ಶ್ರೀ ಶಬ್ದಕ್ಕಿರುವ ಹಲವು ಅರ್ಥಗಳು. ಸಂಪತ್ತು ಎಂಬುದು ಸಾಮಾನ್ಯ ಅರ್ಥವಾದರೂ ಐಶ್ವರ್ಯವೆಂಬುದು ಪ್ರಧಾನವಾದ ಅರ್ಥ ಅಥವಾ ಸಾಮಾನ್ಯ ಒಪ್ಪಿಗೆ - ತಿಳಿವಳಿಕೆ. 'ಈಶ್ಚರಸ್ಯ ಭಾವಃ ಐಶ್ವರ್ಯಂ''. ಪರಮಾತ್ಮನ ಅನುಗ್ರಹಕಾರಕವಾದ ಗುಣ ವಿಶೇಷವೇ ಶ್ರೀ. ಲಕ್ಷ್ಮೀ ಸಮುದ್ರ ಮಥನದಲ್ಲಿ ಹುಟ್ಟಿದಳು. ನಾರಾಯಣನನ್ನು ವರಿಸಿ ತಾನು ಮಹಾಲಕ್ಷ್ಮೀ ಯಾದಳು. ನಾರಾಯಣನು ಲಕ್ಷ್ಮೀನಾರಾಯಣನಾದ, ಶ್ರೀಮನ್ನಾರಾಯಣನಾದ. ಸ್ಥಿತಿಕರ್ತನಾದ-ಪಾಲನಾಧಿಕಾರಿಯಾಗಿದ್ದ ನಾರಾಯಣನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಗೆ ವಲ್ಲಭನಾಗಿ ಸೌಭಾಗ್ಯವಂತನಾದ, ಭಕ್ತರ ಇಷ್ಟಾರ್ಥ ಅನುಗ್ರಹಿಸಲು ಸರ್ವಶಕ್ತನಾದ. ಶ್ರೀಮನ್ನಾರಾಯಣನಿಂದ ಲಕ್ಷ್ಮೀ ಬಹುಮಾನ್ಯಳಾದಳು. ಶ್ರೀಮನ್ನಾರಾಯಣ ಆಕೆಯನ್ನು ಹೃದಯದಲ್ಲೆ ಧರಿಸಿಕೊಂಡ. ಹೀಗೆ ಭಾಗ್ಯವತಿಯಾದ ಲಕ್ಷ್ಮೀಯಿಂದ ಸಮೃದ್ಧವಾದ ಸ್ಥಿರಸಂಪತ್ತನ್ನು ಪಡೆಯಲು, ಸರ್ವ ಭೋಗಭಾಗ್ಯದ ಸುಖವನ್ನು ಪಡೆಯಲು ಆಕೆಯನ್ನು ಆರಾಧಿಸುವ ಪರ್ವದಿನವು ಶ್ರಾವಣಮಾಸದ ಶುದ್ಧ ಪಕ್ಷದ ಎರಡನೇ ಶುಕ್ರವಾರ ಒದಗಿಬರುತ್ತದೆ .ಆ ದಿನದಂದು ಲಕ್ಷ್ಮೀಯನ್ನು ವರಗಳನ್ನು ಅನುಗ್ರಹಿಸುವವಳು ಎಂಬ ಅನುಸಂಧಾನದೊಂದಿಗೆ "ವರಮಹಾಲಕ್ಷ್ಮೀ"; ಎಂದು ಪರಿಕಲ್ಪಸಿಕೊಂಡು ಆರಾಧಿಸುವುದು. ಕಟ್ಟು, ಕಟ್ಟಳೆ, ನಿಯಮ, ವಿಧಿಗಳಿಗೆ ಬದ್ಧರಾಗಿ ನೋಂಪಿಯಂತೆ, ಧಾರ್ಮಿಕ ಪ್ರತಿಜ್ಞೆಯೊಂದಿಗೆ ಶ್ರದ್ಧೆಯಿಂದ ಪೂಜಿಸುವುದು ಆಗ ನಿರ್ದಿಷ್ಟ ವಿಧಿವಿಧಾನದಂತೆ ನೆರವೇರಿಸುವ ಪೂಜೆ ವ್ರತವಾಗುತ್ತದೆ. ಅದೇ , "ವರಮಹಾಲಕ್ಷ್ಮೀವ್ರತ". ನಾರಾಯಣ - ವಿಷ್ಣು ಸೂರ್ಯನಾದಾಗ ಲಕ್ಷ್ಮೀ ತಾವರೆಯಿಂದ ಜನಿಸಿದಳು. ಪರಶುರಾಮನಾದಾಗ ಈಕೆ ಭೂದೇವಿ. ರಾಮಾವತಾರದಲ್ಲಿ ಸೀತಾದೇವಿ. ಕೃಷ್ಣಾವತಾರದಲ್ಲಿ ರುಕ್ಮಿಣಿ. ಹೀಗೆ ಲಕ್ಷ್ಮೀ ಶ್ರೀಮನ್ನಾರಾಯಣನನ್ನು ಅನುಸರಿಸಿಯೇ ಬರುತ್ತಾಳೆ. ಆದರೆ ಒಮ್ಮೆ ಲಕ್ಷ್ಮೀಯೇ ಕೋಪಿಸಿಕೊಂಡು ವೈಕುಂಠವನ್ನೆ ಬಿಟ್ಟು ಧರೆಗಿಳಿಯುತ್ತಾಳೆ. ಈ ಲಕ್ಷ್ಮೀ ಯನ್ನು ಮರಳಿ ಸ್ವೀಕರಿಸಲು ನಾರಾಯಣ ಗೋವಿಂದನಾಗಿ - ಶ್ರೀನಿವಾಸನಾಗಿ ಆಕೆಯನ್ನು ಹಿಂಬಾಲಿಸುತ್ತಾ ಪದ್ಮಾವತಿಯಾಗಿದ್ದ ಲಕ್ಷ್ಮೀಯನ್ನು ಪಡೆದು ಮತ್ತೆ ಶ್ರೀಪತಿಯಾಗುತ್ತಾನೆ ಅದೇ ಸಪ್ತಗಿರಿ ತಿರುಪತಿ- ಶ್ರೀಪತಿ, ಭೂವೈಕುಂಠ. ಹಿರಣ್ಯ ಸ್ವರೂಪಳಾದ ಶ್ರೀ ಮಹಾಲಕ್ಷ್ಮೀಯು ಹಿರಣ್ಯವನ್ನು ಸದಾಕೊಡಲಿ ಎಂಬುದು ಲಕ್ಷ್ಮೀ ಸ್ತುತಿ ಎಂದೇ ಪ್ರಸಿದ್ಧವಾದ :ಶ್ರೀಸೂಕ್ತ'ದ ಆಶಯ. ಶ್ರೀಸೂಕ್ತವು ನಾರಾಯಣನಿಂದ ಸದಾಕಾಲ ಅನಪಗಾಮಿನಿಯಾದ, ಜೊತೆಯಲ್ಲೇ ಇರುವ ಶ್ರೀ ಮಹಾಲಕ್ಷ್ಮೀಯ ಬೇರೆ ಬೇರೆ ಅವತಾರಗಳನ್ನು, ರೂಪಗಳನ್ನು ವರ್ಣಿಸುತ್ತದೆ. ಲಕ್ಷ್ಮೀಯು ಚತುರ್ಭಾಹುವುಳ್ಳವಳ್ಳವಳು ಮೇಲಿನ ಎರಡು ಕೈಗಳಲ್ಲಿ ಕಮಲದ ಹೂಗಳನ್ನು ಧರಿಸಿದವಳು. ಕೆಳಗಿನ ಕೈಗಳಿಂದ ವರದ ಮತ್ತು ಅಭಯ ಮುದ್ರೆಗಳನ್ನು ತೋರಿಸುತ್ತಿರುವವಳು. ಕಮಲ ಸದೃಶ ಮುಖವುಳ್ಳ ಈಕೆ ಕಮಲದಲ್ಲಿ ಕುಳಿತವಳು. ಅಷ್ಟಲಕ್ಷ್ಮೀಯಾಗಿ ಅಷ್ಟೈಶ್ವರ್ಯಗಳನ್ನು ದಯಪಾಲಿಸುವವಳು. ಆದುದರಿಂದ ಜನಪ್ರಿಯಳು, ಅದೇ ತಾನೇ ಬಹುಮಾನ್ಯತೆ. |ಭಾರತೀಯರಿಗೆ ದೇವರುಗಳೆಷ್ಟು| ಭಾರತೀಯರಿಗೆ ದೇವರುಗಳು ಎಷ್ಟು? ನಂಬಿಕೆ, ಉಪಾಸನೆ ಗೊಂದಲವಿಲ್ಲವೇ? ಹೀಗೆಂದು ವಿದೇಶಿಯೊಬ್ಬ ಕೇಳುತ್ತಾನೆ. ಹೌದಲ್ಲ....ನಮ್ಮ ದೇವತೆಗಳು, ದೇವರುಗಳನ್ನು ಲೆಕ್ಕ ಹಾಕಿದಾಗ ಅದು ಮೂವತ್ತಮೂರು ಕೋಟಿಗೂ ಹೆಚ್ಚು. ಆದರೆ ನಮಗೆ ಆರಾಧನೆಯಲ್ಲಿ ಗೊಂದಲವೇ ಇಲ್ಲ. ಒಂದೊಂದು ಉದ್ದೇಶಕ್ಕೆ, ಇಷ್ಟಾರ್ಥ ಸಿದ್ಧಿಗೆ ಒಂದೊಂದು ದೇವರು. ಮೊನ್ನೆ ನಾಗನನ್ನು ಪೂಜಿಸಿದೆವು, ಈಗ ಲಕ್ಷ್ಮೀಯನ್ನು ಆರಾಧಿಸುತ್ತೇವೆ, ಮುಂದೆ ಕೃಷ್ಣನನ್ನು ಬಳಿಕ ಗಣಪತಿಯನ್ನು, ನವದುರ್ಗೆಯರನ್ನು, ಬಲೀಂದ್ರನನ್ನು, ಶಿವನನ್ನು ಪೂಜಿಸುತ್ತೇವೆ. ವರ್ಷಪೂರ್ತಿ ಪೂಜೆ, ವ್ರತಗಳು ನಮ್ಮ ಶ್ರಮದ ಬದುಕಿನ ಅವಿಭಾಜ್ಯ ಅಂಗವಾಗಿ ಶತಮಾನಗಳಿಂದ ಸಾಗಿಬಂದಿವೆ. ತುಳುವರಿಗೆ ಮೇಲಿನ ದೇವತೆ - ದೇವರುಗಳೊಂದಿಗೆ ಸಾವಿರಮಾನಿ ದೈವಗಳು, ನೂರೆಂಟು ಗಂಡಗಣಗಳನ್ನು ವಿಧಿಯಂತೆ ಪೂಜಿಸುವ ಸಹಜ ನಂಬಿಕೆ. ಇವುಗಳಲ್ಲದೆ ಕೃಷಿ ಸಂಸ್ಕೃತಿಯೊಂದಿಗೆ ಆಚರಿಸಲ್ಪಡುವ ಆಚರಣೆಗಳು. ಇತ್ತೀಚೆಗೆ ನಮ್ಮದಲ್ಲದ ಹತ್ತಾರು ಆರಾಧನೆಗಳು ಸೇರಿಕೊಂಡಿವೆ .ಆದರೆ ಗೊಂದಲವಿಲ್ಲ, ಮನಃಪೂರ್ವಕವಾದ ಒಪ್ಪಿಗೆಗಳಿವೆ. ಇದು ಈ ದೇಶದ, ತುಳುನಾಡಿನ, ಮಣ್ಣಿನ ಆಸ್ತಿಕತೆ. ಇದು ನಮ್ಮ ಪರಂಪರೆಯಾಗಿ ವಂಶವಾಹಿನಿಯಲ್ಲಿದೆ. ಬಹುತೇಕ ಆರಾಧನೆ, ನಂಬಿಕೆಗಳೆಲ್ಲ ಏನನ್ನೊ ಪ್ರಾಪ್ತಿಸಿಕೊಳ್ಳಲೇ ಆಗಿದೆ. ಸಮೃದ್ಧಿಯನ್ನು ಬಯಸಿಯೇ ಇರುತ್ತದೆ. ಲಕ್ಷ್ಮೀ ಶಬ್ದದ ಅರ್ಥಗಳನ್ನು ಮತ್ತೊಮ್ಮೆ ಮೆಲುಕು ಹಾಕಿಕೊಂಡಾಗ ನಾವು ಬದುಕಿನಲ್ಲಿ ಬಯಸುವುದು ಪ್ರಭೆ, ಶೋಭೆ, ಕೀರ್ತಿ, ಕಾಂತಿ, ವಿಭೂತಿ, ಮತಿ, ವರ್ಚಸ್, ತೇಜಸ್, ಸೌಂದರ್ಯ, ವೃದ್ಧಿ, ಸಿದ್ಧಿ, ಸೌಭಾಗ್ಯಗಳನ್ನೇ ತಾನೆ? ಇದೇ ಲಕ್ಷ್ಮೀಯ ಆರಾಧನೆಯ ಫಲ. ಲೇಖನ : ಕೆ.ಎಲ್. ಕುಂಡಂತಾಯ
ಬಿಸಿಎ ಮತ್ತು ಉದ್ಯೋಗ ಅವಕಾಶಗಳು - ವೆಬಿನಾರ್
Posted On: 19 Aug 2021, 10:41 PM
ಕಾಪು : ವಿವೇಕಾನಂದ ಕಾಲೇಜಿನ ಗಣಕವಿಜ್ಞಾನ ಮತ್ತು ಐಟಿ ಕ್ಲಬ್‌ನ ಜಂಟಿ ಸಹಯೋಗದಲ್ಲಿ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ, ಬಿಸಿಎ ವಿದ್ಯಾರ್ಥಿಗಳಿಗೆ ದೊರಕಬಹುದಾದ ಉದ್ಯೋಗಗಳು ಮತ್ತು ಅವಕಾಶಗಳ ಬಗ್ಗೆ ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಲೆಫ್ಟಿನೆಂಟ್ ಕೆ. ಪ್ರವೀಣ್‌ಕುಮಾರ್, ವಿಭಾಗ ಮುಖ್ಯಸ್ಥರು, ಸೈಂಟ್ ಮೇರೀಸ್ ಕಾಲೇಜು ಶಿರ್ವ ಇವರು ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಉದ್ಯೋಗವನ್ನು ಪಡೆಯಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಆಂತರಿಕ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ವಿದ್ಯಾರ್ಥಿಗಳು ಪೂರ್ವ ತಯಾರಿಯನ್ನು ಮಾಡುವುದು ಅನಿವಾರ್ಯ ಎಂದು ಹೇಳಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರಕಾಶ್‌ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೯೦ ವಿದ್ಯಾರ್ಥಿಗಳು ಭಾಗವಹಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ವಿಕ್ರಾಂತ್ ಕೆ. ಇವರು ಕಾರ‍್ಯಕ್ರಮವನ್ನು ನಿರೂಪಿಸಿದರು.
ತುಲು ಭಾಷೆಗೆ ಅಧಿಕೃತ ಸ್ಥಾನಮಾನಕ್ಕಾಗಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಗೆ ಜೈ ತುಲುನಾಡ್ ಸಂಘಟನೆಯಿಂದ ಮನವಿ
Posted On: 19 Aug 2021, 08:10 PM
ಉಡುಪಿ : ಅಂಬಲಪಾಡಿ ಕಾರ್ತಿಕ್ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೈ ತುಲುನಾಡ್ (ರಿ.) ಸಂಘಟನೆಯ ಪರವಾಗಿ ಸದಸ್ಯರಾದ ಅಕ್ಷತಾ ಕುಲಾಲ್ ಇವರಿಂದ ಕೇಂದ್ರ ಕೃಷಿ ಸಚಿವೆಯಾದ ಶೋಭಾ ಕರಂದ್ಲಾಜೆ ಇವರಿಗೆ ತುಲು ಭಾಷೆಗೆ ಕರ್ನಾಟಕ ರಾಜ್ಯದಲ್ಲಿ ಅಧಿಕೃತ ಸ್ಥಾನಮಾನ ನೀಡುವಂತೆ ಹಾಗೂ ಈ ವಿಷಯವನ್ನು ಆರ್ಟಿಕಲ್ 347 ಪ್ರಕಾರ ಸನ್ಮಾನ್ಯ ರಾಷ್ಟ್ರಪತಿಗಳ ಗಮನಕ್ಕೆ ತರುವಂತೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಸಂಘಟನೆಯವರೊಂದಿಗೆ ಶೋಭಾ ಕರಂದ್ಲಾಜೆಯವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು. ಈ ನಡುವೆ ರಘುಪತಿ ಭಟ್ ತುಲು ಭಾಷೆಯು ರಾಜ್ಯದ ಅಧಿಕೃತ ಭಾಷೆಯಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಎ ಸುವರ್ಣ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ತಾರಾ ಉಮೇಶ್ ಆಚಾರ್ಯ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಇದರ ಸದಸ್ಯರಾದ ಕೇಸರಿ ಯುವರಾಜ್, ಜೈ ತುಲುನಾಡ್ (ರಿ) ಸಂಘಟನೆಯ ತುಲು ಲಿಪಿ ಮೇಲ್ವಿಚಾರಕರಾದ ಶರತ್ ಕೊಡವೂರು ಮತ್ತು ನಗರ ಬಿ.ಜೆ.ಪಿ ಉಪಾಧ್ಯಕ್ಷೆ ಸರೋಜ ಶೆಣೈ, ಜಿಲ್ಲಾ ಬಿ.ಜೆ.ಪಿ. ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಿ ಎಸ್ ಶೆಟ್ಟಿ, ಜೈ ತುಲುನಾಡ್ (ರಿ) ಸಂಘಟನೆಯ ಸದಸ್ಯರಾದ ಸಂತೋಷ್ ಎಸ್ ಎನ್ , ತುಲು ಲಿಪಿ ಶಿಕ್ಷಕಿಯರಾದ ಸ್ವಾತಿ ಸುವರ್ಣ, ಶಿಲ್ಪಾ ಕೇಶವ್, ಸುಶೀಲಾ ಜಯಕರ್‌ರವರು ಉಪಸ್ಥಿತರಿದ್ದರು.
ಶುಚಿ-ರುಚಿಯ ಮಸಾಲ ಪದಾರ್ಥಗಳು, ಉಪಹಾರ, ಭೋಜನ, ಸಿಹಿತಿಂಡಿಗಳಿಗಾಗಿ ಜನಾರ್ಧನ ಹೋಮ್ ಪ್ರೊಡಕ್ಟ್ಸ್
Posted On: 19 Aug 2021, 08:04 PM
ರಾಸಾಯನಿಕಗಳನ್ನು ಬಳಸಿ ತಯಾರಿಸುವ ಆಹಾರಗಳನ್ನು ಸೇವಿಸಿ ಆರೋಗ್ಯ ಹಾಳಾಗುತ್ತಿರುವ ಸಂದರ್ಭದಲ್ಲಿ ಶುದ್ಧ ತೆಂಗಿನ ಎಣ್ಣೆಯಿಂದ ಮನೆಯಲ್ಲಿಯೇ ತಯಾರಿಸುವುದಲ್ಲದೆ, ಪ್ರಸಿದ್ಧ ಪಾಕ ತಜ್ಞರಿಂದ ಸಾಂಪ್ರದಾಯಿಕ ಉಡುಪಿ ಶೈಲಿಯ ಮಸಾಲಾ ಪದಾರ್ಥಗಳನ್ನು ತಯಾರು ಮಾಡುತ್ತಿದ್ದಾರೆ ಕಾಪು ಉಳಿಯಾರಗೋಳಿಯ ಲಕ್ಷ್ಮೀ ಜನಾರ್ಧನ ಹೋಮ್ ಪ್ರೊಡಕ್ಟ್ಸ್ ಸಂಸ್ಥೆ. ಈ ಸಂಸ್ಥೆ ಇದೀಗ 2 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿದೆ. ಗ್ರಾಹಕರಿಗೆ ರಸಂ ಪೌಡರ್, ಬಿಸಿಬೇಳೆ ಬಾತ್ ಪೌಡರ್, ವೆಜ್ ಪಲಾವ್, ಚಟ್ನಿ ಪೌಡರ್, ಸಾಂಬಾರು ಪೌಡರ್,ಹುರುಳಿ ಕಾಳು ಚಟ್ನಿ ಪುಡಿ, ಪುಟಾಣಿ ಕಡ್ಲೆ ಚಟ್ನಿಪುಡಿ, ವಾಂಗಿಬಾತ್ ಪೌಡರ್, ಪುಳಿಯೋಗರೆ ಗೊಜ್ಜು, ಕರಿಬೇವು ಚಟ್ನಿ ಪುಡಿ, ಶೇಂಗ ಚಟ್ನಿಪುಡಿ, ಮೆಂತೆಕಾಳು ಚಟ್ನಿಪುಡಿ, ಬಾದಾಮಿ ಕಷಾಯ ಪುಡಿ, ಆರೋಗ್ಯ ಸಿರಿ ಕಷಾಯ ಪುಡಿ ಮುಂತಾದ ಮಸಾಲಾ ಪದಾರ್ಥಗಳನ್ನು ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಇದಲ್ಲದೆ ಮನೆಯ ಸಮಾರಂಭಗಳಿಗೆ ಶುಚಿ-ರುಚಿಯಾದ ಸ್ವಾದಿಷ್ಟಮಯ ಸಸ್ಯಹಾರಿ ಉಪಹಾರ ಮತ್ತು ಭೋಜನದ ವ್ಯವಸ್ಥೆ, ಸಿಹಿತಿಂಡಿಗಳ ಆರ್ಡರ್ ತೆಗೆದುಕೊಂಡು ಪೂರೈಸಲಾಗುವುದು. ಭಾರತದಾದ್ಯಂತ ಪಾರ್ಸೆಲ್ ಸೌಲಭ್ಯ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : RAGHUPATHI RAO 9243361555
ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ
Posted On: 18 Aug 2021, 11:19 PM
ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ವತಿಯಿಂದ ಕ್ಲಬ್ ನ ಸದಸ್ಯರಾದ ರೂಪ ವಸುಂದರ ಇವರ ಮನೆಯ ಅಂಗಳದಲ್ಲಿ ಗಿಡ ನೆಡುವುದರ ಮೂಲಕ ವನಮಹೋತ್ಸವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಕೋಟ್ಯಾನ್ ಮಾತನಾಡಿ ಪರಿಸರದಲ್ಲಿರುವ ಗಿಡ-ಮರಗಳ ಕೊರತೆಯಿಂದ ನಾವೆಲ್ಲ ಇಂದು ಉಸಿರಾಡಲು ತೊಂದರೆಯನ್ನು ಪಡುತ್ತಿದ್ದೇವೆ. ಪರಿಸರದ ಉಳಿವಿಗಾಗಿ ನಾವು ಮನೆಯ ಸುತ್ತ ಗಿಡ ಮರಗಳನ್ನು ನೆಡಬೇಕು ಎಂದು ಕರೆಯಿತ್ತರು. ಇನ್ನರ್ವೀಲ್ ಅಧ್ಯಕ್ಷರಾದ ಅನಿತಾ ಬಿ.ವಿ ಯವರು ಮಾತನಾಡಿ ಮನೆಗೊಂದು ಮರ ಊರಿಗೊಂದು ವನ ಇದ್ದರೆ ನಮ್ಮ ಪ್ರಕೃತಿ ಸುಂದರ ಎಂದರು. ಸಭೆಯ ಅಧ್ಯಕ್ಷತೆಯನ್ನು ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷರಾದ ಮೊಹಮ್ಮದ್ ನಿಯಾಜ್ ವಹಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಬಿ. ಎಸ್. ಆಚಾರ್ಯ ವಂದಿಸಿದರು. ಸುಧಾಕರ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಇನ್ನರ್ವೀಲ್ ಮತ್ತು ರೋಟೇರಿಯನ್ ಸದಸ್ಯರು ಉಪಸ್ಥಿತರಿದ್ದರು.
ರೋಟರಿ ಶಂಕರಪುರ ವತಿಯಿಂದ ಆರ್ಥಿಕವಾಗಿ ಹಿಂದುಳಿದ 50 ವಿದ್ಯಾರ್ಥಿಗಳಿಗೆ 50000 ರೂ. ವೆಚ್ಚದ ಉಚಿತ ಶೈಕ್ಷಣಿಕ ಪರಿಕರಗಳ ವಿತರಣೆ
Posted On: 18 Aug 2021, 10:59 PM
ಕಾಪು : ರೋಟರಿ ಶಂಕರಪುರದ ವತಿಯಿಂದ ಡಾ. ಸತೀಶ್ ಶೆಟ್ಟಿ ಮಣಿಪಾಲ್ ಇವರ ಪ್ರಾಯೋಜಕತ್ವದಲ್ಲಿ ಅವರು ಕಲಿತ ಶಾಲೆ ಶಂಕರಪುರ ಸೈ0ಟ್ ಜೋನ್ಸ್ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕನ್ನಡ ಮಾಧ್ಯಮದ ಆರ್ಥಿಕವಾಗಿ ಹಿಂದುಳಿದ 50 ವಿದ್ಯಾರ್ಥಿಗಳಿಗೆ 50000 ರೂ. ವೆಚ್ಚದ ಉಚಿತ ಶೈಕ್ಷಣಿಕ ಪರಿಕರಗಳ ವಿತರಣೆಯನ್ನು ರೋಟರಿ ಭವನದಲ್ಲಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ರವೀಂದ್ರ ಶೆಟ್ಟಿ ನಿವೃತ್ತ ದೈಹಿಕ ಶಿಕ್ಷಕರು ಇನ್ನಂಜೆ, ವಲಯ 5 ರ ವಲಯ ಸೇನಾನಿ ಅನಿಲ್ ಡೇಸಾ, ರೋಟರಿ ಶಂಕರಪುರ ಅಧ್ಯಕ್ಷರು ಆದ ಪ್ಲಾವಿಯಾ ಮೆನೆಜಸ್, ಈ ಪ್ರಾಯೋಜಕತ್ವಕ್ಕೆ ಸಹಕಾರ ನೀಡಿದ ಆಂಟನಿ ಡೇಸಾ, ಪ್ರಾಜೆಕ್ಟ್ ಡೈರೆಕ್ಟರ್ ಆದ ಲಕ್ಷ್ಮಣ ಪೂಜಾರಿ, ಕ್ಲಬ್ ಸರ್ವಿಸ್ ಡೈರೆಕ್ಟರ್ ಫ್ರಾನ್ಸಿಸ್ ಡೇಸಾ, ಕಾರ್ಯದರ್ಶಿ ಮಾಲಿನಿ ಇನ್ನಂಜೆ, ನಂದನ್ ಕುಮಾರ್, ವಿಕ್ಟರ್ ಮಾರ್ಟಿಸ್, ಚಂದ್ರ ಪೂಜಾರಿ, ಕ್ಲಿಫರ್ಡ್ ಡಿ ಮೆಲ್ಲೊ, ವಲೇರಿಯನ್ ನೊರೊನ್ನಾ, ವಿಕ್ಟರ್ ಮೆಂಡೋನ್ಸಾ ಉಪಸ್ಥಿತರಿದ್ದರು.
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸದ್ಭಾವನ ದಿನಾಚರಣೆ- ಪ್ರತಿಜ್ಞಾ ಸ್ವೀಕಾರ
Posted On: 18 Aug 2021, 08:54 PM
ಶಿರ್ವ, ಆ. 18 : ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸದ್ಭಾವನ ದಿನಾಚರಣೆ- ಪ್ರತಿಜ್ಞಾ ಸ್ವೀಕಾರ ಸರ್ಕಾರದ ಆದೇಶದಂತೆ ಸರಳವಾಗಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸರವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ರಾಜ್ಯದ ಎಲ್ಲಾ ಧರ್ಮ, ಭಾಷೆಗಳ ಜನರಲ್ಲಿ ರಾಷ್ಟ್ರೀಯ ಏಕೀಕರಣ, ಕೋಮು ಸೌಹಾರ್ದತೆಯನ್ನು ಉತ್ತೇಜಿಸಿ, ಎಲ್ಲರಲ್ಲೂ ಸದ್ಭಾವನೆಯನ್ನು ಮೂಡಿಸಿ ಹಿಂಸಾಚಾರವನ್ನು ತ್ಯಜಿಸುವಂತೆ ಮಾಡಲು ಪ್ರತಿವರ್ಷ ಆಗಸ್ಟ್ 20ರಂದು ಸದ್ಭಾವನಾ ದಿನವನ್ನು ಆಚರಿಸಲಾಗುತ್ತದೆ. ಆದರೆ ಈ ವರ್ಷ ಆಗಸ್ಟ್ 20ರಂದು ಮೊಹರಂ ಹಬ್ಬದ ಪ್ರಯುಕ್ತ ಎಲ್ಲ ಸರ್ಕಾರಿ ಕಚೇರಿಗಳ ರಜೆಯ ಕಾರಣ ಈ ಕಾರ್ಯಕ್ರಮವನ್ನು ಇಂದು ಆಚರಿಸಲಾಯಿತು ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಮಾಭಿವೃದ್ಧಿ ನಿರ್ದೇಶಕಿ ಯಶೋದ, ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್‌ಕುಮಾರ್, ಎನ್ಎಸ್ಎಸ್ ಯೋಜನಾಧಿಕಾರಿ ಪ್ರೇಮನಾಥ್, ರಕ್ಷಾ, ರೋವರ್ಸ್ ಮತ್ತು ರೇಂಜರ್ಸ್ ಸ್ಕೌಟ್ ಲೀಡರ್ ಗಳಾದ ಪ್ರಕಾಶ್, ಸಂಗೀತ ಪೂಜಾರಿ, ಕಾಲೇಜಿನ ವಿದ್ಯಾರ್ಥಿಗಳು, ಭೋಧಕ ಹಾಗು ಭೋಧಕೇತರ ವೃಂದದವರು ಉಪಸ್ಥಿತರಿದ್ದರು.
ಮೂತ್ರಪಿಂಡ ಸಮಸ್ಯೆ ಮಹಿಳೆಗೆ ಬಂಟಕಲ್ಲು - ಬಿ.ಸಿ ರೋಡು ಲಯನ್ಸ್ ಕ್ಲಬ್ ನಿಂದ ಆರ್ಥಿಕ ನೆರವು
Posted On: 17 Aug 2021, 01:41 PM
ಕಾಪು : ಮೂತ್ರಪಿಂಡ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿರುವ ಪಡುಬೆಳ್ಳೆ ಸಮೀಪದ ರಕ್ಷಾಪುರ ಕಾಲೋನಿಯ ನಿವಾಸಿ ಶಂಕರ ಎಂಬವರ ಪತ್ನಿ ಸರಸ್ವತಿ ಎಂಬವರ ಮೂತ್ರಪಿಂಡ ಬದಲಾಯಿಸುವ ಚಿಕಿತ್ಸೆ ವೆಚ್ಚವಾಗಿ ಲಯನ್ಸ್ ಕ್ಲಬ್ ಬಂಟಕಲ್ಲು ಬಿ.ಸಿ ರೋಡು ಹಾಗೂ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮೀನ್ ರವರು ಜಂಟಿಯಾಗಿ ರೂ. 72000 ವನ್ನು ಅವರ ಮನೆಗೆ ತೆರಳಿ ನೀಡಿದರು. ಸರಸ್ವತಿ ಅವರ ಈ ಚಿಕಿತ್ಸೆಗೆ ರೂ. 7 ಲಕ್ಷ ಮೊತ್ತ ವೆಚ್ಚವಾಗಲಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಈ ಸಣ್ಣ ಕುಟುಂಬ ಚಿಕಿತ್ಸಾ ವೆಚ್ಚದ ಬಗ್ಗೆ ಸಹೃದಯಿ ದಾನಿಗಳಲ್ಲಿ ವಿನಂತಿಸಿಕೊಂಡಿದ್ದರು. ಇವರ ಸಮಸ್ಯೆಯನ್ನು ತಿಳಿದ ಬಂಟಕಲ್ಲು ಬಿ.ಸಿ ರೋಡು ಲಯನ್ಸ್ ಕ್ಲಬ್ ನ ಅಧ್ಯಕ್ಷ ಎಡ್ವರ್ಡ್ ಮೆನೇಜಸ್ ರವರು ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮೀನ್ ಸಂಸ್ಥೆಯೊಂದಿಗೆ ಸೇರಿ ಈ ಮೊತ್ತವನ್ನು ಸರಸ್ವತಿಯವರಿಗೆ ಹಸ್ತಾಂತರಿಸಿದರು. ಜಾಸ್ಮೀನ್ ಲಯನ್ಸ್ ನ ಅಧ್ಯಕ್ಷೆ ಮೇಬಲ್ ಮೆನೇಜಸ್, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್, ಅನಿತಾ ಮೆಂಡೋನ್ಸಾ, ವಿಜಯ್ ಧೀರಾಜ್, ಬೆಳ್ಳೆ ಗ್ರಾ.ಪಂ ಸದಸ್ಯೆ ನಥಾಲಿಯಾ ಮಾರ್ಟಿಸ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
