Updated News From Kaup

ಬಂಟಕಲ್ ನ ಶ್ರಾವ್ಯ ಕುಲಾಲ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಚತುರ್ಥ ಸ್ಥಾನ

Thumbnail
Posted On: 24 Aug 2021, 09:40 PM

ಕಾಪು : ಶಿರ್ವದ ಹಿಂದು ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಶ್ರಾವ್ಯ ಕುಲಾಲ್ ಇತ್ತೀಚೆಗೆ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 621 (99.36%) ಅಂಕ ಪಡೆದು ರಾಜ್ಯದಲ್ಲಿ ಚತುರ್ಥ ಸ್ಥಾನಿಯಾಗಿದ್ದು, ಕಲಿತ ಶಾಲೆಯಲ್ಲಿ ಪ್ರಥಮ ಸ್ಥಾನಿಯಾಗಿ ಕೀರ್ತಿಯನ್ನು ತಂದಿದ್ದಾರೆ. ಇವರು ಬಂಟಕಲ್ ನ ಸದಾನಂದ ಮತ್ತು ಸುನಂದರವರ ಪುತ್ರಿಯಾಗಿದ್ದಾರೆ.

ಪಡುಬಿದ್ರಿ : ಕಾರು ಢಿಕ್ಕಿಯಾಗಿ ಮೃತಪಟ್ಟ ಅಪರಿಚಿತ ವ್ಯಕ್ತಿ

Thumbnail
Posted On: 24 Aug 2021, 08:10 PM

ಪಡುಬಿದ್ರಿ : ಅಪರಿಚಿತ ಭಿಕ್ಷುಕರೋರ್ವರಿಗೆ ಕಾರು ಢಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಬೀಡು ಬಳಿ ಸೋಮವಾರ ರಾತ್ರಿ ಘಟಿಸಿದೆ. ಸುಮಾರು ೩೫-೪೦ರ ಹರೆಯದ ವ್ಯಕ್ತಿ ಈ ಪರಿಸರದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಕಾರು ಉಡುಪಿಯಿಂದ ಮಂಗಳೂರಿನತ್ತ ಹೋಗುತ್ತಿದ್ದು ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಪಡುಬಿದ್ರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಪೆರ್ಡೂರು : ವಿಜ್ಞಾನ ವಿಭಾಗದಲ್ಲಿ 600 ರಲ್ಲಿ 599 ಅಂಕ ಪಡೆದು ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಥಮ ಸ್ಥಾನಿಯಾದ ಶ್ರೀನಿಧಿ ಕೆ.ಕುಲಾಲ್

Thumbnail
Posted On: 23 Aug 2021, 10:21 PM

ಉಡುಪಿ : ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಉಡುಪಿಯ ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀನಿಧಿ ಕೆ. ವಿಜ್ಞಾನ ವಿಭಾಗದಲ್ಲಿ 600 ರಲ್ಲಿ 599 ಅಂಕ ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಈಕೆ ಪೆರ್ಡೂರು ಗ್ರಾಮದ ಪುತ್ತಿಗೆ ದರ್ಕಾಸು ನಿವಾಸಿ ದಯಾನಂದ ಕೆ. ಶಂಕರ್ ಪುತ್ರಿಯಾಗಿದ್ದಾರೆ. (ಮಾಹಿತಿ :ಉದಯ ಕುಲಾಲ್ ಪುತ್ತಿಗೆ) (ವರದಿ :ಉದಯ ಕುಲಾಲ್ ಕಳತ್ತೂರು)

ಸಾಮಾಜಿಕ ಜಾಲತಾಣಗಳ ಸ್ಪರ್ಧೆಗಳಿಂದ ಸಾಹಿತ್ಯದ ಗುಣಮಟ್ಟ ಕುಸಿದಿದೆ : ಹಾ. ಮ. ಸತೀಶ

Thumbnail
Posted On: 23 Aug 2021, 04:52 PM

ಕಾಪು : ಪ್ರತೀ ದಿನ, ಪ್ರತಿ ವಾರ ನಿರಂತರವಾಗಿ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುವ ಉದ್ಧೇಶದಿಂದಲೇ ವಾಟ್ಸಾಪ್ ಸಾಹಿತ್ಯ ಬಳಗಗಳನ್ನು ರೂಪಿಸುವುದು ಎಷ್ಟು ಮಾತ್ರಕ್ಕೂ ಸಲ್ಲದು. ಇದರಿಂದಾಗಿ ಉದಯೋನ್ಮುಖ ಬರಹಗಾರರಲ್ಲಿ ಪ್ರಶಸ್ತಿ, ಬಹುಮಾನಗಳ ಹಂಬಲ ಹೆಚ್ಚಿ ಅವರು ಕೃತಿಚೌರ್ಯ ಮಾಡಲು ಮುಂದಾಗುತ್ತಾರೆ. ಇಂಥ ಬೆಳವಣಿಗೆ ಸಾಹಿತ್ಯಕ್ಕೆ ಮಾರಕ ಎಂದು ಖ್ಯಾತ ಕವಿ, ಬರಹಗಾರ, ಶಿಕ್ಷಕ ಬೆಂಗಳೂರಿನ ಹಾ. ಮ. ಸತೀಶ ಅವರು ಹೇಳಿದರು. ಅಖಿಲ ಕರ್ನಾಟಕ ಬರಹಗಾರರ ವೇದಿಕೆಯು ಗೂಗಲ್ ಮೀಟ್ ಮೂಲಕ ನಡೆಸಿದ "ವಾಟ್ಸಾಪ್ ಸಾಹಿತ್ಯ ಬಳಗಗಳು ಮತ್ತು ಉದಯೋನ್ಮುಖ ಬರಹಗಾರರು" ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು. ಉದಯೋನ್ಮುಖರು ಸ್ವಂತಿಕೆಯನ್ನು ಅಳವಡಿಸಿಕೊಂಡು ಸಾಹಿತ್ಯದಲ್ಲಿ ಮೇಲೆ ಬರಬೇಕು. ಕಾವ್ಯದಲ್ಲಿ ಪೀಠಿಕೆ, ವಿಷಯ ಮತ್ತು ಮುಕ್ತಾಯ ಬೇಕು. ಆದರೆ ಉದಯೋನ್ಮುಖರ ಕಾವ್ಯದಲ್ಲಿ ಇದರ ಕೊರತೆ ಕಾಣುತ್ತಿದೆ. ಯಾರೇ ಆಗಲಿ ಯಾವುದೇ ಬಳಗಕ್ಕೆ ಸೇರುವ ಮೊದಲು ಆ ಬಳಗದ ಉದ್ಧೇಶಗಳನ್ನು ತಿಳಿದುಕೊಂಡು ಸೇರಬೇಕು ಎಂದು ಹಾ. ಮ. ಸತೀಶ ಅವರು ಕಿವಿಮಾತು ಹೇಳಿದರು. ಅವರು ತಮ್ಮ ಉಪನ್ಯಾಸದಲ್ಲಿ ವಾಟ್ಸಾಪ್ ಬಳಗಗಳು ಬರುವ ಮೊದಲು ಸಾಹಿತ್ಯ ಬಳಗಗಳು ಮತ್ತು ಅವುಗಳನ್ನು ನಂಬಿದ್ದ ಬರಹಗಾರರು ಹೇಗಿದ್ದರು ಎಂಬುವುದರ ಬಗ್ಗೆ ವಿವರವಾಗಿ ತಿಳಿಸಿದರು. ಅಂದು ಬರಹಗಾರರಲ್ಲಿ ಕಲಿಯುವ ಹಂಬಲವಿತ್ತು. ಆದರೆ ಇಂದು ಕಲಿಯುವ ಹಂಬಲ ಕ್ಷಣಿಕವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದರಿಂದಾಗಿ ಸಾಹಿತ್ಯದ ಗುಣಮಟ್ಟ ಕುಸಿದಿದೆ ಎಂದರು. ನಿರಂತರ ಓದು, ಕಲಿಯುವಿಕೆ, ಕಲಿತದ್ದನ್ನು ಮನನ ಮಾಡಿಕೊಂಡು ತನ್ನದೇ ಆದ ಸ್ವಂತಿಕೆ ಮತ್ತು ಶೈಲಿಯಲ್ಲಿ ಬರೆದಾಗಲೇ ಒಬ್ಬ ಒಳ್ಳೆಯ ಬರಹಗಾರನಾಗಲು ಸಾಧ್ಯವೆಂದು ಹಾ. ಮ. ಸತೀಶ ಅವರು ತಿಳಿಸಿದರು. ವಾಟ್ಸಾಪ್ ಸಾಹಿತ್ಯ ಬಳಗಗಳು, ಸ್ಪರ್ಧೆಗಳು, ಅಡ್ಮಿನ್ ಗಳು, ತೀರ್ಪುಗಾರರು, ಬಹುಮಾನ - ಪ್ರಶಸ್ತಿಗಳು ಇತ್ಯಾದಿ ವಿಷಯಗಳ ಬಗ್ಗೆ ಸಂವಾದ ನಡೆಯಿತು. ಸಾಹಿತ್ಯ ಬಳಗದಲ್ಲಿ ರಾಜಕೀಯ ಪೋಸ್ಟ್ ಗಳನ್ನು ಹಾಕಿದಾಗ ಮತ್ತು ಕೃತಿಚೌರ್ಯಗಳು ಪತ್ತೆಯಾದಾಗ ಸಂಬಂಧಿಸಿದ ಬಳಗಗಳ ಎಲ್ಲಾ ಸದಸ್ಯರೂ ಇವುಗಳನ್ನು ವಿರೋಧಿಸಬೇಕು. ಸ್ಪರ್ಧೆಗಳ ತೀರ್ಪುಗಾರರು ಬಳಗಗಳಲ್ಲಿ ಇಲ್ಲದದವರಾಗಿದ್ದರೆ ಮಾತ್ರವೇ ಫಲಿತಾಂಶ ನಿಷ್ಪಕ್ಷಪಾತವಾಗಿ ಬರಲು ಸಾಧ್ಯ ಎಂದು ಶ್ರೀರಾಮ ದಿವಾಣ ತಿಳಿಸಿದರು. ಕೃತಿಚೌರ್ಯವನ್ನು ಪತ್ತೆಹಚ್ಚಿದವರನ್ನೇ ಬಳಗದಲ್ಲಿ ಟಾರ್ಗೆಟ್ ಮಾಡಿ ನಿಂದಿಸುವುದು, ಅಡ್ಮಿನ್ ಗಳೇ (ಎಲ್ಲರೂ ಅಲ್ಲ) ವಯುಕ್ತಿಕವಾಗಿ ಮೆಸೇಜ್ ಮಾಡಿ ಟೀಕಿಸುವುದು, ಮಾನಹಾನಿ, ತೇಜೋವಧೆ ಮಾಡುವಂಥ ಬರಹಗಳನ್ನು ಬಳಗಗಳಲ್ಲಿ ಬರೆದು ಅವಮಾನ ಮಾಡುವುದು, ಕೆಲವರು ಗುಂಪುಗಾರಿಕೆ ಮಾಡುವುದು ಇತ್ಯಾದಿ ನಡೆಯುತ್ತಿದೆ. ಇಂಥದ್ದೆಲ್ಲ ನಡೆಯುವುದು ಸಕಾರಾತ್ಮಕ ಬೆಳವಣಿಗೆಯಲ್ಲ ಎಂದು ರತ್ನಾ ಟಿ. ಕೆ. ಭಟ್ ತಿಳಿಸಿದರು. ತೀರ್ಪುಗಾರರೇ ಸ್ಪರ್ಧೆಯಲ್ಲಿನ ಸ್ಥಾನಗಳ ಆಯ್ಕೆಯಲ್ಲಾಗುತ್ತಿರುವ ಲೋಪಗಳಿಗೆ ಕಾರಣವೆಂದು ಈಶ್ವರ ಸಂಪಗಾವಿ ಹೇಳಿದರು. ಬಳಗಗಳಿಗೆ ಲಿಂಕ್ ಮೂಲಕ ಆಗಮಿಸುವ ಸದಸ್ಯರು ಬಳಗದವನ್ನು ದುರ್ಬಳಕೆ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ, ಹೀಗಾಗಬಾರದು ಎಂದು ಸುಭಾಷಿಣಿಚಂದ್ರ ಅವರು ತಿಳಿಸಿದರೆ, ಬಳಗಗಳು ಹೆಚ್ಚುತ್ತಿರುವುದು ಮತ್ತು ಹೆಚ್ಚುತ್ತಿರುವ ಬಳಗಗಳಿಂದ ಗುಣಮಟ್ಟ ರಹಿತ ಸ್ಪರ್ಧೆಗಳು ಹೆಚ್ಚುತ್ತಿರುವುದು ಕಳವಳಕಾರಿ ವಿಷಯವೆಂದರು ಕಾ. ವೀ. ಕೃಷ್ಣದಾಸ್ ಅವರು. ಸುಭಾಷಿಣಿಚಂದ್ರ ಉಪ್ಪಳ ಪ್ರಾರ್ಥನಾಗೀತೆ ಹಾಡಿ, ಅಖಿಲ ಕರ್ನಾಟಕ ಬರಹಗಾರರ ವೇದಿಕೆಯ ಉಪಾಧ್ಯಕ್ಷರಾದ ಜನಾರ್ದನ ದುರ್ಗ ಸ್ವಾಗತಿಸಿ, ಸಹ ಕಾರ್ಯದರ್ಶಿ ಕೆ. ಪಿ. ಅಶ್ವಿನ್ ರಾವ್ ವಂದಿಸಿ, ಕಾರ್ಯದರ್ಶಿ ಶ್ರೀರಾಮ ದಿವಾಣ ಕಾರ್ಯಕ್ರಮ ನಿರ್ವಹಿಸಿದರು.

ಖ್ಯಾತ ಖಗೋಳಶಾಸ್ತ್ರಜ್ಞ ಡಾ.ಎ.ಪಿ ಭಟ್ - ಅದಮಾರು ಪಿಪಿಸಿ ಕಾಲೇಜಿನ ಗೌರವ ಭೌತಶಾಸ್ತ್ರ ಉಪನ್ಯಾಸಕರಾಗಿ ನೇಮಕ

Thumbnail
Posted On: 23 Aug 2021, 11:24 AM

ಕಾಪು : ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿಗೆ ಭೌತಶಾಸ್ತ್ರ ವಿಶೇಷ ಗೌರವ ಉಪನ್ಯಾಸಕರಾಗಿ ಪೂರ್ಣಪ್ರಜ್ಞ ಪದವಿ ಕಾಲೇಜು ಉಡುಪಿಯ ನಿವೃತ್ತ ಪ್ರಾಂಶುಪಾಲರೂ, ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕರೂ ಹಾಗೂ ಖ್ಯಾತ ಖಗೋಳಶಾಸ್ತ್ರಜ್ಞರಾದ ಡಾ.ಎ.ಪಿ.ಭಟ್ ರವರನ್ನು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಹಾಗೂ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನೇಮಕ ಮಾಡಿದ್ದಾರೆ. ಸಾವಿರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಖಗೋಳ ವೀಕ್ಷಣೆಯ ಬಗ್ಗೆ ಅರಿವು ಮೂಡಿಸಿರುವ ಇವರು ಅನೇಕ ರಾಷ್ಟ್ರ ಮಟ್ಟದ ವಿಚಾರಸಂಕಿರಣಗಳಲ್ಲಿ ವಿಶೇಷ ಪ್ರಬಂಧ ಮಂಡನೆ, ವಿಶೇಷ ಉಪನ್ಯಾಸವನ್ನು ನೀಡಿರುತ್ತಾರೆ. ಅಲ್ಲದೆ ಯಾವುದೇ ವಿಶಿಷ್ಟ ವಿದ್ಯಮಾನಗಳಿರಲಿ ಅವುಗಳನ್ನು ಗುರುತಿಸಿ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಖಗೋಳ ಮಾಹಿತಿ ನೀಡುವಲ್ಲಿ ಡಾ. ಎ.ಪಿ.ಭಟ್ ರವರ ಪಾತ್ರ ಮಹತ್ವದ್ದು. ರಾಜ್ಯದ ಪ್ರಮುಖ ಖಗೋಳ ಶಾಸ್ತ್ರಜ್ಞರಲ್ಲಿ ಡಾ. ಎ.ಪಿ ಭಟ್ ರವರು ಸುಪ್ರಸಿದ್ಧರು. ಖಗೋಳ ವಿಜ್ಞಾನದ ಕುರಿತಾದ ಇವರ ಹಲವಾರು ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಭೌತಶಾಸ್ತ್ರವನ್ನು ಸರಳ ರೀತಿಯಲ್ಲಿ ಬೋಧಿಸುವ ಇವರ ಉಪನ್ಯಾಸ ವಿದ್ಯಾರ್ಥಿಗಳನ್ನು ಅಯಸ್ಕಾಂತೀಯ ಶಕ್ತಿಯಂತೆ ಆಕರ್ಷಿಸುತ್ತದೆ. ವಿವಿಧ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ. ಡಾ.ಎ.ಪಿ ಭಟ್ ರವರನ್ನು ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿಗೆ ಭೌತಶಾಸ್ತ್ರ ವಿಶೇಷ ಗೌರವ ಉಪನ್ಯಾಸಕರಾಗಿ ನೇಮಕ ಮಾಡಿರುವುದಕ್ಕೆ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಅತ್ಯಂತ ಹರ್ಷ ವ್ಯಕ್ತಪಡಿಸಿದರು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಸಾಧನೆ ಮಾಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಂಡಾರಿಬೆಟ್ಟು : ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನೆ

Thumbnail
Posted On: 23 Aug 2021, 09:53 AM

ಮಂಗಳೂರು : ಬಂಟ್ವಾಳ ತಾಲೂಕಿನ ಯುವಜನ ವ್ಯಾಯಾಮಶಾಲೆ ಭಂಡಾರಿಬೆಟ್ಟುವಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ.) ಮತ್ತು ತುಲುನಾಡ ಯುವಸೇನೆ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನಾ ಸಮಾರಂಭ ನಡೆಯಿತು. ಜೈ ತುಲುನಾಡ್ (ರಿ.) ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ತುಲು ಲಿಪಿ ಕಲಿಯುವ ಕಾರ್ಯಗಾರವನ್ನು ಚೇತನ್ ಮುಂಡಾಜೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತುಲು ಲಿಪಿ ಶಿಕ್ಷಕರಾದ ಜಗದೀಶ ಗೌಡ ಕಲ್ಕಳ ರವರು ತುಲು ಲಿಪಿ ಬರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಉದ್ಘಾಟಿಸಿ ಮಾತನಾಡಿದ ಚೇತನ್ ಮುಂಡಾಜೆರವರು ತುಲು ಭಾಷೆಗೆ ಲಿಪಿ ಇದ್ದರೂ ಅದೆಷ್ಟೋ ಜನರಿಗೆ ತಿಳಿಯದೆ ಹೋಗಿದೆ, ತುಲು ಭಾಷೆಗೆ ಸುಮಾರು 2500 ವರ್ಷದ ಇತಿಹಾಸ ಇದೆ, ಇಂತಹ ಭಾಷೆಯನ್ನು ನಾವು ಕಲಿಯದೆ ಹಿಂದುಳಿಯುವಂತೆ ಮಾಡಿದ್ದೇವೆ. ಇನ್ನಾದರೂ ಈ ಭಾಷೆಯನ್ನು, ಲಿಪಿಯನ್ನು ಕಲಿತು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯ ಮಾಡುವ ಎಂದರು. ಜೈ ತುಲುನಾಡ್ (ರಿ) ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್ ಮಾತನಾಡಿ, ಸಂಘಟನೆ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುವ ಕಾಲದಿಂದ ಇಂದಿನ ತನಕವೂ ತುಲುವಿಗೆ ಸ್ಥಾನಮಾನಕ್ಕಾಗಿ ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಅಕಾಡೆಮಿಯೊಟ್ಟಿಗೆ ಸಂಘಟನೆಯು ಸಹಕಾರ ನೀಡುತ್ತಾ ಬರುತ್ತಿದೆ. ತುಲುನಾಡಿನ ಎಲ್ಲಾ ಅಂಗಡಿ, ಶಾಲೆ, ಕಚೇರಿಯಲ್ಲಿ ತುಲು ಲಿಪಿಯ ನಾಮಫಲಕ ಹಾಕಬೇಕು ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸೀತಾರಾಮ ಸಜಿಪ, ಜೈ ತುಲುನಾಡ್ (ರಿ.) ಉಪಾಧ್ಯಕ್ಷರಾದ ಉದಯ್ ಪೂಂಜ, ಉಪ ಸಂಘಟನಾ ಕಾರ್ಯದರ್ಶಿ ಅಶ್ರಫ್ ಭಸ್ಥಿಕೋಡಿ, ತುಲು ಲಿಪಿ ಶಿಕ್ಷಕರಾದ ಪೂರ್ಣಿಮಾ ಬಂಟ್ವಾಳ ಹಾಗೂ ಪೃಥ್ವಿ ತುಲುವೆ ಉಪಸ್ಥಿತರಿದ್ದರು. ಧೀರಜ್ ಸ್ವಾಗತಿಸಿ, ಮಹೇಶ್ ವಂದಿಸಿ, ಲಿಖಿತ್‌ರಾಜ್ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು.

92 ಹೇರೂರು : ಶ್ರೀ ಗುರು ರಾಘವೇಂದ್ರ ಚೆಂಡೆ ಬಳಗ ಉದ್ಘಾಟನೆ, ಗುರುವಂದನ ಕಾರ್ಯಕ್ರಮ

Thumbnail
Posted On: 22 Aug 2021, 10:30 PM

ಕಾಪು : 92 ಹೇರೂರಿನ ಶ್ರೀ ಗುರು ರಾಘವೇಂದ್ರ ಚೆಂಡೆ ಬಳಗವನ್ನು ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿಯ ಸ್ಥಾಪಕ ಕಾರ್ಯದರ್ಶಿ ಶ್ರೀನಿವಾಸ ಪ್ರಭು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹೇರೂರು ಗ್ರಾಮದಲ್ಲಿ ಉಚಿತವಾಗಿ ಚೆಂಡೆ ತರಬೇತಿಯನ್ನು ಪ್ರಾರಂಭಿಸಿ ಇಂದು ಗುರುವಂದನ ಕಾರ್ಯಕ್ರಮವನ್ನು ಮಾಡುತ್ತಿರುವುದಕ್ಕೆ ಶುಭ ಹಾರೈಸಿದರು. ಮಜೂರು ಗ್ರಾಮಪಂಚಾಯತ್ನ ಉಪಾಧ್ಯಕ್ಷರಾದ ಮಧುಸೂದನ ಸಾಲಿಯಾನ್ ರವರು ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಿ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಚೆಂಡೆ ಬಳಗದ ಸದಸ್ಯರನ್ನು ಅಭಿನಂದಿಸಿದರು. ಚೆಂಡೆ ಬಳಗದ ಅಧ್ಯಕ್ಷರಾದ ದಿನೇಶ್ ದೇವಾಡಿಗ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಉಚಿತ ಚೆಂಡೆ ತರಬೇತಿಯನ್ನು ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲು ಸಹಕರಿಸಿದ ಹೊರದೇಶದಲ್ಲಿರುವ ಶ್ರೀಪತಿ ಪ್ರಭು ಹೇರೂರು ಇವರಿಗೆ ಕೃತಜ್ಞತೆಯನ್ನು ಸಲ್ಲಿಸಿ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸದಲ್ಲಿ ಇನ್ನು ಇದಕ್ಕಿಂತ ಉತ್ತಮ ಅಂಕಗಳನ್ನು ಗಳಿಸಿ ಒಳ್ಳೆಯ ಜೀವನ ನಡೆಸಲಿ ಎಂದು ಶುಭ ಹಾರೈಸಿದರು. ಚೆಂಡೆ ತರಬೇತಿ ನೀಡಿದ ಮುಲ್ಕಾಡಿ ರಾಘವೇಂದ್ರ ಭಟ್ ಇವರಿಗೆ ಚೆಂಡೆ ಬಳಗದ ವಿದ್ಯಾರ್ಥಿಗಳು ಫಲಪುಷ್ಪ ಗುರು ಕಾಣಿಕೆಯನ್ನು ನೀಡಿ ಸನ್ಮಾನಿಸಿದರು. ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ ದೇವಾಡಿಗ, ಮಹಿಳಾ ಬಳಗದ ಅಧ್ಯಕ್ಷರಾದ ಶಶಿಕಲಾ ದೇವಾಡಿಗ, ದೇವಾಡಿಗರ ಸಂಘದ ಶಂಕರ್ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೇರೂರು ಸೇವಾ ಪ್ರತಿನಿಧಿ ಶ್ರೀಮತಿ ವಸಂತಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಚೆಂಡೆ ಬಳಗದ ವಿದ್ಯಾ ಆಚಾರ್ಯರವರು ಸನ್ಮಾನ ಪತ್ರ ವಾಚಿಸಿದರು. ಕುಮಾರಿ ಪ್ರೀತಿ ಆಚಾರ್ಯರವರು ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಅಖಿಲ ದೇವಾಡಿಗರವರು ಕಾರ್ಯಕ್ರಮ ನಿರೂಪಿಸಿ ಚೆಂಡೆ ಬಳಗದ ಕಾರ್ಯದರ್ಶಿ ಉದಯ ದೇವಾಡಿಗರವರು ಧನ್ಯವಾದ ನೀಡಿದರು.

ಅದಮಾರು : ಸರ್ವೋದಯ ಸಮುದಾಯ ಭವನದಲ್ಲಿ ಕೋವಿಡ್ 19 ಲಸಿಕೆ - 472 ಫಲಾನುಭವಿಗಳು

Thumbnail
Posted On: 22 Aug 2021, 11:48 AM

ಕಾಪು : ಪ್ರಾಥಮಿಕ ಆರೋಗ್ಯ ಕೇಂದ್ರ ಮುದರಂಗಡಿ , ಇವರ ವತಿಯಿಂದ ಎಲ್ಲೂರು ಪಂಚಾಯತ್ ಆಯೋಜಿಸಿರುವ 'ಕೊವಿಡ್ 19' ಲಸಿಕೆ ಹಾಕುವ ಅಭಿಯಾನವು ಅದಮಾರು ಆದರ್ಶ ಯುವಕ ಸಂಘದ ಸರ್ವೋದಯ ಸಮುದಾಯ ಭವನದಲ್ಲಿ ನಡೆಯಿತು. ಎಲ್ಲೂರು ಗ್ರಾಮದಲ್ಲೆ ದಾಖಲೆಯ ಪ್ತಮಾಣದಲ್ಲಿ 472 ಮಂದಿ ವ್ಯಾಕ್ಸಿನ್ ಪಡೆದರು. 450ಮಂದಿಯ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಅದಮಾರು ಪರಿಸರದ ತೊಂಬತ್ತ ನಾಲ್ಕು ವರ್ಷ ಹರೆಯದ ಹಿರಿಯ, ನಿವೃತ್ತ ಶಿಕ್ಷಕ, ಕಾಶಿ ಸಂತಾನ ಚ್ಯಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ವೈ .ಎಂ. ಶ್ರೀಧರ ರಾವ್ ಅವರಿಗೆ ಲಸಿಕೆ ನೀಡುವುದರೊಂದಿಗೆ ಲಸಿಕೆ ಹಾಕುವ ಕಾರ್ಯ ಆರಂಭವಾಯಿತು. ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಪ್ರಭು, ಎಲ್ಲೂರು ಪಂ. ಅಧ್ಯಕ್ಷ ಜಯಂತ ರಾವ್ ಮತ್ತು ಸದಸ್ಯರು, ಸರ್ವೋದಯ ಸಮುದಾಯ ಭವನದ ಅಧ್ಯಕ್ಷ ಕೆ.ಎಲ್ .ಕುಂಡಂತಾಯ, ಆದರ್ಶ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುದರ್ಶನ ವೈ.ಎಸ್, ಆದರ್ಶ ಯುವಕ ಸಂಘದ ಅಧ್ಯಕ್ಷ ಬರ್ಪಣಿ ಜೆ.ಸಂತೋಷ ಶೆಟ್ಟಿ , ಆದರ್ಶ ಮಹಿಳಾ ಸಂಘದ ಪ್ರೇಮ ಆರ್.ಸಾಲಿಯಾನ್ ಮತ್ತು ಸದಸ್ಯರು , ವೈದ್ಯಕೀಯ ಸಿಬಂದಿ ಉಪಸ್ಥಿತರಿದ್ದರು .

ಮುದರಂಗಡಿ : ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮದಿನಾಚರಣೆ

Thumbnail
Posted On: 22 Aug 2021, 11:04 AM

ಕಾಪು : ಬಿಲ್ಲವ ಸಮಾಜ ಸೇವಾ ಸಂಘ (ರಿ.) ಮುದರಂಗಡಿ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮದಿನಾಚರಣೆಯ ಪ್ರಯುಕ್ತ ನಾಳೆ (ಸೋಮವಾರ) ಕ್ಷೇತ್ರದ ಅರ್ಚಕರಾದ ದಿನೇಶ್ ಶಾಂತಿ ಮತ್ತು ಶಂಕರ ಶಾಂತಿ ಅವರ ಧಾರ್ಮಿಕ ವಿಧಿ ವಿಧಾನದೊಂದಿಗೆ ನೆರವೇರಲಿದೆ. ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ, ಕಲಶಾಭಿಷೇಕ, ಭಜನೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ. 12:30 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭ್ರಾತೃ - ಭಗಿನಿ ಭಾಂದವ್ಯ ಬೆಸೆಯುವ‌

Thumbnail
Posted On: 21 Aug 2021, 06:55 PM

‘ರಕ್ಷಾಬಂಧನ’ ಹಾಗೂ ‘ಉಪಾಕರ್ಮ’  ಈ ಎರಡು ವಿಧದ ಆಚರಣೆಗಳಲ್ಲಿ ಒಂದು ‘ಭಾವ’ ಸಂಬಂಧಿಯಾದರೆ ಮತ್ತೊಂದು ‘ಜ್ಞಾನ’ ಶುದ್ಧಿಯನ್ನು ಎಚ್ಚರಿಸುವ ಆಚರಣೆಗಳು. ರಾಖೀ ಕಟ್ಟುವುದು, ಯಜ್ಞೋಪವೀತ ಧರಿಸುವುದು ಇವೆರಡೂ ದಾರ ಅಥವಾ ನೂಲಿನ ನಂಟನ್ನು ಹೊಂದಿರುವಂತಹದ್ದು. ನೂಲು ಅಥವಾ ದಾರ ಕಟ್ಟುವುದು ಎಂಬ ಕ್ರಿಯೆ ಜೋಡಿಸುವ ಸಾಧನವಾಗಿ, ಬಂಧನದ ಬದ್ಧತೆಯ ಸಂಕೇತವಾಗಿ ಇವೆ ,ಎಂದರೆ ತಪ್ಪಾಗಲಾರದು.‌ ರಕ್ಷಾಬಂಧನ : ನಮ್ಮ ದೇಶದ ಸಂಸ್ಕೃತಿ ನಿರ್ದೇಶಿಸಿದ ಸಹಜೀವನ ವಿಧಾನದ ಹಲವು ಅಂಶಗಳಲ್ಲಿ ಪರಸ್ಪರ ಬಾಂಧವ್ಯವೂ ಒಂದು. ಇದರಿಂದಲೇ ಸೌಹಾರ್ದ, ಸುಖೀ ಸಮಾಜದ ಪರಿಕಲ್ಪನೆಯ ಸಾಕಾರ ಸಾಧ್ಯ. ಅದಕ್ಕೆ ಪೂರಕವಾಗಿ ನಮ್ಮಆಚರಣೆಗಳು, ಮತಾಚಾರಗಳು ರೂಪುಗೊಂಡವು. ಇದರಲ್ಲಿ ಸಮಷ್ಟಿ ಚಿಂತನೆಯ,ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವ ಉದ್ದೀಪಿಸುವ ಭ್ರಾತೃ - ಭಗಿನಿ ಸಂಬಂಧ ಬೆಸೆಯುವ ರಕ್ಷಾಬಂಧನ, ಭಾವನೆ, ಶುದ್ಧ ಮನಸ್ಥಿತಿಯ ಪ್ರತೀಕವಾಗಿ ರೂಢಿಯಲ್ಲಿದೆ. ವ್ರತ, ಪೂಜೆ, ಮಹೋತ್ಸವ, ಮಹಾಯಾಗ, ಮದುವೆ, ಉಪನಯನ ಮುಂತಾದ ಉತ್ಸವಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸಿ ಕಂಕಣಬಂಧದಿಂದ ದೀಕ್ಷೆ ಸ್ವೀಕರಿಸುವ ವಿಧಿಯೊಂದು ನಮ್ಮ ದೇಶದಲ್ಲಿ‌ ರೂಢಿಯಲ್ಲಿದೆ. ದುಷ್ಟ ಶಕ್ತಿಗಳು ಸತ್ಕರ್ಮಗಳಿಗೆ ಆತಂಕ ಒಡ್ಡದಿರಲಿ ಎಂಬುದು‌ ಇಲ್ಲಿಯ ಆಶಯ.ಇದೇ ಪರಿಕಲ್ಪನೆಯು ಸ್ರ್ತೀ-ಪುರುಷರ ನಡುವೆ ಸಾಹೋದರ್ಯದ ಪವಿತ್ರ ಸಂಬಂಧವನ್ನು ಗಾಢವಾಗಿಸುವ ಸಂದರ್ಭವಾಗಿ ರಕ್ಷಾಬಂಧನ ಅಥವಾ ರಾಖೀ ಹಬ್ಬವೆಂದು ವಿಸ್ತೃತ ಅರ್ಥವ್ಯಾಪ್ತಿಯನ್ನು ಪಡೆಯುತ್ತಾ ಹಬ್ಬವಾಗಿ ಸ್ವೀಕರಿಸಲ್ಪಟ್ಟಿರಬಹುದು. ಸಮಾಜದ ಸ್ರ್ತೀಯರೆಲ್ಲ ತನ್ನ ಅಕ್ಕ-ತಂಗಿಯರು, ಅನಿವಾರ್ಯ ಅಥವಾ ಅಪತ್ಕಾಲದಲ್ಲಿ ಅವರ ಮಾನ-ಪ್ರಾಣಗಳನ್ನು ರಕ್ಷಿಸುವುದು ತನ್ನ ಪರಮ ಕರ್ತವ್ಯ. ಈ ವೇಳೆ ಪ್ರಾಣಾರ್ಪಣೆಯ ಪರಿಸ್ಥಿತಿ ಬಂದರೂ ಅದಕ್ಕೆ ಸಿದ್ಧ ಎಂಬ ಪ್ರತಿಜ್ಞಾ ಸ್ವೀಕಾರದ ಸಂಕೇತವಾಗಿ "ಪವಿತ್ರ ರಕ್ಷಾಬಂಧನ". ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಪರಸ್ಪರ ರಕ್ಷೆ ಕಟ್ಟಿಕೊಳ್ಳುತ್ತಾ ಭಾರತ ಮಾತೆಯ ರಕ್ಷಣೆಗೆ ದೀಕ್ಷಾಬದ್ಧರಾಗುವುದನ್ನು ಕಾಣಬಹುದು. ಪ್ರತೀ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ರಾಖೀ ಕಟ್ಟುವ‌ ಮೂಲಕ ಸ್ರ್ತೀಯರು ತಮ್ಮ ಸೋದರರಿಗೆ ‘ನಮ್ಮ ಮಾನ-ಪ್ರಾಣ ಉಳಿಸುವ‌ ಹೊಣೆ ನಿಮ್ಮದು’ ಎಂದು ನೆನಪಿಸುತ್ತಾರೆ, ಉಡುಗೊರೆ ಪಡೆಯುತ್ತಾರೆ.ರಾಖೀ ಕಟ್ಟುವ, ಸಿಹಿ, ತಿನ್ನಿಸಿ, ತಿನ್ನುವ, ಉಡುಗೊರೆ ಪಡೆಯುವ ಈ ಭಾವನಾತ್ಮಕ ಹಬ್ಬವು ದೇಶದಾದ್ಯಂತ ಸಂಭ್ರಮೋಲ್ಲಾಸದಿಂದ ನಡೆಯುತ್ತದೆ. ಪ್ರತೀ ವರ್ಷ ವೈವಿಧ್ಯಮಯ ರಾಖೀಗಳನ್ನು ಮಾರುಕಟ್ಟೆಗೆ ಬರುತ್ತಿವೆ; ಅಷ್ಟೇ ಅರ್ಥಪೂರ್ಣ - ಪುಲಕೋತ್ಸವಾಗಿ ಆಚರಣೆ ಸಂಪನ್ನಗೊಳ್ಳುತ್ತಿದೆ. ಭಾವಪೂರಕ ಭಾತೃ-ಭಗಿನಿಯರ ನಡುವಿನ ಪವಿತ್ರ ಬಾಂಧವ್ಯವನ್ನು ವರ್ಷಕೊಮ್ಮೆ ನೆನಪಿಸುವ, ಆ ಮೂಲಕ ಮಾನ-ಪ್ರಾಣಗಳ ರಕ್ಷಣೆಯ ಹೊಣೆಗಾರಿಕೆಯನ್ನು‌ ಸೋದರನಿಗೆ ರಾಖೀ ಕಟ್ಟಿ ಸಿಹಿ ತಿನ್ನಿಸಿ ಸಂಭ್ರಮಿಸುತ್ತಾ ಸೂಚ್ಯವಾಗಿ ಹೇಳುವ ಸೋದರಿಯರ ಹಬ್ಬ ‘ರಾಖೀ ಬಂಧನ’. ಒಡ ಹುಟ್ಟಿದವರೊಂದಿಗೆ ಸಮಾಜದ ಸ್ರ್ತೀಯರೆಲ್ಲ ತನ್ನ ಸೋದರಿಯರು ಎಂಬ ಉದಾತ್ತ ಭಾವದೊಂದಿಗೆ ಚಿತ್ತ ಶುದ್ಧಿಯ ಜೀವನಕ್ಕೆ ‘ರಾಖೀ ಬಂಧನ’ ಇಂಬು ಕೊಡುತ್ತದೆ. ಅನಿವಾರ್ಯ ಆಪತ್ಕಾಲದಲ್ಲಿ ಯಾವಳೇ ಸ್ರ್ತೀಯ ಮಾನ - ಪ್ರಾಣಗಳ ರಕ್ಷಣೆ ಪುರುಷನ ಕರ್ತವ್ಯವಾದರೂ ಅದನ್ನು ರೂಢಿಸಿಕೊಳ್ಳುವ ಮನಃಸ್ಥಿತಿ ಏರ್ಪಡಲು ‘ರಾಖೀ ಬಂಧನ’ ಪ್ರತೀ ವರ್ಷ ಆಚರಿಸಲ್ಪಡುತ್ತದೆ. ರಾಖೀ ಎಷ್ಟು ವೈವಿಧ್ಯದ್ದಾದರೂ ರಂಗುರಂಗಿನದಿದ್ದರೂ ಇದರ ಬಂಧನದ ಪ್ರಕ್ರಿಯೆ ದಾರದ ಮೂಲಕ ತಾನೆ? ಈ ದಾರ ಒಂದು ಕರ್ತವ್ಯಕ್ಕೆ,ಜವಾಬ್ದಾರಿಗೆ ನಿಯೋಜಿಸಲ್ಪಟ್ಟ ಭಾವವನ್ನು ಮೂಡಿಸಿದರೆ ಆಚರಣೆಯ ಆಶಯ ನೆರವೇರಿದಂತೆ. ಏಕೆಂದರೆ ವ್ರತ, ಪೂಜೆ, ಮಹೋತ್ಸವ, ಮಹಾಯಾಗ, ಮದುವೆ, ಉಪನಯನ ಮುಂತಾದ ಉತ್ಸವಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸಿ ‘ಕಂಕಣಬಂಧ’ದೊಂದಿಗೆ ದೀಕ್ಷೆ ಸ್ವೀಕರಿಸುವ ವಿಧಿಯೊಂದು ನಮ್ಮ ಸಂಸ್ಕೃತಿಯಲ್ಲಿ ನಿಚ್ಚಳವಾಗಿ ಕಂಡುಬರುತ್ತದೆ. ಇದೇ ಪರಿಕಲ್ಪನೆ ಅಣ್ಣ-ತಂಗಿಯರ ಸಂಬಂಧವನ್ನು ಗಾಢಾವಾಗಿ ಬೆಸೆಯುವ ವಿಧಾನದಲ್ಲಿ ಪಡಿಮೂಡಿರಬಹುದು. ರಾಖೀ ಬಂಧನಕ್ಕೆ ಐತಿಹಾಸಿಕ ಮಹತ್ವವಿದೆ. ಅರಸರುಗಳ ನಡುವಿನ ವೈರವನ್ನು ಮರೆಮಾಚಿದ ಘಟನೆಗಳಿವೆ. ಬಣ್ಣ, ವೈವಿಧ್ಯಗಳಂತೆ ರಾಖೀ ‘ಬಂಧನ’ನದಲ್ಲಿ ಬಾಂಧವ್ಯ ಬೆಸೆಯುವ ಅನನ್ಯ ಸಂತಸವಿದೆ. ಅದು ವರ್ಣಮಯವಾಗಿದೆ. ಧಾರ್ಮಿಕ ವಿಧಿಯು ,ದೀಕ್ಷಾ ಬಂಧನವಾಗಿ, ಭ್ರಾತೃ-ಭಗಿನಿಯರ ಬಾಂಧವ್ಯ ಮಧುರವಾಗಿ ರಕ್ಷಾಬಂಧನದಿಂದ ಕ್ಷೋಬೆಗಳಿಲ್ಲದ ಕಲಹ ರಹಿತ, ಶಾಂತಿ ಸಮೃದ್ಧಿಯ ಸಮಾಜವನ್ನು ನಿರೀಕ್ಷಿಸಬಹುದು. ಉಪಾಕರ್ಮ : ಶ್ರಾವಣ ಮಾಸದ ಹುಣ್ಣಿಮೆಯಂದು ಹಾಗೂ ಶ್ರಾವಣ ಮಾಸದಲ್ಲಿ ಸನ್ನಿಹಿತವಾಗುವ ಶ್ರವಣ ನಕ್ಷತ್ರದಂದು ಉಪಾಕರ್ಮ ನಡೆಯುತ್ತದೆ. ಋಗ್ವೇದ, ಯಜುರ್ವೇದ, ಸಾಮವೇದ ಶಾಖೆಗಳವರಿಗೆ ಪ್ರತ್ಯೇಕ ದಿನಗಳಂದು ಸ್ವೀಕಾರ ಇದೆಯಾದರೂ ಉಪಾಕರ್ಮ ವಿಧಿಯ  ಉದ್ಧೇಶ ಹಾಗೂ ನಿರ್ವಹಣೆಯ ಬಹುತೇಕ ಸಮಾನವಾಗಿಯೇ ಇದೆ. ಉಪನಯನ ಸಂಸ್ಕಾರದೊಂದಿಗೆ ವೇದಾಧ್ಯಯನದ ಅಧಿಕಾರವನ್ನು ಪಡೆಯುವ ವಿಧಿ. ಗುರುಕುಲಗಳಲ್ಲಿ ವಿದ್ಯಾರ್ಥಿಗಳು ಮಾಘ ಮಾಸದಿಂದ ಆರು ತಿಂಗಳು ವ್ಯಾಕರಣ, ಜ್ಯೋತಿಷ ಮುಂತಾದವುಗಳ ಅಧ್ಯಯನ ನಿರತನಾಗಿರುತ್ತಾರೆ. ಶ್ರಾವಣದಿಂದ ಮುಂದಿನ ಆರು ತಿಂಗಳು ವೇದಾಧ್ಯಯನಕ್ಕೆ ಮೀಸಲಿಡುತ್ತಾನೆ (ಪೂರ್ವದಲ್ಲಿ ಋಷಿಗಳು ಆಚರಿಸಿದ್ದು). ಆರು ತಿಂಗಳು ವೇದಾಧ್ಯಯನ ಮಾಡದಿರುವ ಕಾರಣಕ್ಕೆ ಪುನಃ ವೇದಾಧ್ಯಯನದ ಅಧಿಕಾರ ಸಿದ್ಧಿಗಾಗಿ ಉಪಾಕರ್ಮ ವಿಧಿ ರೂಢಿಗೆ ಬಂತೆಂದು ಒಂದು ಪಾಠ. ಕೃಷಿ ಸಂಬಂಧಿ ಚಟುವಟಿಕೆಗಾಗಿ ವೇದಗಳ ಅಧ್ಯಯನ-ಅಧ್ಯಾಪನವನ್ನು ಸ್ಥಗಿತಗೊಳಿಸಿ ಮತ್ತೆ ಕೃಷಿ ಕಾರ್ಯ ಮುಗಿದ ಬಳಿಕ ವೇದಾಧ್ಯಯನ ಆರಂಭಕ್ಕೆ ಅಧಿಕಾರ ಸಿದ್ಧಿಗಾಗಿ ಉಪಾಕರ್ಮ ಎಂಬುದು ಇನ್ನೊಂದು ಪಾಠಾಂತರ. ಪುಣ್ಯಾಹ, ಸಪ್ತ ಋಷಿಗಳ ಪೂಜೆ, ಬಳಿಕ ಉಪಾಕರ್ಮ ಹೋಮವನ್ನು ದಧಿ ಹಾಗೂ ಸತ್ತು (ಅರಳಿನ ಹುಡಿ)ಗಳ ಮಿಶ್ರಣದ ದ್ರವ್ಯದಿಂದ ಹಾಗೂ ಉತ್ಸರ್ಜನ ಹೋಮವನ್ನು ಚರು ದ್ರವ್ಯದಿಂದಲೂ ನಡೆಸಲಾಗುತ್ತದೆ. ಪ್ರಧಾನ ಹೋಮದ ಬಳಿಕ ಹೋಮ ದ್ರವ್ಯದ ಶೇಷ ಭಾಗವಾದ ದಧಿ-ಸತ್ತು ಸ್ವೀಕರಿಸಿ ನೂತನ ಯಜ್ಞೋಪವೀತ ಧಾರಣೆ ,ಬಳಿಕ ಬ್ರಹ್ಮಯಜ್ಞ, ದೇವ, ಋಷಿ,ಆಚಾರ್ಯ, ಪಿತೃತರ್ಪಣ(ಅಧಿಕಾರವಿದ್ದವರು ಮಾತ್ರ) ಕೊಡುವುದು. ಹೀಗೆ ಉತ್ಸರ್ಜನೆಯಿಂದ ಮರಳಿ ಹೊಸದಾಗಿ ಆರಂಭಿಸುವುದಕ್ಕೆ ಸಿದ್ಧತೆಯಾಗಿಯೂ ಈ ಕ್ರಿಯೆ ನಡೆಯುತ್ತದೆ (ಋಗ್ವೇದದ ಕ್ರಮ). ವೇದ ಶಾಖೆಯನ್ನು ಆಧರಿಸಿ ಪ್ರಧಾನ ಹೋಮಕ್ಕೆ ಮಂತ್ರವನ್ನು ಬಳಸಲಾಗುವುದು. ಇಲ್ಲಿ ಋಷಿ ಪೂಜೆ ಪ್ರಧಾನ. ಏಕೆಂದರೆ ವೇದ ಮಂತ್ರಗಳೆಲ್ಲವೂ ಋಷಿ ದ್ರಷ್ಟವಾದುದು. ಋಷಿ ದ್ರಷ್ಟವಾದ ಮಂತ್ರಗಳ ಅಧ್ಯಯನ-ಅಧ್ಯಾಪನಕ್ಕೆ ಋಷಿಗಳ ಅನುಗ್ರಹ ಯಾಚನೆಯಾಗಿ ಋಷಿ ಪೂಜೆ. ಯಜ್ಞೋಪವೀತದ‌ ಬದಲಾವಣೆ ಎಂಬುದು ಸಾಂಕೇತಿಕ. ಆದರೆ ಜ್ಞಾನದ ತಿಳಿವಳಿಕೆಗೆ ನಿರಂತರ ಜಾಗೃತಿ ಮೂಡಿಸುವ ಧಾರ್ಮಿಕ ವಿಧಿಯಾಗಿ ಉಪಾಕರ್ಮ ವಿಧಿಯನ್ನು ಗಮನಿಸಿದರೆ ಯಜ್ಞೋಪವೀತದ ಉದ್ದ, ಎಳೆಗಳು, ಇವುಗಳಿರುವ ಶಾಸ್ರ್ತಾಧಾರ ಮತ್ತು ಮಂತ್ರಗಳು, ಧಾರ್ಮಿಕ ವಿಧಿಗಳು ಅದ್ಭತ ಪರಿಕಲ್ಪನೆಯವು. ಉಪಾಕರ್ಮ ಜ್ಞಾನದ ಉತ್ಕರ್ಷಕ್ಕಾಗಿ ಉಪಶ್ರುತವಾದ ವಿಧಿ. ಉಪಗ್ರಹಣದಿಂದ ಉತ್ಪನ್ನವಾಗುವ ಜ್ಞಾನವು ಸಮಾಜಕ್ಕೆ, ವಿಶ್ವಕ್ಕೆ ಕೊಡುಗೆಯಾದರೆ ‘ಉಪಾಕರ್ಮ’ ಸಂಕುಚಿತವಾಗದೆ ವಿಶಾಲ ಅರ್ಥವನ್ನು ಪಡೆಯಬಲ್ಲುದು. ಸಿದ್ಧತೆ, ಯಜ್ಞೋಪವೀತ ಬದಲಾಯಿಸಿ ಹಾಕಿಕೊಳ್ಳುವ ವಿಧಿ ಮುಂತಾದ ಅರ್ಥ ನಿಷ್ಪತ್ತಿ ಇರುವ ಉಪಾಕರ್ಮವು ಒಂದು ಧಾರ್ಮಿಕ ವಿಧಿಯೂ, ಕಟ್ಟುಪಾಡಾಗಿ ಯಜ್ಞೋಪವೀತ ಧರಿಸುವ ಸಂಪ್ರದಾಯವುಳ್ಳ ವರ್ಗಕ್ಕೆ ವಿಶಿಷ್ಟ ಆಚರಣೆ. ಲೇಖನ : ಕೆ.ಎಲ್.ಕುಂಡಂತಾಯ