Updated News From Kaup
ಕಲ್ಯಾಣಪುರ ರೋಟರಿ ಕ್ಲಬ್ ಪ್ರಾಯೋಜಿತ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ
Posted On: 29 Sep 2021, 02:41 PM
ಉಡುಪಿ : ಡಾ.ಟಿ.ಎಂ.ಎ ಪೈ. ಹೈಸ್ಕೂಲು ಕಲ್ಯಾಣಪುರದ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭವು ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾದ ಕುಮಾರಿ. ಪ್ರಜ್ಞಾ .ಸಿ.ದೇವಾಡಿಗ, ಕಾರ್ಯದರ್ಶಿಯಾದ ಕುಮಾರಿ ನಂದಿತಾ, ಹಾಗೂ ದಂಡಪಾಣಿಯಾದ ಕುಮಾರಿ ನಿಖಿತಾ ರವರಿಗೆ ರೋಟರಿ ಕ್ಲಬ್ಬಿನ ಅಧ್ಯಕರಾದ ರೊಟೇರಿಯನ್ ಶಂಭು ಶಂಕರ್ ರವರು ಪದಪ್ರದಾನ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ರೋಟರಿ. ವಲಯ 3ರ ಇಂಟರಾಕ್ಟ್ ಸಂಯೋಜಕರಾದ ರೋಟೇರಿಯನ್ ರಾಜಾರಾಂ ಐತಾಳ್, ವಲಯ ಸೇನಾನಿ ರೋಟೇರಿಯನ್ ಬ್ರಾನ್ ಡಿಸೋಜ ಆಗಮಿಸಿ ರೋಟರಿ ಸಂಸ್ಥೆಯ ಸೇವೆ ಮತ್ತು ಯೋಜನೆಯೊಂದಿಗೆ ಇಂಟರಾಕ್ಟ್ ಸದಸ್ಯರ ಪಾಲ್ಗೊಳ್ಳುವಿಕೆ ಬಗ್ಗೆ ತಿಳಿ ಹೇಳಿ ನೂತನ ಪದಾಧಿಕಾರಿಗಳನ್ನು ಹಾಗು ಅವರ ತಂಡವನ್ನು ಅಭಿನಂದಿಸಿದರು. ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀ. ಶೇಖರ್. ಪಿ. ರವರು ಶಾಲಾ ಯೋಜನೆಯಲ್ಲಿ ರೋಟರಿ ಸಂಸ್ಥೆಯ ಸಹಕಾರವನ್ನು ಸ್ಮರಿಸಿದರು. ಮತ್ತು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕುರಿತು ಮಾಹಿತಿ ನೀಡಿದರು. ಇದೇ ವೇದಿಕೆಯಲ್ಲಿ ಶಾಲಾ ಅಭಿಮಾನಿಯಾದ ಸತೀಶ್ ರಾವ್ ರವರು ದೇಣಿಗೆಯಾಗಿ, ಕುಡಿಯುವ ನೀರಿನ ಶೇಖರಣೆ ಗಾಗಿ ನೀಡಿದ ಸ್ಟೀಲ್ ಡ್ರಮ್ ಗಳನ್ನ ಶಾಲೆಗೆ ಹಸ್ತಾಂತರಿಸಿದರು. ರೋಟರಿ ಸಂಸ್ಥೆಯ ವಿದ್ಯಾಸೇತು ಕಾರ್ಯಕ್ರಮದಡಿ ಹೆಚ್ಚುವರಿ 27 ಜೊತೆ ಪುಸ್ತಕಗಳನ್ನು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಅಧ್ಯಾಪಕರು ಇಂಟರಾಕ್ಟ್ ಸಂಯೋಜಕರೂ ಆದ ಶ್ರೀ ಸತ್ಯ ಶಂಕರ್ ಭಟ್ ಅವರು ಸಭಾ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು. ಕಾರ್ಯದರ್ಶಿಗಳಾದ ರೊಟೇರಿಯನ್ ಪ್ರಕಾಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ : ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿ ಸಭೆ
Posted On: 28 Sep 2021, 08:22 PM
ಉಡುಪಿ : ಮಲ್ಪೆ ಬೀಚ್ಗೆ ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳು ಸೇರಿದಂತೆ ಅವರುಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು ಅವರು ಇಂದು ನಗರದ ತಮ್ಮ ಕಚೇರಿಯ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಲ್ಪೆ ಬೀಚ್ಗೆ ದೇಶ ವಿದೇಶಗಳಿಂದ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು , ಪ್ರವಾಸಿಗರಿಗೆ ಅನುಕೂಲಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು , ವಾಹನಗಳ ಸುಗಮ ಸಂಚಾರಕ್ಕೆ ಉತ್ತಮ ರಸ್ತೆ , ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಕಲ್ಪಿಸಿ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವಂತೆ ನೋಡಿಕೊಳ್ಳಬೇಕು ಎಂದರು. ಮಲ್ಪೆ ಬೀಚ್ನಲ್ಲಿ ಈಗಾಗಲೆ ಕೈಗೊಂಡಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲಿ ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ, ಪ್ರವಾಸಿಗರ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಲ್ಪೆ ಬೀಚ್ ನಲ್ಲಿ ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನೊಳಗೊಂಡ ಸಮಗ್ರ ಅಭಿವೃದ್ದಿಯ ನೀಲ ನಕಾಶೆಯನ್ನು ಮುಂದಿನ 20 ವರ್ಷದ ಕಲ್ಪನೆಯೊಂದಿಗೆ ತಯಾರಿಸಲು, ಸಮಾಲೋಚಕರೊಂದಿಗೆ ಚರ್ಚಿಸಿ ಶೀಘ್ರವಾಗಿ ಕರಡು ತಯಾರಿಸಿ ತಿಳಿಸಬೇಕು ಎಂದರು. ಮಲ್ಪೆ ಬೀಚ್ ಪ್ರದೇಶದಿಂದ ಸೈಂಟ್ಮೆರಿಸ್ ದ್ವೀಪಕ್ಕೆ ಹೋಗುವ ಸ್ಪೀಡ್ಬೋಟ್ಗಳು, ಮಲ್ಪೆ ಬಂದರಿನಿಂದ ಹೋಗುವ ದೊಡ್ಡ ಬೋಟ್ಗಳು,ಮಲ್ಪೆ ಬೀಚ್ ಪ್ರದೇಶದಲ್ಲಿ ರೌಂಡಿಂಗ್ ಬೋಟ್ ಹಾಗೂ ವಾಟರ್ ಸ್ಕೂಟಿ ಬೋಟುಗಳು ಮತ್ತಿತರ ಜಲಕ್ರೀಡೆಗಳನ್ನು ನಡೆಸಲು ಟೆಂಡರ್ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ,ಅವುಗಳಿಗೆ ಚಾಲನೆ ನೀಡುವಂತೆ ಸೂಚನೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಬೀಚ್ ಗೆ ಬರುವ ಪ್ರವಾಸಿಗರಿಗೆ ಸಮುದ್ರದ ಅಪಾಯದ ಸ್ಥಳಗಳ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಪ್ರಾಣಾಪಾಯಗಳು ಆಗುತ್ತಿವೆ ,ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು , ಸಮುದ್ರ ತೀರದಲ್ಲಿ ಮೈಕ್ ಮೂಲಕ ಎಚ್ಚರಿಕೆ ಸಂದೇಶಗಳನ್ನು ರವಾನಿಸಬೇಕು,ಒಂದೊಮ್ಮೆ ಅಪಾಯಕ್ಕೆ ಒಳಗಾದವರನ್ನು ರಕ್ಷಿಸಲು ಜೀವರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಸೂಚನೆ ನೀಡಿದರು. ಶಾಸಕ ಕೆ ರಘುಪತಿ ಭಟ್ ಮಾತನಾಡಿ, ಪಡುಕೆರೆ ಬೀಚ್ ಸಹ ಉತ್ತಮ ಪ್ರವಾಸಿ ಸ್ಥಳವಾಗಿದ್ದು , ಅಲ್ಲಿಯೂ ಸಹ ಪ್ರವಾಸಿಗರ ಆಗಮನ ದಿನೇ ದಿನೇ ಹೆಚ್ಚುತ್ತಿದೆ,ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕು ,ಬೀಚ್ ನ ಅಭಿವೃಧ್ದಿಯ ನಿರ್ವಹಣೆಗೆ ಸ್ಥಳೀಯ ಜನರನ್ನು ಒಳಗೊಂಡ, ಭಜನಾ ಮಂದಿರದ ಸದಸ್ಯರುಗಳು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ಮಾಡುವುದರಿಂದ ನಿರ್ವಹಣೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಬೀಚ್ನಲ್ಲಿ ಪ್ರವಾಸಿಗರ ಮನರಂಜನೆ ಹಾಗೂ ಪ್ರಕೃತಿ ಸೌಂದರ್ಯವನ್ನು ಸವಿಯಲು ಅನುಕೂಲವಾಗುವಂತೆ ಹೆಚ್ಚು ಹೆಚ್ಚು ಪ್ರವಾಸಿ ಬೋಟುಗಳು, ಜಲಕ್ರೀಡೆ ಹಾಗೂ ಮತ್ತಿತರ ಉತ್ತಮ ಚಟುವಟಿಕೆಗಳನ್ನು ಕೈಗೊಂಡಾಗ ಪ್ರವಾಸಿಗರಿಗೆ ಹೆಚ್ಚಿನ ಮನೋಲ್ಲಾಸ ಸಿಗುತ್ತದೆ. ಅದಕ್ಕೆ ಆಸ್ಪದ ನೀಡಬೇಕು ಎಂದರು. ಪಡುಕೆರೆ ಸಮುದ್ರತೀರಕ್ಕೆ ಹೊಂದಿಕೊಂಡಿರವ ಸರಕಾರಿ ಜಾಗವನ್ನು ಮರಿನ್ ಬೋರ್ಡ್ಗೆ ಹಸ್ತಾಂತರಿಸಲು ಸರಕಾರಕ್ಕೆ ಪತ್ರ ಬರೆಯುವಂತೆ ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಜಿಲ್ಲೆಯ ಕಲೆ , ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ಥಳೀಯ ಕರಕುಶಲ ವಸ್ತಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಸೀವಾಕ್ ಪ್ರದೇಶದಲ್ಲಿ ಮಾರುಕಟ್ಟೆ ಮಳಿಗೆಯನ್ನು ಕಲ್ಪಿಸಬೇಕು, ಪ್ರವಾಸಿಗರು ಹೆಚ್ಚಾಗಿ ಆಗಮಿಸುವುದರಿಂದ ಸ್ಥಳೀಯ ಜನರಿಗೆ ಉದ್ಯೋಗ ದೊರೆಯುವುದರ ಜೊತೆಗೆ ಅರ್ಥಿಕ ಲಾಭ ದೊರೆಯುತ್ತದೆ ಎಂದರು. ಸಭೆಯಲ್ಲಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭಾ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ರಾಘವೇಂದ್ರ ಕಿಣಿ, ನಗರ ಸಭಾ ಆಯುಕ್ತ ಉದಯ ಶೆಟ್ಟಿ, ನಗರಸಭಾ ಸದಸ್ಯರುಗಳಾದ ಎಡ್ಲಿನ್ ಕರ್ಕಡ, ಸುಂದರ್ ಕಲ್ಮಾಡಿ, ವಿಜಯ್ ಕೊಡವೂರು, ವಿಜಯ್ ಕುಂದೂರು, ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿ ಆರ್ ಝಡ್ ಅಧಿಸೂಚನೆ ೨೦೧೯ ರಲ್ಲಿ ಹೆಚ್ಚಿನ ಚಟುವಟಿಕೆಗೆ ಅವಕಾಶ : ಜಿಲ್ಲಾಧಿಕಾರಿ ಕೂರ್ಮಾರಾವ್
Posted On: 28 Sep 2021, 08:10 PM
ಉಡುಪಿ : ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ ೨೦೧೯ರಲ್ಲಿ ಅಭಿವೃಧ್ದಿ ಚಟುವಟಿಕೆಗಳನ್ನು ಕೈಗೊಳ್ಳಲು ಹೆಚ್ಚಿನ ರಿಯಾಯಿತಿಗಳು ದೊರೆಯಲಿದ್ದು, ಈ ಕುರಿತು ತಯಾರಿಸಿದ ಕರಡು ಯೋಜನೆಯ ಕುರಿತಂತೆ ಸಾರ್ವಜನಿಕರು ಸಲ್ಲಿಸುವ ಅಹವಾಲುಗಳನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ ೨೦೧೯ರ ಪ್ರಕಾರ ತಯಾರಿಸಿದ, ಕರಡು ಕರಾವಳಿ ವಲಯ ನಿರ್ವಹಣಾ ಯೋಜನೆಯ ಸಾರ್ವಜನಿಕ ಅಹವಾಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಡು ಯೋಜನೆಯಲ್ಲಿ, ಉಬ್ಬರವಿಳಿತದ ಪ್ರಭಾವಕ್ಕೆ ಒಳಗಾದ ಜಲನಿಕಾಯಗಳ ಭರತರೇಖೆಯಿಂದ ೧೦೦ಮೀ ವರೆಗೆ ಇದ್ದ ಸಿಆರ್ಝಡ್ ಪ್ರದೇಶವನ್ನು ೫೦ಮೀ. ಗೆ ಕಡಿಮೆಗೊಳಿಸಿದೆ, ಕುದ್ರು ದ್ವೀಪಗಳಿಗೆ ಇದ್ದ ೧೦೦ ಮೀ ವರೆಗೆ ಇದ್ದ ಸಿಆರ್ಝಡ್ ಪ್ರದೇಶವನ್ನು ೨೦ ಮೀ ಗೆ ಕಡಿಮೆಗೊಳಿಸಿದೆ, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಅಥವಾ ಸ್ಥಳೀಯ ನಗರಾಭಿವೃಧ್ದಿ ಯೋಜನಾ ಪ್ರಾಧಿಕಾರಕ್ಕೆ ಸೇರಿಸಿ ಘೋಷಣೆಯಾದ ಗ್ರಾಮಗಳನ್ನು ಕರಾವಳಿ ನಿಯಂತ್ರಣ ವಲಯ ೩ ರಿಂದ ೨ ಕ್ಕೆ ಬದಲಾಯಿಸಲಾಗಿದೆ, ೨೦೧೧ ರ ಜನಗಣತಿ ಆಧಾರದ ಮೇಲೆ ಚದುರ ಕಿ.ಮೀಗೆ ೨೧೬೧ ಕ್ಕಿಂತ ಹೆಚ್ಚಿನ ಜನಸಂಖ್ಯೆಯುಳ್ಳ ಗ್ರಾಮಗಳನ್ನು ಕರಾವಳಿ ನಿಯಂತ್ರಣ ವಲಯ ೩ಎ ಎಂದು ವಿಂಗಡಿಸಿ, ಅಭಿವೃದ್ದಿ ನಿಷಿದ್ದ ಪ್ರದೇಶದ ವ್ಯಾಪ್ತಿಯನ್ನು ಸಮುದ್ರದ ಭರತ ರೇಖೆಯಿಂದ ೫೦ ಮೀ ಗೆ ಸೀಮಿತಗೊಳಿಸಲಾಗಿದೆ ಎಂದರು. ಕರಡು ನಕಾಶೆಯಲ್ಲಿ ಜಿಲ್ಲೆಯ ಕೋಟೆ, ಮಟ್ಟು, ಪಾಂಗಾಳ, ಬಡಾ, ಬೈಂದೂರು, ಪಡುವರಿ, ಯಡ್ತರೆ, ತಗ್ಗರ್ಸೆ ಗ್ರಾಮಗಳನ್ನು ಕರಾವಳಿ ನಿಯಂತ್ರಣ ವಲಯ ೩ ರಿಂದ ೨ ಕ್ಕೆ ಸೇರಿಸಿರುವುದರಿಂದ ಈ ಪ್ರದೇಶದಲ್ಲಿ ಅಭಿವೃದ್ದಿ ಚಟುವಟಿಕೆಗಳನ್ನು ನಡೆಸಲು ಹೆಚ್ಚಿನ ರಿಯಾಯತಿ ದೊರೆಯಲಿದೆ, ಗಂಗೊಳ್ಳಿ ಗ್ರಾಮವನ್ನು ಕರಾವಳಿ ನಿಯಂತ್ರಣ ವಲಯ ೩ಎ ಗೆ ಸೇರಿಸಲಾಗಿದೆ ಎಂದರು. ಸೀಗಡಿ ಕೃಷಿಕ ಸಂಘದ ಕಾರ್ಯದರ್ಶಿ ಶ್ರೀಧರ ಹೆಗಡೆ ಹಾಗೂ ಹಂಗಳೂರು ಗ್ರಾಮದ ಸೀಗಡಿ ಕೃಷಿಕರು, ಸೀಗಡಿ ಬೆಳೆಯುವ ಪ್ರದೇಶವನ್ನು ವೈಮಾನಿಕ ಸಮೀಕ್ಷೆಯಲ್ಲಿ ಹೊಳೆ ಎಂದು ಪರಿಗಣಿಸಿದ್ದು, ಇದರಿಂದ ಸೀಗಡಿ ಕೃಷಿಗೆ ತೊಂದರೆಯಾಗಲಿದೆ ಈ ಬಗ್ಗೆ ಪರಿಶೀಲಿಸುವಂತೆ ಕೋರಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಸೀಗಡಿ ಕೃಷಿಗೆ ಯೋಜನೆಯಿಂದ ಯಾವುದೇ ತೊಂದರೆಯಿಲ್ಲ, ಹೊಸದಾಗಿ ಸೀಗಡಿ ಕೃಷಿ ಮಾಡುವವರು ಅನುಮತಿ ಪಡೆಯಬೇಕಾಗುತ್ತದೆ, ಈಗಾಗಲೇ ಮಾಡುತ್ತಿರುವವರು ನವೀಕರಣ ಮಾಡಬೇಕು. ಸೀಗಡಿ ಕೃಷಿಗೆ ಅನುಮತಿ ನೀಡಲಾಗುತ್ತದೆ. ಹೊಳೆ ಎಂದು ನಮೂದಿಸಿರುವುದನ್ನು ಸರಿಪಡಿಸಲಾಗುವುದು ಎಂದರು. ಹೇರಿಕುದ್ರು, ಕನ್ನಡಕುದ್ರುಗಳಲ್ಲಿ ಹೊಳೆ ಮಧ್ಯೆ ಕಾಂಡ್ಲಾ ಗಿಡಗಳನ್ನು ನೆಟ್ಟಿರುವ ಕಾರಣ ನೀರು ಹರಿಯಲು ತೊಂದರೆಯಾಗಿ ಮರಳು ಶೇಖರಣೆಯಾಗಿದೆ, ಇದರಿಂದ ಹರಿಯುವ ನೀರು ಗ್ರಾಮಗಳಿಗೆ ಹಿಮ್ಮುಖವಾಗಿ ಬಂದು ಪ್ರವಾಹ ಪರಿಸ್ಥಿತಿ ಬರಲಿದ್ದು ಕೂಡಲೇ ಅಲ್ಲಿರುವ ಮರಳು ದಿಬ್ಬ ತೆರವುಗೊಳಿಸುವಂತೆ ಗ್ರಾಮಸ್ಥರು ಕೋರಿದರು. ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್ ಮಾತನಾಡಿ, ಸಿಆರ್ಝಡ್ ನಿಂದ ಮೀನುಗಾರರಿಗೆ ಯಾವುದೇ ತೊಂದರೆಯಾಗದಂತೆ ನಿಯಮಗಳನ್ನು ರೂಪಿಸಬೇಕು, ನಕ್ಷೆಯಲ್ಲಿ ಗಂಗೊಳ್ಳಿ, ಹಂಗಾರಕಟ್ಟೆ ಮತ್ತು ಹೆಜಮಾಡಿ ಪೋರ್ಟ್ಗಳನ್ನು ಗುರುತಿಸಬೇಕು ಎಂದರು. ಸಾರ್ವಜನಿಕ ಅಹವಾಲು ಸಭೆಯಲ್ಲಿ ಸಲ್ಲಿಕೆಯಾಗಿರುವ ಎಲ್ಲಾ ಅಹವಾಲುಗಳನ್ನು ರಾಜ್ಯಕ್ಕೆ ಕಳುಹಿಸಲಾಗುವುದು ಅಲ್ಲಿಂದ ಅದು ಅಗತ್ಯ ಬದಲಾವಣೆಯಾಗಿ ಕೇಂದ್ರಕ್ಕೆ ಸಲ್ಲಿಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಕಾರ್ಯಕ್ರಮದಲ್ಲಿ ಸಿ.ಆರ್.ಝಡ್ ಪ್ರಾದೇಶಿಕ ನಿರ್ದೇಶಕ ಶ್ರೀಪತಿ ಬಿ.ಎಸ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಸೇವಾ ಮನೋಭಾವದಿಂದ ಗೋಶಾಲೆ ನಿರ್ವಹಣೆ ಮಾಡಬೇಕು - ಜಿಲ್ಲಾಧಿಕಾರಿ ಕೂರ್ಮಾರಾವ್
Posted On: 28 Sep 2021, 08:00 PM
ಉಡುಪಿ : ಗೋಶಾಲೆಗಳಲ್ಲಿನ ಗೋವುಗಳ ಪಾಲನೆಯನ್ನು ಸೇವಾ ಮನೋಭಾವದಿಂದ ಯಾವುದೇ ಪ್ರತಿಫಲಗಳನ್ನು ಬಯಸದೇ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದರು. ಅವರು ಸೋಮವಾರ ತಮ್ಮ ಕಛೇರಿಯಲ್ಲಿ ನಡೆದ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿ ಸರಕಾರ ಜಾನುವಾರು ಹತ್ಯ ಪ್ರತಿಬಂಧಕ ಕಾಯ್ದೆ ಹಾಗೂ ಸಂರಕ್ಷಣೆ ಕಾನೂನು ಜಾರಿಗೆ ತಂದಿದೆ. ಗೋರಕ್ಷಣೆಗಾಗಿ ಸರಕಾರ ಜಿಲ್ಲೆಗೊಂದರಂತೆ ಗೋಶಾಲೆ ಆರಂಭಿಸಲು ಮುಂದಾಗಿದ್ದು ಪ್ರತಿ ಜಿಲ್ಲೆಗೆ ಮೊದಲನೇ ಹಂತದಲ್ಲಿ ೨೪ ಲಕ್ಷ ರೂಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ಅನೇಕ ದಾನಿಗಳು ಇದ್ದಾರೆ. ಅವರ ಸಹಕಾರ ಹಾಗೂ ಜನರ ಸಹಭಾಗಿತ್ವದೊಂದಿಗೆ ಗೋಶಾಲೆಗಳನ್ನು ನಿರ್ವಹಣೆ ಮಾಡಬೇಕು ಎಂದ ಅವರು ಸರಕಾರ ಪಶುಗಳ ನಿರ್ವಹಣೆಗೆ ದಿನಕ್ಕೆ ೧೭.೫೦ ರೂ.ಗಳನ್ನು ನೀಡಲು ನಿಗದಿಪಡಿಸಿದೆ. ಆದರೆ ಪಶುಗಳ ನಿರ್ವಹಣೆಗೆ ಇದು ಸಾಕಾಗುವುದಿಲ್ಲ ಹೆಚ್ಚಿನ ಅನುದಾನ ಬೇಕು ಎಂಬ ಬಗ್ಗೆ ಸಂಘ ಸಂಸ್ಥೆಗಳಿಂದ ಕೇಳಿಬರುತ್ತಿದೆ. ಈ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ೨,೫೨,೭೨೪ ಗೋವುಗಳಿದ್ದು ಅವುಗಳಲ್ಲಿ ಶೇ. ೦.೭೫ ರಷ್ಟು ಜಾನುವಾರುಗಳಿಗೆ ಅಂದರೆ ೨,೦೦೦ ರಷ್ಟು ಜಾನುವಾರುಗಳಿಗೆ ಸ್ಥಳಾವಕಾಶ ಇರುವಂತೆ ಗೋಶಾಲೆಗಳನ್ನು ಜಿಲ್ಲೆಯಲ್ಲಿ ತೆರೆಯಬೇಕು ಎಂದ ಅವರು ಗೋಶಾಲೆಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿಗಳನ್ನು ಅಳವಡಿಸಿ ದೈನಂದಿನ ಚಟುವಟಿಕೆಗಳನ್ನು ಇಲಾಖೆ ವೆಬ್ಸೈಟ್ನಲ್ಲಿ ಅಕ್ಟೋಬರ್ ೨ ರಿಂದ ಅಪ್ಲೋಡ್ ಮಾಡಬೇಕು ಎಂದರು. ಗೋಶಾಲೆಗಳಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಕರುಗಳು ಸೇರಿದಂತೆ ಉಪ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಗೋಶಾಲೆಗಳ ಸುಸ್ಥಿರ ನಿರ್ವಹಣೆ ಹಾಗೂ ಸಂಪನ್ಮೂಲ ಕ್ರೂಢಿಕರಣ ಮಾಡಬೇಕು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಜಾನುವಾರುಗಳನ್ನು ನೋಡಿಕೊಳ್ಳಲು ಮುಂದೆ ಬಂದರೆ ಅದಕ್ಕೂ ಅವಕಾಶ ಕಲ್ಪಿಸಿ ಗೋಶಾಲೆಗಳಲ್ಲಿ ದಾಖಲಾಗಿರುವ ಜಾನುವಾರುಗಳು ಮರಣ ಹೊಂದಿದಲ್ಲಿ ಸ್ಥಳಿಯ ಪಶು ವೈದ್ಯಾಧಿರಿಯಿಂದ ಪ್ರಮಾಣ ಪತ್ರಪಡೆದು ದಾಖಲೆ ಇಡಬೇಕು ಎಂದರು. ಪ್ರಸ್ತುತ ಜಿಲ್ಲೆಯಲ್ಲಿ ಈಗಾಗಲೆ ೧೨ ಖಾಸಗಿ ಗೋಶಾಲೆಗಳು ದಯಾಪೂರಕವಾಗಿ ಗೋವುಗಳ ಸಂರಕ್ಷಣೆ ಕಾರ್ಯವನ್ನು ನಿರ್ವಹಿಸುತ್ತಿವೆ. ಅವುಗಳಲ್ಲಿ ನೀಲಾವರದ ಗೋವರ್ಧನಗಿರಿ ಟ್ರಸ್ಟ್, ಶಿರೂರಿನ ಅಮೃತಧಾರ ಗೋಶಾಲೆ ಹಾಗೂ ಕಾರ್ಕಳದ ವೆಂಕಟರಮಣ ಗೋಶಾಲೆಗಳಲ್ಲಿ ೧೦೦ ಕ್ಕೂ ಹೆಚ್ಚು ಜಾನುವಾರುಗಳನ್ನು ಕಳೆದ ೫ ವರ್ಷದಿಂದ ನಿರ್ವಹಣೆ ಮಾಡುತ್ತಿದೆ ಎಂದರು. ಹೆದ್ದಾರಿಯ ಅಕ್ಕ-ಪಕ್ಕದಲ್ಲಿ ಹಾಗೂ ಖಾಲಿ ನಿವೇಶನದಲ್ಲಿ ಬೆಳೆದಿರುವ ಹುಲ್ಲನ್ನು ಸಂಗ್ರಹಿಸಿ ಗೋಶಾಲೆಗಳಿಗೆ ತಲುಪಿಸುವ ಕಾರ್ಯವನ್ನು ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪಟ್ಟಣ ಪಂಚಾಯತ್ಗಳು ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಕಾಡು ಪ್ರಾಣಿಗಳಿಂದ ಜಾನುವಾರುಗಳನ್ನು ರಕ್ಷಣೆ ಮಾಡಲು ಆಯ್ದ ಹಾವಳಿ ಇರುವ ಸ್ಥಳಗಳನ್ನು ಗುರುತಿಸಿ ಸೋಲಾರ್ ದೀಪಗಳನ್ನು ಗ್ರಾ. ಪಂ ಗಳು ಹಾಗೂ ಅರಣ್ಯ ಇಲಾಖೆಗಳು ಅಳವಡಿಸುವುದರಿಂದ ಹಾವಳಿ ತಪ್ಪಿಸಬಹುದು ಎಂದ ಅವರು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಕಾರ್ಕಳದ ಅಭಿನಂದನ ಗೋಶಾಲೆಯ ಕೆ. ಮಾದೇವ, ಕುಂದಾಪುರ ತಾಲೂಕಿನ ಶಿರೂರಿನ ನಂದಗೋಕುಲ ಚಾರಿಟೇಬಲ್ ಟ್ರಸ್ಟ್ನ ಸುರೇಶ ಅವಭೃತ, ನೀಲಾವರ ಗೋಶಾಲೆಯ ಟ್ರಸ್ಟಿ ಹಾಗೂ ಪಶು ಪಾಲನಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಡಾ. ಸರ್ವೋತ್ತಮ ಉಡುಪ, ಕುಮಾರ್ ಕಾಂಚನ್, ಗೋಶಾಲೆಗಳ ನಿರ್ವಹಣೆಯ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಚಂದ್ರ, ಜಿ.ಪಂ ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಶಂಕರ್ ಶೆಟ್ಟಿ, ಪ್ರಾಣಿದಯಾ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಡಾ. ದೀನಾನಾಥ ವಸಂತ್ ಬಿಜೂರ, ಸುಧೀರ್ ಕಾಂಚನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪಡುಬಿದ್ರಿ : ರೋಟರಿ ಕ್ಲಬ್ ವತಿಯಿಂದ ಸಾಕ್ಷರತಾ ದಿನಾಚರಣೆ
Posted On: 28 Sep 2021, 07:51 PM
ಪಡುಬಿದ್ರಿ : ನಮ್ಮ ದೇಶವು ಶೇಕಾಡ 69 ರಷ್ಟು ಸಾಕ್ಷರತೆ ಹೊಂದಿದ್ದು , ದೇಶದ ಪ್ರತಿಯೊಬ್ಬ ಪ್ರಜೆ ಸಾಕ್ಷರತೆ ಹೊಂದಿದ್ದಲ್ಲಿ ದೇಶ ಅಭಿವೃದ್ಧಿ ಕಾಣಲು ಸಾಧ್ಯ. ಸರಕಾರ ಇನ್ನಷ್ಟು ಸಾಕ್ಷರತೆಯ ಬಗ್ಗೆ ಜಾೃಗತಿ ಹಾಗು ಪ್ರೇರೇಪಿಸುವತಂಹ ಕಾರ್ಯಕ್ರಮ ಗಳನ್ನು ಹಮ್ಮಿಕೂಳ್ಳಬೇಕಾದ ಅಗತ್ಯ ವಿದೆ ಎಂದು ಅದಮಾರು ಪೂರ್ಣಪ್ರಜ್ಞಾ ಶಾಲಾ ಶಿಕ್ಷಕಿ ಯಶೋಧ ಪಡುಬಿದ್ರಿಯವರು ಹೇಳಿದರು. ಅವರು ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ರೋಟರಿ ಕಚೇರಿಯಲ್ಲಿ ನಡೆದ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಹೆಜಮಾಡಿ ಗ್ರಾಮದ ಒಬ್ಬ ವಿದ್ಯಾರ್ಥಿಯನ್ನು ರೋಟರಿ ವತಿಯಿಂದ ದತ್ತು ಸ್ವೀಕರಿಸಲಾಯಿತು. ರೋಟರಿ ಅಧ್ಯಕ್ಷ ಮಹಮ್ಮದ್ ನಿಯಾಜ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ವಲಯ ಸಂಯೋಜಕ ರಮೀಜ್ ಹುಸೇನ್ , ಕಾರ್ಯದರ್ಶಿ ಬಿ.ಯಸ್. ಆಚಾರ್ಯ, ಕಾರ್ಯಕ್ರಮ ನಿರ್ದೇಶಕ ಸುಧಾಕರ್ ಕೆ. ಉಪಸ್ಥಿತರಿದ್ದರು. ಮಹಮ್ಮದ್ ನಿಯಾಜ್ ಸ್ವಾಗತಿಸಿ, ಸುಧಾಕರ್ ಕೆ. ನಿರೂಪಿಸಿ, ಬಿ.ಯಸ್. ಆಚಾರ್ಯ ವಂದಿಸಿದರು.
ಮುಂಡ್ಕೂರು : ಜೇಸೀ ಸಪ್ತಾಹ -2021; ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 5 ರವರಗೆ
Posted On: 28 Sep 2021, 07:42 PM
ಕಾರ್ಕಳ : ಜೇಸಿಐ ಮುಂಡ್ಕೂರು ಭಾರ್ಗವ, ಜೇಸಿರೇಟ್ ಮತ್ತು ಜೂನಿಯರ್ ಜೇಸೀ ವಿಭಾಗ ಪ್ರಾಂತ್ಯ -E, ವಲಯ XV 23 ರ ಸಂಭ್ರಮ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 5 ರವರಗೆ ನಡೆಯಲಿದೆ. ಸೆಪ್ಟೆಂಬರ್ 29 ರಂದು ಸಂಜೆ 6:45 ಕ್ಕೆ ಉದ್ಘಾಟನೆಗೊಳ್ಳಲಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಗೌರವಾರ್ಪಣೆ, ರಂಗೋಲಿ, ಮೆಹಂದಿ ಸ್ಪರ್ಧೆ, ವಾಲಿಬಾಲ್ ಪಂದ್ಯಾಟ, ವಿದ್ಯಾರ್ಥಿಗಳಿಗೆ ಪ್ರತಿಭಾ ಸ್ಪರ್ಧೆ ನಡೆಯಲಿದ್ದು ಅಕ್ಟೋಬರ್ 5 ರಂದು ಸಂಜೆ 6:45 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಿಧನ : ಸಂತೋಷ್ ರಘುರಾಮ್ ಶೆಟ್ಟಿ ಕಳತ್ತೂರು ಬರ್ಪಾಣಿ
Posted On: 28 Sep 2021, 02:24 PM
ಕಾಪು : ಇಲ್ಲಿನ ಮಯೂರ ಹೋಟೆಲ್ ಮಾಲೀಕರಾದ ಸಂತೋಷ್ ರಘುರಾಮ್ ಶೆಟ್ಟಿ ಕಳತ್ತೂರು ಬರ್ಪಾಣಿ ಅನಾರೋಗ್ಯದಿಂದ ಇಂದು ಮಧ್ಯಾಹ್ನ ದೈವಾದೀನರಾಗಿದ್ದಾರೆ. ಅವರ ಅಂತ್ಯ ಸಂಸ್ಕಾರ ಇಂದು ರಾತ್ರಿ 8.30 ಕ್ಕೆ ಕಳತ್ತೂರು ಮಯೂರ ಹೌಸ್ ನಲ್ಲಿ ನಡೆಯಲಿದೆ.
ಸನ್ಮಾನ : ಛಾಯಾಗ್ರಾಹಕ ಸುರೇಂದ್ರ ಕುಲಾಲ್ ಪಣಿಯೂರ್
Posted On: 28 Sep 2021, 12:11 PM
ಕಾಪು : ಛಾಯಾಗ್ರಾಹಕ ಸುರೇಂದ್ರ ಕುಲಾಲ್ ಪಣಿಯೂರ್ ಅವರಿಗೆ ಶ್ರೀ ನೀಲಕಂಠ ಮಹಾ ಬಬ್ಬುಸ್ವಾಮಿ ದೈವಸ್ಥಾನ ಬೈಲೂರು ವತಿಯಿಂದ ಸನ್ಮಾನಿಸಲಾಯಿತು.
ಕಾಪು ರೋಟರಿ ಕ್ಲಬ್ : ಉಚಿತ ಮಧುಮೇಹ ತಪಾಸಣಾ ಶಿಬಿರ
Posted On: 28 Sep 2021, 10:52 AM
ಕಾಪು : ಕಾಪು ರೋಟರಿ ಕ್ಲಬ್ಬಿನ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಬುಧವಾರ (29-9-2021) ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಾಪು ಪೇಟೆಯ ಅನಂಥಮಹಲ್ ಕಟ್ಟಡದ ಮುಂಬಾಗದಲ್ಲಿ ಉಚಿತ ಮಧುಮೇಹ, ರಕ್ತ ಪರೀಕ್ಷೆ ನಡೆಸಲಾಗುವುದು. ಸಾರ್ವಜನಿಕರು ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನ್ಯೂ ಫ್ರೆಂಡ್ಸ್ ಗಿರಿನಗರ ವತಿಯಿಂದ ಶ್ರಮದಾನ ಕಾರ್ಯಕ್ರಮ
Posted On: 28 Sep 2021, 10:40 AM
ಕಾಪು : ನ್ಯೂ ಫ್ರೆಂಡ್ಸ್ (ರಿ.) ಗಿರಿನಗರ ಇದರ ವತಿಯಿಂದ ಗಿರಿನಗರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಕುರ್ಕಾಲು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹೇಶ್ ಶೆಟ್ಟಿ ಬಿಳಿಯಾರು ,ನ್ಯೂ ಫ್ರೆಂಡ್ಸ್ ಗಿರಿನಗರದ ಅಧ್ಯಕ್ಷರು , ಸದಸ್ಯರು ಉಪಸ್ಥಿತರಿದ್ದರು.
