Updated News From Kaup
ಶಂಕರ್ ಶಾಂತಿ ಪ್ರಕರಣಕ್ಕೆ ನ್ಯಾಯ ಸಿಗದಿದ್ದಲ್ಲಿ ಮಕ್ಕಳೊಂದಿಗೆ ಉಪವಾಸ ಸತ್ಯಾಗ್ರಹ : ಪೂರ್ಣಿಮ ಶಂಕರ್ ಶಾಂತಿ

Posted On: 11-03-2021 07:15PM
ಉಡುಪಿ : ಶಂಕರ್ ಶಾಂತಿಯವರು ಜನಸಾಮಾನ್ಯರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟಗಳನ್ನು ರೂಪಿಸುತ್ತಾ ಕಾನೂನು, ನಿಯಮ ಪಾಲನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ನನ್ನ ಗಂಡನ ಮೇಲೆ ದಿನಾಂಕ 20-02-2021, ಆದಿತ್ಯವಾರದಂದು ಮನೆಯ ಸಮೀಪದ ಕಾಳಿಕಾಂಬ ದೇವಾಲಯ ಅಡುಗೆ ಕೋಣೆಯಲ್ಲಿ ಕೂಡಿ ಹಾಕಿ, ಚಿತ್ರ ಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅದೇ ಸಮಯಕ್ಕೆ ಬೊಬ್ಬೆ ಕೇಳಿ ನಾನು ಸ್ಥಳಕ್ಕಾಗಮಿಸಿದಾಗ ನನ್ನ ಗಂಡ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಅವರನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದೆ. RTI ಕಾರ್ಯಕರ್ತನಾಗಿ ಸಾಮಾಜಿಕ ನೆಲೆಯಲ್ಲಿ ತನ್ನ ಊರಿನಲ್ಲಿ ಹಾಗೂ ಸುತ್ತಮುತ್ತ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದವರು ನನ್ನ ಗಂಡ. ರಸ್ತೆ ಸಾರಿಗೆ ಸುರಕ್ಷತೆ ವಿಷಯ, ಕಾಂಕ್ರೀಟ್ ರಸ್ತೆ ಕಳಪೆ ವಿಷಯ, ಬಾರ್ಕೂರು ಜೈನ ಬಸದಿ ಅತಿಕ್ರಮಣ ತೆರವು, ಬಾರ್ಕೂರು ಗ್ರಾ. ಪಂ. ಅವ್ಯವಹಾರ, ಹೊಸಾಳ ಗರಡಿಯಲ್ಲಿ ವೈದಿಕನೋರ್ವನ ಅನಾಚಾರ ಪ್ರಶ್ನಿಸುವಿಕೆ, ಇಂತಹದ್ದೆ ಅನೇಕ ಜನಪರ ಸೇವೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರು ನನ್ನ ಗಂಡ ಶಂಕರ ಶಾಂತಿ.
ಜೈನ್ ಬಸದಿ ಅತಿಕ್ರಮಣ ತೆರವು ಮತ್ತು ರಸ್ತೆ ಬದಿಯಲ್ಲಿ ಬ್ಯಾನರ್ ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರ ಕುರಿತು ನನ್ನ ಗಂಡ ಕ್ರಮ ಕೈಗೊಂಡಿದ್ದರಿಂದ ದುಷ್ಕರ್ಮಿಗಳಾದ ಪ್ರವೀಣ ಆಚಾರ್ಯ, ಪ್ರಸಾದ್ ಆಚಾರ್ಯ, ಶಾಂತರಾಮ ಶೆಟ್ಟಿ, ಮಂಜಪ್ಪ ಪೂಜಾರಿ, ದಿವಾಕರ ಒಟ್ಟು ಸೇರಿ ಕಬ್ಬಿಣದ ರಾಡ್‌ನಿಂದ ಕೊಲೆಯತ್ನ ನಡೆಸಿರುವುದು ದುಷ್ಟಕೂಟದ ರಾಜಕೀಯ ಪ್ರೇರಿತ ದುಷ್ಟಕೃತಕ್ಕೆ ಈ ಹಲ್ಲೆ ಕಾರಣವಾಗಿದೆ. ಮನುಷ್ಯತ್ವವಿಲ್ಲದ ವರ್ತನೆಯಾಗಿದ್ದು ಇದರಲ್ಲಿ ನನ್ನ ಗಂಡನ ಸಂಬಂದಿಯಾದ ಮಂಜಪ್ಪ ಪೂಜಾರಿ ಇತರರ ಜೊತೆ ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ನನ್ನ ಗಂಡನ ಬೊಬ್ಬೆ ಕೇಳಿ ನಾನು ಬಾರದೆ ಹೋದಲ್ಲಿ ನನ್ನ ಗಂಡ ಶಿವನ ಪಾದ ಸೇರುತ್ತಿದ್ದರೇನೋ? ನಾನು ಈ ಪ್ರಕರಣ ದಾಖಲಿಸುವ ಮೊದಲೇ ನನ್ನ ಗಂಡನ ಸಂಬಂದಿಯಾದ ಮಂಜಪ್ಪ ಪೂಜಾರಿ ನನ್ನ ಗಂಡನೇ ದೇವಾಲಯದ ಕಿಟಕಿ ಗಾಜನ್ನು ಒಡೆದು ಇತರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರು ದಾಖಲಿಸಿದ್ದು ವಿಪರ್ಯಾಸವೇ ಸರಿ. ಅದೇ ದಿನ ನಾನು ಪ್ರವೀಣ ಆಚಾರ್ಯ, ಪ್ರಸಾದ್ ಆಚಾರ್ಯ, ಶಾಂತರಾಮ ಶೆಟ್ಟಿ, ಮಂಜಪ್ಪ ಪೂಜಾರಿ, ದಿವಾಕರ ಮೇಲೆ ಹಲ್ಲೆ ಪ್ರಕರಣವನ್ನು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. 5ಜನ ಆರೋಪಿಗಳ ಮೇಲೆ ಅಪರಾಧ ಕ್ರಮಾಂಕ 27/2021 ಕಲಂ: 143, 147, 148, 341, 323, 324, 326, 307, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಮಾರಣಾಂತಿಕವಾಗಿ ಹಲ್ಲೆಗೊಳಗಾದ ಬಾರಕೂರಿನ ಆರ್ ಟಿ ಐ ಕಾರ್ಯಕರ್ತ ನನ್ನ ಗಂಡ ಶಂಕರ ಶಾಂತಿಯವರು ಈಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಮತ್ತು ಪದಾಧಿಕಾರಿಗಳ ಜೊತೆಗೆ ನಾನು ತೆರಳಿ ದಿನಾಂಕ 25/02/2020 ರಂದು ಮನವಿ ಸಲ್ಲಿಸಿದ್ದೇವೆ. ತದನಂತರ ಉಡುಪಿ ಬನ್ನಂಜೆ ಬಿಲ್ಲವ ಸಂಘದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು, ಪ್ರತಿಭಟನೆಯಲ್ಲಿ ಜೈನ್ ಸಮುದಾಯದ ಆಕಾಶ್ ರಾಜ್ ಜೈನ್ ರವರು ಸಹ ಭಾಗಿಯಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ದ.ಸಂ.ಸ.ಕ ರಾಜ್ಯಾಧ್ಯಕ್ಷರಾದ ಶೇಖರ್ ಹಾವಂಜೆ, ಅ.ಭಾ.ಹಿಂ.ಮ.ಸ ಸಹ ಹೋರಾಟಕ್ಕೆ ಬೆಂಬಲ ಸೂಚಿಸಿತ್ತು, ಹೋರಾಟದ ಮಾರನೇ ದಿನ ಹಲ್ಲೆಯ ಪ್ರಮುಖ ಆರೋಪಿ ಪ್ರವೀಣ್ ಆಚಾರ್ಯನನ್ನು ಬಂಧಿಸಿದ್ದಾರೆ.
ದಿನಾಂಕ 04/03/2021 ರಂದು ಬ್ರಹ್ಮವಾರ ಠಾಣೆ ಎದುರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಹಲವು ಬಿಲ್ಲವ ಸಂಘಟನೆ ಮುಖಂಡರು, ದ.ಸಂ.ಸ.ಕ, ಜೈನ್ ಸಮುದಾಯದ ಪ್ರಮುಖರೂ ಜೊತೆಗೆ ನಾನು ಮತ್ತು ನನ್ನ ಮಕ್ಕಳು ಹಾಗೂ ಪರಿವಾರ ಸದಸ್ಯರು ಸೇರಿ ಪ್ರತಿಭಟನೆ ಮಾಡಿದ್ದೆವು ನಂತರ ಮತ್ತೆ ಹಲ್ಲೆಗೆ ಸಂಬಂಧಿಸಿದ ಮೂವರು ಆರೋಪಿಗಳ ಬಂಧನವಾಗಿದೆ. ಆದರೂ ಈ ಹಲ್ಲೆ ಸಂಬಂಧಿಸಿದ ಪ್ರಮುಖ 4 ಜನ ಆರೋಪಿಗಳಾದ ಮಂಜಪ್ಪ ಪೂಜಾರಿ, ಶಾಂತರಾಮ್ ಶೆಟ್ಟಿ, ಪ್ರಸಾದ್ ಆಚಾರ್ಯ ಮತ್ತು ದಿವಾಕರ ಆಚಾರ್ಯರವರ ಬಂಧನ ಇನ್ನು ಆಗಿಲ್ಲ. ನನ್ನ ಗಂಡನ ಮೇಲೆ ಹಲ್ಲೆ ನಡೆದ್ದು ಇಂದಿಗೆ 19 ದಿನಗಳು ಕಳೆದರು ಪ್ರಮುಖ ಆರೋಪಿಗಳ ಬಂಧನವಾಗದೆ ಇರುವುದು ವಿಷಾದನೀಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾವಿ ವ್ಯಕ್ತಿಗಳು, ರಾಜಕೀಯ ಪ್ರೇರಿತ ಶಕ್ತಿಗಳು ಪೊಲೀಸ್ ಇಲಾಖೆಯ ಕಾರ್ಯಚರಣೆ ಅಡ್ಡಿ ಪಡಿಸುತ್ತಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಮೂಲಕ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಹಿಂದುಳಿದ ಜಾತಿ ಸಚಿವರು ಮತ್ತು ಉಡುಪಿ ಜಿಲ್ಲೆ ಎಲ್ಲ ಶಾಸಕರಲ್ಲಿ ನನ್ನ ಗಂಡನಿಗೆ ಆದ ಅನ್ಯಾಯಕ್ಕೆ, ನ್ಯಾಯ ದೊರಕಿಸಿ ಕೊಡಬೇಕು ಮತ್ತು ಕೂಡಲೇ ಪ್ರಮುಖ ಆರೋಪಿಗಳನ್ನು ಬಂಧಿಸಬೇಕೆಂದು ವಿನಂತಿಸುತ್ತೇನೆ. ಆದಿತ್ಯವಾರದೊಳಗೆ ಪ್ರಮುಖ ಆರೋಪಿಗಳ ಬಂಧನವಾಗದಿದ್ದಲ್ಲಿ ದಿನಾಂಕ 15-03-2021ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಾನು ಮತ್ತು ನನ್ನ ಮಕ್ಕಳು ಜೊತೆಗೆ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತೇನೆ ಮತ್ತು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಮತ್ತು ಎಲ್ಲಾ ಇತರ ಸಂಘಟನೆಗಳ ಮುಖಂಡರ ಬೆಂಬಲದೊಂದಿಗೆ ಪ್ರತಿಭಟನೆ ನಡೆಸುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲೂರು : ಮಹಾ ಶಿವರಾತ್ರಿಯ ಪ್ರಯುಕ್ತ ನಿರಂತರ ಭಜನೆ

Posted On: 11-03-2021 02:55PM
ಎಲ್ಲೂರು ,ಮಾ.11: ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ 'ಮಹಾ ಶಿವರಾತ್ರಿ'ಯ ಪ್ರಯುಕ್ತ ವಿವಿಧ ಆಹ್ವಾನಿತ ತಂಡಗಳಿಂದ ನಿರಂತರ ಭಜನಾ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಶ್ರೀ ವಿಶ್ವೇಶ್ವರ ದೇವಸ್ಥಾನ ಎಲ್ಲೂರು ಹಾಗೂ ಎಲ್ಲೂರು ಯುವಕ ಮಂಡಲ(ರಿ) ಜಂಟಿಯಾಗಿ ಹಮ್ಮಿಕೊಂಡಿದ್ದು ದೇವಳದ ಪವಿತ್ರಪಾಣಿ ಕೆ.ಎಲ್.ಕುಂಡಂತಾಯ ಮತ್ತು ಎಲ್ಲೂರುಗುತ್ತು ಪ್ರಪುಲ್ಲ ಶೆಟ್ಟಿ ಅವರು ಉದ್ಘಾಟಿಸಿದರು.
ಪಂ.ಸದಸ್ಯ ವೈ.ರವಿರಾಜ್, ವಿಶ್ವೇಶ್ವರ ಭಜನಾ ಮಂಡಳಿಯ ಹಿರಿಯ ಸದಸ್ಯರಾದ ವೈ.ಸೀತಾರಾಮ ರಾವ್ ಹಾಗೂ ರಾಮಚಂದ್ರ ರಾವ್ , ನರಸಿಂಹ ಜೆನ್ನಿ , ಯುವಕ ಮಂಡಲದ ಅಧ್ಯಕ್ಷ ನಾಗೇಶ ಕೊಡಂಗೆ ಹಾಗೂ ಸದಸ್ಯರು ಭಾಗವಹಿಸಿದ್ದರು. ಪರಿಸರದ ಭಜನಾ ಮಂಡಳಿಗಳು ನಿರಂತರ ಭಜನೆಯಲ್ಲಿ ಪಾಲ್ಗೊಂಡವು.
ರಾಷ್ಟ್ರಮಟ್ಟದ ದಾಖಲೆ ನಿರ್ಮಿಸಿದ ರೇಣುಕಾ ಗೋಪಾಲಕೃಷ್ಣ ಪೆರಂಪಳ್ಳಿಗೆ ಸನ್ಮಾನ

Posted On: 11-03-2021 10:22AM
ಉಡುಪಿ : ವಿಶ್ವ ಮಹಿಳಾ ದಿನಾಚರಣೆಯಂದು ಕಡಿಮೆ ಅವಧಿಯಲ್ಲಿ 108 ಸೂರ್ಯ ನಮಸ್ಕಾರಗಳನ್ನು ಪೂರ್ಣಗೊಳಿಸಿ ಕರ್ನಾಟಕ ಎಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ರಾಷ್ಟ್ರಮಟ್ಟದ ದಾಖಲೆ ನಿರ್ಮಿಸಿದ ಶ್ರೀಮತಿ ರೇಣುಕಾ ಗೋಪಾಲಕೃಷ್ಣರವರನ್ನು ಸಿ ಎಸ್ ಪಿ ಪೊಲೀಸ್ ಅಧೀಕ್ಷಕ ಚೇತನ್ ಆರ್. ಐಪಿಎಸ್ ಸನ್ಮಾನಿಸಿದರು.

ಈ ಸಂದರ್ಭ ರೇಣುಕಾ ಗೋಪಾಲಕೃಷ್ಣ ಅವರ ಕುಟುಂಬ ವರ್ಗ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಶಿವರಾತ್ರಿ : ಶಿವಸ್ಮರಣೆ - ಜಗವು ಶಿವನೊಳಗುಂಟು ಜಗದೊಳು ಶಿವನಿಲ್ಲ ...!

Posted On: 11-03-2021 09:54AM
{ ಮಾಘ ಮಾಸದಲ್ಲಿ ಸನ್ನಿಹಿತವಾಗುವ ಬಹುಳ ಚತುರ್ದಶಿಯಂದು "ಶಿವರಾತ್ರಿ" . ಇದು ಹಬ್ಬವಲ್ಲ ವ್ರತ. ಅಭಿಷೇಕ - ಅರ್ಚನೆಗಳೇ ಪ್ರಧಾನವಾಗಿರುವ ಆರಾಧನೆ. ಉಪವಾಸದ ಶ್ರದ್ಧೆ , ದಿನಪೂರ್ತಿ ಮಹೇಶ್ವರನ ಸನ್ನಿಧಾನದಲ್ಲಿ ಕಾಲಕಳೆಯುವ ವ್ರತ ನಿಷ್ಠೆಗಳ ಸಂಕಲ್ಪ .ಇದೇ ಶಿವರಾತ್ರಿ.} ಸೃಷ್ಟಿ ಕರ್ತನಾದ ಬ್ರಹ್ಮನ ಸತ್ಯಲೋಕ ಎಲ್ಲಿದೆ ,ಪಾಲನಾ ಕರ್ತನಾದ ನಾರಾಯಣನ ವೈಕುಂಠ ಎಲ್ಲಿದೆ,ಇಂದ್ರನ ಸ್ವರ್ಗ ಎಲ್ಲಿದೆ, ಯಮನ ಶೈಮಿನಿ ಎಲ್ಲಿದೆ . ಇವೆಲ್ಲ ಪುರಾಣದ ವರ್ಣನೆಗಳಿಂದ ಋಷಿ ವಾಕ್ಯಗಳಿಂದ ಕಲ್ಪನೆಯಲ್ಲಿ ಸಂಭವಿಸುವ ಅಥವಾ ಅರ್ಥೈಸಿಕೊಳ್ಳಬಹುದಾದ ಲೋಕಗಳು.ಆದರೆ ಲಯಾಧಿಕಾರಿಯಾದ ಮಹಾದೇವನ ವಾಸಸ್ಥಾನ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ಸರಳ .ಅದು ಭರತವರ್ಷದ ಉತ್ತರದಲ್ಲಿರುವ ಬೆಳ್ಳಿಬೆಟ್ಟ ,ಗೌರಿಶಂಕರ ಅಥವಾ ಕೈಲಾಸ.ಈ ನೆಲೆಯನ್ನು ಕಲ್ಪಿಸಬೇಕಾಗಿಲ್ಲ , ಭೂಮಿಯಲ್ಲಿ ಬದುಕುವ ಪ್ರತಿಯೊಬ್ಬನೂ ಆಲೋಚಿಸಿ ನಿರ್ಧರಿಸಬಹುದಾದ ನೆಲೆಯಾಗಿದೆ ಮಹಾದೇವನ ವಾಸಸ್ಥಾನ.ಆದುದರಿಂದಲೇ ಮಹಾರುದ್ರದೇವರು ಸುಲಭ ಗ್ರಾಹ್ಯರು, ಜನಮಾನಸಕ್ಕೆ ಸಮೀಪದ ದೇವರು. ಜನಪದರ ಆರಾಧ್ಯ ಮೂರ್ತಿ, ಶಿಷ್ಟ ಚಿಂತನೆಯಲ್ಲಿ 'ಅಧ್ಯಾತ್ಮದ ಒಂದು ಬೆರಗು'. ಜಗತ್ತಿಗೆ ಮಾತೃ - ಪಿತೃ ಸ್ಥಾನದಲ್ಲಿರುವ ಪಾರ್ವತಿ ಸಮೇತನಾದ ಮಹೇಶ್ವರ ; ಇವರ ದಾಂಪತ್ಯ ಆದರ್ಶ ಎಂದೇ ಮನುಕುಲ ಸ್ವೀಕರಿಸಿದೆ.
• ಪಾರ್ವತಿಯ ಶಿವತಪಸ್ಸು , ಶಿವಭಕ್ತ ಮಾರ್ಕಾಂಡೇಯ ,ಬೇಡರ ಕಣ್ಣಪ್ಪ , ಶ್ವೇತಕುಮಾರ ಮುಂತಾದ ಪುರಾಣ ಹೇಳುವ ಶಿವಭಕ್ತರ ಕಥೆಗಳು ಜನಜನಿತ . ಸರಳ - ಸಹಜ ಭಕ್ತಿಗೆ ಒಲಿಯುವ ಶಿವ ಕಪಟವರಿಯದ ಮುಗ್ಧನೆಂದೂ ಭಸ್ಮಾಸುರನ ಪ್ರಕರಣವನ್ನು ಉಲ್ಲೇಖಿಸಿ ವಿಮರ್ಶಕರು ವ್ಯಾಖ್ಯಾನಿಸುತ್ತಾರೆ. • ರಾಕ್ಷಸರಿಗೆ ವರ ಕೊಡುವಲ್ಲಿ ಶಿವನ ಹೃದಯವಂತಿಕೆ ಮಿಡಿಯುವ ಕ್ರಮ ಗಮನಸೆಳೆಯುತ್ತದೆ .ಭವಿಷ್ಯದ ಯೋಚನೆ ಇಲ್ಲದೆ 'ತಪಸ್ಸು ,ತಾನು ಒಲಿಯಬೇಕು' ಎಂಬ ಮುಗ್ಧತೆ ಮಾತ್ರ ಪ್ರಧಾನವಾಗುವ ಮಹಾದೇವನ ಚರ್ಯೆ ಬಹುತೇಕ ಮನುಷ್ಯ ಸಹಜವಾಗಿಯೇ ವ್ಯಕ್ತವಾಗುತ್ತದೆ . • ಶಿವ ಶರಣರು , ದಾಸರು ಶಿವನನ್ನು ಕಂಡ ಬಗೆಯೂ ವಿಶಿಷ್ಟ. - 'ಜಗವು ಶಿವನೊಳಗುಂಟು ಜಗದೊಳು ಶಿವನಿಲ್ಲ ಜಗವು ಶಿವನಿಂದ ಬೇರಿಲ್ಲ ಈ ಬೆಡಗ ಅಘಹರನೇ ಬಲ್ಲ ಸರ್ವಜ್ಞ' 'ತ್ರಿಪದಿ ಕವಿ ಸರ್ವಜ್ಞನ ನಿರೂಪಣೆಯಂತೆ ಜಗವು ಶಿವನಿಂದ ಬೇರಿಲ್ಲ'. - 'ರಾತ್ರಿಯೊಳು ಶಿವರಾತ್ರಿ' ಎಂದೂ ಸರ್ವಜ್ಞ ಉದ್ಗರಿಸಿದ್ದಿದೆ . - ಶಿವರಾತ್ರಿಯ ಜಾಗರಣೆಯಲ್ಲಿ ತನಗೆ ಶಿವ ದರ್ಶನವಾದುದನ್ನು ದಾಸವರೇಣ್ಯ ಪುರಂದರದಾಸರು ಹಾಡುತ್ತಾರೆ . - ಭಕ್ತಿ ಭಂಡಾರಿ ಬಸವಣ್ಣನವರಿಗೆ ಶಿವ ಎಲ್ಲೆಲ್ಲೂ ಕಾಣುತ್ತಾನೆ ,ವಿಶ್ವವೇ ಶಿವಮಯವಾಗಿ ಭಾಸವಾಗುತ್ತದೆ . ತ್ರಿನಯನನ ಕಣ್ಣಿನ ಕಾಂತಿಯ ಬೆಳಕಿನಿಂದಲೇ ಓಡಾಡುತ್ತಾರೆ ಬಸವಣ್ಣನವರು. - 'ಚೆನ್ನಮಲ್ಲಿಕಾರ್ಜುನಯ್ಯ ,ಆತ್ಮ ಸಂಗಾತಕ್ಕೆ ನೀನೆನಗುಂಟು', ಎನ್ನುತ್ತಾ ಸಂಸಾರ ತ್ಯಾಗ ಮಾಡಿ ಹೊರಟಳು ಮಹಾಶಿವಶರಣೆ ಅಕ್ಕಮಹಾದೇವಿ. • ನಮ್ಮ ದೈವ - ಬೂತಗಳ ನಡುವಣ ಲೋಕದಲ್ಲಿ ಅಬ್ಬರಿಸುವ ಸತ್ಯಗಳ ಕಥೆಗಳು ರೋಚಕ. - ಪಂಜುರ್ಲಿ ಪಾಡ್ದನವು ಶಿವನು ಹೇಗೆ ಈ ದೈವೀಶಕ್ತಿ ಪ್ರಕಟಗೊಳ್ಳುವಂತೆ ಮಾಡಿ ಭೂಮಿಗೆ ಕಳುಹಿಸಿದನೆಂಬ ಕಥೆಯನ್ನು ವಿವರಿಸುತ್ತದೆ . - ಮುಂಡತ್ತಾಯ ದೈವವು ಶಿವ ದೇವರ ಹಣೆಯಿಂದ ಜನಿಸಿತಂತೆ . - ಜೋಗಿ ಪುರುಷರಿಗೆ ಸಂಬಂಧಿಸಿದ ಕೆಲವು ಪಾಡ್ದನಗಳು ಕದಿರೆಯ ಮಂಜುನಾಥ ದೇವರನ್ನು ಉಲ್ಲೇಖಿಸಿವೆ . - ಗುಳಿಗ ದೈವವು ಶಿವಾಂಶವೆಂಬ ವರ್ಣನೆ ಇದೆ . - ಗಣಪತಿಯ ಜನನದ ಕುರಿತಾದ ಜಾನಪದ ಪಾಡ್ದನವೊಂದರಲ್ಲಿ ಶಿವನ ಪ್ರೇಮ ವಿಲಾಸದ ವರ್ಣನೆ ಇದೆ .ಬಾಮಕುಮಾರನೆ ಗಣಪತಿ . - ಶಿವಪಾರ್ವತಿಯರು ಬೇಡರಾಗಿಯೋ , ಕೊರವಂಜಿಗಳಾಗಿಯೋ 'ಮೇಗಿ' ಲೋಕದಿಂದ ಭೂಲೋಕಕ್ಕೆ ಇಳಿಯುವಂತಹ ಕಥಾನಕಗಳಿವೆ . - ಶಿವ - ಪಾರ್ವತಿಯರ ಭೂಲೋಕ ಸಂಚಾರದ ಕತೆಗಳು ಮತ್ತು ಆ ಸಂದರ್ಭಗಳಲ್ಲಿ ಸಂಭವಿಸಿದ ಘಟನೆಗಳಿಂದ ಕೆಲವೊಂದು ಕ್ಷೇತ್ರಗಳು ನಿರ್ಮಾಣವಾಗುವುದನ್ನು ಕೇಳಬಹುದು - ನೋಡಬಹುದು. ಈ ಮೇಲಿನ ವಿವರಣೆಗಳಿಂದ ಶಿವ ಮನುಷ್ಯನ ಬದುಕಿಗೆ ಸಮೀಪದ ದೇವರಾಗಿ ಒಮ್ಮೆ ನಮ್ಮೊಂದಿಗೆ ನಮ್ಮವನಾಗಿ ನಮ್ಮಂತೆಯೇ ನಮ್ಮ ಕಷ್ಟಸುಖ ವಿಚಾರಿಸುವ; ಮತ್ತೊಮ್ಮೆ ದೇವತ್ವದ ತುತ್ತತುದಿಗೇರುತ್ತಾ ಮಹನೀಯನಾಗುವ ಆ ಮೂಲಕ ಭವ ಬಂಧನದಿಂದ ಮುಕ್ತಿಕೊಡುವ ಮಹಾದೇವನಾಗಿ ಅನಾವರಣಗೊಳ್ಳುತ್ತಾನೆ . ಈ ದೇಶದಲ್ಲಿ ಶಿವನು ಆದಿಮದಿಂದ ವೈದಿಕ ಸಂಸ್ಕೃತಿಯ ವರೆಗೆ ವಿವಿಧ ರೂಪಗಳಿಂದ ,ಅನುಸಂಧಾನ ವಿಧಾನಗಳಿಂದ , ಸ್ವೀರಿಸಲ್ಪಟ್ಟ ದೇವರು. ತುಳುನಾಡಿನಲ್ಲಂತೂ ಬಹುಪುರಾತನದಿಂದ ಪೂಜೆಗೊಂಡ ದೇವರು.
ವಿರಕ್ತಿ - ಅನುರಕ್ತಿ : ಸದಾ ಧ್ಯಾನಾಸಕ್ತನಾಗಿರುವ ಶಿವನು ಎಷ್ಟು ವಿರಕ್ತನೋ ಅಷ್ಟೇ ಅನುರಕ್ತನು. ಸರ್ವಸಂಗ ಪರಿತ್ಯಾಗದಂತಹ ನಿವೃತ್ತಿಯು ಎಷ್ಟು ಗಾಢವಾಗಿದೆಯೋ ಅಷ್ಟೆ ತೀವ್ರವಾದ ಪ್ರವೃತ್ತಿಯು ಶಂಕರನಲ್ಲಿ ಕಾಣಬಹುದು . ಗೊಂದಲಗಳ ಗೂಡಾಗಿ ಕಾಣುವ , ವಿರೋಧಾಭಾಸಗಳ ಕೇಂದ್ರವೇ ಆಗಿರುವ ಶಿವ - ಶಿವ ಪರಿವಾರ ಸ್ವತಃ ದೇವದೇವನೇ ಮಾನವಕೋಟಿಗೆ ಒಂದು ಆದರ್ಶದ ಸಂದೇಶವನ್ನು ನೀಡುವಂತಿದೆ .ಕಾಮನನ್ನು ದಹಿಸಿ ಕಾಮಿನಿಯನ್ನು ವರಿಸುವ ಶಿವ ನಮಗೆ ಹತ್ತಿರದವನೇ ಆಗುತ್ತಾನೆ. ಮನುಕುಲ ಸಹಜವಾಗಿ ಸಾಧಿಸಬೇಕಾದುದನ್ನು ಬೋಧಿಸುವಂತಿದೆ ಭಗವಾನ್ ಭರ್ಗನ ಪರಿಕಲ್ಪನೆ, ಅನುಸಂಧಾನ ,ಸ್ತುತಿ ಇತ್ಯಾದಿ. ಶಿವರಾತ್ರಿ : ಸ್ವಯಂಭುವಾಗಿ ಲಿಂಗರೂಪದಲ್ಲಿ ಉದ್ಭವಿಸಿದ ದಿನ. ಹಾಲಾಹಲ ವಿಷ ಪ್ರಾಶನ ಮಾಡಿದ ಸುಂದರ್ಭ , ತಾಂಡವವಾಡಿದ ಸುದಿನವೇ ಶಿವರಾತ್ರಿ ಪರ್ವಕಾಲ ; ಹೀಗೆ ಹಲವು ನಿರೂಪಣೆಗಳಿವೆ . ರುದ್ರ - ಪರ್ಜನ್ಯ : ವೇದವು ವಿದ್ಯೆಗಳಲ್ಲಿ ಶ್ರೇಷ್ಠ ವಾದುದು . ವೇದದಲ್ಲಿ ಹನ್ನೊಂದು ಅನುವಾಕಗಳಿರುವ 'ರುದ್ರನಮಕ'ವು ಉತ್ಕ್ರಷ್ಟವಾದುದು .ಅದರಲ್ಲಿರುವ ಮಂತ್ರಗಳಲ್ಲಿ 'ನಮಃ ಶಿವಾಯ ಶಿವ ತರಾಯಚ' ಎಂಬ ವಾಕ್ಯವಿದೆ . ಇದರಿಂದ ಆಯ್ದ ಮಂತ್ರ ಪಂಚಾಕ್ಷರೀ. ಆದುದರಿಂದ ಪಂಚಾಕ್ಷರೀ ವೇದೋಕ್ತ ಮಂತ್ರ ಎಂಬುದು ವಿದ್ವಾಂಸರ ಅಭಿಪ್ರಾಯ .ಶಿವ ಶಬ್ದವು ಶುಭ ಕಲ್ಯಾಣ ,ಮಂಗಳ ಮುಂತಾದ ಅರ್ಥಗಳನ್ನು ಧ್ವನಿಸುತ್ತದೆ .'ಅಚ್' ಪ್ರತ್ಯಯವು ಸೇರಿ ಕಲ್ಯಾಣ ಗುಣಗಳುಳ್ಳವ ಎಂಬ ಅರ್ಥದಲ್ಲಿ ನಿಷ್ಪನ್ನವಾಗುತ್ತದೆ .
ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನ ಸಂಭವಃ | ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮ ಸಮುದ್ಭವಃ|| ಅನ್ನ - ಜೀವರಾಶಿ ,ಅನ್ನ- ಮಳೆ , ಮಳೆ - ಯಜ್ಞ ಈ ಸಂಬಂಧವನ್ನು ವಿವರಿಸುವ ಈ ಶ್ಲೋಕವು ಯಜ್ಞದ ಪರಮ ಲಕ್ಷ್ಯವನ್ನು ಹೇಳುತ್ತದೆ . ಸಕಾಲಿಕ ಮಳೆಗೆ ಯಜ್ಞಕರ್ಮವೇ ಪೂರಕ ವೈದಿಕ ಪ್ರಕ್ರಿಯೆ ಎಂದು ದೃಢೀಕರಿಸುತ್ತದೆ . ಶಿವ ,ಸದಾಶಿವ , ಪರಶಿವ , ಇವು ಪರಮಾತ್ಮನ ಮನೋಜ್ಞ ಹೆಸರುಗಳು .ಇವನು ರುದ್ರನೂ ಹೌದು .ಮಳೆ ಸುರಿಸಿ ನೀರುಕೊಡುವವನು ಅಧಿಕ ಶಬ್ದ ಮಾಡುತ್ತಾ ನೀರನ್ನು ಕೊಡುವವನು ಎಂಬುದು 'ರುದ್ರ' ಶಬ್ದಕ್ಕೆ ಯಾಸ್ಕಾಚಾರ್ಯರು ನೀಡುವ ಅರ್ಥ. ಮಳೆ ಸುರಿಸುವ ಶಿವ ,ಮಳೆಗೆ ಪೂರಕವಾದ ಯಜ್ಞ ಕರ್ಮ : ಈ ಎರಡು ಸಿದ್ಧಾಂತಗಳಿಂದ ರುದ್ರ ದೇವರನ್ನು ಅಗ್ನಿ ಮುಖದಿಂದ ಆರಾಧಿಸಿದರೆ ಮಳೆಯಾಗುತ್ತದೆ .ಮಳೆಯಿಂದ ಬೆಳೆ ,ಬೆಳೆಯಿಂದ ಸಮೃದ್ಧಿ ತಾನೆ? ಲೋಕ ಸುಭಿಕ್ಷಗೆ ರುದ್ರದೇವರನ್ನು ಆರಾಧಿಸುವುದು ,ಆಮೂಲಕ ಕ್ಷೋಭೆಗಳಿಲ್ಲದ ,ನಿರ್ಭಯದಿಂದ ಬದುಕುವ ಪರಿಸರ ನಿರ್ಮಾಣದ ನಿರೀಕ್ಷೆ ಋಜುಮಾರ್ಗದ ಸಂಕಲ್ಪವಲ್ಲವೆ . ಮಂಗಳಕರ ಮಹಾದೇವನನ್ನು ಶಿವರಾತ್ರಿ ಪರ್ವದಿನದಂದು ಸ್ಮರಿಸುತ್ತಾ ಬಿಲ್ವ ದಳವನ್ನು ಅರ್ಪಿಸುತ್ತಾ ಲೋಕಶಾಂತಿಯನ್ನು ಹಾರೈಸೋಣ . (ಓದಿದ್ದು ,ಕೇಳಿದ್ದು) ಲೇಖನ : ಕೆ.ಎಲ್.ಕುಂಡಂತಾಯ
ಶಂಕರಪುರ ಸೆಂಟ್ ಜೋನ್ಸ್ ಶಾಲೆಗಳ ಹಳೆವಿದ್ಯಾರ್ಥಿ ಸಂಘದಿಂದ ಮಕ್ಕಳಿಗಾಗಿ ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ ಕಾರ್ಯಕ್ರಮ

Posted On: 09-03-2021 10:47PM
ಕಾಪು : ಸೆಂಟ್ ಜೋನ್ಸ್ ಶಾಲೆಗಳ ಹಳೆವಿದ್ಯಾರ್ಥಿ ಸಂಘವು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸೈಂಟ್ ಜೋನ್ಸ್ ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗಾಗಿ ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈನಿ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರಾಯನ್ ಫೆರ್ನಾಂಡಿಸ್ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಶ್ರೀ ಅಶ್ವಿನ್ ರೋಡ್ರಿಗಸ್, ಸೈಂಟ್ ಜೋನ್ಸ್ ಅಕಾಡೆಮಿ ಮುಖ್ಯಸ್ಥೆ ಸಿಸ್ಟರ್ ಜ್ಯುಲಿಯಾನ ಉಪಸ್ಥಿತರಿದ್ದರು.
ಶಿಕ್ಷಕಿ ಸುನೀತಾ ಡಿಸೋಜ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯಸ್ಥೆ ಶ್ರೀಮತಿ ಐರಿನ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ, ಡೊಮಿಯನ್ ನೊರೊನ್ನಾ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ಸಮೀರ ರೆಬೆಲ್ಲೋ ವಂದಿಸಿದರು.
ಕಾಪು ಲಯನ್ಸ್ ಕ್ಲಬ್ ವತಿಯಿಂದ ಸ್ವಾಗತ, ಸಂದೇಶ ಸಾರುವ ಫಲಕ

Posted On: 09-03-2021 10:35PM
ಕಾಪು : ಕಾಪು ಲಯನ್ಸ್ ಕ್ಲಬ್ ವತಿಯಿಂದ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಪಾಂಗಳ ಸೇತುವೆ ಹತ್ತಿರ ಬೀಚ್ ಸಿಟಿ ಕಾಪುವಿಗೆ ಪುರಸಭಾ ವ್ಯಾಪ್ತಿಗೆ ಸ್ವಾಗತ ಹಾಗೂ ರಸ್ತೆ ಮೇಲೆ ಕಸ ಹಾಕಬೇಡಿ ಎಂಬ ಸಂದೇಶ ಸಾರುವ ಫಲಕ ಲಯನ್ಸ್ ನ ಜಿಲ್ಲಾ ಗವರ್ನರ್ ಯನ್.ಎಮ್. ಹೆಗ್ಡೆ ಹಾಗೂ ಕಾಪು ಪುರಸಭಾ ಅಧಕ್ಷ ರಾದ ಅನಿಲ್ ಕುಮಾರ್ ರವರು ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಪು ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ್ ನಾವಡ ರವರು ಕಾಪುವಿಗೆ ಸ್ವಾಗತ ಕೋರುವ ಈ ಫಲಕ ಒಂದು ಒಳ್ಳೆಯ ಸಂದೇಶ ಸಾರುವ ಫಲಕವಾಗಿದು ಮುಂದಿನ ದಿನಗಳಲ್ಲಿ ಪುರಸಭೆಯಿಂದ ಇನ್ನಷ್ಟು ಫಲಕಗಳು ಅಳವಡಿಸಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಪು ಠಾಣೆಯ ಎ.ಯಸ್.ಐ ಜಯ ಪ್ರಕಾಶ್ ,ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಶೆಟ್ಟಿ , ಕಾಪು ಲಯನ್ಸ್ ನ ಅಧ್ಯಕ್ಷ ವರುಣ್ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ಜಿಲ್ಲಾ ಸಂಯೋಜಕ ರಾದ ವಿ. ಟಿ ಹೆಗ್ಡೆ, ಜಯಕುಮಾರ್, ನಡಿಕೆರೆ ರತ್ನಾಕರ ಶೆಟ್ಟಿ, ಕೆ. ಯಂ. ಲುತುಫುಲ್ಲ, ನಾಗರಾಜ್ ರಾವ್ ,ಕಾಪು ಲಯನ್ಸ್ ನ ಪಿ ಆರ್ ಓ ಹರೀಶ್ ನಾಯಕ್ ಕಾಪು ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀಮತಿ ಬೇಬಿ ರಮೇಶ್ ಪೂಜಾರಿಯವರಿಗೆ ಸಮ್ಮಾನ

Posted On: 09-03-2021 10:29AM
ಉಡುಪಿ : ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಉಡುಪಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗ ವಾಗಿ ತೆರೆಮರೆಯಲ್ಲಿ ಸಮಾಜ ಸೇವೆ ಮಾಡುತ್ತಿರುವ ಶ್ರೀಮತಿ ಬೇಬಿ ರಮೇಶ್ ಪೂಜಾರಿಯವರನ್ನು ಬ್ರಹ್ಮಾವರ ಗ್ರಂಥಾಲಯದಲ್ಲಿ ಫಲ ಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಜಿಲ್ಲಾಧ್ಯಕ್ಷರಾದ ಪ್ರವೀಣ್ ಎಮ್ ಪೂಜಾರಿ, ಗೌರವಧ್ಯಕ್ಷರಾದ ದಿವಾಕರ್ ಸನಿಲ್, ಉಪಾಧ್ಯಕ್ಷರಾದ ಎಮ್. ಮಹೇಶ್ ಕುಮಾರ್, ವರಾಂಬಳ್ಳಿ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಪಂಚಾಯತ್ ಸದಸ್ಯರಾದ ನಿತ್ಯಾನಂದ ಬಿ. ಆರ್, ವರಾಂಬಳ್ಳಿ ಪಂಚಾಯತ್ ಉಪಾಧ್ಯಕ್ಷರಾದ ಸದಾನಂದ ಪೂಜಾರಿ, ವೇದಿಕೆಯ ಗೌರವ ಸಲಹೆಗಾರರು ಹಾಗೂ ಪಂಚಾಯತ್ ಸದಸ್ಯರಾದ ವಿಶು ಕಲ್ಯಾಣಪುರ, ಜತೆ ಕಾರ್ಯದರ್ಶಿ ವಿಜಯ ಕೋಟಿಯನ್, ಸದಸ್ಯರಾದ ನಿತೀಶ್ ಪೂಜಾರಿ ಹಾಗೂ ಮಹಿಳಾ ಸದಸ್ಯರು ಭಾಗವಹಿದ್ದರು.
ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಗೆ ಬಜೆಟ್ ನಲ್ಲಿ ಯಾವುದೇ ಘೋಷಣೆ ಇಲ್ಲ : ಉಡುಪಿ ಜಿಲ್ಲಾ NSUI ಉಪಾಧ್ಯಕ್ಷ ಮೊಹಮ್ಮದ್ ಝಮೀರ್

Posted On: 09-03-2021 10:23AM
ಕೊರೊನ ಸಂಕಷ್ಟ ನಂತರ ಶಾಲಾ ಕಾಲೇಜು ಒಪನ್ ಆಗಿದೆ ಆದರೆ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಶಾಲಾ ಫೀಸ್ ಕಟ್ಟುವ ಪರಿಸ್ಥಿತಿಯಲ್ಲಿ ಇಲ್ಲ. ಬಸ್ ನಲ್ಲಿ ಬರುವ ಸಾಮರ್ಥ್ಯವು ಇಲ್ಲ ಹಾಗೂ ಕೊರೊನ ಸಂಕಷ್ಟದಿಂದ ಅನೇಕ ವಿಧ್ಯಾರ್ಥಿಗಳು ಶಾಲಾ ಕಾಲೇಜ್ ಗೆ ಹೋಗುವುದಕ್ಕೂ ಕಷ್ಟವಾಗಿದೆ.
ಬಹುದಿನಗಳ ಬೇಡಿಕೆ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡಬೇಕು ಎಂದು ವಿದ್ಯಾರ್ಥಿ ಸಂಘಟನೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಕೂಡ ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಘೋಷಣೆ ಮಾಡದೆ ಶಾಲಾ ಕಾಲೇಜು ವಿದ್ಯಾರ್ಥಿಗಳಾದ ನಮ್ಮ ಮನವಿಗೆ ಸ್ಪಂದಿಸದೇ ಇರುವುದು ಈ ಸರ್ಕಾರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ.
ಸರ್ಕಾರ ಕೂಡಲೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಇಲ್ಲದಿದ್ದರೆ ಉಡುಪಿ ಜಿಲ್ಲಾದ್ಯಾಂತ NSUI ವತಿಯಿಂದ ಪ್ರತಿಭಟನೆಯನ್ನು ಮಾಡಲಿದ್ದೇವೆ ಎಂದು ಉಡುಪಿ ಜಿಲ್ಲಾ NSUI ವಿಧ್ಯಾರ್ಥಿ ಸಂಘಟನೆ ಉಪಾಧ್ಯಕ್ಷ ಮೊಹಮ್ಮದ್ ಝಮೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಂ ಡಾಕ್ಟರ್ ಫೌಂಡೇಶನ್ : ವೈಶಿಷ್ಟ್ಯ ಪೂರ್ಣ ವಿಶ್ವ ಮಹಿಳಾ ದಿನಾಚರಣೆ

Posted On: 08-03-2021 10:48PM
ಉಡುಪಿ : 64 ರ ಇಳಿ ವಯಸ್ಸಲ್ಲೂ ಚರ್ಮುರಿ ಮಾರಿ ಒಳ್ಳೆಯ ರೀತಿಯಲ್ಲಿ ಇನ್ನೊಬ್ಬರ ಕೈ ನೋಡದೆ ಜೀವನ ನಡೆಸುತ್ತಿರುವ ಅಜ್ಜರಕಾಡು ಪಾರ್ಕ್ ಬಳಿ ಕಳೆದ 27 ವಷ೯ದಿಂದ ಚರ್ಮುರಿ ಮಾರಿ ಉಡುಪಿಯಲ್ಲಿ ಬಾಡಿಗೆ ಮನೆ ಯಲ್ಲಿ ಒಬ್ಬಂಟಿ ವಾಸ ವಿರುವ ಧೀರ ಮಹಿಳೆ ಶಿಕಾರಿಪುರ ಮೂಲದ ಶಾಕುಂತಲ ರವರನ್ನು ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಮಾ.8ರಂದು ಸ್ಪಂದನ ವಿಶೇಷ ಚೇತನ ಮಕ್ಕಳ ಶಾಲೆ ಉಪ್ಪುರುನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾಯ೯ಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದಭ೯ದಲ್ಲಿ ಜೇಸಿಐ ಉಡುಪಿ ಸಿಟಿ ವತಿಯಿಂದ ವೈದ್ಯಕೀಯ ರಂಗದಲ್ಲಿ ಸಾಧನೆ ಮಾಡಿದ ಡಾll ಸುಮಾ ಶೆಟ್ಟಿ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಸವಿತಾ ಶೆಟ್ಟಿ ಯವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸ್ಪಂದನಸಂಸ್ಥೆಯ ಮುಖ್ಯಸ್ಥರಾದ ಜನಾರ್ದನ್, ಉಮೇಶ್ ರಾಘವೇಂದ್ರಪೂಜಾರಿ , ಬಂಗಾರಪ್ಪ , ನಯನ ,ಶಶಿ ,ಕೀರ್ತಿರಾಜ್ ಸ್ವಚ್ಚ ಭಾರತ್ ಫ್ರೆಂಡ್ಸ್ ಸ್ಥಾಪಕ ಸಂಚಾಲಕ ಗಣೀಶ್ ಪ್ರಸಾದ್.ಜಿ ನಾಯಕ್, ಜಗದೀಶ್ ಶೆಟ್ಟಿ, ವಿಕ್ಷೀತ್ ಪೂಜಾರಿ, ನಯನಾ ಮಂತಾದವರುಉಪಸ್ಥಿತರಿದ್ದರು.
ಡಾ|| ಶಶಿಕಿರಣ್ ಶೆಟ್ಟಿ ಪ್ರಸ್ತಾವನೆಗೈದರು. ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.
ಮಕ್ಕಳ ಕೃಷಿ ಆಸಕ್ತಿಗೆ ನೆರವಾದ ಉಡುಪಿಯ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ತಂಡ

Posted On: 07-03-2021 10:58PM
ಉಡುಪಿ, ಮಾ.7 : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಬ್ರಹ್ಮಾವರದ ಮಠಪಾಡಿಯಲ್ಲಿ ಇರುವ ಕೂಲಿ ಕಾರ್ಮಿಕರ ವಸತಿ ಗೃಹಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಕಳೆದ ವರ್ಷ ಮಾಡಿದ ಕೃಷಿ -ಖುಷಿ ಕಾರ್ಯಕ್ರಮದ ಮಕ್ಕಳ ಉತ್ಸಾಹ ನೋಡಿ ಇಂದು ಅವರ ಅನುಕೂಲಕ್ಕೆ ಬೇಕಾದಂತೆ ಅಲ್ಲಿಯ ಜಾಗವನ್ನು ತರಕಾರಿ ಬೆಳೆ ಬೆಳೆಯಲು ಹದತಟ್ಟು ಮಾಡಿಕೊಡಲಾಯಿತು.
ಈ ಕಾರ್ಯಕ್ರಮ ಆಸರೆ ತಂಡದ ಸ್ಥಾಪಕಧ್ಯಕ್ಷರ ಉಪಸ್ಥಿತಿಯಲ್ಲಿ ನಡೆಯಿತು. ಮಕ್ಕಳ ಉತ್ಸಾಹಕ್ಕೆ ಮುಂದಿನ ದಿನಗಳಲ್ಲಿ ನಮ್ಮ ಬೆಳೆ ನಾವು ಅನ್ನುವ ಮುಂದಿನ ಶೀರ್ಷಿಕೆಗೆ ಹೆಜ್ಜೆ ಇಡಲು ನಮ್ಮ ಆಸರೆ ತಂಡವು ಮುಂದಾಗಿದೆ.
ಈ ಕಾರ್ಯಕ್ರಮದಲ್ಲಿ ಆಸರೆ ತಂಡದ ಸಂಸ್ಥಾಪಕಧ್ಯಕ್ಷರಾದ ಡಾ. ಕೀರ್ತಿ ಪಾಲನ್ ಅವರ ನೇತೃತ್ವದಲ್ಲಿ ನಡೆದಂತಹ ಈ ಕಾರ್ಯಕ್ರಮದಲ್ಲಿ ಜಯರಾಮ್ ನೈರಿ ಮಟಪಾಡಿ, ಸೂರ್ಯ ಗಾಣಿಗ,ಅಜಯ್ ರಾವ್, ವಿಜಯ ಬಾಲನಿಕೇತನ ಮಟಪಾಡಿಯ ಮಕ್ಕಳು ಉಪಸ್ಥಿತರಿದ್ದರು.