Updated News From Kaup
ಕಾಪು : ಸರಕಾರಿ ಪದವಿಪೂರ್ವ ಕಾಲೇಜು, ಪೊಲಿಪು - ವನಮಹೋತ್ಸವ ಕಾರ್ಯಕ್ರಮ
Posted On: 11-07-2024 07:02AM
ಕಾಪು : ಸರಕಾರಿ ಪದವಿಪೂರ್ವ ಕಾಲೇಜು, ಪೊಲಿಪು, ಕಾಪು ಇದರ ಸಸ್ಯಶ್ಯಾಮಲ ಕಾರ್ಯಕ್ರಮವು ಶಾಲಾ ಆವರಣದಲ್ಲಿ ಗಿಡ ನೆಟ್ಟು, ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡುವ ಮೂಲಕ ಜುಲೈ 10ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಪಡುಬಿದ್ರಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಜೀವನದಾಸ ಶೆಟ್ಟಿಯವರು ಗಿಡ ನೆಟ್ಟು ಮಾಹಿತಿ ನೀಡುವುದರ ಮುಖಾಂತರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶಿವಲಿಂಗಪ್ಪ, ಹಿರಿಯ ಉಪನ್ಯಾಸಕ ಸುಧಾಕರ್ ಎಂ. ಏ, ಗಸ್ತು ಅರಣ್ಯ ಪಾಲಕ ಮಂಜುನಾಥ ಹಾಗೂ ಉಪನ್ಯಾಸಕರು , ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪವರ್ ಲಿಫ್ಟರ್ ಗಳಿಗೆ ಸ್ವಾಗತ
Posted On: 10-07-2024 07:10PM
ಮಂಗಳೂರು : ದಕ್ಷಿಣ ಆಫ್ರಿಕಾದ ಪೊಚೆಫ್ಸ್ಟ್ರೂಮ್ನಲ್ಲಿ ನಡೆದ ಏಷ್ಯಾ-ಪೆಸಿಫಿಕ್-ಆಫ್ರಿಕನ್ ಪವರ್ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದ ಅಕ್ಷತಾ ಪೂಜಾರಿ ಬೋಳ ಮತ್ತು 105 ಕೆಜಿ ವಿಭಾಗದಲ್ಲಿ ಎರಡು ಚಿನ್ನ ಗೆದ್ದು ಬೆಸ್ಟ್ ಲಿಫ್ಟರ್ ಪ್ರಶಸ್ತಿಗೆ ಭಾಜನರಾದ ವಿಜಯ್ ಕಾಂಚನ್ ರನ್ನು ಬಜಪೆ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸ್ವಾಗತಿಸಲಾಯಿತು.
ಅಕ್ಷತಾ ಪೂಜಾರಿ ಬೋಳಾ ಅವರು ಪವರ್ಲಿಫ್ಟಿಂಗ್ನಲ್ಲಿ ಗಮನಾರ್ಹ ದಾಖಲೆಯನ್ನು ಹೊಂದಿದ್ದು, ಹಲವಾರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಏಷ್ಯನ್ ಮಟ್ಟ, ಕಾಮನ್ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಜಯಗಳಿಸಿದ್ದಾರೆ. ಆಕೆಯ ಅತ್ಯುತ್ತಮ ಸಾಧನೆಗಳು ಆಕೆಗೆ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ತಂದುಕೊಟ್ಟಿವೆ.
ವಿಜಯ್ ಕಾಂಚನ್ ಮಂಗಳೂರಿನಲ್ಲಿ ಬಾಲಾಂಜನೇಯ, ರಾಮಾಂಜನೇಯ, ಪವರ್ ಜೋನ್, ಬ್ಲ್ಯಾಕ್ ರಾಕ್ ಮತ್ತು ಮೈ ಫಿಟ್ನೆಸ್ ಜಿಮ್ ಸೇರಿದಂತೆ ಅನೇಕ ಜಿಮ್ಗಳಲ್ಲಿ ತರಬೇತಿ ನೀಡುವುದಲ್ಲದೆ, ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಈ ಸಂದರ್ಭ ಗೀತಾಂಜಲಿ ಸುವರ್ಣ, ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ ತರಬೇತುದಾರ ದಿನೇಶ್ ಕರ್ಕೇರ, ಪವರ್ ಲಿಫ್ಟರ್ ಸತೀಶ್ ಕುಮಾರ್ ಕುದ್ರೋಳಿ, ಸದಾನಂದ ಅಮೀನ್, ಲಕ್ಷ್ಮಣ್, ಮಂಜುನಾಥ್ ಹೊಸಬೆಟ್ಟು, ರಘು ಬೈಕಂಪಾಡಿ, ಕಾರ್ತಿಕ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
37ನೇ ವರ್ಷದ ಉಚ್ಚಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಲಕೃಷ್ಣ ಆರ್. ಪೂಜಾರಿ ಆಯ್ಕೆ
Posted On: 10-07-2024 06:05PM
ಉಚ್ಚಿಲ : 37ನೇ ವರ್ಷದ ಉಚ್ಚಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಲಕೃಷ್ಣ ಆರ್. ಪೂಜಾರಿ ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷ ಕಿಶೋರ್ ಶೆಟ್ಟಿ ಎರ್ಮಾಳು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಅರ್ಚಕರಾಗಿ ವೇ.ಮೂ. ಕೆ.ವಿ. ರಾಘವೇಂದ್ರ ಉಪಾಧ್ಯಾಯ, ಗೌರವ ಅಧ್ಯಕ್ಷರಾಗಿ ರೋಹಿತ್ ಹೆಗ್ಡೆ ಎರ್ಮಾಳು, ಉಪಾಧ್ಯಕ್ಷರಾಗಿ ಕೆ. ವಿಶ್ವನಾಥ, ಕೆ. ವಾಸುದೇವ ರಾವ್, ದಿನೇಶ್ ಎರ್ಮಾಳು , ಕರುಣಾಕರ ಕೋಟ್ಯಾನ್, ಕೃಷ್ಣ ಕುಮಾರ್ ಪೊಲ್ಯ, ಕಾರ್ಯದರ್ಶಿ ಸಚಿನ್ ಶೆಟ್ಟಿ ಪೊಲ್ಯ, ಜೊತೆ ಕಾರ್ಯದರ್ಶಿ ವಿನೋದ್ ಸುವರ್ಣ, ಕೋಶಾಧಿಕಾರಿ ವೇ.ಮೂ.ವಿಷ್ಣುಮೂರ್ತಿ ಉಪಾಧ್ಯಾಯ ಆಯ್ಕೆಗೊಂಡಿರುತ್ತಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಪತಿ ಭಟ್, ದ್ಯುಮಣಿ ಆರ್. ಭಟ್, ಮನೋಜ್ ಶೆಟ್ಟಿ ಪೊಲ್ಯ, ಮಹೇಶ್ ಉಚ್ಚಿಲ, ಅಶೋಕ್ ಆರ್. ಕರ್ಕೇರ, ಅಶೋಕ್ ಆಚಾರ್ಯ, ವೇದವ್ಯಾಸ ಬಂಗೇರ, ನಾಗೇಶ್ ಆಚಾರ್ಯ, ಜಗಜೀವನ್ ಎನ್.ಚೌಟ, ವಿಜಯ ಆಚಾರ್ಯ ಉಚ್ಚಿಲ, ಸುನಿಲ್ ಶೆಟ್ಟಿ, ಅಕ್ಷಯ್ ದೇಜಾಡಿ, ಸುರೇಶ್ ಕುಮಾರ್ ಕೆ., ಗುರುರಾಜ್ ಉಚ್ಚಿಲ, ಮುಖೇಶ್ ಉಚ್ಚಿಲ, ಸಂದೀಪ್ ಆರ್. ಉಚ್ಚಿಲ, ಮಹೇಶ್ ಶೆಟ್ಟಿ ಪೊಲ್ಯ, ಪ್ರಸಾದ್ ಎರ್ಮಾಳು, ಸುಧೀರ್ ವಿ. ರಾವ್. ರವಿಕಿರಣ್ ಉಚ್ಚಿಲ, ಮಾಧವ ಆಚಾರ್ಯ ಉಚ್ಚಿಲ, ರಾಜೇಶ್ ಎರ್ಮಾಳು , ಕರುಣಾಕರ ಮೊಯಿಲಿ, ಲೋಕೇಶ್ ಕೇಬಲ್, ಅಕ್ಷಯ್ ಉಚ್ಚಿಲ, ಪ್ರಮೋದ್ ಆಚಾರ್ಯ, ಮನೋಹರ ಕುಮಾರ್, ಲಕ್ಷ್ಮಣ ಬಂಗೇರ, ಅಶೋಕ್ ಶೆಣೈ, ಕರ್ಕೇರ, ಗಣೇಶ್ ಕರ್ಕೇರ, ವಿಶು ಉಚ್ಚಿಲ, ಸುದರ್ಶನ ಮೊಯಿಲಿ, ಅನಿಲ್ ಉಚ್ಚಿಲ, ರಾಜೇಶ್ ಶೆಟ್ಟಿ ಎರ್ಮಾಳು, ಆಯುಷ್ ಪೂಜಾರಿ, ಅಶಿತ್ ಪೊಲ್ಯ, ಸಂತೋಷ್ ಆಚಾರ್ಯ, ಕಿರಣ್, ಸುದರ್ಶನ್ ರಾವ್, ಮನ್ವೀತ್, ಹರ್ಷಿತ್ ಆಚಾರ್ಯ, ಸೃಜನ್ ಪೂಜಾರಿ, ಹರ್ಶಿತ್ ಪೂಜಾರಿ, ಸಂಪತ್ ಪೊಲ್ಯ, ಪ್ರಥಮ್ ಉಚ್ಚಿಲ, ಸಾಗರ್ ಪೊಲ್ಯ ಆಯ್ಕೆಗೊಂಡಿರುತ್ತಾರೆ.
ಕಾಂತಾವರ ಗ್ರಾಮಸಭೆ ; ಅಭಿನಂದನೆ
Posted On: 10-07-2024 10:37AM
ಕಾಂತಾವರ : ಇಲ್ಲಿನ ಗ್ರಾಮ ಪಂಚಾಯತ್ ನ ಈ ವರ್ಷದ ಪ್ರಥಮ ಗ್ರಾಮಸಭೆ ಕಾಂತಾವರ ಕನ್ನಡ ಸಂಘದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಎಲ್ಲಾ ಇಲಾಖೆಯು ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಮಾಹಿತಿ ನೀಡಿದರು.
ಗ್ರಾಮದ ಶ್ರೀ ಕಾಂತೇಶ್ವರ ಹೈಸ್ಕೂಲ್ ಕಳೆದ ನಾಲ್ಕು ವರ್ಷಗಳಿಂದ ಶೇಕಡಾ ನೂರು ಫಲಿತಾಂಶ ಪಡೆದಿದ್ದು, ಅದರ ಮುಖ್ಯೋಪಾಧ್ಯಾಯರಾದ ತಿಪ್ಪೆಸ್ವಾಮಿ ಇವರನ್ನು ಅಭಿನಂದಿಸಲಾಯಿತು.
ಅದೇ ರೀತಿ ಗ್ರಾಮದಲ್ಲಿ ಮೆಸ್ಕಾಂ ಇಲಾಖೆಯ ಉತ್ತಮ ಕಾರ್ಯ ನಿರ್ವಹಣೆಗಾಗಿ ಇಲಾಖೆಯ ಸುಧೀಂದ್ರ ಇವರನ್ನು ಕೂಡಾ ಅಭಿನಂದಿಸಲಾಯಿತು.
ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಉಪಾಧ್ಯಕ್ಷ ಪ್ರಭಾಕರ್ ಕುಲಾಲ್ ಮತ್ತು ಪಂಚಾಯತ್ ನ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಜಿಲ್ಲೆಯ ಜನರ ನೋವಿಗೆ ಸ್ಪಂದಿಸದ ಉಸ್ತುವಾರಿ ಸಚಿವರನ್ನು ಬದಲಾಯಿಸಿ : ಶ್ರೀನಿಧಿ ಹೆಗ್ಡೆ
Posted On: 10-07-2024 06:55AM
ಉಡುಪಿ : ಜಿಲ್ಲೆಯಲ್ಲಿ ವರುಣನ ಆರ್ಭಟ ದೊಡ್ಡ ಮಟ್ಟದಲ್ಲಿ ಹಾನಿಗೀಡು ಮಾಡಿದರು ಕೂಡ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಇನ್ನು ಜಿಲ್ಲೆಯ ಜನರ ಸಮಸ್ಯೆಗೆ ಪರಿಹಾರ ಅಥವಾ ಕನಿಷ್ಠ ಪಕ್ಷ ಜನತೆಗೆ ಸಾಂತ್ವನ ಹೇಳುವ ಕೆಲಸಕ್ಕೂ ಮುಂದಾಗಲಿಲ್ಲ ಎನ್ನುವುದು ವಿಪರ್ಯಾಸ.
ದೂರದ ಬೆಳಗಾವಿಯ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಕುರಿತು ಕಾಳಜಿ ವಹಿಸದೇ ಇರುವುದು ನಮ್ಮ ಜಿಲ್ಲೆಯ ದುರಾದೃಷ್ಟವೆ ಸರಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದ ಕಾರಣಕ್ಕೆ ರಾಜ್ಯ ಸರ್ಕಾರ ಜಿಲ್ಲೆಯನ್ನು ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಈ ಹಿಂದೆ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾದಾಗ ಅಂದು ಕೂಡ ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿ ಇತ್ತು. ಅದು ಇಂದು ಮುಂದುವರೆದಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಶಾಲಾ ಮಕ್ಕಳಿಗೆ 3-4 ದಿನ ರಜೆ ಘೋಷಣೆ ಆಗಿದೆ, ಉಸ್ತುವಾರಿ ಸಚಿವರು ಕೂಡ ರಜೆಯಲ್ಲಿ ಯಾವ ಊರಿಗೆ ಹೋಗಿರುವರು ಎಂಬ ಪ್ರಶ್ನೆಗಳೂ ಕೇಳಬೇಕಾಗಿದೆ. ಜಿಲ್ಲೆಯಲ್ಲಿ ನೂರಾರು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದೆ, ಹಲವಾರು ಮನೆಗಳಿಗೆ ಹಾನಿ ಉಂಟಾಗಿದೆ, ನೂರಾರು ಕುಟುಂಬಗಳ ಜೀವನ ಅಸ್ತವ್ಯಸ್ತ ಆಗಿದ್ದರು ಮಾನ್ಯ ಸಚಿವರು ಜಿಲ್ಲೆಯ ಅಧಿಕಾರಿಗಳೊಂದಿಗೆ ಒಂದೇ ಒಂದು ಸಭೆ ನಡೆಸಿಲ್ಲ.
ಸಚಿವರು ತಮ್ಮ ನಾಯಕರ ಮುಖ್ಯಮಂತ್ರಿಯ ಗದ್ದುಗೆ ಆಟದ ಬೇಗುದಿ ಕಾರ್ಯದಲ್ಲಿ ನಿರತರಾಗಿರಬೇಕು ಅಥವಾ ಗೃಹ ಲಕ್ಷ್ಮಿ ಯೋಜನೆಗೆ ಹಣವನ್ನು ಹೊಂದಿಸಲು ವಾಲ್ಮಿಕಿ ನಿಗಮದ ಹಣವನ್ನು ತಾವು ವಿನಿಯೋಗಿಸುವ ಪ್ರಯತ್ನದಲ್ಲಿ ಇದ್ದಾರೆಯೇ..?? ಎಂದು ಕೇಳಬೇಕಾದ ಪರಿಸ್ಥಿತಿ ಬಂದಿದೆ.
ಕರಾವಳಿಯಲ್ಲಿ ಡೆಂಗ್ಯೂ ಆರ್ಭಟ ಹೆಚ್ಚುತ್ತಿದ್ದರೂ ಆರೋಗ್ಯ ಸಚಿವರು ಮಂಗಳೂರಿಗೆ ಬಂದು ಈಜುಕೊಳದಲ್ಲಿ ತನ್ನ ಸಮಯ ಕಳೆದಿರುವುದು ಒಂದು ಕಥೆ ಆದರೆ, ಇತ್ತ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಸಂತ್ರಸ್ತರ ಬೇಟಿ ಮಾಡದೆ ರಾಜಧಾನಿಯಲ್ಲೇ ಕುಳಿತು ಮಾಧ್ಯಮ ಹೇಳಿಕೆ ನೀಡಿ ಹಾರಿಕೆ ಉತ್ತರ ನೀಡುತ್ತಾ ಇರುವುದು ಜಿಲ್ಲಾ ಜನತೆಯ ವಿಪರ್ಯಾಸವೇ ಸರಿ ಹಾಗೂ ಇದು ಜಿಲ್ಲಾ ಉಸ್ತುವಾರಿ ಸಚಿವರ ಬಾಲಿಶತನವನ್ನು ತೋರಿಸುತ್ತದೆ. ಜಿಲ್ಲೆಯ ಜನರ ನೋವಿಗೆ ಸ್ಪಂದಿಸದ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕು ಎಂದು ಈ ಮೂಲಕ ಬಂಡ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಾಪು : 50 ಲಕ್ಷ ರೂ. ಅನುದಾನದಲ್ಲಿ ಎಲ್ಲೂರಿನಲ್ಲಿ ನಿರ್ಮಾಣಗೊಳ್ಳಲಿದೆ ಗೋಶಾಲೆ, ಗೋರುದ್ರಭೂಮಿ
Posted On: 09-07-2024 06:52PM
ಕಾಪು : ತಾಲೂಕಿನ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 3.96 ಎಕ್ರೆ ಜಮೀನಿನಲ್ಲಿ ಗೋಶಾಲೆ ಹಾಗೂ ಗೋ ರುದ್ರಭೂಮಿ ನಿರ್ಮಾಣಗೊಳ್ಳಲಿದ್ದು 50 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಮಂಗಳವಾರ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಅವರು ಗುಣಮಟ್ಟವನ್ನು ಕಾಯ್ದುಕೊಂಡು ಶೀಘ್ರದಲ್ಲಿ ಕಾಮಗಾರಿ ಆರಂಭಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಎಲ್ಲೂರು ಗ್ರಾಮ ಉಪಾಧ್ಯಕ್ಷರಾದ ಉಷಾ ಎನ್, ಗ್ರಾಮ ಪಂಚಾಯತ್ ಸದಸ್ಯರಾದ ಶಾಂತಿ ಆಚಾರ್ಯ, ಹರೀಶ್ ಬೆಳ್ಳಿಬೆಟ್ಟು, ದಯಾನಂದ ದೇವಾಡಿಗ, ಶಕ್ತಿ ಕೇಂದ್ರದ ಸಂಚಾಲಕರಾದ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸ್ಥಳೀಯ ಪ್ರಮುಖರಾದ ನಾಗೇಶ್ ಭಟ್, ಹರೀಶ್ ಶೆಟ್ಟಿ ಅದಮಾರು, ಸುಕೇಶ್ ಉಳ್ಳೂರು, ಗಣೇಶ್, ಕೃಷ್ಣಾನಂದ ರಾವ್, ಪ್ರೇಮಾನಂದ ಶೆಟ್ಟಿ, ಸಂದೇಶ್ ಪಾದೆಬೆಟ್ಟು, ಪಶು ವೈದ್ಯಾಧಿಕಾರಿಗಳಾದ ಅರುಣ್, ನಿರ್ಮಿತಿ ಕೇಂದ್ರದ ಮುಖೇಶ್, ಎಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪ್ರದೀಪ್, ಗ್ರಾಮ ಆಡಳಿತಾಧಿಕಾರಿಗಳಾದ ಸುನಿಲ್ ಉಪಸ್ಥಿತರಿದ್ದರು.
ಮತಿಭ್ರಮಣೆಯಾದವರಂತೆ ಹೇಳಿಕೆ ನೀಡುತ್ತಿರುವ ಶಾಸಕ ಭರತ್ ಶೆಟ್ಟಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ : ವಿನಯ್ ಕುಮಾರ್ ಸೊರಕೆ
Posted On: 09-07-2024 06:40PM
ಕಾಪು : ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ಬಿ. ಜೆ.ಪಿಯವರ ಹಿಂಸಾಪ್ರವೃತ್ತಿಯ ಬಗ್ಗೆ ಉಲ್ಲೇಖ ಮಾಡಿ ಮಾತನಾಡಿರುವುದು ಹಿಂಸೆ ಮತ್ತು ಕೋಮುದ್ವೇಷವನ್ನೇ ಬಂಡವಾಳವಾಗಿಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದ ಬಿ. ಜೆ.ಪಿ ಗರಿಗೆ ಬರ ಸಿಡಿಲು ಬಡಿದಂತಾಗಿದೆ. ಸರ್ವಾಧಿಕಾರಿ ಧೋರಣೆಯ ಆಡಳಿತಕ್ಕೆ ಪ್ರಜ್ಞಾವಂತ ಮತದಾರರು ಕಡಿವಾಣ ಹಾಕುವ ಮೂಲಕ ಸಂವಿಧಾನದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುತ್ತಿದ್ದವರ ಮೇಲೆ ಎರಗಿದ ಸಂವಿಧಾನವೆಂಬ ಸಿಡಿಲಿನ ಆಘಾತಕ್ಕೆ ಬಿ. ಜೆ.ಪಿ ತತ್ತರಿಸಿ ಹೋಗಿದೆ.
ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ಗೌರವಯುತ ವಿಪಕ್ಷ ನಾಯಕನ ಸ್ಥಾನಮಾನವನ್ನು ಅಲಂಕರಿಸಿರುವ ರಾಹುಲ್ ಗಾಂಧಿಗೆ ಸಂಸತ್ತಿನ ಒಳಗೆ ನುಗ್ಗಿ ಕೆನ್ನೆ ಬಾರಿಸಬೇಕೆಂದು ಹೇಳಿಕೆ ನೀಡುವ ಮೂಲಕ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಕ್ಕೆ ಪುರಾವೆ ದೊರೆತಂತಾಗಿದೆ. ಒಬ್ಬ ವೈದ್ಯನೆಂದು ಹೇಳಿಕೊಂಡು ಅವಿದ್ಯಾವಂತನತೆ ವರ್ತಿಸುತ್ತಿರುವ ಮತ್ತು ಹೇಳಿಕೆ ನೀಡುತ್ತಿರುವ ಭರತ್ ಶೆಟ್ಟಿಗೆ ಮತಿಭ್ರಮಣೆ ಯಾಗಿದ್ದು ತುರ್ತಾಗಿ ಸೂಕ್ತ ಮನೋಚಿಕಿತ್ಸೆಯ ಅಗತ್ಯವಿರುವಂತೆ ಕಾಣುತ್ತಿದೆ.
ಅಹಿಂಸೆ, ಸಹಿಷ್ಣುತೆ ಮತ್ತು ಸಮತೆಯ ಮೂಲ ನಿಲುವನ್ನು ಹೊಂದಿರುವ ಹಿಂದೂ ಅಸ್ಮಿತೆಯನ್ನು ಪ್ರಖರವಾಗಿ ಸಂಸತ್ತಿನಲ್ಲಿ ಉಲ್ಲೇಖಿಸಿದ ರಾಹುಲ್ ಗಾಂಧಿಯ ವಿರುದ್ಧ ಬಿ. ಜೆ. ಪಿಗರು ಹತಾಶರಾಗಿ, ಹಲ್ಲೆ ನಡೆಸಲು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದು ತೀರಾ ಖಂಡನೀಯ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿಲುವು. ಶಾಸಕ ಭರತ್ ಶೆಟ್ಟಿಯವರು ತಮ್ಮ ಬಾಲಿಶ ವರ್ತನೆ ಮತ್ತು ನೀಡುವಂತಹ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ತಾನು ಶಾಸಕನಾಗಿರಲು ಯೋಗ್ಯನಲ್ಲವೆಂದು ರುಜುವಾತು ಪಡಿಸಿದ್ದಾರೆ.
ಇದೇ ರೀತಿಯ ಬೇಜವಾಬ್ದಾರಿ ಹೇಳಿಕೆ ಮತ್ತು ಹಿಂಸಾಪ್ರವೃತ್ತಿಯ ವರ್ತನೆಯನ್ನು ಮುಂದುವರಿಸಿದರೆ, ಭರತ್ ಶೆಟ್ಟಿಯವರಿಗೆ ತಕ್ಕ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಕಾರ್ಯಕರ್ತರು ಸದಾ ಸನ್ನದ್ಧರಿದ್ದಾರೆ ಎಂದು ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆಯವರು ಪತ್ರಿಕಾ ಹೇಳಿಕೆ ನೀಡಿ ತಿಳಿಸಿದ್ದಾರೆ.
ಬಂಟಕಲ್ ಇಂಜಿನಿಯರಿಂಗ್ ಕಾಲೇಜು : ಲೈನ್ ಫಾಲೋವಿಂಗ್ ರೋಬೋಟ್ ತಾಂತ್ರಿಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ
Posted On: 09-07-2024 04:31PM
ಶಿರ್ವ : ಮಂಗಳೂರಿನ ಕಾಮೆಡ್ಕೇರ್ಸ್ ಇನ್ನೋವೇಶನ್ ಹಬ್ ಇವರು ಜುಲೈ 7 ರಂದು ಆಯೋಜಿಸಿದ್ದ "Tech-X 2024" ತಾಂತ್ರಿಕ ಸ್ಪರ್ಧೆಯಲ್ಲಿ ಬಂಟಕಲ್ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಪವನ್ ಗೋಂಡ್, ವಿಶ್ವಾಸ್ ಭಟ್, ರಂಜನ್ ಪೂಜಾರಿ, ವಿಜೇತಾ, ಗಣಕಯಂತ್ರ ವಿಭಾಗ ಮತ್ತು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಶ್ರೀ ಹರ್ಷ ಗುನಗಾ ಇವರು “ಲೈನ್ ಫಾಲೋವಿಂಗ್ ರೋಬೋಟ್" ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
ರೋಟರಿ ಕ್ಲಬ್ ಶಂಕರಪುರ - ರಸ್ತೆ ಸುರಕ್ಷತೆ ಮತ್ತು ಸೈಬರ್ ಕ್ರೈo ಮಾಹಿತಿ ; ರಸ್ತೆ ಸುರಕ್ಷತೆಯ ಕರಪತ್ರ ಬಿಡುಗಡೆ
Posted On: 09-07-2024 03:38PM
ಶಿರ್ವ : ರೋಟರಿ ಕ್ಲಬ್ ಶಂಕರಪುರದ ವತಿಯಿಂದ ರಸ್ತೆ ಸುರಕ್ಷತೆ ಮತ್ತು ಸೈಬರ್ ಕ್ರೈo ಬಗ್ಗೆ ಶಿರ್ವ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಅಡಿಗ ಇವರು ಮಾಹಿತಿ ನೀಡಿ, ರಸ್ತೆ ಸುರಕ್ಷತೆಯ ಕರಪತ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಂಜುನಾಥ ಅಡಿಗ ಅವರನ್ನು ರೋಟರಿ ವತಿಯಿಂದ ಅಭಿನಂದನಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ರೋ. ಮಾಲಿನಿ ಶೆಟ್ಟಿ, ಸಹಾಯಕ ಗವರ್ನರ್ ಆದ ರೋ. ಅನಿಲ್ ಡೆಸಾ, ಡಿಸ್ಟ್ರಿಕ್ ಪ್ರಾಜೆಕ್ಟ್ ಡೈರೆಕ್ಟರ್ ರೋ. ಕ್ಲಿಫರ್ಡ್ ಡಿ ಮೇಲ್ಲೋ, ಕ್ಲಬ್ ಕಾರ್ಯದರ್ಶಿ ರೋ. ಅನಿಲ್ದಾ ನೋರೋನ್ನಾ, ಯು ನಂದನ್ ಕುಮಾರ್, ಅಂಟನಿ ಡೆಸಾ, ನವೀನ್ ಅಮೀನ್, ಫ್ಲಾವಿಯ ಮೆನೇಜಸ್, ಸಿಲ್ವಿಯಾ ಕಾಸ್ಟಲಿನೋ, ದಿವ್ಯಾ ಕಾಸ್ಟಲಿನೋ,ರೋಟರಿ ಸದಸ್ಯರುಗಳು ಉಪಸ್ಥಿತರಿದ್ದರು.
ಕಾಪು : ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಕಾಪು ಹೊಸ ಮಾರಿಗುಡಿ ಭೇಟಿ
Posted On: 09-07-2024 02:00PM
ಕಾಪು : ಪುರುಷರ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಿಲ್ಲರ್ ಅವರ ಅಮೂಲ್ಯ ಕ್ಯಾಚ್ ಹಿಡಿದು ಟೀಂ ಇಂಡಿಯಾಕ್ಕೆ ಜಯ ತಂದು ಕೊಟ್ಟ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದಿವೀಶಾ ಶೆಟ್ಟಿ ಮಂಗಳವಾರ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಕಾಪುದ ಅಮ್ಮ' (ಕಾಪುವಿನ ತಾಯಿ) ಎಂದು ತುಳುವಿನಲ್ಲಿ ಹೇಳಿದರು. ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಬಂದಿದ್ದೇನೆ. ನಾನೊಬ್ಬ ಸೆಲೆಬ್ರಿಟಿ ಎಂಬ ಆಲೋಚನೆಯ ನನಗೆ ಬಂದಿಲ್ಲ ಆಟದಲ್ಲಿ ಉತ್ತಮ ಪ್ರದರ್ಶನದ ಬಗ್ಗೆ ಗಮನಹರಿಸಿದ್ದೇನೆ. ದೇಶಕ್ಕೆ ಕಪ್ ತಂದುಕೊಡುವ ಸಂದರ್ಭವನ್ನು ದೇವರು ಸೃಷ್ಟಿ ಮಾಡಿದ್ದಾನೆ. ತಂಡದ ಕಪ್ತಾನ ಆಗೋದು ನಮ್ಮ ಕೈಯಲ್ಲಿಲ್ಲ ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ನಮ್ಮ ಗುರಿ. ಕಾಪು ಮಾರಿಯಮ್ಮನ ದರುಶನ ಮಾಡಿದ ಮೇಲೆ ಮನಸ್ಸಿಗೆ ಬಹಳ ನೆಮ್ಮದಿಯಾಯಿತು. ಪೂಜೆ ಸಲ್ಲಿಕೆ ಮಾಡಿ ಶಾಂತಿ ಪ್ರಾಪ್ತಿಯಾದ ಅನುಭವವಾಯ್ತು. ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಬರಬೇಕು ಎಂಬ ಇಚ್ಛೆ ಇದೆ ಎಂದರು.
ಈ ಸಂದರ್ಭ ದೇವಳದ ತಂತ್ರಿವರ್ಯರಾದ ಕೆ.ಪಿ ಕುಮಾರಗುರು ತಂತ್ರಿ ಕೊರಂಗ್ರಪಾಡಿ ಹಾಗೂ ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಕಲ್ಯರವರು ಪ್ರಾರ್ಥಿಸಿ ಸೂರ್ಯಕುಮಾರ್ ದಂಪತಿಗೆ ಅನುಗ್ರಹ ಪ್ರಸಾದ ನೀಡಿದರು. ದೇವಳದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿದರು. ಇದೇ ವೇಳೆ ಟೀಮ್ ಇಂಡಿಯಾ ಆಟಗಾರನಿಗೆ ಸೂಕ್ತ ಭದ್ರತೆ ಒದಗಿಸಲು ಮಾರಿಗುಡಿ ಸುತ್ತ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಸೂರ್ಯಕುಮಾರ್ ಜೊತೆ ಅಭಿಮಾನಿಗಳು ಅಟೋಗ್ರಾಫ್, ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಈ ಸಂದರ್ಭ ಕಾಪು ಕ್ಷೇತ್ರದ ಶಾಸಕರು, ದೇವಳದ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಕೆ.ರವಿಕಿರಣ್, ಸಮಿತಿಯ ಸದಸ್ಯರಾದ ಮಾಧವ ಆರ್ ಪಾಲನ್, ಮನೋಹರ್ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಅರುಣ್ ಶೆಟ್ಟಿ ಪಾದೂರು ಮತ್ತಿತರರು ಉಪಸ್ಥಿತರಿದ್ದರು.