Updated News From Kaup
ಇನ್ನಂಜೆ ಮಹಿಳಾ ಮಂಡಳಿ ವಾರ್ಷಿಕೋತ್ಸವದ ಸಂಭ್ರಮಾಚರಣೆ : ಸ್ವರ್ಗ ಆಶ್ರಮ ಭೇಟಿ
Posted On: 03 May 2025, 01:10 PM
ಕಾಪು : ಇನ್ನಂಜೆ ಮಹಿಳಾ ಮಂಡಳಿ ಇನ್ನಂಜೆ ಇದರ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಕೊಳಲಗಿರಿಯಲ್ಲಿರುವ ಹೊಂ ಡಾಕ್ಟರ್ ಫೌಂಡೇಶನ್ ಟ್ರಸ್ಟ್ ನ ಸ್ವರ್ಗ ಆಶ್ರಮದ ನಿವಾಸಿಗಳಿಗೆ ರೂ. ಹತ್ತು ಸಾವಿರ ನಗದು ಹಾಗೂ ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೋಂ ಡಾಕ್ಟರ್ ಫೌಂಡೇಶನ್ ನ ಅಧ್ಯಕ್ಷರಾರ ಡಾ. ಶಶಿಕಿರಣ್ ಶೆಟ್ಟಿ, ಇನ್ನಂಜೆ ಮಹಿಳಾ ಮಂಡಳಿಯ ಗೌರವಾಧ್ಯಕ್ಷರಾದ ಪುಷ್ಪ ರವೀಂದ್ರ ಶೆಟ್ಟಿ, ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ವೇತಾ ಎಲ್ ಶೆಟ್ಟಿ, ಜೊತೆ ಕಾರ್ಯದರ್ಶಿ ಅನಿತಾ ಮಥಾಯಸ್ ಹಾಗೂ ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಪುಷ್ಪ ರವೀಂದ್ರ ಶೆಟ್ಟಿಯವರ ಹುಟ್ಟು ಹಬ್ಬದವನ್ನು ಆಶ್ರಮದಲ್ಲಿ ಆಚರಿಸಲಾಯಿತು.
ಸರಕಾರದ ವಿದ್ಯಾರ್ಥಿನಿಲಯಗಳ ಮಕ್ಕಳಿಗೆ ನೀಡುವ ಸೌಲಭ್ಯಗಳು ಪರಿಪೂರ್ಣವಾಗಿ ತಲುಪಬೇಕು : ಡಾ. ವಿದ್ಯಾಕುಮಾರಿ
Posted On: 03 May 2025, 12:44 PM
ಉಚ್ಚಿಲ : ಪೋಷಕರ ಉದ್ಯೋಗದ ನಿಮಿತ್ತ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂಬ ನಿಲುವಿನ ಮೂಲಕ ದೇವರಾಜ ಅರಸುರವರು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮನೆಯ ಪ್ರೀತಿ, ವಾತ್ಸಲ್ಯ , ಗುಣಮಟ್ಟದ ಆಹಾರವನ್ನು ನ್ಯಾಯಯುತವಾಗಿ ನೀಡುವುದು ಎಲ್ಲಾ ಸಿಬ್ಬಂದಿಗಳ ಜವಾಬ್ದಾರಿ. ನಮ್ಮ ಮಕ್ಕಳು ಎಂಬ ಭಾವನೆಯಿರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹೇಳಿದರು. ಅವರು ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತಿ ಉಡುಪಿ, ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಇವರ ಸಹಯೋಗದೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಅಡುಗೆಯವರು ಮತ್ತು ಅಡುಗೆ ಸಹಾಯಕರುಗಳಿಗೆ ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣೆ ಕುರಿತು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಭಾಭವನದಲ್ಲಿ ಜರಗಿದ ವಿಶೇಷ ಪುನಶ್ಚೇತನ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಇಂದು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರಕಾರದ ವಿದ್ಯಾರ್ಥಿನಿಲಯಗಳ ಮೂಲಕ ವಿದ್ಯಾರ್ಜನೆ ಮಾಡಿದವರಿದ್ದಾರೆ. ಮಕ್ಕಳಿಗೆ ನೀಡುವ ಸೌಲಭ್ಯಗಳು ಪರಿಪೂರ್ಣವಾಗಿ ಅವರಿಗೆ ತಲುಪಬೇಕು. ಇಲ್ಲವಾದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹಾಕಪ್ಪ ಆರ್ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ್ ಸುವರ್ಣ, ಲೆಕ್ಕಾಧೀಕ್ಷಕರಾದ ಸುಗುಣ, ಕಾರ್ಕಳ ತಾಲೂಕು ಕಲ್ಯಾಣಾಧಿಕಾರಿ ಮೇಘಶ್ರೀ ಉಪಸ್ಥಿತರಿದ್ದರು. ಉಡುಪಿ ತಾಲೂಕು ಕಲ್ಯಾಣಾಧಿಕಾರಿ ಶ್ರೀಕಾಂತ್ ಗುಣಗ ಸ್ವಾಗತಿಸಿ, ನಿರೂಪಿಸಿದರು. ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ ಕಾರ್ಯವು ಜರಗಿತು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಗಾರ ನಡೆಯಿತು.
ದ.ಕ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ ಚುನಾವಣೆ : ಜಯಭೇರಿ ಬಾರಿಸಿದ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ
Posted On: 27 Apr 2025, 07:38 PM
ಪಡುಬಿದ್ರಿ : ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿಯವರ ನೇತೃತ್ವದ ತಂಡ ಭರ್ಜರಿ ಬಹುಮತದಿಂದ ಜಯಭೇರಿ ಗಳಿಸಿದೆ. ಈ ಸಲುವಾಗಿ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿಯವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ರೌನಕ್ ಪುತ್ರನ್ ಪಡುಬಿದ್ರಿ ಉಪಸ್ಥಿತರಿದ್ದರು.
ಏ.25 - 26 : ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಮೂಡುಕರೆ ಗರಡಿ ಮನೆ ಹೆಜಮಾಡಿ - ವಾರ್ಷಿಕ ನೇಮೋತ್ಸವ
Posted On: 24 Apr 2025, 07:04 AM
ಪಡುಬಿದ್ರಿ : ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಮೂಡುಕರೆ ಗರಡಿ ಮನೆ ಹೆಜಮಾಡಿ ಇದರ ವಾರ್ಷಿಕ ನೇಮೋತ್ಸವು ಏ. 25, ಶುಕ್ರವಾರ ಮತ್ತು 26, ಶನಿವಾರ ಜರಗಲಿದೆ. ಏ.25 ರಂದು ಬೆಳಿಗ್ಗೆ 9ಗಂಟೆಗೆ ಗಜಕಂಬ ಮುಹೂರ್ತ, ಬೆಳಿಗ್ಗೆ 11ಗಂಟೆಗೆ ಚಪ್ಪರ ಮುಹೂರ್ತ ಮತ್ತು ಆರೋಹಣ, ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 7.30ಕ್ಕೆ ದೈವದ ಭಂಡಾರ ಇಳಿಯುವುದು ಹಾಗೂ ಕೋರ್ದ್ದಬ್ಬು ದೈವದರ್ಶನ, ರಾತ್ರಿ 10.30ಕ್ಕೆ ಶ್ರೀ ದೈವರಾಜ ಕೋರ್ದ್ದಬ್ಬು ನೇಮೋತ್ಸವ, ರಾತ್ರಿ 1.00 ಕ್ಕೆ ಶಕ್ತಿ ಸ್ವರೂಪಿಣಿ ತನಿಮಾನಿಗ ದೇವಿಯ ನೇಮೋತ್ಸವ ಜರಗಲಿದೆ. ಏ. 26ರಂದು ಬೆಳಿಗ್ಗೆ 9 ಕ್ಕೆ ಜುಮಾದಿ -ಬಂಟ ದೈವದ ನೇಮೋತ್ಸವ, ಮಧ್ಯಾಹ್ನ 1ಕ್ಕೆ ಗುಳಿಗ ದೈವದ ನೇಮೋತ್ಸವ ಜರುಗಲಿದೆ ಎಂದು ದೈವಸ್ಥಾನದ ಸೇವಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಮೂಡುಬೆಳ್ಳೆ - ಹಿರಿಯ ಪಾರ್ದನಗಾರ್ತಿ ಅಪ್ಪಿ ಕೃಷ್ಣ ಪಾಣಾರ ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿಯಿಂದ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ
Posted On: 23 Apr 2025, 02:21 PM
ಶಿರ್ವ : ಪಾರ್ದನಗಳು ಗ್ರಂಥಸ್ಥವಾಗಿ ಮುಂದಿನ ಪೀಳಿಗೆಗೆ ಸಿಗುವಂತಾಗಬೇಕು. ಬಾಯಿಯಿಂದ ಬಾಯಿಗೆ ಹರಿದು ಬಂದ ಸತ್ ಸಂಪ್ರದಾಯ ಗೀತೆಗಳಾದ ಪಾರ್ದನಗಳು ಈ ನಾಡಿನ ಭವ್ಯ ಜಾನಪದ ಇತಿಹಾಸವನ್ನು ತಿಳಿಸುತ್ತವೆ. ಪಾಣಾರ ಸಮುದಾಯ ಈ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇದನ್ನು ಶಾಶ್ವತವಾಗಿ ಉಳಿಸುವ ಕಾರ್ಯ ನಡೆಯಬೇಕು ಎಂದು ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್ ನುಡಿದರು. ಅವರು ಪಾಣಾರ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಮೂಡುಬೆಳ್ಳೆ ಇವರ ಆಶ್ರಯದಲ್ಲಿ ಬೆಳ್ಳೆ ಕಾಡಬೆಟ್ಟು ಶ್ರೀ ಪಂಜಿರ್ಲಿ ದೈವಸ್ಥಾನದ ಪ್ರಾಂಗಣದಲ್ಲಿ ಮೂಡುಬೆಳ್ಳೆಯ ಹಿರಿಯ ಪಾರ್ದಾನಗಾರ್ತಿ ಅಪ್ಪಿ ಕೃಷ್ಣ ಪಾಣಾರ ಇವರಿಗೆ ಕರ್ನಾಟಕ ಸರಕಾರದ ಕರ್ನಾಟಕ ಜಾನಪದ ಅಕಾಡೆಮಿಯಿಂದ ವಾರ್ಷಿಕ "ಗೌರವ ಪ್ರಶಸ್ತಿ ಪ್ರದಾನ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಜಾನಪದ ಇಲ್ಲದ ಜಾಗವೇ ಇಲ್ಲ. ಜಾನಪದದಲ್ಲಿ ನಾಡು, ನುಡಿ, ಸಂಸ್ಕೃತಿ ಕಟ್ಟುವುದರಲ್ಲಿ ಸಾಹಿತ್ಯವನ್ನು ಉಳಿಸುವುದೇ ಅಕಾಡೆಮಿಯ ಕೆಲಸವಾಗಿದೆ. ಬೀದರ್‌ನಲ್ಲಿ ಜರುಗಿದ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಯೋ ಸಮಸ್ಯೆಯಿಂದ ಬರಲು ಅಸಾಧ್ಯವಾದ ಸಾಧಕರಿಗೆ ಅಕಾಡೆಮಿ ಅವರ ಮನೆಗೆ ಹೋಗಿ ಗೌರವಿಸುವ ಈ ಕಾರ್ಯಕ್ರಮದಲ್ಲಿ ಇಲ್ಲಿನ ವ್ಯವಸ್ಥೆ, ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಅಚ್ಚುಕಟ್ಟುತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಅಪ್ಪಿ ಕೃಷ್ಣ ಪಾಣಾರ ಇವರನ್ನು ಬೆಳ್ಳೆ ಗ್ರಾಮ ಪಂಚಾಯತ್, ಬೆಳ್ಳೆ ವ್ಯ.ಸೇ.ಸಹಕಾರಿ ಸಂಘ, ನವೋದಯ ಒಕ್ಕೂಟ, ಕೆನರಾ ಬ್ಯಾಂಕ್ ಮಧ್ವನಗರ ಶಾಖೆ, ಪಾಣಾರ ಯಾನೆ ನಲಿಕೆಯವರ ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪಾಣಾರ ಯಾನೆ ನಲಿಕೆಯವರ ಸಂಘದಿಂದ ಸಮುದಾಯಕ್ಕೆ ನೀಡುತ್ತಿರುವ ಬೆಂಬಲ ಹಾಗೂ ಸಹಕಾರಕ್ಕೆ ತಹಶೀಲ್ದಾರ್ ಡಾ.ಪ್ರತಿಭಾ ಆರ್, ಗ್ರಾಮ ಆಡಳಿತಾಧಿಕಾರಿ ಪ್ರದೀಪ್ ಕುಮಾರ್, ಗ್ರಾ.ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ, ಗ್ರಾಮ ಸಹಾಯಕರಾಗಿ 32ವರ್ಷ ಸೇವೆ ನೀಡಿದ ನ್ಯಾನ್ಸಿ ಡಿಸೋಜ, ಸಮಾಜ ಸೇವಕ ಸುಂದರ, ಜಾನಪದ ವಿದ್ವಾಂಸ ಎಸ್.ಎ.ಕೃಷ್ಣಯ್ಯ, 30 ವರ್ಷದ ಬಳಿಕ ಪಿಯುಸಿ ಬರೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಅಂಗನವಾಡಿ ಕಾರ್ಯಕರ್ತೆ ಸುನೀತಾ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮೂಡುಬೆಳ್ಳೆ ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ ವಹಿಸಿದ್ದರು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ, ಅಕಾಡೆಮಿಯ ವಲಯ ಸಂಯೋಜಕ ಡಾ.ಜಮೀರುಲ್ಲಾ ಶರೀಫ್, ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯಾ ವಿ.ಆಚಾರ್ಯ, ಪಾಣಾರ ಸಂಘದ ಗೌರವ ಅಧ್ಯಕ್ಷ ಸುಧಾಕರ ಪಾಣಾರ ಬೆಳ್ಳೆ, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ, ಮಾಜಿ ತಾ.ಪಂ.ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಉದ್ಯಮಿ ವಿನ್ಸೆಂಟ್ ಫರ್ನಾಂಡಿಸ್ ಬೆಳ್ಳೆ, ಬೆಳ್ಳೆ ಸೊಸೈಟಿ ಅಧ್ಯಕ್ಷ ಶಿವಾಜಿ ಎಸ್.ಸುವರ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಸುಧಾಕರ ಪೂಜಾರಿ, ರಂಜನಿ ಹೆಗ್ಡೆ, ರಾಜೇಂದ್ರ ಶೆಟ್ಟಿ, ಮಾಜಿ ತಾ.ಪಂ.ಸದಸ್ಯೆ ಸುಜಾತಾ ಸುವರ್ಣ, ಪಳ್ಳಿ ಸೊಸೈಟಿ ನಿರ್ದೇಶಕ ದಯಾನಂದ ಶೆಟ್ಟಿ ಪಠೇಲ್‌ಮನೆ, ಪಾಣಾರ ಸಂಘ ಉಡುಪಿ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಪಡ್ಡಾಮ, ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಪಾಣಾರ ಸಂಘ ಜಿಲ್ಲಾ ಸಮಿತಿಯ ಸುಕೇಶ್, ಸಂಜೀವ ಪಡ್ಡಾಮ, ಗ್ರಾ.ಪಂ.ಸದಸ್ಯ ಗುರುರಾಜ್ ಭಟ್, ಗ್ರಾಮಸ್ಥರು ಉಪಸ್ಥಿತರಿದ್ದರು. ಬೆಳ್ಳೆ ಗ್ರಾ,ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ನಿರೂಪಿಸಿ, ವಂದಿಸಿದರು.
ಶಿರ್ವ ಮಾರಿಗುಡಿ ಶ್ರೀ ಮಹಮ್ಮಾಯಿ ಸಾನ್ನಿಧ್ಯದಲ್ಲಿ ಚಪ್ಪರ ಮೂಹೂರ್ತ
Posted On: 23 Apr 2025, 12:31 PM
ಶಿರ್ವ : ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಶಿರ್ವ ಮಾರಿಗುಡಿ ಶ್ರೀ ಮಹಮ್ಮಾಯೀ ಅಮ್ಮನವರ ಸಾನ್ನಿಧ್ಯದಲ್ಲಿ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಬುಧವಾರ ಬೆಳಿಗ್ಗೆ ಆಗಮ ಪಂಡಿತ ಕುತ್ಯಾರು ಕೇಂಜ ಶ್ರೀಧರ ತಂತ್ರಿಯವರ ನೇತೃತ್ವದಲ್ಲಿ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ವೆಂಕಟರಮಣ ಭಟ್ ಪೌರಾಹಿತ್ಯದಲ್ಲಿ ಚಪ್ಪರ ಮೂಹೂರ್ತ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಡಿಬೆಟ್ಟು ರತ್ನವರ್ಮ ಹೆಗ್ಡೆ, ಸೋರ್ಕಲ ಸಚ್ಚಿದಾನಂದ ಹೆಗ್ಡೆ, ರಾಜೇಶ್ ಶೆಟ್ಟಿ, ರವೀಂದ್ರ ಶೆಟ್ಟಿ, ಆನಂದ ಶೆಟ್ಟಿ, ರತ್ನಾಕರ ಆಚಾರ್ಯ, ಹರೀಶ್ ಪೂಜಾರಿ, ವಿಷ್ಣುಮೂರ್ತಿ ಭಜನಾ ಮಂಡಳಿ ಸದಸ್ಯರು, ಜೀರ್ಣೋದ್ಧಾರದ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಪತ್ರಕರ್ತ ಕಿರಣ್ ಪೂಜಾರಿ ಮುದ್ದುಗುಡ್ಡೆಯವರಿಂದ ಅರೆಬೆತ್ತಲೆ ಪ್ರತಿಭಟನೆ
Posted On: 22 Apr 2025, 04:56 PM
ಕುಂದಾಪುರ : ಅನವಶ್ಯಕ ಕೇಸು ದಾಖಲಿಸಿ ಕಿರುಕುಳ ನೀಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸೋಮವಾರ ಇಲ್ಲಿನ ತಾಲೂಕು ಕಚೇರಿ ಎದುರು ಬಿಲ್ಲವ ಹೋರಾಟಗಾರ, ಪತ್ರಕರ್ತ ಕಿರಣ್ ಪೂಜಾರಿ ಮುದ್ದುಗುಡ್ಡೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಸರಕಾರಿ ಜಾಗವನ್ನು ಒತ್ತುವರಿ ಮಾಡಿರುವವರ ಪರ ನಿಂತು ದಲಿತ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ ನ್ಯಾಯಕ್ಕಾಗಿ ಹೋರಾಟ ನಡೆಸಿದ ತನ್ನ ಮೇಲೆ ಪೊಲೀಸರು, ವಕೀಲರು, ಗ್ರಾಪಂ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದರು. ಪ್ರತಿಭಟನೆ ಸ್ಥಳಕ್ಕೆ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ತಹಸೀಲ್ದಾರ್ ಪ್ರದೀಪ ಕುರುಡೇಕರ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್ ಟಿ ಪಿ) ನಿರ್ಮಾಣ ವಿರೋಧಿಸಿ ಹೋರಾಟಕ್ಕೆ ಸಜ್ಜಾದ ಮೂಳೂರು ಗ್ರಾಮಸ್ಥರು
Posted On: 22 Apr 2025, 02:25 PM
ಕಾಪು : ತಾಲೂಕಿನ ಮೂಳೂರು ಗ್ರಾಮದಲ್ಲಿ ಪುರಸಭೆಯು ಸುಮಾರು 1.78 ಎಕರೆ ಜಾಗದಲ್ಲಿ ಕಾಪು ಪೇಟೆಯ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್ ಟಿ ಪಿ) ನಿರ್ಮಿಸುವ ಬಗ್ಗೆ ಸ್ಥಳೀಯರು ಹೋರಾಟಕ್ಕೆ ಸಜ್ಜಾಗಿದ್ದು ಪೂರ್ವಭಾವಿಯಾಗಿ ಎ.24 ರಂದು ಅಧಿಕಾರಿವರ್ಗ ಮತ್ತು ಜನಪ್ರತಿಧಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮಸ್ಥ ಪುರುಷೋತ್ತಮ ಸಾಲ್ಯಾನ್ ಕಾಪು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೂಳೂರಿನ ಗ್ರಾಮಸ್ಥರು ಒಟ್ಟಾಗಿ ಎ.24 ರಂದು ಗುರುವಾರ ಬೆಳಿಗ್ಗೆ 8.30 ಕ್ಕೆ ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದ ಬಳಿ ಸೇರಿ ಕಾಪು ಪುರಸಭೆಗೆ,ತಾಲೂಕು ಕಚೇರಿಗೆ, ಶಾಸಕರಿಗೆ, ಮಾಜಿ ಸಚಿವರಿಗೆ ಪ್ರತಿಭಟನೆಯೊಂದಿಗೆ ತೆರಳಿ ಮನವಿ ಪತ್ರ ನೀಡಲು ಉದ್ದೇಶಿಸಲಾಗಿದೆ. ಪುರಸಭಾ ಸದಸ್ಯರಿಗೆ ಮಾಹಿತಿ ನೀಡದೆ ಕೆಲವು ದಿನಗಳ ಹಿಂದೆ ಸುಮಾರು 1.78 ಎಕರೆ ಸರಕಾರಿ ಜಮೀನನ್ನು ತಾಲೂಕು ಆಡಳಿತ ಕಾಪು ಪುರಸಭೆಗೆ ಮಂಜೂರು ಮಾಡಿದೆ. ಮೂಳೂರಿನ ಸೂಜಿಮೊನೆಯಷ್ಟು ಜಾಗವನ್ನು ಬಿಟ್ಟು ಕೊಡುವುದಿಲ್ಲ ಎಂದರು. ಗ್ರಾಮಸ್ಥರಾದ ಪ್ರಭಾತ್ ಶೆಟ್ಟಿ ಬಿಕ್ರಿಗುತ್ತು ಮಾತನಾಡಿ, ಕಾಪು ಪೇಟೆಯನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಅವೈಜ್ಞಾನಿಕ ಯೋಜನೆಯನ್ನು ನಮ್ಮ ಊರಿಗೆ ತಂದು ಹಾಳು ಮಾಡಲೆತ್ನಿಸುವುದು ದುರಂತ. ಸದ್ರಿ ಜಮೀನು ನಂಜ ಜಮೀನು ಆಗಿದ್ದು, ಮೇಲ್ಮಟ್ಟದ ಅಂತರ್ಜಲದ ಜೊತೆಗೆ 60-70 ಮೀ. ಅಂತರದಲ್ಲಿ ಮನೆ, ಕೃಷಿ ಭೂಮಿ, ತೋಟ, ನಾಗಬನ, ದೈವರಾಧನೆ ಸ್ಥಳಗಳು ಹಾಗೂ ಕುಡಿಯುವ ನೀರಿನ ಬಾವಿಗಳಿದ್ದು ಒಂದು ವೇಳೆ ಈ ಘಟಕ ನಿರ್ಮಾಣವಾದರೆ ಇಡೀ ಗ್ರಾಮದ ಕುಡಿಯುವ ನೀರಿನ ಭಾವಿ ಕಲುಷಿತಗೊಳ್ಳುತ್ತದೆ ಹಾಗೂ ಇದರಿಂದ ಹೊರ ಸೂಸುವ ದುರ್ನಾತ ವಾಸನೆ ಹಾಗೂ ಕೆಮಿಕಲ್ ಮಿಶ್ರಿತ ತ್ಯಾಜ್ಯ ಇಡೀ ಪರಿಸರವನ್ನು ಕಲುಷಿತ ಆಗುವುದರ ಜತೆಗೆ ಮಾರಕ ರೋಗ ಕ್ಯಾನ್ಸರ್, ಮಲೇರಿಯಾ, ಡೆಂಗ್ಯೂನಂತಹ ಮಾರಕಾ ಸಾಂಕ್ರಾಮಿಕ ರೋಗ ಹರಡುವ ಭೀತಿ ಇರಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಸತೀಶ್ಚಂದ್ರ, ಮೊಹಮ್ಮದ್ ಆಸೀಫ್, ಚಿತ್ತನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಜನಿವಾರ ಪ್ರಕರಣ : ವಿಶ್ವಕರ್ಮ ಒಕ್ಕೂಟದಿಂದ ಖಂಡನೆ
Posted On: 21 Apr 2025, 03:31 PM
ಕಾಪು : ಇತ್ತೀಚೆಗೆ ಸರಕಾರದ ವತಿಯಿಂದ ನಡೆಸಲಾದ ಸಿ.ಇ.ಟಿ. ಪರೀಕ್ಷೆಯ ವೇಳೆ ರಾಜ್ಯದ ವಿವಿಧ ಸ್ಥಳಗಳಲ್ಲಿ ವಿದ್ಯಾರ್ಥಿಗಳ ಜನಿವಾರ ಕಳಚಿದ ಹಾಗೂ ಕತ್ತರಿಸಿದ ಘಟನೆ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಮಾಡಿದ ಅಪಮಾನವಲ್ಲ, ಸಮಸ್ತ ಜನಿವಾರಧಾರಣೆ ಮಾಡುವ ಹಿಂದೂ ಸಮುದಾಯಗಳಿಗೆ ಮಾಡಿರುವ ಅವಮಾನವಾಗಿರುತ್ತದೆ. ಈ ಘಟನೆಯನ್ನು ಅವಿಭಜಿತ ದ. ಕ. ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷರಾದ ಮಧು ಆಚಾರ್ಯ, ಮೂಲ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕಾನೂನಿನಡಿಯಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
ಪತ್ರಕರ್ತ, ಸಾಮಾಜಿಕ ಹೋರಾಟಗಾರ ಕಿರಣ್ ಪೂಜಾರಿಯವರಿಂದ ಸೋಮವಾರ ಕುಂದಾಪುರ ತಾಲೂಕು ಆಫೀಸ್ ಎದುರಿಗೆ ಅರೆಬೆತ್ತಲೆ ಧರಣಿ
Posted On: 20 Apr 2025, 02:47 PM
ಉಡುಪಿ : ಪೋಲೀಸ್ ಹಾಗೂ ಪಂಚಾಯತ್ ಅಧಿಕಾರಿಯೊಬ್ಬರು ಕರ್ತವ್ಯಲೋಪ ಎಸಗಿ ತಮ್ಮ ಮೇಲೆ ದೌರ್ಜನ್ಯ ವೆಸಗಿದ್ದಾರೆ ಮತ್ತು ನ್ಯಾಯವಾದಿಯೊಬ್ಬರು ತಮಗೆ ಹಾಗೂ ತಮ್ಮ ಸಮಾಜಕ್ಕೆ ಅವಮಾನಿಸಿ ತಮ್ಮ ಮೇಲೆ ಸುಳ್ಳು ಪ್ರಕರಣಗಳು ದಾಖಲಿಸುವಂತೆ ಪೋಲಿಸರ ಮೇಲೆ ಒತ್ತಡ ಹೇರಿದ್ದಾರೆ. ಈ ಮೂವರ ವಿರುದ್ದ ಸೋಮವಾರ ಕುಂದಾಪುರ ತಾಲೂಕು ಆಫೀಸ್ ಎದುರಿಗೆ ಅರೆಬೆತ್ತಲೆ ಧರಣಿ ನಡೆಸಲಿದ್ದೇನೆ ಎಂದು ಪತ್ರಕರ್ತ ಹಾಗೂ ಬಿಲ್ಲವ ಹೋರಾಟಗಾರ ಕಿರಣ್ ಪೂಜಾರಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಬಿಲ್ಲವರ ಬಗ್ಗೆ ಲಘುವಾಗಿ ಮಾತನಾಡಿದ ಹಾಗೂ ತನಗೆ ನಿಂದನೆ ಮಾಡಿದ ತನ್ನ ಸಮಾಜದ ಬಗ್ಗೆ ಅವಮಾನಕರ ವಾಗಿ ನಿಂದಿಸಿ ಸುಳ್ಳು ಪ್ರಕರಣಗಳನ್ನು ಧಾಖಲಿಸುವಂತೆ ಒತ್ತಡ ಹೇರಿದ ಹಾಗೂ ಪ್ರಕರಣ ಒಂದರಲ್ಲಿ ತಹಸೀಲ್ದಾರ್ ಯಥಾ ಸ್ಥಿತಿ ಕಾಪಾಡಬೇಕು ಎಂದು 8 ಸಲ ಆದೇಶ ಮಾಡಿದರು ಅವರಿಗೂ ಅಗೌರವ ತೋರಿದ ಅಲ್ಲದೇ ಉಚ್ಚ ನ್ಯಾಯಾಲಯ ಮತ್ತು ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕೇಸ್ ಇದ್ದರು ನ್ಯಾಯಾಂಗ ಉಲ್ಲಂಘನೆ ಮಾಡಿಸಿ ನ್ಯಾಯವಾದಿಯೊಬ್ಬರು ವಕೀಲ ವೃತ್ತಿಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಕರ್ತವ್ಯಕ್ಕೆ ಕಪ್ಪು ಚುಕ್ಕೆ ಮಾಡಿದ ನ್ಯಾಯವಾದಿಯೊಬ್ಬರನ್ನು ಬಾರ್ ಕೌನ್ಸಿಲ್ ನಿಂದ ಅಮಾನತು ಮಾಡಬೇಕು ಹಾಗೂ ಬಿಲ್ಲವ, ದಲಿತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಪೋಲಿಸ್ ಅಧಿಕಾರಿಯೊಬ್ಬರು ತಮ್ಮ ಮೇಲೆ ಕುಂದಾಪುರದಲ್ಲಿ 2 ಮತ್ತು ಕೊಲ್ಲೂರನಲ್ಲಿ 1 ಸುಳ್ಳು ಕಂಪ್ಲೇಂಟ್ ಮಾಡಿಸಿ, ಉಚ್ಚ ನ್ಯಾಯಾಲಯ ಮತ್ತು ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕೇಸ್ ಇದೆ. ಕೇಸು ದಾಖಲಿಸಿದವರ ಪರವಾಗಿ ಸತ್ಯ ಅಸತ್ಯೆಯನ್ನು ಅವಲೋಕಿಸದೆ, ದಲಿತ ಮಹಿಳೆಯರ ಮೇಲೆ ಸುಳ್ಳು ದೂರು ದಾಖಲಿಸಿ, ಅವರು ನೀಡಿದ ದೂರನ್ನು ದಾಖಲಿಸದೇ ಹಿಂದೆ ಕಳುಹಿಸಿದ್ದಾರೆ ಎಂದು ಆರೋಪಿಸಿ, ಇವರ ವಿರುದ್ಧ ಇಲಾಖಾ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಗ್ರಾಮ ಆಡಳಿತ ಅಧಿಕಾರಿಯೊಬ್ಬರು ಸರಕಾರಿ ಜಾಗವನ್ನು ಒತ್ತುವರಿ ಮಾಡಿದ ಕೆಲವರ ಕೈಗೊಂಬೆ ಆಗಿ ಬಹುಪರಾಕ್ ಹೇಳುತ್ತಿದ್ದಾರೆ 8 ಬಾರಿ ತಹಸೀಲ್ದಾರ್ ಆದೇಶ ಉಲ್ಲಂಘನೆ ಮಾಡಿದರು ಸರಿಯಾದ ವರದಿ ನೀಡದೆ, ಪತ್ರಕರ್ತರು ಮಾಹಿತಿ ಕೇಳಿದಾಗ ಏನು ಮಾಡಲಿಕ್ಕೆ ಆಗುತ್ತೆ ಎಂದು ಅಗೌರವ ತೋರಿ, ಉಚ್ಚ ನ್ಯಾಯಾಲಯ ಮತ್ತು ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕೇಸ್ ಇದ್ದರು ನ್ಯಾಯಾಂಗ ಉಲ್ಲಂಘನೆ ಬಗ್ಗೆ ಅರಿವು ಮೂಡಿಸದೆ ಸೂಕ್ತ ಕ್ರಮ ಕೈಗೊಳ್ಳದೆ, ಕರ್ತವ್ಯದಲ್ಲಿ ಲೋಪ, ಕರ್ತವ್ಯ ನಿರ್ಲಕ್ಷತನ, ಕರ್ತವ್ಯ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಅಮಾನತು ಮಾಡಬೇಕಾಗಿ ಅಗ್ರಹಿಸಿದ್ದಾರೆ. ಇವರೆಲ್ಲರ ವಿರುದ್ಧ ಸೋಮವಾರ ಕುಂದಾಪುರ ತಾಲೂಕು ಆಫೀಸ್ ಎದುರಿಗೆ ಅರೆಬೆತ್ತಲೆ ಧರಣಿ ನಡೆಸಲಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಮಾಹಿತಿಹಕ್ಕು ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದೆ. ಕಿರಣ ಪೂಜಾರಿಯವರಂತಹ ಅನೇಕ ಹೋರಾಟಗಾರರು ಸುಳ್ಳು ದೂರು ದಾಖಲಿಸಿಕೊಂಡು ದೌರ್ಜನ್ಯ ಅನುಭವಿಸುತ್ತಿದ್ದಾರೆ. ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಾಮಾಜಿಕ ಹೋರಾಟಗಾರರಿಗೆ, ಪತ್ರಕರ್ತರಿಗೆ, ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕಾಗಿದೆ.
