Updated News From Kaup
ಪಡುಬಿದ್ರಿ : ರೋಟರಿ ಕ್ಲಬ್ ಪದಗ್ರಹಣ
Posted On: 07-07-2024 06:07PM
ಪಡುಬಿದ್ರಿ : ನಾಯಕತ್ವ ಎನ್ನುವುದು ಪದವಿಯಲ್ಲ ಅದು ಸವಾಲಿನ ಪ್ರಕ್ರಿಯೆಯಾಗಿದೆ. ಸಮಾನತೆ, ಶಿಸ್ತಿನ ಮೂಲಕ ಸರ್ವರನ್ನು ಸೇರಿಸಿಕೊಂಡು ಕಾರ್ಯಪ್ರವೃತ್ತರಾದಾಗ ಯಾವುದೇ ಸಂಸ್ಥೆ ಯಶಸ್ಸನ್ನು ಸಾಧಿಸಲು ಸಾಧ್ಯ. ಒಂದು ಕಾಲದಲ್ಲಿ ಮಹಿಳೆಯರಿಗೆ ಅವಕಾಶವಿಲ್ಲದ ರೋಟರಿ ಸಂಸ್ಥೆಯಲ್ಲಿ ನಂತರದ ದಿನಗಳಲ್ಲಿ ಮಹಿಳೆಯರ ಕೊಡುಗೆಗಳಿಂದ ರೋಟರಿ ಸಂಸ್ಥೆ ಶ್ರೀಮಂತವಾಯಿತು ಎಂದರೆ ತಪ್ಪಾಗಲಾರದು ಎಂದು ವಲಯ-9ರ ನಿಕಟಪೂರ್ವ ಸಹಾಯಕ ಗವರ್ನರ್ ರೋ.ಡಾ . ಪ್ರೀತಿ ಮೋಹನ್ ಹೇಳಿದರು. ಅವರು ಶನಿವಾರ ಪಡುಬಿದ್ರಿಯ ಸುಜಾತ ಅಡಿಟೋರಿಯಂನಲ್ಲಿ ಜರಗಿದ ಪಡುಬಿದ್ರಿ ರೋಟರಿ ಸಂಸ್ಥೆಯ 2024 -25ನೇ ಸಾಲಿನ ಪದಗ್ರಹಣ ಅಧಿಕಾರಿಯಾಗಿ ಪದಗ್ರಹಣ ನೆರವೇರಿಸಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ತಸ್ನೀನ್ ಅರಾ ಹಾಗೂ ಕಾರ್ಯದರ್ಶಿಯಾಗಿ ಹೇಮಲತಾ ಸುವರ್ಣ ಆಯ್ಕೆಗೊಂಡರು.
ವೇದಿಕೆಯಲ್ಲಿ ಸಹಾಯಕ ಗವರ್ನರ್ ಅನಿಲ್ ಡೇಸಾ, ಮಾಜಿ ಸಹಾಯಕ ಗವರ್ನರ್ ಪಿ ಎಚ್ ಎಫ್ ಶೈಲೇಂದ್ರ ರಾವ್ ಕೆ., ಝೋನಲ್ ಲೆಫ್ಟಿನೆಂಟ್ ಮೆಲ್ವಿನ್ ಡಿಸೋಜ, ಮಾಜಿ ಝೋನಲ್ ಲೆಫ್ಟಿನೆಂಟ್ ರಿಯಾಝ್ ಮುದರಂಗಡಿ, ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಪಡುಬಿದ್ರಿ, ಕಾರ್ಯದರ್ಶಿ ಪವನ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬಾಬುರಾಯ ಆಚಾರ್ಯ ನಿರೂಪಿಸಿದರು.
ವೈದ್ಯಕೀಯ ಪ್ರತಿನಿಧಿ ಸಂಘ, ಜಯಂಟ್ಸ್ ಗ್ರೂಪ್ ಬ್ರಹ್ಮಾವರ : 22 ನೇ ವಷ೯ದ ವೈದ್ಯರ ದಿನಾಚರಣೆ
Posted On: 07-07-2024 05:50PM
ಉಡುಪಿ : ಸಮಾಜದಲ್ಲಿ ಅತ್ಯಂತ ಗೌರವದಿಂದ ನಾವೆಲ್ಲರೂ ನೋಡುವ ವ್ಯಕ್ತಿಗಳೆಂದರೆ ವೈದ್ಯರು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಪುರಭವನದಲ್ಲಿ ಉಡುಪಿ ಜಿಲ್ಲಾ ವೈದ್ಯಕೀಯ ಪ್ರತಿನಿಧಿಗಳ ಸಂಘ (ಕೆ.ಎಸ್.ಎಂ, ಎಸ್.ಆರ್.ಎ) ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ವತಿಯಿಂದ ನಡೆದ 22 ನೇ ವಷ೯ದ ವೈದ್ಯರ ದಿನಾಚರಣೆ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವೈದ್ಯರನ್ನು ನಾವು ದೇವರ ಸಮಾನರಂತೆ ಕಾಣುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯರುಗಳ ಮೇಲೆ ನಡೆಯುತ್ತಿರುವ ಹಲ್ಲೆ, ದೌಜ೯ನ್ಯಗಳು ಖಂಡನೀಯ ಎಂದರು.
ಮುಖ್ಯ ಅತಿಥಿಯಾಗಿ ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ| ರಾಜಲಕ್ಮೀ ಮಾತನಾಡಿ, ವೈದ್ಯರು ತಮ್ಮ ಕುಟುಂಬಕ್ಕೆ ಸರಿಯಾದ ಸಮಯ ನೀಡದಿದ್ದರೂ ರೋಗಿಗಳನ್ನು ತನ್ನ ಕುಟುಂಬವೆಂದು ತಿಳಿದು ಉತ್ತಮವಾದ ಸೇವೆಯನ್ನು ಸಲ್ಲಿಸುತ್ತಾರೆ ಎಂದು ಹೇಳಿದರು. ಉಡುಪಿ ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ನಾಯಕ್ ಮಾತನಾಡಿ, ಸಮಾಜದಲ್ಲಿ ವೈದ್ಯರು ನಮಗೆಲ್ಲ ದೇವರ ಸಮಾನ ಹೀಗಾಗಿ ವೈದ್ಯರು ನಮ್ಮ ಜೀವನದ ಅವಿಭಾಜ್ಯ ಅಂಗ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಅಧ್ಯಕ್ಷ ಸುಂದರ್ ಪೂಜಾರಿ ಮೂಡುಕುಕ್ಕುಡೆ ವಹಿಸಿದ್ದರು. ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಸತೀಶ ಹೆಗ್ಡೆ, ಜಯಂಟ್ಸ್ ಯೂನಿಟ್ ಡೈರೆಕ್ಟರ್ ವಿವೇಕಾನಂದ ಕಾಮತ್ ಮುಂತಾದವರಿದ್ದರು.
ಗೌರವಾರ್ಪಣೆ : ಸಮಾಜದಲ್ಲಿ ಸಾಧನೆ ಮಾಡಿದ ಹಿರಿಯ ವೈದ್ಯರುಗಳಾದ ಡಾ| ನವೀನ್ ಸಾಲಿನ್ಸ್ ಕೆಎಂಸಿ ಮಣಿಪಾಲ, ಡಾ| ಛಾಯಲತಾ, ಡಾl ಎಂ ಎನ್ ಅಡಿಗ, ಡಾ| ನಾಗಭೂಷಣ್ ಉಡುಪ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಈ ಸಂದಭ೯ದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ವೈದ್ಯ ಡಾI ಎಂ.ರಾಜಾರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಯoಟ್ಸ್ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು. ಶ್ರೀಕಾಂತ ಪೂಜಾರಿ, ರಾಘವೇಂದ್ರ ಪ್ರಭು ಕವಾ೯ಲು, ಸುಬ್ರಮಣ್ಯ ಆಚಾಯ೯ ಪರಿಚಯಿಸಿದರು. ಮಿಲ್ಟನ್ ಒಲಿವೇರಾ ವರದಿ ವಾಚಿಸಿದರು. ರಾಘವೇಂದ್ರ ಶೆಟ್ಟಿ ನಿರೂಪಿಸಿದರು.ವೈದ್ಯಕೀಯ ಪ್ರತಿನಿಧಿ ಸಂಘದ ಕಾಯ೯ದಶಿ೯ ಪ್ರಸನ್ನ ಕಾರಂತ್ ವಂದಿಸಿದರು. ಡೊನಾಲ್ಡ್ ರವರಿಂದ ಸಂಗೀತ ಕಾಯ೯ಕ್ರಮ ನಡೆಯಿತು.
ಪಡುಬಿದ್ರಿ : ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ವತಿಯಿಂದ ಪ್ರಕಾಶಾಭಿನಂದನೆ ಕಾರ್ಯಕ್ರಮ
Posted On: 07-07-2024 05:23PM
ಪಡುಬಿದ್ರಿ : ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ, ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರಿಗೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ, ಪಡುಬಿದ್ರಿ ವತಿಯಿಂದ "ಪ್ರಕಾಶಾಭಿನಂದನೆ" ಕಾರ್ಯಕ್ರಮ ರವಿವಾರ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ನಾವಡ, ಉಪಾಧ್ಯಕ್ಷರಾದ ರವೀಂದ್ರನಾಥ ಜಿ ಹೆಗ್ಡೆ, ಅರ್ಚಕರಾದ ಪದ್ಮನಾಭ ಭಟ್, ಗುರುರಾಜ್ ಭಟ್, ವನದುರ್ಗ ಟ್ರಸ್ಟ್ ಅಧ್ಯಕ್ಷರಾದ ಪದ್ಮನಾಭ ಕೋರ್ನಯ, ದೇವಳದ ಕಾರ್ಯನಿರ್ವಹಣಾಧಿಕಾರಿಗಳಾದ ಅಶೋಕ್ ಕೋಟೆಕಾರ್, ಮುಕ್ತೇಸರರಾದ ಭವಾನಿ ಶಂಕರ್ ಹೆಗ್ಡೆ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಕಾಪು ಶ್ರೀ ಹೊಸಮಾರಿಗುಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಸ್ವರ್ಣ ಗದ್ದುಗೆ ಸಮಿತಿಯ ಅಧ್ಯಕ್ಷರಾದ ರವಿ ಸುಂದರ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಪಡುಬಿದ್ರಿ : ಭಾರತೀಯ ಅಂಚೆ ಇಲಾಖೆ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ವನಮಹೋತ್ಸವ
Posted On: 07-07-2024 05:01PM
ಪಡುಬಿದ್ರಿ : ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ ಮತ್ತು ಅರಣ್ಯ ಇಲಾಖೆ ಉಡುಪಿ ವಲಯ ಇವರ ಸಹಯೋಗದಲ್ಲಿ "ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದ ಪ್ರಯುಕ್ತ ಪಡುಬಿದ್ರಿ ನೂತನ ಅಂಚೆ ಕಚೇರಿಯ ಆವರಣದಲ್ಲಿ ವನಮಹೋತ್ಸವ ಆಚರಿಸಲಾಯಿತು. ಅಂಚೆ ಅಧೀಕ್ಷಕ ರಮೆಶ್ ಪ್ರಭು ವನಮಹೋತ್ಸವಕ್ಕೆ ಚಾಲನೆ ನೀಡಿ, ಎಲ್ಲರೂ ಗಿಡ ನೆಟ್ಟು ತಾಯಿಯಂತೆ ಸಂರಕ್ಷಿಸಬೇಕು ಎಂದು ಕರೆ ಕೊಟ್ಟರು.
ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ಮಾತನಾಡಿ, ಅಂಚೆ ಇಲಾಖೆಯು ಜನರ ಹಣ ಉಳಿಸಿ ಜನರಿಗೆ ಕಾಸಿನ ಭಾಗ್ಯ ಕೊಟ್ಟರೆ, ಅರಣ್ಯ ಇಲಾಖೆಯು ಕಾಡು ಉಳಿಸಿ ಜನರಿಗೆ ಆರೋಗ್ಯ ಭಾಗ್ಯ ನೀಡುತ್ತದೆ ಎಂದರು.
ಅರಣ್ಯ ಇಲಾಖೆಯ ಡಿಎಫ್ಒ ಜೀವನ್ ದಾಸ್ ಶೆಟ್ಟಿ ಮಾತನಾಡಿ, ಮರಗಳನ್ನು ಕಡಿದು, ಕಾಂಕ್ರೀಟಿಕರಣದಿಂದಾಗಿ ನೀರು ಇಂಗದೆ ಪ್ರವಾಹ ಭೀತಿ ಸೃಷ್ಟಿಸುತ್ತಿದೆ. ಗಿಡ ನೆಟ್ಟಾಗ ಪೃಕೃತಿ ಸಮತೋಲದಿಂದಿರುತ್ತದೆ ಎಂದರು.
ಪಡುಬಿದ್ರಿ ಅಂಚೆ ಪಾಲಕ ಗಣೇಶ್ ಭಟ್ ಸ್ವಾಗತಿಸಿದರು. ಅಂಚೆ ಸಹಾಯಕ ವಂದಿಸಿದರು. ಅಂಚೆ ಸಹಾಯಕ ರಾಮಕೃಷ್ಣ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಗಿಡಗಳನ್ನು ಶಾಲಾ ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ವಿತರಿಸಲಾಯಿತು.
ಇನ್ನಂಜೆ : ಪಾಂಗಾಳ ಗ್ರಾಮದ ಬೀಡುವಿನ ಗದ್ದೆಯ ಕೃತಕ ನೆರೆ - ಖಾಸಗಿ ಜಮೀನಿನ ತಡೆಗೋಡೆ ತೆರವು
Posted On: 06-07-2024 10:35PM
ಇನ್ನಂಜೆ : ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಾಳ ಗ್ರಾಮದ ಬೀಡುವಿನ ಗದ್ದೆಯ ಕೃತಕ ನೆರೆಯ ತೊಂದರೆಗೆ ತಾತ್ಕಾಲಿಕ ಮುಕ್ತಿ ಸಿಕ್ಕಿದೆ.
ಉಡುಪಿ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಖಾಸಗಿ ಜಮೀನಿನಲ್ಲಿ ಹಾಕಿದ ತಡೆಗೋಡೆಯನ್ನು ತಾತ್ಕಾಲಿಕವಾಗಿ ಕಾಪು ತಹಸೀಲ್ದಾರ್ ಡಾ.ಪ್ರತಿಭಾ ಆರ್ ಇವರು ಸ್ಥಳಕ್ಕೆ ಬಂದು ತೆರವುಗೊಳಿಸಿದರು.
ಮುಂದಿನ ದಿನದಲ್ಲಿ ಖಾಸಗಿ ಜಮೀನಿನವರ ಜೊತೆಗೆ ಇನ್ನಂಜೆ ಗ್ರಾಮ ಪಂಚಾಯತ್ ನಲ್ಲಿ ನ್ಯಾಯಂಗ ಸಮಿತಿ ಸಭೆಯನ್ನು ತಹಸೀಲ್ದಾರ್ ಮತ್ತು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜೊತೆಗೆ ಸಭೆ ನಡೆಸಿ ಇದಕ್ಕೆ ಶಾಶ್ವತ ಪರಿಹಾರ ಮಾಡಲಾಗುವುದು ಎಂದು ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ ಇನ್ನಂಜೆ ತಿಳಿಸಿದರು.
ಈ ಸಂದರ್ಭ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿ ಸಿಲ್ವಾ, ಕಾಪು ಠಾಣಾಧಿಕಾರಿ ಖಾದರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಕಲಾ, ಕಾರ್ಯದರ್ಶಿ ಚಂದ್ರಶೇಖರ್, ಕಂದಾಯಾಧಿಕಾರಿ ಶಬೀರ್, ಗ್ರಾಮ ಲೆಕ್ಕಿಗ ಅವಿನಾಶ್, ಇನ್ನಂಜೆ ಪಂಚಾಯತ್ ಉಪಾಧ್ಯಕ್ಷರಾದ ಸುರೇಖಾ ಶೆಟ್ಟಿ, ಸದಸ್ಯರುಗಳಾದ ಸೋನು ಪಾಂಗಾಳ, ರಾಜೇಶ್ ಆಚಾರ್ಯ, ದಿವೇಶ್ ಶೆಟ್ಟಿ, ಸುರೇಶ್ ಶೆಟ್ಟಿ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ರಾಜೇಶ್ ಶೆಟ್ಟಿ, ಮಾಜಿ ಸದಸ್ಯರಾದ ನಾಗೇಶ್ ಭಂಡಾರಿ, ಮಹೇಂದ್ರ ಶೆಟ್ಟಿ ಪಾಂಗಾಳ ಉಪಸ್ಥಿತರಿದ್ದರು. ತಡೆಗೋಡೆ ತೆರವಿಗೆ ದಿನಕರ್ ಪಾಂಗಾಳ, ಲೋಕೇಶ್ ಸಹಕರಿಸಿದರು.
ಕಾಪು : ದಂಡತೀರ್ಥ ವಿದ್ಯಾಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ
Posted On: 06-07-2024 05:43PM
ಕಾಪು : ರಕ್ಷಕ-ಶಿಕ್ಷಕ ಸಂಘವು ವಿದ್ಯಾಸಂಸ್ಥೆಯ ಪ್ರಗತಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಹೆತ್ತವರಾದ ತಾವು ಮಕ್ಕಳಲ್ಲಿ ಶಿಸ್ತನ್ನು ಬೆಳೆಸುವಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದೀರಿ. ಪಾಠದ ಜೊತೆಗೆ ಇತರ ವಿಷಯಗಳ ಕಲಿಕೆಗೆ ಪ್ರೋತ್ಸಾಹಿಸುತ್ತಿದ್ದೀರಿ. ಮುಂದಿನ ದಿನಗಳಲ್ಲಿ ಇಂತಹ ಸಹಕಾರವನ್ನು ನೀಡಿ ಎಂದು ದಂಡತೀರ್ಥ ವಿದ್ಯಾಸಂಸ್ಥೆಯ ಸಂಚಾಲಕರಾದ ಡಾ. ಕೆ. ಪ್ರಶಾಂತ್ ಶೆಟ್ಟಿ ಹೇಳಿದರು. ಅವರು ಶನಿವಾರ ಶಾಲಾ ಸಭಾಂಗಣದಲ್ಲಿ ಜರಗಿದ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗೇಬ್ರಿಯಲ್ ಮಸ್ಕರೇನ್ಹಸ್ ಹೆತ್ತವರನ್ನು ಉದ್ದೇಶಿಸಿ ಮಾತನಾಡಿದರು. ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವಿದ್ಯಾಸಂಸ್ಥೆಯ ಶೈಕ್ಷಣಿಕ ಸಂಯೋಜಕರಾದ ಶಿವಣ್ಣ ಬಾಯಾರ್ ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆಮಾಡಿದರು.
ಸಭೆಯಲ್ಲಿ ರಕ್ಷಕ-ಶಿಕ್ಷಕ ಸಂಘಕ್ಕೆ ಆಯ್ಕೆಯಾದ ಪ್ರೌಢ ಮತ್ತು ಕಾಲೇಜು ವಿಭಾಗದ ಅಧ್ಯಕ್ಷೆ ಮಂಜುಳ ಶೆಟ್ಟಿ ಮತ್ತು ಪ್ರಾಥಮಿಕ ವಿಭಾಗದ ಅಧ್ಯಕ್ಷೆ ಸ್ವಾತಿ, ಆಡಳಿತಾಧಿಕಾರಿಯಾದ ಆಲ್ಬನ್ ರೊಡ್ರಿಗಸ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ನೀಲಾನಂದ್ ನಾಯ್ಕ್ ಸ್ವಾಗತಿಸಿ, ಫಲಿತಾಂಶ ವಿಶ್ಲೇಷಣೆ ಹಾಗೂ ವರದಿಯನ್ನು ವಾಚಿಸಿದರು. ಸಂಘದ ಲೆಕ್ಕಪತ್ರವನ್ನು ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್ ಮಂಡಿಸಿದರು. ಉಪನ್ಯಾಸಕಿ ಸುಷ್ಮಾ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಉದಯಕುಮಾರ್ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಭಾಕರ ಶೆಟ್ಟಿ ವಂದಿಸಿದರು.
ನಂದಿಕೂರು ಬಯೋ ಡೀಸೆಲ್ ತಯಾರಿಕಾ ಘಟಕದಿಂದ ಪರಿಸರ ಮಾಲಿನ್ಯ, ಆರೋಗ್ಯ ಸಮಸ್ಯೆ : ಪ್ರತಿಭಟನೆಗೆ ನಿರ್ಧಾರ
Posted On: 06-07-2024 06:35AM
ಪಡುಬಿದ್ರಿ : ನಂದಿಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಂಘಟನೆಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಂದಿಕೂರು ವಿಶೇಷ ಆರ್ಥಿಕ ವಲಯ ಬಳಿ ಸ್ಥಾಪನೆಯಾಗಿರುವ ಬಯೋ ಡೀಸೆಲ್ ತಯಾರಿಕಾ ಘಟಕದಿಂದ ಹೊರಸೂಸುವ ದುರ್ವಾಸನೆಯಿಂದ ಪರಿಸರ ಮಾಲಿನ್ಯ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರು ತ್ತಿರುವ ಹಿನ್ನೆಲೆಯಲ್ಲಿ ಜುಲೈ 30ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
ಪ್ರತಿಭಟನೆಗೂ ಮೊದಲು ಪಲಿಮಾರು ಗ್ರಾಮ ಪಂಚಾಯಿತಿಗೆ ವಿಶೇಷ ಗ್ರಾಮಸಭೆ ಕರೆದು ಕಂಪೆನಿ ವಿರುದ್ಧ ನಿರ್ಣಯ ಕೈಗೊಳ್ಳುವ ಬಗ್ಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಅದರೊಂದಿಗೆ ಸ್ಥಳೀಯ ಗ್ರಾಮ ಪಂಚಾಯಿತಿಯಾದ ಪಲಿಮಾರು, ಪಡುಬಿದ್ರಿ, ಎಲ್ಲೂರು, ಇನ್ನಾ, ಹೆಜಮಾಡಿ ಗ್ರಾಮ ಪಂಚಾಯಿತಿಯಲ್ಲೂ ವಿಶೇಷ ಗ್ರಾಮಸಭೆ ಕರೆದು ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಕಂಪೆನಿ ಎದುರು ಪ್ರತಿಭಟನೆ ನಡೆಸಲು ನಿರ್ಣಯಿಸಲಾಯಿತು.
ಕಾನೂನು ಹೋರಾಟದ ಬಗ್ಗೆ ಊರಿನ ಹಿರಿಯರು, ಅನುಭವಿಗಳು, ವಕೀಲರನ್ನು ಒಳಗೊಂಡಂತೆ ಸಮಿತಿ ರಚಿಸುವುದು ಮತ್ತು ಸರಕಾರದ ಮತ್ತು ಇಲಾಖಾ ಅಧಿಕಾರಿಗಳ ವಿರುದ್ಧ ಒತ್ತಡ ಹೇರುವ ಬಗ್ಗೆಯೂ ತೀರ್ಮಾನಿಸಲಾಯಿತು.
ಈ ಸಂದರ್ಭ ದಿನೇಶ್ ಪಲಿಮಾರ್, ನಂದಿಕೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧ್ವರಾಯ ಭಟ್, ಪ್ರೇಮಾನಂದ ಕಲ್ಮಾಡಿ, ನವೀನ್ ಚಂದ್ರಶೆಟ್ಟಿ, ನವೀನ್ ಚಂದ್ರ ಸುವರ್ಣ, ಗಾಯತ್ರಿ ಪ್ರಭು, ಸಂದೀಪ್ ಪಲಿಮಾರ್, ಲಕ್ಷ್ಮಣ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಸುಧೀರ್ ಕರ್ಕೇರ, ನಾಗೇಶ್ ರಾವ್, ಜಿತೇಂದ್ರ ಶೆಟ್ಟಿ, ಮಧುಕರ ಸುವರ್ಣ, ಶಶಿಕಾಂತ್ ಪಡುಬಿದ್ರಿ, ಶ್ರೀನಿವಾಸ ಶರ್ಮ, ರವೀಂದ್ರ ಪ್ರಭು, ಸತೀಶ್ ಗುಡ್ಡೆಚ್ಚಿ, ಚಂದ್ರಹಾಸ್ ಶೆಟ್ಟಿ, ಅಮರನಾಥ್ ಶೆಟ್ಟಿ, ದೀಪಕ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಕಾಪು ತಾಲ್ಲೂಕಿನಲ್ಲಿ ಡೆಂಗ್ಯೂ ಜಾಗೃತಿ ಕಾರ್ಯಕ್ರಮ ; ಜಾಗೃತಿ ಮೂಡಿಸಿದ ತಹಶಿಲ್ದಾರ್
Posted On: 06-07-2024 06:20AM
ಕಾಪು : ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಶುಕ್ರವಾರ "ಡ್ರೈ ಡೇ" ಆಚರಿಸಲು ಸರ್ಕಾರ ಸೂಚಿಸಿದೆ. ಅದರಂತೆ ತಹಶಿಲ್ದಾರ್ ಪ್ರತಿಭಾ ಆರ್ ಮತ್ತು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವಾ ನೇತೃತ್ವದಲ್ಲಿ ಕಾಪು ತಾಲ್ಲೂಕಿನ ಕಟಪಾಡಿ ಪ್ರದೇಶದ ಮನೆಗಳ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದ ಕುರಿತು ಜಾಗೃತಿ ಮೂಡಿಸಲಾಯಿತು.
ಮನೆಗಳ ಬಳಿ ಡ್ರಮ್ಗಳಲ್ಲಿ , ಬಕೆಟ್ಗಳಲ್ಲಿ ಸಂಗ್ರಹಿಸಿಟ್ಟಿದ್ದ ನೀರಿನಲ್ಲಿ ಸೊಳ್ಳೆಗಳ ಲಾರ್ವಾ ಬೆಳವಣಿಗೆ ಆಗಿರುವುದನ್ನು ಪತ್ತೆ ಹಚ್ಚಲಾಯಿತು. ತಕ್ಷಣ ಆ ನೀರನ್ನು ಖಾಲಿ ಮಾಡಿ ಆ ಮನೆಗಳವರಿಗೆ ಈ ರೀತಿ ನೀರು ಸಂಗ್ರಹಿಸಿಡದಂತೆ ಜಾಗೃತಿ ಮೂಡಿಸಲಾಯಿತು. ಡೆಂಗ್ಯೂ ಕುರಿತು ಮುಂಜಾಗ್ರತಾ ಕ್ರಮಗಳ ಕುರಿತು ಕರಪತ್ರಗಳನ್ನು ಹಂಚಲಾಯಿತು.
ಗ್ರಾಮ ಪಂಚಾಯತಿ ಮತ್ತು ಪುರಸಭೆ ಸ್ವಚ್ಚತಾ ಸಿಬ್ಬಂದಿಗಳಿಗೆ ಚರಂಡಿ ಮುಂತಾದೆಡೆ ನೀರು ನಿಲ್ಲದಂತೆ ಸ್ವಚ್ಚಗೊಳಿಸಲು ತಿಳಿಸಲಾಗಿದೆ. ತೆಂಗಿನ ಚಿಪ್ಪು, ಹಳೆಯ ಟೈರು, ಪ್ಲಾಸ್ಟಿಕ್ ಡಬ್ಬ ಎಲ್ಲಿಯೂ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ತಹಶಿಲ್ದಾರ್ ಪ್ರತಿಭಾ ಆರ್ ಸೂಚಿಸಿದ್ದಾರೆ. ಯಾವುದೇ ರೀತಿಯ ಜ್ವರ ಬಂದರೂ ತಕ್ಷಣ ವೈದ್ಯರ ಸಲಹೆಪಡೆಯಲು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸುಲ್ವಾ ಸಲಹೆ ನೀಡಿದ್ದಾರೆ. ಒಟ್ಟಾರೆ ಕಾಪು ತಾಲ್ಲೂಕಿನಲ್ಲಿ ಡೆಂಗ್ಯೂ ಜ್ವರದ ನಿಯಂತ್ರಣಕ್ಕಾಗಿ ಸರ್ವ ಸಿದ್ದತೆ ಮಾಡುಕೊಳ್ಳಲಾಗಿದೆ ಎಂದು ತಹಶಿಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ.
ವೈದ್ಯರಾದ ಡಾ.ಶೈನಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಚಂದ್ರಕಲಾ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ಜುಲೈ 6 ರಂದು ರಜೆ ಘೋಷಣೆ
Posted On: 05-07-2024 11:52PM
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜುಲೈ 6 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ , ಸರಕಾರಿ ಅನುದಾನಿತ ಮತ್ತು ಖಾಸಗಿ,ಪ್ರಾಥಮಿಕ ಪ್ರೌಢಶಾಲೆ , ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿದೆ.
ನಾಳೆ (ಜು.6) : ಭಾರೀ ಮಳೆ ಹಿನ್ನೆಲೆ ಉಡುಪಿ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ
Posted On: 05-07-2024 09:38PM
ಉಡುಪಿ : ಭಾರೀ ಮಳೆ ಹಿನ್ನೆಲೆ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ನಾಳೆ (ಜುಲೈ6) ಜಿಲ್ಲಾಧಿಕಾರಿ ಕೆ.ವಿದ್ಯಾ ಕುಮಾರಿಯವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಈ ಮೊದಲು ಜಿಲ್ಲೆಯ ಎರಡು ತಾಲೂಕುಗಳಿಗೆ ಮಾತ್ರ ರಜೆ ಘೋಷಿಸಲಾಗಿತ್ತು. ಆದರೆ ಇದೀಗ ಉಡುಪಿ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಕೆ.ವಿದ್ಯಾ ಕುಮಾರಿಯವರು ರಜೆ ಘೋಷಿಸಿ ಆದೇಶಿಸಿದ್ದಾರೆ.
ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೊಮ, ಇಂಜಿನಿಯರಿಂಗ್, ಐಟಿಐ ವಿದ್ಯಾಸಂಸ್ಥೆಗಳಿಗೆ ರಜೆ ಇಲ್ಲ ಎಂದು ತಿಳಿಸಿದ್ದಾರೆ.