Updated News From Kaup

ಕಾಪು : ಮೂರು ಮಾರಿಗುಡಿಗಳಲ್ಲಿ ಜಾರ್ದೆ  ಮಾರಿಪೂಜೆ ಸಂಪನ್ನ

Posted On: 27-11-2024 05:40PM

ಕಾಪು : ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆಮಾರಿ ಗುಡಿ, ಹೊಸ ಮಾರಿ ಗುಡಿ ಹಾಗೂ ಕಲ್ಯ ಮಾರಿ ಗುಡಿಗಳಲ್ಲಿ ಏಕಕಾಲದಲ್ಲಿ ತುಳುವರ ಜಾರ್ದೆ ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.

ಸಿಡುಬು, ಸಂತಾನಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್‌ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿಪೂಜೆ, ಜುಲೈ ತಿಂಗಳ ಅಂತ್ಯಕ್ಕೆ ಆಷಾಡ ಮಾರಿಪೂಜೆ ಹಾಗೂ ನವಂಬರ್‌ ತಿಂಗಳಾಂತ್ಯದಲ್ಲಿ ಜಾರ್ದೆ ಮಾರಿ ಪೂಜೆ ನಡೆಯುತ್ತದೆ.

ಕಾಪು ಶಾಸಕರ ಕಚೇರಿಯಲ್ಲಿ ಸಂವಿಧಾನ ದಿನ ಆಚರಣೆ

Posted On: 26-11-2024 10:21PM

ಕಾಪು : ಶಾಸಕರ ಕಚೇರಿಯಲ್ಲಿ ಮಂಗಳವಾರ ಸಂವಿಧಾನ ದಿನವನ್ನು ಆಚರಿಸಲಾಯಿತು.

ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಪ್ರತಿಜ್ಞಾ ವಿಧಿ ಕೈಗೊಂಡು, ಸಂವಿಧಾನಕ್ಕೆ ನಮಸ್ಕರಿಸಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಈ ಸಂದರ್ಭ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶರಣ್ ಕುಮಾರ್ ಮಟ್ಟು, ಕಾಪು ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಸೋನು ಪಾಂಗಾಳ, ಕಾಪು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ಮೂಡುಬೆಳ್ಳೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಜಾಥ ಮತ್ತು ಸಾರ್ವಜನಿಕ ಸಭೆ

Posted On: 26-11-2024 10:12PM

ಕಾಪು : ಸಂವಿಧಾನ ಅಪಾಯದಲ್ಲಿದೆ. ಹಿಂದಿನ ಮನು ಆಡಳಿತ ಕೊನೆಗೊಳಿಸಿ ಪ್ರಸ್ತುತ ನಾವು ಬದುಕುತ್ತಿರುವುದು ನಮ್ಮ ಸಂವಿಧಾನದ ಶಕ್ತಿಯಿಂದ. ಸಂವಿಧಾನದಿಂದ ಆಡಳಿತದ ಚುಕ್ಕಾಣಿ ಹಿಡಿವರೇ ಸಂವಿಧಾನ ಬದಲಾವಣೆ ಬಯಸುತ್ತಿದ್ದಾರೆ. ಕನಸನ್ನು ಕೊಟ್ಟ ಗ್ರಂಥ ಸಂವಿಧಾನ ಎಂದು ವಾಗ್ಮಿ ನಿಕೇತ್ ರಾಜ್ ಮೌರ್ಯ ಹೇಳಿದರು. ಅವರು ಕಾಪು ಪೇಟೆಯಲ್ಲಿ ರಕ್ಷಣಾಪುರ ಜವನೆರ್ ಕಾಪು ಇದರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಸಂವಿಧಾನ ಉಳಿಸಿ ಬೃಹತ್ ಜಾಥ ಮತ್ತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡ ಸುಧೀರ್ ಮರೋಳಿ ಮಾತನಾಡಿ, ಕೆಲವರಿಗೆ ಗೌರವ ಕೊಡುವ ಸಂವಿಧಾನ ಬೇಡ ಎಲ್ಲರಿಗೂ ಗೌರವ ನೀಡುವ ಸಂವಿಧಾನ ಬೇಕಾಗಿದೆ ಎಂದರು. ಪೋಲಿಸ್ ವರಿಷ್ಠಾಧಿಕಾರಿಯ ವಿರುದ್ಧ ಉಡುಪಿಯ ಶಾಸಕರುಗಳು ಸಾಮಾನ್ಯ ಜನರ ಎದುರು ಯಾಕೆ ಪ್ರತಿಭಟಿಸುವಿರಿ ? ವಿಧಾನ ಸೌಧದಲ್ಲಿ ಪ್ರಶ್ನಿಸಿ ನಿಮಗೆ ಸಂವಿಧಾನ ಆ ಹಕ್ಕನ್ನು ನೀಡಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಸಮಾನತೆ ಬೋಧಿಸಿದ ಸಂವಿಧಾನದ ಮೌಲ್ಯವನ್ನು ಮರೆತಿದ್ದೇವೆ. ಇಂದಿನ ಸಭೆ ಅದಕ್ಕೆ ಪುನರ್ ಚಾಲನೆ ದೊರೆತಂತಾಗಿದೆ. ನಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುವ ಎಂದರು.

ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಯಪ್ರಕಾಶ್ ಹೆಗ್ಡೆ, ರಕ್ಷಣಾಪುರ ಜವನೆರ್ ಅಧ್ಯಕ್ಷರಾದ ನವೀನ್ ಎನ್ ಶೆಟ್ಟಿ, ಧರ್ಮಗುರುಗಳಾದ ವಿಲಿಯಂ ಮಾರ್ಟಿಸ್‌, ಶ್ರೀನಿವಾಸ ತಂತ್ರಿ ಮತ್ತು ಇರ್ಶಾದ್‌ ಸಅದಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ  ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸುಂದರ ಮಾಸ್ತರ್, ಆನಂದ ಬ್ರಹ್ಮಾವರ, ಪ್ರಮುಖರಾದ ಕಿಶನ್ ಹೆಗ್ಢೆ ಕೊಳ್ಕೆಬೈಲು, ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್ ಪಕ್ಕಾಲು, ಶಾಂತಲತಾ ಶೆಟ್ಟಿ, ಶೇಖರ್ ಹೆಜಮಾಡಿ, ಗೀತಾ ವಾಗ್ಲೆ, ವೆರೋನಿಕಾ ಕರ್ನೆಲಿಯೋ, ಶರ್ಪುದ್ದೀನ್ ಶೇಖ್, ವಿಶ್ವಾಸ್ ಅಮೀನ್,  ಶಿವಾಜಿ ಸುವರ್ಣ, ಹರೀಶ್ ಕಿಣಿ, ರಮೇಶ್ ಕಾಂಚನ್, ಕಾಪು ದಿವಾಕರ ಶೆಟ್ಟಿ, ದಿನಕರ ಹೇರೂರು ಮೊದಲಾದವರು ಉಪಸ್ಥಿತರಿದ್ದರು. 

ಸಭೆಗು ಮುನ್ನ ಕಾಪು ಜನಾರ್ಧನ ದೇಗುಲದ ಆವರಣದಿಂದ ಕಾಪು ಪೇಟೆಯವರೆಗೆ ಸಾವಿರಾರು ಜನರಿಂದ ಜಾಥವು ನಡೆಯಿತು. ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಂಕರ್ ಮಲ್ಪೆ ತಂಡ ಸಂವಿಧಾನದ ಗೀತೆ ಹಾಡಿದರು. ಸುಮಾರು ಮೂರು ಸಾವಿರ ಮಹಿಳೆಯರಿಗೆ ಕೊಡುಗೆಯಾಗಿ ಸೀರೆಯನ್ನು ನೀಡಲಾಯಿತು.

ಹಿರಿಯರೆಡೆಗೆ ಸಾಹಿತ್ಯದ ನಡಿಗೆ : ಸಾಂತೂರು ವಿಠ್ಠಲ ಜೋಯಿಸರಿಗೆ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತು ಗೌರವ

Posted On: 26-11-2024 03:27PM

ಪಡುಬಿದ್ರಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕ ಇದರ ವತಿಯಿಂದ ಕನ್ನಡ ಮಾಸಾಚರಣೆ "ತಿಂಗಳ ಸಡಗರ -2024" ಅಂಗವಾಗಿ ಸೋಮವಾರ 92ರ ಹರೆಯದ ನಿವೃತ್ತ ಶಿಕ್ಷಕರು, ಪ್ರತಿಪರ ಕೃಷಿಕರು, ಹಿರಿಯ ವಿದ್ವಾಂಸರು, ಗ್ರಾಮದೊಡೆಯ ಶ್ರೀಸುಬ್ರಹ್ಮಣ್ಯನ ಪರಮ ಆರಾಧಕರಾದ ವೇದಮೂರ್ತಿ ಶ್ರೀ ವಿಠ್ಠಲ ಜೋಯಿಸರಿಗೆ ಸಾಂತೂರು ಇವರ ನಿವಾಸದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ನೇತೃತ್ವದಲ್ಲಿ "ಹಿರಿಯರೆಡೆಗೆ ಸಾಹಿತ್ಯದ ನಡಿಗೆ" ವಿಶೇಷ ಕಾರ್ಯಕ್ರಮದಡಿಯಲ್ಲಿ ಸನ್ಮಾನಿಸಿ ಗೌರವಾರ್ಪಣೆ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ ತೋಕೂರು ಇಲ್ಲಿನ ಪ್ರಾಂಶುಪಾಲ ಹರಿ ಎಚ್ ಮಾತನಾಡಿ ಸರಳ ಸಜ್ಜನಿಕೆಯ ವ್ಯಕ್ತಿತ್ವ, ತಪಸ್ಸಿಗೆ ತಕ್ಕ ಜೀವನ, ಉತ್ತಮ ಪಾಂಡಿತ್ಯವನ್ನು ಹೊಂದಿದ ಕನ್ನಡವನ್ನು ಪೋಷಿಸಿ ಬೆಳೆಸಿದ ಮಹಾನ್ ವಿದ್ವಾಂಸರಾದ ವಿಠ್ಠಲ ಜೋಯಿಸರವರನ್ನು ಅವರ ನಿವಾಸದಲ್ಲಿಯೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವಾರ್ಪಣೆ ಮಾಡುತ್ತಿರುವುದು ತೀವ್ರ ಆನಂದವನ್ನು ತಂದಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಜಿಲ್ಲೆಯಲ್ಲಿ ಈವರೆಗೆ ಇಂತಹ 144 ಕಡೆಗಳಲ್ಲಿ ಕಾರ್ಯಕ್ರಮಗಳು ನಡೆದಿದ್ದು, ಪ್ರತೀ ಒಬ್ಬರೂ ಕನ್ನಡ ನಾಡು, ನುಡಿ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಬಹು ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲಾ ಮಹಾನ್ ಸಾಧಕರ ಜೀವನದ ಸಂಕ್ಷಿಪ್ತ ಮಾಹಿತಿಯನ್ನು ದಾಖಲಿಸಿ ಪುಸ್ತಕ ರೂಪದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತು ಮಾಡಲಿದೆ ಎಂದರು.

ಗೌರವ ಸ್ವೀಕರಿಸಿದ ವೇದಮೂರ್ತಿ ಶ್ರೀವಿಠ್ಠಲ ಜೋಯಿಸರು ಮಾತನಾಡಿ ತಮ್ಮ ಜೀವನದ ಹೆಜ್ಜೆಗುರುತುಗಳನ್ನು ಸ್ಮರಿಸಿ ನೆರೆದ ಶಿಷ್ಯ ವರ್ಗ ಹಾಗೂ ಸಾಹಿತ್ಯ ಪರಿಷತ್ತಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಗಿರೀಶ್ ಪಲಿಮಾರು, ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ರಾಘವೇಂದ್ರ ಭಟ್, ವಿದ್ವಾಂಸರಾದ ಪದ್ಮನಾಭ ಭಟ್, ರಘುಪತಿ ಭಟ್ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ರವೀಶ್ ಶೆಟ್ಟಿ ಪಿಲಾರು ಹೊಸಮನೆ, ಸಾನದಮನೆ ಗುಣಕರ ಪೂಜಾರಿ, ಮುದರಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ರವೀಂದ್ರ ಪ್ರಭು, ಗ್ರಾ.ಪಂ.ಸದಸ್ಯರುಗಳಾದ ಬಾಲಚಂದ್ರ ಶೆಟ್ಟಿ, ಶಿವರಾಮ ಭಂಡಾರಿ, ಯಶೋದಾ ಪೂಜಾರಿ, ಕಸಾಪ ಜಿಲ್ಲಾ ಕೋಶಾಧ್ಯಕ್ಷರಾದ ಮನೋಹರ ಪಿ. ಸದಸ್ಯರಾದ ನರಸಿಂಹಮೂರ್ತಿ, ಮುಡಾಡಿ ಮನೆ ಶುಭಕರ ಶೆಟ್ಟಿ, ಉದ್ಯಮಿ ಪ್ರಕಾಶ್ ಶೆಟ್ಟಿ ಸಾಂತೂರು,ಸುಬ್ರಹ್ಮಣ್ಯ ಭಟ್, ಪದ್ಮನಾಭ ಜೋಯಿಸ, ಪರಶುರಾಮ್ ಉಪಸ್ಥಿತರಿದ್ದರು.

ಸ್ವಾತಿ, ರಾಜಶ್ರೀ, ಪ್ರೇರಣಾ ಪ್ರಾರ್ಥಿಸಿದರು. ಪಲಿಮಾರು ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ಪರಿಷತ್ತು ತಾಲೂಕು ಘಟಕದ ಸದಸ್ಯ ಪಿಲಾರು ಸುಧಾಕರ ಶೆಣೈ ಪ್ರಾಸ್ತಾವನೆಗೈದರು. ಸದಸ್ಯ ದೇವದಾಸ್ ಪಾಟ್ಕರ್ ಮುದರಂಗಡಿ ಸನ್ಮಾನಪತ್ರ ವಾಚಿಸಿದರು. ಬಿ.ರಾಮಕೃಷ್ಣ ಭಟ್ ನಿರೂಪಿಸಿದರು. ಕಸಾಪ ತಾಲೂಕು ಘಟಕದ ಗೌ.ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.

ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ್ - ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ನಂದಿನಿ ರಾವ್

Posted On: 24-11-2024 11:07PM

ಕಾಪು : ಸಂಗೀತ ನಾಟಕ ಅಕಾಡೆಮಿಯಿಂದ ಲಘು ಶಾಸ್ತ್ರೀಯ ಸಂಗೀತಕ್ಕಾಗಿ ಸಂಗೀತ ಕಲಾವಿದೆ ನಂದಿನಿ ರಾವ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ್ - ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಶಿರ್ವ : ಮಥುರಾ ಶ್ರೀ ಕೃಷ್ಣ ಜನ್ಮ ಭೂಮಿ ವಿಮೋಚನ ಸಮಿತಿಗೆ ಶ್ರೀ ಸಾಯಿ ಈಶ್ವರ ಗುರೂಜಿ ಆಯ್ಕೆ

Posted On: 24-11-2024 10:59PM

ಶಿರ್ವ : ಮಥುರಾ ಶ್ರೀ ಕೃಷ್ಣ ಜನ್ಮ ಭೂಮಿ ವಿಮೋಚನ ಸಮಿತಿಗೆ ಶ್ರೀ ಸಾಯಿ ಈಶ್ವರ ಗುರೂಜಿ ಆಯ್ಕೆಯಾಗಿದ್ದಾರೆ.

ನವಂಬರ್ 27ರಂದು ಮಥುರಾ ಶ್ರೀ ಕೃಷ್ಣ ಜನ್ಮಭೂಮಿಯ ವಿಮೋಚನೆಗಾಗಿ ಮತ್ತು ದೇವಾಲಯದ ನಿರ್ಮಾಣಕ್ಕಾಗಿ ಕೇಶವ ಧಾಮ ಶ್ರೀ ಧಾಮ ವೃಂದಾವನದಲ್ಲಿ ಅಂತರರಾಷ್ಟ್ರೀಯ ಸಂಸತ್ತು ನಡೆಯಲಿದೆ.

ಪ್ರಥಮ ಸಂಸತ್ ಸಭೆಯಲ್ಲಿ ಕರ್ನಾಟಕದಿಂದ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಭಾಗವಹಿಸಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ನ. 25 : ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮ

Posted On: 24-11-2024 08:46AM

ಪಡುಬಿದ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕ ಇದರ ವತಿಯಿಂದ ಕನ್ನಡ ಮಾಸಾಚರಣೆ "ತಿಂಗಳ ಸಡಗರ -2024" ಅಂಗವಾಗಿ ನವೆಂಬರ್ 25, ಸೋಮವಾರ ಸಂಜೆ ಗಂಟೆ 4ಕ್ಕೆ ನಿವೃತ್ತ ಶಿಕ್ಷಕರು, ಹಿರಿಯ ವಿದ್ವಾಂಸರಾದ ವೇದಮೂರ್ತಿ ಶ್ರೀ ವಿಠ್ಠಲ ಜೋಯಿಸರು ಸಾಂತೂರು ಇವರ ನಿವಾಸದಲ್ಲಿ "ಹಿರಿಯರೆಡೆಗೆ ಸಾಹಿತ್ಯದ ನಡಿಗೆ" ವಿಶೇಷ ಕಾರ್ಯಕ್ರಮದಡಿಯಲ್ಲಿ ಗೌರವಾರ್ಪಣೆ ಜರುಗಲಿದೆ.

ಕಸಾಪ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ಆಹ್ವಾನಿತ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಕಾಪು ತಾಲೂಕು ಕಸಾಪದ ಪ್ರಕಟನೆ ತಿಳಿಸಿದೆ.

ಕಾಪುವಿನಲ್ಲಿ ನ. 26ರಂದು ಸಂವಿಧಾನ ಉಳಿಸಿ ಬೃಹತ್ ಜಾಥಾ ; ಸಾರ್ವಜನಿಕ ಸಭೆ

Posted On: 24-11-2024 08:01AM

ಕಾಪು : ರಕ್ಷಣಾಪುರ ಜವನೆರ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನ. 26 ರಂದು ಕಾಪು ಪೇಟೆಯಲ್ಲಿ ಸಂಜೆ 3 ಗಂಟೆಗೆ ಸಂವಿಧಾನ ಉಳಿಸಿ ಬೃಹತ್ ಜಾಥಾ ಮತ್ತು ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸರಕಾರದ ಆದೇಶದಂತೆ ಸಂವಿಧಾನ ದಿನದ ಅಂಗವಾಗಿ ಸಂವಿಧಾನದ ಬಗೆಗಿನ ಜಾಗೃತಿಗಾಗಿ ಸಂವಿಧಾನ ಉಳಿಸಿ ಬೃಹತ್ ಜಾಥಾ ಮತ್ತು ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಜನರ ಹಕ್ಕುಗಳ ಜಾಗೃತಿಗಾಗಿ, ಸಂವಿಧಾನದ ಮೇಲಿನ ಅಪಸ್ವರಕ್ಕಾಗಿ, ಸಂವಿಧಾನ ಉಳಿಸುವ ಉದ್ದೇಶದಿಂದ ಜಾಥಾದ ಜೊತೆಗೆ ಸಾರ್ವಜನಿಕ ಸಭೆ ನಡೆಯಲಿದೆ. ಸಭೆಯಲ್ಲಿ ಹಿಂದು, ಮುಸ್ಲಿಂ,ಕ್ರೈಸ್ತ ಧರ್ಮದ ಗುರುಗಳು ಭಾಗವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ನಿಖಿತ್ ರಾಜ್, ಸುಧೀರ್ ಮರೋಳಿ, ಜಯಪ್ರಕಾಶ್ ಹೆಗ್ಡೆ, ದಲಿತ ಸಂಘಟನೆಯ ಸುಂದರ್ ಮಾಸ್ತರ್, ಆನಂದ್ ಬ್ರಹ್ಮಾವರ ಸಹಿತ ಗಣ್ಯರು ಭಾಗವಹಿಸಲಿದ್ದಾರೆ.

ಅಂದು 5 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಇದರಲ್ಲಿ ಕನಿಷ್ಠ 3 ಸಾವಿರ ಮಹಿಳೆಯರು ಭಾಗವಹಿಸಲಿದ್ದಾರೆ. ಸಂವಿಧಾನದ ಅರ್ಪಣೆಯ ದಿನದಂದು ಮೂರು ಸಾವಿರ ಹೆಣ್ಣುಮಕ್ಕಳಿಗೆ ಕೊಡುಗೆಯಾಗಿ ಸೀರೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ರಕ್ಷಣಾಪುರ ಜವನೆರ್ ಅಧ್ಯಕ್ಷ ನವೀನ್ ಎನ್‌ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಶರ್ಫುದ್ದೀನ್ ಶೇಖ್, ಶಾಂತಲತಾ ಶೆಟ್ಟಿ, ಶೇಖರ ಹೆಜಮಾಡಿ, ಉಪಸ್ಥಿತರಿದ್ದರು.

ನ. 30 - ಡಿ.1: ವೀರಮಾರುತಿ ಕ್ರಿಕೆಟರ್ಸ್ ಇವರ ವತಿಯಿಂದ ಹನುಮ ಟ್ರೋಫಿ -2024 ; ನೂತನ ಕಚೇರಿ ಉದ್ಘಾಟನೆ ; ಆಮಂತ್ರಣ ಪತ್ರ ಬಿಡುಗಡೆ

Posted On: 23-11-2024 07:14PM

ಹೆಜಮಾಡಿ : ವೀರಮಾರುತಿ ಕ್ರಿಕೆಟರ್ಸ್ ಇವರ ವತಿಯಿಂದ ನ. 30 ಮತ್ತು ಡಿ.1 ರಂದು ಹೆಜಮಾಡಿ ಮೈದಾನದಲ್ಲಿ ನಡೆಯಲಿರುವ ಕಡಲ ತೀರದ ಮುಗ್ಗೆರ್ಕಳ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟ ಹನುಮ ಟ್ರೋಫಿ -2024 ಇದರ ನೂತನ ಕಚೇರಿ ಉದ್ಘಾಟನೆ ಹಾಗೂ ಆಮಂತ್ರಣ ಪತ್ರ ಬಿಡುಗಡೆ ನಡೆಯಿತು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ರೊಲ್ಪಿ ಡಿ ಕೋಸ್ತಾ ಹೆಜಮಾಡಿ , ಕೃಷ್ಣ. ಪಿ. ಬಂಗೇರ ಕಲ್ಲಟ್ಟೆ , ನವೀನ್ ಕುಮಾರ್ ಹೆಜಮಾಡಿ, ಗುರುಪ್ರಸಾದ್ ಜಿ. ಎಸ್ ಮಟ್ಟು , ರಾಜು ಎಲ್ ಐ ಸಿ ಹೆಜಮಾಡಿ ಹಾಗೂ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಜೀವನ್ ಪ್ರಕಾಶ್ ಮಟ್ಟು, ಗೌರವ ಅಧ್ಯಕ್ಷರಾದ ವಿಠಲ್ ಮಾಸ್ಟರ್ ಉಪಸ್ಥಿತರಿದ್ದರು. ತಂಡದ ಗೌರವ ಸಲಹೆಗರಾರು ನಿತಿನ್ ಕುಮಾರ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನ.30 ರಂದು ಬೆಳಿಗ್ಗೆ 8 ಗಂಟೆಗೆ 6 ತಂಡಗಳ ಲೀಗ್ ಮಾದರಿಯ ಪಂದ್ಯಾಟ ಆರಂಭ ಗೊಂಡು, ಬೆಳಿಗ್ಗೆ 10 ಗಂಟೆಗೆ ಪಂದ್ಯಾಟದ ಉದ್ಘಾಟನೆ ಹಾಗೂ ಸಮುದಾಯದ ಆಟಗಾರದ ದಿ| ಹರೀಶ್ ಬಂಗೇರ ಮುಳೂರು ಮತ್ತು ದಿ| ಅಶ್ವಥ್. ಉಪ. ತಹಸೀಲ್ದಾರ್ ಉಡುಪಿ ಇವರುಗಳಿಗೆ ಶೃದ್ಧಾಂಜಲಿ ಅರ್ಪಣೆ ನಂತರ ವಿಶೇಷ ಆಕರ್ಷಣೆಯ ಟ್ರೋಫಿ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ, ಅಸೌಖ್ಯದ ಕುಟುಂಬಕ್ಕೆ ನೀಡುವ ಆಹಾರ ಕಿಟ್ ಕೊಡುಗೆ. ತದನಂತರ 6 ತಂಡದ ಹಾಗೂ ಆಯೋಜಕರಿಂದ ಧ್ವಜಾರೋಹಣ ಮುಖ್ಯ ಅತಿಥಿ ಗಣ್ಯರ ಸಮ್ಮುಖದಲ್ಲಿ ನೆರವೇರಲಿದೆ.

ಡಿ.1, ಭಾನುವಾರ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ, ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿದೆ. ಈ ಎಲ್ಲಾ ಕಾರ್ಯಕ್ರಮ M9 ಸ್ಪೋರ್ಟ್ಸ್ ಇದರಲ್ಲಿ ನೇರ ಪ್ರಸಾರದ ವೀಕ್ಷಣೆ ಗೆ ಅವಕಾಶ ಇದೆ ಎಂದು ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಧನಂಜಯ ರವರು ತಿಳಿಸಿದರು.

ಕಾಪುವಿನಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಜಯೋತ್ಸವ

Posted On: 23-11-2024 06:51PM

ಕಾಪು : ಹೈವೋಲ್ವೇಜ್ ಕ್ಷೇತ್ರವಾದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್‌ ಗೆಲುವಿನ ಪ್ರಯುಕ್ತ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ಪೇಟೆಯಲ್ಲಿ ಶನಿವಾರ ಸಂಜೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಮಾತನಾಡಿ, ಬಿಜೆಪಿ ಪಕ್ಷದ ಪ್ರಮುಖರು ಸಾಕಷ್ಟು ಆಪಾದನೆಗಳನ್ನು ಮಾಡಿದ್ದಾರೆ. ಎಲ್ಲಾ ಆಪಾದನೆಗಳಿಗೆ ಜನ ಅಂತಿಮ ತೀರ್ಮಾನ ನೀಡಿದ್ದಾರೆ. ಕರ್ನಾಟಕದ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು, ಮಹಾಜನತೆ ಸಂಪೂರ್ಣ ಆಶೀರ್ವಾದ ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ ಎಂದರು.

ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ನವೀನ್ ಎನ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಶರ್ಫುದ್ದೀನ್ ಶೇಕ್ , ಶಾಂತಲತಾ ಶೆಟ್ಟಿ, ಅಶ್ವಿನಿ, ಶೇಖರ ಹೆಜಮಾಡಿ, ಶಿವಾಜಿ ಸುವರ್ಣ, ದೀಪಕ್ ಕುಮಾರ್ ಎರ್ಮಾಳು, ಅಬ್ದುಲ್ ಹಮೀದ್, ಸುಧೀರ್ ಹೆಜಮಾಡಿ, ಅಮೀರ್ ಮೊಹಮ್ಮದ್, ಮನ್ಸೂರ್, ಆಸೀಫ್ ಮೂಳೂರ್, ಹಮೀದ್ ಮೂಳೂರು, ಸತೀಶ್ಚಂದ್ರ, ಅಶೋಕ್ ನಾಯರಿ, ಶೋಭಾ, ರಾಧಿಕ, ರಾಜೇಶ್ ರಾವ್, ಫರ್ಝಾನ ಮತ್ತಿತರರು ಉಪಸ್ಥಿತರಿದ್ದರು.