Updated News From Kaup

ಮೇ.24 : ಅಮೋಘ (ರಿ.) ಉಡುಪಿ ವತಿಯಿಂದ ಸಾಮರಸ್ಯ ಪ್ರಶಸ್ತಿ ಪುರಸ್ಕಾರ

Thumbnail
Posted On: 21 May 2025, 03:41 PM

ಉಡುಪಿ‌ : ಸಾಂಸ್ಕೃತಿಕ -ಸಾಮಾಜಿಕ-ಸಾಹಿತ್ಯಿಕ ಸಂಸ್ಥೆಯಾದ ಅಮೋಘ (ರಿ.) ಉಡುಪಿ ವತಿಯಿಂದ "ಸಾಮರಸ್ಯ ಪ್ರಶಸ್ತಿ ಪುರಸ್ಕಾರ" ಕಾರ್ಯಕ್ರಮ ಮೇ.24, ಶನಿವಾರದಂದು ಸಂಜೆ ಗಂಟೆ 4ಕ್ಕೆ ಉಡುಪಿ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಜರಗಲಿದೆ. ಶ್ರೀ ಮಾದಾರ ಚೆನ್ನಯ್ಯ ಗುರುಪೀಠ ಚಿತ್ರದುರ್ಗ ಇದರ ಪೀಠಾಧಿಪತಿಗಳಾದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿಯವರು ಪ್ರಶಸ್ತಿ ಪುರಸ್ಕೃತರಾಗಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವಿದ್ವಾಂಸರಾದ ಡಾ|| ಪಾದೆಕಲ್ಲು ವಿಷ್ಣು ಭಟ್ ವಹಿಸಲಿದ್ದು, ಮಾಹೆ, ಮಣಿಪಾಲ ಸಹ ಕುಲಾಧಿಪತಿಗಳಾದ ಡಾ. ಎಚ್. ಎಸ್ ಬಲ್ಲಾಳ್ ಪ್ರಶಸ್ತಿ ಪ್ರದಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ, ಕ.ಸಾ.ಪ. ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಉಡುಪಿ ಎಂ.ಜಿ.ಎಂ. ಕಾಲೇಜು ಪ್ರಾಂಶುಪಾಲರಾದ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಉಡುಪಿ ಎಂ.ಜಿ.ಎಂ. ಕಾಲೇಜು ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥರಾದ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ, ಹಿರಿಯ ಲೇಖಕಿ ಪಾರ್ವತಿ ಜಿ. ಐತಾಳ್ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಲೇಖಕಿ ಪೂರ್ಣಿಮಾ ಸುರೇಶ್ ರವರ 2024ರ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ ಸಂತೆಯೊಳಗಿನ ಏಕಾಂತ, ಪೂರ್ಣಿಮಾ ಸುರೇಶ್ ರವರ ಪಾರ್ವತಿ ಜಿ. ಐತಾಳ್ ಅನುವಾದಿಸಿರುವ ದಿ ಅಕ್ವೇರಿಯಂ ಕೃತಿ‌ ಬಿಡುಗಡೆಯಾಗಲಿದೆ ಎಂದು ಕುಯಿಲಾಡಿ ಸುರೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಎಂಎಫ್ ನಿರ್ದೇಶಕರಾಗಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಆಯ್ಕೆ

Thumbnail
Posted On: 21 May 2025, 03:18 PM

ಕಾಪು : ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ ನಿ. ಬೆಂಗಳೂರು ಇದರ ನಿರ್ದೇಶಕರಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಐಕಳ ಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಇವರು ಆಯ್ಕೆಗೊಂಡಿದ್ದಾರೆ. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿರುವ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಇವರನ್ನು ಮಂಗಳವಾರ ನಡೆದ ಒಕ್ಕೂಟದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯ ಕೆಎಂಎಫ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾ ಯಿತು. ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಶಿಫಾರಸ್ಸಿನ ಮೂಲಕ ಈ ಆಯ್ಕೆ ನಡೆದಿದೆ. ಈ ಮೊದಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಡಾ.ಎಂ. ಎನ್. ರಾಜೇಂದ್ರಕುಮಾ‌ರ್ ನೇತೃತ್ವದ ಹೈನುಗಾರರ ಬಳಗದ 13 ಮಂದಿ ನಿರ್ದೆಶಕರು ಆಯ್ಕೆಗೊಂಡಿದ್ದು, ಬಳಿಕ ಡಾ.ಎಂಎನ್ ಆರ್ ಬಳಗದ ರವಿರಾಜ ಹೆಗ್ಡೆ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಉದಯ ಎಸ್. ಕೋಟ್ಯಾನ್ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಇದೀಗ ಡಾ.ದೇವಿಪ್ರಸಾದ್ ಶೆಟ್ಟಿಯವರು ಕೂಡ ರಾಜೇಂದ್ರ ಕುಮಾರ್ ಅವರ ಶಿಫಾರಸ್ಸಿನ ಮೂ ಲಕ ರಾಜ್ಯ ಕೆಎಂಎಫ್ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು ಹಾಗೂ ಎಸ್‌ ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿರುವ ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು ಇವರು ಬೆಳಪು ವ್ಯವಸಾಯ ಸೇವಾ ಸಹಕಾರ ಸಂಘ, ಬೆಳಪು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಳಪುವಿನಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಗೆ ಭೂಮಿ ಪೂಜೆ

Thumbnail
Posted On: 21 May 2025, 02:57 PM

ಉಚ್ಚಿಲ : ಬೆಳಪುವಿನಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಯ ಮೂಲಕ ಗುಣಾತ್ಮಕ ಶಿಕ್ಷಣ ನೀಡುವ ಕನಸು. 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬೆಳಪು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ನಡೆಸಲ್ಪಡುವ ಬೆಳಪುವಿನ ಮೌಲಾನಾ ಆಜಾದ್ ಮಾದರಿ ಶಾಲೆಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಪು ಗ್ರಾ.ಪಂ.ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪುವಿನಲ್ಲಿ ಈಗಾಗಲೇ ಪಾಲಿಟೆಕ್ನಿಕ್ ಕಾಲೇಜು, ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ, ಸ್ನಾತಕೋತ್ತರ ಅಧ್ಯಯನ ಕೇಂದ್ರ ಪ್ರಗತಿಯಲ್ಲಿದೆ. ಕೈಗಾರಿಕಾ ಪಾಕ್೯ ಕಾರ್ಯಾಚರಿಸುತ್ತಿದೆ. ಬೆಳಪು ಗ್ರಾಮ ಬಡ ಗ್ರಾಮವಾಗಿದ್ದು ಆರ್ಥಿಕವಾಗಿ ಹಿಂದುಳಿದ ಜನರಿಗೆ ಶೈಕ್ಷಣಿಕ, ಕೈಗಾರಿಕೆ, ಉದ್ಯೋಗ, ವಸತಿಯ ಯೋಜನೆಯ ಅವಕಾಶ ಸಿಗಬೇಕಾಗಿದೆ. ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಉತ್ತಮ ಮೌಲ್ಯಾಧಾರಿತ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ಇದರ ಪಕ್ಕದಲ್ಲಿಯೇ 17 ಎಕರೆಯಲ್ಲಿ ಐಪಿಎಲ್ ಮಾದರಿಯ ಕ್ರೀಡಾಂಗಣಕ್ಕೆ ಕ್ರಿಕೆಟ್ ಬೋರ್ಡ್ ಸಮ್ಮತಿಸಿದ್ದು, ಜಿಲ್ಲಾಧಿಕಾರಿ ಜಾಗವನ್ನು ಮೀಸಲಿರಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಅವಕಾಶದ ಜೊತೆಗೆ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳು ಆಡುವ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದರು. ಬೆಳಪು ಗ್ರಾ.ಪಂ. ಉಪಾಧ್ಯಕ್ಷರಾದ ಶೋಭಾ ಭಟ್, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಯು.ಸಿ. ಶೇಖಬ್ಬ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಮನೋಹರ್, ಪಂಚಾಯತ್ ಸದಸ್ಯರಾದ ಶರತ್ ಕುಮಾರ್ ಕುಮಾರ್, ಸುಲೇಮಾನ್, ಸೌಮ್ಯ, ರೂಪ, ನಫೀಸ ಮತ್ತಿತರರು ಉಪಸ್ಥಿತರಿದ್ದರು. ಮೌಲಾನಾ ಆಜಾದ್ ಮಾದರಿ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಎಚ್ ಸ್ವಾಗತಿಸಿದರು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಪೂರ್ಣಿಮ ಚೂರಿ ಪ್ರಸ್ತಾವನೆಗೈದರು. ಸಂತೋಷ್ ಕುಮಾರ್ ನಿರೂಪಿಸಿ, ವಂದಿಸಿದರು. ಉಚ್ಚಿಲ ಮಹಾಲಕ್ಷ್ಮಿ ದೇವಳದ ಅರ್ಚಕ ಶ್ರೀನಿವಾಸ ಉಪಾಧ್ಯಾಯ ಭೂಮಿ ಪೂಜೆಯ ವಿಧಿ ವಿಧಾನ ನೆರವೇರಿಸಿ, ಬೆಳಪು ಖತೀಬ್ ಮಿನಾರ ಮಸೀದಿ ಧರ್ಮಗುರು ಎಂ.ಡಿ.ಅರ್ಷಾದ್ ರೇಝ ದುವಾ ನೆರವೇರಿಸಿದರು.

1 ಕೋಟಿ ಅನುದಾನದಲ್ಲಿ ನಡ್ಸಾಲು - ನಡಿಪಟ್ನ ಕಡಲ ತೀರದಲ್ಲಿ ಪ್ರತಿಬಂಧಕ ಕಾಮಗಾರಿಗೆ ಗುದ್ದಲಿ ಪೂಜೆ

Thumbnail
Posted On: 20 May 2025, 07:08 PM

ಪಡುಬಿದ್ರಿ : ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡ್ಸಾಲು - ನಡಿಪಟ್ನ ಕಡಲ ತೀರದಲ್ಲಿ ರಿಪ್ - ರ‍್ಯಾಪ್ ತುರ್ತು ಪ್ರತಿಬಂಧಕ ಕಾಮಗಾರಿಗೆ ಶಾಸಕರ ಶಿಫಾರಸ್ಸಿನ ಮೇರೆಗೆ 1 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಮಂಗಳವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಹೇಮಚಂದ್ರ, ಗ್ರಾಮ ಪಂಚಾಯತ್ ಸದಸ್ಯರಾದ ವಿದ್ಯಾಶ್ರೀ, ಹರೀಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶೋಭಾ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಶಾಂತ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಕಾಪು ತಾಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ

Thumbnail
Posted On: 19 May 2025, 06:17 PM

ಕಾಪು : ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಪು ತಾಲೂಕಿನ ಬಗರ್ ಹುಕುಂ (ಅಕ್ರಮ - ಸಕ್ರಮ) ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ಸೋಮವಾರ ಕಾಪು ತಹಸೀಲ್ದಾರ ಕಚೇರಿಯಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನಮೋನೆ 57 ಅಡಿಯಲ್ಲಿ ಸಲ್ಲಿಸಿದ 10 ಕಡತಗಳಿಗೆ ಮಂಜೂರಾತಿ ನೀಡಲಾಯಿತು. ಈ ಸಂದರ್ಭದಲ್ಲಿ ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿಗಳು ಕಾಪು ತಹಶೀಲ್ದಾರರಾದ ಡಾ.ಪ್ರತಿಭಾ ಆರ್., ಅಕ್ರಮ ಸಕ್ರಮ ಸಮಿತಿ ಸದಸ್ಯರುಗಳಾದ ದಿನೇಶ್ ಕೋಟ್ಯಾನ್, ಆನಂದ ಕೊರಂಗ್ರಪಾಡಿ, ಮಾರ್ಗರೇಟ್ ಸೀಮಾ ಡಿಸೋಜಾ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

ಮೇ.29 - 30 : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳ - ನೂತನ ಧ್ವಜಸ್ತಂಭದ ಮರದ ಆಗಮನ ಮೆರವಣಿಗೆ ; ನಿಧಿಕುಂಭ ಸ್ಥಾಪನೆ

Thumbnail
Posted On: 19 May 2025, 12:51 PM

ಪಡುಬಿದ್ರಿ : ಸುಮಾರು 30 ಕೋಟಿ ವೆಚ್ಚದಲ್ಲಿ ಶಾಸ್ತ್ರೀಯ ನೆಲೆಗಟ್ಟಿನಲ್ಲಿ, ಶಿಲ್ಪ ವಿನ್ಯಾಸಗಳೊಂದಿಗೆ ಪರಿಷ್ಕೃತಗೊಳಿಸಿ ಪುನರಚಿಸಿ ಜೀರ್ಣೋದ್ಧಾರ ಕಾರ್ಯಗಳಿಗೆ ಸಂಕಲ್ಪಿಸಲಾಗಿರುವ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಮೇ.29 ರಂದು ನೂತನ ಧ್ವಜಸ್ತಂಭದ ಮರದ ಆಗಮನ ಮೆರವಣಿಗೆ ಹಾಗೂ ಮೇ.30ರಂದು ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ನಿಧಿಕುಂಭ ಸ್ಥಾಪನೆಯು ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ| ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಸೋಮವಾರ ಪಡುಬಿದ್ರಿಯಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರ್ಕಳ - ಹೆಬ್ರಿ ಪರಿಸರದಲ್ಲಿ ಶ್ರೀ ದೇಗುಲದ ಧ್ವಜಸ್ತಂಭಕ್ಕಾಗಿ ದಾನಿಗಳ ಸಹಕಾರದಿಂದ ಈಗಾಗಲೇ ಸುಮಾರು 65 ಅಡಿ ಎತ್ತರದ ಬೋಗಿಯ ಮರವೊಂದನ್ನು ಆರಿಸಲಾಗಿದೆ. ಮೇ. 29ರಂದು ಅಜೆಕಾರು, ಕಾರ್ಕಳ, ಜೋಡುರಸ್ತೆ, ಬೆಳ್ಮಣ್ ಮಾರ್ಗವಾಗಿ ಈ ನೂತನ ಧ್ವಜಸ್ತಂಭದ ಮರವು ಆಗಮಿಸಲಿದ್ದು ಭಕ್ತರು ಇದು ಸಾಗಿ ಬರುವ ಹಾದಿಯಲ್ಲಿ ಅಲ್ಲಲ್ಲಿ ಸ್ವಾಗತಿಸಿ ಬೀಳ್ಕೊಡಲಿರುವರು. ಅಂದು ಸಂಜೆಯ ವೇಳೆಗೆ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಬಳಿ ಅದನ್ನು ಸ್ವಾಗತಿಸಿ ವೈಭವದ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರ ಪಡುಬಿದ್ರಿಗೆ ತರಲಾಗುವುದು. ಮೇ 30ರಂದು ಶ್ರೀ ಕ್ಷೇತ್ರದಲ್ಲಿನ ಉಪಸ್ಥಾನ ಸಾನ್ನಿಧ್ಯ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಭಕ್ತರ ಭಕ್ತಿಯ ಸಂಕೇತವಾಗಿ ನಿಧಿ ಕುಂಭ ಸ್ಥಾಪನೆಯ ಕಾರ್ಯವು ಬೆಳಿಗ್ಗೆ ಗಂಟೆ 7:12ರ ಮುಹೂರ್ತದಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯುವ ಆಗಮೋಕ್ತ ವಿಧಿ ವಿಧಾನಗಳ ಸಂದರ್ಭದಲ್ಲಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಲಿರುವರು. ಈ ನಿಧಿಕುಂಭದಲ್ಲಿ ಭಕ್ತರಿಗೆ ಶುದ್ಧ ಚಿನ್ನ, ಬೆಳ್ಳಿ, ನವರತ್ನಗಳನ್ನು ಅರ್ಪಿಸುವ ಸದವಕಾಶಗಳಿದ್ದು ವಾರದ ಮುಂಚಿತವಾಗಿಯೇ ಈ ಚಿನ್ನ, ಬೆಳ್ಳಿಯ ನಾಣ್ಯಗಳನ್ನು ಶ್ರೀ ದೇವಸ್ಥಾನದಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಭಕ್ತರು ಮನೆಯಿಂದ ತರುವ ಚಿನ್ನ, ಬೆಳ್ಳಿಯ ಸೊತ್ತುಗಳನ್ನು ಶ್ರೀ ದೇಗುಲದ ಕಚೇರಿಗೆ ತೋರಿಸಿ ಅರ್ಪಿಸಬಹುದು. ಕಾರ್ಕಳದ ಗುತ್ತಿಗೆದಾರರಿಂದ ಹಿಂದೂ ಧಾರ್ಮಿಕ ದತ್ತಿ ಇಲಾಖಾ ನಿಬಂಧನೆಗಳ ಅನುಸಾರವಾಗಿ ಲೋಕೋಪಯೋಗಿ ಇಲಾಖಾ ಅನುಮತಿ ಸಹಿತವಾಗಿ ಈಗಾಗಲೇ ನಿರ್ಮಾಣ ಕಾರ್ಯಗಳು ಆರಂಭಗೊಂಡಿದ್ದು ಸಾಮಾನ್ಯ ನೆಲಮಟ್ಟದಲ್ಲಿಯವರೆಗೆ ಕಾರ್ಯಗಳು ಪ್ರಗತಿಯಲ್ಲಿವೆ ಎಂದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ರವೀಂದ್ರನಾಥ ಜಿ.ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪಿ.ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ ಹೆಗ್ಡೆ ನಡ್ಸಾಲು ಗುತ್ತು, ಶ್ರೀ ದೇವಳದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ಗುರುರಾಜ್ ಭಟ್, ಜೀರ್ಣೋದ್ದಾರ ಸಮಿತಿಯ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

ಕುಕ್ಕುಂಜ, ಮಲಂಗೋಳಿ ರಸ್ತೆ ದುರಸ್ತಿಗೊಳಿಸುವಂತೆ ಬಿಜೆಪಿ ಕಾರ್ಯಕರ್ತರಿಂದ ಶಾಸಕರಿಗೆ ಮನವಿ

Thumbnail
Posted On: 18 May 2025, 04:58 PM

ಕಾಪು : ತಾಲೂಕಿನ ಕುತ್ಯಾರು ಗ್ತಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಂಜ, ಮಲಂಗೋಳಿ ಭಾಗದ ರಸ್ತೆ ದುರಸ್ತಿ ಸೇರಿದಂತೆ ಊರಿನ ಹಲವು ಬೇಡಿಕೆಗಳ ಕುರಿತು ಬಿಜೆಪಿ ಪಕ್ಷದ ಹಿರಿಯರಾದ ಪ್ರಭಾಕರ್ ಶೆಟ್ಟಿ ಪಡುಮನೆ ಕಳತ್ತೂರು ಮುಂದಾಳತ್ವದಲ್ಲಿ ಭಾನುವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿದ ಶಾಸಕರು ಶೀಘ್ರದಲ್ಲಿ ಎಲ್ಲಾ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಉದಯ ಕುಲಾಲ್, ಪ್ರದೀಶ್ ಶೆಟ್ಟಿ, ಪ್ರಥ್ವಿರಾಜ್ ಆರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಮೂಡುವಲ್ಲಿ ಅಯ್ಯಪ್ಪ ವೃತವು ಕಾರಣ : ಶ್ರೀ ವಿದ್ಯಾವಲ್ಲಭತೀರ್ಥ ಶ್ರೀ ಪಾದರು

Thumbnail
Posted On: 18 May 2025, 04:15 PM

ಕಟಪಾಡಿ : ಅನೇಕ ದೇವಸ್ಥಾನಗಳಿರುವ ಉಡುಪಿ, ದ.ಕ ಜಿಲ್ಲೆಯನ್ನು ದೇವರನಾಡೆಂದು ಹೇಳಬಹುದು. ಪಾಜಕ ಕ್ಷೇತ್ರ, ದುರ್ಗಾದೇವಿ ಸನ್ನಿಧಾನ, ಪರಶುರಾಮ ಸನ್ನಿಧಾನವನ್ನು ಸುತ್ತುವರಿಯುವ ಮೂಲಕ ಕಟಪಾಡಿ ಏಣಗುಡ್ಡೆಯ ಪಂಪಾ ಕ್ಷೇತ್ರದ ಅಯ್ಯಪ್ಪ ‌ಸನ್ನಿಧಾನವು ಪಾವಿತ್ರ್ಯ ತರುವ ಕಾರ್ಯವಾಗಿದೆ. ಹಿಂದು ಧರ್ಮದ ಉಳಿವಿನೊಂದಿಗೆ ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಮೂಡುವಲ್ಲಿ ಅಯ್ಯಪ್ಪ ವೃತವು ಕಾರಣವಾಗಿದೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀ ಪಾದರು ಹೇಳಿದರು. ಅವರು ಕಟಪಾಡಿ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ವತಿಯಿಂದ ಏಣಗುಡ್ಡೆ ಕುರ್ಕಾಲು ರಸ್ತೆಯ ರಿಶಾಲ್‌ ನಗರದ ಪಂಪಾ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುವ ಕರ್ನಾಟಕದಲ್ಲಿಯೇ ಪ್ರಪ್ರಥಮ ಸಂಪೂರ್ಣ ಅಮೃತ ಶಿಲಾಮಯ ಅಯ್ಯಪ್ಪ ದೇವಸ್ಥಾನದ ಶಿಲಾನ್ಯಾಸ, ನಿಧಿಕುಂಭ ಕಾರ್ಯಕ್ರಮ ನೆರವೇರಿಸಿ ಬಳಿಕ‌ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಕಟಪಾಡಿಯ ಅಯ್ಯಪ್ಪನ ಭಕ್ತರು ಮಾಲಾಧಾರಿಗಳಾಗಿ 40 ವರ್ಷಗಳ ನಂತರ ಸುಮಾರು 5 ಕೋಟಿ ವೆಚ್ಚದ ದೇವಳ ನಿರ್ಮಾಣದ ಕನಸು ಕಂಡಿದ್ದಾರೆ. ನನಸಾಗಲಿ ಎಂದರು. ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ, ಕಾಪು‌ ಶಾಸಕರಾದ ಗುರ್ಮೆ ಸುರೇಶ್ ‌ಶೆಟ್ಟಿ, ಕುದ್ರೋಳಿ‌ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಅದಾನಿ ಸಮೂಹದ ಅಧ್ಯಕ್ಷರಾದ ಕಿಶೋರ್ ಆಳ್ವ, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಾಸುದೇವ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಿಸಲು 30 ಸೆಂಟ್ಸ್ ನಿವೇಶನವನ್ನು ದಾನವಾಗಿ ನೀಡಿರುವ ಯುವ ಉದ್ಯಮಿ ರಿಶಾನ್ ಟಿ ಮತ್ತು ಪ್ರಮೀಳಾ ದಂಪತಿಯನ್ನು ಸನ್ಮಾನಿಸಲಾಯಿತು. ಈ‌ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಚಂದ್ರಹಾಸ ಗುರುಸ್ವಾಮಿ ಮುಂಬೈ, ರಾಘು ಪೂಜಾರಿ ಕಲ್ಮಂಜೆ, ದಯಾನಂದ ವಿ ಬಂಗೇರ, ಪಲ್ಲಿ ಲಕ್ಮೀನಾರಾಯಣ ಹೆಗ್ಡೆ, ಶಶಿಧರ ವಾಗ್ಳೆ, ಶಶಿಧರ ಶೆಟ್ಟಿ ಮುಂಬೈ, ಯೋಧ ಸಚಿನ್ ಕರ್ಕೇರ, ನವೀನ್ ಅಮೀನ್ ಶಂಕರಪುರ, ಶಿವಪ್ರಸಾದ್ ಕಟಪಾಡಿ, ಸಂತೋಷ್ ಸುವರ್ಣ ಬೊಳ್ಜೆ, ರಾಧಾಕೃಷ್ಣ ಮೆಂಡನ್, ರಾಜೇಶ್ ಮಸ್ಕತ್, ಭುವನ್, ಗುರುಸ್ವಾಮಿ ಸುರೇಶ್ ಜತ್ತನ್ ಕಟಪಾಡಿ, ಅಧ್ಯಕ್ಷ ರಿಯಾನ್ ಟಿ ಕಟಪಾಡಿ, ಕಾರ್ಯಾಧ್ಯಕ್ಷ ಕೇಶವ ಕುಂದರ್ ಕೊಡವೂರು, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಜಿ.ಸನಿಲ್ ಅಚ್ಚಡ ಕಟಪಾಡಿ ಉಪಸ್ಥಿತರಿದ್ದರು. ಕ್ಷೇತ್ರದ ತಂತ್ರಿಗಳಾದ ವೆ| ಬ್ರ| ಶ್ರೀ| ಪ್ರಕಾಶ ವಿ. ಹೊಳ್ಳ ಶಕ್ತಿನಗರ ಮಂಗಳೂರು ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಸಚಿನ್ ಕರ್ಕೇರ ಪ್ರಾರ್ಥಿಸಿ, ಪತ್ರಕರ್ತ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿ, ನಿರೂಪಿಸಿದರು.

ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ : 15ನೇ ವರ್ಷದ ವಾರ್ಷಿಕೋತ್ಸವ ಸಂಪನ್ನ

Thumbnail
Posted On: 18 May 2025, 03:56 PM

ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ ಸಂಸ್ಥೆಯ 15ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಸಾಗರ್ ವಿದ್ಯಾ ಮಂದಿರ ಶಾಲೆಯ ಸಾಗರ ದರ್ಶಿನಿ ವೇದಿಕೆಯಲ್ಲಿ ನೆರವೇರಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಲೀಲಾಧರ್ ಸಾಲಿಯಾನ್, ವಿದ್ಯಾಶ್ರೀ, ನೀತಾಗುರುರಾಜ್, ಚಂದ್ರಶೇಖರ್, ಅಶೋಕ್ ಸಾಲಿಯಾನ್, ಗಂಗಾಧರ ಕರ್ಕೇರ, ಅಜಿತ್ ಶೆಟ್ಟಿ, ಮಿಥುನ್ ಆರ್ ಹೆಗ್ಡೆ, ವಿಶ್ವಾಸ್ ಅಮೀನ್, ಶರಣ್ ಕುಮಾರ್ ಮಟ್ಟು ಉಪಸ್ಥಿತರಿದ್ದರು. ವರ್ಷಿಣಿ ಎಲ್ ಕರ್ಕೇರ ಪ್ರಾರ್ಥಿಸಿದರು. ಕಿರಣ್ ರಾಜ್ ಕರ್ಕೇರ ಸ್ವಾಗತಿಸಿದರು. ಸಂತೋಷ್ ಎಚ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ದಿಶನ್ ಪುತ್ರನ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಅರ್ಬುದ

Thumbnail
Posted On: 18 May 2025, 03:43 PM

ಯಾರು ಬಲ್ಲರು ನಿನ್ನ ಮಾಯಕಾರತನವ ??? ಸುದ್ಧಿಯಿಲ್ಲದೆ ಸ್ವಯಂಭು ಮೂರ್ತಿವೆತ್ತು ಬಲಿತು ಮದ್ದಿಗೂ ಬಗ್ಗದೆ ಬುದ್ಧಿಗೆ ಒಗ್ಗದೆ ಸಿದ್ಧಿಗೂ ಸಿಗದೆ ತಂದೊಡ್ಡುವೆ ಬದುಕಿಗೂ ಸಾವಿಗೂ ನರಕ ಯಾತನೆ ಬಂದೊದಗುವೆ ಬಾಳಿಗೆ ನಿತ್ಯ ಕಂಠಕನಾಗಿ ಬಡವನೋ ಬಲ್ಲಿದನೋ ಬಾಲ್ಯ ಯೌವ್ವನ ವೃದ್ಧಾಪ್ಯ ನಿನಗಿಲ್ಲ ಬೇಧ ಅರ್ಬುದರಾಯ ಕಡು ಸಮಾನತೆಯ ಜೀವ ಭಕ್ಷಕ ಹರಿಕಾರ ಮಡುವಿಕೊಳ್ಳುತಿ ದಶಪಾದಗಳಲಿ ಏಡಿರಾಯ ನಿನ್ನ ಆಗಮ ಉಗಮ ಜಂಗಮತನ ಮೌನದ ಮುಸುಕಿನಲಿ ಮತ್ತೆ ಮತ್ತೆ ಉಲ್ಬಣ ಎಣಿಸಲಾರದ ಪರಮ ಸೋಜಿಗವದು ಬಣ್ಣಿಸಲಾರದ ನಿನ್ನ ಪರಮ ನೀಚತನವದು ರಸಹೀರಿ ಕಸವಾಗಿಸಿ ಬಸವಳಿಸಿ ಕಸುವ ಬಳಲಿಸಿ ಬರಿದಾಗಿಸಿ ಅಸುವ ಅಪರಿಸುವ ಓ! ಅರ್ಬುದ ಅಸುರ ತನದ ನಿನ್ನ ನಡೆ ಅದಕ್ಕಿಂತ ಕಡೆ ಶ್ವೇತ ರಕುತ ಕಣಗಳು ಮರಣಿಸದಿರಲು ನಿನ್ನ ಜನನ ನಿತ್ಯ ಬಲಗೊಳ್ಳುತ ಅಂಗದಿಂದ ಅಂಗಕೆ ಪಯಣ ಮರ್ತ್ಯರ ಜೀವ ಜೀವನದಲಿ ಅತಿಕ್ರಮಣ ಸತ್ವವ ಕಸಿದು ಚೈತನ್ಯ ಬಸಿದು ಕಬಳಿಸುತಿ ನೀ ಪ್ರಾಣ ಶಿರಡಿ ಸಾಯಿನಾಥರ ಗುರು ಪರಮಹಂಸರ ಪರಮ ಯೋಗಿ ರಮಣರ ವಿಶ್ವಕವಿ ರವೀಂದ್ರರ ವರಕವಿ ಬೇಂದ್ರೆಯವರ ಮೇಹರಬಾಯಿ ಟಾಟಾರವರ ಹರಣ ಕಸಿದ ನಿನಗೆ ಸಾಮಾನ್ಯರೇನು ಮಹತ್ತರ ?? ಕರಾಳ ಕಂಬಂಧ ಬಾಹುಗಳ ಚಾಚಿ ನಿರಂತರ ಹಸಿ ರಕುತವ ಬಸಿವ ಪಿಶಾಚಿ ಕರುಣೆಯಿರಲಿ ಕಡು ಬಡವರ ಮೇಲೆ ಸೈರಣೆಯಿಂದಲಿ ತಗ್ಗಿಸು ನಿನ್ನ ಲೀಲೆ ಯಾರು ಬಲ್ಲರು ನಿನ್ನ ಮಾಯಕಾರ ತನವ ??? ಉದಯ ಬಿ. ಶೆಟ್ಟಿ, ಪಂಜಿಮಾರು