Updated News From Kaup

ಯುವ ವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು : ರಜತ ಸಂಭ್ರಮ ; ಮಳೆ ನೀರು ಕೊಯ್ಲು ಉದ್ಘಾಟನೆ

Thumbnail
Posted On: 08 Jun 2025, 03:45 PM

ಉಡುಪಿ : ಯುವ ವಿಚಾರ ವೇದಿಕೆಯ ರಜತ ಸಂಭ್ರಮದ ಅಂಗವಾಗಿ ಭೂಮಿಯ ಅಂತರ್ಜಲ ಮರುಪೂರಣ, ಪರಿಸರ ಸ್ನೇಹಿ ಸರಳ ತಂತ್ರಜ್ಞಾನದ ವಿಶಿಷ್ಟ ಯೋಜನೆಯಾದ ಮಳೆ ನೀರು ಕೊಯ್ಲು ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಭಾನುವಾರ ವೇದಿಕೆಯ ವಠಾರದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪ್ಪೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಅರ್ಥಪೂರ್ಣ ಯೋಜನೆ ಯಶಸ್ಸಾಗಲಿ. ಗ್ರಾಮದ ಜನತೆಗೆ ಮಾದರಿಯಾಗಲಿ ಎಂದರು. ಅತಿಥಿಗಳಾದ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವಿನ್ ರೊಚ್, ಉಪ್ಪೂರು ವ್ಯ.ಸೇ.ಸ. ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರ, ಉಪ್ಪೂರು ಸರಕಾರಿ ಪ್ರೌಢ ಶಾಲೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರತ್ನಾಕರ ಮೊಗವೀರ ಮಾತನಾಡಿದರು. ವೇದಿಕೆ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ಸ್ವಾಗತಿಸಿದರು. ಅಧ್ಯಕ್ಷರಾದ ಸಂದೀಪ್ ಶೆಟ್ಟಿ ವಂದಿಸಿದರು. ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಸಂದೀಪ್ ಕುಮಾರ್ ಮಂಜ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ

Thumbnail
Posted On: 08 Jun 2025, 03:21 PM

ಕಾಪು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ಸಂದೀಪ್ ಕುಮಾರ್ ಮಂಜ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ (ರಿ.) ಇದರ ಅಧ್ಯಕ್ಷರಾದ ಸಂದೀಪ್ ಕುಮಾರ್ ಮಂಜ ಇವರನ್ನು ಬ್ರಾಹ್ಮಣ ಸಮುದಾಯಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ.) ರಾಜ್ಯ ಉಪಾಧ್ಯಕ್ಷರನ್ನಾಗಿ ಅಧ್ಯಕ್ಷರಾದ ಎಸ್ ರಘುನಾಥ್ ಇವರು ಆಯ್ಕೆ ಮಾಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಲ್ಲಾರು-ಮಜೂರು : ನಿವೃತ್ತ ತಹಸೀಲ್ದಾರ್ ಪಿ ಬಾಬು ರವರಿಗೆ ಬಿ.ಜೆ.ಎಂ ಮಸ್ಜಿದ್ ಕಮಿಟಿಯಿಂದ ಸನ್ಮಾನ

Thumbnail
Posted On: 08 Jun 2025, 03:18 PM

ಕಾಪು : ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಮಸ್ಜಿದ್ ಆಡಳಿತ ಕಚೇರಿಗೆ ನಿವೃತ್ತ ತಹಶೀಲ್ದಾರ್ ಪಿ ಬಾಬು ಭೇಟಿ ನೀಡಿದರು. ಈ ಸಂದರ್ಭ ಮಸ್ಜಿದ್ ಕಮಿಟಿ ವತಿಯಿಂದ ಮಸ್ಜಿದ್ ಅಧ್ಯಕ್ಷರಾದ ಡಾ.ಯು.ಎಂ ಫಾರೂಕ್ ಚಂದ್ರನಗರ ಸನ್ಮಾನಿಸಿದರು. ಸನ್ಮಾನಿಸಿ ಮಾತನಾಡಿದ ಅವರು, ಪಿ ಬಾಬು ರವರು ತಹಸೀಲ್ದಾರ್ ಆಗಿ ಉತ್ತಮ ಕೆಲಸ ಮಾಡಿ ಜನ ಸಾಮಾನ್ಯರ ಮೆಚ್ಚುಗೆ ಪಡೆದವರು. ನಮ್ಮ ಊರಿನವರು ಎಂಬ ಹೆಗ್ಗಳಿಕೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಸ್ಜಿದ್ ಉಪಾಧ್ಯಕ್ಷರಾದ ಹಸನಬ್ಬ ಮಜೂರು, ರಝಕ್ ಕೊಪ್ಪಲ್ ತೋಟ, ರಝಕ್ ಮಲ್ಲಾರು, ಇಮ್ರಾನ್ ಮಜೂರು ರಝಕ್ ಕೊಪ್ಪ, ಶಂಶು ರಝಕ್ ಕರಂದಾಡಿ, ಉಮ್ಮರ್ ಗಾರ್ಡನ್ ಸಿಟಿ, ರಝಕ್ ಕೊಪ್ಪ ,ಅಬ್ದುಲ್ ರೆಹಮಾನ್, ರಜಬ್ ಕರಂದಾಡಿ, ಹಸನಬ್ಬ ಗುಡ್ಡೆಕೇರಿ ಮತ್ತಿತರರು ಉಪಸ್ಥಿತರಿದ್ದರು.

ಪಡುಬಿದ್ರಿ ಸಿ.ಎ.ಸೊಸೈಟಿಯ ಹೆಜಮಾಡಿ ಶಾಖಾ ಕಟ್ಟಡದಲ್ಲಿ ನೂತನ ಸಭಾಂಗಣ ಉದ್ಘಾಟನೆ

Thumbnail
Posted On: 08 Jun 2025, 03:11 PM

ಪಡುಬಿದ್ರಿ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ಹೆಜಮಾಡಿ ಶಾಖಾ ಕಟ್ಟಡದಲ್ಲಿರುವ 'ಎಚ್. ನಾರಾಯಣ' ನೂತನ ಸಭಾಂಗಣವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸಹಿತ ಗಣ್ಯರು ಭಾನುವಾರ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಸಹಕಾರಿ ರಂಗದ ತತ್ವದಂತೆ ಕಾರ್ಯನಿರ್ವಹಿಸುತ್ತಿರುವ ಪಡುಬಿದ್ರಿ ಸಿ.ಎ.ಸೊಸೈಟಿ ಕಾರ್ಯ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ. ಸರಕಾರಿ ಬ್ಯಾಂಕುಗಳಿಗಿಂತ ಸಹಕಾರಿ ಸೊಸೈಟಿಗಳಿಂದ ಜನಸಾಮಾನ್ಯರಿಗೆ ಅನುಕೂಲಕರವಾಗಿದೆ ಎಂದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ವಿದ್ಯೆ, ಆರೋಗ್ಯ, ಸಾಮಾಜಿಕ ಒಳಿತನ್ನು ಮಾಡುವ ದೃಷ್ಟಿಯಲ್ಲಿ ನಮ್ಮ ಜವಾಬ್ದಾರಿ ಎಂಬಂತೆ ಪಡುಬಿದ್ರಿ ಸಿ.ಎ. ಸೊಸೈಟಿ ಜನಸೇವೆ ಮಾಡುತ್ತಿದೆ ಎಂದರು. ಸನ್ಮಾನ : ದೈನಿಕ ಠೇವಣಿ ಸಂಗ್ರಹಕಾರರಾಗಿರುವ ವಿಠ್ಠಲ ದೇವಾಡಿಗ ಮತ್ತು ಗೋಪಾಲ ದೇವಾಡಿಗ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 5ನೇ ರ‌್ಯಾಂಕ್ ಪಡೆದ ಭೂಮಿಕಾ ಎಚ್.ಪುತ್ರನ್, ಸೊಸೈಟಿ ವ್ಯಾಪ್ತಿಯ ಶೇ. 95 ಕ್ಕಿಂತ ಅಧಿಕ ಅಂಕ ಗಳಿಸಿದ ರಿಷಿಕಾ ಕಿಶೋರ್, ಪ್ರಣವ್ ಪೂಜಾರಿ, ಶೇ. 100 ಫಲಿತಾಂಶ ದಾಖಲಿಸಿದ ಶಾಲೆಗಳನ್ನು ಗೌರವಿಸಲಾಯಿತು. ಕೆ.ಎಂ.ಎಫ್. ಬೆಂಗಳೂರು ನಿರ್ದೇಶಕರಾದ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ನಿವೃತ್ತ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಭಟ್, ಶಕುಂತಳಾರವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ. ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕೆ.ಎಂ.ಎಫ್. ಬೆಂಗಳೂರು ನಿರ್ದೇಶಕರಾದ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷರಾದ ಬಿ. ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ನಿರ್ದೇಶಕ ಬಿ. ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಲ್ಲಿ, ಹೆಜಮಾಡಿ ಅಲ್-ಅಝರ್ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಶೇಖಬ್ಬ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಸಿ.ಎ.ಸೊಸೈಟಿ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್ ವಹಿಸಿದ್ದರು. ಈ ಸಂದರ್ಭ ಹೆಜಮಾಡಿ ಗ್ರಾ.ಪಂ.ಅಧ್ಯಕ್ಷೆ ರೇಶ್ಮಾ ಮೆಂಡನ್, ಹೆಜಮಾಡಿ ಗ್ರಾ.ಪಂ.ಉಪಾಧ್ಯಕ್ಷ ಮೋಹನ್ ಸುವರ್ಣ, ಪಡುಬಿದ್ರಿ ಸಿ.ಎ ಸೊಸೈಟಿ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭ ಎಚ್ ಪುತ್ರನ್, ಪ್ರಭಾರ ಶಾಖಾ ವ್ಯವಸ್ಥಾಪಕಿ ಕೀರ್ತಿ, ಸೊಸೈಟಿ ನಿರ್ದೇಶಕರುಗಳು ಉಪಸ್ಥಿತರಿದ್ದರು. ವೈ.ಸುಧೀರ್ ಕುಮಾರ್ ಸ್ವಾಗತಿಸಿ, ವೀಕ್ಷಿತ ನಿರೂಪಿಸಿ, ಗುರುರಾಜ್ ಪೂಜಾರಿ ವಂದಿಸಿದರು.

ಕಾಪು : ಮಜೂರು ಮದರಸದಲ್ಲಿ ಮಾದಕ ದ್ರವ್ಯದ ವಿರುದ್ದ ಅಭಿಯಾನ

Thumbnail
Posted On: 07 Jun 2025, 01:31 PM

ಕಾಪು : ಸಮಾಜದಲ್ಲಿ ಅಮಲು ಪದಾರ್ಥದ ಉಪಯೋಗವು ಜಾಸ್ತಿಯಾಗುತಿದ್ದು ಮಾದಕ ದ್ರವ್ಯ ವಿರುದ್ಧದ ಅಭಿಯಾನಗಳು ಸಮಾಜದ ಕಣ್ಣು ತೆರೆಸಲು ಕಾರಣವಾಗಿರುತ್ತದೆ ಎಂದು ಮಸ್ಜಿದ್ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ ತಿಳಿಸಿದರು. ಅವರು ಸಿರಾಜುಲ್ ಹುದಾ ಮದರಸ ಮಜೂರು -ಮಲ್ಲಾರು ಇದರ ವಿದ್ಯಾರ್ಥಿಗಳು ಸುನ್ನಿ ಬಾಲ ಸಂಘ ಇದರ ಅಧೀನದಲ್ಲಿ ನಡೆಸಿದ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು. ಮಜೂರ- ಮಲ್ಲಾರು ದಫ್ ಸಮಿತಿ ಯಂಗ್ಮೆನ್ಸ್ ಸಮಿತಿ, ಸ್ವಲಾತ್ ಸಮಿತಿ ಉತ್ತಮ ಕೆಲಸ ಮಾಡಿ ಜನ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಜಮಾತ್ ಕತಿಬರಾದ ಅಬ್ದುರಶೀದ್ ಸಖಾಫಿ ಹಾಗೂ ಉಸ್ತಾದುರುಗಳು ಜಮಅತ್ ಸದಸ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಡುವಣ ಲೋಕದ ನಡೆ - ಪುಸ್ತಕ ಬಿಡುಗಡೆ

Thumbnail
Posted On: 04 Jun 2025, 06:58 AM

ಕಾಪು : ಜಾನಪದ ಆರಾಧನೆಗಳಲ್ಲಿ ಮರೆಯಾಗುತ್ತಿರುವ ಸಾಂಸ್ಕೃತಿಕ ಮೌಲ್ಯಗಳನ್ನು ಹಾಗೂ ಸಂಪ್ರದಾಯ ಮತ್ತು ಪರಂಪರೆಗಳನ್ನು ಕಾಪಿಡಲು ಕ್ಷೇತ್ರಕಾರ್ಯ ಆಧರಿತ ಕೆಲಸಗಳು ಇನ್ನಷ್ಟು ನಡೆಯಬೇಕು ಎಂದು ಹಿರಿಯ ಸಾಹಿತಿ, ವಿಮರ್ಶಕ ಡಾ. ಬಿ.ಜನಾರ್ದನ ಭಟ್ ಹೇಳಿದರು. ಅವರು ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಜರಗಿದ ಕೆ‌.ಎಲ್.ಕುಂಡಂತಾಯರ "ನಡುವಣ ಲೋಕದ ನಡೆ - ದೈವಾರಾಧನೆ ನೆಲೆ ಕಲೆ" ಎಂಬ ಪುಸ್ತಕದ ದ್ವಿತೀಯ ಆವೃತ್ತಿಯ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಳುನಾಡಿನಲ್ಲಿ ಬೆಳೆದಿರುವ ದೇವಾಲಯ ಸಂಸ್ಕೃತಿ, ಜನಜೀವನದೊಂದಿಗೆ ಹಾಸುಹೊಕ್ಕಾಗಿರುವ ದೈವಾರಾಧನೆ, ನಾಗಾರಾಧನೆ ಮುಂತಾದ ಶ್ರದ್ಧೆಗಳ ವಿಭಾಗಗಳಲ್ಲಿ ಅಧ್ಯಯನ ನಡೆಸಿ ಲೇಖನಗಳನ್ನು ಬರೆಯುತ್ತಿರುವ ಕುಂಡಂತಾಯರ ಕಾರ್ಯವನ್ನು ಭಟ್ ಶ್ಲಾಘಿಸಿದರು. ಉದ್ಯಮಿ ನೈಮಾಡಿ ನಾರಾಯಣ ಕೆ.ಶೆಟ್ಟಿ ಅವರು "ನಡುವಣ ಲೋಕದ ನಡೆ" ಪುಸ್ತಕದ ದ್ವಿತೀಯ ಆವೃತ್ತಿಯನ್ನು ಬಿಡುಗಡೆಗೊಳಿಸಿದರು. ಎಲ್ಲೂರು ದೇವಳದ ಮಾಜಿ ಆಡಳಿತೆ ಮೊಕ್ತೇಸರ ಎಲ್ಲೂರು ಗುತ್ತು ಪ್ರಪುಲ್ಲ ಶೆಟ್ಟಿ, ಕುಂಜೂರು ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ದೇವರಾಜ ರಾವ್ ನಡಿಮನೆ, ಗ್ರಾಮಪಂಚಾಯತ್ ಸದಸ್ಯ ಯಶವಂತ ಶೆಟ್ಟಿ, ದೇವಳದ ಪ್ರಬಂಧಕ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಸಾಹಿತಿ, ಲೇಖಕ, ನಾಟಕಕಾರ ನಿವೃತ್ತ ಪ್ರಾಧ್ಯಾಪಕ ರಾಮದಾಸ ಕುಂಡಂತಾಯ, ನಿವೃತ್ತ ಬ್ಯಾಂಕ್ ಅಧಿಕಾರಿ ವಾಮನ ಕುಂಡಂತಾಯ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾ ಶಿಕ್ಷಕ ಡಾ.ರಾಧಾಕೃಷ್ಣ ಉಪಾಧ್ಯಾಯ ಮೂಡುಬೆಳ್ಳೆ ಹಾಗೂ ಡಾ. ಜನಾರ್ದನ ಭಟ್ ಅವರನ್ನು ಗೌರವಿಸಲಾಯಿತು. ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್. ಪ್ರಸ್ತಾವಿಸಿ ಸ್ವಾಗತಿಸಿದರು. ಸತೀಶ ಕುಂಡಂತಾಯ, ಭಾರ್ಗವ ಕುಂಡಂತಾಯ, ಶ್ರೀಕಾಂತ ಕುಂಡಂತಾಯ ಪಾಲ್ಗೊಂಡಿದ್ದರು. ಸತೀಶ ಶೆಟ್ಟಿ ಗುಡ್ಡೆಚ್ಚಿ‌‌ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಮುಂಡಾಲ ಯುವ ವೇದಿಕೆ ಪಡುಬಿದ್ರಿ : ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Thumbnail
Posted On: 01 Jun 2025, 07:17 PM

ಪಡುಬಿದ್ರಿ : ಇಲ್ಲಿನ ಮುಂಡಾಲ ಯುವ ವೇದಿಕೆಯ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಶೈಕ್ಷಣಿಕ ಪರಿಕರ ವಿತರಣಾ ಕಾರ್ಯಕ್ರಮ ರವಿವಾರ ಪಡುಬಿದ್ರಿ ಸಾಯಿ ಆರ್ಕೇಡ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ನಿವೃತ್ತ ಬ್ಯಾಂಕ್ ಅಧಿಕಾರಿ ರವಿಂದ್ರ ಸಾಲ್ಯಾನ್ ವೇದಿಕೆಯ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ಮಂಜುನಾಥ್ ಕರ್ಕೇರ ,ಕಾರ್ಯದರ್ಶಿ ನಿತಿನ್ ಸಾಲ್ಯಾನ್, ಕೋಶಾಧಿಕಾರಿ ಪ್ರಕಾಶ್ ಮುಂಡ್ಕೂರ್, ಪ್ರಮುಖರಾದ ಸುರೇಶ್ ಪಡುಬಿದ್ರಿ, ಶೇಖರ್ ಮುಂಡ್ಕೂರ್, ಪ್ರವೀಣ್ ಎರ್ಮಾಳ್, ಸೋಮಯ್ಯ ಎರ್ಮಾಳ್, ಮೋಹನ್ ಪಾದೆಬೆಟ್ಟು, ಕು.ಅಶ್ವಿನಿ ಸುವರ್ಣ, ಶಾಲಿನಿ ಸುರೇಶ್, ಭಾರತಿ ಪ್ರಸನ್ನ, ಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುರೇಶ್ ಪಡುಬಿದ್ರಿ ನಿರೂಪಿಸಿ, ಪ್ರವೀಣ್ ಎರ್ಮಾಳ್ ವಂದಿಸಿದರು.

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಡಾ| ದೇವಿ ಪ್ರಸಾದ್ ಶೆಟ್ಟಿ ಬೆಳಪು ರವರಿಗೆ ಸನ್ಮಾನ

Thumbnail
Posted On: 27 May 2025, 11:49 AM

ಉಡುಪಿ : ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ನೂತನವಾಗಿ ಆಯ್ಕೆಯಾದ ಕರ್ನಾಟಕ ರಾಜ್ಯ ಹಾಲು ಮಹಾ ಮಂಡಲ ಬೆಂಗಳೂರು ಹಾಗು ದಕ್ಷಿಣ ಕನ್ನಡ ಒಕ್ಕೂಟ ನಿಗಮದ ನಿರ್ದೇಶಕರಾಗಿ ಆಯ್ಕೆಯಾದ ಡಾ| ದೇವಿ ಪ್ರಸಾದ್ ಶೆಟ್ಟಿ ಬೆಳಪು ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಅಧ್ಯಾಪಕರಾದ ದಯಾನಂದ್, ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ, ವಿಘ್ನೇಶ್ ಉಪಸ್ಥಿತರಿದ್ದರು.

ಚಿಕಿತ್ಸೆಗೆ ಸಹಾಯದ ನಿರೀಕ್ಷೆಯಲ್ಲಿ ಕಾಪು ಮಲ್ಲಾರು ಗ್ರಾಮದ ಮಾಸ್ಟರ್ ನಿಶಾಂತ್ ಕುಟುಂಬ

Thumbnail
Posted On: 26 May 2025, 10:03 AM

ಕಾಪು : ಇಲ್ಲಿನ ಮಲ್ಲಾರು ಗ್ರಾಮದಲ್ಲಿ ವಾಸವಾಗಿರುವ ಶಿವ ಮತ್ತು ಸುನೀತಾ ದಂಪತಿಗಳ 2 ವರ್ಷದ ಮಗು (Hspt No 4015051) Diagnosed with Chronic Kidney Disease ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಮಗುವನ್ನು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಈ ಮಗುವಿಗೆ ತಕ್ಷಣದಿಂದ ಪೆರಿಟೋನಿಯಲ್‌ ಡಯಾಲಿಸಿಸ್‌ನ ಅಗತ್ಯವಿರುತ್ತದೆ. ಈ ಕುಟುಂಬವು ಆರ್ಥಿಕವಾಗಿ ಹಿಂದುಳಿದವರಾಗಿದ್ದು ತೀರಾ ಬಡವರಾಗಿದ್ದಾರೆ. ಕೂಲಿ ಕೆಲಸ ಮಾಡಿ ತಮ್ಮ ಜೀವನವನ್ನು ಸಾಗಿಸುತ್ತಿರುವ ಕುಟುಂಬವು ಮಗುವಿನ ಚಿಕಿತ್ಸೆಯನ್ನು ನಡೆಸಲು ಅಶಕ್ತವಾಗಿರುತ್ತದೆ. ಕರುಣೆಯುಳ್ಳ ನಿಮ್ಮೊಂದಿಗೆ ಮಗುವಿನ ಚಿಕಿತ್ಸೆಗಾಗಿ ಈ ಕುಟುಂಬವು ಸಹಾಯವನ್ನು ಯಾಚಿಸುತ್ತಿದೆ ಈ ಮಗುವಿಗೆ ಪೆರಿಟೋನಿಯಲ್‌ ಡಯಾಲಿಸಿಸ್ ಚಿಕಿತ್ಸೆಯನ್ನು ನಡೆಸಲು ವರ್ಷಕ್ಕೆ 8 ಲಕ್ಷ ರೂಪಾಯಿಗಳವರೆಗೆ ತಗುಲಬಹುದು ಹಾಗೂ 3 ವರ್ಷಗಳ ತನಕ ಈ ಡಯಾಲಿಸೀಸ್ ಚಿಕಿತ್ಸೆಯನ್ನು ನೀಡಿ ತದ ನಂತರ kidney transplant ಶಸ್ತ್ರ ಚಿಕಿತ್ಸೆಯನ್ನು ನಡೆಸಬೇಕಾಗಿದೆ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ. ನೀವು ನೀಡುವ ಒಂದೊಂದು ರೂಪಾಯಿಯೂ ಈ ಮಗುವಿನ ಪ್ರಾಣ ಉಳಿಸಲು ಸಹಕಾರಿಯಾಗಲಿದೆ. ಜಾತಿ, ಧರ್ಮ ನೋಡದೆ ಈ ಸಂದೇಶವನ್ನು ನೋಡುತ್ತಿರುವ ಪ್ರತಿಯೊಬ್ಬರೂ ಹಾಗೂ ಸಂಘ ಸಂಸ್ಥೆಗಳು ನಿಮ್ಮಿಂದಾಗುವ ಸಹಾಯ ಸಹಕಾರವನ್ನು ಈ ಮಗುವಿನ ಚಿಕಿತ್ಸೆಗೆ ನೀಡಬೇಕಾಗಿ ವಿನಂತಿಸಿದ್ದಾರೆ. For More Information Contact : 9900644932 NAME: SUNITHA AC NO: 44063108925 IFSC CODE:SBIN0040151 BANK NAME: STATE BANK OF INDIA BRANCH NAME: SALMAR KARKALA

ಜೂ.1 : ಸಾಲ್ಮರ ಆಯುರ್ವೇದ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

Thumbnail
Posted On: 25 May 2025, 06:03 PM

ಶಿರ್ವ : ಶಂಕರಪುರ ಸಮೀಪದ ಸಾಲ್ಮರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರ, ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಮತ್ತು ಇನ್ನಂಜೆ ಯುವಕ ಮಂಡಲ (ರಿ) ಇವರ ಸಹಯೋಗದಲ್ಲಿ ಜೂನ್.1, ರವಿವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30 ರ ಪರ್ಯಂತ ಆಸ್ಪತ್ರೆಯ ನುರಿತ ವೈದ್ಯರಿಂದ "ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ" ಸಾಲ್ಮರ ಆಯುರ್ವೇದ ಕೇಂದ್ರದಲ್ಲಿ ಜರುಗಲಿದೆ. ಕಾರ್ಯಕ್ರಮವನ್ನು ಪಡುಬಿದ್ರಿ ಅಂಚನ್ ಆಯುರ್ವೇದ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕರಾದ ಡಾ.ಟಿ.ನಾರಾಯಣ ಅಂಚನ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮುನಿಯಾಲು ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇಲ್ಲಿನ ಪ್ರಾಂಶುಪಾಲ ಡಾ.ಸತ್ಯನಾರಾಯಣ, ಇನ್ನಂಜೆ ಯುವಕ ಮಂಡಲದ ಅಧ್ಯಕ್ಷ ಮಧುಸೂದನ್ ಆಚಾರ್ಯ ಭಾಗವಹಿಸುವರು. ಅಧ್ಯಕ್ಷತೆಯನ್ನು ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಇದರ ಟ್ರಸ್ಟಿಗಳಾದ ಸಿಎ. ಹರಿದಾಸ್ ಭಟ್ ವಹಿಸುವರು. ಶಿಬಿರದಲ್ಲಿ ಎಲ್ಲಾ ವಿಧಧ ಕಾಯಿಲೆಗಳಿಗೆ, ವಿಶೇಷವಾಗಿ ಸಂಧಿವಾತ, ಆಮವಾತ, ಬೆನ್ನು ನೋವು, ನರದೌರ್ಬಲ್ಯ, ತಲೆನೋವು, ಶೀತ,ಕೆಮ್ಮು,ಉಬ್ಬಸ, ತುರಿಕೆ, ಕಜ್ಜಿ, ಮುಂತಾದ ಚರ್ಮರೋಗಗಳು, ಗ್ಯಾಸ್ಟ್ರಿಕ್‌ ತೊಂದರೆ, ಮಲಬದ್ಧತೆ, ಮೂಲವ್ಯಾಧಿ, ಡಯಾಬಿಟಿಸ್, ಮಕ್ಕಳ ಬೆಳವಣಿಕೆ ಸಂಬಂಧಿ ಕಾಯಿಲೆಗಳು, ಹೆಂಗಸರ ಮುಟ್ಟು ಸಂಬಂಧಿ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧಿಗಳನ್ನು ನೀಡಲಾಗುವುದು. ರಕ್ತಹೀನತೆ, ಮಧುಮೇಹ ರೋಗಕ್ಕೆ ಉಚಿತ ರಕ್ತ ತಪಾಸಣೆ ನಡೆಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಿಬಿರ ಸಂಘಟಕರ ಪ್ರಕಟನೆ ತಿಳಿಸಿದೆ.