Updated News From Kaup

ಅ. 23 : ಪಡುಬಿದ್ರಿ ದೇಗುಲ ಜೀರ್ಣೋದ್ಧಾರ ಕುರಿತು ಗ್ರಾಮ ಸಮಿತಿಯ ವಿಶೇಷ ಸಭೆ

Posted On: 22-10-2024 07:13AM

ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಸ್ತಾವಿತ ಕಾಮಗಾರಿ ಮತ್ತು ಪೂರ್ವಭಾವಿ ಧಾರ್ಮಿಕ ವಿಧಿ, ಸಂಕೋಚ ಹಾಗೂ ವಿಶೇಷವಾಗಿ ಧನ ಸಂಗ್ರಹಣೆ ಕುರಿತು ಚರ್ಚಿಸಲು ಅ.23ರಂದು ಸಂಜೆ 5 ಗಂಟೆಗೆ ಗ್ರಾಮ ಸಮಿತಿಯ ವಿಶೇಷ ಸಭೆ ದೇವಸ್ಥಾನದಲ್ಲಿ ನಡೆಯಲಿದೆ.

ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ.ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ದೇವಸ್ಥಾನದ ತಂತ್ರಿ ವೇ.ಮೂ.ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಉಪಸ್ಥಿತರಿರುವರು ಎಂದು ದೇವಸ್ಥಾನದ ಅನು ವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ತಿಳಿಸಿದ್ದಾರೆ.

ಉಡುಪಿ : ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ತರಬೇತಿಗೆ ಮಹತ್ವವಿದೆ - ಡಾ. ಗಾಯತ್ರಿ ಎನ್

Posted On: 22-10-2024 06:58AM

ಉಡುಪಿ : ಮಾನವ ಸಂಪನ್ಮೂಲದ ಅಭಿವೃದ್ಧಿಯಲ್ಲಿ ತರಬೇತಿ ಪ್ರಧಾನ ಪಾತ್ರ ವಹಿಸುತ್ತದೆ. ಪರಿಣಾಮಕಾರಿ ತರಬೇತಿಯು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಬಹು ಮುಖ್ಯವಾದುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯ ರೆಡ್ ಕ್ರಾಸ್ ಘಟಕ ಮತ್ತು ಉಡುಪಿ ಜಿಲ್ಲಾ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ರೆಡ್‌ಕ್ರಾಸ್ ನಾಯಕರಿಗೆ ನಡೆದ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾನಾಡುತ್ತಿದ್ದರು.

ರೆಡ್‌ಕ್ರಾಸ್ ರಾಜ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯರಾದ ವಿ.ಜಿ. ಶೆಟ್ಟಿಯವರು ಸಮಾರಂಭವನ್ನು ಉದ್ಘಾಟಿಸಿ ಮಾತಾನಾಡಿ, ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣವನ್ನು ಪದವಿ ಶಿಕ್ಷಣದಿಂದಲೇ ರೂಢಿಸಿಕೊಳ್ಳುವಂತೆ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರೆಡ್ ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಯುವ ರೆಡ್ ಕ್ರಾಸ್ ಅನುಷ್ಠಾನದಲ್ಲಿ ವಿದ್ಯಾರ್ಥಿ ನಾಯಕರ ಪಾತ್ರವನ್ನು ವಿವರಿಸಿದರು.

ರೆಡ್ ಕ್ರಾಸ್ ಸ್ವಯಂಸೇವಕಿಯರು ರೆಡ್ ಕ್ರಾಸ್ ಪ್ರಾರ್ಥನೆ ನಡೆಸಿದರು. ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಮಂಜುನಾಥ ಪೈ ಮೆಮೊರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಸಂಯೋಜಕಿ ಡಾ. ದಿವ್ಯಾ ಪ್ರಭು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ರೆಡ್ ಕ್ರಾಸ್ ಖಜಾಂಚಿ ರಮಾದೇವಿ ವಂದಿಸಿ, ರಾಘವೇಂದ್ರ ಪ್ರಭು ಕರ್ವಾಲ್ ಕಾರ್ಯಕ್ರಮ ನಿರೂಪಿಸಿದರು.

ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆಗೆ ಚಾಲನೆ

Posted On: 20-10-2024 04:17PM

ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿಯ ನೇತೃತ್ವದಲ್ಲಿ ನವದುರ್ಗಾ ಲೇಖನ ಯಜ್ಞ ಪೂರ್ವಭಾವಿಯಾಗಿ ನವದಿನಗಳ ಕಾಲ ಹಮ್ಮಿಕೊಂಡಿರುವ 108 ತಂಡಗಳ ಭಜನಾ ಸಂಕೀರ್ತನೆಗೆ ರವಿವಾರ ಚಾಲನೆ ನೀಡಲಾಯಿತು.

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಪ್ರಸ್ತಾವನೆಗೈದು ಮಾತನಾಡಿ, ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಪ್ರಗತಿಯಲ್ಲಿ ಸಾಗುತ್ತಿದ್ದು, ಬ್ರಹ್ಮಕಲಶೋತ್ಸವಕ್ಕೂ ಈಗಿನಿಂದಲೇ ಸಿದ್ಧತೆಗಳು ಪ್ರಾರಂಭಗೊಂಡಿವೆ. ಅದಕ್ಕೆ ಪೂರ್ವಭಾವಿಯಾಗಿ ನವದುರ್ಗಾ ಲೇಖನ ಯಜ್ಞವನ್ನು ಹಮ್ಮಿಕೊಂಡಿದ್ದು ಪ್ರಪಂಚದಾದ್ಯಂತ ಇರುವ ಭಕ್ತರನ್ನು ನವದುರ್ಗಾ ಲೇಖನ ಬರೆಯುವ ಮಹಾಸಂಕಲ್ಪದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ ಎಂದರು.

ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಮಾತನಾಡಿ, ಕಾಪು ಮಾರಿಯಮ್ಮನ ಸನ್ನಿಧಿಯ ಜೀರ್ಣೋದ್ಧಾರ ನಮ್ಮ ಜೀವನದಲ್ಲಿ ದೊರಕಿರುವ ಸುವರ್ಣಾವಕಾಶವಾಗಿದೆ. ನವದುರ್ಗಾ ಲೇಖನ ಯಜ್ಞದ ಮೂಲಕ ಎಲ್ಲಾ ಭಕ್ತರಿಗೂ ಅಮ್ಮನ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಾಗೂ ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ, ಮುಂಬಯಿ ಸಹಿತ ವಿವಿಧೆಡೆ ಸಭೆ ನಡೆಸಿ ಜನರನ್ನು ಜಾಗೃತಿಗೊಳಿಸಲಾಗುತ್ತಿದ್ದು, ಎಲ್ಲೆಡೆ ಪೂರಕ ಸ್ಪಂಧನೆ ದೊರಕುತ್ತಿದೆ ಎಂದರು. ನವದುರ್ಗಾ ಲೇಖನ ಯಜ್ಞ ಸಮಿತಿ ಕಾರ್ಯಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ನವದುರ್ಗಾ ಲೇಖನಯಜ್ಞದ ಸಿದ್ಧತೆ ಮತ್ತು ಭಜನಾ ಸಂಕೀರ್ತನೆ ಕುರಿತಾಗಿ ಮಾಹಿತಿ ನೀಡಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷರಾದ ಮನೋಹರ ಶೆಟ್ಟಿ, ಮಾಧವ ಆರ್. ಪಾಲನ್, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಕಾರ್ಯಾಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಪದಾಧಿಕಾರಿಗಳಾದ ಕೃಷ್ಣ ಪ್ರಸಾದ್ ಅಡ್ಯಂತಾಯ, ಅಶೋಕ್ ಕುಮಾರ್ ಶೆಟ್ಟಿ, ಕೆ. ವಿಶ್ವನಾಥ್, ಹರಿಯಪ್ಪ ಸಾಲ್ಯಾನ್, ಸಂದೀಪ್ ಕುಮಾರ್ ಮಂಜ, ಪ್ರಮುಖರಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ಮೋಹನ್ ಬಂಗೇರ, ಶ್ರೀಧರ ಕಾಂಚನ್, ಗೀತಾಂಜಲಿ ಸುವರ್ಣ, ಸಾವಿತ್ರಿ ಗಣೇಶ್, ಶ್ರೀಕರ ಶೆಟ್ಟಿ ಕಲ್ಯ , ಬೀನಾ ವಿ. ಶೆಟ್ಟಿ, ಅನುರಾಧ ಶೆಟ್ಟಿ, ಪ್ರತಿಮಾ ಶೆಟ್ಟಿ, ಹರಿಣಾಕ್ಷಿ ದೇವಾಡಿಗ, ಸರಿತಾ ಶಿವಾನಂದ್, ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ಸಂತೋಷ್ ಶೆಟ್ಟಿ ಮೂಡುಶೆಡ್ಡೆ, ರಮೇಶ್ ಕಲ್ಮಾಡಿ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಸುವರ್ಧನ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.

ಸಮಾಜ ಸೇವಕ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಸನ್ಮಾನ

Posted On: 20-10-2024 09:32AM

ಕಾಪು : ಸಮಾಜ ಸೇವೆಗಾಗಿ ಇತ್ತೀಚೆಗೆ ಗೌರವ ಡಾಕ್ಟರೆಟ್ ಪದವಿ ಪಡೆದ ಕಾಪುವಿನ ಸಮಾಜ ಸೇವಕ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಹಜ್ರತ್ ಸಾದಾತ್ ವೃದ್ದಾಶ್ರಮ ರವರ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ವೃದ್ದಾಶ್ರಮದ ಸ್ಥಾಪಕ ಅಧ್ಯಕ್ಷರಾದ ಮೊಹಮ್ಮದ್ ಶಾಫಿ ಮದಾರಿಯವರ ನೇತೃತ್ವದಲ್ಲಿ ಆಶ್ರಮದ ಖಾಸಗಿ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಡಾ.ಫಾರೂಕ್ ಮೊದಲು 2 ಬಾರಿ ಈ ವೃದ್ದಾಶ್ರಮಕ್ಕೆ ಭೇಟಿ ನೀಡಿದ್ದೆ ಈ ರೀತಿಯ ಸೇವೆಯ ಜೊತೆಗೆ ತಾವು ಮಾಡುತ್ತಿರುವ ಸಮಾಜ ಸೇವೆ ದೇವರು ಮೆಚ್ಚುವಂತದ್ದು ತಮ್ಮ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೃದ್ದಾಶ್ರಮ ಅಧ್ಯಕ್ಷರಾದ ನಾಸಿರ್ ಕೊಂಬಗುಡ್ಡೆ, ಮುಸ್ತಾಕ್ ಬೆಳಪು, ಆಶ್ರಮದ ಕಾರ್ಯದರ್ಶಿ ಅಶಿಕ್, ಜಲೀಲ್ ರಝಕ್ (ಕೊಪ್ಪ )ಚಂದ್ರನಗರ ಮತ್ತಿತರರು ಉಪಸ್ಥಿತರಿದ್ದರು.

ಕಾಪು ಹೊಸಮಾರಿಗುಡಿ : ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವದಿನಗಳ ಪರ್ಯಂತ ಭಜನಾ ಸಂಕೀರ್ತನೆ

Posted On: 19-10-2024 10:43AM

ಕಾಪು : ಇಲ್ಲಿನ ಮಾರಿಯಮ್ಮನ ಸನ್ನಿದಾನದಲ್ಲಿ ಪ್ರತಿಷ್ಠಾ ಬ್ರಹ್ಮಕಳಶೋತ್ಸವಕ್ಕೆ ಪೂರ್ವಭಾವಿಯಾಗಿ ನವದುರ್ಗಾ ಲೇಖನವನ್ನು ಬರೆಯುವ ಮಹಾ ಸಂಕಲ್ಪವನ್ನು ಲೋಕಕಲ್ಯಾಣಾರ್ಥವಾಗಿ ಮತ್ತು ಸಾನಿಧ್ಯ ವೃದ್ಧಿಗಾಗಿ ಆಯೋಜಿಸಲಾಗಿದ್ದು ಇದರ ಪ್ರಯುಕ್ತ ಅಕ್ಟೋಬರ್ 20 ರಿಂದ ಮೊದಲ್ಗೊಂಡು 28 ರ ವರೆಗೆ ನವದಿನಗಳ ಪರ್ಯಂತ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನೊಳಗೊಂಡ 108 ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಅ. 26, ಶನಿವಾರ ಸಾಯಂಕಾಲ 6 ಗಂಟೆಯಿಂದ ಆಹ್ವಾನಿತ ತಂಡಗಳ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ. ಅಕ್ಟೋಬರ್ 29ರ ಮಂಗಳವಾರದಂದು ವಾಗೀಶ್ವರಿ ಪೂಜೆಯ ಮೂಲಕ ಪೂಜ್ಯ ಪೇಜಾವರ ಶ್ರೀಗಳು ನವದುರ್ಗಾ ಲೇಖನವನ್ನು ಬರೆದು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ಸಭಾಕಾರ್ಯಕ್ರಮವನ್ನು ನಡೆಸಿ ನವದುರ್ಗಾ ಲೇಖನದ ಪುಸ್ತಕವನ್ನು ಭಕ್ತಾದಿಗಳಿಗೆ ನೀಡಲಾಗುವುದು ಎಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 19 (ಇಂದು) : ದೇವದಾಸ್ ಶೆಟ್ಟಿಗೆ ಜಿಲ್ಲಾ ಕ.ಸಾ.ಪ. ಪುರಸ್ಕಾರ

Posted On: 19-10-2024 10:39AM

ಕಾಪು : ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆ ರುವಾರಿ, ನೆಲಮೂಲ ಪಾರಂಪರಿಕ ಹಿನ್ನೆಲೆಯ ಕೊರಗ ಸಮುದಾಯದ ಶ್ರೇಯೋಭಿವೃದ್ಧಿಗೆ ತನ್ನ ಸಮಸ್ತ ಜೀವನವನ್ನೇ ಮುಡಿಪಾಗಿರಿಸಿದ ಕಾಪು ಕಲ್ಯಾ ದೇವದಾಸ್ ಶೆಟ್ಟಿ ಅವರಿಗೆ ಅ.19ರಂದು ಸಂಜೆ 4 ಗಂಟೆಗೆ ಕಲ್ಯಾದಲ್ಲಿ ನಡೆಯುವ ಉಡುಪಿ ಜಿಲ್ಲಾ ಕಸಾಪ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 27 : ಹೇರೂರು ಫ್ರೆಂಡ್ಸ್ ಕ್ಲಬ್, 92 ಹೇರೂರು - ಗೂಡುದೀಪ ಸ್ಪರ್ಧೆ

Posted On: 19-10-2024 10:38AM

ಕಾಪು : ಹೇರೂರು ಫ್ರೆಂಡ್ಸ್ ಕ್ಲಬ್, 92 ಹೇರೂರು ಇವರ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ 92 ಹೇರೂರಿನ ಹಾಗೂ ಹೇರೂರಿನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅಕ್ಟೋಬರ್ 27, ಆದಿತ್ಯವಾರ ಸಂಜೆ 4 ಗಂಟೆಗೆ ಸಾರ್ವಜನಿಕ ವೇದಿಕೆ, 92 ಹೇರೂರು ಇಲ್ಲಿ ಗೂಡುದೀಪ ಸ್ಪರ್ಧೆ ಏರ್ಪಡಿಸಲಾಗಿದೆ.

ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 2,500, ದ್ವಿತೀಯ ಬಹುಮಾನ ರೂ. 1,500, ತೃತೀಯ ಬಹುಮಾನ ರೂ.1,000 ನಗದು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ. 10: ಫಲಿಮಾರುವಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Posted On: 18-10-2024 01:22PM

ಪಡುಬಿದ್ರಿ : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಫಲಿಮಾರು, ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.), ಉಡುಪಿ, ರಕ್ತನಿಧಿ ವಿಭಾಗ ಕೆ.ಎಂ.ಸಿ. ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 10, ಆದಿತ್ಯವಾರ ಬೆಳಿಗ್ಗೆ 9 ರಿಂದ ಅಪರಾಹ್ನ ಗಂಟೆ 2 ರ ವರೆಗೆ ಶ್ರೀ ಗಣೇಶ ಮಂಟಪ, ಫಲಿಮಾರು ಇಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರಗಲಿದೆ.

ಹೆಚ್ಚಿನ ಮಾಹಿತಿಗಾಗಿ ರಿತೇಶ್ ದೇವಾಡಿಗ 8660365719, ಹರೀಶ್ 9964553031 ರನ್ನು ಸಂಪರ್ಕಿಸಬಹುದು ಎಂದು ಸಂಘ ಸಂಸ್ಥೆಯ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ : ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ

Posted On: 17-10-2024 10:23PM

ಉಡುಪಿ : ಮಹರ್ಷಿ ವಾಲ್ಮೀಕಿ ಸಂಘಟನೆ ಉಡುಪಿ ಜಿಲ್ಲೆಯ ವತಿಯಿಂದ ಜಯಂತ್ಯೋತ್ಸವವನ್ನು ಉಡುಪಿಯ ಮಥುರಾ ಕಂಫರ್ಟ್ಸ್ ನಲ್ಲಿ ಆಯೋಜಿಸಲಾಗಿತ್ತು. ಉದ್ಯಮಿ ವಿಶ್ವನಾಥ ಶೆಣೈ ಯವರು ವಾಲ್ಮೀಕಿ ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಕಲಾರಾಧಕ, ಕಲಾವಿದ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.

ಭಾರತ್ ಸ್ಕೌಟ್ ಜಿಲ್ಲಾ ಆಯುಕ್ತ ಜನಾರ್ದನ್ ಕೊಡವೂರು ಮಾತನಾಡಿ ಸಂಘಟನೆಯಲ್ಲಿ ಬಲವಿದೆ. ಒಟ್ಟಾಗಿ ಸೇರಿ ಕೆಲಸ ಮಾಡಿದಾಗ ಸರಕಾರದ ಮಟ್ಟಕ್ಕೂ ನಮ್ಮ ಬೇಡಿಕೆಯನ್ನು ತಲುಪಿಸಲು ಸಾಧ್ಯ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್. ಪಿ ಮಾತನಾಡಿ ಜಯಂತ್ಯೋತ್ಸವವನ್ನು ಆಚರಿಸುವ ಮೂಲಕ ಶ್ರೇಷ್ಠ ದಾರ್ಶನಿಕ ವಾಲ್ಮೀಕಿ ಮಹರ್ಷಿಯನ್ನು ನೆನಪಿಸುವ ಮಹತ್ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಎಂದರು. ಮಹರ್ಷಿ ವಾಲ್ಮೀಕಿ ಸಂಘಟನೆಯ ಗೌರವಾಧ್ಯಕ್ಷ ಸಿದ್ದಬಸಯ್ಯ ಸ್ವಾಮೀಜಿ ಚಿಕ್ಕಮಠ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ರಂಜನಿ ವಸಂತ್, ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ, ಶಾಂತಪ್ಪ ದೊರೆ, ಆನಂದ ವಾಲ್ಮೀಕಿ, ಗೋಪಾಲ ದೇವದುರ್ಗ, ಶಿವರಾಜ್ ವಾಲಿಕಾರ್, ಕನಕ, ದೇವು ದೊರೆ, ಗೋಪಾಲ ದೊರೆ, ಸಂಗನಗೌಡ ಸಾತಿಹಾಳ ಉಪಸ್ಥಿತರಿದ್ದರು. ಉಡುಪಿ ತಾಲ್ಲೂಕು ಕಸಾಪ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

ಅ. 27 : ರಾಗ್ ರಂಗ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ವತಿಯಿಂದ ಉಭಯ ಜಿಲ್ಲಾ ಮಟ್ಟದ

Posted On: 17-10-2024 08:48PM

ಪಡುಬಿದ್ರಿ : ರಾಗ್ ರಂಗ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ಇದರ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಉಭಯ ಜಿಲ್ಲಾ ಮಟ್ಟದ "ಗೂಡುದೀಪ ಸ್ಪರ್ಧೆ" ಅಕ್ಟೋಬರ್ 27, ಆದಿತ್ಯವಾರ ಸಂಜೆ 6 ಗಂಟೆಗೆ ಬೋರ್ಡ್ ಶಾಲಾ ಮೃೆದಾನ( ಕರ್ನಾಟಕ ಪಬ್ಲಿಕ್ ಸ್ಕೂಲ್) ಪಡುಬಿದ್ರಿ ಇಲ್ಲಿ ಆಯೋಜಿಸಲಾಗಿದೆ.

ಸಾಂಪ್ರದಾಯಿಕ ಗೂಡುದೀಪ ಮತ್ತು ಆಧುನಿಕ ಗೂಡುದೀಪ ಸ್ಪರ್ಧಾ ವಿಭಾಗಗಳಿದ್ದು, ನೊಂದಾವಣೆಗೆ ಅಕ್ಟೋಬರ್ 25 ಕೊನೆಯ ದಿನವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ‌ ನೃತ್ಯ ವೈಭವವೂ ಜರಗಲಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7090460951 ಸಂಪರ್ಕಿಸಿ ಎಂದು ರಾಗ್ ರಾಂಗ್ ಕಲ್ಚರಲ್ ಕ್ಲಬ್ ಪಡುಬಿದ್ರಿ ಅಧ್ಯಕ್ಷರಾದ ವಿಶ್ವಾಸ್ ವಿ.ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಯ ನಿಯಮಗಳು: ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗದಲ್ಲಿ ಗೂಡುದೀಪ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ವಿಜೇತರಿಗೆ ನಗದು, ಶ್ವಾಶತ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಸಂಜೆ 5 ಗಂಟೆಗೆ ತಮ್ಮ ಗೂಡುದೀಪದೊಂದಿಗೆ ಶಾಲಾ ಮೈದಾನದಲ್ಲಿ ಹಾಜರಿರಬೇಕು. ಎಲ್ಲ ಗೂಡುದೀಪಗಳಿಗೆ ವಿದ್ಯುದ್ದೀಪದ ವ್ಯವಸ್ಥೆ ಮಾಡಿಕೊಡಲಾಗುವುದು.