Updated News From Kaup
ಪಡುಬಿದ್ರಿ : ನಡಿಪಟ್ನದಲ್ಲಿ ಕಡಲ್ಕೊರೆತ - ಇಲಾಖಾಧಿಕಾರಿಗಳೊಂದಿಗೆ ಶಾಸಕರ ಭೇಟಿ
Posted On: 23-06-2024 05:03PM
ಪಡುಬಿದ್ರಿ : ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ನ ಭಾಗದಲ್ಲಿ ಕಡಲ್ಕೊರೆತ ಉಂಟಾಗಿದ್ದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಲಾಖಾಧಿಕಾರಿಗಳೊಂದಿಗೆ ರವಿವಾರ ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಗಾಲದಲ್ಲಿ ಕಡಲ ಕೊರೆತದ ಸಮಸ್ಯೆ ಅಧಿಕವಾಗಲಿರುವುದರಿಂದ ಇದಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ವಿದ್ಯಾಶ್ರೀ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ನೀತಾ ಗುರುರಾಜ್ ಹಾಗೂ ಕಾಪು ತಹಶೀಲ್ದಾರರಾದ ಪ್ರತಿಭ ಆರ್., ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಅಭಿಯಂತರರಾದ ಜಯರಾಜ್ ಉಪಸ್ಥಿತರಿದ್ದರು.
ಓಂ ಶ್ರೀ ಯೋಗ ಕೇಂದ್ರ ಬಸ್ರೂರು : ಯೋಗ ದಿನಾಚರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Posted On: 23-06-2024 03:12PM
ಬಸ್ರೂರು : ಓಂ ಶ್ರೀ ಯೋಗ ಕೇಂದ್ರ ಬಸ್ರೂರು ವತಿಯಿಂದ ಜರಗಿದ ಯೋಗ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ .ರಾಧಾಕೃಷ್ಣ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಅವರು ನಿತ್ಯದ ಜೀವನದಲ್ಲಿ ಯೋಗದ ಮಹತ್ವದ ಬಗ್ಗೆ ಮಾತನಾಡಿದರು.
ಸನ್ಮಾನ : 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90 ಪ್ರತಿಶತ ಹಾಗೂ ಅಧಿಕ ಅಂಕವನ್ನು ಗಳಿಸಿದಂತಹ ಸ್ಥಳೀಯ ಬಸ್ರೂರು ಗ್ರಾಮದ ಸಾಧಕ ವಿದ್ಯಾರ್ಥಿಗಳಾದ ವಿಭಾ, ಸ್ಪಂದನ ಉಳ್ಳೂರು, ಸಾನಿಕಾ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಅನಿಲ್ ಕುಮಾರ್ ಶೆಟ್ಟಿ, ನಿರುಪಮ ಹೆಗ್ಡೆ ಉಪಸ್ಥಿತರಿದ್ದರು. ಓಂ ಶ್ರೀ ಯೋಗ ಕೇಂದ್ರದ ಅಧ್ಯಕ್ಷರಾದ ಪ್ರಭಾಕರ್ ಐತಾಳ್ ಸ್ವಾಗತಿಸಿದರು. ಸಾರಿಕಾ ಅಶೋಕ್ ನಿರೂಪಿಸಿದರು. ಕಾರ್ಯದರ್ಶಿ ಅಶೋಕ್ ಕೆರೆಕಟ್ಟೆ ವಂದಿಸಿದರು.
ಜಯಂಟ್ಸ್ ಬ್ರಹ್ಮಾವರ ವಾಷಿ೯ಕ ಮಹಾಸಭೆ ; ಸಾಧಕರಿಗೆ ಅಭಿನಂದನಾ ಸಮಾರಂಭ
Posted On: 23-06-2024 03:02PM
ಬ್ರಹ್ಮಾವರ : ಸಮಾಜದಲ್ಲಿ ನಾವೆಲ್ಲರೂ ಹೊಸ ಚಿಂತನೆಗಳನ್ನು ಬೆಳೆಸಿಕೊಂಡು ಪರಿಸರಕ್ಕೆ ಪೂರಕವಾದ ಕಾಯ೯ ಮಾಡಬೇಕಾಗಿದೆ ಎಂದು ಡಾ.ಎ.ವಿ ಬಾಳಿಗಾ ಆಸ್ಪತ್ರೆಯ ಖ್ಯಾತ ಮನೋರೋಗ ತಜ್ಞರಾದ ಡಾ. ವಿರೂಪಾಕ್ಷ ದೇವರಮನೆ ಹೇಳಿದರು. ಅವರು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರದ ವತಿಯಿಂದ ಸಿಟಿ ಸೆಂಟರ್ ನಲ್ಲಿ ನಡೆದ ವಾಷಿ೯ಕ ಮಹಾಸಭೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಸೇವಾ ಕಾಯ೯ಗಳನ್ನು ಮಾಡಿದಾಗ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರಿ ಮಾನಸಿಕ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ ಎಂದರು.
ಜಯಂಟ್ಸ್ ಫೆಡರೇಶನ್ 6 ರ ಅಧ್ಯಕ್ಷ ಎಲ್.ಬಿ ದೊಡ್ಡಮನಿ ಜಯಂಟ್ಸ್ ನ ಮುಂದಿನ ಕಾಯ೯ಕ್ರಮಗಳ ವಿವರ ನೀಡಿದರು. ವೇದಿಕೆಯಲ್ಲಿ ಫೆಡರೇಶನ್ ಪೂವ೯ ಅಧ್ಯಕ್ಷ ಮಧುಸೂಧನ್ ಹೇರೂರು, ಉಪಾಧ್ಯಕ್ಷ ತೇಜೇಶ್ವರ ರಾವ್, ಯೂನಿಟ್ ಡೈರೆಕ್ಟರ್ ವಿವೇಕಾನಂದ ಕಾಮತ್, ಮುಂತಾದವರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಜಯಂಟ್ಸ್ ಅದ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ವಹಿಸಿದ್ದರು.
ಈ ಸಂದಭ೯ದಲ್ಲಿ ಖ್ಯಾತ ಮಿಯಾವಾಕಿ ತಜ್ಞ ಕೆ.ಮಹೇಶ್ ಶೆಣೈ, ಈಜು ಪಟು ಲಿಮ್ಕಾ ದಾಖಲೆಗಾರ ರೋನಾನ್ ಲೂವಿಸ್ ರವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ಜಯಂಟ್ಸ್ ಉಡುಪಿ ಮಾಜಿ ಅಧ್ಯಕ್ಷ ಜಯರಾಂ ರಾವ್, ಡಾ. ಎ.ರಾಜಾ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಡಾ.ಜೀವನ್ ಕೃಷ್ಣ ಯುಎಸ್ಐ ರವರ ಪ್ರಾಯೋಜಕತ್ವದಲ್ಲಿ ಅನಾಥ ಶ್ರಮಗಳಿಗೆ ವೀಲ್ ಚೈರ್ ಗಳನ್ನು ಹಸ್ತಾಂತರಿಸಲಾಯಿತು.ಕಾಯ೯ ದಶಿ೯ ಮಿಲ್ಟನ್ ಒಲಿವರ್ ವರದಿ ವಾಚಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು. ಶ್ರೀನಾಥ ಕೋಟ, ರೊನಾಲ್ಡ್ ಸಹಕರಿಸಿದರು.
ಸಾಂತೂರಿನಲ್ಲಿ ಅಕ್ರಮ ಗ್ಯಾಸ್ ಫಿಲ್ಲಿಂಗ್ : ಇಬ್ಬರು ಪೋಲಿಸ್ ವಶ
Posted On: 23-06-2024 02:25PM
ಸಾಂತೂರು : ಅನಾಹುತಕ್ಕೆ ಎಡೆಮಾಡುವ ರೀತಿಯಲ್ಲಿ ತುಂಬಿದ ಸಿಲಿಂಡರ್‌ಗಳಿಂದ ಗ್ಯಾಸನ್ನು ಖಾಲಿ ಸಿಲಿಂಡರ್‌ಗಳಿಗೆ ತುಂಬಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಗೋದಾಮಿಗೆ ದಾಳಿ ಮಾಡಿ ಪಡುಬಿದ್ರಿ ಪೋಲಿಸರು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಕಾಪು ತಾಲೂಕಿನ ಸಾಂತೂರಿನಲ್ಲಿ ನಡೆದಿದೆ.
ಅಕ್ರಮವಾಗಿ ಸಿಲಿಂಡರ್ ಗಳಿಗೆ ಅನಿಲ ತುಂಬಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು, ತಹಶಿಲ್ದಾರರ ನಿರ್ದೇಶನದಂತೆ ಆಹಾರ ನಿರೀಕ್ಷಕರ ಜೊತೆಗೂಡಿ ಸಾಂತೂರಿನ ಸಮನ್ಯು ಗ್ಯಾಸ್ ಏಜೆನ್ಸಿ ಗೋದಾಮಿಗೆ ದಾಳಿ ಮಾಡಿ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ರಾಜಸ್ಥಾನ ಮೂಲದ ಸುರೇಂದ್ರ ಕುಮಾರ್ (25) ಹಾಗೂ ಸುಖ್ ದೇವ್(23) ಎಂದು ಗುರುತಿಸಲಾಗಿದೆ. ಉಳಿದಂತೆ ರಾಜಸ್ಥಾನದ ದೇವರಾಮ್ ಹಾಗೂ ಗ್ಯಾಸ್ ಏಜೆನ್ಸಿ ಮಾಲಕಿಯನ್ನು ಇನ್ನಷ್ಟೆ ವಶಕ್ಕೆ ಪಡೆಯ ಬೇಕಾಗಿದೆ.
ಅಂದಾಜು ರೂ.55 ಸಾವಿರ ಮೌಲ್ಯದ 15 ಸಿಲಿಂಡರ್ ಗಳು, ಗ್ಯಾಸ್ ರಿಫಿಲ್ಲಿಂಗ್ ಮಾಡಲು ಬಳಸುವ ಪರಿಕರ, ಲೇಬಲ್‌ಗಳು, ರೂ.15,460 ನಗದು, ಮೊಬೈಲ್‌ಫೋನ್‌ಗಳನ್ನು ವಶಪಡಿಸಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ ಕುತ್ಯಾರು : ಯೋಗ ದಿನಾಚರಣೆ
Posted On: 22-06-2024 07:42AM
ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ, ಕುತ್ಯಾರು ಇಲ್ಲಿ ಜೂ.21ರಂದು 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪತಂಜಲಿ ಯೋಗ ಸಮಿತಿ ಇದರ ಸಕ್ರಿಯ ಸದಸ್ಯರಾಗಿರುವ ಶ್ರೀಪತಿ ಕಾಮತ್ ಹಾಗೂ ಗಣೇಶ್ ಇವರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವ, ವಿವಿಧ ಯೋಗಾಸನಗಳನ್ನು ತಿಳಿಸಿಕೊಟ್ಟರು.
ಸಂಪನ್ಮೂಲ ವ್ಯಕ್ತಿಗಳನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಶಾಲಾ ಶೈಕ್ಷಣಿಕ ಸಲಹೆಗಾರರಾದ ದಿವಾಕರ ಆಚಾರ್ಯ ಗೇರುಕಟ್ಟೆ ಹಾಗೂ ಶಾಲಾ ಪ್ರಾಂಶುಪಾಲರಾದ ಸಂಗೀತಾ, ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳಪು : ಮುಖ್ಯ ಶಿಕ್ಷಕಿ ರಜನಿ ಕೆ ಇವರಿಗೆ ಬೀಳ್ಕೊಡುಗೆ
Posted On: 22-06-2024 07:39AM
ಕಾಪು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳಪು ಇಲ್ಲಿಯ ಮುಖ್ಯೋಪಾಧ್ಯಾಯಿನಿ ರಜನಿ ಕೆ ಇವರ ಬೀಳ್ಕೊಡುಗೆ ಸಮಾರಂಭವು ಜೂನ್ 13 ರಂದು ಬೆಳಪು ಶಾಲೆಯಲ್ಲಿ ನೆರವೇರಿತು.
ಬೀಳ್ಕೊಡುಗೆ ಸಮಾರಂಭದ ನೇತೃತ್ವವನ್ನು ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ವಹಿಸಿದ್ದರು.
ಈ ಸಂದರ್ಭ ಎರ್ಮಾಳ್ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಸುಧೀರ್, ಮುಸ್ತಾಕ್ ಸಾಹೇಬ್, ಬಾಲಕೃಷ್ಣ ಆಚಾರ್ಯ, ಸುರೇಂದ್ರ ಪಣಿಯೂರ್, ಚಂದ್ರಹಾಸ್, ಮಹೇಶ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ ವೃಂದ , ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸೌಮ್ಯಶ್ರೀ ಸ್ವಾಗತಿಸಿದರು. ಅನಸೂಯ ಹಾಗೂ ಲಿಡಿಯ ಮರಿಯಾ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಜಯಲಕ್ಷ್ಮಿ ನಿರೂಪಿಸಿದರು. ಕುಮಾರಿ ಶರ್ಮಿಳಾ ವಂದಿಸಿದರು.
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು : ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ
Posted On: 22-06-2024 07:27AM
ಕಾಪು : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023 -24ನೇ ಸಾಲಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಪು ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿ ಈ ಕಾಲೇಜು ಉತ್ತಮವಾಗಿ ಬೆಳೆದು ಬರಲು ಹಲವು ಶಿಕ್ಷಣ ಪ್ರೇಮಿಗಳ ಕೊಡುಗೆ ಇದೆ. ವಿದ್ಯಾರ್ಥಿಗಳು ಈ ಶೈಕ್ಷಣಿಕ ಸಂಸ್ಥೆಯ ಮೂಲಕ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು, ಪೋಷಕರು, ಹಲವಾರು ಕೊಡುಗೈ ದಾನಿಗಳ ಮೂಲಕ ಈ ಸಂಸ್ಥೆ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸಿದರು. ಕಾಪು ದಂಡ ತೀರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನೀಲಾನಂದ ನಾಯ್ಕ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಮನೋಭಾವದಲ್ಲಿ ಬಹಳಷ್ಟು ಬದಲಾವಣೆಯಾಗುತ್ತಿದ್ದು, ವಿದ್ಯಾರ್ಥಿಗಳು ಹೆಚ್ಚು ಹೊತ್ತು ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದು ಅವರ ಜೀವನದ ದಿಕ್ಕನ್ನು ಬದಲಾಯಿಸಿ ಕಷ್ಟಕ್ಕೆ ಎಡೆ ಮಾಡಿಕೊಡುತ್ತಿದೆ. ವಿದ್ಯಾರ್ಥಿಗಳು ಪೋಷಕರು, ಗುರುಗಳು, ಹಿರಿಯರ, ಮಾರ್ಗದರ್ಶನದಲ್ಲಿ ನಡೆದು ಗುರು ಹಿರಿಯರಿಗೆ ವಿಧೇಯರಾಗಿ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು. ಸರಕಾರಿ ಪದವಿ ಪೂರ್ವ ಕಾಲೇಜು ಪೊಲಿಪುವಿನ ಉಪನ್ಯಾಸಕ ಸುಧಾಕರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸನ್ಮಾನ/ ಗೌರವ : ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿತ ಕರ್ಕೇರ ಮತ್ತು ಇತಿಹಾಸ ವಿಭಾಗದ ಡಾ. ಮೆಹೆಬೂಬ್ ಸಾಬ್ ಡಿಪಿ ಅವರನ್ನು ಈ ಶೈಕ್ಷಣಿಕ ಸಾಲಿನಲ್ಲಿ ಪಿಎಚ್ಡಿ ಪದವಿ ಪಡೆದುದಕ್ಕಾಗಿ ಸನ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಯಮುನಪ್ಪ ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿರುವುದರಿಂದ ಗುರುತಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋಪಾಲಕೃಷ್ಣ ಎಂ ಗಾಂವ್ಕರ್ ವಹಿಸಿದ್ದರು. ಪೋಷಕ -ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಜಾತ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ದೀಪಿಕಾ ಸುವರ್ಣ, ಸಾಂಸ್ಕೃತಿಕ ಸಂಘದ ಸಂಚಾಲಕ್ಕೆ ಡಾ. ನಾಯನ ಎಲ್ ಎಂ, ಐಕ್ಯೂಎಸ್ ಸಿ ಘಟಕದ ಸಂಚಾಲಕಿ ಡಾ. ರೋಷನೀ ಯಶ್ವಂತ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಮತಿ ಸವಿತಾ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿ ಸಮಿತಿಯ ಅಧ್ಯಕ್ಷರಾದ ಕುಮಾರಿ ಕವಿತಾ ಸ್ವಾಗತಿಸಿದರು. ಕುಮಾರಿ ಶರಣ್ಯ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸುಶ್ಮಿತಾ ವಂದಿಸಿದರು.
ಹೆದ್ದಾರಿಯಲ್ಲಿ ಬಸ್ ಹಿಂಬದಿಗೆ ಕಾರು ಢಿಕ್ಕಿ ; ಮಹಿಳೆಗೆ ಗಾಯ
Posted On: 21-06-2024 08:55PM
ಪಡುಬಿದ್ರಿ : ಪ್ರಯಾಣಿಕರನ್ನು ಹತ್ತಿಸಲು ನಿಲ್ಲಿಸಿದ್ದ ಸರ್ವಿಸ್ ಬಸ್ ಗೆ ಕಾರೊಂದು ಢಿಕ್ಕಿ ಹೊಡೆದ ಘಟನೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಸರ್ವಿಸ್ ಬಸ್ ಪ್ರಯಾಣಿಕರನ್ನು ಹತ್ತಿಸಲು ಹೆದ್ದಾರಿಯಲ್ಲಿ ಹಠಾತ್ತ್ ನಿಲ್ಲಿಸಿದ್ದರಿಂದ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ಬಸ್ ನ ಹಿಂಬದಿಗೆ ಗುದ್ದಿದೆ. ಘಟನೆಯಲ್ಲಿ ಕಾರಿನಲ್ಲಿ ಚಾಲಕನ ಪಕ್ಕದಲ್ಲಿದ್ದ ಮಹಿಳೆ ಮಂಗಳೂರು ನಿವಾಸಿ ಪುಷ್ಪಲತಾ ಆಚಾರ್ಯರಿಗೆ ಮುಖ, ಕೈ, ಕಾಲುಗಳಿಗೆ ಗಾಯವಾಗಿದ್ದು ತಕ್ಷಣ ಪಡುಬಿದ್ರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದಂತೆ ಮಹಿಳೆಯರು ಕಾರಲ್ಲಿ ಇದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ.
ಸರ್ವಿಸ್ ರಸ್ತೆಗೆ ಇಳಿಯದ ಕೆಲವು ಬಸ್ಸುಗಳು : ಅಗಲ ಕಿರಿದಾದ ರಾಷ್ಟ್ರೀಯ ಹೆದ್ದಾರಿ, ಸರ್ವಿಸ್ ರಸ್ತೆಗಳಿಂದಾಗಿ ಜನರಿಗೆ ತೊಂದರೆಯಾಗಿದೆ. ಉಡುಪಿ ಕಡೆಗೆ ಸಾಗುವ ಬಸ್ ಗಳ ತಂಗುದಾಣ ಸರ್ವಿಸ್ ರಸ್ತೆಯಲ್ಲಿದ್ದರೂ ಕೆಲವೊಂದು ಬಸ್ ಗಳು ಸರ್ವಿಸ್ ರಸ್ತೆಗೆ ಬಾರದೆ ರಾಷ್ಟ್ರೀಯ ಹೆದ್ದಾರಿಯಲ್ಲೇ ನಿಲ್ಲುತ್ತಿದೆ. ಬಸ್ ಬಂದ ತಕ್ಷಣ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನ ಗಮನಿಸದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲುವ ಬಸ್ ಗಳೆಡೆ ಸಾಗುವ ಭರದಲ್ಲಿ ಸರ್ವಿಸ್ ರಸ್ತೆಯಲ್ಲಿ ಸಾಗುವ ವಾಹನ ಸವಾರರಿಗೂ ಇದು ಸವಾಲಾಗಿದೆ. ಇದು ಅಪಘಾತಗಳಿಗೆ ಎಡೆ ಮಾಡಿದಂತಿದೆ. ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕಾಪು : ಈ ದಿನ ಮಾನ್ಯ ತಹಶಿಲ್ದಾರ್ ಪ್ರತಿಭಾ ಆರ್ ರವರ ನೇತೃತ್ವದಲ್ಲಿ
Posted On: 21-06-2024 05:08PM
ಕಾಪು : ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಶಿಲ್ದಾರ್ ಪ್ರತಿಭಾ ಆರ್ ರವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ತಹಶಿಲ್ದಾರ್ ಪ್ರತಿಭಾ ಆರ್, ಯೋಗದಿಂದ ದೈಹಿಕ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಉತ್ತಮಗೊಳ್ಳುತ್ತದೆ. ಆದ್ದರಿಂದ ಎಲ್ಲರೂ ಯೋಗ ಅನ್ನು ದಿನ ನಿತ್ಯದ ಚಟುವಟಿಕೆಯ ಭಾಗವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯೋಗ ಗುರುಗಳಾದ ರವಿ ಬಂಗೇರ ಮತ್ತು ಶೈಲಜಾ ಇವರು ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.
ತಾಲ್ಲೂಕು ಆಡಳಿತದ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಪು : ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆ
Posted On: 21-06-2024 04:22PM
ಕಾಪು : ಇಲ್ಲಿನ ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ ಎನ್.ಸಿ.ಸಿ, ಸ್ಕೌಟ್ಸ್-ಗೈಡ್ಸ್, ಎನ್.ಎಸ್.ಎಸ್., ಕಬ್-ಬುಲ್-ಬುಲ್ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜೇಸಿ ವಲಯ 15ರ ಪೂರ್ವ ಉಪಾಧ್ಯಕ್ಷ, ಯೋಗಶಿಕ್ಷಕ ಮಕರಂದ ಇವರು ಯೋಗದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಪ್ರಾಂಶುಪಾಲರಾದ ನೀಲಾನಂದ ನಾಯ್ಕ ಇವರು ಸಭಾಧ್ಯಕ್ಷತೆ ವಹಿಸಿ, ಯೋಗದ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗೇಬ್ರಿಯಲ್ ಮಸ್ಕರೇನಸ್, ಕಾರ್ಯಕ್ರಮದ ನಿರ್ದೇಶಕಿ ಶೋಭಾ ವಿವಿಧ ಯುನಿಟ್‌ಗಳ ಮಾರ್ಗದರ್ಶಕರಾದ, ತೇಜಸ್ವಿನಿ, ವೀಣಾ ನಾಯಕ್, ಉದಯಕುಮಾರ್, ಹೇಮಲತಾ, ಪ್ರಭಾಕರ ಶೆಟ್ಟಿ, ಸುರಥ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ, ರಿತಿಕಾ ಶೆಟ್ಟಿ, ಸಾನ್ವಿ ಶೆಟ್ಟಿ, ಗೌರಿ ನಾಯಕ್, ಆಯಿಷಾ ಮಿಸ್ಬಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.