Updated News From Kaup

ಕಾಂತಾವರ ಕನ್ನಡ ಸಂಘ: ಕೆ.ಪಿ.ರಾವ್, ಕುಂಡಂತಾಯ, ಖಂಡಿಗೆ, ಮುರಲಿ ಅವರಿಗೆ ಪ್ರಶಸ್ತಿ ಪ್ರದಾನ

Posted On: 14-12-2020 10:14AM

ಕಾಂತಾವರ ಕನ್ನಡ ಸಂಘದ 2020 ನೇ ಸಾಲಿನ‌ ದತ್ತಿನಿಧಿಗಳ ಪ್ರಶಸ್ತಿ ಪ್ರಧಾನ ಸಮಾರಂಭವು ಡಿ.13 ರಂದು‌ ಕಾಂತಾವರದ ಕನ್ನಡ ಸಂಘದಲ್ಲಿ ನೆರವೇರಿತು . ಕ.ಸಾ.ಪ .ದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿದ್ದರು .ಕಾಂತಾವರ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ ಡಾ. ನಾ.ಮೊಗಸಾಲೆ‌ ಉಪಸ್ಥಿತರಿದ್ದರು.

ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. 'ಜಿನರಾಜ ಹೆಗ್ಡೆ ಸ್ಮಾರಕ ಪ್ರಶಸ್ತಿ'ಯನ್ನು‌ 'ಭಾರತೀಯ ಭಾಷಾ ಗಣಕ ಪಿತಾಮಹ‌' ನಾಡೋಜ‌ ಕೆ.ಪಿ.ರಾವ್ ಅವರಿಗೆ . ಭಾಷಾ ವಿಜ್ಞಾನಿ ಡಾ.ಯು.ಪಿ .ಉಪಾಧ್ಯಾಯರ ದತ್ತಿನಿಧಿಯ 'ಸಂಶೋಧನಾ ಮಹೋಪಾಧ್ಯಾಯ ಪ್ರಶಸ್ತಿ'ಯನ್ನು ವಿದ್ವಾಂಸ , ಚಿಂತಕ ಕೆ.ಎಲ್.ಕುಂಡಂತಾಯ ಅವರಿಗೆ .ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ‌‌ ದಂಪತಿ‌ ಕಾಂತಾವರ ಸರೋಜಿನಿ‌ ನಾಗಪ್ಪಯ್ಯ ಈಶ್ವರಮಂಗಲ ಇವರ ದತ್ತಿನಿಧಿಯ 'ಕಾಂತಾವರ ಪ್ರಶಸ್ತಿ'ಯನ್ನು ಸಾಹಿತಿ‌,ಚಿಂತಕ ಟಿ.ಎ.ಎನ್. ಖಂಡಿಗೆ ಅವರಿಗೆ . ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಂಪತಿ ದಿವಂಗತ ಕೆ.ಬಾಲಕೃಷ್ಣ ಆಚಾರ್ಯ ಮತ್ತು ವಾಣಿ ಬಿ. ಆಚಾರ್ಯ ಅವರ ದತ್ತಿನಿಧಿಯಿಂದ 'ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ'ಯನ್ನು ಅಪರೂಪದ ನಿವೃತ್ತ ಶಿಕ್ಷಕ ಮುರಳಿ‌ ಕಡೆಕಾರ್ ,ಉಡುಪಿ‌ ಅವರಿಗೆ ಪ್ರದಾನಿಸಲಾಯಿತು .

ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ನಿರಂಜನ ಮೊಗಸಾಲೆ, ಪ್ರ.ಕಾರ್ಯದರ್ಶಿ ಸದಾನಂದ ನಾರಾವಿ, ಸಂಚಾಲಕ ವಿಠಲ ಬೇಲಾಡಿ, ಉಪಾಧ್ಯಕ್ಷ ಸತೀಶ ಕುಮಾರ್ ಕೆಮ್ಮಣ್ಣು ಅವರು ಉಪಸ್ಥಿತರಿದ್ದರು .

ಕೊಡಪಾನದೊಳಗೆ ತಲೆ ಸಿಲುಕಿ ನಾಯಿಯ ಪೇಚಾಟ

Posted On: 13-12-2020 07:59PM

ಕಟಪಾಡಿ: ಅನಾವಶ್ಯಕ ವಿಷಯಕ್ಕೆ ಮೂಗು ತೂರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ... ! ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗುವುದು ನಿಚ್ಚಳ. ಮರಳಿ ಸುರಕ್ಷತೆಯನ್ನು ಪಡೆಯಲು ಮತ್ತಷ್ಟು ಕರುಣಾಮಯಿ ಜನರನ್ನು ಅವಲಂಭಿಸಿದ ಘಟನೆಯು ಉದ್ಯಾವರದಲ್ಲಿ ನಡೆದಿದೆ. ಉದ್ಯಾವರ ಶ್ರೀ ಶಂಭುಶೈಲೇಶ್ವರ ದೇಗುಲದ ಅರ್ಚಕರ ಮನೆಯ ಬಳಿಯಲ್ಲಿ ಬೆಳ್ಳಂಬೆಳಗ್ಗೆಯೇ 6.30 ಗಂಟೆಯ ಸುಮಾರಿಗೆ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

ಇಲ್ಲಿ ಅಪರಿಚಿತ ಬೀದಿ ನಾಯಿಯೊಂದು ಅಲ್ಯುಮೀನಿಯಂ ಕೊಡಪಾನದಲ್ಲಿ ಮೂಗು ತೂರಿಸಲು ಹೋಗಿ ತಲೆಯೇ ಸಿಲುಕಿಸಿಕೊಂಡು ಅಪಾಯಕಾರಿಯಾದ ಪರಿಸ್ಥಿತಿಯಲ್ಲಿ ಕಂಡು ಬಂದಿತ್ತು. ಎಲ್ಲಿಂದಲೋ ಬಂದಿದ್ದ ಶ್ವಾನದ ಈ ದುಸ್ಥಿಯನ್ನು ಕಂಡ ಅರ್ಚಕ ಗಣಪತಿ ಆಚಾರ್ಯರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಕೂಡಲೇ ಸ್ಥಳೀಯರ ಸಹಕಾರವನ್ನು ಯಾಚಿಸಿದ್ದು, ಸೋಮನಾಥ ಉದ್ಯಾವರ, ರಾಕೇಶ್ ಉದ್ಯಾವರ ಮತ್ತಿತರರು ಬಂದು ಸುಮಾರು ಒಂದು ಗಂಟೆಗೂ ಮಿಕ್ಕಿದ ಕಾಲ ಸಾಕಷ್ಟು ಹರಸಾಹಸ ಪಟ್ಟು ತಾವೂ ಕೂಡಾ ಅಪಾಯವನ್ನು ಎದುರಿಸಿಕೊಂಡು ಕೊಡಪಾನದ ಬಾಯಿಯನ್ನು ತುಂಡರಿಸಿ ನಾಯಿಯನ್ನು ಸ್ವತಂತ್ರಗೊಳಿಸಿದರು.

ಯುವವಾಹಿನಿ ಪಡುಬಿದ್ರಿ ಘಟಕದಿಂದ ಶ್ರಮದಾನ

Posted On: 13-12-2020 01:20PM

ಯುವವಾಹಿನಿ ಪಡುಬಿದ್ರಿ ಘಟಕದ ಸದಸ್ಯರು ಕಲ್ಲಟ್ಟೆ ಜಾರಂದಾಯ ದೈವಸ್ಥಾನಕ್ಕೆ ಹೋಗುವ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಶ್ರೀಮತಿ ಚಿತ್ರಾಕ್ಷಿ ಕೆ. ಕೋಟ್ಯಾನ್ , ಕಾರ್ಯದರ್ಶಿ ಶಾಶ್ವತ್ ಎಸ್. ಪೂಜಾರಿ, ಸಮಾಜ ಸೇವಾ ನಿರ್ದೇಶಕಿ ಶ್ರೀಮತಿ ಲತಾ ವಸಂತ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ನಿಧನ

Posted On: 13-12-2020 12:53PM

ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಅಮೋಘ ಪಾಂಡಿತ್ಯದ ಮೂಲಕ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು ಇಂದು ಬೆಳಿಗ್ಗೆ 11 ಗಂಟೆಗೆ ಉಡುಪಿಯ ಅಂಬಲಪಾಡಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರಿಗೆ 84 ವರ್ಷ ವಯಸ್ಸಾಗಿತ್ತು. ಹಲವು ತಿಂಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಅನುವಾದವನ್ನು ಮಾಡಿರುತ್ತಾರೆ. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

ತುಳುಲಿಪಿಯಲ್ಲಿಯೂ ಪಾಂಡಿತ್ಯವಿದ್ದ ಇವರು ಉಡುಪಿ ಮಠದಲ್ಲಿದ್ದ ತುಳು ಲಿಪಿಯ ಎಲ್ಲಾ ಗ್ರಂಥಗಳಿಗೆ ವ್ಯಾಖ್ಯಾನವನ್ನು ಬರೆದವರಾಗಿದ್ದಾರೆ. ಜ್ಞಾನ ಹಂಚಲು ತುಡಿಯುವ ಮನಸ್ಸುಳ್ಳವರಾಗಿದ್ದರು.

ಕರಾವಳಿ ಶಾಸಕರುಗಳ ಪ್ರಯತ್ನ ಶ್ಲಾಘನೀಯ : ಪ್ರವೀಣ್ ಎಂ. ಪೂಜಾರಿ

Posted On: 13-12-2020 12:20PM

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮರ ವೀರರಾದ ಕೋಟಿ ಚೆನ್ನಯರ ಹೆಸರನ್ನಿಡಬೇಕೆಂದು ಕರಾವಳಿಯ ಶಾಸಕರು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮಾನ್ಯ ಮುಖ್ಯಮಂತ್ರಿಗೆ ಮನವಿ ನೀಡಿರುವುದು ಅಭಿನಂದನಾರ್ಹ ಸಂಗತಿ.ಸಮಸ್ತ ಸಮಾಜದ ಸಮಂಜಸವಾದ ಬೇಡಿಕೆಯನ್ನು ಈಡೇರಿಸುವ ಕುರಿತಾದ ಜನಪ್ರತಿನಿಧಿಗಳ ನಿರ್ಧಾರ ಮೆಚ್ಚುವಂತದ್ದು.

ಈ ಪ್ರಯತ್ನವು ಮುಂದುವರಿಯಲಿ.ಕೋಟಿ ಚೆನ್ನಯರ ಹೆಸರು ನೋಂದಣಿಯಾಗುವವರೆಗೂ ಇಚ್ಚಾಶಕ್ತಿಯಿಂದ ಜನಪ್ರತಿನಿಧಿಗಳಲ್ಲಿ ಒಮ್ಮತದ ಬದ್ದತೆಯಿರಲಿ ಎಂದು ಬಯಸುತ್ತೇವೆ.ಹಲವಾರು ಸಂಘಟನೆಗಳ ಬೇಡಿಕೆಯನ್ನು ಪರಿಗಣಿಸಿ ಕೋಟಿಚೆನ್ನಯರ ಹೆಸರೇ ಹೆಚ್ಚು ಸೂಕ್ತವೆನಿಸಿದ್ದು ಸಾರ್ವಕಾಲಿಕ ಸತ್ಯಕ್ಕೆ ಸಂದ ಅತಿಶ್ರೇಷ್ಠ ಗೌರವವಾಗಿದೆ. ಇಂತಹ ಒಳ್ಳೆಯ ನಡೆಗೆ ಸದಾ ನಮ್ಮ ಸಹಮತವಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಎಂ. ಪೂಜಾರಿ ತಿಳಿಸಿದ್ದಾರೆ.

ಕಲ್ಲುಗುಡ್ಡೆ : ದೀಪ ಸಂಭ್ರಮ, ನೂತನ ಪಂಚಮಿ ಭಜನಾ ಮಂಡಳಿ ಉದ್ಘಾಟನೆ

Posted On: 12-12-2020 06:48PM

ಶ್ರೀ ಪಂಚದೈವಿಕ ನಾಗಬ್ರಹ್ಮಸ್ಥಾನ ಕುಂಜ ಕಲ್ಲುಗುಡ್ಡೆ ಕ್ಷೇತ್ರದಲ್ಲಿ ನೂತನ ಪಂಚಮಿ ಭಜನಾ ಮಂಡಳಿಯನ್ನು ದೀಪ ಬೆಳಗಿ ಉದ್ಘಾಟಿಸಲಾಯಿತು.

ಇದೇ ಸಂದರ್ಭ ನಡೆದ ದೀಪಸಂಭ್ರಮದಲ್ಲಿ ಪ್ರತಿಯೊಬ್ಬರೂ ದೀಪ ಬೆಳಗಿ ನಮ್ಮ ಬಾಳಿನ ಕತ್ತಲನ್ನು ಹೋಗಲಾಡಿಸೆಂದು ಅಶ್ವಥ ನಾರಾಯಣ ಒಡಗೂಡಿ ಪಂಚದೈವಾದಿ ನಾಗಬ್ರಹ್ಮನಲ್ಲಿ ಪ್ರಾರ್ಥಿಸಲಾಯಿತು. ಭಜನಾ ಕಾರ್ಯಕ್ರಮವು ನಡೆಯಿತು. ಇದೇ ಸಂದರ್ಭ ಮಂಡಳಿಗೆ ತಾಳ ಹಸ್ತಾಂತರಿಸುವುದರ ಮೂಲಕ ಕುಣಿತ ಭಜನೆಗೆ ಚಾಲನೆ ನೀಡಲಾಯಿತು.

ಸಮಾಜದ ಶಾಂತಿ ಕಾಪಾಡುವಲ್ಲಿ ಗೃಹರಕ್ಷಕರ ಕೊಡುಗೆ ಅಪಾರ-ಜಿಲ್ಲಾಧಿಕಾರಿ ಜಿ. ಜಗದೀಶ್

Posted On: 11-12-2020 05:19PM

ಉಡುಪಿ, ಡಿಸೆಂಬರ್ 11 : ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ರಕ್ಷಕದಳವು ಪೊಲೀಸರಿಗೆ ಸಮನ್ವಯದೊಂದಿಗೆ ಪೂರಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅವರು ಇಂದು ಜಿಲ್ಲಾ ಗೃಹ ರಕ್ಷಕದಳದ ಕಚೇರಿ ಆವರಣದಲ್ಲಿ ನಡೆದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಗೃಹರಕ್ಷಕದಳ ದಿನಾಚರಣೆಯನ್ನು ರಕ್ತದಾನ ಮಾಡುವ ಮೂಲಕ ಆಚರಿಸುತ್ತಿರುವುದು ಉತ್ತಮ ವಿಚಾರ. ಒಬ್ಬ ವ್ಯಕ್ತಿ ರಕ್ತದಾನ ಮಾಡುವ ಮೂಲಕ ನಾಲ್ಕು ಜನರ ಜೀವ ಉಳಿಸಿದಂತಾಗುತ್ತದೆ. ರಕ್ತದಾನ ಮಾಡುವುದರಲ್ಲಿ ಉಡುಪಿಯು ಮಾದರಿ ಜಿಲ್ಲೆಯಾಗಿದ್ದು, ಈ ನಿಟ್ಟಿನಲ್ಲಿ ಕೈಜೋಡಿಸಿದ ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ತುರ್ತು ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಗೃಹ ರಕ್ಷಕದಳದವರ ಪಾತ್ರ ಬಹಳ ಮುಖ್ಯ. ಇಂತಹ ಸಂದರ್ಭಗಳಲ್ಲಿ ಅತ್ಯಂತ ಕಾಳಜಿ ವಹಿಸಿ, ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುವುದರ ಮೂಲಕ ಸೇವೆ ಸಲ್ಲಿಸುತ್ತಿದ್ದು, ಪೊಲೀಸ್ ಇಲಾಖೆಯವರು ಸೂಚಿಸಿದ ಕರ್ತವ್ಯಗಳನ್ನು ಅವರೊಂದಿಗೆ ಸಮನ್ವಯ ಸಾಧಿಸಿ, ಉತ್ತಮವಾಗಿ ನಿರ್ವಹಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗೃಹರಕ್ಷಕರ ಕೊಡುಗೆ ಅವಿಸ್ಮರಣೀಯ. ಕಾಪು ಬೀಚಿನಲ್ಲಿ ಡಾ. ಪ್ರಶಾಂತ ಶೆಟ್ಟಿಯವರ ನೇತೃತ್ವದಲ್ಲಿ ಉತ್ತಮ ಕೆಲಸ ನಿರ್ವಹಣೆ ತೋರುತ್ತಿದ್ದು, ಮಲ್ಪೆ ಬೀಚ್‌ನಲ್ಲಿ ಈಜು ಪರಿಣಿತಿ ಹೊಂದಿರುವ ಗೃಹ ರಕ್ಷಕ ಸಿಬ್ಬಂದಿಯವರನ್ನು ನೇಮಕ ಮಾಡಲಾಗಿದ್ದು, ಪ್ರವಾಸೋದ್ಯಮ ಕ್ಷೇತ್ರ ರಕ್ಷಣೆಯ ಜೊತೆಗೆ ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಮಾತನಾಡಿ, ಗೃಹ ರಕ್ಷಕರು ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿ ಕೆಲಸ ನಿರ್ವಹಿಸುತ್ತಿದ್ದು, ಗೃಹ ರಕ್ಷಕದಳದ ಸಿಬ್ಬಂದಿಗಳು ಸಮಾಜ ಮತ್ತು ನಾಗರಿಕರ ರಕ್ಷಣೆಗೆ ಬದ್ಧವಾಗಿದ್ದಾರೆ ಎಂದರು. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಗೃಹ ರಕ್ಷಕದಳದ ಸ್ವಯಂ ಸೇವಕರ ತ್ಯಾಗ ಮೆಚ್ಚುವಂತದ್ದು. ಈ ನಿಟ್ಟಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಇವರ ಕೊಡುಗೆ ಅಪಾರ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಮಾಂಡೆಂಟ್ ಡಾ. ಕೆ. ಪ್ರಶಾಂತ್ ಶೆಟ್ಟಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 500 ಗೃಹ ರಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಉಡುಪಿ, ಮಣಿಪಾಲ, ಕಾಪು, ಪಡುಬಿದ್ರೆ, ಕಾರ್ಕಳ, ಬ್ರಹ್ಮಾವರ, ಕುಂದಾಪುರ ಹಾಗೂ ಬೈಂದೂರು ಒಟ್ಟು 8 ಘಟಕಗಳಿವೆ. ಅಲ್ಲದೇ ಪ್ರವಾಸೋದ್ಯಮ ಇಲಾಖೆ, ಆರ್.ಟಿ.ಓ ಆಫೀಸ್, ಎನ್.ಸಿ.ಸಿ, ಕಾರಾಗೃಹದಲ್ಲಿ ಗೃಹರಕ್ಷಕ ದಳದವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಧೈರ್ಯದಿಂದ ಕಾರ್ಯ ನಿರ್ವಹಿಸಿ, ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.

ಗೃಹರಕ್ಷಕದಳ ದಿನಾಚರಣೆಯ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾದ ಪೊಲೀಸ್ ಅಧೀಕ್ಷಕರಾದ ಎನ್. ವಿಷ್ಣುವರ್ಧನ್, ಉಪಾಧೀಕ್ಷಕರಾದ ಜಯಶಂಕರ, ವೃತ್ತ ನಿರೀಕ್ಷಕರಾದ ಮಂಜುನಾಥ, ಕಾನ್ಸ್ಟೇಬಲ್ ಸಂತೋಷ್, ಜಿಲ್ಲಾ ಕಮಾಂಡೆಂಟ್ ಡಾ. ಪ್ರಶಾಂತ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಕೃಷ್ಣ ಪ್ರಸಾದ್ ಕೂಡ್ಲು ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ, ಉಡುಪಿ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಗೃಹ ರಕ್ಷಕದಳದ ಸೆಕೆಂಡ್ ಇನ್ ಕಮಾಂಡ್ ಕೆ.ಸಿ ರಾಜೇಶ್ ಸ್ವಾಗತಿಸಿದರು, ಪ್ರಥಮ ದರ್ಜೆ ಸಹಾಯಕಿ ಶ್ಯಾಮಲ ವಂದಿಸಿದರು, ಸಾಯಿನಾಥ್ ಉದ್ಯಾವರ ನಿರೂಪಿಸಿದರು.

ಕುತ್ಯಾರು : ಕೊನೆಗೂ ರಸ್ತೆ ಹೊಂಡಕ್ಕೆ ಸಿಕ್ಕಿತು ಮುಕ್ತಿ

Posted On: 11-12-2020 01:41PM

ಮುದರಂಗಡಿ- ಶಿರ್ವ ಮುಖ್ಯರಸ್ತೆಯ ಕುತ್ಯಾರು ಬ್ಯಾಂಕ್ ಆಫ್ ಬರೋಡ ಬಳಿ ಪೈಪ್ ಅಳವಡಿಸಲು ಅಗೆಯಲಾಗಿದ್ದ ರಸ್ತೆಯನ್ನು ಇಲಾಖೆ ಗುರುವಾರ ಸರಿಪಡಿಸಿ ಡಾಮರೀಕರಣಗೊಳಿಸಿದೆ.

ತಿರುವಿನ ರಸ್ತೆಯಲ್ಲಿ ಹೊಂಡ ಉಂಟಾಗಿ ತಿಂಗಳುಗಳೇ ಕಳೆದು ಸಣ್ಣಪುಟ್ಟ ಅಪಘಾತಗಳಾಗಿ ಜೊತೆಗೆ ಡಾಮರೀಕರಣಕ್ಕಾಗಿ ಜಲ್ಲಿ ಹಾಕಲಾಗಿದ್ದು ಪರಿಸರವಿಡೀ ಧೂಳುಮಯವಾಗಿತ್ತು.

ಇದೀಗ ಈ ರಸ್ತೆಯನ್ನು ಸರಿಪಡಿಸಿದ್ದು ಸ್ಥಳೀಯರು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ತಕ್ಷಣ ಸ್ಪಂದಿಸಿದ ಅಧಿಕಾರಿವರ್ಗ, ಗುತ್ತಿಗೆದಾರರಿಗೆ ಕುತ್ಯಾರು ಅರಮನೆ ಜಿನೇಶ್ ಬಲ್ಲಾಳ್ ಹಾಗೂ ಕುತ್ಯಾರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂಪತ್ ಕುಮಾರ್ ಕೇಂಜ ಸಾರ್ವಜನಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

Posted On: 10-12-2020 09:55PM

ಲಿಯೋ ಕ್ಲಬ್ ಯುವ ಶಕ್ತಿ Dist 317C ಆರ್ಡಿ-ಬೆಳ್ವೆ-ಗೋಳಿಯಂಗಡಿ ಅರ್ಪಿಸುವ ರಾಜ್ಯ ಮಟ್ಟದ ಕೋವಿಡ್ -19ರಿಂದ ನಾನು ಕಲಿತ ಪಾಠ (Lesson I learnt from covid -19) ಎಂಬ ವಿಷಯದ ಪ್ರಬಂಧ ಸ್ಪರ್ಧೆಯು ಕರ್ನಾಟಕ ರಾಜ್ಯದಲ್ಲಿ ಕಲಿಯುತ್ತಿರುವ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರವಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಇದ್ದು, ಪ್ರತಿ ಭಾಷಾ ವಿಭಾಗದಲ್ಲಿ ಎರಡು ಬಹುಮಾನಗಳಿವೆ, ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ. ಪ್ರಬಂಧದಲ್ಲಿ ಕನಿಷ್ಠ 500 ಪದಗಳು ಮತ್ತು ಗರಿಷ್ಠ 1000 ಪದಗಳು ಇರಬೇಕು. ಪ್ರಬಂಧವನ್ನು ಪಿಡಿಎಫ್ ರೂಪದಲ್ಲಿ lcyuvashakthi20@gmail.com ಗೆ ಕಳುಹಿಸಬೇಕು.

ಪ್ರಬಂಧ ಸಲ್ಲಿಕೆಗೆ ಕೊನೆಯ ದಿನಾಂಕ 15/01/2021 ಫಲಿತಾಂಶವನ್ನು ನಮ್ಮ ಫೇಸ್‌ಬುಕ್ ಪುಟದಲ್ಲಿ ಘೋಷಿಸಲಾಗುತ್ತದೆ (ಪುಟದ ಹೆಸರು) leo club yuva shakthi ಭಾಗವಹಿಸುವವರು ತಮ್ಮ ಪ್ರಬಂಧದೊಂದಿಗೆ ಹೆಸರು, ವಯಸ್ಸು, ಕಾಲೇಜಿನ ಹೆಸರು, ವಸತಿ ವಿಳಾಸ ಮತ್ತು ಸಂಪರ್ಕ ಸಂಖ್ಯೆ ಕಳುಹಿಸಬೇಕು. ಪ್ರಬಂಧವು ಯಾವುದೇ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿರಬಾರದು. ಲಿಯೋ ಕ್ಲಬ್ ಯುವ ಶಕ್ತಿ ಕಾರ್ಯದರ್ಶಿ ರಯಾನ್ ಫರ್ನಾಂಡೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಟಕಲ್ಲು ದಿ. ಬಿ ರಾಮಚಂದ್ರ ಪ್ರಭು ಶ್ರದ್ಧಾಂಜಲಿ - ನುಡಿ ನಮನ ಕಾರ್ಯಕ್ರಮ

Posted On: 10-12-2020 08:09PM

ಕಳೆದ ಶುಕ್ರವಾರದಂದು ನಿಧನರಾದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯೋಪದಾಯರಾಗಿದ್ದ ಪಂಜಿಮಾರು ಕುರುಡೈ ರಾಮಚಂದ್ರ ಪ್ರಭುರವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮವು ಶಾಲಾ ಆಡಳಿತ ಮಂಡಳಿ, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬಂಟಕಲ್ಲು2 ಶಾಲೆಯಲ್ಲಿ ನಡೆಯಿತು.

ವೇದಿಕೆಯಲ್ಲಿದ್ದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ಶ್ರೀ ಶಶಿಧರ ವಾಗ್ಲೆ, ಶಾಲಾ ಸಂಚಾಲಕ ಶ್ರೀ ಜಯರಾಮ್ ಪ್ರಭುರವರು ರಾಮಚಂದ್ರ ಪ್ರಭುಗಳವರ 32 ವರ್ಷಗಳ ಸೇವೆಯನ್ನು ಸ್ಮರಿಸಿ ಅವರಿಗೆ ಶ್ರದ್ಧಾಂಜಲಿ ಕೋರಿ ನುಡಿನಮನ ಸಲ್ಲಿಸಿದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ವಿಶ್ವನಾಥ ಪ್ರಭು ಕೇಂಜ, ಹಿರಿಯ ನಿವೃತ್ತ ಶಿಕ್ಷಕಿ ಶ್ರೀಮತಿ ಲೀಲಾವತಿ ಪಾಟ್ಕರ್, ಶಾಲಾ ದಾನಿಗಳಾದ ಶ್ರೀ ಲುವಿಸ್ ಮಾರ್ಟೀಸ್ ಬಂಟಕಲ್ಲು, ಶ್ರೀ ರಾಮಚಂದ್ರ ನಾಯಕ್ ಪಡುಬೆಳ್ಳೆ, ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀ ವಿಜಯ್ ಧೀರಜ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಾವಣ್ಯವತಿ ಬಾಯಿ, ನಾಗರೀಕ ಸೇವಾ ಸಮಿತಿ ಬಂಟಕಲ್ಲು ಇದರ ಕಾರ್ಯದರ್ಶಿ ಶ್ರೀ ದಿನೇಶ್ ದೇವಾಡಿಗ, ವಿಶ್ವಕರ್ಮ ಸಂಘದ ಕಾರ್ಯದರ್ಶಿ ಶ್ರೀ ಜಗದೀಶ ಆಚಾರ್ಯ, ಹಳೇವಿದ್ಯಾರ್ಥಿ ಶ್ರೀ ವೀರೇಂದ್ರ ಶೆಟ್ಟಿ, ರಾಜಾಪುರ ಸಾರಸ್ವತ ಯುವ ವೃಂದದ ಅಧ್ಯಕ್ಷ ವಿಶ್ವನಾಥ ಬಾಂದೆಲ್ಕರ್, ದಿವಂಗತ ರಾಮಚಂದ್ರ ಪ್ರಭುರವರ ಸುಪುತ್ರ ಶ್ರೀನಿಧಿ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಳೇವಿದ್ಯಾರ್ಥಿಗಳಾದ ಹಾಗೂ ದಿ. ಪ್ರಭುಗಳ ಶಿಷ್ಯರಾದ ಶ್ರೀ ಶ್ರೀನಿವಾಸ್ ಪ್ರಭು, ಶ್ರೀ ರಮಾನಾಥ್ ಪಾಟ್ಕರ್, ಶ್ರೀ ದತ್ತಾತ್ರೇಯ ಪಾಟ್ಕರ್, ಶ್ರೀ ದೇವದಾಸ್ ಪಾಟ್ಕರ್, ಶ್ರೀ ರಾಜೇಂದ್ರ ಪ್ರಭು, ಶ್ರೇಯಸ್ ಭಟ್ ರವರುಗಳು ದಿವಂಗತ ಪ್ರಭುಗಳವರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ತದನಂತರ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಶಾಲಾಭಿಮಾನಿಗಳು, ಹಳೇವಿದ್ಯಾರ್ಥಿಗಳು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದಿವಂಗತ ಪ್ರಭುರವರ ಶಿಷ್ಯರು, ಅಭಿಮಾನಿಗಳು ಹಾಗೂ ಶಾಲಾ ಶಿಕ್ಷಕಿ ಬಂಧುಗಳು ಭಾಗವಹಿಸಿದ್ದರು. ಶ್ರೀ ಕೆ ಆರ್ ಪಾಟ್ಕರ್ ಅವರು ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.