Updated News From Kaup
ಸೈಂಟ್ ಜೋನ್ಸ್ ಶಾಲೆ : ವಾರ್ಷಿಕ ಮಹಾಸಭೆ

Posted On: 03-12-2020 08:23PM
ಸೈಂಟ್ ಜೋನ್ಸ್ ಶಾಲೆ ಹಳೆ ವಿದ್ಯಾರ್ಥಿ ಸಂಘ ಶಂಕರಪುರ ಇದರ ವಾರ್ಷಿಕ ಮಹಾಸಭೆ ದಿನಾಂಕ 06/12/2020 ಭಾನುವಾರ ಬೆಳಿಗ್ಗೆ 9: 30 ಕ್ಕೆ ಸೈಂಟ್ ಜೋನ್ಸ್ ಹೈಸ್ಕೂಲ್ ಶಂಕರಪುರ ಇಲ್ಲಿ ನಡೆಯಲಿದೆ.
ಸಭೆಯ ನಂತರ ಮನೋರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಸಭೆಯಲ್ಲಿ ಸೈಂಟ್ ಜಾನ್ಸ್ ಶಾಲೆಯಲ್ಲಿ ಕಲಿತ ಎಲ್ಲಾ ಹಳೆ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಯನ್ ಫೆರ್ನಾಂಡಿಸ್ ಕುರ್ಕಾಲು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟಪಾಡಿ : ಪಾಡ್ದನ ಕಲಾವಿದೆ ಗೋಪಿ ಪಾಣಾರರಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ

Posted On: 03-12-2020 06:42PM
ತಂತ್ರಜ್ಞಾನದ ಅತಿಯಾದ ಬಳಕೆಯನ್ನು ಯುವ ಸಮುದಾಯ ಮಾಡುತ್ತಿದ್ದು ಇದರಿಂದ ನಮ್ಮ ಸಂಸ್ಕೃತಿ, ಜಾನಪದ ವಿಚಾರಗಳ ಕಡೆಗೆ ನಿರಾಸಕ್ತರಾಗುತ್ತಿದ್ದಾರೆ. ಮಕ್ಕಳಲ್ಲಿ ಇವೆಲ್ಲದರ ಪರಿಚಯ ಮಾಡಿಕೊಡಬೇಕಾದ ಅನಿವಾರ್ಯತೆಯಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಖರಾಮ ಹಾವಂಜೆ ಹೇಳಿದರು. ಕಟಪಾಡಿಯ ಎಸ್ ವಿ ಎಸ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ತು, ಬೆಂಗಳೂರು ಕನ್ನಡ ಜಾನಪದ ಪರಿಷತ್ತು, ಉಡುಪಿ ಜಿಲ್ಲಾ ಘಟಕ ಮತ್ತು ಕನ್ನಡ ಜಾನಪದ ಪರಿಷತ್ತು, ಕಾಪು ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜರಗಿದ ಕನಕದಾಸ ಜಯಂತಿ ಆಚರಣೆ, ಕನಕದಾಸರ ಗೀತೆಗಳ ಗಾಯನ, ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಟಪಾಡಿ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಕೆ. ಸತ್ಯೇಂದ್ರ ಪೈ ಮಾತನಾಡಿ ಜಾನಪದ ವಸ್ತುವಿಷಯಗಳ ಬಗೆಗಿನ ವಿಚಾರ ಸಂಗ್ರಹದೊಂದಿಗೆ ಜಾನಪದವನ್ನು ಮನೆ ಮನೆಗೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ಪುಂಡಲೀಕ ಮರಾಠೆ ಶಿರ್ವ ಕನಕದಾಸ ಜಯಂತಿಯ ಅಂಗವಾಗಿ ಕನಕದಾಸರ ಬಗೆಗೆ ಉಪನ್ಯಾಸ ನೀಡಿದರು.

ಜಾನಪದ ಸಿರಿ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ : ಕಟಪಾಡಿಯ ಮೂಡಬೆಟ್ಟುವಿನ ಹಿರಿಯ ಜಾನಪದ ಮತ್ತು ಅಪರೂಪದ ಸಂಧಿ ಪಾಡ್ದನ ಕಲಾವಿದೆ ಗೋಪಿ ಪಾಣಾರರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪತ್ರಕರ್ತ ರಾಕೇಶ್ ಕುಂಜೂರು ಇವರನ್ನು ಸನ್ಮಾನಿಸಲಾಯಿತು. ಕನಕದಾಸರ ಗೀತೆಗಳ ಗಾಯನ : ಕುಮಾರಿ ವೈಷ್ಣವಿ, ಕುಮಾರಿ ನಂದಿನಿ, ನಾರಾಯಣ ಮೂರ್ತಿ, ಶಂಕರ್, ಪ್ರಕಾಶ್ ಸುವರ್ಣ ಕಟಪಾಡಿ, ಸಖರಾಮ ಹಾವಂಜೆಯವರಿಂದ ಹಾಡು, ಯಶಸ್ ಪಿ. ಸುವರ್ಣರಿಂದ ಕೊಳಲುವಾದನ ಮತ್ತು ಗೋಪಿ ಪಾಣಾರರಿಂದ ತುಳು ಪಾಡ್ದನವು ಹಾಡಲ್ಪಟ್ಟಿತು.

ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ತು, ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಕಟಪಾಡಿ ವಹಿಸಿದ್ದರು. ಘಟಕದ ಕೋಶಾಧಿಕಾರಿ ನಾಗೇಶ್ ಕಾಮತ್, ಜೊತೆ ಕಾರ್ಯದರ್ಶಿ ಪವಿತ್ರ ಆರ್. ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ಕಾರ್ಯದರ್ಶಿ ಭುವನೇಶ್ ಪ್ರಭು ವಂದಿಸಿದರು.
ಕಟಪಾಡಿ : ಪಾಡ್ದನ ಕಲಾವಿದೆ ಗೋಪಿ ಪಾಣಾರರಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ

Posted On: 03-12-2020 06:00PM
ತಂತ್ರಜ್ಞಾನದ ಅತಿಯಾದ ಬಳಕೆಯನ್ನು ಯುವ ಸಮುದಾಯ ಮಾಡುತ್ತಿದ್ದು ಇದರಿಂದ ನಮ್ಮ ಸಂಸ್ಕೃತಿ, ಜಾನಪದ ವಿಚಾರಗಳ ಕಡೆಗೆ ನಿರಾಸಕ್ತರಾಗುತ್ತಿದ್ದಾರೆ. ಮಕ್ಕಳಲ್ಲಿ ಇವೆಲ್ಲದರ ಪರಿಚಯ ಮಾಡಿಕೊಡಬೇಕಾದ ಅನಿವಾರ್ಯತೆಯಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಖರಾಮ ಹಾವಂಜೆ ಹೇಳಿದರು. ಕಟಪಾಡಿಯ ಎಸ್ ವಿ ಎಸ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ತು, ಬೆಂಗಳೂರು ಕನ್ನಡ ಜಾನಪದ ಪರಿಷತ್ತು, ಉಡುಪಿ ಜಿಲ್ಲಾ ಘಟಕ ಮತ್ತು ಕನ್ನಡ ಜಾನಪದ ಪರಿಷತ್ತು, ಕಾಪು ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜರಗಿದ ಕನಕದಾಸ ಜಯಂತಿ ಆಚರಣೆ, ಕನಕದಾಸರ ಗೀತೆಗಳ ಗಾಯನ, ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಟಪಾಡಿ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಕೆ. ಸತ್ಯೇಂದ್ರ ಪೈ ಮಾತನಾಡಿ ಜಾನಪದ ವಸ್ತುವಿಷಯಗಳ ಬಗೆಗಿನ ವಿಚಾರ ಸಂಗ್ರಹದೊಂದಿಗೆ ಜಾನಪದವನ್ನು ಮನೆ ಮನೆಗೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ಪುಂಡಲೀಕ ಮರಾಠೆ ಶಿರ್ವ ಕನಕದಾಸ ಜಯಂತಿಯ ಅಂಗವಾಗಿ ಕನಕದಾಸರ ಬಗೆಗೆ ಉಪನ್ಯಾಸ ನೀಡಿದರು.

ಸುಗಮ ಚುನಾವಣೆಗೆ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್

Posted On: 03-12-2020 09:10AM
ಉಡುಪಿ : ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27 ರಂದು ನಡೆಯುವ ಎರಡು ಹಂತದ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯು, ಸುಗಮವಾಗಿ ಮತ್ತು ಯಾವುದೇ ಲೋಪಗಳಿಲ್ಲದೇ ನಡೆಸಲು ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ , ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಿಸೆಂಬರ್ 22 ರಂದು ನಡೆಯುವ ಮೊದಲನೇ ಹಂತದಲ್ಲಿ ಉಡುಪಿ, ಹೆಬ್ರಿ, ಬೈಂದೂರು ಮತ್ತು ಬ್ರಹ್ಮಾವರ ವ್ಯಾಪ್ತಿಯ 67 ಗ್ರಾಮ ಪಂಚಾಯತ್ ಗಳ 415 ಕ್ಷೆತ್ರಗಳಿಗೆ , ಒಟ್ಟು 553 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 377308 ಮಂದಿ ಮತದಾರರ ಮತ ಚಲಾಯಿಸಲಿದ್ದಾರೆ. ಡಿಸೆಂಬರ್ 27 ರಂದು ನಡೆಯುವ ಎರಡನೇ ಹಂತದಲ್ಲಿ ಕುಂದಾಪುರ, ಕಾರ್ಕಳ ಮತ್ತು ಕಾಪು ವ್ಯಾಪ್ತಿಯ 87 ಗ್ರಾಮ ಪಂಚಾಯತ್ ಗಳ 451 ಕ್ಷೆತ್ರಗಳಿಗೆ , ಒಟ್ಟು 576 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 794872 ಮಂದಿ ಮತದಾರರ ಮತ ಚಲಾಯಿಸಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 154 ಗ್ರಾಮ ಪಂಚಾಯತ್ ಗಳ 866 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 382528 ಪುರುಷ ಮತ್ತು 412335 ಮಹಿಳಾ ಮತ್ತು 9 ಇತರೆ ಮತದಾರರು ಸೇರಿದಂತೆ 794872 ಮಂದಿ ಮತದಾರರು ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ತಹಸೀಲ್ದಾರ್ ಗಳು ಪರಿಶೀಲಿಸಿ ವರದಿ ನೀಡಿ, ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಕೋವಿಡ್ ಸುರಕ್ಷಾ ಕ್ರಮಗಳೊಂದಿಗೆ ಚುನಾವಣೆಯನ್ನು ನಡೆಸುವಂತೆ ತಿಳಿಸಿದರು, ಚುನಾವಣಾ ಕಾರ್ಯಕ್ಕಾಗಿ 155 ಚುನಾವಣಾಧಿಕಾರಿಗಳು ಮತ್ತು 166 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿದ್ದು, ಇತರೆ ಅಗತ್ಯವಿರುವ ಸಿಬ್ಬಂದಿಗಳ ಕುರಿತಂತೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಅನಿರೀಕ್ಷಿತ ಸಮಾರಂಭಗಳ ಕುರಿತ ಪರಿಶೀಲಿಸಿ, ಸಮಾರಂಭಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದಲ್ಲಿ ಕೂಡಲೇ ಸಂಬಂದಪಟ್ಟವರ ವಿರುದ್ದ ಪ್ರಕರಣ ದಾಖಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಮದ್ಯ ಮಾರಾಟದ ಪ್ರಮಾಣ ಕುರಿತಂತೆ ಪ್ರತಿದಿನ ಪರಿಶೀಲಿಸುವಂತೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು. ಗ್ರಾಮ ಪಂಚಾಯತ್ ಚುನಾವಣೆಗಳು ಪಕ್ಷ ರಹಿತವಾಗಿ ನಡೆಯಲಿದ್ದು, ಗ್ರಾಮಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳ ಪ್ರಚಾರ ಫಲಕ, ಕಟೌಟ್ ಗಳು ಇದ್ದಲ್ಲಿ ಸಂಬoಧಪಟ್ಟ ಗ್ರಾಮ ಪಂಚಾಯತ್ ವತಿಯಿಂದ ತಕ್ಷಣವೇ ತೆಗೆಯಬೇಕು, ತಪ್ಪಿದಲ್ಲಿ ಆಯಾ ಗ್ರಾಮ ಪಂಚಾಯತ್ ಗಳ ಪಿಡಿಓ ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಸಿಇಓ ಗೆ ಡಿಸಿ ತಿಳಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಬೆಂಬಲಿಗ ಎಂದು ಜಾಹೀರಾತು ನೀಡುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಲಿದ್ದು, ಅಂತಹ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸುವಂತೆ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಜಿಲ್ಲೆಯಲ್ಲಿರುವ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಅಲ್ಲಿಗೆ ಅಗತ್ಯವಿರುವ ಪೊಲೀಸ್ ಸಿಬ್ಬಂದಿ ನೇಮಕ ಮಾಡುವ ಕುರಿತಂತೆ ವಿವರವಾದ ಬಂದೂಬಸ್ತ್ ಪ್ಲಾನ್ ಸಲ್ಲಿಸಿ, ಗ್ರಾಮಗಳಲ್ಲಿ ಯಾವುದೇ ಗಲಾಟೆ, ಘರ್ಷಣೆಗಳು ನಡೆಯದಂತೆ ಎಚ್ಚರವಹಿಸಿ, ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ದ ಪ್ರಕರಣ ದಾಖಲಿಸಿ ಎಂದು ಪೊಲೀಸ್ ಇಲಾಖೆಗೆ ಡಿಸಿ ಸೂಚನೆ ನೀಡಿದರು.
ಚುನಾವಣಾ ಕಾರ್ಯಕ್ಕೆ ಅಗತ್ಯವಿರುವ ವಾಹನಗಳನ್ನು ಒದಗಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಿದ ಜಿಲ್ಲಾಧಿಕಾರಿ, ನೀತಿ ಸಂಹಿತೆಯ ವಿವರಗಳನ್ನು ಎಲ್ಲಾ ಅಧಿಕಾರಿಗಳು ಅಥೈಸಿಕೊಂಡು ಅದರಂತೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿರುವೆರ್ ಕುಡ್ಲ : ಪೊರ್ಲು ಬಾಲೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Posted On: 02-12-2020 07:15AM
ಬಿರುವೆರ್ ಕುಡ್ಲ(ರಿ)ಫ್ರೆಂಡ್ಸ್ ಬಳ್ಳಾಲ್ ಬಾಗ್ ಇದರ ಅಂಗ ಸಂಸ್ಥೆಯಾದ ಬಿರುವೆರ್ ಕುಡ್ಲ(ರಿ) ಉಡುಪಿ ಘಟಕ" ಹಾಗೂ ಮಹಿಳಾ ವೇದಿಕೆ ಆಯೋಜಿಸಿದ್ದ ಬಿರುವೆರ್ ಕುಡ್ಲ ಪೊರ್ಲುಬಾಲೆ ಸ್ಪರ್ಧೆಯಲ್ಲಿ ವಿಜೇತರಾದ ಮುದ್ದು ಕಂದಮ್ಮಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಾಗೂ ಕು.ನಿಖಿತಾಳಿಗೆ ಸನ್ಮಾನ ಕಾರ್ಯಕ್ರಮ ನಿನ್ನೆ ಹಿಂದಿ ಪ್ರಚಾರ ಸಮಿತಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷರಾಗಿ ಉಡುಪಿ ಘಟಕದ ಅಧ್ಯಕ್ಷರಾದ ಕಿಶೋರ್ ಪೂಜಾರಿ, ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಿರಿಯ ಸಲಹೆಗಾರರಾದ ಉಮೇಶ್ ಕೋಟ್ಯಾನ್, ಸಂಘಟನೆಯ ಜಿಲ್ಲಾ ವಕ್ತಾರರಾದ ಲಕ್ಷ್ಮೀಶ ಸುವರ್ಣ, ಮಹಿಳಾ ಘಟಕದ ಅಧ್ಯಕ್ಷರಾದ ಸುನೀತಾ ಸುರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮ ಯಶಸ್ವಿಯಾಗಲು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಎಲ್ಲಾ ಮುದ್ದು ಕಂದಮ್ಮಗಳ ಜೊತೆ ಪೋಷಕರೂ ಕೂಡ ಭಾಗವಹಿಸಿದ್ದರು.
ಎರ್ಮಾಳು : ಲಕ್ಷ್ಮೀ ಮಾಧವ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ

Posted On: 01-12-2020 10:58PM
ಎರ್ಮಾಳಿನಲ್ಲಿ "ಲಕ್ಷ್ಮೀಮಾಧವ" ಸಾಂಸ್ಕೃತಿಕ ಕಲಾಕೇಂದ್ರವನ್ನು ನಾರ್ತ್ ಮುಂಬಯಿ ಬಿಜೆಪಿ ಉಪಾಧ್ಯಕ್ಷ ಹರೀಶ ಶೆಟ್ಟಿ ಅವರು ಉದ್ಘಾಟಿಸಿದರು .
ಹೆಜಮಾಡಿಯ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ,ಹಿರಿಯ ವಿದ್ವಾಂಸ ರಾಮಚಂದ್ರ ಭಟ್ , ಉಡುಪಿ ಜಿ.ಪಂ. ಉಪಾಧ್ಯಕ್ಷರಾದ ಶ್ರೀಮತಿ ಶೀಲಾ ಕೆ.ಶೆಟ್ಟಿ , ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ, ನಿವೃತ್ತ ಉಪನ್ಯಾಸಕ , ಪ್ರವಚನಕಾರ ರಾಮಕೃಷ್ಣ ರಾವ್, ವ್ಯಾಸಮೋಹನರಾವ್ ಉಪಸ್ಥಿತರಿದ್ದರು .
ವೈ. ಗಣಪತಿ ಭಟ್-ಶ್ರೀಮತಿ ಶಶಿಕಲಾ ಜಿ.ಭಟ್ ಅವರ ವೈವಾಹಿಕ ಜೀವನದ ರಜತ ಮಹೋತ್ಸವದ ನೆನಪಿಗಾಗಿ ಅವರ ತಾಯಿ-ತಂದೆಯವರ ಹೆಸರಿನ "ಲಕ್ಷ್ಮೀ - ಮಾಧವ" ನಿರ್ಮಾಣಗೊಂಡು,ಉದ್ಘಾಟನೆಯಾಗಿದೆ. ಗಣಪತಿ ಭಟ್ಟರ ಅಮ್ಮ ಭಾಗೀರಥಿ (ಲಕ್ಷ್ಮೀ) ಎಂ.ಭಟ್ , ಸಹೋದರ ಗುರುರಾಜ ಭಟ್ ದಂಪತಿ ಮತ್ತು ಸಹೋದರಿಯರು ಉಪಸ್ಥಿತರಿದ್ದರು .
ಏಡ್ಸ್ ತಡೆಗೆ ಜಾಗೃತಿ ಮೂಡಿಸುವುದು ಅಗತ್ಯ- ಜಿಲ್ಲಾಧಿಕಾರಿ ಜಿ. ಜಗದೀಶ್

Posted On: 01-12-2020 06:09PM
ಉಡುಪಿ, ಡಿ.1: ಏಡ್ಸ್ ಸೋಂಕು ತಡೆಗಟ್ಟಲು, ಸೋಂಕು ಹರಡುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅವರು ಇಂದು ನಗರದ ಪುರಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ರೆಡ್ಕ್ರಾಸ್ ಮತ್ತು ಎನ್.ಎಸ್.ಎಸ್ ಘಟಕ ಉದ್ಯಾವರ, ನಾಗರಿಕ ಸಹಾಯವಾಣಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ ಹಾಗೂ ಉದ್ಭವ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ಹೆಚ್.ಐ.ವಿ ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು ಹಾಗೂ ಜವಾಬ್ದಾರಿ ಹಂಚಿಕೆ ಎಂಬ ಘೋಷ ವಾಕ್ಯದೊಂದಿಗೆ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯು ಏಡ್ಸ್ ಸೋಂಕು ನಿಯಂತ್ರಣದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಹೆಚ್.ಐ.ವಿ ಸೋಂಕಿನ ಬಗ್ಗೆ ಜನಸಾಮಾನ್ಯರಲ್ಲಿ ಆರೋಗ್ಯದ ತಿಳುವಳಿಕೆ ಮತ್ತು ಕೊರತೆ ಇದ್ದು, ಸಾರ್ವಜನಿಕರಲ್ಲಿ ಏಡ್ಸ್ ನಿಯಂತ್ರಣ ಕುರಿತು ಹೆಚ್ಚಿನ ಅರಿವು ಮೂಡಿಸಿ, ಏಡ್ಸ್ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಕಡಿಮೆಯಾಗಬೇಕು ಎಂದರು.ಹೆಚ್.ಐ.ವಿ ಬಾಧಿತರನ್ನು ಯಾವುದೇ ತಾರತಮ್ಯ ಮಾಡದೇ ಗೌರವದಿಂದ ಕಾಣಬೇಕು. ಹೆಚ್.ಐ.ವಿ ಬಾಧಿತರಿಗೆ ಸರಕಾರದಿಂದ ಹಲವಾರು ಸೌಲಭ್ಯಗಳು ದೊರೆಯುತ್ತಿದ್ದು, ಇದರ ಬಗ್ಗೆ ತಿಳುವಳಿಕೆ ನೀಡಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಹೆಚ್.ಐ.ವಿ ಎನ್ನುವುದು ವೈರಸ್ ಮೂಲಕ ಹರಡುವ ರೋಗವಾಗಿದ್ದು, ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಹಂತ ಹಂತವಾಗಿ ನಾಶಗೊಳಿಸುವುದರಿಂದ ವಿವಿಧ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಆದ್ದರಿಂದ ರೋಗ ಹರಡದಂತೆ ಮುಂಜಾಗೃತಾ ಕ್ರಮವಾಗಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಆಗ ರೋಗದ ಸ್ಥಿತಿಗತಿ ತಿಳಿಯಲು ಸಾಧ್ಯವಾಗುತ್ತದೆ, ಹೆಚ್.ಐ.ವಿ ಏಡ್ಸ್ ಕುರಿತು ಇತ್ತೀಚಿನ ದಿನಗಳಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳಬೇಕು ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಮಾತನಾಡಿ, ಕಾನೂನಿನ ಅಡಿಯಲ್ಲಿ ಏಡ್ಸ್ ಬಾಧಿತರಿಗೆ ಗೌಪ್ಯತೆಯ ಹಕ್ಕು ನೀಡಲಾಗಿದ್ದು, ಹೆಚ್.ಐ.ವಿ ಏಡ್ಸ್ಗೆ ತುತ್ತಾಗಿರುವ ವ್ಯ÷ಕ್ತಿಗೆ ಸಾರ್ವಜನಿಕ ಕ್ಷೇತ್ರದಲ್ಲಾಗಲೀ ಅಥವಾ ಖಾಸಗಿ ಕ್ಷೇತ್ರದಲ್ಲಾಗಲೀ ತಾರತಮ್ಯವಾಗಿದ್ದರೆ, ಕಾನೂನು ರಕ್ಷಣೆಗೆ ಕ್ರಮ ಕೈಗೊಳ್ಳಬಹುದು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಮಾತನಾಡಿ, ಏಡ್ಸ್ ಸೋಂಕಿತರಿಗೆ ಮಾನಸಿಕ, ಆರ್ಥಿಕ ಬೆಂಬಲ ನೀಡುವುದು ಅಗತ್ಯವಾಗಿರುತ್ತದೆ. ಏಡ್ಸ್ ರೋಗದ ಕುರಿತು ಜಾಗೃತಿ ಮೂಡಿಸಲು ಕಾಲೇಜುಗಳಲ್ಲಿ ಜನಜಾಗೃತಿ ಆಂದೋಲನ ಕಾರ್ಯಕ್ರಮಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ದುಷ್ಚಟಗಳಿಗೆ ಬಲಿಯಾಗದೇ ಉತ್ತಮ ಆರೋಗ್ಯ ರೂಪಿಸಿಕೊಳ್ಳಲು ಕರೆ ನೀಡಿದರು. ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಾ ಕಾರ್ಯಕ್ರಮವು ನಡೆಯಲಿದ್ದು, ಈ ಕುರಿತು ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಡಾ.ಪ್ರಶಾಂತ ಭಟ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲು ವಿಶ್ವ ಏಡ್ಸ್ ದಿನದ ಪ್ರಯುಕ್ತ ಸರ್ವಿಸ್ ಬಸ್ ಸ್ಟ್ಯಾಂಡ್ನಿಂದ ಕೆ.ಎಂ. ಮಾರ್ಗವಾಗಿ ಪುರಭವನದವರೆಗೆ ನಡೆದ ಜಾಥಾ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಹಸಿರು ನಿಶಾನೆ ತೋರಿದರು. ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರೇಮಾನಂದ ಸ್ವಾಗತಿಸಿದರು, ಮೇಲ್ವಿಚಾರಕ ಮಹಾಬಲೇಶ್ವರ ಎನ್. ವಂದಿಸಿದರು.
ಬೈಕಂಪಾಡಿ : ಬಲೆಗೆ ಸಿಲುಕಿ ಮೀನುಗಾರನ ಸಾವು

Posted On: 01-12-2020 05:26PM
ಮಂಗಳೂರು: ಮೀನು ಹಿಡಿಯಲು ಹರಡುತ್ತಿದ್ದ ಬಲೆಗೆ ಮೀನುಗಾರನೋರ್ವ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ಬೈಕಂಪಾಡಿ ಬಳಿ ಸಮುದ್ರದಲ್ಲಿ ನಡೆದಿದೆ.
ಬೈಕಂಪಾಡಿಯ ಹೊಸಹಿತ್ಲು ನಿವಾಸಿ ನವೀನ್ ಕರ್ಕೇರ(32) ಮೃತ ದುರ್ದೈವಿ. ನವೀನ್ ಸಮುದ್ರದಲ್ಲಿ ಸ್ವಲ್ಪ ದೂರ ಸಾಗಿ ಮೀನಿಗೆ ಬಲೆ ಹಾಕುತ್ತಿದ್ದರು. ಈ ವೇಳೆ ಬಲೆಗೆ ಕಾಲು ಬೆರಳು ಸಿಲುಕಿದ್ದು ನವೀನ್ ನೀರಿಗೆ ಬಿದ್ದು ಮುಳುಗಿದ್ದಾರೆ. ನುರಿತ ಈಜುಗಾರರಾಗಿದ್ದರೂ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ನೀರಿನಲ್ಲಿ ಈಜಿ ದಡ ಸೇರಲು ಸಾಧ್ಯವಾಗದೆ ನವೀನ್ ಮೃತಪಟ್ಟಿದ್ದಾರೆ.
ನವೀನ್ ಪೋಷಕರಿಗೆ ನಾಲ್ವರು ಮಕ್ಕಳು. ತಂದೆ ಮೃತರಾಗಿದ್ದು ಅವರ ಮೂವರು ಸಹೋದರರು ಕೂಡ ದುರಂತವೊಂದರಲ್ಲಿ ಸಾವನ್ನಪ್ಪಿದ್ದಾರೆ. ಓರ್ವ ಸಹೋದರ ಮಡಿಕೇರಿಯಲ್ಲಿ ಅಪಘಾತಕ್ಕೀಡಾಗಿದ್ದರು.ಇನ್ನೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರನೇಯ ಸಹೋದರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಈಗ ನವೀನ್ ಕೂಡ ಸಾವನ್ನಪ್ಪಿದ್ದರಿಂದ ಅವರ ತಾಯಿ ಒಬ್ಬಂಟಿಯಾಗಿದ್ದಾರೆ.
ಉಡುಪಿ ಕೃಷ್ಣ ಮಠದ ನಾಮಫಲಕದಲ್ಲಿ ಮರೆಯಾದ ಕನ್ನಡ

Posted On: 01-12-2020 05:18PM
ಉಡುಪಿ: ವಿಶ್ವಪ್ರಸಿದ್ದ ಉಡುಪಿ ಶ್ರೀ ಕೃಷ್ಣ ಮಠದ ಮಹಾದ್ವಾರದಲ್ಲಿ ಇದ್ದ ಕನ್ನಡ ಫಲಕವನ್ನು ತೆಗೆದು ತುಳು ಮತ್ತು ಸಂಸ್ಕೃತದಲ್ಲಿ ಹೊಸ ನಾಮ ಫಲಕ ಅಳವಡಿಸಿದ್ದು ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಉಡುಪಿಯ ಕೃಷ್ಣ ಮಠದ ಮಹಾದ್ವಾರದಲ್ಲಿ ಈವರೆಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಫಲಕವಿದ್ದು ಅದನ್ನು ತೆಗೆದು ಈಗ ಹೊಸದಾಗಿ ತುಳು ಮತ್ತು ಸಂಸ್ಕೃತದಲ್ಲಿ ಶ್ರೀ ಕೃಷ್ಣ ಮಠ, ರಜತಪೀಠ ಪುರಂ ಎಂದು ಬರೆಯಲಾಗಿದೆ. ಪರ್ಯಾಯ ಅದಮಾರು ಮಠದಿಂದ ಫಲಕ ಬದಲಾವಣೆ ನಡೆದಿದ್ದು ಫಲಕದಲ್ಲಿ ಕನ್ನಡ ಭಾಷೆ ಏಕಿಲ್ಲ ಎನ್ನುವುದು ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿದ್ದು ಸರಿಯಾದ ಕ್ರಮವಲ್ಲ ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ.ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆಧ್ಯತೆ. ನಾಮಫಲಕ ದಲ್ಲಿ ಮೊದಲು ಕನ್ನಡ ಇರಬೇಕು ಆನಂತರ ಇತರ ಭಾಷೆ. ಒಂದು ಧಾರ್ಮಿಕ ಸಂಸ್ಥೆ ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ. ನಾಮ ಫಲಕದ ಈ ಪ್ರಕರಣ ಸರ್ಕಾರದ ಕಾನೂನಿನ ಸ್ವಷ್ಟ ಉಲ್ಲಂಘನೆಯಾಗಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಮುಂದೆ ಇದನ್ನು ಸರಿಪಡಿಸುವವರೆಗೂ ಹೋರಾಟ ಅನಿವಾರ್ಯ ಎಂದು ಅವರು ಎಚ್ಚರಿಸಿದ್ದಾರೆ. ಮೊದಲು ಕನ್ನಡ. ಆನಂತರ ಇತರೆ ಭಾಷೆ ನಾಮಫಲಕದಲ್ಲಿಇರಲಿ ಕನ್ನಡ ಮತ್ತು ಸೋದರ ಭಾಷೆ ತುಳುವಿನ ನಡುವೆ ಕಂದಕ ನಿರ್ಮಾಣ ಮಾಡುವುದು ಸಹ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಪರ್ಯಾಯ ಅದಮಾರು ಮಠ ಕೂಡ ಸ್ಪಷ್ಟನೆ ನೀಡಿದ್ದು, ಮಠ ಪುನಶ್ಚೇತನಗೊಳಿಸುವಾಗ ಪರ್ಯಾಯ ಸ್ವಾಮೀಜಿಗಳ ಅಪೇಕ್ಷೆಯಂತೆ ಅಲ್ಲಿರುವ ಪ್ಲಾಸ್ಟಿಕ್ ಬೋರ್ಡನ್ನು ತೆಗೆದು ಮರದಲ್ಲಿ ತಯಾರಾದ ಬೋರ್ಡನ್ನು ಹಾಕುವ ಯೋಜನೆ ಇತ್ತು. ಅದರಲ್ಲಿ ಮೊದಲನೇ ಬೋರ್ಡು ಕನ್ನಡ ಬಂದು ಬಳಿಕ ಸಂಸ್ಕೃತ ಮತ್ತು ತುಳು ಲಿಪಿಯ ಬೋರ್ಡ್ ಹಾಕುವ ಯೋಜನೆ ಇತ್ತು. ಅದರಂತೆ ಫಲಕ ತಯಾರಾಗುವ ವೇಳೆ ಲಕ್ಷದೀಪ ಬಂದ ಕಾರಣ ಕನ್ನಡ ಭಾಷೆಯ ಫಲಕ ತಯಾರಾಗುತ್ತಿದ್ದು, ತುಳು ಮತ್ತು ಸಂಸ್ಕೃತ ಭಾಷೆಯ ಬೋರ್ಡ್ ಹಾಕಲಾಗಿದೆ. ತುಳು ಭಾಷೆಗೂ ಗೌರವ ನೀಡಬೇಕು ಯಾಕೆಂದರೆ ಮಠದಲ್ಲಿನ ಗೃಂಥಿ ಲಿಪಿ ತುಳು ಭಾಷೆಯಲ್ಲಿದ್ದ ಕಾರಣ ತುಳು ಫಲಕ ಹಾಕಲಾಗಿದೆ. ಕನ್ನಡದ ಫಲಕ ಮೊದಲ ಭಾಗದಲ್ಲಿ ಇರಲಿದ್ದು ಬಳಿಕ ಉಳಿದ ಭಾಷೆಯ ಬೋರ್ಡ್ ಬರಲಿವೆ ಎಂದು ಮಠದ ಮ್ಯಾನೇಜರ್ ಗೋವಿಂದ್ ರಾಜ್ ಹೇಳಿದ್ದಾರೆ.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರಾಕೇಶ್ ಕುಂಜೂರು ಆಯ್ಕೆ

Posted On: 01-12-2020 05:09PM
ಕಾಪು, ಡಿ. ೧ : ಕಾಪು ತಾಲೂಕು ಕಾರ್ಯನಿರತರ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ಕಾಪು ವರದಿಗಾರ, ಜೇಸಿಐನ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಆಯ್ಕೆಯಾಗಿದ್ದಾರೆ.
ಭಾರತ್ ಬಿಕ್ಕೋ ಕಂಪನಿ ಆವರಣದಲ್ಲಿರುವ ಕಾಪು ಪ್ರೆಸ್ ಕ್ಲಬ್ನಲ್ಲಿ ಡಿ. ೧ರಂದು ಜರಗಿದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಉಪಾಧ್ಯಕ್ಷರಾಗಿ ವಿಜಯ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಶಫಿ ಅಹಮದ್ ಉಚ್ಚಿಲ, ಕೋಶಾಧಿಕಾರಿಯಾಗಿ ಪುಂಡಲೀಕ ಮರಾಠೆ, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ಸುವರ್ಣ ಕಟಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ವಾದಿರಾಜ ರಾವ್ ನಡಿಮನೆ, ಪ್ರೆಸ್ ಕ್ಲಬ್ ಕೋ. ಆರ್ಡಿನೇಟರ್ ಆಗಿ ಸಂತೋಷ್ ಕಾಪು ಅವರನ್ನು ಆಯ್ಕೆ ಮಾಡಲಾಯಿತು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಪ್ರಮೋದ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ರಾಮಚಂದ್ರ ಆಚಾರ್ಯ, ಬಾಲಕೃಷ್ಣ ಪೂಜಾರಿ, ಪ್ರಕಾಶ್ ಸುವರ್ಣ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು.