Updated News From Kaup

ಕೆ.ಎಲ್.ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ ಪುಸ್ತಕ ಬಿಡುಗಡೆ

Posted On: 21-12-2020 12:11PM

ಉಚ್ಚಿಲ : ಯಕ್ಷಗಾನ ಗುರು ,ನಿವೃತ್ತ ಶಿಕ್ಷಕ ಎರ್ಮಾಳು ವಾಸುದೇವ ರಾಯರು ಉಚ್ಚಿಲದ ಹೋಟೆಲ್ ರಾಧಾದ ರಾಧಾ ಸಭಾಭವನದಲ್ಲಿ ಕೆ.ಎಲ್. ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ ಪುಸ್ತಕವನ್ನು ಬಿಡುಗಡೆ ಗೊಳಿಸಿ ಶುಭಹಾರೈಸಿದರು .ನಿರಂತರ ಅಭ್ಯಾಸ , ಅಧ್ಯಯನ , ಓದು,ಸಾಧನೆ ಇವು ಯಕ್ಷಗಾನ ಕಲಾವಿದನಾಗ ಬೇಕಾದವರಿಗೆ ಅಗತ್ಯ ಎಂದು ವಾಸುದೇವರಾಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ .ಎಸ್. ಅವರು ವಹಿಸಿದ್ದರು ‌. ಎಲ್ಲೂರುಗುತ್ತು ವೈ.ಪ್ರಫುಲ್ಲ ಶೆಟ್ಟಿ, ಪುಣೆ ಉದ್ಯಮಿ ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ, ಅದಮಾರು ಆದರ್ಶ ಸಂಘಗಳ ಒಕ್ಕೂಟದ ಅಧ್ಯಕ್ಷ ಎರ್ಮಾಳು ಉದಯ ಕೆ. ಶೆಟ್ಟಿ‌ , ಎಲ್ಲೂರಿನ ಪಂಚಾಕ್ಷರೀ ಯಕ್ಷಗಾನ ಮಂಡಳಿಯ ಸಂಸ್ಥಾಪಕ ಶ್ರೀನಿವಾಸ ಉಪಾಧ್ಯಾಯ , ಕುಂಜೂರಿನ ಕೃಷಿಕ ಗುರುರಾಜ ಮಂಜಿತ್ತಾಯ ಉಪಸ್ಥಿತರಿದ್ದರು .

ಈ ಸಂದರ್ಭದಲ್ಲಿ ಯಕ್ಷಗಾನ ಗುರು ಎರ್ಮಾಳು ವಾಸುದೇವರಾಯರಿಗೆ ಗುರು ವಂದನೆ ಸಮರ್ಪಿಸಲಾಯಿತು . ನೈಮಾಡಿ ನಾರಾಯಣ ಕೆ.ಶೆಟ್ಟಿ ಅವರನ್ನು ಗೌರವಿಸಲಾಯಿತು . ಗಣೇಶ ರಾವ್ ಎಲ್ಲೂರು ಸ್ವಾಗತಿಸಿ - ಪುಸ್ತಕ ಪರಿಚಯಿಸಿದರು ,ಸ್ನೇಹಾ ಎಸ್.ಕೆ. ಮತ್ತು ಸನ್ನಿಧಿಯವರ ಪ್ರಾರ್ಥನೆ ಯೊಂದಿಗೆ, ಗಣೇಶ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ, ನಾಗರಾಜ ಉಡುಪ ವಂದಿಸಿದರು.

ಕರಾವಳಿ ಮಿತ್ರ ವೃಂದ : ಸಾಮೂಹಿಕ ಸತ್ಯನಾರಾಯಣ, ಶನೀಶ್ವರ ಪೂಜೆ

Posted On: 20-12-2020 07:27PM

ಕಾಪು ಪಡು ಗ್ರಾಮದ ಕರಾವಳಿ ಮಿತ್ರ ವೃಂದದ ಆಶ್ರಯದಲ್ಲಿ 28ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಶನೀಶ್ವರ ಪೂಜೆಯು ಕಾಪು ಪಡು ಬೈರುಗುತ್ತು ತೋಟದ ವೇದಿಕೆಯಲ್ಲಿ ಡಿಸೆಂಬರ್ 26 ನೇ ತಾರೀಖು ಶನಿವಾರ ಬೆಳಿಗ್ಗೆ 8 ಕ್ಕೆ ಗಣಹೋಮದೊಂದಿಗೆ ಪ್ರಾರಂಭಗೊಂಡು ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, 2:30 ರಿಂದ ಶ್ರೀ ಶನೀಶ್ವರ ಪೂಜೆ ಸಂಜೆ 6 ಕ್ಕೆ ಮಂಗಲದೊಂದಿಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸ್ವರ್ಣಾರಾಧನಾ ಅಭಿಯಾನ: ಸ್ವಣಾ೯ರತಿ ಚಾಲನೆ

Posted On: 18-12-2020 11:05PM

ಉಡುಪಿ : ಎಣ್ಣೆಹೊಳೆ ದೇವಾಲಯದ ಸ್ವಣಾ೯ ನದಿಯ ತಟದಲ್ಲಿ ವೈಭವದ ಸ್ವಣಾ೯ರತಿ ಕಾಯ೯ಕ್ರಮ ಡಿ.18 ಶುಕ್ರವಾರ ನಡೆಯಿತು. ಗೋವಾ ಕೈವಲ್ಯ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ರವರು ದೇವಾಲಯದ ಎದುರು ಬಿಲ್ವ ಗಿಡಗಳನ್ನು ನೆಡುವುದರ ಮೂಲಕ ಚಾಲನೆ ನೀಡಿದರು.ನಂತರ ನದಿ ತೀರದಲ್ಲಿ ವೈಭವದ ಸ್ವಣಾ೯ರತಿ ಕಾಯ೯ ನಡೆಯಿತು. ಈ ಸಂದಭ೯ ಸ್ವಾಮೀಜಿಯವರು ಯೋಜನೆಯು ಅತ್ಯಂತ ಯಶಸ್ವಿಯಾಗಲೆಂದು ಆಶೀವ೯ಚನ ನೀಡಿದರು.

ಕಾಯ೯ಕ್ರಮದಲ್ಲಿ ಅಭಿಯಾನದ ಪ್ರಮುಖರಾದ ಡಾII ನಾರಾಯಣ ಶೆಣ್ಯ್ , ಪ್ರಭಾಕರ ಭಟ್ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು. ಸ್ವಣಾ೯ ನದಿಯ ಪಾವಿತ್ರ್ಯ ಮತ್ತು ಸ್ವಚ್ಚತೆಯನ್ನು ಕಾಪಾಡಲು ಈ ನದಿಯ ದಡದಲ್ಲಿ ಬದುಕುತ್ತಿರುವ , ಈ ನದಿಯ ನೀರನ್ನು ಉಪಯೋಗಿಸುತ್ತಿರುವ ಜನರನ್ನು ಪ್ರೇರೇಪಿಸಿ ಅವರಲ್ಲಿ ಈ ಬಗ್ಗೆ ಜಾಗೃತಿ ಮಾಡುವುದು ಈ ಅಭಿಯಾನದ ಧ್ಯೇಯ. ಅ. 2 ರಿಂದ ಪ್ರಾರಂಭವಾದ ಈ ಅಭಿಯಾನ ಎಪ್ರಿಲ್ 13 ರ ಸೌರಯುಗಾದಿಯಂದು ಸಮಾರೋಪ ನಡೆಯುವುದು.

ಅಭಿಯಾನದ ಪ್ರಮುಖ ಆಯಾಮಗಳಾದ ಸ್ವಚ್ಚತೆ, ನದೀತಟ ಪ್ರದೇಶದ ಹಸಿರೀಕರಣ, ವೃಕ್ಶಾರೋಪಣ, ಶಾಲಾಮಕ್ಕಳಿಗೆ ನದಿಯ ಬಗ್ಗೆ ರಸಪ್ರಶ್ನೆ , ಇಕೊಬ್ರಿಕ್ ತಯಾರಿಸಲು ತರಬೇತಿ , ಉಡುಪಿ ನಗರದಲ್ಲಿ ವಾರ್ಡ್ ಸ್ತರದಲ್ಲಿ ಹಸಿರೀಕರಣ, ಜಲ ಸಂರಕ್ಶಣೆ, ಸ್ವಚ್ಚತಾ ಕಾರ್ಯಕ್ರಮಗಳು , ಸಾಮಾಜಿಕ ಜಾಲತಾಣಗಳಲ್ಲಿ ಸ್ವರ್ಣಾ ನದಿಯ ಮಹತ್ವ ಸಾರುವ ಪೊಸ್ಟರ್‍, ವೀಡಿಯೋಗಳಿಂದ ಜನಜಾಗ್ರತಿ. ಮಾಡುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಗೋಡೆಬರಹ ಪ್ರಕರಣವನ್ನು NIA ತನಿಖೆಗೆ ಆಗ್ರಹಿಸಿ ಮತ್ತು ಪೊಲೀಸ್ ಸಿಬ್ಬಂದಿ ಕೊಲೆ ಯತ್ನ ಖಂಡಿಸಿ ಡಿಸೆಂಬರ್ 23 ಕ್ಕೆ ಪ್ರತಿಭಟನೆಗೆ ಕರೆ - ವಿಶ್ವ ಹಿಂದು ಪರಿಷದ್

Posted On: 18-12-2020 08:05PM

ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹದ ಮುಖಾಂತರ ಲಷ್ಕರ್ ತೋಯಿಬಾ ಉಗ್ರ ಸಂಘಟನೆಯನ್ನು ಬೆಂಬಲಿಸಿ ಮತ್ತು ಮತ್ತು ಮುಸ್ಲಿಂ ವಿರೋಧಿಗಳನ್ನು ಹತ್ಯೆ ಮಾಡುವುದಾಗಿ ಗೋಡೆ ಬರಹದ ಮುಖಾಂತರ ಇಲ್ಲಿ ಭಯೋತ್ಫಾದಕ ಚಟುವಟಿಕೆ ಪ್ರಾರಂಭ ಮಾಡಲು ಪ್ರಯತ್ನಿಸುತ್ತಿರುವುದು ಬಹಳ ಆತಂಕಕಾರಿ ವಿಷಯವಾಗಿದೆ. ಇದರ ಹಿಂದೆ ಭಯೋತ್ಫಾದಕರ ನಂಟು ಇರುವುದು ಸಾಧ್ಯತೆ ಇದ್ದು ಈಗಾಗಲೇ 3 ಜನರನ್ನು ಬಂಧಿಸಿದ್ದು ಅವರಿಂದ ಜಾಗತಿಕ ಭಯೋತ್ಫಾದಕ ಜಮೈಕಾ ಮೂಲದ ಶೇಕ್ ಅಬ್ದುಲ್ಲಾ ಫೈಝಲ್ ಪ್ರಚೋದನಕಾರಿ ಭಾಷಣ ಮತ್ತು ಉಗ್ರರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಸಿಕ್ಕಿರುವುದು ಬಹಳಆಘಾತಕಾರಿಯಾಗಿದೆ, ಪೊಲೀಸರು ಶೀಘ್ರವಾಗಿ ಕ್ರಮ ಕೈಗೊಂಡು ಈ ಪ್ರಕರಣವನ್ನು ಬೇಧಿಸಿದನ್ನು ಪೊಲೀಸ್ ಕಮಿಷನರ್ ಮತ್ತು ಸಿಬ್ಬಂದಿಗಳಿಗೆ ವಿಶ್ವಹಿಂದೂ ಪರಿಷತ್ ಶ್ಲಾಘಿಸುತ್ತದೆ ಮತ್ತು ಅಭಿನಂದನೆ ಸಲ್ಲಿಸುತ್ತದೆ.

ಈ ಪ್ರಕರಣವನ್ನು ಗಮನಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯೋತ್ಫಾದಕ ಚಟುವಟಿಕೆಗಳು ಬೇರೂರಿರುವ ಸಂಶಯ ವ್ಯಕ್ತವಾಗಿದ್ದು ಈಗಾಗಲೇ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು NIA ತನಿಖೆಗೆ ಶಿಫಾರಸ್ಸು ಮಾಡಲು ವಿನಂತಿಸಿದ್ದೇವೆ. ಆಗಾಗಿ ಈ ಪ್ರಕರಣವನ್ನು ಶೀಘ್ರವಾಗಿ NIA ಯವರಿಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿ ಮತ್ತು ಕರ್ತವ್ಯ ನಿರತ ಪೊಲೀಸ್ ಸಿಬ್ಬ್ಬಂದಿ ಮೇಲಿನ ಹಲ್ಲೆಯನ್ನು ಖಂಡಿಸಿ ಡಿಸೆಂಬರ್ 23 ಬುಧವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆಗೆ ಕರೆ ಕೊಡುತ್ತದೆ.

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಕೊಲೆ ಯತ್ನಕ್ಕೆ ಖಂಡನೆ - ಕಠಿಣ ಕ್ರಮ ಕೈಗೊಳ್ಳಲು ಆಗ್ರಹ -ವಿಶ್ವ ಹಿಂದು ಪರಿಷದ್ ಪೊಲೀಸ್ ಸಿಬ್ಬಂದಿಯಾದ ಗಣೇಶ್ ಕಾಮತ್ ರವರಿಗೆ ಹಾಡು ಹಗಲೇ ತಾಳುವರಿನಿಂದ ಹಲ್ಲೆ ನಡೆಸಿ ಕೊಲೆ ನಡೆಸಲು ಪ್ರಯತಿಸಿದ್ದು, ವಿಶ್ವ ಹಿಂದು ಪರಿಷದ್ ಖಂಡಿಸುತ್ತದೆ ಕಳೆದ ವರ್ಷ ಇದೆ ಸಮಯದಲ್ಲಿ NRC ಪ್ರತಿಭಟನೆ ಹೆಸರಿನಲ್ಲಿ ಪ್ರತಿಭಟನೆ ನಡೆಸುವಾಗ ಪೋಲೀಸರ ಮೇಲೆ ಕಲ್ಲು ಎಸೆತ, ಹಲ್ಲೆ ಪೊಲೀಸ್ ಸ್ಟೇಷನ್ ಗೆ ಬೆಂಕಿ ಹಚ್ಚಲು ಪ್ರಯತ್ನ ಪಟ್ಟಿದ್ದರು. ಅದೇ ಕಾರ್ಯವನ್ನು ಪುನರಾವರ್ತಿಸಲು ಗಲಭೆ ಸಂಚು ರೂಪಿಸಲು ಪ್ರಯತ್ನಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು, ಜಿಲ್ಲಾಧ್ಯಕ್ಷರು ಗೋಪಾಲ್ ಕುತ್ತಾರ್ ಈ ಸಂಧರ್ಭದಲ್ಲಿ ಉಪಸ್ಥಿತಿ ಇದ್ದರು.

ನಾರಾಯಣಗುರುಗಳ ತತ್ವಕ್ಕೆ ಬದ್ಧನಾಗಿ, ನ್ಯಾಯಕ್ಕೆ ಸದಾ ಸಿದ್ಧನಾಗಿರುವ ಸಮಾಜಮುಖಿ ಚಿಂತನೆಯ ವ್ಯಕ್ತಿ - ಕಿರಣ್ ಪೂಜಾರಿ ಕುಂದಾಪುರ

Posted On: 18-12-2020 10:15AM

ಒಂದೇ ಜಾತಿ ಒಂದೇ ಮತ ಒಂದೇ ದೇವರು ಮಾನವನಿಗೆ" ಎಂಬ ನಾರಾಯಣ ಗುರುಗಳ ತತ್ವವನ್ನು ಜೀವನದಲ್ಲಿ ಅಳವಡಿಸಿ, ಅನ್ಯಾಯವನ್ನು ಸಹಿಸಿಕೊಳ್ಳದ, ನೇರ ನುಡಿಯ ಅನ್ಯಾಯದ ವಿರುದ್ಧ ಧ್ವನಿ ಎತ್ತುವ, ದುಷ್ಟರ ಪಾಲಿಗೆ ಬೆಂಕಿಯಾಗಿ, ನೊಂದವರ ಪಾಲಿಗೆ ಆಶಾಕಿರಣವಾಗಿ ಎಲ್ಲರ ಮನಗೆದ್ದ ಹೆಮ್ಮೆಯ ವ್ಯಕ್ತಿ ಕಿರಣ್ ಪೂಜಾರಿ. ಮದ್ದು ಗುಡ್ಡೆ ಕುಂದಾಪುರ ತಾಲೂಕಿನ ನರಸಿಂಹ ಪೂಜಾರಿ ಮತ್ತು ಗೀತಾ ಎನ್ ಪೂಜಾರಿಯರ ಮಗ ಕಿರಣ್ ಪೂಜಾರಿ. ಇವರು ತನ್ನ ವಿದ್ಯಾಬ್ಯಾಸವನ್ನು ಸಂತ ಮರಿಯಾ ಹೈ ಸ್ಕೂಲ್ ಕುಂದಾಪುರ ಮತ್ತು ಭಂಡಾರ್‌ಕಾರ್ಸ್ ಕಲಾ & ವಿಜ್ಞಾನ ಕಾಲೇಜು ಕುಂದಾಪುರ ಇಲ್ಲಿ ಮುಗಿಸಿ ನಂತರ ಕುಂದಾಪುರದಲ್ಲಿ "MICE" ಡಿಪ್ಲೋಮ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಮತ್ತು ಡಿ. ಟಿ. ಪಿ ತರಬೇತಿ ಪಡೆದು ನಂತರ ಜೀವನಕ್ಕಾಗಿ "ಜನ ಈ ದಿನ " ಪತ್ರಿಕೆಯಲ್ಲಿ ಅಡ್ವೇಟೈಸಿಂಗ್ ಡಿಸೈನರ್ ಮತ್ತು ಕಂಪ್ಯೂಟರ್ ಕೋ ಅರ್ಡಿನೆಟರ್ ಆಗಿ ತನ್ನ ವೃತ್ತಿ ಜೀವನ ಆರಂಭಿಸಿದರು. ತನ್ನ ಕನಸುಗಳು ನನಸಾಗಬೇಕು ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಇದ್ದ ಇವರು ಬೆಂಗಳೂರಿಗೆ ಬಂದು ಜೆಟ್ ಕಿಂಗ್ ನಲ್ಲಿ ಡಿಪ್ಲೋಮ ಇನ್ ಹಾರ್ಡ್ ವೇರ್ ಆ್ಯಂಡ್ ನೆಟ್ ವರ್ಕಿಂಗ್ ಮಾಡುತ್ತಿದ್ದು ಮತ್ತು ಅದರ ಜೊತೆಯಲ್ಲಿ ಪ್ರೆಸ್ ಡಿಸೈನರ್ ಆಗಿಯೂ ಕೆಲಸ ಮಾಡುತ್ತಿದ್ದರು. ಅನಂತರ ಕರ್ನಾಟಕ ಕಂಪ್ಯೂಟರ್ಸ್ ನಲ್ಲಿ ಕಂಪ್ಯೂಟರ್ ಇನ್ಸ್ಟ್ರಕ್ಟರ್ ಆಗಿ ಮತ್ತು ಪಾರ್ಟ್ ಟೈಮ್ ಪತ್ರಿಕೆಯ ವರದಿಗಾರನಾಗಿ ಸೇವೆಯನ್ನು ಸಲ್ಲಿಸಿದ್ದರು.

ಇಷ್ಟು ಮಾತ್ರ ಅಲ್ಲದೆ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯಲ್ಲಿಯೂ ಪಾರ್ಟ್ ಟೈಮ್ ವೃತ್ತಿಯನ್ನು ಮಾಡುತ್ತಿದ್ದರು ಮತ್ತು ಪುರಾವಕರ್ ಬಿಲ್ಡರ್ಸ್ ನಲ್ಲಿ ಇಂಟೀರಿಯರ್ ಡಿಪಾರ್ಟ್ಮೆಂಟ್ ನಲ್ಲಿ ಇಂಟೀರಿಯರ್ ಕೋ ಅರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದರು, ಎಚ್. ಡಿ.ಎಫ್.ಸಿ ಅಲ್ಲಿ ಸೇಲ್ಸ್ ಡೆವಲಪ್ಮೆಂಟ್ ಮ್ಯಾನೇಜರ್ ಆಗಿ ಇನ್ಶೂರೆನ್ಸ್ ಅಲ್ಲಿ ಕಾರ್ಯ ನಿರ್ವಹಿಸುತ್ತಿಸಿದ್ದರು. ಅಲ್ಲಿಂದ ಮಾರ್ಕೆಟಿಂಗ್ ಅಲ್ಲಿ ಯಶಸ್ಸ ಕಂಡ ಇವರು ಎಲ್.ಐ.ಸಿ ಡೈರೆಕ್ಟ್ ಮಾರ್ಕೆಟಿಂಗ್ ನಲ್ಲಿ ಪಯಣ ಶುರುಮಾಡಿದರು, ಎಲ್ ಐ ಸಿ ಯಲ್ಲಿ ಒಬ್ಬ ಉತ್ತಮ ಮಟ್ಟದ ಯಶಸ್ಸು ಇವರದಾಯಿತು. ಈಗ ಪ್ರಸ್ತುತ ಎಲ್ ಐ ಸಿ ಡೈರೆಕ್ಟ್ ಮಾರ್ಕೆಟ್ ನಲ್ಲಿ ಚೀಫ್ ಆರ್ಗನೈಸರ್ ಆಗಿ ಸೇವೆ ಸಲ್ಲಿಸುವುದರ ಜೊತೆಗೆ ಸುಖಿ ಇಂಟರಿಯರ್ಸ್ ಕಂಪೆನಿ, ಕುಂದಾಪುರ ಮಿತ್ರದಲ್ಲಿ ವರದಿಗಾರನಾಗಿ ಹಾಗೂ ಹೊಸಕಿರಣ್ ನ್ಯೂಸ್ ಎನ್ನುವ ವೆಬ್ ಪೇಜ್ ನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಒಬ್ಬ ಉತ್ತಮ ಪತ್ರ ಕರ್ತನಾಗಿ ಹೊರಹೊಮ್ಮಿರುವ ಇವರಿಗೆ ಕ್ರಿಕೆಟ್, ಕಬ್ಬಡಿ, ಕ್ಯಾರಂ, ಅಥ್ಲೆಟಿಕ್ಸ್, ನಾಟಕ, ಸಂಗೀತ, ಕಥೆ, ಕವನಗಳನ್ನು ಓದುವುದು ಬರೆಯುವುದು ಇವರ ಹವ್ಯಾಸಗಳಾಗಿದೆ. ಅದೆಷ್ಟೋ ಸಲ ಸಾರ್ವಜನಿಕ ಸ್ಥಳಗಳಲ್ಲಿ ಹಣ ಸಿಕ್ಕಿದರೆ ಅದರ ವಾರಿಸುದಾರರಿಗೆ ವಾಪಸು ನೀಡಿ ಮಾನವೀಯತೆ ಮೆರೆದಿದ್ದಾರೆ. ಮತ್ತು ಸಮಾಜದ ಏಳಿಗೆಗಾಗಿ ಬಡ ವಿದ್ಯಾರ್ಥಿಗಳಿಗೆ, ಬಡವರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು ಇವರದು. ಕನ್ನಡ ಸರಕಾರಿ ಶಾಲೆಗಳಿಗೆ ತನ್ನ ಸ್ವಂತ ಹಣದಿಂದ ವಾಟರ್ ಫಿಲ್ಟರ್, ಕ್ರೀಡಾ ಸಾಮಾಗ್ರಿ ಗಳನ್ನು ಕೊಡುಗೆ ನೀಡಿ ಸರಕಾರಿ ಶಾಲೆ ಮಕ್ಕಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.

ಕೋವಿಡ್ -19 ಸಂದರ್ಭದಲ್ಲಿ ಅಶಕ್ತರಿಗೆ ಫುಡ್ ಕಿಟ್, ಆಶಾಕಾರ್ಯಕರ್ತೆಯವರ ಜೊತೆ ಸಕ್ರಿಯವಾಗಿ ಕೆಲಸ ಮಾಡಿ, ನಾಗರಿಕರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ, ಲಾಕ್ ಡೌನ್ ಸಮಯದಲ್ಲಿ ರೋಗಿಗಳಿಗೆ ಮತ್ತು ಅಪಘಾತಕ್ಕೊಳಗಾದವರಿಗೆ ತುರ್ತು ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಿದ್ದಾರೆ. ಕುಂದಾಪುರದ ಸಾರ್ವಜನಿಕ ವಲಯಕ್ಕೆ ಕಂಟಕ ಪ್ರಾಯವಾಗಿದ್ದ ಮಾನಸಿಕ ಅಸ್ವಸ್ಥನನ್ನು ಕುಂದಾಪುರದ ASI ಸದಾಶಿವ್ ಗೋರೋಜಿ ಅವರ ಮತ್ತು ಸಾಮಾಜಿಕ ಕಾರ್ಯಕರ್ತ ಜೊತೆಗೂಡಿ ಅವರನ್ನು ಚಿಕಿತ್ಸೆಗೆ ಒಳಪಡಿಸಿದರು. ಹೀಗೆ ಹಲವಾರು ಸಾಮಾಜಿಕ ಕೆಲಸವನ್ನು ಮಾಡುವುದರ ಜೊತೆಗೆ ಕುಂದಾಪುರ ಜನತೆ ಚಿರಪರಿಚಿತ. ಅಖಿಲ ಭಾರತ ಬ್ರಾಹ್ಮಣ ಸಮ್ಮೇಳನದಲ್ಲಿ ಹೋಟೆಲ್ ಉದ್ಯಮಿ ಒಬ್ಬರು ಬಿಲ್ಲವರನ್ನು ನಿಂದಿಸಿದ ಪ್ರಕರಣ ಕುಂದಾಪುರದಲ್ಲಿ ಪ್ರಕ್ಷುಬದ್ಧ ಸೃಷ್ಟಿಯಾಗಿತ್ತು. ವ್ಯಕ್ತಿ ಸಾಕಷ್ಟು ಪ್ರಭಾವಶಾಲಿಯಾದ್ದರಿಂದ ಅವರನ್ನು ಎದುರಿಸುವ ಸಾಹಸಕ್ಕೆ ಯಾರು ಮುಂದೆ ಆಗಲಿಲ್ಲ. ಆಗ ಒಬ್ಬಂಟಿಯಾಗಿ ಬಿಲ್ಲವ ಪರವಾಗಿ ಹೋರಾಟಕ್ಕೆ ನಿಂತವರು ಕಿರಣ್ ಪೂಜಾರಿ, ಸಾಕಷ್ಟು ಪ್ರಭಾವಶಾಲಿ ವ್ಯಕ್ತಿಗಳ ಫೋನ್ ಕರೆ, ಹಣದ ಆಮಿಷ, ಜೀವ ಬೆದರಿಕೆ ಬಂದರು ದೃತಿಗೆಡದೆ, ಛಲಬಿಡದ ತ್ರಿವಿಕ್ರಮನಂತೆ ನಿಂತು ಎದುರಿಸಿ, ಬಿಲ್ಲವರಿಗೆ ಅವಹೇಳನ ಮಾಡಿದವರು ಸಾರ್ವಜನಿಕವಾಗಿ ಕ್ಷಮೆ ಕೇಳಲೆ ಬೇಕು ಎಂದು ಪಣತೊಟ್ಟು ಹೋರಾಟ ಮುನ್ನಡಿಸಿದರು, ಆಗ ಇವರ ಹೋರಾಟಕ್ಕೆ ಪ್ರವೀಣ್ ಕುಮಾರ್ ಎಂ ನೇತೃತ್ವದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಸಂಘಟನೆ ಜೊತೆಯಾಯಿತು ಹಾಗೂ ಮತ್ತೊಬ್ಬ ಯುವ ಹೋರಾಟಗಾರ ಕರ್ಕಿ ಪ್ರಶಾಂತ್ ಜೊತೆಗೂಡಿದರು. ಹೋರಾಟದ ತೀವ್ರತೆಯನ್ನು ನೋಡಿ ಉದ್ಯಮಿ ಸಾರ್ವಜನಿಕವಾಗಿ ಪತ್ರಿಕಾ ಹೇಳಿಕೆ ಕೊಡುವುದರ ಮೂಲಕ ಬಿಲ್ಲವ ಸಮುದಾಯಕ್ಕೆ ಕ್ಷಮೆಯಾಚಿಸಿದರು. ಪ್ರಸುತ್ತ ಕಿರಣ್ ಪೂಜಾರಿಯವರು ಪ್ರವೀಣ್ ಕುಮಾರ್ ಎಂ ನೇತೃತ್ವದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು,ಸಮಾಜದ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಸ್ಪಂದಿಸಿ ಅವರಿಗೆ ಆಶಾಕಿರಣವಾಗಿದ್ದರೆ. ಸಾಕಷ್ಟು ಆಶಕ್ತ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಾಗದೆ ಇದ್ದಾಗ ಕಿರಣ್ ಮಿಲಪ್ ಅನ್ನುವ ಫಂಡ್ ರೈಸರ್ ಕಂಪನಿ ಜೊತೆಗೂಡಿ ಅವರಿಗೆ ಸಹಾಯ ಮಾಡಿರುತ್ತಾರೆ. ಹಿರಿಯ ನಾಗರಿಕರಿಗೆ ತೊಂದರೆ ಆದಾಗ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಕೆಲವು ಸಂಘಟನೆಗಳು ಇವರನ್ನು ಗುರುತಿಸಿ ಸನ್ಮಾನಿಸಲು ಮುಂದಾಗ ಇವರು "ನಿಮ್ಮ ಪ್ರೀತಿಗೆ ನಾನು ಚಿರಋಣಿ, ನನಗೆ ಮಾಡುವ ಸನ್ಮಾನಕ್ಕೆ ಆಗುವ ಖರ್ಚಿನಲ್ಲಿ(ಆದಾಂಜು 5ಸಾವಿರ) ಒಂದು ಬಡ ವಿದ್ಯಾರ್ಥಿಗೆ ನೀಡಿ ಅವರ ಓದಿಗೆ ಸಹಾಯ ಮಾಡಿ" ಎನ್ನುವ ಇವರ ಮಾತನ್ನು ಕೇಳಿ ಆಶ್ಚರ್ಯ ಪಟ್ಟವರೆ ಹೆಚ್ಚು. ಇಂದಿನ ಕಾಲದಲ್ಲಿ ಹಾರ, ತುರಾಯಿ, ಹೆಸರಿಗೆ ದುಡ್ಡು ಕೊಟ್ಟು ಸನ್ಮಾನ ಮಾಡಿಸಿಕೊಳ್ಳುವ ಕಾಲದಲ್ಲಿ, ಅಪರೂಪದ ವ್ಯಕ್ತಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಅನುಯಾಯಿ

ಅನ್ಯಾಯವನ್ನು ಧೈರ್ಯವಾಗಿ ಎದುರಿಸಿ ನಿಲ್ಲುವ ಜೀವ ಬೆದರಿಕೆ ಇದ್ದರು ಯಾವುದನ್ನೂ ಲೆಕ್ಕಿಸದೆ ಸಮಾಜದ ಏಳಿಗೆಗಾಗಿ ದುಡಿಯುವ ನಿಮ್ಮ ಈ ಮನಸಿಗೆ ಇನ್ನಷ್ಟು ಧೈರ್ಯ ಕೊಡಲಿ ಮತ್ತು ಸೇವೆ ಮಾಡಲು ದೇವರು ಅನುಗ್ರಹಿಸಲಿ ಒಳ್ಳೆಯದಾಗಲಿ ಎಂದು ಹಾರೈಸುವ. ಬರಹ : ✍️ಪ್ರಶಾಂತ್ ಅಂಚನ್ ಮಸ್ಕತ್ತ್

ಅಖಿಲ ಭಾರತ ತುಳುನಾಡ ದೈವರಾದಕರ ಒಕ್ಕೂಟ ಉಡುಪಿ ಜಿಲ್ಲೆ : ಸದಸ್ಯತ್ವ ಅರ್ಜಿ ಫಾರ್ಮ್ ಬಿಡುಗಡೆ

Posted On: 17-12-2020 10:30PM

ಉಡುಪಿ ಬಬ್ಬರ್ಯ ದೈವಸ್ಥಾನದ ವಟಾರದಲ್ಲಿ ಅಖಿಲ ಭಾರತ ತುಳುನಾಡ ದೈವರಾದಕರ ಒಕ್ಕೂಟ ಉಡುಪಿ ಜಿಲ್ಲೆ (ರಿ.)ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸದಸ್ಯತ್ವ ಅರ್ಜಿ ಫಾರ್ಮ್ ಅನ್ನು ಒಕ್ಕೂಟದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಈ ಒಂದು ಸಂದರ್ಭದಲ್ಲಿ ಅಖಿಲ ಭಾರತ ದೈವರಾದಕರ ಒಕ್ಕೂಟದ ಅಧ್ಯಕ್ಷರಾದ ರವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ್ ಪೂಜಾರಿ ಬೈಕಾಡಿ, ಉಪಾಧ್ಯಕ್ಷರಾದ ಸುಧಾಕರ್ ಮಡಿವಾಳ, ನರಸಿಂಹ ಪರವ, ಯೋಗೇಶ್ ಪೂಜಾರಿ, ಅನೀಶ್ ಕೋಟ್ಯಾನ್, ಕಾರ್ಯದರ್ಶಿ ರವೀಶ್ ಕಾಮತ್, ದಯೆಶಾ ಕೋಟ್ಯಾನ್ ಹಾಗೂ ಕ್ರೀಡೆ ಕಾರ್ಯದರ್ಶಿ ಸಂತೋಷ್ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ ಅನ್ನಿ ಪ್ರಶಾಂತ್ ಪಾಣಾರ, ಗಣೇಶ್ ಪೂಜಾರಿ, ವಿಜಯ ಮಡಿವಾಳ, ಸರ್ವ ಸದಸ್ಯರು ಉಪಸ್ಥಿತರಿದ್ದರು.

ರಾಷ್ಟ್ರ-ರಾಜ್ಯಮಟ್ಟದಲ್ಲಿ ಮಿಂಚಿದ ಪ್ರತಿಭೆ ಸ್ಮಿತ ಭಂಡಾರಿಗೆ ಸನ್ಮಾನ‌

Posted On: 17-12-2020 09:27AM

ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಉಡುಪಿ ಮಹಾಸಭೆಯಲ್ಲಿ ಮಲ್ಪೆ ದಿ/ ಶ್ರೀನಿವಾಸ ಭಂಡಾರಿಯವರ ಮಗಳಾದ ಬಹುಮುಖ ಪ್ರತಿಭೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಮಿಂಚಿದ ಸ್ಮಿತ ಭಂಡಾರಿ ಇವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ 54 ಹಿರಿಯ ಕ್ಷೌರಿಕ ವೃತ್ತಿನಿರತ ಸವಿತಾ ಬಂಧುಗಳನ್ನು ಗೌರವ ವೇತನ ನೀಡಿ ಪುರಸ್ಕರಿಸಲಾಯಿತು.

ಅಚ್ಚರಿ ಮೂಡಿಸಿದ ಪೇಜಾವರ ಶ್ರೀಗಳ 3D ಭಾವಚಿತ್ರ

Posted On: 15-12-2020 06:11PM

ಹೊನ್ನಾವರ : ಕಲಾವಿದ ವಿನಯ್ ಭಟ್ ಕಬ್ಬಿನಗದ್ದೆ ಕೈ ಚಳಕದಲ್ಲಿ ನಿರ್ಮಾಣಗೊಂಡ 3D ಆಕೃತಿಯ ಪೇಜಾವರ ಮಠದ ಪೂಜ್ಯ ಶ್ರೀಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಭಾವಚಿತ್ರ ಅವರ ವೃಂದಾವನದಲ್ಲಿ ಭಕ್ತರನ್ನು ಸೆಳೆಯುತ್ತಿದೆ.

ಭಕ್ತರು ಚಿತ್ರದ ಜೊತೆಗೆ ಸೆಲ್ಫಿ ತೆಗೆದುಕೊಂಡು ಹರ್ಷಿಸಿದರು. ಲಕ್ಷ ದೀಪೋತ್ಸವದ ಸಮಯದಲ್ಲೇ ಭಾವಚಿತ್ರ ತಲುಪಿದ್ದು ವಿಶೇಷವಾಗಿತ್ತು.

ಸಾಧನೆಯ ಹಾದಿಯಲ್ಲಿ ಜನಮೆಚ್ಚಿದ ಗಾಯಕಿ ಸೌಜನ್ಯ

Posted On: 15-12-2020 05:24PM

ಸಾಧನೆ ಎನ್ನುವುದು ಯಾರದ್ದು ಮತ್ತು ಯಾವುದೇ ಹಂಗಿಲ್ಲದೆ ಮಾಡುವುದು. ಸಾಧನೆಯ ಹಾದಿಯಲ್ಲಿ ನಡೆಯುವವನಿಗೆ ಯಾವುದೇ ಅಹಂ ಇರಬಾರದು. ಅಂತಹ ಒಬ್ಬ ಸಾಮಾನ್ಯನಿಗೆ ಮಾತ್ರ ಸಾಧಕನಾಗಿ ಹೊರ ಹೊಮ್ಮಲು ಸಾಧ್ಯ. ತನ್ನ ಮುಗುಳುನಗೆ ಮತ್ತು ಮುಗ್ದ ಮನಸ್ಸಿನಿಂದ ಎಲ್ಲರ ಮನಸು ಗೆದ್ದ ಅದ್ಭುತ ಕಂಠದ ಹಾಡುಗಾರ್ತಿ ಸೌಜನ್ಯ.

ಸುಳ್ಯ ತಾಲೂಕಿನ ಬೆಳ್ಳಾರೆಯ ಕೊಡಿಯಾಲ ಗ್ರಾಮದ ದಿ. ಕುಶಾಲಪ್ಪ ಮತ್ತು ದೇವಕಿ ದಂಪತಿಗಳ ಮೂರನೇಯ ಮಗಳು ಸೌಜನ್ಯ. ಸುಮಧುರ ಗಾಯನದ ಮೂಲಕ ಮನ ಸೆಳೆದಿರುವ ಈಕೆಗೆ ಸಂಗೀತವೇ ಉಸಿರು! ಹುಟ್ಟಿದ್ದು ಬಡ ಕುಟುಂಬದಲ್ಲಿ . ತನ್ನ ಜೀವನಕ್ಕಾಗಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಸಣ್ಣ ಪ್ರಾಯದಿಂದಲೂ ಸಂಗೀತ ಮತ್ತು ಹಾಡುವುದು ಎಂದರೆ ಎಲ್ಲಿ ಇಲ್ಲದ ಆಸಕ್ತಿ. ಆದರೆ ಇವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ , ಪ್ರೋತ್ಸಾಹ ಮಾಡುವವರು ಇಲ್ಲದೇ ಸಂಗೀತದಲ್ಲಿ ಸಾಧನೆ ಮಾಡಲು ಸಾಧ್ಯವಾಗಿಲ್ಲ ಆದರೂ ತಾನು ಸಾಧನೆ ಮಾಡಬೇಕು, ಎಲ್ಲರೂ ಗುರುತಿಸಬೇಕು ಎನ್ನುವ ಕನಸು ಕನಸಾಗಿಯೇ ಉಳಿದಿತ್ತು.

ಆದರೂ ತನ್ನ ಪ್ರಯತ್ನ ಬಿಡಲ್ಲಿಲ ಬೆಳ್ಳಾರೆ ಕಿರಣ್ ಕುಮಾರ್ ಗಾನಸಿರಿಯವರ ಬಳಿ ಒಂದು ವರ್ಷ ಸಂಗೀತ ಅಭ್ಯಾಸ ಮಾಡಿದ ನಂತರವು ಅಷ್ಟೊಂದು ವೇದಿಕೆಗಳು ಸಿಗಲಿಲ್ಲ. ಆದರೂ ಪ್ರಯತ್ನ ಬಿಡದ ಸೌಜನ್ಯ 2019 ರಲ್ಲಿ ಕರಾವಳಿ ಗಾನಕೋಗಿಲೆ ಆಯ್ಕೆಯಾದ ನಂತರ ಇವರ ಸಾಧನೆಯ ಪಯಣ ಮುಂದುವರಿಯಿತು. ತುಳುನಾಡಿನ ಹೆಮ್ಮೆಯ ಗಾಯಕ ಅರ್ವಿಂದ್ ವಿವೇಕ್ ರವರ ಕರಾವಳಿ ಗಾನಕೋಗಿಲೆ ಎನ್ನುವ ರಿಯಾಲಿಟಿ ಶೋ ದಲ್ಲಿ ಭಾಗವಹಿಸಿದ ಸೌಜನ್ಯ ಹಂತ ಹಂತವಾಗಿ ಸಂಗೀತದಲ್ಲಿ ಬೆಳೆಯಲಾರಂಭಿಸಿದ್ದರು. ಇವರ ಈ ಸಾಧನೆಗೆ ಅರ್ವಿಂದ್ ಮೆಲೋಡಿಸ್ ಟೀಮ್ ನ ಎಲ್ಲಾ ಸದ್ಯಸರು ಬೆಂಬಲವಾಗಿ ನಿಂತಿದ್ದಾರೆ ಅರ್ವಿಂದ್ ವಿವೇಕ್ ರವರ ತಂಡದ ಜೊತೆ ಗುರುತಿಸಿಕೊಂಡ ನಂತರ ಇವರು ಜನಪ್ರಿಯರಾದರು. ಭಾರತದಲ್ಲಿ ಮಾತ್ರ ಅಲ್ಲದೆ ವಿದೇಶದಲ್ಲಿಯೂ ಇವರ ಅಭಿಮಾನಿಗಳು ಇದ್ದಾರೆ. ಸದಾ ನಗು ಮುಖದ ಸೌಜನ್ಯ ನಿರಂತರ ಫೇಸ್ಬುಕ್ ಲೈವ್ ಶೋ ದಲ್ಲಿ ಕಾರ್ಯ ನಿರಾತರಾಗಿದ್ದಾರೆ. ಈಗ ಸೌಜನ್ಯ ಒಬ್ಬ ಜನಪ್ರಿಯ ಗಾಯಕಿ.!!

ಜನಪ್ರಿಯ ಗಾಯಕಿ ಆದರೂ ಯಾವುದೇ ದೊಡ್ಡಸ್ತಿಕೆ ಇಲ್ಲದೆ ತನ್ನದೇ ಆದ ಬಟ್ಟೆ ಅಂಗಡಿ ತೆರೆದು ಟೈಲರಿಂಗ್ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅದೆಷ್ಟೋ ಜನರ ಮನಸ್ಸು ಗೆದ್ದಿರುವ ಈ ಅದ್ಭುತ ಕಂಠದ ಸೌಜನ್ಯ ಇವರಿಗೆ ಇವರು ಕಂಡ ಕನಸು ನನಸಾದರು ಇನ್ನು ದೊಡ ಸಾಧನೆ ಮಾಡಬೇಕು ಎನ್ನುವ ಆಸೆ ಇದೆ. ಅವರ ಆಸೆ ಆದಷ್ಟು ಬೇಗ ನೆರವೇರಲಿ ಇನ್ನಷ್ಟು ಅವಕಾಶ ಸಿಗಲಿ ಸರಸ್ವತಿ ದೇವಿಯ ಅನುಗ್ರಹ ಸದಾ ಇವರ ಮೇಲಿರಲಿ ಎಂದು ಹಾರೈಸುವ. ಲೇಖನ : ಪ್ರಶಾಂತ್ ಅಂಚನ್ ಮಸ್ಕತ್ತ್

ಕೆಲಸಕ್ಕಾಗಿ ಮುಂಬಯಿ ತಲುಪಿದ ಹುಡುಗ ಇಂದು ಸುಮಾರು ಐದು ಸಾವಿರ ಜನರಿಗೆ ಕೆಲಸ ಕೊಡಿಸಿದ ಅನ್ನದಾತ - ಗೋವಿಂದ ಬಾಬು ಪೂಜಾರಿ

Posted On: 15-12-2020 04:21PM

ಸಾಮಾನ್ಯವಾಗಿ ಕೆಲವು ವರ್ಷಗಳ ಹಿಂದೆ ಕರಾವಳಿಯವರು ಜೀವನವನ್ನು ಹುಡುಕಿಕೊಂಡು ಹೋಗುತ್ತಿದ್ದುದು ಮಹಾನಗರಿ ಮುಂಬಯಿಗೆ. ಮುಖ್ಯವಾಗಿ ಹೋಟೇಲುಗಳಲ್ಲಿ ಕೆಲಸ ಮಾಡಲು. ಅಂದು ಏಳನೆಯ ತರಗತಿಯವರೆಗೆ ಓದಿದ್ದ ಆ ಹುಡುಗ ಕೂಡ ಜೀವನವನ್ನು ಹುಡುಕಿಕೊಂಡು ಮುಂಬಯಿ ಬಸ್ ಹತ್ತಿದ್ದ. ಕೈಯಲ್ಲಿ ದುಡ್ಡಿರಲಿಲ್ಲ. ಆದರೆ ಕಣ್ಣ ತುಂಬಾ ಕನಸುಗಳಿದ್ದವು. ಆ ಹುಡುಗನ ಹೆಸರು ಗೋವಿಂದ ಬಾಬು ಪೂಜಾರಿ

ಊರು ಕಡಲತಡಿಯ ಬೈಂದೂರಿನ ಬಿಜೂರು. ಕಡು ಬಡತನ. ಓದು ಮುಂದುವರಿಸಲು ಸಾಧ್ಯವಾಗದ ಪರಿಸ್ಥಿತಿ. ಸಾಮಾನ್ಯವಾಗಿ ಸ್ವಲ್ಪ ಮಟ್ಟಿಗೆ ಈ ಕಷ್ಟಗಳಿಂದ ಹೊರಬರಲು ಕಣ್ಮುಂದೆ ಕಾಣಿಸುವುದೇ ಹೊಟೇಲ್ ಕೆಲಸ. ಅಂದು ಕನಸು ತುಂಬಿದ್ದ ಕಣ್ಣುಗಳಿಂದ ಬಸ್ಸಿನಲ್ಲಿ ಎಣ್ಣೆ ಡಬ್ಬದ ಮೇಲೆ ಗೋಣಿಚೀಲ ಹಾಕಿಕೊಂಡು ಕುಳಿತು ಸುಮಾರು ಇಪ್ಪತ್ತು ಗಂಟೆ ಪ್ರಯಾಣ ಮಾಡಿ ಮುಂಬಯಿ ತಲುಪಿದ್ದ ಗೋವಿಂದ ಪೂಜಾರಿ ಆರಂಭದಲ್ಲಿ ಒಂದು ಕ್ಯಾಂಟೀನ್ ನಲ್ಲಿ ಟೀ ಮಾಡುವ ಹುಡುಗನಾಗಿ ಸೇರಿಕೊಳ್ಳುತ್ತಾರೆ. ಆಮೇಲೆ ಇನ್ನೊಂದು ಹೋಟೇಲ್ ನಲ್ಲಿ ಅಡಿಗೆಯವರಾಗಿ ಕೆಲಸಮಾಡುತ್ತಾರೆ. ಆದರೆ ತನ್ನದೇ ಆದ ಸ್ವಂತ ಉದ್ಯಮ ಮಾಡಬೇಕೆಂಬ ತುಡಿತ ಆ ಮನುಷ್ಯನಲ್ಲಿತ್ತು. ದುಡಿದು ಉಳಿಸಿದ ಹಣದಿಂದ ಒಂದು ಕಿರಾಣಿ ಅಂಗಡಿ ಆರಂಭಿಸುತ್ತಾರೆ. ಆದರೆ ವಿಪರೀತ ನಷ್ಟ ಅನುಭವಿಸುತ್ತಾರೆ. ನಂತರ ಒಬ್ಬರ ಸಹಾಯದಿಂದ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಕ್ಲಿನಿಂಗ್ ಕೆಲಸಕ್ಕೆ ಸೇರುತ್ತಾರೆ. ನಂತರ ಅದೇ ಹೋಟೇಲ್ ನಲ್ಲಿ ಕಿಚನ್ ವಿಭಾಗ ಸೇರಿಕೊಳ್ಳುತ್ತಾರೆ. ಮುಂದೆ ಅನುಭವದಿಂದ ಹಾಗೂ ಪರಿಶ್ರಮದ ಫಲವಾಗಿ ನಾಲ್ಕೈದು ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಶೇಫ್ ಆಗಿ ಕೆಲಸಮಾಡುತ್ತಾರೆ. ಆದರೆ ತನ್ನ ಸ್ವಂತ ಉದ್ಯಮ ಮಾಡಬೇಕೆಂಬ ತುಡಿತ ನಿದ್ದೆ ಮಾಡಲಿಕ್ಕೆ ಬಿಡಬೇಕಲ್ವ. ಒನ್ ಫೈನ್ ಡೇ ಈ ಕೆಲಸಗಳಿಗೆಲ್ಲ ಇತೀಶ್ರೀ ಹಾಡಿ ಒಂದು ಕಂಪನಿಯಲ್ಲಿ ತಮ್ಮದೇ ಕ್ಯಾಂಟೀನ್ ಆರಂಭಿಸುತ್ತಾರೆ. ಆಗ ಕಾಲ ಸ್ತಂಭಿಸಿತು. ಮುಂದೆಂದೂ ಅವರು ಹಿಂತಿರುಗಿ ನೋಡಲಿಲ್ಲ. ನಾಲ್ಕು ಜನ ಉದ್ಯೋಗಿಗಳಿಂದ ಆರಂಭವಾಯಿತು ಆ ಕ್ಯಾಂಟೀನ್ . ಮುಂದೆ ಆಹಾರದ ಗುಣಮಟ್ಟ, ಉತ್ತಮ ಸೇವೆಗಳಿಂದ ಮುಂಬಯಿಯ ಸುಮಾರು ಮೂವತ್ತು ಕಂಪನಿಗಳಲ್ಲಿ ಇವರ ಕ್ಯಾಂಟೀನ್ ಆರಂಭವಾಗುತ್ತದೆ. ಆಮೇಲೆ ಹೈದರಾಬಾದ್, ಪುಣೆ, ಜಾರ್ಖಂಡ್, ಗುಜರಾತ್ ಮುಂತಾದ ಕಡೆಗಳಲ್ಲಿನ ಕಂಪನಿಗಳಲ್ಲಿ ತಮ್ಮ ಕ್ಯಾಂಟೀನ್ ಆರಂಭಿಸುತ್ತಾರೆ. 2007 ರಲ್ಲಿ ಇವರ ಕಂಪನಿಗೆ "ಶೆಫ್ ಟಾಕ್ ಫುಡ್ ಆ್ಯಂಡ್ ಹಾಸ್ವಿಟ್ಯಾಲಿಟಿ ಪ್ರೈವೇಟ್ ಲಿಮಿಟೆಡ್ " ಎಂದು ನಾಮಕರಣಗೊಂಡು ಇಂದು ಸುಮಾರು ಐದಾರು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸರಿ ಸುಮಾರು ಐದು ಸಾವಿರ ಜನರಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ.

ಕೆಲವೊಂದು ವಿಷಯಗಳನ್ನು ಓದಿ ತಿಳಿದು ಕೊಳ್ಳಬಹುದು. ಆದರೆ ಹಸಿವನ್ನು ಓದಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅದನ್ನು ಅನುಭವಿಸಿದವನು ಮಾತ್ರ ತಿಳಿದುಕೊಳ್ಳುತ್ತಾನೆ. ಗೋವಿಂದ ಪೂಜಾರಿ ಹಸಿವನ್ನು ಅನುಭವಿಸಿ ತಿಳಿದುಕೊಂಡವರು. ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಊರಿನಲ್ಲಿ " ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ " ಸ್ಥಾಪಿಸಿದ್ದಾರೆ. ಇದರ ಮುಖ್ಯ ಧ್ಯೇಯ ವಿದ್ಯೆ ಮತ್ತು ಆರೋಗ್ಯ. ಕೋವಿಡ್ 19 ಸಂದರ್ಭದಲ್ಲಿ ಈ ಒಂದು ಟ್ರಸ್ಟಿನಿಂದ ಬೈಂದೂರು ಮತ್ತು ಕುಂದಾಪುರಗಳಲ್ಲಿನ ಹಲವಾರು ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಲಾಯಿತು. ನೀರಿನ ಅಭಾವವಿದ್ದ ಬೀಜೂರು ಗ್ರಾಮಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು. ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನೂಕೂಲ ಮಾಡಿ ಕೊಡಲಾಗುತ್ತಿದೆ.

ಬೆಂಗಳೂರಿನಲ್ಲಿ ಪ್ರಜ್ಞಾಸಾಗರ್ ಹೋಟೆಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಈಗಾಗಲೆ ನಾಲ್ಕು ಹೋಟೆಲುಗಳು ಆರಂಭಗೊಂಡಿವೆ. ಇನ್ನು ಹತ್ತು ಹೋಟೇಲುಗಳು ಆರಂಭಗೊಳ್ಳಲಿವೆ. ಇನ್ನೂ ಹೊಸ ಪ್ರಾಡಕ್ಟ್ " ಫಿಶ್ ಚಿಪ್ಸ್ " ಕೂಡ ಇವರ ಕಂಪನಿಯ ವತಿಯಿಂದ ಲಾಂಚ್ ಆಗಿದೆ. ಸುಮಾರು ಹತ್ತು ಸಾವಿರ ಉದ್ಯೋಗ ಸೃಷ್ಟಿಸಬೇಕೆಂಬ ಕನಸು ಗೋವಿಂದ ಬಾಬು ಪೂಜಾರಿಯವರದ್ದು. ಅವರ ಕನಸು ನನಸಾಗಲಿ. ಯೂಟ್ಯೂಬ್ ನಲ್ಲಿ ಅವರ ಕೆಲವು ಸಂದರ್ಶನಗಳನ್ನು ನೋಡಿ ಶಬ್ಧ ರೂಪಕ್ಕೆ ಅಕ್ಷರ ರೂಪ ಕೊಟ್ಟಿದ್ದೇನೆ. ಇಂತವರು ಇಂದಿನ ಬಡ ವಿದ್ಯಾರ್ಥಿಗಳಿಗೆ ಆದರ್ಶವಾಗಲಿ. ಅವರ ಉದ್ಯಮದಲ್ಲಿ ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ. ಹಸಿವನ್ನು ಅನುಭವಿಸಿ ತಿಳಿದುಕೊಂಡಿರುವ ಅವರಿಂದ ಬಹಳಷ್ಟು ಕುಟುಂಬಗಳ ಹಸಿವಿನ ಚೀಲ ತುಂಬಲಿ. ಲೇಖನ :ಅರುಣ್ ವಿ ಬಾರ್ಕೂರ್