Updated News From Kaup
ಮತ್ತೆ ಬಂದಿದೆ ನವರಾತ್ರಿ : ನಮ್ಮ ಬದುಕಿನ ವಿಜಯದ ಹಬ್ಬವಾಗಲಿ

Posted On: 03-10-2024 07:21AM
ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ನಾವು ನವರಾತ್ರಿ ಹಬ್ಬದ ಮೂಲಕ ಸ್ಮರಿಸುತ್ತೇವೆ. ನವರಾತ್ರಿಯು ದುರ್ಗಾ ದೇವಿಗೆ ಸಮರ್ಪಿತವಾದ ಮಂಗಳಕರ ಹಬ್ಬವಾಗಿದೆ. ಒಂಬತ್ತು ರಾತ್ರಿಗಳ ಸಾಂಕೇತಿಕ ಆಚರಣೆಯಾಗಿರುವ ಈ ಹಬ್ಬಉತ್ತರ ಮತ್ತು ಪೂರ್ವ ಭಾರತದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಆಚರಣೆಯು ಹಲವಾರು ನೃತ್ಯ ಪ್ರದರ್ಶನಗಳನ್ನು, ವಿವಿಧ ವಿಶೇಷ ಪಾಕವಿಧಾನಗಳನ್ನು ಮತ್ತು ದುರ್ಗಾ ದೇವಿಗೆ ಸಲ್ಲಿಸುವ ಪ್ರಾರ್ಥನೆಗಳನ್ನು ಒಳಗೊಂಡಿರುತ್ತದೆ.
ಶಾರದೀಯ ನವರಾತ್ರಿಯನ್ನೇಕೆ ಆಚರಿಸಲಾಗುತ್ತದೆ..? ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ವಿವರಿಸಿದ ಕಥೆಗಳ ಪ್ರಕಾರ, ಶಕ್ತಿಯ ಅಧಿದೇವತೆಯಾದ ದುರ್ಗಾ ದೇವಿಯು ಮಹಿಷಾಸುರನನ್ನು ಕೊಂದು ರಾಕ್ಷಸ ಶಕ್ತಿಯನ್ನು ನಾಶಪಡಿಸಿದಳು ಮತ್ತು ಬ್ರಹ್ಮಾಂಡದ ಒಳಿತನ್ನು ರಕ್ಷಿಸಿದ್ದಾಳೆ. ದುರ್ಗಾ ದೇವಿಯು ಮಹಿಷಾಸುರನ ಮೇಲೆ ದಾಳಿ ಮಾಡಿ ಒಂಬತ್ತು ದಿನಗಳ ಕಾಲ ಅವನೊಂದಿಗೆ ಹೋರಾಡಿ ಹತ್ತನೇ ದಿನ ಅವನನ್ನು ಹತ್ಯೆಗೈದ ಸಮಯವು ಅಶ್ವಿನ ಮಾಸವಾಗಿತ್ತು. ಆದ್ದರಿಂದ, ಅಶ್ವಿನ ಮಾಸದ ಈ ಒಂಬತ್ತು ದಿನಗಳು ಶಕ್ತಿಯ ಆರಾಧನೆಗೆ ಮೀಸಲಾಗಿವೆ. ಪಂಚಾಂಗದ ಪ್ರಕಾರ, ಶರತ್ಕಾಲವು ಅಶ್ವಿನ ಮಾಸದಲ್ಲಿ ಪ್ರಾರಂಭವಾಗುತ್ತದೆ, ಆದ್ದರಿಂದ ಇದನ್ನು ಶಾರದೀಯ ನವರಾತ್ರಿ ಎಂದು ಕರೆಯಲಾಗುತ್ತದೆ. ಶಾರದೀಯ ನವರಾತ್ರಿಯ 10 ನೇ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ.
ನವರಾತ್ರಿ ಹಬ್ಬದ ಇತಿಹಾಸ : ನವರಾತ್ರಿ ಆಚರಣೆಯ ಹಿಂದೆ ಹಲವು ಐತಿಹ್ಯಗಳಿವೆ. ದಂತಕಥೆಯ ಪ್ರಕಾರ, ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಒಂಬತ್ತು ದಿನಗಳ ಕಾಲ ಹೋರಾಡಿದಳು ಮತ್ತು ನಂತರ ನವಮಿಯ ರಾತ್ರಿ ಅವನನ್ನು ಕೊಂದಳು ಎಂದು ಕಥೆಯಲ್ಲಿ ಹೇಳಲಾಗಿದೆ. ಅಂದಿನಿಂದ ದೇವಿಯನ್ನು 'ಮಹಿಷಾಸುರಮರ್ದಿನಿ' ಎಂದು ಕರೆಯುತ್ತಾರೆ. ಅಂದಿನಿಂದ, ತಾಯಿ ದುರ್ಗೆಯ ಶಕ್ತಿಗೆ ಸಮರ್ಪಿತವಾದ ನವರಾತ್ರಿಯ ಉಪವಾಸವನ್ನು ಆಚರಿಸುವಾಗ ಅವಳ 9 ರೂಪಗಳನ್ನು ಪೂಜಿಸಲಾಗುತ್ತದೆ. ಇನ್ನೊಂದು ದಂತಕಥೆಯ ಪ್ರಕಾರ, ಭಗವಾನ್ ಶ್ರೀರಾಮನು ದುಷ್ಟ ರಾವಣನನ್ನು ಕೊಂದು ಒಳಿತನ್ನು ವಿನಾಶದಿಂದ ರಕ್ಷಿಸಿದನು. ಈ ಉದ್ದೇಶವನ್ನು ಸಾಧಿಸಲು, ನಾರದನು ನವರಾತ್ರಿಯ ವ್ರತದ ಆಚರಣೆಗಳನ್ನು ಮಾಡಲು ಶ್ರೀರಾಮನನ್ನು ವಿನಂತಿಸಿದನು. ಆಗ ಭಗವಾನ್ ಶ್ರೀರಾಮನು ಉಪವಾಸವನ್ನು ಮುಗಿಸಿದ ನಂತರ ಲಂಕೆಯ ಮೇಲೆ ದಾಳಿ ಮಾಡಿ ರಾವಣನನ್ನು ಕೊಂದನು. ಅಂದಿನಿಂದ ನವರಾತ್ರಿಯ ವ್ರತ ಸಾಧನೆಗಾಗಿ ಮಾಡಲಾಗುತ್ತಿದೆ. ಕೆಟ್ಟದ್ದರ ಮೇಲೆ ಒಳಿತಿನ ವಿಜಯವನ್ನು ಹೇಗೆ ನವರಾತ್ರಿಯು ಸೂಚಿಸುತ್ತದೆಯೋ ಹಾಗೇ ನಮ್ಮ ಕೆಟ್ಟ ಆಲೋಚನೆ, ಅಹಿತಕರ ಘಟನೆಗಳು, ನಕಾರಾತ್ಮಕ ಶಕ್ತಿಗಳ ಆರ್ಭಟವನ್ನು ಸಂಹಾರ ಮಾಡಲು ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಪ್ರಧಾನಿಯವರು ಕೂಡ ಉಪವಾಸವಿದ್ದು ಆಚರಣೆ ಮಾಡುತ್ತಾರೆ. ಈ ಹಬ್ಬ ನಮ್ಮ ಬದುಕಿನ ಹೊಸ ಮನ್ವಂತಕ್ಕೆ ಸಾಕ್ಷಿಯಾಗಲಿ'
ಲೇಖನ : ರಾಘವೇಂದ್ರ ಪ್ರಭು, ಕವಾ೯ಲು
ಮಲ್ಪೆಯಲ್ಲಿ ಮತ್ಸ್ಯ ಕ್ಷಾಮ : ಮೀನುಗಾರರ ಸಂಕಷ್ಟ ಪರಿಹಾರಕ್ಕೆ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಸಮುದ್ರ ಪೂಜೆ

Posted On: 02-10-2024 04:51PM
ಮಲ್ಪೆ : ಮತ್ಸ್ಯ ಕ್ಷಾಮದಿಂದ ಮೀನುಗಾರರ ಸಂಕಷ್ಟ ಪರಿಹಾರಕ್ಕಾಗಿ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮಪೀಠ ಪೀಠಾಧೀಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಮಲ್ಪೆಯಲ್ಲಿ ಬುಧವಾರ 108 ಪುಣ್ಯ ಕ್ಷೇತ್ರ ಪ್ರಸಾದ ಸಮುದ್ರಕ್ಕೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶ್ರೀ ಹನುಮಾನ್ ವಿಠೋಭ ಭಜನಾ ಮಂದಿರದ ಅಧ್ಯಕ್ಷರಾದ ಸತೀಶ್ ಬಂಗೇರ, ಅರ್ಚಕರಾದ ನವೀನ್, ಡೀಪ್ ಸಿ ಸಂಘದ ಅಧ್ಯಕ್ಷರಾದ ಸುಭಾಷ್ ಮೆಂಡನ್, ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಡೀಪ್ ಸಿ ತಂಡೇಲರ ಅಧ್ಯಕ್ಷರಾದ ರವಿ ರಾಜ್ ಸುವರ್ಣ, ಪರ್ಸಿನ್ ಸಂಘದ ಅಧ್ಯಕ್ಷರಾದ ನಾಗರಾಜ್ ಸುವರ್ಣ, ಮತ್ಸ್ಯೋದ್ಯಮಿ ಶಶಿಧರ್ ಕುಂದರ್, ಶೇಖರ್ ಎಸ್ . ಪುತ್ರನ್, ರತ್ನಾಕರ ಸಾಲಿಯನ್, ದಿನೇಶ್ ಬಂಗೇರ, ಸುಂದರ್ ಪಿ.ಸಾಲಿಯನ್, ವಿಜಯ ಕುಂದರ್, ವಿನೋದ್ ಮಲ್ಪೆ, ಪುಷ್ಪ ಶಶಿಧರ್ ಕುಂದರ್, ಗೀತಾಂಜಲಿ ಎಮ್. ಸುವರ್ಣ, ವಿಘ್ನೇಶ್ ನೀಲಾವರ, ಸತೀಶ್ ದೇವಾಡಿಗ, ಶಶಾಂಕ್, ಆರ್ಯನ್ ಉಪಸ್ಥಿತರಿದ್ದರು.
ನೆಹರು ಯುವ ಕೇಂದ್ರ : ಸ್ವಚ್ಚತಾ ಹಿ ಸೇವಾ ಕಾಯ೯ಕ್ರಮ

Posted On: 02-10-2024 04:08PM
ಉಡುಪಿ : ಗಾಂಧೀಜಿಯವರಂತಹ ವ್ಯಕ್ತಿಗಳು ಪ್ರಪಂಚದಲ್ಲಿ ಯಾರೂ ಇರಲು ಅಸಾಧ್ಯ. ಅವರ ವ್ಯಕ್ತಿತ್ವವನ್ನು ನಾವೆಲ್ಲರೂ ಅರ್ಥ ಮಾಡಿದಾಗ ಅವರಲ್ಲಿರುವ ಅಪೂರ್ವ ಶಕ್ತಿ ನಮಗೆ ತಿಳಿಯಲು ಸಾಧ್ಯ ಎಂದು ರೆಡ್ ಕ್ರಾಸ್ ಸೊಸೈಟಿ ಉಡುಪಿ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು. ಅವರು ಗಾಂಧಿ ಜಯಂತಿಯ ಪ್ರಯುಕ್ತ ನೆಹರು ಯುವ ಕೇಂದ್ರ ಜಿಲ್ಲಾಡಳಿತ ಉಡುಪಿ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಲ್ಪೆ ಸಮುದ್ರ ತೀರದಲ್ಲಿ ನಡೆದ ಸ್ವಚ್ಛತಾ ಹಿ ಸೇವಾ 2024 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮಾನಸಿಕ ಸ್ವಚ್ಛತೆ, ಭೌತಿಕ ಸ್ವಚ್ಛತೆ ಮತ್ತು ಪರಿಸರ ಸ್ವಚ್ಛತೆಯ ಬಗ್ಗೆ ಗಾಂಧೀಜಿಯವರು ಹೆಚ್ಚಿನ ಒತ್ತನ್ನು ನೀಡಿದರು ಈ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನ ಗಾಂಧೀಜಿಯವರಿಗೆ ಸಲ್ಲಿಸಿದ ಅಪೂರ್ವ ನಮನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸುಕನ್ಯಾ ಮೇರಿ ನೆರವೇರಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸರ್ಕಾರಿ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ ಪ್ರೊ. ರಘು ನಾಯ್ಕ್, ಮಮತಾ, ಸರಸ್ವತಿ ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಉಡುಪಿ ಎಸ್.ಕೆ.ಪಿ ಎ ಅಧ್ಯಕ್ಷ ಸುಧೀರ್ ಶೆಟ್ಟಿ, ಮಾನವ ಹಕ್ಕು, ಮಹಾ ಮೈತ್ರಿಯ ಪ್ರೀತಿ ತಂಗಪ್ಪನ್ ನೆಹರು ಯುವ ಕೇಂದ್ರದ ಅಧಿಕಾರಿ ಶ್ರೀದೇವಿ ರಾವ್ ಮುಂತಾದವರು ಉಪಸ್ಥಿತರಿದ್ದರು.
ಸ್ವಚ್ಛ ಭಾರತ್ ಫ್ರೆಂಡ್ಸ್ ನ ರಾಘವೇಂದ್ರ ಪ್ರಭು ಕವಾ೯ಲು ಸ್ವಚ್ಚತಾ ಪ್ರತಿಜ್ಞಾವಿಧಿ ಬೋಧಿಸಿದರು. ಕಾಯ೯ಕ್ರಮದಲ್ಲಿ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜು ಮತ್ತು ಸರಸ್ವತಿ ಯುವಕ ಮಂಡಲ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ ನಡೆಯಿತು.
ಉಚ್ಚಿಲ ರೋಟರಿ ಕ್ಲಬ್, ಉಚ್ಚಿಲ ಸರಸ್ವತಿ ಮಂದಿರ ಶಾಲೆ : ಉಚ್ಚಿಲ ಬೀಚ್ನಲ್ಲಿ ಸ್ವಚ್ಛ ಭಾರತ್ ಅಭಿಯಾನ

Posted On: 02-10-2024 04:03PM
ಉಚ್ಚಿಲ : ಗಾಂಧಿ ಜಯಂತಿ ಅಂಗವಾಗಿ ಉಚ್ಚಿಲ ರೋಟರಿ ಕ್ಲಬ್ ಮತ್ತು ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಸಹಯೋಗದಲ್ಲಿ ಸ್ವಚ್ಛ ಭಾರತ್ ಅಭಿಯಾನ ಬುಧವಾರ ಉಚ್ಚಿಲ ಬೀಚ್ ನಲ್ಲಿ ನಡೆಯಿತು.

ಈ ಸಂದರ್ಭ ರೋಟರಿ ಕ್ಲಬ್ ಅಧ್ಯಕ್ಷರಾದ ಇಬಾದುಲ್ಲ ರಫೀಕ್ ಅಹಮ್ಮದ್, ಕಾರ್ಯದರ್ಶಿ ಸತೀಶ್ ಕುಂಡಂತಾಯ, ಕೋಶಾಧಿಕಾರಿ ಅಚ್ಯುತ ಶೆಣೈ, ಸದಸ್ಯರಾದ ನಜ್ಮ, ಸತೀಶ್ ಕುಲಾಲ್, ಉಚ್ಚಿಲ ಸರಸ್ವತಿ ಮಂದಿರ ಶಾಲೆಯ 120 ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ನ ವತಿಯಿಂದ ಸಾಮಾಜಿಕ ಕಾರ್ಯ

Posted On: 02-10-2024 03:51PM
ಪಡುಬಿದ್ರಿ : ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಗಾಂಧಿ ಜಯಂತಿಯ ಅಂಗವಾಗಿ ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ ಸಂಸ್ಥೆಯ ಸದಸ್ಯರು ಪಡುಬಿದ್ರಿ ಬೀಚ್ ಗೆ ಹೋಗುವ ರಸ್ತೆಯ ಮಧ್ಯೆ ಕಾಮಿನಿ ನದಿಗೆ ನಿರ್ಮಾಣವಾದ ಸೇತುವೆಯಲ್ಲಿ ಹೊಂಡಬಿದ್ದು ಕಬ್ಬಿಣದ ಸರಳುಗಳು ಕಾಣುತ್ತಿದ್ದು ಅದನ್ನು ಸರಿಪಡಿಸಿ ಕಾಂಕ್ರೀಟ್ ಹಾಕಿದರು.
ಕಳೆದ ಐದು ವರ್ಷಗಳಿಂದ ಸಮಾಜಸೇವಾ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು, ಈ ಬಾರಿಯೂ ಸಂಸ್ಥೆಯ ಸಾಮಾಜಿಕ ಜಾಲತಾಣದ ಉಸ್ತುವಾರಿ ಕಿರಣ್ ರಾಜ್ ಕರ್ಕೇರ ಹಾಗೂ ಸಂಘಟನಾ ಕಾರ್ಯದರ್ಶಿ ಸಂತೋಷ್ ಸಾಲಿಯಾನ್ ರವರ ನೇತೃತ್ವದಲ್ಲಿ ಸಂಸ್ಥೆಯ ಉತ್ಸಾಹಿ ಸದಸ್ಯರುಗಳಾದ ಪವನ್ ,ವರುಣ್, ವರ್ಣಿತ್ ರವರು ಸಹಕರಿಸಿದರು. ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇವರಿಗೆ ಬಬುಲಿ ಹರ್ಬಲ್ ಬ್ಯುಟಿಪಾರ್ಲರ್ ಕಾರ್ನಾಡ್ ಇದರ ಮಾಲಕರಾದ ಗೀತಾ ಸಂತೋಷ್ ಹಾಗೂ ಸುಬ್ರಹ್ಮಣ್ಯ ರಾವ್ ಪಡುಬಿದ್ರಿ ಇವರು ಇಂದಿನ ಶ್ರಮದಾನಕ್ಕೆ ಬೇಕಾದ ವಸ್ತುಗಳ ವೆಚ್ಚ ಜೊತೆಗೆ ಶರಣ್ ಎಲೆಕ್ಟ್ರಾನಿಕ್ ನ ಮಾಲೀಕರಾದ ಪ್ರಶಾಂತ್ ಶೆಟ್ಟಿ, ಕಾವೇರಿ ಪೈಂಟ್ ಪಡುಬಿದ್ರಿಯ ಮಾಲೀಕರಾದ ಶರತ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ನೀತಾ ಗುರುರಾಜ್, ಕೊಲ್ನಾಡ್ ಪ್ರಸಿದ್ಧ ಉಧ್ಯಮಿಯಾದ ಪ್ರಶಾಂತ್ ಕಾಂಚನ್ ಹಾಗೂ ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಅವರು ಸಂಸ್ಥೆಯ ವತಿಯಿಂದ ಪರಿಕರಗಳನ್ನು ಒದಗಿಸಿರುತ್ತಾರೆ.
ಉಡುಪಿ : ಉಚಿತ ಬೃಹತ್ ವೈದ್ಯಕೀಯ ಶಿಬಿರ

Posted On: 01-10-2024 12:41PM
ಉಡುಪಿ : ಆರೋಗ್ಯದಲ್ಲಿ ಪ್ರಾಥಮಿಕ ಹಂತದ ಪರೀಕ್ಷೆ ಮತ್ತು ರೋಗ ಪತ್ತೆ ಹಚ್ಚುವಿಕೆ ಇದನ್ನು ನಾವು ಉಚಿತ ಆರೋಗ್ಯ ಶಿಬಿರದಲ್ಲಿ ಮಾಡಬಹುದಾಗಿದೆ ಹೀಗಾಗಿ ಈ ಶಿಬಿರಗಳು ನಮ್ಮ ಆರೋಗ್ಯದ ರಕ್ಷಣೆಯ ಪ್ರಮುಖ ಹಂತವಾಗಿದೆ ಎಂದು ಜಿಲ್ಲಾ ಸಜ೯ನ್ ಡಾ. ಅಶೋಕ್ ಟಿ ತಿಳಿಸಿದರು. ಅವರು ಕಲ್ಯಾಣಪುರ ನೇಜಾರು ಸಮುದಾಯ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.
ಜೆಸಿಐ ಉಡುಪಿ ಇಂದ್ರಾಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಉಡುಪಿ, ಕೆಎಂಸಿ ದಂತ ವೈದ್ಯಕೀಯ ವಿಭಾಗ, ಪ್ರಸಾದ್ ನೇತ್ರಾಲಯ, ಗಣಪತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಧನ್ವಂತರಿ ಸ್ವಸಹಾಯ ಸಂಘ, ಅಪ್ಪು ಅಭಿಮಾನಿಗಳ ಸಂಘ ಮತ್ತು ಗ್ರಾಮ ಪಂಚಾಯತ್ ಕಲ್ಯಾಣಪುರ ಮುಂತಾದ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜೆಸಿಐ ಅಲೂಮ್ನಿ ಕ್ಲಬ್ ಝೋನ್ ಚೇರ್ಮನ್ ಲೋಕೇಶ್ ರೈ, ಈ ರೀತಿಯ ಶಿಬಿರಗಳು ನಮ್ಮ ಆರೋಗ್ಯದ ದೃಷ್ಟಿಯಿಂದ ಮಹತ್ವಪೂರ್ಣವಾಗಿವೆ ರೋಗ ಬರುವ ಮೊದಲು ಸರಿಯಾದ ಆರೋಗ್ಯವನ್ನು ಕಾಪಾಡಿದರೆ ಯಾವುದೇ ತೊಂದರೆಗಳು ಬರಲು ಅಸಾಧ್ಯ ಈ ನಿಟ್ಟಿನಲ್ಲಿ ಈ ಶಿಬಿರವು ಜನರಿಗೆ ಉಪಯೋಗವಾಗಿದೆ ಎಂದರು.
ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ವಿಜ್ಞೇಶ್ ಪ್ರಸಾದ್, ಗಣೇಶ್ ಆಟೋ ಕೇರ್ ನ ವಸಂತ್ ಕುಮಾರ್, ಗಿರಿಜಾ ಹೆಲ್ತ್ ಕೇರ್ ಮುಖ್ಯಸ್ಥರಾದ ರವೀಂದ್ರ ಶೆಟ್ಟಿ, ಗಣಪತಿ ಸಹಕರಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ, ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಡಾ. ವಿಷ್ಣು ಕೆಎಂಸಿ ಮಣಿಪಾಲದ ಡಾ. ರಿಷಿಕ ಗುಪ್ತ, ಮೇರಿ ಸಾಂಥಿಸ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಉಡುಪಿ ಇಂದ್ರಾಳಿ ಅಧ್ಯಕ್ಷರಾದ ಡಾ. ಚಿತ್ರಾ ವಿಜಯ್ ನೆಗಳೂರು ವಹಿಸಿದ್ದರು.
ನಿಕಟಪೂವ೯ ಅಧ್ಯಕ್ಷೆ ರಿಟಾ ಪೆರೆರಾ ಸ್ವಾಗತಿಸಿದರು. ಶಿಬಿರದ ಸಂಯೋಜಕ ಡಾ.ವಿಜಯ್ ನೆಗಳೂರು ವಂದಿಸಿದರು. ಶಿಬಿರದಲ್ಲಿ ರಕ್ತ ತಪಾಸಣೆ ಥೈರೊಯ್ಡ್ ಪರೀಕ್ಷೆ,ಇಸಿಜಿ ದಂತದ ತಪಾಸಣಿ,ಕಣ್ಣಿನ ತಪಾಸನೆ ಬಿಎಂಡಿ ಮುಂತಾದವುಗಳು ನಡೆದವು ಸುಮಾರು 200 ಜನ ಶಿಬಿರದ ಪ್ರಯೋಜನ ಪಡೆದರು.
ಕಾಪು : ಜಮೀಯತುಲ್ ಫಲಾಹ್ ಕಾಪು ಘಟಕದಿಂದ ವಿದ್ಯಾರ್ಥಿ ವೇತನ ವಿತರಣೆ

Posted On: 30-09-2024 01:43PM
ಕಾಪು : ಜಮೀಯತುಲ್ ಫಲಾಹ್ ಕಾಪು ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಶನಿವಾರ ಕಾಪುವಿನ ಕೆ1 ಹೊಟೇಲ್ನಲ್ಲಿ ನಡೆಯಿತು. ಕಾಪು ತಾಲ್ಲೂಕಿನ ಪ್ರತಿಭಾವ್ನಿತ 66 ವಿದ್ಯಾರ್ಥಿಗಳಿಗೆ ಒಟ್ಟು 2.64 ಲಕ್ಷ ರೂ. ಆರೋಗ್ಯ ಸಹಾಯಕ್ಕಾಗಿ 40 ಸಾವಿರ ರೂ. ಸೇರಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಮೌಲ್ಯವನ್ನು ಅರ್ಹರಿಗೆ ವಿತರಿಸಲಾಯಿತು.

ಜಮೀಯತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲಾಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಮಾತನಾಡಿ, ಮುಸ್ಲಿಮ್ ಸಮುದಾಯ ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡುತಿದ್ದು, ಜಮೀಯತುಲ್ ಫಲಾಹ್ ಇದಕ್ಕಾಗಿ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಜಮೀಯತುಲ್ ಫಲಾಹ್ ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ಶಭಿ ಅಹಮದ್ ಕಾಝಿ ಮಾತನಾಡಿ, ವಿದ್ಯಾರ್ಥಿಗಳು ಪಡೆದ ಈ ವಿದ್ಯಾರ್ಥಿವೇತನವನ್ನು ದುರುಪಯೋಗ ಮಾಡದೆ ಇದನ್ನು ಮುಂದಿನ ತಮ್ಮ ಶಿಕ್ಷಣಕ್ಕಾಗಿ ಮೀಸಲಿಡಬೇಕು ಎಂದು ಹೇಳಿದರು.
ಹಲೀಮ ಸಾಬ್ಜು ಆಡಿಟೋರಿಂ ಆಡಳಿತ ನಿರ್ದೇಶಕ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಶುಭಹಾರೈಸಿದರು. ಉಪಾಧ್ಯಕ್ಷ ಮುಹಮ್ಮದ್ ಸಾಧಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಸ್ಮಾನ್ ಖಾನ್ ಕಿರಾಅತ್ ಪಠಿಸಿದರು. ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು. ಮಾಧ್ಯಮ ಕಾರ್ಯದರ್ಶಿ ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವನೆಗೈದರು. ಕೋಶಾಧಿಕಾರಿ ಶೇಖ್ ಸಾಬಿರ್ ಅಲಿ ವಂದಿಸಿದರು.
ತರಬೇತಿ ಸಮ್ಮೇಳನ - ಜೇಸಿಐ ಉಡುಪಿ ಸಿಟಿ ಘಟಕಕ್ಕೆ ಹಲವು ಪ್ರಶಸ್ತಿ

Posted On: 30-09-2024 11:16AM
ಉಡುಪಿ : ಜೇಸಿಐ ಉಡುಪಿ ಸಿಟಿ ಘಟಕವು ಜೇಸಿಐ ವಲಯ 15 ರ ವತಿಯಿಂದ ಶಂಕರಪುರದಲ್ಲಿ ನಡೆದ ವಲಯದ ಪ್ರಥಮ ತರಬೇತಿ ಸಮ್ಮೇಳನ ಇನ್ಸ್ಪಾಯರ್ - 2024 ರಲ್ಲಿ ಅತ್ಯುತ್ತಮ ಹೊಸ ತರಬೇತುದಾರ ಪುರಸ್ಕಾರ ಸಹಿತ ವಿವಿಧ ಪ್ರಶಸ್ತಿಗೆ ಭಾಜನವಾಗಿದೆ.
ಜೇಸಿ ಶಂಕರಪುರದಲ್ಲಿ ಸಹ ಆತಿಥ್ಯದಲ್ಲಿ ನಡೆದ ಸಮ್ಮೇಳನದಲ್ಲಿ ತರಬೇತಿ ವಿಭಾಗದಲ್ಲಿ ಟಾಪ್ - 4, ಪರಿಣಾಮಕಾರಿ ಭಾಷಣದಲ್ಲಿ ದ್ವಿತೀಯ, ಬ್ಯಾನರ್ ಅನಾವರಣದಲ್ಲಿ ದ್ವಿತೀಯ, ತರಬೇತಿ ವಿಭಾಗದಲ್ಲಿ 7 ಮನ್ನಣೆ ಸಹಿತ ವಿವಿಧ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ವಲಯಾಧ್ಯಕ್ಷ ಗಿರೀಶ್ ಎಸ್ .ಪಿ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದಭ೯ದಲ್ಲಿ ತರಬೇತಿ ವಿಭಾಗದ ನಿದೇ೯ಶಕಿ ಹೇಮಲತಾ ಪ್ರದೀಪ್, ವಲಯಾಡಳಿತ ಮಂಡಳಿ ಸದಸ್ಯರು, ಉಡುಪಿ ಸಿಟಿ ಅಧ್ಯಕ್ಷೆ ಡಾ.ಹರೀಣಾಕ್ಷಿ ಕಕೇ೯ರ, ಪೂವ೯ ಅಧ್ಯಕ್ಷರಾದ ಉದಯ್ ನಾಯ್ಕ್, ಸ್ಮಿತಾ ಪಾಟೀಲ್ , ರಾಘವೇಂದ್ರ ಕವಾ೯ಲು ಉಪಸ್ಥಿತರಿದ್ದರು.
ಅಕ್ಟೋಬರ್ 3 : ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಉಪ ಸಮಿತಿಯಾದ ಉಡುಪಿ ನಗರಸಭಾ ಸಮಿತಿಯ ಕಚೇರಿ ಉದ್ಘಾಟನಾ ಸಮಾರಂಭ

Posted On: 29-09-2024 08:18PM
ಕಾಪು : ಉಡುಪಿ ನಗರಸಭಾ ವ್ಯಾಪ್ತಿಯ ಜನರನ್ನು ನವದುರ್ಗಾ ಲೇಖನ ಯಜ್ಞದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಉಡುಪಿಯ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಉಪ ಸಮಿತಿಯಾದ ಉಡುಪಿ ನಗರಸಭಾ ಸಮಿತಿಯ ಕಚೇರಿ ಉದ್ಘಾಟನಾ ಸಮಾರಂಭವು ಅಕ್ಟೋಬರ್ 3, ಗುರುವಾರ ಅಪರಾಹ್ನ 04:30ಕ್ಕೆ ನಡೆಯಲಿದೆ.
ಶ್ರೀ ಹೊಸ ಮಾರಿಗುಡಿ ದೇವಸ್ಥಾನವು ಅತ್ಯದ್ಬುತವಾಗಿ ಬಾಗಲಕೋಟೆಯ ಇಳಕಲ್ ಕೆಂಪು ವರ್ಣದ ಶಿಲೆಯಿಂದ ಶಿಲಾಮಯವಾಗಿ ನವಿಕೃತಗೊಳ್ಳುತ್ತಿದೆ. ಪ್ರಥಮ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿ 2025 ರ ಫೆಬ್ರವರಿ 25 ರಿಂದ ಮೊದಲ್ಗೊಂಡು ಮಾರ್ಚ್ 5 ರ ವರೆಗೆ 9 ದಿನಗಳ ಧಾರ್ಮಿಕ, ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿದೆ. ಮಾರ್ಚ್ 2 ರಂದು ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಗದ್ದುಗೆ ಪ್ರತಿಷ್ಠೆ ಹಾಗೂ ಮಾರ್ಚ್ 5 ರಂದು ದೇವಳದ ಬ್ರಹ್ಮಕಲಶೋತ್ಸವವು ನಡೆಯಲಿದೆ. ಆ ಪ್ರಯುಕ್ತ ನವದುರ್ಗಾ ಲೇಖನ ಯಜ್ಞ ಎಂಬ ಮಹಾ ಸಂಕಲ್ಪವನ್ನು ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದೆ.
ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಕ್ಷೇತ್ರದ ಶಾಸಕರು, ಎಲ್ಲಾ ವಾರ್ಡ್ ಗಳ ನಗರಸಭಾ ಸದಸ್ಯರು, ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾಪು ಮಾರಿಯಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಉಡುಪಿ ಜಿಲ್ಲೆಯ ನೇತ್ರತ್ವ ವಹಿಸಿರುವ ಸಾಯಿರಾಧಾ ಗ್ರೂಪ್ ನ ಆಡಳಿತ ನಿರ್ದೇಶಕರಾದ ಮನೋಹರ ಎಸ್.ಶೆಟ್ಟಿ , ಉಡುಪಿ ನಗರಸಭಾ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಉಡುಪಿ ನಗರಸಭಾ ಸಮಿತಿಯ ಪ್ರಧಾನ ಸಂಚಾಲಕರಾದ ಕೊಡವೂರು ದಿವಾಕರ ಶೆಟ್ಟಿ ಮತ್ತು ಮುಖ್ಯ ಸಂಚಾಲಕರಾದ ಗಿರೀಶ್ ಅಂಚನ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹಿಂದು ಸಮಾಜ ಉದಾರ ಭಾವನೆಯನ್ನು ಹೊಂದಿದೆ : ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ

Posted On: 29-09-2024 07:54PM
ಪಡುಬಿದ್ರಿ : ಹಿಂದು ಸಮಾಜ ಉದಾರ ಭಾವನೆಯನ್ನು ಹೊಂದಿದೆ. ಎಲ್ಲರೂ ಒಟ್ಟಿಗೆ ಒಂದಾಗಿ ಬಾಳಬೇಕೆಂಬ ಕಲ್ಪನೆಯೂ ಇದೆ. ಆದರೆ ಆ ಭಾವನೆಯು ಅನ್ಯರಿಗೂ ಇದ್ದಲ್ಲಿ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯ. ನಮ್ಮ ಉಳಿವಿಗಾಗಿ ನಾವು ಜಾಗೃತರಾಗಿರಬೇಕು. ಜಾತೀಯತೆಯಲ್ಲಿ ಹರಿದು ಹಂಚಿ ಹೋಗದೇ, ಸಮಾಜ ಮುಖಿಯಾಗಿ ಹಿಂದುತ್ವ ಜಾಗೃತಗೊಳ್ಳಬೇಕಿದೆ. ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಈ ಬಗ್ಗೆ ಚಿಂತಿಸಿ ಸಮಾಜದ ರಕ್ಷಣೆಗೆ ಮಹತ್ವದ ನಿರ್ಧಾರದೊಂದಿಗೆ ಮುಂದಡಿ ಇರಿಸುವ ಅವಶ್ಯಕತೆ ಇದೆ ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು. ಅವರು ಭಾನುವಾರ ಕಾಪು ತಾಲೂಕು ವಿಶ್ವ ಹಿಂದು ಪರಿಷದ್ ವತಿಯಿಂದ ಪಡುಬಿದ್ರಿ ಬಂಟರ ಭವನದಲ್ಲಿ ನಡೆದ ವಿಶ್ವ ಹಿಂದು ಪರಿಷದ್ನ ಷಷ್ಠಿಪೂರ್ತಿ ವರ್ಷದ ಪ್ರಯುಕ್ತ ಹಿಂದೂ ಸಮಾವೇಶದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿದರು.
ವಿಶ್ವ ಹಿಂದು ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಮಾತನಾಡಿ, ನಮ್ಮ ಮನೆಯಂಗಳಕ್ಕೆ ಬಂದಂತಹ ಸಮಸ್ಯೆಗಳು ಮನೆಯೊಳಕ್ಕೆ ಬಾರದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕಾದ ಆವಶ್ಯಕತೆ ಇದೆ. ಜಾಗೃತ ಹಿಂದು ಸಮಾಜ ನಿರ್ಮಾಣ ಆಗಬೇಕಿದೆ. ನಮ್ಮ ಮಕ್ಕಳು ಹಿಂದುಗಳಾಗಿ ಬದುಕಬೇಕಾದಲ್ಲಿ ಹಿಂದುತ್ವ ಮನೋಭಾವವು ಜಾಗೃತ ಸ್ಥಿತಿಯಲ್ಲಿ ಇರಬೇಕಿದೆ. ಹಿಂದುತ್ವ ರಕ್ಷಣೆಗಾಗಿ ವಿವಿಧ ಆಯಾಮಗಳಲ್ಲಿ ವಿಶ್ವ ಹಿಂದು ಪರಿಷದ್ ಕೆಲಸ ಮಾಡಲು ಕಟಿಬದ್ಧವಾಗಿದೆ. ಅದಕ್ಕೆ ಹಿಂದು ಸಮಾಜವು ಬೆಂಬಲ ನೀಡಬೇಕಿದೆ ಎಂದರು.
ವಿಶ್ವ ಹಿಂದು ಪರಿಷದ್ ರಾಜ್ಯ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಿದರು. ಧಾರ್ಮಿಕ ಚಿಂತಕ ಶಶಿಧರ ಶೆಟ್ಟಿ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದೈವನರ್ತಕ ಸುಧಾಕರ ಪಾಣಾರ ಮೂಡುಬೆಳ್ಳೆ, ಆಯುರ್ವೇದ ವೈದ್ಯೆ ಡಾ. ಪಯಸ್ವಿನಿ ಶೆಟ್ಟಿಗಾರ್, ಉಡುಪಿ ಜಿಲ್ಲಾ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಉಪಾಧ್ಯಕ್ಷ ಗೋಪಾಲ ಪೂಜಾರಿ ಶಿರ್ವ, ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷದ್ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ವೇದಿಕೆಯಲ್ಲಿದ್ದರು.
ಪ್ರಾಜ್ನ ವಂದೇ ಮಾತರಂ ಹಾಡಿದರು. ವಿಶ್ವ ಹಿಂದು ಪರಿಷದ್ ಕಾಪು ತಾಲೂಕು ಅಧ್ಯಕ್ಷ ಜಯಪ್ರಕಾಶ್ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಂದ್ರ ಶೆಣೈ ವಂದಿಸಿದರು. ಸಂತೋಷ್ ನಂಬಿಯಾರ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.