Updated News From Kaup
ಕಾಪು ಶ್ರೀ ಹೊಸ ಮಾರಿಗುಡಿಗೆ ಮುಂಬೈ ಪೊಲೀಸ್ ಆಡಳಿತಾಧಿಕಾರಿ ಭೇಟಿ
Posted On: 30 Mar 2025, 10:19 AM
ಕಾಪು : ಮುಂಬೈ ಪೊಲೀಸ್ ಆಡಳಿತಾಧಿಕಾರಿ ಜಯಕುಮಾರ್ ಐ. ಪಿ. ಎಸ್ ಅವರು ಸ್ನೇಹಿತರೊಂದಿಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಅಮ್ಮನ ದರುಶನ ಪಡೆದು ಅನುಗ್ರಹ ಪ್ರಸಾದ ಸ್ವೀಕರಿಸಿದರು. ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರು ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಉದಯ ಸುಂದರ್ ಶೆಟ್ಟಿಯವರು ದೇವಳದ ಜೀರ್ಣೋದ್ಧಾರ ಮತ್ತು ವಾಸ್ತುಶಿಲ್ಪದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಆರ್ಥಿಕ ಸಮಿತಿಯ ಕಾತ್ಯಾಯಿನಿ ತಂಡದ ಸಂಚಾಲಕರಾದ ಶೋಭಾ ರಮೇಶ್ ಶೆಟ್ಟಿ ಮತ್ತು ಸುನಿತಾ ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು.
ಎ.6 : ಉಡುಪಿ ಜಿಲ್ಲಾ ಚೆಸ್ ಚಾಂಪಿಯನ್ ಶಿಪ್
Posted On: 30 Mar 2025, 08:35 AM
ಕಾಪು : ಉಡುಪಿ ಜಿಲ್ಲಾ ಜಿಲ್ಲಾ ಚೆಸ್ ಅಸೋಸಿಯೇಷನ್ ಆಶ್ರಯದಲ್ಲಿ ಉಡುಪಿ ಜಿಲ್ಲಾ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯು ಎಪ್ರಿಲ್ 6 ರಂದು ಡಾ. ಟಿ.ಎಂ.ಎ.ಪೈ ಮಣಿಪಾಲದಲ್ಲಿ ಜರಗಲಿದೆ. ವಯೋಮಿತಿ 7, 9, 11, 13, 15, 17, 19 ಹಾಗೂ ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಬಾಲಕರಿಗೆ 7 ಹಾಗೂ ಬಾಲಕಿಯರಿಗೆ 5 ಬಹುಮಾನ ಪ್ರತೀ ವಿಭಾಗದಲ್ಲಿ ಇರಲಿದೆ. ಪ್ರತಿ ವಿಭಾಗದಲ್ಲಿ ಎರಡು ಆಟಗಾರರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9341111024 ಎಂದು ಸಂಘದ ಅಧ್ಯಕ್ಷ ಉಮಾನಾಥ ಕಾಪು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸ.ಹಿ.ಪ್ರಾ.ಶಾಲೆ ಎರ್ಮಾಳು ಸೌತ್ ಶಾಲೆಗೆ ರೋಬೋ ಸಾಫ್ಟ್ ಸಂಸ್ಥೆಯಿಂದ ಪ್ರಾಜೆಕ್ಟರ್, ಲ್ಯಾಪ್ಟಾಪ್ ಹಸ್ತಾಂತರ
Posted On: 30 Mar 2025, 08:05 AM
ಎರ್ಮಾಳು : ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎರ್ಮಾಳು ಸೌತ್ ಶಾಲೆಗೆ ರೋಬೋ ಸಾಫ್ಟ್ ಸಂಸ್ಥೆಯವರು ನೀಡಿರುವ ಪ್ರಾಜೆಕ್ಟರ್ ಮತ್ತು ಲ್ಯಾಪ್ಟಾಪನ್ನು ರೋಬೋಸಾಫ್ಟ್ ಸಂಸ್ಥೆಯ ಕಾರ್ತಿಕ್ ಕೋಟ್ಯಾನ್ ರವರು ಶಾಲಾ ಮುಖ್ಯ ಶಿಕ್ಷಕಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ರೋಬೋ ಸಾಫ್ಟ್ ಸಂಸ್ಥೆಯ ಕಾರ್ತಿಕ್ ಕೋಟ್ಯಾನ್ ರವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿಯಾದ ಶಾಂತಲಾ ದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ರೋಬೋಸಾಫ್ಟ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಿ.ಆರ್.ಪಿ. ಸತೀಶ್ಚಂದ್ರ, ಸಹ ಶಿಕ್ಷಕರಾದ ಕುಮಾರ್, ಪದ್ಮಲತಾ ಹಾಗೂ ಗೌರವ ಶಿಕ್ಷಕಿ ಸಿಂಚನ ಮತ್ತು ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ಚಂದ್ರ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶಾಂತಲಾ ದೇವಿ ಪ್ರಸ್ತಾವನೆಗೈದರು. ಶಿಕ್ಷಕ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಸಿಂಚನ ವಂದಿಸಿದರು.
ಬಂಟಕಲ್ಲು ಶ್ರೀಬಬ್ಬುಸ್ವಾಮಿ ನೂತನ ದೈವಸ್ಥಾನದ ಪುನರ್ ಪ್ರತಿಷ್ಠೆ-ಬ್ರಹ್ಮಕಲಶೋತ್ಸವ-ನೇಮೋತ್ಸವದ ಆಮಂತ್ರಣ ಬಿಡುಗಡೆ
Posted On: 28 Mar 2025, 05:28 PM
ಶಿರ್ವ : ಐತಿಹಾಸಿಕ ಹಿನ್ನೆಲೆ ಇರುವ ಬಂಟಕಲ್ಲು ಪೊದಮಲೆ ಪೆರಿಯಕಲದ ಪರಿಸರದಲ್ಲಿ ದೈವಸ್ಥಾನ ನಿರ್ಮಾಣ ಮಾಡುವಂತೆ ಪೂರ್ವಿಕರಿಗೆ ದೈವಗಳು ನೀಡಿದ ಪ್ರೇರಣೆಯಂತೆ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಿ, ಬಂಟೇಶ್ವರನ ಸಾನಿಧ್ಯದ ಪಶ್ಚಿಮ ಭಾಗದಲ್ಲಿ ಶ್ರೀಬಬ್ಬುಸ್ವಾಮಿ ದೈವಸ್ಥಾನವನ್ನು ಶತಮಾನಗಳ ಹಿಂದೆಯೇ ಪ್ರತಿಷ್ಠಾಪಿಸಲಾಗಿತ್ತು. ಜೀರ್ಣಾವಸ್ಥೆಯಲ್ಲಿದ್ದ ಈ ಸಾನಿಧ್ಯದ ಬಗ್ಗೆ ಆಗಮಶಾಸ್ತ್ರ ತಂತ್ರಿಗಳಿಂದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಗ್ರಾಮದ ಅಭಿವೃದ್ಧಿ ಹಾಗೂ ಭಕ್ತರ ಶ್ರೇಯೋಭಿವೃದ್ಧಿಗಾಗಿ ಸಾನಿಧ್ಯದ ಜೀರ್ಣೋದ್ದಾರಕ್ಕೆ, ಗ್ರಾಮಸ್ಥರು ಮತ್ತು ಹತ್ತು ಸಮಸ್ತರು ಸೇರಿಕೊಂಡು ಸಮಾಲೋಚನೆ ನಡೆಸಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿ ವಾಸ್ತುತಜ್ಞರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸಲಾಗಿದೆ. ಎಪ್ರಿಲ್ 16ರಿಂದ ಎ.19ರ ಪರ್ಯಂತ ನೂತನ ದೈವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ನೇಮೋತ್ಸವ, ಧಾರ್ಮಿಕ ಸಭೆ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಂಟಕಲ್ಲು ಶ್ರೀ ಬಬ್ಬು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಲಯದಲ್ಲಿ ಜರುಗಿತು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸಡಂಬೈಲು ಭಾಸ್ಕರ ಶೆಟ್ಟಿ ಹಾಗೂ ಹಿರಿಯರಾದ ದೇವದಾಸ್ ಜೋಗಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ನಿವೃತ್ತ ಶಿಕ್ಷಕ ಹಾಗೂ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ ಸಾನಿಧ್ಯದ ಜೀರ್ಣೋದ್ದಾರ ಕಾರ್ಯ ದೈವದ ಪ್ರೇರಣೆ ಹಾಗೂ ಸಂಕಲ್ಪದಂತೆ ಭಕ್ತರ ಹಾಗೂ ದಾನಿಗಳ ಸಹಕಾರದೊಂದಿಗೆ ಪೂರ್ಣಗೊಳ್ಳುತ್ತಿದ್ದು, ಸಾನಿಧ್ಯದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಇತ್ಯಾದಿ ಕಾರ್ಯಗಳು ಯಶಸ್ವಿಯಾಗಿ ಜರುಗುವಲ್ಲಿ ಎಲ್ಲಾ ಉಪಸಮಿತಿಗಳ ಸಂಚಾಲಕರು, ಸದಸ್ಯರು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದರು. ದೈಸ್ಥಾನದ ಗುರಿಕಾರರು ಹಾಗೂ ಸಮಿತಿಯ ಕಾರ್ಯಾಧ್ಯಕ್ಷ ಶಂಕರ ಪದಕಣ್ಣಾಯ ಮಾತನಾಡಿ, ಈವರೆಗೆ ನಡೆದ ಕಾರ್ಯಗಳು ಹಾಗೂ ಪೂರ್ವ ಸಿದ್ಧತೆಯ ಬಗ್ಗೆ ವಿವರವಾದ ಮಾಹಿತಿ ತಿಳಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಮರಾಯ ಪಾಟ್ಕರ್ ಮಾತನಾಡಿ, ಉಪಸಮಿತಿಗಳ ಜವಾಬ್ದಾರಿ ಹಾಗೂ ನಿರ್ವಹಣೆ, ಆಮಂತ್ರಣ ಪತ್ರಿಕೆ ವಿತರಣೆಯ ಬಗ್ಗೆ ಮಾಹಿತಿ ನೀಡಿ, ಇದೊಂದು ಊರಿನ ಜಾತ್ರೆಯಾಗಿದ್ದು ಎಲ್ಲಾ ಕಾರ್ಯಗಳಲ್ಲೂ ಸದಸ್ಯರು ಹಾಗೂ ಗ್ರಾಮಸ್ಥರು ಕೈಜೋಡಿಸಿ ಯಶಸ್ವಿಗೊಳಿಸುವಂತೆ ಕರೆಯಿತ್ತರು. ಸಹ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪ್ರಸಾದ್ ಕಾರ್ಯಕ್ರಮಗಳ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಹಿರಿಯರಾದ ಶೇಖರ ಪೂಜಾರಿ, ಮಧ್ಯಸ್ಥರು ರಾಮಕೃಷ್ಣ(ಅಪ್ಪು)ನಾಯಕ್, ಮಂಜುನಾಥ ಪಾಟ್ಕರ್, ಮಂಜುನಾಥ ಪೂಜಾರಿ, ಶ್ರೀಕ್ಷೇತ್ರ ಧ.ಗ್ರಾ.ಯೋಜನೆ ಸೇವಾನಿರತೆ ಪೂರ್ಣಿಮಾ ರಮೆಶ್ ಆಚಾರ್ಯ, ಹರೀಶ್ ಹೇರೂರು, ರವೀಂದ್ರ ಆಚಾರ್ಯ, ಸದಾನಂದ ಎಸ್, ಪ್ರಧಾನ ಅರ್ಚಕ ಸಂತೋಷ್ ಆರ್ ಉಪಸ್ಥಿತರಿದ್ದರು. ಸುಕನ್ಯಾ ಜೋಗಿ ಪ್ರಾರ್ಥಿಸಿದರು. ಸತ್ಯಸಾಯಿ ಪ್ರಸಾದ್ ನಿರೂಪಿಸಿದರು. ದಿನೇಶ್ ಎಸ್ ವಂದಿಸಿದರು.
ಮುದರಂಗಡಿ : ಸ್ತ್ರೀಯರಿಗಾಗಿ ಆರೋಗ್ಯ ಮಾಹಿತಿ ಕಾರ್ಯಾಗಾರ
Posted On: 28 Mar 2025, 04:41 PM
ಮುದರಂಗಡಿ : ಜನನಿ ಮಹಾಸಂಘ ಮತ್ತು ಕಥೊಲಿಕ್ ಸ್ತ್ರೀ ಸಂಘಟನೆ ಮುದರಂಗಡಿ ವತಿಯಿಂದ ಸ್ಥಳೀಯ ಸ್ತ್ರೀಯರಿಗಾಗಿ ಸ್ತ್ರೀಯರ ಋತುಬಂಧ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಮಾಹಿತಿ ಕಾರ್ಯಗಾರವು ಸಂತ ಫ್ರಾನ್ಸಿಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು. ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜ್ ನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಧೀರಜ್ ಫೆರ್ನಾಂಡಿಸ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸ್ತ್ರೀಯರಲ್ಲಿ ಋತುಸ್ರಾವ, ಋತುಬಂಧದ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಚರ್ಚ್ ನ ಧರ್ಮಗುರು ಪೂಜ್ಯ ಫ್ರೆಡ್ರಿಕ್ ಡಿಸೋಜಾ ರವರು ಉಪಸ್ಥಿತರಿದ್ದರು. ಅಧ್ಯಕ್ಷೆ ಸಮಿತಾ ಮೆಂಡೋನ್ಸಾ ರವರು ಸ್ವಾಗತಿಸಿ, ಪ್ರಮೋದಾ ಮತಾಯಸ್ ವಂದಿಸಿದರು.
ಉಡುಪಿ: ಪಂಚ ರಂಗಕರ್ಮಿಗಳಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ ಪ್ರದಾನ
Posted On: 28 Mar 2025, 03:30 PM
ಉಡುಪಿ : ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ವತಿಯಿಂದ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಆರನೇ ವರ್ಷದ 'ಮಲಬಾರ್ ವಿಶ್ವರಂಗ ಪುರಸ್ಕಾರ'ವನ್ನು ಐವರು ಹಿರಿಯ ರಂಗಕರ್ಮಿಗಳಿಗೆ ಬುಧವಾರ ಪ್ರದಾನ ಮಾಡಲಾಯಿತು. ಮಲಬಾರ್ ಗೋಲ್ಡ್ ಉಡುಪಿ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗ ನಟ, ನಿರ್ದೇಶಕ ಅರವಿಂದ ಕುಲಕರ್ಣಿ ಧಾರವಾಡ, ರಂಗ ಸಂಘಟಕ ಹಾಗೂ ನಿರ್ದೇಶಕ ಗಣೇಶ್ ಕಾರಂತ್ ಬೈಂದೂರು, ರಂಗನಟಿ, ಕಂಠದಾನ ಕಲಾವಿದೆ ಪ್ರಿಯಾ ಸರೋಜಾ ದೇವಿ ಮುಂಬೈ, ರಂಗನಟ ಪ್ರಕಾಶ್ ಜಿ. ಕೊಡವೂರು, ರಂಗನಟಿ ಮಂಜುಳಾ ಜನಾರ್ದನ್ ಮಂಗಳೂರು ಅವರಿಗೆ ಪ್ರಶಸ್ತಿ ಪತ್ರ, ಫಲಕ, ನಗದು ಹಾಗೂ ಬೆಳ್ಳಿಪದಕದೊಂದಿಗೆ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಂತ ವೈದ್ಯ ಡಾ.ವಿಜಯೇಂದ್ರ ರಾವ್, ಉದ್ಯಮಿ ಸುಗುಣ ಸುವರ್ಣ ಮಾತನಾಡಿದರು. ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್, ಗೌರವಾಧ್ಯಕ್ಷ ಯು.ವಿಶ್ವನಾಥ ಶೆಣೈ, ಮಲಬಾರ್ ಗೋಲ್ಡ್ ಉಡುಪಿ ಶಾಖೆ ಮುಖ್ಯಸ್ಥ ಹಫೀಜ್ ರೆಹೇಮನ್ ಉಪಸ್ಥಿತರಿದ್ದರು. ಯುಪಿಎಂಯ ಯುವ ಸಂಚಯದ ಬೀದಿ ನಾಟಕ ತಂಡವನ್ನು ಗೌರವಿಸಲಾಯಿತು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ ಸ್ವಾಗತಿಸಿದರು. ಸಂಧ್ಯಾ ಶೆಣೈ ವಂದಿಸಿದರು. ರಾಘವೇಂದ್ರ ಕವಾ೯ಲು, ಪೂಣಿ೯ಮಾ ಜನಾದ೯ನ್ , ವಿವೇಕಾನಂದ ಪಿ , ವಿದ್ಯಾಸರಸ್ವತಿ, ರೂಪಾಶೀ ಪರಿಚಯಿಸಿದರು.ರಾಜೇಶ್ ಭಟ್ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮೊದಲು ಸ್ವಸ್ತಿಶ್ರೀ ಅವರಿಂದ ನೃತ್ಯ ಕಾರ್ಯಕ್ರಮ ಜರುಗಿತು.
ಪಡುಬಿದ್ರಿಯ ಏಳು ಮಾಗಣೆಯ ಪಂಚ ಸಾನಿಧ್ಯದಲ್ಲಿ ದೈವರಾಜ ಶ್ರೀ ಕೋಡ್ದಬ್ಬು ವರ್ಷಾವಧಿ ನೇಮೋತ್ಸವ
Posted On: 28 Mar 2025, 03:16 PM
ಪಡುಬಿದ್ರಿ : ಅತ್ಯಂತ ಪುರಾತನ ಪ್ರಾಚೀನ ಮತ್ತು ದೈವಿ ಶಕ್ತಿಯ ಬಹುದೊಡ್ಡ ಶಕ್ತಿ ಕೇಂದ್ರವಾದ ಪಡುಬಿದ್ರಿಯ ಏಳು ಮಾಗಣೆಯ ಪಂಚ ಕ್ಷೇತ್ರಗಳಾದ ಬೊಗ್ಗರಿಲಚ್ಚಿಲ್ ಇಲ್ಲಿ ಮಾರ್ಚ್ 27& ಮತ್ತು 28, ಪದ್ರದಬೆಟ್ಟುವಿನಲ್ಲಿ 28 ಮತ್ತು 29, ಸಂತೆಕಟ್ಟೆಯಲ್ಲಿ 29 ಮತ್ತು 30, ಕೊಂಕನಡ್ಪುವಿನಲ್ಲಿ ಮಾರ್ಚ್ 31 ಮತ್ತು ಎಪ್ರಿಲ್ 1 ಹಾಗೂ ಅಬ್ಬೇಡಿಯಲ್ಲಿ ಎಪ್ರಿಲ್ 1 ಮತ್ತು 2 ರಂದು ಶ್ರೀ ಕೋಡ್ದಬ್ಬು ದೈವದ ನೇಮೋತ್ಸವವು ಜರಗಲಿದೆ. ಇನ್ನುಳಿದಂತೆ 2 ದೈವಸ್ಥಾನಗಳಾದ ಅವರಾಲು ಕೋಟೆ ಮತ್ತು ಅಂಗಡಿಬೆಟ್ಟುವಿನಲ್ಲಿ ಅತ್ಯಂತ ಭಾವನಾತ್ಮಕವಾಗಿ ಕೋಡ್ದಬ್ಬು ದೈವದ ನುಡಿದಂತೆ ಮುಂಬರುವ ದಿನಗಳಲ್ಲಿ ಪಾವಿತ್ರತ್ಯತೆಯನ್ನು ಪಡೆಯಲಿದೆ. ಈ ಬಾರಿ ಪಡುಬಿದ್ರಿಯ ಕೋಡ್ದಬ್ಬು ದೈವಸ್ಥಾನಗಳ ನೇಮೋತ್ಸವಗಳಲ್ಲಿ ಬದಲಾವಣೆ ಮಾಡಲಾಗಿದೆ. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಎಪ್ರಿಲ್ 3 ರ ನಂತರದಲ್ಲಿ ದೇವರ ಬಾಲಾಲಯ ಪ್ರತಿಷ್ಠೆ ನಡೆಯಲಿರುವುದರಿಂದ ಅದರ ಮುಂಚಿತವಾಗಿ ನೇಮೋತ್ಸವ ನಡೆಯಲಿದೆ. ತುಳುನಾಡಿನ ದೈವಾರಾಧನೆಯ "ದೈವರಾಜ"ನೆಂಬ ಘನತೆಯುಳ್ಳ ಶ್ರೀಬಬ್ಬುಸ್ವಾಮಿ/ ಶ್ರೀಕೋಡ್ದಬ್ಬು ದೈವವೂ ಉತ್ತರದ ಬಾರ್ಕೂರಿನಿಂದ ದಕ್ಷಿಣದ ಕೇರಳ ರಾಜ್ಯದ ನಿಲೇಶ್ವರದವರೆಗು, ಪೂರ್ವಭಾಗದಲ್ಲಿ ಪಶ್ಚಿಮ ಘಟ್ಟ, ಚಿಕ್ಕಮಗಳೂರು, ಶಿವಮೊಗ್ಗ, ಸಾಗರ, ಮಡಿಕೇರಿ ಭಾಗದಲ್ಲಿಯು ಸಾವಿರಾರು ಕೋಡ್ದಬ್ಬು ದೈವ ಸಾನಿಧ್ಯಗಳನ್ನು ನಾವು ಇಂದಿಗೂ ಗಮನಿಸಿದಾಗ ಇಡೀ ತುಳುನಾಡಿನ ಗ್ರಾಮಗ್ರಾಮದ ರಕ್ಷಣೆಯ ಮಹಾಶಕ್ತಿ ತುಳುನಾಡಿನ ಶ್ರೀಕೋಡ್ದಬ್ಬು ದೈವವೇ ಸರ್ವಶ್ರೇಷ್ಠವಾದುದು ಆಗಿದೆ. ಪಡುಬಿದ್ರಿಯ ಏಳು ಮಾಗಣೆಯಲ್ಲಿ ಏಳು ಕೋಡ್ದಬ್ಬು ದೈವಸ್ಥಾನಗಳಾದ ಅಂಗಡಿಬೆಟ್ಟು, ಸಂತೆಕಟ್ಟೆ, ಪದ್ರದಬೆಟ್ಟು, ಕೊಂಕನಡ್ಪು, ಅಬ್ಬೇಡಿ, ಬೊಗ್ಗರಿಲಚ್ಚಿಲ್, ಅವರಾಲು ಕೋಟೆಯ ಕೋಡ್ದಬ್ಬು ದೈವಸ್ಥಾನಗಳು ಪ್ರಮುಖವಾಗಿದೆ. ಪೂರ್ವಕಾಲದ ಪದ್ಧತಿಯಂತೆ ನಡೆಯುವ ವಾರ್ಷಿಕ ಸೇವೆಯಲ್ಲಿ ಭಕ್ತರು ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನಂಜೆ ಮಹಿಳಾ ಮಂಡಳಿ ವತಿಯಿಂದ ಮಹಿಳಾ ದಿನಾಚರಣೆ
Posted On: 28 Mar 2025, 03:06 PM
ಕಾಪು : ಇನ್ನಂಜೆ ಮಹಿಳಾ ಮಂಡಳಿ ವತಿಯಿಂದ ಎಸ್ ವಿಎಚ್ ಶಾಲೆಯ ದಾಸ ಭವನದಲ್ಲಿ ನಡೆದ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಮಹಿಳಾ ಮಂಡಳಿಯ ಗೌರವ ಅಧ್ಯಕ್ಷರಾದ ಪುಷ್ಪ ರವೀಂದ್ರ ಶೆಟ್ಟಿಯವರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಜಶ್ರೀಯವರು ಮಾತನಾಡಿ, ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆ, ಅದಕ್ಕೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಮಹಿಳಾ ಮಂಡಳಿಗಳ ತಾಲೂಕು ಒಕ್ಕೂಟದ ಉಪಾಧ್ಯಕ್ಷೆ ಗೀತಾ ವಾಗ್ಳೆ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಸಾಂದರ್ಭಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷರಾಗಿದ್ದು, ಗ್ರಾಮ ಪಂಚಾಯತಿಯನ್ನು ಮುನ್ನಡೆಸಿದ ಐದು ಮಂದಿ ಗ್ರಾಮದ ಮಹಿಳಾ ಸಾಧಕರಾದ ಶಶಿಕಲಾ ಎನ್ ಶೆಟ್ಟಿ, ವಸಂತಿ ಆಚಾರ್ಯ, ರೇಖಾ ಅನಿಲ್ ಕುಮಾರ್, ಮಲ್ಲಿಕಾ ಆಚಾರ್ಯ, ಮಾಲಿನಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಮಂಡಳಿಯ ಸದಸ್ಯರಿಗೆ ಆರೋಗ್ಯ ತಪಾಸಣೆ, ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು. ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ವೇತ ಎಲ್. ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಪೂರ್ಣಿಮಾ ಸುರೇಶ್, ಜತೆ ಕಾರ್ಯದರ್ಶಿ ಅನಿತಾ ಮಥಾಯಸ್, ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ಮಂಡಳಿಯ ಗೌರವ ಸಲಹೆಗಾರರಾದ ಸಬು ನಂದನ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸಿಲ್ವಿಯಾ ಕ್ಯಾಸ್ತಲಿನೋ ವಂದಿಸಿದರು.
e ಮಣ್ಣು ಚಿತ್ರಕ್ಕೆ 2020ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ
Posted On: 28 Mar 2025, 02:23 PM
ಕಾಪು : ಶಿವಧ್ವಜ್ ಶೆಟ್ಟಿ ಕಥೆ -ಚಿತ್ರಕಥೆ- ನಿರ್ದೇಶನದ, ಈಶ್ವರಿದಾಸ್ ಶೆಟ್ಟಿ, ರಾಜೇಶ್ವರಿ ರೈ.ಪಿ ನಿರ್ಮಾಣದ e ಮಣ್ಣು ಲೋಕಲ್ ಟು ಗ್ಲೋಬಲ್ ಚಿತ್ರವು 2020ನೇ ಸಾಲಿನ ಕರ್ನಾಟಕ ರಾಜ್ಯ ವಿಶೇಷ ಸಾಮಾಜಿಕ ಜಾಗೃತಿ ಚಿತ್ರ ಮತ್ತು ಉತ್ತಮ ಸಾಹಿತ್ಯಕ್ಕೆ ಪ್ರಶಸ್ತಿ ಪಡೆದುಕೊಂಡಿದೆ. ವಿಶೇಷ ಸಾಮಾಜಿಕ ಜಾಗೃತಿ ಚಿತ್ರವಾಗಿ ನಿರ್ದೇಶಕ ಶಿವಧ್ವಜ್ ಶೆಟ್ಟಿಯವರು 2020ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು ಉತ್ತಮ ಸಾಹಿತ್ಯಕ್ಕೆ ಸಚಿನ್ ಶೆಟ್ಟಿ ಕುಂಬ್ಳೆಯವರು 2020ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಉಚಿತ ಕೌಶಲ ತರಬೇತಿ :ಅರ್ಜಿ ಆಹ್ವಾನ
Posted On: 28 Mar 2025, 02:10 PM
ಕಾರ್ಕಳ : ಕಾರ್ಕಳದ ಕಾಬೆಟ್ಟುವಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿರುವ ಕೆ.ಜಿ.ಟಿ.ಟಿ.ಐ ವಿಸ್ತರಣಾ ಕೇಂದ್ರದಲ್ಲಿ ವಿವಿಧ ಅಲ್ಪಾವಧಿ ಕೌಶಲ ತರಬೇತಿಗಳಿಗೆ ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಪರಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕಾರ್ಕಳದ ಅಥವಾ ಮಂಗಳೂರಿನಲ್ಲಿರುವ ಕೆ.ಜಿ.ಟಿ.ಟಿ.ಐ ಕಚೇರಿಯಿಂದ ಅರ್ಜಿ ಪಡೆದು ಉಚಿತ ತರಬೇತಿಗೆ ಹೆಸರನ್ನು ನೋಂದಾಯಿಸಬಹುದೆಂದು ಕೆ.ಜಿ.ಟಿ.ಟಿ.ಐ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8258200451, 8277741731
