Updated News From Kaup

ಉಡುಪಿ.ಜೂ,6: ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 100 ಕೋವಿಡ್ ಪೀಡಿತರು ಡಿಸ್ಚಾರ್ಜ್

Posted On: 06-06-2020 10:41PM

ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 100 ಕೋವಿಡ್ ಪೀಡಿತರು ಡಿಸ್ಚಾರ್ಜ್ ಉಡುಪಿ ಜೂನ್ 6 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಇದುವರೆಗೆ 767 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 132 ಮಂದಿ ಡಿಸ್ಚಾರ್ಜ್ ಆಗಿದ್ದು, 635 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳಲ್ಲಿ ಇಂದಿನಿಂದ ಸರಾಸರಿ 100 ಮಂದಿ ಪ್ರತಿದಿನ ಗುಣಮುಖರಾಗಿ ಡಿಸ್ಚಾಜ್ ಆಗಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ದಿಶಾ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಇದುವರೆಗೆ 12,258 ಮಂದಿಯ ಕೋವಿಡ್ ಮಾದರಿ ಸಂಗ್ರಹಿಸಿದ್ದು, ಅದರಲ್ಲಿ 10992 ಮಂದಿಯ ವರದಿ ನೆಗೆಟಿವ್ ಆಗಿದ್ದು, 769 ವರದಿ ಬರಲು ಬಾಕಿ ಇದೆ, ಪಾಸಿಟಿವ್ ಪ್ರಕರಣಗಳಲ್ಲಿ ಶೇ.98 ಮಂದಿಗೆ ರೋಗ ಲಕ್ಷಣಗಳು ಇಲ್ಲ , ಪಾಸಿಟಿವ್ ಪ್ರಕರಣಗಳ ಚಿಕಿತ್ಸೆಗಾಗಿ ಟಿಎಂಎ ಪೈ ಆಸ್ಪತ್ರೆಯಲ್ಲಿ 125, ಕಾರ್ಕಳದಲ್ಲಿ 75, ಎಸ್.ಡಿ.ಎಂ ಕಾಲೇಜಿನಲ್ಲಿ 180 ಮತ್ತು ಕೊಲ್ಲೂರುನಲ್ಲಿ 250 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೋವಿಡ್ -19 ಜಿಲ್ಲಾ ನೋಢೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಇದುವರೆಗೆ ಕಂಡು ಬಂದಿರುವ ಪಾಸಿಟಿವ್ ಪ್ರಕರಣಗಳಲ್ಲಿ ಯಾವುದೇ ರೋಗಿಗೆ ಆಕ್ಸಿಜಿನ್, ವೆಂಟಿಲೇಟರ್, ಐ.ಸಿ.ಯು ಸೇವೆ ನೀಡುವಂತಹ ಗಂಭೀರ ಪ್ರಕರಣ ಕಂಡುಬಂದಿಲ್ಲ ಎಲ್ಲರೂ ಚಿಕಿತ್ಸೆಗೆ ಶೀಘ್ರದಲ್ಲಿ ಸ್ಪಂದಿಸುತ್ತಿದ್ದು, ಆರೋಗ್ಯವಾಗಿದ್ದಾರೆ, ಕ್ವಾರಂಟೈನ್ ಕೇಂದ್ರಗಳಿಂದ ತೆರಳಿದವರಿಂದ ಅವರ ಮನೆಯವರಿಗೆ ಹಾಗೂ ಸಮುದಾಯಕ್ಕೆ ರೋಗ ಹರಡಿಲ್ಲ, ಹೋಂ ಕ್ವಾರಂಟೈನ್ ನಲ್ಲಿರುವವರ ಮನೆಗೆ ಪ್ರತಿದಿನ ಆಶಾಕಾರ್ಯಕರ್ತೆಯರು ಭೇಟಿ ನೀಡಿ , ಪರಿಶೀಲಿಸುತ್ತಿದ್ದು, ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ, ಜಿಲ್ಲೆಯ ಸರ್ಕಾರಿ ಕೋವಿಡ್ ಲ್ಯಾಬ್ 10 ದಿನದಲ್ಲಿ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು. ಕೋವಿಡ್-19 ವಿರುದ್ದ ಹೋರಾಟದಲ್ಲಿ ಪ್ರತಿಯೊಬ್ಬರೂ ಸೇನಾನಿಗಳಂತೆ ಕಾರ್ಯ ನಿರ್ವಹಿಸಬೇಕಿದ್ದು, ಜಿಲ್ಲೆಯ ಎಲ್ಲಾ ಜನಪ್ರನಿಧಿಗಳು ಆರೋಗ್ಯ ಇಲಾಖೆಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲು ಬದ್ದರಿರುವುದಾಗಿ ತಿಳಿಸಿದ ಸಂಸದೆ ಶೋಭಾ ಕರಂದ್ಲಾಜೆ, ಪ್ರಸ್ತುತ ಜಿಲ್ಲೆಗೆ ಮಹಾರಾಷ್ಟ,ದಿಂದ ಬರುತ್ತಿರುವ ನಾಗರೀಕರನ್ನು ಕ್ವಾರಂಟೈನ್ ಕೇಂದ್ರಗಳಿಗೆ ತಲುಪಿಸಲು ಸೂಕ್ತ ವಾಹನ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಆರೋಗ್ಯ ಇಲಾಖೆಯಲ್ಲಿನ ಸಿಬ್ಬಂದಿಯ ಕೊರತೆ ಬಗ್ಗೆ ಹೊರ ಗುತ್ತಿಗೆ ನೇಮಕಾತಿ ಮಾಡಿಕೊಳ್ಳುವ ಕುರಿತಂತೆ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಾಗೂ ಜಿಲ್ಲೆಗೆ ಇನ್ನೊಂದು ಹೆಚ್ಚುವರಿ ಕೋವಿಡ್-19 ಆಸ್ಪತ್ರೆಯ ಅಗತ್ಯವಿದ್ದಲ್ಲಿ ಪ್ರಸ್ತಾವನೆ ನೀಡುವಂತೆ ತಿಳಿಸಿದರು. ರಾಷ್ಟಿಯ ಹೆದ್ದಾರಿ 169 ಎ ನಲ್ಲಿ ಪರ್ಕಳ ಸಮೀಪ ಗುಂಡಿ ಬಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದು, ಕೂಡಲೇ ಅದನ್ನು ಕಾಂಕ್ರೀಟ್ ನಿಂದ ಮುಚ್ಚುವಂತೆ ಸೂಚಿಸಿದ ಸಂಸದರು, ಭೂ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಆದಷ್ಟು ಶೀಘ್ರದಲ್ಲಿ ಸಂಪೂರ್ಣ ಕಾಮಗಾರಿಯನ್ನು ಮುಕ್ತಾಯಗೊಳಿಸುವಂತೆ ಸೂಚಿಸಿದರು. ಕುಂದಾಪುರ ಶಾಸ್ತಿ ಸರ್ಕಲ್ ಕಾಮಗಾರಿ ಪ್ರಗತಿ ಬಗ್ಗೆ ಉತ್ತರಿಸಿದ ಅಧಿಕಾರಿಗಳು, ಕೋವಿಡ್ 19 ಕಾರಣದಿಂದ ಕಾರ್ಮಿಕರು ಊರಿಗೆ ತೆರಳಿದ್ದು, ಕಾರ್ಮಿಕರ ಸಮಸ್ಯೆಯಿಂದ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿದ್ದು, 2 ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸುವುದಾಗಿ ತಿಳಿಸಿದರು. ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕ ಹಾನಿಯಾದಲ್ಲಿ ಮೆಸ್ಕಾಂ ನಿಂದ ಶೀಘ್ರದಲ್ಲಿ ಪುರ್ನ ನಿರ್ಮಾಣ ಮಾಡುವಂತೆ ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಸಂಸದರು ಸೂಚಿಸಿದರು, ಈಗಾಗಲೇ 140 ಮಂದಿ ಗ್ಯಾಂಗ್ ಮನ್ ನೇಮಕ ಮಾಡಿಕೊಂಡಿದ್ದು, ಇನ್ನೂ 140 ಮಂದಿ ನೇಮಕ ಮಾಡಿಕೊಳ್ಳಲಾಗುವುದು ಹಾಗೂ 3 ವಾಹನಗಳನ್ನು ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಕಡಲಕೊರೆತ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದರು ಸೂಚಿಸಿದರು. ಕುಡಿಯುವ ನೀರು ಯೋಜನೆಯ ಕುರಿತಂತೆ ನಿಟ್ಟೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 90% ಸಿವಿಲ್ ಕೆಲಸಗಳು ಮುಕ್ತಾಯಗೊಂಡಿದು, ಎಲೆಕ್ಟ್ರಿಕ್ ಕೆಲಸಗಳು ಬಾಕಿ ಇದ್ದು, 2 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪಿಎಂ ಕಿಸಾನ್ ಯೋಜನೆಯಡಿ ಜಿಲ್ಲೆಯ 134000 ರೈತರ ಖಾತೆಗಳಿಗೆ 94.86 ಕೋಟಿ ರೂಗಳ ಜಮೆ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಪ್ರದಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ವಿತರಿಸಲಾಗುವ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಿಸುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾಮಾಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರೈಸುವಂತೆ ಸೂಚಿಸಿದ ಸಂಸದರು, ಸ್ವಚ್ಚ ಭಾರತ್ ಯೋಜನೆಯಡಿ ನಗರ ಪ್ರದೇಶದಲ್ಲಿನ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಆತ್ಮ ನಿರ್ಭರ್ ಯೋಜನೆಯಡಿ ಸಣ್ಣ ಕೈಗಾರಿಕೆಗಳಿಗೆ ನೀಡಿರುವ ಸಾಲ ಸೌಲಭ್ಯಗಳ ಅನುಷ್ಠಾನ ಕುರಿತಂತೆ , ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ ಸಂಸದರು , ಈ ಕುರಿತು ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು,ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಪಂ ಸಿಇಓ ಪ್ರೀತಿ ಗೆಹಲೋತ್ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪಾದೂರು ತೈಲ ಸಂಗ್ರಹಗಾರದಿಂದ ದೇಶಕ್ಕೆ ಸಹಸ್ರ ಕೋಟಿ ರೂ ಉಳಿತಾಯ

Posted On: 05-06-2020 10:57AM

ಕಾಪು. ಜೂನ್, 5 : ಉಡುಪಿ ಜೆಲ್ಲೆಯ ಕಾಪು ತಾಲೂಕಿನ ಪಾದೂರು, ಮಂಗಳೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಭೂಗತ ತೈಲ ಸಂಗ್ರಹಗಳಿಂದ ದೇಶಕ್ಕೆ ಬರೋಬ್ಬರಿ 5000 ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ. 53 ಲಕ್ಷ ಟನ್ ನಷ್ಟು ತುರ್ತು ಇಂಧನ ಸಂಗ್ರಹಕ್ಕೆ ಈ ಮೂರು ಕಡೆ ಪೆಟ್ರೋಲಿಯಂ ಸಚಿವಾಲಯ ಭೂಗತ ಸಂಗ್ರಹಗಾರ ಹೊಂದಿದೆ. ಏಪ್ರಿಲ್ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾತೈಲ ಬೆಲೆ ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದಾಗ ಕೇಂದ್ರ ಸರ್ಕಾರ ಅಗ್ಗದ ಬೆಲೆಗೆ ತೈಲ ಖರಿದಿಸಿ ಈ ಮೂರು ಸಂಗ್ರಹಾಗಾರಗಳಿಗೆ ತುಂಬಿಸಿದೆ. ಈ ವೇಳೆ ಮಂಗಳೂರು ಮತ್ತು ಪಾದೂರಿನ ತೈಲ ಸಂಗ್ರಹಾಗಾರಗಳು ಅರ್ಧದಷ್ಟು ಖಾಲಿಯಾಗಿದ್ದವು, ವಿಶಾಖಪಟ್ಟಣದಲ್ಲಿ ಅಲ್ಪ ಪ್ರಮಾಣದ ಸಂಗ್ರಹಕ್ಕೆ ಜಾಗವಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ 5000 ಕೋಟಿ ರೂ ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಟ್ವೀಟ್ ಮಾಡಿದೆ. ಮಂಗಳೂರು, ಪಾದೂರು, ವಿಶಾಖಪಟ್ಟಣ ಪೈಕಿ ಪಾದೂರು ಘಟಕವೇ ದೊಡ್ಡದು. ಈ ಮೂರು ಘಟಕಗಳಲ್ಲಿ 53 ದಶಲಕ್ಷ ಲಕ್ಷ ಟನ್ ತೈಲ ಸಂಗ್ರಹಿಸಬಹುದು. 9.5 ದಿನ ದೇಶಕ್ಕೆ ತೈಲವನ್ನು ನೀಡಬಹುದು..

ತನ್ನದಲ್ಲದ ತಪ್ಪಿಗಾಗಿ ಕೈ ಕಳೆದುಕೊಂಡ ಸಂದೀಪ್ ಕೋಟ್ಯಾನ್ ಮುದರಂಗಡಿ

Posted On: 03-06-2020 08:54PM

ವೈದ್ಯಕೀಯ ನೆರವಿಗಾಗಿ ಮನವಿ.. ವಿಧಿ ಬಡವರ ವಿಚಾರದಲ್ಲಿ ಕೆಲವೊಂದು ಬಾರಿ ತುಂಬಾ ಕ್ರೂರಿ ಆಗುತ್ತಾನೆ. ಕಷ್ಟಗಳನ್ನು ಕೊಟ್ಟವರಿಗೆ ಮತ್ತೇ ಕಷ್ಟಗಳನ್ನು ನೀಡುತ್ತಾನೆ. ಮುದರಂಗಡಿಯ ಬಡತನದಲ್ಲಿರುವ ಪುಟ್ಟ ಸಂಸಾರದ ಕಣ್ಣೀರಿನ ಕಥೆ ಕೇಳಿದರೆ ಎಂತಹ ನಿಷ್ಠರುಣಿಗೂ ಕಣ್ಣೀರು ಸ್ಫುರಿಸೀತು. ಹೌದು ಗೆಳೆಯರೇ, ಸಂದೀಪ್ ಕೋಟ್ಯಾನ್ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಸಂತಸದಿಂದ ಇರುವಾಗಲೇ ವಿಧಿ ಕ್ಯಾಂಟರ್ ವಾಹನದ ರೂಪದಲ್ಲಿ ಬಂದು ಸಂದೀಪ್ ನ ಬದುಕಿನ ಅಸ್ತಿತ್ವಕ್ಕೆ ಪೆಟ್ಟು ನೀಡಿದೆ. 2020ರ ಮಾರ್ಚ್ ತಿಂಗಳ 18ನೇ ತಾರೀಖು ಕೆಲಸದ ನಡುವೆ ತನ್ನ ಸ್ನೇಹಿತನೊಂದಿಗೆ ಮಧ್ಯಾಹ್ನದ ಊಟಕ್ಕೆ ತೆರಳಿದ್ದ. ಊಟ ಮುಗಿಸಿ ಕೆಲವೇ ದೂರ ಬೈಕ್ ನಲ್ಲಿ ಬರುವಾಗಲೇ ಹಿಂದಿನಿಂದ ಅತೀ ವೇಗವಾಗಿ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಈತನ ಸ್ನೇಹಿತ ರಸ್ತೆ ಬದಿಯಲ್ಲಿ ಬಿದ್ದಿದ್ದ.ರಸ್ತೆಯಲ್ಲಿ ಬಿದ್ದಿದ್ದ ಸಂದೀಪ್ ಕೋಟ್ಯಾನ್ ನ ಬಲಗೈ ಅಂಗೈ ಮೇಲೆ ಇನ್ನೊಂದು ಟ್ಯಾಂಕರ್ ಸಾಗಿತ್ತು. ಹೊಟೇಲ್ ನವರ ಮತ್ತು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಬಲಗೈ ಅಂಗೈ ಸಂಪೂರ್ಣ ಜಜ್ಜಿ ಹೋಗಿದ್ದರಿಂದ ವೈದ್ಯರು ಬಲಗೈ ಅಂಗೈ ಗಿಂತ ಸ್ವಲ್ಪ ಮೇಲೆ ಕೈ ಕತ್ತರಿಸಿದರು. 22 ವರ್ಷ ವಯಸ್ಸಿನ ಸಂದೀಪ್ ಬದುಕಿನ ಬಗ್ಗೆ ಅಪಾರವಾದ ಸಾಧನೆಯ ಕನಸ್ಸನ್ನು ಕಟ್ಟಿದ್ದ. ಆತನ ತಂದೆ ತಾಯಿ ಇಲ್ಲಿಯ ತನಕ ಸುಮಾರು 3.5ಲಕ್ಷ ರೂಪಾಯಿ ಈಗಾಗಲೇ ಅವರಿವರಿಂದ ಸಾಲ ಮಾಡಿ ಆಸ್ಪತ್ರೆಗೆ ಖರ್ಚು ಮಾಡಿರುತ್ತಾರೆ. ವೈದ್ಯರು ಬಲಗೈ ಅಂಗೈ ಸರಿ ಮಾಡಲು ಇನ್ನೂ 8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಎದ್ದಾಗ ತನ್ನ ಕೈ ನೋಡಿ ಕಣ್ಣೀರು ಸುರಿಸುವುದನ್ನು ಕಂಡಾಗ ಹೃದಯ ಮರುಗುತ್ತದೆ. ಸಂದೀಪ್ ನ ತಂದೆ ಲೂನಾದಲ್ಲಿ ಚಹಾ ಮಾರಿ ಸಂಸಾರ ಸಾಗಿಸುತ್ತಿದ್ದಾರೆ. ಮನೆಗೆ ಆಸರೆಯಾಗ ಬೇಕಿದ್ದ ಮನೆ ಮಗ ಕೈ ಕಳೆದುಕೊಂಡು ಹಾಸಿಗೆಯಲ್ಲಿದ್ದಾನೆ. ಆತ್ಮೀಯರೇ, ಕಷ್ಟದಿಂದ ತತ್ತರಿಸಿರುವ ಸಂದೀಪ್ ಕೋಟ್ಯಾನ್ ನ ವೈದ್ಯಕೀಯ ಚಿಕಿತ್ಸೆ ಗೆ ನೆರವಾಗೋಣ. ಹನಿ ಹನಿ ಸೇರಿದರೆ ಹಳ್ಳ ಎನ್ನುವ ಹಾಗೆ ನಾವೆಲ್ಲ ಮನಸ್ಪೂರ್ತಿಯಿಂದ ನೀಡುವ ಆರ್ಥಿಕ ಸಹಾಯ ಸಂದೀಪ್ ನ ಕಣ್ಣೀರು ಒರೆಸಲು ನೆರವಾಗುತ್ತದೆ. ದಯವಿಟ್ಟು ಸಹಕರಿಸಿ.. Contact number : Kotian sandeep 8971173082 ಸಂದೀಪ್ ಕೋಟ್ಯಾನ್ ನ ಬ್ಯಾಂಕ್ ಖಾತೆ ವಿವರ.. Bank Details Account no -0638101011991 IFSC-CNRB0000638 CANARA BANK MUDARANGADI BRANCH ಸಹಾಯ ಹಸ್ತ ಚಾಚಿ ಸಂದೀಪ್ ಕೋಟ್ಯಾನ್ ನ ಹಸ್ತ ಉಳಿಸೋಣ.

ಕ್ವಾರಂಟೈನ್ ಸಮಯದಲ್ಲಿ ತಪ್ಪು ವಿಳಾಸ ನೀಡಿದಲ್ಲಿ ಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್

Posted On: 03-06-2020 07:52PM

ಉಡುಪಿ ಜೂನ್ 3 (ಕರ್ನಾಟಕ ವಾರ್ತೆ): ಜಿಲ್ಲೆಗೆ ಹೊರಜಿಲ್ಲೆಯಿಂದ ಆಗಮಿಸುವವರು ಕ್ವಾರಂಟೈನ್ ಗೆ ತೆರಳುವ ಮುನ್ನ ತಪ್ಪು ವಿಳಾಸ , ದೂರವಾಣಿ ಸಂಖ್ಯೆ ನೀಡಿದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ. ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಸೇವಾ ಸಿಂಧು ಆಪ್ ನಲ್ಲಿ ನೊಂದಣಿ ಮಾಡಿಕೊಂಡಿರಬೇಕು. ರಸ್ತೆ ಮಾರ್ಗದಲ್ಲಿ ಆಗಮಿಸುವವರು , ರಾಜ್ಯದ ಗಡಿಯಲ್ಲಿರುವ ಸ್ವೀಕಾರ (BRC - BORDER RECEIVE CENTER) ಕೇಂದ್ರದಲ್ಲಿ ಸೂಚಿಸುವ , ತಮ್ಮ ಜಿಲ್ಲೆಯಲ್ಲಿನ, ಸ್ವೀಕಾರ ಕೇಂದ್ರ (DRC - DISTRICT RECEIVE CENTER) ಗೆ ಹಾಜರಾಗಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿ ಕ್ವಾರಂಟೈನ್ ಗೆ ಒಳಪಡಬೇಕು, ಮಹಾರಾಷ್ಠçದಿಂದ ಆಗಮಿಸುವವರು 7 ದಿನಗಳ ಸಾಂಸ್ಥಿಕ ಮತ್ತು 7 ದಿನಗಳ ಹೋಂ ಕ್ವಾರಂಟೈನ್ ಗೆ ಒಳಪಡಬೇಕು, ಇತರೆ ರಾಜ್ಯದಿಂದ ಆಗಮಿಸುವವರು 14 ದಿನಗಳ ಹೋಂ ಕ್ವಾರಂಟೈನ್ ಗೆ ಒಳಪಡಬೇಕು. ರೈಲಿನಲ್ಲಿ ಬರುವವರಿಗೆ ಅವರು ಇಳಿಯುವ ರೈಲ್ವೆ ನಿಲ್ದಾಣದಲ್ಲಿನ, ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೊಂದಾಯಿಸಬೇಕು. ನೊಂದಾಯಿಸಿದ ಸ್ಥಳಕ್ಕೆ ತೆರಳದೇ ಮಾರ್ಗಮಧ್ಯೆ ತಪ್ಪಿಸಿಕೊಂಡಲ್ಲಿ ಅಂತಹವರ ವಿರುದ್ದ ಕೂಡಲೇ ಎಫ್.ಐ.ಆರ್ ದಾಖಲಿಸಿ , ಕ್ರ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಸೂಚಿಸಿದ ಜಿಲ್ಲಾಧಿಕಾರಿಗಳು, ಕ್ವಾರಂಟೈನ್ ಕೇಂದ್ರಗಳಿಗೆ ತಮ್ಮದೇ ವೆಚ್ಚದಲ್ಲಿ ತೆರಳಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ನೊಂದಣಿಯಾದ ಎಲ್ಲರಿಗೂ ಸೀಲ್ ಹಾಕಿ, ಸಂಬoದಪಟ್ಟ ತಾಲೂಕಿನ ಗ್ರಾಮಗಳಿಗೆ ಕಳುಹಿಸಬೇಕು, ಗ್ರಾಮಗಳಿಗೆ ಆಗಮಿಸುವ ಹೊರರಾಜ್ಯದ ಜನತೆಗೆ ಗ್ರಾಮದಲ್ಲಿ ಕ್ವಾರಂಟೈನ್ ಗೆ ಒಳಪಡಿಸಲು , ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಪ್ರತ್ಯೇಕ ಕ್ವಾರಂಟೈನ್ ಕೇಂದ್ರ ತೆರಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ತಾಲೂಕಿನ ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತ್ ಗಳಲ್ಲಿನ ಕ್ವಾರಂಟೈನ್ ಕೇಂಧ್ರಗಳಿಗೆ ಊಟೋಪಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡುವಂತೆ ಹಾಗೂ ಪ್ರತಿನಿತ್ಯ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಹೊರರಾಜ್ಯದಿಂದ ಆಗಮಿಸುವವರು ಕಡ್ಡಾಯವಾಗಿ ಆರೋಗ್ಯ ಸೇತು, ಕ್ವಾರಂಟೈನ್ ವಾಚ್ ಮತ್ತು ಆಪ್ತಮಿತ್ರ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಮಾಡಿಕೊಂಡಿರುವOತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಶೀಘ್ರದಲ್ಲಿ ಸರ್ಕಾರಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭ- ಡಾ.ಸುಧಾಕರ್

Posted On: 03-06-2020 07:23PM

ಉಡುಪಿ ಜೂನ್ 3 (ಕರ್ನಾಟಕ ವಾರ್ತೆ): ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಅತ್ಯಂತ ಶೀಘ್ರದಲ್ಲಿ ಸರ್ಕಾರಿ ಕೋವಿಡ್ -19 ಪರೀಕ್ಷಾ ಲ್ಯಾಬ್ ಆರಂಭಗೊಳ್ಳಲಿದ್ದು, ಈ ಕುರಿತಂತೆ ನೂತನ ಲ್ಯಾಬ್ ನಿರ್ಮಾಣ ಕಾಮಗಾರಿಗಳು ಅಂತಮ ಹಂತದಲ್ಲಿವೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು. ಅವರು ಬುಧವಾರ, ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಕೋವಿಡ್-19 ಹಿನ್ನಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ನಾಗರೀಕರ ಕೋವಿಡ್ ಪರೀಕ್ಷೆಯನ್ನು ಶೀಘ್ರದಲ್ಲಿ ನಡೆಸುವ ಅಗತ್ಯವಿದ್ದು, ಈಗಾಗಲೇ ಮಣಿಪಾಲದ ಕೆಎಂಸಿ ಯಲ್ಲಿ ಇರುವ ಲ್ಯಾಬ್ ನ ಜೊತೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ನೂತನ ಲ್ಯಾಬ್ ಆರಂಭದ ಕುರಿತಂತೆ , ಲ್ಯಾಬ್ ನ ಸಿವಿಲ್ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲಿ ಅಗತ್ಯ ಯಂತ್ರೋಪಕರಣಗಳನ್ನು ಒದಗಿಸುವುದಾಗಿ ತಿಳಿಸಿದ ಸಚಿವರು , ಮುಂದಿನ 10 ದಿನದಲ್ಲಿ ಈ ಲ್ಯಾಬ್ ಕಾರ್ಯಾರಂಭ ಮಾಡಲಿದೆ ಎಂದರು. ಜಿಲ್ಲೆಗೆ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವವರನ್ನು ಸಾಂಸ್ಥಿಕ ಕ್ವಾರಂಟೈನ್ ಬದಲು ಅವರ ಮನೆಯನ್ನೇ ಸೀಲ್ ಡೌನ್ ಮಾಡಿ ಅಲ್ಲಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕುರಿತಂತೆ ಜಿಲ್ಲೆಯ ಶಾಸಕರು ನೀಡಿದ ಸಲಹೆಯ ಕುರಿತಂತೆ , ಪರಿಶೀಲಿಸುವುದಾಗಿ ತಿಳಿಸಿದ ಸಚಿವರು, ಕೋವಿಡ್ 19 ನಿಯಂತ್ರಣಕ್ಕೆ ಗ್ರಾಮಮಟ್ಟದಿಂದ ಜಿಲ್ಲಾ ಕೇಂದ್ರದಲ್ಲಿನ ವಾರ್ಡ್ ಗಳ ವರೆಗೂ ಕಾರ್ಯಪಡೆ ರಚಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. ಕೋವಿಡ್-19 ರ ಈ ಅವಧಿಯಲ್ಲಿ ಎಲ್ಲಾ ಖಾಸಗಿ ನರ್ಸಿಂಗ್ ಹೋಂ ಗಳು ಮತ್ತು ಕ್ಲಿನಿಕ್ ಗಳ ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡುತ್ತಿರುವ ಬಗ್ಗ ಪರಿಶೀಲಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಡಾ. ಕೆ.ಸುಧಾಕರ್, ಕೋವಿಡ್ ಲ್ಯಾಬ್ ಗೆ ಅಗ್ಯವಿರುವ ಸಿಬ್ಬಂದಿ ಮತ್ತು ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಹೊರಗುತ್ತಿಗೆಯಲ್ಲಿ ಪಡೆಯುವಂತೆ ಸೂಚಿಸಿದರು. ಜಿಲ್ಲೆಗೆ ಅಗತ್ಯವಿರುವ 2000 ಪಿಪಿಇ ಕಿಟ್ ಗಳನ್ನು ಕೂಡಲೇ ಸರಬರಾಜು ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಇದುವರೆಗೆ 13542 ಜನರನ್ನು ಕ್ವಾರಂಟೈನ್ ಮಾಡಿದ್ದು, ಜಿಲ್ಲೆಗೆ ಮೇ ತಿಂಗಳಲ್ಲಿ 8624 ಮಂದಿ ಆಗಮಿಸಿದ್ದು, ಅದರಲ್ಲಿ 152 ಮಂದಿ ವಿದೇಶದಿಂದ ಮತ್ತು 8472 ಮಂದಿ ಇತರೆ ರಾಜ್ಯಗಳಿಂದ ಆಗಮಿಸಿದ್ದು, ಇದರಲ್ಲಿ 7697 ಮಂದಿ ಮಹಾರಾಷ್ಟ್ರದಿಂದ ಬಂದಿದ್ದಾರೆ, ಜಿಲ್ಲೆಯಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 539 ಮಂದಿಗೆ ಪರೀಕ್ಷೆ ಮಾಡಲಾಗಿದೆ, ಇದುವರೆಗೆ 12504 ಮಾದರಿ ಸಂಗ್ರಹಿಸಲಾಗಿದೆ , ಒಟ್ಟು 410 ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, 64 ಬಿಡುಗಡೆಯಾಗಿದ್ದು, 345 ಸಕ್ರಿಯ ಪ್ರಕರಣಗಳಿವೆ, ಒಂದು ಸಾವು ಸಂಭವಿಸಿದೆ. ಪ್ರಕರಣ ಕಂಡು ಬಂದಿರುವಲ್ಲಿ ಶೇ.98% ಅಂದರೆ 400 ಮಂದಿಗೆ ರೋಗ ಲಕ್ಷಣಗಳಿಲ್ಲ , ಒಟ್ಟು 63 ಕಂಟೈನ್ ಮೆಂಟ್ ಝೋನ್ ರಚಿಸಲಾಗಿದ್ದು, ಪ್ರಸ್ತುತ 61 ಕಂಟೈನ್ ಮೆಂಟ್ ಝೋನ್ ಗಳಿವೆ ಎಂದು ಕೋವಿಡ್-19 ಜಿಲ್ಲಾ ನೋಡೆಲ್ ಅಧಿಕಾರಿ ಪ್ರಶಾಂತ್ ಭಟ್ ಮಾಹಿತಿ ನೀಡಿದರು. ಸಭೆಯಲ್ಲಿ ಮುಜರಾಯಿ , ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್, ರಘುಪತಿ ಭಟ್, ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ಹಾಗೂ ಆರೋಗ್ಯ ಇಲಾಖೆಯ ಮತ್ತು ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ದೀನರಿಗೆ, ದಿಕ್ಕು ದೆಸೆಯಿಲ್ಲದ ಹೋಟೆಲ್ ಕಾರ್ಮಿಕರಿಗೆ ಆಶ್ರಯದಾತರಾದವರ ಕಥೆಯಿದು

Posted On: 03-06-2020 02:16PM

ಮಹಾರಾಷ್ಟ್ರದ ಮಣ್ಣಿನಲ್ಲಿ ಹಸಿದವರಿಗೆ ಅನ್ನ ನೀಡಿದ "ಅನ್ನದಾತ" , ಮನುಷ್ಯತ್ವದ ರಾಯಬಾರಿ ಎನಿಸಿಕೊಂಡ ಮುಂಬೈ ಉದ್ಯಮಿಯೊಬ್ಬರ ಪರೋಪಕಾರದ ಪರಿಚಯವಿದು.. ಹೌದು ಅಲ್ಲಿ ಮೌನ ಹೆಪ್ಪುಗಟ್ಟಿದೆ. ಕಣ್ಣೀರು ಸಹ ಅನಾಥವಾಗಿದೆ.ಕಳೆಗುಂದಿದ ಮುಖ, ನಿಸ್ತೇಜಗೊಂಡ ಕಣ್ಣುಗಳು,ಏಳು ಸುತ್ತಿನ ಕೋಟೆಯಲ್ಲಿ ಬಂದಿ ನಾನಾದೆ ಎಂಬ ಬಾವ, ದುಡಿದು ತಿಂದ ಕೈಗಳಿಗೆ ಬೇಡಿ ತಿನ್ನಲು ಸ್ವಾಭಿಮಾನ ಅಡ್ಡ ಬರುತ್ತೆ.. ಈ ವರ್ಷ ಮುರುಕಲು ಮನೆಯನ್ನು ದುರಸ್ತಿ ಮಾಡಿ ಹಂಚನ್ನು ಹಾಕೋಣ. ಬರುವ ಸಲ ತಂಗಿಗೆ ಗಂಡು ಹುಡುಕೋಣ. ಪೋರೆಯಿಂದ ಮಂಜಾದ ನಿನ್ನ ಕಣ್ಣಿನ ಸರ್ಜರಿ ಮಾಡಿಸಬೇಕು ಅಮ್ಮ.. ನೀವು ಇನ್ಮುಂದೆ ಕೂಲಿಗೆ ಹೋಗಿದ್ದು ಸಾಕು ಮನೆಯಲ್ಲೇ ಆರಾಮಾಗಿರಿ ಅಪ್ಪಾ. ಅಂದ ಹುಡುಗನೊಬ್ಬ ತನ್ನೆಲ್ಲಾ ಕನಸುಗಳನ್ನು ನನಸು ಮಾಡಿಕೊಳ್ಳಲು ಎಂದೂ ಮಲಗದ ಈ ಮಾಯನಗರಿಯಲ್ಲಿ ಹಗಲಿರುಳೆನ್ನದೆ ರಕ್ತ ಬೆವರನ್ನು ಒಂದು ಮಾಡಿಕೊಂಡು ದುಡಿಯತೊಡಗುತ್ತಾನೆ.ಆದರೆ ಕೋರೋನ ಎನ್ನುವ ಮಹಾಮಾರಿ ಆತನ ಕನಸುಗಳನ್ನೆಲ್ಲ ಹಿಂಡಿ ಹಿಪ್ಪೆ ಮಾಡಿ ಹಾಕಿದೆ. ತನ್ನವರ ಬದುಕನ್ನು ಬಿಡಿ,ತನ್ನೊಬ್ಬನ ಜೀವನವನ್ನು ರಕ್ಷಿಸಿಕೊಳ್ಳಲು ಹೆಣಗಾಡುವ ದುಸ್ಥಿತಿ ಅವನಿಗೆ ಎದುರಾಗಿದೆ.ಅನೇಕ ತುಳು ಕನ್ನಡಿಗರ ಬದುಕು ಇಲ್ಲಿ ಡೋಲಾಯಮಾನವಾಗಿದೆ..ಅವರ ಕೂಗು ಅರಣ್ಯ ರೋದನವಾಗಿದೆ. ಇಂತಹ ಸಮಯದಲ್ಲಿ ಇವರ ನೆರವಿಗೆ ಧಾವಿಸಿ ಬಂದು ಸಹಾಯಕ್ಕೆ ನಿಂತವರೆ "ಮಾತೃ ಹೃದಯಿ" ಬಂಟರ ಸಂಘದ ವಸಾಯಿ - ಡಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕರಾದ ಶ್ರೀ ಶಶಿಧರ್ ಕೆ ಶೆಟ್ಟಿಯವರು.. ಸಾಲಿನಲ್ಲಿ ಬರೆದಷ್ಟು ಸುಲಭವಲ್ಲಾ ಶಶಿಧರ್ ಶೆಟ್ಟಿಯವರ ಸಾಗರದಷ್ಟು ವಿಸ್ತಾರವಾದ ವ್ಯಕ್ತಿತ್ವವನ್ನು ವರ್ಣಿಸುವುದು.. ಶ್ರೇಷ್ಠ ಜನನಾಯಕ,ಸಂಘಟಕ, ಯಶಸ್ವೀ ಹೋಟೆಲ್ ಉದ್ಯಮಿ,ಕಲಾರಾಧಕ, ಸಮಾಜಮುಖಿ ಕಳಕಳಿಯ ಧೀಮಂತ ವ್ಯಕ್ತಿ ಎಲ್ಲಕಿಂತ ಮಿಗಿಲಾಗಿ ಇವರೊಬ್ಬ ಹೃದಯವಂತ ಮನುಷ್ಯ.. ಉಡುಪಿ ಜಿಲ್ಲೆಯ ಇನ್ನಂಜೆಯ ಮಂಡೇಡಿ ಇವರ ಊರು.ತಂದೆ ಮಂಡೆಡಿ ರಾಜನ್ ಮನೆ ಕಾಳು ಶೆಟ್ಟಿ, ತಾಯಿ ಮಂಡೆಡಿ ಕುಂಜಾರಬೆಟ್ಟು ಶಾರದಾ ಶೆಟ್ಟಿ. ದೇಶದ ಪ್ರತಿಷ್ಠಿತ ಕಂಪನಿಗಳೊಂದಾದ ಗೋದ್ರೆಜ್ ಕಂಪನಿಯ ಮುಂಬೈ ವಿಭಾಗದ ಶಾಖೆಯಲ್ಲಿ ಕ್ಯಾಂಟೀನ್ ನ ಮುಖ್ಯ ಬಾಣಸಿಗರಾಗಿ ಕಾಳು ಶೆಟ್ಟಿಯವರು ಕಾರ್ಯನಿರ್ವಹಿಸುತ್ತಿದ್ದರು. ಇವರ ಸಂಸಾರ ಮುಂಬೈಯ ಹೃದಯ ಬಾಗವಾದ ಲೋವರ್ ಪರೆಲ್ ನಲ್ಲಿ ವಾಸಿಸುತಿತ್ತು. ಎಲ್ಲರ ನೋವಿಗೂ ಸ್ಪಂದಿಸುವ ಕರುಣಾಮಯಿ ಈ ಕಾಳು ಶೆಟ್ಟಿಯವರ ಮನಸ್ಸು. ದಾರಿಹೋಕರಾದ ಬಿಕ್ಷುಕರು ಬಿಕ್ಷೆ ಬೇಡಲು ಬಂದರೆ ಅವರನ್ನು ಮನೆಯೊಳಗೆ ಕುಳ್ಳಿರಿಸಿ ಊಟ ಹಾಕಿ ಕಳಿಸುತ್ತಿದ್ದ ಕರುಣಾಮಯಿ. ಹೆತ್ತವರ ಇಂತಹ ಪರೋಪಕಾರದ ಗುಣಗಳು ಮಕ್ಕಳ ಮನಸ್ಸಿನ ಮೇಲೂ ಪ್ರಭಾವ ಬೀರತೊಡಗಿದವು.ವರ್ಲಿಯ ಮುನ್ಸಿಪಲ್ ಕನ್ನಡ ಮಾದ್ಯಮ ಶಾಲೆಯಲ್ಲಿ ಶಶಿಧರ್ ಶೆಟ್ಟಿ ಯವರು ವಿದ್ಯಾರ್ಥಿಯಾಗಿ ಸೇರಿಕೊಂಡರು.ಎಲ್ಲವೂ ಸುಖಕರವಾಗಿ ಸಾಗುತ್ತಿರುವಾಗ ಕಾಳು ಶೆಟ್ಟಿ ಯವರ ಸಾವು ಬರಸಿಡಿಲಂತೆ ಬಂದಪ್ಪಳಿಸಿತು. ಆಗ ಶಶಿಧರ ಶೆಟ್ಟಿಯವರ ಪ್ರಾಯ ಹನ್ನೊಂದು.ಐದನೇ ತರಗತಿಯ ವಿದ್ಯಾರ್ಥಿ.ಮನೆಯ ಆದಾರವೆ ಕುಸಿದು ಬಿದ್ದಾಗ ಕಂಗಾಲಾದ ಇವರೆಲ್ಲಾ ತಾಯಿಯೊಂದಿಗೆ ಪುನಃ ಹುಟ್ಟೂರಾದ ಇನ್ನಂಜೆಯ ಕಂಜಾರಬೆಟ್ಟುಗೆ ಬರಬೇಕಾಯಿತು.ಊರಲ್ಲಿ ಇವರದ್ದು ಅವಿಭಕ್ತ ಕುಟುಂಬ.ವ್ಯವಸಾಯ ಭೂಮಿಯೂ ಅಷ್ಟೇ ಪ್ರಮಾಣದಲ್ಲಿತ್ತು.ಇಲ್ಲಿ ಶಶಿಧರ್ ಶೆಟ್ಟರು ತನ್ನ ಶಿಕ್ಷಣವನ್ನು ಮುಂದುವರೆಸಿದರು.ಆದರೆ ಇವರ ಮನಸ್ಸು ಮುಂಬೈಗೆ ಮರಳಿ ಬರಲು ಕನವರಿಸುತಿತ್ತು.ತನ್ನ ಹದಿನೇಳನೇ ವರ್ಷದಲ್ಲಿ ಪುನಃ ಮುಂಬೈಯತ್ತ ಪ್ರಯಾಣ ಬೆಳೆಸಿದರು.ಬಂದವರೇ ಸಂಬಂಧಿಯೊಬ್ಬರ ಹೋಟೆಲಿನಲ್ಲಿ ಕೆಲಸ ಮಾಡತೊಡಗಿದರು. ಈ ಮಹಾರಾಷ್ಟ್ರದ ಮಣ್ಣಿನಲ್ಲಿ ಸಾಧನೆಯ ದಿವಿಗೆಯನ್ನು ಹಚ್ಚುವ, ತನ್ಮೂಲಕ ಬದುಕಿನಲಿ ಉನ್ನತಿಯನ್ನು ಹೊಂದುವ, ಮಹತ್ವಾಕಾಂಕ್ಷೆ ಇವರಲ್ಲಿ ತುಡಿತವಾಗಿ ಮಾರ್ಪಟ್ಟಿತ್ತು. ಕಾಲಕ್ರಮೇಣ ಉದ್ಯೋಗಿ ಆಗಿದ್ದವರು ಉದ್ಯಮಿಯಾಗಿ ಬೆಳೆದರು. ಈ ನಡುವಿನ ಇವರ ಹೊರಟ ನಿಜಕ್ಕೂ ಅದ್ಭುತ ಹಾಗೂ ಅವಿಸ್ಮರಣೀಯ.. ಶಶಿಧರ್ ಶೆಟ್ಟಿಯವರ ಧರ್ಮಪತ್ನಿ ಶಶಿಕಲಾ ಶೆಟ್ಟಿ. ಶ್ರೀಯುತರ ಬದುಕಿನ ಪಥವನ್ನೆ ಬದಲಿಸಿದಾಕೆ. ಮೂಲತಃ ಕಾರ್ಕಳದ ಹೆಬ್ರಿಯವರು. "ಕನಸು ಗುರಿಯಾಗಬೇಕು,ಗುರಿಯೇ ಕನಸಾಗಬಾರದು" ಅನ್ನುವುದು ಶಶಿಕಲಾರ ಮನದ ಇಂಗಿತ.. ಇವರ ದಾಂಪತ್ಯದ ಸಾಕ್ಷಿ ಎಂಬಂತೆ ಮನೆಯ ಲಕ್ಷ್ಮಿ ಯಾಗಿ ಮಗಳು ಸೃಷ್ಟಿ ಜನಿಸಿದಳು.. ನಾಲಾಸೋಪರ ಪರಿಸರದ ಯಶಸ್ವಿ ಹೋಟೆಲ್ ಉದ್ಯಮಿ ಅನ್ನಿಸಿಕೊಂಡರು.ಅನೇಕ ಹೆಸರಾಂತ ಹೋಟೆಲುಗಳ ಮಾಲಕ ಹಾಗೂ ಪಾಲುದಾರರೇನಿಕೊಂಡರು. ಅದರಲ್ಲೂ ನಾಲಸೋಪರ ದ "ಗ್ಯಾಲಕ್ಸಿ ಫ್ಯಾಮಿಲಿ ರೆಸ್ಟೋರೆಂಟ್" ಪ್ರಸಿದ್ಧವಾದುದು."ನಿನ್ನ ಸಾಧನೆಯ ದೀಪವನ್ನು ನೀನೇ ಹಚ್ಚಬೇಕು.ಕಟ್ಟಿಗೆ ಸುಟ್ಟಾಗ ಬೂದಿಯಾಗುತ್ತದೆ.ಆದರೆ ಇಟ್ಟಿಗೆ ಸುಟ್ಟಾಗ ಗಟ್ಟಿಯಾಗುತ್ತದೆ.ಆದ್ದರಿಂದ ನಾವು ಕಷ್ಟಗಳನ್ನು ಎದುರಿಸಿ ಮುಂದ ಡಿಯಿಟ್ಟಾಗ ಮಾತ್ರ ಜೀವನದಲ್ಲಿ ಸುಟ್ಟ ಇಟ್ಟಿಗೆಯಂತೆ ಗಟ್ಟಿ ಆಗುತ್ತೇವೆ" ಅನ್ನುವುದು ಶಶಿಧರ್ ಶೆಟ್ಟರ ಮಾತು.. ಲಾಕ್ ಡೌನ್ ನಿಂದಾಗಿ ಊರಿನಲ್ಲಿದ್ದು, ಮುಂಬೈಗೆ ಬರಲಾಗದಿದ್ದರೂ ಅಲ್ಲಿಂದಲೇ ಹತ್ತಾರು ಲಕ್ಷದ ದಿನಸಿ ಸಾಮಾನುಗಳನ್ನು ,ಬಂಟರ ಸಂಘ ಮುಂಬೈ, ವಸಾಯಿ- ದಾಹಣು ಪ್ರಾದೇಶಿಕ ಸಮಿತಿ,ಶ್ರೀದೇವಿ ಯಕ್ಷಕಲಾ ನಿಲಯ,ತುಳುಕೂಟ ಫೌಂಡೇಶನ್ ಇವರ ಮೂಲಕ ಲಾಕ್ ಡೌನ್ ನಿಂದ ತೊಂದರೆಗಿಡಾದ ಜನರಿಗೆ ಅದರಲ್ಲೂ ಮುಖ್ಯವಾಗಿ ಹೋಟೆಲ್ ಕಾರ್ಮಿಕರಿಗೆ, ಹಾಗೂ ತುಳು ಕನ್ನಡಿಗರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ಕಾರ್ಯ ಆರಂಭಿಸಿದರು.ಈಗಾಗಲೇ 2500ಕ್ಕೂ ಮಿಕ್ಕಿ ಕುಟುಂಬಗಳಿಗೆ ಸುಮಾರು 15 ಲಕ್ಷ ರೂಪಾಯಿ ಮೊತ್ತದ ಆಹಾರ ಪೊಟ್ಟಣ ಕೊಡಲಾಗಿದ್ದು,ಕೆಲವರಿಗೆ ನಗದನ್ನು ನೀಡಿ ಸಹಕರಿಸಿದ್ದಾರೆ...ಇವರ ಈ ಸೇವಾ ಕಾರ್ಯದಲ್ಲಿ ಅನೇಕ ವ್ಯಕ್ತಿಗಳು ಕೈ ಜೋಡಿಸಿದ್ದಾರೆ. ಶಶಿಧರ್ ಶೆಟ್ಟಿಯವರ ಮನಸ್ಸು ಯಾವಾಗ್ಲೂ ಸಮಾಜಮುಖಿಯಾಗಿ ಯೋಚಿಸುತ್ತಿರುತ್ತದೆ.ಎಷ್ಟೇ ಚಿಕ್ಕವರಾಗಿರಲಿ ತುಂಬಾ ಸರಳ ಸಜ್ಜನಿಕೆಯಿಂದ ಮಾತಾಡುವ ಇವರು ನಯವಿನಯಕ್ಕೆ ಪರ್ಯಾಯ ನಾಮ.ಇದಕ್ಕೆಲ್ಲ ಕಾರಣ ಅವರ ಬಾಲ್ಯದ ದಿನಗಳು. ಆಗೆಲ್ಲಾ ಹಲವು ರೀತಿಯ ಅಗ್ನಿ ದಿವ್ಯಗಳನ್ನು ಎದುರಿಸಿದ್ದಿರಿ.ಹಲವು ಬಗೆಯ ಸಂಸ್ಕಾರಕ್ಕೆ ಒಳಗಾದಿರಿ.ಅಪ್ಪಟ ಚಿನ್ನಾವಾದಿರಿ.ಕಲ್ಲು ಸಕ್ಕರೆ ಯಂತ ನಿಮ್ಮ ತುಳು ಬಾಷೆ .ತಿಳಿನೀರ ಮನಸುಳ್ಳ ಸಹೃದಯಿ.ಅದಕ್ಕೆ ನೀವು ಮನೆಯವರ ಊರವರ ಪ್ರೀತಿ ಪಾತ್ರರಾದೀರಿ.ಲಕ್ಷಾಂತರ ತುಳುವರಿಗೆ ಮತ್ತು ಕನ್ನಡಿಗರಿಗೆ ಪರಿಚಿತ ಮುಖವಾದಿರಿ.ಕೆಲಸಗಾರರಿಗೆ ಪ್ರೀತಿಯ ಅಣ್ಣನಾದಿರಿ... "ನೀರು ತಾನು ಹರಿಯುವಾಗ ಎದುರಿಗೆ ಬರುವ ಕಸ ಕಡ್ಡಿ ಕಲ್ಲು ಮುಳ್ಳುಗಳನ್ನು ಹೊತ್ತುಕೊಂಡು ಹರಿದು ತನ್ನ ಗುರಿ ತಲುಪುತ್ತದೆ.ನೀವು ಅಷ್ಟೇ ಜೀವನದಲ್ಲಿ ಎದುರಾಗುವ ಅವಮಾನ,ತಿರಸ್ಕಾರ, ಕೊಂಕು ನುಡಿಗಳನ್ನು ಎದುರಿಸುತ್ತಾ ಸಾಧನೆಯ ಶಿಖರ ಮುಟ್ಟಿದ್ದಿರಿ." ಹಸಿವೆಯಿಂದ ಬಳಲಿ ಕಂಗಾಲಾಗಿದ್ದ ಸಾವಿರಾರು ಜನರ ಬಳಿ ಧಾವಿಸಿ ಬಂದ ನೀವು ಅವರೆಲ್ಲರ ಪಾಲಿಗೆ ಅನ್ನದಾತರಾದಿರಿ."ಎನಿತು ಜನರಿಗೆ,ಎನಿತು ಜನ್ಮಗಳಿಗೆ ತಾನೂ ಎನಿತು ಋಣಿಯೋ? ಹಾಗೆ ನೋಡಿದರೆ ಈ ಜೀವನವೆಂಬುದು ಒಂದು ಋಣದ ಗಣಿಯಂತೆ..ಹಾಗಾಗಿ ಸಮಾಜದ ಋಣಬಾರವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ದಲ್ಲಿ ಅಶಕ್ತರು ಹಾಗೂ ಹಸಿದವರ ಕಣ್ಣೀರನ್ನು ಒರೆಸುವ ನಿಮ್ಮ ಬಾಗವತ್ಕರ್ಯ ನಿತ್ಯ ನಿರಂತರ ನಡೆಯುತ್ತಿರಲಿ. ಆ ಶಕ್ತಿಯನ್ನು ಶ್ರೀ ದೇವರು ನಿಮಗೆ ಇನ್ನಷ್ಟು ಅನುಗ್ರಹಿಸಿ ಕಾಪಾಡಲಿ.. ಬರಹ ✍️ ಉದಯ್ ಪೂಜಾರಿ

ಇನ್ಮುಂದೆ ಉಡುಪಿಯಲ್ಲಿ ಮಂಗಳವಾರದ ಬದಲಾಗಿ ಆದಿತ್ಯವಾರ ಸೆಲೂನ್ ಬಂದ್

Posted On: 02-06-2020 10:07PM

ಜಿಲ್ಲಾ ಸವಿತಾ ಸಮಾಜದ ಜಿಲ್ಲಾ ಪದಾಧಿಕಾರಿಗಳು ಹಾಗೂ ಏಳು ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಸೆಲೂನ್ಗಳಿಗೆ ಆದಿತ್ಯವಾರ ಹೆಚ್ಚು ಗ್ರಾಹಕರು ಬರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ವೃತ್ತಿ ನಿರತರಿಗೆ ನಿಯಮಾವಳಿಗಳನ್ನು ಪಾಲಿಸಲು ಕಷ್ಟ ಸಾಧ್ಯವಾಗಿರುವುದರಿಂದ ಅಲ್ಲದೆ ಮುಂದಿನ ದಿನಗಳಲ್ಲಿ ಕೂಡಾ ಕಡ್ಡಾಯವಾಗಿ ಉಡುಪಿ ಜಿಲ್ಲೆಯಾದ್ಯಂತ ಸೆಲೂನ್ ಗಳನ್ನು ಆದಿತ್ಯವಾರ ಬಂದ್ ಮಾಡಿ ಮಂಗಳವಾರ ತೆರೆಯಲು ಸರ್ವಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಗಿದೆ, ಎಂದು ಜಿಲ್ಲಾ ಸವಿತಾ ಸಮಾಜದ ಸಭೆಯಲ್ಲಿ ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಭಾಸ್ಕರ್ ಭಂಡಾರಿ ಗುಡ್ಡೆಯಂಗಡಿ ಹಾಗೂ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು ಕೋಶಧಿಕಾರಿ ಶೇಖರ್ ಸಾಲ್ಯಾನ್ ರಾಜ್ಯ ಪ್ರತಿನಿಧಿ ವಿಶ್ವನಾಥ್ ಭಂಡಾರಿ ನಿಂಜೂರು ಗೌರವಾಧ್ಯಕ್ಷ ಗೋವಿಂದ ಭಂಡಾರಿ, ಸವಿತಾ ಸಹಕಾರಿಯ ಅಧ್ಯಕ್ಷ ನವೀನ್ಚಂದ್ರ ಭಂಡಾರಿ ತಿಳಿಸಿದ್ದಾರೆ.

ಬಡ ಕುಟುಂಬಕ್ಕೆ ಅಸರೆಯಾದ ಕಾರ್ಕಳದ ಕಾಂತಾವರ ಗ್ರಾಮದ ತಂಡ..

Posted On: 01-06-2020 08:04PM

ಕಳೆದ ಒಂದು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಗೆ ಗ್ರಾಸವಾಗಿರುವ ಕಾಂತಾವರ ಗ್ರಾಮ ದ ಬಡಕುಟುಂಬವೊಂದರ ಮುರುಕಲು ಮನೆಯ ರಿಪೇರಿ ಬಗ್ಗೆ ಕೆಲವು ಚರ್ಚೆಗಳು ನಡೆದಿತ್ತು. ಈ ಸಮಸ್ಯೆಯನ್ನು ಕಂಡ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯ ಎಸ್ ಕೋಟ್ಯಾನ್ ಹಾಗೂ ಗೆಳೆಯರ ಬಳಗ ಕಾಂತಾವರ ಇವರ ತಂಡ ಸೇರಿ,ಲಾಕ್ ಡೌನ್ ನಡುವೆಯೂ ಕಳೆದ ಎರಡು ವಾರದ ಸತತ ಪ್ರಯತ್ನದಿಂದ ಮನೆ ನಿರ್ಮಾಣ ಕಾರ್ಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯತ್ನ ವೊಂದಿದ್ದರೆ ಯಾವುದೇ ಕೆಲಸ ಕಠಿಣ ವಲ್ಲ ಎಂದು ಈ ತಂಡ ತೋರಿಸಿಕೊಟ್ಟಿದೆ..ಇದು ಬೇರೆ ಸಂಘಟನೆಗಳಿಗೆ ಮಾದರಿಯಾಗಲಿ..ಇನ್ನು ಮುಂದೆಯೂ ನಿಮ್ಮಿಂದ ಇಂತಹ ಸಮಾಜ ಸೇವೆ ನಡೆಯಲಿ..ಕಾಂತಾವರದ ಕಾಂತೇಶ್ವರ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ....ವೈಯಕ್ತಿಕ ಟೀಕೆ ಗಳನ್ನು ನಿಮ್ಮ ಸಾಧನೆ ಯಿಂದ ಉತ್ತರಿಸಿ... ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲಿಸಿದ ಸಹಕರಿಸಿದ ಎಲ್ಲಾ ಸಹೃದಯರಿಗೆ ಧನ್ಯವಾದಗಳು...

ಪಡುಬಿದ್ರಿ ಬಿಲ್ಲವ ಸಂಘ ವ್ಯಾಪ್ತಿಯ ಕುಟುಂಬಗಳಿಗೆ ಆಹಾರ ಸಾಮಾಗ್ರಿ ಕಿಟ್ ವಿರತಣೆ

Posted On: 01-06-2020 07:28PM

ಲಾಕ್ಡೌನ್ ಸಡಿಲಿಕೆಯಾದರು ಜನರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಇದರ ವ್ಯಾಪ್ತಿಗೆ ಒಳಪಡುವ ಸಮಾಜ ಬಾಂಧವರಿಗಾಗಿ ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್, ಗೌರವಾಧ್ಯಕ್ಷರಾದ ವಾಸು ಡಿ. ಸಾಲ್ಯಾನ್, ಕಾರ್ಯದರ್ಶಿ ಲಕ್ಷ್ಮಣ್ ಬಿ. ಅಮೀನ್, ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಶೀನ ಪೂಜಾರಿ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಸಾದ್ ವೈ. ಕೋಟ್ಯಾನ್,ವೀರೇಂದ್ರ ಎನ್., ಲಕ್ಷ್ಮಣ ಡಿ. ಪೂಜಾರಿ, ಪ್ರಶಾಂತ್ ಕುಮಾರ್, ಶಂಕರ್ ಪಿ. ಸುವರ್ಣ, ಪೂರ್ಣಿಮ ಕೆ., ಮಹಿಳಾ ವಿಭಾಗದ ಅಧ್ಯಕ್ಷೆ ಚಿತ್ರಾಕ್ಷಿ ಕೆ.ಕೋಟ್ಯಾನ್ ಸದಸ್ಯರಾದ ಸುಚರಿತ ಎಲ್. ಅಮೀನ್, ಜಯಂತಿ ಜಿ.,ಸಾಧನ ಎಚ್. ಮುಂತಾದವರು ಉಪಸ್ಥಿತರಿದ್ದರು.

ಉಡುಪಿ.ಜೂನ್, 1: ಕೋವಿಡ್ ಆಸ್ಪತ್ರೆ ಹಾಸಿಗೆ ಸಾಮರ್ಥ್ಯ ವಿಸ್ತರಣೆ : ಉಸ್ತುವಾರಿ ಕಾರ್ಯದರ್ಶಿ

Posted On: 01-06-2020 05:36PM

ಕೋವಿಡ್ ಆಸ್ಪತ್ರೆ ಹಾಸಿಗೆ ಸಾಮರ್ಥ್ಯ ವಿಸ್ತರಣೆ: ಉಸ್ತುವಾರಿ ಕಾರ್ಯದರ್ಶಿ ಉಡುಪಿ ಜೂನ್ 1 (ಕರ್ನಾಟಕ ವಾರ್ತೆ): ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಹಾಗೂ ಸಂಬAಧಿತ ಲಕ್ಷಣಗಳಿರುವ ರೋಗಿಗಳ ಚಿಕಿತ್ಸೆಗಾಗಿ ಇನ್ನೂ ಹೆಚ್ಚುವರಿಯಾಗಿ ಆಸ್ಪತ್ರೆಗಳ ಹಾಸಿಗೆಗಳನ್ನು ವಿಸ್ತರಿಸಲಾಗುವುದು. ಇದಕ್ಕಾಗಿ ಅಗತ್ಯ ವೈದ್ಯರು, ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ನೀಡಲಾಗುವುದು ಎಂದು ರಾಜ್ಯ ಸರ್ಕಾರದ ಕೈಗಾರಿಕೆ, , ವಾರ್ತಾ ಇಲಾಖೆಯ ಪ್ರದಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್ ತಿಳಿಸಿದ್ದಾರೆ. ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ರಾಜ್ಯ ಸರಕಾರ ಆಸ್ಪತ್ರೆಗಳಲ್ಲಿ 2500 ಹೆಚ್ಚುವರಿ ಹಾಸಿಗೆಗಳನ್ನು ಸೃಷ್ಟಿಸಲು ಸೂಚಿಸಿದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಮಾನವ ಸಂಪನ್ಮೂಲ ಅಗತ್ಯವಿದ್ದು, ಜಿಲ್ಲಾಧಿಕಾರಿಗಳ ಪ್ರಸ್ತಾವನೆಗೆ ಸರಕಾರದ ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದರು. ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಲಾಗುವ ಉಪಕರಣಗಳ ಕಾರ್ಯಕ್ಷಮತೆ ಹಾಗೂ ಸಿಬ್ಬಂದಿಗಳ ತರಭೇತಿ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ವೆಂಟಿಲೇಟರ್ ಸೌಲಭ್ಯ ಒದಗಿಸುವುದರೊಂದಿಗೆ, ಹೆಚ್ಚುವರಿಯಾಗಿ ಖಾಸಗೀ ಆಸ್ಪತ್ರೆಗಳನ್ನು ಇದಕ್ಕಾಗಿ ಗುರುತಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು. ಹೊರರಾಜ್ಯದಿಂದ ಬಂದವರ ಮಾಹಿತಿ ಆಯಾ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತ್‌ಗಳಲ್ಲಿ ಇರಬೇಕು. ಅವರ ಕ್ವಾರೆಂಟೈನ್ ಅವಧಿಯ ಮೇಲೆ ನಿಗಾ ಇಡಬೇಕು ಎಂದು ಅವರು ತಿಳಿಸಿದರು. ಉಡುಪಿ ಜಿಲ್ಲೆಯ ಕೋವಿಡ್ ಪ್ರಯೋಗಾಲಯದ ಮೂಲಸೌಕರ್ಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, 2-3 ದಿನಗಳೊಳಗೆ ಪೂರ್ಣಗೊಳ್ಳಲಿದೆ. ಬಳಿಕ ಪ್ರಯೋಗಾಲಯದಲ್ಲಿ ಅಗತ್ಯ ಉಪಕರಣಗಳ ಅಳವಡಿಕೆಯಾಗಿ, ಪ್ರಯೋಗಾಲಯದಲ್ಲಿ ಗಂಟಲ ದ್ರವ ಪರೀಕ್ಷೆ ಉಡುಪಿಯಲ್ಲಿಯೇ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಉದ್ಯಮಿಗಳಿಗೆ ನೆರವು: ಬ್ಯಾಂಕರ್‌ಗಳ ಜತೆ ಸಭೆ ಕೋವಿಡ್ ಹಿನ್ನೆಲೆಯಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ, ಉದ್ಯಮಿಗಳಿಗೆ ಕೇಂದ್ರ ಸರಕಾರ ಘೋಷಿಸಿರುವ ಹಣಕಾಸು ನೆರವು ಯೋಜನೆ ಜಾರಿಗೆ ಜಿಲ್ಲೆಯಲ್ಲಿ ಕೆಲವು ಖಾಸಗೀ ಬ್ಯಾಂಕುಗಳು ಸ್ಪಂದಿಸುತ್ತಿಲ್ಲ ಎಂಬ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಜಿಲ್ಲೆಯ ಬ್ಯಾಂಕುಗಳ ಜತೆ ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲು ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಈ ಬಗ್ಗೆ ಪ್ರತೀ ವಾರ ಪರಿಶೀಲನೆ ನಡೆಸಲು ಅವರು ತಿಳಿಸಿದರು. ಕಳೆದ ವರ್ಷ ಪ್ರಾಕೃತಿಕ ವಿಕೋಪದಿಂದ ಭಾಗಶ: ಹಾನಿಗೊಳಗಾದ ಮನೆಗಳನ್ನು ಪುನರ್ ನಿರ್ಮಾಣ ಮಾಡಲು ಈಗಾಗಲೇ ಅನುದಾನ ಬಿಡುಗಡೆ ವಿಳಂಭದಿAದ ಕೆಲವೆಡೆ ಮನೆ ನಿರ್ಮಾಣ ಇನ್ನೂ ಪೂರ್ಣಗೊಳ್ಳದಿರುವ ಮನೆಗಳಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಲು ಅವರು ಸೂಚಿಸಿದರು. ಜಿಲ್ಲೆಯಲ್ಲಿ ಕೃಷಿ ಭಿತ್ತೆನೆ ಬೀಜಕ್ಕೆ ಹೆಚ್ಚು ಬೇಡಿಕೆ ಬರುತ್ತಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಚ್ಚು ಜನಸಂದಣಿ ಕಂಡುಬAದಿದೆ. ಜಿಲ್ಲೆಯ ಕೆಲವೆಡೆ ಈಗಾಗಲೇ ಭಿತ್ತೆನೆ ಚಟುವಟಿಕೆ ಆರಂಭಗೊAಡಿದೆ ಎಂದು ಕೃಷಿ ಜಂಟೀ ನಿರ್ದೇಶಕರು ಸಭೆಗೆ ತಿಳಿಸಿದರು. ರಾಜ್ಯ ಸರಕಾರವು ಹೂ ಬೆಳೆಗಾರರಿಗೆ ಪರಿಹಾರ ನೀಡುವ ಯೋಜನೆಯಲ್ಲಿ ಜಿಲ್ಲೆಯಲ್ಲಿ 4333 ರೈತರು ಅರ್ಜಿ ಸಲ್ಲಿಸಿದ್ದಾರೆ. ಗರಿಷ್ಠ 2.5 ಎಕರೆಗೆ ರೂ. 25000 ಪರಿಹಾರ ದೊರಕಲಿದೆ. ಇದರೊಂದಿಗೆ ತರಕಾರಿ, ಹಣ್ಣು ಬೆಳೆಗಾರರಿಗೆ ಪರಿಹಾರ ನೀಡಲು ಹೊಸದಾಗಿ ಮಾರ್ಗದರ್ಶಿ ಬಂದಿದ್ದು, ಜಿಲ್ಲೆಯಲ್ಲಿ ಕಲ್ಲಂಗಡಿ ಹಾಗೂ ಅನಾನಸು ಬೆಳೆಗಾರರಿಗೆ ಪರಿಹಾರ ದೊರೆಯಲಿದೆ ಎಂದು ತೋಟಗಾರಿಕಾ ಉಪನಿರ್ದೇಶಕರು ಸಭೆಗೆ ತಿಳಿಸಿದರು. ಅಕ್ರಮ ಮರಳುಗಾರಿಕೆ: ಕೇಸು ದಾಖಲು ಜಿಲ್ಲೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡಿರುವ ಪ್ರಕರಣಗಳಲ್ಲಿ ಸಂಬAಧಪಟ್ಟವರ ವಿರುದ್ಧ ಕೇಸು ದಾಖಲಿಸಲು ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದರು. ಪಟ್ಟಾ ಜಮೀನು ಸೇರಿದಂತೆ ಲಾಕ್‌ಡೌನ್ ಅವಧಿಯಲ್ಲಿ ಅಕ್ರಮ ಮರಳುಗಾರಿಕೆ ನಡೆದಿರುವ ಬಗ್ಗೆ ಉಪವಿಭಾಗಾಧಿಕಾರಿಗಳು, ಪ್ರತೀ ಜಮೀನಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಲು ಅವರು ನಿರ್ದೇಶಿಸಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ವಿವರ ನೀಡಿ, ಈಗಾಗಲೇ ಇಂತಹ ಪ್ರಕರಣಗಳ ವಿರುದ್ಧ ಕೇಸು ದಾಖಲಿಸಲಾಗಿದೆ. 5 ವಾಹನಗಳನ್ನು ಜಫ್ತಿ ಮಾಡಲಾಗಿದೆ. ಅಲ್ಲದೇ, ಸಂಬAಧಪಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ವಿವಿಧ ಇಲಾಖಾಧಿಖಾರಿಗಳು ಉಪಸ್ಥಿತರಿದ್ದರು.