Updated News From Kaup
ಕೋವಿಡ್19 ಸುರಕ್ಷಾ ಕ್ರಮಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್
Posted On: 05-08-2020 08:36PM
ಉಡುಪಿ ಆಗಸ್ಟ್ 5 (ಕರ್ನಾಟಕ ವಾರ್ತೆ): ಸರ್ಕಾರದ ಮಾರ್ಗಸೂಚಿಯಂತೆ, ಕೋವಿಡ್-19 ನಿಯಂತ್ರಣದ ಸುರಕ್ಷಾ ಕ್ರಮಗಳನ್ನು ಅನುಸರಿಸಿ, ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಸ್ವಾತಂತ್ರ್ಯ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
"ಮರ್ಯಾದಾ ಪುರುಷೋತ್ತಮ" ಶ್ರೀ ರಾಮ - ಕೆ.ಎಲ್. ಕುಂಡಂತಾಯ
Posted On: 05-08-2020 08:04PM
ಸಂಸ್ಕೃತಿಯ ದ್ರಷ್ಟಾರರಾಗಿ , ಮನುಕುಲಕ್ಕೆ ಬದುಕಿನ ಸತ್ಪಥವನ್ನು ತೋರಿದ ಋಷಿಮುನಿಗಳು ತಮ್ಮ ತಪಸ್ಸಿನ ಫಲವನ್ನು ಕಾಡಿನಿಂದ ನಾಡಿಗೆ 'ಹರಿಸಿದರು' ಅಥವಾ 'ಹರಸಿದರು' .ಈ ರೀತಿಯಲ್ಲಿ ದಟ್ಟಾರಣ್ಯದಲ್ಲಿ ಅನುರಣಿಸಿ , ಮಹಾಮಂತ್ರವಾಗಿ ,ಕೋಗಿಲೆಯ ಇಂಚರದ ಮಾಧುರ್ಯದೊಂದಿಗೆ ನಾಡಿಗೆ ಕೇಳಿದ ಎರಡಕ್ಷರದ ಮಂತ್ರ "ರಾಮ". ಸಾವಿರಾರು ವರ್ಷಗಳ ನಿರಂತರ ಪಠನದ ಬಳಿಕ 'ರಾಮ' ಶಬ್ದ 'ರಾಮನಾಮ'ವಾಯಿತು , 'ಶ್ರೀ ರಾಮ' ಮಂತ್ರವಾಯಿತು .ಒಂದು ಮನೋಹರ ಬಿಂಬ ಸಿದ್ಧಗೊಂಡಿತು , ವಾಲ್ಮೀಕಿ ಆದಿ ಕವಿಯಾದರು . ಮಹರ್ಷಿ ವಾಲ್ಮೀಕಿಯು 'ರಾಮಾಯಣ' ಮಹಾಕಾವ್ಯದ ಮೂಲಕ ಜಗತ್ತಿಗೆ ನೀಡಿದ ಪರಿಪೂರ್ಣ ವ್ಯಕ್ತಿತ್ವ 'ರಾಮ'. ಭಾರತೀಯ ಸಂಸ್ಕೃತಿಯನ್ನು 'ರಾಮ' ಎಂಬ ಪ್ರತಿಮೆಯ ಮೂಲಕ ಸಮಗ್ರವಾಗಿ ಚಿತ್ರಿಸಿದ್ದು , ರಘುರಾಮನೆಂದೇ ಗುರುತಿಸಲ್ಪಟ್ಟ ದಾಶರಥಿಯದ್ದು , "ಮರ್ಯಾದಾ ಪುರುಷೋತ್ತಮನಾದ" ಶ್ರೀ ರಾಮಚಂದ್ರನದ್ದು . ಹಾಗಾಗಿಯೇ 'ರಾಮ' ಸಾಮಾನ್ಯ ಮಾನವನಾಗಿ ಜನಿಸಿ ದೇಶದಾದ್ಯಂತ , ಪ್ರಪಂಚದೆಲ್ಲೆಡೆ ವ್ಯಾಪ್ತನಾಗುತ್ತಾನೆ ,ಆದುದರಿಂದ 'ರಾಮ' ಎಂಬುದು ನಮಗೆ 'ಶ್ರೇಷ್ಠ' , 'ರಾಮ' ಎಂಬುದು 'ಪ್ರತಿಷ್ಠೆ'. ಬಳಸಿಕೊಂಡು ಪ್ರವಹಿಸುವ ಸರಯೂ ನದಿಯಿಂದ ಅಯೋಧ್ಯೆ ಪಾವನ ಭೂಮಿಯಾಗುತ್ತದೆ. ಇಂತಹ ನೆಲದಲ್ಲಿ ಸೂರ್ಯವಂಶವೇ ಹಿನ್ನೆಲೆಯಾಗಿದ್ದ ಮಹಾರಾಜರಲ್ಲಿ 'ಸತ್ಯ'ಕ್ಕೆ ಬೇಕಾಗಿ ಸರ್ವವನ್ನೂ ತಿರಸ್ಕರಿಸಿ ,ಆಡಿದ ಮಾತಿಗೆ ತಪ್ಪದೇ ನಡೆದು ಅದ್ಭುತ ಮೌಲ್ಯವನ್ನು ಪ್ರತಿಪಾದಿಸಿದವರಿದ್ದರು , ದೇವಗಂಗೆಯನ್ನು ಧರೆಗಿಳಿಸಿದ ಪ್ರಯತ್ನಶೀಲ ಸಾಧಕರಿದ್ದರು, ಇಕ್ಷ್ವಾಕು ,ಸಗರ, ದಿಲೀಪ , ರಘು ಹೀಗೆ ಹತ್ತು ಹಲವು ಮಹನೀಯ ಮಹಾರಾಜರು ಅಷ್ಟೇ ಬೆಲೆಯುಳ್ಳ ಮಹತ್ತನ್ನು ಸಾಧಿಸಿದ್ದು , ರಾಜರಾದರೂ ರಾಜ ಋಷಿಗಳಾಗಿ ಮೆರೆದದ್ದು , ಸೂರ್ಯವಂಶದಲ್ಲಿ. ಇನವಂಶ ವಾರಿಧಿಗೆ ಪ್ರತಿಚಂದ್ರನಂತೆ ದೀರ್ಘ ಅವಧಿಗೆ ಅಯೋಧ್ಯೆಯನ್ನು ಆಳಿದ ದಶರಥನಿಗೆ ಋಷಿಕಲ್ಪರಾಗಿ ,ದೇವಕಲ್ಪರಾಗಿ ನಾಲ್ವರು ಗಂಡು ಮಕ್ಕಳು ಹುಟ್ಟುತ್ತಾರೆ ,ಅವರಲ್ಲಿ ರಾಮ ಒಬ್ಬ .ಪುತ್ರಕಾಮೇಷ್ಠಿ ಯಾಗವೇ ಇದಕ್ಕೆ ನೆರವೇರಿದ ಸತ್ ಕರ್ಮ. ಇಂತಹ ಭವ್ಯ 'ಐತಿಹಾಸಿಕ ಪರಂಪರೆ'ಯ ಹಿನ್ನೆಲೆಯೊಂದಿಗೆ ರಾಮನ ಬದುಕು ಆರಂಭವಾಗುತ್ತದೆ .
ಮರ್ಣೆ ಯುವಕನಿಂದ ಪೇಪರ್ ಆರ್ಟ್ನಲ್ಲಿ ಮೂಡಿದ ಅಯೋಧ್ಯೆಯ ಚಿತ್ರಣ
Posted On: 04-08-2020 08:45PM
ಇOಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ ಗೊOಡಕಲಾವಿದ ಮಹೇಶ್ ಮರ್ಣೆ ಯವರು ತೆಳುವಾದ ಬಿಳಿ ಪೇಪರ್ ಹಾಳೆ ಯಲ್ಲಿ ಬ್ಲೇಡ್ ನ ಸಹಾಯದಿOದ ರಚಿಸಿದ ಪೇಪರ್ ಕಟ್ಟಿOಗ್ ಆರ್ಟ್
ಕಡಲ ಮಕ್ಕಳಿಂದ ಸಮುದ್ರ ರಾಜನಿಗೆ ಸಮುದ್ರ ಪೂಜೆ
Posted On: 03-08-2020 06:36PM
ಕರಾವಳಿಯ ವಿವಿಧೆಡೆ ಸೋಮವಾರ ಮೀನುಗಾರರು ಸಮುದ್ರಪೂಜೆ ಸಹಿತವಾಗಿ ಕ್ಷೀರಾಭಿಷೇಕ ನಡೆಸಿದರು. ಕಾಪು, ಮಲ್ಪೆ, ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಪೊಲಿಪು, ಕೈಪುಂಜಾಲು, ಮೂಳೂರು ಸಹಿತವಾಗಿ ಕರಾವಳಿಯಾದ್ಯಂತ ಇರುವ ಮೊಗವೀರ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಭಜನಾ ಮಂದಿರಗಳು ಮತ್ತು ಪ್ರಾರ್ಥನಾ ಮಂದಿರಗಳ ಸಹಕಾರದೊಂದಿಗೆ ಸಮುದ್ರ ಪೂಜೆ ನೆರವೇರಿಸಲಾಯಿತು. ನೂಲ ಹುಣ್ಣಿಮೆಯಂದು ಕರಾವಳಿಯಲ್ಲಿ ಸಮುದ್ರ ಪೂಜೆ ನಡೆಸುವ ಮೀನುಗಾರರು ಹೇರಳ ಮತ್ಸ್ಯ ಸಂಪತ್ತು ದೊರಕಿಸುವಂತೆ ಮತ್ತು ಮೀನುಗಾರಿಕೆಯ ವೇಳೆ ಯಾವುದೇ ರೀತಿಯ ತೊಂದರೆಗಳು ಆಗದಿರಲೆಂಬ ಪ್ರಾರ್ಥನೆಯೊಂದಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ ಸಹಿತ ಪೂಜೆ ನೆರವೇರಿಸುತ್ತಾರೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಸಹಿತ ವಿವಿಧ ಗಣ್ಯರು, ಸಮಾಜದ ಮುಖಂಡರು, ಮೊಗವೀರ ಮಹಾಸಭೆ,ಯ ಪದಾಧಿಕಾರಿಗಳು, ಸದಸ್ಯರು, ಮೊಗವೀರ ಪ್ರತಿನಿಧಿಗಳು ಉಪಸ್ಥಿತರಿದ್ದರು.
ದಾನಿಗಳ ನೆರವಿನಿಂದ ನವೀಕರಣಗೊಂಡ ಗುಂಡಿಬೈಲು ನಿವಾಸಿ ಸರೋಜರವರ ಮನೆ
Posted On: 03-08-2020 06:20PM
ಉಡುಪಿ :- ಬಾಂಧವ್ಯ ಬ್ಲಡ್ ಕನಾ೯ಟಕ ಮತ್ತು ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಇದರ ಇತಿಯಿಂದ ತುತು೯ ಸಹಾಯ ಯೋಜನೆಯ ಮೂಲಕ ನವೀಕರಣ ಗೊಂಡ ಉಡುಪಿ ಗುಂಡಿಬೈಲು ನಿವಾಸಿ ಸರೋಜ ರವರ ಬೆಳಕು ಯೋಜನೆ ಮನೆಯನ್ನು ಇಂದು ಸಂಜೆ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಅಭಿಯಾನದ ಸದಸ್ಯೆ ಜ್ಯೋತಿ ಸಾಮಾಂತ್ ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿದರು. ನಂತರ ಎಲ್ಲಾ ಸದಸ್ಯರು ಮತ್ತು ಗಣ್ಯರು ಸಾಮೂಹಿಕವಾಗಿ ಹಣತೆ ಬೆಳಗಿಸಿದರು.ಈ ಸಂದಭ೯ದಲ್ಲಿ ದಿನೇಶ್ ಬಾಂಧವ್ಯ ಯೋಜನೆ ನಡೆದು ಬಂದ ದಾರಿಯ ಬಗ್ಗೆ ತಿಳಿಸಿದರು. ಸರೋಜರವರು ತನ್ನ ವಿಶೇಷ ಚೇತನ ಮಗಳೊಂದಿಗೆ ಸರಿಯಾದ ಸೂರಿನ ವ್ಯವಸ್ಥೆ ಇಲ್ಲದೆ ಜೀವನ ಸಾಗಿಸುತ್ತಿದ್ದರು. ದಾನಿಗಳ ನೆರವಿನಿಂದ ಈ ನವೀಕರಣ ಮಾಡಲಾಗಿದೆ.
ಶಿರ್ವ ಮಟ್ಟಾರು ನಿವಾಸಿ ಪುಂಡರೀಕಾಕ್ಷ (55) ಮೃತ ದೇಹ ಕೊಳೆತ ರೀತಿಯಲ್ಲಿ ಪತ್ತೆ
Posted On: 02-08-2020 09:48PM
ಶಿರ್ವ.02, ಆಗಸ್ಟ್ : ಪುಂಡರೀಕಾಕ್ಷ (55) ಎಂಬುವವರು ಕಳೆದ 35 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮಂಗಳೂರಿನ ಕಂಕನಾಡಿ ಆಸ್ಪತ್ರೆ ಹಾಗೂ ಮನಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಬಿಪಿ, ಶುಗರ್ ಕಾಯಿಲೆ ಕೂಡ ಇತ್ತು ಎಂದು ತಿಳಿದು ಬಂದಿದೆ, ಇವರು ಮದುವೆಯಾಗದೆ ಒಬ್ಬಂಟಿಯಾಗಿ ಕಾಪು ತಾಲೂಕಿನ ಶಿರ್ವದ ಪಡುಮಠ ಮಟ್ಟಾರು ಎಂಬಲ್ಲಿ ವಾಸವಾಗಿದ್ದರು. ದಿನಾಂಕ 27/07/2020 ರಿಂದ 02/08/2020 ರ ಬೆಳಿಗ್ಗೆ 10:30 ರ ಮಧ್ಯಾವಧಿಯಲ್ಲಿ ಪುಂಡರೀಕಾಕ್ಷ (55) ಇವರು ಹೃದಯಾಘಾತ ಅಥವಾ ಇನ್ಯಾವುದೋ ಕಾರಣದಿಂದ ಮೃತ ಪಟ್ಟಿದ್ದು ಮೃತ ದೇಹವು ಸಂಪೂರ್ಣ ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ. ಕಾಪು ಸಮಾಜ ಸೇವಕ ಸೂರಿ ಶೆಟ್ಟಿ ಶವವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.. ಎಂದು ಬಲ್ಲ ಮೂಲಗಳು ತಿಳಿಸಿವೆ ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಭ್ರಾತೃ - ಭಗಿನಿ ಬಾಂಧವ್ಯದ ಸಂಕೇತವೇ ರಕ್ಷಾಬಂಧನ - ಕೆ ಎಲ್ ಕುಂಡಂತಾಯ
Posted On: 02-08-2020 08:23PM
ಸಹೋದರ - ಸಹೋದರಿ ನಡುವಿನ ಭಾವನಾತ್ಮಕ ಬಾಂಧವ್ಯದ ಸಾಕಲ್ಯ ಸಾಕ್ಷಾತ್ಕಾರವೇ 'ರಕ್ಷಾಬಂಧನ' . 'ಸಹಭವ'ರಲ್ಲಿ ಬದ್ದವಾಗಿರುವ ಬಂಧವೇ ಸಾರ್ವತ್ರಿಕವಾಗುತ್ತಾ ಸಮಾಜದಲ್ಲಿ ಸರ್ವವ್ಯಾಪಿಯಾಗುವಷ್ಟು ಅರಳುವ , ದೇಶದಾದ್ಯಂತ ವ್ಯಾಪಿಸುವ ಆಚರಣೆಯೇ 'ರಕ್ಷಾಬಂಧನ" ; ಇದು ಭಾರತೀಯ ಸಂಸ್ಕೃತಿಯ ಸೊಗಸು. ದೇಶದ ಇತಿಹಾಸದಲ್ಲಿ ಅನಿರೀಕ್ಷಿತ ಪರಿವರ್ತನೆಗೆ , ದೇಶದ ಸಂಸ್ಕಾರ ವಿಶ್ವ ಸಹೋದರತೆಯ ಎತ್ತರಕ್ಕೆ ಏರುವುದಕ್ಕೆ "ರಾಖಿ" ಕಾರಣವಾಗುವುದು ಒಂದು ಅದ್ಭುತ ಮನೋಧರ್ಮದ ದರ್ಶನ. ಅದೇ ಭಾರತೀಯ ಜೀವನ ವಿಧಾನದ ವೈಶಾಲ್ಯತೆ . ಇದೇ 'ಭ್ರಾತೃ - ಭಗಿನಿ ಬಾಂಧವ್ಯ ಬಂಧನ'. "ಪರನಾರಿ ಸೋದರ" ಇದೊಂದು ಪ್ರತಿಜ್ಞೆಯಾಗಿ ಪುರಾಣಗಳಲ್ಲಿ , ದೇಶದ ಇತಿಹಾಸದಲ್ಲಿ ಕಾಣಸಿಗುವ ಒಂದು ರೋಚಕ ಸ್ವೀಕಾರ . ಇದು ಒಂದು "ಮೌಲ್ಯ"ವಾಗಿ ಆಚರಿಸಲ್ಪಟ್ಟು 'ಸಂದೇಶ'ವಾಗುವ ಶೈಲಿ ನಮ್ಮ ನೆಲದ ವ್ಯಕ್ತಿತ್ವಗಳ ಹೃದಯಶ್ರೀಮಂತಿಕೆ . ನಡೆದುಹೋದ ಸಂಗತಿ, ವರ್ತಮಾನದ ಆಚಾರ - ವಿಚಾರ ,ಭವಿಷ್ಯಕ್ಕೆ ಮುಂದುವರಿಯುವ "ಬಾಂಧವ್ಯ ಬಂಧನ" . ಇಂತಹ ಸಂಸ್ಕಾರಗಳು ನಮ್ಮ ಬದುಕಿನ ಕ್ರಮಕ್ಕೆ , ಮನಸ್ಸಿನ ಆಲೋಚನೆಗಳಿಗೆ ಪ್ರತ್ಯಕ್ಷ ಸಾಕ್ಷಿ . ಇಂತಹ ನೂರಾರು ಮೌಲ್ಯಗಳಲ್ಲಿ 'ರಕ್ಷಾಬಂಧನ' ಒಂದು. ದೇಶದಲ್ಲಿ ನೆರವೇರುವ "ರಾಖೀ" ಅತ್ಯಂತ ಜನಪ್ರಿಯ ನಡವಳಿಕೆ . ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ತಮ್ಮ ಸಹೋದರರಿಗೆ ಸಹೋದರಿಯರು ರಾಖೀ ಕಟ್ಟುವ ಮೂಲಕ 'ನಮ್ಮ ಮಾನ - ಪ್ರಾಣ ಉಳಿಸುವ ಹೊಣೆ ನಿಮ್ಮದು' ಎಂದು ನೆನಪಿಸುತ್ತಾರೆ . ಉಡುಗೊರೆ ಪಡೆಯುತ್ತಾರೆ . ರಾಖೀ ಕಟ್ಟುವ ಸಿಹಿ ತಿನ್ನಿಸಿ - ತಿನ್ನುವ ,ಉಡುಗೊರೆ ಪಡೆಯುವ ಈ ಭಾವನಾತ್ಮಕ ಪರ್ವದಿನವು ಮನೆಯೊಳಗೆ ಒಡಹುಟ್ಟಿದ ಸಹೋದರ - ಸಹೋದರಿಯರ ನಡುವೆ ಸಂಭ್ರಮಿಸುವುದಿಲ್ಲ ಬದಲಿಗೆ ಒಂದು ನೆರಕರೆಯನ್ನು ಒಂದು ವ್ಯಾಪ್ತಿಯನ್ನು ಅಲ್ಲ ಇಡೀ ದೇಶದಾದ್ಯಂತ ವಿಜೃಂಭಿಸುತ್ತಿದೆ . ಸಹಭವರಾಗ ಬೇಕಿಲ್ಲ , ಅಂತಹ 'ಪವಿತ್ರ ಭಾವಸ್ಪುರಣೆ' ಸಾರ್ವತ್ರಿಕವಾಗುತ್ತಿರುವುದು ನಮ್ಮ ಸಾಂಸ್ಕೃತಿಕ ಭವ್ಯತೆ . ಸಹೋದರ ಭಾವದ ವೈಶಾಲ್ಯತೆ ಒಡಹುಟ್ಟಿದವರೊಂದಿಗೆ ಸಮಾಜದ 'ಸ್ತ್ರೀ'ಯರೆಲ್ಲ ತನ್ನ ಸೋದರಿಯರು ಎಂಬ ಉದಾತ್ತ ಭಾವದೊಂದಿಗೆ ಚಿತ್ತಶುದ್ಧಿಯ ಜೀವನಕ್ಕೆ "ರಾಖೀಬಂಧನ" ಇಂಬು ಕೊಡುತ್ತದೆ .ಅನಿವಾರ್ಯ ಆಪತ್ಕಾಲದಲ್ಲಿ ಯಾವಳೇ ಸ್ತ್ರೀಯ ಮಾನ - ಪ್ರಾಣಗಳ ರಕ್ಷಣೆಗೆ ಪ್ರಾಣಾರ್ಪಣೆಗೂ ಸಿದ್ಧನಾಗುವ ಪುರುಷನ ಕರ್ತವ್ಯವಾದರೂ ಅದನ್ನು ರೂಢಿಸಿಕೊಳ್ಳುವ ಮನಃಸ್ಥಿತಿ ಏರ್ಪಡಲು ರಕ್ಷಾಬಂಧನ - ರಾಖೀಬಂಧನ ಆಚರಿಸಲ್ಪಡುತ್ತದೆ . 'ರಕ್ಷಾಬಂಧನ'ಕ್ಕೆ ಮೀಸಲಾದ ದಿನ ಶ್ರಾವಣದ ಹುಣ್ಣಿಮೆ .ಪ್ರತಿ ಹುಣ್ಣಿಮೆಯೂ ಚಂದ್ರ ಪೂರ್ಣ ವೃದ್ಧಿಯೊಂದಿಗೆ ರಾರಾಜಿಸುವ ದಿನ . ಚಂದ್ರ ಮನಃಕಾರಕನಾದುದರಿಂದ ,ಹುಣ್ಣಿಮೆಯೇ ಮನಸ್ಸಿನ ಮೇಲೆ ಪೂರ್ಣ ಪ್ರಮಾಣದ ಪರಿಣಾಮ ಬೀರುವ ಕಾಲವಾಗಿರುವುದರಿಂದ ಮನಸ್ಸಿನ ಭಾವ ಸಂಬಂಧಿಯಾದ ನಿರ್ಧಾರಕ್ಕೆ ಸಕಾಲವೆಂದು ತಿಳಿಯಬಹುದಲ್ಲ. ಶ್ರಾವಣ ಮಾಸವೂ ಒಂದು ಪ್ರೇರಣೆ ಸಹಜವಾಗಿ ಒದಗುವ ಶ್ರಾಯ. ನಾಡಿಗೆ ,ಬೀಡಿಗೆ ಬರುವ ಶ್ರಾವಣ ಮನಸ್ಸಿಗೆ ಬಾರದೆ ಇದ್ದೀತೆ ? , ಅದೇ ಶ್ರಾವಣದ ಕವಿ ಬೇಂದ್ರೆಯವರ "ಬಂತು ಶ್ರಾವಣ..." ಲವಲವಿಕೆ ತುಂಬಿದ ಉದ್ಗಾರ . ಇದೇ ಭಾವಗಳು ಬಿರಿಯುವ ,ಸುಗಂಧ ಬೀರುವ ಸುಸಮಯ . ರಾಖೀ ಎಷ್ಟೇ ವೈವಿಧ್ಯದ್ದಾದರೂ , ರಂಗುರಂಗಿನದ್ದಾದರೂ ಇದರ ಬಂಧನ ಪ್ರಕ್ರಿಯೆ ದಾರದ ಮೂಲಕ ತಾನೇ ? ಈ ದಾರ ಒಂದು ಕರ್ತವ್ಯಕ್ಕೆ ,ಜವಾಬ್ದಾರಿಗೆ ನಿಯೋಜಿಸಲ್ಪಟ್ಟ ಭಾವವನ್ನು ಮೂಡಿಸಿದರೆ ಆಚರಣೆಯ ಆಶಯ ನೆರವೇರಿದಂತೆ . ವ್ರತ , ಪೂಜೆ , ಮಹೋತ್ಸವ , ಮಹಾಯಾಗ ,ಮದುವೆ ಮುಂತಾದ ಉತ್ಸವಗಳು ನಿರ್ವಿಘ್ನವಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥಿಸಿ 'ಕಂಕಣಬಂಧ'ದಿಂದ ದೀಕ್ಷೆ ಸ್ವೀಕರಿಸುವ ವಿಧಿಯೊಂದು ದೇಶದಲ್ಲಿ ರೂಢಿಯಲ್ಲಿದೆ .ದುಷ್ಟ ಶಕ್ತಿಗಳು ಸತ್ಕರ್ಮಗಳಿಗೆ ಆತಂಕ ಒಡ್ಡದಿರಲಿ ಎಂಬುದು ಇಲ್ಲಿಯ 'ನಾಂದೀ' . ಸತ್ಕಾರ್ಯ ಆರಂಭದಿಂದ ಸಮಾರೋಪ ಪರ್ಯಂತ ಕಂಕಣಬಂಧ ಕಟ್ಟಿಸಿಕೊಳ್ಳುವವರು ದೀಕ್ಷಾಬದ್ಧರೆಂದು ಅರ್ಥ . ಅನ್ಯ ಕಾರ್ಯಗಳ ಬಗ್ಗೆ ಆಲೋಚಿಸದೆ ಸಂಪೂರ್ಣ ಸಂಕಲ್ಪಿತ ಸತ್ಕಾರ್ಯದಲ್ಲೇ ನಿರತರಾಗಿಬೇಕೆಂಬುದು ಉದ್ದೇಶ . ಜ್ಞಾನ ಪೂರಕ ಉಪಾಕರ್ಮ 'ರಕ್ಷಾಬಂಧನ' ಹಾಗೂ 'ಉಪಾಕರ್ಮ' ವಿಧಿಗಳಲ್ಲಿ ಒಂದು ಭಾವ ಸಂಬಂಧಿಯಾದರೆ ಮತ್ತೊಂದು ಜ್ಞಾನ ಶುದ್ಧಿಯನ್ನು ಎಚ್ಚರಿಸುವ ವಿಶಿಷ್ಟ ಆಚರಣೆಗಳು . ಸಿದ್ಧತೆ ,ಯಜ್ಞೋಪವೀತ ಬದಲಾಯಿಸಿ ಹಾಕಿಕೊಳ್ಳುವುದು ಮುಂತಾದ ಅರ್ಥ ನಿಷ್ಪತ್ತಿಯ ಉಪಾಕರ್ಮವು ವಾರ್ಷಿಕ ಧಾರ್ಮಿಕ ವಿಧಿಯಾಗಿ ,ಕಟ್ಟುಪಾಡಾಗಿ ಯಜ್ಞೋಪವೀತ ಧರಿಸುವ ವರ್ಗಕ್ಕೆ ವಿಶಿಷ್ಟ ಆಚರಣೆ . ಶ್ರಾವಣ ಮಾಸದ ಹುಣ್ಣಿಮೆಯಂದು ಹಾಗೂ ಶ್ರಾವಣಮಾಸದಲ್ಲಿ ಸನ್ನಿಹಿತವಾಗುವ ಶ್ರವಣ ನಕ್ಷತ್ರದಂದು ಉಪಾಕರ್ಮ ನಡೆಯುತ್ತದೆ . ಋಗ್ವೇದ ,ಯಜುರ್ವೇದ ,ಸಾಮವೇದ ಶಾಖೆಗಳವರಿಗೆ ಪ್ರತ್ಯೇಕ ದಿನಗಳಲ್ಲಿ ಉಪಾಕರ್ಮ ಆಚರಿಸಲ್ಪಡುತ್ತದೆ .ಆದರೆ ಉಪಾಕರ್ಮದ ಉದ್ದೇಶ ಹಾಗೂ ನಿರ್ವಹಣೆಯು ಬಹುತೇಕ ಸಮಾನವಾಗಿಯೇ ಇದೆ . ಉಪನಯನ ಸಂಸ್ಕಾರದೊಂದಿಗೆ ವೇದಾಧ್ಯಯನದ ಅಧಿಕಾರವನ್ನು ಪಡೆಯುವ ವಟು ಗುರುಕುಲಗಳಲ್ಲಿ ಮಾಘ ಮಾಸದಿಂದ ಆರುತಿಂಗಳು ವ್ಯಾಕರಣ , ಜ್ಯೋತಿಷ್ಯ ಮುಂತಾದುವುಗಳ ಅಧ್ಯಯನದಲ್ಲಿ ನಿರತನಿರುತ್ತಾನೆ . ಶ್ರಾವಣದಿಂದ ಮುಂದಿನ ಆರುತಿಂಗಳು ವೇದಾಧ್ಯಯನಕ್ಕೆ ಮೀಸಲಾಗಿರುತ್ತದೆ .ಆರು ತಿಂಗಳು ವೇದಾಧ್ಯಯನ ಮಾಡದಿರುವ ಕಾರಣಕ್ಕೆ ಪುನಃ 'ವೇದಾಧ್ಯಯನದ ಅಧಿಕಾರ ಸಿದ್ಧಿ'ಗಾಗಿ ಉಪಾಕರ್ಮ ವಿಧಿ ನೆರವೇರುತ್ತದೆ . ಮತ್ತೊಂದು ತಿಳಿವಳಿಕೆಯಂತೆ ಕೃಷಿ ಸಂಬಂಧಿಯಾದ ಕೆಲಸಕಾರ್ಯಗಳಿಗಾಗಿ ವೇದ ಅಧ್ಯಯನ - ಅಧ್ಯಾಪನ ಸ್ಥಗಿತಗೊಳ್ಳುತ್ತದೆ , ಕೃಷಿಕಾರ್ಯ ಮುಗಿದ ಬಳಿಕ ವೇದಾಧ್ಯಯನ ಮುಂದುವರಿಸಲು ಅಧಿಕಾರ ಸಿದ್ಧಿಗಾಗಿ ಉಪಾಕರ್ಮ . ಬಹುಶಃ ಋಷಿಪರಂಪರೆ - ಗುರುಕುಲ ಪದ್ಧತಿಯಿದ್ದ ಕಾಲದಲ್ಲಿ ಇಂತಹ ಕ್ರಮ ಇದ್ದಿರಬಹುದಾದುದನ್ನು ಒಪ್ಪಬಹುದು. ಪುಣ್ಯಾಹ ,ಸಪ್ತ ಋಷಿಗಳ ಪೂಜೆ , ಉಪಾಕರ್ಮ ಹೋಮವನ್ನು 'ದಧಿ' ಮತ್ತು 'ಸತ್ತು'(ಅರಳು)ಗಳ ಮಿಶ್ರಣದ ದ್ರವ್ಯದಿಂದ ಹಾಗೂ ಉತ್ಸರ್ಜನ ಹೋಮವನ್ನು ಚರು ದ್ರವ್ಯದಿಂದಲೂ ನಡೆಸಲಾಗುತ್ತದೆ . ಪ್ರಧಾನ ಹೋಮದ ಬಳಿಕ ಹೋಮದ್ರವ್ಯದ ಶೇಷ ಭಾಗವಾದ 'ದಧಿ - ಸತ್ತು' ಸ್ವೀಕರಿಸಿ ನೂತನ ಯಜ್ಞೋಪವೀತ ಧಾರಣೆ . ಬಳಿಕ ಬ್ರಹ್ಮಯಜ್ಞ ,ದೇವ, ಋಷಿ ,ಆಚಾರ್ಯ, ಪಿತೃ ತರ್ಪಣ(ಅಧಿಕಾರವುಳ್ಳವರು ಮಾತ್ರ)ಕೊಡುವುದು . ಹೀಗೆ ಉತ್ಸರ್ಜನೆಯಿಂದ ಮರಳಿ ವೇದಾಧ್ಯಯನ ಆರಂಭಿಸುವುದಕ್ಕೆ ಸಿದ್ಧತೆಯಾಗಿಯೂ , ಮಾನಸಿಕ , ದೈಹಿಕ ಶುದ್ಧಿಗಾಗಿಯೂ ಈ ಕ್ರಿಯೆ ನಡೆಯುತ್ತದೆ ( ಋಗ್ವೇದ ಕ್ರಮ ) . ವೇದ ಶಾಖೆಯನ್ನು ಆಧರಿಸಿ ಉಪಾಕರ್ಮ ವಿಧಿ ನಿರ್ವಹಣೆಯಲ್ಲಿ ವ್ಯತ್ಯಾಸ ಸಾಮಾನ್ಯವಾದುದು .ಪಾಠಾಂತರಗಳು ಬೇಕಾದಷ್ಟು ಇವೆ . ಆಕ್ಷೇಪ ಮತ್ತು ವಾದಕ್ಕೆ ಇದಕ್ಕಿಂತ ಪ್ರಶಸ್ತವಾದ ಕ್ಷೇತ್ರ ಬೇರೆ ಇಲ್ಲ . ಪುರೋಹಿತ ಪುರೋಹಿತರಲ್ಲಿ ಅನುಸಂಧಾನ ವ್ಯತ್ಯಾಸಗಳನ್ನು ಗಮನಿಸಲಾಗಿದೆ . ಋಷಿ ಪೂಜೆ ಪ್ರಧಾನ .ಏಕೆಂದರೆ ವೇದ ಮಂತ್ರಗಳೆಲ್ಲವೂ ಋಷಿ ದ್ರಷ್ಟವಾದುದು . ಋಷಿದ್ರಷ್ಟವಾದ ಮಂತ್ರಗಳ ಅಧ್ಯಯನ - ಅಧ್ಯಾಪನಕ್ಕೆ ಋಷಿಗಳ ಅನುಗ್ರಹ ಪ್ರಾಪ್ತಿಗಾಗಿ ಋಷಿಪೂಜೆ . ಯಜ್ಞೋಪವೀತದ ಬದಲಾವಣೆ ಎಂಬುದು ಸಾಂಕೇತಿಕ.ಆದರೆ ಜ್ಞಾನದ ತಿಳಿವಳಿಕೆಗೆ ನಿರಂತರ ಜಾಗೃತಿ ಮೂಡಿಸುವ ಧಾರ್ಮಿಕ ವಿಧಿಯಾಗಿ ಉಪಾಕರ್ಮ. ಈ ವಿಧಿಯನ್ನು ಮತ್ತು ಯಜ್ಞೋಪವೀತವನ್ನು ಗಮನಿಸಿದರೆ ಯಜ್ಞೋಪವೀತದ ಉದ್ದ , ಎಳೆಗಳು , ಇವುಗಳಿಗಿರುವ ಶಾಸ್ತ್ರಾಧಾರ ಮತ್ತು ಮಂತ್ರಗಳು , ಕರ್ಮಾಂಗಗಳು ಭವ್ಯ ಅಷ್ಟೇ ದಿವ್ಯ . ಉಪಾಕರ್ಮವು ಜ್ಞಾನದ ಉತ್ಕರ್ಷಕ್ಕಾಗಿ ಉಪಶ್ರುತವಾದ ವಿಧಿ .ಉಪಗ್ರಹಣದಿಂದ ಉತ್ಪನ್ನವಾಗುವ ಜ್ಞಾನವು ಸಮಾಜಕ್ಕೆ , ವಿಶ್ವಕ್ಕೆ ಕೊಡುಗೆಯಾದರೆ ಉಪಾಕರ್ಮ ಸಂಕುಚಿತವಾಗದೆ ವಿಶಾಲ ಅರ್ಥ ವ್ಯಾಪ್ತಿಯನ್ನು ಪಡೆದು ಮತ್ತಷ್ಟು ಗೌರವಾರ್ಹವಾದೀತು . ಬರಹ : ಕೆ.ಎಲ್ .ಕುಂಡಂತಾಯ
ಹೋಟೆಲ್ ಉದ್ಯಮಿ ಕಾಪು ಮಲ್ಲಾರ್ ಡಿ.ಕೆ ಪೂಜಾರಿ ನಿಧನ
Posted On: 01-08-2020 04:36PM
ಮುಂಬಯಿ: ಹಿರಿಯ ಸಮಾಜ ಸೇವಕ ,ಹೋಟೇಲು ಉದ್ಯಮಿ ಡಿ. ಕೆ. ಪೂಜಾರಿಯವರು (78) ಆ.1ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಸಾಮಾಜಿಕ, ಧಾರ್ಮಿಕ ಸೇವೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆದರ್ಶ ಹಾಗೂ ಸಾರ್ಥಕ ಜೀವನವನ್ನು ನಡೆಸಿರುವ ಡಿ.ಕೆ. ಪೂಜಾರಿಯವರು ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಘಾಟ್ಕೋಪರ್ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷರಾಗಿ , ಅಸಲ್ಪಾ ಇಲ್ಲಿನ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ದೇವಸ್ಥಾನ, ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಹಾಗೂ ಕರ್ನಾಟಕ ಸಂಘ ಇದರ ಮಾಜಿ ಅಧ್ಯಕ್ಷರಾಗಿ, ಹುಟ್ಟೂರಿನ ಕುದಿ ಗ್ರಾಮದ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿರುವರು. ಅಲ್ಲದೆ ಇವೆಲ್ಲದರ ಅಭಿವೃದ್ಧಿಗೆ ಶ್ರಮಿಸಿ ಅಮೂಲ್ಯ ಕೊಡುಗೆಯನ್ನು ನೀಡಿದವರಾಗಿರುವರು. ಬಿಲ್ಲವರ ಅಸೋಸಿಯೇಶನ್ ಘಾಟ್ಕೋಪರ್ ಸ್ಥಳೀಯ ಕಚೇರಿಗೆ ಜಾಗವನ್ನು ಕೊಡಾ ಡಿ .ಕೆ .ಪೂಜಾರಿಯವರು ಒದಗಿಸಿಕೊಟ್ಟಿದ್ದಾರೆ. ಮುಲುಂಡ್ ಪಶ್ಚಿಮದ ವೈಶಾಲಿ ನಗರ, ಕಲ್ಪನಾ ನಗರಿ ದೈವತ್ ಅಪಾರ್ಟ್ ಮೆಂಟ್ ನಿವಾಸಿಯಾಗಿದ್ದ ಡಿ.ಕೆ. ಪೂಜಾರಿಯವರು ಹಿರಿಯ ಹೋಟೆಲು ಉದ್ಯಮಿಯಾಗಿ ಗುರುತಿಸಿಕೊಂಡಿದ್ದು ಘಾಟ್ಕೋಪರ್ ಅಸಲ್ಪೆಯಲ್ಲಿ ಮಲ್ಲಿಕಾ ಹೋಟೆಲನ್ನು ಹೊಂದಿದ್ದರು. ಮೂಲತಃ ಕಾಪು ಮಲ್ಲಾರ್ ಸಿಂಧು ನಿವಾಸದವರಾಗಿದ್ದ ಡಿ. ಕೆ .ಪೂಜಾರಿಯವರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಆಗಲಿದ್ದಾರೆ.
ಹೆಜಮಾಡಿಯಲ್ಲಿ ಸೌಹಾರ್ದತೆಯ ಸಂಕೇತವಾಗಿ ಬಕ್ರೀದ್ ಆಚರಣೆ
Posted On: 01-08-2020 02:41PM
ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ನಿನ್ನೆ ಬಕ್ರೀದ್ ಹಬ್ಬ ವನ್ನು ರೋಟರಿ ಸದಸ್ಯರಾದ ಸ್ಯಯದ್ ಹೆಜಮಾಡಿಯವರ ಮನೆಯಲ್ಲಿ ಆಚರಿಸಲಾಯಿತು. ಬಕ್ರೀದ್ ಹಬ್ಬ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ ಎಂದು ತಿಳಿಸಿದರು. ನಂತರ ಇಂತಹ ಕಾರ್ಯಕ್ರಮ ನಡೆಸುವುದು ಸೌಹಾರ್ದತೆಯ ಸಂಕೇತ ಎಂದು ಸ್ಯಯದ್ ಹೆಜಮಾಡಿ ಯವರು ಮಾತನಾಡಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಈ ಬಂದವರನ್ನು ಸ್ವಾಗತಿಸಿ ಅಧ್ಯಕ್ಷತೆಯ ಮಾತನ್ನು ಮಾತನಾಡಿದರು, ಕಾರ್ಯದರ್ಶಿ ಮಹಮ್ಮದ್ ನಿಯಾಜ್ ವಂದಿಸಿದರು, ಸುಧಾಕರ್ ಕೆ ಕಾರ್ಯಕ್ರಮವನ್ನು ನಿರೂಪಿಸಿದರು
ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ 'ರೈತ ಬಂಧು' ನೇಜಿ ನೆಡುವ ಕಾರ್ಯಕ್ರಮ
Posted On: 01-08-2020 02:27PM
ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಬ್ರಹ್ಮಸ್ಥಾನದ ಬಳಿಯ ಗದ್ದೆಯಲ್ಲಿ " ರೃೆತ ಬಂಧು" ನೇಜಿ ನೇಡುವ ಕಾರ್ಯಕ್ರಮಕ್ಕೆ ಉಡುಪಿ ಜಿ.ಪ. ಸದಸ್ಯ ಶಶಿಕಾಂತ್ ಪಡುಬಿದ್ರಿ ಚಾಲನೆ ನೀಡಿ ಮಾತನಾಡಿದರು. ಕೃಷಿ ಅವನತಿಯತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಯುವ ಜನರಿಗೆ ಕೃಷಿಯತ್ತ ಒಲವು ಮೂಡಿಸುವಂತಹ ಇಂತಹ ಕಾರ್ಯಕ್ರಮವು ಬಹಳ ಅತ್ಯಗತ್ಯವಾಗಿದೆ. ಸಾವಯವ ಕೃಷಿ ಪದ್ದತಿಯನ್ನು ಬೆಳಸೋಣ, ದೇಶದ ಅಭಿವೃದ್ಧಿ ಯಲ್ಲಿ ಕ್ಯೆ ಜೋಡಿಸೋಣ ಎಂದರು. ಈ ಸಂದರ್ಭದಲ್ಲಿ ನಿಕಟ ಪೂರ್ವ ವಲಯ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ , ಪೂರ್ವ ಅಧ್ಯಕ್ಷರಾದ ಮಾಧವ ಸುವರ್ಣ, ಪಿ. ಕೃಷ್ಣ ಬಂಗೇರ, ರಮೀಜ್ ಹುಸೇನ್ , ಸದಸ್ಯರಾದ ರಮೇಶ್ ಯು, ಬಿ.ಯಸ್.ಅಚಾರ್ಯ , ಸಂತೋಷ್ ಪಡುಬಿದ್ರಿ, ಗೀತಾ ಅರುಣ್, ತಸ್ಲೀನ್ ಅರ್ಹ, ಮಮತಾ ಸಾಲ್ಯಾನ್, ಪುಷ್ಪವತಿ ಅಚಾರ್ಯ ಉಪಸ್ಥಿತರಿದ್ದರು ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಸ್ವಾಗತಿಸಿ, ಕಾರ್ಯದರ್ಶಿ ಮಹಮ್ಮದ್ ನಿಯಾಜ್ ವಂದಿಸಿ, ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿದರು.
