Updated News From Kaup

ಮಾನವೀಯತೆ ಮೆರೆದ ಸುರತ್ಕಲ್ ನ ವೆಂಕಟೇಶ್

Thumbnail
Posted On: 30 Sep 2020, 10:08 AM

ಪಲಿಮಾರು ಗ್ರಾಮದ ಅವರಾಲುಮಟ್ಟು ನಿವಾಸಿ ಸುನೀತ ಇವರು ಮೂರು ಸಾವಿರದಷ್ಟು ಹಣ, ದಾಖಲೆಗಳಿರುವ ಪರ್ಸ್ ನ್ನು ಮೂರು ಕಾವೇರಿ ಬಳಿ ಕಳೆದುಕೊಂಡಿದ್ದರು. ಈ ಪಸ್೯ ಸುರತ್ಕಲ್ ನ ಪಡ್ರೆ ಪುಣೋಡಿ ಮನೆಯ ವೆಂಕಟೇಶ್ ಗೆ ಸಿಕ್ಕಿತ್ತು. ಅದರಲ್ಲಿದ್ದ ಮಾಹಿತಿಯ ಆಧಾರದ ಮೇಲೆ ಪರ್ಸನ್ನು ಸುನೀತಾರವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕಾಪು ಹಳೆಮಾರಿಗುಡಿಯಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ ವಿಶೇಷ ಚಂಡಿಕಾಯಾಗ

Thumbnail
Posted On: 29 Sep 2020, 02:36 PM

ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ,ಕಾಪು, ಅಧಿಕ ಆಶ್ವೀಜ ಪುರುಷೋತ್ತಮ ಮಾಸ ಅಂಗವಾಗಿ ಶ್ರೀ ದೇವಳದಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ ವಿಶೇಷ ಚಂಡಿಕಾಯಾಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಇಂದು ಜರಗಿತು.

ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವರಿಗೆ ಅಪ್ಪ ಸೇವೆ

Thumbnail
Posted On: 29 Sep 2020, 01:35 PM

ಉಚ್ಚಿಲ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಅಪ್ಪ ಸೇವೆಯು ದಿನಾಂಕ 28.9.2020 ನೇ ಸೋಮವಾರ ನಡೆಯಿತು. ಒಟ್ಟು 1115 ಅಪ್ಪ ಸೇವೆಯು ಭಕ್ತರಿಂದ ಬಂದಿದ್ದು. (ಸುಮಾರು 13,000 ಅಪ್ಪ ತಯಾರಿಸಲಾಗಿತ್ತು) ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ, ಅರ್ಚಕ ಯು. ಸೀತಾರಾಮ ಭಟ್, ಗೋವಿಂದ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ದ್ಯುಮಣಿ ಭಟ್, ಸಮಿತಿ ಸದಸ್ಯರು ಮತ್ತು ವ್ಯವಸ್ಥಾಪಕರು ಸಂತೋಷ ಪುತ್ರನ್ ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವರದಿ : ವಿಕ್ಕಿ ಪೂಜಾರಿ ಮಡುಂಬು (ನಮ್ಮ ಕಾಪು ನ್ಯೂಸ್)

ಬಂಟಕಲ್ಲು ಶರ್ಮರ ತೋಟದಲ್ಲಿ ಸಮಗ್ರ ಕೃಷಿ ಮಾಹಿತಿ ಮತ್ತು ಪ್ರಾತ್ಯಕ್ಷತೆ

Thumbnail
Posted On: 29 Sep 2020, 01:59 AM

ವೈಜ್ಞಾನಿಕ ಕೃಷಿ ಪದ್ದತಿಯಿಂದ ಯಶಸ್ವಿ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಶರ್ಮ.
ಪ್ರಸ್ತುತ ದಿನಗಳಲ್ಲಿ ಕೃಷಿಕರು ವೈಜ್ಞಾನಿಕ ಕೃಷಿ ಪದ್ದತಿಯನ್ನು ಅಳವಡಿಸುವುದರಿಂದ ಕೃಷಿಯಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಶ್ರೀ ರಾಮಕೃಷ್ಣ ಶರ್ಮರವರು ತಿಳಿಸಿದರು. ಬಂಟಕಲ್ಲು ನಾಗರೀಕ ಸೇವಾ ಸಮಿತಿ(ರಿ) ಆಶ್ರಯದಲ್ಲಿ ಇಂದು ಬಂಟಕಲ್ಲು ಶರ್ಮರವರ ಕೃಷಿ ತೋಟದಲ್ಲಿ ನಡೆದ ಸಮಗ್ರ ಕೃಷಿ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಕೃಷಿ ಮಾಹಿತಿ ನೀಡಿ ಮಾತನಾಡುತಿದ್ದರು. ಮಲ್ಲಿಗೆ ಕೃಷಿ, ತೆಂಗು, ಕಂಗು ಕೃಷಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ನಾ.ಸೇ ಸಮಿತಿಯ ಅಧ್ಯಕ್ಷ ಶ್ರೀ ಕೆ.ಆರ್ ಪಾಟ್ಕರ್ ರವರು ಮಲ್ಲಿಗೆ ಕೃಷಿಕರಾದ ಶ್ರೀಮತಿ ಅನಿತಾ ಮೆಂಡೋನ್ಸಾರವರಿಗೆ ಮಲ್ಲಿಗೆ ಗಿಡವನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಗರಿಕ ಸೇವಾ ಸಮಿತಿಯ ಧೇಯ ಉದ್ದೇಶಗಳ ಬಗ್ಗೆ ತಿಳಿಸಿ ತುರ್ತು ಸಂಧರ್ಭದಲ್ಲಿ ಸಮಿತಿಯು ಅಂಬುಲೆನ್ಸ್ ಉಚಿತ ಸೇವೆಯ ಬಗ್ಗೆ ಮಾಹಿತಿ ನೀಡಿ ಕೃಷಿಕರ ಸಹಾಯಕ್ಕೆ ನಾಗರಿಕ ಸಮಿತಿಯು ಸದಾ ಸಿದ್ದವಿದೆ ಎಂದು ತಿಳಿಸಿದರು. ನಿವೃತ್ತ ಶಿಕ್ಷಕ ಬಂಟಕಲ್ಲು ಶ್ರೀ ರಮಾನಾಥ ಪಾಟ್ಕರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಅನೇಕ ಕೃಷಿಕ ಭಾಂಧವರು , ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಡುಪಿಯ ಈಸೀ ಲೈಫ್ ನವರು ಅಡಿಕೆ ಮರ ಹತ್ತುವ ಟ್ರೀ ಬೈಕ್ ನ ಪ್ರಾತ್ಯಕ್ಷತೆ ನೀಡಿದರು. ಸಮಿತಿಯ ಉಪಾಧ್ಯಕ್ಷರಾದ ಶ್ರೀ ಪುಂಡಲೀಕ ಮರಾಠೆ, ಸಮಿತಿಯ ಸದಸ್ಯರು, ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿಯ ಆಡಳಿತೆ ಮೊಕ್ತೇಸರರಾದ ಶ್ರೀ ಶಶಿಧರ ವಾಗ್ಲೆ, ಕೃಷಿಕರಾದ ಶ್ರೀ ಸುಂದರ ಪಾಟ್ಕರ್, ಶಿವರಾಮ ಕಾಮತ್ , ಆಲ್ಬರ್ಟ್ ಕಸ್ತಲೀನೊ,ಫೆಲಿಕ್ಸ್ ಡಯಾಸ್, ಆಲ್ಬರ್ಟ್ ಡಿ'ಸೋಜ , ರವೀಂದ್ರ ಕುಲಾಲ್ ಮುಂತಾದವರು ಭಾಗವಹಿಸಿದ್ದರು. ನಾ.ಸೇ ಸಮಿತಿಯ ಕಾರ್ಯದರ್ಶಿ ಶ್ರೀ ದಿನೇಶ್ ದೇವಾಡಿಗರವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವರದಿ : ಕೆ. ಆರ್. ಪಾಟ್ಕರ್ ಬಂಟಕಲ್ಲು

ವಿಶ್ವ ಹೃದಯ ದಿನದಂದು ನಮ್ಮ ಹೃದಯಕ್ಕೆ ಹತ್ತಿರವಾಗಿರೋಣ

Thumbnail
Posted On: 29 Sep 2020, 01:46 AM

ಪ್ರತಿವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಇದು ಹೃದಯ ಕಾಯಿಲೆ ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳ ವ್ಯಾಪ್ತಿಯ ಬಗ್ಗೆ ಜನರ ಗಮನವನ್ನು ಸೆಳೆಯುವ ಗುರಿಯನ್ನು ಹೊಂದಿದೆ. ಹೃದಯಾಘಾತ, ಹೃದಯ ವೈಫಲ್ಯ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಹೃದಯ ಸಂಬಂಧಿ ಕಾಯಿಲೆಗಳನ್ನು ತಪ್ಪಿಸಲು, ವಿಭಿನ್ನ ತಡೆಗಟ್ಟುವ ಕ್ರಮಗಳು ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಉತ್ತೇಜಿಸಲು ಈ ದಿನವನ್ನು ಸ್ಮರಿಸಲಾಗುತ್ತದೆ.
ಹಾರ್ಟ್ ಫಾರ್ ಲೈಫ್, ” ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತ ಹೃದಯ ಕಾಯಿಲೆಗಳು ಬರದಂತೆ ಸಂಗೀತ ಕಚೇರಿಗಳು, ಕ್ರೀಡಾಕೂಟಗಳಂತಹ ಚಟುವಟಿಕೆಗಳು. ಜಾಗೃತಿ ಘಟನೆಗಳು ಆರೋಗ್ಯ ತಪಾಸಣೆ. ನಡಿಗೆಗಳು, ಮತ್ತು ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ವಿಶ್ವದಲ್ಲಿ ಪ್ರತಿ ವರ್ಷ ಸರಾಸರಿ 17 ದಶಲಕ್ಷಕ್ಕೂ ಹೆಚ್ಚು ಜನರು ಹೃದಯ ಸಂಬಂಧಿತ ಕಾಯಿಲೆಗಳಿಂದ ಸಾಯುತ್ತಾರೆ. ಇದು ಎಚ್‌ಐವಿ, ಮಲೇರಿಯಾ ಮತ್ತು ಕ್ಯಾನ್ಸರ್ ನಿಂದ ಸಾಯುವ ಜನರಿಗಿಂತ ಹೆಚ್ಚಾಗಿರುವುದು ದುಃಖದ ವಿಷಯವಾಗಿದೆ. ವಿಶ್ವ ಹೃದಯ ದಿನದ ಇತಿಹಾಸ
ಈ ಕಾಯ೯ಕ್ರಮವನ್ನು ವರ್ಲ್ಡ್ ಹಾರ್ಟ್ ಫೆಡರೇಶನ್ 2000 ರಲ್ಲಿ ವಾರ್ಷಿಕ ಕಾರ್ಯಕ್ರಮವಾಗಿ ಪ್ರಾರಂಭಿಸಿತು, ಇದನ್ನು ಸೆಪ್ಟೆಂಬರ್‌ನ ಪ್ರತಿ ಕೊನೆಯ ಭಾನುವಾರ ನಡೆಯಲು ಯೋಜಿಸಲಾಗಿತ್ತು. ಆದಾಗ್ಯೂ, ಸೆಪ್ಟೆಂಬರ್ 29 ರ ಪ್ರತಿ ದಿನವೂ ಅದನ್ನು ಸರಿಪಡಿಸಲು ಅವರು ನಿರ್ಧರಿಸಿದರು ಮತ್ತು ಅಂದಿನಿಂದಲೂ ಅದನ್ನು ಆಚರಿಸಲಾಗುತ್ತದೆ.ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಈ ದಿನವನ್ನು ಜಗತ್ತಿನ ಎಲ್ಲೆಡೆಯಿಂದ ಆಚರಿಸುತ್ತವೆ. ಮ್ಯಾರಥಾನ್‌ಗಳು, ನಡಿಗೆಗಳು, ಸಾರ್ವಜನಿಕ ಮಾತುಕತೆಗಳು, ಫಿಟ್‌ನೆಸ್ ಸೆಷನ್‌ಗಳು, ಪ್ರದರ್ಶನಗಳು ಮತ್ತು ವಿಜ್ಞಾನ ಮೇಳಗಳಂತಹ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಈ ಕಾಯ೯ಕ್ರಮವನ್ನು ಮಾಡುತ್ತಾರೆ. ಕೆಲವು ಹೆಗ್ಗುರುತುಗಳು, ಸ್ಮಾರಕಗಳು ಮತ್ತು ಪ್ರಸಿದ್ಧ ಕಟ್ಟಡಗಳು ಹೃದಯರಕ್ತನಾಳದ ಕಾಯಿಲೆಯ ಅರಿವಿನ ಪ್ರದರ್ಶನವಾಗಿ ಈ ದಿನ ಕೆಂಪು ಬಣ್ಣಕ್ಕೆ ಹೋಗಲು ಆಯ್ಕೆಮಾಡುತ್ತವೆ. ಈ ದಿನವನ್ನು ಆಚರಿಸಲು ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿಯು ಅವರ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಸೂಚಿಸಲಾಗುತ್ತದೆ. ದೈಹಿಕ ವ್ಯಾಯಾಮದಲ್ಲಿ ಪಾಲ್ಗೊಳ್ಳುವುದು, ಧೂಮಪಾನವನ್ನು ನಿಲ್ಲಿಸುವುದು, ಆಲ್ಕೊಹಾಲ್ ತ್ಯಜಿಸುವುದು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದನ್ನು ಪ್ರಾರಂಭಿಸುವುದು ಸೇರಿದಂತೆ ಹಲವಾರು ಮಾರ್ಗಗಳಿವೆ. ಅಲ್ಲದೆ, ನಿಮ್ಮ ಹೃದಯ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಆಗಾಗ್ಗೆ ಪರೀಕ್ಷಿಸಿ.. ನಿಮ್ಮ ಹೃದಯವನ್ನು ಆರೋಗ್ಯವಾಗಿಡಿ ಮತ್ತು ಇತರರಿಗೂ ಅದೇ ರೀತಿ ಮಾಡಲು ಸಹಾಯ ಮಾಡಿ. ಜಗತ್ತಿನಾದ್ಯಂತ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿ ಸರಾಸರಿ 40 ರಿಂದ 45 ವಯಸ್ಸಿನವರೇ ಹೃದಯಾಘಾತದಿಂದ ಮರಣಹೊಂದುತ್ತಿರುವುದು ಯೋಚಿಸಬೇಕಾದ ವಿಚಾರವಾಗಿದೆ. ಮೊದಲು ಶ್ರೀಮಂತರು, ನಗರವಾಸಿಗಳು, ಪುರುಷರು ಹಾಗೂ ಧೂಮಪಾನ ವ್ಯಸನಿಗಳನ್ನಷ್ಟೇ ಕಾಡುತ್ತಿದ್ದ ಈ ಕಾಯಿಲೆ ಇಂದು ಬಡವ-ಶ್ರೀಮಂತ, ಲಿಂಗ ಭೇದವಿಲ್ಲದೆ ಎಳೆಯ ಮಕ್ಕಳು, ರೈತರು ಹಾಗೂ ಮಹಿಳೆಯರನ್ನೂ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ, ಹೆಚ್ಚುತ್ತಿರುವ ನಗರೀಕರಣ, ಆಹಾರ ಪದ್ಧತಿಯಲ್ಲಿ ಬದಲಾವಣೆ, ಮಾಲಿನ್ಯ, ವ್ಯಾಯಾಮ ಚಟುವಟಿಕೆಗಳಿಲ್ಲದ ಜೀವನ ಶೈಲಿ ಹೃದ್ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಏನಿದುಹೃದಯ ಸಂಬಂಧಿ ಕಾಯಿಲೆ?
ಮಾನವನ ದೇಹದಲ್ಲಿರುವ ಅತ್ಯಂತ ಮಹತ್ವದ ಅಂಗ ಈ ಹೃದಯ . ಅಂತಹ ಹೃದಯ ಭಾಗಕ್ಕೆ ರಕ್ತ ಪೂರೈಕೆಯಲ್ಲಿಅಡೆತಡೆ ಉಂಟಾದರೆ ಹೃದಯದ ಜೀವಕೋಶಗಳು ನಾಶಗೊಳ್ಳುತ್ತವೆ. ಇದರ ಪರಿಣಾಮವೇ ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳು. ಕೆಲವರಲ್ಲಿರೋಗದ ಲಕ್ಷಣಗಳು ಕಂಡು ಬಂದರೆ ಕೆಲವರಲ್ಲಿಮುನ್ಸೂಚನೆ ಇಲ್ಲದೇ ಹೃದಯಾಘಾತ ಸಂಭವಿಸುತ್ತದೆ.
ಸಾಮಾನ್ಯ ಹೃದಯಾಘಾತ ಚಿಹ್ನೆಗಳು ಮತ್ತು ಲಕ್ಷಣಗಳು:
ನಿಮ್ಮ ಎದೆ ಅಥವಾ ತೋಳುಗಳಲ್ಲಿ ಒತ್ತಡ, ಬಿಗಿತ, ನೋವು, ಅಥವಾ ನಿಮ್ಮ ಕುತ್ತಿಗೆ, ದವಡೆ ಅಥವಾ ಬೆನ್ನಿಗೆ ಹರಡುವಂತಹ ಸಂವೇದನೆ. ವಾಕರಿಕೆ, ಅಜೀರ್ಣ, ಎದೆಯುರಿ ಅಥವಾ ಹೊಟ್ಟೆ ನೋವು. ಉಸಿರಾಟದ ತೊಂದರೆ. ಶೀತ ಬೆವರು. ಆಯಾಸ. ಲಘು ತಲೆನೋವು ಅಥವಾ ಹಠಾತ್ ತಲೆತಿರುಗುವಿಕೆ. ಮುಖ್ಯವಾದವುಗಳು. ಹೃದಯ ರೋಗಿಗಳಿಗೆ ಹಾಗೂ ಹೃದಯ ರೋಗ ತಡೆಗಟ್ಟುಲು ಪಾಲನೆ ಮಾಡಬೇಕಾದ ನಿಯಮಗಳು
1.ಹೆಚ್ಚು ಸಸ್ಯಾಹಾರ ಸೇವನೆ ಕೊಬ್ಬು ಹೆಚಿರುವ ಮಾಂಸಾಹಾರ ಸೇವನೆ ಬೇಡ
2.ಕಾಫಿ ಸಿಗರೇಟು ಮದ್ಯಪಾನದಂತ ದುಷ್ಚ್ತಾಗಳಿಂದ ದೂರ ಇರುವ ಪ್ರಯತ್ನ ಮಾಡಿ
3 ನಿಯಮಿತ ವ್ಯಾಯಾಮ,ಯೋಗ ಪ್ರಾಣಾಯಾಮ ಗಳಿಂದ ಮಾನಸಿಕ ಒತ್ತಡ ನಿಯಂತ್ರಣ
4 ಹೆಚ್ಚು ತರಕಾರಿ ತಾಜಾ ಹಣ್ಣು ಗಳ ಸೇವನೆ
5 ಆರೋಗ್ಯ ತಪಾಸಣೆ
ಈ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಮ್ಮ ಹೃದಯ ವನ್ನು ಕಾಪಾಡಬಹುದು .ಈ ದಿನವನ್ನು ಕೇವಲ ಆಚರಣೆ ಮಾಡದೆ ನಮ್ಮ ಹೃದಯವನ್ನು ತಿಳಿಯುವ ಪ್ರಯತ್ನ ಮಾಡೋಣ.
ಮಾಹಿತಿ : ಡಾII ವಿಜಯ್ ನೆಗಳೂರು
ಪ್ರಾಧ್ಯಾಪಕರು, ತಜ್ಞ ವೈದ್ಯರು ಎಸ್.ಡಿ.ಎಂ ಆಯುವೇ೯ದ ಕಾಲೇಜು ಉದ್ಯಾವರ
ಪ್ರಥಮ್ ಕ್ಲಿನಿಕ್ ಕೆಮ್ಮಣ್ಣು

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಲ್ಪೆ ವತಿಯಿಂದ ಆರ್ಥಿಕ ಸಹಕಾರ

Thumbnail
Posted On: 28 Sep 2020, 09:48 AM

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮಲ್ಪೆ ಇದರ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಶ್ರೀ ರಾಜೇಶ್ ಪೈ ಇವರಿಗೆ ಗಣೇಶೋತ್ಸವ ಸಮಿತಿಯ ಸದಸ್ಯರ ಸಹಕಾರದಿಂದ ನೀಡಲಾದ ಆರ್ಥಿಕ ಸಹಕಾರದ ಚೆಕ್ಕನ್ನು ಅವರ ಧರ್ಮಪತ್ನಿ ಶ್ರೀಮತಿ ಫ್ಲೋರಾ ಇವರಿಗೆ ಹಸ್ತಾಂತರಿಸಲಾಯಿತು. ಹಾಗೂ ಸಮಿತಿಯ ಮಾಜಿ ಕಾರ್ಯದರ್ಶಿ ಶ್ರೀ ನಾರಾಯಣ ಟಿ. ಕಿಣಿಯವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಶ್ರೀ ಕಾಂತಪ್ಪ ಕರ್ಕೇರ, ಶ್ರೀ ಶ್ಯಾಮ ಅಮೀನ್, ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಮೈಂದನ್, ಉಪಾಧ್ಯಕ್ಷರಾದ ಶ್ರೀ ಮಹೇಶ್ ಬಂಗೇರ, ಪ್ರಧಾನ ಕಾರ್ಯದರ್ಶಿ ಶಿವರಾಮ ಕಲ್ಮಾಡಿ, ಕೋಶಾಧಿಕಾರಿ ಶ್ರೀ ಸುರೇಶ್ ಕರ್ಕೇರ ಮತ್ತು ಸದಸ್ಯರಾದ ಶ್ರೀಮತಿ ಪುಷ್ಪಾ ಶಶಿಧರ್ ಉಪಸ್ಥಿತರಿದ್ದರು.

ಆಸರೆ ಹೆಲ್ಪಿoಗ್ ಹ್ಯಾoಡ್ಸ್ ಉಡುಪಿ ಗೋವಿಗಾಗಿ ಮೇವು ಅಭಿಯಾನ

Thumbnail
Posted On: 27 Sep 2020, 10:58 PM

ಉಡುಪಿ : ಆಸರೆ ಹೆಲ್ಪಿoಗ್ ಹ್ಯಾoಡ್ಸ್ ಉಡುಪಿ ಇದರ ವತಿಯಿಂದ ಗೋವಿಗಾಗಿ ಮೇವು ಅಭಿಯಾನ ಸೆ.27ರಂದು ನೀಲಾವರ ಗೋ ಶಾಲೆಯಲ್ಲಿ ನಡೆಯಿತು. ಈ ಸಂದಭ೯ದಲ್ಲಿ ಆಶೀವ೯ಚನ ನೀಡಿದ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀಥ೯ ಶ್ರೀಪಾದರು, ಗೋವಿಗೆ, ಮೇವು ಕೊಡುವುದು ಪುಣ್ಯದ ಕಾಯ೯. ನಾವು ಬೆಳಿಗ್ಗೆ ಹಾಲು ಕುಡಿದಾಗ ಅದು ಯಾವ ದನದ ಹಾಲು ಎಂದು ತಿಳಿಯಲು ಅಸಾಧ್ಯ ಅದೇ ರೀತಿ ನಾವು ಹಿoದಿನ ಜನ್ಮದಲ್ಲಿ ಏನಾಗಿದ್ದೇವು ಗೊತ್ತಿಲ್ಲ ಹೀಗಾಗಿ ಪುಣ್ಯಕೋಟಿಗೆ ಆಹಾರ ನೀಡಿದರೆ ನಮ್ಮ ಜನ್ಮ ಸಾಥ೯ಕವಾಗಲು ಸಾಧ್ಯ ಎಂದರು. ಅಭಿಯಾನದ ಪ್ರಮುಖರಾದ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ ಶುಭ ಹಾರೈಸಿದರು.ಸಂಸ್ಥೆಯ ಪ್ರಮುಖರಾದ ಡಾII ಕೀತಿ೯ ಪಾಲನ್, ಜಗದೀಶ್ , ಬೇಬಿ ಶೆಟ್ಟಿ ಮುಂತಾದವರಿದ್ದರು. ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು,ಕವಾ೯ಲು ವಂದಿಸಿದರು.

ದೇಶ ಕಾಯೋ ಯೋಧರಿಗೆ ಮಾಸ್ಕ್ ತಯಾರಿಸಿದ ಇಶಿತಾಗೆ ಉಡುಪಿಯಲ್ಲಿ ಸಮ್ಮಾನ

Thumbnail
Posted On: 27 Sep 2020, 03:33 AM

ಗಡಿ ಕಾಯುವ ಯೋಧರಿಗೆ ಸ್ವತಃ ಮಾಸ್ಕ್ ತಯಾರಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಮೆಚ್ಚುಗೆಯ ಪತ್ರವನ್ನು ಪಡೆದ ವಿದ್ಯಾರ್ಥಿನಿ ಇಶಿತಾ ಆಚಾರ್ ಅವರನ್ನು ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಇಂದು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್, ಉಡುಪಿ ಜಿಲ್ಲಾ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಜೇಸಿಐ ಉಡುಪಿ ಸಿಟಿ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಶೆಟ್ಟಿ ಹಾಗೂ ಕಾರ್ಯದರ್ಶಿ ಉದಯ ನಾಯ್ಕ್, ಇಶಿತಾಳ ತಾಯಿ ನಂದಿತಾ ಆಚಾರ್ ಉಪಸ್ಥಿತರಿದ್ದರು. ಇಶಿತಾ ಆಚಾರ್ ಅವರು ಮಣಿಪಾಲ ಮಾಧವ ಕೃಪಾ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸುಮಾರು 300 ಕ್ಕಿಂತ ಹೆಚ್ಚು ಮಾಸ್ಕ್ ಗಳನ್ನು ತಯಾರಿಸಿ ಗಡಿ ಕಾಯುವ ಯೋಧರಿಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕಛೇರಿಯ ಮೂಲಕ ಕಳುಹಿಸಿದ್ದರು. ಇಶಿತಾ ಆಚಾರ್ ಅವರ ಕಾರ್ಯವನ್ನು ಶ್ಲಾಘಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಯಕ್ತಿಕ ಪತ್ರವನ್ನು ಇಶಿತಾಳ ತಾಯಿ ನಂದಿತಾ ಆಚಾರ್ ಅವರಿಗೆ ಕಳುಹಿಸಿದ್ದರು. ವರದಿ : ರಾಘವೇಂದ್ರ ಪ್ರಭು ಕರ್ವಾಲು (ನಮ್ಮ ಕಾಪು ನ್ಯೂಸ್)

ವಿಶ್ವ ಪ್ರವಾಸೋದ್ಯಮ ದಿನ ಅಭಿವೃದ್ಧಿಯ ಹೊಸ ಹೆಜ್ಜೆಯಾಗಿ ಪರಿಣಮಿಸಲಿ

Thumbnail
Posted On: 27 Sep 2020, 03:21 AM

ಸೆ.27 ವಿಶ್ವ ಪ್ರವಾಸೋದ್ಯಮ ದಿನ, ದೇಶಾದ್ಯಂತ ಈ ದಿನವನ್ನು ವಿಶೇಷ ಕಾಯ೯ಕ್ರಮದ ಮೂಲಕ ಆಚರಿಸಲಾಗುತ್ತದೆ. ಪ್ರವಾಸ ಎಂದರೆ ನಮ್ಮೆಲ್ಲರೂ ಇಷ್ಟ ಕಾರಣ ಅದು ಹಲವು ವೈವಿದ್ಯತೆಗಳ ಪರಿಚಯ ಮತ್ತು ವಿಭಿನ್ನ ಅನುಭವಗಳನ್ನು ನೀಡುತ್ತದೆ. ಮೈಮನಸ್ಸನ್ನು ಉಲ್ಲಾಸಗೊಳಿಸುವಲ್ಲಿ ಪ್ರವಾಸದ ಪಾತ್ರ ಬಹಳ ಮಹತ್ತರವಾದದ್ದು. ದೇಶ ಸುತ್ತು-ಕೋಶ ಓದು ಎನ್ನುವ ಮಾತು ಎಲ್ಲರಿಗೂ ಸದಾ ನೆನಪಿಸುತ್ತಲೇ ಇರುತ್ತದೆ. ಏಕೆಂದರೆ ಒಂದು ಪ್ರವಾಸದಲ್ಲಿ ಸಿಗುವ ಅನುಭವ ದೊಡ್ಡ ಗ್ರಂಥ ಓದುವುದಕ್ಕಿಂತಲು ಹೆಚ್ಚಿನದು ಎಂದರೆ ತಪ್ಪಾಗಲಾರುದು. ವ್ರತ್ತಿಪರ ಪ್ರವಾಸೋದ್ಯಮಿಗಳನ್ನು ಸೃಷ್ಟಿಸುತ್ತಿರುವ ಪ್ರವಾಸೋದ್ಯಮ ಕೋರ್ಸ್ :-
ಇಂದಿನ ದಿನಗಳಲ್ಲಿ ಈ ಪ್ರವಾಸ ಉದ್ಯಮವಾಗಿ ಪ್ರವಾಸೋದ್ಯಮವಾಗಿದೆ, ಕಾರಣ ಅದರಲ್ಲಿನ ಅನೇಕ ಅನುಕೂಲಗಳು. ಇಂದು ಭಾರತದಲ್ಲಿ ಪ್ರವಾಸೋದ್ಯಮವು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ.ಈ ಮೂಲಕ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಇಂದಿನ ದಿನಗಳಲ್ಲಿ ಈ ಉದ್ಯಮ ಯುವ ಜನಾಂಗವನ್ನು ಸೆಳೆಯತ್ತಿದೆ. ಪ್ರವಾಸೋದ್ಯಮದಿಂದ ಸಾರಿಗೆ, ಹೊಟೇಲ್ ಉದ್ಯಮಕ್ಕೆ ನೇರ ಲಾಭ ತರುವುದರಿಂದ ಅಲ್ಲಿ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ. ಅಲ್ಲದೇ ದೇಶಕ್ಕೆ ಆರ್ಥಿಕ ಲಾಭವನ್ನು ಉಂಟು ಮಾಡುತ್ತದೆ.
ಪ್ರವಾಸ ಎಂದರೆ ಅದು ಕೇವಲ ಸುತ್ತಾಟವಲ್ಲ :
ಪ್ರವಾಸದಲ್ಲಿ ಒಂದು ಕಲಿಕೆ ಇರುತ್ತದೆ. ಇದರಲ್ಲಿ ಹಲವಾರು ವಿಭಾಗದ ಮೂಲಕ ನಾವು ಗುರುತಿಸಬಹುದು. ನಾವು ಪ್ರವಾಸಕ್ಕೆ ತೆರಳುವಾಗ ನಮ್ಮ ಆಸಕ್ತಿ ಯ ಮೇಲೆ ನಾವು ಅಲ್ಲಿ ನೋಡುವ ಸ್ಥಳಗಳನ್ನು ನಿಧ೯ರಿಸುತ್ತೇವೆ. ಇದರಲ್ಲಿರುವ ಪ್ರಮುಖ ವಿಭಾಗಗಳು ಕೃಷಿ ಪ್ರವಾಸೋದ್ಯಮ, ಅಡುಗೆ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಪರಂಪರೆಯ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ನೌಕಾಯಾನ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ ಹೀಗೆ ಹಲವು ಬಗೆಯ ಪ್ರವಾಸಗಳಿವೆ. ಪ್ರವಾಸೋದ್ಯಮ ದಿನದ ಹಿನ್ನಲೆ :
ಇದರ ಹಿನ್ನಲೆಯ ಬಗ್ಗೆ ತಿಳಿಯುದಾದರೆ, 1997 ರಿಂದ ಅಚರಣೆಯಲ್ಲಿರುವ ಈ ದಿನವನ್ನು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1980ರಲ್ಲಿ ಸೆಪ್ಟಂಬರ್ 27ನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಘೋಷಣೆ ಮಾಡಿತು.
ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ವೃದ್ಧಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ಸೆಪ್ಟಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ.
1997ರ ನಂತರ ಪ್ರತಿ ವರ್ಷವೂ ಒಂದೊಂದು ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡು ಅಧಿಕೃತವಾಗಿ ಪ್ರವಾಸೋದ್ಯಮ ದಿನ ಆಚರಿಸುವ ನಿರ್ಧಾರ ಕೈಗೊಂಡಿತು.
ಭಾರತದಲ್ಲಿ ಪ್ರವಾಸೋದ್ಯಮ ಸ್ಥಿತಿ :-
ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾರತದ ಸಂಸ್ಕೃತಿಗೆ ಮಾರುಹೋಗಿರುವ ವಿದೇಶಿಗರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹಾಗೆಯೇ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಇದು ರಾಷ್ಟ್ರೀಯ ಜಿಡಿಪಿಗೆ 6.23% ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ 8.78%ರಷ್ಟು ಕೊಡುಗೆ ನೀಡುತ್ತದೆ. ಸರಾಸರಿ ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶೀ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಪ್ರವಾಸೋದ್ಯಮ ಸೇವಾ ವಲಯವು 2008ರಲ್ಲಿ ಸುಮಾರು ಶತಕೋಟಿ ಡಾಲರ್ ಆದಾಯ ಗಳಿಸಿದೆ.
ವಿಶ್ವ ಪರ್ಯಟನ ಮತ್ತು ಪ್ರವಾಸೋದ್ಯಮ ಸಮಿತಿ ಯ ಪ್ರಕಾರ, ಪರ್ಯಟನ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯ ಸಾಮರ್ಥ್ಯ ಹೊಂದಿರುವ ಭಾರತ ಉಪಖಂಡಕ್ಕೆ ಮುಂದಿನ ಹತ್ತು ವರ್ಷಗಳ ವರೆಗೆ ಪ್ರವಾಸೋದ್ಯಮಕ್ಕೆ ಪೂರಕವಾದ ಅಗತ್ಯ ಸಾಮರ್ಥ್ಯವಿದೆ. ವಿಶ್ವದಲ್ಲೇ ಅತಿ ಜನಪ್ರಿಯ ಪ್ರವಾಸೀ ಕೇಂದ್ರಬಿಂದುವಾಗಿ ಹೊರಹೊಮ್ಮಲಿದೆ. ಭಾರತ ದರಗಳ ಸ್ಫರ್ಧೆಯಲ್ಲಿ ಆರನೆಯ ಸ್ಥಾನ ಹಾಗೂ ಸುರಕ್ಷತೆ ಹಾಗೂ ಭದ್ರತೆಯ ವಿಚಾರದಲ್ಲಿ 39ನೆಯ ಸ್ಥಾನದಲ್ಲಿದೆ.
ಕರೋನಾ ಮತ್ತು ಪ್ರವಾಸೋದ್ಯಮ :-
ಈ ಕರೋನಾದಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಹಳ ತೊಂದರೆಯಾಗಿದೆ. ಈ ಕ್ಷೇತ್ರದಲ್ಲಿ ದುಡಿಯುವ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ.ಆದರೆ ಇತ್ತಿಚಿಗೆ ನ ದಿನಗಳಲ್ಲಿ ಈ ಕ್ಷೇತ್ರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.ಸಕಾ೯ರ ಕೂಡ ಪೂರಕವಾಗಿ ಸ್ಪಂದಿಸಿದ ಕಾರಣ ಇದು ಸಾಧ್ಯವಾಗಿದೆ.ದೇಶದ ಅಭಿವೃದ್ಧಿಯ ದಾರಿಯಲ್ಲಿ ಈ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಉಡುಪಿ ಜಿಲ್ಲೆ ಮತ್ತು ಪ್ರವಾಸೋದ್ಯಮ :-
ಈ ಜಿಲ್ಲೆಯಲ್ಲಿರುವ ಕಡಲ ತೀರಗಳು, ಧಾಮಿ೯ಕ , ಇತಿಹಾಸ ಕೇಂದ್ರಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಸಕಾ೯ರ ಹೆಚ್ಚಿನ ರೀತಿಯಲ್ಲಿ ಅನುದಾನ ನೀಡಿದರೆ ಉಡುಪಿಯನ್ನು ಮಾದರಿ ಪ್ರವಾಸಿ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಿದೆ.ಕೇವಲ ವಷ೯ಕ್ಕೆ ಒಂದು ಬಾರಿ ಆಚರಣಿ ಮಾಡದೆ ದಿನ ಪ್ರತಿ ಈ ದಿನವನ್ನು ಆಚರಣಿ ಮಾಡಬೇಕು.
ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು.
ಬರಹ : ರಾಘವೇಂದ್ರ ಪ್ರಭು,ಕವಾ೯ಲು, ಯುವ ಲೇಖಕ

ಕಡಲಕಿನಾರೆ ಬಿಡದ ಪ್ರವಾಸೋದ್ಯಮ ಪ್ರವಾಸಿಗೆ ಪ್ರದರ್ಶಿಸಬೇಕಿದೆ ಸಾಂಸ್ಕೃತಿಕ ಸಂಪತ್ತು

Thumbnail
Posted On: 27 Sep 2020, 03:06 AM

ಆನಂದ , ಆಶ್ಚರ್ಯ , ಆಮೋದಗಳನ್ನು ಏಕಕಾಲದಲ್ಲಿ ಪ್ರವಾಸಿಗೆ ನೀಡಬಲ್ಲ ಸೊಗಸಾದ ತಾಣಗಳಲ್ಲಿ ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಪ್ರಮುಖವಾಗಿ ಗುರುತಿಸಲ್ಪಡುತ್ತದೆ .
ವಿಫುಲವಾದ ಅವಕಾಶಗಳಿದ್ದರೂ ಪ್ರವಾಸೋದ್ಯಮ ಎಷ್ಟು ಅಭಿವೃದ್ಧಿಯಾಗಿದೆ , ಇಲ್ಲಿರುವ ಪ್ರವಾಸಿ ಆಕರ್ಷಣೆಯ ಎಷ್ಟು ವಿಷಯಗಳು ತೆರೆದುಕೊಂಡಿವೆ ಅಥವಾ ಅನಾವರಣಗೊಳಿಸಲಾಗಿದೆ ! ಗೊತ್ತಿಲ್ಲ . ಆದರೆ ಬಹುತೇಕ ನಮ್ಮ ಪ್ರವಾಸೋದ್ಯಮ ಕಡಲ ಕಿನಾರೆಯನ್ನು ಬಿಟ್ಟು ಪೂರ್ವಾಭಿಮುಖವಾಗಿ ನೋಡಿದ ಹಾಗೆ ಅನಿಸುವುದೇ ಇಲ್ಲ . ಹಾಗಾದರೆ ಕಡಲು - ಘಟ್ಟದ ನಡುವೆ ಏನಿದೆ .‌
ನಮ್ಮ ಉಭಯ ಜಿಲ್ಲೆಗಳಲ್ಲಿ ಸಮೃದ್ಧವಾಗಿ ಬೆಳೆದಿರುವ ಸಂಸ್ಕೃತಿಯು ವೈಶಿಷ್ಟ್ಯ ಪೂರ್ಣವಾದುದು . ಇಲ್ಲಿ ಜಾನಪದ ಮೂಲದ ಆಚರಣೆ , ನಂಬಿಕೆಗಳಿವೆ . ಆರಾಧನಾ ಕಲೆಗಳು ,ಪ್ರದರ್ಶನ ರಂಗ ಕಲೆಗಳಿವೆ .
ಪರ್ವತ , ಗುಡ್ಡ , ಬೆಟ್ಟ , ಜಲಪಾತ , ಝರಿ , ನದಿ , ಹೊಳೆ , ಸಮುದ್ರ ಎಲ್ಲವೂಇದೆ . ಆಹಾರ ಪದಾರ್ಥಗಳ ವೈವಿಧ್ಯತೆ ಇದೆ . ಆಕರ್ಷಕ ಉತ್ಪನ್ನಗಳಿವೆ .ಇತಿಹಾಸ ಹೇಳುವ ಪುರಾತನ ನಿರ್ಮಿತಿಗಳಿವೆ . ವೀರರ , ಪ್ರತಿಭಾವಂತರ , ಸಾಧಕರ , ದೈವೀಪುರುಷರ ಆಡುಂಬೊಲವಿದೆ . ಭವ್ಯವಾಗಿ ಬೆಳೆದ ದೇವಾಲಯ ಸಂಸ್ಕೃತಿಯಿದೆ . ಒಟ್ಟಿನಲ್ಲಿ ಮನಮೋಹಕ ಪರಿಸರದಲ್ಲಿ ವಾದನ - ನರ್ತನ - ಗಾಯನ - ರಂಗಿನ ಹಿನ್ನೆಲೆಯೊಂದಿಗೆ ಪ್ರತಿದಿನ ದೈವ - ದೇವಲೋಕಗಳು , ನಾಗ - ಬ್ರಹ್ಮ ಸನ್ನಿಧಾನಗಳು ಸನ್ನಿಹಿತವಾಗುತ್ತವೆ ,ಪುರಾಣ ಪ್ರಪಂಚ ತೆರೆದುಕೊಳ್ಳುತ್ತದೆ.
ಇದನ್ನೆಲ್ಲ ನಮ್ಮ ಸಂಸ್ಕೃತಿ ಎಂಬ ಗೌರವದೊಂದಿಗೆ ಪ್ರವಾಸಿಗೆ ತೋರಿಸಬೇಕು . ವಿವಿಧ ಸೌಲಭ್ಯಗಳೊಂದಿಗೆ ಈ ಸಾಂಸ್ಕೃತಿಕ ಸಂಪತ್ತಿನ ಖಜಾನೆಯ ಬಾಗಿಲು ತೆರೆಯಬೇಕು . ಆಗ ನಮ್ಮ ಸಂಸ್ಕೃತಿ ಜಗಜ್ಜಾಹೀರಾಗುತ್ತದೆ . ಬಹುತ್ವದ , ಬಹು ಆಯಾಮಗಳುಳ್ಳ ಒಂದು ಸಂಸ್ಕೃತಿ ಗೌರವಯುತವಾಗಿ ಪ್ರಸ್ತುತಪಡುವುದು ಹೆಮ್ಮೆಯಲ್ಲವೆ . ಆದರೆ ಪ್ರಸ್ತುತಿ ಹೇಗಾಗುತ್ತಿದೆ ಗೊತ್ತಿಲ್ಲ . ಅಂತಹ ಯಾವುದೇ ಮಾಹಿತಿ ಇಲ್ಲ . ನದಿಯಲ್ಲಿ ಸಾಹಸದ , ರೋಚಕ ದೋಣಿಪ್ರವಾಸದ ಬಗ್ಗೆ ಕೇಳಿ ಬರುತ್ತದೆ , ಸಮುದ್ರದಲ್ಲಿ ಬೋಟಿಂಗ್ ನೋಡ ಸಿಗುತ್ತದೆ . ರೆಸಾರ್ಟ್ಗಗಳೂ ಇವೆ , ಅಷ್ಟಕ್ಕೆ ಸೀಮಿತವೇ ? ಗೊತ್ತಿಲ್ಲ . ಸಮುದ್ರ ಕಿನಾರೆ
ಸಮುದ್ರ ಎಂದರೆ ಭಯ ಭವ್ಯತೆಯನ್ನು ಹೊಂದಿ ಮನೆಸೂರೆಗೊಳ್ಳುವ ಒಂದು ವಿಸ್ಮಯ . ನದಿಗಳು ಸಾಗರ ಸಂಗಮಿಸುವ ಅಳಿವೆಗಳು ಪ್ರಕೃತಿ ನಿರ್ಮಿಸಿದ ಸುಂದರ ಪ್ರದೇಶವ . ನಿಸರ್ಗ ಸಹಜ ದ್ವೀಪಗಳು (ಕುದುರು) ಪ್ರವಾಸಿ ತಾಣಗಳು . ಹಿನ್ನೀರಿನ ನೋಟವು ಅಗಾಧ ಜಲರಾಶಿ . ಇಂತಹ ಆಕರ್ಷಣೀಯ ಪರಿಸರ ಪ್ರವಾಸಿ ತಾಣಗಳಾಗಿವೆ. ಧಾರ್ಮಿಕ ಕ್ಷೇತ್ರಗಳು
ಪ್ರಸಿದ್ಧ ದೇವಾಲಯಗಳು , ಪವಿತ್ರ ನದಿ ಸ್ನಾನ - ತೀರ್ಥಸ್ನಾನದ ನದಿ ದಡಗಳು , ನಾಗ ಸನ್ನಿಧಾನಗಳು , ಮಾರಿಗುಡಿಗಳು , ಬ್ರಹ್ಮಸ್ಥಾನಗಳು , ದೈವಸ್ಥಾನಗಳು , ಸಿರಿ ಕ್ಷೇತ್ರಗಳು (ಆಲಡೆಗಳು) ಧಾರ್ಮಿಕ ಮಹತ್ವಗಳೊಂದಿಗೆ ಯಾತ್ರಿಕರನ್ನು ಸೆಳೆಯುತ್ತವೆ . ಧಾರ್ಮಿಕ ಪ್ರವಾಸೋದ್ಯಮವನ್ನು ವಿಸ್ತರಿಸುವ ಸಾಧ್ಯತೆ ಇದೆ .
ಇಂತಹ ದೇವಾಲಯ , ದೈವಸ್ಥಾನಗಳಲ್ಲಿ ಶಿಲ್ಪಕಲೆಯ ಬೆಡಗುಇದೆ .ಮೂರ್ತಿಗಳು - ಕಲ್ಲಿನ ಲೋಹಗಳ ವಿಶಿಷ್ಟ ಕಲಾಕೃತಿಗಳು - ಕುಸುರಿ ಕೆಲಸದ ಮಣೆ ಮಂಚವುಗಳಿವೆ ,ದೈವಗಳ ಭಂಡಾರದಲ್ಲಿ ಅಪೂರ್ವ - ಪವಿತ್ರ ವಸ್ತುಗಳಿರುತ್ತವೆ . ಇವೆಲ್ಲದರ ಪ್ರದರ್ಶನಾವಕಾಶ ಒದಗಬೇಕು . ವಾರ್ಷಿಕ ಉತ್ಸವ ಸಂದರ್ಭಗಳಲ್ಲಿ ಇದು ಸಾಧ್ಯ.
ಪ್ರಾಚೀನ ಚರ್ಚ್ , ಮಸೀದಿಗಳು ಉಭಯ ಜಿಲ್ಲೆಗಳಲ್ಲಿವೆ .ಇಲ್ಲಿ ನಡೆಯುವ ಉರೂಸ್ , ಚರ್ಚ್ ನ ವಾರ್ಷಿಕ ಹಬ್ಬಗಳು ಹಾಗೂ ವಿಶಿಷ್ಟ ಆಚರಣೆ ಗಳು ಪ್ರವಾಸಿಗೆ ಆಕರ್ಷಣೀಯವಾಗಬಹುದು . ಪುರಾತನ ಚರ್ಚ್ ,ಮಸೀದಿಗಳ ಐತಿಹಾಸಿಕ ಮಹತ್ವ , ರಚನಾ ಶೈಲಿಗಳು ಮಹತ್ವಪೂರ್ಣವಾದುವೇ. ಐತಿಹಾಸಿಕ ಸ್ಥಳಗಳು
ಚರಿತ್ರೆಗೆ ಸಾಕ್ಷಿಯಾಗಿ ಉಳಿದಿರುವ ಅರಮನೆಗಳು , ಕೋಟೆಗಳ ಅವಶೇಷಗಳು , ಅಪೂರ್ವ ದಾರುಶಿಲ್ಪಗಳಿರುವ ಪ್ರಾಚೀನ ಮಠ ಮತ್ತು ಗುತ್ತಿನಮನೆಗಳು , ಚೌಕಿಮನೆಗಳು ,ಜಾನಪದ ವೀರರು ಹುಟ್ಟಿದ ಸ್ಥಳ - ನಡೆದಾಡಿದ ಪರಿಸರ - ಸಾಧಕ ವಿದ್ಯೆಕಲಿತ ಐಗಳಮಠ - ಗರಡಿಗಳು , ಪಾರ್ದನ - ಜಾನಪದಗಳಿಗೆ ಸಂಬಂಧಿಸಿದ ಸ್ಥಳಗಳು ಇತಿಹಾಸ , ಸಂಸ್ಕೃತಿ ಪ್ರೀತಿಯ ಪ್ರವಾಸಿಗಳ ಗಮನ ಸೆಳೆಯದಿದ್ದೀತೆ.
ಆಚರಣೆ - ಆರಾಧನೆ - ಕ್ರೀಡೆ
ಪ್ರಖ್ಯಾತ ದೈವಸ್ಥಾನಗಳ ವಿಶಿಷ್ಟ ಕೋಲ- ನೇಮ - ಮೆಚ್ಚಿ - ಗೆಂಡ , ನಾಗಮಂಡಲ - ಡಕ್ಕೆಬಲಿ - ಪಾಣರಾಟಗಳು ನಡೆಯುವಲ್ಲಿಗೆ ಆಸಕ್ತ ಯಾತ್ರಿಗಳನ್ನು ಕರೆದೊಯ್ದು ತೋರಿಸುವ ಅವಕಾಶವಿದೆ.
ದೇವಾಲಯಗಳ ವಾರ್ಷಿಕ ಜಾತ್ರೆ , ಕೋಲ - ನೇಮದ ಬಳಿಕ‌ ವರ್ಷಂಪ್ರತಿ ವಾಡಿಕೆಯಂತೆ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕ , ಕಂಬಳಗಳನ್ನೂ ಪ್ರವಾಸಿಗಳಿಗೆ ತೋರಿಸುವ ಸಾಧ್ಯತೆಇದೆ . ತೆಂಗಿನಕಾಯಿ ಕಟ್ಟುವ, ಬೇಟೆಯಾಡುವ (ಕೆಡ್ಡಸ ಬೋಂಟೆ) ಮುಂತಾದ ಜಾನಪದ ಕ್ರೀಡೆಗಳನ್ನೂ ಏರ್ಪಡಿಸಿ ಪ್ರದರ್ಶಿಸಬಹುದು .
ವಾದನ - ನರ್ತನ ವೈಭವ
ವಾದನ - ನರ್ತನಗಳು ಸಂತೋಷ , ಸಂಭ್ರಮದ ಸಂಕೇತಗಳಾಗಿ , ದೈವ - ದೇವರ ಸೇವೆಯ ಪ್ರಧಾನ ಅಂಗವಾಗಿ ರೂಢಿಯಲ್ಲಿವೆ . ಧಾರ್ಮಿಕ - ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೈಭವವನ್ನು ಒದಗಿಸಲು ವಾದನ - ನರ್ತನ ಪ್ರಮುಖವಾದುದು.
ಜಾನಪದ ನಾಗಸ್ವರ , ಕೊಳಲು ಸಹಿತ ಬಾಯಿಯಿಂದ ಊದಿ ನುಡಿಸುವ ವಾದ್ಯಗಳು ,ಸಮ್ಮೇಳ ,ತಾಸ್ ಮಾರ್ , ದುಡಿ ತೆಂಬರೆ, ಡಕ್ಕೆ ,ದಿಡ್ಂಬು , ನಗರಿ , ದೋಲು ಮತ್ತು ಬ್ಯಾಂಡ್ ಸೆಟ್ ಮುಂತಾದ ಸಾಂಪ್ರದಾಯಿಕ ಜಾನಪದ ಚರ್ಮವಾದ್ಯಗಳು ನಮ್ಮ ಆಚರಣೆಗಳಲ್ಲಿದ್ದು ಆಕರ್ಷಣೀಯವಾಗಿವೆ , ಇವು ಪ್ರವಾಸಿಗರ ಮುಂದೆ ಪ್ರದರ್ಶಿಸುವಂತಹದ್ದು.
ಕರಾವಳಿಯ ಗಂಡುಕಲೆ ಯಕ್ಷಗಾನದ ವರ್ಣ - ವಾದನ - ನರ್ತನ - ಸಾಹಿತ್ಯ ವೈಭವ,ಬೂತಾರಾಧನೆ ರಮ್ಯಾದ್ಭುತ ಸೊಗಸು , ನಂಬಿಕೆ ಆಧರಿಸಿದ ಉಪಾಸನಾ ಪದ್ಧತಿ ,ನಾಗಮಡಲ - ಡಕ್ಕೆಬಲಿಗಳಲ್ಲಿರುವ ನಾಟ್ಯ ,ವಾದನ ಮತ್ತು ಬಣ್ಣ ಹೀಗೆ ಬಣ್ಣದದ ಬಣ್ಣನೆಗೆ ಬದಲಿಲ್ಲದ ಗಮನ ಸೆಳೆಯುವ ಆರಾಧನಾ ರಂಗಕಲೆಗಳು ,ರಂಗಕಲೆಗಳು ನಮ್ಮಲಿವೇ.
ಆಹಾರದ ವಿವಿಧತೆ ನಮ್ಮಲಿವೆ , ಅವುಗಳು ಅದರದ್ದೆ ಆದ ರುಚಿಯಿಂದ ವಿಶೇಷ ಖ್ಯಾತಿಯನ್ನು ಪಡೆದಿವೆ . ಕಡಲಿನಿಂದ ದೊರೆಯುವ ಫ್ರೆಶ್ ,ಶುದ್ದ ಮೀನು ಕರಾವಳಿಯ ವಿಶೇಷ .ಈ ಆಹಾರ ವೈವಿಧ್ಯ ವನ್ನು ಪ್ರವಾಸಿಗಳನ್ನು ಕರೆದೊಯ್ಯುವಲ್ಲಿ ಸುಲಭ ಲಭ್ಯವಾಗುವಂತೆ ಒದಗಿಸಬಹುದು .
ಕರಾವಳಿಯ ಉತ್ಪನ್ನಗಳು
ನಮ್ಮ ಕರಾವಳಿ ಸೀಮೆಯ ಉತ್ಪನ್ನಗಳನ್ನು ಸಂದರ್ಭಗಳಲ್ಲಿ ಪ್ರದರ್ಶಿಸಿ ವ್ಯವಹಾರವನ್ನು ನಡೆಸುವ ಸಾಧ್ಯತೆಗಳಿವೆ . ಕೈಮಗ್ಗದ ಬಟ್ಟೆಗಳು , ಜಾನಪದ ಸೊಗಸುಳ್ಳ ಚಿನ್ನ - ಬೆಳ್ಳಿಯ ಆಭರಣಗಳು , ದೈವ ದೇವರ ಮುಖ , ಮೂರ್ತಿ , ಆಭರಣಗಳು , ಪಂಚಲೋಹ - ಕಂಚಿನ ಮೂರ್ತಿಗಳು,
ಪಾತ್ರೆಗಳು ಕಬ್ಬಿಣದ ಚೂರಿ ,ಕತ್ತಿ ,ಕೊಡಲಿ , ಬೀಗಗಳು ಮತ್ತು ಮರದ ನಿತ್ಯೋಪಯೋಗಿ ವಸ್ತಗಳಾದ ಸಂಬಾರದ ಮರಿಗೆ , ಸೇರು , ಪಾವು , ಕಳಸೆ ,ಕಡೆಗೋಲು , ಮಣೆ ,ಮೆಟ್ಟುಕತ್ತಿ ,ಹೆರೆಮಣೆ ಹಾಗೂ ಕರಾವಳಿಯ ಸೊಗಡಿನ ಪೀಠೋಪಕರಣ ಗಳನ್ನು ಪ್ರದರ್ಶಿಸಿ ಪ್ರವಾಸಿಗಳು ಖರೀದಿಸುವಂತೆ ಮಾಡ ಬಹುದು .
ಪ್ರಕೃತಿ ಜನ್ಯ ಮೂಲವಸ್ತುಗಳಿಂದ ಸಿದ್ಧಗೊಳಿಸುವ ಹೆಡಿಗೆ ,ಗೆರಸೆ , ಬುಟ್ಟಿ ಹುರಿಹಗ್ಗ , ನಾರಿನಹಗ್ಗ , ಬೀಳಿನ ಸಣ್ಣ ಹೆಡಿಗೆ ಮುಂತಾದುವುಗಳನ್ನು ಪ್ರವಾಸಿಗರು ನೆರೆಯುವ ಕಡಲಕಿನಾರೆಯಲ್ಲಿ , ಜಾತ್ರೆಗಳಲ್ಲಿ ,ಕೋಲ- ನೇಮಗಳಲ್ಲಿ ಸುಲಭವಾಗಿ ಲಭಿಸುವಂತೆ ಮಾಡಬಹುದು . ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವಂತಾಗುವುದಿಲ್ಲವೇ?.
ಸಾಂಸ್ಕೃತಿಕ ಭವ್ಯತೆ
ಹೀಗೆ ವಿವಿಧ ಲಭ್ಯ ಆಕರಗಳನ್ನು ಬಳಸಿಕೊಂಡು ಪ್ರವಾಸಿಗಳನ್ನು ಆಕರ್ಷಿಸಬಹುದು .ನಮ್ಮದೆನ್ನುವ ಸಾಂಸ್ಕೃತಿಕ ಭವ್ಯತೆ ನಮ್ಮಲ್ಲಿವೆ. ಅವುಗಳನ್ನು ಪ್ರದರ್ಶಿಸಬೇಕು , ವಿವರಿಸಬೇಕು , ಯಾತ್ರಿಗಳನ್ನು ಸೆಳೆಯುವ ಕೆಲಸವಾಗಬೇಕು.
ಇಂತಹ ಪ್ರದರ್ಶನಗಳಿಂದ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ನೋವಾಗಬಾರದು .ಇತಿಹಾಸವನ್ನು ತಿರುಚಬಾರದು .ಈ ಧಾರ್ಮಿಕ ,ಐತಿಹಾಸಿಕ , ಜಾನಪದ ಸಂಪತ್ತನ್ನು ಗೌರವದಿಂದ ನಮ್ಮ ಪೂರ್ವಸೂರಿಗಳ ಸಾಂಸ್ಕೃತಿಕ ಕೊಡುಗೆ ಎಂದು ಪ್ರವಾಸಿಯ ಮುಂದೆ ಪ್ರದರ್ಶಿಸಬೇಕು.
ವರ್ಣ , ವರ್ಗ ತಾರತಮ್ಯ ಪರಿಗಣಿಸದೆ ಪ್ರಶಸ್ತವಾದುದನ್ನು ಸ್ವೀಕರಿಸುವ , ಪ್ರಚುರಪಡಿಸುವ , ಅಳವಡಿಸಿಕೊಳ್ಳುವ ವಿಶಾಲಮನೋಭಾವ ಅಗತ್ಯ .
ಬರಹ : ಕೆ. ಎಲ್.ಕುಂಡಂತಾಯ