Updated News From Kaup
ಪೇಜಾವರ ವಿಶ್ವ ಪ್ರಸನ್ನ ತೀರ್ಥರಿಂದ ಒಣ ಹುಲ್ಲು ಅಭಿಯಾನಕ್ಕೆ ಚಾಲನೆ
Posted On: 15 Nov 2020, 05:04 PM
ಕಾಮದೇನು ಗೋಸೇವಾಸಮಿತಿ ಮಂದಾರ್ತಿ ನೇತ್ರತ್ವದಲ್ಲಿ ಅನಾಥ ಗೋವುಗಳ ಸಂರಕ್ಷಣೆ ಮಾಡುತ್ತಿರುವ ಗೋಶಾಲೆಗಳಿಗೆ ಮೇವನ್ನು ನೀಡುವ ಗೋವಿಗಾಗಿ ಮೇವು ಅಭಿಯಾನ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದು ಗೋಪೂಜಾ ದಿನವಾದ ಇಂದು ಪೇಜಾವರ ವಿಶ್ವಪ್ರಸನ್ನ ತೀರ್ಥರುಗೋಪೂಜೆ ಮಾಡಿ ಒಣಹುಲ್ಲು ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಶ್ರೀಪಾದರು ಉಡುಪಿ ಜಿಲ್ಲೆಯಲ್ಲಿ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಯವರ ನೇತ್ರತ್ವದಲ್ಲಿ ಆರಂಭಗೊಂಡ ಗೋವಿಗಾಗಿ ಮೇವು ಅಭಿಯಾನ ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲೂ ಯಶಸ್ವಿಯಾಗಿರುವುದು ಹೆಮ್ಮೆಯ ವಿಚಾರ ಎಂದರು ಹಾಗೇಯೇ ಒಣಹುಲ್ಲು ಅಭಿಯಾನ ಇಂದಿನಿಂದ ಆರಂಭಗೊಂಡಿದ್ದು ಜಿಲ್ಲೆಯ ಎಲ್ಲಾ ಸಂಘಟನೆಗಳು ಭಾಗವಹಿಸಿ ಗೋಪಾಲಕ್ರಷ್ಣನ ಅನುಗ್ರಹಕ್ಕೆ ಪಾತ್ರರಾಗಿ ಎಂದರು, ಈ ದಿನದ ಪ್ರಥಮ ಸೇವೆಯಾಗಿ ಉಡುಪಿ ಶಾಸಕಾರದ ರಘುಪತಿ ಭಟ್ ಅವರು ಗೌರವ ಅದ್ಯಕ್ಷರಾಗಿರುವ ಕರಂಬಳ್ಳಿ ಪ್ರೆಂಡ್ಸ್ ತಾವೇ ಹಡಿಲು ಬಿದ್ದ ಭೂಮಿಯಲ್ಲಿ ಬೆಳೆದ ಒಣಹುಲ್ಲನ್ನು ಶ್ರೀಗಳಿಗೆ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಗೋವಿಗಾಗಿ ಮೇವು ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ,ಉಡುಪಿ ನಗರಸಭಾ ಸದಸ್ಯ ಗಿರಿಧರ್ ಆಚಾರ್ಯ ಕರಂಬಳ್ಳಿ,ಸಂಸ್ತೆಯ ಸ್ಥಾಪಕಾದ್ಯಕ್ಷರಾದ ಪ್ರಸನ್ನ ಶೆಟ್ಟಿ ,ಹಿರಿಯ ಅಂಕಣಕಾರ ರಾಘವೇಂದ್ರ ಪ್ರಭು ಕರ್ವಾಲ್ ,ಗೋವಿಗಾಗಿ ಮೇವು ಅಬಿಯಾನದ ಉಲ್ಲಾಸ್ ಅಮೀನ್ ಕೂರಾಡಿ,ಪವನ್ ಶೆಟ್ಟಿ ಐರೋಡಿ ಉಪಸ್ಥಿತರಿದ್ದರು.
ರಂಗವಲ್ಲಿಯಲ್ಲಿ ದೇವರ ಚಿತ್ರವ ಮೂಡಿಸುವ ಕಲಾಕಾರ ಹರೀಶ್ ಶಾಂತಿ
Posted On: 15 Nov 2020, 02:40 PM
ನಾವು ಒಬ್ಬ ಕಲಾವಿದನ ಬಗ್ಗೆ ತಿಳಿಯುವ ಮುಂಚೆ ಮತ್ತು ಕಲೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅವಶ್ಯಕತೆ ಖಂಡಿತವಾಗಿ ಇದೆ. ಕಲೆಯ ಬಗ್ಗೆ ಚೊಕ್ಕದಾಗಿ ಹೇಳುವುದಾದರೆ ಮಾನವನ ವಿಶಿಷ್ಟ ಚಟುವಟಿಕೆಯನ್ನು ಕಲೆ ಅಂತ ಹೇಳಬಹುದು. ಕಲಾವಿದನೆಂದರೆ ಕಲೆಯನ್ನು ಸೃಷ್ಟಿಸುವವ, ಅಭ್ಯಾಸ ಮಾಡುವವ ಅಥವಾ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ. ಎಲ್ಲಾ ರೀತಿಯಾದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರನ್ನು ಕಲಾವಿದ ಅಂತ ಗುರುತಿಸಬಹುದು. ಮನದಿ ಮೂಡಿದ ಅಸ್ಥಿರ ಬಿಂಬಕ್ಕೆ ಸುಸ್ಥಿರ ರೂಪ ನೀಡುವವ, ಪದ ಮತ್ತು ರಾಗಕ್ಕೆ ನಿಲುಕ್ಕದ್ದನ್ನು ಬಣ್ಣಗಳ ಮೂಲಕ, ಕಂಡದ್ದನ್ನು ಕಂಡ ಹಾಗೆ ಕಾಣದ್ದನ್ನು ಕಾಣುವಹಾಗೆ ಬಿಂಬಿಸುವ, ಎಂತಹ ಮನಸ್ಸನ್ನು ಬೇಕಾದರೂ ಕೇಂದ್ರೀಕೃತ ಮಾಡಬಲ್ಲ, ಮನದಲ್ಲಿ ಭಕ್ತಿಭಾವ ಮೂಡಿಸಬಲ್ಲ ರಂಗೋಲಿ ಚಿತ್ರಕಾರ ಇವರೇ ಹರೀಶ್ ಶಾಂತಿ. ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಮಾತಿನಂತೆ ಸ್ವಾಧಿಸಿದವರಿಗೇ ಗೊತ್ತು ಈತನ ರಂಗೋಲಿಯ ಸೊಬಗು. ಮೂಲತ: ಬಂಟ್ವಾಳದ ಪಂಜಿಕಲ್ಲು ನಿವಾಸಿಯಾದ ಇವರು ದಿವಂಗತ ವಿಶ್ವನಾಥ ಪೂಜಾರಿ ಮತ್ತು ಸುಶೀಲಾ ದಂಪತಿಗಳ ದ್ವಿತೀಯ ಪುತ್ರ. ಪ್ರಾಥಮಿಕ ವಿದ್ಯಾಭ್ಯಾಸವನ್ನು ದಡ್ಡಲಕಾಡು ಹಾಗೂ ಪ್ರೌಢಶಿಕ್ಷಣವನ್ನು ಕ್ರಿಸ್ತಜ್ಯೋತಿ ಶಾಲೆ ಅಗ್ರಾರದಲ್ಲಿ ಮುಗಿಸಿ ತದನಂತರ ತಂದೆಯ ಆಸೆಯಂತೆ ಮುಂದಿನ ವಿದ್ಯಾಭ್ಯಾಸವನ್ನು ಪೌರೋಹಿತ್ಯದೆಡೆಗೆ ಸಾಗಿಸಿದರು. ಕುದ್ರೋಳಿಯ ಗೋಕರ್ಣಾಥ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ಸರ್ಟಿಫಿಕೇಟ್ ಕೋರ್ಸ್ ಇನ್ ವೇದ ತಂತ್ರಮ್ ವಿಷಯವಾಗಿ ಅಭ್ಯಸಿಸಿದರು. ನಂತರ ಕಟೀಲಿನಲ್ಲಿ ಕೂಡ ತನ್ನ ವೈದಿಕ ಅಧ್ಯಯನವನ್ನು ಮುಂದುವರಿಸಿ, ಕುದ್ರೋಳಿ ಗೋಕರ್ಣಾಥ ಕ್ಷೇತ್ರದಲ್ಲಿ ತನ್ನ ವೃತ್ತಿಜೀವನವನ್ನು ಆರಂಭಿಸಿದರು. ನಂತರ ಉಡುಪಿಯ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಕೂಡ ವೃತ್ತಿಗೈದಿರುತ್ತಾರೆ. ತದನಂತರ ಲೋಕೇಶ್ ಶಾಂತಿ ಮತ್ತು ವಸಂತ್ ಶಾಂತಿ ಎಂಬುವರೊಂದಿಗೆ ಜೊತೆಗೂಡಿರುತ್ತಾರೆ. ವೈದಿಕದ ಜೊತೆಯಲ್ಲಿ ಚಿತ್ರಕಲೆಯಲ್ಲೂ ಅಪಾರ ಆಸಕ್ತಿಯನ್ನು ಹೊಂದಿರುವ ಇವರು ವೈದಿಕತೆಗೆ ಸಂಬಂಧಿಸಿದಂತಹ ರಂಗೋಲಿಯನ್ನು ಬಿಡಿಸುವ ಮುಖಾಂತರವೇ ತನ್ನ ಆಸಕ್ತಿಯ ಕಲೆಯನ್ನು ಹೊರ ಚಿಮ್ಮಿಸಿದವರು. ಇವರ ಜೀವನವು ರಂಗೋಲಿ ಆಸಕ್ತಿಗೆ ಇನ್ನೂ ಹೆಚ್ಚು ಒಲವು ಮೂಡುವಲ್ಲಿ ವಸಂತ್ ಶಾಂತಿಯವರ ಪಾತ್ರವನ್ನು ಕೂಡ ಮುಖ್ಯವೆನ್ನಬಹುದು. ವಸಂತ್ ಶಾಂತಿಯವರ ಜೊತೆ ವೃತ್ತಿಗೂಡಿದಾಗ ಸಿಕ್ಕ ಅವಕಾಶಗಳು ಮತ್ತು ವಸಂತ್ ಶಾಂತಿಯವರ ಪ್ರೋತ್ಸಾಹವೇ ಉತ್ತಮ ರಂಗೋಲಿ ಕಲಾಕಾರರನ್ನಾಗಿಸಿದ್ದು ಅಂದರೆ ತಪ್ಪಿಲ್ಲ. ಸುಮಾರು ಹದಿನೈದು ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿರುವವರು ಇದುವರೆಗೂ ಸುಮಾರು ಎರಡು ಸಾವಿರದಿಂದ ಮೂರು ಸಾವಿರದವರೆಗೆ ರಂಗೋಲಿಗಳನ್ನು ಬಿಡಿಸಿ ಜನಮನ್ನಣೆ ಗಳಿಸಿದ್ದಾರೆ. ಇವರು ಕೇವಲ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ತನ್ನ ಪ್ರತಿಭೆಯನ್ನು ಗುರುತಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ ವೃತ್ತಿಯಲ್ಲಿ ಪೌರೋಹಿತ್ಯ ಆರಿಸಿಕೊಂಡ ಇವರು ಇನ್ನೊಂದು ಅದ್ಭುತವನ್ನು ಹೊಂದಿದ್ದಾರೆ. ಅದೇನೆಂದರೆ ಮಂತ್ರ ಪಠಣೆಗೆ ಕುಳಿತರೆ ಎಲ್ಲರನ್ನೂ ನಿಬ್ಬೆರಗಾಗಿಸಿ ಮಂತ್ರಮುಗ್ಧರನ್ನಾಗಿಸುವ ಸ್ವರ ಮಾಂತ್ರಿಕ ಅನ್ನಬಹುದು. ಇವರ ಇಂತಹ ಅತ್ಯದ್ಭುತ ಪ್ರತಿಭೆಗೆ ಇನ್ನಷ್ಟು ಜನ ಮನ್ನಣೆ ಸಿಗಬೇಕು. ಇನ್ನಷ್ಟು ಎತ್ತರಕ್ಕೆ ಬೆಳೆಯಲು ಇಂತಹ ಕಲಾರತ್ನಗಳಿಗೆ ನಾವೆಲ್ಲ ಪ್ರೋತ್ಸಾಹಕರಾಗಿರಬೇಕು. ನಮ್ಮ ನಾಡಿನಲ್ಲಿ ಕಲೆಯು ನಿರಂತರವಾಗಿ ಹರಿಯುವಂತಾಗಬೇಕು. ಲೇಖನ :ಸಂಧ್ಯಾ ಬಂಟ್ವಾಳ್
ಕನ್ನಡ ಸಂಘ ಕಾಂತಾವರ : ಡಿಸೆಂಬರ್ 13 ರಂದು ಕನ್ನಡ ಸಂಘದ 2020 ರ ಸಾಲಿನ ದತ್ತಿನಿಧಿಗಳ ಪ್ರಶಸ್ತಿ ಪ್ರದಾನ ಸಮಾರಂಭ
Posted On: 15 Nov 2020, 11:25 AM
ಕನ್ನಡ ಸಂಘ ಕಾಂತಾವರ ಕನ್ನಡ ಸಂಘದ 2020 ನೇ ಸಾಲಿನ ದತ್ತಿನಿಧಿಗಳ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 13, ಮಧ್ಯಾಹ್ನ 3 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿ ಮಾನ್ಯರು : ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಪ್ರಶಸ್ತಿಯನ್ನು ಭಾರತೀಯ ಭಾಷಾ ಗಣಕ ಪಿತಾಮಹ ನಾಡೋಜ ಕೆ. ಪಿ. ರಾವ್, ಭಾಷಾವಿಜ್ಞಾನಿ ಡಾ.ಯು.ಪಿ. ಉಪಾಧ್ಯಾಯರ ದತ್ತಿ ನಿಧಿಯ ಮಹೋಪಾಧ್ಯಾಯ ಪ್ರಶಸ್ತಿಯನ್ನು ವಿದ್ವಾಂಸ, ಚಿಂತಕ ಕೆ.ಎಲ್. ಕುಂಡಂತಾಯ, ಮೊಗಸಾಲೆ ಪ್ರತಿಷ್ಠಾನದ ದತ್ತಿನಿಧಿಯ ಕಾಂತಾವರ ಲಲಿತಕಲಾ ಪ್ರಶಸ್ತಿಯನ್ನು ಹಿರಿಯ ಸಾಹಿತಿ, ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕಾಂತಾವರ ಸರೋಜನಿ ನಾಗಪ್ಪಯ್ಯ ಈಶ್ವರಮಂಗಲ ಅವರ ದತ್ತಿ ನಿಧಿಯ ಕಾಂತಾವರ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ,ಚಿಂತಕ ಟಿ.ಎ.ಎನ್.ಖಂಡಿಗೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಂಪತಿ ದಿವಂಗತ ಕೆ. ಬಾಲಕೃಷ್ಣ ಆಚಾರ್ಯ ಮತ್ತು ಶ್ರೀಮತಿ ವಾಣಿ ಬಿ. ಆಚಾರ್ಯ ಅವರ ದತ್ತಿ ನಿಧಿಯ ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿಯನ್ನು ಅಪರೂಪದ ಶಿಕ್ಷಕ ಮುರಳಿ ಕಡೆಕಾರ್, ಉಡುಪಿ ಪಡೆಯಲಿದ್ದಾರೆ ಎಂದು ನಮ್ಮ ಕಾಪು ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
ಮರುಬಳಕೆಗೆ ಉಪಯುಕ್ತವಾದ ಕಡಿಮೆ ಖರ್ಚಿನ ಬಿದಿರಿನ ಗೂಡುದೀಪ
Posted On: 15 Nov 2020, 10:07 AM
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡದ ಸ್ಥಾಪಕಾಧ್ಯಕ್ಷರು ಆದ ಡಾ.ಕೀರ್ತಿ ಪಾಲನ್ ಅವರು ಬಿದಿರಿನ ಗೂಡುದೀಪವನ್ನು ಮಾಡಿ ಪರಿಸರ ಸ್ನೇಹಕ್ಕೆ ಮಾದರಿಯ ದೀಪಾವಳಿಯನ್ನು ಆಚರಿಸಲು ಮುಂದಾಗಿದ್ದಾರೆ. ಕೇವಲ 250 ರೂಪಾಯಿ ಖರ್ಚು ಮಾಡಿ ತಯಾರಿಸಬಹುದಾದ ಈ ಬಿದಿರಿನ ಗೂಡುದೀಪವು ಮುಂದೆ ದೀಪಾವಳಿಯ ನಂತರ ಬಿದಿರಿನ ಬುಟ್ಟಿಯನ್ನು ಮನೆಯಲ್ಲಿ ಮರುಬಳಕೆ ಮಾಡಬಹುದಾಗಿದೆ, ಹಾಗೂ ನಶಿಸುತ್ತಿರುವ ಬಿದಿರಿನ ಬುಟ್ಟಿ ತಯಾರಿಕರಿಗೆ ಇದರಿಂದ ಪ್ರಯೋಜನ ಸಿಗಲಿದೆ.
ಆನ್ ಲೈನ್ ನಲ್ಲಿ ಮಕ್ಕಳು ಹಾದಿ ತಪ್ಪದಿರಲಿ : ಪಾಲಕರೇ ಜೋಪಾನ
Posted On: 15 Nov 2020, 09:17 AM
ಆನ್ ಲೈನ್ ತರಗತಿಯ ಮೂಲಕ ಮಕ್ಕಳ ಸಾಮಾಜಿಕ ಜಾಲ ತಾಣಗಳ ಬಳಕೆ ಹೆಚ್ಚಾಗುತ್ತಿದೆ. ಹದಿಹರೆಯದ ವಯಸ್ಸಿನಲ್ಲಿ ಇದರ ಬಳಕೆಯಿಂದ ವಿಭಿನ್ನ ಪರಿಣಾಮಗಳು ಮನಸ್ಸಿನಲ್ಲಿ ಮೂಡುತ್ತವೆ ಇದರಿಂದ ಹದಿಹರೆಯದಲ್ಲಿ ಪಾತಕರು ಮಾಡುವ ಕೆಟ್ಟ ಕೆಲಸ ಈ ಸಮಯದಲ್ಲಿ ನಡೆಯುತ್ತಿದೆ ಇತ್ತಿಚೆಗೆ ಪ್ರೀತಿ ಪ್ರೇಮಕ್ಕೆ ಒಳಗಾಗಿ ಮನೆ ಬಿಟ್ಟು ತೆರಳುವುದು ಹಣಕ್ಕಾಗಿ ಅಪಹರಣದ ಕೇಸ್ ಗಳು ದಾಖಲಾಗುತ್ತಿರುವುದು ದುರಂತದ ವಿಷಯ. ಸೋಷಿಯಲ್ ಮೀಡಿಯಾಗಳ ಆಕಷ೯ಣಿಗೆ ಸಿಕ್ಕ ಮಕ್ಕಳು ಅದರ ಸಾಧಕ ಬಾಧಕಗಳ ಅರಿವಿಲ್ಲದೆ ಸಮಸ್ಯೆಗೆ ಸಿಲುಕುತ್ತಿದ್ದಾರೆ.ಈ ಜಾಲ ತಾಣದಲ್ಲಿ ತಮ್ಮ ವಿಭಿನ್ನ ಮಾದರಿಯ, ತರತರದ ಪೋಟೋವನ್ನು ಅಪಲೋಡ್ ಮಾಡಿ ವಿಡಿಯೋಗಳನ್ನು ಹರಿಬಿಟ್ಟು ಟ್ರೋಲ್ ಗೆ ಒಳಗಾಗುದನ್ನು ನಾವು ನೋಡುತ್ತಿದ್ದೆವೆ. ಇಂತಹ ಮುಗ್ದ ಶಾಲಾ ಮಕ್ಕಳ ಹಿಂದೆ ಕೆಡುಕರ ಗ್ಯಾಂಗ್ ಬಿದ್ದಿವೆ. ಪೋನ್ ಮಾಡಿ ಹೆದರಿಸುವುದು ಲೈಂಗಿಕ ದುಬ೯ಳಕೆ ಮುಂತಾದ ಸಮಾಜ ವಿರೋಧಿ ಕೃತ್ಯಕ್ಕೆ ಒಳಗಾಗಿ ದುಬ೯ಳಕೆ ಯಾಗುತ್ತಿದ್ದಾರೆ ಎಂದು ಅನೇಕ ಮಂದಿ ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಈ ರೀತಿಯ ಮಾನಸಿಕ ಹಿಂಸೆಯು ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀಳಿ ಕೊನೆಗೆ ಆತ್ಮಹತ್ಯೆಗೆ ಒಳಗಾಗುವ ಪ್ರಕರಣ ಹೆಚ್ಚುತ್ತಿವೆ. ಟ್ರೋಲ್ ಗೆ ಒಳಗಾದ ಮಕ್ಕಳ ಮನಸ್ಥಿತಿಯು ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿರುತ್ತದೆ. ಭಯಾನಕ ಸನ್ನಿವೇಶಕ್ಕೆ ಹೆದರಿ ಮನೋ ರೋಗಕ್ಕೆ ಒಳಗಾಗಿ ಜೀವನವನ್ನೇ ಬಲಿ ಪಡೆಯುವ ಸ್ಥಿತಿಯಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪೋಷಕರು ಯಾವ ರೀತಿ ಎಚ್ಚರಿಕೆ ವಹಿಸಬೇಕು : ಪೋಷಕರು ಈ ಸಮಯದಲ್ಲಿ ತಮ್ಮ ಮಕ್ಕಳ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ.ಮಕ್ಕಳು ಮೊಬೈಲ್ ಯಾವ ರೀತಿ ಬಳಸುತ್ತಿದ್ದಾರೆ, ಆನ್ ಲೈನ್ ತರಗತಿಯಲ್ಲಿ ಪಾಠಕ್ಕೆ ಗಮನ ನೀಡುತ್ತಾರೆಯೇ? ಎಂಬುದನ್ನು ಸೂಕ್ಮವಾಗಿ ಗಮನ ಹರಿಸಬೇಕು. ಪಾಠದ ವಿಷಯ ಅಲ್ಲದೆ ಬೇರೆ ಯಾವ ವಿಷಯವನ್ನು ಸಚ್೯ ಮಾಡುತ್ತಿದ್ದಾರೆ ನೋಡಬೇಕು ಯಾವುದೇ ವಿಷಯವಿದ್ದರೂ ಮಕ್ಕಳು ಸಂಕೋಚ ರಹಿತವಾಗಿ ಪೋಷಕರ ಬಳಿ ಹೇಳುವ ವಾತಾವರಣದ ನಿಮಾ೯ಣದ ಅಗತ್ಯವಿದೆ.ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ ಪಾಠದೊಂದಿಗೆ ಆಟ ಅದೇ ರೀತಿ ಉತ್ತಮ ಹವ್ಯಾಸ ಬೆಳೆಸುವ ಕೆಲಸವಾಗಬೇಕು. ರಜೆಯ ಕಾರಣ ಮಕ್ಕಳು ಇಡೀ ದಿನ ಮೊಬೈಲ್ ನಲ್ಲಿ ಇರದೆ ಹೊರಗಡೆ ಆಟವಾಡಲು ಬಿಡಬೇಕು .ಮಾನಸಿಕ ತಜ್ಞರ ಅಭಿಪ್ರಾಯದಂತೆ ಈ ರಜೆಯ ಅವಧಿಯಲ್ಲಿ ಮಕ್ಕಳಲ್ಲಿ ಬೊಜ್ಜುತನ, ಆಲಸ್ಯ ಹೆಚ್ಚಾಗಿ ವ್ಯಕ್ತಿತ್ವದಲ್ಲಿ ಗಮನಾಹ೯ ಬದಲಾವಣೆಯಾಗಿದೆ. ಹೀಗಾಗಿ ಆನ್ ಲೈನ್ ಮಧ್ಯದಲ್ಲಿ ಮಕ್ಕಳ ಮನೋವಿಕಾಸ ನಡೆಯುವಂತೆ ನೋಡಬೇಕು. ಆದಷ್ಟು ಬೇಗ ಶಾಲೆ ಪ್ರಾರಂಭವಾಗಿ ಮಕ್ಕಳ ಹಳೆ ಯ ದಿನಗಳು ಬರಲಿ. ✍️ ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ಶಿರ್ವದ ಕಡಂಬುವಿನಲ್ಲಿ ರಾರಾಜಿಸುತ್ತಿದೆ 12 ಅಡಿ ಎತ್ತರದ ಗೂಡುದೀಪ
Posted On: 14 Nov 2020, 11:55 PM
ದೀಪಾವಳಿ ಸಂದರ್ಭದಲ್ಲಿ ಶಿರ್ವ ಸಮೀಪದ ಕಡಂಬುವಿನ ಯುವಕರ ತಂಡವೊಂದು ಬರೋಬ್ಬರಿ 12 ಅಡಿ ಎತ್ತರವುಳ್ಳ ಗೂಡು ದೀಪವೊಂದನ್ನು ತಯಾರು ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನಮೋ ಫ್ರೆಂಡ್ಸ್ ಕಡಂಬು ತಂಡದ ಯುವಕರು ಸೇರಿ ಶಿರ್ವ ಕಡಂಬು ಸರ್ಕಲ್ ನಲ್ಲಿ ಗೂಡುದೀಪವನ್ನು ಹಾಕಿದ್ದಾರೆ. ಸಮಾನ ಮನಸ್ಕ ಯುವಕರು ಸೇರಿ ತಯಾರಿಸಲಾಗಿರುವ ಈ ಗೂಡುದೀಪ ಜನರಿಗೆ ಆಕರ್ಷಕವಾಗಿ ಕಂಡಿದ್ದು ಜನರು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಆಕಾಶ ಬುಟ್ಟಿ ಯನ್ನು ಕೊರೋನಾ ಸಂಕಷ್ಟ ಎಂಬ ಕತ್ತಲಲಿ ಇರುವ ಜನರಿಗೆ ಬೆಳಕನ್ನು ನೀಡುವ ಸಂದೇಶವಾಗಿದೆ ಎಂದು ತಂಡದ ಮುಖ್ಯಸ್ಥ ರಕ್ಷಿತ್ ಪೂಜಾರಿ ಶಿರ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಟರಿ ಇನ್ನಂಜೆ : ಸಂತೆಕಟ್ಟೆ ಸ್ಪಂದನ ಭಿನ್ನ ಸಾಮರ್ಥ್ಯ ಅನಾಥಾಶ್ರಮ ಭೇಟಿ
Posted On: 14 Nov 2020, 07:11 PM
ರೋಟರಿ ಸಮುದಾಯದಳ ಇನ್ನಂಜೆ. ಮಕ್ಕಳ ದಿನಾಚರಣೆಯ ಹಾಗೂ ದೀಪಾವಳಿಯ ಪ್ರಯುಕ್ತ ಇಂದು ಸ್ಪಂದನ ಭಿನ್ನ ಸಾಮರ್ಥ್ಯ ಅನಾಥಶ್ರಮ ಸಂತೆಕಟ್ಟೆ ಇಲ್ಲಿ 45 ಆಶ್ರಮವಾಸಿಗಳಿಗೆ ದಿನಬಳಕೆಯ ಸಾಮಗ್ರಿ ಹಾಗೂ ನಗದು ನೀಡಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. Rtn. ನವೀನ್ ಅಮೀನ್ ಶಂಕರಪುರ ಮಾತನಾಡಿ ಶುಭಹಾರೈಸಿದರು. Rcc ಸಂಯೋಜಕರಾದ Rtn ಮಾಲಿನಿ ಶೆಟ್ಟಿ, ಅಧ್ಯಕ್ಷರಾದ rcc ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ RCC ಮನೋಹರ್ ಕಲ್ಲುಗುಡ್ಡೆ, ಉಪಾಧ್ಯಕ್ಷರಾದ ದಿವೇಶ್ ಶೆಟ್ಟಿ ಹಾಗೂ ಸಂದೀಪ್ ಪೂಜಾರಿ, ಜೇಸುದಾಸ್, ಸಂದೀಪ್ ಆಚಾರ್ಯ, ವಜ್ರೆಶ್ ಉಪಸ್ಥಿತರಿದ್ದರು.
ಗೋ ಪೂಜೆ : ಇಂದ ಕಬೆತಿಯೇ ಕಿದೆ ದಿಂಜ ಕೂಡುಲ
Posted On: 14 Nov 2020, 05:31 PM
"ಇಂದ ಕಬೆತಿಯೆ...ದೇವೆರೆನ್ ತೂಲ. ಅಂಗಾರ್‌ಡ್ ಲಾಂಬು ಬನ್ನೆಟ್ಟ ,ಕೊಂಬುಡು ನರೆ ಬನ್ನೆಟ್ಟ ಪದ್‌ರಾಡ್ ಪೊಣ್ಣುಕಂಜಿ - ಪದ್‌ರಾಡ್ ಆಣ್ ಕಂಜಿ ಪಾಡ್ದ್ ನಿನ ಉಲ್ಲಾಯಗ್ ಪೇರನುಪ್ಪು ಕೊರೊಂದು ,ಈ ಪೇರನುಪ್ಪು ತಿನೊಂದು ಬಹುಕಾಲ ಬಾಲ್ಲ.." ಅಥವಾ "ತುಡಾರ್ ಮಗ ತುಡಾರ್ ,ಕಲ್ಲಡಿತ ನೀರ್‌ಪರ್ಲ,ಮುಲ್ಲಡಿತ ಪಂತಿ ಮೇಲ ,ಬಂಜಿ ದಿಂಜ ಮೇಲ, ಕಿದೆ ದಿಂಜ ಕೂಡುಲ, ತುಡಾರ್ ಮಗ ತುಡಾರ್ ". ಹೀಗನ್ನುತ್ತಾ ( ಹಲವು ಪಾಠಾಂತರಗಳಿವೆ) ಗೋಮಾತೆಗೆ ಗೆರಸೆಯಲ್ಲಿ ಸಿದ್ಧಪಡಿಸಿದ ಸೊಡರನ್ನು ಅಥವಾ ತುಡಾರನ್ನು ತೋರಿಸುವ ,ಕೃತಜ್ಞತಾರ್ಪಣೆ ಸಲ್ಲಿಸುವ ನಮ್ಮ ಮಣ್ಣಿನ ಸಂಪ್ರದಾಯ ದೀಪಾವಳಿ ಹಬ್ಬದ ಒಂದು ಮುಖ್ಯ ಸಂದರ್ಭ. ಗೋಮಾತೆಗೆ ಮಾತ್ರವಲ್ಲ ವಿಶೇಷವಾಗಿ ಕೋಣ - ಎತ್ತುಗಳಿಗೂ ದೀಪ ತೋರಿಸಿ ಹೇಳುವ ಕ್ರಮವಿದೆ, ಇವುಗಳೆ ಪ್ರಧಾನವೂ ಹೌದು . ಪ್ರಾಣಿ - ಮಾನವ ಸಂಬಂಧ ಪುರಾತನವಾದುದು .ಕೃಷಿ - ಜೀವನಾಧಾರ ಪಶು ಸಂದೋಹಕ್ಕೆ ಪೂಜೆ ಸಲ್ಲಿಸುತ್ತಾ ಹೊಟ್ಟೆ ತುಂಬ "ಪರ್ಬದ ಅಡ್ಡೆ" ( ದೀಪಾವಳಿಯ ವಿಶೇಷ ತಿಂಡಿ - ಪೊಟ್ಟು ಗಟ್ಟಿ) ಮುಂತಾದುವುಗಳನ್ನು ತಿನ್ನಿಸಿ ಧನ್ಯರಾಗುವ ನಾವು ಪ್ರತಿವರ್ಷ ಈ ಪ್ರಾಚೀನ ಸಂಬಂಧವನ್ನು ನೆನಪಿಸಿಕೊಳ್ಳುತ್ತೇವೆ .ಇದೇ ಮೂಲವಾಗಿ ,ಈ ಪರಿಕಲ್ಪನೆಯೇ ಆಧಾರವಾಗಿ "ತುಡಾರ್" ( ಸೊಡರು) ಆರಾಧನೆಯ ಮರುದಿನ "ಗೋಪೂಜೆ" ಎಂಬ ವೈದಿಕ ವಿಧಾನದ ಪೂಜಾ ಶೈಲಿ ನಮ್ಮಲ್ಲಿ ರೂಢಗೊಂಡಿರಬೇಕು. ನಮ್ಮಲ್ಲಿ ಮೂಲತಃ ದೀಪಾವಳಿಯ ಮರುದಿನದ ಪ್ರತ್ಯೇಕ ಗೋಪೂಜೆ ಎಂದಿಲ್ಲ .ದೀಪಾವಳಿಯ ರಾತ್ರಿ ಹಟ್ಟಿಕೊಟ್ಟಿಗೆಗೆ ತೋರಿಸುವ "ತುಡಾರ್", ಅದೇ ಸಮಷ್ಟಿಯ ಕೃಷಿ ಸಹಾಯಿ ಪಶುಗಳಪೂಜೆ . ಹೆತ್ತ ತಾಯಿಯ ಬಳಿಕ ಜೀವನ ಪೂರ್ತಿ ಹಾಲಿಗೆ ನಾವು ದನಗಳನ್ನೆ ಆಶ್ರಯಿಸ ಬೇಕು ತಾನೆ? ಆದುದರಿಂದ ದನವು ಮಾತೃ ಸಮಾನವಾದುದು ಎಂಬ ಭಾವದೊಂದಿಗೆ ಗೋಪೂಜೆ .ಜಾನಪದ - ಶಿಷ್ಟ ವಿಧಾನಗಳು ಈ ಆರಾಧನಾ ವಿಧಾನದಲ್ಲಿ ಸಮ್ಮಿಳಿತಗೊಂಡಿವೆ .ಆರಾಧನೆ ನಿರಂತರ ನಡೆದು ಬಂದಿದೆ ,ಇದರಲ್ಲಿ ವಿಮರ್ಶೆಗಳಿಲ್ಲ . ಇದೇ ನಮ್ಮ ಸಾಂಸ್ಕೃತಿಕ ಸೊಬಗು. ಗೋವುಗಳಲ್ಲಿ ಸಾಕ್ಷಾತ್ ಜನಪದ ಮನಸ್ಸಿನ ಜಗನ್ನಾಥನಾದ ಗೋಪಾಲಕೃಷ್ಣನೇ ಸನ್ನಿಹಿತನಿದ್ದು ಪೂಜೆಗೊಳ್ಳುತ್ತಾನೆ ಎಂಬುದು ಅನುಸಂಧಾನ .'ಸರ್ವೇ ದೇವಾಃ ಸ್ಥಿತಾ ದೇಹೇ' ಇದು ಗೋಮಾತೆಯನ್ನು ವೈದಿಕವು ಕೊಂಡಾಡಿದೆ . ಗೋಸಂಪತ್ತು : ಗೋಸಂಪತ್ತೇ ಐಶ್ವರ್ಯದ ಮಾನ ದಂಡವಾಗಿದ್ದ ಕಾಲವೊಂದಿತ್ತು .ಗೋದಾನವೇ ಶ್ರೇಷ್ಠ ದಾನವೆಂಬ ಒಪ್ಪಿಗೆ ಇಂದಿಗೂ ಇದೆ .ಅಪೂರ್ವ ವಸ್ತುಗಳನ್ನು ಪಡೆಯಲು ಗೋ ಸಮೂಹವನ್ನೇ ಪ್ರತಿಯಾಗಿ ಅಥವಾ ಮೌಲ್ಯವಾಗಿ ನೀಡಲಾಗುತ್ತಿತ್ತು .ವಧು - ವರ ದಕ್ಷಿಣೆಯಾಗಿ ಗೋವುಗಳನ್ನು ಕೊಡುತ್ತಿದ್ದ ಬಗ್ಗೆ ಪುರಾಣಗಳು ಕತೆ ಹೇಳುತ್ತವೆ .ಗೋವುಗಳನ್ನು ಶತ ,ಸಹಸ್ರ ಸಂಖ್ಯೆಯಲ್ಲಿ ಋಷಿಗಳಿಗೆ ನಮ್ಮ ಪುರಾಣಕಾಲದ ಅರಸರು ಬೇರೆ ಬೇರೆ ಕಾರಣಗಳಿಗೆ ದತ್ತಿಯಾಗಿ - ದಾನವಾಗಿ ಕೊಡುತ್ತಿದ್ದರೆಂದು ಕಥಾನಕಗಳು ವಿವರ ನೀಡುತ್ತವೆ . ಕಾಡಿನಲ್ಲಿ ಋಷಿ ಆಶ್ರಮಗಳಲ್ಲಿ ಸಹಸ್ರ ಸಂಖ್ಯೆಯ ವರಗೆ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದರು ,ಗುರುಕುಲ ಪದ್ಧತಿಯ ಶಿಕ್ಷಣದ ಕಾಲದಲ್ಲೂ ಗೋಸಂಪತ್ತು ಆಶ್ರಮಗಳಲ್ಲಿ ಇದ್ದುವು. ದನಗಳನ್ನು ಸಾಕುವುದು ,ಮನೆ ಮುಂಭಾಗ ಅವುಗಳಿಗೊಂದು ಕೊಟ್ಟಿಗೆ ,ಯಾವಕಾರಣಕ್ಕೂ ದನಗಳಿಗೆ ನೋವಾಗದಂತೆ ನೋಡಲಾಗುತ್ತಿತ್ತು .ಬೆಳಗ್ಗೆ ಎದ್ದೊಡನೆ ಹಟ್ಟಿಗೆ ಹೋಗಿ ದನಗಳ ಸಹಿತ ಜಾನುವಾರುಗಳ ಮೈಸವರಿ ಹುಲ್ಲು ಹಾಕುವುದು ಮನೆ ಯಜಮಾನನ ಆದ್ಯ ಕರ್ತವ್ಯವಾಗಿತ್ತು .ಗವ್ಯಗಳಿಗಂತೂ ಪರ್ಯಾಯ ಸುವಸ್ತುಗಳಿಲ್ಲ .ಹಾಗಾಗಿ ಗೋಮಾತೆ ಶ್ರೇಷ್ಠಳು .ಗವ್ಯ( ಹಾಲು, ಮೊಸರು , ಬೆಣ್ಣೆ - ತುಪ್ಪ , ಗೋಮೂತ್ರ ,ಗೋಮಯಗಳಲ್ಲಿ ಔಷಧೀಯ ಗುಣಗಳಿರುವಂತೆ ಹಸುವಿನ ನೆತ್ತಿಯಲ್ಲಿರುವ ಗೋರೋಚನವೂ ಔಷಧಿ. ಕೃಷ್ಣನ ಬದುಕು ಅರಳಿದ್ದು ಗೋಮಂದೆಯೊಂದಿಗೆ : ದ್ವಾಪರದ ಲೀಲಾಮಾನುಷ ಕೃಷ್ಣ ,ಭಗವಾನ್ ವಾಸುದೇವನ ಬದುಕು ಅರಳಿದ್ದೆ ಗಂಜಳ - ಸೆಗಣಿಯ ಸುವಾಸನೆಯ ನಡುವೆ .ಹಾಲು - ತುಪ್ಪ - ಬೆಣ್ಣೆ - ಮೊಸರುಗಳ ಸುಮಧುರ ಗಂಧದಲ್ಲಿ.ಕೃಷ್ಣ ಕೊಳಲು ನುಡಿಸಿ ಆಕರ್ಷಿಸಿದ್ದು ಮೂಕ ಗೋವುಗಳನ್ನು ,ಪ್ರೀತಿಸಿದ್ದು - ಒಡನಾಡಿದ್ದು ಗೋಮಂದೆಯನ್ನು ಹಾಗಾಗಿಯೇ ಕೃಷ್ಣ ಗೋಪಾಲಕೃಷ್ಣ . ಗೋವುಗಳನ್ನು ಕೊಂದ ದೋಷ ಬರಲಿ , ಕಾಶಿಯಲ್ಲಿ ಕಪಿಲೆಯನ್ನು ಕಡಿದು ಕೊಂದ ಪಾಪ ಪ್ರಾಪ್ತಿಯಾಗಲಿ ಮುಂತಾದ ಶಾಪಾಶಯಗಳು ಒಪ್ಪಂದ ,ದಾನ ಶಾಸನಗಳಲ್ಲಿ ಉಲ್ಲೇಸಲ್ಪಟ್ಟಿವೆ .ಒಂದು ರಾಜ್ಯದ ಸಂಪತ್ತಾಗಿರುವ ಗೋಸಂಪತ್ತನ್ನು ಕಳ್ಳರು ಅಪಹರಿಸಿದಾಗ ಆ ಕಳ್ಳರನ್ನು ತಡೆದು ರಕ್ಷಿಸಿ ತಾನು ಆತ್ಮಾರ್ಪಣೆ ಮಾಡಿದ "ತುರುಗೋಳ್ ವೀರರಿಗೆ" ವೀರಗಲ್ಲುಗಳನ್ನು ಹಾಕಲಾಗುತ್ತಿತ್ತು . ಜನಪದರಲ್ಲಿ ,ಪುರಾಣಗಳಲ್ಲಿ , ಇತಿಹಾಸದಲ್ಲಿ ಗೋಮಾತೆ ಪೂಜಾರ್ಹಳಾಗಿ ಕಂಡುಬರುತ್ತಾಳೆ. ಸೊಡರ ಹಬ್ಬದಂದು ಹಟ್ಟಿಯಲ್ಲಿರುವ ಸಮಸ್ತ ಕೃಷಿ ಸಹಾಯಿ ಪ್ರಾಣಿಗಳನ್ನು ಜನಪದೀಯವಾಗಿ ಪೂಜಿಸೋಣ ,ಮರುದಿನ ಗೋಮಾತೆಗೆ ಪ್ರತ್ಯೇಕ ಪೂಜೆ ಮಾಡೋಣ. ಗೋರಕ್ಷಣೆ - ಸಾಕಣೆ ಭಾರತೀಯರ ಪರಮಧರ್ಮ. ಈ ಮನೋಧರ್ಮ ಸಾರ್ವತ್ರಿಕವಾಗಬೇಕು .ಇದು ಗೋಪೂಜೆಯ ಸಂದೇಶವಾಗಲಿ . (ಸಂಗ್ರಹ) : ಕೆ.ಎಲ್.ಕುಂಡಂತಾಯ
ಗೂಡುದೀಪದಲ್ಲೂ ಕೊರೋನಾ ಜಾಗೃತಿ ಸಂದೇಶ
Posted On: 14 Nov 2020, 04:38 PM
ದೀಪಾವಳಿಯ ಸಂಧರ್ಭದಲ್ಲಿ ತಯಾರಿಸುವ ಗೂಡುದೀಪ( ಆಕಾಶ ಬುಟ್ಟಿ) ದಲ್ಲಿ ಈ ವರ್ಷದಲ್ಲಿ ಜನರನ್ನು ಸಂಕಷ್ಟಕ್ಕೆ ದೂಡಿದ ಕೋರೋನಾ ಸೋಂಕಿನ ಬಗ್ಗೆ ಜಾಗೃತಿ ಸಂದೇಶವನ್ನು ಬಂಟಕಲ್ಲು ಕೆ ಆರ್ ಪಾಟ್ಕರ್ ರವರು ಮನೆಯಲ್ಲಿಯೇ ತಯಾರಿಸಿದ 10 ಅಡಿ ಎತ್ತರವಿರುವ ಆಕಾಶಬುಟ್ಟಿಯಲ್ಲಿ ನೀಡಿದ್ದಾರೆ. ಕಳೆದ ವರ್ಷದ ದೀಪಾವಳಿಯ ಸಂಧರ್ಭ ತಯಾರಿಸಿದ ಆಕಾಶಬುಟ್ಟಿಯಲ್ಲಿ ಪ್ಲಾಸ್ಟಿಕ್ ನಿಷೇದ ಹಾಗೂ ಸ್ವಚ್ಚತೆಯ ಸಂದೇಶ ನೀಡಿದ್ದರು . ಮಾಸ್ಕ್ ಧಾರಣೆ, ಸಾಮಾಜಿಕ ಅಂತರದ ಮಾಹಿತಿಯನ್ನು ನೀಡಿ ಕರೋನಾ ಇನ್ನೂ ಹೋಗಿಲ್ಲ , ಲಸಿಕೆ ದೊರೆಯುವ ವರೆಗೆ ಎಚ್ಚರಿಕೆಯಿಂದಿರುವಂತೆ ಜಾಗೃತಿ ಸಂದೇಶವನ್ನು ನೀಡಿದ್ದಾರೆ.
ಕೋವಿಡ್ 19 ನಿರ್ಮೂಲನೆವಾಗುವರೆಗೆ ಜಾಗೃತಿ ವಹಿಸಿ : ದಿನಕರ ಬಾಬು
Posted On: 14 Nov 2020, 08:22 AM
ಉಡುಪಿ : ಕೋವಿಡ್ 19 ಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ಲಭ್ಯವಾಗಿ, ಈ ರೋಗ ಜಾಗತಿಕವಾಗಿ ನಿರ್ಮೂಲನೆವಾಗುವವರೆಗೆ ಸಾರ್ವಜನಿಕರು ಕೋವಿಡ್ ನಿಯಂತ್ರಣಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ. ಅವರು ಶುಕ್ರವಾರ, ಉಡುಪಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆವರಣದಲ್ಲಿ, ಕೋವಿಡ್19 ಕುರಿತಂತೆ ಜಿಲ್ಲೆಯಾದ್ಯಂತ ಎಲ್.ಇ.ಡಿ. ವಾಹನದ ಮೂಲಕ ನಡೆಯುವ ವಿಶೇಷ ಜಾಗೃತಿ ಪ್ರಚಾರ ಕಾರ್ಯಕ್ರಮದ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಸಾರ್ವಜನಿಕರು ಜಿಲ್ಲೆಯಲ್ಲಿ ಕೋವಿಡ್19 ಇಲ್ಲ ಎಂದು ಮೈಮರೆಯದೇ , ಸಂಪೂರ್ಣವಾಗಿ ಈ ರೋಗ ನಿರ್ಮೂಲನೆವಾಗುವವರೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮತ್ತು ಕೈ ಗಳ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು,ಕೋವಿಡ್ ಲಕ್ಷಣಗಳಿದ್ದಲ್ಲಿ ಕೂಡಲೇ ಪರೀಕ್ಷಿಸಿಕೊಳ್ಳುವಂತೆ ದಿನಕರ ಬಾಬು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ವಾರ್ತಾ ಸಹಾಯಕ ಶಿವಕುಮಾರ್ ಬಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಡುಪಿ ಜಿಲ್ಲೆಯಾದ್ಯಂತ ಪ್ರತಿದಿನ 10 ಗ್ರಾಮಗಳಲ್ಲಿ 18 ದಿನಗಳ ಕಾಲ ಒಟ್ಟು 180 ಗ್ರಾಮಗಳಲ್ಲಿ ಸಂಚರಿಸುವ ಈ ಎಲ್.ಇ.ಡಿ ವಾಹನಗಳು ಬೈಹತ್ ಎಲ್.ಇ.ಡಿ ಪರದೆಯ ಮೂಲಕ ಗ್ರಾಮೀಣ ಭಾಗದಲ್ಲಿ ಕೋವಿಡ್19 ಪಿಡುಗನ್ನು ತಡೆಗಟ್ಟಲು ಸಾರ್ವಜನಿಕರು ಕೈಗೊಳ್ಳಬೇಕಾದ ಸುರಕ್ಷತಾ/ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸಲಿದೆ.
