Updated News From Kaup

ಕಾಪುವಿನ ಪಕೀರ್ನಕಟ್ಟೆಯಲ್ಲಿ ಕತ್ತಲ ಮನೆಗೆ ಬೆಳಕು ನೀಡಿದ ಸೇವ್ ಲೈಫ್

Thumbnail
Posted On: 26 Sep 2020, 04:45 PM

ಕಾಪು ಪುರಸಭಾ ವ್ಯಾಪ್ತಿಯ ಪಕೀರ್ನಕಟ್ಟೆ ಅಪ್ಪಿಯವರು ಕಳೆದ ಹತ್ತು ವರ್ಷಗಳಿಂದ ಹುಲ್ಲಿನ ಮನೆಯಲ್ಲಿ ಚಿಮಿಣಿ ದೀಪದ ಬೆಳಕಿನಲ್ಲೇ ದಿನ ಕಳೆಯುತ್ತಿದ್ದು,ವಿದ್ಯುತ್ ಸಂಪರ್ಕ ಇಲ್ಲದೆ ವಾಸಿಸುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ಸಮಾಜ ಸೇವಕರಾದ ಪ್ರಶಾಂತ್ ಪೂಜಾರಿ ಕಾಪು ಮತ್ತು ನೀತಾ ಪ್ರಭು ಕಾಪು ಇವರು "ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್" ನ ಸದಸ್ಯರಾದ ಅರ್ಜುನ್ ಬಂಡಾರ್ಕರ್ ಇವರಿಗೆ ತಿಳಿಸಿದರು. "ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್" ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಸಂಸ್ಥೆಯಾಗಿದ್ದು ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿ. ಅಪ್ಪಿಯವರ ಮನೆಗೆ ಸುಮಾರು 20,000 ವೆಚ್ಚದ ಸೋಲಾರ್ ಕನೆಕ್ಷನ್, ಹಾಗೂ ನಾಲ್ಕು ಬಲ್ಬ್ ಗಳನ್ನು ಹಸ್ತಾಂತರಿಸಿದರು. ಅಪ್ಪಿಯವರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದನ್ನು ಕಂಡು ಸದಸ್ಯರಾದ ಅರ್ಜುನ್ ಬಂಡಾರ್ಕರ್ ಅವರು 10,000 ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅಪ್ಪಿಯವರ ಸಹೋದರಿ ಉಪಸ್ಥಿತರಿದ್ದು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ವರದಿ : ವಿಕ್ಕಿ ಪೂಜಾರಿ ಮಡುಂಬು

ಬೆಳ್ಮಣ್ ನಲ್ಲಿ ಅಂತರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ

Thumbnail
Posted On: 25 Sep 2020, 10:50 PM

ರೋಟರಿ ಕ್ಲಬ್ ಬೆಳ್ಮಣ್, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಮಣ್ ಹಾಗೂ ವಿವಿಧ ಅಂಗನವಾಡಿ ಕೇಂದ್ರಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪೌಷ್ಟಿಕಾಆಹಾರ ಸಪ್ತಾಹ ಕಾರ್ಯಕ್ರಮವನ್ನು ಬೆಳ್ಮಣ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಬಿ. ಬಾಲಕೃಷ್ಣ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪೌಷ್ಟಿಕ ಆಹಾರದ ಮಹತ್ವ ಹಾಗೂ ಪೌಷ್ಟಿಕ ಆಹಾರದ ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಶ್ರೀಮತಿ ಸೌಭಾಗ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸುದರೊಂದಿಗೆ ರೋಟರಿ ಬೆಳ್ಮಣ್ ನ ಕಾಯಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೆಳ್ಮಣ್ ನ ಅಧ್ಯಕ್ಷರಾದ ರೋ| ಶುಭಾಷ್ ಕುಮಾರ್ ವಹಿಸಿದ್ದು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ರೋ| ರಾಜೇಶ್ ಸಾಲ್ಯಾನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೋ| ಮೋಹನ್ ದಾಸ್ ಶೆಟ್ಟಿ ನಿರೂಪಿಸಿ ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು, ರೋಟರಿ ಸದಸ್ಯರು , ಆಶಾ ಕಾರ್ಯಕರ್ತೆಯರ ತಂಡ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು

Thumbnail
Posted On: 25 Sep 2020, 05:12 PM

ಶಾರ್ವರಿ ನಾಮ ಸಂವತ್ಸರದ ಆಶ್ವಯುಜ ಮಾಸವು ಈ ಬಾರಿ ಅಧಿಕ ಪುರುಷೋತ್ತಮ ಮಾಸವಾಗಿದ್ದು , ದೇವತಾ ಕಾರ್ಯಗಳಿಗೆ ಅತ್ಯಂತ ಸೂಕ್ತ ಪರ್ವ ಕಾಲ. ಈ ಪ್ರಯುಕ್ತ ತಾ. 29/09/20 ಮಂಗಳವಾರ ಅಧಿಕ ಆಶ್ವೀಜ ಶುದ್ಧ ತ್ರಯೋದಶಿ , ಶ್ರೀ ದೇವಳದಲ್ಲಿ ಚಂಡಿಕಾ ಯಾಗ ಜರಗಲಿದೆ. ಬೆಳಿಗ್ಗೆ 8.00 ಗಂಟೆಗೆ *ಪ್ರಾರ್ಥನೆ* ಮಧ್ಯಾಹ್ನ 12.00 ಗಂಟೆಗೆ ಚಂಡಿಕಾ ಯಾಗ ಪೂರ್ಣಾಹುತಿ ಮತ್ತು ಅನ್ನಸಂತರ್ಪಣೆ, ಈ ಪುಣ್ಯಪ್ರದ ಕಾರ್ಯಕ್ರಮದಲ್ಲಿ ಸರ್ವ ಸಮಸ್ತ ಭಕ್ತರು ಭಾಗವಹಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗ ಬೇಕೆಂದು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ,ಕಾಪು ಆಡಳಿತ ಮಂಡಳಿ ವಿನಂತಿಸಿದ್ದಾರೆ.

ಶ್ರಾವ್ಯ ಆರ್. ಅಂಚನ್ "ಸರಸ್ವತಿ ಪುರಸ್ಕಾರ" ರಾಜ್ಯ ಪ್ರಶಸ್ತಿಗೆ ಆಯ್ಕೆ

Thumbnail
Posted On: 24 Sep 2020, 02:14 PM

ಪಡುಬಿದ್ರಿಯ ರವಿರಾಜ್ ಕೋಟ್ಯಾನ್ ಮತ್ತು ಶ್ಯಾಮಲಾ ದಂಪತಿಯ ಪುತ್ರಿಯಾದ ಶ್ರಾವ್ಯ ಆರ್. ಅಂಚನ್ ಸಾಂಸ್ಕೃತಿಕ, ಕ್ರೀಡಾ, ಶೈಕ್ಷಣಿಕ ರಂಗದಲ್ಲಿ ಮುಂದಿದ್ದು, ಪಡುಬಿದ್ರಿ ಸಾಗರ್ ವಿದ್ಯಾ ಮಂದಿರ ಶಾಲೆಯ ವಿದ್ಯಾರ್ಥಿಯಾಗಿ ಕಬಡ್ಡಿ ಕ್ರೀಡೆಯಲ್ಲಿ 2 ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೂ ಆಯ್ಕೆಯಾದವರು. 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 613 (98.08%)ಅಂಕ ಪಡೆದಿರುವ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ದಾವಣಗೆರೆ-ಸಾಲಿಗ್ರಾಮ ಇವರು ನೀಡಲ್ಪಡುವ "ಸರಸ್ವತಿ ಪುರಸ್ಕಾರ" ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ರಾಜ್ಯೋತ್ಸವದಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಈ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ವರದಿ : ದೀಪಕ್ ಬೀರ ಪಡುಬಿದ್ರಿ

ಪಡುಬಿದ್ರಿಯಲ್ಲಿ ನಾರಾಯಣಗುರುಗಳ 92ನೇ ಪುಣ್ಯತಿಥಿ ಅಂಗವಾಗಿ ಉಪನ್ಯಾಸ

Thumbnail
Posted On: 23 Sep 2020, 09:01 AM

ನಾರಾಯಣಗುರುಗಳ ಸಂದೇಶವನ್ನು ಅರಿತು, ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ. ಅವರ ಸಂದೇಶಗಳು ಬದುಕಿಗೆ ಸಮರ್ಪಕವಾಗುವಂತಹ ಗಳು. ಅಂದಿನ ಅವರ ಚಿಂತನೆಯಿಂದ ಇಂದು ಬದಲಾವಣೆಯತ್ತ ನಾವು ಸಾಗುತ್ತಿದ್ದೇವೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಹೇಳಿದರು. ಬ್ರಹ್ಮಶ್ರೀ ನಾರಾಯಣಗುರುಗಳ 92 ನೇ ಪುಣ್ಯತಿಥಿಯ ಅಂಗವಾಗಿ ಪಡುಬಿದ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಮತ್ತು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಸಮಾಜದಲ್ಲಿ ಸಮಾನತೆಯನ್ನು ಸಾರುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ, ಸರಕಾರಿ ಕಾಲೇಜು ತೆಂಕನಿಡಿಯೂರಿನ ಉಪನ್ಯಾಸಕರಾದ ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು ಮಾತನಾಡಿ ಜಾತಿ-ವರ್ಗಗಳ ಬೇಧವನ್ನು ಮರೆತು ಮಾನವೀಯತೆ, ಸಮಾನತೆಯ ಮನಸ್ಥಿತಿ ನಮ್ಮಲ್ಲಿ ಇದ್ದಾಗ ಸಮಾಜ ಪರಿವರ್ತನೆ ಸಾಧ್ಯವಾಗುತ್ತದೆ. ಗುರುಗಳ ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶ ಇಡೀ ಸಮಾಜವೇ ಒಪ್ಪಿಕೊಂಡಿದೆ. ಸಂಘಟನೆಗಳು ನೈತಿಕ ಬಲ ತುಂಬುವ ಮೂಲಕ ಸಮಾಜದ ತಪ್ಪುಗಳನ್ನು ಪ್ರಶ್ನಿಸುವ ಗುಣವು ನಮ್ಮಲ್ಲಿ ಬರಬೇಕಾಗಿದೆ. ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಸಂದೇಶ ಸಮಾನತೆ ತರುವಲ್ಲಿ ಸಹಕಾರಿಯಾಗಿದೆ ಎಂದರು. ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮಾತನಾಡಿ ನಾರಾಯಣಗುರುಗಳು ಸಾಮಾಜಿಕ ಕ್ರಾಂತಿ ಮಾಡಿ ಹಿಂದುಳಿದ ವರ್ಗಗಳಿಗೆ ಶಕ್ತಿಯಾದರು. ಸತ್ಯದ ಹೋರಾಟದ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಿ ಬದಲಾವಣೆಯ ತಂದರು. ಅವರ ಅಂದಿನ ಸಂದೇಶ ಸಾರ್ವಕಾಲಿಕವಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ. ಕೋಟ್ಯಾನ್ ವಹಿಸಿದ್ದರು. ಸಮಾರಂಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕರಾದ ಜಗದೀಶ್ ಸುವರ್ಣ, ಬಿಲ್ಲವ ಸಂಘದ ಕಾರ್ಯದರ್ಶಿ ಲಕ್ಷ್ಮಣ್ ಬಿ. ಅಮೀನ್, ಘಟಕದ ಕಾರ್ಯದರ್ಶಿ ಶಾಶ್ವತ್ ಎಸ್. ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ. ಕೋಟ್ಯಾನ್ ಸ್ವಾಗತಿಸಿ, ಘಟಕದ ಮಾಜಿ ಅಧ್ಯಕ್ಷರಾದ ಸುಜಿತ್ ಕುಮಾರ್ ಪ್ರಸ್ತಾವಿಸಿ, ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಜಯ ಎನ್. ಪೂಜಾರಿ ವಂದಿಸಿ, ಯಶೋಧ ಕಾರ್ಯಕ್ರಮ ನಿರ್ವಹಿಸಿದರು.

ಹೋಂ ಡಾಕ್ಟರ್ ಫೌಂಡೇಶನ್ ನಿಂದ ಬೆಳಕು ಯೋಜನೆಯಡಿ ಸಹಾಯಧನ ವಿತರಣೆ

Thumbnail
Posted On: 21 Sep 2020, 10:34 PM

ಉಡುಪಿ :- ಹೋಂ ಡಾಕ್ಟರ್ ಫೌಂಡೇಶನ್ ಇದರ ಬೆಳಕು ಯೋಜನೆಯಡಿ ನಿಟ್ಟೂರಿನ ಅಂತಿಮ ಬಿ.ಎಸ್.ಸಿ ವಿದ್ಯಾರ್ಥಿ ಕಾರ್ತಿಕ್ ಗೆ ಕಾಲೇಜು ಶುಲ್ಕ ರೂ.10 ಸಾವಿರ ಹಾಗು ಆನ್ಲೈನ್ ಕ್ಲಾಸ್ ಗಾಗಿ ಒಂದು ಆಂಡ್ರಾಯ್ಡ್ ಮೊಬೈಲ್ ಕೊಡಲಾಯಿತು. ಅದೇ ರೀತಿ ಇಂದಿರಾ ನಗರದ ಬಡ ಪ್ಯಾರಾಲಿಸಿಸ್ ರೋಗಿ ಗೆ ಅವರ ಪತ್ನಿ ಸುನಂದಾ ರವರಿಗೆ ರೂ.10 ಸಾವಿರ ಚೆಕ್ ವಿತರಿಸಲಾಯಿತು. ಮಣಿಪಾಲದ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಕಲ್ಪಿಸಲಾದ ಸದಾಶಿವ್ ಶೆಟ್ಟಿ ಕುಕ್ಕಿಹಳ್ಳಿ ಇವರ ಯೋಗಕ್ಷೇಮ ವಿಚಾರಿಸಿ ಮುಂದಿನ ದಿನದಲ್ಲಿ ರೂ 10 ಸಾವಿರ ನೀಡಲಾಗುವುದು ಎಂದು ಭರವಸೆ ನೀಡಲಾಯಿತು. ಗುಂಪಿನ ಸದಸ್ಯೆ ನಯನಾ ಅವರ ಕೋರಿಕೆ ಮೇಲೆ ರಕ್ತದ ಕ್ಯಾನ್ಸರ್ ನಿಂದ ಬಳಳುತ್ತಿರುವ ಕುಟುಂಬದ ವ್ಯಕ್ತಿಯ ಯೋಗಕ್ಷೇಮ ವಿಚಾರಿಸಿ ಬಂದು ಮುಂದಿನ ದಿನಗಳಲ್ಲಿ ಅವರ ಮಕ್ಕಳ ವಿದ್ಯಾಭ್ಯಾಸದಲ್ಲಿ ನೆರವಾಗುವ ನಿರ್ಣಯಕ್ಕೆ ಬರಲಾಯಿತು .
ಕಾಯ೯ಕ್ರಮದಲ್ಲಿ ಸದಸ್ಯರಾದ ಡಾ"ಶಶಿ ಕಿರಣ್ ಶೆಟ್ಟಿ, ಡಾ.ಸುಮಾ ಎಸ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ನಯನ ಮತ್ತು ಕೃಷ್ಣ ಮಾಸ್ಟರ್ ಭಾಗವಹಿಸಿದ್ದರು.
ವರದಿ : ರಾಘವೇಂದ್ರ ಪ್ರಭು ಕರ್ವಾಲು

ಉಡುಪಿಯಲ್ಲಿರುವ ಅಣ್ಣಪ್ಪ ಪಂಜುರ್ಲಿ ದೈವದ ಪಾದದ ಗುರುತು

Thumbnail
Posted On: 21 Sep 2020, 10:55 AM

ಉಡುಪಿ ಜಿಲ್ಲೆಯಲ್ಲಿ ಹಲವಾರು ವರ್ಷಗಳ ಇತಿಹಾಸ ಇರುವ ಕೊಡವೂರು ಕಂಗಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನ. ಧರ್ಮಸ್ಥಳದ ನಂತರ ದೊಡ್ಡದಾದ ಅಣ್ಣಪ್ಪ ಪಂಜುರ್ಲಿ ಕ್ಷೇತ್ರವಿದ್ದರೆ. ಅದುವೇ ಕೊಡವೂರು ಕಂಗಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನ. ಈ ದೈವಸ್ಥಾನದ ಹಿಂದಿನ ಕಾಲದ ವೈಶಿಷ್ಟತೆ ಏನೆಂದರೆ ಯಾವುದೇ ಸಂದರ್ಭದಲ್ಲಿ ಊರಿನ ಭಕ್ತರ ನ್ಯಾಯತೀರ್ಮಾನ ಈ ದೈವಸ್ಥಾನದಲ್ಲಿ ಕೊನೆಗೊಂಡರೆ ನಂತರ ಜನರು ಉಡುಪಿಯ ಕೋರ್ಟ್ ಮುಖಾಂತರ ಹೋದರು ಅಲ್ಲಿ ದೈವಸ್ಥಾನದಲ್ಲಿ ನಡೆದ ನ್ಯಾಯ ತೀರ್ಮಾನವನ್ನು ಯಾವುದೇ ವಾದ ವಿಮರ್ಶೆ ವಿಚಾರಗಳನ್ನು ಮಾಡುತ್ತಿರಲಿಲ್ಲ ಅದು ಅಲ್ಲಿಗೆ ಕೊನೆಗೊಳ್ಳುತ್ತಿತ್ತು. ಈ ದೈವಸ್ಥಾನದಲ್ಲಿ ವಿಶೇಷ ಸೇವೆ ಎಂದರೆ ಮುದ್ರೆ ಸೇವೆ.
ಊರಿನ ಹಾಗೂ ಪರವೂರಿನ ಭಕ್ತರು ಯಾವುದೇ ಕಷ್ಟ ಸಂದರ್ಭದಲ್ಲಿ ಮಂಗಳ ಕಾರ್ಯ ಆಗದವರು ಹಾಗೂ ಉದ್ಯೋಗ ಸಮಸ್ಯೆ, ಆರೋಗ್ಯದ ಸಮಸ್ಯೆ, ವ್ಯವಹಾರದ ಸಮಸ್ಯೆ, ಸಂತಾನ ಭಾಗ್ಯದ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆ ಹೊಂದಿರುವ ಭಕ್ತರು ಅಣ್ಣಪ್ಪ ಪಂಜುರ್ಲಿಗೆ ತಮ್ಮ ಸಮಸ್ಯೆ ಎಲ್ಲಾ ನಿವಾರಣೆಯಾದರೆ ಮುದ್ರೆ ಕೊಡುವುದಾಗಿ ಹರಕೆ ಹೇಳುತ್ತಾರೆ.
ಈ ಸೇವೆ ವಾರದಲ್ಲಿ ನಾಲ್ಕು ಬಾರಿ ನಡೆಯುತ್ತದೆ. ವಾರ್ಷಿಕವಾಗಿ ನೇಮೋತ್ಸವ, ಮಹಾ ಅನ್ನಸಂತರ್ಪಣೆ, ದೈವಸ್ಥಾನದಿಂದ ಭಂಡಾರದ ಮೆರವಣಿಗೆ ಹೊರಟು ರಾತ್ರಿ ನೇಮೋತ್ಸವ ನಡೆಯುತ್ತದೆ.
ಹಾಗೂ ವರ್ಷದಲ್ಲಿ ಭಕ್ತರ ಮೂರರಿಂದ ನಾಲ್ಕು ಹರಕೆಯ ನೇಮೋತ್ಸವ ಕೂಡ ನಡೆಯುತ್ತದೆ. ಈ ದೈವಸ್ಥಾನದಲ್ಲಿ ಪಂಬದ ವರ್ಗದವರು ಅಣ್ಣಪ್ಪ ಪಂಜುರ್ಲಿ ದೈವದ ನೇಮ ಕಟ್ಟುತ್ತಾರೆ. ಹಾಗೂ ದರ್ಶನ ಪಾತ್ರಿಯಾಗಿ ಮೊಯ್ಲಿ, ಮಡಿವಾಳ ವರ್ಗದವರು ಸೇವೆ ಸಲ್ಲಿಸುತ್ತಾರೆ.
ಈ ದೈವಸ್ಥಾನದಲ್ಲಿ ನಡೆಯುವ ದೊಂದಿ ಕೋಲ ಅತಿ ಹೆಚ್ಚು ಜನಪ್ರಿಯವಾಗಿದೆ..
ನೇಮೋತ್ಸವದ ಸಂದರ್ಭದಲ್ಲಿ ಬಹಳ ಜನಸಂಖ್ಯೆ ಸೇರುವ ಮೂಲಕ ಬಹಳ ಹಿಂದಿನ ಕಾಲದ ಪದ್ಧತಿಯಂತೆ ವಿಶಿಷ್ಟರೀತಿಯಲ್ಲಿ ಮೂಡಿ ಬರುತ್ತದೆ.
ಈ ದೈವಸ್ಥಾನದಲ್ಲಿ ದೈವದ ದರ್ಶನದ ಸಮಯದಲ್ಲಿ ದೈವ ನುಡಿಯುವ ಲೇಪಿಗೆ ತುಂಬಾ ಗೌರವಪೂರ್ಣವಾದ ಪ್ರಾಮುಖ್ಯತೆ ಇದೆ.
ಹತ್ತು ಹದಿಮೂರಕ್ಕೂ ಹೆಚ್ಚು ಗುತ್ತು ಮನೆತನ ಗ್ರಾಮದ ಮನೆತನದವರಿಗೆ ಲೆಪ್ಪು ಇದೆ..
ಈ ದೈವಸ್ಥಾನದಲ್ಲಿ ಇನ್ನೊಂದು ವಿಶೇಷವೇನೆಂದರೆ ಅಣ್ಣಪ್ಪ ಪಂಜುರ್ಲಿ ದೈವದ ಪಾದದ ಗುರುತು ಬಂಡೆ ಕಲ್ಲಿನ ಮೇಲಿದೆ.
ಹಾಗೂ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಮುಂಭಾಗದಲ್ಲಿ ಮರದ ಕೆತ್ತನೆಯಲ್ಲಿ ಪಂಜುರ್ಲಿಯ ಮುಖದ ಪೂರ್ಣ ಪರಿಚಯ ಆಗುವಂತಹ ಸನ್ನಿವೇಶ ಆಕಸ್ಮಿಕವಾಗಿ ಮರದ ಕೆತ್ತನೆಯಲ್ಲಿ ಮೂಡಿಬಂದಿದೆ.
ನಿಜಕ್ಕೂ ಈ ಸ್ಥಳದ ಮಹಿಮೆ ಅದ್ಭುತ. ದೈವಸ್ಥಾನದಲ್ಲಿ ಹಲವಾರು ವರ್ಷಗಳ ಹಿಂದೆ ಉಪಯೋಗಿಸಿದ್ದ ದೈವದ ಪರಿಕರಗಳು ಹಿಂದಿನ ಕಾಲದ ದೈವದ ಮುಖ, ಆಯುಧಗಳು, ದೀಪಗಳು ಇಲ್ಲಿ ನೋಡಲು ಸಿಗುತ್ತದೆ. ಇಲ್ಲಿಯ ಆಚಾರ-ವಿಚಾರ ಸಂಸ್ಕೃತಿಗಳು ಹಿಂದಿನ ಕಾಲದಂತೆ ಕ್ರಮಪ್ರಕಾರ ಯಾವುದೇ ಬದಲಾವಣೆ ಮಾಡದೆ ಪೂಜೆ ಪುರಸ್ಕಾರ ನೇಮೋತ್ಸವಗಳನ್ನು ಹಿರಿಯರ ಮಾರ್ಗದರ್ಶನದಲ್ಲಿ ಆಡಳಿತ ಮಂಡಳಿ ನಡೆಸಿಕೊಂಡುಬರುತ್ತಿದ್ದಾರೆ.
ಇದು ನಿಜಕ್ಕೂ ಹೆಮ್ಮೆಯ ಸಂಗತಿ ಈ ದೈವಸ್ಥಾನದಲ್ಲಿ ಯುವಕ-ಯುವತಿಯರು ದೈವಸ್ಥಾನದ ಯಾವುದೇ ಒಂದು ಕಾರ್ಯಕ್ರಮದಲ್ಲಿ ಹಾಗೂ ನೇಮೋತ್ಸವ ದಲ್ಲಿ ದೈವಸ್ಥಾನಕ್ಕೆ ಸಂಬಂಧಪಟ್ಟ ಜೀರ್ಣೋದ್ದಾರ ಸಮಿತಿಯಲ್ಲಿ, ಕೆಲಸಕಾರ್ಯಗಳಲ್ಲಿ ರಾತ್ರಿ-ಹಗಲು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು.. ದೈವಸ್ಥಾನದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ.
ದೈವಸ್ಥಾನದ ಮಹಿಮೆಗಳನ್ನು ಕಂಡು ಊರ ಪರವೂರಿನ ಭಕ್ತದಿಗಳು ಸ್ಥಳಕ್ಕೆ ಭೇಟಿಕೊಟ್ಟು ತಮ್ಮ ಸಮಸ್ಯೆಯನ್ನು ದೈವಕ್ಕೆ ಪ್ರಾರ್ಥನೆಯೊಂದಿಗೆ ಹೇಳಿಕೊಂಡು. ನಂತರ ದೈವದ ಅನುಗ್ರಹದಿಂದ ತಮ್ಮ ಸಮಸ್ಯೆ ನಿವಾರಣೆ ಮಾಡಿಕೊಂಡು. ದೈವದ ಕೃಪೆಗೆ ಪಾತ್ರರಾಗಿದ್ದಾರೆ.
ಬರಹ ✍ ವಿನೋದ್ ಶೆಟ್ಟಿ

ಕಾಪುವಿನ ನೆರೆಪೀಡಿತ ಪ್ರದೇಶಕ್ಕೆ ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ

Thumbnail
Posted On: 20 Sep 2020, 11:42 PM

ಉಡುಪಿ :- ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಾದ ಬೆಳ್ಳoಪಳ್ಳಿ, ಪೆಡೂ೯ರು, ಹಿರಿಯಡಕ,ಬಜೆ ಮುಂತಾದ ಪ್ರದೇಶಗಳಿಗೆ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂಧಭ೯ದಲ್ಲಿ ಮಾತನಾಡಿದ ಅವರು ನೆರೆ ಪೀಡಿತರಿಗೆ ಮನೆ ಕಳೆದುಕೊಂಡವರಿಗೆ ಈಗಾಗಲೇ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಚಚೆ೯ ನಡೆಸಿದ್ದು ಅತೀ ಶೀಘ್ರದಲ್ಲಿ ಪರಿಹಾರ ಧನ ನೀಡಲಾಗುವುದು ಎಂದರು.ಉಡುಪಿ ತಾ.ಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಮೊಗವೀರ ಮಹಾಜನ ಸಭಾ ಅಧ್ಯಕ್ಷ ಜಯ ಕೋಟ್ಯಾನ್, ಯುವ ನಾಯಕ ಸುಬೋದ್, ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಕವಾ೯ಲು ಮುಂತಾದವರಿದ್ದರು.
ವರದಿ : ರಾಘವೇಂದ್ರ ಪ್ರಭು ಕರ್ವಾಲು

ಇನ್ನಂಜೆಯಲ್ಲಿ ಒಂದು ವಾರದ ತುಳು ಲಿಪಿ ಕಾರ್ಯಾಗಾರ ಇಂದು ಕೊನೆಯ ದಿನ

Thumbnail
Posted On: 20 Sep 2020, 05:37 PM

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡು (ರಿ.), ಇನ್ನಂಜೆ ಯುವತಿ ಮಂಡಲ (ರಿ.) ಇವರ ಜಂಟಿ ಆಶ್ರಯದಲ್ಲಿ ಇನ್ನಂಜೆ ದಾಸಭವನದಲ್ಲಿ ತಾರೀಕು 14/09/2020ನೇ ಸೋಮವಾರದಿಂದ 20/09/2020 ನೇ ಆದಿತ್ಯವಾರದ ವರೆಗೆ "ಬಲೇ ತುಳು ಲಿಪಿ ಕಲ್ಪುಗ" ಅನ್ನುವಂತಹ ತುಳುಲಿಪಿ ಕಾರ್ಯಗಾರ ನಡೆದಿದ್ದು. ತುಳು ಲಿಪಿ ಶಿಕ್ಷಕರಾದ ಉಷಾ ಎನ್ ಪೂಜಾರಿ ಮತ್ತು ಅಕ್ಷತಾ ಕುಲಾಲ್ ತುಳು ಲಿಪಿ ಕಾರ್ಯಾಗಾರದಲ್ಲಿ ತುಳು ಲಿಪಿಯನ್ನು ಕಲಿಸಿ ಕೊಟ್ಟಿರುತ್ತಾರೆ.. ತುಳು ಲಿಪಿ ಕಾರ್ಯಗಾರ ಇಂದು ಕೊನೆಯ ದಿನವಾಗಿತ್ತು.. ಇನ್ನಂಜೆ ಗ್ರಾಮದ 40 ರಿಂದ 50 ಮಕ್ಕಳು ತುಳು ಲಿಪಿ ಕಲಿಯಲು ಉತ್ಸುಕತೆಯಿಂದ ದಿನಾಲೂ ಆಗಮಿಸುತ್ತಿದ್ದು. ತುಳು ಲಿಪಿ ಕಾರ್ಯಾಗಾರದ ಸಂಪೂರ್ಣ ಪ್ರಯೋಜನವನ್ನು ಇನ್ನಂಜೆ ಗ್ರಾಮಸ್ಥರು ಪಡೆಯುತ್ತಿದ್ದಾರೆ. ನಮ್ಮ ಕಾಪು ಚಾನೆಲ್ ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿದ್ದು, ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ವನ್ನು ಅಪ್ಲೋಡ್ ಮಾಡಲಾಗುವುದು.. ಈ ವಿಡಿಯೋ ವನ್ನು ತುಳು ಲಿಪಿ ಕಲಿಯಲು ಆಸಕ್ತಿ ಇರುವವರು ಸದುಪಯೋಗಪಡಿಸಿಕೊಳ್ಳಬಹುದು..

ಕುಂಜೂರು‌ ದೇವಳ ಜಲಾವೃತ ನೆರೆನೀರು ನೆನಪಿಸಿದ ಪುರಾಣ

Thumbnail
Posted On: 20 Sep 2020, 03:37 PM

ಇಂತಹ ಸತತ ಮಳೆ ಸುರಿಯುವ ಸಂದರ್ಭಗಳಲ್ಲಿ ಎಲ್ಲೂರು ಗ್ರಾಮದ ಕುಂಜೂರು ಶ್ರೀದುರ್ಗಾ ದೇವಸ್ಥಾನವು ನೆರೆ ನೀರು ಏರಿ ಜಲಾವೃತವಾಗುವುದು ಸಹಜ .
ದೇವಳದ ಒಳಾಂಗಣದಲ್ಲಿ ಒಂದು ಅಡಿಯಷ್ಟು ನೀರು ತುಂಬಿದರೆ , ಹೊರ ಅಂಗಣದಲ್ಲಿ ಮೂರು ಅಡಿ ಎತ್ತರಕ್ಕೆ ನೀರು.
ಇಂತಹ ನಿರಂತರ ಮಳೆ ಸುರಿಯುವ ವೇಳೆ ನಮ್ಮ ಜಿಲ್ಲೆಯ ಹಲವು ದೇವಳಗಳು ಜಲಾವೃತ್ತವಾಗುವುದು .ಮೂಲಸ್ಥಾನ ಬಿಂಬದ ಪಾದದವರೆಗೆ ನೀರು ಎತ್ತರಿಸುವುದನ್ನು ನಾವು ಕೇಳುತ್ತೇವೆ , ದೂರದರ್ಶನದಲ್ಲಿ ಕಾಣುತ್ತೇವೆ ,ಪತ್ರಿಕೆಗಳಲ್ಲಿ ಓದುತ್ತೇವೆ . ಹಾಗಾದರೆ ಹೀಗೇಕೆ .....? ಉತ್ತರ
ಸರಳ , ಅವು ತಗ್ಗು ಪ್ರದೇಶ. ಹಾಗಾಗಿಯೇ ಬೇಗನೆ ನೆರೆ ನೀರಿನ ಮಟ್ಟ ಹೆಚ್ಚುತ್ತದೆ .
ಆಯಾ ದೇವಳಗಳ ನಿರ್ಮಾಣ ಕಾಲದ ದಂತಕತೆಯೋ , ಪುರಾಣಕತೆಯೋ ಈ ಸಂದರ್ಭಕ್ಕೆ ಅಂದರೆ ತಗ್ಗುಪ್ರದೇಶದಲ್ಲಿ ಯಾವ ಕಾರಣಕ್ಕೆ ದೇವಾಲಯ ನಿರ್ಮಾಣವಾಯಿತು ಎಂಬ ಮಾಹಿತಿಯನ್ನು ನೀಡುತ್ತವೆ .ಆದರೆ ಕೇಳುವ ಮನಃಸ್ಥಿತಿಬೇಕು‌. ಭೌಗೋಳಿಕ ಸ್ವರೂಪ ಪರಿವರ್ತನೆಯನ್ನು ಗಮನಿಸಬೇಕು.
ಈ ಕುರಿತ ವಿಸ್ತಾರವಾದ ಕತೆಗೆ
ಉದಾಹರಣೆಗೆ ಉಡುಪಿ ಜಿಲ್ಲೆ ,ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕುಂಜೂರು ದೇವಳಕ್ಕೆ ಸಂಬಂಧಿಸಿದ ಪೌರಾಣಿಕ ಉಲ್ಲೇಖವನ್ನು ( ಮುದ್ರಿತ ಪುಸ್ತಕಗಳಿವೆ )
ಗಮನಿಸಿದರೆ ಒಂದು ಪುರಾಣವು ತೆರೆದುಕೊಳ್ಳುತ್ತದೆ , ಮತ್ತಷ್ಟು ಓದಿದರೆ ಪುರಾಣವನ್ನು ಸಮರ್ಥಿಸಬಹುದಾದಷ್ಟು ವಿವರಗಳು ಲಭಿಸುತ್ತವೆ. ಎಲ್ಲೂರು ವಿಶ್ವೇಶ್ವರ ದೇವಾಲಯದ ವತಿಯಿಂದ 1919 ನೇ ಇಸವಿಯಲ್ಲಿ (ಇಂದಿಗೆ 101ವರ್ಷ ಹಿಂದೆ) ಮುದ್ರಣಗೊಂಡ ಸಂಸ್ಕೃತ ಶ್ಲೋಕಗಳಲ್ಲಿರುವ "ಯೆಲ್ಲೂರು ಮಹಾತ್ಮ್ಯಂ" ಎಂಬ ಸಣ್ಣ ಪುಸ್ತಕದಲ್ಲಿ ಬಹಳಷ್ಟು ಮಾಹಿತಿಗಳು ಲಭಿಸುತ್ತವೆ .ಈ ಶ್ಲೋಕಗಳ ತಾತ್ಪರ್ಯ ಸಹಿತದ ಪುಸ್ತಕ ಮೂರು ಮುದ್ರಣವಾಗುತ್ತದೆ.
ಕತೆ ಹೀಗೆ ಶಿವ - ಪಾರ್ವತಿಯರ ಸಂವಾದದಿಂದ ಆರಂಭವಾಗುತ್ತದೆ : ಪಾರ್ವತಿಯು ಮಹಾದೇವನನ್ನು ಕೇಳುತ್ತಾಳೆ .."ನೀನು ಯೆಲ್ಲೂರು ಕ್ಷೇತ್ರಕ್ಕೆ ಹೋಗಲು ಕಾರಣವೇನು" ಎಂದು ; ಆಗ ಪೂರ್ವದ ಸಂದರ್ಭವೊಂದರ ವಿಸ್ತಾರವಾದ ಕತೆಯನ್ನು ವಿಶ್ವೇಶ್ವರನು ಪಾರ್ವತಿಗೆ ಹೇಳುತ್ತಾ... ಭಾರ್ಗವನೆಂಬ ಮಹರ್ಷಿಯು ಸಂಕಲ್ಪಿಸಿದ ಹತ್ತು ಕ್ಷೇತ್ರಗಳ ನಡುವೆ ಎಲ್ಲೂರು ಕ್ಷೇತ್ರವಿದೆ. ಆ ಹತ್ತು ಕ್ಷೇತ್ರಗಳಲ್ಲಿ ಕುಂಜೂರು ಒಂದು . ಈ ಕುಂಜೂರು ಕ್ಷೇತ್ರದ ಕುರಿತು "ಕುಂಜಪುರ ಕ್ಷೇತ್ರ ಕಲ್ಪನಂ ಪರಮಾದ್ಭುತಂ" ಎಂದು ಮಹಾದೇವನು ಉದ್ಗರಿಸುತ್ತಾನೆ. ಎಲೈ ಪಾರ್ವತಿಯೇ... ರಹಸ್ಯವಾದುದನ್ನು ಹೇಳುತ್ತೇನೆ ಎನ್ನುತ್ತಾ.." ಎಲ್ಲೂರಿನಿಂದ ಪಶ್ಚಿಮದಲ್ಲಿ ವಾರುಣೀ ಎಂಬ ನದಿಯೊಂದು ಹರಿಯುತ್ತಿದೆ . ಅದು ಬಹುದೇಶಗಳನ್ನು ಕ್ರಮಿಸುತ್ತಾ ಅಂಕುಡೊಂಕಾಗಿ ಹರಿದು ಪಶ್ಚಿಮ ಸಮುದ್ರವನ್ನು ಸೇರುತ್ತದೆ (ಈಗ ಕುಂಜೂರು ದೇವಾಲಯ ಇರುವಲ್ಲಿ‌ ನದಿ ಹರಿಯುತ್ತಿತ್ತು) . ನದಿ ಬಹಳ ಅಗಲವಾಗಿಯೂ ಇತ್ತು. ಇಲ್ಲಿ ಭಾರ್ಗವ ಮಹರ್ಷಿಯು ನದಿಯನ್ನು ಮುಚ್ಚಿ ಭೂಮಿಯನ್ನಾಗಿ ಮಾಡಿ ವಿಚಿತ್ರವಾದ ಯಜ್ಞವನ್ನು ಮಾಡಿದನು ( ಯಾಗ ಮಾಡಿದ ಸ್ಥಳವೊಂದು ಇವತ್ತಿಗೂ ಜಾಗ , ಯಾಜ ಎಂದು ಗುರುತಿಸಲ್ಪಡುತ್ತದೆ).
ಈ ರೀತಿಯಲ್ಲಿ ಯಜ್ಞಮಾಡಿದ ಪ್ರದೇಶದಲ್ಲಿ ದುರ್ಗಾ ಶಕ್ತಿಯನ್ನು ಸಂಕಲ್ಪಿಸಿದ ಮಹರ್ಷಿ ಕ್ಷೇತ್ರಾಟನೆಗೆ ತೆರಳುತ್ತಾನೆ . ಕಾಲ ಉರುಳುತ್ತದೆ , ಭಾರ್ಗವ ಮಹರ್ಷಿಯಿಂದ ನಿರ್ಮಾಣವಾದ ಹೊಸ ಭೂಪ್ರದೇಶದಲ್ಲಿ ಮರ ,ಗಿಡಗಳು ಬೆಳೆಯುತ್ತವೆ ಆ ಪರಿಸರವು 'ಕುಂಜ' ಎಂದು ಗುರುತಿಸಲ್ಪಡುತ್ತದೆ .....ಹೀಗೆ ಕತೆ ಮುಂದುವರಿಯುತ್ತದೆ . ಮುಂದೆ 'ಕುಂಜೂರು' ಎಂದು ಜನಜನಿತವಾಗುತ್ತದೆ 'ಮಹತೋಭಾರ ಯೆಲ್ಲೂರು ವಿಶ್ವನಾಥ' ಮತ್ತು 'ಕುಂಜೂರು ಶ್ರೀದುರ್ಗಾ' ಪುಸ್ತಕಗಳನ್ನು ಓದಬಹುದು.
ಮೇಲೆ ವಿವರಿಸಿದ ಕತೆ ಒಂದು ಪುರಾಣ ಕತೆ. ನದಿಯ ಪಥವು ತಗ್ಗಾಗಿಯೇ ಇರುತ್ತದೆ . ಇಂತಹ ತಗ್ಗು ಪ್ರದೇಶವನ್ನೆ ಮುಚ್ಚಿದ ಮಹರ್ಷಿ ಯಾಗಮಾಡಿದ.
ಅಂದರೆ ಈ ಪ್ರದೇಶವೇ ತಗ್ಗಿನಲ್ಲಿತ್ತು. ಕನಿಷ್ಠ ೧೨೦೦ ವರ್ಷಗಳಷ್ಟು ಪೂರ್ವದಲ್ಲಿ ಈ ಸಂಗತಿ ನಡೆದಿದೆ .ಹಾಗಾಗಿಯೇ ಈಗ ಸತತ ಮಳೆಯಾದಾಗ ನೆರೆನೀರು ಸಹಜವಾಗಿ ತುಂಬಿಕೊಳ್ಳುತ್ತದೆ .ಅಂದರೆ ಪುರಾಣದ ಉಲ್ಲೇಖವನ್ನು ಸಮರ್ಥಿಸಿದಂತೆ ಆಗುವುದಿಲ್ಲವೇ?
ಈಗ ತಾನೆ ಕುಂಜೂರು ದೇವಳದ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ತುಂಬಿರುವ ನೆರೆ ನೀರನ್ನು ಕಂಡಾಗ , ಹಿಂದಿನ ಕೆಲವು ನೆರೆಯ ಸಂದರ್ಭಗಳು ನೆನಪಿಗೆ ಬಂದುವು .ಹಾಗೆ ಈ ನಿರೂಪಣೆ ಬರೆಯುವ ಪ್ರೇರಣೆಯಾಯಿತು . ಇಂತಹ ಹಲವು ಕ್ಷೇತ್ರಗಳು ನಮ್ಮ ಜಿಲ್ಲೆಯಲ್ಲಿವೆ .
ವರದಿ (ಮಾಹಿತಿ) : ಕೆ.ಎಲ್.ಕುಂಡಂತಾಯ