Updated News From Kaup
ಉಡುಪಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ತಂಡ ರಚನೆ : ಮಹೇಶ್ವರ ರಾವ್
Posted On: 26-06-2020 10:34PM
ಉಡುಪಿ ಜೂನ್ 26 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯುವ ಕುರಿತಂತೆ ಕೂಡಲೇ ಎಸ್ಪಿ ಮತ್ತು ಕುಂದಾಪುರ ಎಸಿ ಅವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಕಟ್ಟುನಿಟ್ಟಿನ ತಪಾಸಣಾ ಕಾರ್ಯ ಕೈಗೊಳ್ಳುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಮರಳು ಸಮಸ್ಯೆ ಮತ್ತು ಕೋವಿಡ್-19 ಪ್ರಸ್ತುತ ಪರಿಸ್ಥಿತಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಮರಳು ಸಾಗಾಟ ತಡೆಯುವ ಕುರಿತಂತೆ ಎಸ್ಪಿ ಮತ್ತು ಎಸಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ, ಮರಳುಗಾರಿಕೆ ನಡೆಯುವ ಪ್ರದೇಶಗಳ ಮೇಲೆ ದೀಢೀರ್ ದಾಳಿ ನಡೆಸುವುದರ ಮೂಲಕ ಹಾಗೂ ನಿರಂತರವಾಗಿ ಪರಿಶೀಲನೆ ನಡೆಸುವುದರ ಮೂಲಕ ಜಿಲ್ಲೆಯಲ್ಲಿ ಯಾವುದೇ ಅಕ್ರಮ ಮರಳು ಸಾಗಾಟ ನಡೆಯದಂತೆ ಎಚ್ಚರವಹಿಸುವಂತೆ ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಂಡಗಳನ್ನು ರಚಿಸುವಂತೆ ಹಾಗೂ ತಂಡದಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ನಿಯೋಜಿಸುವಂತೆ ಮಹೇಶ್ವರ ರಾವ್ ಸೂಚನೆ ನೀಡಿದರು. ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳು ಸಾಗಾಟಕ್ಕೆ ಸಂಬಂದಿಸಿದ ಯಾವುದೇ ವಾಹನ ಕಂಡುಬಂದಲ್ಲಿ ಕೂಡಲೇ ಮುಟ್ಟುಗೋಲು ಹಾಕಿಕೊಂಡು ಸಂಬಂದಪಟ್ಟವರ ವಿರುದ್ದ ಎಫ್.ಐ.ಆರ್. ದಾಖಲಿಸುವಂತೆ ಹಾಗೂ ಮರಳುಗಾರಿಕೆ ನಡೆಸಲು ಅನುಮತಿ ಪಡೆದು ನಿಯಮ ಉಲ್ಲಂಘಿಸಿರುವ ವಾಹನಗಳ ವಿರುದ್ದ ಸಹ ಕೂಡಲೇ ಕ್ರಮ ಕೈಗೊಳ್ಳುವಂತೆ ಮಹೇಶ್ವರ ರಾವ್ ಸೂಚಿಸಿದರು. ಅಕ್ರಮ ಮರಳುಗಾರಿಕೆ ತಡೆಯುವ ಜವಾಬ್ದಾರಿ ಹೊಂದಿರುವ ಸಂಬಂದಪಟ್ಟ ತಹಸೀಲ್ದಾರ್ ಗಳು, ಪಿಡಿಓ ಗಳು, ಗಣಿ ಇಲಾಖೆ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳು ಮರಳುಗಾರಿಕೆ ನಡೆಯುವ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಕ್ರಮ ನಡೆಯದಂತೆ ಎಚ್ಚರವಹಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಚೇತರಿಕೆ ಪ್ರಮಾಣ 63% ಇದೆ ಆದರೆ ಜಿಲ್ಲೆಯಲ್ಲಿ ಇದರ ಪ್ರಮಾಣ 92% ಇದೆ, ಸೋಂಕಿತರ ಮರಣ ಪ್ರಮಾಣ ರಾಜ್ಯದಲ್ಲಿ 1.6% ಇದ್ದರೆ ಜಿಲ್ಲೆಯಲ್ಲಿ 0.2 ಇದೆ, ಜಿಲ್ಲೆಯಲ್ಲಿ ಕೋವಿಡ್ 19 ವಿರುದ್ದ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಕರೋನಾ ಸೋಂಕಿತರ ಸಂಪರ್ಕದವರ ಟ್ರೇಸಿಂಗ್ ಕಾರ್ಯ ಸಹ ಉತ್ತಮವಾಗಿ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಕಾರ್ಯವನ್ನು ಅಭಿನಂದಿಸಿದ ಮಹೇಶ್ವರ ರಾವ್, ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 3 ಮಂದಿಯ ವಿರುದ್ದ ಎಫ್.ಐ.ಆರ್ ದಾಖಲಿಸಿದ್ದು, ಕ್ವಾರಂಟೈನ್ ನಲ್ಲಿರುವವರ ಮನೆಗೆ ಪ್ರತಿದಿನ ಭೇಟಿ ನೀಡಿ, ಕ್ವಾರಂಟೈನ್ ಆಪ್ ನಲ್ಲಿ ದಾಖಲಿಸುವ ಕಾರ್ಯದಲ್ಲಿ ಜಿಲ್ಲೆಯಲ್ಲಿ 92% ಸಾಧನೆ ಮಾಡಿದ್ದು, ರಾಜ್ಯದಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ, ಕೋವಿಡ್ -19 ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿಗಳ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್ 19 ಚಿಕಿತ್ಸೆಗಾಗಿ 2400 ಹಾಸಿಗೆ ಸೌಲಭ್ಯವಿದ್ದು, 9 ಫಿವರ್ ಕ್ಲಿನಿಕ್ ತೆರೆಯಲಾಗಿದೆ, ಐ.ಎಲ್.ಐ ಮತ್ತು ಸಾರಿ ಪ್ರಕರಣಗಳ ಕುರಿತಂತೆ ಪ್ರತಿದಿನ ವರದಿ ಪಡೆಯಲಾಗುತ್ತಿದೆ, 13840 ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು ಪ್ರಸ್ತುತ 116 ಸಕ್ರಿಯ ಪ್ರಕರಣಗಳು ಮಾತ್ರ ಇವೆ ಎಂದು ಕೋವಿಡ್-19 ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮಾಹಿತಿ ನೀಡಿದರು. ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಕುಂದಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ಎಲ್ಲಾ ತಾಲೂಕುಗಳ ತಹಸೀಲ್ದಾರರು ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿಯಲ್ಲಿ ಆದಿತ್ಯವಾರವೇ ಸೆಲೂನ್'ಗಳಿಗೆ ರಜೆ ಸವಿತಾ ಸಮಾಜದ ನಿರ್ಧಾರ
Posted On: 26-06-2020 09:26PM
ಉಡುಪಿ. 26, ಜೂನ್ : ದಿನಾಂಕ 02/06/2020 ರಂದು ಜಿಲ್ಲಾ ಸವಿತಾ ಸಮಾಜದ ಏಳು ತಾಲೂಕಿನ ಸವಿತಾ ಸಮಾಜದ ಅಧ್ಯಕ್ಷರು, ವಲಯ ಘಟಕದ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೊರೊನ ನಿಮಿತ್ತ ಸೆಲೂನ್ ಗಳಿಗೆ ಭಾನುವಾರ ರಜೆ ಮಾಡಿ ಮಂಗಳವಾರ ತೆರೆದಿಡುವಂತೆ ತೆಗೆದುಕೊಂಡ ನಿರ್ಣಯದಂತೆ ಈಗಾಗಲೇ ನಾಲ್ಕು ಭಾನುವಾರ ರಜೆ ಆಗಿದ್ದರು ಉಡುಪಿ ನಗರದ ಮಣಿಪಾಲ ಮತ್ತು ಶಿರ್ವ ಮುದರಂಗಡಿಯಲ್ಲಿ ಕೆಲವು ಮಾಲೀಕರ ಅಸಹಕಾರದಿಂದ ಸಮಸ್ಯೆ ಆಗಿರುವುದನ್ನು ಮನಗಂಡು ಇಂದು ಎಲ್ಲಾ ಜಿಲ್ಲಾ ಸವಿತಾ ಸಮಾಜದ ಸಮಾಲೋಚನಾ ಸಭೆ ನಡೆಯಿತು. ಸಾಮಾಜಿಕ ಸ್ವಾಸ್ಥ್ಯ ಹಾಗೂ ಕ್ಷೌರಿಕರ ಆರೋಗ್ಯವನ್ನು ಕಾಪಾಡುವುದು ಅದರೊಂದಿಗೆ ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುವುದರೊಂದಿಗೆ ಎಲ್ಲಾದರೂ ಭಾನುವಾರ ಸೆಲೂನ್ ಗಳಲ್ಲಿ ಒತ್ತಡ ಜಾಸ್ತಿಯಾಗಿ ನಿಯಮಾವಳಿಗಳನ್ನು ಪಾಲಿಸಲು ಆಗದೇ ಕ್ಷೌರ ವೃತ್ತಿ ನಿಭಾಯಿಸಲು ಕಷ್ಟ ಸಾಧ್ಯವಾಗಿರುವುದರಿಂದ ಸದ್ಯದ ಮಟ್ಟಿಗೆ ಭಾನುವಾರವೇ ರಜೆ ಮಾಡಿ ಮಂಗಳವಾರ ತೆರೆದು ಹಿಂದೆ ನಿರ್ಧರಿಸಿದಂತೆ ಮುಂದುವರಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು, ಆದ್ದರಿಂದ ಸಮಾಜದ ಸಂಘಟನೆಯ ವಿರುದ್ಧವಾಗಿ ಕೆಲವರು ಸೆಲೂನ್ ಗಳನ್ನು ತೆರೆದಿಟ್ಟರು ಸಾರ್ವಜನಿಕರು, ಹಿರಿಯರ, ಮಕ್ಕಳ ಮತ್ತು ತಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಭಾನುವಾರ ಸೆಲೂನ್ಗಳಿಗೆ ತೆರಳದೆ ವಾರದ ಇತರ ದಿನಗಳಲ್ಲಿ ಸೇವೆ ಪಡೆಯುವಂತೆ ಜಿಲ್ಲಾ ಸವಿತಾ ಸಮಾಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಭಗವಂತ ಬದುಕು ಕೊಟ್ಟಿರುವುದು ಸಾಯಲು ಅಲ್ಲ ಬದುಕಲು - ದಿವ್ಯಾಂಗ ಗಣೇಶ್ ಪಂಜಿಮಾರ್
Posted On: 26-06-2020 04:57PM
"ಸಾವನ್ನು ನಾವು ಹುಡುಕಿಕೊಂಡು ಹೋಗಬಾರದು. ನಮ್ಮನ್ನು ಸಾವು ಹುಡುಕಿಕೊಂಡು ಬರಬೇಕು. ಆ ದಿನದ ವರೆಗೆ ಬಾಳಬೇಕು." ಮರಣವೆಂಬುದು ಮಹಾ ನವಮಿಯಾಗಬೇಕೇ ಹೊರತು ಸ್ವಯಂ ವಧಾಮಿಯಾಗಬಾರದು. ಮರಣ ನಮ್ಮ ವಿಳಾಸ ಹಿಡಿದುಕೊಂಡು ಪರದಾಡಬೇಕು. ನಾವು ಯಾಕೆ ಬಾರದೆ ಇರುವ ಮರಣವನ್ನು ಬಲವಂತದಿಂದ ಬರಮಾಡಿಸಿಕೊಂಡು ಒದ್ದಾಡಿ ಸಾಯಬೇಕು? ಭಗವಂತ ನಮಗೆ ಬದುಕು ಕೊಟ್ಟಿರುವುದು ಬದುಕಲು. ಸಾವು ಬರುವ ತನಕ ನಾವು ಬದುಕಿ ತೋರಿಸಬೇಕು. ಈ ಬದುಕಿ ತೋರಿಸುವ ಕಲೆಯೇ ಜೀವನ. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುವವರು ಒಮ್ಮೆ ನಮ್ಮಂತವರನ್ನು ನೋಡಬೇಕು. ಅಥವಾ ನಮ್ಮಂತವರ ಬಗ್ಗೆ ತಿಳಿದುಕೊಳ್ಳಬೇಕು. ತಂದೆ ಗದರಿದರು ತಾಯಿ ಬೈದರು, ಶಿಕ್ಷಕರು ಜೋರು ಮಾಡಿದ್ರು, ಎಂದು ಒಂದು ಕ್ಷಣದಲ್ಲಿ ಬದುಕೇ ಬೇಡ ಎಂದು ನಿರ್ಧರಿಸಿ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಬೇಸರಿಸುತ್ತಾರೆ ಭಾವಚಿತ್ರ ಕಲಾವಿದ ಗಣೇಶ್ ಪಂಜಿಮಾರು. ತಾನು ಸ್ವತಃ Osteogenesis imperfecta (ಮೂಳೆಗಳ ತೀವ್ರ ದುರ್ಬಲತೆಯಿಂದ ಬರುವ ಅನುವಂಶಿಕ ರೋಗ) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಅಪರೂಪದ ಕಾಯಿಲೆಯ ಪರಿಣಾಮದಿಂದಾಗಿ ಮೂವತ್ತೊಂದರ ಹರೆಯದ ಗಣೇಶ್ ಅವರ ಎತ್ತರ ಮೂರುವರೆ ಅಡಿ. ಭಾರ ಇಪ್ಪತ್ಮೂರು ಕಿಲೋಗ್ರಾಂ. ಆರು ಮಂದಿ ಒಡಹುಟ್ಟಿದವರಲ್ಲಿ ನಾಲ್ಕು ಮಂದಿಗೆ ಈ ಭೀಕರ ಕಾಯಿಲೆ ಇದೆ. ಅಣ್ಣ ಒಬ್ಬ ಇದೇ ಮಾರಕ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ. ದಿವ್ಯಾಂಗತೆ ಇರುವುದು ನನ್ನ ದೇಹಕ್ಕೆ ಅನ್ಯತಾ ಮನಸ್ಸಿಗಲ್ಲ. ಅದು ಅದರ ಕಾರ್ಯ ಮಾಡಲಿ. ನಾನು ನನ್ನ ಕಾರ್ಯ ಮಾಡುತ್ತೇನೆ ಎಂದು ಪಣತೊಟ್ಟವರು ಗಣೇಶ್ ಪಂಜಿಮಾರು. ವಿಧಿಯನ್ನು ಹಳಿಯುತ್ತ ಬದುಕುವುದಕ್ಕಿಂತ ಬಂದದೆಲ್ಲ ಬರಲಿ. ದಾಸರು ಹೇಳುವ ಹಾಗೆ "ಈಸ ಬೇಕು. ಇದ್ದು ಜೈಸಬೇಕು." ಇವರೊಂದಿಗೆ ಮನೆಯವರೆಲ್ಲ ಈ ತತ್ವವನ್ನು ಪರಿಪಾಲಿಸಿಕೊಂಡು ಬದುಕುತ್ತಿದ್ದಾರೆ. ಬಿ. ಕಾಂ ಪದವೀಧರರಾದ ಗಣೇಶ್ ಸದ್ಯ ನಿರುದ್ಯೋಗಿ. ಹಲವು ಬಾರಿ ಬ್ಯಾಂಕಿಂಗ್ ಪರೀಕ್ಷೆ ಕಟ್ಟಿದರೂ ಉತ್ತೀರ್ಣರಾಗದೇ ಮರಳಿ ಯತ್ನವ ಮಾಡುತ್ತಲ್ಲಿದ್ದಾರೆ. ಪದವಿ ಪಡೆದ ನಂತರ ಮನೆಯಲ್ಲಿರುತ್ತ ಏನಾದರೊಂದು ಮಾಡಬೇಕು. ನನ್ನ ಸಂಸಾರದ ನೇಗಿಲಿಗೆ ಹೆಗಲು ಕೊಡಬೇಕೆಂದು ಹಪಹಪಿಸುತ್ತಿದ್ದರು. ಒಂದು ಗುರುವಾರ ತನ್ನ ತಾಯಿ ಶಿರ್ವದ ಸಂತೆಗೆ ಹೋಗಿರುವ ಸಮಯದಲ್ಲಿ ತದೇಕ ಚಿತ್ತದಿಂದ ತಾಯಿಯನ್ನು ನೆನೆಸುತ್ತ ಹಾಳೆಯ ಮೇಲೆ ತಾಯಿಯ ಭಾವಚಿತ್ರವನ್ನು ಬಿಡಿಸಿದರು. ನೂರಕ್ಕೆ ನೂರರಷ್ಟು ಅಲ್ಲದಿದ್ರೂ ತೊಂಬತ್ತೇಳು ಪ್ರತಿಶತ ಚೆನ್ನಾಗಿಯೇ ಬಿಡಿಸಿದರು. ತಾಯಿ ಮರಳಿ ಬಂದು ನೋಡಿದಾಗ ಆನಂದ ಭಾಷ್ಪಿತರಾದರಂತೆ. ಅಂದೇ ಭಾವಚಿತ್ರ ಬಿಡಿಸುವ ಕಲೆಗೆ ಗಣಪತಿ ಮಂತ್ರ ಹಾಡಿದ ಗಣೇಶ್ ಮತ್ತೆ ಹೊರಳಿ ನೋಡಲಿಲ್ಲ. ಗಣೇಶ್ ಅವರು ಇಂದು ತನ್ನದೇ ಆದ Ganesh Panjimar Arts ಎಂಬ ಯುಟ್ಯೂಬ್' ಚಾನೆಲ್ ಹೊಂದಿದ್ದಾರೆ. ನೂರಾರು ಭಾವಚಿತ್ರಗಳನ್ನು ಬಿಡಿಸಿ ಯುಟ್ಯೂಬ್ ವಾಹಿನಿಯಲ್ಲಿ ಹರಿಯಬಿಟ್ಟಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಯ ಚಲನಚಿತ್ರ ರಂಗದ ದಿಗ್ಗಜರ ಭಾವಚಿತ್ರಗಳನ್ನು ರಚಿಸಿದ್ದಾರೆ. ಕ್ರಿಕೆಟ್, ಫುಟ್‌ಬಾಲ್, ಡಬ್ಲು. ಡಬ್ಲು. ಎಫ್ ತಾರೆಯರ ರಾಜಕೀಯ ನೇತಾರರ, ಸಾಮಾಜಿಕ ಗಣ್ಯರ ಭಾವಚಿತ್ರಗಳನ್ನು ರಚಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರಿಂದ ಸನ್ಮಾನಿತರಾಗಿದ್ದಾರೆ ಬಂಜರಾ ಗ್ರೂಪಿನ ಮಾಲಕರಾದ ಡಾ. ಪ್ರಕಾಶ್ ಶೆಟ್ಟಿಯವರ ಅಭಿನಂದನ ಕಾರ್ಯಕ್ರಮದಲ್ಲಿ ಪುರಸ್ಕೃತರಾಗಿದ್ದಾರೆ. ಪರ್ಯಾಯೋತ್ಸವದಲ್ಲಿ ಸನ್ಮಾನಿತರಾಗಿದ್ದಾರೆ. ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜ್ ಶಿರ್ವ, ಹಳೆ ವಿದ್ಯಾರ್ಥಿ ಸಂಘ ಮುಂಬೈ ಘಟಕದ ಜಾಗತಿಕ ಸಮಾವೇಶದಲ್ಲಿ ಸನ್ಮಾನಿತರಾಗಿದ್ದಾರೆ. ಊರಿನ ಹಲವಾರು ಸಂಘ ಸಂಸ್ಥೆಗಳು ಗಣೇಶ್ ಅವರ ಸಾಧನೆಯನ್ನು ಗುರುತಿಸಿವೆ. ಮಾಧ್ಯಮಗಳೂ ಪರಿಚಯಿಸಿವೆ. ಗಣೇಶ್ ಅವರ ಓರ್ವ ಹಿರಿಯ ಸೋದರ ದಿವ್ಯಾಂಗರಾದರೂ ಸಾಫ್ಟ್‌ವೇರ್ ಇಂಜಿನಿಯರಿಂಗ್ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಉದ್ಯೋಗಿ ಆಗಿದ್ದಾರೆ ಇವರ ತಮ್ಮ ಕೂಡ ಸಾಫ್ಟ್‌ವೇರ್ ಇಂಜಿನಿಯರ್. ಕುಟುಂಬದ ಪೋಷಣೆಯ ಭಾರ ಆ ಇಬ್ಬರ ಮೇಲಿದೆ. ಇವರ ದಿವ್ಯಾಂಗವುಳ್ಳ ತಂಗಿ ಮನೆಯಲ್ಲಿ ಕಾಗದಗಳ ಪಟ್ಟಿಯಿಂದ (Quill Arts) ಗೊಂಬೆ ತಯಾರಿಸುವ ಸೃಜನಶೀಲತೆಯನ್ನು ಬೆಳೆಸಿಕೊಂಡಿದ್ದಾರೆ. ಗಣೇಶ್ ಪಂಜಿಮಾರು ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹತ್ತಿರದ ಕೋಡು ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆಯಿಂದ ಕಲಿತವರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಶ್ರೀಗುರು ನಾರಾಯಣ ಹೈಸ್ಕೂಲ್, ಪಡುಬೆಳ್ಳೆ ಇಲ್ಲಿಂದ ಮಾಡಿದವರು. ಪದವಿ ಪೂರ್ವ ಶಿಕ್ಷಣವನ್ನು ಹಿಂದೂ ಜೂನಿಯರ್ ಕಾಲೇಜ್ ಹಾಗೂ ಬಿಕಾಂ ಪದವಿಯನ್ನು ಎಂ. ಎಸ್. ಆರ್. ಎಸ್ ಕಾಲೇಜ್ ಇಲ್ಲಿಂದ ಪಡೆದಿರುವರು. ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಎಂ. ಎಸ್. ಆರ್. ಎಸ್. ಕಾಲೇಜಿನ ಹಳೆ ವಿದ್ಯಾರ್ಥಿ ಮುಂಬೈ ಘಟಕವು ಮೂರು ವರ್ಷ ಧನ ಸಹಾಯ ಮಾಡಿದೆ ಎಂದು ಸದಾ ಸ್ಮರಿಸುತ್ತಾರೆ ಗಣೇಶ್. ಪದವಿ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿಗೆ ಹೋಗಿ ಬರಲು ವಿಶೇಷವಾಗಿ ತಯಾರಿಸಿದ ತ್ರಿಚಕ್ರ ವಾಹನವನ್ನು ಕೊಡುಗೆಯಾಗಿ ನೀಡಿದ ಉಡುಪಿಯ ಉದ್ಯಮಿ ಶ್ರೀಸುದರ್ಶನ್ ಶೆಟ್ಟಿಯವರನ್ನೂ ಅದಕ್ಕಾಗಿ ಶ್ರಮಿಸಿದ ಹಿಂದಿ ಪ್ರಾಧ್ಯಾಪಕರಾಗಿದ್ದ ಶ್ರೀಮತಿ ಶಾರದ ಎಂ. ಅವರನ್ನೂ ಈಗಲೂ ನೆನೆಯುತ್ತಾರೆ ಗಣೇಶ್. ಗಣೇಶ್ ಪಂಜಿಮಾರು ಅವರ ಹಿರಿಯರು ಉಡುಪಿಯವರಾದರೂ ನೆಲೆಸಿದ್ದು ಆಂಧ್ರ ಪ್ರದೇಶದಲ್ಲಿ. ಮೂರು ದಶಕಗಳ ಹಿಂದೆ ಗಣೇಶ್ ಅವರ ಹೆತ್ತವರಾದ ದಿವಗಂತ ರಾಮ ಮೂಲ್ಯರು ಹಾಗೂ ಶ್ರೀಮತಿ ನಾಗಮಣಿ ಅವರು ಪಂಜಿಮಾರಲ್ಲಿ ಬಂದು ನೆಲೆಸಿದವರು. ಆರೋಗ್ಯದಲ್ಲಿ ಸರಿಯಿರುವ ಗಣೇಶ್ ಅವರ ದೊಡ್ಡಣ್ಣ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಅವರು ಸಂಸಾರಿಕರಾಗಿ ಬೇರೆ ವಾಸವಾಗಿದ್ದಾರೆ. ದುಡಿಯವ ಕೈಗಳಿಗಿಂತ ಉಣ್ಣುವ ಬಾಯಿಗಳ ಸಂಖ್ಯೆ ಹೆಚ್ಚು. ಔಷದಕ್ಕೆ ತಿಂಗಳಿಗೆ ತಲಾ ಒಂದೂವರೆ ಸಾವಿರ ರೂಪಾಯಿಗಳಷ್ಟು ವ್ಯಯವಾಗುತ್ತದೆ. ಆದರೂ ನಗು ನಗುತ್ತ ಬಾಳುವ ಇವರು ಊರಿಗೆಲ್ಲ ಮಾದರಿಯಾಗಿದ್ದಾರೆ. ತನ್ನ ಅನ್ನವನ್ನು ತಾನು ದುಡಿದು ತಿನ್ನಬೇಕು ಎಂಬ ಅಚಲ ನಿರ್ಧಾರ ಹೊಂದಿದ ಗಣೇಶ್ ಪಂಜಿಮಾರು ಕಾಯಿಲೆಯೊಂದಿಗೆ ನಿರುದ್ಯೋಗ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ. ಬ್ಯಾಂಕಿನ ಪರೀಕ್ಷೆ ಪಾಸು ಮಾಡಿ ಕೆಲಸಕ್ಕೆ ಸೇರಬೇಕೆಂಬ ಗಣೇಶ್ ಅವರ ಕನಸು ನನಸಾಗಲಿ. ಅಥವಾ ಅದಕ್ಕೆ ತತ್ಸಮಾನವಾದ ಕೆಲಸವೊಂದು ಆದಷ್ಟು ಬೇಗ ದೊರೆಯಲಿ ಎಂದು ಹಾರೈಸೋಣ. ಲೇಖನ: ಉದಯ ಶೆಟ್ಟಿ ಪಂಜಿಮಾರು
ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ವಾಹನದ ವ್ಯವಸ್ಥೆ ಕಲ್ಪಿಸಿದ ಕಾಪುವಿನ ಮರ್ಣೆಯ ತಂಡ
Posted On: 25-06-2020 02:43PM
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮರ್ಣೆ ಕನರಾಡಿ ಕೊಡಂಗಳ ಕರ್ವಾಲು ಇವರ ವತಿಯಿಂದ ಉಚಿತ ವಾಹನದ ವ್ಯವಸ್ಥೆ. ಕಾಪು:(ಜೂನ್25) ವಿದ್ಯಾರ್ಥಿ ಜೀವನದ ಅತ್ಯಮೂಲ್ಯ ಘಟ್ಟ ಆಗಿರುವಂತಹ ಎಸ್.ಎಸ್.ಎಲ್.ಸಿ. ಯ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಕೆಗಳನ್ನು ಸಲ್ಲಿಸುತ್ತಿದ್ದೇವೆ. ಕೊರೊನ ಸಮಯದಲ್ಲಿ ಇನ್ನೂ ಸರಿಯಾಗಿ ಬಸ್ ಇಲ್ಲದ ಕರ್ವಾಲು ಕೊಡಂಗಳ ಮರ್ಣೆ ಅಲೆವೂರಿಗೆ ನಮ್ಮ "ಸಾರ್ವಜನಿಕ ಗಣೇಶೋತ್ಸವ ಸಮಿತಿ ಮರ್ಣೆ ಕನರಾಡಿ ಕೊಡಂಗಳ ಕರ್ವಾಲು" ಇದರ ವತಿಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತದೃಷ್ಟಿಯಿಂದ ಊರಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗಬಾರದೆಂದು ಪ್ರಜ್ವಲ್ ಹೆಗ್ಡೆ ಮರ್ಣೆ ಇವರ ಮುತುವರ್ಜಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪರವಾಗಿ ವಾಹನ ಸೌಕರ್ಯ ಮಾಡಿದ್ದು ಇಂದು ಬೆಳಿಗ್ಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಕರ್ವಾಲು ಮತ್ತು ರಂಜಿತ್ ನಾಯಕ್ ಕನರಾಡಿ ಇವರೊಂದಿಗೆ ಬಸ್ಸಿನ ತನಕ ಹೋಗಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಯುವ ಜನರು ಆತ್ಮವಿಶ್ವಾಸ ಕಳೆದುಕೊಳ್ಳದೆ ದೈರ್ಯದಿಂದ ಪರಿಸ್ಥಿತಿ ಎದುರಿಸಬೇಕಿದೆ: ವಿಶ್ವಾಸ್ ಅಮೀನ್
Posted On: 25-06-2020 08:26AM
ಕೊರೊನಾ ಮಹಾಮಾರಿಯ ಕಾರಣದಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದ ಬೇರೆ ಬೇರೆ ಪದವಿ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಪೈನಲ್ ಇಯರ್,ಗಳಲ್ಲಿ ಓದುತ್ತಿರುವ ಪದವಿ ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ನೆನೆಸಿ ಆತಂಕಿತರಾಗಿದ್ದಾರೆ. ಜಿಲ್ಲೆಯಲ್ಲಿ ಯುವ ಜನತೆ ಲಾಕ್ಡೌನ್ ಸಮಸ್ಯೆಯಿಂದ ತಮ್ಮ ಭವಿಷ್ಯವೇ ಮುಗಿದು ಹೋಯಿತು ಎನ್ನುವಂತೆ ಖಿನ್ನತೆಗೊಳಗಾಗಿರುವ ವರದಿಗಳು ಬರುತ್ತಿರುವುದು ಆತಂಕಕ್ಕೀಡು ಮಾಡಿದೆ. ಮೊನ್ನೆ ಕಾರ್ಕಳ ತಾಲೂಕಿನ ಮುನಿಯಾಲು ಸಮೀಪದ ಪೈನಲ್ ಇಯರ್ ಪದವಿ ವಿದ್ಯಾರ್ಥಿನಿಯೊರ್ವಳು ಪರೀಕ್ಷೆಗಳು ನಡೆದಿಲ್ಲ ಮುಂದೆ ಉದ್ಯೋಗ ಸಿಗುವುದಿಲ್ಲವೆಂದು ಖಿನ್ನತೆಗೊಳಗಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿರುವ ಘಟನೆ ಇರಬಹುದು, ಮಲ್ಪೆ ಸಮೀಪದ ಯುವಕನೋರ್ವ ಇಂತಹದೇ ಔದ್ಯೋಗಿಕ ಸಮಸ್ಯೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇರಬಹುದು ಇದು ಜಿಲ್ಲೆಯ ಮಟ್ಟಿಗೆ ಅತ್ಯಂತ ಆತಂಕಕಾರಿ ಬೆಳವಣಿಗೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಯುವ ಜನತೆಗೊಂದು ಕಿವಿ ಮಾತನ್ನು ಹೇಳಲು ಇಷ್ಟಪಡುತ್ತೇನೆ. ಕೊರಾನ ಮಹಾಮಾರಿಯಿಂದ ನಾವು ಖಂಡಿತಾ ಹೊರಬರುತ್ತೇವೆ ಎನ್ನುವ ವಿಶ್ವಾಸವಿದೆ, ಈಗ ನಮಗಾಗಿರುವ ಸಮಸ್ಯೆ ಇದೊಂದು ತಾತ್ಕಾಲಿಕ ಸಮಸ್ಯೆಯಾಗಿದೆ (ಹಿನ್ನೆಡೆಯಾಗಿದೆ). ಇದರಿಂದ ವಿದ್ಯಾರ್ಥಿಗಳಾಗಲಿ, ಯುವ ಜನತೆಯಾಗಲಿ ಆತ್ಮವಿಶ್ವಾಸವನ್ನು ಕಳೆದುಕೊಂಡು ಭಯಪಡುವ ಅವಶ್ಯಕತೆಯಿಲ್ಲ, ನನ್ನ ಯುವ ಮಿತ್ರರಲ್ಲಿ ವಿನಂತಿ, ದಯವಿಟ್ಟು ಯಾರೂ ಆತಂಕಕ್ಕೆ ಒಳಪಡದೇ ಭವಿಷ್ಯದ ಬಗ್ಗೆ ಆತ್ಮವಿಶ್ವಾಸದಿಂದ ಇರಬೇಕು. ಯುವಜನರು, ವಿದ್ಯಾರ್ಥಿಗಳು ಹೋರಾಟ ಮನೋಭಾವವನ್ನು ಬೆಳೆಸಿಕೊಂಡಲ್ಲಿ ಖಂಡಿತಾ ಮುಂದಿನ ದಿನಗಳು ನಿಮ್ಮದಾಗಲಿದೆ, ನಿಮ್ಮ ಭವಿಷ್ಯ ಉಜ್ವಲವಾಗಲಿದೆ. ರಾಜ್ಯದಲ್ಲೇ ಎಜುಕೇಷನ್ ಹಬ್ ಎಂದು ಖ್ಯಾತಿಗಳಿಸಿರುವ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾವಂತ ಯುವ ಜನರಿಗೆ ಸೂಕ್ತ ಉದ್ಯೋಗ ಅವಕಾಶಾಗಳಿಲ್ಲದೇ ನಮ್ಮ ಯುವ ಜನತೆ ಬೆಂಗಳೂರು ಮುಂಬಯಿ ಮುಂತಾದ ಅನ್ಯ ಜಿಲ್ಲೆ, ರಾಜ್ಯಗಳಿಗೆ ಉದ್ಯೋಗ ಅರಸಿ ವಲಸೆ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಯುವಜನರ ವಲಸೆಯು ಜಿಲ್ಲೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ. ಜಿಲ್ಲೆಯಲ್ಲಿ ಇಂದು ಮನೆ ಮನೆಗಳು ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬಗಳಾಗಿ ನ್ಯೂಕ್ಲಿಯರ್ ಪ್ಯಾಮಿಲಿಗಳಾಗಿ ಮಾರ್ಪಟ್ಟಿವೆ. ತಮ್ಮ ಅರ್ಹತೆಗೆ ತಕ್ಕಂತಹ ಉದ್ಯೋಗ ಸಿಗದೇ ಯುವ ಜನರು ವಲಸೆ ಹೋಗುವುದರಿಂದ ಇಂದು ಜಿಲ್ಲೆಯ ಮನೆ ಮನೆಗಳು ಅಕ್ಷರಶಃ ವೃದ್ದಾಶ್ರಮಗಳಾಗುತ್ತಿವೆ. ಒಂದು ಎರಡು ಮಕ್ಕಳಿರುವ ಹೆತ್ತವರು ಉದ್ಯೋಗ ನಿಮಿತ್ತ ದೂರದೂರಲ್ಲಿ ನೆಲೆಸಿರುವ ಮಕ್ಕಳಿಂದಾಗಿ ಮನೆಯಲ್ಲಿ ಮಕ್ಕಳ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಇಲ್ಲಿನ ಯುವ ಜನತೆಗೆ ಸ್ಥಳೀಯವಾಗಿಯೇ ಉದ್ಯೋಗ ಸಿಗುವಂತಾಗಬೇಕು. ನಾನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಈ ಮೂಲಕ ಮನವಿಯನ್ನು ಮಾಡುತ್ತೇನೆ : ನಮ್ಮ ಜಿಲ್ಲೆಗೆ ಐಟಿ ಬಿಟಿ,ಯಂತಹ ಕಂಪನಿಗಳು ಬರಬೇಕು, ಜಿಲ್ಲೆಯ ಸುಂದರ ಪರಿಸರಕ್ಕೆ ಹಾನಿಯಾಗದಂತಹ ಬೃಹತ್ ಉದ್ದಿಮೆಗಳು ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕು. ಆ ಮೂಲಕ ಇಲ್ಲಿನ ಯುವ ಜನರು ಜಿಲ್ಲೆ ಬಿಟ್ಟು ಮಹಾನಗರಗಳಿಗೆ ವಲಸೆ ಹೋಗುವುದು ತಪ್ಪುತ್ತದೆ. ನಮ್ಮ ಜಿಲ್ಲೆಯ ಶಾಸಕರುಗಳು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಿ ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಈ ಎಲ್ಲಾ ನಿಟ್ಟಿನಲ್ಲಿ ಯುವ ಜನರ ಮೇಲಿನ ಕಾಳಜಿಯಿಂದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಟ್ವಿಟರ್ ಅಭಿಯಾನವನ್ನು ಮಾಡಲು ನಿರ್ಧರಿಸಿದೆ. ನನ್ನೆಲ್ಲಾ ಯುವ ಮಿತ್ರರು ಈ ಟ್ವಿಟರ್ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ ನಮ್ಮ ಜಿಲ್ಲೆಯ ಅಭಿವೃದ್ಧಿ ಹಾಗೂ ಯುವ ಜನರ ಉದ್ಯೋಗದ ಸಮಸ್ಯೆಗಳಿಗೆ ಸ್ಪಂದನೆಯನ್ನು ನೀಡಬೇಕೆಂದು ಮನವಿಯನ್ನು ಮಾಡುತ್ತೇನೆ. ಮತ್ತೊಮ್ಮೆ ಯುವ ಮಿತ್ರರಲ್ಲಿ ಮನವಿಯನ್ನು ಮಾಡುತ್ತೇನೆ: ಪ್ರಸ್ತುತ ನಮಗಾಗಿರುವ ತಾತ್ಕಾಲಿಕ ಸಮಸ್ಯೆಯಿಂದ ನಾವು ಖಂಡಿತಾ ಹೊರಬರಲಿದ್ದೇವೆ. ಕೊರಾನ ಸಮಸ್ಯೆಗಳಿಂದ ಆದ ಅನಾಹುತಗಳನ್ನು ಮೆಟ್ಟಿನಿಂತು ಸುಂದರ ಬದುಕನ್ನು ಕಾಣುವ ವಿಶ್ವಾಸದಿಂದ ಮುನ್ನಡೆಯೋಣ. ಯುವ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಲು ಯಾವುದೇ ಕ್ಷಣದಲ್ಲೂ ಯುವ ಕಾಂಗ್ರೆಸ್ ಸನ್ನದ್ದವಾಗಿರುತ್ತದೆ ಎನ್ನುವ ಭರವಸೆಯನ್ನು ಈ ಮೂಲಕ ನೀಡುತ್ತಿದ್ದೇನೆ.
ಉಡುಪಿ : ಸುರಕ್ಷತೆ ಮತ್ತು ಸುಗಮ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಎಲ್ಲಾ ಸಿದ್ದತೆ
Posted On: 24-06-2020 03:35PM
ಉಡುಪಿ ಜೂನ್ 24 (ಕರ್ನಾಟಕ ವಾರ್ತೆ): ಉಡುಪಿ ಜಿಲ್ಲೆಯಲ್ಲಿ ಜೂನ್ 25 ರಿಂದ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಸುಗಮವಾಗಿ ಪರೀಕ್ಷೆ ನಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಬುಧವಾರ, ಉಡುಪಿಯ ವಳಕಾಡು ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಅತ್ಯಂತ ಸುರಕ್ಷಿತ ಮತ್ತು ಸುಗಮವಾಗಿ ನಡೆಸುವ ಕುರಿತಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಲಾಗಿದ್ದು, ಜಿಲ್ಲಾ ಪಂಚಾಯತ್ ಸಿಇಓ , ಡಿಡಿಪಿಐ ಮತ್ತು ನಾನು ಹಲವು ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ, ಕಂಟೋನ್ಮೆಟ್ ಝೋನ್ ನಿಂದ ಬರುವ 4 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ, ಕ್ವಾರಂಟೈನ್ ಗೆ ಬಳಸಿರುವ ಶಾಲೆಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಅಗತ್ಯ ಬಸ್ ವ್ಯವಸ್ಥೆ ಮಾಡಲಾಗಿದ್ದು, 10 ಪರೀಕ್ಷಾ ಕೇಂದ್ರಗಳನ್ನು ಹೆಚ್ಚುವರಿಯಾಗಿ ಗುರುತಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಎಲ್ಲಾ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಶೀಲಿಸಿ ಪ್ರವೇಶ ನೀಡಲಾಗುವುದು, ಜ್ವರದ ಲಕ್ಷಣಗಳಿದ್ದ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿರು. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶದಲ್ಲಿ ಸೆಕ್ಷನ್ 144 ರಂತೆ ನಿಷೇಧಾಜ್ಞೆ ವಿಧಿಸಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶವಿಲ್ಲ, ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ಮಾತ್ರ ಪ್ರವೇಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಡಿಡಿಪಿಐ ಶೇಷ ಶಯನ ಕಾರಿಂಜ, ವಳಕಾಡು ಶಾಲೆಯ ಮುಖ್ಯೋಪಧ್ಯಾಯಿನಿ ನಿರ್ಮಲಾ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋವಿಡ್-19 ಚಿಕಿತ್ಸೆ ನೀಡಲು ಖಾಸಗಿ ಆಸ್ಪ್ಪತ್ರೆಗಳು ಸಿದ್ದವಾಗಬೇಕು :ಜಿಲ್ಲಾಧಿಕಾರಿ ಜಿ.ಜಗದೀಶ್
Posted On: 24-06-2020 02:56PM
ಉಡುಪಿ ಜೂನ್ 24 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೋವಿಡ್-19 ಗೆ ಚಿಕಿತ್ಸೆ ನೀಡಲು ನೊಂದಾಯಿಸಿಕೋಂಡಿರುವ ಆಸ್ಪತ್ರೆಗಳು , ತಮ್ಮಲ್ಲಿ ಬರುವ ಕೋವಿಡ್-19 ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಬುಧವಾರ,ಜಿಲ್ಲಾಧಿಕಾರಿ ಕಚೇರಿಯಲ್ಲಿ , ಕೋವಿಡ್-19 ಚಿಕಿತ್ಸೆ ನೀಡಲು ನೊಂದಾಯಿಸಿರುವ ಖಾಸಗಿ ಆಸ್ಪತ್ರೆಗಳು ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಅಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಕೋವಿಡ್ 19 ಚಿಕಿತ್ಸೆ ನೀಡಲು 19 ಆಸ್ಪತ್ರೆಗಳು ನೊಂದಾಯಿಸಿದ್ದು, ಈ ಆಸ್ಪತ್ರೆಗಳು ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಬೆಡ್ ಗಳನ್ನು ಮೀಸಲಿಡುವುದಂತೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳನ್ನು ಅಳವಡಿಸಿಕೊಳ್ಳುವಂತೆ ಹಾಗೂ ಅಗತ್ಯವಿರುವ ದುರಸ್ತಿ ಕಾರ್ಯಗಳನ್ನು ಕೈಗೊಂಡು ಯಾವುದೇ ಸಂದರ್ಭದಲ್ಲಿ ತಮ್ಮಲ್ಲಿಗೆ ಬರುವ ರೋಗಿಯ ಚಿಕಿತ್ಸಗೆ ಸಂಪೂರ್ಣ ಸಿದ್ದರಿರುವಂತೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ , ಯಾವುದೇ ರೋಗಿಗೆ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಪ್ರಸ್ತುತ 108 ಪಾಸಿಟಿವ್ ಪ್ರಕರಣಗಳು ಮಾತ್ರ ಇದ್ದು, ಅವುಗಳಿಗೆ ಕುಂದಾಪುರ ಮತ್ತು ಕಾರ್ಕಳದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಮುಂದೆ ಪ್ರಕರಣಗಳು ಹೆಚ್ಚು ಕಂಡು ಬಂದಲ್ಲಿ ಖಾಸಗಿ ಆಸ್ಪತ್ರೆಗಳು ಸಹ ಚಿಕಿತ್ಸೆ ನೀಡಲು ಸಿದ್ದರಿರಬೇಕು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸಗೆ ಅಗತ್ಯವಿರುವ ಸೌಲಭ್ಯಗಳು ಇರುವ ಕುರಿತಂತೆ ಪರಿಶೀಲಿಸಲು ತಕ್ಷಣದಲ್ಲೇ ತಜ್ಞರ ಸಮಿತಿಯನ್ನು ರಚಿಸಲಿದ್ದು,ಈ ಸಮಿತಿಯು ಆಸ್ಪತೆಗಳಿಗೆ ಭೇಟಿ ನೀಡಿ, ಆಸ್ಪತ್ರೆಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿ, ವರದಿ ನೀಡಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ನೊಂದಾಯಿತ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ , ಸರ್ಕಾರದ ಮಾರ್ಗಸೂಚಿಯನ್ವಯ ಕೋವಿಡ್-19 ರೋಗಿಗಳ ದಾಖಲಾತಿ ಪ್ರಕ್ರಿಯೆ, ಚಿಕಿತ್ಸಾ ವಿಧಾನಗಳ ಬಗ್ಗೆ ಹಾಗೂ ಮತ್ತಿತರ ಅಗತ್ಯ ಮಾಹಿತಿಗಳನ್ನು ನೀಡಲಾಗುವುದು ಹಾಗೂ ಖಾಸಗಿ ಆಸ್ಪತ್ರೆಯ ಸ್ವಚ್ಚತಾ ಸಿಬ್ಬಂದಿಗಳಿಗೆ ಹಾಗೂ ಇತರರಿಗೆ ಸೂಕ್ತ ತರಬೇತಿ ನೀಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ಖಾಸಗಿ ಆಸ್ಪತ್ರೆಗಳು ಜ್ವರ ಪರೀಕ್ಷಾ ಕೇಂದ್ರ ಮತ್ತು ಐಸೋಲೇಶನ್ ಕೇಂದ್ರ ಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಪ್ರಸ್ತುತ ಜಿಲ್ಲೆಯಲ್ಲಿ , ಶ್ರೀಮಾತಾ ಆಸ್ಪತ್ರೆ, ಕುಂದಾಪುರ, ನಿಟ್ಟೆ ಗಜ್ರಿಯಾ ಆಸ್ಪತ್ರೆ ಕಾರ್ಕಳ, ಆದರ್ಶ ಆಸ್ಪತ್ರೆ ಉಡುಪಿ, ನ್ಯೂಸಿಟಿ ಆಸ್ಪತ್ರೆ ಉಡುಪಿ, ಚಿನ್ಮಯಿ ಆಸ್ಪತ್ರೆ ಕುಂದಾಪುರ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ.ಎನ್.ಆರ್. ಆಚಾರ್ಯ ಸ್ಮಾರಕ ಆಸ್ಪತ್ರೆ ಕೋಟೇಶ್ವರ, ಹೈಟೆಕ್ ಮೆಡಿಕೇರ್ ಆಸ್ಪತ್ರೆ ಉಡುಪಿ, ಮಹೇಶ್ ಆಸ್ಪತ್ರೆ ಬ್ರಹ್ಮಾವರ, ಮಿತ್ರಾ ಆಸ್ಪತ್ರೆ ಉಡುಪಿ, ಪ್ರಣವ್ ಆಸ್ಪತ್ರೆ ಬ್ರಹ್ಮಾವರ, ಸರ್ಜನ್ಸ್ ಆಸ್ಪತ್ರೆ ಕೋಟೇಶ್ವರ, ವಿವೇಕ್ ಆಸ್ಪತ್ರೆ ಕುಂದಾಪುರ, ಸ್ಪಂದನಾ ಆಸ್ಪತ್ರೆ ಕಾರ್ಕಳ, ಶ್ರೀದೇವಿ ಆಸ್ಪತ್ರೆ ಕುಂದಾಪುರ, ಶ್ರೀ ಮಂಜುನಾಥ ಆಸ್ಪತ್ರೆ ಕುಂದಾಪುರ, ಆದರ್ಶ ಆಸ್ಪತ್ರೆ ಕುಂದಾಪುರ, ಸುನಾಗ್ ಆರ್ಥೋಕೇರ್ ಅಂಡ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಉಡುಪಿ, ಡಾ.ಎ.ವಿ ಬಾಳಿಗಾ ಆಸ್ಪತ್ರೆ ಉಡುಪಿ ಇವುಗಳಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆ ನೀಡಲು ಅನುಮತಿ ನೀಡಿದ್ದು, ಪ್ರಸ್ತುತ ಯಾವುದೇ ರೋಗಿಗಳು ಈ ಆಸ್ಪತ್ರೆಗಳಲ್ಲಿ ದಾಖಲಾಗಿಲ್ಲ. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಮಧುಸೂದನ ನಾಯಕ್, ಕೊವಿಡ್-19 ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಹಾಗೂ ಕೋವಿಡ್-19 ಗೆ ಚಿಕಿತ್ಸೆ ನೀಡಲು ನೊಂದಾಯಿಸಿಕೋಂಡಿರುವ ಆಸ್ಪತ್ರೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಮಣಿಪುರ ಗ್ರಾಮದ ರೈಲ್ವೆ ಟ್ರ್ಯಾಕ್ ನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ
Posted On: 24-06-2020 08:25AM
ದಿನಾಂಕ 23.06.2020 ರಂದು ಸಮಯ 23.45 ಗಂಟೆಗೆ ಮಣಿಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಬದಿಯಲ್ಲಿ ಸುಮಾರು 30 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ದೊರೆತಿದ್ದು ಸದ್ರಿ ಮೃತ ದೇಹದ ವಾರಸುದಾರರು ಪತ್ತೆಯಾಗಿರುವುದಿಲ್ಲ ಮೃತ ದೇಹ ನೋಡಲಾಗಿ ಬಲಗೈ ಬಲ ಕಾಲು ಸಂಪೂರ್ಣ ವಾಗಿ ಮುರಿದಿದ್ದು ತಲೆಗೆ ಪೆಟ್ಟಾಗಿರುತ್ತದೆ ಮೃತ ದೇಹದ ಮೇಲೆ ಆಕಾಶ ನೀಲಿ ಬಣ್ಣದ ಟಿ ಶರ್ಟ್ ಹಾಗೂ ಕಪ್ಪು ಚೌಕ್ ಇರುವ ನೀಲಿ ಲುಂಗಿ ನೀಲಿ ಬಣ್ಣದ ಒಳ ಚಡ್ಡಿ ಧರಿಸಿದ್ದು ಕಿವಿಯಲ್ಲಿ ಕಿವಿಯೋಲೆ ಮತ್ತು ಸೊಂಟದಲ್ಲಿ ಉಡುದರ ಹಾಗೂ ಸೊಂಟಕ್ಕೆ ಕಪ್ಪು ಬಣ್ಣದ ದಾರವನ್ನು ಧರಿಸಿರುತ್ತಾನೆ, ಶವವನ್ನು ಸೂರಿ ಶೆಟ್ಟಿಯವರ ಸಹಾಯದಿಂದ ಆಂಬುಲೆನ್ಸ್ ನಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ - ನಮ್ಮ ಕಾಪು ನ್ಯೂಸ್
ಶ್ರೀ ವಿಶ್ವನಾಥ್ ರಾವ್ ಪೈಯ್ಯಾರು ಇನ್ನಿಲ್ಲ.
Posted On: 23-06-2020 08:26AM
ಯಕ್ಷಲೋಕದ ಭಾಗವತಿಕೆಯಲ್ಲಿ ಮಿನುಗಿದ, ಬಿ.ಜೆ.ಪಿ ಪಕ್ಷವನ್ನ ಗ್ರಾಮೀಣ ಭಾಗದಲ್ಲಿ ಸಂಘಟಿಸಿದ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜ್ಯೋತಿನಗರ ಕಳತ್ತೂರು ಇದರ ಸ್ಥಾಪಕ ಸದಸ್ಯರಾಗಿ,ಅಧ್ಯಕ್ಷರಾಗಿ, ಸಮಿತಿಯ ರಜತ ಸಂಭ್ರಮವನ್ನ ಯಶಸ್ವಿಯಾಗಿ ನಿರ್ವಹಿಸಿದ ಪೈಯಾರಿನ ಹಿರಿಯ ಚೇತನವೊಂದು ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಸಂಜೆ ಧೈವಾದೀನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಉಡುಪಿಯ ಭುಜಂಗ ಪಾರ್ಕಿನಲ್ಲಿ ಕುಡುಕರ ಹಾವಳಿ.
Posted On: 22-06-2020 07:59PM
ಉಡುಪಿ, ಜೂ.22; ವಾಯು ವಿಹಾರ ತಾಣ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿ, ಕುಡುಕರು ಅಲ್ಲಲ್ಲಿ ಎಸೆದಿರುವ ಸಾವಿರಾರು ಮದ್ಯದ ಬಾಟಲಿಗಳನ್ನು ತೆರವುಗೊಳಿಸಲು ಜಿಲ್ಲಾ ನಾಗರಿಕ ಸಮಿತಿ ಹಾಗೂ ಸ್ವಚ್ಚ ಭಾರತ್ ಪ್ರೇಂಡ್ಸ್ ಇವರು ಸ್ವಚ್ಚತಾ ಕಾರ್ಯಕ್ರಮವನ್ನು ಸೋಮವಾರ ನಡೆಸಿದರು. ಜಂಟಿ ಸಮಿತಿಯ ಕಾರ್ಯಕರ್ತರು ಸುರಿಯುವ ಮಳೆಯಲ್ಲಿಯೇ ಬಾಟಲಿಗಳ ಒಟ್ಟುಗೂಡಿಸಿ ಆಯಾಕಟ್ಟಿನ ಸ್ಥಳಗಳಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ವಿಲೇವಾರಿಗೊಳಿಸಲು ಸಂಬಂಧಪಟ್ಟವರಿಗೆ ತಿಳಿಸಿಟ್ಟಿದ್ದಾರೆ. ಸ್ವಚ್ಚತಾ ಸೇವಾಕಾರ್ಯದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು, ಹಾಗೂ ಸ್ವಚ್ಚ ಭಾರತ ಪ್ರೇಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು, ಕರ್ವಾಲು, ಜೇಸಿ ಉಡುಪಿ ಸಿಟಿ ಪೂರ್ವಾದ್ಯಕ್ಷ ಜಗದೀಶ್ ಶೆಟ್ಟಿ , ಉದಯ ನಾಯ್ಕ ಪಾಲ್ಗೊಂಡಿದ್ದರು. ಅಜ್ಜರಕಾಡು ಭುಜಂಗ ಪಾರ್ಕ್ ಇದೊಂದು ನಗರದ ಏಕೈಕ ವಾಯುವಿಹಾರ ತಾಣ. ಇಲ್ಲಿಗೆ ಹಿರಿಯ ನಾಗರಿಕರು, ಚಿಕ್ಕ ಮಕ್ಕಳು, ವಾಯು ವಿಹಾರಿಗಳು ಬರುತ್ತಾರೆ. ಇಲ್ಲಿ ಕುಡುಕುರ ಹಾವಳಿಯಿಂದಾಗಿ ಸಾರ್ವಜನಿಕರು ಭಯಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲದಿದ್ದರೂ ಇಲ್ಲಿ ಕಾನೂನಿಗೆ ವಿರುದ್ಧವಾಗಿ ರಾತ್ರಿಯ ಹೊತ್ತಿನಲ್ಲಿ ಮದ್ಯಗೋಷ್ಠಿಗಳು ನಡೆಯುತ್ತಿವೆ. ಹುತಾತ್ಮ ಸೈನಿಕರ ಸ್ಮಾರಕದ ವಠಾರದಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಮಹಾ ಅಪರಾಧವಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ. ನಗರಡಾಳಿತ ಜಿಲ್ಲಾಡಳಿತವು ಅಜ್ಜರಕಾಡು ಪಾರ್ಕಿಗೆ ಕಾವಲುಗಾರನ ವ್ಯವಸ್ಥೆ, ಪೊಲೀಸ್ ಗಸ್ತು, ಬೆಳಕಿನ ವ್ಯವಸ್ಥೆಗಳೊಂದಿಗೆ ಇಲ್ಲಿಗೆ ಬರುವ ಸಾರ್ವಜನಿಕರಿಗೆ ಸುರಕ್ಷೆ ಒದಗಿಸಬೇಕೆಂದು ಜಂಟಿ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.
