Updated News From Kaup

ಬೆಳಪು : ಸಂಕ್ರಮಣ ಪೂಜೆಯ ಸಂದರ್ಭದಲ್ಲಿ ಕಂಡುಬಂತು ನೀರಿನಲ್ಲಿ ಶಿವನ ಆಕೃತಿ

Posted On: 16-06-2020 08:39AM

ಬೆಳಪು-ಪಣಿಯೂರು ಗ್ರಾಮದ ಮಲಂಗೋಲಿ ಪರಿಸರದಲ್ಲಿ ಇರುವ ಉಮಾಮಹೇಶ್ವರ ದೇವಸ್ಥಾನದ ಕೆರೆಯಲ್ಲಿ ತಾ/14.06.2020 ರ ಮಿಥುನ ಸಂಕ್ರಮಣದ ಪೂಜೆಯ ಸಂದರ್ಭದಲ್ಲಿ ಶಿವನ ಆಕೃತಿಯೊಂದು ಕಂಡುಬಂದಿದೆ. ಶ್ರೀ ಕ್ಷೇತ್ರವು ಬೆಳಪು-ಪಣಿಯೂರು ಗ್ರಾಮಕ್ಕೆ ಸಂಬಂಧಿಸಿದ್ದು, ಅನಾದಿ ಕಾಲದಲ್ಲಿ ಇಲ್ಲಿ ಗ್ರಾಮಸ್ಥರು ಸೇರಿ ಪೂಜಾವಿಧಿಗಳು ನಡೆಯುತ್ತಿದ್ದು ಕ್ಷೇತ್ರದಲ್ಲಿ ಶ್ರೀ ಉಮಾಮಹೇಶ್ವರ ದೇವರು, ತುಳುನಾಡಿನ ಮೂಲ ದೇವರಾದ ಬೆರ್ಮರು, ಹಾಗೂ ಲೆಕ್ಕೆಸಿರಿ ನಂದಿಗೋಣ ಸೇರಿ ಪಂಚ ದೈವಗಳ ಸಾನ್ನಿಧ್ಯವಿದೆ. ಹಲವಾರು ವರ್ಷಗಳಿಂದ ಅಜೀರ್ಣಾವಸ್ಥೆಯಲ್ಲಿ ಇರುವಂತಹ ಈ ದೇವಸ್ಥಾನದ ಜೀರ್ಣೋದ್ಧಾರ ಬಗ್ಗೆ ಅನೇಕ ವರ್ಷಗಳಿಂದ ಗ್ರಾಮಸ್ಥರು ಪ್ರಯತ್ನ ಪಡುತ್ತಿದ್ದರು, ಇನ್ನೂ ಕಾಲ ಕೂಡಿ ಬರಲಿಲ್ಲ ಎಂದು ಬೇಸರದಲ್ಲಿರುವ ಗ್ರಾಮಸ್ಥರು. ನೀರಿನಲ್ಲಿ ಕಾಣಿಸಿರುವ ಆಕೃತಿ ದೇವರ ಸನ್ನೆಯಂತೆ ಎಂದು ತಿಳಿದಿದ್ದಾರೆ. ಬೆಳಪು-ಪಣಿಯೂರು ಗ್ರಾಮದ ಪಂಚಾಯಿತಿ ಅಧ್ಯಕ್ಷರು ಶ್ರೀ ಡಾ. ದೇವಿಪ್ರಸಾದ್ ಶೆಟ್ಟಿಯವರು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಸಮಗ್ರವಾಗಿ ಜೀರ್ಣೋದ್ಧಾರದ ಬಗ್ಗೆ ಚಿಂತನೆ ನಡೆದಿದೆ.

ವಿಶೇಷ ಸೂಚನೆ : ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು.

Posted On: 15-06-2020 11:52PM

ಪ್ರಿಯ ಭಕ್ತಾಭಿಮಾನಿಗಳೇ, ನಾಳೆಯಿಂದ, ಕಾಪು ಶ್ರೀ ಹಳೇ ಮಾರಿಯಮ್ಮ ದೇವಳದಲ್ಲಿ ಶ್ರೀದೇವಿಯ ದರ್ಶನಕ್ಕೆ ಸರ್ವರಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ಶ್ರೀ ದೇವಳದಲ್ಲಿ ಕೋವಿಡ್ 19 ನಿಯಂತ್ರಣಕ್ಕಾಗಿ ಹಾಗೂ ಸರಕಾರದ ಮಾರ್ಗದರ್ಶನದಂತೆ ವಿಧಿಸಲಾದ ಈ ಕೆಳಗಿನ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಭಕ್ತಾಭಿಮಾನಿಗಳಲ್ಲಿ ವಿನಂತಿಸುತ್ತೇವೆ. ಆಡಳಿತ ಮಂಡಳಿ - ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು.

ಇನ್ನಂಜೆ - ಕಂಬೆರ್ಲ ಪೆರಿಯಕಲ ಉಂಡಾರು ಪುನರ್ ಪ್ರತಿಷ್ಠೆ ಸಕಲ ಕಾರ್ಯಗಳು ಸಂಪನ್ನ

Posted On: 15-06-2020 12:07AM

ನಮ್ಮ ಹಿರಿಯರು ಅನಾದಿಕಾಲದಿಂದ ಆರಾಧಿಸಿಕೊಂಡು ಬಂದಿರುವ ಉಂಡಾರುವಿನ ಕಾರ್ನಿಕದ ಪರಮ ಪವಿತ್ರ ಸ್ಥಳ ಕಂಬೆರ್ಲ ಪೆರಿಯ ಕಲ ಭಗವಾನ್ ಶ್ರಿ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆಯು ಊರ ಪರವೂರ ಭಕ್ತಾದಿಗಳ ಸಹಕಾರದಿಂದ ಸರಳ ರೀತಿಯಲ್ಲಿ ಕಳೆದ ಬುಧವಾರ ಜರಗಿದ್ದು ಇದರ ಮುಂದುವರಿದ‌ ಭಾಗವಾಗಿ ಪೆರಿಯಕಲದಲ್ಲಿ ನೆಲೆಯಾಗಿ ಭಕ್ತಾದಿಗಳಿಗೆ ಸದಾ ಅಭಯವನ್ನು ನೀಡುತ್ತಿರುವ ಸತ್ಯಗಳಿಗೆ ಪುನರ್ ಪ್ರತಿಷ್ಠೆಯ ಸಲುವಾಗಿ ಸಂದಬೇಕಾಗಿರುವ 3 ಬೋಗ ಸೇವೆಯಲ್ಲಿ 2 ಬೋಗ ಸೇವೆ (ಪಂಚಕಜ್ಜಾಯ ಸೇವೆ) ಯನ್ನು ಗ್ರಾಮದ ಭಕ್ತಾದಿಗಳು ಹತ್ತು ಸಮಸ್ತರೊಂದಿಗೆ ಸಲ್ಲಿಸಿದ್ದು 3ನೆಯ ಬೋಗ ಗಡಿಹಾರ ಸೇವೆ (ರಕ್ತಾಹಾರ ಸೇವೆ)ಯನ್ನು ಇಂದು ಪೆರಿಯಕಲದ ಸತ್ಯಗಳ ದರ್ಶನದೊಂದಿಗೆ ಗ್ರಾಮದ ಭಕ್ತಾದಿಗಳ ಸಹಕಾರದಿಂದ ಸಮರ್ಪಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಅತ್ಯಂತ‌ ಸರಳ ರೀತಿಯಲ್ಲಿ ಆಚರಿಸಲಾಯಿತು. ಈ ಪುಣ್ಯ ಕಾರ್ಯಕ್ಕೆ ಕೈ ಜೋಡಿಸಿ ತನು ಮನ ಧನದ ಸಹಕಾರ ನೀಡಿದ ಎಲ್ಲರಿಗೂ ಆಡಳಿತ ಮಂಡಳಿಯು ಧನ್ಯವಾದಗಳನ್ನು ಸಲ್ಲಿಸುತ್ತದೆ.

ಕಾಪು : ಬ್ರಹ್ಮಬೈದರ್ಕಳ ಗರಡಿಯಲ್ಲಿ ಸೇವೆ ಮಾಡುವವರಿಗೆ ಸಹಾಯಧನ

Posted On: 14-06-2020 11:37PM

ಕೊರೋನ ಸಂಕಷ್ಟದ ಸಮಯದಲ್ಲಿ ಬಿರುವೆರ್ ಕಾಪು ಸೇವಾ ಟ್ರಸ್ಟ್ ಕೈಗೊಂಡ ಅತಿ ಪ್ರಾಮುಖ್ಯತೆಯ *ಬ್ರಹ್ಮ ಶ್ರೀ ನಾರಾಯಣ ಗುರು ಸಾಂತ್ವನ* ಎಂಬ ಯೋಜನೆಯು ಕೊನೆಯ ಹಂತದಲ್ಲಿದೆ. ತುಂಬಾ ಜನ ನಿಸ್ವಾರ್ಥ ಸೇವಾ ದಾನಿಗಳು ತಮ್ಮ ಕೈಯಲಾದ ಸಹಾಯವನ್ನು ಈ ಯೋಜನೆಗೆ ಮಾಡಿದ್ದಾರೆ. ಅದರಿಂದ ಟ್ರಸ್ಟಿನ ಮುಖಾಂತರ ಅನೇಕ ಕಷ್ಟಕ್ಕೊಳಗಾದ ಸಂಸಾರಗಳಿಗೆ ಸಹಾಯ ಮಾಡಿದ್ದಾರೆ, ಕೊನೆಯ ಹಂತದ ನಿಸ್ವಾರ್ಥ ಸೇವೆಯಾಗಿ ಬಿರುವೆರ್ ಕಾಪು ಸೇವಾ ಟ್ರಸ್ಟಿನ ಹೆಮ್ಮೆಯ ಸದಸ್ಯರಾದ ಶ್ರೀ ಸುರೇಶ್ ಪೂಜಾರಿ ಕಲ್ಲುಗುಡ್ಡೆ ಇವರ ಹೇಳಿಕೆಯ ಪ್ರಕಾರ ಬಿಲ್ಲವರ ಕುಲದೇವರ ಆರಾಧನಾಲಯವಾದ ಗರಡಿಗಳಲ್ಲಿ ಪೂ ಪೂಜೆ ಹಾಗೂ ದರ್ಶನ ಸೇವೆ ಮಾಡುವ ಆಯ್ದ ಬಡ ಸಂಸಾರಕ್ಕೆ, ಈ ಕ್ಲಿಷ್ಟಕರ ಸಮಯದಲ್ಲಿ ಟ್ರಸ್ಟ್ ನಿಂದಾದ ಸಣ್ಣ ಮಟ್ಟದ ಸಹಾಯ ಮಾಡುವ ನಿಟ್ಟಿನಲ್ಲಿ ಇಂದು ದಿನಾಂಕ 14.06.2020 ರ ಬೆಳಿಗ್ಗೆ ಆಯ್ದ 8 ಗರೋಡಿಗಳ ಸೇವಾದಾರರಿಗೆ ಸಹಾಯಧನವನ್ನು ವಿತರಿಸಲಾಯಿತು. ಈ ಕೆಲಸಕ್ಕೆ ಸಹಕರಿಸಿದ ರಾಕೇಶ್ ಕುಂಜೂರು, ವಿಜಯ್ ಧೀರಜ್ ಬಂಟಕಲ್ಲ್ ಮತ್ತು ಟ್ರಸ್ಟಿನ ಸದಸ್ಯರಾದ ಕಾರ್ತಿಕ್ ಅಮೀನ್ ಕಲ್ಲುಗುಡ್ಡೆ, ವಿಕ್ಕಿ ಪೂಜಾರಿ ಮಡುಂಬು, ಸುಧಾಕರ್ ಸಾಲ್ಯಾನ್ ಕಾಪು ಪಡು, ಅನಿಲ್ ಅಮೀನ್ ಕಾಪು ಪಡು, ಮನೋಹರ್ ಕಲ್ಲುಗುಡ್ಡೆ ಉಪಸ್ಥಿತರಿದ್ದರು, ಟ್ರಸ್ಟಿನ ಒಳ್ಳೆಯ ಕಾರ್ಯಕ್ರಮ ಆಯೋಜಿಸಿ ಅದನ್ನು ಒಳ್ಳೆಯ ರೀತಿಯಲ್ಲಿ ಮಾಡಿದ ಎಲ್ಲರಿಗೂ ಟ್ರಸ್ಟಿನ ಮುಖ್ಯಸ್ಥ ಬಾಲಕೃಷ್ಣ ಆರ್ ಕೋಟ್ಯಾನ್ ಕಾಪು (ಮಸ್ಕತ್) ಧನ್ಯವಾದಗಳನ್ನು ಅರ್ಪಿಸಿದರು.

ಕುತ್ಯಾರು : 'ಇಂದ್ರಪುರ ಅಂಗನವಾಡಿ' ಗೆ ಕುಡಿಯುವ ನೀರಿನ ಯಂತ್ರ ನೀಡಿದ ಪವನ್ ಕುಮಾರ್

Posted On: 14-06-2020 09:01PM

ಶಿರ್ವ ಮಂಚಕಲ್ಲಿನ ಕುತ್ಯಾರು ರಸ್ತೆಯಲ್ಲಿರುವ "ಇಂದ್ರಪುರ ಅಂಗನವಾಡಿ" ಕೇಂದ್ರಕ್ಕೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಮಾಜ ಸೇವಕ ಪವನ್ ಕುಮಾರ್ ಅವರು ಸುಮಾರು 8000 ರೂಪಾಯಿ ಮೌಲ್ಯದ ಕುಡಿಯುವ ನೀರಿನ ಯಂತ್ರವನ್ನು ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಪವನ್ ಕುಮಾರ್ ಅವರು ಕರೋನದಿಂದ ಜನರು ಕಂಗಾಲಾಗಿದ್ದು, ಆರೋಗ್ಯದ ಕಡೆ ತುಂಬಾ ಜಾಗ್ರತೆಯನ್ನು ವಹಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಮಕ್ಕಳು. ಆದ ಕಾರಣ ಮಕ್ಕಳ ಆರೋಗ್ಯ ದೃಷ್ಟಿಯಿಂದ ಕುಡಿಯುವ ನೀರಿನ ಯಂತ್ರವನ್ನು ನೀಡಿರುತ್ತೆನೆಂದು ತಿಳಿಸಿದರು.. ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸುನಿತಾ ಪೂಜಾರಿ ಹಾಗೂ ಸಹಾಯಕಿ ಪ್ರಭಾ ಅವರು ಉಪಸ್ಥಿತರಿದ್ದರು.. ಪವನ್ ಅವರ ಈ ಕಾರ್ಯಕ್ಕೆ ಶಿಕ್ಷಕರು ಪ್ರಸಂಶಿದರು.

ಉಡುಪಿ.ಜೂನ್,14 : ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ 'ರಕ್ತದಾನ ಪುರಸ್ಕಾರ' ಗೌರವಾರ್ಪಣೆ

Posted On: 14-06-2020 08:48PM

ಉಡುಪಿ :- ವಿಶ್ವ ರಕ್ತದಾನಿಗಳ ದಿನಾಚರಣೆ ಇದರ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ಹಮ್ಮಿಕೊಂಡ ಕಾಯ೯ಕ್ರಮದಲ್ಲಿ "ರಕ್ತದಾನ ಪುರಸ್ಕಾರ". ಗೌರವವನ್ನು ರಕ್ತದಾನಿ ರಾಘವೇಂದ್ರ ಪ್ರಭು,ಕವಾ೯ಲು ಸಹಿತ 5 ಜನರಿಗೆ ಪ್ರಧಾನ ಮಾಡಲಾಯಿತು.ಕಾಯ೯ಕ್ರಮದಲ್ಲಿ ಮಾತನಾಡಿದ ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತ ಕೆ.ರಾಜು, ರಕ್ತದಾನಕ್ಕಿಂತ ಮಿಗಿಲಾದ ದಾನ ಬೇರೆ ಯಾವುದೂ ಇಲ್ಲ ಒಂದು ರಕ್ತದಾನ 3 ಜನರಿಗೆ ಸಹಾಯಕವಾಗಬಹುದು ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಕರೆ ನೀಡಿದರು.ಖ್ಯಾತ ವೈದ್ಯ ಡಾII ಉಮೇಶ್ ಪುತ್ರನ್, ಭಾರತೀಯ ವೈದ್ಯ ಸಂಘದ ಅಧ್ಯಕ್ಷೆ ಡಾ|| ಶ್ರೀದೇವಿ ಕಟ್ಟೆ, ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ" ನಾಗಭೂಷಣ್ ಉಡುಪ, ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ಮುಂತಾದವರಿದ್ದರು.ನಂತರ ರಕ್ತದಾನ ಶಿಬಿರ ನಡೆಯಿತು.ಸುಮಾರು 80 ಜನರು ರಕ್ತದಾನ ಮಾಡಿದರು.

ಶಿರ್ವ ಭಾಗದಲ್ಲಿ ಲೇಬರ್ ಕಾರ್ಡ್ ವಿತರಿಸಿದ ಸಮಾಜ ಸೇವಕ ಪವನ್ ಕುಮಾರ್

Posted On: 12-06-2020 10:30PM

ಶಿರ್ವ ಮಂಚಕಲ್ಲಿನ ತೊಟ್ಲಗುರಿ ಜನರಿಗೆ ಹಾಗೂ ಬಂಟಕಲ್ಲಿನ ಅರಸಿಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಸಮಾಜ ಸೇವಕ ಪವನ್ ಕುಮಾರ್ ಅವರು "Labour card" ವಿತರಿಸಿದರು.. ತೊಟ್ಲಗುರಿಯಲ್ಲಿ ಸುಮಾರು 100 ಮನೆಗಳಿದ್ದು ಇಲ್ಲಿನ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ಕೂಲಿ ಕೆಲಸ ಮಾಡುವ ಜನರಿಗೆ "labour card" ಮಾಡಲು ಬೇಕಾಗುವ ದಾಖಲೆಯನ್ನು ಸ್ವೀಕರಿಸಿ ಕ್ಲಪ್ತ ಸಮಯಲ್ಲಿ ಅವರಿಗೆ "Labour card"ಅನ್ನು ವಿತರಿಸಿದರು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಮಾಜ ಸೇವಕ ಪವನ್ ಕುಮಾರ್ ಅವರು ಕೂಲಿ ಕಾರ್ಮಿಕರಿಗೆ "Labour card" ಮಾಡುವುದರಿಂದ ಅನೇಕ ಸರಕಾರದ ಸವಲತ್ತುಗಳು ದೊರೆಯುತ್ತದೆ. ತಂದೆ ತಾಯಿಗಳು ಮಾಡುವ "labour card" ನಿಂದಾಗಿ ಮಕ್ಕಳ ವಿದ್ಯಾಭಾಸಕ್ಕಾಗಿ ಹಾಗೂ ಮಕ್ಕಳ ಮುಂದಿನ ಭವಿಷ್ಯಕ್ಕೆ ಸಹಾಯವಾಗುತ್ತದೆ. ಯಾವುದೇ ಅನಾಹುತ ಆದ ಸಂದರ್ಭದಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು, ಮಕ್ಕಳು ಒಳ್ಳೆಯ ಅಂಕವನ್ನು ಗಳಿಸಿದರೆ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು..

ಪಡುಬಿದ್ರಿ.ಜೂನ್,12 : ಕೃಷಿ ನಿರ್ಲಕ್ಷ್ಯದ ಸಮಯದಲ್ಲಿ ಕೃಷಿಯತ್ತ ಚಿತ್ತವಹಿಸಿದ ಯುವಕರು

Posted On: 12-06-2020 08:31PM

ಕೃಷಿ ನಿರ್ಲಕ್ಷ್ಯದ ಈ ಸಮಯದಲ್ಲಿ ಕೃಷಿಯತ್ತ ಚಿತ್ತವಹಿಸಿದ ಪಲಿಮಾರು ಪಂಚಾಯತ್ ವ್ಯಾಪ್ತಿಯ ಅವರಾಲು ಮಟ್ಟು ಪ್ರದೇಶದ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಸದಸ್ಯರು. ಸೇವೆಯನ್ನೇ ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡು ತಮ್ಮ ಗ್ರಾಮಕ್ಕಾಗಿ ಮತ್ತು ಅಶಕ್ತರ ಪಾಲಿನ ಶಕ್ತಿಯಾಗಿ ಶ್ರಮಿಸುತ್ತಿರುವ ಪಲಿಮಾರ್ ಪಂಚಾಯಿತಿ ವ್ಯಾಪ್ತಿಯ ಅವರಾಲು ಮಟ್ಟು ಪ್ರದೇಶದಲ್ಲಿರುವ ಸಂಘಟನೆ ಶ್ರೀದೇವಿ ಫ್ರೆಂಡ್ಸ್ ಕ್ಲಬ್. ಅದೆಷ್ಟೋ ಸಮಾಜೋಪಯೋಗಿ ಕಾರ್ಯಗಳನ್ನು ನಿರ್ವಹಿಸಿದ ಸಂಸ್ಥೆ ಇದೀಗ ತಮ್ಮ ಪ್ರದೇಶದ ಹಡೀಲು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಲಿದ್ದಾರೆ ಕೊರೋನ ಸಂದರ್ಭ ಹಲವಾರು ಕುಟುಂಬಗಳು ಒಪ್ಪೊತ್ತಿನ ಆಹಾರಕ್ಕಾಗಿ ಪರಿತಪಿಸಿದ್ದನ್ನು ಮನಗಂಡು ಈ ಒಂದು ಆಲೋಚನೆ ಈ ಸಂಘಟನೆಯಲ್ಲಿ ಮೂಡಿ, ಜೊತೆಗೆ ಕೃಷಿಗೆ ಉತ್ತೇಜನ ನೀಡುವುದರೊಂದಿಗೆ, ಕೃಷಿ ಕಾರ್ಯದ ಬಗ್ಗೆ ಯುವಕರಿಗೆ ತಿಳಿಸುವುದರೊಂದಿಗೆ, ಕೃಷಿ ನಂಬಿದ್ದ ಕಾರ್ಮಿಕರನ್ನು ಸೇರಿಸಿಕೊಂಡು ಕೃಷಿ ಕಾರ್ಯ ಮಾಡಬೇಕೆಂಬ ಮಹದಾಸೆ ಇವರದ್ದಾಗಿದೆ. ಪೂರ್ವ ತಯಾರಿಯ ಖರ್ಚು ಕಳೆದು ಬಂದಂತಹ ಅಕ್ಕಿಯನ್ನು ಅಶಕ್ತರಿಗೆ ಮತ್ತು ಬೈ ಹುಲ್ಲನ್ನು ಗೋಶಾಲೆಗೆ ನೀಡಲು ತೀರ್ಮಾನಿಸಿದ್ದಾರೆ. ಇವರ ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬರೋಬ್ಬರಿ 50 ಬಾರಿ ರಕ್ತದಾನ ಮಾಡಿದ ಕಾಪು ಕ್ಷೇತ್ರದ ರಾಘವೇಂದ್ರ ಪ್ರಭು

Posted On: 11-06-2020 10:02PM

ರಕ್ತದಾನ ಮಹಾದಾನ ಎಂಬ ನಂಬಿಕೆಯೊಂದಿಗೆ ಸತತವಾಗಿ ರಕ್ತದಾನ ಮಾಡುತ್ತಿರುವ ವೈದ್ಯಕೀಯ ಪ್ರತಿನಿಧಿ ಯುವಕನೊಬ್ಬ 50 ಬಾರಿ ರಕ್ತದಾನ ಮಾಡಿ ಪರರ ಜೀವ ಉಳಿಸಲು ನೆರವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮೂಡುಬೆಳ್ಳೆ ಅಲೆವೂರು ಸಮೀಪದ ಕರ್ವಾಲಿನ ಗ್ರಾಮೀಣ ಪ್ರದೇಶದ ಯುವಕ ರಾಘವೇಂದ್ರ ಪ್ರಭು ಕರ್ವಾಲು ಅವರೇ ಈ ಮಹಾದಾನಿಯೆನಿಸಿದ್ದಾರೆ. ರಕ್ತದಾನಕ್ಕೆ ಪರ್ಯಾಯವಿಲ್ಲ ಹಾಗಾಗಿ ಸಮಾಜದಲ್ಲಿ ತುರ್ತು ರಕ್ತದ ಅವಶ್ಯಕತೆ ಇದ್ದಾಗ ತುರ್ತಾಗಿ ಸ್ಪಂದಿಸಿ ರಕ್ತ ನೀಡುವ ಪರಿಪಾಠವನ್ನು ಕಾಲೇಜು ದಿನಗಳಿಂದಲೇ ಇವರು ಮೈಗೂಡಿಸಿಕೊಂಡಿದ್ದಾರೆ. ರಾಘವೇಂದ್ರ ಅವರು ಪ್ರಸ್ತುತ ವರ್ಷಕ್ಕೆ ಮೂರು-ನಾಲ್ಕು ಬಾರಿ ರಕ್ತದಾನ ಮಾಡುವುದು ಮಾತ್ರವಲ್ಲದೆ ಅನೇಕ ಸಮಾಜ ಸೇವಾ ಸಂಘಟನೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ರಕ್ತದಾನ ಮಾಡಲು ಪ್ರೇರಣೆ ನೀಡುತ್ತಿದ್ದಾರೆ. ಸತತವಾಗಿ ಜನಜಾಗೃತಿ ಶಿಬಿರಗಳನ್ನೂ ಆಯೋಜಿಸಿ ರಕ್ತದಾನದ ಮಹತ್ವವನ್ನು ಯುವಜನಾಂಗಕ್ಕೆ ಮನವರಿಕೆ ಮಾಡಿ ಈ ಬಗ್ಗೆ ಪ್ರಚೋದನೆಯನ್ನೂ ನೀಡುತ್ತಾರೆ. ಉಡುಪಿ ತಾಲೂಕಿನಾದ್ಯಂತ ಸುಮಾರು 12 ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿರುವ ರಾಘವೇಂಧ್ರ ಪ್ರಭು ಅವರು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯಿಂದ ಅತ್ಯುತ್ತಮ ರಕ್ತದಾನಿ ಎಂಬ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಭಾರತೀಯ ಜೆಸಿಐ ಸಂಸ್ಥೆಯ ಮೂಲಕ ವಲಯ ತರಬೇತುದಾರರಾಗಿಯೂ ಹೆಸರು ಮಾಡಿದ್ದಾರೆ. ಕಾಲೇಜಿನ ದಿನಗಳಲ್ಲಿ ಎನ್‍ಎಸ್‍ಎಸ್ ಘಟಕದಲ್ಲಿ ಸಕ್ರೀಯರಾಗಿದ್ದಾಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯೊಬ್ಬರಿಗೆ ರಕ್ತದಾನ ಮಾಡಿದ್ದ ರಾಘವೇಂದ್ರ ಪ್ರಭು ಅವರು, ಅಂದಿನಿಂದ ಇಂದಿನವರೆಗೆ ಸತತವಾಗಿ ರಕ್ತದಾನ ಮಾಡುತ್ತಾ ಅನೇಕರ ಜೀವ ಉಳಿಸಲು ನೆರವಾಗಿದ್ದಾರೆ. ನಾನು ಮತ್ತೊಬ್ಬರಿಗೆ ಸಹಾಯ ಮಾಡಲು ರಕ್ತದಾನ ಮಾಡುವುದೇ ವಿನಃ ಯಾವುದೇ ದಾಖಲೆ ಮಾಡುವ ಉದ್ಧೇಶವಿಲ್ಲ ಎಂಬ ಧನ್ಯತಾಭಾವ ರಾಘವೇಂದ್ರ ಪ್ರಭು ಅವರದ್ದಾಗಿದೆ.

ಕೃಷಿ - ಮಳೆ ಸಂಯೋಜನೆ ಬಗ್ಗೆ ಒಂದಿಷ್ಟು - ಕೆ ಎಲ್ ಕುಂಡಂತಾಯ

Posted On: 11-06-2020 04:11PM

ಮಳೆ : ಏನು ಮಳೆ, ಹೇಗೆ ಮಳೆ .... ಸುರಿಯುವ ಮಳೆ - ಅದರ ಶ್ರಾಯ , ಮಳೆ ಬೀಳುವ ಕ್ರಮ - ಪ್ರಮಾಣ , ಮಳೆಯ ಲಕ್ಷಣ - ನಿರೀಕ್ಷೆಗಳನ್ನು ಶತಮಾನ ಶತಮಾನಗಳಿಂದ ಗಮನಿಸುತ್ತಾ ಬಂದ ನಮ್ಮ ಪೂರ್ವಸೂರಿಗಳು ಮಳೆಯನ್ನು ಆಶ್ರಯಿಸಿ ನಡೆಸುವ ಕೃಷಿ ಸಂವಿಧಾನವನ್ನು ಸಿದ್ಧಪಡಿಸಿಕೊಂಡ .ಅದರಂತೆ ಯುಗಾದಿಯಿಂದ ಮೊದಲ್ಗೊಂಡು‌ ಬೇಸಾಯದ ಕಾಯಕಕ್ಕೆ ತೊಡಗಿ ಪತ್ತನಾಜೆಯ ಬಳಿಕ ತೀವ್ರವಾಗಿ ಬೇಸಾಯಕ್ಕೆ ಪ್ರವೃತ್ತನಾಗುವುದು ಸಂಪ್ರದಾಯ . ಹದಿನೈದು ದಿನಕ್ಕೊಮ್ಮೆ ಮಳೆಯ ಹೆಸರು ಬದಲಾಗುತ್ತಾ ಸಾಗುತ್ತದೆ . ನಾವು ಎಷ್ಟು ಗಾಢವಾಗಿ ಸೌರಮಾನಿಗಳಾದರೂ ಮಳೆಯನ್ನು ಮಹಾನಕ್ಷತ್ರಗಳ ಮೂಲಕವೇ ಗುರುತಿಸುವುದು ರೂಢಿ . ನಮಗೆ ಯುಗಾದಿಯ ಬಳಿಕ ಕೃತ್ತಿಕಾ ನಕ್ಷತ್ರದಲ್ಲಿ ಸೂರ್ಯನು ಚಲಿಸುವ ಸಮಯ‌ವೇ ಮಳೆಯ ನಕ್ಷತ್ರಕಾಲ ( ಈ ವರ್ಷ ಮೇ11 ರಿಂದ ಆರಂಭವಾಗಿ ಮೇ 24). ಯಶಸ್ವೀ - ಅನುಭವೀ ಕೃಷಿಕ ಕೃತ್ತಿಕಾ ಮಳೆಯ ಹದಿನೈದು ದಿನಗಳಷ್ಟು ಕಾಲ ಮಳೆ ಬರಬಾರದು ,ಕೃತ್ತಿಕಾದ ಸೂರ್ಯನ ಪ್ರಖರತೆಗೆ ಗದ್ದೆ ಬಿರಿಯಬೇಕು .ಬಳಿಕದ ರೋಹಿಣಿ ನಕ್ಷತ್ರ ಕಾಲದಲ್ಲಿ ಭಾಗೀರಥೀ ಜನ್ಮದಿನ ಬರುತ್ತದೆ . ಗಂಗಾವರಣವಾದ ದಿನ .ಒಂದು ಅರ್ಥದಲ್ಲಿ ಸೂರ್ಯ ವಂಶದ ಅರಸ ಭಗೀರಥ ಗಂಗೆಯನ್ನು ಧರೆಗಿಳಿಸಲು ಪಟ್ಟ ಪ್ರಯತ್ನ 'ಭಗೀರಥ ಪ್ರಯತ್ನ'ವೆಂದೇ ಪ್ರಸಿದ್ಧ . ಅಂದರೆ ಕೃಷಿ - ಬೇಸಾಯವೂ ಅಷ್ಟೆ ಸಾಧನೆ - ಪ್ರಯತ್ನಬೇಕಾದುದು ತಾನೆ ? ಮುಂದೆ ಮೃಗಶಿರಾ ನಕ್ಷತ್ರ. ಈಗ ಸುರಿಯುತ್ತಿದೆ ಅಥವಾ ಸುರಿಯಲು ಸಿದ್ಧತೆಮಾಡುತ್ತಿದೆ . ಈ ಹದಿನೈದು ದಿನದಲ್ಲಿ ನಾಟಿಕಾರ್ಯ ನಡೆದರೆ 'ಮೃಗಶಿರೆಟ್ಟ್ ನಡಿನಾಂಡ ಮೃಗ ತಿಂದ್ ದ್ ಮುಗಿಯಂದ್ ಎಂಬುದು ಅನುಭವದ ರೈತನ ಮಾತು .ಮೃಗಶಿರಾ ನಕ್ಷತ್ರದ ಮಳೆಗೆ ನಾಟಿಮಾಡಿದರೆ ಮೃಗಗಳು ತಿಂದು ಮುಗಿಯದಷ್ಟು ಬೆಳೆಯಾದೀತಂತೆ .ಜೂ.21 ರ ವರೆಗೆ ಈ ಮಳೆಯ ಶ್ರಾಯ . ಬಳಿಕ ಆರ್ದಾ ಮಳೆಯ ಕಾಲ . ಆರ್ದಾ ಮಳೆ ಬಂದರೆ ಮುಂದಿನ ಆರು ಮಳೆಗಳು ಬೇಕಾದಷ್ಟು ಸುರಿಯುತ್ತವೆ ಎಂಬುದು ರೈತನ ನಿರೀಕ್ಷೆ .ಈ ಮಳೆ ಸುರಿಯುವ ಕ್ರಮವನ್ನು ನಮ್ಮ ಹಿರಿಯರು " ಅಡರ್ ಡ್ ದರ್ತಿಲೆಕ್ಕ " ಎಂದು ಅಂದರೆ ಅಷ್ಟು 'ತೀವ್ರವಾಗಿ' ಎಂದು‌ ಉದ್ಗರಿಸಿದ್ದಾರೆ . ಈ ಮಳೆಯ ಸಂದರ್ಭದಲ್ಲಿ ಏನು ನೆಟ್ಟರೂ ಅದು 'ಜೀವ ಹಿಡಿಯುತ್ತದೆ' ಎಂಬುದು ನಂಬಿಕೆ .ಆರ್ದಾ ಮಳೆಗೆ ಯಕ್ಷಗಾನ ಕವಿಗಳು ಹೇಳುತ್ತಾರೆ 'ಹದಗಾಲ ಬೆಳೆಮಾಳ್ಕೆಗೆ' ಎಂದು. ತಡೆ ಇಲ್ಲದೆ ಬೀಳುವ ಮಳೆ 'ಪುನರ್ವಸು'. "ಪುನ ಪಿದಾಯಿದೀವರೆ ಬುಡಂದ್" ಎಂಬುದು ಈ ಮಳೆಗೆ ಇರುವ ಕೀರ್ತಿ ,ಬಹುಶಃ ಒಂದು ಕಾಲದಲ್ಲಿ ಆ ಕ್ರಮದಲ್ಲಿ 'ಹನಿ ನಿಲ್ಲದೆ ಸುರಿಯುತ್ತಿದ್ದಿರಬೇಕು' .ಈಗ ಕಾಲ ಬದಲಾಗಿದೆ , ಹವಾಮಾನ ವಿಪರೀತವಾಗಿ ವ್ಯತ್ಯಸ್ಥಗೊಂಡಿದೆ .ಇದು ನಿಜವಾಗಿ ಕೃಷಿಗೆ ಬಹಳ ಅವಸರದ ಕಾಲ ."ಬಗ್ಗ್ ತ್ ಬೆನೊಡು , ಕುಳ್ಳುತು ತಿನೊಡು" ( ಬಗ್ಗಿ ದುಡಿಯಬೇಕು , ಕುಳಿತು ತಿನ್ನಬೇಕು) ಅಂದರೆ ಇದು ರೈತ ದುಡಿಯುವ ವೇಳೆ . 'ಪುಸ್ಸನೆ' ಬಂದು ಹೋಗುವ ಮಳೆ 'ಪುಷ್ಯಾ'.ಬಹುತೇಕ ಕೃಷಿ ಮುಗಿಯುತ್ತಾ ಬರುವ ಕಾಲ ( ಮುಗಿದಿರುವುದು . ಆದರೆ ಈಗ ಧೈರ್ಯದಲ್ಲಿ ಹೇಳುವಂತಿಲ್ಲ ) . ಆಟಿ ( ಕರ್ಕಾಟಕ) ತಿಂಗಳು . ಕೃಷಿ ಕಾಯಕ ಮುಗಿಯುತ್ತಾ ಬಂದಿದೆ ,ಇನ್ನು ಬೆಳೆಯ ರಕ್ಷಣೆ ಮತ್ತು ನಿರೀಕ್ಷೆ ಮಾತ್ರ . 'ಪುಸ್ಯದ ಬರ್ಸೊಗು ಪುಚ್ಚೆದ ಪುಣಲಾ ಪಿದಾಯಿ ಬರಂದ್' ( ಪುಷ್ಯಾ ಮಳೆಗೆ ಬೆಕ್ಕಿನ ಹೆಣವೂ ಹೊರಗೆ ಬಾರದು). ಹೇಗೆಲ್ಲ ಮಳೆಯನ್ನು ವಿಶ್ಲೇಷಿಸಿದ್ದಾರೆ ನಮ್ಮ‌ ಹಿರಿಯರು‌. ಆಶ್ಲೇಷಾ ಮಳೆ : ಆಶ್ಲೇಷಾ ಮಳೆಗಿಂತ ಬಿಸಿಲೇ ಲೇಸು . 'ಕೈ ಎಡ್ಡೆ ಆಂಡ ಕೆಯಿ ಎಡ್ಡೆ ಆವು' ಎಂಬ ಚಿಂತನೆಯಕಾಲ . ರೈತ ಹೇಳುವುದಿದೆ "ಪುಷ್ಯಾ ಕಂಡೆ ಮುಟ್ಟ ಕರತ್ಂಡ ಆಶ್ಲೇಷಾ ದೊಂಡೆ ಮುಟ್ಟ ಕನಪುಂಡು". ಪುಷ್ಯಾ ಮಳೆಯಿಂದ ಒಂದುವೇಳೆ ಬೆಳೆಗೆ ಹಾನಿಯಾಗಿದ್ದರೆ ಆಶ್ಲೇಷಾ ಮಳೆಯಿಂದ ಈ ಹಾನಿ ಪರಿಹಾರವಾಗುತ್ತದೆಯಂತೆ. ಪ್ರಕೃತಿ - ಮಳೆ ಅವಲಂಬಿತವಾದುದು ಕೃಷಿ . ಮಣ್ಣಿನಲ್ಲಿ ದುಡಿಯುವುದಷ್ಟೆ ರೈತನ ಕಾಯಕ . ಮಣ್ಣಿನ ಸತ್ವವನ್ನು ಮತ್ತು ನಿಸರ್ಗವನ್ನು ನಂಬಿದ್ದು ಅಷ್ಟು ವಿಶ್ವಾಸದಿಂದ. ಅದಕ್ಕೆ ರೈತ ಹೇಳುತ್ತಾನೆ "ಮಣ್ಣ್ ಡ್ ಪೊರ್ಂಬಿನಾಯೆ ನುಪ್ಪು ತಿನುವೆ , ನರಮಾನಿಡ ಪೊರ್ಂಬಿನಾಯೆ ಮಣ್ಣ್ ತಿನುವೆ". 'ಮಣ್ಣಿನಲ್ಲಿ ಛಲಸಾಧಿಸಿದರೆ ಅನ್ನ ತಿನ್ನುತ್ತಿ ,ಮನುಷ್ಯನಲ್ಲಿ ಛಲ ಸಾಧಿಸಿದರೆ ಮಣ್ಣು ತಿನ್ನುತ್ತಿ' ಎಂದು.‌ ಈಗಂತೂ ಕೃಷಿ ಸಂಪೂರ್ಣ ಅವಗಣಿಸಲ್ಪಟ್ಟಿದೆ . ಕೃಷಿ ಲಾಭದಾಯಕವಲ್ಲ ಎಂಬ ನಿರ್ಧಾರಕ್ಕೆ ನಾವು ಬಂದಾಗಿದೆ . ‌ "ಕೃಷಿಯಿಂದ ದುರ್ಭಿಕ್ಷೆ ಇಲ್ಲ" ಎಂಬ ಮಾತು ಅಪ್ರಸ್ತುತವಾಗಿದೆ . [ಇನ್ನುಆಟಿ ಅಮಾವಾಸ್ಯೆಗೆ ಸರಿಯಾಗಿ ಮುಂದುವರಿಸಿ ಬರೆಯುವ . ಅಮಾವಾಸ್ಯೆ ಮತ್ತು ಉಳಿದ ಮಳೆಗಳ ಬಗ್ಗೆ ವಿವರ ನೀಡುವ. ನಾಗರ ಪಂಚಮಿಗೆ ಪ್ರತ್ಯೇಕ ಬರೆಯುವ. ವಾಯು ಭಾರ ಕುಸಿತ , ನಿಸರ್ಗದ ವಿಶಿಷ್ಟ ನಡೆಗಳಿಂದಾಗಿ ಹೀಗೆಯೇ ಎಂದು ಈಗ ಹೇಳಲಾಗದು.] ಬರಹ : ಕೆ. ಎಲ್ . ಕುಂಡಂತಾಯ