Updated News From Kaup
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ 5 ಮಂದಿ ಹಾಗೂ ಒಂದು ಸಂಸ್ಥೆ ಆಯ್ಕೆ
Posted On: 29 Oct 2020, 10:18 AM
ಕರ್ನಾಟಕ ಸರಕಾರದಿಂದ ನೀಡಲ್ಪಡುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿಯಾಗಿದೆ. ಈ ಬಾರಿ 65ನೇ ವರ್ಷಾಚರಣೆಯ ಪ್ರಯುಕ್ತ 65 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ., ಕಲೆ, ಸಾಹಿತ್ಯ, ರಂಗಭೂಮಿ,ಸಿನಿಮಾ, ಸಂಗೀತ,ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ/ ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ. ಉಡುಪಿ ಜಿಲ್ಲೆಗೆ ಈ ಬಾರಿ ಸಮಾಜಸೇವೆಯಲ್ಲಿ ಮಣೆಗಾರ್ ಮೀರಾನ್ ಸಾಹೇಬ್, ನ್ಯಾಯಾಂಗದಲ್ಲಿ ಎಂ.ಕೆ.ವಿಜಯಕುಮಾರ್ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಲೇರಿಯನ್ ಡಿಸೋಜ (ವಲ್ಲಿ ವಗ್ಗ), ಸಂಗೀತ ಕ್ಷೇತ್ರದಲ್ಲಿ ಕೆ. ಲಿಂಗಪ್ಪ ಶೇರಿಗಾರ ಕಟೀಲು, ಹೊರನಾಡು ಕನ್ನಡಿಗ ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಕುಸುಮೋದರದೇರಣ್ಣ ಶೆಟ್ಟಿ ಕೇಲ್ತಡ್ಕ, ಸಂಘ-ಸಂಸ್ಥೆಯಲ್ಲಿ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನವೆಂಬರ್ ಒಂದು ಕನ್ನಡ ರಾಜ್ಯೋತ್ಸವದಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಾಪುವಿನಲ್ಲಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದ ಕುಡಿಯುವ ನೀರಿನ ಯಂತ್ರ ಶೋಗೆ ಇಟ್ಟಿದ್ದಾರೆಯೇ ?
Posted On: 28 Oct 2020, 09:10 AM
ಕಳೆದ ಕೆಲವು ತಿಂಗಳ ಹಿಂದಷ್ಟೇ ನಮ್ಮ ಕಾಪು ವೆಬ್ ಪೋರ್ಟಲ್ ನಲ್ಲಿ ಕುಡಿಯುವ ನೀರಿನ ಯಂತ್ರದ ಬಗ್ಗೆ ವರದಿ ಮಾಡಿತ್ತು.. ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳ ಪ್ರತಿಕ್ರಿಯೆಯೂ ವ್ಯಕ್ತವಾಗಿಲ್ಲ. ಸರ್ವಿಸ್ ರೋಡ್ ನಲ್ಲಿ ಉಡುಪಿ, ಮಂಗಳೂರು ಎಕ್ಸ್ಪ್ರೆಸ್ ಬಸ್ ನಿಲ್ಲುವ ಜಾಗದಲ್ಲಿ ಈ ಯಂತ್ರ ಇದೆ. ಉದಯ ಕಿಚನೆಕ್ಸ್ಟ್ ಎದುರುಗಡೆ ಮತ್ತು ಅಯ್ಯಂಗಾರ್ ಬೇಕರಿಯ ಹತ್ತಿರದಲ್ಲಿ ಇರುವ ಕುಡಿಯುವ ನೀರಿನ ಯಂತ್ರ ಇದಾಗಿದ್ದು.. ಈ ಯಂತ್ರ ಸರ್ಕಾರದಿಂದ ಅಥವಾ ದಾನಿಗಳಿಂದ ಬಂದ ಯಂತ್ರ ಆಗಿರಬಹುದು ಆದರೇ ಅಧಿಕಾರಿಗಳ ನಿರ್ಲಕ್ಷ್ಯತನ ನೋಡಿ ಯಂತ್ರ ವರ್ಕ್ ಆಗದೇ ಇದ್ದರು ಕೂಡಾ ಹಾಗೆ ಬಿಟ್ಟಿದ್ದಾರೆ.. ಒಂದೋ ಯಂತ್ರವನ್ನು ಅಲ್ಲಿಂದ ಎತ್ತಂಗಡಿ ಮಾಡಿ ಅಥವಾ ಸಾರ್ವಜನಿಕರಿಗೆ ಉಪಯೋಗವಾಗುವಂತೆ ದಿನದ 24 ಗಂಟೆ ನೀರು ಬರುವಂತೆ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸ್ನೇಹ ಜೀವಿಯಿಂದ ನವರಾತ್ರಿತಿಳಿವು, ಗೌರವಾರ್ಪಣೆ , ಶುಭಹಾರೈಕೆ
Posted On: 27 Oct 2020, 03:57 PM
ಕಟಪಾಡಿ : ಉಡುಪಿಯ ಗಣೇಶ ರಾವ್ ಎಲ್ಲೂರು ಇವರ ಸಾರಥ್ಯದ ಕಲೆ , ಸಾಹಿತ್ಯ , ಸಂಸ್ಕೃತಿಗಾಗಿ ಸೇವೆ ಸಲ್ಲಿಸುತ್ತಿರುವ. "ಸ್ನೇಹ ಜೀವಿ ಉಡುಪಿ" ಸಂಸ್ಥೆಯು ತನ್ನ ಯಕ್ಷಗಾನ - ನಾಟಕ ರಂಗಭೂಮಿಯ ವಿದ್ಯಾರ್ಥಿಗಳಿಗಾಗಿ ನವರಾತ್ರಿ ಆಚರಣೆಯ ಮಹತ್ವದ ಕುರಿತು ಉಪನ್ಯಾಸ ಹಾಗೂ ಹಿರಿಯ ಕಲಾವಿದರಿಗೆ ಗೌರವಾರ್ಪಣೆ , ವಿದ್ಯಾರ್ಥಿಗಳಿಬ್ಬರ ಹುಟ್ಟುಹಬ್ಬವನ್ನು ಕಟಪಾಡಿಯ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಿತ್ತು . ಈ ಸಂದರ್ಭದಲ್ಲಿ ಎಲ್ಲೂರಿನ ಹಿರಿಯ ಯಕ್ಷಗಾನ ಸಂಘಟಕ, ವೇಷಧಾರಿ ಶ್ರೀನಿವಾಸ ಉಪಾಧ್ಯಾಯ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ದೇವಸ್ಥಾನದ ಪ್ರಭಂದಕರಾದ ರಮೇಶ್ ಆಚಾರ್ಯ ಮತ್ತು ದೇವಸ್ಥಾನದ. ಸಿಬ್ಬಂದಿ ಶ್ರೀಮತಿ ಲೀಲಾ ಇವರನ್ನು ಅಭಿನಂದಿಸಲಾಯಿತು.ವಿದ್ಯಾರ್ಥಿಗಳಾದ ಸಂಗೀತಾ ಮತ್ತು ಸಂಧ್ಯಾ ಅವರ ಹುಟ್ಟು ಹಬ್ಬವನ್ನು ಆಚರಿಸಿ ಶುಭ ಹಾರೈಸಲಾಯಿತು . ಗುರುಗಳಾದ ,ಜಾನಪದ ಸಂಶೋಧಕ , ಹಾಗೂ ಸಾಹಿತಿ ಕೆ. ಎಲ್ . ಕುಂಡತಾಯ ಇವರು ವಿದ್ಯಾರ್ಥಿಗಳಿಗೆ ನವರಾತ್ರಿಯ ಬಗ್ಗೆ ಉಪನ್ಯಾಸ ನೀಡಿದರು. ಹೆತ್ತ ಅವ್ವೆ ಯಿಂದ ನೆಲದವ್ವೆಯನ್ನು ಅರಿತು ಮುಂದೆ ಜಗದವ್ವೆಯನ್ನು ಕಾಣುವುದೇ ಮಾತೃ - ಪ್ರಕೃತಿ - ಶಕ್ತಿ ಆರಾಧನೆಯ ಮೂಲ ಎಂದು ವಿವರಿಸಿದರು. ಪ್ರಕಾಶ್ ಆಚಾರ್ಯ ಇನ್ನಂಜೆ ,ಹರೀಶ್ ಆಚಾರ್ಯ ಕಳತ್ತೂರು, ಆಲ್ವಿನ್ ಪ್ರಕಾಶ್ ಮೇನೇಜಸ್ ಶ್ರೀಮತಿ ಲಕ್ಷ್ಮೀ , ಶ್ರೀಮತಿ ಶಾಂತಿ ಶ್ರೀದರ್ ಮೊದಲಾದವರು ಉಪಸ್ಥಿತರಿದ್ದರು .ಕುಮಾರಿ ಸಂದ್ಯಾ ,ಸಂಗೀತಾ , ಪ್ರಜ್ಞಾ ಪ್ರಾರ್ಥಿಸಿ, ಗಣೇಶ ರಾವ್ ಎಲ್ಲೂರು ಪ್ರಾಸ್ತಾವಿಸಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ರಂಜಿತ್ ಭಂಡಾರಿ ವಂದಿಸಿದರು.
ಕಾಪುವಿನಲ್ಲಿ ಪ್ರಥಮಬಾರಿಗೆ ಎಸ್ಸೆಲ್ ಎನರ್ಜಿ ಮುದ್ರೆಯ ಎಲೆಕ್ಟ್ರಿಕಲ್ ಸೈಕಲ್ ಶೋರೂಮ್ ಶುಭಾರಂಭ
Posted On: 27 Oct 2020, 01:02 PM
ಮಾಲಿನ್ಯಮುಕ್ತ ಪರಿಸರವನ್ನು ಪೋಷಿಸುವ ದಿಸೆಯಲ್ಲಿ ಯಾವುದೇ ದಾಖಲಾತಿ, ಲೈಸೆನ್ಸ್, ಇನ್ಶೂರೆನ್ಸ್ ನ ಅಗತ್ಯವಿಲ್ಲದ ಇಲೆಕ್ಟ್ರಿಕಲ್ ಸೈಕಲ್ ಶೋರೂಮ್ ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೊಲಿಪು ಮೀನುಗಾರರ ಸಹಕಾರಿ ಸಂಘ, ಕಾಪು ತಾಲೂಕು ಕಛೇರಿ ಹತ್ತಿರದ ವಿಘ್ನೇಶ್ವರ ಎಂಟರ್ಪ್ರೈಸಸ್ ಕಾಪು ಇಲ್ಲಿ ನಾಳೆ (28-10-20) ಬೆಳಿಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸುಧಾಕರ್ ಬಂಗೇರ : 8277483732
ಬಂಟಕಲ್ಲ್ ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಣೆ
Posted On: 26 Oct 2020, 07:39 PM
ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭವಾಗದ ಸನ್ನಿವೇಶದಲ್ಲಿ ಮಕ್ಕಳಿಗೆ ಆನ್ಲೈನ್ ತರಗತಿಗಳು ನಡೆಯುತ್ತಿದ್ದು ಮೊಬೈಲ್ ಸೌಲಭ್ಯಗಳು ವಂಚಿತ ಮಕ್ಕಳಿಗೆ ಕಲಿಕೆಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ದಾನಿಗಳ ನೆರವಿನಿಂದ ಬಂಟಕಲ್ಲ್ ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಿಸಲಾಯಿತು. ಮುಂದಿನ ದಿನಗಳಲ್ಲಿ ದಾನಿಗಳ ನೆರವಿನಿಂದ ಮತ್ತಷ್ಟು ವಿದ್ಯಾರ್ಥಿಗಳಿಗೆ ನೆರವನ್ನು ನೀಡಲಿದ್ದೇವೆ ಎಂದು ಲಯನ್ಸ್ ಕ್ಲಬ್ ಬಂಟಕಲ್ಲ್ ಅಧ್ಯಕ್ಷರಾದ ವಿಜಯ್ ಧೀರಜ್ ತಿಳಿಸಿದರು. ನಾಗಿರಕ ಸಮಿತಿಯ ಅಧ್ಯಕ್ಷರಾದ ರಾಮರಾಯ ಮೊಬೈಲ್ ಅನುಕೂಲತೆ ಮತ್ತು ಅನನುಕೂಲತೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಬಂಟಕಲ್ಲ್ ನ ಕಾರ್ಯದರ್ಶಿ ಅರುಂದತಿ ಪ್ರಭು ಉಪಸ್ಥಿತರಿದ್ದರು
ಇನ್ನಂಜೆಯಲ್ಲಿ ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಘಟಕದ ಪೂರ್ವಭಾವಿ ಸಭೆ
Posted On: 25 Oct 2020, 10:42 PM
ಇನ್ನಂಜೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವಿಶ್ವ ವಲ್ಲಭ ಘಟಕದ ಜೊತೆಗೆ ಮಾತೃಶ್ರೀ ಘಟಕ ಮತ್ತು ದುರ್ಗಾ ಶಕ್ತಿ ಘಟಕವನ್ನು ಮಾಡುವ ಸಲುವಾಗಿ ಇಂದು ಮಡುಂಬು ವಿದ್ವಾನ್ ಕೆ.ಪಿ ಶ್ರೀನಿವಾಸ್ ತಂತ್ರಿಗಳ ಮನೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಕೆ.ಪಿ ಶ್ರೀನಿವಾಸ್ ತಂತ್ರಿ, ಭಜರಂಗದಳದ ಸಂಚಾಲಕರಾದ ರಾಜೇಶ್ ನಿಸರ್ಗ, ಮಾಲಿನಿ ಇನ್ನಂಜೆ , ಗೊರಕ್ಷಾ ಪ್ರಮುಖ್ ರವಿ ಕಲ್ಯಾಲು, ವಿದ್ಯಾರ್ಥಿ ಪ್ರಮುಖ್ ಕಾರ್ತಿಕ್ ಮಡುಂಬು, ಸಾಮಾಜಿಕ ಜಾಲತಾಣ ಪ್ರಮುಖ್ ಪೃಥ್ವಿರಾಜ್ ಮಡುಂಬು, ವಿಶ್ವ ಹಿಂದೂ ಪರಿಷತ್ ಸದಸ್ಯರು,ಭಜರಂಗ ದಳದ ಕಾರ್ಯಕರ್ತರು ಹಾಗೂ ಮಾತೃ ಶಕ್ತಿ ಮತ್ತು ದುರ್ಗಾವಾಹಿನಿ ಸೇರ್ಪಡೆಗೊಳ್ಳಲಿರುವ ಸದಸ್ಯರು ಉಪಸ್ಥಿತರಿದ್ದರು.. ಕಾರ್ಯದರ್ಶಿ ನಿತೇಶ್ ಕಲ್ಯಾಲು ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.
ಕಾಪು ಮಾರಿಯಮ್ಮನ ಆದಿಸ್ಥಳದಲ್ಲಿ ರಾಜಮನೆತನದವರು ಬಳಸಿದ ಖಡ್ಗಕ್ಕೆ ಆಯುಧ ಪೂಜೆ
Posted On: 25 Oct 2020, 10:14 PM
ಕಾಪು ಮಾರಿಯಮ್ಮ ದೇವಸ್ಥಾನದ ಆಧಿಸ್ಥಳವಾಗಿರುವ ಶ್ರೀ ತ್ರಿಶಕ್ತಿ ಸನ್ನಿಧಾನ ಕೋಟೆಮನೆ. ಇಂದಿನ ನವರಾತ್ರಿ ಅಲಂಕಾರ, ಹಾಗೂ ನೂರಾರು ವರ್ಷದ ಹಿಂದೆ ಇಲ್ಲಿನ ರಾಜ ಮನೆತನದವರು ಉಪಯೋಗಿಸಿದ ಖಡ್ಗಕ್ಕೆ ಆಯುಧ ಪೂಜೆ ಪ್ರಯುಕ್ತ ಖಡುಬು ಬಡಿಸುವ ಸಂಪ್ರದಾಯ ನೆರವೇರಿತು.
ನಿರಾಶ್ರಿತ ಹಿರಿಯ ಮಹಿಳೆಗೆ ಮನೆ ಹಸ್ತಾಂತರ
Posted On: 25 Oct 2020, 09:46 PM
ಉಡುಪಿ : ಮಳೆಗಾಲದಲ್ಲಿ ಇದ್ದ ಸಣ್ಣ ಮನೆಯನ್ನು.ಕಳೆದುಕೊಂಡಿದ್ದ ಸಾವಿರಾರು ಮಹಿಳೆಯರಿಗೆ ಹೆರಿಗೆ ಶೂಶ್ರುಶೆ ನಡೆಸಿಕೊಂಡು ಬಂದಿರುವ ಸೂಲಗಿತ್ತಿ ಹಿರಿಯರಾದ ಸುಂದರಿ ಸುವಣ೯ ಯವರಿಗೆ ಹೋಂ ಡಾಕ್ಟರ್ ಫೌಂಡೇಶನ್ ಮತ್ತು ದಾನಿಗಳ ನೆರವಿನಿಂದ ಕಟ್ಟಿಸಿರುವ ಮನೆ ಹಸ್ತಾಂತರ ಕಾಯ೯ಕ್ರಮ ಅ.25 ರಂದು ರಂದು ನಡೆಯಿತು.ಕಾಯ೯ಕ್ರಮಕ್ಕೆ ಸ್ವಾಮಿ ಕೊರಗಜ್ಜ ದೈವಸ್ಥಾನದ ಮುಖ್ಯಸ್ಥರಾದ ಕೃಷ್ಣ ಕುಲಾಲ್ ಮತ್ತು ಕುಕ್ಕೆಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಹೆಗ್ಡೆ ಚಾಲನೆ ನೀಡಿ ಶುಭ ಹಾರೈಸಿದರು. ಫೌಂಡೇಶನ್ ಪ್ರಮುಖರಾದ ಡಾ" ಶಶಿಕಿರಣ್ ಶೆಟ್ಟಿ ಮಾತನಾಡಿ ನಮ್ಮ ಸಂಸ್ಥೆಯು ಕಳೆದ 6 ವಷ೯ದಿಂದ ಹಲವಾರು ಜನಪರ ಕಾಯ೯ಕ್ರಮವನ್ನು ದಾನಿಗಳ ಸಹಕಾರದಿಂದ ನಡೆಸಿರುತ್ತೇವೆ. ಈ ಸುಂದರಿ ಅಜ್ಜಿಯ ವರ ಮನೆಯು ತೀರಾ ದುರಸ್ತಿಯಲ್ಲಿತ್ತು ದಾನಿಗಳ ಸಹಕಾರ ಮತ್ತು ನಮ್ಮ ಸದಸ್ಯ ಸಹಕಾರದಿಂದ ಉತ್ತಮವಾದ ಮನೆ ನಿಮಾ೯ಣವಾಗಿದೆ ಎಂದರು.ಸಂಸ್ಥೆಯ ಪ್ರಮುಖ ಮುಂದಿನ ಯೋಜನೆಗಳ ಮಾಹಿತಿ ನೀಡಿದರು. ಡಾII ಸುಮಾ ಎಸ್.ಶೆಟ್ಟಿ ಶುಭ ಹಾರೈಸಿದರು.ಈ ಸಂದಭ೯ದಲ್ಲಿ ಸುಂದರಿ ಯವರನ್ನು ಧನ ಸಹಾಯದೊಂದಿಗೆ ಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ ಬಂಗಾರಪ್ಪ, ರಾಘವೇಂದ್ರ ಪೂಜಾರಿ,ಸುಜಯ ಶೆಟ್ಟಿ ಸವಿತಾ ಶೆಟ್ಟಿ, ಗಣೇಶ್, ಶಶಿ , ನಯನಾ ಸದಸ್ಯರು ಭಾಗವಹಿಸಿದ್ದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ ವಂದಿಸಿದರು.
ಊಟ - ಆಟ - ಪಾಠ ಕ್ಷೇತ್ರಕ್ಕೆ ಭೂಷಣ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು
Posted On: 25 Oct 2020, 09:26 PM
ಶ್ರೀ ದುರ್ಗಾ ಪರಮೇಶ್ವರಿಯು "ಭ್ರಾಮರಿ"ಯಾಗಿ ಆವಿರ್ಭವಿಸಿದ 'ಪುಣ್ಯ ಭೂಮಿ' ಕಟೀಲು .ವಿಸ್ತೃತ ನಿತ್ಯಪೂಜಾ ವಿಧಾನ , ವಿಶೇಷ ಪರ್ವಗಳ ವಿಶಿಷ್ಟ ಆಚರಣೆ , ಆಗಮ ಬದ್ಧತೆ , ಸಂಪ್ರದಾಯ - ಶಿಷ್ಟಾಚಾರ , ಶಿಕ್ಷಣ - ಕಲೆಗಳಿಗೆ ಆಶ್ರಯಸ್ಥಾನ, ನಿರಂತರ ಮೂರುಹೊತ್ತು ಅನ್ನ ದಾಸೋಹ ನೆರವೇರುವ ದೇವಾಲಯ ಪರಿಕಲ್ಪನೆಯ ಪರಿಪೂರ್ಣ ಅನಾವರಣವಾಗಿ ಕಟೀಲು ಕ್ಷೇತ್ರ ಆದೃತವಾಗಿದೆ . ನಿಗೂಢ ರಹಸ್ಯವನ್ನು ,ಅಭೇದ ಸತ್ಯವನ್ನು , ಭವ್ಯದ ಅಂತರ್ಗತ ದಿವ್ಯ ಸಂಕಲ್ಪದ ವ್ಯಾಖ್ಯಾನವನ್ನು ನೀಡುವಂತೆ ಕಟೀಲು ಕ್ಷೇತ್ರ ನಿಸರ್ಗದ ಅಚ್ಚರಿಯಾಗಿದೆ ; ಆದರೆ ಅಷ್ಟೆ ಸಹಜವಾಗಿ ಭಾಸವಾಗುತ್ತದೆ . ಗೊಂದಲಗಳಿಲ್ಲದ ಕಟೀಲಮ್ಮನ ಸನ್ನಿಧಾನ ನಂಬಿಕೆಯ ನೆಲೆಯಾಗಿ ರೋಚಕ ಅನುಭವಗಳನ್ನು ನೀಡುತ್ತದೆ . ದರ್ಶನ ಸಾರ್ಥಕವಾಗುತ್ತದೆ .ಬನ್ನಿ........ಇಲ್ಲಿ ನಿಗೂಢ ರಹಸ್ಯಗಳಿದ್ದರೂ , ವಿಲಕ್ಷಣತೆಗಳಿದ್ದರೂ ಶ್ರೀ ಕ್ಷೇತ್ರ ಕಟೀಲು 'ಕ್ಲಿಷ್ಟ' ಅನ್ನಿಸುವುದಿಲ್ಲ .ಆದರೆ ಸರಳ ಸುಂದರ ಸಾಕ್ಷಾತ್ಕಾರದ ಅನುಭವವಾಗುತ್ತದೆ. ಈ ದರ್ಶನ ; ಮುಗ್ಧ ಭಾವ ಮತ್ತು ಶ್ರದ್ಧೆಯೇ ಪ್ರಧಾನವಾಗಿ ನಿಚ್ಚಳ ಹಾಗೂ ದಿವ್ಯ ಅನುಭವದಿಂದ ಭಕ್ತನ ಮನಸ್ಸು ಪ್ರಸನ್ನವಾಗುತ್ತದೆ . ಕಾರಣ ಇಲ್ಲಿ ನೆಲೆಯಾದವಳು "ಕಟ್ಲಪ್ಪೆ" ಅಥವಾ "ಕಟೀಲಪ್ಪೆ" ,ಆಕೆಯೇ 'ಜಗಜ್ಜನನಿ', ದುರ್ಗಾಪರಮೆಶ್ವರೀ .ಸ್ಥೂಲವಾಗಿ ಹೇಳುವುದಾದರೆ ಒಬ್ಬಳು 'ಅಮ್ಮ" ...ಸ್ವತಃ ತಾನೇ ಆವಿರ್ಭವಿಸಿದ ಸತ್ಯದ ಸಂಕಲ್ಪ. ಈ ಅಮ್ಮನ ಸನ್ನಿಧಾನ ಯಾಕಿಷ್ಟು ಆತ್ಮೀಯವಾಗುತ್ತದೆ ? .......'ಅಮ್ಮಾ'...ಎರಡಕ್ಷರದ ಅಕ್ಷರಕ್ಕಿರುವ ಅಮೇಯವಾದ ಅಮಿತ ಭಾವನೆಗಳನ್ನು ಉದ್ದೀಪಿಸಬಲ್ಲ ಅಮೂಲ್ಯ ,ಅಮಲ ಸಂಬಂಧವನ್ನು ನೆನಪಿಸಿ ಸ್ಥಾಯಿಗೊಳಿಸಬಲ್ಲ ಅನನ್ಯತೆ ಅನ್ಯ ಸಂಬಂಧ ವಾಚಕಗಳಿಲ್ಲ .ಅಂದರೆ ಒಬ್ಬಳು 'ಅಮ್ಮ'ನೊಂದಿಗೆ ಹೇಗೆ ಬೆಸೆದು ಕೊಳ್ಳಬಲ್ಲೆವೋ ಅಷ್ಟೆ ಸಲುಗೆಯಿಂದ ಗಾಢವಾಗಿ ಕಟೀಲಮ್ಮನೊಂದಿಗೆ 'ತಾದಾತ್ಮ್ಯ' ಸಾಧಿಸಬಹುದು .ಆದರೆ ಶ್ರದ್ಧೆ , ನಂಬಿಕೆ ಪ್ರಧಾನವಾಗುತ್ತದೆ . ಇದು ಇಲ್ಲಿಯ ಸಾನ್ನಿಧ್ಯ ವಿಶೇಷ . ಅಮ್ಮ - ಮಗು ಸಂಬಂಧ ಲೌಕಿಕದಲ್ಲಿ ಸಂಭವಿಸಿದ ಬಾಂಧವ್ಯ .ಇದು ಅಪ್ಪಟ ಸತ್ಯ .ವಾತ್ಸಲ್ಯ , ಕರುಣೆಯನಿಧಿ , ಅಮೂರ್ತಭಾವ - ಬಂಧನ ಆದುದರಿಂದ ಶ್ರೇಷ್ಠ , ಜ್ಯೇಷ್ಠ , ಸರ್ವಮಾನ್ಯ ,ಪ್ರೀತಿಯ ಉಗಮಸ್ಥಾನ. ಈ ಪ್ರೀತಿ ,ಬಾಂಧವ್ಯವೇ, ಕಾರಣವಾಗುವ ಕಟೀಲಮ್ಮನ ದರ್ಶನಕ್ಕೆ ಭಕ್ತಸಂದೋಹ ಆಗಮಿಸುತ್ತದೆ. ಅಮ್ಮನಲ್ಲಿ ನಿವೇದಿಸಿಕೊಳ್ಳಲು ಅಂಜಿಕೆ ಇಲ್ಲ , ಕಷ್ಟ ವಿವರಿಸಲು ಸಂದೇಹಗಳಿಲ್ಲ , ಆದುದರಿಂದ ಕೃಪಾಕಟಾಕ್ಷ ಪ್ರಾಪ್ತಿ .ಇಷ್ಟಾರ್ಥ ಸಿದ್ಧಿ ಸುಲಭಸಾಧ್ಯ . ಭ್ರಾಮರೀ ದುರ್ಗಾಪರಮೇಶ್ವರಿಯೊಂದಿಗೆ ಏರ್ಪಡುವ ಬಾಂಧವ್ಯ ... ಆಮೂಲಕ ದೊರೆಯುವ ಆನಂದ ,ಧನ್ಯತೆ ಕಟೀಲಮ್ಮನನ್ನು ದರ್ಶಿಸಿದವರಿಗೆ ಮಾತ್ರ ಸ್ವಯಂವೇದ್ಯ. ಅಂತಹ ಆಕರ್ಷಣೆ ಈ ಉದ್ಭವ ಸನ್ನಿಧಿಯಲ್ಲಿದೆ . ನಂದಿನಿ ನದಿಯಾದಳು: ಭೂಮಿಗೆ ಮಳೆಬಾರದೆ , ಬೆಳೆ ಬೆಳೆಯದೆ ಘನಘೋರ ಕ್ಷಾಮ ಉಂಟಾಗುತ್ತದೆ . ಕ್ಷೋಭೆಯಿಂದ ಸಜ್ಜನರ ಬದುಕು ದಯನೀಯವಾಗುತ್ತದೆ . ಧರ್ಮ ಸಂಪೂರ್ಣ ನಾಶವಾಗುತ್ತದೆ ,ದುಷ್ಟ ಶಕ್ತಿಗಳು ವಿಜೃಂಭಿಸಲಾರಂಭಿಸುತ್ತವೆ ಆಗ ಮಹರ್ಷಿ ಜಾಬಾಲಿ ತಪಸ್ಸಿನಿಂದ ಎದ್ದು ವಸುಂಧರೆಯ ಕ್ಷಾಮ ಪರಿಹರಿಸಲು ಏನು ಮಾಡೋಣ ? ಎಂದು ಯೋಚಿಸಿ ; ಸ್ವರ್ಗಕ್ಕೆ ಹೋಗುತ್ತಾನೆ ಇಂದ್ರನ ಸೂಚನೆಯಂತೆ ಕಾಮಧೇನುವಿನ ಮಗಳಾದ ನಂದಿನಿಯಲ್ಲಿ ಧರೆಗಿಳಿದು ಬಂದು ಯಜ್ಞಕಾರ್ಯಕ್ಕೆ ಸುವಸ್ತುಗಳನ್ನು ಅನುಗ್ರಹಿಸು ಎಂದು ವಿಂತಿಸಿಕೊಳ್ಳುತ್ತಾನೆ. ಆದರೆ ನಂದಿನಿ ಬರಲೊಲ್ಲೆ ಎನ್ನಲು ಶಪಿಸುತ್ತಾನೆ . ಅನಿರೀಕ್ಷಿತ ಶಾಪದಿಂದ ತಲ್ಲಣಗೊಂಡ ನಂದಿನಿ ಜಗನ್ಮಾತೆಯನ್ನು ಪ್ರಾರ್ಥಿಸಿ ಆಕೆಯ ನಿರ್ದೇಶನದಂತೆ ಭೂಮಿಯಲ್ಲಿ ನದಿಯಾಗಿ ಹರಿಯುತ್ತಾಳೆ .ತುಂಬಿ ಹರಿಯುವ ನಂದಿನಿ ನದಿಯ ಕಟಿ ಭಾಗದಲ್ಲಿ ಭ್ರಾಮರಿ ದುರ್ಗಾಪರಮೇಶ್ವರಿಯಾಗಿ ಹುಟ್ಟಿಬರುವ ಕಾಲದ ನಿರೀಕ್ಷೆಯಲ್ಲಿರುತ್ತಾಳೆ ನಂದಿನಿ . ಮಳೆಯಿಂದ ಬೆಳೆಯು ಭಾಗ್ಯವಾಗುತ್ತಾ ಸಮೃದ್ಧಿ ನೆಲೆಯಾಗುತ್ತದೆ . ಮಹರ್ಷಿ ಜಾಬಾಲಿ ಧನ್ಯನಾಗುತ್ತಾನೆ .ಆಗ ಕೇಳಿ ಬರುವುದು ಅರುಣ ದೈತ್ಯನ ಅಟ್ಟಹಾಸ . ಧರ್ಮ ಸಂಪೂರ್ಣ ವ್ಯತ್ಯಸ್ಥಗೊಳ್ಳುತ್ತದೆ . ಈ ದೈತ್ಯನ ವಧೆಗಾಗಿ ಜಗಜ್ಜನನಿ ನಂದಿನಿ ನದಿಯ ಕಟಿ ಭಾಗದಿಂದ ಭ್ರಾಮರಿಯಾಗಿ ಉದ್ಭವಿಸಿ ಅರುಣ ದೈತ್ಯನನ್ನು ವಧಿಸುತ್ತಾಳೆ .ಧರ್ಮದ ಮರು ಸ್ಥಾಪನೆಯಾಗುತ್ತದೆ . ಇಂತಹ ಕಥೆಯೊಂದು ಇಲ್ಲಿ ನಡೆಯಿತು , ಲೋಕ ಕಲ್ಯಾಣವಾಯಿತು .ನೋಡಿ....ಗರ್ಭಗುಡಿಯ ಒಳಗೆ ಅಲಂಕೃತ ಕಟೀಲಮ್ಮನನ್ನು ಕಾಣುತ್ತಿದ್ದೇವೆ . ಈ ಸುಂದರ ಬಿಂಬದ ಮೂಲದಲ್ಲಿ 'ಸ್ವಯಂಭೂ ಭ್ರಾಮರಿ' ಸನ್ನಿಹಿತಳಾಗಿರುವಳು .ಆ ಅಮ್ಮನ ಮೂರ್ತಸ್ವರೂಪವೇ ನಾವು ಕಾಣುವ 'ದಿವ್ಯ ರೂಪ' .ಆದರೆ ಇದು ಭವ್ಯದಲ್ಲಿ ಅಲಂಕೃತವಾಗಿದೆ ,ಆಕರ್ಷಣೀಯವಾಗಿದೆ. ಸಕಲ ಇಚ್ಛಾಭೋಗಗಳನ್ನು ಅನುಗ್ರಹಿಸುವ ,ಸರ್ವ ಲೌಕಿಕ ಸಂಪತ್ತನ್ನು , ಅಲೌಕಿಕ ಕಾಮನೆಗಳನ್ನು ಈಡೇರಿಸುವ ಭ್ರಮರಾಂಬೆಯನ್ನು "ಮಹಾಲಕ್ಷ್ಮೀ" ಎಂಬ ಅನುಸಂಧಾನದೊಂದಿಗೆ ಪೂಜಿಸುವ ವಿಧಾನವು ಇಲ್ಲಿ ರೂಢಿಯಲ್ಲಿದೆ .ಪುರಾತನ ತಾಳೆಗರಿಯಲ್ಲಿ ದೊರೆತ ನಿರ್ಜರಾರಣ್ಯ ಮಹಾತ್ಮೆಯಲ್ಲಿ ...ಹರಿಯುವ ನಂದಿನಿ ಇಬ್ಬಾಗವಾಗಿ ಹರಿಯುವ ಪ್ರದೇಶದಲ್ಲಿ 'ಲಕ್ಷ್ಮೀನಾರಾಯಣರ ಸನ್ಮಿಧಾನವಿದೆ ಎಂಬ ಉಲ್ಲೇಖವಿದೆ ಎನ್ನುತ್ತಾರೆ ಆಸ್ರಣ್ಣರು. ಸಂಪತ್ತಿನ ಅಧಿದೇವತೆ ; ಶೋಭೆ , ಕಾಂತಿ , ಲಕ್ಷಣ ಮುಂತಾದುವುಗಳನ್ಪೇನು ಅಪೇಕ್ಷಿಸಿ ಆಗಮಿಸುವ ಭಕ್ತರಿಗೆ ಕರುಣಿಸುವಂತೆ ಪ್ರಾರ್ಥಿಸಿ ಪೂಜಿಸುವ ಈ ಅನುಸಂಧಾನದ ಕಲ್ಪನೆ ವೈಚಾರಿಕ ವೈಶಾಲ್ಯತೆಯನ್ನು ಒಳಗೊಂಡಿದೆ .ದುರ್ಗೆಯನ್ನು ಮಹಾಕಾಳಿ ,ಮಹಾಲಕ್ಷ್ಮೀ , ಮಹಾಸರಸ್ವತಿಯಾಗಿ ಪೂಜಿಸುವ ಅವಕಾಶವಿದೆ .ಈ ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿಯನ್ನು "ಮಹಾಲಕ್ಷ್ಮೀ" ಎಂದು ಪೂಜಿಸಲಾಗುತ್ತಿದೆ. ಈ ಮಹಾತಾಯಿ ಸಂಪತ್ತನ್ನು ಮಾತ್ರವಲ್ಲ ಭಕ್ತ ಸಂದೋಹಕ್ಕೆ ಲೌಕಿಕ ಸಂಪತ್ತನ್ನು ಅಲೌಕಿಕ ಆನಂದವನ್ನು ಒದಗಿಸುವವಳು ಎಂಬುದು ಸಂಕಲ್ಪ . ನಂದಿನಿ ಧರೆಗಿಳಿದಳು ,ಜಗಜ್ಜನನಿ ಆವಿರ್ಭವಿಸಲು ವೇದಿಕೆ ಸೃಷ್ಟಿಯಾಯಿತು .ಇದರೊಂದಿಗೆ ಕ್ಷಾಮ ಪರಿಹಾರವಾಯಿತು .ಮನುಜರ ಹಸಿವು ಶಾಂತವಾಯಿತು .ಭ್ರಾಮರಿಯು ಗೋಚರಳಾಗಿ ಅರುಣ ದೈತ್ಯನನ್ನು ವಧಿಸಿದ ಪುಣ್ಯ ಭೂಮಿ ಶ್ರೀಕ್ಷೇತ್ರವಾಯಿತು .ಮನುಕುಲದ ಹಸಿವು ನಿವಾರಣೆಯಾದ ನೆನಪಲ್ಲಿ ಕಟೀಲಮ್ಮನ ಸನ್ನಿಧಿ "ಅನ್ನದಾನ"ಕ್ಕೆ ಹೆಸರಾಯಿತು .ಮೂರು ಹೊತ್ತು ಅನ್ನದಾನ ನಿತ್ಯನಿರಂತರವಾಯಿತು . ಕಟೀಲಮ್ಮ ಅನ್ನಪೂರ್ಣೆಯಾಗಿ ಅನುಗ್ರಹಿಸಿದಳು. ಅನ್ನದಾನ 'ಅನ್ನಪ್ರಸಾದ"ವಾಗಿ ಅಲ್ಲ ಮೃಷ್ಟಾನ್ನ ಭೋಜನದ ವ್ಯವಸ್ಥೆ . ಕಟೀಲಿಗೆ ಬರುವವರು ,ಹಸಿದುಬರುವವರು "ಉಂಡು ದಣಿ"ಯುವುದು ಖಂಡಿತ . ಏಕೆಂದರೆ ಇದು ಅಮ್ಮ , ಮಕ್ಕಳಿಗೆ ಬಡಿಸುವ ಮಮತೆಯ ಪಕ್ವಾನ್ನ . ಕ್ಷಾಮದ ತೀವ್ರತೆಯಿಂದ 'ಅಶನ'ದಂತೆ 'ವಸನ'ವೂ ದುರ್ಲಭ ವಾಗಿತ್ತು .ಅದರ ನೆನಪಿಗೆ ..ಅಮ್ಮನಿಗೆ ಭಕ್ತರಿಂದ ಸೀರೆಯ ಸಮರ್ಪಣೆ .ಅಮ್ಮನಿಂದ ಭಕ್ತರಿಗೆ ಶೇಷವಸ್ತ್ರ ವಿತರಣೆ. ಇಂತಹ 'ತವರು ಮನೆ'ಯನ್ನು ಬೇರೆಲ್ಲೂ ಕಾಣುವುದು ವಿರಳ . ಜಗಜ್ಜನನಿಯ ಆರಾಧನೆಯಲ್ಲಿ ಅವರ್ಣನೀಯ ಆನಂದವಿದೆ .ಎಲ್ಲಿ ಆನಂದವಿರುತ್ತದೋ ಅಲ್ಲಿ ನೈಜವಾದ ಸಂಭ್ರಮ ,ವೈಭವಗಳಿರುತ್ತವೆ .ಇದೇ ಮಂಗಲಕರವಾದುದು . ಇದು ಸೌಮಾಂಗಲ್ಯದ ಪರಿಣಾಮವಾದುದರಿಂದ ಮನಸ್ಸು ,ಭಾವಗಳು ಅರಳುವ ಅನಿರ್ವಚನೀಯ ಅನುಭವದ ಕ್ಷಣಗಳು . ಯಕ್ಷಗಾನ - ಆಟ :ಈ ಸಂದರ್ಭದ ಸಂತೋಷದ ಅಭಿವ್ಯಕ್ತಿಯಾಗಿ ಆರಾಧನಾ ಶ್ರದ್ಧೆಗೆ ಸಹಜವಾಗಿ ಜೋಡಿಸಲ್ಪಡುವುದು. ಗಾಯನ - ನರ್ತನಗಳು ಷೊಡಷೋಪಚಾರ ಪೂಜೆಯ ಅಂಗವಾಗಿದೆ ತಾನೆ ...? ನಮ್ಮ ಮಣ್ಣಿನ ಕಲೆಯಾದ ಯಕ್ಷಗಾನವು ಸರ್ವಾಂಗ ಸುಂದರ ಕಲೆ .ಇದರಲ್ಲಿ ಸಂಗೀತವಿದೆ , ವಾದನವಿದೆ , ನರ್ತನವಿದೆ , ಬಣ್ಣದ ಲೋಕವೇ ತೆರೆದುಕೊಳ್ಳುತ್ತದೆ .ತುಳು ಮಣ್ಣಿನಲ್ಲಿ ಈ ಮಣ್ಣಿನ ಸತ್ಯವಾಗಿ ಆವಿರ್ಭವಿಸಿದ ಕಟೀಲಮ್ಮನಿಗೆ ಯಕ್ಷಗಾನವೆಂದರೆ ಪ್ರೀತಿ .ಆದುದರಿಂದಲೇ ಯಕ್ಷಗಾನ ಸೇವೆಯಾಗಿ ನೆರವೇರುತ್ತವೆ. ಒಮ್ಮೆ ಭಾರೀ ಮಳೆಯಿಂದ ನಂದಿನಿ ನದಿ ಉಕ್ಕೇರಿ ಹರಿಯುತ್ತಾಳೆ . ದೇವಸ್ಥಾನ ಜಲಾವೃತವಾಗುತ್ತದೆ .ಈಗ ಇರುವಂತಹ ಸಂಪರ್ಕ ವ್ಯವಸ್ಥೆ ಇರಲಿಲ್ಲ . ನೆರೆ ಏರುತ್ತಿರುವಂತೆ ದೇವಳದ ವಸ್ತುಗಳೆಲ್ಲ ನೆರೆ ನೀರಿನಲ್ಲಿ ತೇಲಿ ಹೋಯಿತು .ಆಸ್ರಣ್ಣರು ಅಮ್ಮನ ಲಿಂಗವನ್ನು ಅಪ್ಪಿಹಿಡಿದು ಕುಳಿತರು ."ತೇಲುವುದಿದ್ದರೆ ಅಮ್ಮನೊಂದಿಗೆ" ಎಂಬ ಸಂಕಲ್ಪವಿತ್ತು . ನೆರೆ ಇಳಿದಾಗ ದೇವಳದಲ್ಲಿ ಉಳಿದದ್ದು ಆಟದ ಗಣಪತಿ ಪೆಟ್ಟಿಗೆ ಮತ್ತು ಅಕ್ಕಿ ಹಾಕುವ ಕಲೆಂಬಿ ಮಾತ್ರ . ಯಕ್ಷಗಾನದಂತೆಯೇ ಅನ್ನದಾನ ಪ್ರಿಯಳು ದುರ್ಗಾಪರಮೇಶ್ವರೀ .ಅದು ಇಂದಿಗೂ ಸತ್ಯವೇ ಅಲ್ಲವೆ.. 'ಆಟ ಗೊಬ್ಬಾವೆ' - ಆಟ ಆಡಿಸುತ್ತೇನೆ ಎಂಬುದೇ ಅತಿ ಜನಪ್ರಿಯವಾದ ಸೇವೆ . ಆರು ಮೇಳಗಳು ಪ್ರತಿವರ್ಷ ತಿರುಗಾಟ ಮಾಡುತ್ತವೆ .ಆದರೂ ಮುಂದಿನ ಹಲವು ವರ್ಷಗಳ ತಿರುಗಾಟಕ್ಕೆ ನೋಂದಣಿಯಾದ ಆಟಗಳಿವೆ . ಇದೇ ಕಟೀಲಿನ ಬೀದಿಯಲ್ಲಿ ನಡೆಯುವ ಯಕ್ಷಗಾನ ಬಯಲಾಟ ಸೇವೆಗಳನ್ನು ರಕ್ತೇಶ್ವರೀ ಕಲ್ಲಿನಲ್ಲಿ ಕುಳಿತು ಕಟೀಲಮ್ನನೇ ವೀಕ್ಷಿಸುತ್ತಾಳೆ ಎಂಬುದು ನಂಬಿಕೆ . ಕುದುರು ಪ್ರದೇಶ :ಇದು ಅರುಣ ದೈತ್ಯನ ವಧಾ ಸ್ಥಳವೇ ಕುದುರು ಪ್ರದೇಶ . ದುರ್ಗಾಪರಮೇಶ್ವರೀ ಭ್ರಮರ ರೂಪ ತಾಳಿ ಅರುಣನನ್ನು ಸಂಹರಿಸಿದ ಪ್ರದೇಶ . ಸುತ್ತಲೂ ನಂದಿನಿ ನದಿ .ಆದುದರಿಂದ ಇದು ಕುದುರು . ಇದೇ ಮೂಲಸ್ಥಾನ . ಆದರೆ....ರಕ್ತಪಾತವಾದ ಅಪವಿತ್ರ ಭೂಮಿ ಆರಾಧನೆಗೆ ಯೋಗ್ಯ ಅಲ್ಲವಾದುದರಿಂದ ಈಗ ದೇವಳ ಇರುವಲ್ಲಿ ಲಿಂಗ ರೂಪದಲ್ಲಿ ಭ್ರಮರಾಂಬೆ ಉದ್ಭವಿಸುತ್ತಾಳೆ . ಊಟ ಆಯಿತು , ಆಟವನ್ನೂ ನೋಡಿ ಆಯಿತು .ಕ್ಷಾಮದ ದಿನಗಳನ್ನೊಮ್ಮೆ ನೆನಪಿಸಿಕೊಳ್ಳೋಣ ಹೊಟ್ಟೆಗೆ ಅನ್ನವಿಲ್ಲದೆ ಇರುವಾಗ ವಿದ್ಯೆಯು ಕನಸಿನ ಮಾತು . ಆದರೆ ಎಲ್ಲವೂ ಸುವ್ಯವಸ್ಥೆಗೆ ಬಂದಾಗ ಸಹಜವಾಗಿ , ಅನಿವಾರ್ಯ ಅಗತ್ಯಗಳಲ್ಲಿ ಒಂದಾದ ವಿದ್ಯೆಗೆ ಪ್ರಾಶಸ್ತ್ಯ ದೊರೆಯಿತು .ಅಂಗನವಾಡಿಯಿಂದ ಎಲ್ಲಾ ಹಂತದಲ್ಲಿ ಪದವಿಯವರೆಗೆ ಶಿಕ್ಷಣ ಸಂಸ್ಥೆಗಳು ನಿರ್ಮಾಣವಾದುವು . ಅಮ್ಮನು ಜ್ಞಾನ ಪ್ರತಿಪಾದ್ಯಳು ಅಲ್ಲವೆ ? [ ವಿವಾಹ ,ಸಂತಾನಗಳ ಅನುಗ್ರಹ , ಬಡತನ ,ಕಷ್ಟ ಪರಂಪರೆಗಳ ಪರಿಹಾರ . ಮಹಾವ್ಯಾಧಿಗಳ ನಿವಾರಣೆ ಇವು ಕಟೀಲಮ್ಮನ ವಿಶೇಷ ಅನುಗ್ರಹಗಳು ಹೂವಿನಪೂಜೆ , ರಂಗ ಪೂಜೆ , ದುರ್ಗಾ ಪ್ರೀತ್ಯರ್ಥ ಯಾಗ - ಯಜ್ಞಗಳು ನಿತ್ಯ ನೆರವೇರುತ್ತವೆ .ಭಕ್ತರು ಧನ್ಯತೆಯಿಂದ ಯಥಾನುಶಕ್ತಿ ಸೇವೆ ಸಲ್ಲಿಸುತ್ತಾರೆ . ] ನವರಾತ್ರಿ ವಿಶೇಷ ಪೂಜೆ, ವೇಷಗಳು ,ಹುಲಿವೇಷಗಳು : ಬೆಳಗ್ಗೆ ಅಭಿಷೇಕ ,ಅಲಂಕಾರ .ಮಧ್ಯಾಹ್ನ ಮಹಾಪೂಜೆ . ಸಂಜೆ ಮತ್ತೆ ಅಭಿಷೇಕ ,ಅಲಂಕಾರ.ರಾತ್ರಿ ಒಂದು ದೇವರ(ಭಂಡಾರದ ವತಿಯಲ್ಲಿ) ರಂಗಪೂಜೆ .ಮೂರು ಭಕ್ತರ ಸೇವೆ ರಂಗಪೂಜೆ .ಲಲಿತಾಪಂಚಮಿ : ದೇವರ(ಭಂಡಾರದ ವತಿಯಲ್ಲಿ) ಚಂಡಿಕಾ ಹೋಮ .ಸುವಾಸಿನಿಯರಿಗೆ ಶೇಷ ವಸ್ತ್ರ ಪ್ರಸಾದ ವಿತರಣೆ . ಮೂಲಾನಕ್ಷತ್ರ: ಧ್ವಜಸ್ತಂಭದ ಬಳಿ ರಂಗೋಲಿ ಹಾಕಿ ದೀಪಹಚ್ಚಿಟ್ಟು ಸಂಕೀರ್ತನೆ .ನವರಾತ್ರಿ ಸಂದರ್ಭದಲ್ಲಿ ದಿನವೂ ತಾಳದ ಮನೆಯವರಿಂದ ಮಾಮೂಲು ಸಂಕೀರ್ತನೆ . ಮೂಲಾನಕ್ಷತ್ರದಂದು ಗೌಡ ಸಾರಸ್ವತ ಸಮಾಜದವರಿಂದ ಭಜನಾ ಸಂಕೀರ್ತನೆ . ದುರ್ಗಾಷ್ಟಮಿ : ರಾತ್ರಿ ಮರುದಿನದ ಕಡುಬು ತಯಾರಿಗೆ ದೋಣಿಗೆ ಅಕ್ಕಿ ಅಳೆದು ಹಾಕುವುದು ,ತಯಾರಿಸುವವರಿಗೆ ಪ್ರಸಾದ ಕೊಡುವುದು . ಮಹಾನವಮಿ: ಶ್ರೀದೇವರ ಒಂದೇ ಮಹಾರಂಗಪೂಜೆ . ಮೂರು ಗಂಟೆ ಸತತ ಆರತಿ ಬೆಳಗುವ ವಿಶೇಷ ಆರತಿ ಸೇವೆ . ರಾತ್ರಿ ಆಗಮಿಸುವ ಭಕ್ತರೆಲ್ಲರಿಗೆ ಕಡುಬು ಪ್ರಸಾದ, ಗೋಧಿ ಪಾಯಸ ಬಡಿಸಲಾಗುವುದು . ವಿಜಯದಶಮಿ: ಬೆಳಗ್ಗೆ ನವರಾತ್ರಿ ವಿಸರ್ಜನೆ ಪೂಜೆ .ಅಭಿಷೇಕ - ಅಲಂಕಾರ .ಮಕ್ಕಳಿಗೆ ಅಕ್ಷರಾಭ್ಯಾಸ . ಮೂರು ದಿನ ವೇಷಗಳ ವಿಜೃಂಭಣೆ : ಕಟೀಲಿಗೆ ವೇಷಗಳ ಮೆರವಣಿಗೆ . ಹುಲಿವೇಷಗಳ ತಂಡದಿಂದ ಕುಣಿತದ ಸೇವೆ . ಲಲಿತಾಪಂಚಮಿ : ಕೊಡೆತ್ತೂರಿನ ಹುಲಿಗಳು . ಮೂಲಾನಕ್ಷತ್ರಕ್ಕೆ ಎಕ್ಕಾರಿನ ಹುಲಿಗಳು .ಸೇವೆ ಸಲ್ಲಿಸುತ್ತಾರೆ. ಕಟೀಲಿನ ನವರಾತ್ರಿ ಆಚರಣೆಯಲ್ಲಿ ಹುಲಿವೇಷಗಳದ್ದು ಒಂದು ಪ್ರತ್ಯೇಕ ವೈಭವ . ಎಲ್ಲೊ ವೇಷಹಾಕಿ ಕಟೀಲಿಗೆ ಬಂದು ವೇಷ ಬಿಚ್ಚುವ ಹರಕೆಯ ವೇಷಗಳು ಇರುತ್ತವೆ .ನವರಾತ್ರಿ ಕಾಲದಲ್ಲಿ ಕನಿಷ್ಠ ಒಂದು ಸಾವಿರ ಹುಲಿ ವೇಷಗಳು ಕಟೀಲಿಗೆ ಬಂದು ಸೇವೆ ಸಲ್ಲಿಸುತ್ತಾರೆ . ನವರಾತ್ರಿ ಕಾಲದಲ್ಲಿ ಪ್ರತಿದಿನ ಯಕ್ಷಗಾನ ನಡೆಯುತ್ತದೆ .ಕಟೀಲಿನಲ್ಲಿ ವೇಷಹಾಕುತ್ತೇವೆ ಎಂದು ಹರಕೆ ಹೊತ್ತ ಯಕ್ಷಗಾನ ಕಲಾವಿದರಿಗೆ ಈ ಅವಕಾಶ .ಈ ವರ್ಷ ಪ್ರತಿದಿನದ ಯಕ್ಷಗಾನ ಕಾರ್ಯಕ್ರಮ ಕೊರೊನ ಕಾರಣಕ್ಕೆ ರದ್ದುಗೊಳಿಸಲಾಗಿದೆ. ಲೇಖನ : ಕೆ.ಎಲ್ .ಕುಂಡಂತಾಯ
ಮಡುಂಬು ಬೆರ್ಮೊಟ್ಟುವಿನಲ್ಲಿ ವಿಜೃಂಭಣೆಯ ನವರಾತ್ರಿ
Posted On: 25 Oct 2020, 09:11 PM
ಇತಿಹಾಸ ಪ್ರಸಿದ್ಧ ಮಡುಂಬು ಬೆರ್ಮೊಟ್ಟು ಶ್ರೀ ಭದ್ರಕಾಳಿ ಮತ್ತು ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದಲ್ಲಿ ಒಂಬತ್ತು ದಿನಗಳ ನವರಾತ್ರಿ ಪೂಜೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದಿದ್ದು. ವಿಜಯ ದಶಮಿಯ ದಿನವಾದ ಇಂದು ಕೂಡಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ..
