Updated News From Kaup

ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಆಶಾಕಾರ್ಯಕರ್ತೆಯರಿಗೆ ಸಮ್ಮಾನ

Posted On: 30-06-2020 11:05PM

ಕೊರೊನ ಎಂಬ ಮಹಾಮಾರಿ ಇಡೀ ದೇಶವನ್ನೇ ನಲುಗಿಸಿ ಅನೇಕ ಸಾವು ನೋವುಗಳಿಗೆ ಸಾಕ್ಷಿ ಆಗಿದೆ. ಮನುಕುಲದ ಇತಿಹಾಸದಲ್ಲಿ ಕಠಿಣ ಪರಿಸ್ಥಿತಿಯ ಈ ಸಮಯದಲ್ಲಿ ಮಾತನಾಡಲು ಭಯಪಡುವ ಸಮಯದಲ್ಲಿ ನಾವಿದ್ದೇವೆ. ಈಗಲೂ ಕೊರೊನ ಮಹಾಮಾರಿಯ ಅಟ್ಟಹಾಸ ಮುಂದುವರಿಯುತ್ತಾ ಇದೆ. ಈ ಕಠಿಣ ಪರಿಸ್ಥಿತಿಯಲ್ಲಿ ಜನರ ನೆರವಿಗೆ ಬಂದು ತಮ್ಮ ಜೀವವನ್ನು ಪಣಕಿಟ್ಟು ಈಗಲೂ ಜನಸೇವೆ ಮಾಡುತ್ತಿರುವವರು ನಮ್ಮ ಆಶಾ ಕಾರ್ಯಕರ್ತರು. ನಿನ್ನೆ ಜೆಸಿಐ ಶಂಕರಪುರ ಜಾಸ್ಮಿನ್ ನ ಜೆಸಿ ಭವನದಲ್ಲಿ ಕುರ್ಕಾಲ್ ಗ್ರಾಮ ಮತ್ತು ಇನ್ನಂಜೆ ಪಾಂಗಾಳ ಗ್ರಾಮದ ಆಶಾ ಕಾರ್ಯಕರ್ತರು ಆದ ಶ್ರೀಮತಿ ಗಾಯತ್ರಿ, ಕಲಾ, ಸುಷ್ಮಾ ಮತ್ತು ರೇಖಾ ಶೆಟ್ಟಿ, ಪುಷ್ಪ ಶೆಟ್ಟಿ, ಸುಜಾತಾ ಭಂಡಾರಿ, ಉಷಾ ಭಟ್ ಇವರನ್ನು ಸಮ್ಮಾನಿಸಲಾಯಿತು. ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಆಶಾಕಾರ್ಯಕರ್ತೆಯರನ್ನು ಗೌರವಿಸಿ, ಪ್ರಶಂಸೆ ವ್ಯಕ್ತಪಡಿಸಿದರು.

ಉಡುಪಿ ನಗರಾಭಿವೃದಿ ಪ್ರಾಧಿಕಾರ ನೂತನ ಪದಾಧಿಕಾರಿಗಳ ಆಯ್ಕೆ

Posted On: 29-06-2020 08:52PM

ಉಡುಪಿ. 29, ಜೂನ್ : ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ ಕೆ. ರಾಘವೇಂದ್ರ ಕಿಣಿಯವರನ್ನು ಮತ್ತು ಪ್ರಾಧಿಕಾರದ ನೂತನ ಸದಸ್ಯರನ್ನು ಇಂದು ಆದಿ ಉಡುಪಿಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಅಭಿನಂದಿಸಿ ಶುಭ ಹಾರೈಸಲಾಯಿತು. ಉಡುಪಿಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಮತ್ತು ಸಹಭಾಗಿತ್ವದ ಅವಶ್ಯಕತೆ ಇದೆ ಎಂದು ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರು. ಜಗದೀಶ್ ಶೆಟ್ಟಿ, ಗಣೇಶ್ ಪ್ರಸಾದ್ ಜಿ. ನಾಯಕ್, ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್ ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಶ್ರೇಷ್ಠ ವೈದ್ಯ ಪ್ರಶಸ್ತಿಗೆ ಡಾ. ಕೆ. ಪ್ರಭಾಕರ ಶೆಟ್ಟಿ ಆಯ್ಕೆ

Posted On: 29-06-2020 01:52PM

ಕಾಪುವಿನ ಹಿರಿಯ ವೈದ್ಯ ಡಾ. ಕೆ. ಪ್ರಭಾಕರ ಶೆಟ್ಟಿಯವರಿಗೆ ರಾಜ್ಯ ಮಟ್ಟದ ಡಾ. ಬಿ.ಸಿ. ರಾಯ್ ಸ್ಮರಣಾರ್ಥ ಶ್ರೇಷ್ಟ ವೈದ್ಯ ಪ್ರಶಸ್ತಿ ಕಾಪುವಿನ ಹಿರಿಯ ವೈದ್ಯ, ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಗಳ ಗೌರವಾಧ್ಯಕ್ಷ ಡಾ. ಕೆ. ಪ್ರಭಾಕರ ಶೆಟ್ಟಿ ಅವರು ಕರ್ನಾಟಕ ರಾಜ್ಯ ಭಾರತೀಯ ವೈದ್ಯಕೀಯ ಸಂಘ ಬೆಂಗಳೂರು ಇವರು ವೈದ್ಯರ ದಿನಾಚರಣೆಯ ಅಂಗವಾಗಿ ಡಾ. ಬಿ. ಸಿ. ರಾಯ್ ಸ್ಮರಣಾರ್ಥ ಕೊಡಮಾಡುವ ರಾಜ್ಯ ಮಟ್ಟದ ಶ್ರೇಷ್ಟ ವೈದ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ಐದೂವರೆ ದಶಕಗಳಿಂದ ಕಾಪು ಪರಿಸರದಲ್ಲಿ ವೈದ್ಯಕೀಯ ಸೇವೆ ನಡೆಸಿಕೊಂಡು ಬರುತ್ತಿರುವ ಡಾ. ಪ್ರಭಾಕರ ಶೆಟ್ಟಿ ಅವರು ವೈದ್ಯಕೀಯ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ನಡೆಸಿಕೊಂಡು ಬರುತ್ತಿರುವ ಜೀವಮಾನದ ಶ್ರೇಷ್ಟ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಾಪು ಪ್ರಶಾಂತ್ ಹಾಸ್ಪಿಟಲ್ ನ ಸ್ಥಾಪಕರಾಗಿರುವ ಅವರು ಕಾಪು ಸುತ್ತಮುತ್ತಲಿನಲ್ಲಿ ಅತ್ಯಂತ ಹಿರಿಯ ವೈದ್ಯರಾಗಿ ಗ್ರಾಮೀಣ ಜನರ ಪಾಲಿನ ಸಂಜೀವಿನಿಯಾಗಿದ್ದಾರೆ. ಉಳಿಯಾರಗೋಳಿ ದಂಡತೀರ್ಥ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಶೈಕ್ಷಣಿಕ ಸೇವೆಯನ್ನು ಒದಗಿಸಿದ್ದಾರೆ. ವೈದ್ಯಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಹತ್ತಾರು ವಿಶೇಷ ಪ್ರಶಸ್ತಿ - ಗೌರವಗಳಿಗೆ ಪಾತ್ರರಾಗಿದ್ದಾರೆ.

ರೋಟರಿ ಶಂಕರಪುರ ವತಿಯಿಂದ ಇನ್ನಂಜೆಯಲ್ಲಿ ನಾಟಿ ಮಾಡುವುದರ ಮೂಲಕ ರೈತಮಿತ್ರ ಕಾರ್ಯಕ್ರಮ

Posted On: 29-06-2020 01:44PM

ಇನ್ನಂಜೆ.29, ಜೂನ್ : ರೋಟರಿ ಶಂಕರಪುರ ವತಿಯಿಂದ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಶ್ಮೀರ್ ನೊರೊನ್ನಾ ಇವರ ಗದ್ದೆ ವಹಿಸಿಕೊಂಡು ನಾಟಿ ಮಾಡುವುದರ ಮೂಲಕ ರೈತ ಮಿತ್ರ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಪ್ರಾಯೋಜಕತ್ವ ವನ್ನು ವಹಿಸಿದ ಶ್ರೀ ನವೀನ್ ಮೋನಿಸ್ ಮತ್ತು ಶ್ರೀ ಅರುಣ್ ನೊರೊನ್ನಾ ಇವರ ಪರವಾಗಿ ನವೀನ್ ಮೋನಿಸ್ ಇವರ ತಾಯಿಯಾದ ತೆರೆಜಾ ಮೋನಿಸ್ ಇವರು ನಾಟಿ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು. ರೋಟರಿ ಜಿಲ್ಲೆ 3182 ಜೋನ್ 5 ರ ಸಹಾಯಕ ಗವರ್ನರ್ ಶ್ರೀ ನವೀನ್ ಅಮೀನ್ ಇವರು ಶುಭಹಾರೈಸಿದರು. ರೋಟರಿ ಶಂಕರಪುರದ ಅಧ್ಯಕ್ಷರು ಆದ ರೋ ವಿಕ್ಟರ್ ಮಾರ್ಟಿಸ್ ಇವರು ಸ್ವಾಗತ ನೀಡಿದರು. ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವನ್ನು ಕಾರ್ಯದರ್ಶಿಯಾದ ರೋ ಜೆರಾಮ್ ರೋಡ್ರಿಗೆಸ್ ಇವರು ಮಾಡಿದರು. ಈ ಸಂದರ್ಭದಲ್ಲಿ ಸಂದೀಪ್ ಬಂಗೇರ, ಪ್ಲಾವಿಯಾ ಮೆನೆಜಸ್, ನಂದನಕುಮಾರ್, ಐವನ್ ಪಿಂಟೋ, ಫ್ರಾನ್ಸಿಸ್ ಡೇಸಾ, ವಿನ್ಸೆಟ್ ಸಲ್ದಾನ, ಮಾಲಿನಿ ಶೆಟ್ಟಿ ಅಲ್ಬರ್ಟ್ ಇವರು ಉಪಸ್ಥಿತರಿದ್ದರು.

ಕುತ್ಯಾರಿನ ಯುವಕರು ರಚಿಸಿದ ಕನಸು ಫಿಲಮ್ಸ್'ನ ಚೊಚ್ಚಲ ಚಿತ್ರ 'ಜಂಕ್ಷನ್' ಬಿಡುಗಡೆಯ ಹೊಸ್ತಿಲಲ್ಲಿ

Posted On: 29-06-2020 10:53AM

ಕಾಪು(ಜೂನ್ 29 ನಮ್ಮ ಕಾಪು ನ್ಯೂಸ್) ಕಾಪುವಿನ ಕುತ್ಯಾರಿನ ಯುವಕರ ತಂಡವೊಂದು ಸಮಾಜಕ್ಕೆ ಉತ್ತಮ ಸಂದೇಶ ಸಾರುವಂತಹ ಕಿರುಚಿತ್ರ ಜಂಕ್ಷನ್ ಅತೀ ಶೀಘ್ರದಲ್ಲಿ ತಮ್ಮ ನಡುವೆ ಬರಲಿದ್ದು,ಕಿರುಚಿತ್ರದ ಮೂಹೂರ್ತವು ನಿನ್ನೆ ಕುತ್ಯಾರು ಶ್ರೀ ವೀರಭದ್ರ ದೇವಸ್ದಾನದಲ್ಲಿ ನಡೆಯಿತು.. ಪ್ರವೀಣ್ ಡಿ ಆಚಾರ್ಯ ಇವರ ಸುಂದರ ಕಥೆ,ನಿರ್ದೇಶನ ಸಂಭಾಷಣೆ ಜೊತೆಗೆ ನಿರ್ಮಾಪಕರಾಗಿ ಯುವಕರ ಪಾಲಿನ ಉತ್ಸಾಹಿ ಚಿಲುಮೆ ಶ್ರೀ ಪ್ರಸಾದ್ ಕುತ್ಯಾರು,ಶ್ರೀ ಜಿನೇಶ್ ಬಲ್ಲಾಳ್,ಶ್ರೀ ನಿತೇಶ್ ಭಂಡಾರಿ ಕುತ್ಯಾರು,ಶ್ರೀಮತಿ ಸರಿತಾ ಕುಲಾಲ್,ಉದ್ಯಮಿ ಶ್ರೀ ರಾಜೇಶ್ ಶೆಟ್ಟಿ(ಶಬರಿ ಶಾಮಿಯಾನ) ನಿರ್ವಸಿರುತ್ತಾರೆ.. ಶ್ರೀ ನಿಲೇಶ್ ದೇವಾಡಿಗ ಇವರ ಕ್ಯಾಮರದಲ್ಲಿ ಸೆರೆಯಾಗುವ ಈ ಕಿರುಚಿತ್ರಕ್ಕೆ ಶ್ರೀ ಬಸಂತ್ ಕುಮಾರ್ ಪೊಸ್ಟರ್ ಹಾಗೂ ಎಡಿಟಿಂಗ್ ಮಾಡಿ ಶ್ರೀ ಧೀರಜ್ ಕುಲಾಲ್ ಕುತ್ಯಾರು ಈ ತಂಡಕ್ಕೆ ಸಂಪೂರ್ಣ ಸಹಕಾರ ನೀಡಿರುತ್ತಾರೆ... ಒಂದೊಳ್ಳೆ ಕಿರುಚಿತ್ರವಾಗಿ ಜನಮಾನಸದಲ್ಲಿ ನೆಲೆಯೂರಲಿ ಎನ್ನುತ್ತ ತಂಡದ ಸರ್ವರಿಗೂ ನಮ್ಮ ಕಾಪು ನ್ಯೂಸ್ ತಂಡ ಶುಭವನ್ನ ಕೊರುತ್ತದೆ...

ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ರಾಘವೇಂದ್ರ ಪ್ರಭು,ಕವಾ೯ಲು ರವರಿಗೆ ಸನ್ಮಾನ

Posted On: 28-06-2020 07:27PM

ಉಡುಪಿ.28, ಜೂನ್ : ಸಮಾಜಿಕ ಕಾಯ೯ಕತ೯, ವಿಶೇಷವಾಗಿ ಕೊರೊನಾ‌ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಊಟ ವನ್ನು ದಿನ ನಿತ್ಯ ಹಂಚಿದ ಟೀಮ್ ಹೆಲ್ಪಿಂಗ್ ಹ್ಯಾಂಡ್ಸ್ ನ ಅತ್ಯಂತ ಸಕ್ರಿಯ ಸದಸ್ಯ, ಇನ್ನಿತರ ಸಮಾಜಮುಖಿ ಚಟುವಟಿಕೆಗಳಲ್ಲಿ ತನ್ನನ್ನು ತಾನು ಕಳೆದ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿರುವ ರಾಘವೇಂದ್ರಪ್ರಭುಕರ್ವಾಲು ಇವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎಲ್ಲರೂ ಸೂರ್ಯನ ಹಾಗೆ ಪ್ರಪಂಚಾದದ್ಯಂತ ಬೆಳಕನ್ನು ನೀಡಲು ಸಾಧ್ಯವಿಲ್ಲ ಆದರೆ ಹಣತೆಯಂತೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬೆಳಕು ನೀಡುತ್ತಾ ,ಅದೇ ಮಾದರಿಯಲ್ಲಿ ಸಮಾಜ ಸೇವೆ ಮಾಡಬೇಕು ಎಂದರು ಹಾಗೂ ಇತ್ತೀಚೆಗೆ ರಾಜ್ಯದಲ್ಲಿ ಉತ್ತಮ ಹೆಸರು ಮಾಡುತ್ತಾ ಇರುವ ಕರಾಸಪಕ್ಷ ವನ್ನು ಅಭಿನಂದಿಸಿದರು. ಪ್ರಸಾದ್ ಕರ್ಕಡ, ಶಾಹಿದ್ ಅಲಿ, ವಿನುತಾ ಕಿರಣ್,ರಫಿಕ್ ಕಲ್ಯಾಣಪುರ ,ಅಮೀರ್ ಬೆಳಪು, ಕಿರಣ್ ಕುಮಾರ್ ಪೆರ್ಡೂರು, ವಿನೋದ್ ಬಂಗೇರ, ಸಲ್ಮಾನ್ ಅಹ್ಮದ್, ದಿನೇಶ್ ರಾಮ್, ಅಬ್ದುಲ್ ರಜಾಕ್ ಮತ್ತಿತರರು ಉಪಸ್ಥಿತರಿದ್ದರು

ರೋಟರಿ ಶಂಕರಪುರದ ಪದಪ್ರಧಾನ ಸಮಾರಂಭ ರೋಟರಿ ಶತಾಬ್ದಿ ಭವನದಲ್ಲಿ ಜರಗಿತು

Posted On: 28-06-2020 03:38PM

ಶಂಕರಪುರ.28, ಜೂನ್ : ರೋಟರಿ ಶಂಕರಪುರದ ಪದಪ್ರಧಾನ ಸಮಾರಂಭವು ರೋಟರಿ ಶತಾಬ್ದಿ ಭವನದಲ್ಲಿ ಜರುಗಿತು.ಪದಪ್ರಧಾನ ಅಧಿಕಾರಿಯಾದ ಎಸ್ ಸದಾನಂದ ಚಾತ್ರ ಇವರು ನಿರ್ಗಮನ ಅಧ್ಯಕ್ಷರು ಆದ ಸಂದೀಪ್ ಬಂಗೇರ ಇವರಿಂದ ನೂತನ ಅಧ್ಯಕ್ಷರು ಆದ ವಿಕ್ಟರ್ ಮಾರ್ಟಿಸ್ ಇವರಿಗೆ ಅಧಿಕಾರ ಹಸ್ತಾಂತರ ಮಾಡಿದರು.. ಈ ಸಂದರ್ಭದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ಮತ್ತು ಧ್ವನಿ ಮತ್ತು ಬೆಳಕು ಉದ್ಯಮದಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿದ ಹಿರಿಯ ರೋಟರಿ ಸದಸ್ಯರುಗಳಾದ ಡಾ ಎಡ್ವರ್ಡ್ ಲೋಬೊ ಮತ್ತು ಆಂಟನಿ ಡೇಸಾ ಇವರನ್ನು ಮುಖ್ಯ ಅತಿಥಿಗಳಾದ ರೋಟರಿ ಜಿಲ್ಲೆ 3180..ಯ ಮಾಜಿ ಜಿಲ್ಲಾ ಸಭಾಪತಿಯಾದ ಎಸ್ ಸದಾನಂದ ಚಾತ್ರ, ಸಹಾಯಕ ಗವರ್ನರ್ ನವೀನ್ ಅಮೀನ್, ವಲಯ ಸೇನಾನಿ ಸುರೇಶ್ ರಾವ್ ಅವರ ಉಪಸ್ಥಿತಿಯಲ್ಲಿ ಗುರುತಿಸಿ ಗೌರವಾದರಗಳಿಂದ ಸಮ್ಮಾನಿಸಲಾಯಿತು.. ಈ ಸಂದರ್ಭದಲ್ಲಿ ರೋಟರಿ ಶಂಕರಪುರ ನೂತನ ಕಾರ್ಯದರ್ಶಿ ಜೆರಾಮ್ ರೋಡ್ರಿಗೆಸ್, ಸಂದೀಪ್ ಬಂಗೇರ ಮತ್ತು ಜಾನ್ ರೋಡ್ರಿಗೆಸ್ ಫ್ರಾನ್ಸಿಸ್ ಡೇಸಾ, ಅನಿಲ್ ಡೇಸಾ ಉಪಸ್ಥಿತರಿದ್ದರು..

ಆಟಿ - ಆಷಾಢ ಗೊಂದಲ 'ಆಟಿ' 'ಆಷಾಢ'ವಲ್ಲ - ಕೆ.ಎಲ್.ಕುಂಡಂತಾಯ

Posted On: 28-06-2020 02:42PM

ಆಟಿ , ಆಷಾಢವಲ್ಲ , ಆಷಾಢ, ಆಟಿಯಲ್ಲ. 'ಆಟಿ' ತುಳುವರಾದ ನಮ್ಮ ಸೌರ ಪದ್ಧತಿಯ ನಾಲ್ಕನೇ ತಿಂಗಳು‌.‌ಈ ವರ್ಷ ಜುಲೈ 17 ನೇ ತಾರೀಕಿನಿಂದ ಆರಂಭವಾಗುತ್ತದೆ . ಆಟಿ ಎಂದರೆ ಕರ್ಕಾಟಕ ಮಾಸ. ಆಷಾಢ ಚಾಂದ್ರ ಪದ್ಧತಿಯ ನಾಲ್ಕನೇ ತಿಂಗಳು .ಈ ವರ್ಷ ಜೂನ್ 22 ನೇ ತಾರೀಕಿನಿಂದ ಆರಂಭವಾಗಿದೆ . ರೂಢಿಯಲ್ಲಿ ಇರುವಂತೆ ಸೌರ ವರ್ಷದ ತಿಂಗಳುಗಳ ಯಾದಿ ಇಂತಿದೆ : ಪಗ್ಗು (ಮೇಷ) , ಬೇಶ (ವೃಷಭ) , ಕಾರ್ತೆಲ್ (ಮಿಥುನ) , ಆಟಿ (ಕರ್ಕಾಟಕ ) , ಸೋಣ(ಸಿಂಹ) , ಕನ್ಯಾ (ನಿರ್ನಾಲ್) , ಬೊಂತೆಲ್( ತುಲಾ) , ಜಾರ್ದೆ( ವೃಶ್ಚಿಕ) , ಪೆರಾರ್ದೆ(ಧನು) , ಪೊನ್ನಿ- ಪಯಿಂತೆಲ್(ಮಕರ) ,ಮಾಗಿ - ಮಾಯಿ( ಕುಂಭ) ,ಸುಗ್ಗಿ( ಮೀನ) . ಸೌರಮಾನಿಗಳ ಕ್ರಮದಂತೆ "ಸೌರಯುಗಾದಿ" ಎಂದರೆ ವಿಷು , ಬಿಸು ,ಇಗಾದಿ ಸನ್ನಿಹಿತವಾಗುವ ಸೌರ ವರ್ಷದ ಆರಂಭದ ದಿನ . "ಪಗ್ಗು ತಿಂಗೊಲ್ದ ತಿಂಗೊಡೆ" ಸೌರಯುಗಾದಿ .ಮೇಷ ಮಾಸದ ಮೊದಲದಿನ . ಚಾಂದ್ರ ವರ್ಷ ಆರಂಭವಾಗುವುದು ಚಾಂದ್ರ ಪದ್ಧತಿಯ ಮೊದಲ ತಿಂಗಳಾದ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ . ಪಾಲ್ಗುನ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ಚಾಂದ್ರ ವರ್ಷದ ಕೊನೆಯ ದಿನ . ಚೈತ್ರ , ವೈಶಾಖ , ಜ್ಯೇಷ್ಠ , ಆಷಾಡ , ಶ್ರಾವಣ , ಭಾದ್ರಪದ , ಆಶ್ವಯುಜ , ಕಾರ್ತಿಕ , ಮಾರ್ಗಶಿರ , ಪೌಷ , ಮಾಘ , ಪಾಲ್ಗುನ .ಇವು ಚಂದ್ರ ತಿಂಗಳುಗಳು . ಈ ತಿಂಗಳುಗಳ ಯಾದಿಯಂತೆ ದಿನಗಳು ಉರುಳುತ್ತಾ ವರ್ಷ ಕ್ರಮಿಸುತ್ತದೆ .ಹಳೆ ವರ್ಷ ನೇಪಥ್ಯಕ್ಕೆ ಸರಿಯುತ್ತಾ ಹೊಸವರ್ಷ ಬರುತ್ತದೆ . ‌‌ ತುಳುವರಲ್ಲಿ ಚಾಂದ್ರಮಾನಿಗಳೂ ಇದ್ದಾರೆ . ಕೆಲಂಡರ್ ಅನುಸರಿಸುವವರೂ ಇದ್ದಾರೆ ‌ . ಇವರೊಂದಿಗೆ ಬದುಕುವ ನಮಗೆ ಇಂತಹ ಗೊಂದಲಗಳು ಸಹಜ .ನಾವು ಚಾಂದ್ರಯುಗಾದಿಯನ್ನೂ ಆಚರಿಸೋಣ , ಕೆಲಂಡರ್ ಹೊಸವರ್ಷವನ್ನೂ ಆಚರಿಸೋಣ . ಆದರೆ ನಮ್ಮದೇ ಆದ ವಿಷು , ಬಿಸು , ಇಗಾದಿಯನ್ನು " ಕಣಿ " ನೋಡುತ್ತಾ , ಹಿರಿಯರಿಗೆ ನಮಸ್ಕರಿಸುತ್ತಾ , ಪಾಯಸದ ಊಟಮಾಡುತ್ತಾ ಆಚರಿಸೋಣ . ಆಷಾಢ - ಚಾಂದ್ರ ಪದ್ಧತಿಯಲ್ಲಿ ಅಂತಹ ದೊಡ್ಡ ನಿಷಿದ್ಧಗಳಿಲ್ಲ , ನಿಷಿದ್ಧಗಳಿವೆ . ಸಣ್ಣಪುಟ್ಟ ಆಚರಣೆಗಳಿರುತ್ತವೆ . ‌ ಆದರೆ ಆಟಿ - ಸೌರ ಪದ್ಧತಿಯ ತಿಂಗಳಲ್ಲಿ "ಆಟಿ ಕುಲ್ಲುನು"ಎಂದು ತವರು ಮನೆಗೆ ಹೋಗುವ ಕ್ರಮವಿದೆ . ಆಟಿ ತಿಂಗಳಲ್ಲಿ ಕುಳಿತು ತಿನ್ನಬೇಕು , ಕೆಲಸವಿಲ್ಲ ಅದಕ್ಕಾಗಿ ತವರು ಮನೆಗೆ ಕಳುಹಿಸುವುದು ಎಂದೂ ಒಂದು ಒಡಂಬಡಿಕೆ ಇದೆ . ಆಟಿ ಅಮಾವಾಸ್ಯೆಯಂದು "ಆಟಿ ಮದ್ದು" ಕುಡಿಯುವ ಕ್ರಮವಿದೆ . ಧಾರಾಕಾರ ಸುರಿಯುವ ಮಳೆಯಿಂದ ಆರೋಗ್ಯ ಕೆಡಬಾರದಲ್ಲ ,ಅದಕ್ಕೆ ಮದ್ದು ಕುಡಿಯುವ ಆಚರಣೆ .ನಾವು ಆರೋಗ್ಯವಂತರಾದರೆ ಸಾಲದು ಗದ್ದೆಯಲ್ಲಿ ಬೆಳೆಯುತ್ತಿರುವ ನಮ್ಮಬೆಳೆಯ ರಕ್ಷಣೆಗೂ ಕಾವೇರಿ ಮರದ ಗೆಲ್ಲುಗಳನ್ನು ಕಡಿದು ಗದ್ದೆಗಳಿಗೆ ಹಾಕುವ ಕ್ರಮವಿತ್ತು. ನಾಗರಪಂಚಮಿಯು ಆಟಿ ಅಮಾವಾಸ್ಯೆ ಕಳೆದು ಐದನೇ ದಿನವೇ ಬರುತ್ತದೆ . ತುಳುವಾಲ ಬಲೀಂದ್ರ ಪಾಡ್ದನದಲ್ಲಿ ಬಲೀಂದ್ರ ಅವನು ಬಿಟ್ಟುಹೋದ ಭೂಮಿಯನ್ನು , ಪ್ರಜೆಗಳನ್ನು ನೋಡಿಬರಲು ಆಳು ಕಳುಹಿಸುತ್ತಾನೆ ಎಂದಿದೆ . ಇದು ನಿಜವಾಗಿ ಜನ ಬೆಳೆಬೆಳೆಯುತ್ತಿದ್ದಾರಾ ,ಮಳೆ ಹೇಗೆ ಸುರಿಯುತ್ತದೆ ಎಂಬುದನ್ನು ತಿಳಿದು ಬರಲು ಆಳನ್ನು ಕಳುಹಿಸುವುದು ಎಂದು ಒಂದು ವಿವರಣೆ ಇದೆ .ಮುಂದೆ ಸೋಣ ತಿಂಗಳಿಗೆ ಬಲೀಂದ್ರನ ತಾಯಿ ಬರುತ್ತಾಳೆ ಎಂಬುದು ನಂಬಿಕೆ . ಸೌರಯುಗಾದಿ ಹೊಸ ವರ್ಷದ ಮೊದಲ ದಿನ ಮಾತ್ರವಲ್ಲ "ಕೃಷಿ"ಗೆ ತೊಡಗುವ ದಿನವೂ ಹೌದು . "ನಾಲೆರು ಮಾದಾವೊಡು , ಪುಂಡಿಬಿತ್ತ್ ಪಾಡೋಡು" ಎಂಬುದು ಸೌರಯುಗಾದಿಯ ದಿನ ಕೃಷಿಕನು ಕೃಷಿಗೆ ತೊಡಗುವುದು ಸಂಪ್ರದಾಯ. ನಮ್ಮ ಬಹುತೇಕ ಹಬ್ಬಗಳು ಕೃಷಿಯನ್ನು ಆಧರಿಸಿಯೇ ಒದಗಿಬರುವಂತಹದ್ದು . ತುಳು ತಿಂಗಳ ಇಷ್ಟು ಹೋಗುವ ದಿನ ಎಂಬ ನಿರ್ಧಾರದೊಂದಿಗೆ ನಾವು ನಮ್ಮ ಕೋಲ , ನೇಮ ಹಾಗೂ ನಾಗ ತನು ತಂಬಿಲ ,ವಾರ್ಷಿಕ ದಿನಗಳನ್ನು , ಪೂರ್ವಾಪರ ಆಚರಣೆಗಳನ್ನು ನಡೆಸಿದರೆ ಇಂತಹ ಗೊಂದಲ ಇರಲಾರದು . ಇಷ್ಟನೇ ತಾರೀಕು ಎನ್ನುವುದು ನಮ್ಮ ಆಚರಣೆಗಳಿಗೆ ಹೊಂದಿಕೆ ಆಗುವುದೇ ಇಲ್ಲ . ಈ ವಿವರಣೆ ತುಳು ಸಂಸ್ಕೃತಿ ಪ್ರೀತಿಯಿಂದ ಮಾತ್ರ ಬರೆದೆ. ಬರಹ : ಕೆ ಎಲ್ ಕುಂಡಂತಾಯ (ಹಿರಿಯ ಜಾನಪದ ವಿದ್ವಾಂಸರು)

ಚಮ್ಮಾರರಿಗೆ ಮತ್ತು ಬೀದಿ ಬದಿಯ ವ್ಯಾಪಾರಸ್ಥರಿಗೆ ಕೊರೊನಾ ತಡೆಗಟ್ಟುವ ಕಿಟ್ ವಿತರಣೆ

Posted On: 27-06-2020 09:39PM

ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಇಂದು ಸಂಜೆ ಉಡುಪಿ ನಗರದಲ್ಲಿರುವ ಚಮ್ಮಾರರಿಗೆ ಮತ್ತು ಬೀದಿ ಬದಿಯ ವ್ಯಾಪಾರಸ್ಥರಿಗೆ ಕೊರೊನಾ ತಡೆಗಟ್ಟುವ ಸಲುವಾಗಿ ಮರುಬಳಕೆ ಮಾಡಬಹುದಾದಂತಹ ಬಟ್ಟೆಯ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಬೂನು ಒಳಗೊಂಡ ಸೇಫ್ಟಿ ಕಿಟ್ ವಿತರಿಸಿ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧಾರಣೆಯಿಂದ ಆಗುವಂತಹ ಲಾಭಗಳು, ಸ್ಯಾನಿಟೈಸರ್ ಬಳಕೆಯ ವಿಧಾನ ಮತ್ತು ಬರುವ ಗ್ರಾಹಕರಲ್ಲಿಯೂ ಅರಿವು ಮೂಡಿಸುವಂತೆ ಅವರಲ್ಲಿ ಸಂಘಟನೆಯ ಸದಸ್ಯರು ವಿನಂತಿ ಮಾಡಿದರು. ಈ ಸಂದರ್ಭದಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಗ್ರಾಮೀಣಾಭಿವೃದ್ಧಿ ಯೋಜನೆ ಸಂಯೋಜಕ ಜಗದೀಶ್ ಶೆಟ್ಟಿ, ತಾಲೂಕು ಸಂಯೋಜಕ ಉದಯ ನಾಯ್ಕ್, ನಗರ ಸಂಯೋಜಕ ನಾಗರಾಜ್ ಭಂಡಾರ್ಕಾರ್ ಮತ್ತು ಯುವ ಘಟಕದ ವೀಕ್ಷಿತ್ ಉಪಸ್ಥಿತರಿದ್ದರು. ವೋಕಲ್ ಫಾರ್ ಲೋಕಲ್ ಅಭಿಯಾನದ ಅಂಗವಾಗಿ ಸ್ಥಳೀಯರಿಗೆ ಬೆಂಬಲಿಸುವ ಸಲುವಾಗಿ ಮರುಬಳಕೆ ಮಾಡುವಂತಹ ಬಟ್ಟೆಯ ಮಾಸ್ಕ್ ತಯಾರಿಸಲು ಸ್ಥಳೀಯ ಗ್ರಾಮೀಣ ಮಹಿಳೆಗೆ ಸೂಚಿಸಿ ಅವರಿಂದಲೇ ಮಾಸ್ಕ್ ಗಳನ್ನು ಖರೀದಿಸಲಾಗಿತ್ತು.

ಸಹಕಾರಿ ಬ್ಯಾಂಕುಗಳು ಆರ್.ಬಿಐ ವ್ಯಾಪ್ತಿಗೆ ಬಂದ ನಂತರ ಸಹಕಾರಿ ಕ್ಷೇತ್ರ ಏನಾಗಲಿದೆ?

Posted On: 27-06-2020 11:56AM

ದೇಶದ ಅಧಿಕಕಾರ ರಂಗದಲ್ಲಿ ಸಹಕಾರಿಗಳ ಪಾತ್ರ ಹೆಚ್ಚಲಿದೆ ದೇಶದಲ್ಲಿ ಸ್ವಾವಲಂಬಿ ಬದುಕನ್ನು ಕಟ್ಟಿ ತನ್ನ ಸದಸ್ಯರ ಹಿತಕ್ಕಾಗಿ ಮತ್ತು ಸಹಕಾರಿ ಮನೋಭಾವದಿಂದ ದೇಶದ ಆರ್ಥಿಕವಾಗಿ ಮುನ್ನಡೆಯಲು ಬಹಳಷ್ಟು ಕೊಡುಗೆ ನೀಡುವಂತಹ ಸಹಕಾರಿ ಬ್ಯಾಂಕ್‍ಗಳು ಇನ್ನು ಆರ್.ಬಿ.ಐ ವ್ಯಾಪ್ತಿಗೆ ಬರಲಿದೆ ಎಂದು ಈಗಾಗಲೇ ಕೇಂದ್ರ ಸರಕಾರದ ಸಂಪುಟ ಸಭೆಯಲ್ಲಿ ಅನುಮೋದನೆಯನ್ನೂ ಪಡೆಯಲಾಗಿದ್ದು, ಈ ನಿಲುವಿನಿಂದಾಗಿ ದೇಶದ ಸಹಕಾರಿ ಕ್ಷೇತ್ರಕ್ಕೆ ಇನ್ನಷ್ಟು ಬಲ ಮತ್ತು ಒತ್ತು ನೀಡುತ್ತಿದ್ದು ಸಹಕಾರಿ ಕ್ಷೇತ್ರಕ್ಕೆ ಈ ಬಲದಿಂದಾಗಿ 100 ವರ್ಷಗಳಷ್ಟು ಹಳೆಯ ಇತಿಹಾಸಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಾಗುತ್ತದೆ. ಸಹಕಾರಿಗಳು ಈ ಒಂದು ಬಲದಿಂದಾಗಿ ತನ್ನ ಗ್ರಾಹಕರನ್ನು ಇನ್ನಷ್ಟು ಆಕರ್ಷಿಸಿ ಬಹಳಷ್ಟು ಠೇವಣಿ ಜೊತೆಗೆ ಸಾಲ ನೀಡಿ ತಮ್ಮ ಸದಸ್ಯರ ಬದಲಾವಣೆಯ ಈ ಕಾಲಘಟ್ಟದಲ್ಲಿ ಶಕ್ತಿ ಸಾಮರ್ಥ್ಯದ ಜೊತೆಗೆ ಬೆಳವಣಿಗೆ ಹೊಂದಿ ದೇಶದ ಆರ್ಥಿಕತೆಗೆ ಸಹಕಾರಿಯ ಕೊಡುಗೆ ಬಹಳಷ್ಟು ಎನ್ನುವಂತೆ ಅಭಿವೃದ್ಧಿ ಆಗುವುದಕ್ಕೆ ಸಂಶಯವಿಲ್ಲ. ಈ ಎಲ್ಲದರೊಳಗೆ ಸಹಕಾರಿಯ ಪತಾಕೆ ಇನ್ನಷ್ಟು ಬೆಳೆದು ದೂರದೃಷ್ಟಿತ್ವ, ಸ್ವಾವಲಂಬಿಯಾಗಿ ಆರ್.ಬಿ.ಐ ನ ಮಾರ್ಗದರ್ಶನದೊಂದಿಗೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎನ್ನುವುದು ನನ್ನ ಆಶಯ. ಕೇಂದ್ರ ಸರ್ಕಾರದ ಈ ದಿಟ್ಟ ನಿರ್ಧಾರದಿಂದ ದೇಶದ ಅಧಿಕಾರ ಕ್ಷೇತ್ರದಲ್ಲಿ ಸಹಕಾರಿಗಳ ಪಾತ್ರ ಹೆಚ್ಚಲಿದೆ. ಮಂಜುನಾಥ ಎಸ್.ಕೆ, ನಿರ್ದೇಶಕರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಮತ್ತು ಅಧ್ಯಕ್ಷರು, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿ., ಉಡುಪಿ.