Updated News From Kaup

ಕುಡಿಯುವ ನೀರು ಪೋಲು ಕೇಳುವವರು ಯಾರು ಇಲ್ಲವೇ? ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ

Thumbnail
Posted On: 08 Oct 2020, 05:01 PM

ಹಿರಿಯಡಕ -ಉಡುಪಿ ಮುಖ್ಯ ರಸ್ತೆಯಲ್ಲಿ (ಅಂಜಾರು ಕ್ರಾಸ್) ಸ್ಯಾಬ್ ಒಡೆದು ಕಳೆದ 10 ದಿನದಿಂದ ನಿರಂತರವಾಗಿ ಕುಡಿಯುವ ನೀರು ಚರಂಡಿ ಸೇರುತ್ತಿತ್ತು ಸ್ಥಳೀಯರ ಪ್ರಕಾರ ದಿನಕ್ಕೆ ಅಂದಾಜು ಹತ್ತು ಸಾವಿರ ಲೀಟರ್ ನೀರು ಚರಂಡಿಗೆ ಹೋಗುತ್ತಿತ್ತು.ಈ ರಸ್ತೆಯ ಪಕ್ಕದಲ್ಲಿ ನಿರಂತರವಾಗಿ ನೀರು ಹರಿಯುತ್ತಿರುದರಿಂದ ಕೆಸರು ಉಂಟಾಗಿ ರಸ್ತೆಯಲ್ಲಿ ನಡೆದಾಡುವ ಪಾದಚಾರಿಗಳಿಗೂ ತೊಂದರೆಯಾಗಿತ್ತು. ನಮ್ಮ ಕಾಪು ವೆಬ್ಸೈಟ್ ನಲ್ಲಿ ರಾಘವೇಂದ್ರ ಪ್ರಭು ಕರ್ವಾಲು ಅವರ ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿಯವರು ಸ್ಯಾಬ್ ನ್ನು ಅಧಿಕಾರಿಗಳ ಮೂಲಕ ದುರಸ್ತಿಗೊಳಿಸಿ ನೀರು ಪೋಲಾಗುವುದನ್ನು ತಡೆದಿದ್ದಾರೆ.ಈ ಬಗ್ಗೆ ನಾಗರೀಕರು ಕೃತಜ್ಞತೆ ಸಲ್ಲಿಸಿದ್ದಾರೆ. ಸಮಸ್ಯೆಯ ಬಗ್ಗೆ ಮಾಡಿದ ವರದಿಯನ್ನು ಓದಲು ಇಲ್ಲಿ ಒತ್ತಿರಿ Click Here

ಮೂಳೂರಿನಲ್ಲಿ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಟೆಂಪೋ ಪಲ್ಟಿ

Thumbnail
Posted On: 08 Oct 2020, 04:56 PM

ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಟೆಂಪೋ ಮಗುಚಿ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಳತ್ತೂರು ಚರಣ್ ಕುಲಾಲ್ ಗೆ ಹುಟ್ಟೂರ ಸನ್ಮಾನ

Thumbnail
Posted On: 06 Oct 2020, 10:42 PM

ಕಾಪು :(04/10/2020)ಕುಲಾಲ ಸಮಾಜ (ರಿ) ಕಳತ್ತೂರು ಒಕ್ಕೂಟ ದ ವತಿಯಿಂದ ಊರಿನ ಪ್ರತಿಭಾವಂತ ವಿದ್ಯಾರ್ಥಿ ಚರಣ್ ಈ ಬಾರಿಯ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದು ತನ್ನ ಊರ ಕುಲಾಲ ಸಮಾಜದ ಗಣ್ಯರ ಜೊತೆ ಗೌರವ ಸನ್ಮಾನದ ಕ್ಷಣ. ಕಳತ್ತೂರು ಮಲಂಗೊಳಿಯ ಚರಣ್ ಕುಲಾಲ್ ಇವರು ಜಗನಾಥ್ ಕುಲಾಲ್ ಹಾಗೂ ಆಶಾ ಕುಲಾಲ್ ದಂಪತಿಗಳ ಸುಪುತ್ರರಾಗಿದ್ದು. ಗ್ರಾಮೀಣ ಮಟ್ಟದಲ್ಲಿನ ನಿಮ್ಮ ಈ ಸಾಧನೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಹೊಸದೊಂದು ಅದ್ಯಾಯ ದಂತೆ ಮಿನುಗುವ ನಕ್ಷತ್ರದಂತೆ ಹೊರ ಹೊಮ್ಮಲಿ. ಇಂದಿನ ಸುಂದರ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು ಶ್ರೀ ರಾಜೇಶ್ ಕುಲಾಲ್ ಪೈಯಾರು, ಕಾರ್ಯದರ್ಶಿ ಶಕ್ತಿ ಆರ್ ಕುಲಾಲ್, ಕೋಶಾಧಿಕಾರಿ ಹರೀಶ್ ಕೆ ಮೂಲ್ಯ, ಒಕ್ಕೂಟದ ಪ್ರಮುಖರು ಶ್ರೀ ಸಂಜೀವ ಕುಲಾಲ್,ಶಂಕರ್ ಕುಲಾಲ್ ಇರಂದಾಡಿ, ರಾಗು ಮೂಲ್ಯ ಕುಕ್ಕುಂಜ, ತೊತು ಮೂಲ್ಯ ಪೈಯಾರು, ಸತೀಶ್ ಕುಲಾಲ್ ಮಲಂಗೊಳಿ ಇನ್ನಿತರರು ಉಪಸ್ಥಿತರಿದ್ದರು.

ಕಾಪು : ವೈ.ಯು.ಯಶಸ್ವಿ ಆಚಾರ್ಯ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿಗೆ ಆಯ್ಕೆ

Thumbnail
Posted On: 06 Oct 2020, 03:36 PM

ಕಾಪು : ಉಡುಪಿ ಜಿಲ್ಲೆ ಕಾಪು ತಾಲೂಕು ಕಲ್ಯಾದ ಉಮೇಶ ಆಚಾರ್ಯ, ಶೀಲಾವತಿ ಆಚಾರ್ಯ ದಂಪತಿ ಪುತ್ರಿಯಾದ ವೈ.ಯು. ಯಶಸ್ವಿ ಆಚಾರ್ಯ ಅವರಿಗೆ 2019-20ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614(ಶೇ.98.24) ಆಂಕ ಪಡೆದಿರುವ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ದಾವಣಗೆರೆ-ಸಾಲಿಗ್ರಾಮ ಅವರು ನೀಡಲ್ಪಡುವ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಾಪು ಉಳಿಯಾರಗೋಳಿ ದಂಡತೀರ್ಥ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ವೈ.ಯು. ಯಶಸ್ವಿ ಭರತನಾಟ್ಯ ಪ್ರವೀಣೆಯಾಗಿದ್ದು, ಸಾಂಸ್ಕೃತಿಕ, ಕ್ರೀಡಾ, ಶೈಕ್ಷಣಿಕ ರಂಗದ ಸಾಧಕಿಯಾಗಿದ್ದು, ಯಾವುದೇ ಕೋಚಿಂಗ್ ಪಡೆದುಕೊಳ್ಳದೆ ಸ್ವತಃ ಅಭ್ಯಸಿಸಿ ಎಸೆಸ್ಸೆಲ್ಸಿಯಲ್ಲಿ ಸಾಧಕಿಯಗಿದ್ದಾಳೆ. ರಿಯಾದ್ ಇಂಟರ್ ನ್ಯಾಷನಲ್ ಇಂಡಿಯನ್ ಸ್ಕೂಲ್‍ನಲ್ಲಿ ಕ್ಲೇ ಮಾಡೆಲಿಂಗ್, ಇಂಟರ್‍ನ್ಯಾಷನಲ್ ಚಿಂತನಾ ಡ್ರಾಯಿಂಗ್‍ನಲ್ಲಿ ಪ್ರಥಮ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದ ಈಕೆ ಬಹುಮುಖ ಪ್ರತಿಭಾನ್ವಿತೆಯಾಗಿದ್ದಾಳೆ. ಕನ್ನಡ ರಾಜ್ಯೋತ್ಸವದಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ವೈ.ಯು. ಯಶಸ್ವಿ ಆವರಿಗೆ ಕಿರೀಟವಿಟ್ಟು, ಪುಷ್ಪವೃಷ್ಟಿಯೊಂದಿಗೆ, ಮೆಡಲ್, ಸ್ಮರಣಿಕೆ, ಪ್ರಶಸ್ತಿ ಪತ್ರದೊಂದಿಗೆ ಈ ಪ್ರಶಸ್ತಿ ಪ್ರಧಾನ ನಡೆಯಲಿದೆ.

ಲಾಕ್ಡೌನ್ ಸಂದರ್ಭದಲ್ಲಿ ಬೆಳ್ಮಣ್ ರೋಟರಿಯ ಸಾಮಾಜಿಕ ಕಾರ್ಯಕ್ರಮಗಳು ಶ್ಲಾಘನೀಯ

Thumbnail
Posted On: 06 Oct 2020, 10:40 AM

ಕೊರೊನಾ ಮಹಾಮಾರಿಯ‌ ಈ ಸಂದರ್ಭದಲ್ಲಿ ಬೆಳ್ಮಣ್ ರೋಟರಿಯ ಸಾಮಾಜಿಕ ಕಾರ್ಯಕ್ರಮಗಳು ಶ್ಲಾಘನೀಯ :- ರೋ| ಪಿ ಎಚ್ ಎಫ್ ಡಾ| ಅರುಣ್ ಹೆಗ್ಡೆ. ಬೆಳ್ಮಣ್ ರೋಟರಿ ಸಂಸ್ಥೆಯ ೨ನೇ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಲಯ ೫ರ ಮಾಜಿ ವಲಯ ಸೇನಾನಿ ರೋ| ಅರುಣ್ ಹೆಗ್ಡೆ ಬೆಳ್ಮಣ್ ರೋಟರಿ ಸಂಸ್ಥೆಯ ಕಾಯಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ರೋ| ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ರೋ| ಪ್ರದೀಪ್ ಶೆಟ್ಟಿ, ರೋ| ನವೀನ್ ಶೆಣೈ ಹಾಗೂ ರೋ| ಮರ್ವಿನ್ ಮೆಂಡೋನ್ಸಾ ಇವರ ಹುಟ್ಟು ಹಬ್ಬಗಳನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ವಲಯ‌ ೫ರ ಮಾಜಿ ಸಾಹಯಕ ಗವರ್ನರ್ ರೋ| ಸೂರ್ಯಕಾಂತ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕ್ರಮವನ್ನು ರೋ| ವಿಘ್ನೇಶ್ ಶೆಣೈ ನಿರೂಪಿಸಿ , ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಬೆಳ್ಮಣ್ಮೀನ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ರೋ| ಪ್ರದೀಪ್ ಶೆಟ್ಟಿ, ರೋ| ನವೀನ್ ಶೆಣೈ ಹಾಗೂ ರೋ| ಮರ್ವಿನ್ ಮೆಂಡೋನ್ಸಾ ಪ್ರಾಯೋಜಿಸದರು .

111 ಸವಂತ್ಸರ ಪೂರೈಸಿದ ಹಿರಿಯ ಜೀವಕ್ಕೆ ರೋಟರಿ ಬೆಳ್ಮಣ್ ವತಿಯಿಂದ ಸಮ್ಮಾನ

Thumbnail
Posted On: 05 Oct 2020, 02:02 AM

ರೋಟರಿ ಕ್ಲಬ್ ಬೆಳ್ಮಣ್ ಇಂದು ಹಿರಿಯ ನಾಗರಿಕರಿಗೆ ಗೌರವ ಸಲ್ಲಿಸುವ ಸಲುವಾಗಿ 111ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿ ಇಂದಿಗೂ ತಮ್ಮ ದೈನಂದಿನ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಸೂಡ ನಿವಾಸಿ ನರ್ಸಿ ಮೂಲ್ಯ ಇವರಿಗೆ ಸಮ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ರೋ| ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ವಲಯ 5 ರ ಮಾಜಿ ಸಾಹಯಕ ಗವರ್ನರ್ ರೋ| ಪಿ ಎಚ್ ಎಫ್ ಸೂರ್ಯಕಾಂತ ಶೆಟ್ಟಿ ಗೌರವಾರ್ಪಣೆ ಕಾಯಕವನ್ನು ನಡೆಸಿಕೊಟ್ಟರು. ಅತಿಥಿಗಳಾಗಿ ವಲಯ 5 ರ ವಲಯ ಸೇನಾನಿ ರೋ| ಸುರೇಶ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪೂರ್ವಾಧ್ಯಕ್ಷ ರೋ| ಪಿ ಎಚ್ ಎಫ್ ರನೀಶ್ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು. ರೋಟರಿ ಸಂಸ್ಥೆಯ ಸದಸ್ಯ ರಾಜೇಶ್ ಸಾಲ್ಯಾನ್ ಹಾಗೂ ನರ್ಸಿ ಮೂಲ್ಯ ಇವರ ಕುಟುಂಬ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೇವಸ್ಥಾನ ,ದೈವಸ್ಥಾನ ,ಚಾವಡಿ, ಮನೆ ಹೆಸರನ್ನು ತುಳುವಿನಲ್ಲಿ ಬರೆಯೋಣ

Thumbnail
Posted On: 05 Oct 2020, 01:55 AM

ತುಳು ಭಾಷೆಯ ಲಿಪಿಯನ್ನು ಆಸಕ್ತಿಯಿಂದ ಗಮನಿಸುವ , ಕಲಿಯುವ , ಬರೆಯುವ ,ಬರೆಯಿಸುವ ಒಂದು‌‌ ಅಭಿಯಾನ‌ ಆರಂಭವಾಗಿದೆ. ನಾವು ಮಾತನಾಡುವ ಭಾಷೆಯನ್ನು ಅದೇ ಭಾಷೆಯ ಲಿಪಿಯಲ್ಲಿ ಬರೆಯುವ ಅವಕಾಶವಿದೆ - ಅವಕಾಶಇತ್ತು ; ಆದರೆ ನಾವದನ್ನು ಶತಮಾನಗಳಷ್ಟು ಹಿಂದೆಯೇ ಮರೆತಿದ್ದೆವು ಅಥವಾ ಕಲಿಯುವ ಕುರಿತು ನಿರ್ಲಕ್ಷ್ಯ ತಾಳಿದ್ದೆವೋ ಗೊತ್ತಿಲ್ಲ. ಅಂತೂ ತುಳುಲಿಪಿ‌ ಬಳಕೆಯಿಂದ ಮರೆಯಾಗಿತ್ತು . ಆದರೆ ಇತ್ತೀಚೆಗೆ ಬಹಳಷ್ಟು ಯುವಕರು ಸ್ವತಃ ತುಳುಲಿಪಿ ಕಲಿತು‌ ಅದನ್ನು ತಮ್ಮ ವ್ಯಾಪ್ತಿಯಲ್ಲಿ ಮಕ್ಕಳಿಗೆ ಕಲಿಸುವ ಕೆಲಸವನ್ನು ಆರಂಭಿಸಿದ್ದಾರೆ . ಕೆಲವು ಸಂಘಟನೆಗಳೂ ಬರೆಯುವ - ಕಲಿಸುವ ಕಾರ್ಯದಲ್ಲಿ ತೊಡಗಿರುವುದನ್ನು ಕಾಣುತ್ತೇವೆ . ಈ ಬೆಳವಣಿಗೆ ಸಂತೋಷದ ಸಂಗತಿ .
ತುಳುವಿನಲ್ಲಿ ಒಂದು ಗಾದೆ ಇದೆ : "ಉಡಲ್ ಡ್ ಪುಟ್ಟೊಡು ಬುದ್ಧಿ ,ಕಡಲ್ ಡ್ ಪುಟ್ಟೊಡು ಗಾಳಿ". 'ಮನಸ್ಸಿನಲ್ಲಿ ಬುದ್ಧಿ ಹುಟ್ಟಬೇಕು (ಬರಬೇಕು) ,ಕಡಲಿನಲ್ಲಿ ಗಾಳಿ ಹುಟ್ಟಬೇಕು' . ಹೀಗೆ ಸಹಜವಾಗಿ ತುಳುಭಾಷೆಯ ಮೇಲಿನ ಅಭಿಮಾನ‌ ತುಳುವರ ಮನಸ್ಸಿನಲ್ಲಿ ಹುಟ್ಟಿಕೊಂಡಿದೆ , ಕಲಿಯಲೇ ಬೇಕೆಂಬ ಹಠದಿಂದ ನಮ್ಮ ಯುವಕರು ಕಲಿತು ಮಕ್ಕಳಿಗೆ ಕಲಿಸುತ್ತಿದ್ದಾರೆ .ಈ ಅಭಿಯಾನ ತನ್ನಿಂದತಾನೆ ಆರಂಭವಾದದ್ದು , ಮನಃಪೂರ್ವಕ ತೊಡಗಿದ್ದು .ಇದು ಖಂಡಿತ ಮುಂದುವರಿಯುತ್ತದೆ . ನಾವು ಪ್ರೋತ್ಸಾಹಿಸೋಣ .
ಯುವಕರು ,ಮಕ್ಕಳು ಹೆಚ್ಚಿನ ಪ್ರಯತ್ನಗಳಿಲ್ಲದೆ ಕಲಿಯುತ್ತಾರೆ . ಅವರು ಕಲಿಯುವ ಬದುಕಿನ ಅವಧಿಯಲ್ಲಿ ಈ ಉಮೇದು ಹುಟ್ಟಿಕೊಂಡಿದೆ .ಆದರೆ ಹಿರಿಯರು ,ಹಿರಿಯ ನಾಗರಿಕರು ತುಳುಲಿಪಿಯನ್ನು ಸುಲಭವಾಗಿ ಕಲಿಯಲಾಗದು .ಅದಕ್ಕೆ ಮಕ್ಕಳೊಟ್ಟಿಗೆ ಕುಳಿತು ತಮ್ಮ ಹೆಸರನ್ನಾದರೂ ಬರೆಯಲು ಕಲಿಯಬೇಕು .ಹಿರಿಯರು ಇಷ್ಟು ಬರೆಯಲಾರಂಭಿಸುವಾಗ ನಿಮ್ಮ ಮನೆ ಯುವಕರು ,ಮಕ್ಕಳು ತುಳುಲಿಪಿಯನ್ನು ಕನ್ನಡ ,ಇಂಗ್ಲೀಷ್ ,ಹಿಂದಿಯಂತೆಯೇ ಸರಾಗವಾಗಿ ಬರೆಯುತ್ತಾರೆ . ಮುಂದೊಂದು ದಿನ ತುಳುಲಿಪಿಯಲ್ಲಿ ಕವನ , ಕತೆ , ನಾಟಕ ಹೀಗೆ ವಿವಿಧ ಪ್ರಕಾರದ ತುಳು ಸಾಹಿತ್ಯ ಸೃಷ್ಟಿಯಾಗುತ್ತದೆ .ಆಗ ಅದನ್ನು ಓದುವವರೂ ಇರುತ್ತಾರೆ .ಇದು ಈಗ ಆರಂಭವಾದ ಈ ಅಭಿಯಾನದ ಭವಿಷ್ಯ. ಹಿರಿಯರು ,ಹಿರಿಯ ನಾಗರಿಕರು ಸೇರಿ ನಿಮ್ಮ ಹೆಸರು ಬರೆಯಲು ಕಲಿಯಿರಿ. ಇದರೊಂದಿಗೆ ಊರಿನ‌ ದೇವಸ್ಥಾನಗಳ , ದೈವ - ಬೂತ ಸ್ಥಾನಗಳ‌ , ಚಾವಡಿಗಳ , ಮನೆಗಳ , ಸಂಘ - ಸಂಸ್ಥೆಗಳ , ರಸ್ತೆಗಳ ಹೆಸರನ್ನು ತುಳುಲಿಪಿಯಲ್ಲಿ ಬರೆಯಿಸಿರಿ . ಕನ್ನಡದ ನಾಮಫಲಕದ ಬಳಿಯಲ್ಲೆ ಹಾಕಿರಿ . ಆಗ ಆಸಕ್ತಿ , ಕುತೂಹಲ ಮೂಡುತ್ತದೆ ,ಇದು ಏನು ಮಲಯಾಳವಾ ......ಹೀಗೆ ಹತ್ತಾರು ಪ್ರಶ್ನೆಗಳು ಕೇಳಿಸುತ್ತವೆ . ಆಗ "ಇದು ನಾವು ಮಾತನಾಡುವ ಭಾಷೆ" ಆ ಭಾಷೆಯಲ್ಲಿಯೇ ಬರೆದದ್ದು ಎಂಬ ವಿವರಣೆ ಕೊಡುವ . ಇದು ತುಳುಲಿಪಿಯನ್ನು ಜನಮಾನಸದಲ್ಲಿ ಸ್ಥಾಪಿಸುವ ಪ್ರಯತ್ನವಾಗುತ್ತದೆ .ಇದು ನಾಮಫಲಕಕ್ಕೆ ಅಷ್ಟೆ ಸೀಮಿತವಾಗದು . ಏಕೆಂದರೆ ನಮ್ಮ ಯುವಕರು ,ಮಕ್ಕಳು ತುಳು ಕಲಿಯಲು ಆರಂಭಿಸಿದ್ದಾರೆ. ತುಳುವಿನಲ್ಲಿ ಬರೆದ ಕತೆಗಳಿವೆ , ಕಾವ್ಯಗಳಿವೆ , ಪುರಾಣಗಳಿವೆ , ಮಂತ್ರಗಳಿವೆ ,ವೈದಿಕವಿಧಿಯಾಚರಣೆಯ ಪ್ರಯೋಗ ವಿಧಾನಗಳಿರುವ ತಾಳೆಗರಿ - ಪುಸ್ತಕಗಳಿವೆ , ಜಾತಕಗಳಿವೆ , ಮನೆಮನೆಗಳಲ್ಲಿ ತಾಳೆಗರಿಯಲ್ಲಿ ಬರೆದ ಅಮೂಲ್ಯ ಸಾಹಿತ್ಯಗಳಿವೆ ಇವೆಲ್ಲ ಕಾಲ ಗರ್ಭಸೇರುತ್ತಿವೆ ,ಗೆದ್ದಲು ತಿಂದು ನಾಶವಾಗುತ್ತವೆ . ತುಳುಲಿಪಿ ಕಲಿಯುವ - ಕಲಿಸುವ ಅಭಿಯಾನದಿಂದ ನಮ್ಮಲ್ಲಿ ಇದ್ದು ,ಅವಗಣಿಸಲ್ಪಟ್ಟು ಮನೆಯಂಗಳದ ತೆಂಗಿನ ಮರದಬುಡ ಅಥವಾ ಗೊಬ್ಬರದ ಗುಂಡಿ ಸೇರುವ ಮೊದಲು ಇಂತಹ ತುಳುಲಿಪಿಯ ತಾಳೆಗರಿಗಳ ಕಟ್ಟು ಅಥವಾ ಪುಸ್ತಕಗಳು ಖಂಡಿತಾ ಕಾಪಿಡಲ್ಪಡುತ್ತವೆ .
ಸುಮಾರು ಒಂದುಸಾವಿರ ವರ್ಷಗಳಷ್ಟು ಹಿಂದೆಯೇ ಆಳುಪ ಅರಸರು ಬರೆಯಿಸಿದ ತುಳು ಶಾಸನ ಸಿಗುತ್ತದೆ . ಹನ್ನೊಂದನೇ ಶತಮಾನದ ಶಾಸನ ಲಭ್ಯವಿದ್ದು ಓದಲಾಗಿದೆ .ಹನ್ನೆರಡನೇ ಶತಮಾನದ ಶಾಸನ ಇವೇ ಮುಂತಾದುವು ಪ್ರಾಚೀನ ಶಾಸನಗಳು .ಹೀಗೆ 50-60 ಸಂಖ್ಯೆಯ ತುಳು ಶಾಸನಗಳು ಸಿಕ್ಕಿವೆ.ಇವುಗಳಲ್ಲಿ ಗೋಸಾಡ, ಕಿದೂರು, ಅನಂತಪುರ, ಅನಂತಾಡಿ, ಕೊಡಂಗಳ, ಕೊಳನಕೋಡು, ಕುಲಶೇಖರ ಇತ್ಯಾದಿ ತುಳು ಲಿಪಿಯ ಪ್ರಾಚೀನ ಶಾಸನಗಳು ಮುಖ್ಯವಾಗುತ್ತವೆ ಎಂದು ಅವುಗಳನ್ನು ಓದಿದ ತುಳುಲಿಪಿ ಸಂಶೋಧಕ ಸುಬಾಸ್ ನಾಯಕ್ ವಿವರ ನೀಡುತ್ತಾರೆ .‌
ಹದಿಮೂರನೇ ಶತಮಾನದಲ್ಲಿ ಆಚಾರ್ಯಮಧ್ವರು ಹೇಳಿದ ಅವರ ಶಿಷ್ಯ ಹೃಷೀಕೇಶ ತೀರ್ಥರು ಬರೆದ ಅಮೂಲ್ಯ ಸರ್ವಮೂಲ ಗ್ರಂಥ ತುಳುಲಿಪಿಯಲ್ಲಿದೆ . ಅಷ್ಟು ಸುಂದರವಾದ ತುಳುಲಿಪಿಯನ್ನು ತಾನು ಕಂಡಿಲ್ಲ ಎಂದು ನೂರಾರು ತುಳುಲಿಪಿಯ ಗ್ರಂಥಗಳನ್ನು ಸಂಪಾದಿಸಿದ ಗೋವಿಂದಾಚಾರ್ಯರು ಹೇಳುತ್ತಾರೆ . ಉಡುಪಿಯ ಮಠಗಳಲ್ಲಿ ತುಳುಲಿಪಿಯ ಗ್ರಂಥಗಳಿವೆ ಎಂದು ಇನ್ನೂರು ವರ್ಷಗಳಷ್ಟು ಹಿಂದೆಯೇ ಕರ್ನಲ್ ಕಾಲಸ್ ಮೆಕೆಂಜಿ ಸಂಗ್ರಹಿಸಿದ ಕಫಿಯತ್ತುಗಳಿಂದ ಮಾಹಿತಿ ಸಿಗುತ್ತವೆ .ಆದರೆ ಈ ವಿವರ ಇವತ್ತಿಗೂ ಪ್ರಚಾರವಾಗಲೇ ಇಲ್ಲ . ಲಿಪಿಯ ಕುರಿತಾದ ಅಧ್ಯಯನಕ್ಕೆ ಈ ಸಂಗ್ರಹ ಉಪಯುಕ್ತವಾದೀತು . ಹತ್ತೊಂಬತ್ತನೇ ಶತಮಾನದಲ್ಲಿ ಬರ್ನರ್ ಕೊಟ್ಟ ತುಳುಲಿಪಿಯೂ ಪರಿಗಣಿಸಲೇ ಬೇಕು.
ಮಂತ್ರವಾದರೆ ಏನು ತುಳುಲಿಪಿ ಎಂಬುದು ಮುಖ್ಯವಾಗಬೇಕು. ಯಾರಲ್ಲಿದೆ ಎನ್ನುವುದಕ್ಕಿಂತಲೂ ಇರುವುದು ತುಳುಲಿಪಿಯ ಬರೆಹ ಎಂಬ ಹೃದಯವಂತಿಕೆ ಬೇಕು . ಈಗಲೂ ಹಿರಿಯ ವೈದಿಕರು ತುಳುಲಿಪಿಯಲ್ಲೆ ಬರೆಯುತ್ತಾರೆ ,ಓದುತ್ತಾರೆ. ಅವರು ವೈದಿಕರು ಎನ್ನುವುದಕ್ಕಿಂತಲೂ ಅವರು ತುಳುಲಿಪಿ ಬಲ್ಲವರು ,ಅವರು ನಮ್ಮವರು ಎಂಬ ಭಾವನೆ ಆಸಕ್ತರಿಗೆ , ಅಧ್ಯಯನಕಾರರಿಗೆ ಅಗತ್ಯ .ಲಿಪಿಯಲ್ಲಿರುವ ಪಾಠಾಂತರಗಳನ್ನು ಗಮನಿಸಿ ಲಿಪಿಯ ವಿನ್ಯಾಸ ಸ್ಥಿರೀಕರಣಕ್ಕೆ ಯತ್ನಿಸುವ ಕೆಲಸಕ್ಕೆ ಲಭ್ಯ ಲಿಪಿಗಳ ವಿಸ್ತೃತ ಅವಲೋಕನ ಬೇಕು . .ಕಳೆದ ಶತಮಾನದಲ್ಲಿ ವೆಂಕಟರಾಜ ಪುಣಿಂಚತ್ತಾಯರು ಸಂಶೋಧಿಸಿದ ತುಳುಲಿಪಿಯ ಕಾವ್ಯಗಳನ್ನು ಹಾಗೂ ಅಕ್ಷರಗಳನ್ನು ನೆನಪಿಸಿಕೊಳ್ಳಬೇಡವೇ . ಇಲ್ಲಿ ಪುಣಿಂಚತ್ತಾಯರು ಮುಖ್ಯವಲ್ಲ ,ಅವರು ಮಾಡಿದ ತುಳುವಿನ ಕೆಲಸ ಮುಖ್ಯ .
ಒಂದು ರಾಜಾಜ್ಞೆ , ಆಜ್ಞೆ ,ಯಾವುದೋ ಒಂದು ಘಟನೆಯನ್ನು , ವೀರರಕಲ್ಲುಗಳನ್ನು ಶಾಸನವಾಗಿ ಹಾಕುವಾಗ ,ಅದರ ಉದ್ದೇಶ ಪ್ರಚಾರವೇ ತಾನೆ .ಪ್ರಚಾರ ಎಂದರೆ ಬಹುತೇಕ ಜನಮಂದಿಗೆ ತಿಳಿಯಲು ತಾನೆ .
ಹಾಗಾಗಿ ಓದಲು ಬರುತ್ತಿದ್ದ ಜನ ಇದ್ದರು ಎಂಬುದು ಸ್ಪಷ್ಟವಾಗದೆ . ಲಿಪಿ ಕೇವಲ ವೈದಿಕರಿಗೆ ಸೀಮಿತವಾಗಿತ್ತು ಎಂಬುದು ಒಪ್ಪಲಾಗದು ‌.ಸಮಾಜದ ಸಂವಹನ ಮಾಧ್ಯಮವಾಗಿದ್ದ ಭಾಷೆಯಲ್ಲವೆ ? ಸಮಾಜದ ಶೇ.40 ಮಂದಿಗಾದರೂ ಗೊತ್ತಿದ್ದಿರಲೇ ಬೇಕು .ಇದು ನನ್ನ ವಿವರಣೆ.
ಸರಿಯಾಗಿರಬೇಕೆಂದಿಲ್ಲ .
ಇತಿಹಾಸ ಸಂಶೋಧಕರು ತುಳುಲಿಪಿಯ ಶಾಸನಗಳನ್ನು ಹುಡುಕಿ ಓದಿದ್ದಾರೆ , ಕಾಲ ನಿರ್ಣಯಿಸಿದ್ದಾರೆ . ಭಿನ್ನವಾದ ತುಳುವಿನ ಅಕ್ಷರ‌ ವಿನ್ಯಾಸವನ್ನು ಗುರುತಿಸಿದ್ದಾರೆ .‌ಈ ಮಾಹಿತಿಯು ಲಿಪಿಯ ಸ್ವರೂಪದ ನಿರ್ಧಾರಕ್ಕೆ ಪೂರಕವಾದುದು .ಅಂತೂ ತುಳುಲಿಪಿ ಜನಪ್ರಿಯವಾಗಲಿ , ಎಲ್ಲರೂ ಬರೆಯುವ - ಓದುವ ದಿನಗಳು ಬರಲಿ .
• ಕೆ.ಎಲ್.ಕುಂಡಂತಾಯ.
[ಈ ಬರಹವನ್ನು ನಾನು ಕನ್ನಡದಲ್ಲಿ ಏಕೆ ಬರೆದೆ : ತುಳು ಭಾಷೆ ಮತ್ತು ಕನ್ನಡ ಲಿಪಿ ಬರುವವರಿಗೆ ಮಾತ್ರ ಸೀಮಿತವಾಗದೆ , ಕನ್ನಡ ಓದಲು ಬರುವ ಕನ್ನಡಿಗರಿಗೂ ಈ ಮಾಹಿತಿ ಸಿಗಲೆಂಬುದು ನನ್ನ ಉದ್ದೇಶ. ತುಳುವಿನಲ್ಲೂ ಬರೆದು ಹಾಕುತ್ತೇನೆ.]

ಇನ್ನಂಜೆಯಲ್ಲೊಂದು ಉಪಯೋಗಕ್ಕೆ ಬಾರದ ಎಟಿಎಮ್

Thumbnail
Posted On: 05 Oct 2020, 01:44 AM

ಬ್ಯಾಂಕುಗಳು ವಿಲೀನ ಪ್ರಕ್ರಿಯೆ ‌ಒಂದೆಡೆ ಗ್ರಾಹಕರಿಗೆ ಕೊಂಚ ಕಿರಿಕಿರಿ ಎನಿಸಿದರೂ ತಮ್ಮ ಅಗತ್ಯತೆಗೆ ಬೇಕಾದ ಹಣವನ್ನು ತೆಗೆಯಲು ಎಟಿಮ್ ಗಳನ್ನು ಬಳಸುವುದು ಸಾಮಾನ್ಯ. ಆದರೆ ಶಂಕರಪುರ ಬ್ಯಾಂಕ್ ಆಫ್ ಬರೋಡದ ಇನ್ನಂಜೆಯ ಎಟಿಎಮ್ ಅಗತ್ಯಕ್ಕೆ ಹಣ ಬೇಕಾದವರಿಗೆ ತೆಗೆಯಲು ಸಾಧ್ಯವಾಗುತ್ತಿಲ್ಲ. ಕಾರಣ ಅದೆಷ್ಟೋ ದಿವಸದಿಂದ ಸ್ಥಬ್ದವಾಗಿದ್ದು ಅದರ ಬಗ್ಗೆ ಸಂಬಂಧಪಟ್ಟ ಬ್ಯಾಂಕಿನವರಿಗೆ ತಿಳಿಸಿದರೂ ಏನೂ ಪ್ರಯೋಜನವಾಗದ ಸ್ಥಿತಿಯಾಗಿದೆ. ಇನ್ನಾದರು ಸಂಬಂಧಪಟ್ಟ ಬ್ಯಾಂಕ್ ನವರು ಗ್ರಾಹಕರ ಹಿತದೃಷ್ಟಿಯಿಂದ ಇನ್ನಂಜೆಯ ಎಟಿಎಮ್ ನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೋಟೆಲ್ ಉದ್ಯಮಿ ಗಂಗಾಧರ್ ಎನ್ ಶೆಟ್ಟಿ ಅಗ್ರಿಪಾಡ ಇನ್ನಿಲ್ಲ

Thumbnail
Posted On: 05 Oct 2020, 12:29 AM

ಮುಂಬೈ ಅಗ್ರಿಪಾಡ ನಿವ್ ಉಡುಪಿ ನಿಕೇತನ್ ಮಾಲಕ ಹಾಗೂ ಉದ್ಯಮಿ ಗಂಗಾಧರ್ ಎನ್ ಶೆಟ್ಟಿ (67) ಕಳೆದ 03/10/2020 ರ ಶನಿವಾರ ಬೆಳಿಗ್ಗೆ ಸ್ವರ್ಗಸ್ಥರಾಗಿದ್ದಾರೆ.
ಮಡುಂಬು ಪಡ್ನಗುತ್ತು, ಪಡುಮನೆ ಸುಶೀಲ ಶೆಟ್ಟಿ ಹಾಗೂ ನಾರಾಯಣ ಶೆಟ್ಟಿ ದಂಪತಿಗಳ ಮಗನಾಗಿ 1953 ರಂದು ಜನಿಸಿದ ಗಂಗಾಧರ್ ಎನ್ ಶೆಟ್ಟಿಯವರು ಧಾರ್ಮಿಕ ಕ್ಷೇತ್ರಕ್ಕೂ ತನ್ನದೇ ಆದ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ನಿವ್ ಉಡುಪಿ ನಿಕೇತನ್ ಹೋಟೆಲ್ ಬರೋಬ್ಬರಿ 60 ವರ್ಷಗಳ ಹಿಂದೆ ದಿವಂಗತ ನಾರಾಯಣ ಶೆಟ್ಟಿಯವರು ಸ್ಥಾಪಿಸಿದ ಹೋಟೆಲ್ ಆಗಿದ್ದು, ಇದನ್ನು ಅವರ ಹಿರಿಯ ಮಗನಾದ ಗಂಗಾಧರ್ ಎನ್ ಶೆಟ್ಟಿಯವರು ಮುನ್ನಡೆಸಿಕೊಂಡು ಬರುತ್ತಿದ್ದರು, ಈ ಹೋಟೆಲ್ ಸಾವಿರಾರು ಮಂದಿ ಕೆಲಸಗಾರರಿಗೆ ಉದ್ಯೋಗ ನೀಡಿದ ಸಂಸ್ಥೆಯಾಗಿದ್ದು. ಮೃತರು ಸಹೋದರಂದಿರು, ಸಹೋದರಿ ಸೇರಿದಂತೆ ಧರ್ಮಪತ್ನಿ ಸುಜಾತ ಶೆಟ್ಟಿ, ಮಕ್ಕಳಾದ ಅಕ್ಷಯ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ಸೊಸೆಯಂದಿರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ ಎಂದು ತಿಳಿಸಲು ವಿಷಾದ ವ್ಯಕ್ತಪಡಿಸುತ್ತೇವೆ.

ಕಟಪಾಡಿ ಕಾರುಣ್ಯ ವೃದಾಶ್ರಮಕ್ಕೆ ಕಂಪ್ಯೂಟರ್ ಟೇಬಲ್ ಕೊಡುಗೆ

Thumbnail
Posted On: 04 Oct 2020, 09:11 PM

ಉಚಿತ ಕಂಪ್ಯೂಟರ್ ಟೇಬಲ್ ಕೊಡುಗೆ ದಿನಾಂಕ 04.10.2020 ಇಂದು "ಆಸರೆ" ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಕಟಪಾಡಿಯ ಕಾರುಣ್ಯ ವೃದ್ಧಾಶ್ರಮಕ್ಕೆ ಭೇಟಿನೀಡಿ ಉಚಿತ ಕಂಪ್ಯೂಟರ್ ಟೇಬಲ್ ಅನ್ನು ಕೊಡುಗೆಯಾಗಿ ನೀಡಲಾಯಿತು. "ಆಸರೆ" ತಂಡದ ಅಧ್ಯಕ್ಷರು ಆದ ಡಾ.ಕೀರ್ತಿ ಪಾಲನ್ ಕಂಪ್ಯೂಟರ್ ಟೇಬಲ್ ಅನ್ನು ಹಸ್ತಾಂತರಿಸಿದರು. ಟೇಬಲ್ ಮಾಡಲು ಸಹಕರಿಸಿದ ಅಶೋಕ್ ಆಚಾರ್ಯ ಬಸ್ತಿ, ಹಿರಿಯಡ್ಕ ಹಾಗೂ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು.