Updated News From Kaup
ಗೆಳೆಯರ ಬಳಗ (ರಿ.) ಮದ್ವನಗರ ತಂಡದಿಂದ 500 ತರಕಾರಿ ಕಿಟ್ ವಿತರಣೆ
Posted On: 30-04-2020 01:15PM
ಕೋವಿಡ್19 ನಿಂದ ಲಾಕ್ಡೌನ್ ಆಗಿರುವುದರಿಂದ ಗೆಳೆಯರ ಬಳಗ (ರಿ.) ಮದ್ವನಗರ ಪಡುಬೆಳ್ಳೆ ಇವರ ವತಿಯಿಂದ ಪಡುಬೆಳ್ಳೆ ಹಾಗೂ ಮೂಡುಬೆಳ್ಳೆ ಗ್ರಾಮದ ಸುಮಾರು 500 ಕುಟುಂಬಗಳಿಗೆ ತರಕಾರಿ ಕಿಟ್ಟನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಿರ್ವ ಪೊಲೀಸ್ ಠಾಣಾಧಿಕಾರಿ ಶ್ರೀ ಶೈಲಂ ಚಾಲನೆ ನೀಡಿದರು, ಗೆಳೆಯರ ಬಳಗ ತಂಡದ ಸದಸ್ಯರು ಮನೆ ಮನೆಗೆ ತೆರಳಿ ಕೀಟ್ಟನ್ನು ವಿತರಿಸಿದರು.
ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂದಿರ ವಾರ್ಷಿಕ ಮಂಗಲೋತ್ಸವ
Posted On: 28-04-2020 01:54PM
ಪೊಲಿಪು ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂದಿರ ಪೊಲಿಪು ಇದರ ವಾರ್ಷಿಕ ಮಂಗಳೋತ್ಸವವು ಊರ ಹತ್ತು ಸಮಸ್ತರಿಂದ ಸರಳವಾಗಿ ಆಚರಿಸಲಾಯಿತು . ಇದರ ಪರವಾಗಿ ಊರಿನ ಮೊಗವೀರ ಮಹಾ ಸಭಾ ಅಧ್ಯಕ್ಷರಾದ ಶ್ರೀ ರೋಹಿತಾಶ್ವ ಕುಂದರ್,ಉಪಾಧ್ಯಕ್ಷರಾದ ವಿಜಯ ಕರ್ಕೇರ , ದ. ಕ ಮತ್ತು ಉಡುಪಿ ಜಿಲ್ಲಾ ಮೀನುಗಾರರ ಫೆಡರೇಶನ್.ನಿ ಇದರ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಉದ್ಯಮಿಗಳಾದ ಸುಕುಮಾರ್ ಕುಂದರ್ ಮುಂಬೈ, ಅನಂತ್ ಕುಂದರ್ ಮುಂಬೈ, ಪೊಲಿಪು ಮೊಗವೀರ ಮಹಿಳಾ ಮಂಡಳಿ ಪೊಲಿಪು ಹಾಗೂ ಊರ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಊರ ಸುಮಾರು 200 ಕುಟುಂಬಗಳಿಗೆ ಊರ ಪರವಾಗಿ ಅಕ್ಕಿಯನ್ನು ವಿತರಿಸಲಾಯಿತು.
ಧಣಿವರಿಯದ ಸೇವೆಯಲ್ಲಿ ಪಡುಬಿದ್ರಿಯ ಭಗವತಿ ಗ್ರೂಪ್
Posted On: 27-04-2020 10:41PM
ಪಡುಬಿದ್ರಿ.ಎ, 27 : ಕೋವಿಡ್ 19 ದುಸ್ಥಿತಿಯಲ್ಲಿ ಜನರಿಗೆ ಅಗತ್ಯ ಆಹಾರ ಪೂರೈಕೆ ನಿರಂತರವಾಗಿ ವಿತರಿಸಿದ್ದು, ಇಂದು ಭಗವತಿ ಗ್ರೂಪ್ ಸದಸ್ಯರು,ದಾನಿಗಳು ಮತ್ತು ಪ್ರಸಿದ್ಧ ವಕೀಲರಾದ ಶ್ರೀ ಉಮನಾಥ್ ಭಂಡಾರಿ ಮತ್ತು ಶ್ರೀಮತಿ ಮಂಜುಳ ದಂಪತಿಗಳು ಸಹಾಯಾರ್ಥವಾಗಿ ನೀಡಲ್ಪಟ್ಟ ದನದ ಆಹಾರಗಳನ್ನು ನೀಲಾವರ ಕಾಮಧೇನು ಗೋಶಾಲೆಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಭಗವತಿ ಗ್ರೂಪ್ ಸದಸ್ಯರಾದ ಯುವರಾಜ್ ಕುಲಾಲ್, ಸಂದೇಶ್ ಶೆಟ್ಟಿ, ದೇವಿತ್ ಶೆಟ್ಟಿ, ರವಿ ಆಚಾರ್ಯ, ಸುಕೇನ್ ಪೂಜಾರಿ ಉಪಸ್ಥಿತರಿದ್ದರು. ಗೋ ಸಂತತಿಯ ಬಗ್ಗೆ ಅಪಾರ ಕಾಳಜಿಯೊಂದಿಗೆ ಪ್ರಸ್ತುತ ಸ್ಥಿತಿಗತಿಗೆ ಅನುಗುಣವಾಗಿ ವಿಶೇಷ ದಾನನೀಡಿದ ದಾನಿಗಳಿಗೆ ಭಗವತಿ ಗ್ರೂಪ್ ಅಧ್ಯಕ್ಷರು ತಂಡದ ಸರ್ವ ಸದಸ್ಯರ ಪರವಾಗಿ ಹೃದಯಂತರಾಳದ ಅಭಿನಂದನೆಗಳನ್ನು ಸಲ್ಲಿಸಿದರು.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಉಡುಪಿ ಯುವಕನಿಂದ ಸಾವಿರಾರು ಜನಕ್ಕೆ ಆಹಾರ ತಯಾರಿ
Posted On: 25-04-2020 10:38PM
ಉಡುಪಿ. ಎ, 25 : ಅನೇಕ ಹೆಸರಾಂತ ಕಂಪನಿಗಳಲ್ಲಿ ಅಡಿಗೆ ಮಾಡಿ ಬಡಿಸಿದವರು ಸಂದೇಶ್ ಅಡುಗೆಮನೆ, ಇವರು ಮೂಲತಃ ಉಡುಪಿಯವರು. ಹೈದರಬಾದ್ ತಾಜ್ ಗ್ರೂಪ್ ಹೊಟೇಲ್ ಗಳಲ್ಲಿ ಸಾಕಷ್ಟು ಕೆಲಸ ಮಾಡಿ ಅನುಭವ ಇರುವ ಇವರು, ಇದೀಗ ಬೆಂಗಳೂರಿನ ಷೆಪ್ ಟಾಕ್ ಎಂಬ ಸಂಸ್ಥೆಯಲ್ಲಿ ಅಡುಗೆ ಮುಖ್ಯಸ್ಥರಾಗಿದ್ದಾರೆ. ಗಂಗಾವತಿಗೆ ಬಂದಿದ್ದ ಸಂದೇಶ್ ಅಡುಗೆಮನೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಾವಿರಾರು ಜನರಿಗೆ ಅಡುಗೆ ಮಾಡಿದ ಘಟನೆ ಗಂಗಾವತಿಯಲ್ಲಿ ನಡೆದಿದೆ. ಹೈದ್ರಾಬಾದಿನ ತಾಜ್ ಗ್ರೂಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ.. ಇದೀಗ ಬೆಂಗಳೂರಿನ ಷೆಪ್ ಟಾಕ್ ಎಂಬ ಆಹಾರ ಸಿದ್ಧಪಡಿಸುವ ಸಂಸ್ಥೆಯಲ್ಲಿ ಮುಖ್ಯ ಅಡುಗೆಯ ಮುಖ್ಯಸ್ಥನಾಗಿ ಇರುವ ಸಂದೇಶ್ ಪೂಜಾರಿ ಈ ಸಾಹಸ ಮಾಡಿದ್ದಾರೆ. ಕೊರೋನಾ ಹಿನ್ನೆಲೆ ಕಳೆದ ಒಂದು ತಿಂಗಳಿಂದ ಇಲ್ಲಿನ ನಗರೇಶ್ವರ ದೇವಸ್ಥಾನಲ್ಲಿ ನಾನಾ ಇಲಾಖೆಯ ಸಿಬ್ಬಂದಿಗೆ ಹಾಗೂ ಬಡವರಿಗೆ ಆಹಾರ ಸಿದ್ಧಪಡಿಸಿ ಕೊಡುವ ಕೆಲಸ ಮಾಡಲಾಗುತ್ತಿದೆ. ಕಣ್ಣಿಗೆ ಕಾಣದ ವೈರಸ್ ವಿರುದ್ಧ ಹೋರಾಡುತ್ತಿರುವ ಎಲ್ಲಾ ಇಲಾಖೆಯ ಸಿಬ್ಬಂದಿಗಳಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಆಹಾರ ತಯಾರಿಸಿ ಸಂದೇಶ್ ರವರು ಕೃತಜ್ಞತೆ ಸಲ್ಲಿಸಿರುತ್ತಾರೆ, ಸಂದೇಶ್ ಅಡುಗೆಮನೆ ಇವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮೂರುವರೆ ಗಂಟೆಯಲ್ಲಿ ಗರಂ ಗರಂ ಫಲಾವ್ ತಯಾರು ಮಾಡಿದರು. ಬೆಳಿಗ್ಗೆ ಏಳು ಗಂಟೆಗೆ ಆರಂಭವಾದ ಆಡುಗೆ ಮಾಡುವ ಕಾರ್ಯ ಮೂರುವರೆ ಗಂಟೆಯ ಅವಧಿಯಲ್ಲಿ ಮುಗಿದಿದೆ. ಮಧ್ಯ ಅರ್ಧ ಗಂಟೆ ಮಾತ್ರ ವಿಶ್ರಾಂತಿ ತೆಗೆದುಕೊಂಡ ಯುವಕ, ಇಡೀ ಅಡುಗೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಾಡಿದ್ದಾರೆ.
ಬ್ರಾಹ್ಮಣ ಕುಟುಂಬಗಳಿಗೆ ಕಾರ್ಕಳ ಶಾಸಕರ ಉಪಸ್ಥಿತಿಯಲ್ಲಿ ಕಿಟ್ ವಿತರಣೆ
Posted On: 25-04-2020 02:32PM
ಬ್ರಾಹ್ಮಣ ಪ್ರಿಯ ತಂಡದ ಮನವಿಗೆ ಕಾರ್ಕಳ ಕ್ಷೇತ್ರದ ಶಾಸಕರು ತಮ್ಮ ಕ್ಷೇತ್ರದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಗೊಳಗಾದ ಬ್ರಾಹ್ಮಣ ಕುಟುಂಬಗಳಿಗೆ ಬ್ರಾಹ್ಮಣ ಪ್ರಮುಖರ ಮುಖಾಂತರ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ರೆಂಜಾಳ ಸುಬ್ರಹ್ಮಣ್ಯ ಭಟ್ ,ಪ್ರಸನ್ನ ಮತ್ತು ಸತೀಶ್ ಚಂದ್ರ ಇವರು ಉಪಸ್ಥಿತರಿದ್ದರು. ಇವರೆಲ್ಲರಿಗೂ ಬ್ರಾಹ್ಮಣ ಪ್ರಿಯ ತಂಡದ ಪರವಾಗಿ ಧನ್ಯವಾದಗಳು. ಅನಂತ ಇನ್ನಂಜೆ (9980654078)
ರಕ್ತದ ಕೊರತೆ ನೀಗಿಸಿದ ನ್ಯೂಸ್ ಮೀಡಿಯಾ ಅಸೋಸಿಯೇಷನ್ ಸದಸ್ಯರು
Posted On: 24-04-2020 09:45PM
ಲಾಕ್ ಡೌನ್ ಅಗಿರುವ ಹಿನ್ನಲೆಯಲ್ಲಿ ರಕ್ತ ನಿಧಿಯಲ್ಲಿ ತೀವ್ರ ರಕ್ತದ ಕೊರತೆ ಎದುರಾಗಿ , ರೋಗಿಗಳಿಗೆ ಭಾರಿ ಸಮಸ್ಯೆ ಎದುರಾಗಿತ್ತು. ಲಾಕ್ ಡೌನ್ ನಿಂದಾಗಿ ದಾನಿಗಳು ಹೊರ ಬಾರದ ಹಿನ್ನಲೆಯಲ್ಲಿ ರಕ್ತದ ಸಮಸ್ಯೆ ಎದುರಾಗಿತ್ತು .ಇದನ್ನ ಮನಗಂಡ ನ್ಯೂಸ್ ಮೀಡಿಯಾ ಅಸೋಶಿಯೇಶನ್ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದರು. ಉಡುಪಿಯ ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ , ಉಡುಪಿಯ ಅಜ್ಜರಕಾಡು ಬಳಿ ಗ್ರಂಥಾಲಯ ಉದ್ದೇಶಕ್ಕಾಗಿ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ಸಾಮಾಜಿಕ ಅಂತರವನ್ನು ಕಾಪಡಿಕೊಂಡು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಕುಂದಾಪುರ ,ಕಾರ್ಕಳ ಕಾಪು ,ಮಣಿಪಾಲದಿಂದ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡಿದರು. ಈ ಸಂಧರ್ಭದಲ್ಲಿ ಭೇಟಿ ನೀಡಿದ ಜಿಲ್ಲಾ ಸರ್ಜನ್ ಮಧುಸೂಧನ್ ನಾಯಕ್ ಪತ್ರಕರ್ತರ ಕಾರ್ಯವನ್ನು ಶ್ಲಾಘಿಸಿದರು.ಜಿಲ್ಲೆಯಲ್ಲಿ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಶ್ರಮವಹಿಸಿದ ನ್ಯೂಸ್ ಮಿಡಿಯಾ ಅಸೋಸಿಯೆಶನ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.ದಾನಿಗಳು ಸ್ವಯಂ ಪ್ರೇರಿತರಾಗಿ ಅಗಮಿಸಿ ರಕ್ತದಾನ ಮಾಡುವಂತೆ ಜಿಲ್ಲೆಯ ಜನರಲ್ಲಿ ಮನವಿ ಮಾಡಿಕೊಂಡರು. ರಕ್ತದ ಕೊರತೆಯಿದ್ದು ,ಇದನ್ನ ಮನಗಂಡು ದಾನಿಗಳು ಮುಂದೆ ಬಂದು ರಕ್ತದಾನ ಮಾಡಿದ್ದಾರೆ. ಇನ್ನು ಮುಂದೆಯೂ ಇಂತಹ ಸಾಮಾಜಿಕ ಕೆಲಸಗಳಿಗೆ ನ್ಯೂಸ್ ಮಿಡಿಯಾ ಅಸೋಸಿಯೆಶನ್ ಕೈ ಜೋಡಿಸುತ್ತದೆ ಎಂದು ಸಂಜೆ ಪ್ರಭಾ ಪತ್ರಿಕೆಯ ಪ್ರಧಾನ ಸಂಪಾದಕ ನ್ಯೂಸ್ ಮಿಡಿಯಾ ಅಸೊಸಿಯೆಶನ್ ರಾಜ್ಯಾಧ್ಯಕ್ಷ ವೆಂಕಟೇಶ್ ಪೈ ತಿಳಿಸಿದರು. ರಕ್ತದ ಸಮಸ್ಯೆ ಬಗೆ ಹರಿಸಲು ಕೈ ಜೋಡಿಸಿದ ಎಲ್ಲಾ ದಾನಿಗಳು ತಾ ಮುಂದು ನಾ ಮುಂದು ಎಂದು ಮುಂದೆ ಬಂದು ಕೈ ಜೋಡಿಸಿರುತ್ತಾರೆ. ಕಾಪು ಗೋಲ್ಡನ್ ಸುಧೀರ್ ,ಹಾಗೂ ಮಣಿಪಾಲದ ವಿಲ್ಸನ್ ತನ್ನ ಅಪ್ತರೊಂದಿಗೆ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಹಕಾರ ನೀಡಿದ ಜಿಲ್ಲಾಸ್ಪತ್ರೆ ರಕ್ತ ನಿಧಿ ಸಿಬ್ಬಂದಿಯವರಿಗೆ ಹಾಗೂ ಜಿಲ್ಲಾಧಿಕಾರಿ ಜಿ ಜಗದೀಶ್ ಅವರಿಗೂ ಹಾಯ್ ಕರಾವಳಿ ಪತ್ರಿಕೆಯ ಪ್ರಧಾನ ಸಂಪಾದಕ ,ನ್ಯೂಸ್ ಮಿಡಿಯಾ ಅಸೋಸಿಯೆಶನ್ ಉಡುಪಿ ಜಿಲ್ಲಾಧ್ಯಕ್ಷ ಧನ್ಯವಾದಗಳನ್ನು ಅರ್ಪಿಸಿದರು. ಶಿಬಿರದಲ್ಲಿ ನ್ಯೂಸ್ ಮಿಡಿಯಾ ಅಸೋಸಿಯೆಶನ್ ನ ರಾಜ್ಯ ಖಾಜಾಂಜಿ ರಾಜ್ ಶೇಖರ್ ಸಾಸ್ತಾನ.ಉಡುಪಿ ಜಿಲ್ಲಾ ಕಾರ್ಯದರ್ಶಿ ಗೋಪಾಲ ಶೆಟ್ಟಿ ಮತ್ತಿತ್ತರು ಉಪಸ್ಥಿತರಿದ್ದರು.
ಕಾಶಿಯಿಂದ ಬಂದ 'ಎಲ್ಲೂರು ವಿಶ್ವನಾಥ' ದೇವರು - ಕ್ಷೇತ್ರ ಪರಿಚಯ
Posted On: 23-04-2020 03:12PM
ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ "ಮಹಾತೊಭಾರ ಎಲ್ಲೂರು ಶ್ರೀವಿಶ್ವೇಶ್ವರ ದೇವಾಲಯ" ಕೂಡ ಒಂದು. ಎಲ್ಲೂರಿನ ಮೂಲಸ್ಥಾನ ಶ್ರೀ ವಿಶ್ವನಾಥ ಅಥವಾ ಶ್ರೀವಿಶ್ವೇಶ್ವರ ಸನ್ನಿಧಾನವು ಸ್ವಯಂಭು ಸನ್ನಿಧಿ ಎನ್ನುವುದು ಪ್ರತೀತಿ. ಅಪೂರ್ವ ವಾಸ್ತು ವಿನ್ಯಾಸದ ಮತ್ತು ಸರಳ ರೂಪದಲ್ಲಿರುವ ದೇವರು ಕಾಶಿಯಿಂದ ಬಂದವರೆಂದು ನಂಬಿಕೆ. ಸ್ಥಳ ಪುರಾಣ:ಉದ್ಭವ ಮಹಾದೇವನು ಮೊದಲು ಬುಡಕಟ್ಟು ವರ್ಗದ ವೃದ್ದ ಮಹಿಳೆಗೆ ಗೋಚರಿಸಿದ್ದು. ಮಹಿಳೆ ಅಣಬೆ ತೆಗೆಯಲು ಕತ್ತಿಯನ್ನು ಉಪಯೋಗಿಸಿದಾಗ ಆ ಕತ್ತಿ, ಉದ್ಭವ ಲಿಂಗಕ್ಕೆ ತಾಗಿ ರಕ್ತ ಒಸರಿಸಲಾರಂಭಿಸಿತಂತೆ. ವಿಷಯ ತಿಳಿದ ಅರಸ ಮತ್ತು ಆತನ ಗುರುಗಳು ಆಗಮಿಸಿ ಎಳನೀರು ಸುರಿದಾಗ ಮಹಾದೇವ ಗೋಚರಿಸಿದನು. ಕುಂದ ಹೆಗ್ಗಡೆ ಅರಸು ಮನೆತನದ ಭೂರಿ ಕೀರ್ತಿ ಎಂಬ ಅರಸನು ಸಂತಾನ ಅಪೇಕ್ಷೆಯಿಂದ ಮತ್ತು ತನ್ನ ರಾಜ್ಯದಲ್ಲಿ ದೇವಾಲಯವಿಲ್ಲವೆಂಬ ಕಾರಣಕ್ಕೆ ಕಾಶಿಗೆ ಹೋಗಿ ತಪಸ್ಸನ್ನು ಆಚರಿಸಿ ದೇವರನ್ನು ಕರೆತಂದನೆಂದು ಕೂಡ ಇತಿಹಾಸ ಪುಟದಲ್ಲಿ ಗುರುತಿಸಲ್ಪಟ್ಟಿದ್ದಾನೆ. ಕ್ಷೇತ್ರದಲ್ಲಿ ಎಳನೀರು ಸೇವೆ ಬಹಳ ವಿಶೇಷ. ಎಳ್ಳೆಣ್ಣೆ ಸೇವೆ ನೀಡಿದರೆ ಸಕಲ ಗ್ರಹದೋಷ, ದುಷ್ಟಾರಿಷ್ಟ, ಅಪತ್ತು ದೂರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ರೋಗಭಾದೆ, ಬಾಲಗ್ರಹ ನಿವಾರಣೆಗೆ ತುಲಾಭಾರ ಸೇವೆ ಕೂಡ ಸ್ವಾಮಿಗೆ ಅರ್ಪಣೆಯಾಗುತ್ತಿದೆ. ಬಿಲ್ಲವ, ಮೊಗವೀರ, ಮಡಿವಾಳ, ದೇವಾಡಿಗ ವಿಶ್ವಕರ್ಮ , ಬಂಟ್ಸ್, ಬ್ರಾಹ್ಮಣ ಸಮಾಜದವರ ಸಹಭಾಗಿತ್ವ ಕ್ಷೇತ್ರದ ವೈಶಿಷ್ಟ್ಯ. ಇತ್ತೀಚಿಗೆ ಕ್ಷೇತ್ರದ ಜೀರ್ಣೋದ್ದಾರ ಹೆಚ್ಚುಕಮ್ಮಿ ಆರು ಕೋಟಿ ರುಪಾಯಿ ವೆಚ್ಚದಲ್ಲಿ 2009 ಮಾರ್ಚ್ ತಿಂಗಳಲ್ಲಿ ವಿಜೃಂಭಣೆಯಿಂದ ನಡೆದಿತ್ತು. ಕ್ಷೇತ್ರದ ವಿಳಾಸ: ಮಹತೋಭಾರ ವಿಶ್ವೇಶ್ವರ ದೇವಾಲಯ, ಎಲ್ಲೂರು ಅಂಚೆ, ತಾಲೂಕು ಮತ್ತು ಜಿಲ್ಲೆ - ಉಡುಪಿ ದೂ. ಸ. 0820 -2550365 ಮಾರ್ಗ: ಉಡುಪಿಯಿಂದ : ರಾ.ಹೆ 17 ರಲ್ಲಿ ಬಂದು ಕಟಪಾಡಿ, ಕಾಪು, ಉಚ್ಚಿಲ ಬಳಿ ಎಡಕ್ಕೆ ತಿರುಗಬೇಕು(ಮುದರಂಗಡಿಗೆ ಹೋಗುವ ರಸ್ತೆ) ಮಂಗಳೂರಿನಿಂದ : ರಾ.ಹೆ 17 ರಲ್ಲಿ ಬಂದು ಸುರತ್ಕಲ್ , ಮೂಲ್ಕಿ, ಪಡುಬಿದ್ರಿ , ಉಚ್ಚಿಲ ಬಳಿ ಬಲಕ್ಕೆ ತಿರುಗಬೇಕು (ಮುದರಂಗಡಿಗೆ ಹೋಗುವ ರಸ್ತೆ)
ಅಲೆವೂರಿನ ಉದಯೋನ್ಮುಖ ಪ್ರತಿಭೆ - ನಿತಿನ್ ಸೇರಿಗಾರ್
Posted On: 23-04-2020 10:57AM
ಸಾಧನೆಯ ಹಾದಿಯಲ್ಲಿ ಸಾಗುವ ಹೆಜ್ಜೆಗಳ ಹಿಂದೆ ಸಹಕಾರದ ಮತ್ತು ಪ್ರೋತ್ಸಾಹದ ಹಿರಿಮೆಯಿದ್ದರೆ ಸಾಧಕನ ನಿಜವಾದ ಪ್ರತಿಭೆ ಮುಂದೆ ಬರಲು ಸಾಧ್ಯ, ಹೀಗೆ ಸಾಧನೆಗಳ ಮೆಟ್ಟಿಲುಗಳನ್ನು ಹತ್ತಿಕೊಂಡು ಅರಳುತ್ತಿರುವ ಪ್ರತಿಭೆಗಳಲ್ಲಿ ಅಲೆವೂರಿನ ನಿತಿನ್ ಸೇರಿಗಾರ್ ಕೂಡ ಒಬ್ಬರು. ಇವರು ಯುವ ಸ್ಯಾಕ್ಸೋಫೋನ್ ಮತ್ತು ನಾಗಸ್ವರ ವಾದಕ. ಇವರ ಈ ಕಲೆಗೆ ಬೆನ್ನೆಲುಬಾಗಿ ನಿಂತಿರುವುದು ಇವರ ತಂದೆ ರಾಘುವ ಸೇರಿಗಾರ್ ಮತ್ತು ತಾಯಿ ಮೋಹಿನಿ ಸೇರಿಗಾರ್. ತಂದೆಯೆ ಇವರ ಮೊದಲ ಗುರು. ಏಳನೇ ತರಗತಿಯಲ್ಲಿ ಇರುವಾಗಲೇ ತನ್ನ ಗುರು ಕಾಡುಬೆಟ್ಟು ರಾಘವೇಂದ್ರ ರಾವ್ ಅವರಿಂದ ಸ್ಯಾಕ್ಸೋಫೋನ್ ನುಡಿಸುವುದನ್ನು ಕಲಿಯುತ್ತಾ ಮುಂದೆ ನಾಗಸ್ವರವನ್ನು ತನ್ನ ಗುರುಗಳಾದ ಪೆರ್ಣಂಕಿಲ ರಾಘು ಸೇರಿಗಾರ್ ಅವರಿಂದ ಕಲಿತಿದ್ದಾರೆ. ಅಲೆವೂರು ಗಣೇಶೋತ್ಸವ ಸಮಿತಿ, ಬುಡ್ನಾರು ಗರಡಿ, ಮಾರ್ಪಳ್ಳಿ ಗರಡಿ, ಕಿದಿಯೂರು ಗರಡಿ, ಸಗ್ರಿ ಮಲೆ ಜುಮಾದಿ ದೈವಸ್ಥಾನ, ಬೀಡಿನಗುಡ್ಡೆ ಪಿಲಿ ಚಾಮುಂಡಿ, ಮಂಚಿ ಪಿಲಿ ಚಾಮುಂಡಿ, ಮಂಚಿ ಮೂಲಸ್ಥಾನ, ಅಂಬಾಡಿ ದೈವಸ್ಥಾನ, ನಡಿಬೆಟ್ಟು ದೈವಸ್ಥಾನ ಮೂಲ್ಕಿ, ಈ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ವರ್ಷಾಂಪ್ರತಿ ನಾಗಸ್ವರ ನುಡಿಸುತ್ತಾ ಬಂದಿದ್ದಾರೆ. ಉಡುಪಿ ವಾಸುಕಿ ಅನಂತಪದ್ಮನಾಭ ದೇವಸ್ಥಾನ, ಕೆಮ್ತೂರು ವಿಷ್ಣುಮೂರ್ತಿ ದೇವಸ್ಥಾನ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ದೇವರ ಸಮ್ಮುಖದಲ್ಲಿ ನಾಗಸ್ವರದ ನಾದವನ್ನು ನುಡಿಸುವ ಇವರ ಕಲೆ ಊರಿನಲ್ಲಿ ಮಾತ್ರವಲ್ಲದೆ ಮುಂಬಯಿ, ಹುಬ್ಬಳ್ಳಿ, ಬಳ್ಳಾರಿ, ಬೆಂಗಳೂರಿನಲ್ಲೂ ಸ್ಯಾಕ್ಸೋಫೋನ್ ಮತ್ತು ನಾಗಸ್ವರ ನುಡಿಸುತ್ತಾ ಬಂದಿದ್ದಾರೆ. ಇಷ್ಟು ಮಾತ್ರವಲ್ಲದೆ ತನ್ನ ನಾಗಸ್ವರದಿಂದ ಹತ್ತು ಹಲವು ಸಿನಿಮಾ ಮತ್ತು ಭಾವಗೀತೆ, ಭಕ್ತಿಗೀತೆಯನ್ನು ನುಡಿಸಿದ್ದಾರೆ. 'ನಿನ್ನ ದನಿಗಾಗಿ' ಎನ್ನುವ ಹಾಡನ್ನು ನಾಗಸ್ವರದಿಂದ ವಾದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಾಗ ಬಹುಬೇಗ ಜನಪ್ರಿಯವಾಗಿತ್ತು, ಮುನಿಸು ತರವೇ ಭಾವಗೀತೆ ಇವರ ನಾಗಸ್ವರದಿಂದ ಮೂಡಿ ಬಂದು ಯುಟ್ಯೂಬ್ನಲ್ಲಿ 50,000 ಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ, ಕನ್ನಡದಲ್ಲಿ ಬೊಂಬೆ ಹೇಳುತೈತೆ, ಸ್ವಾಗತಂ ಕೃಷ್ಣ (ಭಕ್ತಿಗೀತೆ) ಭಾಗ್ಯದ ಬಳೆಗಾರ ಭಾವಗೀತೆ ಹೀಗೆ ನಾನ ಪ್ರಕಾರದ ಹಾಡನ್ನು ಸ್ಯಾಕ್ಸೋಫೋನ್ ಮತ್ತು ನಾಗಸ್ವರದ ವಾದ್ಯದಿಂದ ಹೊರಹಾಕುವ ಪ್ರತಿಭೆ ನಿತಿನ್ ಹತ್ತು ಹಲವು ಕಡೆ ಪ್ರಶಸ್ತಿ, ಪುರಸ್ಕಾರ ಲಭಿಸಿ ಗೌರವವನ್ನು ಪಡೆದಿರುತ್ತಾರೆ ಬರಹ : ಸುಹಾನ್ ಉಡುಪಿ
ವಿಶೇಷ ಪ್ರಕಟಣೆ : ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲ ಮುಂದೂಡಲಾಗಿದೆ
Posted On: 22-04-2020 08:17AM
ಶ್ರೀ ಬ್ರಹ್ಮ ಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನ, ಪಡುಗ್ರಾಮ ಕಾಪು ವಿಶೇಷ ಪ್ರಕಟಣೆ : ಭಕ್ತಾಭಿಮಾನಿಗಳೆ ಸದ್ರಿ ದೈವಸ್ಥಾನದಲ್ಲಿ ಇದೇ ಬರುವ ದಿನಾಂಕ ಎಪ್ರಿಲ್ 28 ರಿಂದ ಮೇ 02 ರವರಗೆ ನಡೆಯ ಬೇಕಾಗಿದ್ದ (ಪಿಲಿಕೋಲ) ನೇಮೋತ್ಸವವನ್ನು ಮುಂದೂಡಲಾಗಿದೆ, ದಿನಾಂಕ 13/04/2020 ರಂದು ದೈವಸ್ಥಾನದ ಸದಸ್ಯರು, ಊರ ಹತ್ತು ಸಮಸ್ತರು ಹಾಗೂ 16 ಕಾಣಿಕೆಯವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕೊರೊನ ರೋಗದ ಹರಡುವಿಕೆ ಹಿನ್ನೆಲೆಯಲ್ಲಿ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದು.. ಮುಂದಿನ ದಿನಾಂಕವನ್ನು ಕೊರೊನ ಲಾಕ್ಡೌನ್ ಮುಗಿದ ನಂತರ ತಿಳಿಸಲಾಗುವುದು. ✍️ ಆಡಳಿತ ಮಂಡಳಿ (ಶ್ರೀ ಬ್ರಹ್ಮ ಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನ, ಪಡುಗ್ರಾಮ ಕಾಪು)
ಅಯ್ಯಪ್ಪ ಭಕ್ತನಿಂದ ಮಹಾನಗರಿಯಲ್ಲಿ ಪ್ರಚಾರವಿಲ್ಲದ ಜನಸೇವೆ
Posted On: 21-04-2020 06:53PM
ಪ್ರಚಾರವಿಲ್ಲದೆ ಜನ ಸೇವೆ ಮಾಡುತ್ತಿರುವ ಗುರುಸ್ವಾಮಿಗಳು ಬಹುಷಃ ಚಂದ್ರಹಾಸ ಗುರುಸ್ವಾಮಿ ಎಂಬ ಹೆಸರು ಕೇಳದೆ ಇರೋರು ಮುಂಬೈನಲ್ಲಿ ಅಥವಾ ಉಡುಪಿ ಭಾಗದಲ್ಲಿ ತೀರಾ ಕಡಿಮೆ.. ಅಯ್ಯಪ್ಪ ಸ್ವಾಮಿಯ ಭಕ್ತರಾಗಿರುವ ಇವರು ಅದೆಷ್ಟೋ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿದ ಭಕ್ತರಿಗೆ ಅಯ್ಯಪ್ಪ ಸ್ವಾಮಿಯನ್ನು ಯಾವ ರೀತಿ ನಿಷ್ಠೆಯಿಂದ, ಭಕ್ತಿಯಿಂದ ಮತ್ತು ನಿಯಮಾನುಸಾರ ಪೂಜಿಸಬೇಕೆಂದು ಹೇಳಿಕೊಟ್ಟವರು, ಹಿರಿಯರಾಗಿ, ಮಾರ್ಗದರ್ಶಕರಾಗಿ, ಗುರುಗಳಾಗಿ ದಾರಿ ತಪ್ಪಿದವರನ್ನು ಸರಿ ದಾರಿಗೆ ತಂದ ಮಹಾತ್ಮರು, ಕೊರೊನ ಲಾಕ್ ಡೌನ್ ಸಮಯದಲ್ಲಿ ದೂರದ ಮಹಾರಾಷ್ಟ್ರದಲ್ಲಿ ಇದ್ದರು ಕೂಡ ತಮ್ಮ ಜನಸೇವೆಯನ್ನು ಚಾಚು ತಪ್ಪದೆ ಮಾಡುತ್ತಿದ್ದಾರೆ.. ಇವರ ಬಗ್ಗೆ ಯಾಕೆ ಬರೆಯುತ್ತಿದ್ದೇನೆ ಎಂದರೆ.. ಸ್ವಲ್ಪವೂ ಅಹಂ ಇಲ್ಲದ ಇವರು ಪ್ರಚಾರದ ಗೀಳು ಬಯಸಿದವರಲ್ಲ.. ನನ್ನ ಆತ್ಮೀಯರಾದ ಪ್ರಕಾಶ್ ಕೋಟ್ಯಾನ್ ಮಡುಂಬು ಇವರು ನನಗೆ ಕರೆಮಾಡಿದಾಗ ಚಂದ್ರಹಾಸ ಗುರುಸ್ವಾಮಿಯ ಸಮಾಜಮುಖಿ ಕಾರ್ಯಗಳು ಯಾವ ರೀತಿ ನಡೆಯುತ್ತಿವೆ ಎಂದು ತಿಳಿಸಿದರು.. ಪ್ರಕಾಶ್ ಕೋಟ್ಯಾನ್ ಅವರು ಡೊಂಬಿವಿಲಿಯಲ್ಲಿ ಇರುವ ಕೇಶವ್ ಪೂಜಾರಿ ಎಂಬ ವ್ಯಕ್ತಿಯು ಬಹಳ ಸಂಕಷ್ಟದಲ್ಲಿ ಇರುವುದಾಗಿ ಗುರುಸ್ವಾಮಿಗೆ ತಿಳಿಸಿದಾಗ.. ಕ್ಷಣಾರ್ಧದಲ್ಲಿ ಕೇಶವ್ ಪೂಜಾರಿಯವರ ಬ್ಯಾಂಕ್ ವಿವರಗಳನ್ನು ಕೇಳಿ ಆರ್ಥಿಕವಾಗಿ ಸಹಕಾರವನ್ನು ನೀಡಿರುತ್ತಾರೆ.. ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಯಲ್ಲಿ ಭಾಗಿಯಾಗಿರುವ ಇವರು ಮುಂಬೈನಲ್ಲಿ, ತುಳುವರಿಗೆ, ಕನ್ನಡಿಗರಿಗೆ, ಮರಾಠಿಗಳಿಗೆ ಸೇರಿದಂತೆ ಇನ್ನು ಅನೇಕರಿಗೆ ಜಾತಿ ಮತ ನೋಡದೆ ಸಹಕರಿಸುತ್ತಿದ್ದಾರೆ, ಇವರು ಮಾಡುತ್ತಿರುವ ಸೇವೆಗೆ ಇವರು ನಂಬಿರುವ ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ ಅನುಗ್ರಹ, ಉಂಡಾರು ಶ್ರೀ ವಿಷ್ಣುಮೂರ್ತಿ ದೇವರ ಹಾಗೂ ಸರ್ವಶಕ್ತಿಗಳ ಆಶೀರ್ವಾದ ಇವರ ಮೇಲಿರಲಿ, ಇವರು ಮಾಡುತ್ತಿರುವ ಉದ್ಯಮದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಹೊಂದಿ ಇನ್ನು ಅನೇಕರ ಸೇವೆ ಮಾಡುವಂತಾಗಲಿ... ಬರಹ : ವಿ.ಪಿ ಮಡುಂಬು
