Updated News From Kaup

ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಅರಳಿದ ಕಮಲ

Posted On: 04-06-2024 05:02PM

ಕಾಪು : ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರು ಜಯಗಳಿಸಿದ್ದಾರೆ.

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಪದ್ಮರಾಜ್ ಆರ್. ಪೂಜಾರಿ ಅವರನ್ನು ಸೋಲಿಸಿದ್ದಾರೆ.

ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರನ್ನು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಪರಾಭವಗೊಳಿಸಿ ಸಂಸತ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚುನಾವಣಾ ಫಲಿತಾಂಶವು ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರಾಸೆ ತಂದಿದೆ.

ಜೆಸಿಐ ಉಡುಪಿ ಸಿಟಿ ಘಟಕಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ

Posted On: 04-06-2024 06:55AM

ಉಡುಪಿ : ವಲಯದ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೆಸಿಐ ಉಡುಪಿ ಸಿಟಿ ಘಟಕ ಅತ್ಯುತ್ತಮ ಘಟಕ ಪ್ರಶಸ್ತಿಗೆ ಭಾಜನವಾಗಿದೆ.

ವಿಟ್ಲದಲ್ಲಿ ನಡೆದ ವಲಯ 15 ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಗಿರೀಶ್ ಎಸ್.ಪಿ ಯವರು ಈ ಪ್ರಶಸ್ತಿಯನ್ನು ಘಟಕಾಧ್ಯಕ್ಷೆ ಡಾ| ಹರಿಣಾಕ್ಷಿ ಕಕೇ೯ರ ರವರಿಗೆ ನೀಡಿದರು.

ಅಲ್ಲದೆ ಈ ಘಟಕವು ಅತ್ಯುತ್ತಮ ಘಟಕ ಅಧ್ಯಕ್ಷೆ ರನ್ನರ್ ಪ್ರಶಸ್ತಿ, ಡೈಮಂಡ್ ಲೋಮ್ , ಕರುನಾಡ ವೈಭವದಲ್ಲಿ ದ್ವಿತೀಯ ಬಹುಮಾನ, ಪೋಟೋ ಡಿಸ್ಪ್ಲೆಯಲ್ಲಿ ದ್ವಿತೀಯ ಬಹುಮಾನ ಸಹಿತ ವಿವಿಧ ಪುರಸ್ಕಾರಗಳು ಸಿಕ್ಕಿವೆ.

ಈ ಸಂದಭ೯ದಲ್ಲಿ ಪೂವ೯ ಅಧ್ಯಕ್ಷರಾದ ಉದಯ್ ನಾಯ್ಕ್, ಜಗದೀಶ್ ಶೆಟ್ಟಿ, ರಫೀಕ್ ಖಾನ್, ಕಿರಣ್ ಭಟ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ವಲಯ ಉಪಾಧ್ಯಕ್ಷ ದೀಪಕ್ ರಾಜ್ ಸಹಿತ ವಲಯಾಧಿಕಾರಿಗಳು ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನ ಮಾಡಿದರು.

ಕುತ್ಯಾರು : ಶ್ರೀ ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ - ಶಾಲಾ ಪ್ರಾರಂಭೋತ್ಸವ

Posted On: 04-06-2024 06:50AM

ಕುತ್ಯಾರು : ಶ್ರೀ ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ ಕುತ್ಯಾರು ಇಲ್ಲಿ ಸೋಮವಾರ 2024-25 ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದಲ್ಲಿ ಮಕ್ಕಳನ್ನು ಪುಷ್ಪಾರ್ಚನೆಯೊಂದಿಗೆ ಆರತಿಯನ್ನು ಬೆಳಗಿಸಿ ಶಾಲಾ ಬ್ಯಾಂಡಿನೊಂದಿಗೆ ಸ್ವಾಗತಿಸಲಾಯಿತು.

ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಚಂದ್ರಕಲಾ ವಿಶುಕುಮಾರ್ ಪಡುಬಿದ್ರಿ, ಮಾಲಕರು ಶ್ರೇಯಸ್ ಗೋಲ್ಡ್ & ಡೈಮಂಡ್ ಇವರ ವತಿಯಿಂದ ಮಕ್ಕಳಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು.

ಸಮಾರಂಭದಲ್ಲಿ ಆನೆಗುಂದಿ ಅಸೆಟ್ ನ ಅಧ್ಯಕ್ಷರಾದ ಸೂರ್ಯಕುಮಾರ್ ಹಳೆಯಂಗಡಿ, ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಕಾರ್ಯದರ್ಶಿಯಾದ ಗುರುರಾಜ ಆಚಾರ್ಯ, ಶೈಕ್ಷಣಿಕ ಸಲಹೆಗಾರರಾದ ದಿವಾಕರ ಆಚಾರ್ಯ ಗೇರುಕಟ್ಟೆ, ಮುಖ್ಯ ಅತಿಥಿಗಳಾದ ಕುತ್ಯಾರು ಅರಸು ಮನೆತನದ ಜಿನೇಶ್ ಬಲ್ಲಾಳ್, ಧಾರ್ಮಿಕ ಮಾರ್ಗದರ್ಶಕರಾದ ಸಂತೋಷ್ ಆಚಾರ್ಯ ಉಡುಪಿ, ಅಸೆಟ್ ನ ಸದಸ್ಯರಾದ ಜಿ. ಟಿ.ಆಚಾರ್ಯ, ದಯಾನಂದ ಆಚಾರ್ಯ, ಶಾಲಾ ಪ್ರಾಂಶುಪಾಲರಾದ ಸಂಗೀತಾ, ಪೋಷಕರು, ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕಾಪುವಿನಲ್ಲಿ ನಮ್ಮ ಕಾಪು "ಧ್ಯಾನ್ ಟ್ಯೂಷನ್ ಸೆಂಟರ್" ಶುಭಾರಂಭ

Posted On: 03-06-2024 07:54PM

ಕಾಪು : ಇಲ್ಲಿನ ಆಸುಪಾಸಿನ ವಿದ್ಯಾರ್ಥಿಗಳಿಗೆ ಸುಲಲಿತ ಕಲಿಕೆಗಾಗಿ ನಮ್ಮ ಕಾಪು "ಧ್ಯಾನ್ ಟ್ಯೂಷನ್ ಸೆಂಟರ್" ತರಗತಿಗಳು ಜೂನ್ 3 ರಿಂದ ಆರಂಭವಾಗಿದೆ.

ಕಾಪುವಿನ ಹೃದಯ ಭಾಗದಲ್ಲಿ ಮುಖ್ಯ ರಸ್ತೆಯ ನಾರಾಯಣಗುರು ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ನಮ್ಮ ಕಾಪು "ಧ್ಯಾನ್ ಟ್ಯೂಷನ್ ಸೆಂಟರ್" ತರಗತಿಗಳು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9844323955 93265 83640

ಕೆ.ಸಿ.ಇ.ಟಿ ಫಲಿತಾಂಶ : 100 ರೊಳಗೆ 10 ರ‍್ಯಾಂಕ್‌ ಪಡೆದ ಕಾರ್ಕಳ ಕ್ರಿಯೇಟಿವ್ ನ ವಿದ್ಯಾರ್ಥಿಗಳು

Posted On: 03-06-2024 07:29PM

ಕಾರ್ಕಳ : ಏಪ್ರಿಲ್ 18 ಮತ್ತು 19 ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು. ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳು 100 ರೊಳಗೆ 1೦ ರ‍್ಯಾಂಕ್‌ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ.

ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಕಾಲೇಜಿನ ನೇಹಾ ಕೆ. ಉದಪುಡಿ ಅವರು ವಿವಿಧ ವಿಭಾಗಗಳಲ್ಲಿ ಅದ್ಭುತವಾದ ಸಾಧನೆ ಮಾಡಿದ್ದಾರೆ. ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 21ನೇ ರ‍್ಯಾಂಕ್‌, ಬಿ.ಎನ್.ವೈ.ಎಸ್. ವಿಭಾಗದಲ್ಲಿ 24ನೇ ರ‍್ಯಾಂಕ್‌, ಬಿ.ಎಸ್.ಸಿ. ನರ್ಸಿಂಗ್ ವಿಭಾಗದಲ್ಲಿ 33 ನೇ ರ‍್ಯಾಂಕ್‌, ಪಶು ವೈದ್ಯಕೀಯ ವಿಭಾಗದಲ್ಲಿ 33ನೇ ರ‍್ಯಾಂಕ್‌, B-ಫಾರ್ಮ್ ಮತ್ತು D-ಫಾರ್ಮ್ ವಿಭಾಗಗಳಲ್ಲಿ 49 ನೇ ರ‍್ಯಾಂಕ್‌ ಗಳಿಸಿದ್ದಾರೆ. ವಿದ್ಯಾರ್ಥಿ ಶರತ್ ಹೆಚ್. ಪಿ. ಪಶು ವೈದ್ಯಕೀಯ ವಿಭಾಗದಲ್ಲಿ 26 ನೇ ರ‍್ಯಾಂಕ್‌, ಕೃಷಿ ವಿಜ್ಞಾನ ವಿಭಾಗದಲ್ಲಿ 37 ನೇ ರ‍್ಯಾಂಕ್‌ ಪಡೆದು ಶ್ಲಾಘನೀಯ ಸಾಧನೆ ಮಾಡಿದ್ದಾರೆ. ಕಾರ್ತಿಕ್ ಎ. ಎಸ್. ಕೃಷಿ ವಿಜ್ಞಾನ ವಿಭಾಗದಲ್ಲಿ 62ನೇ ರ‍್ಯಾಂಕ್‌, ಅಭಿನವ್ ಹೆಚ್. ಬಿ. ಪಶು ವೈದ್ಯಕೀಯ ವಿಭಾಗದಲ್ಲಿ 74 ನೇ ರ‍್ಯಾಂಕ್‌ ಪಡೆದಿದ್ದಾರೆ. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ122 ವಿದ್ಯಾರ್ಥಿಗಳು 1000 ರ‍್ಯಾಂಕ್‌ನೊಳಗೆ 122 ಮತ್ತು 210 ವಿದ್ಯಾರ್ಥಿಗಳು 2000 ರೊಳಗೆ ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ.

ಕಾಲೇಜು ಪ್ರಾರಂಭದಿಂದಲೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 100 ಶೇಕಡಾ ಫಲಿತಾಂಶ ದಾಖಲಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

ಕಾಪು ತಾಲೂಕಿನಲ್ಲಿ ನೈರುತ್ಯ ಪದವೀಧರ ಕ್ಷೇತ್ರ ಶೇ.76.26 ಮತ್ತು ಶಿಕ್ಷಕರ ಕ್ಷೇತ್ರ ಶೇ.83.21 ಮತದಾನ

Posted On: 03-06-2024 07:20PM

ಕಾಪು : ತಾಲೂಕಿನ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾನ ಇಂದು ಕಾಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 1208 ಮಂದಿ ಮತದಾನ ಮಾಡಿದ್ದು ಇದರಲ್ಲಿ ಪುರುಷರು (531), ಮಹಿಳೆಯರು (677) ಮತ ಚಲಾಯಿಸಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಶೇ.76.26 ಮತದಾನವಾಗಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 233 ಮಂದಿ ಮತ ಚಲಾಯಿಸಿದ್ದು. ಪುರುಷರು (531), ಮಹಿಳೆಯರು (677) ಮತದಾನಗೈದಿರುತ್ತಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.83.21 ಮತದಾನವಾಗಿದೆ.

ಕಾಪು : ಮಾರಕಾಯುಧದೊಂದಿಗೆ ಸಂಚರಿಸುತ್ತಿದ್ದ ಆರು ಮಂದಿ ಪೊಲೀಸ್ ವಶಕ್ಕೆ

Posted On: 02-06-2024 11:43AM

ಕಾಪು : ಕಾರಿನಲ್ಲಿ ಮಾರಕಾಯುಧಗಳೊಂದಿಗೆ ಸಂಚರಿಸುತ್ತಿದ್ದ ಆರು ಮಂದಿಯನ್ನು ಕಾಪು ಪೊಲೀಸರು ಕಾಪು ಸಮೀಪದ ಕೋತಲಕಟ್ಟೆ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಮುಲ್ಕಿಯ ಅಮಿತ್ ರಾಜ್, ಕಾಟಿಪಳ್ಳದ ಪ್ರಕಾಶ್, ವಾಮಂಜೂರು ನೀರುಮಾರ್ಗದ ವರುಣ್, ಸುರತ್ಕಲ್ ನ ಕಾರ್ತಿಕ್ ಶೆಟ್ಟಿ, ಕಾಟಿಪಳ್ಳದ ಅಭಿಷೇಕ್, ಫರಂಗಿಪೇಟೆಯ ಶ್ರೀಕಾಂತ್ ಶ್ರೀಪತಿ ವಶಕ್ಕೆ ಪಡೆದ ಆರೋಪಿಗಳು. ಇವರಿಂದ ಕಾರು, ಮಾರಕಾಯುಧಗಳು ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉದ್ಯಾವರದ ಬಳಿ ಕಾರಿನಲ್ಲಿ ಹೋಗುತ್ತಿದ್ದ ಆರೋಪಿಗಳ ಬಗ್ಗೆ ಅನುಮಾನಗೊಂಡ ಕಾಪು ಪೊಲೀಸ್ ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಆರೋಪಿಗಳು ಕಾರನ್ನು ನಿಲ್ಲಿಸದೆ ಕಾಪು ಕಡೆ ಪರಾರಿ ಯಾದರು. ಬಳಿಕ ಈ ಬಗ್ಗೆ ಕಾಪು ಠಾಣೆಗೆ ಮಾಹಿತಿ ನೀಡಿದ ಜಯಶ್ರೀ ಮಾನೆ, ಆರೋಪಿಗಳ ವಾಹನವನ್ನು ಬೆನ್ನಟ್ಟಿ ಕೊಂಡು ಬಂದರೆನ್ನಲಾಗಿದೆ.

ಅದೇ ರೀತಿ ಅತ್ತ ಅಲಟ್೯ ಆದ ಕಾಪು ಠಾಣೆಯ ಎಸ್ ಐ ಅಬ್ದುಲ್ ಖಾದರ್ ಇನ್ನೊಂದು ವಾಹನದಲ್ಲಿ ಆರೋಪಿಗಳ ವಾಹನವನ್ನು ಬೆನ್ನಟ್ಟಿಕೊಂಡು ಬಂದರು. ಕಾಪುವಿನ ಕೋತಲ್ ಕಟ್ಟೆ ಬಳಿ ಆರೋಪಿಗಳ ವಾಹನವನ್ನು ತಡೆದು ಅದರಲ್ಲಿದ್ದ ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡರು ಎಂದು ತಿಳಿದುಬಂದಿದೆ.

ವಾಹನವನ್ನು ತಪಾಸಣೆ ಮಾಡಿದಾಗ ಅದರೊಳಗೆ ಮಾರಕಾಯುಧಗಳು ಹಾಗೂ ಇತರ ವಸ್ತುಗಳು ಕಂಡು ಬಂದಿದ್ದು ಆರೋಪಿಗಳು ಯಾವ ಕೃತ್ಯಕ್ಕೆ ಸಂಚುರೂಪಿಸಿದ್ದಾರೆ ಎಂಬುದು ತನಿಖೆಯಿಂದ ಹೊರ ಬರಬೇಕಾಗಿದೆ.

ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ : ನವೀಕರಣ ಯೋಜನೆಗಳ ಹಸ್ತಾಂತರ

Posted On: 02-06-2024 11:14AM

ಕಾಪು : ಮೇಕ್ ಸಮ್ ವನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ಇವರ ಸಹಯೋಗದೊಂದಿಗೆ ಕರಂದಾಡಿ ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಸುಮಾರು 4.50 ಲಕ್ಷ ರೂ. ವೆಚ್ಚದ ನವೀಕರಣ ಕಾಮಗಾರಿಗಳನ್ನು ಶನಿವಾರ ಉದ್ಘಾಟಿಸಿ, ಹಸ್ತಾಂತರಿಸಲಾಯಿತು. ಕರಂದಾಡಿ ಶಾಲೆಯ ಶಿಕ್ಷಕ ರಕ್ಷಕ ಸಂಘದ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ, ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್, ಬಿಗ್ ಬಾಸ್ ವಿನ್ನರ್ ಮತ್ತು ಚಲನಚಿತ್ರ ನಟ ರೂಪೇಶ್ ಶೆಟ್ಟಿ ಶುಭಾಂಶಸನೆಗೈದರು. ಮೇಕ್ ಸಮ್ ವನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದ ಸದಸ್ಯ ಗುರುಪ್ರಸಾದ್ ಶೆಟ್ಟಿ ಬೈಲೂರು ತಮ್ಮ ತಂಡವು ಕಳೆದ ಏಳು ವರ್ಷಗಳಲ್ಲಿ ನಡೆಸಿದ ಕಾರ್ಯಕ್ರಮಗಳು, ಸಾರ್ವಜನಿಕ ಸಹಕಾರದ ಕುರಿತಾಗಿ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಲಯನ್ಸ್ ರೀಜನಲ್ ಚಯರ್‌ಮೆನ್ ವರುಣ್ ಶೆಟ್ಟಿ, ಅಧ್ಯಕ್ಷ ಉದಯ್ ಶೆಟ್ಟಿ, ಕಾರ್ಯದರ್ಶಿ ಲುತ್ಪುಲ್ಲಾ ಸಾಹೇಬ್ ನೇತೃತ್ವದಲ್ಲಿ ಕಾಪು ಲಯನ್ಸ್ ಕ್ಲಬ್ ವತಿಯಿಂದ ಶಾಲೆಗೆ ಬೆಂಚ್ ಮತ್ತು ಡೆಸ್ಕ್‌ಗಳಿಗಾಗಿ ೫೦ ಸಾವಿರ ರೂಪಾಯಿ ದೇಣಿಗೆಯನ್ನು ಹಸ್ತಾಂತರಿಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಪದ್ಮನಾಭ ಶ್ಯಾನುಭಾಗ್, ಮಜೂರು ಗ್ರಾ.ಪಂ. ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ಪುಸ್ತಕದ ದಾನಿ ಮಿಥುನ್ ರೈ, ಶಾಲಾ ಹಳೆ ವಿದ್ಯಾರ್ಥಿ ರಾಮದಾಸ್ ತಂತ್ರಿ, ಕಲ್ಪವೃಕ್ಷ ಕನ್ನಡ ಶಾಲೆ ತಂಡದ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್ ಕರಂದಾಡಿ, ಆಡಳಿತ ಸಮಿತಿ ಸದಸ್ಯರಾದ ಶಶಿಶೇಖರ ಭಟ್, ನಾಗಭೂಷಣ್ ರಾವ್, ಮುಖ್ಯೋಪಾಧ್ಯಾಯ ಆರ್.ಎಸ್. ಕಲ್ಲೂರ, ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ, ರಂಗ ನಟರಾದ ಪ್ರಸನ್ನ ಶೆಟ್ಟಿ ಬೈಲೂರು, ಶರತ್ ಉಚ್ಚಿಲ, ಸಂದೀಪ್ ಶೆಟ್ಟಿ, ಮರ್ವಿನ್ ಶಿರ್ವ ಉಪಸ್ಥಿತರಿದ್ದರು. ಕರಂದಾಡಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ಪ್ರಸ್ತಾವನೆಗೈದರು. ಶಿಕ್ಷಕಿಯರಾದ ಹರಿಣಾಕ್ಷಿ ಸ್ವಾಗತಿಸಿದರು. ಸತ್ಯವತಿ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.ಅನಿತಾ ಹೆಗ್ಡೆ ವಂದಿಸಿದರು.

ಕಾಪು : ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ತಂಬಾಕು ಮುಕ್ತ ದಿನಾಚರಣೆ

Posted On: 31-05-2024 05:28PM

ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಸೈಟ್ಸ್-ಗೈಡ್ಸ್ ಎನ್.ಸಿ.ಸಿ.ವಿದ್ಯಾರ್ಥಿಗಳ ನೇತೃತ್ವದಲ್ಲಿ ತಂಬಾಕು ಮುಕ್ತ ದಿನಾಚರಣೆಯನ್ನು ಆಚರಿಸಲಾಯಿತು.

ಪ್ರಾಂಶುಪಾಲರಾದ ಎಂ.ನೀಲಾನಂದ ನಾಯ್ಕ ಇವರು ತಂಬಾಕು ಪದಾರ್ಥಗಳನ್ನು ಉರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗೇಬ್ರಿಯಲ್ ಮಸ್ಕರೇನಸ್ ಇವರು ತಂಬಾಕು ಪದಾರ್ಥದ ಸೇವನೆಯು ಜನರ ದೇಹವನ್ನು ದಹಿಸುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ತಂಬಾಕಿನಂತಹ ಅಮಲು ಪದಾರ್ಥಗಳಿಂದ ದೂರವಿದ್ದು ತನ್ನ ಪರಿಸರವನ್ನು ಕೂಡಾ ಆರೋಗ್ಯದಾಯಕವಾಗಿರಲು ಪ್ರಯತ್ನಿಸಬೇಕು ಎಂಬ ಕಿವಿಮಾತನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಸೈಟ್ಸ್-ಗೈಡ್ಸ್ ಶಿಕ್ಷಕಿಯರಾದ ವೀಣಾ ನಾಯಕ್, ವಾಣಿ, ಹಾಗೂ ಶಿಕ್ಷಣ ಸಂಯೋಜಕರಾದ ಶಿವಣ್ಣ ಬಾಯಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರೀನಿಕೇತ್ ಬಾಯಾರ್ ಸ್ವಾಗತಿಸಿದರು. ಮನ್ವಿತಾ ಕಾರ್ಯಕ್ರಮ ನಿರೂಪಿಸಿದರು. ಆನಂದ್ ಸಿಂಗ್ ವಂದಿಸಿದರು.

ಉಚ್ಚಿಲ : ಸರಸ್ವತಿ ಮಂದಿರ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ; ರಾಜ್ಯಕ್ಕೆ  5ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿಗೆ ಸನ್ಮಾನ

Posted On: 31-05-2024 05:21PM

ಉಚ್ಚಿಲ : ಸರಸ್ವತಿ ಮಂದಿರ ಶಾಲೆ, ಉಚ್ಚಿಲ ಇದರ 2024-25 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಉದ್ಘಾಟನೆ ಶುಕ್ರವಾರ ಶಾಲಾ ಕಲಾ ವೇದಿಕೆಯಲ್ಲಿ ಜರಗಿತು. ಕಾರ್ಯಕ್ರಮ ಉದ್ಘಾಟಿಸಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಸನ್ಮಾನ : ಎಸ್‌ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ  5ನೇ ರ‍್ಯಾಂಕ್, ಉಡುಪಿ ಜಿಲ್ಲಾ ಕನ್ನಡ ಮಾಧ್ಯಮ ಶಾಲೆಗೆ ಪ್ರಥಮ ಸ್ಥಾನ ಪಡೆದ ಶಾಲಾ ವಿದ್ಯಾರ್ಥಿ ಸಮರ್ಥ್‌ ಆರ್‌ ಜೋಷಿಯವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್, ಶಿಲ್ಪಾ ಗಂಗಾಧರ ಸುವರ್ಣ, ಶಾಲಾ ಮುಖ್ಯೋಪಾಧ್ಯಾಯರಾದ ಬಾಬುರಾಯ ಆಚಾರ್ಯ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ವೈ, ಪ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಆಶಾ ದಿನೇಶ್‌ ಸುವರ್ಣ, ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಕಲಾವತಿ ಆಚಾರ್ಯ, ಸಹ ಶಿಕ್ಷಕರು, ಗ್ರಾಪಂ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ವಿಜಯಲಕ್ಷ್ಮೀ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್‌ ಕುಲಾಲ್‌ ವಂದಿಸಿದರು.