Updated News From Kaup
ಕಾಪು : ರೈಲ್ವೆ ಕಾಮಗಾರಿಗೆ ಅಡಚಣೆ ಉಂಟಾಗಿ ದೈವದ ಮೊರೆ ಹೋಗಿದ್ದ ಗುತ್ತಿಗೆದಾರ
Posted On: 21-04-2020 03:50PM
ಕಾಪು, ಪಾಂಗಾಳ, ಇನ್ನಂಜೆ ಮತ್ತು ಶಂಕರಪುರ ಪ್ರದೇಶಗಳ ಸಂಗಮ ಸ್ಥಾನವಾಗಿರುವುದು ಮಂಡೇಡಿ. ಆಗ್ನೇಯ ದಿಕ್ಕಿನಲ್ಲಿ ಉಡುಪಿ ಅಷ್ಟ ಮಠಗಳಿಗೆ ಸಂಬಂಧಿಸಿರುವ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಮಡುಂಬು ಶ್ರೀ ಬ್ರಹ್ಮಲಿಂಗೇಶ್ವರ ಆಲಡೆ, ದಕ್ಷಿಣ ದಿಕ್ಕಿನಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ, ನೈಋತ್ಯ ದಿಕ್ಕಿನಲ್ಲಿ ಕಾಪು ಶ್ರೀ ಜನಾರ್ಧನ ದೇವಸ್ಥಾನ ಮತ್ತು ಮೆರೆಯುತ್ತಿರುವ ಲೋಕಮಾತೆ ಕಾಪು ಶ್ರೀ ಮಾರಿಯಮ್ಮನ ದೇವಸ್ಥಾನಗಳು ಮತ್ತು ಪಶ್ಚಿಮ ದಿಕ್ಕಿನಲ್ಲಿ ಪಾಂಗಾಳ ಶ್ರೀ ಜನಾರ್ಧನ ದೇವರ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಆಲಡೆಗಳ ಸಮುದಾಯ, ಇವೆಲ್ಲದರ ನಡುವೆ ಕಂಗೊಳಿಸುತ್ತಿರುವ 'ಮಂಡೇಡಿ ಶ್ರೀ ಕೊರತಿ ಮತ್ತು ಪಂಚದೈವ ದೈವಸ್ಥಾನ' ಮಂಡೇಡಿಯ ಗದ್ದೆ ಸಾಲುಗಳ ರಮಣೀಯ ವಾತಾವರಣದಲ್ಲಿ ಭಕ್ತರ ಅಭೀಷ್ಟೆಗಳನ್ನು ಈಡೇರಿಸುತ್ತಿರುವ ಶ್ರೀ ಕೊರತಿ ಮತ್ತು ಪಂಚದೈವಕ್ಕೊಂದು ಇತಿಹಾಸವಿದೆ. ಶ್ರೀ ಕ್ಷೇತ್ರವು ಹಿಂದೊಂದು ಕಾಲದಲ್ಲಿ ಜೈನ ರಾಜಾಶ್ರಯದಿಂದ ಮೆರೆದಿತ್ತೆಂದು ಬಿದ್ದಿರುವ ಕಲೆಗಳ ಕುರುಹುಗಳು ಹೇಳುತ್ತವೆ. ಮತ್ತು ಆ ಕಾಲದಲ್ಲಿ ದೈನಂದಿನ ಪೂಜೆಗಳು, ವಿವಿಧ ಸೇವೆಗಳು, ನೃತ್ಯ ಸೇವೆಗಳು ನಿರಂತರವಾಗಿ ನಡೆಯುತ್ತಿದ್ದವು. ನಾಗದೇವರು, ರಕ್ತೇಶ್ವರಿ, ಪಂಜುರ್ಲಿ, ಬಬ್ಬುಸ್ವಾಮಿ, ಗುಳಿಗ ಮತ್ತು ನೀಚ ಇತ್ಯಾದಿ ಪರಿವಾರ ಶಕ್ತಿಗಳ ಕೇಂದ್ರವಾಗಿದ್ದವು. ಈಶ್ವರನು ಕಿರಾತನ ರೂಪದಲ್ಲಿ ಬೇಟೆಯಾಡಲು ಭೂಲೋಕಕ್ಕೆ ಬಂದಾಗ ಪಾರ್ವತಿಯು ಕೊರತಿಯ ರೂಪದಲ್ಲಿ ಆತನ ಬೇಟೆಯಾಟವನ್ನು ವೀಕ್ಷಿಸಲು ಭೂಲೋಕಕ್ಕೆ ಬಂದಿದ್ದಾಳೆಂದು ಪುರಾಣ ಹೇಳುತ್ತದೆ. ಕಾಲ ಉರುಳಿದಂತೆ ರಾಜವಂಶಗಳು ನಾಶವಾದವು. ಜನರು ದೇವರು ಮತ್ತು ದೈವಗಳ ಪೂಜಾ ಪುರಸ್ಕಾರಗಳನ್ನು ನಿರ್ಲಕ್ಷಿಸಿದರು. ಆಗ ಇಡಿ ಊರಿನಲ್ಲಿ ತೊಂದರೆಗಳುಂಟಾದವು. ಆ ಕಾಲದಲ್ಲಿ ಊರಿನ ಪ್ರಮುಖ ಬ್ರಾಹ್ಮಣರ ಮನೆಯ ಹಿರಿಯರ ಮುಂದಾಳತ್ವದಲ್ಲಿ ಊರಿನ ಜನರೊಂದಿಗೆ ಕೂಡಿ ಶ್ರೀ ಕೊರತಿ ಮತ್ತು ಪಂಚದೈವಗಳ ದೈವಸ್ಥಾನವನ್ನು ಪುನಃ ನಿರ್ಮಿಸಿ ಜೀರ್ಣೋದ್ದಾರ ಮಾಡಿದ್ದರು, ಅನೇಕ ವರ್ಷಗಳ ನಂತರ ಭಾರತ ಸರಕಾರದ ಆದೇಶದ ಪ್ರಕಾರ ರೈಲು ಮಾರ್ಗವು ಶ್ರೀ ಕೊರತಿ ಮತ್ತು ಪಂಚದೈವ ದೈವಸ್ಥಾನದ ಜಾಗದಲ್ಲೇ ಬಂದ ಕಾರಣ ಗುಡಿಯನ್ನು ತೆಗೆಯಬೇಕಾಯಿತು, ಈ ಸಂದರ್ಭದಲ್ಲಿ ರೈಲ್ವೆ ಗುತ್ತಿಗೆದಾರನಿಗೆ, ಅವರ ಕೂಲಿಗಾರರಿಗೆ ಮತ್ತವರ ಯಂತ್ರಗಳಿಗೆ ತುಂಬಾ ಅಡಚಣೆಯುಂಟಾಗಿ ಕಾಮಗಾರಿ ಕೆಲಸವು ಮುಂದೆ ಸಾಗಲಿಲ್ಲ. ಇದಕ್ಕೆ ದೈವಗಳ ಶಕ್ತಿಯೇ ಕಾರಣ ಎಂದು ತಿಳಿದುಬಂತು. ಆಗ ಗುತ್ತಿಗೆ ದಾರರು ಎಲ್ಲರನ್ನು ಕರೆದು ದೈವಗಳ ಶಿಲೆಗೆ ಕೈ ಮುಗಿದು ಪ್ರತ್ಯೇಕ ಗುಡಿ ಕಟ್ಟಲು ಸಹಾಯ ನೀಡುವ ಆಶ್ವಾಸನೆಯಿತ್ತರು. ಈ ಸಂದರ್ಭದಲ್ಲಿ ಕಂಬೊಲಿ ಮನೆಯ ದಿ. ಮೋನಪ್ಪ ಶೆಟ್ರ ಕುಟುಂಬಿಕರು ತಮ್ಮ ನಿಸ್ವಾರ್ಥ ಮನಸಿನಿಂದ ತಮ್ಮ ಸ್ವಂತ ಜಾಗದಲ್ಲಿ ದೈವಸ್ಥಾನ ಕಟ್ಟಲು ಅವಕಾಶ ಮಾಡಿ ಸ್ಥಳವನ್ನು ದಾನ ಮಾಡಿದರು, ಊರಿನಿಂದ ಒಂದನೇ ಬ್ರಾಹ್ಮಣರ ಮನೆಯವರ ಧನಸಹಾಯದಿಂದ ಊರಿನವರೆಲ್ಲರ ಸೇವೆಯಿಂದ ಮತ್ತು ರೈಲ್ವೆ ಗುತ್ತಿಗೆದಾರ ನೆರವಿನಿಂದ ಹೊಸ ಗುಡಿಗಳನ್ನು ಕಟ್ಟಿ 1994 ರಲ್ಲಿ ಶ್ರೀ ಕೊರತಿ ಮತ್ತು ಪಂಚದೈವ ದೈವಸ್ಥಾನದ ದೈವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಜೀರ್ಣೋದ್ದಾರ ಮಾಡಿದ್ದರು. ಪ್ರಸ್ತುತ ದೈವಸ್ಥಾನವು ಶಿತಿಲಗೊಂಡಿದ್ದು ಪುನಃ "ನವೀಕರಣ" ಪಡಿಸುವ ಬಗ್ಗೆ 2010 ರ ನೇಮೋತ್ಸವದಲ್ಲಿ ಪರಿವಾರ ದೈವಗಳ ನುಡಿಗಳ ಅನುಸಾರ ತಾಂಬೂಲರೂಡ ಪ್ರಶ್ನೆಯನ್ನು ಇಟ್ಟಾಗ ಸಾನಿಧ್ಯದಲ್ಲಿ ದೈವಗಳು ಅಸಮಾಧಾನವಾಗಿವೆ ಎಂದು ತಿಳಿದು ಬಂತು, ಗುಡಿಗಳ ವಿಂಗಡಣೆ ಮತ್ತು ಕೆಲವೊಂದು ಪ್ರಾಯಶ್ಚಿತವನ್ನು ಮಾಡಿ ಪುನಃ ಜೀರ್ಣೋದ್ದಾರ ಕಾರ್ಯವನ್ನು ಮಾಡಿದರೆ ಶ್ರೀ ಕ್ಷೇತ್ರ ಬೆಳಗುತ್ತದೆ ಎಂದು ತಿಳಿದು ಬಂದ ಪ್ರಕಾರ ಆಡಳಿತ ಮಂಡಳಿ ಕಾರ್ಯಪ್ರವೃತರಾಗಿದೆ. ಇಲ್ಲಿ ಐದು ವರ್ಷಕ್ಕೊಮ್ಮೆ ಕೊರತಿ ಮತ್ತು ಪಂಚದೈವಗಳ ನೇಮೋತ್ಸವ ನಡೆಯುತ್ತದೆ.. ಕೊರತಿ ಮತ್ತು ಪಂಚ ದೈವಗಳಿಗೆ ಹಲವಾರು ಹರಕೆಗಳು ಬಾಕಿ ಇದ್ದು, ಇನ್ನು ಕೂಡ ಹರಕೆಗಳು ಬರುತ್ತಿವೆ ಅಂದರೆ ಇಲ್ಲಿ ಭಕ್ತರ ಇಷ್ಟಾರ್ಥಗಳು ನೆರೆವೇರುತ್ತಿವೆ. ಇಲ್ಲಿರುವ ಹಿರಿಯರಿಗೆ ಇಲ್ಲಿನ ಶಕ್ತಿಯ ಅನುಭವವಾಗಿವೆ.. ಮತ್ತು ಇಲ್ಲಿ ನಡೆಯುವ ಕಾರಣಿಕಗಳು ಇದಕ್ಕೆ ಸಾಕ್ಷಿಯಾಗಿವೆ..
ಆಶಾಕಾರ್ಯಕರ್ತೆಯರಿಗೆ ಶಂಕರಪುರ ಸಾಯಿಬಾಬಾ ಮಂದಿರದಲ್ಲಿ ಗೌರವರ್ಪಣೆ
Posted On: 21-04-2020 12:55PM
ದ್ವಾರಕಾಮಯಿ ಶ್ರೀ ಸಾಯಿಬಾಬಾ ಮಂದಿರ ಶಂಕರಪುರ ಉಡುಪಿ ಇಲ್ಲಿ ಆಶಾ ಕಾರ್ಯಕರ್ತೆ ಯರಿಗೆ ಗೌರವ ಅರ್ಪಣೆ ಕಾರ್ಯಕ್ರಮ ಜರಗಿತು. ಶಂಕರಪುರದ ದ್ವಾರಕಾಮಯಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಕುರ್ಕಾಲು, ಮೂಡಬೆಟ್ಟು, ಏಣಗುಡ್ಡೆ, ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ಮತ್ತು ದಿನಬಳಕೆಯ ಸಾಮಾಗ್ರಿಗಳನ್ನು ನೀಡಲಾಯಿತು. "ಕರೋನಾ ವೈರಸ್ ಹರಡುವ ಬಗ್ಗೆ ಗ್ರಾಮದ ಪ್ರತಿ ಮನೆಗಳಿಗೆ ಬೇಟಿ ನೀಡಿ ಜಾಗ್ರತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನಮ್ಮ ಮಂದಿರದಿಂದ ಗೌರವ ಅರ್ಪಣೆ ಮಾಡುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುವ ಅವಕಾಶ ಇದಾಗಿದೆ" ಎಂಗು ಗುರೂಜಿ ಸಾಯಿಈಶ್ವರ್ ಈ ಸಂದರ್ಭದಲ್ಲಿ ತಿಳಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಸ್ಮೀತಾ ಪ್ರವೀನ್, ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯರು ಅಶೋಕ್ ಭಟ್ , ಟ್ರಸ್ಟ್ ಅಧ್ಯಕ್ಷರಾದ ವಿಶ್ವನಾಥ ಸುವರ್ಣ, ಶಿಕ್ಷಕ ಅಮೊಕೋಂಡ, ವಿಜಯ್ ಕುಂದರ್ ಸತೀಶ್ ದೇವಾಡಿಗ, ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
ಇನ್ನಂಜೆ ನಾರಾಯಣ ಗುರು ಮಂದಿರದ ಪ್ರತಿಷ್ಠಾ ವರ್ಧಂತ್ಯೋತ್ಸವ ರದ್ದು
Posted On: 21-04-2020 08:06AM
ತಾ. 29/04/2020 ರಂದು ನಡೆಯಬೇಕಿದ್ದ ಇನ್ನಂಜೆಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ 3ನೇ ವರ್ಷದ ಪ್ರತಿಷ್ಠಾ ವರ್ಧಂತ್ಯೋತ್ಸವ ವನ್ನು ಕೊರೋನಾ ವೈರಸ್ ಎಂಬ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸರ್ಕಾರದ ನಿರ್ದೇಶನದ ಪ್ರಯುಕ್ತ ಲಾಕ್ ಡೌನ್ ಇರುವ ಕಾರಣ ರದ್ದು ಪಡಿಸಲಾಗಿದೆ. ಪ್ರಕಟಣೆ ಬಿಲ್ಲವ ಸೇವಾ ಸಂಘ (ರಿ.) ಇನ್ನಂಜೆ
ನಿಯಮ ಉಲಂಘನೆಯನ್ನು ಪ್ರಶ್ನಿಸಿದ ಶಿರ್ವ ಗ್ರಾ.ಪಂ ಅಧ್ಯಕ್ಷೆಗೆ 'ರೌಡಿಸಂ ಪಟ್ಟ'
Posted On: 19-04-2020 10:15PM
ಶಿರ್ವ.ಎ, 19 : ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ವಾರಿಜಾ ಪೂಜಾರ್ತಿಯವರು ತಮ್ಮ ಗ್ರಾಮದಲ್ಲಿ ಅಪರಿಚಿತ ಮೂರು ಕಾರುಗಳು ಸಂಚರಿಸುತ್ತಿರುವುದನ್ನು ಗಮನಿಸಿ ತಡೆದು ವಿಚಾರಿಸಿದ ಬಗ್ಗೆ 'ಅದ್ಯಕ್ಷೆಯ ರೌಡಿಸಂ' ಎಂಬ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವವರ ಬಗ್ಗೆ ಶಿರ್ವ ಪಂ.ಅದ್ಯಕ್ಷೆ ವಾರಿಜಾ ಪೂಜಾರ್ತಿ ಬೇಸರ ವ್ಯಕ್ತಪಡಿಸಿದ್ದಾರೆ ಮತ್ತು ಸ್ಪಷ್ಟನೆ ನೀಡಿದ್ದಾರೆ. ತಪ್ಪು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಚಿತ್ರ ಹಾಗೂ ವೀಡಿಯೊಗಳ ಬಗ್ಗೆ ಸ್ಪಷ್ಟನೆ ನೀಡಿರುವ ವಾರಿಜಾ ಪೂಜಾರ್ತಿಯವರು, ಇಂದು ಏಪ್ರಿಲ್ 19 ಬೆಳಿಗ್ಗೆ ಸುಮಾರು 11:00 ರ ಹೊತ್ತಿಗೆ ಗ್ರಾಮ.ಪಂ.ಅಧ್ಯಕ್ಷೆ ತನ್ನ ವಾರ್ಡ್ ಹಾಗು ತನ್ನ ಮನೆಯ ಮುಂದಿನ ರಸ್ತೆಯಲ್ಲಿ ಮೂರು ಅಪರಿಚಿತ ಕಾರುಗಳು ಹಾದು ಹೋಗಿರುವುದನ್ನು ಗಮನಿಸಿದರು, ಸ್ವಲ್ಪ ಸಮಯದ ನಂತರ ಅದೇ ರಸ್ತೆಯಲ್ಲಿ ಮೂರು ಕಾರುಗಳು ವಾಪಾಸು ಬಂದಾಗ ಗ್ರಾಮದ ಕೋವಿಡ್ ಟಾಸ್ಕ್ ಫೋರ್ಸಿನ ಅಧ್ಯಕ್ಷಳೂ ಆಗಿರುವ ಅದ್ಯಕ್ಷರು ಕಾರುಗಳನ್ನು ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ, ಮೂರು ವಾಹನಗಳಲ್ಲಿದ್ದ 10 ಮಂದಿ ನಾವು ವಿಶ್ವಬ್ರಾಹ್ಮಣ ಸಂಘದವರು ಪದ್ಮಾ ಆಚಾರ್ಯ ಅವರ ಮನೆಗೆ ಪರಿಹಾರ ಸಾಮಾಗ್ರಿ ಕಿಟ್ ನೀಡಲು ಹೋಗಿದ್ದಾಗಿ ತಿಳಿಸಿದರು. ಕಿಟ್ ವಿತರಿಸಲು ಬಂದವರ ಬಳಿ ಸಮಯ ಮತ್ತು ವ್ಯಾಪ್ತಿ ಮೀರಿ ಸಂಚರಿಸಬಹುದಾದ ಯಾವ ಪಾಸ್ ಗಳೂ ಇರಲಿಲ್ಲ. ಶಿರ್ವ ಪಂಚಾಯತಿನ ಅದೇ ವಾರ್ಡಿನ ಮತ್ತೊಬ್ಬ ಸದಸ್ಯರಾದ ಶ್ರೀ ಗೋಪಾಲ ಆಚಾರ್ಯ ಅವರು ಸ್ಥಳೀಯ ವಿಶ್ವ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಆಗಿದ್ದು ಅವರಿಗೆ ವಾರಿಜಾರವರು ಫೋನ್ ಮಾಡಿ ವಿಚಾರಿಸಿದಾಗ ಅವರಿಗೆ ಈ ಕುರಿತು ಯಾವ ಮಾಹಿತಿಯೂ ಇರಲಿಲ್ಲ.ಅವರನ್ನು ತಕ್ಷಣ ಸ್ಥಳಕ್ಕೆ ಬರುವಂತೆ ತಿಳಿಸಿದರು. ಸ್ಥಳಕ್ಕೆ ಪಂ.ಸದಸ್ಯ ಗೋಪಾಲ್ ಆಚಾರ್ಯ ಬಂದು ಕಟಪಾಡಿ ವಿಶ್ವಕರ್ಮ ಯುವ ಸಂಘಟನೆಯವರಲ್ಲಿ ಮಾತನಾಡಿ ತಮ್ಮ ಸಮಾಜದ ಬಡವರ ಮನೆಗಳಿಗೆ ಕಿಟ್ ವಿತರಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ಅವರನ್ನು ಮುಂದುವರಿಯಲು ತಿಳಿಸಲಾಯಿತು. "ಬಡವರ ಮನೆಗೆ ಅಕ್ಕಿಯನ್ನು ವಿತರಿಸುವ ತಮ್ಮದು ಒಳ್ಳೆಯ ಕೆಲಸ ಆದರೆ ಒಂದು ಮನೆಗೆ ಒಂದು ಕಿಟ್ ನೀಡುವುದಕ್ಕೆ 3 ಕಾರಿನಲ್ಲಿ 10 ಜನ ,ನಿಯಮಗಳನ್ನು ಉಲ್ಲಂಘಿಸಿ ಹೋಗಬಹುದೇ? ನಮ್ಮಂತಹ ಹಳ್ಳಿಯ ಒಳಗೆ ಸ್ಥಳೀಯ ಅಧಿಕಾರಿಗಳಿಗೂ ತಿಳಿಸದೇ. P.D.O ಅಥವಾ V.A ಅಥವಾ ಸ್ಥಳೀಯ ವಿಶ್ವಕರ್ಮ ಸಂಘಕ್ಕೂ ಮಾಹಿತಿ ನೀಡದೆ ಅಪರಿಚಿತರಾದ ತಾವು ಜನರು ಭೀತಿಯಲ್ಲಿರುವ ಇಂತಹಾ ಸಂದರ್ಭದಲ್ಲಿ ಎಕಾಏಕಿ ಬರಬಹುದೇ?" ಎಂದು ವಾರಿಜಾ ಪೂಜಾರ್ತಿಯವರು ಈ ಸಮಯದಲ್ಲಿ ವಿಶ್ವಕರ್ಮ ಯುವ ಸಂಘದವರಲ್ಲಿ ಪ್ರಶ್ನಿಸಿರುವುದನ್ನೇ ಮುಂದಿಟ್ಟು ಅಸ್ಪಷ್ಟ ವೀಡಿಯೋವನ್ನು ಜಾಲತಾಣದಲ್ಲಿ ಹರಿದಾಡುವಂತೆ ಮಾಡಿರುತ್ತಾರೆ. ಕಿಟ್ ವಿತರಿಸಲು ಬಂದವರ ಬಳಿ ಸಮಯ ಮತ್ತು ವ್ಯಾಪ್ತಿ ಮೀರಿ ಸಂಚರಿಸಬಹುದಾದ ಯಾವ ಪಾಸ್ ಗಳೂ ಇರಲಿಲ್ಲ. ಘಟನೆಯ ಬಗ್ಗೆ ಮಾಹಿತಿ ಕೇಳಿದ ವರದಿಗಾರಲ್ಲಿ ವಾರಿಜಾ ಪೂಜಾರ್ತಿ ಮಾತನಾಡಿ "ನನ್ನ ವಾರ್ಡಿನಲ್ಲಿ ನಾನು ಮೊದಲ ಪರಿಹಾರ ಸಾಮಾಗ್ರಿಗಳ ಕಿಟ್ ನೀಡಿರುವುದೇ ಬಡವರಾದ ಪದ್ಮ ಆಚಾರ್ತಿಯವರ ಮನೆಗೆ.ಮಾತ್ರವಲ್ಲದೆ ನನ್ನ ವಾರ್ಡಿನಲ್ಲಿ ಇಂದಿನವರೆಗೆ ಒಟ್ಟು 28 ವಿಶ್ವಬ್ರಾಹ್ಮಣ ಮನೆಗಳಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದ್ದೇನೆ. ಕಿಟ್ ವಿತರಣೆಯು ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಆದರೆ ಉತ್ತಮ ಎಂಬ ಭಾವನೆಯಿಂದ ನನ್ನ ಮೂಲಕ ದಾನಿಗಳಿಂದ ಸಂಗ್ರಹಿಸಲಾದ ಕಿಟ್ ಗಳನ್ನೂ ಸಹಿತ ಪ್ರಚಾರ ಮಾಡದೆ ಅಧಿಕಾರಿಗಳ ಮೂಲಕವೇ ಹಂಚಿಕೆಯಾಗುವಂತೆ ನೋಡಿಕೊಂಡಿದ್ದೇನೆ. ಶಿರ್ವ ಗ್ರಾಮದ ವ್ಯಾಪ್ತಿಯಲ್ಲಿ ಈಗಾಗಲೇ ಇಂತಹಾ ನೂರಾರು ಕಿಟ್ ಗಳನ್ನು ಜಾತಿ ಮತ ನೋಡದೆ ಬಡ ಕುಟುಂಬಗಳಿಗೆ ಹಂಚಿದ್ದೇವೆ. ಪಂಚಾಯತ್ ಅಧ್ಯಕ್ಷೆ ಹಾಗು ಗ್ರಾಮ ಕಾವಲು ಸಮಿತಿಯ ಅಧ್ಯಕ್ಷೆ ಯಾಗಿದ್ದು ಸಾಮಾಜಿಕ ಜವಾಬ್ದಾರಿಯಿಂದ ಅನುಮತಿಯಿಲ್ಲದೆ ನಿಯಮ ಉಲ್ಲಂಘಿಸಿದವರನ್ನು ಪ್ರಶ್ನಿಸಿದ್ದು ಅಪರಾಧವೇ ಆಗಿದ್ದರೆ ಕ್ಷಮಿಸಿ.ಆದರೆ ತಮ್ಮ ನಡೆ ಇಂತಹಾ ಸಂಕಷ್ಟಕರ ಸನ್ನಿವೇಶದಲ್ಲಿ ಮನೆಯಲ್ಲಿ ವಿಶ್ರಮಿಸದೆ ಸಮಾಜ ಕಾರ್ಯವನ್ನು ಮಾಡುತ್ತಿರುವ ನನ್ನಂತಹ ಹಲವಾರು ಮಹಿಳಾ ಜನಪ್ರತಿನಿಧಿಗಳ ಆತ್ಮ ಸ್ಥೈರ್ಯವನ್ನು ಕುಂದಿಸದಂತೆ ನೋಡಿಕೊಳ್ಳಿ" ಎಂದು ಶಿರ್ವ ಪಂಚಾಯತ್ ಅಧ್ಯಕ್ಷೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಿರುವವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಅಶಕ್ತ ಬ್ರಾಹ್ಮಣರಿಗೆ ನೆರವಾಗುತ್ತಿರುವ 'ಬ್ರಾಹ್ಮಣ ಪ್ರಿಯ'
Posted On: 19-04-2020 08:45AM
ಉಡುಪಿ, ಎ. 19 : ಬ್ರಾಹ್ಮಣ ಪ್ರಿಯ ವಾಟ್ಸಾಪ್ ಗ್ರೂಪ್ ಮೂಲಕ ನಡೆದ ಅಭಿಯಾನ. ಉಡುಪಿ ಜಿಲ್ಲೆಯ 60 ಕ್ಕೂ ಅಧಿಕ ಅಶಕ್ತ ಬ್ರಾಹ್ಮಣ ಕುಟುಂಬಗಳಿಗೆ 1500 ರೂಪಾಯಿ ಮೌಲ್ಯದ ಕಿಟ್ ಗಳನ್ನು ಅನಂತ ಇನ್ನಂಜೆ ಇವರ ಮುಂದಾಳತ್ವದಲ್ಲಿ ಗ್ರೂಪಿನ ಸದಸ್ಯರ ಮುಖೇನ ಹಣ ಸಂಗ್ರಹಿಸಿ ವಸ್ತು ಖರೀದಿಸಿ ವಿತರಿಸಲಾಯಿತು. ಬ್ರಾಹ್ಮಣ ಪ್ರಿಯ ತಂಡವು ಎ. 12 ರಂದು ಮತ್ತು ಎ. 17 ರಂದು ಉಡುಪಿ ಜಿಲ್ಲೆಯ ಹಲವಾರು ಕಡೆಗಳಲ್ಲಿ ಆಶಕ್ತ ಬ್ರಾಹ್ಮಣ ಕುಟುಂಬವನ್ನು ಗುರುತಿಸಿ ದಿನ ಬಳಕೆಗೆ ಬೇಕಾಗುವ ಸಾಮಗ್ರಿಗಳು ಇರುವ ಕಿಟ್ ಗಳನ್ನು ವಿತರಿಸಿದ್ದರು. ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಬ್ರಾಹ್ಮಣ ಪ್ರಿಯ ತಂಡದ ಮುಖ್ಯಸ್ಥರಾದ ಅನಂತ ಇನ್ನಂಜೆ ಅವರು 'ದೇಹ ತೃಪಿಗಿಂತ ಆತ್ಮ ತೃಪ್ತಿಯಲ್ಲಿ ನಂಬಿಕೆ ಇಟ್ಟಿರುವ ನಾವು ಸಹಾಯ ಮಾಡುವಾಗ ಯಾವುದೇ ಫೋಟೋ ತೆಗೆದಿರುವುದಿಲ್ಲ' ಪ್ರತಿಯೊಬ್ಬರು ತಮ್ಮ ತಮ್ಮ ಕೈಲಾದಷ್ಟು ಹಣವನ್ನು ಹಾಕಿ ಕಿಟ್ ಯೋಗ್ಯವಾದ ಸ್ಥಳಕ್ಕೆ ತಲುಪವಂತೆ ಮಾಡಿದ್ದೇವೆ ಎನ್ನುವ ತೃಪ್ತಿ ನಮಗೆ ಇದೆ ಎಂದರು. ಉಡುಪಿ ಜಿಲ್ಲೆಯಲ್ಲಿ ಅಶಕ್ತ ಬಡ ಬ್ರಾಹ್ಮಣ ಕುಟುಂಬದ ಮಾಹಿತಿ ಇದ್ದರೆ ನಮಗೆ ತಿಳಿಸಿ ನಾವು ಶೀಘ್ರವಾಗಿ ಸ್ಪಂದಿಸುತ್ತೇವೆ ಮತ್ತು ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ ಎಂದು ಭರವಸೆಯನ್ನಿತ್ತರು. ಸಂಪರ್ಕಕ್ಕಾಗಿ : ಅನಂತ ಇನ್ನಂಜೆ - 9980654078 ಕಾರ್ತಿಕ್ ಇನ್ನಂಜೆ - 8861825435
ನಾಟಿವೈದ್ಯರಿಗೆ ಸರ್ಕಾರದ ಬೆಂಬಲದ ಅಗತ್ಯವಿದೆ - ಉಮೇಶ್ ಪ್ರಭು ಪಾಲಮೆ
Posted On: 18-04-2020 09:24AM
ತುಳುನಾಡ ಪಂಡಿತರು,ನಾಟಿ ವೈದ್ಯರು (ವ್ಯಕ್ತಿ ಪರಿಚಯ) ಪಂಡಿತ್ ಉಮೇಶ್ ಪ್ರಭು ಈ ನಮ್ಮ ತುಳುನಾಡು ಆಧುನೀಕರಣ ಹಾಗೂ ಅನ್ಯ ಸಂಸ್ಕೃತಿಯ ದಾಳಿಯಿಂದಾಗಿ ಇಂದು ನಮ್ಮ ಮೂಲ ಸತ್ವವು ನಶಿಸುತ್ತಾ ಬಂದಿದೆ.ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ಪ್ರತೀ ಒಂದು ಹಳ್ಳಿಯಲ್ಲಿ ನಾಟಿ ಮದ್ದು ನೀಡುವ ಪಂಡಿತರು ಅಥವಾ ಬೈದ್ಯರಿದ್ದರು. ಇವರು ಯಾವುದೇ ರೀತಿಯ ರೋಗಕ್ಕೆ ಮದ್ದು ನೀಡಿ ಜೀವ ಉಳಿಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ನಾಟಿವೈದ್ಯರ ಸಂಖ್ಯೆ ಬಹಳ ಕ್ಷೀಣಿಸುತ್ತಾ ಬಂದಿದೆ, ಕಾರಣ ಈಗಿನ ಯುವ ಜನಾಂಗಕ್ಕೆ ಇದರ ಮೇಲೆ ನಂಬಿಕೆ ಕಡಿಮೆಯಾಗಿದೆ. ಕುಡಿಯುವ ನೀರು, ಉಸಿರಾಡುವ ಗಾಳಿ ತಿನ್ನುವ ಆಹಾರ ಎಲ್ಲವೂ ವಿಷಯುಕ್ತವಾಗಿದೆ, ಅವಸರದ ಜೀವನದಲ್ಲಿ ಬೆಳಗ್ಗೆ ಜ್ವರ ಬಂದರೆ ಸಂಜೆಗೆ ಗುಣಮುಖರಾಗಬೇಕೆಂಬ ಹಂಬಲದಲ್ಲಿ ಇರುವ ಜನ ಇಂದು ಇಂಗ್ಲಿಷ್ ಮದ್ದನ್ನೇ ಅವಲಂಬಿಸಿದ್ದಾರೆ ಇದರಿಂದಾಗಿ ನಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಬೀಳುತ್ತದೆ. 90 ವರ್ಷ ಆಯುಷ್ಯದ ಮಾನವ 50 ವರ್ಷದಲ್ಲಿಯೇ ಬಗೆ ಬಗೆಯ ರೋಗಕ್ಕೆ ತುತ್ತಾಗಿ ಮರಣ ಹೊಂದುತ್ತಾನೆ. ಆದರೆ ನಾಟಿಮದ್ದು ನಿಧಾನಗತಿಯಲ್ಲಿ, ನಿಯಮಬದ್ಧ ಪಥ್ಯೆಯ ಮುಖಾಂತರ ಕ್ರಮ ಪ್ರಕಾರ ಮಾಡಿದರೆ ಯಾವುದೇ ರೋಗ ಸಂಪೂರ್ಣ ವಾಸಿಯಾಗುವುದಲ್ಲದೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ತುಳುನಾಡಿನಲ್ಲಿ ಮನೆ ಮನೆಯಲ್ಲಿ ಇದ್ದ ನಾಟಿ ವೈದ್ಯರು ಇಂದು ಅಲ್ಲೊಂದು ಇಲ್ಲೊಂದು ಎಂಬಂತೆ ಬಹು ಅಪರೂಪದಲ್ಲಿ ಕಾಣ ಸಿಗುತ್ತಾರೆ, ಅದರಲ್ಲೂ ಹೆಚ್ಚಿನವರು ವೃದ್ಧರೇ ಅವರನ್ನು ಅನುಸರಿಸಿ ಮುಂದುವರೆಸುವವರು ಬಹು ಕಡಿಮೆ. ತನ್ನ ಹಿರಿಯರು ಮಾಡುತ್ತಿದ್ದ ನಾಟಿವೈದ್ಯ ಪದ್ದತಿಯನ್ನು ತನ್ನ ಜೀವನದ ಒಂದು ಭಾಗವಾಗಿ ಅಳವಡಿಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ಜನಸೇವೆ ಮಾಡುತ್ತಾ ಬಂದಿರುವವರು ಶಿರ್ವದ ನೆರೆಯ ಪಾದೂರು ಗ್ರಾಮದ ಪಾಲಮೆಯ ಪಂಡಿತ್ ಉಮೇಶ್ ಪ್ರಭು, ಇವರು 1-03-1972 ರಲ್ಲಿ ಪಾಲಮೆ ನಡುಮನೆಯಲ್ಲಿ ದಿ ಪಂಡಿತ್ ಶ್ರೀನಿವಾಸ ಪ್ರಭು ಮತ್ತು ದಿ ವಸಂತಿ ಪ್ರಭು ದಂಪತಿಗಳ ಅಷ್ಟಮ ಪುತ್ರನಾಗಿ ಜನಿಸಿದರು. ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿಎ ಪದವಿಯನ್ನು ಪಡೆದು, ವಂಶ ಪಾರಂಪರ್ಯವಾಗಿ ಬಂದ ಕೃಷಿಯನ್ನು ಪ್ರಧಾನ ವೃತ್ತಿಯನ್ನಾಗಿಸಿ, ಸಹವೃತ್ತಿಯಾಗಿ ಬಂಟಕಲ್ಲಿನಲ್ಲಿ ರಿಕ್ಷಾ ಚಾಲಕರಾಗಿದ್ದಾರೆ ಮತ್ತು ನಾಟಿ ವೈದ್ಯ ಪಂಡಿತರಾಗಿದ್ದಾರೆ ಪಾರಂಪರಿಕ ಹಿನ್ನಲೆ : ಶಿರ್ವ ಹಾಗೂ ನೆರೆಹೊರೆಯ ಊರಲ್ಲಿ ಪಂಡಿತ್ ಎಂದಾಕ್ಷಣ ಗೋಚರಿಸುವುದು ಪಾಲಮೆ ಉಮೇಶ್ ಪ್ರಭು, ಇವರ ಮನೆತನ "ಪಂಡಿತ್"ಎಂದೇ ಪ್ರಸಿದ್ದಿ. ನಾಟಿವೈದ್ಯ ಪದ್ಧತಿ ಇವರಿಗೆ ವಂಶಪಾರಂಪರ್ಯವಾಗಿ ಬಂದದ್ದು, ಇವರ ಅಜ್ಜ ಪಂಡಿತ್ ಅನಂತ ಪ್ರಭು ನಂತರ ಇವರ ತಂದೆ ದಿ ಶ್ರೀ ಶ್ರೀನಿವಾಸ ಪ್ರಭು ನಾಟಿ ವೈದ್ಯರಾಗಿ ಮುಂದುವರೆದರು, ಇವರು ತನ್ನ ಜೀವನದ 40 ವರ್ಷಕ್ಕೂ ಹೆಚ್ಚು ಕಾಲ ಚಿಕಿತ್ಸೆ ನೀಡಿ ಅದೆಷ್ಟೋ ಜೀವಗಳನ್ನು ಉಳಿಸಿದ ಕೀರ್ತಿ ಇವರದ್ದು. ಇವರು ಕೃಷಿಯೊಂದಿಗೆ, ದೈವ ಮಧ್ಯಸ್ಥರಾಗಿ, ಅಡುಗೆ ಭಟ್ಟರಾಗಿ, ನಾಟಿ ವೈದ್ಯ ಚಿಕಿತ್ಸೆ ನೀಡುವ ಪಂಡಿತರಾಗಿ ಪ್ರಸಿದ್ದಿ ಪಡೆದಿದ್ದರು. ಪಶು ಚಿಕಿತ್ಸೆ, ಪಿತ್ತ ಕಾಮಲೆ, ಸರ್ಪ ಸುತ್ತು, ಬಾಣಂತಿ ಸಮಸ್ಯೆ, ಮಕ್ಕಳ ತೈಲ, ಸ್ತ್ರೀ ರೋಗ, ಮುಂತಾದ ಸಮಸ್ಯೆಗಳಿಗೆ, ರೋಗಿಗಳಿಗೆ, ಚಿಕಿತ್ಸೆ ನೀಡಿ ಗುಣ ಪಡಿಸುತ್ತಿದ್ದರು.ಬದುಕಲಾರದ ರೋಗಿಗಳನ್ನು ಬದುಕಿಸಿದ ಕೀರ್ತಿ ಇವರದ್ದು ಕಾಲ ಉರುಳಿ ಮುಂದೆ ಹೋದಂತೆ ಶ್ರೀನಿವಾಸ ಪ್ರಭು ಅವರು ವೃದ್ಧರಾಗಿ ದೃಷ್ಟಿ ಹೀನತೆ ಆದಾಗ ವಿಷ ಚಿಕಿತ್ಸೆ ಅಥವಾ ಯಾವುದೇ ಗಾಯವನ್ನು ಗುರುತಿಸಲಾಗದಾಗ ಉಮೇಶ್ ಪ್ರಭು ಅವರಿಗೆ ಸಹಾಯ ಮಾಡಿ ಗಾಯದ ಪ್ರಮಾಣವನ್ನು ಗುರುತಿಸಿ ಹೇಳುತ್ತಿದ್ದರು, ಮಾತ್ರವಲ್ಲದೆ ತನ್ನ ತಂದೆ ಕೊಡುವ ಮದ್ದಿನ ರೀತಿ ನೀತಿಯನ್ನು ಮೈಗೂಡಿಸಿಕೊಂಡರು, ಗಿಡಮೂಲಿಕೆಗಳ ಪರಿಚಯ ಪಡೆದು ನಾಟಿ ವೈದ್ಯ ಕಲಿತರು. 1996ರಲ್ಲಿ ಪಂಡಿತ್ ಶ್ರೀನಿವಾಸ ಪ್ರಭುಗಳ ದೈವಾಧೀನ ನಂತರ ಉಮೇಶ್ ಪ್ರಭು ಅವರು ತನ್ನ ಇಷ್ಟ ದೇವತೆ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನ ಅನುಗ್ರಹದಿಂದ ನಾಟಿವೈದ್ಯಕೀಯ ಪದ್ಧತಿಯನ್ನು ಮುಂದುವರೆಸಿದರು. ವಿಷ ಚಿಕಿತ್ಸೆ ಹಾಗೂ ಗಿಡಮೂಲಿಕೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಇವರು ಧರ್ಮಸ್ಥಳದ ಉಜಿರೆಯಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿದ್ದ ನಾಟಿ ವೈದ್ಯಕೀಯ ಕಮ್ಮಟಗಳಿಗೆ ಹೋಗಿದ್ದರು. ಶ್ರೀ ರವೀಂದ್ರನಾಥ ಐತಾಳ್ ರಿಂದ ವಿಷ ಚಿಕಿತ್ಸೆಯನ್ನು ಸಂಪೂರ್ಣವಾಗಿ ಕಲಿತರು, ಹಾವಿನ ತಜ್ಞ ಗುರುರಾಜ್ ಸನಿಲ್ ರಿಂದ ಹಾವಿನ ಪರಿಚಯದ ಬಗ್ಗೆ ಮಾಹಿತಿ ಪಡೆದರು. ಒಂದು ಕಾಲದಲ್ಲಿ ಮನೆಯ ವರೆಗೆ ರಸ್ತೆಯ ವ್ಯವಸ್ಥೆ ಇರಲಿಲ್ಲ, ಪಾದೂರು ಪಾಲಮೆಯಲ್ಲಿ ಒಂದೇ ಒಂದು ಹುಲ್ಲಿನ ಮನೆ ಇವರದ್ದಾಗಿತ್ತು, ಮಳೆಗಾಲದಲ್ಲಂತೂ ಕಿರು ಸೇತುವೆ ದಾಟಿ ಇವರ ಮನೆಗೆ ರೋಗಿಗಳು ಬರಬೇಕಿತ್ತು, ಯಾವುದೇ ಹೊತ್ತಲ್ಲೂ, ಯಾವುದೇ ರೋಗಿಗೂ ಬೇಧ ಭಾವ ಇಲ್ಲದೆ ಇವರು ಚಿಕಿತ್ಸೆ ನೀಡಿ ಗುಣಪಡಿಸುತ್ತಿದ್ದರು. 24 ವರ್ಷದಿಂದ ನಾಟಿವೈದ್ಯ ಚಿಕಿತ್ಸೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತವಾಗಿ ನೀಡಿರುವ ಇವರಿಗೆ ಚಿಕಿತ್ಸೆಗೆ ಸಹಾಯ ಮಾಡುವವರು ಇವರ ಹೆಂಡತಿ ಸತ್ಯವತಿ ಪ್ರಭು. ಗುಣಮಟ್ಟದ ವಿಷ ಚಿಕಿತ್ಸೆ, ಪಶು ಚಿಕಿತ್ಸೆ, ಪಿತ್ತಕಾಮಲೆ, ಸರ್ಪಸುತ್ತು, ಬಾಣಂತಿ ಸಮಸ್ಯೆ ಮುಂತಾದ ಚಿಕಿತ್ಸೆ ನೀಡಿ ನೂರಾರು ಜನರಿಗೆ ಆಪತ್ತಿನಲ್ಲಿ ಸಹಾಯ ಮಾಡಿದ್ದಾರೆ. ಇವರು ಕೊಡುವ ಮಕ್ಕಳ ತೈಲ ಬಹು ಬೇಡಿಕೆಯದ್ದು, ಇವರ ಕೈಗುಣದ ಪ್ರಭಾವ ಎಷ್ಟಿದೆ ಎಂದರೆ ಆಯುರ್ವೇದ ವೈದ್ಯರಿಗೂ ಇವರು ಚಿಕಿತ್ಸೆ ನೀಡಿ ಗುಣ ಪಡಿಸಿದ್ದಾರೆ. ಮನೆಯ ಒಳಗೆ ನುಗ್ಗಿದ ಹಾವನ್ನು ಗುರುತಿಸಿ ಹಿಡಿದು ಕಾಡಿಗೆ ಬಿಡುತ್ತಾರೆ, ರಸ್ತೆಯಲ್ಲಿ ವಾಹನದ ಚಕ್ರದಡಿ ಬಿದ್ದು ಸತ್ತ ಅದೆಷ್ಟೋ ಸರ್ಪಗಳ ಸಂಸ್ಕಾರವನ್ನು ತಾನೇ ಖುದ್ದಾಗಿ ಮಾಡಿದ್ದಾರೆ, ತನ್ನ ಮನೆಯ ಮುಂದೆ ಇರುವ ನಾಗ ಬನದಲ್ಲಿ ಆಯುರ್ವೇದಿಕ್ ಗಿಡಮೂಲಿಕೆಗಳ ಗಿಡಗಳನ್ನು ಸಂಗ್ರಹಿಸಿರುವ ಇವರು ಪಂಚಾಯತ್ ಮಟ್ಟದಲ್ಲಿ ಜನರಿಗೆ ನಾಟಿವೈದ್ಯಕೀಯದ ಬಗ್ಗೆ ಮಾಹಿತಿ ನೀಡುತ್ತಾರೆ. ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ನಾಟಿವೈದ್ಯಕೀಯ ಚಿಕಿತ್ಸೆ ಬಗ್ಗೆ ಮಾಹಿತಿ ನೀಡುತ್ತಾರೆ. ತನ್ನ ಜೀವನದ ಇದುವರೆಗೆ 27 ಸಲ ರಕ್ತದಾನ ಮಾಡಿ ಸಮಾಜದಲ್ಲಿ ಮಾದರಿಯಾಗಿದ್ದಾರೆ, ಹಲವಾರು ರೀತಿಯಲ್ಲಿ ತಮ್ಮಿಂದಾಗುವ ಜನಸೇವೆಯನ್ನು ನೀಡುತ್ತಾ ಬಂದಿರುವ ಇವರು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ, ಹಲವು ಸಂಘ ಸಂಸ್ಥೆಯ ಸದಸ್ಯರಾಗಿ ಸಂಘಟಕರಾಗಿ ಸಮಾಜದಲ್ಲಿ ಮಾರ್ಗದರ್ಶಕರಾಗಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಪ್ರೋತ್ಸಾಹಿಸಿದೆ. ಇವರ ಪ್ರಕಾರ ನಾಟಿ ವೈದ್ಯಕ್ಕೆ, ಅಥವಾ ತುಳುನಾಡ ಬೈದ್ಯ ಪದ್ದತಿಗೆ ಕಾನೂನಿನ ಬೆಂಬಲ ಅಗತ್ಯವಿದೆ, ವಿಷದ ಹಾವು ಕಚ್ಚಿದ ರೋಗಿಯನ್ನು ಆಸ್ಪತ್ರೆಯಲ್ಲಿ ಕೈಬಿಟ್ಟಾಗ ಕೊನೆಯ ಹಂತದವರೆಗೆ ತಮ್ಮ ಎಲ್ಲಾ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿ ಜೀವ ಉಳಿಸುವ ಕಾರ್ಯ ಮಾಡಿದ್ದಾರೆ. ನಾಟಿ ವೈದ್ಯರಿಗೆ ಸುರಕ್ಷೆ ಕಡಿಮೆಯಾಗಿದೆ, ಅವನತಿಯಲ್ಲಿರುವ ಅಲ್ಪ ಸ್ವಲ್ಪ ನಾಟಿವೈದ್ಯರಿಗೆ ಕಾನೂನಿನ ಅಥವಾ ಸರ್ಕಾರದ ಬೆಂಬಲ ಇದ್ದರೆ ಇನ್ನಷ್ಟು ಪರಿಣಾಮಕಾರಿಯಾದಂತಹ ಚಿಕಿತ್ಸೆ ನೀಡಬಹುದೆಂದು, ಮತ್ತು ನಾಟಿವೈದ್ಯ ಪದ್ಧತಿ ಉಳಿಯಬಹುದೆಂದು ಇವರ ಅಭಿಪ್ರಾಯ. ಬರಹ : ಅತಿಥ್ ಸುವರ್ಣ ಪಾಲಮೆ
ಲಾಕ್ಡೌನ್ ನಿಮಿತ್ತ ಇದುವರೆಗೆ ಬರೋಬ್ಬರಿ 15,000 ಊಟ ವಿತರಣೆ
Posted On: 17-04-2020 06:10PM
ಇನ್ನಂಜೆ, ಎ. 17 : ಇನ್ನಂಜೆ ಭಾಗದಲ್ಲಿ ಲಾಕ್ಡೌನ್ ಶುರುವಾದ ದಿನದಿಂದ 15,000 ಊಟ ವಿತರಣೆ ಮಡುಂಬು ವಿದ್ವಾನ್ ಕೆ.ಪಿ ಶ್ರೀನಿವಾಸ್ ತಂತ್ರಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಅನ್ನದಾನ ಮಾಡುತ್ತಿದ್ದು ಇದುವರೆಗೂ 15 ಸಾವಿರಕ್ಕೂ ಮಿಕ್ಕಿ ಆಹಾರ ತಯಾರಿಸಿ ಜನರಿಗೆ ಹಂಚಿದ್ದಾರೆ, ಇನ್ನಂಜೆ ಗ್ರಾಮದ ಮಡುಂಬು, ಮಂಡೇಡಿ, ಇನ್ನಂಜೆ, ಪಾಂಗಾಳ ಮತ್ತು ರಣಕೇರಿ, ಮಲ್ಲಾರ್ ಹಾಗೂ ಕಾರ್ಕಳ ತಾಲೂಕಿಗೂ ಕೂಡ ಪ್ರತಿನಿತ್ಯ 150 ಆಹಾರ ವಿತರಣೆಯಾಗುತ್ತಿದೆ. ಇಂದು ಉದ್ಯಾವರ ಭಾಗದ 80 ರಿಕ್ಷಾ ಚಾಲಕರ ಕುಟುಂಬಕ್ಕೆ 15 ದಿನಗಳಿಗೆ ಬೇಕಾಗುವಷ್ಟು ದೈನಂದಿನ ಬಳಕೆಯ ಆಹಾರ ಸಾಮಗ್ರಿ ವಿತರಣೆ. ಅನ್ನದಾನದ ನಡುವೆ ರಿಕ್ಷಾ ಚಾಲಕರು ಪಡುತ್ತಿರುವ ಕಷ್ಟವನ್ನು ಗಮನಿಸಿ 160ಕ್ಕೂ ಹೆಚ್ಚಿನ ರಿಕ್ಷಾ ಚಾಲಕರ ಕುಟುಂಬಕ್ಕೆ ದೈನಂದಿನ ಬಳಕೆಯ ಆಹಾರ ಸಾಮಗ್ರಿಯನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿದ್ದರು.. ನಿನ್ನೆ ಕಾಪು,ಕೈಪುಂಜಾಲು, ಶಂಕರಪುರ ಭಾಗದಲ್ಲಿ 100 ರಿಕ್ಷಾ ಚಾಲಕರ ಕುಟುಂಬಕ್ಕೆ ವಿತರಣೆ ಮಾಡಿದ್ದು ಇಂದು ಉದ್ಯಾವರದ ಕೊರಂಗ್ರಪಾಡಿ ಮತ್ತು ಪಿತ್ರೋಡಿಯಲ್ಲಿ ಸರಿಸುಮಾರು 80 ರಿಕ್ಷಾ ಚಾಲಕರ ಕುಟುಂಬಕ್ಕೆ 15 ದಿನಗಳಿಗೆ ಬೇಕಾಗುವಷ್ಟು ದಿನ ಬಳಕೆಯ ಆಹಾರ ಸಾಮಗ್ರಿಗಳನ್ನು ವಿತರಿಸಿದರು. ಇಂದು ಮಧ್ಯಾಹ್ನ ಕಾಪು ಭಾಗದ ಸುಮಾರು 25 ವಲಸೆ ಕಾರ್ಮಿಕರು ಇವರ ಮನೆಗೆ ಬಂದಿದ್ದು ಅವರಿಗೂ ಕೂಡ ದಿನ ಬಳಕೆಯ ಸಾಮಗ್ರಿಗಳನ್ನು ಒದಗಿಸಿದರು.. ಇಂದು ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಕಟಪಾಡಿ ಮತ್ತು ಕಾಪು ವಲಯದ ಉದಯವಾಣಿ ವರದಿಗಾರರಾದ ರಾಕೇಶ್ ಕುಂಜೂರು ಭೇಟಿ ನಿಡಿ ಇವರು ಮಾಡುತ್ತಿರುವ ದಾನಧರ್ಮಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ದೀಕ್ಷಾ ತಂತ್ರಿ, ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಾಲಿನಿ ಶೆಟ್ಟಿ ಇನ್ನಂಜೆ, ಸದಸ್ಯರಾದ ದಿವೇಶ್ ಶೆಟ್ಟಿ ಕಲ್ಯಾಲು, ಇನ್ನಂಜೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸ್ಥಳೀಯರಾದ ಸುರೇಶ್ ಶೆಟ್ಟಿ ಮಡುಂಬು, ಉಮೇಶ್ ಅಂಚನ್ ಮಡುಂಬು,ಸುಧಾಕರ್ ಶೆಟ್ಟಿ, ವರುಣ್ ಶೆಟ್ಟಿ, ಸುನೀಲ್ ಸಾಲ್ಯಾನ್, ಪೃಥ್ವಿರಾಜ್, ಸಚಿನ್, ಪದ್ಮಿನಿ ಭಟ್, ಕಾರ್ತಿಕ್ ಶೆಟ್ಟಿ ಹಾಗೂ ಮತ್ತಿತರು ಉಪಸ್ಥಿತರಿದ್ದರು. ಕಾಪು, ಶಂಕರಪುರ, ಇನ್ನಂಜೆ, ಉದ್ಯಾವರ ರಿಕ್ಷಾ ಚಾಲಕರು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಧನ್ಯವಾದಗಳನ್ನು ತಿಳಿಸಿದರು
ಕೇಂದ್ರಕ್ಕೆ ಹಾಗೂ ರಾಜ್ಯಕ್ಕೆ ಪರಿಹಾರ ನಿಧಿಯಾಗಿ 5 ಲಕ್ಷ ರೂಪಾಯಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ
Posted On: 16-04-2020 09:59PM
ಉಡುಪಿ, ಎ. 16 : ಕೋರೋನ ವೈರಸ್ Covid 19 ಎಂಬ ಈ ಮಹಾಮಾರಿ ದೇಶಾದ್ಯಂತ ವ್ಯಾಪಕವಾಗಿ ಹರಡಿದ್ದು ಮನುಕುಲಕ್ಕೆ ಸಂಕಷ್ಟವನ್ನು ಉಂಟುಮಾಡಿದೆ ಈ ನಿಟ್ಟಿನಲ್ಲಿ ಪರಿಹಾರ ಹಾಗೂ ಮುಂಜಾಗೃತ ಕ್ರಮಗಳು ಸಾಗರೋಪಾದಿಯಲ್ಲಿ ಸಾಗುತ್ತಿವೆ ಈ ದಿನ ಕೋರೋನ ವೈರಸ್ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ2:50 ಲಕ್ಷ ರೂಪಾಯಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ 2:50 ಲಕ್ಷ ರೂಪಾಯಿ ಚೆಕ್ಕನ್ನು ದೇಣಿಗೆ ರೂಪವಾಗಿ ಖ್ಯಾತ ವೈದ್ಯರಾದ ನಾಗಾನಂದ ಭಟ್ ಧರ್ಮ ಪತ್ನಿಯಾದ ಸುವರ್ಣ ಭಟ್ ಹಾಗೂ ಮಗನಾದ ಆಶ್ಲೇಷ ಭಟ್ ಅಂಬಲಪಾಡಿ ಇವರು ಉಡುಪಿಯ ಶಾಸಕರಾದ ಕೆ ರಘುಪತಿ ಭಟ್ ಇವರ ಸಮ್ಮುಖದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಜಿ ಜಗದೀಶ್ ರವರಿಗೆ ಹಸ್ತಾಂತರಿಸಿದರು. ಈ ಮಹತ್ತರ ಕೊಡುಗೆಗೆ ಶಾಸಕರಾದ ಕೆ ರಘುಪತಿ ಭಟ್ ಇವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ವಿಶೇಷವಾದ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.
ಉಡುಪಿ , ಎ. 16 : 160 ರಿಕ್ಷಾ ಚಾಲಕರ ಕುಟುಂಬಕ್ಕೆ ನೇರವಾಗುತ್ತಿರುವ ದಾನಿ
Posted On: 16-04-2020 09:10PM
ಮಡುಂಬು ವಿದ್ವಾನ್ ಕೆ.ಪಿ.ಶ್ರೀನಿವಾಸ್ ತಂತ್ರಿಗಳು ಕೊರೊನ ಲಾಕ್ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು, ಕೈಪುಂಜಾಲು, ಕೊರಂಗ್ರಪಾಡಿ, ಪಿತ್ರೋಡಿ, ಶಂಕರಪುರ, ಇನ್ನಂಜೆ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಇರುವ ರಿಕ್ಷಾ ಚಾಲಕರನ್ನು ಗುರುತಿಸಿ. 160 ರಿಕ್ಷಾ ಚಾಲಕರ ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಕಾಪು, ಶಂಕರಪುರ ಭಾಗದಲ್ಲಿ ಇಂದು ವಿತರಣೆ ಮಾಡಿದ್ದು, ಉದ್ಯಾವರ ಭಾಗದಲ್ಲಿ ನಾಳೆ ವಿತರಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ ಮಡುಂಬು, ಉಮೇಶ್ ಅಂಚನ್ ಮಡುಂಬು, ಸುನೀಲ್, ವರುಣ್, ದೀಪಕ್,ಪೃಥ್ವಿರಾಜ್ ಮತ್ತು ಕಾರ್ತಿಕ್ ಶೆಟ್ಟಿ ಉಪಸ್ಥಿತರಿದ್ದರು.
ಉಂಡಾರು ಉತ್ಸವದ ಪ್ರಯುಕ್ತ 750 ಊಟ ವಿತರಣೆ
Posted On: 16-04-2020 07:38PM
ಇನ್ನಂಜೆ, ಎ. 16 : ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾಂಪ್ರತಿ ನಡೆಯುವ ಉತ್ಸವಾದಿ ಕಾರ್ಯಗಳು ಕೊರೊನ ಲಾಕ್ಡೌನ್ ನಿಮಿತ್ತ ಶಾಸ್ತ್ರೋಕ್ತವಾಗಿ ನಡೆಯುತ್ತಿವೆ. ಉತ್ಸವದ ಎರಡನೇ ದಿನವಾದ ಇಂದು ಶ್ರೀ ದೇವರಿಗೆ ಅಭಿಷೇಕ ಮತ್ತು ಉತ್ಸವದ ಅಂಗವಾಗಿ ನಡೆಯುವ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ. ಮದ್ಯಾಹ್ನ ಶ್ರೀ ದೇವಳದ ಅನ್ನಛತ್ರದಲ್ಲಿ 750 ಜನರಿಗೆ ಬೇಕಾಗುವಷ್ಟು ಅನ್ನ, ಸಾರು, ಪಲ್ಯ, ಬಕ್ಶ್ಯ, ಪಾಯಸವನ್ನು ತಯಾರಿಸಿದ್ದು. ಪ್ರತಿನಿತ್ಯ ಮಡುಂಬು ವಿದ್ವಾನ್ ಕೆ.ಪಿ.ಶ್ರೀನಿವಾಸ್ ತಂತ್ರಿಗಳವರ ಮನೆಯಲ್ಲಿ ಊಟ ತಯಾರುಗುತ್ತಿದ್ದು ಈ ದಿನ ದೇವಳದ ವತಿಯಿಂದ ಮಾಡಲಾಗುವುದು ಎಂದು ನಿರ್ಧರಿಸಲಾಗಿತ್ತು ಇದಕ್ಕೆ ತಂತ್ರಿಗಳು ಸಂತೋಷದಿಂದ ಒಪ್ಪಿಕೊಂಡಿದ್ದು ಅವರು ಕೂಡ ಉಪಸ್ಥಿತರಿದ್ದರು. ಆಡಳಿತ ವರ್ಗ, ಪೊಲೀಸ್ ಸಿಬ್ಬಂದಿಗಳು ಕೂಡ ಉಪಸ್ಥಿತರಿದ್ದರು. ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಾಲಿನಿ ಶೆಟ್ಟಿ, ಸದಸ್ಯರಾದ ದಿವೇಶ್ ಶೆಟ್ಟಿ ಕಲ್ಯಾಲು ಮತ್ತು ಪಂಚಾಯತ್ ಸಿಬ್ಬಂದಿಗಳು ತಯಾರಿಸಿದ ಆಹಾರವನ್ನು ಹಂಚುವ ಕಾರ್ಯವನ್ನು ಮಾಡಿದರು.
