Updated News From Kaup

ಬ್ರಹ್ಮಾವರ : ಪರಿಸರ ಕುರಿತ ವಿಚಾರ ಸಂಕಿರಣ

Posted On: 26-05-2024 10:08AM

ಬ್ರಹ್ಮಾವರ : ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಭಾರತೀಯ ಜನ ಔಷಧಿ ಕೇಂದ್ರ ಮತ್ತು ರೋಟರಿ ಕ್ಲಬ್ ಬ್ರಹ್ಮಾವರ ಇದರ ಸಂಯುಕ್ತ ಆಶ್ರಯದಲ್ಲಿ ಮಳೆ ಬೆಳೆಗಾಗಿ 'ಪ್ರಾಣಿ ಪಕ್ಷಿ ಸಂಕುಲ ಮನುಕುಲದ ಉಳಿವಿಗಾಗಿ ಪರಿಸರ ಜಾಗೃತಿ ವಿಚಾರ ಸಂಕಿರಣ ಬ್ರಹ್ಮಾವರ ರೋಟರಿ ಭವನದಲ್ಲಿ ನಡೆಯಿತು. ರೋಟರಿ ಅಧ್ಯಕ್ಷ ಉದಯ ಕುಮಾರ್ ಕಾಯ೯ಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಕಾಯ೯ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಮಾತನಾಡಿ, ನಾಗಬನಗಳನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡುತ್ತಿರುವುದು ಸರಿಯಲ್ಲ. ಪ್ರಕೃತಿಯ ಉತ್ತಮ ಕೊಡುಗೆಯಾದ ಬನ ಗಳನ್ನು ಉಳಿಸುದರಿಂದ ಬಹಳಷ್ಟು ಜೀವಿಗಳನ್ನು ನಾಶವಾಗದಂತೆ ನೋಡಬಹುದು ಎಂದರು.

ಮುನಿಯಾಲು ಆಯುವೇ೯ದ ಕಾಲೇಜಿನ ಪ್ರಾಧ್ಯಾಪಕ ಡಾ. ಚಂದ್ರಕಾಂತ್ ಭಟ್ ರವರು ವಿವಿಧ ಆಯುವೇ೯ದ ಸಸ್ಯಗಳ ಪರಿಚಯ ಮತ್ತು ಅದರ ಉಪಯೋಗ ಕುರಿತು ಮಾಹಿತಿ ನೀಡಿದರು. ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ ಮಾತನಾಡಿ ಪರಿಸರ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಬಹುದು ಹೀಗಾಗಿ ಈ ಬಗ್ಗೆ ಗಿಡಗಳನ್ನು ಬೆಳೆಸುವ ಕಾಯ೯ ಮಾಡಬೇಕು ಎಂದರು.

ವೇದಿಕೆಯಲ್ಲಿ ಜಯಂಟ್ಸ್ ಯುನಿಟ್ ನಿದೇ೯ಶಕ ವಿವೇಕಾನಂದ ಕಾಮತ್, ಕಾಯ೯ದಶಿ೯ ಮಿಲ್ಟನ್ ಒಲಿವೇರ್ ಮುಂತಾದವರಿದ್ದರು. ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು. ಜಯಂಟ್ಸ್ ಅಧ್ಯಕ್ಷರಾದ ಸುಂದರ ಪೂಜಾರಿ ಮೂಡುಕುಕ್ಕುಡೆ ಸ್ವಾಗತಿಸಿದರು. ರಾಘವೇಂದ್ರ ಕವಾ೯ಲು ನಿರೂಪಿಸಿದರು.

ಕಾಪು : ಲೋಕಾಯುಕ್ತ ಉಪ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಹೊಸ ಮಾರಿಗುಡಿ ದೇವಳ ಭೇಟಿ

Posted On: 26-05-2024 10:03AM

ಕಾಪು : ಇಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಸುನಿಲ್ ನಾಯಕ್ ಅವರು ಪ್ರಸ್ತುತ ಬೆಂಗಳೂರು ಲೋಕಾಯುಕ್ತದ ಉಪ ಪೋಲಿಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜಿರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರುಶನ ಪಡೆದು "ಕಾಪುವಿನ ಅಮ್ಮನ ಅನುಗ್ರಹ ಪ್ರಸಾದ" ವನ್ನು ಸ್ವೀಕರಿಸಿದರು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ಜಿರ್ಣೋದ್ಧಾರ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಈಗಾಗಲೇ ಶಿಲಾಸೇವೆಯನ್ನು ನೀಡಿದ್ದು ಇನ್ನು ಮುಂದೆ ನಡೆಯಲಿರುವ ಸ್ವರ್ಣ ಗದ್ದುಗೆಯ ಸ್ವರ್ಣ ಸಮರ್ಪಣೆಯ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತೇನೆ, ಕಾಪು ಮಾರಿಯಮ್ಮನ ಶಕ್ತಿ ಅಪಾರ ಎಂದರು.

ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.

ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ : ಟೋಲ್‌ ವಿನಾಯಿತಿಗೆ ಆಗ್ರಹ

Posted On: 24-05-2024 07:56PM

ಪಡುಬಿದ್ರಿ : ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ರದ್ದುಪಡಿಸಿರುವುದನ್ನು ವಿರೋಧಿಸಿ ಶುಕ್ರವಾರ ಟೋಲ್ ಮುಂಭಾಗ ಹಕ್ಕೊತ್ತಾಯ ಸಭೆ ನಡೆಸಿ ಟೋಲ್ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಟೋಲ್ ಪ್ರಬಂಧಕ ತಿಮ್ಮಯ್ಯ ಮಾತನಾಡಿ, ಮುಂದಿನ ವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಸ್ತಾನ, ಹೆಜಮಾಡಿ ಟೋಲ್ ಸಮಸ್ಯೆಯ ಇತ್ಯರ್ಥಕ್ಕೆ ಸಭೆಯನ್ನು ಜಿಲ್ಲಾಧಿಕಾರಿ ಕರೆಯಲಿದ್ದಾರೆ. ಅದುವರೆಗೂ ಸ್ಥಳೀಯರಿಗಿದ್ದ ವಿನಾಯಿತಿಯನ್ನು ಯಥಾಸ್ಥಿತಿ ಮುಂದುವರಿಸಲಾಗುವುದು ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಶೇಖರ್ ಹೆಜಮಾಡಿ ಮಾತನಾಡಿ, ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸಬಾರದು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಎದುರಿಸಬೇಕು ಎಂದು ಎಚ್ಚರಿಸಿದರು.

ಹಕ್ಕೊತ್ತಾಯ ಸಭೆಯಲ್ಲಿ ಶೇಖರ್ ಹೆಜ್ಮಾಡಿ, ಶೇಕಬ್ಬ ಕೋಟೆ, ಸಂತೋಷ್ ‌ಪಡುಬಿದ್ರಿ, ನವೀನಚಂದ್ರ ಜೆ ಶೆಟ್ಟಿ, ವೃೆ ಸುಕುಮಾರ್, ಶಶಿಕಾಂತ್ ಪಡುಬಿದ್ರಿ, ವಿಶ್ವಾಸ್ ಅಮೀನ್, ಗುಲಾಂ ಮೊಹಮ್ಮದ್, ಸುಧಾಕರ್ ಶೆಟ್ಟಿ ಬಿಕ್ರಿಬೆಟ್ಟು, ರಾಲ್ಪಿ ಡಿ ಕೋಸ್ತಾ, ರವಿ ಎಚ್ ಕುಂದರ್, ರೇಷ್ಮಾ ಮೆಂಡನ್, ಶಶಿಕಲಾ ಪೂಜಾರಿ, ನಿರ್ಮಲ, ಸೃಯದ್ ನಿಝಾಮ್, ಸುಧೀರ್ ಕರ್ಕೇರ, ಉಮಾನಾಥ್ ಪಡುಬಿದ್ರಿ, ದಿನೇಶ್ ಕೋಟ್ಯಾನ್ ಪಲಿಮಾರ್, ಜಿತೇಂದ್ರ ಪುರ್ಟಾಡೋ, ಮಧು ಅಚಾರ್ಯ, ಲೋಕೇಶ್ ಅಮೀನ್, ತಸ್ನೀನ್ ಅರಾ, ಶರ್ಪುದ್ದೀನ್ ಶೇಕ್, ಅಶೋಕ್ ಸಾಲ್ಯಾನ್, ಕೇಶವ್ ಸಾಲ್ಯಾನ್ ಹೆಜಮಾಡಿ, ಸನಾ ಇಬ್ರಾಹಿಮ್, ಹಸನ್ ಕೋಡಿ, ದೀಪಕ್ ಕೋಟ್ಯಾನ್ ಹೆಜಮಾಡಿ, ಎಮ್ .ಎಸ್ ಶಾಫಿ, ರಮೀಜ್ ಹುಸೇನ್, ರೋಶನ್ ಕಾಂಚನ್, ಪ್ರಾಣೇಶ್ ಹೆಜ್ಮಾಡಿ, ಅಬ್ದುಲ್ ಅಜೀಜ್ ಹೆಜಮಾಡಿ, ಪಾಂಡುರಂಗ ಕೋಟ್ಯಾನ್ , ಮೋಹನ್ ಉಪಸ್ಥಿತರಿದ್ದರು.

ಸೂರ್ಯಕಾಂತ್‌ ಜಯ ಸುವರ್ಣರಿಗೆ ಬೆಸ್ಟ್‌ ಚೇರ್‌ಮೆನ್ ಪ್ರಶಸ್ತಿ

Posted On: 24-05-2024 05:08PM

ಮಂಗಳೂರು : ಸೂರ್ಯಕಾಂತ್ ಜಯಸುವರ್ಣ ಅವರ ಅಧ್ಯಕ್ಷತೆಯಲ್ಲಿ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿರುವ ಭಾರತ್‌ ಬ್ಯಾಂಕ್‌ ಗೆ ಮತ್ತೊಂದು ಪ್ರಶಸ್ತಿಯ ಗರಿ ಸೇರಿದೆ. “ಭಾರತ ರತ್ನ ಸಹಕಾರಿತ ಸನ್ಮಾನ-2024” ರಲ್ಲಿ ಬಹು-ರಾಜ್ಯ ಅನುಸೂಚಿತ ಸಹಕಾರಿ ಬ್ಯಾಂಕ್‌ಗಳ ವಿಭಾಗದಲ್ಲಿ “ಕೊ-ಅಪರೇಟಿವ್‌ ಬ್ಯಾಂಕ್‌ ಸಮ್ಮಿಟ್‌” ನಲ್ಲಿ ಬೆಸ್ ಚೇರ್‌ಮೆನ್‌ ಅವಾರ್ಡ್‌ಅನ್ನು ಸೂರ್ಯಕಾಂತ್‌ ಜಯಸುವರ್ಣ ಪಡೆದುಕೊಂಡಿದ್ದಾರೆ.

ಮುಂಬೈನ ಗ್ರ್ಯಾಂಡ್ ಲಲಿತ್ ಹೋಟೆಲ್‌ನಲ್ಲಿ ನಡೆದ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಸಂವಹನ ಸಚಿವಾಲಯದ ಮಹಾನಿರ್ದೇಶಕ ಸುಮ್ನೇಶ್ ಜೋಶಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಈ  ಹಿಂದೆ 1991ರಲ್ಲಿ ಬ್ಯಾಂಕ್ ಜವಬ್ದಾರಿಯನ್ನು ಹೊತ್ತಿದ್ದ ಜಯ ಸುವರ್ಣರವರಿಗೆ ‘ಬೆಸ್ಟ್ ಚ್ಯಾರ್‌ಮ್ಯಾನ್ ಅವಾರ್ಡ್‌’ ಲಭಿಸಿತ್ತು. ಕೊ-ಅಪರೇಟಿವ್‌ ಬ್ಯಾಂಕ್‌ಗಳಲ್ಲಿ ಭಾರತ್ ಬ್ಯಾಂಕ್  ಮೊಟ್ಟ ಮೊದಲು ಆರ್‌ಬಿಐನಿಂದ ಮಾನ್ಯತೆ ಪಡೆದ ಹೆಗ್ಗಳಿಕೆ ಕೂಡಾ ಇದೆ. ಇದೀಗ ಜಯ ಸುವರ್ಣರವರ ಬಳಿಕ ಕಾರ್ಪರೇಟ್‌ ಬ್ಯಾಂಕ್‌ ವಲಯದಲ್ಲಿ ಬೆಸ್ಟ್ ಚ್ಯಾರ್‌ಮ್ಯಾನ್ ಅವಾರ್ಡ್‌ ಅನ್ನು ಸೂರ್ಯಕಾಂತ್ ಜಯಸುವರ್ಣ ತಮ್ಮದಾಗಿಸಿಕೊಂಡಿದ್ದಾರೆ

ಮೇ 23 ಭಾರತ್‌ ಬ್ಯಾಂಕ್‌ ಗೆ 25 ವರ್ಷ ಪೂರೈಸಿದ ಸಂಭದ್ರದ ದಿನವಾಗಿದ್ದು ಅಂದೇ ಈ ಪ್ರಶಸ್ತಿ ಲಭಿಸಿರುವುದು ಬಹಳ ವಿಶೇಷ. ಭಾರತ್ ಬ್ಯಾಂಕ್ ಇಂದು ದೇಶದ ಹಲವು ರಾಜ್ಯಗಳಲ್ಲಿ 100 ಕ್ಕೂ ಅಧಿಕ ಬ್ರಾಂಚ್‌ಗಳನ್ನು ಹೊಂದಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ.

ಪಡುಬಿದ್ರಿ : ಅದಾನಿ ಪವ‌ರ್ ಕಂಪನಿ‌ ಭದ್ರತಾ ಸಿಬ್ಬಂದಿ ಪ್ರತಿಭಟನೆ ; ಬೇಡಿಕೆ ಈಡೇರಿಕೆಗೆ ಒಪ್ಪಿಗೆ

Posted On: 24-05-2024 04:28PM

ಪಡುಬಿದ್ರಿ : ವೇತನ ಹೆಚ್ಚಳ, ತುಟ್ಟಿಭತ್ಯೆ ಏರಿಕೆ ಇತ್ಯಾದಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅದಾನಿ ಪವರ್ ಕಂಪನಿಯ ಭದ್ರತಾ ಸಿಬ್ಬಂದಿಗಳು ಗುರುವಾರ ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಸಿಬ್ಬಂದಿ ಬೇಡಿಕೆ ಈಡೇರಿಕೆಗೆ ಕಂಪನಿ ಒಪ್ಪಿಗೆ ಸೂಚಿಸಿ ಪ್ರತಿಭಟನೆಗೆ ಜಯ ಸಿಕ್ಕಿದಂತಾಗಿದೆ.

ಅದಾನಿ ಪವರ್ ಕಂಪನಿಯಲ್ಲಿ ಚೆನ್ನೈ ಮೂಲದ ಸೆಕ್ಯೂರಿಟಿ ಕಂಪೆನಿ ಗುತ್ತಿಗೆ ಕಾರ್ಮಿಕರಾಗಿ 19 ವರ್ಷಗಳಿಂದ ದುಡಿಯುತ್ತಿರುವ ಸುಮಾರು 74 ಭದ್ರತಾ ಸಿಬ್ಬಂದಿ ಶಾಂತಿಯುತ ಹೋರಾಟ ಆರಂಭಿಸಿದ್ದರು.

ಮೊದಲು ಇಲ್ಲಿನ ಸಿಬ್ಬಂದಿ ಪ್ರತೀಕ್ ಹೆಗ್ಡೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇವರಿಗೆ ಇತರೆ ಭದ್ರತಾ ಸಿಬ್ಬಂದಿ ಬೆಂಬಲ ಸೂಚಿಸಿದ್ದರು.

ತುಟ್ಟಿಭತ್ಯೆ ಜತೆಗೆ ರೂ.400 ಸಂಬಳ ಏರಿಕೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಎಪ್ರಿಲ್ ತಿಂಗಳಿಂದ ಗಾರ್ಡಿಯನ್ ಹಾಗೂ ಅದಾನಿ ಕಂಪೆನಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ಒಂದೂವರೆ ತಿಂಗಳಾದರೂ ಯಾವುದೇ ಸ್ಪಂದನೆ ದೊರಕಿಲ್ಲ. ಈ ನಿಟ್ಟಿನಲ್ಲಿ ಸತ್ಯಾಗ್ರಹ ಆರಂಭಿಸಿದ್ದೆವು. ಶಾಸಕರ ಮಧ್ಯಸ್ಥಿಕೆಯಲ್ಲಿ ಕಂಪೆನಿ ವೇತನ ಹೆಚ್ಚಳಕ್ಕೆ ಒಪ್ಪಿದ್ದು, ಇತರ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಕಾರ್ಮಿಕ ಮುಖಂಡ ಸುನಿಲ್‌ ಹೇಳಿದರು.

ಶಿರ್ವ : ಸಿಡಿಲು ಬಡಿದು ಯುವಕ ಮೃತ್ಯು

Posted On: 24-05-2024 03:57PM

ಶಿರ್ವ : ಸ್ನಾನಕ್ಕೆಂದು ತೆರಳಿದ್ದ ವೇಳೆ ಸಿಡಿಲು ಬಡಿದು ಕಾಲೇಜು ವಿದ್ಯಾರ್ಥಿಯೋರ್ವ ಬಲಿಯಾದ ಘಟನೆ ಶಿರ್ವ ಸಮೀಪದ ಮಾಣಿಬೆಟ್ಟು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ

ಮೃತ ವಿದ್ಯಾರ್ಥಿಯನ್ನು, ಶಿರ್ವ ಮಾಣಿಬೆಟ್ಟು ತೋಟದ ಮನೆ ನಿವಾಸಿ ರಮೇಶ್ ಪೂಜಾರಿಯವರ ಮಗ ರಕ್ಷಿತ್ ಪೂಜಾರಿ (20) ಎಂದು ಗುರುತಿಸಲಾಗಿದೆ.

 ಈತ ಶಿರ್ವ ಎಂಎಸ್ಆರ್ ಎಸ್ ಕಾಲೇಜಿನ ಎರಡನೇ ವರ್ಷದ ಬಿಸಿಎ ವಿದ್ಯಾಭ್ಯಾಸ ಮಾಡುತ್ತಿದ್ದರು.

ಗುರುವಾರ ಸಂಜೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ನೆಲದಲ್ಲಿ ಬಿದ್ದಿದ್ದ ಅವರನ್ನು ಮನೆ ಮಂದಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10 ಗಂಟೆಯ ವೇಳೆಗೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ : ಮನೆಯೇ ಗ್ರಂಥಾಲಯ - ವಿನೂತನ‌ ಕಾರ್ಯಕ್ರಮಕ್ಕೆ ಚಾಲನೆ

Posted On: 22-05-2024 04:12PM

ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ "ಮನೆಯೇ ಗ್ರಂಥಾಲಯ" ಕಾರ್ಯಕ್ರಮಕ್ಕೆ ನಾಡಿನ ಪ್ರಸಿದ್ಧ ಸಾಹಿತಿ ವಿದ್ವಾಂಸ ನಾಡೋಜ ಡಾ. ಕೆ .ಪಿ .ರಾವ್ ಅವರು ಉಡುಪಿಯ ಬೈಲೂರಿನಲ್ಲಿರುವ ರಂಗ ಕಲಾವಿದರಾದ ಶಶಿಪ್ರಭಾ ಹಾಗೂ ವಿವೇಕಾನಂದ ದಂಪತಿಗಳ ಮನೆ "ವಾಟಿಕಾ"ದಲ್ಲಿ ಚಾಲನೆ ನೀಡಿದರು.

ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಎನ್ನುವಂತದ್ದು ಇವತ್ತಿನ ಆಧುನಿಕ ಸಂದರ್ಭದಲ್ಲಿ ಎಲ್ಲಾ ಸಾಧ್ಯತೆಗಳನ್ನು ಇಟ್ಟುಕೊಂಡು ಬೆಳೆಯುತ್ತಿದೆ. ಆದರೆ ಅನೇಕ ಶತಮಾನಗಳ ಹಿಂದೆ ನಾವು ಕಂಡುಕೊಂಡ ಮುದ್ರಣ ಮಾಧ್ಯಮದ ಆವಿಷ್ಕಾರದಿಂದಾಗಿ ಗಳಿಸಿದ ಜ್ಞಾನ ಸಂಪತ್ತನ್ನು ಅಕ್ಷರ ರೂಪವಾಗಿ ಪರಿವರ್ತಿಸಿ, ಮುಂದೆ ಅವುಗಳನ್ನು ಮುದ್ರಣ ರೂಪದಲ್ಲಿ ದಾಖಲೀಕರಣ ಗೊಳಿಸಿರುವುದರ ಪರಿಣಾಮವಾಗಿ ನಮಗಿಂದು ಕೋಟಿ ಕೋಟಿ ಗ್ರಂಥಗಳು ನಮ್ಮ ಅಧ್ಯಯನಕ್ಕೆ ಸಾಧ್ಯವಾಗಿವೆ, ಮುಂದೆಯೂ ಇವು ಸಾಧ್ಯವಾಗುತ್ತವೆ. ಅಷ್ಟು ಮಾತ್ರವಲ್ಲ ಒಂದು ಗ್ರಂಥವನ್ನು ತೆರೆದು ಅದರೊಳಗಿನ ಒಂದು ಪುಟದ ಸುವಾಸನೆಯನ್ನು ಗಮನಿಸಿದಾಗ ಅಲ್ಲಿ ಸಿಗುವ ಆನಂದವೇ ಬೇರೆ ಆಗಿರುತ್ತದೆ ಅದನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಅಂತಹ ಅನುಭವವನ್ನು ಗ್ರಂಥಗಳನ್ನು ಸ್ಪರ್ಶಿಸುವುದರಿಂದ ಆಗುವುದೇ ಹೊರತು ಬೇರೆ ಯಾವುದರಿಂದಲೂ ಆಗುವುದಿಲ್ಲ ಎಂದು ನಾಡೋಜ ಕೆ. ಪಿ. ರಾವ್ ಅವರು ತಿಳಿಸಿದರು.

ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಆಶಯ ನುಡಿಗಳನ್ನಾಡುತ್ತಾ ಇದೊಂದು ವಿನೂತನ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಉಡುಪಿ ತಾಲೂಕಿನ ಮನೆ ಮಂದಿರಗಳಲ್ಲಿ ಆಸ್ಪತ್ರೆಗಳಲ್ಲಿ ಅಂಗಡಿಗಳಲ್ಲಿ ಗ್ರಂಥಾಲಯ ಪ್ರಾರಂಭಿಸುತ್ತೇವೆ . ಈ ಮೂಲಕ ಓದುವ ಹವ್ಯಾಸ ಬೆಳೆಸಲು ಪ್ರಯತ್ನಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಜಿಲ್ಲಾ ಸಹಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ ,ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿ, ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ ಧನ್ಯವಾದ ನೀಡಿದರು. ಕಾರ್ಯಕ್ರಮದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

ಕೇಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ - ಷಷ್ಟ್ಯಬ್ದ ಸಂಭ್ರಮ ; ಹನ್ನೆರಡು ದಿನಗಳ ಭಜನಾ ಕಾರ್ಯಕ್ರಮ

Posted On: 21-05-2024 06:31PM

ಎಲ್ಲೂರು : ಕೇಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ (ರಿ) ಇದರ ಅರವತ್ತನೇ ವರ್ಷದ ಸಂಭ್ರಮಾಚರಣೆ ಷಷ್ಟ್ಯಬ್ದ ಸಂಭ್ರಮ ಪ್ರಯುಕ್ತ ಸತತ 288 ಗಂಟೆಗಳ ಹನ್ನೆರಡು ದಿನಗಳ ಭಜನಾ ಕಾರ್ಯಕ್ರಮ "ಅಖಂಡ ದ್ವಾದಶಾಹ ವೈಭವಂ " ಊರ ಪರವೂರ ಮಹನೀಯರು ನಂದಾದೀಪವನ್ನು ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು.

ಆಗಮ ಪಂಡಿತರಾದ ವಿದ್ವಾನ್ ಕೇಂಜ ಶ್ರೀಧರ ತಂತ್ರಿಗಳು, ಅಖಂಡ ದ್ವಾದಶಾಹ ಭಜನಾ ವೈಭವಮ್ ಸಮಿತಿಯ ಗೌರವಾಧ್ಯಕ್ಷರಾದ ಕೆ‌.ಎಲ್ ಕುಂಡಂತಾಯರು, ನಂದಿಕೂರು ದೇವಳದ ಮಧ್ವರಾಯ ಭಟ್, ರಘು ಶೆಟ್ಟಿಗಾರ್, ಡಾ.ಭವಾನಿ ಶಂಕರ್, ಸುನೀಲ್ ಕುಮಾರ್ ಶೆಟ್ಟಿ ಸಾಂತೂರು, ನಾಗರತ್ನ ರಾವ್ ದಂಪತಿಗಳು, ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿಗಾರ್ ದಂಪತಿಗಳು, ಕಾರ್ಯದರ್ಶಿ ಕೃಷ್ಣಾನಂದ ರಾವ್, ಅರ್ಚಕ ಗುರುರಾಜ ಆಚಾರ್ಯ ಮತ್ತಿತರು ಹಾಜರಿದ್ದರು.

ಮಾತೃ ಮಂಡಳಿಯ ಭಜಕರಿಂದ ಆರಂಭಗೊಂಡ ಭಜನಾ ವೈಭವದಲ್ಲಿ ಪ್ರಸಿದ್ದ ದಾಸವಾಣಿ ಕೀರ್ತನಕಾರ ಮೈಸೂರು ರಾಮಚಂದ್ರಚಾರ್ ಭಜನೆ ಹಾಡಿದ್ದು ವಿಶೇಷವಾಗಿತ್ತು‌.

ಮಂಗಳೂರು ಸಮುದ್ರ ತೀರದಲ್ಲಿ ಹೈ ಅಲರ್ಟ್, ಉಡುಪಿಯಲ್ಲಿ ಸಮುದ್ರ ಪ್ರಕ್ಷುಬ್ಧ

Posted On: 21-05-2024 01:52PM

ಮಂಗಳೂರು : ಬಂಗಾಳ ಕೊಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಸಮುದ್ರ ತೀರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಗಂಟೆಗೆ 45 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿಯುದ್ದಕ್ಕೂ ಬಿರುಗಾಳಿ ಬೀಸುವ ಸಾಧ್ಯತೆ ಹಿನ್ನಲೆ ಮೀನುಗಾರಿಕೆಗೆ ತೆರಳದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗಿದೆ.

ಮಂಗಳೂರಿನಲ್ಲಿ ಇಂದು ಕೂಡ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ಇದೆ. ಇಂದಿನಿಂದ 2 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಉಡುಪಿಯಲ್ಲಿ ಸಮುದ್ರ ಪ್ರಕ್ಷುಬ್ದವಾಗಿದೆ. ಉರಿ ಬಿಸಿಲಿನ ನಡುವೆ ಮೋಡದ ವಾತಾವರಣವಿದೆ. ಈ ವಾರದಲ್ಲಿ ಗುಡುಗು ಸಿಡಿಲು ಮಳೆಯ ಮುನ್ನೆಚ್ಚರಿಕೆಯನ್ನ ಜಿಲ್ಲಾಡಳಿತ ನೀಡಿದೆ. ಭಾರೀ ಗಾತ್ರದ ಸಮುದ್ರದಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಮೀನುಗಾರರು ಹಾಗೂ ಪ್ರವಾಸಿಗರು ಸಮುದ್ರಕ್ಕಿಳಿಯಬಾರದು  ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮೇ 28 - 30 : ಉಡುಪಿಯ ಬೊಬ್ಬರ್ಯ ಕಟ್ಟೆ ದೈವಗಳ ವಾರ್ಷಿಕ ನೇಮೋತ್ಸವ

Posted On: 21-05-2024 12:00PM

ಉಡುಪಿ : ಇಲ್ಲಿನ ವುಡ್‌ಲಾಂಡ್ಸ್ ಹೋಟೆಲ್ ಬಳಿಯ ಬೊಬ್ಬರ್ಯ ಕಟ್ಟೆ ಬೊಬ್ಬರ್ಯ, ಕಾಂತೇರಿ ಜುಮಾದಿ, ಕಲ್ಕುಡ, ಕೊರಗಜ್ಜ, ಪರಿವಾರ ದೈವಗಳ ದೇವಸ್ಥಾನದಲ್ಲಿ ಮೇ 28 ರಿಂದ 30 ರವರೆಗೆ ವಾರ್ಷಿಕ ನೇಮೋತ್ಸವ ಜರಗಲಿದೆ.

ಮೇ 28, ಮಂಗಳವಾರ ರಾತ್ರಿ ಗಂಟೆ 9 ರಿಂದ ಬೊಬ್ಬರ್ಯ ದೈವದ ಕೋಲ, ಮೇ 29, ಬುಧವಾರ ಸಂಜೆ 4 ಗಂಟೆಗೆ ಕಾಂತೇರಿ ಜುಮಾದಿ ಪರಿವಾರ ದೈವಗಳ ಬಂಡಾರ ಮೆರವಣಿಗೆ, ರಾತ್ರಿ 8:30ಕ್ಕೆ ಸನ್ಮಾನ ಕಾರ್ಯಕ್ರಮ, ರಾತ್ರಿ ಗಂಟೆ 9 ರಿಂದ ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳ ನೇಮೋತ್ಸವ, ಮೇ 30, ಗುರುವಾರ ಸಂಜೆ 5 ರಿಂದ ಕಲ್ಕುಡ ದೈವದ ನೇಮೋತ್ಸವ, ರಾತ್ರಿ ಗಂಟೆ 7ರಿಂದ ಕೊರಗಜ್ಜ ದೈವದ ನೇಮೋತ್ಸವ ಜರಗಲಿದೆ ಎಂದು ಕ್ಷೇತ್ರದ ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.