Updated News From Kaup

ಡಿ.28 ಮತ್ತು 29 : ಪಡುಬಿದ್ರಿಯಲ್ಲಿ ಕೃಷಿ ಮೇಳ

Thumbnail
Posted On: 24 Dec 2024, 02:21 PM

ಪಡುಬಿದ್ರಿ : ಉದಯಾದ್ರಿ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ನಿತ್ಯಾನಂದ ಆಗ್ರೋ ಲಿಮಿಟೆಡ್ ಕೊಲ್ನಾಡ್,ಮುಲ್ಕಿ ಇವರ ಜಂಟಿ ಆಶ್ರಯದಲ್ಲಿ ಡಿ. 28 ಹಾಗೂ 29ರಂದು ದ್ವಿತೀಯ ಬಾರಿಗೆ ಪಡುಬಿದ್ರಿ ಉದಯಾದ್ರಿ ಬಾಲಗಣಪತಿ ಪ್ರಸನ್ನ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ ಗಂಟೆ 9ರಿಂದ ರಾತ್ರಿ 9ರವರೆಗೆ ಜರಗಲಿದೆ ಎಂದು ಸಂಘಟಕರಾದ ರಕ್ಷಾ ಇವರು ಪಡುಬಿದ್ರಿ ಉದಯಾದ್ರಿ ಬಾಲಗಣಪತಿ ಪ್ರಸನ್ನ ದೇವಸ್ಥಾನದ ಆವರಣದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಡಿಸೆಂಬರ್ 28ರಂದು ಕೃಷಿ ಮೇಳವನ್ನು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ನವೀನ್ ಚಂದ್ರ ಜೆ. ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ ಪಡುಬಿದ್ರಿ ಉದ್ಘಾಟಿಸಲಿದ್ದಾರೆ. ಮಳಿಗೆಗಳ ಉದ್ಘಾಟನೆಯನ್ನು ಪಡುಬಿದ್ರಿ ಉದ್ಯಮಿ ಸಂತೋಷ್ ಶೆಟ್ಟಿ ನಡೆಸಲಿದ್ದಾರೆ. ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೃಷಿ ಮೇಳವನ್ನು ಆಯೋಜಿಸಲಾಗಿದ್ದು, ಕೃಷಿ ಮಾಹಿತಿ, ಸಾವಯವ ಗೊಬ್ಬರಗಳು, ವಿವಿಧ ತರಕಾರಿ, ಹಣ್ಣಿನ ಗಿಡಗಳ ಮಾರಾಟ, ಕೃಷಿ ಯಂತ್ರೋಪಕರಣ, ನೀರಾವರಿ ಬಗ್ಗೆ ಮಾಹಿತಿ, ಮತ್ಸ್ಯ ಮೇಳ, ಆಹಾರ ಮೇಳಗಳು ಇರಲಿವೆ. ಈಗಾಗಲೇ 70 ಮಳಿಗೆಗಳು ನೋಂದಣಿಯಾಗಿದ್ದು, ಇದರಲ್ಲಿ 15 ಕೃಷಿ ಮಳಿಗೆಗಳಾಗಿದೆ ಎಂದು ತಿಳಿಸಿದರು. ಈ ಸಂದರ್ಭ ನಿತ್ಯಾನಂದ ಆಗ್ರೋ ಲಿಮಿಟೆಡ್ ಪ್ರಬಂಧಕ ನವೀನ್ ಚಂದ್ರ ಪ್ರಭು, ಉದಯಾದ್ರಿ ಬಾಲ ಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ಟ್ರಸ್ಟಿಗಳಾದ ಜಗದಾಭಿರಾಮ ಸ್ವಾಮಿ, ನಯನಾಭಿರಾಮ, ಪಿ.ಡಿ. ಶೇಖರ ರಾವ್, ದಿನಕರ ರಾವ್, ಚರಣ್ ರಾಜ್ ಉಪಸ್ಥಿತರಿದ್ದರು.

ಡಿ.29 : ಪಡುಬಿದ್ರಿಯಲ್ಲಿ ಅಂತ‌ರ್ ರಾಜ್ಯ ಬಂಟ ಕ್ರೀಡೋತ್ಸವ - ಎಂ ಆರ್ ಜಿ ಟ್ರೋಫಿ 2024

Thumbnail
Posted On: 24 Dec 2024, 01:44 PM

ಪಡುಬಿದ್ರಿ : ಇಲ್ಲಿನ ಬಂಟರ ಸಂಘದ ವತಿಯಿಂದ ಡಿ.29 ರಂದು ಪಡುಬಿದ್ರಿ ಬಂಟರ ಭವನದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ದಿ. ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ಅಂತ‌ರ್ ರಾಜ್ಯ ಬಂಟ ಕ್ರೀಡೋತ್ಸವ ಎಂ ಆರ್ ಜಿ ಟ್ರೋಫಿ 2024 ನಡೆಯಲಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ. ಐಕಳ ಭಾವ ದೇವಿ ಪ್ರಸಾದ್ ಶೆಟ್ಟಿ ಬೆಳಪು ಇವರು ಮಂಗಳವಾರ ಪಡುಬಿದ್ರಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದೇಶಾದ್ಯಂತ ನೆಲೆಸಿರುವ ಬಂಟ ಸಮುದಾಯವನ್ನು ಒಗ್ಗೂಡಿಸಿ ಯುವ ಶಕ್ತಿಯ ಕ್ರೀಡಾ ಸ್ಫೂರ್ತಿಗೆ ಪ್ರೇರಣೆ ನೀಡಿ ಪ್ರೋತ್ಸಾಹಿಸುವ ನಿಟ್ಟಿನಿಂದ ಹಲವಾರು ವಿಶೇಷತೆಗಳ ವೈಭವದಿಂದ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಆಕರ್ಷಕ ಪಥಸಂಚಲನ, ವಾಲಿಬಾಲ್, ತ್ರೋಬಾಲ್, ಕಬ್ಬಡಿ, ಹಗ್ಗ ಜಗ್ಗಾಟ ಪಂದ್ಯಾಟಗಳು ನಡೆಯಲಿದೆ. ವಿಜೇತರಿಗೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುವುದು. ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿಯವರಿಂದ ಉದ್ಘಾಟನೆಗೊಳ್ಳಲಿರುವ ಈ ಕ್ರೀಡಾ ಕೂಟದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್ ರಾಜೇಂದ್ರ ಕುಮಾರ್ ರಿಂದ ದೀಪ ಪ್ರಜ್ವಲನೆ, ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಬಂಟ ಕ್ರೀಡಾಕೂಟದ ಧ್ವಜಾರೋಹಣ, ಕರ್ನಾಟಕ ಸರಕಾರದ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದ‌ರ್ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ಪುಣೆ ಉದ್ಯಮಿಯಾದ ಸೀತಾರಾಮ ಶೆಟ್ಟಿ ಪುಚೊಟ್ಟು ಬೀಡು ಇವರು ಕ್ರೀಡಾಜ್ಯೋತಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಬೆಳಿಗ್ಗೆ 9 ಗಂಟೆಗೆ ಅತ್ಯಾಕರ್ಷಕ ವಾಹನ ಮೆರವಣಿಗೆಯೊಂದಿಗೆ ಕ್ರೀಡಾಜ್ಯೋತಿಯು ಪಡುಬಿದ್ರಿ ಪೇಟೆಯ ಮೂಲಕ ಕ್ರೀಡಾಂಗಣಕ್ಕೆ ಸಾಗಿ ಬರಲಿದೆ. ಯು.ಪಿ.ಸಿ.ಎಲ್ ಅಧ್ಯಕ್ಷರಾದ ಕಿಶೋರ್ ಆಳ್ವರು ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಲಿರುವರು. ವಿ.ಕೆ. ಗ್ರೂಪ್ಸ್ ಮುಂಬೈ ಯ ಸಿ.ಎಂ.ಡಿ ಕೆ. ಎಂ. ಶೆಟ್ಟಿಯವರು ವಾಲಿಬಾಲ್, ಬಂಟರ ಸಂಘ ಮುಂಬೈಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಹಗ್ಗ ಜಗ್ಗಾಟ, ಪುಣೆ ಉದ್ಯಮಿ ಚಂದ್ರಹಾಸ ಶೆಟ್ಟಿ ಪುಚೊಟ್ಟು ಬೀಡು ಕಬ್ಬಡ್ಡಿ, ಬಂಟರ ಸಂಘ ಮುಂಬೈ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿಯವರು ತ್ರೋಬಾಲ್ ಕ್ರೀಡಾಂಗಣದ ಉದ್ಘಾಟನೆ ಮಾಡಲಿರುವರು. ಅಭಿನಂದನೆ/ಪ್ರಶಸ್ತಿ ಪ್ರದಾನ/ಕ್ರೀಡಾ ಪ್ರೋತ್ಸಾಹ ಧನ ವಿತರಣೆ : 2024 ನೇ ಸಾಲಿನ ಸುವರ್ಣ ಕರ್ನಾಟಕ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೇರಂಭ ಇಂಡಸ್ಟ್ರೀಸ್ ಮುಂಬೈನ ಸಿ.ಎಂ.ಡಿ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಬಂಟ ಸಾಧಕ ಪ್ರಶಸ್ತಿ ಪುರಸ್ಕಾರ, ಡಾ. ಕೆ.ಪ್ರಕಾಶ್ ಶೆಟ್ಟಿ, ಸಹಕಾರ ರತ್ನ ಡಾ. ಎಮ್.ಎನ್.ರಾಜೇಂದ್ರ ಕುಮಾರ್, ಕ್ರೀಡಾಂಗಣದ ಸ್ಥಳದಾನಿ ಮುಂಬೈ ಉದ್ಯಮಿ ಕರುಣಾಕರ ಪೂಜಾರಿಯವರಿಗೆ ಗೌರವಾಭಿನಂದನೆ. ಅಂತರ್ ರಾಷ್ಟ್ರೀಯ ಕ್ರೀಡಾಪಟು, ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು, ಕಂಬಳ ಕ್ಷೇತ್ರದ ಎರ್ಮಾಳು ಪುಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ, ರಾಷ್ಟ್ರೀಯ ಈಜುಪಟು ನೈಶಾ ಶೆಟ್ಟಿ ಇವರಿಗೆ ಬಂಟ ಕ್ರೀಡಾರತ್ನ ಪ್ರಶಸ್ತಿ ಪ್ರದಾನ, ಬಂಟ ಸಮಾಜದ ಉದಯೋನ್ಮುಖ ಕ್ರೀಡಾಳುಗಳಿಗೆ ಪ್ರೋತ್ಸಾಹ ಧನ ವಿತರಣೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಸಂಜೆ 6.30 ರಿಂದ ಕ್ರೀಡಾಕೂಟದ ಪ್ರಾಯೋಜಕರಾದ ಡಾ.ಕೆ.ಪ್ರಕಾಶ್ ಶೆಟ್ಟಿಯವರಿಂದ ಬಹುಮಾನ ವಿತರಣೆ ನಡೆಯಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಅವರಿಂದ ಸಮಾರೋಪ ಭಾಷಣ ನಡೆಯಲಿದೆ. ವಿಶೇಷ ಆಹ್ವಾನಿತರಾಗಿ ನಟ ಗೋಲ್ಡನ್ ಸ್ಟಾರ್ ಗಣೇಶ್, ಕನ್ನಡ ತುಳು ಚಲನಚಿತ್ರದ ಕಲಾವಿದರು ಮತ್ತು ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್, ಉಡುಪಿ, ದ.ಕ.ದ ಶಾಸಕರುಗಳು, ಲೋಕಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮತ್ತು ರಾಜ್ಯ ಅಂತರ್ ರಾಜ್ಯ ಬಂಟರ ಸಂಘಗಳ ಅಧ್ಯಕ್ಷರುಗಳು ಹಾಗೂ ಗಣ್ಯಾತಿ ಗಣ್ಯರು ಉಪಸ್ಥಿತರಿರುವರು. ಪಡುಬಿದ್ರಿ ಬಂಟರ ಸಂಘದ ಸದಸ್ಯರಿಂದ ನೃತ್ಯ ವೈವಿಧ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಎರ್ಮಾಳು ಶಶಿಧರ್ ಶೆಟ್ಟಿ, ಸಿರಿಮುಡಿ ದತ್ತಿ ನಿಧಿ ಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಕ್ರೀಡಾ ಸಂಚಾಲಕ ವಿನಯ ಶೆಟ್ಟಿ ಎರ್ಮಾಳು, ಮಹಿಳಾ ವಿಭಾಗದ ಅಧ್ಯಕ್ಷ ಜ್ಯೋತಿ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ನವೀನ್ ಎನ್ ಶೆಟ್ಟಿ, ಕಾಪು ತಾಲೂಕು ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ, ಸಾಂಸ್ಕೃತಿಕ ಸಂಚಾಲಕ ಜಯ ಶೆಟ್ಟಿ ಪದ್ರ, ಕ್ರೀಡಾ ಸಹ ಸಂಚಾಲಕಿ ಶರ್ಮಿಳಾ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಉಪಸ್ಥಿತರಿದ್ದರು.

ಕಾಪುವಿನಲ್ಲಿ ಉಚಿತ ವೈದ್ಯಕೀಯ, ನೇತ್ರ, ದಂತ ತಪಾಸಣೆ ಚಿಕಿತ್ಸಾ ಶಿಬಿರ

Thumbnail
Posted On: 22 Dec 2024, 01:25 PM

ಕಾಪು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ಕಾಪು ಶಾಖೆಯ ನೇತೃತ್ವದಲ್ಲಿ ಕಾಪು ರೋಟರಿ ಕ್ಲಬ್‌ನ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೋಯ ವಿಶ್ವವಿದ್ಯಾಲಯ ದೇರಳಕಟ್ಟೆ ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ನುರಿತ ತಜ್ಞ ವೈದ್ಯರ ತಂಡದಿಂದ ಆದಿತ್ಯವಾರ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಕಾಪು ಶಾಖಾ ವಠಾರದಲ್ಲಿ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ತಪಾಸಣೆ ಚಿಕಿತ್ಸಾ ಶಿಬಿರ ಜರಗಿತು. ಈ ಸಂದರ್ಭ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ಪುರಸಭೆಯ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ ನಡಿಕೆರೆ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪದಾಧಿಕಾರಿಗಳು, ಸಿಬ್ಬಂದಿಗಳು, ಕಾಪು ರೋಟರಿ ಕ್ಲಬ್‌ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯ 40ನೇ ವಾರ್ಷಿಕೋತ್ಸವ ; ಸನ್ಮಾನ ; ಧನಸಹಾಯ ; ಸಾಂಸ್ಕೃತಿಕ ಕಾರ್ಯಕ್ರಮಗಳು

Thumbnail
Posted On: 20 Dec 2024, 06:12 PM

ಪಡುಬಿದ್ರಿ : ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿ (ರಿ.) ಇದರ 40ನೇ ವಾರ್ಷಿಕೋತ್ಸವವು ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಆವರಣದಲ್ಲಿ ಗೌರವಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಸಾಮಾಜಿಕ ಚಟುವಟಿಕೆಯ ಮೂಲಕ ಮಹಿಳೆಯರಿಗೆ ಸಾಕಷ್ಟು ಉತ್ತೇಜನವನ್ನು ನೀಡಿದ ಸಂಸ್ಥೆಯು ಹಲವಾರು ಕಲಾವಿದರನ್ನು ಹುಟ್ಟು ಹಾಕಿದೆ. ಇದೀಗ 40ರ ಸಂಭ್ರಮದಲ್ಲಿ ಸಮಾಜದ ಅಶಕ್ತರಿಗೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಜನಮಾನಸಕ್ಕೆ ಮಾದರಿಯಾಗಿದೆ ಎಂದರು. ದೇವಳದ ಆಡಳಿತ ಮೊಕ್ತೇಸರ ಎರ್ಮಾಳು ಬೀಡು ಅಶೋಕರಾಜ್ ಮಾತನಾಡಿ, ಕಳೆದ ವರ್ಷಗಳಿಂದ ನಿರಂತರ ಚಟುವಟಿಕೆಯುಕ್ತವಾಗಿರುವ ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲವು ಈ ಭಾಗದಲ್ಲಿ ಸಮಾಜ ಸೇವೆ, ಕಲಾ ಸೇವೆ ಸಹಿತ ಜನಜನಿತರಾಗಿದ್ದಾರೆ. ಇಂತಹ ಹತ್ತು ಹಲವು ಸಮಾಜಮುಖಿ ಸೇವೆಯ ಮೂಲಕ ಮನೆ ಮಾತಾಗಿರುವ ಮಹಿಳಾ ಮಂಡಲವು ಸಂಭ್ರಮದ ಶತಮಾನೋತ್ಸವ ಕಾಣುವಂತಾಗಲಿ ಎಂದು ಶುಭವನ್ನು ಹಾರೈಸಿದರು. ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗುವಲ್ಲಿ ಹೆಚ್ಚು ಒತ್ತು ನೀಡಿ ಸ್ವಸಹಾಯ ಸಂಘ ರಚಿಸಿ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದ್ದು ಹರ್ಷದಾಯಕ ಎಂದರು. ಶಿರ್ವ ಮಹಿಳಾ ಮಂಡಲ ಅಧ್ಯಕ್ಷೆ, ಅಸೋಸಿಯೇಟ್ ಪ್ರೊಫೆಸರ್ ಡಾ|ಸ್ಪೂರ್ತಿ ಶೆಟ್ಟಿ ಮತ್ತು ಅಥ್ಲೆಟ್ ಕಟಪಾಡಿ ಸುಲತಾ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆಯರಿಗೆ ಗೌರವಾರ್ಪಣೆ ಹಾಗೂ ಸುಮಾರು ರೂ. 1ಲಕ್ಷ ಮೊತ್ತದಲ್ಲಿ ಬಡ ಅಶಕ್ತರನ್ನು ಗುರುತಿಸಿ ಧನ ಸಹಾಯ, ಪರಿಸರದ ಕನ್ನಡ ಮಾಧ್ಯಮದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಂಘದ ಸದಸ್ಯೆಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಅದಮಾರು ಪೂರ್ಣಪ್ರಜ್ಞ ಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್ ವೇದಿಕೆಯಲ್ಲಿದ್ದರು. ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯ ಅಧ್ಯಕ್ಷೆ ರೇಖಾ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಅಮಣಿ ಕುಂದರ್ ವಾರ್ಷಿಕ ವರದಿ ನೀಡಿದರು. ಮಾಜಿ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ ನಿರೂಪಿಸಿದರು. ಜತೆ ಕಾರ್ಯದರ್ಶಿ ಅಮೃತಕಲಾ ಶೆಟ್ಟ ವಂದಿಸಿದರು. ಬಳಿಕ ಸದಸ್ಯೆಯರಿಂದ ನೃತ್ಯ ವೈವಿಧ್ಯ, ರಂಗತರಂಗ ಕಾಪು ತಂಡದಿಂದ ತುಳುನಾಟಕ ಪ್ರದರ್ಶನಗೊಂಡಿತು.

ಆಧಾರ್ ಕಾಡ್೯ ಮಾಡಿಸಿ ಮಾನಸಿಕ ಅಸ್ವಸ್ಥರ ಬದುಕಿಗೆ ಬೆಳಕಾದ ಕಾಪು ತಹಶಿಲ್ದಾರ್

Thumbnail
Posted On: 20 Dec 2024, 05:55 PM

ಕಾಪು : ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎರ್ಮಾಳು ಬಡಾ ಗ್ರಾಮದ ಅಕ್ಕಪಕ್ಕದ ಮನೆಯ ಕಿರಣ ಕುಮಾರಿ (52) ಮತ್ತು ಪ್ರಮೋದ (69) ಎಂಬ ಮಹಿಳೆಯರಿಗೆ ಕಾಪು ತಾಲೂಕು ತಹಶಿಲ್ದಾರ್ ಡಾ.ಪ್ರತಿಭಾ ಆರ್. ಅವರ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ. ಈ ಈರ್ವರು ಮಹಿಳೆಯರನ್ನು ಆಧಾರ್ ಕೇಂದ್ರಕ್ಕೆ ಕರೆತರಲು ಪೋಷಕರಿಗೆ ಸಾಧ್ಯವಾಗಿರಲಿಲ್ಲ. ಆಧಾರ್ ಕಾರ್ಡ್ ಇಲ್ಲದ ಕಾರಣ ಸರಕಾರದ ಯಾವುದೇ ಯೋಜನೆಗಳು, ಪಿಂಚಣಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಕಿರಣಕುಮಾರಿ ಇವರ ತಾಯಿ 75 ವರ್ಷದ ವೃದ್ಧೆ ತಾಯಿ ಮತ್ತು ಪ್ರಮೋದರವರ ಪೋಷಕರು ತಹಶಿಲ್ದಾರರ ಕಚೇರಿಗೆ ಬಂದು ಅಳಲು ತೋಡಿಕೊಂಡಿದ್ದರು. ಇದನ್ನು ಮನಗಂಡು ತಹಶಿಲ್ದಾರ್ ಡಾ.ಪ್ರತಿಭಾ ಆರ್. ಆಧಾರ್ ಕೇಂದ್ರವನ್ನೇ ಅವರ ಮನೆಗೆ ಕೊಂಡೊಯ್ಯುವ ಏರ್ಪಾಟು ಮಾಡಿ ಆಧಾರ್ ಕಾಡ್೯ ಮಾಡಿಸಿದ್ದರು. ಪಿಂಚಣಿ ದೊರಕಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ. ಈ ಕಾರ್ಯಕ್ಕೆ ಆಧಾರ್ ಆಪರೇಟರ್ ಸಂಧ್ಯಾ, ಆಧಾರ್ ಕೇಂದ್ರದ ಇಸ್ಮಾಯಿಲ್ ಫಲಿಮಾರು, ಗ್ರಾಮ ಪಂಚಾಯತಿ ಸದಸ್ಯರಾದ ದೀಪಕ್ ಎರ್ಮಾಳ್, ಅಜೀಜ್ ಹೆಜಮಾಡಿ ಸಹಕರಿಸಿದ್ದರು.

ರೋಬೋಸೋಫ್ಟ್ ಸಂಸ್ಥೆಯಿಂದ ಉಡುಪಿ ಜಿಲ್ಲಾ ಪಂಚಾಯತ್ ಗೆ 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಹಸ್ತಾಂತರ

Thumbnail
Posted On: 20 Dec 2024, 12:04 PM

ಉಡುಪಿ : ಸ್ವಚ್ಛತೆಯೇ ಸೇವೆ ಎಂಬ ಧೈಯವಾಕ್ಯದೊಂದಿಗೆ ಪರಿಸರ ಸುಸ್ಥಿರತೆ ಮತ್ತು ಹಸಿರು ಶಕ್ತಿಯ ಉತ್ತೇಜನದ ಕಡೆಗೆ ಹೆಜ್ಜೆ ಇಡುವ ನಿಟ್ಟಿನಲ್ಲಿ ಉಡುಪಿಯ ಐಟಿ ಕಂಪನಿಯಾದ ರೋಬೋಸೋಫ್ಟ್ ಟೆಕ್ನಾಲಜೀಸ್ ಸಿಎಸ್‌ಆರ್ ಕಾರ್ಯಕ್ರಮದ ಅಡಿಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಗೆ ಉಡುಪಿಯ ಹಲವಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ಬಳಸಲು 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಹಸ್ತಾಂತರಿಸಿತು. ರೋಬೋಸೋಫ್‌ ಟೆಕ್ನಾಲಜೀಸ್ ಕಂಪನಿಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿತೇಜ ಬೊಮ್ಮಿರೆಡ್ಡಿಪಲ್ಲಿಯವರು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ರೋಬೋಸೋಫ್ಟ್ ಸಂಸ್ಥೆ ಕೈಗೊಂಡಿರುವ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಎಲೆಕ್ಟ್ರಿಕ್ ಆಟೋ ರಿಕ್ಷಾ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಗೆ ತುಂಬಾ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಉಡುಪಿ ಜಿಲ್ಲೆಯು ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಆರ್ಥಿಕ ಚಟುವಟಿಕೆಯಾಗಿಸುವಲ್ಲಿ ಹೇಗೆ ಯಶಸ್ಸು ಸಾಧಿಸಿದೆ ಎಂದು ವಿವರಿಸಿದರು. ರೋಬೋಸೋಫ್ಟ್ ಸಂಸ್ಥೆಯ ಸ್ವಚ್ಛತೆಯೇ ಸೇವೆ ಎಂಬ ಸಂಕಲ್ಪ ಮತ್ತು ಈ ನಿಟ್ಟಿನಲ್ಲಿ ಕಂಪನಿಯ ಪ್ರಯತ್ನ ಮತ್ತು ಸಹಕಾರಕ್ಕೆ ಉಡುಪಿಯ ಸ್ಥಳೀಯ ಆಡಳಿತದ ಪರವಾಗಿ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಂಸ್ಥೆಯ ರವಿತೇಜ ಬೊಮ್ಮಿರೆಡ್ಡಿಪಲ್ಲಿ ಮಾತನಾಡಿ ರೋಬೋಸೋಫ್ಟ್ ಕಂಪನಿ ತಂತ್ರಜ್ಞಾನ ಅಭಿವೃದ್ಧಿಯ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಸಂಸ್ಥೆ ಕೈಗೊಂಡ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಭವಿಷ್ಯದಲ್ಲಿ ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕರಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕಂಪನಿ ಮಾತೃ ಸಂಸ್ಥೆ ಟೆಕ್ನೊಪ್ರೋ ಜಪಾನ್ ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಕಂಪನಿಯ ಉದ್ಯೋಗಿ ನಾಗೇಶ್ ದೊಂಡಿಯ ಸ್ವಾಗತಿಸಿ, ವಂದಿಸಿದರು.

ಕಾಪು ಹೊಸ ಮಾರಿಗುಡಿಗೆ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ಭೇಟಿ

Thumbnail
Posted On: 19 Dec 2024, 11:15 AM

ಕಾಪು : ಸಂಪೂರ್ಣ ಇಳಕಲ್ ಕೆಂಪು ಶಿಲೆಯಲ್ಲಿ ನಿರ್ಮಾಣಗೊಂಡು, ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಅಣಿಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ಮಂಗಳವಾರ ಭೇಟಿ ನೀಡಿ, ಸಮಗ್ರ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸ ಮಾರಿಗುಡಿ ದೇವಸ್ಥಾನದ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕುಮಾರ ಗುರು ತಂತ್ರಿ, ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ ಅವರು ದೇವರ ಪ್ರಸಾದ ನೀಡಿ ಗೌರವಿಸಿದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅವರು ಜೀರ್ಣೋದ್ಧಾರದ ಕುರಿತಾಗಿ ಮಾಹಿತಿ ನೀಡಿದರು. ನವದುರ್ಗಾ ಲೇಖನ ಯಜ್ಣದ ಬಗ್ಗೆ ಮಾಹಿತಿ ಪಡೆದು, ಮೆಚ್ಚುಗೆ ವ್ತಕ್ತ ಪಡಿಸಿದ ಅವರು ನವದುರ್ಗಾ ಲೇಖನ ಬರೆಯುವ ಸಂಕಲ್ಪ ಸ್ವೀಕರಿಸಿದರು. ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಮತ್ತು ಮಾಜಿ ಶಾಸಕ ಕೆ. ರಘುಪತಿ ಭಟ್, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಅಧ್ಯಕ್ಷ ರವಿ ಸುಂದರ ಶೆಟ್ಟಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಮನೋಹರ ಶೆಟ್ಟಿ ಕಾಪು, ಮಾಧವ ಆರ್. ಪಾಲನ್, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕಾರ್ಯ ನಿರ್ವಹಣಾಽಕಾರಿ ಮತ್ತು ಕೋಶಾಧಿಕಾರಿ ರವಿಕಿರಣ್, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ಸಾಲ್ಯಾನ್, ಮನೋಹರ ರಾವ್, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತಾ ಶಶಿಧರ್, ಅಭಿವೃದ್ಧಿ ಸಮಿತಿ ಪ್ರಮುಖರಾದ ಗೀತಾಂಜಲಿ ಎಂ. ಸುವರ್ಣ, ರಘುರಾಮ ಶೆಟ್ಟಿ, ಮಧುಕರ್ ಎಸ್., ರಮೇಶ್ ಶೆಟ್ಟಿ ಕೊಲ್ಯ, ಜಯರಾಮ ಆಚಾರ್ಯ, ಪ್ರಬಂಧಕ ಗೋವರ್ಧನ್ ಕಾಪು ಮೊದಲಾದವರು ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸ ಮಾರಿಗುಡಿ : ಮುಂಬೈಯ ಮೀರಾ - ಬಾಯಂದರ್ ವಲಯದಲ್ಲಿ ನವದುರ್ಗಾ ಲೇಖನ ಸಂಕಲ್ಪಕ್ಕೆ ಸಭೆ

Thumbnail
Posted On: 17 Dec 2024, 06:26 PM

ಮುಂಬೈ: ಮುಂಬೈಯ ಮೀರಾ - ಬಾಯಂದರ್ ವಲಯದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸಾನಿಧ್ಯ ವೃದ್ಧಿ ಮತ್ತು ಲೋಕಕಲ್ಯಾಣರ್ಥವಾಗಿ ನಡೆಯುತ್ತಿರುವ ನವದುರ್ಗಾ ಲೇಖನ ಯಜ್ಞದ ಮಾಹಿತಿ ನೀಡಲು ಡಿ.15ರಂದು ಮೀರಾ ರೋಡ್ ಪೂರ್ವದ ಹೋಟೆಲ್ ಬಾಲಾಜಿ ಇಂಟರ್ನ್ಯಾಷನಲ್ ನಲ್ಲಿ ಸಭೆ ನಡೆಯಿತು. ಬ್ರಹ್ಮಕಲಶೋತ್ಸವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ (ರಿ.) ಇದರ ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ನ ಉದಯ ಸುಂದರ್ ಶೆಟ್ಟಿಯವರು ನೀಡಿದರು. ಮುಂಬೈ ಸಮಿತಿಯ ಗೌರವ ಸಲಹೆಗಾರರು ಹಾಗೂ ನವದುರ್ಗಾ ಲೇಖನ ಯಜ್ಞ ಸಮಿತಿಯ ಮುಂಬೈಯ ಪ್ರಧಾನ ಸಂಚಾಲಕರಾದ ಎರ್ಮಾಳ್ ಹರೀಶ್ ಶೆಟ್ಟಿ ನವದುರ್ಗಾ ಲೇಖನ ಯಜ್ಞದ ವಿಧಿವಿಧಾನಗಳ ಬಗ್ಗೆ ತಿಳಿಸಿದರು. ಮೀರಾ ಬಾಯಂದರ್ ವಲಯದ ಸಂಚಾಲಕರಾದ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು ಪ್ರಾಸ್ತವಿಕವಾಗಿ ಮಾತನಾಡಿದರು. ಸಹ ಸಂಚಾಲಕರಾದ ರವೀಂದ್ರ ಶೆಟ್ಟಿ ಕೊಟ್ರಪಾಡಿ ದಾನಿಗಳು ನೀಡಿರುವ ವಿಶೇಷ ಕೊಡುಗೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಂಪತ್ ಶೆಟ್ಟಿ ಪಂಜದ ಗುತ್ತು, ರವೀಂದ್ರ ಶೆಟ್ಟಿ ದೇರಳಕಟ್ಟೆ ,ಆರ್ಥಿಕ ಸಮಿತಿಯ ಸಂಚಾಲಕರಾದ ಸಂದೀಪ್ ಶೆಟ್ಟಿ ಶಿರ್ವ, ಮುಂಬಯಿ, ಬಾಲಾಜಿ ಇಂಟರ್ ನ್ಯಾಷನಲ್ ಹೋಟೆಲ್ ನ ಮಾಲಕರಾದ ಸುಂದರ್ ಶೆಟ್ಟಿ, ಬಾಬಾಪ್ರಸಾದ್ ಅರಸ ಕುತ್ಯಾರು, ಬಂಟ್ಸ್ ಸಂಘ ಮುಂಬೈ ಮೀರಾ ಬಾಯಂದರ್ ವಲಯದ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆ : 37ನೇ ವರ್ಷದ ವಾರ್ಷಿಕೋತ್ಸವ

Thumbnail
Posted On: 17 Dec 2024, 06:16 PM

ಉಚ್ಚಿಲ : ಉಚ್ಚಿಲ ಮೊಗವೀರ ಹಿತ ಸಾಧನ ವೇದಿಕೆ ಸಂಚಾಲಿತ ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಮಂಗಳವಾರ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಬಿ ಎಸ್ ಎಫ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗಾಧಿಕಾರಿ ಸಂತೋಷ ಪೈ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಶಿಕ್ಷಕರು, ತಂದೆ ತಾಯಿ ಹಾಗೂ ಹಿರಿಯರ ಮಾತನ್ನು ಮೀರಿ ಮುಂದೆ ಸಾಗದಿರಿ. ಇದರಲ್ಲಿ ನಿಮ್ಮ ಜೀವನ ಅಡಕವಾಗಿದೆ. ಹೆಚ್ಚಿನ ಶ್ರಮ ವಹಿಸಿ ಕಲಿತರೆ ನಿಮ್ಮ ಜೀವನ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದರು. ಈ ಸಂದರ್ಭ ದಾನಿಗಳಾದ ಶೇಖರ್ ಸಾಲ್ಯಾನ್ ದಂಪತಿಗಳನ್ನು ಹಾಗೂ ಸಂತೋಷ್ ಪೈ ಯವರನ್ನು ಸನ್ಮಾನಿಸಲಾಯಿತು. ಶಾಲೆಗೆ ಒಂದು ಲಕ್ಷ ಐದು ಸಾವಿರ ವೆಚ್ಚದಲ್ಲಿ ಬಿ ಎಸ್ ಎಫ್ ಸಂಸ್ಥೆ ನೀಡಿದ ವಾಟರ್ ಕೂಲರನ್ನು ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಎಂಎಸ್ ರವರು ಉದ್ಘಾಟಿಸಿದರು. ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಎಂ ಎಸ್ ಶಾಲಾ ಧ್ವಜಾರೋಹಣಗೈದರು. ಅತಿಥಿಗಳು ಶಾಲಾ ವಿದ್ಯಾರ್ಥಿಗಳ ಮ್ಯಾಗಝಿನ್ ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಒಂದರಿಂದ 10ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಶಾಲಾ ಸಂಚಾಲಕ ಗಂಗಾಧರ್ ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮೊಗವೀರ ಹಿತ ಸಾಧನ ವೇದಿಕೆಯ ಅಧ್ಯಕ್ಷ ಸರ್ವೋತ್ತಮ ಕುಂದರ್, ಬಿಇಒ ಯಲ್ಲಮ್ಮ, ಉದ್ಯಮಿ ಸಾಧು ಸಾಲ್ಯಾನ್, ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ವೇದಿಕೆಯ ಕಾರ್ಯದರ್ಶಿ ಸುಧಾಕರ್ ಕರ್ಕೇರ, ಕೋಶಾಧಿಕಾರಿ ವೇದವ್ಯಾಸ ಬಂಗೇರ, ಪೂರ್ಣಿಮಾ ಎಂ ಕರ್ಕೇರ, ಶಾಲಾ ವಿದ್ಯಾರ್ಥಿ ನಾಯಕ ಚೇತನ್ ಬಿ ಪೂಜಾರಿ, ಅಶೋಕ್ ಸುವರ್ಣ, ಅಶ್ವತ್ ಕರ್ಕೇರ, ಸತೀಶ್ ಸಾಲ್ಯಾನ್, ರವಿ ಕುಂದರ್, ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ನವ್ಯ ಸ್ವಾಗತಿಸಿದರು. ಶಿಕ್ಷಕಿ ಅನುಪಮಾ ಮತ್ತು ಶಿಕ್ಷಕ ಸಂತೋಷ್ ನಿರೂಪಿಸಿದರು. ಉಪ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಶೆಟ್ಟಿ ವಂದಿಸಿದರು.

ಡಿ.19ರಂದು ರೋಬೋಸೋಫ್ಟ್ ನಿಂದ ಜಿ.ಪಂ.ಗೆ 6 ಎಲೆಕ್ಟ್ರಿಕ್ ಆಟೋ ಹಸ್ತಾಂತರ

Thumbnail
Posted On: 16 Dec 2024, 06:07 PM

ಉಡುಪಿ: ಹಳ್ಳಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯವನ್ನು ಸ್ವಲ್ಪಮಟ್ಟಿಗೆ ಸುಲಭವಾಗಿಸುವ ನಿಟ್ಟಿನಲ್ಲಿ ಉಡುಪಿಯ ರೋಬೋಸೋಫ್ಟ್ ಟೆಕ್ನಾಲಜೀಸ್ ಸಂಸ್ಥೆಯು ತನ್ನ ಸಿಎಸ್ ಆರ್ ನಿಧಿಯ ಮೂಲಕ ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಖರೀದಿಸಿ ಉಡುಪಿ ಜಿಲ್ಲಾ ಪಂಚಾಯತ್ ಗೆ ನೀಡಲು ನಿರ್ಧರಿಸಿದೆ. ಅದರಂತೆ ಇದೇ ಡಿಸೆಂಬರ್ 19 ರಂದು ಬೆಳಿಗ್ಗೆ 10.30ಕ್ಕೆ 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಉಡುಪಿ ಜಿಲ್ಲಾ ಪಂಚಾಯತ್ ಗೆ ಹಸ್ತಾಂತರಿಸಲಾಗುವುದು ಎಂದು ಸಂಸ್ಥೆಯ ಸೀನಿಯರ್ ಜನರಲ್ ಮ್ಯಾನೇಜರ್ ಶ್ಯಾಮ್ ರಾಜ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ರೋಬೋಸೋಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿತೇಜ ಬೊಮ್ಮಿರೆಡ್ಡಿಪಲ್ಲಿ ಅವರು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮತ್ತು ಜಿಪಂ ಸಿಇಓ ಪ್ರತೀಕ್ ಬಾಯಲ್ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಗೆ ಎಲೆಕ್ಟ್ರಿಕ್ ಆಟೋಗಳನ್ನು ಹಸ್ತಾಂತರಿಸಲಿದ್ದಾರೆ ಎಂದರು. ಉಡುಪಿ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ, ಸ್ವಸ್ಥ ಭಾರತ ಎಂಬ ಗುರಿಯೊಂದಿಗೆ 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಹತ್ತಿರದ ಹಳ್ಳಿಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ಬಳಸಲು ಉಡುಪಿ ಜಿಲ್ಲಾ ಪಂಚಾಯತ್ ಗೆ ಹಸ್ತಾಂತರಿಸುತ್ತಿದ್ದೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಧರ್ ಕೇಶವನ್, ಕೃಷ್ಣ ರಾವ್, ಚಕ್ರಿ ಹೆಗ್ಡೆ ಇದ್ದರು.