Updated News From Kaup
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನಿತರಾದ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು
Posted On: 30 Jan 2025, 06:01 AM
ಪಡುಬಿದ್ರಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಶಾಂತಿವನ ಟ್ರಸ್ಟ್ (ರಿ.) ಧರ್ಮಸ್ಥಳ ಇವರು ಆಯೋಜಿಸಿದ ರಾಜ್ಯಮಟ್ಟದ ಪ್ರಾರ್ಥನಾ ಶ್ಲೋಕಗಳ ಕಂಠಪಾಠ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ ರಾವ್ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಪ್ರಬಂಧ ಸ್ಪರ್ಧೆಯಲ್ಲಿ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮನ್ವಿತಾ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. ಧರ್ಮಸ್ಥಳದಲ್ಲಿ ನಡೆದ ಪುರಸ್ಕಾರ ಸಮಾರಂಭದಲ್ಲಿ ಈ ಇಬ್ಬರು ವಿದ್ಯಾರ್ಥಿನಿಯರು ಡಾ. ಡಿ.ವೀರೇಂದ್ರ ಹೆಗ್ಗಡೆ, ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ರಾಮಕೃಷ್ಣ ಮಠ, ಸಂಗೀತ ನಿರ್ದೇಶಕ ವಿ. ಮನೋಹರ್ ಮೊದಲಾದ ಗಣ್ಯರ ಸಮ್ಮುಖದಲ್ಲಿ ಪುರಸ್ಕಾರವನ್ನು ಪಡೆದರು.
ಕಾಪು : ಯೋಜನಾ ಪ್ರಾಧಿಕಾರಕ್ಕೆ ನಾಮನಿರ್ದೇಶಿತ ಸದಸ್ಯರಾಗಿ ಕಿರಣ್ ಆಳ್ವ ಆಯ್ಕೆ
Posted On: 30 Jan 2025, 05:55 AM
ಕಾಪು : ಕಾಪು ಪುರಸಭೆಯಿಂದ ಯೋಜನಾ ಪ್ರಾಧಿಕಾರಕ್ಕೆ ನಾಮನಿರ್ದೇಶಿತರಾಗಿ ಕಾಪು ಪುರಸಭೆಯ ಚುನಾಯಿತ ಸದಸ್ಯರಾದ ಕಿರಣ್ ಆಳ್ವರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಫೆ. 4 : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವಚಂಡೀಯಾಗ
Posted On: 29 Jan 2025, 07:24 PM
ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಫೆಬ್ರವರಿ 4ರ ಮಂಗಳವಾರ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವ ಚಂಡೀಯಾಗ ಜರಗಲಿದೆ ಎಂದು ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಅವರು ಕಾಪುವಿನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ, ಪ್ರಧಾನ ಆರ್ಚಕರಾದ ವೇದಮೂರ್ತಿ ಕಲ್ಯ ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ನವ ಚಂಡೀಯಾಗದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ 4ರಂದು ಬೆಳಿಗ್ಗೆ ನವಚಂಡೀಯಾಗ ಆರಂಭ, ಕಲ್ಲೋಕ್ತ ಪೂಜಾ, 11 ಗಂಟೆಗೆ ಪೂರ್ಣಾಹುತಿ, ಧಾರ್ಮಿಕ ಸಭಾ ಕಾರ್ಯಕ್ರಮ, ವಾಗೀಶ್ವರಿ ಪೂಜೆ, ಮಹಾಮಂಗಳಾರತಿ, ಮಹಾಪ್ರಸಾದ ವಿತರಣೆ ಹಾಗೂ ಮದ್ಯಾಹ್ನ 1 ರಿಂದ ಅನ್ನಪ್ರಸಾದ ವಿತರಣೆ ನಡೆಯಲಿದೆ. ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರ ನೇತೃತ್ವದಲ್ಲಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ ಹಾಗೂ ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್ ಉಪಸ್ಥಿತಿಯಲ್ಲಿ ಈ ಎಲ್ಲಾ ಕಾರ್ಯಕ್ರಮ ಕಾರ್ಯಕ್ರಮಗಳು ಜರಗಲಿವೆ. ಆ ಪ್ರಯುಕ್ತ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ಡಾ. ರಾಮಲಿಂಗ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕರಾದ ಡಾ. ಮಂಜುನಾಥ್ ಭಂಡಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಆಯುಕ್ತರಾದ ವೆಂಕಟೇಶ್ ಐಎಎಸ್ ಗೌರವ ಉಪಸ್ಥಿತರಾಗಿ ಭಾಗವಹಿಸಲಿದ್ದಾರೆ. ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳುವ ಉದ್ದೇಶದೊಂದಿಗೆ ಈಗಾಗಲೇ ಪುಸ್ತಕ ತೆಗೆದುಕೊಂಡು ಹೋಗಿ ಲೇಖನ ಬರೆಯುತ್ತಿರುವವರು ಜನವರಿ 30ರ ಒಳಗಾಗಿ ಪುಸ್ತಕವನ್ನು ದೇವಳಕ್ಕೆ ಸಮರ್ಪಿಸಿ, ಫೆಬ್ರವರಿ 4 ರಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ನಡೆಯುವ ನವಚಂಡೀಯಾಗದ ಸಂಕಲ್ಪದಲ್ಲಿ ಭಾಗಿಯಾಗಬೇಕು. ಸಂಕಲ್ಪಕ್ಕೆ ಕುಳಿತುಕೊಳ್ಳುವವರು ಬೆಳಿಗ್ಗೆ 9 ಗಂಟೆಗೆ ತಪ್ಪದೇ ಹಾಜರಿರಬೇಕು. ಲೇಖನ ಬರೆಯಲು ಇಚ್ಚಿಸುವ ಭಕ್ತರು ಆದಷ್ಟು ಶೀಘ್ರದಲ್ಲಿ ಲೇಖನ ಪುಸ್ತಕವನ್ನು ಪಡೆದು ಲೇಖನ ಬರೆದು ಶಿಲಾಸೇವೆ ಸಹಿತವಾಗಿ ಕಾಪುವಿನ ಅಮ್ಮನಿಗೆ ಸಮರ್ಪಿಸಲು ಅವಕಾಶವಿದೆ. ಆ ಪ್ರಯುಕ್ತ 9 ಮತ್ತು ಅದಕ್ಕಿಂತ ಹೆಚ್ಚಿನ ಶಿಲಾಸೇವೆ ನೀಡುವ ಭಕ್ತರಿಗೆ “ಕಾಪುವಿನ ಅಮ್ಮನ ಮಕ್ಕಳು” ತಂಡಕ್ಕೆ ಸೇರ್ಪಡೆಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದೂ ರಘುಪತಿ ಭಟ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ, ಕೋಶಾಧಿಕಾರಿ ಕೆ ವಿಶ್ವನಾಥ್, ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಸಂಚಾಲಕ ಸುವರ್ಧನ್ ನಾಯಕ್, ಮಹಿಳಾ ಪ್ರಧಾನ ಸಂಚಾಲಕಿ ಗೀತಾಂಜಲಿ ಎಂ ಸುವರ್ಣ, ಸಂಚಾಲಕಿ ಸಾವಿತ್ರಿ ಗಣೇಶ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ ಉಪಸ್ಥಿತರಿದ್ದರು.
ಫೆಬ್ರವರಿ 2 : ಕಾಂತಾವರ ಕುಲಾಲ ಸಂಘದ ಉದ್ಘಾಟನೆ
Posted On: 29 Jan 2025, 07:04 PM
ಕಾರ್ಕಳ : ತಾಲೂಕಿನ ಕಾಂತಾವರದಲ್ಲಿ ಕುಲಾಲ ಸಂಘ ಕಾಂತಾವರ ಇದರ ಉದ್ಘಾಟನೆಯು ಸಮುದಾಯದ ಹಿರಿಯರ ಕಿರಿಯರ ಜೊತೆಗೆ ಬೇಲಾಡಿ ಶ್ರೀ ಪುಂಡರೀಕ ವಿಷ್ಣುಮೂರ್ತಿ ದೇವಸ್ಥಾನದ ಅಂಗಳದಲ್ಲಿ ಫೆಬ್ರವರಿ 2 ರ ಭಾನುವಾರ ನಡೆಯಲಿದೆ. ತಾಲೂಕಿನ ಸ್ವಜಾತಿ ಬಂಧುಗಳು, ಸ್ವಜಾತಿ ಬಾಂಧವರು ಭಾಗವಹಿಸಿ ಎಂದು ಕಾರ್ಯಕ್ರಮ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವರು.
ಕಾಪು : ಎಸ್‌ಕೆಪಿಎ ಫೋಟೋಗ್ರಾಫಿ ಕಾರ್ಯಾಗಾರ
Posted On: 29 Jan 2025, 09:42 AM
ಕಾಪು : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ., ಉಡುಪಿ ಜಿಲ್ಲೆ ವತಿಯಿಂದ ಕಾಪುವಿನ ಪ್ಯಾಲೆಸ್ ಗಾರ್ಡನ್‌ನಲ್ಲಿ ಮಂಗಳವಾರ ನಡೆದ ಗಿಂಬಲ್ಸ್ ಹಾಗೂ ರೀಲ್ಸ್ ಕಾರ್ಯಾಗಾರವನ್ನು ಎಸ್‌ಕೆಪಿಎ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನವನ್ನು ನಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು. ಈ ಕಾರ್ಯಾಗಾರದ ಮೂಲಕ ಕೌಶಲ್ಯವನ್ನು ಹೇಗೆ ವೃದ್ಧಿಸಬಹುದು, ಹೊಸ ಹೊಸ ತಂತ್ರಜ್ಞಾನದ ಬಳಕೆ ಹೇಗೆ ಬಳಸಬಹುದು ಎಂಬುದನ್ನು ಅರಿತು ತಮ್ಮ ವೃತ್ತಿ ಜೀವನದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಸಂಪನ್ಮೂಲ ವ್ಯಕ್ತಿಯಾಗಿ ಸುಮಂತ್ ಸುವರ್ಣ ಕಾರ್ಯಾಗಾರ ನಡೆಸಿಕೊಟ್ಟರು. ಎಸ್‌ಕೆಪಿಎ ಜಿಲ್ಲಾ ಸಂಚಾಲಕ ಕರುಣಾಕರ್ ಕಾನಂಗಿ, ಉಪಾಧ್ಯಕ್ಷರಾದ ರಮೇಶ್ ಕಲಾಶ್ರೀ ಮತ್ತು ಪ್ರವೀಣ್ ಕೊರಿಯ, ಕಾಪು ವಲಯ ಅಧ್ಯಕ್ಷ ಸಚಿನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್ ಸ್ವಾಗತಿಸಿದರು. ಎಸ್‌ಕೆಪಿಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ನವಚಂಡೀಯಾಗಕ್ಕೆ ಪ್ರಸಾದ ಮೂಹೂರ್ತ
Posted On: 28 Jan 2025, 08:03 PM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ನವದುರ್ಗಾ ಲೇಖನ ಯಜ್ಞದ ನವಚಂಡೀಯಾಗವು ಫೆಬ್ರವರಿ 4 ರಂದು ನಡೆಯಲಿದೆ, ಆ ಪ್ರಯುಕ್ತ ಮಂಗಳವಾರ ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಇವರ ಉಪಸ್ಥಿತಿಯಲ್ಲಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರ ಮುಂದಾಳತ್ವದಲ್ಲಿ ಕುಂಕುಮ ಪ್ರಸಾದ ಮುಹೂರ್ತ ನೆರವೇರಿತು. ನವದುರ್ಗಾ ಲೇಖನವನ್ನು ಬರೆದು ಅರ್ಪಿಸಿ, ನವಚಂಡೀಯಾಗದ ದಿನದಂದು ಸಂಕಲ್ಪದಲ್ಲಿ ಭಾಗಿಯಾಗಲಿರುವ ಭಕ್ತರಿಗೆ ನೀಡುವ ಕುಂಕುಮವನ್ನು ಮಾರಿಯಮ್ಮನಿಗೆ ಅರ್ಪಿಸಿ ಬ್ರಾಹ್ಮಣ ಸಂಘದ ಮಹಿಳೆಯರು ನಿರಂತರ ಲಕ್ಷ್ಮಿ ಶೋಭಾನೆಯೊಂದಿಗೆ ಕುಂಕುಮ ಪ್ರಸಾದವನ್ನು ಪ್ಯಾಕೆಟ್ ಗಳಿಗೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಕೋಶಾಧಿಕಾರಿ ಕೆ. ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಾಧವ ಆರ್ ಪಾಲನ್, ಶೇಖರ ಸಾಲ್ಯಾನ್, ಮನೋಹರ ರಾವ್, ಬ್ರಹ್ಮಕಲಶೋತ್ಸವ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷರಾದ ಬೀನಾ ವಾಸುದೇವ ಶೆಟ್ಟಿ, ನವದುರ್ಗಾ ಲೇಖನ ಯಜ್ಞದ ಮಹಿಳಾ ಸಮಿತಿಯ ಮುಖ್ಯ ಸಂಚಾಲಕರಾದ ಸಾವಿತ್ರಿ ಗಣೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ: ವಳಕಾಡು ಶಾಲಾ ಆವರಣದಲ್ಲಿ ಜೇನುನೊಣ ದಾಳಿ ವಿದ್ಯಾರ್ಥಿಗಳಿಗೆ ಗಾಯ
Posted On: 28 Jan 2025, 07:59 PM
ಉಡುಪಿ: ನಗರದ ವಳಕಾಡು ಶಾಲಾ ಆವರಣದಲ್ಲಿ ಜೇನುನೊಣ ದಾಳಿ ಮಾಡಿದ ಪರಿಣಾಮ 40 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ. ಗಾಯಗೊಂಡ 40 ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದು, ಇದರಲ್ಲಿ ಮೂರು ಮಕ್ಕಳನ್ನು ನಗರದ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಳ್ಳಲಾಗಿದೆ. ಒಬ್ಬರು ಪೋಷಕರು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 37 ಮಕ್ಕಳು ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಎಲ್ಲರೂ ಆರೋಗ್ಯಕರವಾಗಿದ್ದು, ಯಾರಿಗೂ ಯಾವುದೇ ಅಪಾಯ ಇಲ್ಲ ಎಂದು ಜಿಲ್ಲಾ ಸರ್ಜನ್ ಡಾ.ಅಶೋಕ್ ಕುಮಾರ್ ತಿಳಿಸಿದ್ದಾರೆ. ವಳಕಾಡು ಸಂಯುಕ್ತ ಪ್ರೌಢ ಶಾಲಾ ಆವರಣದಲ್ಲಿ ಆಡುತ್ತಿದ್ದ ಪ್ರೌಢ ಶಾಲಾ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ, ಕಟ್ಟಡದಲ್ಲಿದ್ದ ಜೇನುಗೂಡಿಗೆ ಕಲ್ಲು ಎಸೆದಿದ್ದ ಎನ್ನಲಾಗಿದೆ. ಇದರಿಂದ ಜೇನುನೊಣಗಳು ಅಲ್ಲಿದ್ದ ಮಕ್ಕಳ ಮೇಲೆ ದಾಳಿ ನಡೆಸಿತ್ತೆನ್ನಲಾಗಿದೆ. ಇದರಿಂದ ಮಕ್ಕಳು ಬೊಬ್ಬೆ ಹಾಕಿ ಓಡಿ ಹೋಗಿದ್ದು, ಕೂಡಲೇ ಶಿಕ್ಷಕರು, ಪೋಷಕರು ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ.
ಪಡುಬಿದ್ರಿ ಸಿ.ಎ.ಸೊಸೈಟಿ ಚುನಾವಣೆ : ವೈ. ಸುಧೀರ್ ಕುಮಾರ್ ನೇತೃತ್ವದ ತಂಡ ಜಯ
Posted On: 28 Jan 2025, 07:58 PM
ಪಡುಬಿದ್ರಿ : ಎರಡು ದಶಕಗಳ ಕಾಲ ಅವಿರೋಧ ಆಯ್ಕೆಯ ಮೂಲಕ ನಡೆಯುತ್ತಿದ್ದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಆಡಳಿತ ಮಂಡಳಿಗೆ ಮಂಗಳವಾರ ಪಡುಬಿದ್ರಿ ಬಂಟರ ಸಂಘದ ಸಭಾಂಗಣದಲ್ಲಿ ಜರಗಿದ ಚುನಾವಣೆಯಲ್ಲಿ ವೈ. ಸುಧೀರ್ ಕುಮಾರ್ ನೇತೃತ್ವದ ಬಣ ಜಯ ಗಳಿಸಿದೆ. ಒಟ್ಟು 13 ಆಡಳಿತ ಮಂಡಳಿಯ ಸದಸ್ಯರಲ್ಲಿ ಚುನಾವಣಾ ಕಣದಲ್ಲಿ 11 ಅಭ್ಯರ್ಥಿಗಳಿದ್ದು, ಇಬ್ಬರು ಮೊದಲೇ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಸಹಕಾರಿ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಸಿ ಎಂ ಚುನಾವಣಾಧಿಕಾರಿಯಾಗಿದ್ದು, ಆಯ್ಕೆಗೊಂಡ ಸದಸ್ಯರ ಹೆಸರನ್ನು ಘೋಷಿಸಿದರು. ಒಟ್ಟು 3,200 ಮತಗಳಲ್ಲಿ 1,935 ಮತದಾನವಾಗುವ ಮೂಲಕ ಶೇ.60. ಮತದಾನವಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ವೈ ಸುಧೀರ್ ಕುಮಾರ್, ಚುನಾವಣೆಗೆ ಮೊದಲು ಹಲವಾರು ಸುಳ್ಳು ಅಪಪ್ರಚಾರಗಳನ್ನು ಮಾಡಿದ್ದರೂ, ಇಂದಿನ ಗೆಲುವು ಸತ್ಯಕ್ಕೆ ಸಂದ ಜಯ. ಮತ ಚಲಾಯಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಮುಂದಿನ 5 ವರ್ಷಗಳ ಅವಧಿಗೆ ಗುರುರಾಜ ಪೂಜಾರಿ, ವೈ ಸುಧೀರ್ ಕುಮಾರ್, ಜಿತೇಂದ್ರ ಫುರ್ಟಾಡೊ, ಮಾಧವ ಆಚಾರ್ಯ, ವಾಸುದೇವ, ರಾಜಾರಾಮ ರಾವ್, ಹಸನ್ ಬಾವ, ರೋಹಿಣಿ ಎ., ಕುಸುಮಾ ಕರ್ಕೇರ, ಗಿರೀಶ್ ಫಲಿಮಾರು, ಶಿವರಾಮ ಎನ್ ಶೆಟ್ಟಿ, ಕೃಷ್ಣ ಬಂಗೇರ, ಕಾಂಚನಾ ಆಯ್ಕೆಯಾಗಿದ್ದಾರೆ.
ಪಡುಬಿದ್ರಿ ಸಿ.ಎ.ಸೊಸೈಟಿ ಚುನಾವಣೆ : ಹಲವು ವರ್ಷಗಳ ಅವಿರೋಧ ಆಯ್ಕೆಯ ಕಸರತ್ತಿಗೆ ಬ್ರೇಕ್ ಹಾಕಿದ ಪಡುಬಿದ್ರಿ ಸಹಕಾರಿ ಜನಪರ ಒಕ್ಕೂಟ
Posted On: 28 Jan 2025, 02:23 PM
ಪಡುಬಿದ್ರಿ : ನಾಲ್ಕು ಶಾಖೆ ಹಾಗೂ ಒಂದು ಕೇಂದ್ರ ಕಚೇರಿಯನ್ನು ಹೊಂದಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಸುಮಾರು ಎರಡು ದಶಕಗಳ ಕಾಲ ನಿರ್ದೇಶಕರ ಚುನಾವಣೆ ನಡೆಯದೆ ಕೆಲವು ಬಾರಿ ನಾಮಪತ್ರ ಸಲ್ಲಿಕೆಯಾದರೂ ಕೊನೆ ಕ್ಷಣದಲ್ಲಿ ಹಿಂತೆಗುವ ಪ್ರಕ್ರಿಯೆ ಮೂಲಕ ಅವಿರೋಧ ಆಯ್ಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಾಗುತ್ತಿತ್ತು. ಆದರೆ ಈ ಬಾರಿ ಮುಂದೆಯೂ ಅಧಿಕಾರದ ಹಪಾಹಪಿಯಲ್ಲಿರುವ ತಂಡಕ್ಕೆ ಟಕ್ಕರ್ ನೀಡಲು ಪಡುಬಿದ್ರಿ ಸಹಕಾರಿ ಜನಪರ ಒಕ್ಕೂಟದ ನೇತೃತ್ವದಲ್ಲಿ ಜ.28ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 13 ನಿರ್ದೇಶಕರ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ತಂಡ 13, ಹೊಸ ತಂಡ ಕೊನೆ ಕ್ಷಣದಲ್ಲಿ ಕೇವಲ 7 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆ ಮೂಲಕ ಸಂಪೂರ್ಣ ಹಿಡಿತವಲ್ಲದಿದ್ದರೂ ಆಡಳಿತದಲ್ಲಿ ಸ್ವಲ್ಪ ಮಟ್ಟಿನ ಹಿಡಿತದ ಸಾಧನೆಗೆ ಮುಂದಾಗಿದೆ. ಪ್ರಸ್ತುತ ಆಡಳಿತದ ತಂಡದಲ್ಲಿ ಕಾಂಗ್ರೆಸ್, ಬಿಜೆಪಿ ಬೆಂಬಲಿತರಿದ್ದು ಕೆಲವು ಸದಸ್ಯರ ಬದಲಾವಣೆ ಮಾಡಿದ್ದು, ಚುನಾವಣೆಗಿಳಿದ ಹೊಸ ತಂಡದಲ್ಲಿ ಕಾಂಗ್ರೆಸ್ ನ ಬೆಂಬಲಿತರ ಜೊತೆಗೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಈ ಬಾರಿ ಸಾಮಾನ್ಯ ವರ್ಗದಲ್ಲಿ 11 ಮಂದಿ, ಮಹಿಳಾ ಮೀಸಲು, ಹಿಂದುಳಿದ ವರ್ಗ, ಸಾಮಾನ್ಯ ವರ್ಗಗಳಲ್ಲಿ 2-3 ಮಂದಿ ಸ್ಪರ್ಧಿಸಿದ್ದಾರೆ. ಈ ಬಾರಿಯು ಜನಪರ ಒಕ್ಕೂಟ ತಂಡದ ಮಹಿಳಾ ಅಭ್ಯರ್ಥಿಗಳು ನಾಮಪತ್ರ ವಾಪಾಸು ಪಡೆಯುವಂತೆ ಆಡಳಿತದಲ್ಲಿದ್ದ ತಂಡದ ಕೆಲವರು ಒತ್ತಡ ಹಾಕಿದ್ದಾರೆ. ಪೋಲಿಸ್ ವರಿಷ್ಠಾಧಿಕಾರಿಗೆ ದೂರು ನೀಡುವ ಬಗ್ಗೆಯೂ ಜನಪರ ಒಕ್ಕೂಟ ಎಚ್ಚರಿಸಿದೆ. ಹಾಲಿ ತಂಡದ ಪ್ರಕಾರ ಈ ಸಂಘವು ತಮ್ಮ ಅವಧಿಯಲ್ಲಿಯೇ ಪ್ರಗತಿ ಪಥ ಕಂಡಿದ್ದು, ಮುಂದೆಯೂ ಪ್ರಗತಿ ಸಾಧಿಸಲಿದೆ ಎಂದು ಹೇಳಿಕೊಂಡರೆ, ಹೊಸ ತಂಡವು ನಾವು ಪ್ರಗತಿ ಬಯಸುವವರು. ಅಲ್ಲಿಯ ಅವ್ಯವಹಾರಗಳನ್ನು ಜನರಿಗೆ ತಿಳಿಸುವ ಜೊತೆಗೆ ಅವೆಲ್ಲವುಗಳನ್ನು ಪ್ರಶ್ನಿಸಿ, ನ್ಯಾಯದ ದಾರಿಯಲ್ಲಿ ಸಾಗಲಿದ್ದೇವೆ ಎನ್ನುತ್ತಾರೆ. ಒಟ್ಟಿನಲ್ಲಿ ಹಾಲಿ ತಂಡಕ್ಕೆ ಪ್ರತಿಷ್ಟೆಯ ಕಣವಾಗಿದ್ದು, ಹೊಸ ತಂಡಕ್ಕೆ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸದಿದ್ದರೂ, ಕೆಲವು ಸ್ಥಾನಗಳನ್ನಾದರು ಪಡೆಯಲು ಕಾತುರರಾಗಿದ್ದಾರೆ. ಎರಡು ತಂಡಗಳು ಗೆಲುವು ನಮ್ಮದೆ ಎನ್ನುವ ವಿಶ್ವಾಸದಲ್ಲಿ ಪ್ರಚಾರ ನಿರತರಾಗಿದ್ದಾರೆ. ಭೃಷ್ಟಾಚಾರ ರಹಿತವಾಗಿ ಸಂಘಕ್ಕೆ ದುಡಿಯುವ, ಊರಿನ ಅಭಿವೃದ್ಧಿಯ ಚಿಂತನೆಯೊಂದಿಗೆ ಸದಸ್ಯರಿಗೆ ಅನುಕೂಲಕರವಾದ ಯೋಜನೆಯನ್ನು ರೂಪಿಸಿ, ಸಹಕಾರಿ ತತ್ವಗಳ ಆಶಯದಂತೆ ನಡೆಯಲಿ ಎಂದು ಸಾರ್ವಜನಿಕರ ಆಶಯವಾಗಿದೆ.
ಮಹಾಕುಂಭಮೇಳದ ಮಹಾ ಸಂವಾದದಲ್ಲಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ
Posted On: 27 Jan 2025, 05:30 PM
ಶಿರ್ವ : ಶ್ರೀ ಕೃಷ್ಣನ ಜನ್ಮ ಭೂಮಿಯನ್ನು ಮುಕ್ತಗೊಳಿಸುವ ಬಗ್ಗೆ ಫೆ.1ರಂದು ಮಹಾಕುಂಭಮೇಳದಲ್ಲಿ ಜರಗಲಿರುವ ಮಹಾ ಸಂವಾದದಲ್ಲಿ ಶ್ರೀ ಕೃಷ್ಣ ಜನ್ಮ ಭೂಮಿ ನ್ಯಾಸ್(ರಿ.) ಕರ್ನಾಟಕದ ರಾಜ್ಯಾಧ್ಯಕ್ಷರಾದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭಾಗವಹಿಸಲಿದ್ದಾರೆ ಎಂದು ಮಠದ ಪ್ರಕಟನೆ ತಿಳಿಸಿದೆ.
